ಅಂಕಗಳು ಸೋರಿಹೋಗುತ್ತಿದ್ದರೂ ಎದೆಗುಂದದೆ ಆಡುತ್ತಿದ್ದ ಮೆರಿನ್ ಕೆಲವೇ ಘಳಿಗೆಯಲ್ಲಿ ನೋವನ್ನು ತಾಳಲಾರದೆ ಮತ್ತೆ ಕುಸಿದಳು. ಈ ಬಾರಿ ಬಿಕ್ಕಿ ಬಿಕ್ಕಿ ಅಳುತ್ತಿದ್ದ ಅವಳ ನೋವಿಗೆ ಇಡೀ ಕ್ರೀಡಾಂಗಣ ಮರುಗುತ್ತಿತ್ತು. ಕುಸಿದಲ್ಲೇ ಅಳುತ್ತಿದ್ದ ಮೆರಿನ್‌ಳನ್ನು ತಬ್ಬಿ ಸಮಾಧಾನ ಮಾಡುತ್ತಿದ್ದ ಅವಳ ಕೋಚ್‌ಗೂ ಕೂಡ ತನ್ನ ಕಣ್ಣೀರನ್ನು ತಡೆಹಿಡಿಯಲಾಗಿರಲಿಲ್ಲ. ಎದುರಾಳಿ ಹೇ ಗೆ ತಾನು ಫೈನಲ್ ತಲುಪಿದ್ದಕ್ಕೆ ಖುಷಿಪಡುವುದೋ, ಅಥವಾ ಮೆರಿನ್‌ಳ ಸ್ಥಿತಿಯನ್ನು ನೋಡಿ ಮರುಗುವುದೋ, ಒಂದೂ ತಿಳಿಯದೆ ಮೆರೀನಳ ಬಳಿ ಬಂದು ವಿಷಾದದ ನೋಟ ಬೀರುತ್ತಾ ನಿಂತಿದ್ದಳು.
ಕಾರ್ತಿಕ್ ಕೃಷ್ಣ ಬರೆಯುವ “ಒಲಂಪಿಕ್ಸ್ ಅಂಗಣ” ಸರಣಿಯಲ್ಲಿ ಮೆರೀನ್ ಎಂಬ ಆಟಗಾರ್ತಿ ಸೋತ ಕತೆ…
ಯಾವುದಾದರೂ ಸಂದರ್ಶನವನ್ನು ಕೊಡುವಾಗ ಅಥವಾ ಸಭೀಕರೆದುರು ಮಾತನಾಡುವಾಗ ನರ್ವಸ್ ಆಗುವ ಸಮಸ್ಯೆ ಬಹಳ ಮಂದಿಗಿದೆ. ಇಂತಹ ಸಮಸ್ಯೆಯನ್ನು ನಿವಾರಿಸಲು ಮನಶಾಸ್ತ್ರಜ್ಞರು ಬಗೆ ಬಗೆಯ ಮಾರ್ಗಗಳನ್ನು ಸೂಚಿಸುತ್ತಾರೆ. ಸರಿಯಾದ ತಯಾರಿ ನಡೆಸಿ, ಕನ್ನಡಿಯ ಮುಂದೊಮ್ಮೆ ಪ್ರಾಕ್ಟಿಸ್ ಮಾಡಿ ಇತ್ಯಾದಿ ಇತ್ಯಾದಿ. ಅವೆಷ್ಟು ಪರಿಣಾಮಕಾರಿ ಎಂಬುದು ಅಂತಹ ಸಲಹೆಗಳನ್ನು ಅನುಸರಿಸುವರ ಮೇಲೆ ಅವಲಂಬಿತವಾಗಿರುತ್ತದೆ. ಆದರೆ ನನಗೆ ವೈಯಕ್ತಿವಾಗಿ ಇಷ್ಟವಾಗುವ ಸಲಹೆಗಳೆಂದರೆ “make a great entrance” ಎಂಬುದು. ಒಳಗೆ ಎಂತಹದೇ ಭಯವಿದ್ದರೂ, ಮುಖದ ಮೇಲೊಂದು ನಗು ಹಾಗೂ ಕಾನ್ಫಿಡೆಂಟ್ ಆಗಿರುವ ಹಾವಭಾವದೊಂದಿಗೆ ನೀನು ಎಂಟ್ರಿ ಕೊಟ್ಟರೆ ಅರ್ಧ ಕೆಲಸ ಆದ ಹಾಗೆಯೇ ಎಂದು ನನ್ನ ಸಹೋದ್ಯೋಗಿಯೊಬ್ಬರು ನಾನು ವೃತ್ತಿ ಜೀವನ ಶುರುಮಾಡುವ ಸಮಯದಲ್ಲಿ ಹೇಳಿದ್ದರು. ಅದು ಎಷ್ಟೋ ಬಾರಿ ಸಾಬೀತಾಗಿದೆ ಕೂಡ. ಪ್ರೆಸೆಂಟೇಷನ್‌ನ ಮುಂಚೆ ಸಾಕಷ್ಟು ಭಯವಾಗುತ್ತಿದ್ದರೂ, ಮೀಟಿಂಗ್ ಶುರುವಾದಾಗ ಧೈರ್ಯ ತುಂಬಿದ ದನಿಯಲ್ಲಿ, ಮಂದಸ್ಮಿತನಾಗಿ ‘ಹಲೋ ಎವೆರಿನ್’ ಎಂದು ಹೇಳುತ್ತಿದ್ದರೆ, ಅದೆಂತದೋ ಧೈರ್ಯ ತುಂಬಿ ಪ್ರೆಸೆಂಟೇಷನ್ ಸಾಂಗವಾಗಿ ಮುಗಿಯುತ್ತದೆ.
ಕ್ರೀಡಾಪಟುಗಳೂ ಕೂಡ ಎದುರಾಳಿಯ ಮೇಲೆ ಒಂದು ತೆರನಾದ ಪ್ರೆಷರ್ ಹೇರುವುದು ಇಂತಹ ಎಂಟ್ರಿಯಿಂದಲೇ. ನಾನು ಈ ಮೊದಲು ಅಮೆರಿಕಾದ ಸ್ಪ್ರಿಂಟರ್ ನೋವಾ ಲೈಲ್ಸ್ ಕ್ರೀಡಾಂಗಣ ಪ್ರವೇಶಿಸುವ ಬಗೆಯನ್ನು ಹೇಳಿದ್ದೆ. ವೇಗವಾಗಿ ಓಡಿ ಬಂದು, ಗಾಳಿಯಲ್ಲಿ ಗಿರಕಿ ಹೊಡೆದು, ಎಲ್ಲರ ಗಮನ ಸೆಳೆಯುವ ಈತನ ಕಾನ್ಫಿಡೆನ್ಸ್ ನಮ್ಮೊಳಗೂ ಇರಬೇಕು. ಇನ್ನು ಬ್ಯಾಡ್ಮಿಂಟನ್ ಕ್ಷೇತ್ರಕ್ಕೆ ಬಂದರೆ ಕರೋಲಿನಾ ಮೆರಿನ್ ಹೆಸರನ್ನು ನೀವು ಕೇಳಿರಬಹುದು. 2016 ರ ರಿಯೊ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದಿರುವ ಈಕೆ ತನ್ನ ಆಟದ ವೈಖರಿಯೆಂದಲೇ ಎದುರಾಳಿಯ ಪ್ರಭುತ್ವ ಸಾಧಿಸುತ್ತಾಳೆ. ನಮ್ಮ ಪಿ.ವಿ ಸಿಂಧುವಿನ ಅಪ್ಪಟ ಎದುರಾಳಿಯಾಗಿರುವ ಈಕೆಯ ಆಟವನ್ನು ನೀವೊಮ್ಮೆ ನೋಡಬೇಕು. ಸದಾ ಗಂಭೀರವದನಳಾಗಿದ್ದು, ಗೆದ್ದ ಪ್ರತೀ ಅಂಕವನ್ನು ಜೋರಾಗಿ ಕಿರುಚಿ ಸೆಲೆಬ್ರೇಟ್ ಮಾಡುವ ಮೆರಿನ್‌ಳ ಆಟವನ್ನು ಎಷ್ಟು ಜನ ಹೊಗಳುತ್ತಾರೋ ಅಷ್ಟೇ ಜನ ದ್ವೇಷಿಸುತ್ತಾರೆ ಕೂಡ!
ಬ್ಯಾಡ್ಮಿಂಟನ್‌ನಲ್ಲಿ ಕೆಲವೊಂದು ಶಿಷ್ಟಾಚಾರದ ನಿಯಮಗಳಿವೆ. ಅಂಕವನ್ನು ಗಳಿಸಿದ ನಂತರ ವಿನಾಕಾರಣ ಜೋರಾಗಿ ಕಿರುಚಬಾರದೆಂಬುದು ಅವುಗಳಲ್ಲಿ ಪ್ರಮುಖವಾದದ್ದು. ಎದುರಾಳಿಯ ಏಕಾಗ್ರತೆಗೆ ಭಂಗತರಬಾರದೆಂಬ ಕಾರಣಕ್ಕೆ ಈ ನಿಯಮ. ಮೆರಿನ್ ಹಾಗೂ ಸಿಂಧುವಿನ ನಡುವೆ ನಡೆದ ಒಂದು ಆಟದಲ್ಲಿ, ಇಬ್ಬರೂ ಈ ನಿಯಮ ಮೀರಿ, ರೆಫರಿಯಿಂದ ವಾರ್ನಿಂಗ್ ಪಡೆದುಕೊಂಡಿದ್ದರು. ಮೊದಲ ಎರಡು ಸೆಟ್ಟಿನಲ್ಲಿ ಸಮಬಲದ ಹೋರಾಟ ನಡೆಸಿದ ಇಬ್ಬರೂ ಮೂರನೇ ಸೆಟ್‌ನಲ್ಲಿ ಗೆಲ್ಲಲು ಛಲಬಿಡದೆ ಹೋರಾಡುತ್ತಿದ್ದರು. ಆದರೆ ಮೆರಿನ್ ತನ್ನ ಮೈಂಡ್ ಗೇಮ್‌ನಿಂದ ಪ್ರಾಬಲ್ಯ ಸಾಧಿಸಿ ಗೆದ್ದಿದ್ದು ಈಗ ಇತಿಹಾಸ. ಜೋರಾಗಿ ಕಿರುಚುವುದು, ಅಂಕವನ್ನು ಸೋತ ಎದುರಾಳಿಯು, ಶಟಲ್ ಕಾಕನ್ನು ಅವಳತ್ತ ತಳ್ಳುವ ಮೊದಲೇ ಓಡಿಬಂದು ತನ್ನ ರಾಕೆಟ್‌ನಿಂದ ತನ್ನತ್ತ ಎಳೆದುಕೊಳ್ಳುವುದು… ಅವಳ ಆಟದಲ್ಲಿ ಇವೆಲ್ಲ ಸಾಮಾನ್ಯವಾಗಿ ಕಂಡುಬರುವ ತಂತ್ರಗಳು.
ಇಂತಿಪ್ಪ ಮೆರಿನ್, 2024 ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿಯೂ ಚಿನ್ನ ಗೆಲ್ಲುವ ಫೇವರೇಟ್ ಆಗಿದ್ದಳು. ತನ್ನ ಚುರುಕಿನ ಆಟದಿಂದ ಸೆಮಿಫೈನಲ್ ತಲುಪಿ, ಎದುರಾಳಿ ಹೇ ಬಿಂಗ್ಜಿಯಾವ್‌ಳನ್ನು ನೇರ ಸೆಟ್‌ನಿಂದ ಮಣಿಸಿ ಇನ್ನೇನು ಫೈನಲ್ ತಲುಪಬೇಕು… ಆಗ ಸಂಭವಿಸಿತು ನೋಡಿ ಒಂದು ದುರಂತ! ಹೇ ಕೊಟ್ಟ ಸ್ಮಾಷನ್ನು ಹಿಂದಿರಿಗಿಸುವ ಯತ್ನದಲ್ಲಿ ಹಿಂದೆ ಸರಿಯುವಾಗ ಅಕಸ್ಮಾತ್ ಜಾರಿ ಬಿದ್ದ ಮೆರೀನ್‌ಳ ಬಲಗಾಲಿನ ಲಿಗಮೆಂಟ್ ಘಾಸಿಗೊಳ್ಳುತ್ತದೆ. ಮೆರಿನ್ ಜಾರಿ ಬಿದ್ದಾಗ ಎಲ್ಲರಿಗಿಂತ ಮೊದಲು ಆಘಾತಗೊಳಗಾಗಿದ್ದು ಕಾಮೆಂಟರಿ ಮಾಡುತ್ತಿದ್ದಾಕೆಗೆ… ಮೆರಿನ್ ಬಿದ್ದ ಕೂಡಲೇ ಓಹ್ ನೋ ನೋ.. ಎಂದು ಅರಚಿದ್ದನ್ನು ಕೇಳಿಯೇ ವೀಕ್ಷಕರಿಗೆ ಮೆರೀನ್ ಆಟ ಮುಂದುವರೆಸುವುದು ದುಸ್ಸಾಧ್ಯ ಎಂದು ಖಚಿತವಾಗಿತ್ತು.
ಯಶಸ್ವೀ ಕ್ರೀಡಾಪಟುಗಳ ಒಂದು ಪ್ರಮುಖ “ಅಟ್ರಿಬ್ಯೂಟ್” ಏನು ಗೊತ್ತೇ? ಅವರೆಂದಿಗೂ ಸೋಲನ್ನು ಸುಲಭವಾಗಿ ಒಪ್ಪಿಕೊಳ್ಳುವುದಿಲ್ಲ. ಬಲಗಾಲಿನ ನೋವನ್ನೂ ಲೆಕ್ಕಿಸದ ಮೆರಿನ್ ಕಾಲಿಗೊಂದು ಕ್ರೇಪ್ ಬ್ಯಾಂಡ್ ಸುತ್ತಿಕೊಂಡು ಮತ್ತೆ ಕಣಕ್ಕಿಳಿದಳು. ಅಂಕಗಳು ಸೋರಿಹೋಗುತ್ತಿದ್ದರೂ ಎದೆಗುಂದದೆ ಆಡುತ್ತಿದ್ದ ಮೆರಿನ್ ಕೆಲವೇ ಘಳಿಗೆಯಲ್ಲಿ ನೋವನ್ನು ತಾಳಲಾರದೆ ಮತ್ತೆ ಕುಸಿದಳು. ಈ ಬಾರಿ ಬಿಕ್ಕಿ ಬಿಕ್ಕಿ ಅಳುತ್ತಿದ್ದ ಅವಳ ನೋವಿಗೆ ಇಡೀ ಕ್ರೀಡಾಂಗಣ ಮರುಗುತ್ತಿತ್ತು. ಕುಸಿದಲ್ಲೇ ಅಳುತ್ತಿದ್ದ ಮೆರಿನ್‌ಳನ್ನು ತಬ್ಬಿ ಸಮಾಧಾನ ಮಾಡುತ್ತಿದ್ದ ಅವಳ ಕೋಚ್‌ಗೂ ಕೂಡ ತನ್ನ ಕಣ್ಣೀರನ್ನು ತಡೆಹಿಡಿಯಲಾಗಿರಲಿಲ್ಲ. ಎದುರಾಳಿ ಹೇ ಗೆ ತಾನು ಫೈನಲ್ ತಲುಪಿದ್ದಕ್ಕೆ ಖುಷಿಪಡುವುದೋ, ಅಥವಾ ಮೆರಿನ್‌ಳ ಸ್ಥಿತಿಯನ್ನು ನೋಡಿ ಮರುಗುವುದೋ, ಒಂದೂ ತಿಳಿಯದೆ ಮೆರೀನಳ ಬಳಿ ಬಂದು ವಿಷಾದದ ನೋಟ ಬೀರುತ್ತಾ ನಿಂತಿದ್ದಳು.
ಮೆರೀನ್‌ಗೆ ಈ ರೀತಿಯಾಗಿದ್ದು ಅವಳ ಕರ್ಮದ ಫಲ ಎಂದು ಹಲವರು ಕೊಂಕು ನುಡಿದರು. ಅವಳ ಗರ್ವಕ್ಕೆ ಸಿಕ್ಕ ತಕ್ಕ ಗೌರವ ಎಂದು ಎಷ್ಟೋ ಜನ ಅಣಕಿಸಿದರು. ಆದರೆ ಮೆರಿನ್‌ಳ ಇಂಜುರಿಯಿಂದ, ಪುಕ್ಕಟೆಯಾಗಿ ಫೈನಲ್ ತಲುಪಿ ಅಲ್ಲಿ ಬೆಳ್ಳಿ ಗೆದ್ದ ಹೇ ಬಿಂಗ್ಜಿಯಾವ್ ಏನು ಮಾಡಿದಳು ಗೊತ್ತೆ? ಪದಕ ಸಮಾರಂಭದಲ್ಲಿ ಬೆಳ್ಳಿ ಪದಕವನ್ನು ತೊಡಿಸಿಕೊಂಡು ಜೇಬಿನಿಂದ ಸ್ಪೇನ್‌ನ ಸಣ್ಣ ಬಾವುಟದ ಸ್ಟಿಕರ್ ಹೊರತೆಗೆದು ಪದಕದೊಡನೆ ಹಿಡಿದಳು. ಇಡೀ ಕ್ರೀಡಾಂಗಣ ಅವಳ ಕ್ರೀಡಾ ಮನೋಭಾವವನ್ನು ಮೆಚ್ಚಿ ಕರತಾಡನ ಮಾಡಿತು. ಸ್ವತಃ ಚೀನಾದವಳಾದ ಬಿಂಗ್ಜಿಯಾವ್ ಸ್ಪೇನ್‌ನ ಧ್ವಜದ ಸ್ಟಿಕ್ಕರನ್ನು ಹಿಡಿದ್ದಾದರೂ ಏನಕ್ಕೆ ಗೊತ್ತಾ? ಸೆಮಿಫೈನಲಿನಲ್ಲಿ ಗೆಲ್ಲುವ ಪಂದ್ಯವನ್ನು ಗಾಯದ ಸಮಸ್ಯೆಯಿಂದ ಅರ್ಧಕ್ಕೆ ಕೈ ಬಿಟ್ಟ ಮೆರಿನ್ ಸ್ಪೇನ್ ದೇಶದವಳು. ಆ ಪೋಡಿಯಂ ಮೇಲೆ ಮೆರಿನ್ ಇದ್ದರೇನೆ ಶೋಭೆ ಎಂದುಕೊಂಡ ಬಿಂಗ್ಜಿಯಾವ್, ಮೆರಿನ್‌ನ ದೇಶದ ಧ್ವಜವನ್ನು ಸಾಂಕೇತಿಕವಾಗಿ ಹಿಡಿದು ಎಲ್ಲರ ಮನವನ್ನು ಗೆದ್ದಿದ್ದಳು!
ಒಳ್ಳೆಯ ಲೇಖನ…