ಚಿತ್ರದ ಕಥಾವಸ್ತು ಹುಬ್ಬೇರಿಸುವಂಥಾದ್ದು. ಒಂಟೆಯೊಂದು ಬಿಳಿ ಬಣ್ಣದ ಮರಿ ಹಾಕಲು ಎರಡು ದಿನ ತೆಗೆದುಕೊಂಡ ನಂತರ ಮರಿಗೆ ಪ್ರೀತಿ ನಿರಾಕರಿಸಿ ಹಾಲು ಕುಡಿಯಲು ಬಿಡುವುದಿಲ್ಲ. ಮಾಡಿದ ಪ್ರಯತ್ನಗಳೆಲ್ಲ ವ್ಯರ್ಥವಾಗಿ ಕೊನೆಗೆ ತಾಯಿ ಒಂಟೆಗೆ ಅದರ ಮರಿಯ ಮೇಲೆ ಪ್ರೀತಿ ಹುಟ್ಟಿಸುವುದಕ್ಕೆ ಪಿಟೀಲು ವಾದನ ಕೇಳಿಸುವುದರಿಂದ ಸಮಸ್ಯೆ ನಿವಾರಣೆಯಾಗುತ್ತೆ. ಒಂದು ರೀತಿಯಲ್ಲಿ ಚಿತ್ರ ಸುಖಾಂತ. ಈ ವಸ್ತುವನ್ನು ಉಪಯೋಗಿಸಿಕೊಂಡು ಹಲವು ಪದರುಗಳುಳ್ಳ ಎಂಭತ್ತೇಳು ನಿಮಿಷಗಳ ಚಿತ್ರವನ್ನು ನಮ್ಮ ಮುಂದಿಡುತ್ತಾರೆ ನಿರ್ದೇಶಕರಾದ ಬ್ಯಾಂಬಸುರೆ ದವಾ ಮತ್ತು ಲುಗಿ ಫಲೋರ್ನಿ.
ಎ.ಎನ್. ಪ್ರಸನ್ನ ಬರೆಯುವ ʻಲೋಕ ಸಿನಿಮಾ ಟಾಕೀಸ್ʼನಲ್ಲಿ ಮಂಗೋಲಿಯ ʻದ ಸ್ಟೋರಿ ಆಫ್ ವೀಪಿಂಗ್ ಕ್ಯಾಮೆಲ್ʼ ಸಿನಿಮಾದ ವಿಶ್ಲೇಷಣೆ ನಿಮ್ಮ ಓದಿಗೆ
ಹೌದು. ಅದೊಂದು ಅಂಗೈ ಅಗಲದಷ್ಟಿರುವ ದೇಶ. ಹತ್ತಾರು ದಿಕ್ಕು ಸುತ್ತಾಡಿ ಬಂದರೂ ಅದರ ವಿಸ್ತೀರ್ಣ ಹದಿನೈದೂವರೆ ಲಕ್ಷ ಚದರ ಕಿಲೋಮೀಟರ್ ಅಷ್ಟೇ. ಅದರಲ್ಲಿ ಸುಮಾರು ಮೂವತ್ತು ಲಕ್ಷ ಜನರ ವಾಸ. ಅದರಲ್ಲಿ ಅರ್ಧದಷ್ಟು ಜನ ಅಲ್ಲಿರುವ ನಾಲ್ಕು ನಗರಗಳಲ್ಲಿ ವಾಸ. ಉಳಿದ ಪ್ರದೇಶವೆಲ್ಲ ಹೆಚ್ಚು ಕಡಿಮೆ ಮರುಭೂಮಿ. ಅಲ್ಲಿಯೇ ಅವರ ಜೀವನ. ಆ ಪ್ರದೇಶದಲ್ಲಿಯೇ ವಿವಿಧ ವಯೋಮಾನದವರ ಬದುಕು-ಬವಣೆ, ಆಸೆ-ನಿರಾಸೆ, ಹಮ್ಮು-ಬಿಮ್ಮು, ಸಹಮಾನವರ-ಪ್ರಾಣಿಗಳ ಸಹವಾಸದ ವಿಸ್ತಾರದ ಹರಹು. ಅದರ ಒಂದು ಬುಡಕ್ಕೆ ರಷ್ಯ ಮತ್ತೊಂದು ಬುಡಕ್ಕೆ ಚೀನಾಗಳಿದ್ದು ಶತಮಾನಗಳ ಕಾಲ ಸಾರ್ವಭೌಮತ್ವ ಇತ್ಯಾದಿ ವಿವಿಧ ಬಗೆಯ ಆಡಳಿತಕ್ಕೆ ಒಳಗಾದ ದೇಶ ಮಂಗೋಲಿಯ. 1990ರಲ್ಲಿ ಅಲ್ಲಿ ಜನತಂತ್ರ ಸ್ಥಾಪಿತ.
ಅಲ್ಲಿನ ಜನರಿಗೆ ನಗರಗಳನ್ನು ಹೊರತುಪಡಿಸಿದರೆ ಉಳಿದವರದ್ದು ವಿಸ್ತಾರ ಪ್ರದೇಶದಲ್ಲಿ ವಾಸ ಮತ್ತು ರೂಢಿಗತವಾದ ಕೆಲಸ. ಹುಲ್ಲುಗಾವಲನ್ನು ಅವಲಂಬಿಸಿರುವ ಜನರಂತೂ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಅದನ್ನು ಹುಡುಕಿಕೊಂಡು ಹೋಗಲೇಬೇಕಾಗುತ್ತದೆ. ಸಾಮಾನ್ಯವಾಗಿ ಇಂಥವರ ಮನೆಗಳು ನಮಗೆ ಕಂಡು ಬರುವಂಥ ಮನೆಗಳಲ್ಲ. ಅವು ದೊಡ್ಡ ಗಾತ್ರದ ಬಿಳಿ ಬಣ್ಣದ ವೃತ್ತಾಕಾರದ ಟೆಂಟು. ಹೀಗೊಂದು ಟೆಂಟಿನ ಅಂದಾಜು ವ್ಯಾಸ [ಡಯಾಮೀಟರ್] ಮೂವತ್ತು/ನಲವತ್ತು ಅಡಿ ಅನ್ನಬಹುದು. ಇದರಲ್ಲಿ ಕೂಡ ಅವರವರ ಅನುಕೂಲಕ್ಕೆ ತಕ್ಕಂತೆ ವ್ಯತ್ಯಾಸಗಳಿರಬಹುದು. ಇಂಥದೊಂದು ಮನೆಯಲ್ಲಿ ಒಂದು ಕುಟುಂಬ. ಅದರಲ್ಲಿ ನಾಲ್ಕು ಸಂತತಿಯವರ ವಾಸ. ಹೆಂಡತಿ, ಇಬ್ಬರು ಮಕ್ಕಳಿರುವ ಮೂರನೆ ಸಂತತಿಯವನು ದುಡಿಮೆ ಮತ್ತು ಹಣಕಾಸಿಗೆ ಸಂಬಂಧಿಸಿದ್ದನ್ನು ನಿಭಾಯಿಸುವಾತ. ಅವರ ಜೀವನ ರೀತಿಗೆ ನಾಗರಿಕತೆಯ ಗಂಧವಿಲ್ಲ ಎಂದಲ್ಲ. ಮನೆಯಲ್ಲಿ ಅಚ್ಚುಕಟ್ಟು ಎದ್ದು ಕಾಣುತ್ತದೆ. ಆದರೆ ಪಾಶ್ಚಿಮಾತ್ಯದ ಪ್ರಭಾವ, ಜಾಗತೀಕರಣ ಮತ್ತು ಕೊಳ್ಳುಬಾಕ ಸಂಸ್ಕೃತಿ ಅದನ್ನು ಪೂರ್ತಿಯಾಗಿ ಆವರಿಸಿಕೊಂಡಿಲ್ಲ. ಮನೆಯವರಲ್ಲಿ ಮೊದಲೆರಡು ಸಂತತಿಯಲ್ಲಿ ಗಂಡ-ಹೆಂಡತಿ ಮಾತ್ರ. ಮನೆಗೆಲಸವನ್ನು ಇಡೀ ಕುಟುಂಬದವರು ಹಂಚಿಕೊಂಡು ನಿರ್ವಹಿಸುವ ಅಚ್ಚುಕಟ್ಟಾದ ಸಂಸಾರ ಅವರದ್ದು. ಅವರ ಒಟ್ಟಾರೆ ಜೀವನಕ್ಕೆ ಧಾವಂತವಿಲ್ಲದ ಸಾವಧಾನದ ಲಯ. ಕುರಿ ಸಾಕುವುದು ವೃತ್ತಿಯಾದರೆ, ಸಾಕಿದ ಕುರಿಗಳಿಂದ ಕತ್ತರಿಸಿ ತೆಗೆದ ಉಣ್ಣೆಯೇ ವರಮಾನಕ್ಕೆ ಆಧಾರ. ಕುರಿಗಳನ್ನು ಮೇಯುವುದಕ್ಕೆ ದೂರದ ತಪ್ಪಲಿಗೆ ಕರೆದುಕೊಂಡು ಹೋಗುವುದಕ್ಕೆ ಮತ್ತು ಅವುಗಳನ್ನು ನಿಯಂತ್ರಿಸುವುದಕ್ಕೆ ಅವರು ಬಳಸುವುದು ಸಾಕಿದ ಒಂಟೆಗಳನ್ನು. ಈ ಒಂಟೆಗಳಲ್ಲೂ ಕೆಲವು ಎಳೆ ಪ್ರಾಯದವು. ಈ ಕುರಿ-ಒಂಟೆಗಳೆಲ್ಲ ಅವರ ಸಂಸಾರದ ಬೇರ್ಪಡಿಸಲಾಗದ ಭಾಗ.
ಇದು ಮಂಗೋಲಿಯಾದಲ್ಲಿ ಹುಟ್ಟಿ ಬಾಲ್ಯವನ್ನು ಕಳೆದ ಬ್ಯಾಂಬಸುರೆ ದಾವಾ ಮತ್ತು ಲುಗಿ ಫಲೋರ್ನಿ 2003 ರಲ್ಲಿ ನಿರ್ಮಿಸಿದ ʻಸ್ಟೋರಿ ಆಫ್ ವೀಪಿಗ್ ಕ್ಯಾಮೆಲ್ʼ ಚಿತ್ರದ ಹಿನ್ನೆಲೆ. ಈ ಚಿತ್ರ ಅತ್ಯುತ್ತಮ ಡಾಕ್ಯುಮೆಂಟರಿ ಫೀಚರ್ ವಿಭಾಗದ ಆಸ್ಕರ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿತ್ತು ಮತ್ತು ಇತರ ೯ ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಗಳಿಸಿದೆ. ಚಿತ್ರ ಅನೇಕ ರೀತಿಯಲ್ಲಿ ರಾರ್ಟ್ ಫ್ಲಾಹರ್ಟಿ ನಿರ್ದೇಶನದ `ನಾನುಕ್ ಆಫ್ ನಾರ್ಥ್’(1922), ಮ್ಯಾನ್ ಆಫ್ ಅರಾನ್’(1943) ಮತ್ತು `ಲೂಸಿಯಾನ ಸ್ಟೋರಿ’(1948) ಸಾಕ್ಷ್ಯ ಚಿತ್ರಗಳನ್ನು ನೆನಪಿಗೆ ತರುತ್ತದೆ.
ಬ್ಯಾಂಬಸುರೆ ದವಾ: ೧೯೭೧ರಲ್ಲಿ ಹುಟ್ಟಿದ ಬ್ಯಾಂಬಸುರೆ ದವಾ 1993ರಿಂದ ೯೮ರ ತನಕ ಅಂತರ ರಾಷ್ಟ್ರೀಯ ಕಾನೂನನ್ನು ಅಭ್ಯಾಸ ಮಾಡಿದ್ದಾಳೆ. ೧೯೮೯ರಿಂದ ಐದು ವರ್ಷ ಮ್ಯೂನಿಕ್‌ನಲ್ಲಿ ಚಲನಚಿತ್ರ ಮತ್ತು ಟೀವಿ ಕುರಿತು ತರಬೇತಿ ಪಡೆದು ಇಲ್ಲಿಯವರೆಗೆ ನಾಲ್ಕು ಚಿತ್ರಗಳನ್ನು ತಯಾರಿಸಿರುವ ಆಕೆಯ ಚಿತ್ರಗಳಲ್ಲಿ ಮುಖ್ಯವಾದದ್ದು ೨೦೦೫ರ ʻಕೇವ್ ಆಫ್ ದ ಎಲ್ಲೊ ಡಾಗ್ʼ.
ಲುಗಿ ಫಲೋರ್ನಿ: ಇಟಲಿಯ ಫ್ಲಾರೆನ್ಸ್‌ನಲ್ಲಿ 1971ರಲ್ಲಿ ಜನಿಸಿದ ಲುಗಿ ಫಲೋರ್ನಿ ಫ್ಲಾರೆನ್ಸ್‌ನ ಫಿಲ್ಮ್ ಡೈರೆಕ್ಟಿಂಗ್ ಸ್ಕೂಲ್‌ನಲ್ಲಿ ಅಭ್ಯಾಸ ಮಾಡಿ ಪದವಿ ಪಡೆದ. 1994ರಲ್ಲಿ ಮ್ಯೂನಿಚ್ ಅಕಾಡೆಮಿಯ ಟಿವಿ ಮತ್ತು ಫಿಲ್ಮ್ ನಲ್ಲಿ ಕಾರ್ಯ ನಿರ್ವಹಿಸಿದ. ಅವನ 2008ರ `ಹಾರ್ಟ್ ಆಫ್ ಫೈರ್’ ಚಿತ್ರ ಮಾಟ್ರಿಯಲ್ ಚಿತ್ರೋತ್ಸವದಲ್ಲಿ ಪ್ರಶಸ್ತಿ ಗಳಿಸಿದೆ.
ಚಿತ್ರದ ಕಥಾವಸ್ತು ಹುಬ್ಬೇರಿಸುಸುವಂಥಾದ್ದು. ಒಂಟೆಯೊಂದು ಬಿಳಿ ಬಣ್ಣದ ಮರಿ ಹಾಕಲು ಎರಡು ದಿನ ತೆಗೆದುಕೊಂಡ ನಂತರ ಮರಿಗೆ ಪ್ರೀತಿ ನಿರಾಕರಿಸಿ ಹಾಲು ಕುಡಿಯಲು ಬಿಡುವುದಿಲ್ಲ. ಮಾಡಿದ ಪ್ರಯತ್ನಗಳೆಲ್ಲ ವ್ಯರ್ಥವಾಗಿ ಕೊನೆಗೆ ತಾಯಿ ಒಂಟೆಗೆ ಅದರ ಮರಿಯ ಮೇಲೆ ಪ್ರೀತಿ ಹುಟ್ಟಿಸುವುದಕ್ಕೆ ಪಿಟೀಲು ವಾದನ ಕೇಳಿಸುವುದರಿಂದ ಸಮಸ್ಯೆ ನಿವಾರಣೆಯಾಗುತ್ತೆ. ಒಂದು ರೀತಿಯಲ್ಲಿ ಚಿತ್ರ ಸುಖಾಂತ. ಈ ವಸ್ತುವನ್ನು ಉಪಯೋಗಿಸಿಕೊಂಡು ಹಲವು ಪದರುಗಳುಳ್ಳ ಎಂಭತ್ತೇಳು ನಿಮಿಷಗಳ ಚಿತ್ರವನ್ನು ನಮ್ಮ ಮುಂದಿಡುತ್ತಾರೆ ನಿರ್ದೇಶಕರಾದ ಬ್ಯಾಂಬಸುರೆ ದವಾ ಮತ್ತು ಲುಗಿ ಫಲೋರ್ನಿ.
ಚಿತ್ರದ ಕಥನ ರೂಪ ಅತ್ಯಂತ ಸ್ಪಷ್ಟ. ಇತ್ತೀಚೆಗೆ ಮನುಷ್ಯರ ಆರೋಗ್ಯ ಸುಧಾರಣೆಗೆ ಸಂಗೀತ ಬಳಕೆಯಾಗುತ್ತಿರುವುದರಿಂದ ಪ್ರಾಣಿಯ, ಅಂದರೆ ಒಂಟೆಗೆ ತನ್ನ ಮರಿಯ ಮೇಲೆ ಪ್ರೀತಿಯ ಭಾವನೆ ಉಂಟಾಗಲು ಪಿಟೀಲು ವಾದನದಿಂದಲೂ ಸಾಧ್ಯವಾಗಬಹುದು. ಆದರೆ ಇದರ ಮೂಲಕ ನಿರ್ದೇಶಕ ಏನು ಹೇಳಲು ಪ್ರಯತ್ನಿಸುತ್ತಿದ್ದಾರೆ ಅನ್ನುವುದನ್ನು ತಿಳಿಯುವುದಕ್ಕೆ ಕಥನದಲ್ಲಿ ಅಡಗಿರುವ ಸೂಕ್ಷ್ಮವಾದ ಪದರುಗಳನ್ನು ಬಿಡಿಸಬೇಕಾಗುತ್ತೆ. ಮೊದಲ ನೋಟಕ್ಕೆ ತಟ್ಟುವ ಅಂಶವೆಂದರೆ ಒಂಟೆ ಮರಿ ಹಾಕಲು ಎರಡು ದಿನ ತೆಗೆದುಕೊಳ್ಳುವ ಅಂಶ. ಇದೇನು ಇದು ಸಹಜತೆಯಿಂದ ದೂರವಿದೆಯಲ್ಲ ಅಂತ ಅಂದುಕೊಳ್ಳುತ್ತೇವೆ. ಜೊತೆಗೆ ಇನ್ನೊಂದು ಅಸಹಜವಾದದ್ದು ನಮಗೆ ಕಾಣಿಸುತ್ತೆ. ಹುಟ್ಟಿದ ಮರಿಯ ಮೈ ಬಣ್ಣ ತಾಯಿ ಮತ್ತು ಇತರ ಮರಿಗಳಿಗಿಂತ ಭಿನ್ನ. ಅದರ ಬಣ್ಣ ಕಣ್ಣಿಗೆ ರಾಚುವಷ್ಟು ಬಿಳಿ ಬಣ್ಣ. ಜೊತೆಗೆ ಹುಟ್ಟಿದ ಮರಿಗೆ ತಾಯಿ ಹಾಲು ಕುಡಿಯಲು ಬಿಡುವುದಿರಲಿ ಅದರ ಬಗ್ಗೆ ಎಳ್ಳಷ್ಟೂ ಪ್ರೀತಿಯಿಂದ ವರ್ತಿಸುವುದಿಲ್ಲ. ಅಷ್ಟೇಕೆ ಅದರ ಕಡೆ ಕಣ್ಣು ತಿರುಗಿಸಿಯೂ ನೋಡುವುದಿಲ್ಲ. ತಾಯಿ ಒಂಟೆ ತನ್ನ ಮರಿಯನ್ನು ಅಕ್ಕರೆ ಹಾಗೂ ಪ್ರೀತಿಯಿಂದ ಏಕೆ ಸ್ವೀಕರಿಸುತ್ತಿಲ್ಲ ಎನ್ನುವ ಪ್ರಶ್ನೆ ನಮಗುಂಟಾಗುತ್ತದೆ. ಮನೆ ಮಂದಿಯೆಲ್ಲ ತಾಯಿ ಒಂಟೆಯನ್ನು ಪುಸಲಾಯಿಸಿ ಮರಿಗೆ ಹಾಲು ಕುಡಿಸುವುದಕ್ಕೆ ಅವಕಾಶ ಉಂಟುಮಾಡಬೇಕೆಂಬ ಪ್ರಯತ್ನಕ್ಕೆ ಅದು ಕ್ಯಾರೇ ಅನ್ನುವುದಿಲ್ಲ. ಮನೆಯವರೆಲ್ಲ ಚರ್ಚಿಸಿ ಈ ಮೂಲ ಸಮಸ್ಯೆಯನ್ನು ಅಂದರೆ ಪಿಟೀಲು ವಾದನದಿಂದ ಸಾಧ್ಯ ಎಂದು ಮನೆಯಾತ ಅದನ್ನು ವ್ಯವಸ್ಥೆಗೊಳಿಸುತ್ತಾನೆ.
ಮನೆಗೆಲಸವನ್ನು ಇಡೀ ಕುಟುಂಬದವರು ಹಂಚಿಕೊಂಡು ನಿರ್ವಹಿಸುವ ಅಚ್ಚುಕಟ್ಟಾದ ಸಂಸಾರ ಅವರದ್ದು. ಅವರ ಒಟ್ಟಾರೆ ಜೀವನಕ್ಕೆ ಧಾವಂತವಿಲ್ಲದ ಸಾವಧಾನದ ಲಯ. ಕುರಿ ಸಾಕುವುದು ವೃತ್ತಿಯಾದರೆ, ಸಾಕಿದ ಕುರಿಗಳಿಂದ ಕತ್ತರಿಸಿ ತೆಗೆದ ಉಣ್ಣೆಯೇ ವರಮಾನಕ್ಕೆ ಆಧಾರ.
ಪಿಟೀಲು ವಾದನ ಕೇಳುತ್ತಿರುವಂತೆ ತಾಯಿ ಒಂಟೆ ಮೃದುವಾಗುತ್ತದೆ ಮತ್ತು ಕ್ರಮೇಣ ಸಡಿಲಗೊಂಡು ಮರಿಗೆ ಹಾಲು ಕುಡಿಯಲು ಬಿಡುತ್ತದೆ. ಈ ಮುಖ್ಯ ಪದರುಗಳ ಮೂಲಕ ಚಿತ್ರ ಕೆಲವು ಅಂಶಗಳನ್ನು ಧ್ವನಿಸುತ್ತದೆ. ಮಂಗೋಲಿಯ ದೇಶದ ಜನರ ಒಟ್ಟಾರೆ ಜೀವನದ ಮೇಲೆ ಅಮೆರಿಕ ಇತ್ಯಾದಿ ಪಶ್ಚಿಮ ರಾಷ್ಟ್ರಗಳ ಕೊಳ್ಳುಬಾಕುತನ, ಜಾಗತೀಕರಣ, ಜೀವನ ಶೈಲಿಗಳ ಪ್ರಭಾವಕ್ಕೆ ಸ್ಥಳೀಯರ ಪ್ರತಿರೋಧವನ್ನು ಬಿಳಿ ಮರಿಯನ್ನು ಹಾಕುವುದಕ್ಕೆ ತೆಗೆದುಕೊಳ್ಳುವ ಸಮಯ ಮತ್ತು ಎಲ್ಲರಿಗೂ ಉಂಟಾಗುವ ಆತಂಕ ಸೂಚಿಸುತ್ತದೆ ಎಂದು ಭಾವಿಸಬಹುದು. ಅವರನ್ನು ಮೀರಿದ ಕಾರಣಗಳಿಂದ ಅವೆಲ್ಲವೂ ಅವರ ಜೀವನದಲ್ಲಿ ನುಸುಳಿ ಬಂದಿರುವುದು ನಿಜ. ಇದರಿಂದ ಅವರಿಗೆ ಎಳ್ಳಷ್ಟೂ ಸಂತೋಷವಾಗಿಲ್ಲ ಅನ್ನುವುದನ್ನು ತಾಯಿ ಮರಿಯನ್ನು ನಿರಾಕರಿಸುವುದು ವ್ಯಕ್ತಪಡಿಸುತ್ತದೆ.
ಇದೆಲ್ಲ ಸರಿಯೆ. ಆದರೆ ಆ ಪ್ರಭಾವ ಮತ್ತು ಇತರ ಒತ್ತಡಗಳನ್ನು ನಿಭಾಯಿಸಬೇಕಾದ ಪರಿಸ್ಥಿತಿ ಅನೇಕ ದೇಶಗಳಿಗೆ ಬಂದಿರುವಂತೆ ಮಂಗೋಲಿಯಾಗೆ ಕೂಡ ಉಂಟಾಗಿದೆ. ಅಲ್ಲಿನವರ ಜೀವನ ವಿಧಾನ, ಶೈಲಿಗಳೊಂದಿಗೆ ಸಾಮರಸ್ಯ ಹೊಂದುವ ರೀತಿಯಲ್ಲಿ, ಅಂದರೆ ಅವರ ಒಟ್ಟಾರೆ ಬದುಕಿನ ಮೂಲ ಗುಣಕ್ಕೆ ಬೆಸೆದುಕೊಂಡರೆ ಮಾತ್ರ ಅವುಗಳ ಸ್ವೀಕಾರ ಸಂತೋಷ ಕೊಡುತ್ತದೆ ಎನ್ನುವುದು ಚಿತ್ರದ ಮೂಲ ಪರಿಕಲ್ಪನೆ. ಮರಿಯ ಮೇಲೆ ಒಂಟೆಗೆ ಪ್ರೀತಿ ಉಂಟಾಗಲಿಕ್ಕೆ ಅಲ್ಲಿನ ಮೂಲದ ಸಂಗೀತ ಬಳಸಿ ತಮ್ಮ ಪರಿಕಲ್ಪನೆಗೆ ಸಮರ್ಥವಾದ ದೃಶ್ಯ ರೂಪ ಕೊಡುತ್ತಾರೆ.
ಮೇಲಿನದು ಚಿತ್ರ ಏನನ್ನು ಧ್ವನಿಸಲು ಪ್ರಯತ್ನಿಸುತ್ತದೆ ಎನ್ನುವುದಾಯಿತು. ನಿರ್ದೇಶಕರು ಇವೆಲ್ಲವನ್ನು ದೃಶ್ಯ ಮಾಧ್ಯಮ ಸಂಬಂಧಿತ ಮೌಲ್ಯಗಳನ್ನು ಉಪಯೋಗಿಸಿಕೊಂಡು ಹೇಗೆ ತೆರೆದಿಡುತ್ತಾರೆ ಎನ್ನುವುದು ಚಲನಚಿತ್ರದ ಶ್ರೇಷ್ಠತೆಯನ್ನು ನಿರ್ಧರಿಸುತ್ತದೆ, ಇದಕ್ಕೆ ಚಿತ್ರದಲ್ಲಿ ದೃಶ್ಯಸರಣಿ ತೆರೆದುಕೊಳ್ಳುವ ಬಗೆಯನ್ನು ಗಮನಿಸಬೇಕು. ಚಿತ್ರದಲ್ಲಿ ಸಂಕ್ಷಿಪ್ತ ವಿದ್ಯುಕ್ತ ಕ್ರಿಯೆಗಳನ್ನು ನಿರೂಪಿಸಲಾಗಿದೆ. ಅವುಗಳಲ್ಲಿ ಪಾತ್ರಗಳು ಅಗತ್ಯ ತನ್ಮಯತೆಯಿಂದ ಪಾಲ್ಗೊಳ್ಳುತ್ತವೆ. ಕಥಾನಕದ ಕೆಲವು ಭಾಗಗಳಲ್ಲಿ ಸಾಕಷ್ಟು ಅವಕಾಶವಿದ್ದರೂ ವಿವಿಧ ವಯೋವರ್ಗದ ಪಾತ್ರಗಳು ಯಾವುದೇ ರೀತಿಯ ಭಾವಾತಿರೇಕವನ್ನು ಪ್ರದರ್ಶಸದೆ ಭಾವ ಸಾಂದ್ರತೆಯನ್ನು ನಿಯಂತ್ರಿತ ರೀತಿಯಲ್ಲಿ ಪ್ರಕಟಿಸುತ್ತಾರೆ.
ಚಿತ್ರದ ಲೊಕೇಷನ್ ಮತ್ತು ಪಾತ್ರವರ್ಗ ನಿಜಕ್ಕೂ ವಿಶೇಷ. ಚಿತ್ರೀಕರಣಗೊಂಡ ಮನೆ ಮತ್ತು ಪಾತ್ರಗಳು ನಿಜ ಜೀವನದಲ್ಲಿ ಇರುವಂಥವು. ಮೊದಲನೆ ಪೀಳಿಗೆಯ ಜಾನ್ಚಿವ್ ಮತ್ತು ಚಿಮೆಡ್ ಹಾಗೂ ಇತರ ಪಾತ್ರಗಳನ್ನು ಇಡೀ ಸಂಸಾರದ ನಿಧಾನ ಗತಿಯ ದೈನಂದಿನ ಆಗುಹೋಗುಗಳನ್ನು, ಅದಕ್ಕೆ ಅನುಗುಣವಾದ ಗತಿಯಲ್ಲಿಯೇ ನಮ್ಮ ಮುಂದಿರುತ್ತದೆ. ಚೊಕ್ಕ ಮತ್ತು ಸಾಮಾನ್ಯ ದರ್ಜೆಯ ಮಧ್ಯಮ ವರ್ಗದ ಜೀವನ ಅವರದು. ಯಾವುದೇ ರೀತಿಯ ಒತ್ತಡದ ಮತ್ತು ಉದ್ವೇಗದ ಸೋಂಕಿಲ್ಲ. ಮನೆಯವರು, ಪ್ರಾಣಿಗಳಿಗೆ ಒಂದಕೊಂದು ಬೆಸೆದುಗೊಂಡಂತೆ ತೋರುವ ಅವರ ಜೀವನವಿಧಾನ ತೀರ ಸಹಜ. ಇವನ್ನು ಪರಿಚಯಿಸುತ್ತಲೇ ನಿರ್ದೇಶಕರು ಹಲವು ಸಲ ಮುನ್ನೆಲೆಯಲ್ಲಿ ಇವರನ್ನಿಟ್ಟು ಹಿನ್ನೆಲೆಯಲ್ಲಿ ವಿಸ್ತಾರ ದಿಗಂತದ ಶಾಟ್‌ಗಳನ್ನು ಬಳಸಿ ಅಲ್ಲಿನ ಜನ ಮತ್ತು ನೆಲಕ್ಕಿರುವ ಹೊಂದಾಣಿಕೆಯನ್ನು ಹೇಳುತ್ತಾರೆ. ನಾಲ್ಕನೆ ಸಂತತಿಯ ಮಕ್ಕಳ ಮೇಲೆ ಹೆಚ್ಚಿನ ಗಮನ ಹರಿಸುತ್ತಾರೆ.
ಆಗಲೇ ಸ್ಥಿರಪಡಿಸಿದ ಗತಿಯಲ್ಲಿಯೇ ಒಂಟೆ ಮರಿ ಹಾಕುವ ಕ್ರಿಯೆಯನ್ನು ಅತಿ ಸಮೀಪದ ಶಾಟ್ ಗಳಲ್ಲಿ ಚಿತ್ರಿಸುತ್ತ ಮುಂದೆ ಅದು ಮುಖ್ಯ ಸಂಗತಿಯಾಗುತ್ತದೆ ಎನ್ನುವುದರ ಸೂಚನೆ ಕೊಡುತ್ತಾರೆ. ಸಾಕಷ್ಟು ವಿಸ್ತಾರವಾಗಿಯೇ ಜರುಗುವ ಈ ಕ್ರಿಯೆ `ಆಗಲೇ ಎರಡು ದಿನವಾಯಿತು’ ಎಂದು ಅವರು ಆತಂಕದಿಂದ ತಮ್ಮತಮ್ಮಲ್ಲಿ ಮಾತನಾಡಿಕೊಳ್ಳುವಾಗ ಅವರಿಗಾದಂತೆ ನಮಗೂ ಇದೊಂದು ಅಸಹಜ ರೀತಿಯದು ಎನ್ನಿಸುತ್ತದೆ. ಅನಂತರ ಅವರು ಮರಿ ಬಿಳಿ ಬಣ್ಣದ್ದು ಎಂದು ಸಂದಿಗ್ಧಗೊಳ್ಳುತ್ತಾರೆ, ಸೋಜಿಗಗೊಳ್ಳುತ್ತಾರೆ. ಅದರ ಬಣ್ಣ ಬಿಳಿ ಎನ್ನುವುದು ಇಡೀ ಚಿತ್ರದಲ್ಲಿ ಅತ್ಯಂತ ಪ್ರಮುಖವಾಗಿರುವುದರಿಂದ ಆ ಎಳೆ ಮರಿಯ ವಿವಿಧ ಅಂಗಗಳ ಮೇಲೆ ಕ್ಯಾಮೆರಾ ಹಲವು ಕೋನಗಳಲ್ಲಿ ನಿಧಾನ ಗತಿಯಲ್ಲಿ ಚಲಿಸುತ್ತದೆ. ತಾಯಿಯಿಂದ ಮರಿ ತಿರಸ್ಕೃತಗೊಂಡ ಮೇಲೆ ಆತಂಕಕ್ಕೆ ಒಳಗಾಗಿ ಬಾಟಲಿಯಲ್ಲಿ ಹಾಲು ಕುಡಿಸುವುದಕ್ಕೆ ಹಿರಿಯರು ಪ್ರಯತ್ನಿಸುತ್ತಾರೆ. ಮರಿಗೆ ಅದೂ ಸರಿ ಹೋಗುವುದಿಲ್ಲ. ಇದನ್ನು ಮತ್ತೆ ಅತಿ ಸಮೀಪ ಚಿತ್ರಿಕೆಗಳಲ್ಲಿ ಚಿತ್ರೀಕರಿಸಿ ಉಲ್ಭಣಗೊಳ್ಳುತ್ತಿರುವ ಪರಿಸ್ಥಿತಿಯನ್ನು ಮತ್ತು ಅದರ ತೀವ್ರತರ ಭಾವನೆಲೆಯನ್ನು ನಿರ್ದೇಶಕರು ನಮ್ಮ ಮನಮುಟ್ಟಿಸಿತ್ತಾರೆ. ಈ ಸಮಸ್ಯೆಯಿಂದ ಮನೆಯವರು ಆತಂಕಗೊಂಡದ್ದನ್ನು ಸಮರ್ಥವಾಗಿ ದಾಖಲಿಸುತ್ತಾರೆ.
ಇದಕ್ಕೆ ಸಂಗೀತವೇ ಪರಿಹಾರವೆಂದು ನಿರ್ಧರಿಸಿ ಪಿಟೀಲು ವಾದಕನನ್ನು ಕರೆಯಲು ನಾಲ್ಕೈದು ವರ್ಷದ ಮಗನ ಜೊತೆ ಅವನ ತಂದೆ ನಗರಕ್ಕೆ ಹೋಗುತ್ತಾನೆ. ಆಗ ಆ ಪ್ರದೇಶದಲ್ಲಿ ಉಂಟಾಗಿರುವ ಪಶ್ಚಿಮದ ಬಹುಮುಖಿ ಪ್ರಭಾವದ ಅರಿವು ನಮಗಾಗುತ್ತದೆ. ಚಿಕ್ಕ ಹುಡುಗ ಅಲ್ಲಿನ ಎಲೆಕ್ಟ್ರಾನಿಕ್ ವಸ್ತುಗಳಿಂದ ಹೆಚ್ಚು ಆಕರ್ಷಿತನಾಗುತ್ತಾನೆ. ಅನಂತರ ಪಿಟೀಲು ವಾದನದ ದೃಶ್ಯದಲ್ಲಿ ಭಾವ ತೀವ್ರತೆಯನ್ನು ಒದಗಿಸಲು ಒಂಟೆಯ ಕಣ್ಣಿನಿಂದ ನೀರು ಹನಿಸುವ ವಿಧಾನವನ್ನು ಅನುಸರಿಸಿರುವುದು ನಿಜಕ್ಕೂ ವಿಶೇಷವೇ. ಒಂಟೆಗೆ ಮರಿಯ ಮೇಲೆ ಪ್ರೀತಿ ಉಂಟಾದ ನಂತರ ಮನೆಮಂದಿ ಮತ್ತು ಪಿಟೀಲು ವಾದಕನೂ ಸೇರಿದಂತೆ ಎಲ್ಲರೂ ಹಾಲು ಹಂಚಿಕೊಂಡು ಕುಡಿಯುತ್ತಾರೆ. ಮೊದಲ ಪ್ರಯತ್ನದಲ್ಲಿಯೇ ಸಂದರ್ಭ ಏನೇ ಇದ್ದರೂ ಒಟ್ಟಾರೆಯಾಗಿ ಬದುಕು ಮಾತ್ರ ಮುಖ್ಯವೆನ್ನುವುದನ್ನು ಕುರಿತು ಅನೇಕ ಸೋಜಿಗಗಳನ್ನು ಒದಗಿಸಿದ ಇಂಥ ಮಹತ್ವಪೂರ್ಣ ಚಿತ್ರ ನಿರ್ಮಿಸಿದವರನ್ನು ಅಭಿನಂದಿಸಬೇಕಾಗುತ್ತದೆ.
ದಾವಣಗೆರೆಯಲ್ಲಿ ಎಂಜಿನಿಯರಿಂಗ್ ಪದವಿಯ ನಂತರ ಕೆ. ಪಿ. ಟಿ. ಸಿ. ಎಲ್.ನಲ್ಲಿ ಕಾರ್ಯ ನಿರ್ವಹಿಸಿ ನಿವೃತ್ತ. ಸಾಹಿತ್ಯ, ನಾಟಕ ಮತ್ತು ದೃಶ್ಯಮಾಧ್ಯಮದಲ್ಲಿ ಆಸಕ್ತಿ. ಅದರಲ್ಲಿಯೂ ಸಣ್ಣ ಕಥೆ, ಅನುವಾದ, ಚಲನಚಿತ್ರ ವಿಮರ್ಶೆ ಮುಂತಾದವುಗಳ ಬಗ್ಗೆ ಹೆಚ್ಚಿನ ಗಮನ. ಹಾರು ಹಕ್ಕಿಯನೇರಿ(ಚಲನಚಿತ್ರ) ನಿರ್ದೇಶನವೂ ಇದರಲ್ಲಿ ಸೇರಿದೆ. ಚಿತ್ರಕಥೆಯ ಸ್ವರೂಪ ಮತ್ತು ಪ್ರತಿಫಲನ, ಬಿಡುಗಡೆ(ಕಥಾ ಸಂಕಲನ) ಅವರ ಇತ್ತೀಚಿನ ಪ್ರಕಟಣೆಗಳು.