ಪರೀಕ್ಷೆ ಮುಗಿಸಿದ ಈಗಾಗಲೆ ಅಣಶಿಯಲ್ಲಿದ್ದ ಮಕ್ಕಳನ್ನು ಅವರವರ ಮನೆಗೆ ಮುಟ್ಟಿಸುವ ಜವಾಬ್ದಾರಿಯುತ ಕೆಲಸ ಶಿಕ್ಷಕರದ್ದಾಗಿತ್ತು. ಮಾರನೆಯ ದಿನ ಮಕ್ಕಳು ಮನೆಗೆ ತಲುಪಿದರು ಎಂಬ ತೃಪ್ತಿಯ ನಗು ಅವರಲ್ಲಿತ್ತು. ಆದರೆ ಶಿಕ್ಷಕರು ಮಕ್ಕಳನ್ನು ಮನೆಗೆ ಮುಟ್ಟಿಸುವ ಹೊತ್ತಲ್ಲಿ ಕೆಲವು ಮಕ್ಕಳ ಮನೆಗಳಿಗೆ ನೀರು ನುಗ್ಗಿ, ಕಷ್ಟ ಪಟ್ಟು ದುಡಿದ ಆಹಾರ ಧಾನ್ಯಗಳು, ಬಟ್ಟೆ, ಸಾಮಾನುಗಳೆಲ್ಲ ನೀರಲ್ಲಿ ಕೊಚ್ಚಿಕೊಂಡು ಹೋಗಿದ್ದವು. ಮಳೆಗೆ ಮನೆಯ ಗೋಡೆಗಳು ಹಸಿಯಾಗಿ ಒಂದು ಬದಿಯಿಂದ ಉರುಳಿದ್ದನ್ನು ನೋಡುವುದೇ ಕಷ್ಟವಾಗಿತ್ತು.
ಅಕ್ಷತಾ ಕೃಷ್ಣಮೂರ್ತಿ ಬರೆಯುವ ‘ಕಾಳಿಯಿಂದ ಕಡಲಿನವರೆಗೆ’ ಸರಣಿ
ಕಳೆದ ಸಂಚಿಕೆಯಲ್ಲಿ ಘಟ್ಟದ ಮೇಲಿನ ಹಾದಿಯ ಬಗ್ಗೆ ಓದಿ ವಿಚಾರಿಸಿದವರು, ಹರಸಿದವರು ಬಹಳಷ್ಟು ಜನ. ಬಹುಶಃ ನಿಮ್ಮೆಲ್ಲರ ಹಾರೈಕೆ ಪ್ರೀತಿ ಇಂದು ನನ್ನನ್ನು ಬದುಕಿಸಿದೆ. ಹೀಗೆ ಹೇಳಲು ಕಾರಣವೂ ಉಂಟು. ಕಾಳಿ ನದಿ ಜೋಯಿಡಾದಲ್ಲಿ ಹುಟ್ಟಿ ಪಕ್ಕದ ಕಾರವಾರ ತಾಲೂಕನ್ನು ಬಳಸಿ ಅರಬ್ಬಿ ಸೇರಿ ಕಡಲಾಗುತ್ತಾಳೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಅಣೆಕಟ್ಟುಗಳನ್ನು ಹೊಂದಿ ಬೀಗುತ್ತಿದ್ದ ನದಿ ನಮ್ಮ ಕಾಳಿ. ತನ್ನೊಡಲಲ್ಲಿ ನಾಲ್ಕು ಅಣೆಕಟ್ಟು ಹೊಂದಿದ್ದರ ಜೊತೆಗೆ ಏಷ್ಯಾದ ಅತಿ ಎತ್ತರದ ಸುಫಾ ಅಣೆಕಟ್ಟನ್ನು ನಾಡಿಗೆ ನೀಡಿದ ನದಿ ಕಾಳಿ. ಅಣಶಿ ಘಟ್ಟದ ಕೆಳಗೆ ಕಾಳಿಯನ್ನು ತಡೆದದ್ದು ಕದ್ರಾ ಅಣೆಕಟ್ಟು.
ಆ ದಿನ ಜುಲೈ ೨೨, ಎಸ್ ಎಸ್ ಎಲ್ ಸಿ ಎರಡನೇ ದಿನದ ಪರೀಕ್ಷೆ. ಹೊರಗೆ ಸುರಿವ ಮಹಾಮಳೆ. ಅಣಶಿ ಸೇರಿದಂತೆ ಜೋಯಿಡಾದ ಕಾಡಿನ ಹಳ್ಳಿಯ ಮಕ್ಕಳು ಸುರಿವ ಮಳೆಯಲ್ಲಿ ಬೆಳಿಗ್ಗೆ ಐದಕ್ಕೆ ಎದ್ದು ಕೆಲವರು ಕಾಡಿನ ಹಾದಿ ನಡೆದು, ಹೆದ್ದಾರಿ ತಲುಪಿ ಅಲ್ಲಿ ಬಸ್ಸಿಗಾಗಿಯೋ ಟ್ರ್ಯಾಕ್ಸಿಗಾಗಿಯೋ ಕಾದು ಅಂತೂ ಇಂತು ಸಮಯಕ್ಕೆ ಸರಿಯಾಗಿ ಪರೀಕ್ಷಾ ಕೇಂದ್ರ ತಲುಪಿದ್ದರು. ಬೆಳಿಗ್ಗೆಯಿಂದ ಸುರಿದ ಮಳೆ ಮಧ್ಯಾಹ್ನವಾದರೂ ನಿಲ್ಲುತ್ತಿಲ್ಲ. ಪರೀಕ್ಷೆ ಮುಗಿಸಿ ಮನೆಗೆ ಹೊರಳುವಷ್ಟರಲ್ಲಿ ಮಕ್ಕಳು ನಡೆದು ಬಂದ ದಾರಿ ಪೂರ್ತಿ ಜಲಾವೃತ. ಎಲ್ಲೆಡೆ ನೀರು. ಕೆಲವು ಕಡೆಗಳಲ್ಲಿ ಇದ್ದಬಿದ್ದ ನೆಟ್ವರ್ಕ್ ಸಹ ಮಾಯವಾಗಿತ್ತು. ಶಿಕ್ಷಕರಿಗೆ ತಮ್ಮ ಮಕ್ಕಳು ಸುರಕ್ಷಿತವಾಗಿ ಮನೆ ತಲುಪಿದರೆ..? ಎಂಬ ಪ್ರಶ್ನೆ ಕಾಡತೊಡಗಿತು. ಪರೀಕ್ಷೆಯ ಡ್ಯೂಟಿ ಮುಗಿಸಿ ಅಣಶಿ ಶಾಲೆಗೆ ಬಂದ ಶಿಕ್ಷಕರು, ಮಕ್ಕಳನ್ನು ಅವರವರ ಮನೆಗೆ ತಲುಪಿಸುವ ಕೆಲಸದಲ್ಲಿ ನಿರತರಾದರು. ಎಲ್ಲಿ ನೋಡಿದರೂ ನೀರೆ ನೀರು. ಮಧ್ಯಾಹ್ನದ ಮೂರು ಗಂಟೆ ಮುಸ್ಸಂಜೆಯಂತೆ ಕಂಡು ಕಡುಗತ್ತಲು ಸುತ್ತ ತುಂಬಿರುವಾಗ, ಮಕ್ಕಳು ಬಂದ ದಾರಿಯನ್ನೆಲ್ಲ ಅಳಿಸಿ ನೀರು ತನ್ನ ಆರ್ಭಟ ತೋರುತ್ತಿರುವಾಗ, ಮಕ್ಕಳು ಮನೆ ತಲುಪುವುದು ಅಸಾಧ್ಯ ಅಂತಾಗಿ ಅಲ್ಲಿಂದಲೇ ಚಿಂತೆ ಶುರುವಾದದ್ದು. ಅಣಶಿಯಿಂದ ಹದಿನೆಂಟು ಕಿ.ಮಿ ದೂರ ಇರುವ ಕುಂಭಗಾಳ, ನವರ ಮುಂತಾದ ಹಳ್ಳಿಯೆಲ್ಲ ಪೂರ್ತಿ ಜಲಾವೃತ. ಮಕ್ಕಳನ್ನೆಲ್ಲ ಮನೆಗೆ ಕಳಿಸಲು ಆಗದೆ, ಅವರು ಹೋಗುವ ದಾರಿಯಲ್ಲಿ ಹಳ್ಳ ತುಂಬಿದ್ದು ನೋಡಿ ವಾಪಸಾದ ಶಿಕ್ಷಕರು, ಅಣಶಿ ಊರಿನವರ ಬಳಿ ಸಹಾಯ ಕೇಳಿ ಅಲ್ಲಲ್ಲಿ ಕೆಲವು ಮನೆಗಳಲ್ಲಿ ಮಕ್ಕಳನ್ನು ಉಳಿಸಿದ್ದು ಆಯಿತು. ಮಕ್ಕಳು ಸುರಕ್ಷಿತವಾಗಿದ್ದಾರೆಂಬ ಸುದ್ದಿ ಮನೆಯವರಿಗೆ ಮುಟ್ಟಿಸಲು ಕಷ್ಟವಾಗಿ, ಅವರಿಗೂ ಇತ್ತ ಕಡೆ ಬರಲಾಗದೆ; ಪಾಲಕರು- ಮಕ್ಕಳ ಜೊತೆಗೆ ಅವರನ್ನು ಎಸ್ ಎಸ್ ಎಲ್ ಸಿ ಪರೀಕ್ಷೆಗೆ ಕರೆದೊಯ್ದ ಶಿಕ್ಷಕರ ಒದ್ದಾಟ ಹೇಳತೀರದು. ಅಂತೂ ಮಕ್ಕಳನ್ನೆಲ್ಲ ಸುರಕ್ಷಿತವಾಗಿ ಉಳಿಸಿ “ಮಳೆ ಕಡಿಮೆ ಆದ ನಂತರ ಮಾರನೇ ದಿನ ಹೋದರಾಯಿತು” ಎಂದು ಮಕ್ಕಳನ್ನೆಲ್ಲ ಸಮಾಧಾನಿಸಿ ಶಿಕ್ಷಕರು ತಮ್ಮ ತಮ್ಮ ಮನೆಗೆ ಮರಳುವ ಹೊತ್ತಿಗೆ ಮುಸ್ಸಂಜೆಯಾಗಿತ್ತು.
ಅಂದು ಶಿಕ್ಷಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಊಟವಿಲ್ಲದೆ, ಬರಿಯ ಬಿಸ್ಕೀಟು ಚಾದಲ್ಲಿಯೇ ಸಂಜೆಯವರೆಗೂ ತಡೆದರೂ, ಕಾಡುವ ಹಸಿವು ಒಂದು ಕಡೆಯಾದರೆ, ಸುರಿವ ಮಳೆ, ಅಣಶಿಯ ಘಟ್ಟದ ರಸ್ತೆಯಲ್ಲಿನ ನೀರಿನ ಸದ್ದು ಸುನಾಮಿಯಂತೆ ಹಿಂಬಾಲಿಸಿಕೊಂಡು ಬಂದ ಹಾಗೆ ಅನಿಸುತ್ತಿತ್ತು. ಅಣಶಿ ಘಟ್ಟದ ರಸ್ತೆಯಲ್ಲಿ ಸಿಗುವ ಜಲಪಾತಗಳು, ಸಣ್ಣ ನೀರಿನ ಝರಿಗಳೆಲ್ಲ ಬೃಹಾಕಾರವಾಗಿ ಗಾತ್ರ ಹೆಚ್ಚಿಸಿಕೊಂಡು ರಾಕ್ಷಸ ರೂಪ ತಾಳಿದಂತಹ ಭಾವ. ಸುರಿವ ಮಳೆಯಲ್ಲಿ ಶಿಕ್ಷಕರೆಲ್ಲರು ಅಣಶಿ ಘಟ್ಟ ಇಳಿದು ಮನೆ ತಲುಪುವವರೆಗೂ ಒಂದು ಭಯಾನಕ ಪ್ರಯಾಣ ಅದು ಅನಿಸದೇ ಇರಲಿಲ್ಲ. ತಿರುವಿನ ರಸ್ತೆಯಲ್ಲಿ ಮಳೆ ಬಂತೆಂದರೆ ರಸ್ತೆಯೆಲ್ಲ ನೀರು ತುಂಬಿರುತ್ತದೆ. ರಸ್ತೆ ಇದೆ ಎಂದು ಅಂದಾಜಿನ ಪ್ರಕಾರ ಗಾಡಿ ಓಡಿಸಬೇಕು. ನೀರಿನ ರಭಸಕ್ಕೆ ಗಾಡಿಯ ಚಕ್ರ ತಿರುಗಿ ರಸ್ತೆ ಬಿಟ್ಟು ಹೋದರೆ ಆಳವಾದ ಕಣಿವೆಗೆ ಜಾರುವುದು ಖಚಿತ. ಅಂತಹ ಅಪಾಯದ ರಸ್ತೆ ಅಣಶಿ ಘಟ್ಟದ ಮೇಲಿನ ಹಾದಿ. ಹೀಗಾಗಿ ಹೊಸಬರು ಜೋರು ಮಳೆ ಬಂದರೆ ಅಣಶಿ ಘಟ್ಟದ ಪ್ರಯಾಣ ಮಾಡಲು ಹೆದರುತ್ತಿದ್ದದ್ದು ವಾಸ್ತವದ ಸಂಗತಿ.
ಎಲ್ಲಿ ನೋಡಿದರೂ ನೀರೆ ನೀರು. ಮಧ್ಯಾಹ್ನದ ಮೂರು ಗಂಟೆ ಮುಸ್ಸಂಜೆಯಂತೆ ಕಂಡು ಕಡುಗತ್ತಲು ಸುತ್ತ ತುಂಬಿರುವಾಗ, ಮಕ್ಕಳು ಬಂದ ದಾರಿಯನ್ನೆಲ್ಲ ಅಳಿಸಿ ನೀರು ತನ್ನ ಆರ್ಭಟ ತೋರುತ್ತಿರುವಾಗ, ಮಕ್ಕಳು ಮನೆ ತಲುಪುವುದು ಅಸಾಧ್ಯ ಅಂತಾಗಿ ಅಲ್ಲಿಂದಲೇ ಚಿಂತೆ ಶುರುವಾದದ್ದು.
ದಿನವೂ ಘಟ್ಟದ ಮೇಲಿನ ಶಾಲೆಯ ದಾರಿಯಲ್ಲಿ ಪ್ರಯಾಣಿಸುವಾಗ ದಾರಿಯ ಪರಿಚಯದ ಜೊತೆಗೆ ಘಟ್ಟದ ರಸ್ತೆಯ ಬಗ್ಗೆ ಪ್ರೀತಿಯೂ ಸೇರಿ ಹುಚ್ಚು ಧೈರ್ಯ ಕೆಲವೊಮ್ಮೆ ಸುರಿವ ಮಳೆ ಗಾಳಿಯಲ್ಲಿ ವಾಹನ ಚಲಾಯಿಸುವ ಧೈರ್ಯ ಮಾಡಿಸುವುದುಂಟು. ಅದು ಅನಿವಾರ್ಯ ಕೂಡ. ರಸ್ತೆಯ ಮೇಲಿಂದ ಹರಿದು ಬಂದ ನೀರು ದ್ವಿಚಕ್ರ ವಾಹನದ ಚಕ್ರವನ್ನೆ ಅಲ್ಲಾಡಿಸುವಷ್ಟು ಶಕ್ತಿ ತೋರುತ್ತಿರುತ್ತದೆ. ವರ್ಷದ ಮೂರು ಕಾಲದಲ್ಲಿಯೂ ಹಸಿರಾಗಿರುವ ಬೆಟ್ಟದ ಮೇಲೆ ಆ ದಿನ ಬಿದ್ದ ಮಳೆ ನೀರು ಹರಿದು, ದೂರದಿಂದ ನೋಡಿದರೆ ಬಿಳಿ ಹಾಲಿನಂತಹ ನೀರು ಹಸಿರು ಬೆಟ್ಟವನ್ನೆ ನುಂಗಿದಂತೆ ಇಳಿದು ಬರುತ್ತಿತ್ತು. ಸ್ವಲ್ಪ ಸಮೀಪ ಹೋದರೆ ಅದೇ ನೀರು ಕೆಂಪಾಗಿ ಕಂಡು ಭಯ ಹುಟ್ಟಿಸುವ ರೌದ್ರ ಕಣ್ಣ ಮುಂದೆ ಇನ್ನೂ ಇದೆ.
ಮನೆ ತಲುಪಲೇ ಬೇಕೆಂಬ ಬಯಕೆಯಿಂದ ಹದಿನೈದು ಕಿ. ಮಿ ದಾರಿಯನ್ನು ಕ್ರಮಿಸಿ ಮನೆ ಮುಟ್ಟುವ ಹೊತ್ತಲ್ಲಿ ಹೋದ ಜೀವ ಬಂದಂತಾದರೂ ಆ ಸಂಜೆ ನೆನೆದರೆ ಭಯ ಆವರಿಸಿಕೊಂಡು ಬಿಡುತ್ತದೆ. ಏಕೆಂದರೆ ಆ ಸಂಜೆ ಮನೆ ತಲುಪಿದ ಊರು ಕದ್ರಾ ಸಹ ಸುರಕ್ಷಿತವಾಗಿರಲಿಲ್ಲ. ಕದ್ರಾ ಜಲಾಶಯದ ನೀರು ಹೊರಬಿಟ್ಟ ಕಾರಣ ಕಾಳಿ ತೀರದ ಎಲ್ಲ ಮನೆಗಳು ನೀರಿನಲ್ಲಿ ಮುಳುಗುತ್ತಲಿದ್ದವು. ಇದರ ನಡುವೆ ಸಂಜೆ ಏಳರ ಹೊತ್ತಿಗೆ ಅಣಶಿ ಕಡೆಯಿಂದ ಬಂದ ಸುದ್ದಿಯನ್ನು ಅರಗಿಸಿಕೊಳ್ಳುವುದೇ ಕಷ್ಟವಾಗಿತ್ತು. ಯಾಕೆಂದರೆ ಅಣಶಿಯ ಘಟ್ಟ ಸುರಿವ ಮಳೆಗೆ ನಿಲ್ಲಲಾಗದೆ ಕುಸಿದು ರಸ್ತೆ ಸಂಪೂರ್ಣ ಮುಚ್ಚಿ ಹೋಗಿತ್ತು. “ದೊಡ್ಡ ದೊಡ್ಡ ಕಲ್ಲುಗಳು ಉರುಳಿ ರಸ್ತೆ ಸಂಚಾರ ನಿಲ್ಲಿಸಲಾಗಿದೆ ಪೋಲಿಸರೆಲ್ಲ ಹೋಗಿದ್ದಾರೆ” ಎಂದು ನೆರಮನೆಯ ಹಾಲು ಕೊಡುವ ಸಿದ್ದಪ್ಪಣ್ಣ ಹೇಳಿದಾಗ ಭಯವಾಗದೆ ಇರಲಿಲ್ಲ.
ಆಗಷ್ಟೆ ದಾಟಿ ಬಂದ ರಸ್ತೆಯ ಗುಡ್ಡ ಕುಸಿದಿದೆ ಎಂಬುದನ್ನು ಅರಗಿಸಿಕೊಳ್ಳುವುದು ಕಷ್ಟ. ಮಳೆ ನಿಂತರೆ ಸಾಕು ಎಂದುಕೊಂಡರು ಸುರಿವ ಮಳೆ ನಿಲ್ಲದು. ನೀರು ರಾಶಿ ರಾಶಿಯಾಗಿ ಸಾಗರೋಪಾದಿಯಲ್ಲಿ ಸುತ್ತ ಹರಿಯುವುದು. ದ್ವೀಪದಂತಾದ ಕದ್ರಾ ಕಾಲೋನಿಯಲ್ಲಿಂದ ಅಣಶಿ ಘಟ್ಟ ದಾಟಿ ಶಾಲೆಗೆ ತಲುಪುವುದು ಸಾಹಸದ ಕೆಲಸವೇ ಆಗಿತ್ತು.
ಪರೀಕ್ಷೆ ಮುಗಿಸಿದ ಈಗಾಗಲೆ ಅಣಶಿಯಲ್ಲಿದ್ದ ಮಕ್ಕಳನ್ನು ಅವರವರ ಮನೆಗೆ ಮುಟ್ಟಿಸುವ ಜವಾಬ್ದಾರಿಯುತ ಕೆಲಸ ಶಿಕ್ಷಕರದ್ದಾಗಿತ್ತು. ಮಾರನೆಯ ದಿನ ಮಕ್ಕಳು ಮನೆಗೆ ತಲುಪಿದರು ಎಂಬ ತೃಪ್ತಿಯ ನಗು ಅವರಲ್ಲಿತ್ತು. ಆದರೆ ಶಿಕ್ಷಕರು ಮಕ್ಕಳನ್ನು ಮನೆಗೆ ಮುಟ್ಟಿಸುವ ಹೊತ್ತಲ್ಲಿ ಕೆಲವು ಮಕ್ಕಳ ಮನೆಗಳಿಗೆ ನೀರು ನುಗ್ಗಿ, ಕಷ್ಟ ಪಟ್ಟು ದುಡಿದ ಆಹಾರ ಧಾನ್ಯಗಳು, ಬಟ್ಟೆ, ಸಾಮಾನುಗಳೆಲ್ಲ ನೀರಲ್ಲಿ ಕೊಚ್ಚಿಕೊಂಡು ಹೋಗಿದ್ದವು. ಮಳೆಗೆ ಮನೆಯ ಗೋಡೆಗಳು ಹಸಿಯಾಗಿ ಒಂದು ಬದಿಯಿಂದ ಉರುಳಿದ್ದನ್ನು ನೋಡುವುದೇ ಕಷ್ಟವಾಗಿತ್ತು. ಎರಡು ದಿನದ ನಂತರ ಮಕ್ಕಳನ್ನು ನೋಡಿದ ಪಾಲಕರ ಕಣ್ತುಂಬಿತು. “ಹಮ್ಗೆಲೆ ಪೋರಾ ಕಡೆ ತುಮ್ಗೆಲೆ ಲಕ್ಷ್ ಉರತಾ ಮಣೂನ್ ಹಮ್ಕ ಕಾಯ್ ಟೆನಶನ್ ಜಾಲ್ ನಾ” ಎಂದು ಮಧುಮಳೆಯ ಸಡಗೊ ವೇಳಿಪ ಹೇಳುವಾಗ ಶಿಕ್ಷಕರಿಗೆ ಧನ್ಯತೆಯ ಭಾವ.
ಜೋಯಿಡಾ ಸೇರಿದಂತೆ ಅಣಶಿಯ ಭಾಗದಲ್ಲಿ ಕೆಲಸ ಮಾಡುವ ಶಿಕ್ಷಕರಿಗೆ ಶಾಲೆಯ ಮಕ್ಕಳು ತಮ್ಮ ಸ್ವಂತ ಮಕ್ಕಳ ಹಾಗಿರುತ್ತಾರೆ. ಪ್ರಕೃತಿಯೆ ಶಿಕ್ಷಕರ ಹಾಗೂ ಮಕ್ಕಳ ಸಂಬಂಧವನ್ನು ಗಾಢಗೊಳಿಸಿ ಗಟ್ಟಿಗೊಳಿಸುತ್ತದೆ. ಅಣಶಿಯ ಸುತ್ತ ಮುತ್ತಲಿನ ಸುಮಾರು ಹದಿಮೂರು ಹಳ್ಳಿಗಳಿಂದ ಮಕ್ಕಳು ಶಾಲೆಗೆ ಬರುತ್ತಾರೆ. ಮಳೆಗಾಲದಲ್ಲಿ ಮಕ್ಕಳು ಮನೆ ಬಿಟ್ಟ ಹೊತ್ತು, ಶಾಲೆಗೆ ಬಂದ ವೇಳೆ, ಬರಲು ಕೊಂಚ ತಡವಾದರೆ ಇನ್ನೂ ಯಾಕೆ ಬಂದಿಲ್ಲ ಎಂದು ಪ್ರತಿ ಮಗುವಿನ ಬಗ್ಗೆ ನಿಗಾ ಇಡುವ, ಶಾಲೆ ಬಿಟ್ಟ ನಂತರ ಪ್ರೌಢಶಾಲೆ ಹಾಗೂ ಪ್ರಾಥಮಿಕ ಶಾಲೆಯ ಮಕ್ಕಳು ಒಟ್ಟಾಗಿ ಮನೆಗೆ ಮರಳಿದರೆ? ಎಂದು ಪರಿಶೀಲಿಸುವ ( ಕೆಲವು ಮಕ್ಕಳಿಗೆ ಆರೇಳು ಕಿ.ಮಿ ಕಾಡಿನ ಹಾದಿ ದಿನವೂ ನಡೆಯಬೇಕಾಗುತ್ತದೆ), ಆಯಾ ಊರಿನ ಮಕ್ಕಳ ಮಾಹಿತಿ ಜೊತೆಗೆ ಪಾಲಕರ ಸಂಪೂರ್ಣ ಮಾಹಿತಿ ಶಿಕ್ಷಕರಿಗೆ ಇರಲೇಬೇಕಾಗುತ್ತದೆ. ರೇಷನ್ ಪಡೆಯಲು, ಪಂಚಾಯತಿ ಕೆಲಸಕ್ಕೆ, ಸಾಮಾನು ಕೊಳ್ಳಲು, ಜೋಯಿಡಾಕ್ಕೆ ಹೋಗಲು.. ಹೀಗೆ ನಾನಾ ಕಾರಣದಿಂದ ಅಣಶಿಗೆ ಬರುವ ಒಬ್ಬೊಬ್ಬ ಪಾಲಕರು ಅಥವಾ ಆಯಾ ಊರಿನ ಮನುಷ್ಯನಿಗೆ ತನ್ನೂರಿನ ಜನರ ಮಕ್ಕಳ ಮಾಹಿತಿಯೂ ಇರುತ್ತದೆ.
ಫೋನ್ ಸಂಪರ್ಕ ಇಲ್ಲದ ಊರಲ್ಲಿ ಮನೆಯವರ ಬಗ್ಗೆ ಸುದ್ದಿ ಮುಟ್ಟಿಸುವುದು, ಸುದ್ದಿ ಹೇಳುವುದು ಇವರೆ. ಹೀಗಾಗಿ ಅಣಶಿಯ ಸುತ್ತಮುತ್ತಲ ಜನರ ಮಾಹಿತಿ ಶಿಕ್ಷಕರಿಗೆ ಅರಿವಿದ್ದರೆ ಮಾತ್ರ ಅವರ ಶಾಲೆಯ ಮಕ್ಕಳ ಬಗ್ಗೆ ನಿಗಾ ಇಡಲು ಸಾಧ್ಯ. ಇಷ್ಟೆಲ್ಲ ತಿಳಿದುಕೊಳ್ಳುವ ಹೊತ್ತಿಗೆ ಶಿಕ್ಷಕರು ಹಾಗೂ ಮಕ್ಕಳು ತಮಗೆ ಗೊತ್ತಿಲ್ಲದೆ ಚಂದದ ಬಾಂದವ್ಯದಲ್ಲಿ ಸಿಲುಕಿಕೊಳ್ಳುತ್ತಾರೆ. ಶಿಕ್ಷಕರು ಗುರುವಾಗುವುದರ ಜೊತೆಗೆ ತಂದೆತಾಯಿಯಾಗುವುದು ಇಂತಹ ಹೊತ್ತಲ್ಲಿ. ಹೀಗಾಗಿಯೆ ಶಾಲೆ ಮುಗಿದ ನಂತರ ಕರ್ತವ್ಯ ಮುಗಿಯಿತು ಎಂದು ಇಲ್ಲಿ ಶಿಕ್ಷಕರು ಭಾವಿಸುವ ಅವಕಾಶವೆ ಇಲ್ಲ. ಮಕ್ಕಳು ಮನೆ ತಲುಪುವವರೆಗೂ ಮನ ಶಾಂತವಾಗದು. ಮಳೆಗಾಲದ ಹೊತ್ತಲ್ಲಿ ಹಳ್ಳಗಳೆದ್ದು ಮಕ್ಕಳು ಮನೆ ತಲುಪಲು ಅಸಾಧ್ಯವಾದಾಗ ಬೇರೆಯವರ ಮನೆಯಲ್ಲಿ ಮಕ್ಕಳನ್ನು ಉಳಿಸುವ ಜವಾಬ್ದಾರಿಯನ್ನು ಶಿಕ್ಷಕರು ಹೊರಬೇಕಾಗುತ್ತದೆ. ಶಿಕ್ಷಕರ ಗುಣ ಸ್ವಭಾವ ಅರಿತರೆ ಬುಡಕಟ್ಟು ಜನ, ಶಿಕ್ಷಕರ ಎಲ್ಲ ಮಾತನ್ನು ಪಾಲಿಸುವಷ್ಟು ಪ್ರೀತಿಯನ್ನು ತೋರುತ್ತಾರೆ ಎಂಬುದು ಕೂಡ ನಿಜ.
ಅಣಶಿ ಘಟ್ಟದ ಮೇಲಿನ ಹಾದಿ ಮಳೆಗೆ ಕುಸಿದಿದೆ. ದಿನವೂ ಸಂಚರಿಸುವ ಶಾಲೆಯ ಹಾದಿ ಇಲ್ಲವಾಗಿದೆ. ಅಣಶಿಯಲ್ಲಿ ಶಿಕ್ಷಕರ ಮತ್ತೊಂದು ಬಿಡಾರ ಎದ್ದಿದೆ. ಮುಂದಿನ ಬಾರಿ ನಿಮ್ಮೊಂದಿಗೆ ಹಂಚಿಕೊಳ್ಳುವೆ. ನಿಮ್ಮೆಲ್ಲರ ಹಾರೈಕೆ ನಮ್ಮ ಮಕ್ಕಳ ಮೇಲಿರಲಿ.
ಅಕ್ಷತಾ ಕೃಷ್ಣಮೂರ್ತಿ ಉತ್ತರಕನ್ನಡ ಜಿಲ್ಲೆಯ ಅಂಕೋಲಾದವರು. ಜೊಯಿಡಾದ ದಟ್ಟ ಕಾನನದ ಅಣಶಿಯ ಶಾಲೆಯಲ್ಲಿ ಹದಿನಾಲ್ಕು ವರ್ಷದಿಂದ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ‘ದೀಪ ಹಚ್ಚಬೇಕೆಂದಿದ್ದೆʼ ಇವರ ಪ್ರಕಟಿತ ಕವನ ಸಂಕಲನ
ತುಂಬಾ ಚನ್ನಾಗಿ ಬರೆದಿದ್ದಾರೆ ಮನ ಮುಟ್ಟುವಂತೆ ವಿವರಿಸಿದ್ದಾರೆ. ಆ ದಿನದ ಮಳೆ ಇತಿಹಾಸ ದಲ್ಲಿಯೇ ಮೊದಲು ಬಾರಿ ಆಗಿದ್ದು ಅಂತಾ ಎಲ್ಲ ಆಮೇಲೆ ಗೊತ್ತಾಯ್ತು ಹಾಗೆ ಶಾಲಾ ಶಿಕ್ಷಕರ ಜವಾಬ್ದಾರಿ ಜೊತೆಗೆ ಕಾಡಿನಲ್ಲಿ ಮಕ್ಕಳು ಕಾಳಜಿ ಮಾಡೋದು ಕೂಡ ಅವರ ಪ್ರತಿದಿನ ದ ಕಾರ್ಯ ಆಗಿರುತ್ತೆ. ಲೇಖನ ಮನ ಮುಟ್ಟುವಂತೆ ಇದೆ
ಮಳೆ ಶಾಂತವಾಗಿ ಸುರಿದರೆ ಎಷ್ಟೊಂದು ಆನಂದ ಅದೇ ರೌದ್ರಾವತಾರ ತಾಳಿದರೆ ಎಷ್ಟೊಂದು ಕಷ್ಟ ಎನ್ನುವದು ಅದನ್ನು ಸ್ವತ ಅನುಭವಿಸಿದವರಿಗೆ ಗೊತ್ತು. ಕಾಡಿನ ಮಕ್ಕಳ ಬದುಕಿನ ಬಗೆಗಿನ ಬರಹ ಓಡಿಸಿಕೊಂಡು ಹೋಗುತ್ತದೆ.
ನಮಸ್ತೆ ಸರ್
ನಿಮ್ಮ ಓದಿಗೆ ಶರಣು. ಅಕ್ಕರೆ ಮಾತಿಗೆ ವಂದನೆ