ನಾಲ್ಕು ದಶಕಗಳ ಹಿಂದೆ ತನ್ನ ನಲವತ್ತೆರಡನೆಯ ವಯಸ್ಸಿನಲ್ಲಿ ಬರೆಯಲು ಶುರು ಮಾಡಿದ ಸಾರಾ ಅಬೂಬಕ್ಕರ್ ಕನ್ನಡಕ್ಕೆ ಸಂಭವಿಸಿದ ಒಂದು ಅಚ್ಚರಿ. ಬಹುಶಃ ಕನ್ನಡಕ್ಕೆ ಸಂಭವಿಸಿದ ಇನ್ನೊಂದು ಅಚ್ಚರಿಯಾದ ಪಿ. ಲಂಕೇಶರು ಇಲ್ಲದಿದ್ದರೆ ಸಾರಾ ಕನ್ನಡದಲ್ಲಿ ಬರೆಯುತ್ತಲೇ ಇರಲಿಲ್ಲವೇನೋ. ಸುಮಾರು ಇಪ್ಪತ್ತೊಂಭತ್ತು ವರ್ಷಗಳ ಹಿಂದೆ ಆಗ ಇನ್ನೂ ಇಪ್ಪತ್ತೊಂಭತ್ತರ ಹರೆಯದ ತರುಣನಾಗಿದ್ದ ಕನ್ನಡದ ಕಥೆಗಾರ ಅಬ್ದುಲ್ ರಶೀದ್ ಲಂಕೇಶ್ ಪತ್ರಿಕೆಗಾಗಿ ಸಾರಾ ಅವರೊಡನೆ ನಡೆಸಿದ್ದ ಮಾತುಕತೆಯ ಪಠ್ಯ ಇಲ್ಲಿದೆ
ಮಾತನಾಡಿಸಲು ಅಂತ ಹೋದಾಗ ಸಾರಾ ಮನೆ ಕೆಲಸವೆಲ್ಲ ಮಾಡಿ ಮುಗಿಸಿ, ಶಾಲೆಯಿಂದ ಮಧ್ಯಾಹ್ನ ಊಟಕ್ಕೆ ಬರುವ ಮೊಮ್ಮಕ್ಕಳನ್ನು ಕಾಯುತ್ತಾ, ಒಬ್ಬ ಮೊಮ್ಮಗನನ್ನು ಮಡಿಲಲ್ಲಿ ಕೂರಿಸಿಕೊಂಡು ಲಂಕೇಶ್‌ರ ಮೇಲೆ ವಿನಾಕಾರಣ ಸಿಟ್ಟು ಮಾಡಿಕೊಂಡು ಕೂತಿದ್ದರು. ತಸ್ಲೀಮಾ ನಸ್ರೀನ್‌ಳದ್ದು ಮೂಲಭೂತವಾಗಿ ಲೈಂಗಿಕ ಸಮಸ್ಯೆ ಅಂತ ಲಂಕೇಶರು ಬರೆಯಬಹುದಾ ಅಂತ ಸಾರಾಗೆ ಬೇಜಾರಾಗಿ ಅದನ್ನೇ ದೊಡ್ಡದು ಮಾಡಿಕೊಂಡು ಮುಗ್ಧವಾಗಿ ಕೂತಿದ್ದರು. ನಾನು ಅವರನ್ನೇ ನೋಡುತ್ತಿದ್ದೆ. ಹಾಗೆ ನೋಡಿದರೆ ಈ ಸಾರಾ ಉಮ್ಮಾ ಕೂಡಾ ತುಂಬಾ ಹಿಂದೆಯೇ ತೀರಾ ಸುಲಭವಾಗಿ ತಸ್ಲೀಮಾ ಆಗಬಹುದಿತ್ತು. ಆದರೆ ಆಗಿರಲಿಲ್ಲ. ದಿನದ ನಮಾಜುಗಳನ್ನು ಮಾಡುತ್ತಾ, ರಮಜಾನಿನ ಉಪವಾಸಗಳನ್ನು ಹಿಡಿಯುತ್ತಾ, ಪಡೆದವನಲ್ಲೂ, ಆತನ ಅಂತ್ಯ ಪ್ರವಾದಿಯಲ್ಲೂ ಅಖಂಡ ನಂಬಿಕೆ ಇಟ್ಟುಕೊಂಡಿರುವ ಈ ಸಾರಾ ಅದು ಹೇಗೆ ತಸ್ಲೀಮಾ ಎಂಬ ಇನ್ನೊಂದು ಹೆಣ್ಣುಮಗಳ ಪ್ರಶ್ನೆ ಬಂದಾಗ ಕರಗಿ ಹೋಗುತ್ತಾರೆ ಎಂಬುದನ್ನು ಯೋಚಿಸುತ್ತಿದ್ದೆ.
ಸಾರಾ ಹಾಗೇ ಇದ್ದರು. ಅದೇ ಎತ್ತರದ ಧ್ವನಿ ಸುಮಾರು ಹತ್ತು ವರ್ಷಗಳ ಹಿಂದೆ, ಮದುವೆಯಾಗಿ ೨೬ ವರ್ಷಗಳು ಕಳೆದ ಮೇಲೆ ತನ್ನ ೪೨ನೇ ವಯಸ್ಸಿನಲ್ಲಿ ಈ ಮುಸಲ್ಮಾನ ಹೆಂಗಸು ಬರೆಯಲು ತೊಡಗಿದ್ದು… ಆಗಲೂ ತಾಯಿಯ ಹಾಗೇ ಇದ್ದ ಈಗಲೂ ತಾಯಿಯ ಹಾಗೇ ಇರುವ ಇವರನ್ನು ಹೇಗೆ ಔಪಚಾರಿಕವಾಗಿ ಪ್ರಶ್ನಿಸುವುದು ಅಂತ ನಗು ಬರುತ್ತಿತ್ತು. ಆದರೂ ಬಿಡದೇ ನಿಮಗೆ ಬರೆಯಬೇಕು ಅಂತ ಮನಸ್ಸಿಗೆ ಅನಿಸಿದ್ದು ಯಾಕೆ ಅಂತ ಕೇಳಿಬಿಟ್ಟೆ.
‘ನಾನು ಬಾಲ್ಯದಿಂದಲೇ ಕಂಡದ್ದು, ಕೇಳಿದ್ದು ಸಾಹಿತ್ಯದಲ್ಲಿ ಬರಬೇಕು ಅನ್ನುವ ಆಸೆ ಇತ್ತು. ಈಗ ಉದಾಹರಣೆಗೆ ನಮ್ಮ ಸಮಾಜದ ಒಂದು ಸಮಸ್ಯೆ ಅಂದರೆ ತಲಾಖಿನ ಸಮಸ್ಯೆ. ಅದು ಬಹಳ ವರ್ಷಗಳಿಂದ ನನ್ನ ಮನಸ್ಸಿನಲ್ಲಿ ಹಾಗೇ ಇತ್ತು. ನನ್ನ ತಂದೆ ಒಂದು ತಲಾಖಿನ ದುರಂತ ಘಟನೆ ಹೇಳಿದ್ದರು. ಇದನ್ನು ಯಾವ ರೀತಿಯಲ್ಲಾದರೂ, ಸಮಾಜದ ಗಮನ ಸೆಳೆಯಬೇಕು ಎಂದುಕೊಂಡಿದ್ದೆ. ಅದೊಂದು ಸಮಸ್ಯೆ ಎಂದು ಕೂಡಾ ಯಾರೂ ತಿಳಿದಿರಲಿಲ್ಲ. ಎಲ್ಲರೂ ಒಪ್ಪಿಕೊಂಡು ಬಿಟ್ಟಿದ್ದರು. ನನಗೆ ಅನಿಸಿದ್ದು – ಇದು ಯಾಕೆ ಹೀಗೆ ಇರಬೇಕು ಅಂತ. ಒಂದು ಕಥೆಯಲ್ಲಿ ಇದನ್ನು ನಾವು ಪ್ರತಿಬಿಂಬಿಸಿದರೆ ಹೇಗೆ ಇರ್ತದೆ? ಸಮಾಜದ ಪ್ರತಿಕ್ರಿಯೆ ಹೇಗೆ ಇರಬಹುದು ಹೀಗೆಲ್ಲ ಯೋಚನೆ ಇತ್ತು ಬಹಳ ವರ್ಷಗಳಿಂದ. ಆದರೆ ನಾವು ಬರೆದದ್ದನ್ನೆಲ್ಲ ಪ್ರಕಟಿಸಲು ಜನಬೇಕಲ್ಲ? ಮತ್ತೆ ಲಂಕೇಶ್ ಬರೆಯಿರಿ ಅಂತ ಹೇಳಿದಾಗ ನಾನು ತಕ್ಷಣ ಈ ಕುರಿತೇ ಬರೆದೆ. ಈ ಕುರಿತು ಮುಂದೆ ನನ್ನನ್ನು ಬರೀಲಿಕ್ಕೆ ಬಿಡ್ತಾರೋ ಇಲ್ಲವೋ ಅಂತ ಹೆದರಿಕೆ ಇತ್ತು. ಯಾಕೆಂದರೆ ನಮ್ಮ ಸಮಾಜದ ಪುರುಷರ ವಿಷಯ ನಿಮಗೆ ಗೊತ್ತಲ್ಲ… ನನ್ನ ಮೊತ್ತಮೊದಲ ಕಾದಂಬರಿ ಇದರ ಕುರಿತೇ ಇರಲಿ ಅಂತ “ಚಂದ್ರಗಿರಿಯ ತೀರದಲ್ಲಿ” ಬರೆದೆ.
ತಲಾಖ್ ಸಮಸ್ಯೆಯನ್ನು ಬೇರೆ ಬೇರೆ ರೀತಿಯಲ್ಲಿ ಬಗೆಹರಿಸಬಹುದು- ಉದಾಹರಣೆಗೆ ಭಾಷಣ, ಲೇಖನ ಅಥವಾ ಕೋರ್ಟ್, ನೀವು ಕಾದಂಬರಿಯನ್ನು ಯಾಕೆ ಆರಿಸಿಕೊಂಡಿರಿ?
ಬೇರೆ ಯಾರ ರೀತಿಯಲ್ಲಿ ನಾನು ಎದುರಿಸಬಹುದಿತ್ತು? ನನ್ನ ತಾಯಿಗೆ ಬರಹ ಗೊತ್ತಿದ್ದರೆ ಅವರೂ ನನಗಿಂತ ಒಳ್ಳೆಯ ಕಥೆಗಾರ್ತಿ ಆಗ್ತಾ ಇದ್ದರೋ ಏನೋ. ಯಾಕೆಂದರೆ ಅವರೂ ಕೂಡಾ ತಲಾಖ್‌ನಂಥಹ ವಿಷಯಗಳಿಗೆ ತುಂಬಾ feel ಮಾಡ್ಕೊಳ್ತಾ ಇದ್ದರು. ಅದಲ್ಲದೆ ಮುಸ್ಲಿಂ ಜಾನಪದ ಕಥೆಗಳು, ಮಾಪಿಳ್ಳಾ ಹಾಡು ಇವೆಲ್ಲಾ ಆಕೆಗೆ ಬರ್ತಾ ಇತ್ತು. ನೀವೇ ಹೇಳಿ, ನಾನು ಬೇರೆ ಯಾವ ರೀತಿಯಲ್ಲಿ ಇದನ್ನು ಮಾಡಬಹುದಿತ್ತು? ಈಗ ನಾವು ಮನೆಯೊಳಗೆ ಮಾತಾಡಿಕೊಂಡರೆ ಅಷ್ಟೇನೆ, ನಮಗೆ ವೇದಿಕೆಯಿಲ್ಲ. ಮುಸ್ಲಿಂ ಮಹಿಳೆಯರಿಗೆ ವೇದಿಕೆಗೆ ಹೋಗಿ ಮಾತನಾಡುವ ಅವಕಾಶ ಇಲ್ಲವೇ ಇಲ್ಲ.
ನಿಮ್ಮ ಅಜ್ಜ-ಅಜ್ಜಿ, ತಂದೆ ತಾಯಿ, ಬಾಲ್ಯ, ಶಾಲೆ ಕಲಿತದ್ದು, ಕನ್ನಡ ಓದಿದ್ದು…?
“ಮುಸ್ಲಿಂ ಹುಡುಗಿ ಶಾಲೆ ಕಲಿತದ್ದು” ಪುಸ್ತಕದಲ್ಲಿ ಎಲ್ಲ ಬರೆದಿದ್ದೇನೆ. ಅಂದ್ರೆ ಚಂದ್ರಗಿರಿ ನದಿಯ ಆಚೆ ತೀರದಲ್ಲಿ ಮಲಯಾಳವೇ ಇದ್ದದ್ದು. ನನ್ನ ಅಜ್ಜ-ಅಜ್ಜಿ ಅಲ್ಲಿ ಇದ್ದರು. ಚಿಕ್ಕಂದಿನಲ್ಲಿ ನಾನು ಅಲ್ಲೇ ಇದ್ದೆ. ಎರಡು ವರ್ಷ ಅಲ್ಲೇ ಮಲಯಾಳಂ ಶಾಲೆಯಲ್ಲಿ ಓದಿದ್ದೆ. ಆಮೇಲೆ ನನ್ನ ತಂದೆಗೆ ಅನ್ನಿಸ್ತು- ಮಲಯಾಳಂ ಓದಿದ್ರೆ ನನಗೆ ಮುಂದಕ್ಕೆ ತೊಂದರೆಯಾಗಬಹುದು ಅಂತ. ಹಾಗಾಗಿ ಕಾಸರಗೋಡಿಗೆ ಕರೆದುಕೊಂಡು ಬಂದರು. ಆಗ ಕಾಸರಗೋಡು ಅಂದರೆ ಕರ್ನಾಟಕ. ಕನ್ನಡ ಶಾಲೆ. ಆದರೂ ನನಗೆ ಆಗ ವಿದ್ಯಾಭ್ಯಾಸ ಮುಖ್ಯ ಆಗಿತ್ತೇ ಹೊರತು ಭಾಷೆ ಅಲ್ಲ.
ಅಜ್ಜ ಅಜ್ಜಿ?
ಅಜ್ಜಿಗೂ ವಿದ್ಯಾಭ್ಯಾಸ ಇರಲಿಲ್ಲ. ಆದರೆ ಖುರಾನ್ ಓದಲು ಕಲಿತಿದ್ದರು. ಅಜ್ಜಿ ಹೆಸರು ಬೀಪಾತುಮ್ಮ ಅಂತ. ಚೆನ್ನಾಗಿ ಕಥೆ ಹೇಳ್ತಾ ಇದ್ದರು. ದೊಡ್ಡ ಮನೆಯವರು. ಆಗಿನ ಕಾಲದಲ್ಲೇ ಅರೇಬಿಕ್ ವಿದ್ಯಾಭ್ಯಾಸ ಕಲಿತವರು. ಅಜ್ಜ ತುಂಬಾ ಧಾರ್ಮಿಕ ವ್ಯಕ್ತಿ ಆಗಿದ್ದರು. ಆದರೆ ಈಗಿನ ಕಾಲದ ಗಡ್ಡದ ಮೌಲ್ವಿಗಳ ಧರ್ಮ ಅಲ್ಲ ಅವರದು. ಅವರ ಧರ್ಮ ಬೇರೆಯೇ ರೀತಿಯಲ್ಲಿ ಇತ್ತು. ಪರ್ದಾ ವಿಷಯದಲ್ಲಿ ಅವರು ಹೇಳ್ತಾ ಇದ್ದದ್ದು ಪರದೆ ಇರಬೇಕಾದದ್ದು ಮನಸ್ಸಿಗೆ ಅಂತ.
ನಿಮ್ಮ ಬಗ್ಗೆ ಟೀಕೆ ಇದೆ. ನೀವು ತಲಾಖಿನ ಬಗ್ಗೆ ಮಾತ್ರ ಬರೀತೀರಿ ಅಂತ. ಮುಸ್ಲಿಂ ಸಮಾಜದಲ್ಲಿ ನೋವು ಎಷ್ಟಿದೆಯೋ ಖುಷಿಗಳೂ ಅಷ್ಟೇ ಇವೆ. ಆದರೆ ನೀವು ತಲಾಖ್‌ನ್ನೇ ಎತ್ತಿಕೊಳ್ಳುತ್ತೀರಿ ಅಂತ ಹೇಳುತ್ತಾರೆ. ಅದರಲ್ಲೂ ತಲಾಖ್ ಎಂಬುದು ಅಪರೂಪದ ಒಂದು ಕ್ರಿಯೆ…
ತಲಾಖ್ ಅಪರೂಪವಲ್ಲ, ತೀರಾ ಹತ್ತಿರದಿಂದ ನೋಡಿದ್ದೇನೆ. ಅಂತಹ ನಿಜ ಘಟನೆಯೊಂದನ್ನು ಎತ್ತಿಕೊಂಡೇ ನಾನು ಬರೆದದ್ದು. ನನ್ನ ದೊಡ್ಡಮ್ಮನ ಮಗಳು ಅಂದರೆ ನನ್ನ ಅಕ್ಕ ಅವಳಿಗೆ ತಲಾಖ್ ಆಗಿತ್ತು. ಮತ್ತೆ ತಿರುಗಿ ಮದುವೆಯಾಗಬೇಕು ಅಂತ ಅವರಿಬ್ಬರಿಗೂ ಅನಿಸಿತು. ನನ್ನ ಅಕ್ಕನಿಗಂತೂ ತುಂಬಾ ಇಷ್ಟವಿತ್ತು. ಪುನಃ ಸರಿಮಾಡಿಕೊಳ್ಳಬೇಕು ಅಂತ ಇಬ್ಬರಿಗೆ ಆಸೆ ಇದ್ದರೂ ಕೂಡ ಈ ಕಾರಣದಿಂದಾಗಿಯೇ ನನ್ನ ಅಕ್ಕ ಬೇಸರದಲ್ಲಿ ತೀರಿಕೊಂಡರು. ನನಗೆ ಅದನ್ನು ಮರೆಯಲಿಕ್ಕೆ ಆಗೋದಿಲ್ಲ. ಇಂತಹದು ಒಂದೆರೆಡಲ್ಲ. ತುಂಬ ಕಡೆಗಳಲ್ಲಿ ನಾನು ನೋಡಿದ್ದೇನೆ. ಯಾವುದೋ ಸಿಟ್ಟಿನಲ್ಲಿ ತಲಾಖ್ ಹೇಳಿಬಿಡ್ತಾರೆ. ಆಮೇಲೆ ಪುನಃ ಸರಿಮಾಡಬೇಕೆಂದು ನೋಡಿದರೆ ಆಗುವುದಿಲ್ಲ.
ಈಗ ತಲಾಖ್ ಅನ್ನುವ ಸಮಸ್ಯೆ ಇರಲೇ ಇಲ್ಲ ಅಂತ ಇಟ್ಟುಕೊಳ್ಳಿ. ಆಗ ನೀವು ಬರೀಲಿಕ್ಕೆ ಏನು ಮಾಡ್ತಾ ಇದ್ದಿರಿ?
ಬರೀತಾ ಇದ್ದೆ. ಈಗ ನನ್ನ ಹೊಸ ಕಾದಂಬರಿ “ಸುಳಿಯಲ್ಲಿ ಸಿಕ್ಕವರು”. ಅದರಲ್ಲಿ ತಲಾಖ್ ಪ್ರಶ್ನೆ ಇಲ್ಲ. ಅದರಲ್ಲಿ ಬೇರೇನೇ ಸಮಸ್ಯೆ ಇದೆ. ಕಪ್ಪು ಹಣ. ಇದರಿಂದಾಗಿ ಒಂದು ಸಮಾಜ ಯಾವ ರೀತಿಯಲ್ಲಿ ಹಾಳಾಗಿದೆ ಅಂತ ಬರೆದಿದ್ದೀನಿ. ಮೊದಲು ಏನೂ ಇಲ್ಲದಂಥವರು ಹಣ ಬಂದಾಗ ಅವರ ಪರಿಸ್ಥಿತಿ ಹೇಗೆ ಅಂತ ಎರಡು ಭಾಗಗಳಲ್ಲಿ ಬರೆದಿದ್ದೀನಿ. “ಸುಳಿಯಲ್ಲಿ ಸಿಕ್ಕವರು” ಭಾಗ ಒಂದು ಪ್ರಕಟ ಆಗ್ತಾ ಇದೆ. ನಾನೇ ಪ್ರಕಟಿಸ್ತಾ ಇದ್ದೀನಿ. ಅದರಲ್ಲಿ ಇಳಿತ ಮತ್ತು ಭರತ. ಮುಂದಿನ ಭಾಗದಲ್ಲಿ ಪ್ರವಾಹ ಮತ್ತು ಸುಳಿ. ಬಡತನದಲ್ಲಿ ಇದ್ದವನೊಬ್ಬ ವಿದೇಶಕ್ಕೆ ಹೋಗಿ ದೊಡ್ಡ ಹಣವಂತನಾಗಿ ಬರ್ತಾನೆ. ಆಗ ಮನೆಯಲ್ಲಿ ತಾಯಿ, ಹೆಂಡತಿ, ಮಕ್ಕಳು ಇವರೆಲ್ಲರ ಸ್ವಭಾವ ಹೇಗೆ ಬದಲಾಗ್ತದೆ ಅಂತ ಬರೆದಿದ್ದೀನಿ.
ತುಂಬ ತಡವಾಗಿ ಅಂದರೆ ೪೨ನೇ ವಯಸ್ಸಿಗೆ ಬರೆಯಲು ತೊಡಗಿದಿರಿ. ಅಲ್ಲಿಯವರೆಗೆ ಏನ್ಮಾಡ್ತಾ ಇದ್ದಿರಿ?
ಓದ್ತಾ ಇದ್ದೆ. ಬಹಳಷ್ಟು ಓದಿದ್ದೇನೆ. ಒಂದೆರೆಡು ಕಥೆ ಬರೆದು ನಮ್ಮ ಪ್ರಸಿದ್ಧ ಪತ್ರಿಕೆಗಳಿಗೆ ಕಳಿಸಿದ್ದೆ. ಉತ್ತರವೂ ಬರಲಿಲ್ಲ. ಅಲ್ಲಿಗೆ ಉತ್ಸಾಹ ತಣ್ಣಗಾಯಿತು. ಮತ್ತೆ ಬರೆಯಲಿಲ್ಲ. ಓದುವುದನ್ನು ನಿಲ್ಲಿಸಲಿಕ್ಕೆ ಯಾರಿಂದಲೂ ಸಾಧ್ಯವಿಲ್ಲ.
ಏನು ಓದ್ತಾ ಇದ್ದಿರಿ?
೧೯೭೬ವರೆಗೆ ಕನ್ನಡದಲ್ಲಿ ಬಂದಿದ್ದಂತಹ ಎಲ್ಲ ಕಾದಂಬರಿಗಳನ್ನು ಓದಿದ್ದೇನೆ. ಅಷ್ಟೊಂದು ಓದ್ತಾ ಇದ್ದೆ. ಇಷ್ಟ ಆಗ್ತಾ ಇದ್ದವರು ಕಾರಂತರು. ಆಮೇಲೆ ವಿ.ಎಂ. ಇನಾಂದಾರ್, ಅನಂತಮೂರ್ತಿ ಮತ್ತು ಭೈರಪ್ಪ.
ಚಿಕ್ಕಂದಿನಲ್ಲಿ ನಾನು ಅಲ್ಲೇ ಇದ್ದೆ. ಎರಡು ವರ್ಷ ಅಲ್ಲೇ ಮಲಯಾಳಂ ಶಾಲೆಯಲ್ಲಿ ಓದಿದ್ದೆ. ಆಮೇಲೆ ನನ್ನ ತಂದೆಗೆ ಅನ್ನಿಸ್ತು- ಮಲಯಾಳಂ ಓದಿದ್ರೆ ನನಗೆ ಮುಂದಕ್ಕೆ ತೊಂದರೆಯಾಗಬಹುದು ಅಂತ. ಹಾಗಾಗಿ ಕಾಸರಗೋಡಿಗೆ ಕರೆದುಕೊಂಡು ಬಂದರು. ಆಗ ಕಾಸರಗೋಡು ಅಂದರೆ ಕರ್ನಾಟಕ. ಕನ್ನಡ ಶಾಲೆ. ಆದರೂ ನನಗೆ ಆಗ ವಿದ್ಯಾಭ್ಯಾಸ ಮುಖ್ಯ ಆಗಿತ್ತೇ ಹೊರತು ಭಾಷೆ ಅಲ್ಲ.
ಮಹಿಳಾ ಲೇಖಕಿಯರು?
ತ್ರಿವೇಣಿ ಅವರ ಕಾದಂಬರಿ ಕೈಯಲ್ಲಿ ಹಿಡಿದ್ರೆ ಓದಿಸ್ಕೊಂಡು ಹೋಗ್ತಿತ್ತು. ಅಂದರೆ ತೀರಾ ಸಹಜವಾಗಿತ್ತು. ಕಾಲ್ಪನಿಕ ಚಿತ್ರಣ ಅಲ್ಲ. ಸಾಮಾಜಿಕ ಸಮಸ್ಯೆಗಳ ಕುರಿತು, ಮಾನಸಿಕ ಸಮಸ್ಯೆಗಳ ಕುರಿತು ಬರೀತಾ ಇದ್ದರು. ನನ್ನ ಮನಸ್ಸಿನಲ್ಲಿದ್ದ ಮೂಢನಂಬಿಕೆಗಳನ್ನು ತೊಲಗಿಸಿದ್ದು ತ್ರಿವೇಣಿ. ನನಗೂ ಭೂತಚೇಷ್ಟೆ ಅಂದರೆ ಹೆದರಿಕೆ ಇತ್ತು. ತ್ರಿವೇಣಿಯವರನ್ನು ಓದಿದ ಮೇಲೆ ಇವೆಲ್ಲ ಮಾನಸಿಕ ಕಾಯಿಲೆ ಅಂತ ಗೊತ್ತಾಯಿತು.
ಯಾರನ್ನು ಓದುವಾಗ ನಿಮಗೂ ಬರೀಬೇಕು ಅನ್ನಿಸ್ತು?
ತ್ರಿವೇಣಿ, ಕಾರಂತ. ವಿಶೇಷವಾಗಿ ತ್ರಿವೇಣಿ. ಮಾನಸಿಕ ಕಾಯಿಲೆಗಳ ಕುರಿತು ಅವರು ಬರೆದಿದ್ದನ್ನು ಓದಿದ ಮೇಲೆ ನನಗೂ ಅನ್ನಿಸ್ತು. ನನ್ನ ಪರಿಸರದಲ್ಲೂ, ಬಹಳಷ್ಟು ಮನೆಗಳಲ್ಲಿ ನಾನು ನೋಡ್ತಾ ಇದ್ದೆ. ವಿಶೇಷವಾಗಿ ಮನೆಕೆಲಸಕ್ಕೆ ಬರುತ್ತಿದ್ದ ಹೆಂಗಸರದು. ಇದರ ಮೂಲ ಹುಡುಕಿದೆ. ಆಗ ನೋದಿದರೆ ಸಮಸ್ಯೆ ಇದೇ. ಗಂಡ ತಲಾಖ್ ಕೊಟ್ಟದ್ದು. ಮಕ್ಕಳಾದ ಮೇಲೆ ಗಂಡ ಬಿಟ್ಟು ಹೋದದ್ದು, ಇತ್ಯಾದಿ. ಅಂಥ ಹೆಂಗಸರಿಗೇ ಭೂತಚೇಷ್ಟೆ ಜಾಸ್ತಿ ಇರ್ತಿತ್ತು. ಮನಸ್ಸಿನ ದುಃಖದಿಂದಲೇ ಈ ಭೂತಚೇಷ್ಟೆ ಶುರು ಆಗ್ತದೆ ಅಂತ ಗೊತ್ತಾಯಿತು. ಆಮೇಲೆ ವೈಕಂ ಮಹಮ್ಮದ್ ಬಷೀರರನ್ನು ಓದ್ತಾ ಇದ್ದೆ. ನನ್ನ ಅಣ್ಣ ಒಬ್ಬ ಇದ್ದ. ಆತ ಮಲಯಾಳದ ಒಳ್ಳೆಯ ಪುಸ್ತಕಗಳನ್ನು ತಂದುಕೊಡ್ತಾ ಇದ್ದ. ವೈಕಂ ಮತ್ತು “ಉರೂಬ್” ಎನ್ನುವವರು ಮುಸ್ಲಿಂ ಹೆಸರಿನಲ್ಲಿ ಬರೀತಾ ಇದ್ದರು. ಉರೂಬ್ ಅವರ ನಿಜವಾದ ಹೆಸರು ಕೃಷ್ಣನ್ ಕುಟ್ಟಿ. ಮುಸ್ಲಿಂ ಕುಟುಂಬದ ಚಿತ್ರಣವನ್ನು ಓದುವಾಗ ಖುಷಿ ಆಗ್ತಿತ್ತು. ಆ ಖುಷಿ ಕನ್ನಡದಲ್ಲಿ ಸಿಗ್ತಾ ಇರ್ಲಿಲ್ಲ. ಕನ್ನಡ ಕಾದಂಬರಿಗಳ ಸಂಸ್ಕೃತಿ ಬೇರೇನೇ ಇತ್ತು. ಮಲಯಾಳಂ ಓದುವಾಗ ನಮ್ಮ ಮನೆಯ ಸಂಗತಿ ಅನ್ನಿಸ್ತಾ ಇತ್ತು. ನನಗೂ ಹೀಗೇ ಬರೀಬೇಕು ಅನ್ನಿಸ್ತಾ ಇತ್ತು.
ಆಮೇಲೆ ಕನ್ನಡದಲ್ಲೂ ಮುಸ್ಲಿಂ ಬರಹಗಾರರು ಶುರುಮಾಡಿದ್ರು. ಬೊಳುವಾರು, ಕಟ್ಪಾಡಿ, ಮುಮ್ತಾಜ್ ಬೇಗಂ…
ಮತ್ತೆ ಲಂಕೇಶ್? ಪತ್ರಿಕೆ?
ಲಂಕೇಶ್ ತಯಾರಿಸಿದ್ದ ಚಿತ್ರ ನೋಡಿದ್ದೆ. ಪಲ್ಲವಿ, ತುಂಬ ಹಿಡಿಸ್ತು. ಅವರ ಕಥೆಗಳನ್ನೂ ಓದಿದ್ದೆ. ಅಂಥವರೊಬ್ಬರು ಪತ್ರಿಕೆ ಶುರುಮಾಡಿದರು ಎಂದು ಕೇಳಿದಾಗ ಕುತೂಹಲವಾಯಿತು. ಪತ್ರಿಕೆ ಓದಿದಾಗ ತುಂಬ ಖುಷಿಯಾಯ್ತು. ಬೇರೆ ಪತ್ರಿಕೆಗಳಿಗಿಂತ ತುಂಬಾ ಭಿನ್ನವಾಗಿತ್ತು. ನಾನೂ ಬರೀಬೇಕು ಅನ್ನಿಸ್ತು. ಸಂಪಾದಕರು “ನನ್ನ ಈ ಜನ ಒಂದಾಗಬೇಕು” ಅಂತ ಕೋಮುಗಲಭೆಯ ಸಮಯದಲ್ಲಿ ಬರೆದರು. ಅದು ಮನಮುಟ್ಟುವ ಹಾಗೆ ಇತ್ತು. ನಾನೂ ಸುಮ್ಮನೆ ಒಂದು ಪತ್ರ ಬರೆದೆ, ಪ್ರಕಟಿಸ್ತಾರೋ ಇಲ್ಲವೋ ಅಂತ ಗೊತ್ತಿರಲಿಲ್ಲ. “ಮುಸ್ಲಿಂ ಹೆಣ್ಣಿನ ಸ್ಪಂದನ” ಅಂತ ಮುಖಪುಟದಲ್ಲೇ ಪ್ರಕಟಿಸದರು. ಶುಕ್ರವಾರ ಪೋಸ್ಟ್ ಮಾಡಿದೆ ಬುಧವಾರ ಪತ್ರಿಕೆಯಲ್ಲಿ ಬಂತು. ಅನಂತರ ಬಿಜಾಪುರದಲ್ಲಿ “ನಜ್ಮಾ ಭಾಂಗಿ ಪ್ರಕರಣ” ನಡೀತು. ಮುಸ್ಲಿಂ ಹೆಣ್ಣುಮಕ್ಕಳು ಸಿನಿಮಾ ನೋಡಬಾರದ ಅಂತ ಶುರುಮಾಡಿದರು. ಆಗ ಲಂಕೇಶ್‌ರು “ಮುಸ್ಲಿಂ ಧರ್ಮವನ್ನು ಮುಲ್ಲಾಗಳ ಹಿಡಿತದಿಂದ ಬಿಡಿಸಬೇಕು” ಅಂತ ಬರೆದರು. ಅದಕ್ಕೆ ನಾನು ಬರೆದದ್ದೆಲ್ಲ ಪತ್ರಿಕೆಯಲ್ಲಿ ಬರಲು ಶುರುವಾಯಿತು. ನಂತರ ಲಂಕೇಶ್‌ರು ಸಣ್ಣ ಕಾದಂಬರಿ ಬರೀರಿ ಅಂತ ಬರೆದರು. ಎಂಟೇ ದಿವಸದಲ್ಲಿ ಆ ಕಾದಂಬರಿ “ಚಂದ್ರಗಿರಿ ತೀರದಲ್ಲಿ” ಬರೆದೆ.
ಮದುವೆ… ಸಂಸಾರ?
ನನ್ನ ಮದುವೆ ತುಂಬಾ ತಡ ಆಯ್ತು ಅಂತ ನನ್ನ ತಾಯಿಗೆ ಚಿಂತೆ ಶುರು ಆಗಿತ್ತು. ಎಸ್.ಎಸ್.ಎಲ್.ಸಿ.ಗೆ ಬರುವಷ್ಟರಲ್ಲಿ ಇನ್ನು ಮದುವೆ ಆಗುವವರು ಯಾರು ಅಂತ ಹೆದರಿಕೆ ಇತ್ತು. ಎಸ್.ಎಸ್.ಎಲ್.ಸಿ. ಫಲಿತಾಂಶ ಬರೋದಕ್ಕೆ ಮೊದಲೇ ಮದುವೆ ಆಯಿತು. ನನಗೆ ಹದಿನಾರು ವರ್ಷ ಆಗಿತ್ತು. ಗಂಡ ಎಂಜಿನಿಯರ್ ಆಗಿದ್ದರು. ಮದುವೆಯಾಗಿ ಹತ್ತಿಪ್ಪತ್ತು ವರ್ಷಗಳು ಕಳೆದ ಮೇಲೆ ನನಗೆ ಇದೆಲ್ಲಾ ಸರಿಯಲ್ಲ. ಇದು ನಾನು ಬಯಸಿದ ಬದುಕು ಅಲ್ಲ ಅಂತ ಅನಿಸಿತು. ನನ್ನ ಬದುಕು ಬೇರೆ ರೀತಿಯಲ್ಲಿ ಆಗಬೇಕಿತ್ತು ಅನ್ನಿಸಿತು. ಅಷ್ಟರಲ್ಲಿ ನನ್ನ ಪ್ರೀತಿಯ ಅಣ್ಣ ಕೂಡ ಟೆಟಾನಸ್‌ನಿಂದ ತೀರಿಹೋಗಿದ್ದ. ಆತ ತೀರಿಹೋದನಂತರ ನನ್ನದು ಎಲ್ಲವೂ ತೀರಿಹೋಯಿತು ಅಂತ ಅನ್ನಿಸುತ್ತಿತ್ತು….
ಸಾರಾ ತೀರಿಹೋದ ಅಣ್ಣನ ಕುರಿತು ಮಾತನಾಡುತ್ತಿದ್ದರು. ಎಲ್ಲರಿಗಿಂತ ಚಂದದ, ಎಲ್ಲರಿಗಿಂತ ಚಟುವಟಿಕೆಯ, ಬುದ್ಧಿವಂತನಾದ ಅಣ್ಣ ಕಾಲೇಜು ಓದುತ್ತಿರುವಾಗಲೇ ಮದರಾಸಿನಲ್ಲಿ ಟೆಟಾನಸ್‌ನಿಂದ ತೀರಿಹೋಗಿದ್ದ. ಆತ ಇದ್ದಿದ್ದರೆ ಇನ್ನೂ ಸಣ್ಣದಿರುವಾಗಲೇ ಬರೆಯುತ್ತಿದ್ದೆ ಅಂತ ಸಾರಾ ಹೇಳುತ್ತಿದ್ದರು.
ನನಗೆ ಸುಳ್ಯದ ಶಾಲಾ ಬಾಲಕಿಯರಾದ ಮುಸ್ಲಿಂ ಹೆಣ್ಣುಮಗಳೊಬ್ಬಳ ನೆನಪಾಗುತ್ತಿತ್ತು. ಆಕೆ ಶಾಲೆಯ ವಾರ್ಷಿಕ ಸಂಚಿಕೆಯಲ್ಲಿ ಕವನ ಬರೆದಳು ಅನ್ನುವ ಒಂದೇ ಕಾರಣಕ್ಕೆ ಆಕೆಯ ಮನೆಯವರು ಹೆದರಿ ಆಕೆಯ ಓದನ್ನು ನಿಲ್ಲಿಸಿ ಮನೆಯೊಳಗೆ ಕೂಡಿಹಾಕಿ ಮದುವೆ ಮಾಡಿಸಿಬಿಟ್ಟಿದ್ದರು. ಇವಳೂ ಇನ್ನೊಬ್ಬಳು ಸಾರಾ ಆಗುತ್ತಾಳೆ ಅಂತ ಹೆದರಿದ್ದರು.
ಈ ಬರೆಯುತ್ತಿರುವ ಮುಗ್ಧ ಸಾರಾ, ಓದಲು ಗೊತ್ತಿಲ್ಲದ ಮುಗ್ಧ ಸುಳ್ಯದ ತಂದೆ ತಾಯಿ ಎಲ್ಲರೊಡನೆ ಮಾತಾಡಿ ಹೊರಕ್ಕೆ ಬರುವಾಗ ಗೋಜಲು ಗೋಜಲಾಗಿ ಕಾಣಿಸುತ್ತಿತ್ತು.
ಲಂಕೇಶ್ ಪತ್ರಿಕೆ
೧೯ ಅಕ್ಟೋಬರ್ ೧೯೯೪
(ಚಿತ್ರಗಳು: ಅಬ್ದುಲ್ ರಶೀದ್)
ಕಥೆ, ಕಾದಂಬರಿ, ಕವಿತೆ, ಅಂಕಣಗಳನ್ನು ಬರೆಯುತ್ತಾರೆ. ಮೈಸೂರು ಆಕಾಶವಾಣಿ ಕೇಂದ್ರದ ಕಾರ್ಯಕ್ರಮ ನಿರ್ವಾಹಕ. ಅಲೆದಾಟ, ಫೋಟೋಗ್ರಫಿ ಮತ್ತು ಬ್ಲಾಗಿಂಗ್ ಇವರ ಇತರ ಹವ್ಯಾಸಗಳಲ್ಲಿ ಕೆಲವು. ಕೊಡಗಿನವರು.