ಹೊರಗೆ ನೋಡಿದರೆ ಚಂದಿರನ ಬೆಳಕಿತ್ತು! ನಮ್ಮೆದೆಗಳಲ್ಲಿ ಆವರಿಸಿದ್ದ ಗಾಢಾಂಧಕಾರವನ್ನು ಬಡಿದೋಡಿಸಲಾಗದ ಆ ಬೆಳಕು ಶೋಕ ಸೂಚನೆಗೆ ಹೊತ್ತಿಸಿದ್ದ ಸೊಡರಿನಂತೆಯೇ ನಮಗೆ ಗೋಚರಿಸಿತ್ತು! ಮಲಗ ಹೊರಟರೆ ಅವನದೇ ನೆನಪುಗಳು. ನಿದ್ದೆ ಬರುವಂತಿರಲಿಲ್ಲ… ಬಂದ ಅಲ್ಪ ಸ್ವಲ್ಪ ನಿದ್ದೆಯಲ್ಲೂ ಹೊರಗೆ ಅವನು ಬಂದಂತೆ, ನೋಡಿ ನಾವು ಅಚ್ಚರಿಪಟ್ಟಂತೆ, ಓಡಿ ಹೋಗಿ ಅಪ್ಪಿದಂತೆ ಕನಸುಗಳು.. ಎಚ್ಚರಗೊಂಡು ಕುಳಿತು, ಒಡನೆಯೇ ಬಾಗಿಲು ತೆರೆದು ಹೊರ ನಡೆದರೆ, “ಪ್ರಸನ್ನ, ಪ್ರಸನ್ನ,…” ಎಂದು ಕರೆದರೆ…. ಅಲ್ಲಿ ಅವನಿಲ್ಲ!
ಪೂರ್ಣೇಶ್‌ ಮತ್ತಾವರ ಬರೆಯುವ “ನವೋದಯವೆಂಬ ನೌಕೆಯಲ್ಲಿ…” ಸರಣಿಯ ಎಂಟನೆಯ ಬರಹ

‌ನವೋದಯದ ನೆನಪುಗಳೆಂದರೆ ಎಲ್ಲವೂ ತರಲೆ, ತಾಪತ್ರಯ, ತುಂಟತನಗಳದ್ದಷ್ಟೇ ಅಲ್ಲ.. ಅಲ್ಲಿ ಬೆಂಬಿಡದೆ ಕಾಡುವ ನೋವಿನ ಗಳಿಗೆಗಳೂ ಉಂಟು!

“ಪ್ರಸನ್ನ….” ಈ ಒಂದು ಹೆಸರು ಕೇಳಿದೊಡನೆ ಅರಿವಿಗೆ ಬಾರದಂತೆಯೇ ನಮ್ಮ ಗೆಳೆಯರೆಲ್ಲರ ಕಣ್ಣುಗಳು ಹನಿಗೂಡುತ್ತವೆ! ನಾವುಗಳು ಒಂದೆಡೆ ಸೇರಿದಾಗ ‘ಅರೇ ಅವನೂ ಇದ್ದಿದ್ದರೆ’… ಎಂಬ ಭಾವ ನಮ್ಮನ್ನಾವರಿಸುತ್ತದೆ!

ತನ್ನ ಮುಗ್ಧ ನಗು, ಮುದ್ದು ರೂಪದಿಂದಲೇ ಗಮನ ಸೆಳೆಯುವಂತಿದ್ದ ಪ್ರಸನ್ನ, ಅಮೃತವರ್ಷಿಣಿಯ ವಿನಾಯಕ ಜೋಷಿಯಂತೆ ಗುಂಡು ಗುಂಡಾಗಿದ್ದ. ಅವನಲ್ಲಿ ಎಲ್ಲರೊಂದಿಗೂ ಒಂದೇ ಸಮನಾದ ಅಕ್ಕರೆಯಿಂದ ಬೆರೆಯುವ ವಿಶಿಷ್ಟವಾದ ಗುಣವಿತ್ತು. ಓದಿನಲ್ಲಿ ಮುಂದಿದ್ದ ಪ್ರಸನ್ನ ಹನ್ನೊಂದನೆಯ ತರಗತಿಯ ವೇಳೆಗಾಗಲೇ ಐಐಟಿ ಸೇರುವ ಕನವರಿಕೆಯಲ್ಲಿದ್ದ. ಅದಕ್ಕಾಗಿ ಪೋಸ್ಟಲ್ ಕೋಚಿಂಗ್ ತೆಗೆದುಕೊಳ್ಳುತ್ತಾ ತಯಾರಿಯನ್ನೂ ನಡೆಸಿದ್ದ.

ಸ್ಟೇಜಿನ ಮೇಲೆ ನಿಂತನೆಂದರೆ ಉತ್ತಮವಾಗಿ ನಟಿಸುತ್ತಿದ್ದ. ಅವನು ಚಿಕ್ಕಂದಿನಲ್ಲಿ ಧರಿಸಿದ್ದ ಹನುಮಂತನ‌‌ ವೇಷವನ್ನು ಈಗಲೂ ನೆನಪಿಸಿಕೊಳ್ಳುವವರಿದ್ದಾರೆ. ಚೆಸ್, ಕೇರಂ, ಟೇಬಲ್ ಟೆನ್ನಿಸ್, ಕ್ರಿಕೆಟ್ ಹೀಗೆ ಆಟಗಳಲ್ಲಿಯೂ ಮುಂದಿದ್ದ. ಅವನು ಬ್ಯಾಟಿಂಗ್‌ಗೆ ‌ನಿಂತರೆ ಡೇವಿಡ್ ಬೂನ್ ಎಂದು ಹಾಡಿಕೊಳ್ಳುತ್ತಿದ್ದೆವು. ಅಲ್ಲದೇ ಅವನು ಶೇನ್‌ ವಾರ್ನನ ಶೈಲಿಯಲ್ಲಿ ಸ್ಪಿನ್ ಮಾಡುತ್ತಿದ್ದ. ರಿಕಿ ಪಾಂಟಿಂಗ್ ಆ ಕಾಲಕ್ಕೆ ಅವನ ಇಷ್ಟಾತಿಇಷ್ಟದ ಬ್ಯಾಟ್ಸ್‌ಮನ್..

ಅಂದು ಭಾನುವಾರ…

ಮಧ್ಯಾಹ್ನದ ನಿದ್ದೆಯಲ್ಲಿದ್ದ ನಾನು ಮಳೆಯ ಆರ್ಭಟಕ್ಕೆ ಎಚ್ಚರಗೊಂಡೆ. ಮಳೆಯೆಂದರೆ ಮುಗಿಲಿನ ಹರ್ಷಧಾರೆಯೆಂದು ಪರಿಭಾವಿಸುತ್ತಿದ್ದ ನನಗೆ ಮುಗಿಲೂ ಕಂಬನಿ ಇಡುತ್ತದೆಂಬುದು ಅರಿವಾಗಿದ್ದು ಕೆಲ ಗಂಟೆಗಳ ನಂತರದಲ್ಲಷ್ಟೇ…

ಅಂದು ಭಾನುವಾರವಾದ್ದರಿಂದ ಬೆಳಿಗ್ಗೆ ಮೂಡಣದಲ್ಲಿ ರವಿ ಮೂಡಿದ್ದರೂ ಬಹುತೇಕ ಗೆಳೆಯರೆಲ್ಲಾ ನಿದ್ದೆಯಲ್ಲಿದ್ದರು. ನಾನು ಮಾತ್ರ ಬೇಗನೇ ಎದ್ದು ಖಾಲಿ ಕೊಠಡಿಯೊಂದರಲ್ಲಿ ಕುಳಿತು ಓದುತ್ತಲಿದ್ದೆ. ಕೆಲ ಸಮಯದ ನಂತರ ಗೆಳೆಯ ಪ್ರಸನ್ನ ಬಂದು ಬೆಳಗ್ಗಿನ ತಿಂಡಿಯ ನಂತರ ನಾವಿಬ್ಬರೂ ಸದಾ ಆಡಲು ಇಷ್ಟ ಪಡುತ್ತಿದ್ದ ಟೇಬಲ್ ಟೆನ್ನಿಸ್ ಆಡೋಣವೆಂದ. ಪೀಟಿ ಸರ್ ರಿಂದ ಸ್ಪೋರ್ಟ್ಸ್ ರೂಮ್ ಕೀಯನ್ನು ತಾನೇ ಕೇಳಿ ತರುವುದಾಗಿಯೂ ತಿಳಿಸಿದ. ನಾನು ಸಂತಸದಿಂದಲೇ ಆಯಿತು ಎಂದಿದ್ದೆ.
ಆದರೆ..,

ಆ ಮಾತು ಮಾತಾಗಿಯೇ ಉಳಿಯಿತು!

ಅಂದು ತಿಂಡಿ ತಿನ್ನಲು ಮೆಸ್‌ಗೆ ಹೋದ ನಮಗೆ ಆಘಾತವೊಂದು ಕಾದಿತ್ತು. ಗೆಳೆಯ ಪ್ರಸನ್ನ ನೋಡನೋಡುತ್ತಲೇ ಪ್ರಜ್ಞೆ ತಪ್ಪಿದವರಂತೆ ಕೆಳಗೆ ಬಿದ್ದ. ಬಿದ್ದಾಗ ಪಿಟ್ಸ್ ಬಂದವರು ಒದ್ದಾಡುವ ಹಾಗೆ ಸಣ್ಣಗೆ ಒದ್ದಾಡಿದ. ನಾವೋ ತಡ ಮಾಡದೇ ಅವನನ್ನು ಮೆಡಿಕಲ್ ರೂಮಿಗೆ ಕರೆದುಕೊಂಡು ಹೋದೆವು. ಅಲ್ಲಿ ಪ್ರಥಮ ಚಿಕಿತ್ಸೆ ಕೊಟ್ಟರು. ನಂತರ ಹೆಚ್ಚಿನ ಚಿಕಿತ್ಸೆಗೆಂದು ಬಾಳೆಹೊನ್ನೂರಿಗೆ ಕರೆದುಕೊಂಡು ಹೋದರು.

ನಾವುಗಳೋ ಅವನಿಗೆ ಪಿಟ್ಸ್ ಬಂದಿರಬಹುದೆಂದು ಎಣಿಸಿ, “ಛೇ! ಹೀಗಾಯಿತಲ್ಲ..” ಎಂದು ಬೇಸರಿಸಿಕೊಳ್ಳುತ್ತಾ “ಅವನು ಬೇಗನೆ ಆರೋಗ್ಯವಾಗಲಿ..” ಎಂದು ಮನಸ್ಸಿನಲ್ಲೇ ದೇವರನ್ನು ಬೇಡುತ್ತಾ “ಇನ್ನೇನು ಆಸ್ಪತ್ರೆಯಿಂದ ಬೇಗನೆ ಬರುತ್ತಾನಲ್ಲ..” ಎಂಬ ಮನಸ್ಥಿತಿಯಲ್ಲಿ ನಮ್ಮ ನಮ್ಮ ಕಾರ್ಯಗಳಲ್ಲಿ ಮಗ್ನರಾದೆವು. ಯಾಕೋ ಅಂದು ಆಟವಾಡುವ ಮನಸ್ಸು ಯಾರಿಗೂ ಬರಲಿಲ್ಲ..

ಇನ್ನೇನು ಮಧ್ಯಾಹ್ನ ಕಳೆಯಿತು ಎನ್ನುತ್ತಿರುವಾಗಲೇ ಶಿಕ್ಷಕರು ಅವರವರಲ್ಲೇ ಒಂದಷ್ಟು ಗಾಬರಿಯಿಂದ ಮಾತನಾಡಿಕೊಳ್ಳುವುದನ್ನು ನಾವು ಗಮನಿಸಿದೆವು. ಕೇಳಿದ್ದಕ್ಕೆ “ಅವನಿಗೆ ಸೀರಿಯಸ್ ಅಂತೆ” ಎಂದರು. ನಮಗೋ ಆತಂಕ ತಡೆಯಲಾಗಲಿಲ್ಲ. ಒಡನೆಯೇ ಅವನನ್ನು ಕಾಣುವ ಸಲುವಾಗಿ ಅವನನ್ನು ಕರೆದುಕೊಂಡು ಹೋಗಿದ್ದ ಬಾಳೆಹೊನ್ನೂರಿನ ಆಸ್ಪತ್ರೆಯೆಡೆಗೆ ನಡೆದುಕೊಂಡೇ ಹೊರಟೆವು.

ದಾರಿಯುದ್ದಕ್ಕೂ ಎಲ್ಲರ ಮನಸ್ಸು “ಪ್ರಸನ್ನನಿಗೆ ಏನೂ ತೊಂದರೆಯಾಗಿರದಿರಲಿ..” ಎಂದೇ ಚಡಪಡಿಸುತಿತ್ತು.

ಈ ಚಡಪಡಿಕೆಯಲ್ಲೇ ಆಸ್ಪತ್ರೆ ತಲುಪಿದ ನಮಗೆ ಆಸ್ಪತ್ರೆಯ ಬಾಗಿಲ ಬಳಿ ಎದುರಾಗಿದ್ದು ಶಿಕ್ಷಕರ ಕಣ್ಣ ಹನಿ ತುಂಬಿದ್ದ ಮುಖಗಳು. ಆ ಮುಖಗಳಲ್ಲಿನ ಭಾವವೇ “ಪ್ರಸನ್ನ ಇನ್ನಿಲ್ಲ”ವೆಂಬ ಸತ್ಯವನ್ನು ಸಾರಿ ಸಾರಿ ಹೇಳುತ್ತಿದ್ದವು. ನಮ್ಮ ಅರಿವಿಲ್ಲದೆಯೇ ದುಗುಡದ ಕಟ್ಟೆಯೊಡೆದು ಕಣ್ಣೀರು ಪ್ರವಹಿಸಿ ಬಿಕ್ಕಳಿಸತೊಡಗಿದ್ದೆವು.

”ಬ್ರೈನ್ ಹೆಮರೇಜ್”ಪದವನ್ನು ಮೊದಲ ಬಾರಿಗೆ ಕೇಳಿದ್ದೆವು. ವಾರದ ಹಿಂದಷ್ಟೇ ಉದ್ಘಾಟನೆಗೊಂಡಿದ್ದ ಬಾಳೆಹೊನ್ನೂರಿನ ಸರ್ಕಾರಿ ಆಸ್ಪತ್ರೆ ತನ್ನ ಮೊದಲ ಬಲಿ ಪಡೆದಿತ್ತು.

ಅವನನ್ನಿಟ್ಟಿದ್ದ ರೂಮಿನ ಕಿಟಕಿಯ ಬಳಿ ನಿಂತು ಅವನನ್ನೊಮ್ಮೆ ನೋಡಿದೆವು.

ಅವನ ಮುದ್ದಿನ ಅಪ್ಪ ಬಿಗಿದಪ್ಪಿ ರೋಧಿಸುತ್ತಿದ್ದರೂ, ಗೆಳೆಯರು, ಶಿಕ್ಷಕರು ಬಿಕ್ಕಿ ಬಿಕ್ಕಿ ಅಳುತ್ತಿದ್ದರೂ ಏನು ಆಗಿಯೇ ಇಲ್ಲ ಎಂಬಂತೆ ತಣ್ಣಗೆ ಚಿರನಿದ್ರೆಯಲ್ಲಿದ್ದ. ನಾವುಗಳೋ ಒಬ್ಬರನ್ನೊಬ್ಬರು ನೋಡುತ್ತಾ ಉಕ್ಕಿ ಬರುತ್ತಿದ್ದ ದುಃಖವನ್ನು ತಡೆಯಲಾರದೆ ಒಂದೇ ಸಮನೇ ಅಳುತ್ತಾ ನಿಂತಿದ್ದೆವು.
ಹೀಗೆ ಹೊತ್ತು ಕಳೆದು ಕತ್ತಲಾಗುತ್ತಾ ಬಂತು.

ಭಾರವಾದ ಹೃದಯದೊಡನೆ ಗೆಳೆಯನನ್ನು ಬೀಳ್ಕೊಟ್ಟು ಭಾರವಾದ ಹೆಜ್ಜೆಗಳನ್ನಿಡುತ್ತಾ ಸಂಜೆಗತ್ತಲಲ್ಲಿಯೇ ಶಾಲೆಯೆಡೆಗೆ ನಡೆಯಲಾರಂಭಿಸಿದ್ದೆವು. ಬಸ್ಸಿನಲ್ಲಿ ಹೋಗಲೂ ನಮಗಾರಿಗೂ ಮನಸ್ಸಾಗಲಿಲ್ಲ. ಮೊದಲ ಬಾರಿಗೆ ಜಗತ್ತೇ ಬರಿದಾದಂತಾಗಿ ಜಗತ್ತಿನದೆಲ್ಲವೂ ನಿರರ್ಥಕವೆನಿಸತೊಡಗಿತ್ತು.
ನಮ್ಮ ನಡುವಿದ್ದದ್ದು ಮೌನ, ನೀರವ ಮೌನವಷ್ಟೇ! ಅದಾಗಲೇ ನವೋದಯದ ಕಿರಿಯರೆಲ್ಲಾ ನಮ್ಮ ಬರುವಿಕೆಯ ನಿರೀಕ್ಷೆಯಲ್ಲಿದ್ದರು. ನಾವುಗಳು ಹೋದೊಡನೆಯೇ ಪ್ರಸನ್ನನ ಬಗ್ಗೆ ವಿಚಾರಿಸಿದರು. ನಾವುಗಳೋ ಅವರಿಗೆ ಆಘಾತ ಮೂಡಿಸಬಹುದಾದ ಸತ್ಯವನ್ನು ತಿಳಿಯಗೊಡದೆ ಅವನು ಆರೋಗ್ಯದಿಂದಿರುವನೆಂದೇ ಹೇಳಿದೆವು. ಅಲ್ಲದೇ ಮತ್ತವರಿಗೆ ಅನುಮಾನ ಬರದಿರಲೆಂದು ಮೆಸ್ಸಿಗೆ ಹೋಗಿ ಊಟ ಮಾಡುವ ನಾಟಕವನ್ನೂ ಮುಗಿಸಿ ಬಂದೆವು..

ರಾತ್ರಿ ರೂಮಿನಲ್ಲಿ ಕುಳಿತು ಅವನ ವಸ್ತುಗಳನ್ನೊಮ್ಮೆ ನೋಡಿದೆವು. ಅದರಲ್ಲಿ ಅವನ ಡೈರಿಯೂ ಇತ್ತು.

ದಿನನಿತ್ಯ ಡೈರಿ ಬರೆಯುವ ಹವ್ಯಾಸವಿದ್ದ ಅವನ ಆ ಡೈರಿಯಲ್ಲಿನ ಪುಟಗಳೂ ಕಾಕತಾಳೀಯ ಎಂಬಂತೆ ಅವನು ಕಳೆದ ಅಂತಿಮ ರಾತ್ರಿಯಂದೇ ಮುಗಿದಿದ್ದವು!

ನನಗಂತು ಹಿಂದಿನ ದಿನದ ಘಟನೆಗಳು ಮತ್ತೆ ಮತ್ತೆ ನೆನಪಾಗಲಾರಂಭಿಸಿದ್ದವು.

ಅಂದು ಶನಿವಾರ ಮಧ್ಯಾಹ್ನ ‘ಸೈಲೆಂಟ್ ರೀಡಿಂಗ್’ಗೆಂದು ಡಾರ್ಮಿಟರಿಯಿಂದ ಕ್ಲಾಸ್ ರೂಮ್‌ನೆಡೆಗೆ ಹೊರಡುವ ಮುನ್ನ ತನ್ನ ಹುಟ್ಟು ಹಬ್ಬಕ್ಕೆಂದು ತಂದಿದ್ದ ಹೊಸ ಬಟ್ಟೆಗಳನ್ನೊಮ್ಮೆ ನನಗೆ ತೋರಿಸಿದ್ದ. ಅವನು ತನ್ನ ಹುಟ್ಟು ಹಬ್ಬವನ್ನು ಸಂಭ್ರಮದಿಂದ ಆಚರಿಸಲು ಸಿದ್ಧತೆ ನಡೆಸಿದ್ದ.
ದಾರಿಯಲ್ಲಿ ಹೋಗುವಾಗ “ನೋಡು, ನನ್ನಿಂದ ಶಾಲೆಗೆ ರಜೆ ಕೊಡುಸ್ತೀನಿ..” ಎಂದಿದ್ದ. ಹಾಗೆ ಹೇಳಲು ಕಾರಣ ಅವನ ಹುಟ್ಟಿದ ದಿನವಾದ ಏಪ್ರಿಲ್ ೧೪ರ ಸೋಮವಾರದಂದೇ ಅಂಬೇಡ್ಕರ್ ಜಯಂತಿ ಇದ್ದುದರಿಂದ ಶಾಲೆಗೆ ರಜೆ ಇತ್ತು. ಆದರೆ ವಿಧಿ ಅದನ್ನು ತಪ್ಪಾಗಿ ಅರ್ಥೈಸಿ ಬೇರೆಯದೇ ಕಾರಣಕ್ಕಾಗಿ ಅವನದೇ ಹೆಸರಿನಲ್ಲಿ ರಜೆ ಘೋಷಿಸುವಂತೆ ಮಾಡಿತ್ತು!

ಇದನ್ನೆಲ್ಲಾ ನೆನಪಿಸಿನಕೊಂಡು ಮಾತನಾಡುತ್ತಾ ಮಧ್ಯರಾತ್ರಿ ಸಮೀಪಿಸಿತ್ತು. ಆ ವೇಳೆಗೆ ಅವನ ಕಳೇಬರದೊಂದಿಗೆ ಅವನ ಊರು ಕಡೂರಿಗೆ ಹೋಗಿದ್ದ ಗೆಳೆಯರು ಬಂದರು.

ಹೊರಗೆ ನೋಡಿದರೆ ಚಂದಿರನ ಬೆಳಕಿತ್ತು! ನಮ್ಮೆದೆಗಳಲ್ಲಿ ಆವರಿಸಿದ್ದ ಗಾಢಾಂಧಕಾರವನ್ನು ಬಡಿದೋಡಿಸಲಾಗದ ಆ ಬೆಳಕು ಶೋಕ ಸೂಚನೆಗೆ ಹೊತ್ತಿಸಿದ್ದ ಸೊಡರಿನಂತೆಯೇ ನಮಗೆ ಗೋಚರಿಸಿತ್ತು!

ಮಲಗ ಹೊರಟರೆ ಅವನದೇ ನೆನಪುಗಳು. ನಿದ್ದೆ ಬರುವಂತಿರಲಿಲ್ಲ… ಬಂದ ಅಲ್ಪ ಸ್ವಲ್ಪ ನಿದ್ದೆಯಲ್ಲೂ ಹೊರಗೆ ಅವನು ಬಂದಂತೆ, ನೋಡಿ ನಾವು ಅಚ್ಚರಿಪಟ್ಟಂತೆ, ಓಡಿ ಹೋಗಿ ಅಪ್ಪಿದಂತೆ ಕನಸುಗಳು.. ಎಚ್ಚರಗೊಂಡು ಕುಳಿತು, ಒಡನೆಯೇ ಬಾಗಿಲು ತೆರೆದು ಹೊರ ನಡೆದರೆ, “ಪ್ರಸನ್ನ, ಪ್ರಸನ್ನ,…” ಎಂದು ಕರೆದರೆ…. ಅಲ್ಲಿ ಅವನಿಲ್ಲ!

“ಕನಸುಗಳೂ ಒಮ್ಮೊಮ್ಮೆ ನಿಜವಾಗುವಂತಿದ್ದರೆ….” ಎಂಬ ಭಾವ ಮತ್ತೆ ಮತ್ತೆ ಕಾಡುತ್ತಲೇ ಇತ್ತು.

ಮರುದಿನ ಬೆಳಿಗ್ಗೆ ಶಾಲಾ ಅಸೆಂಬ್ಲಿಯಲ್ಲಿ ನಿಂತಿದ್ದೆವು. ಪ್ರಾಂಶುಪಾಲರು ದುಃಖದಿಂದ ವಿಷಯ ತಿಳಿಸಿ ಶಾಲೆಗೆ ರಜೆ ಘೋಷಿಸಿದಾಗ ನಮ್ಮ ಕಿರಿಯರಿಗೆಲ್ಲಾ ಅಂದು ಬೆಳಿಗ್ಗೆ ಹಾಲಿನ ಬದಲು ಕಾಫಿ ನೀಡಿದ್ದಕ್ಕೆ ನೈಜ ಕಾರಣ ತಿಳಿದಿತ್ತು.

ಒಡನೆಯೇ ಸುತ್ತಲಿನ ಸದ್ದಲ್ಲೆವೂ ಅಡಗಿ ನೀರವ ಮೌನ ಆವರಿಸಿತ್ತು. ನಾವೋ ಒತ್ತರಿಸಿ ಬರುತ್ತಿದ್ದ ದುಃಖವನ್ನು ಅದುಮಿಡಲಾಗದೆ ಒಬ್ಬರನ್ನೊಬ್ಬರು ಹಿಡಿದು ಮತ್ತೆ ಮತ್ತೆ ಕಣ್ಣೀರಾಗಿದ್ದೆವು….

ಈ ಒಂದು ಘಟನೆ ನಡೆದು ಎರಡೂವರೆ ದಶಕಗಳೇ ಕಳೆದಿವೆ. ಆದರೆ ಆ ಆಪ್ತ ಗೆಳೆಯನ ಸಾವು, ಮಗನ ಕಳೇಬರದ ಮುಂದೆ ರೋಧಿಸುತ್ತಿದ್ದ ಆ ತಂದೆಯ ಬಿಂಬಗಳು ಇನ್ನೂ ನಮ್ಮೆಲ್ಲರ ಕಣ್ಣ ಮುಂದಿವೆ.

ಅಂತೆಯೇ, ನವೋದಯವೆಂಬ ವಿಶಾಲ ಕುಟುಂಬವೊಂದು ತನ್ನ ಸದಸ್ಯನೊಬ್ಬನ ಅಕಾಲ ಅಗಲಿಕೆಗೆ ಮಿಡಿದ ಪರಿ, ಶಿಕ್ಷಕರು ನಮಗೆ ನೀಡಿದ ಸಾಂತ್ವನ ಎಲ್ಲವೂ ಕಣ್ಣ ಮುಂದಿವೆ..

ಇಂದಿಗೂ “ಪ್ರಸನ್ನ” ಎಂಬ ಹೆಸರು ನಮ್ಮೆಲ್ಲರನ್ನು ಒಗ್ಗೂಡಿಸುವ ಭಾವನಾತ್ಮಕ ಬೆಸುಗೆಯಂತಿದೆ.

ಮಾನವ ಸಂಬಂಧಗಳ ಈ ಮಧುರಾನುಭೂತಿ ಕೆಲವೊಮ್ಮೆ ಅಚ್ಚರಿಯನುಕ್ಕಿಸುತ್ತದೆ!