ಸ್ಯಾನೆ ವಿಸೇಸವಾದ್ದು ಅಂದ್ರೆ ಆಟುದ್ ಸಾಮಾನಿನ ಬುಟ್ಟಿಗ್ಳು. ಕಾರು ಬೈಕು ಅಲ್ಲ ಬುಡಿ. ಆ ಬುಟ್ಟಿಗ್ಳಾಗೆ ಬುಡಿಗೆಗಳು ಇರ್ತಿದ್ವು. ಎಲ್ಡು-ಮೂರು ಬೆಟ್ಟಿನ ಗಾತ್ರದ ಮಣ್ಣಿನ ಮಡಿಕೆ ಕುಡಿಕೆಗಳು, ಒಲೆ, ಬಟ್ಟಲು, ಮುಚ್ಚಳ, ಸೌಟು, ಹಂಚು ಇಂತಾ ಅಡ್ಗೆ ಮನೆ ಸಾಮಾನು. ಹುಡುಗೀರೆಲ್ಲಾ ಅಲ್ಲೇ ಸೇರ್ಕಂಡು ಒಬ್ಬಳು ಬಟ್ಟಲು ತಕಂಡ್ರೆ, ಇನ್ನೊಬ್ಬಳು ಒಲೆ ತಕಣಾದು. ಐದು ಪೈಸೆ, ಹತ್ತು ಪೈಸೆ, ಜಾಸ್ತಿ ಅಂದ್ರೆ ನಾಕಾಣೆ ಇರ್ತಿದ್ವು. ನಮ್ಗೋ ತಲಾಕೈವತ್ತು ಪೈಸೇ ಸಿಕ್ತಿದ್ರೆ ಹೆಚ್ಚು.
ಸುಮಾ ಸತೀಶ್ “ರಂಗಿನ ರಾಟೆ” ಸರಣಿಯಲ್ಲಿ ಕದಿರಪ್ಪನ ಪರಿಷೆಯ ಕುರಿತ ಬರಹ
ನಮ್ಮ ಹೊಲದಾಗೆ ಕದಿರಪ್ಪನ ಗುಡಿ ಐತೆ. ಅಲ್ಲಿ ಸೇರೋ ಪರಿಷೆ ಕತೆ ಇದು. ಈ ಕದಿರಪ್ಪ ಅಂಬೋ ಹೆಸ್ರು ಎಂಗ್ ಬತ್ತೂಂತ ಯೋಳ್ತಿವ್ನಿ. ಆಂಧ್ರದಾಗಿರೋ ಕದಿರಿ ಅಂಬೋ ಊರ್ನಾಗಿರೋ ನರಸಿಂಹ ಸೋಮಿ ಬೋ ಹೆಸ್ರುವಾಸಿ. ಆವಪ್ಪಂಗೆ ನಮ್ಮೂರ್ನಾಗೆ ವಸಿ ಮಂದಿ ಅಂಗೇಯಾ ಸುತ್ತಮುತ್ತ ಹತ್ತೂರ್ನಾಗೆ ವಸಿ ಮಂದಿ ನಡ್ಕೊಂಬ್ತಾರೆ. ಅಂದ್ರೆ ಆ ದ್ಯಾವ್ರು ಒಕ್ಕಲು. ವರ್ಸೊರ್ಸಾನೂ ಕದಿರಿ ಹುಣ್ಣಿಮಿ ದಿನ ಅಲ್ಲಿ ಜಾತ್ರೆ ನಡೀತೈತಲ್ಲ, ಅಲ್ಲಿಗೆ ಇವ್ರೆಲ್ಲಾ ಹೋಯ್ತಿದ್ರು. ಸ್ಯಾನೆ ದೂರುದ್ ಊರು ಅಲ್ವುರಾ? ನಡ್ಕೋ ಓಯ್ಬೇಕು. ಓಗಿ ಬರಾ ವೊತ್ತಿಗೆ ಸುಸ್ತಾಯ್ತದೆ ಅಂತ ಅಂಗೇ ಯೋಸ್ನೆ ಮಾಡಿ ಅಲ್ಲಿಂದ ದ್ಯಾವ್ರನ್ನ ಇಲ್ಲಿಗೇ ತಕಾ ಬರಾಣಿ ಅಂಬ್ತ ಒಂದೆರಡಾಳು ನಿಸ್ಚೈಸುದ್ರಂತೆ. ಆಮ್ಯಾಕೆ ಅಲ್ಲಿಂದ್ಲೇಯಾ ಒಂದು ದೊಡ್ಡ ಕಲ್ಲು ಹೊತ್ಕೊಂಡು ಬಂದ್ರಂತೆ. ಅದೇ ನಮ್ ದ್ಯಾವ್ರು ಅಂಬ್ತ ಬೋ ಬಕ್ತಿಯಿಂದ ತಂದೌರೆ. ಆ ಕಲ್ಲು ಯಾಪಾಟಿ ಭಾರಾಂತೀರಿ. ಒಂದು ಇನ್ನೂರು ಕೆಜಿ ಮ್ಯಾಗೇ ಇದ್ದಾತೇನೋಪ್ಪ. ದೊಡ್ಡದಾಗಿ ಆಯತಾಕಾರದಲ್ಲೈತೆ. ಆಪಾಟಿ ಕಲ್ಲು ಬೆನ್ನು ಮ್ಯಾಗಿಟ್ಕೊಂಡು, ಆಸು ದೂರ್ದಿಂದ ನಡ್ಕೊಂಡು ಬರಾದು ಅಂದ್ರೆ ಭೀಮನಂಗೆ ರೆಟ್ಟೆ ಗಟ್ಟಿ ಇದ್ರೇನೇಯಾ. ಇದಂತೂ ನಂಗೆ ಬೋ ಸೋಜಿಗಾನೇಯಾ. ನಮ್ ತಾತುನ್ ಕಾಲ್ದಾಗ್ಳ ಕತೆ. ಆಟೋತ್ಗೇ ಗುಡಿ ಇತ್ತಂತೆ. ಕದಿರಿಯಿಂದ ತಂದಿರೋ ನರಸಿಂಹ ಸೋಮೀನಾಗೆ ನರಸಿಂಹಪ್ಪನ್ನ ಅತ್ಲಾಗೆ ಬಿಟ್ರು. ಊರ ಹೆಸ್ರು ಮಡಿಕ್ಕೊಂಡು ಅದ್ಕೇಯಾ ದ್ಯಾವ್ರುನ್ನೂ ಸೇರ್ಸಿ ಕದಿರಪ್ಪ ಅಂಬ್ತ ಕರುದ್ರು. ಮೊದ್ಲು ಆ ಕಲ್ನ ಕೂಣಿಸಿದ್ರು. ಅದ್ರು ಸುತ್ತೂರ ಮಣ್ಣಾಗೆ ಒಂದು ಚಿಕ್ಕ ಗುಡಿ ಕಟ್ಟೀರು. ಅದು ಒಂದಾಳು ನಡಾ ಬಗ್ಗಿಸಿ, ಒಳೀಕ್ ತೂರ್ಕೋಳೋಷ್ಟು ಚಿಕ್ಕದಿತ್ತಂತೆ. ಆ ಗ್ವಾಡೆ ನಾಲ್ಕು ಅಡಿ ದಪ್ಪ ಇತ್ತಂತೆ. ಬಂದ ಜನವೆಲ್ಲಾ ನಡಾ ಬಗ್ಗಿಸ್ಕೊಂಡು ಬಾಗ್ಲು ಮುಂದೆ ಬಿಸುಲ್ನಾಗೆ ನಿಂತಿರ್ಬೇಕಿತ್ತೋ. ಊರ್ ಹಿರೀರು ಅಂಗೇ ದ್ಯಾವ್ರು ಒಕ್ಕಲು ಸೇರಿ ಗುಡಿ ಕಟ್ಸಾಣಿ ಅಂದ್ಕೊಂಡು ಈಗಿರೋ ಗುಡಿ ಕಟ್ಸೌರೆ.
ದ್ಯಾವ್ರು ಕಲ್ನ ಅಂಗೇ ಮಡಗಿ, ಮಣ್ಣಿನ ಗ್ವಾಡಿ ಕೆಡವಿ, ಇಟ್ಟಿಗೆ ಗ್ವಾಡಿ ಮಾಡೌರೆ. ಕಟ್ಟಡ್ವ ಎಲ್ಡು ಭಾಗಾ ಮಾಡೌರೆ. ದ್ಯಾವ್ರು ಕ್ವಾಣಿ ವಸಿ ದೊಡ್ಡದಾಗೈತೆ. ಒಳ್ಗೆ ನರಸಿಂಹಪ್ಪನ ದೊಡ್ಡ ದೊಡ್ಡ ಪಟಗಳು ಅವೆ. ಮೆರವಣಿಗೆ ವಿಗ್ರಹ ಅದೆ. ಪಂಚಲೋಹ್ದಾಗೆ ದೊಡ್ಡ ಗರುಡ, ನರಸಿಂಹ ಸ್ವಾಮಿ ವಿಗ್ರಹ ಮಾಡ್ಸೌರೆ. ಮೆರವಣಿಗೆ ಮಾಡಾವಾಗ ಗರುಡನ ಬೆನ್ ಮ್ಯಾಗೆ ಹಲಗೆ ಕಟ್ಟಿ, ಅದ್ರ ಮ್ಯಾಗೆ ದ್ಯಾವ್ರುನ್ನ ಕೂಣುಸ್ತಾರೆ. ಪರಿಷೇನಾಗೆ ಮೆರವಣಿಗೆ ವಿಗ್ರಹಕ್ಕೆ ಚೆಂದಾಗಿ ಅಲಂಕಾರ ಮಾಡ್ಸಿ, ಗುಡೀ ಸುತ್ತಾ ಮೂರು ಸುತ್ತು ಹೊತ್ಕಂಡು ಬರ್ತಾರೆ.
ದ್ಯಾವ್ರ ಕ್ವಾಣಿ ಮುಂದ್ಲಾಗಡೆಗೆ ಒಂದು ಇಪ್ಪತ್ತು ಜನ ಕುಂತ್ಕಳಾ ಅಷ್ಟು ಜಾಗ್ವೈತೆ. ಅಲ್ಲಿ ಯಾರಾನಾ ಹರಕೆ ಮಾಡ್ಕಂಡು ರಾತ್ರಿ ನಿದ್ದೆ ಮಾಡೋಕೇಂತ ಬಂದೋರ್ಗೆ ಮನಿಕ್ಕಣಾಕೆ ಸಾಪೆಗ್ಳು ಅವೆ. ಅಡ್ಗೆ ಪಡ್ಗೆ ಮಾಡ್ಕಣಾಕೆ ಪಾತ್ರೆ ಪರಾತಾ ಮಡಗೌರೆ. ಈವಾಗಿನ್ ಕತೆ ಅಲ್ಲ ಬುಡಿ. ಈಗ ಅಲ್ಲೂ ಸಣ್ದೋ ಪಣ್ದೋ ಹೋಟ್ಲು ಗೀಟ್ಲು ಐತಲ್ಲ. ಯಾರೂ ಅಡ್ಗೆ ಮಾಡ್ಕಣಾಕಿಲ್ಲ. ಮೊದ್ಲಂಗೆ ಉಳ್ಕೊಂಬೋರೂ ಕಮ್ಮೀನೇಯಾ. ಈಗ ಅದ್ರ ಮುಂದುಕ್ಕೂ ಅಂಗಳದಾಗೆ ಶೀಟ್ ಆಕ್ಸೌರೆ. ಪರಿಷೆ ಟೇಮ್ನಾಗೆ ಬಿಸಿಲಿನ್ ತಾಪ ತಟ್ಟೋದು ಬ್ಯಾಡಾ ಅಂತ. ಅದುನ್ನ ನಮ್ಮಪ್ಪನ ಕಾಲ್ದಾಗೆ ಹಾಕ್ಸಿದ್ದು. ಶೀಟ್ನ ಅಪ್ಪ ಕೊಡ್ಸಿದ್ದು. ಉಳಿದಿದ್ದ ಕಂಬ, ಮ್ಯಾಗಿನ ಕಬ್ಬಿಣುದ್ ಕಂಬಿ ಎಲ್ಲ ಊರ್ ಜನಾ ಸೇರಿ ಕೊಟ್ಟೌರೆ. ಪಂಚಾಯ್ತಿನೋರು ಸ್ಯಾನೆ ಜನ ಬರ್ತಾರೇಂತ ಗುಡಿ ಹಿಂದ್ಲಾಗಡೆ ಒಂದು ಟ್ಯಾಂಕ್ ಕಟ್ಸಿ, ನಲ್ಲಿ ಹಾಕ್ಸಿ ಕೊಟ್ಟೌರೆ. ಶೀಟ್ ಹಾಕ್ಸಿರೂ ಜಾಗುದ್ ಮುಂದೆ ದೋಡ್ಡದಾಗಿರೋ ಅರಳೀಮರ ಐತೆ. ಅದ್ರ ನೆಳ್ಳೂ ಚೆಂದಾಗೈತೆ. ಅದರ ನೆಳ್ಳಾಗೇ ಒಂದಷ್ಟು ಅಗ್ಲ ಜಾಗದಾಗೆ ಸಿಮೆಂಟ್ ಹಾಕ್ಸಿ, ಬೊಮ್ಮಪ್ಪನ್ನ ಕೂಣ್ಸೌರೆ. ಗುಡಿ ನ್ಯಾರಕ್ಕೆ ಒಂದು ಗರುಡ ಗಂಬ, ಅದ್ರ ಮುಂದೆ ದ್ಯಾವ್ರ ಪಾದಗ್ಳು, ಅದ್ರ ಮುಂದೆ ಬೊಮ್ಮಪ್ಪ. ಗ ಅಕ್ಸರಕ್ಕೆ ತಲಕಟ್ಟು ತೆಗೆದ್ರೆ ಬರೋ ಆಕಾರ ಬೊಮ್ಮಪ್ಪಂದು.
ಇದು ನಮ್ ಹೊಲ್ದಾಗ್ಳ ಗುಡಿ. ಆದ್ರೂ ಸುತ ಸ್ಯಾನೆ ಜನ ನಡ್ಕೊಂಬೋದ್ರಿಂದ ಸರ್ಕಾರ ಆ ಹೊಲದಾಗೆ ಹದಿನೈದು ಕುಂಟೆ ಜಾಗಾವ ಬಿ ಕರಾಬು ಅಂತ ಮಾಡೈತೆ. ಹಳ್ಳಿಗ್ಳಾಗೆ ಕೆರೆ ಹಿಂದುಕ್ಕೆಲ್ಲ ತ್ವಾಟ ತುಡಿಕೆ ಮಾಡ್ಕ್ಯಂತಾರೆ. ಕಾಲ್ವೆ, ಓಡಾಡೋ ರಸ್ತೆ ಇವುಕ್ಕೆ ಜಾಗ್ವೇ ಬಿಡಾಕಿಲ್ಲ. ಅಂತಾ ಹೊಲ್ದಾಗೆ ಸರ್ಕಾರ್ದೋರು ಎ ಕರಾಬು ಅಂತ ಆ ಜಾಗ್ವ ಗುರುತುಸ್ತಾರೆ. ಗುಡಿಗುಳ್ಗೆ ಬಿ ಕರಾಬು ಅಂತ ಜಾಗ ಬಿಡ್ತಾರೆ. ಅದುನ್ನ ಯಾರೂ ನಂದೂ ಅಂಬ್ತ ಯೋಳಾಂಗಿಲ್ಲ. ನಮ್ ತ್ವಾಟ ಆರೆಕರೆ ಐದು ಕುಂಟೆ ಇತ್ತು. ಅದ್ರಾಗೆ ಹದಿನೈದು ಕುಂಟೆ ಕರಾಬು ಅಂಬ್ತ ಗುಡೀಗೆ ಸೇರಿತ್ತು. ಜಮೀನು ಕೈ ಬದಲಾದ್ರೂ ಸುತ ಗುಡೀ ಜಾಗ್ವಾ ಯಾರೂ ಉತ್ತಾರಾಕ್ಕಣಾಕೆ ಆಗಾಕಿಲ್ಲ. ಬಂದೋಬಸ್ತಾಗೈತೆ. ಅಲ್ಲಿ ಜಾತ್ರೆ ಪಾತ್ರೆ ಮಾಡ್ಕೋಬೋದು. ಗುಡೀಗೆ ಬರೋ ಜನ ಬಳ್ಸಿಕೋಬೋದು.
ಈ ಗುಡೀನಾಗೆ ಪೂಜೆ ಮಾಡೋರು ಉಪ್ಪಾರ್ರು. ಕೋಡಪ್ಪನ ವಂಸದೋರು ಆವಾಗಿಂದ್ಲೂವೆ ಮಾಡ್ಕ್ಯೊಂಡು ಬರ್ತಾ ಅವ್ರೆ. ಕೋಡಪ್ಪ ಈಗಿಲ್ಲ. ಅವಪ್ಪನ್ ಮಕ್ಕಳು ನಾಗರಾಜು, ತಿಪ್ಪಣ್ಣ, ಕದಿರಪ್ಪ ಅಂತ. ಅವ್ರು ಒಬೊಬ್ರೂ ನಾಕು ತಿಂಗಳಂಗೆ ಪೂಜೆ ಮಾಡ್ಕ್ಯಂಡು ಬರ್ತಾರೆ. ಒಂದು ವರ್ಸುದ್ ಗಂಟ ಇವ್ರೇಯಾ. ಆಮ್ಯಾಕೆ ಕೋಡಪ್ಪನ ತಮ್ಮನ ಮಕ್ಳು ಕದಿರಪ್ಪ, ನರಸಿಂಹಪ್ಪ, ರಾಮಚಂದ್ರ ಅಂಬ್ತ. ಅವ್ರು ಒಂದೊರ್ಸ ಮಾಡ್ತಾರೆ. ನರಸಿಂಹಪ್ಪನೂ ಈಗಿಲ್ಲ. ಈ ವರ್ಸುದ್ ಪರಿಷೇಗ್ಲಿಂದ ಮುಂದ್ಲೊರ್ಸದ ಪರಿಷೇಗಂಟ ಒಂದು ಮನೆಯವ್ರು. ಒಂತರಾ ಉಡುಪೀನಾಗಿನ್ ಪರ್ಯಾಯ ಇದ್ದಂಗೆ. ಪರಿಷೇನಾಗೆ ಬದ್ಲು ಮಾಡ್ಕ್ಯೊಂತಾರೆ.
ವರ್ಸೊರ್ಸ್ವೂ ಇಲ್ಲಿ ಕದ್ರಿ ಹುಣ್ಣಿಮೇನಾಗೆ ಪರಿಷೇ ಕಲೀತೈತೆ. ಆ ವೈಬೋಗ್ವ ಕಣ್ಣು ತುಂಬ್ಕಣಾಕೆ ನಾವೆಲ್ಲ ಏಸು ಕಾಯ್ತಿದ್ವಿ. ಇಡೀ ಊರೇ ಕುಣೀತಿತ್ತು. ಊರ ಹಬ್ಬದಂಗೆ ಇತ್ತು. ನಂಟರು ಇಷ್ಟರು ಎಲ್ಲಾರ ಮನ್ಯಾಗೂ ತುಂಬ್ಕಂತಿದ್ರು. ಈ ಪರಿಷೆ ವಿಸೇಸ ಅಂದ್ರೆ ಬೂತಪ್ಪಗಳ ಕುಣ್ತ. ಇಬ್ರು ಬೂತಪ್ಪಗಳು ಅವ್ರು ಜೊತೇಗೆ ಕರಿಯಣ್ಣ- ಕೆಂಚಣ್ಣ ಅಂಬ್ತ ಬೂತದ್ಯಾವ್ರು ಕುಣೀತಿದ್ರು. ಗನಗೋರವಾಗಿ ಯಾಸ ಹಾಕ್ಕೊಂಡು, ಮೈಮ್ಯಾಗೆಲ್ಲ ಪಟ್ಟೆ ಬಳ್ಕೊಂಡಿ, ರಾಕ್ಸಸರಂಗೆ ಮುಕವಾಡ ಹಾಕ್ಕೊಂಡು ಕುಣೀತಿದ್ರೆ ದಿಗಿಲಾಗ್ತಿತ್ತು. ಅವ್ರು ಮೈಮ್ಯಾಕೆ ದೇವ್ರು ಬರ್ತಿದ್ದೋ. ರಾಸಿ ರಾಸಿ ಬಾಳೆ ಹಣ್ಣು, ಪರಂಗಿ ಹಣ್ಣು ಎಲ್ಲಾ ಕೊಚ್ಚಿ ಹಾಕಿ, ತುಪ್ಪ, ಜೇನುತುಪ್ಪ ಹಾಕಿ ಕಿವುಚಿ, ಬೊಮ್ಮಪ್ಪನ ಮುಂದ್ಗಡೆ ಪಂಚೆ ಹಾಸಿ, ಸುರೀತಿದ್ರು. ದೊಡ್ಡ ಹೊಸಳ್ಳಿ ಅಂಬೋ ಊರ್ನಿಂದ ಹತ್ತು ಹನ್ನೆರಡು ಜನ ದಾಸಪ್ಪಗಳು ಬರ್ತಿದ್ರು. ಇವ್ರು ನಾಮ ಹಾಕ್ಕಂಡು, ಕಾವಿ ಪಂಚೆ ಹಾಕ್ಕೊಂಡು, ಒಂದು ಕೈಯಾಗೆ ಉರೀತಿರೋ ದೀಪ ಇರೋ ಗರುಡಗಂಬ ಇರ್ತಿತ್ತು. ಅದ್ರ ಮುಂದ್ಕೆ ದ್ಯಾವ್ರ ಪಟ ಕಟ್ಟಿರ್ತಿದ್ರು. ಇನ್ನೊಂದು ಕೈಯಾಗೆ ಜಾಗಟೆ, ಬಾಯಾಗೆ ಶಂಕ, ಒಂದು ಕಂಕುಳಾಗೆ ತಾಮ್ರದ್ ಬವನಾಸಿ, ಇನ್ನೊಂದು ಕಂಕುಳಾಗೆ ಜೋಳಿಗೆ ಇಕ್ಕೊಂಡು ಬರ್ತಿದ್ರು. ಸುತ್ತಾ ಮುತ್ತಾ ದೂಪ ಹಾಕೋರು. ಬೂತಪ್ಪಗಳ ಮೈಮ್ಯಾಗೆ ದ್ಯಾವ್ರು ಬಂದಾಗ, ನೆಟ್ಟಗೆ ನಿಂತ್ಕಳಾಕೆ ಆಗ್ದೆ ವಾಲಾಡತಿದ್ರು. ಅಂಗೇ ಗುಡೀಯ ಮೂರು ಸುತ್ತು ಸುತ್ತಿ ಬರ್ತಿದ್ರು. ಆಗ ಪಂಚೆ ಮ್ಯಾಗ್ಳ ರಸಾಯ್ನವ ಬಾಯಿಂದಾನೆ ನೆಕ್ಕೋರು. ನೆಲದ್ ಮ್ಯಾಗೆಲ್ಲ ಉರುಳಾಡಿ, ಕುಣೀತಿದ್ರೆ ಜನ ಕೈ ಮುಗೀತಿದ್ರು. ನಮ್ ಕಾಲ್ದಾಗೆ ಬೂತಪ್ಪಂಗೆ ಇಡ್ಕೊಡ್ತೀವಿ ಅಂಬ್ತ ಸಣ್ಣೈಕ್ಳು ಗಲಾಟಿ ಮಾಡೀರೆ ಎದುರ್ಸೋರು. ನಾವೂ ಅವ್ರ ಗೋರ ರೂಪ, ಕುಣ್ತ, ಆಟಾಟೋಪ ನೋಡಿ ಅಮ್ಮನ ಸೆರಗಿನಾಗೆ ಬಚ್ಚಿಕ್ಕೊಂತಿದ್ವಿ.
ದಾಸಪ್ಪಗಳು ಮೊದ್ಲೇ ಜೋಳಿಗೇನಾಗೆ ರಸಾಯ್ನ ತುಂಬ್ಕೊಂಡಿದ್ದು ಬೂತಪ್ಪಗಳು ಗರಗರನೆ ತಿರುಗ್ತಾ ಬರ್ತಿದ್ದಂಗೆ ಬಾಯಿಗೆ ತುರುಕೋರು. ಗೋವಿಂದ ಇಕ್ಕೋರು. ಜನ್ವೆಲ್ಲಾ ದನಿಗೂಡ್ಸೋರು. ಇದೇ ಟೇಮ್ನಾಗೆ ಮ್ಯಾಕೆ ಬಲಿ ಕೊಡ್ಬೇಕಿತ್ತು. ಅದುಕ್ಕೆ ‘ಗಾವುಪಿಲ್ಲ’ ಕೊಡೋದು ಅಂಬ್ತಿದ್ರು. ಕರಿಯಣ್ಣ ಕೆಂಚಣ್ಣರ ಕೈಯಾಗೆ ಕತ್ತಿ ಇರ್ತಿತ್ತು. ಆದ್ರೂವೆ ಅವ್ರು ಕತ್ತಿ ಉಪ್ಯೋಗುಸ್ದೆ ಮ್ಯಾಕೇ ಮರೀನ ಬಾಯಾಗೆ ಕಚಕಚನೆ ಕಚ್ಚಿ, ರಕುತ್ವ ಅಂಗೇ ಗಬಗಬಾಂತ ಕುಡಿಯೋರು. ಮೈ ಜಲ್ ಅಂತಿತ್ತು. ದೆವ್ವ ದೆಕ್ಲು ಎದ್ರಿ, ಎದ್ನೋ ಬಿದ್ನೋ ಅಂಬ್ತ ಓಡೋಯ್ಬೇಕು ಈ ಅವತಾರ ನೋಡಿ. ಇನ್ನಾ ನರ ಮನುಸ್ಯರು ಒಂದು ಲೆಕ್ವೇ ಪಕ್ವೇ? ಬೂತ ಪಿಸಾಚ್ಗೋಳ ಕತೇನೇ ಇಂಗಿರ್ಬೇಕಾರೆ ನಾವು ಪಿಳ್ಳೆ ಪಿಡುಕುಗ್ಳ ಕತೆ ಕ್ಯೋಳೋದೇ ಬ್ಯಾಡ. ಗುಬ್ಬಚ್ಚಿ ಮರಿಗಳಂಗೆ ನಡುಕ್ಕೊಂಡು ಮೂಲೆ ಸೇರ್ಕಂತಿದ್ವಿ. ಅಲ್ಲಾ ಕತ್ತಿ ಯಾತುಕ್ಕೆ ಮಡಿಕ್ಕೊಂಡಿದ್ರೋ ಕಾಣೆ. ಸುಮ್ಕೆ ಕುಣಿಯೋವಾಗ ಅದುನ್ನ ಗಾಳೀನಾಗೆ ಆಡುಸ್ತಿದ್ರು. ಒಂದ್ ಕಿತ ಇಂಗೇ ಕುಣ್ತ ಮಾಡಾವಾಗ, ಕೈಯಾಗ್ಳ ಕತ್ತಿ ಚುಚ್ಕೊಂಡು ಯಾರ್ಗೋ ಗಾಯ ಆಗಿತ್ತು. ಆಗ್ನಿಂದ ಕರಿಯಪ್ಪ ಕೆಂಚಣ್ಣಗಳು ಇಲ್ಲ. ಈಗ್ಲೂ ಬೂತಪ್ಪಗಳು ಮಾತ್ರ ಬತ್ತಾರೆ. ಮ್ಯಾಕೆ ಬಲಿ ಕೊಡಾದೂ ನಡೀತೈತೆ. ಆದ್ರೆ ಕತ್ತಿ ತಕೊಂಡು ಕಡೀತಾರೆ. ಇವತ್ತಿಗೂನೂವೆ ನಮ್ಕಡೆ ಯಾರಾನ ಗಬಗಬಾಂತ ಉಂಡರೆ, ಅದೇನ್ ಬೂತಪ್ಪ ತಿಂದಂಗೆ ತಿಂಬ್ತೀಯಾ ಅಂತ ಬೈಸ್ಕೋಬೇಕು.
ಬೊಮ್ಮಪ್ಪನ ಸುತ್ತ ಒಂದಷ್ಟು ಬಾಳೆಲೇಯ ಚಿಕ್ಕದಾಗಿ ಕತ್ತರ್ಸಿ ಹಾಸ್ತಿದ್ರು. ಅದ್ರು ಮ್ಯಾಗೆ ನೂರೊಂದು ಎಡೆ ಆಕ್ತಿದ್ರು. ಬರೇ ಅನ್ನ ಮಾಡಿ ದೊಡ್ಡ ದೊಡ್ಡ ಉಂಡೆ ಪಿಡಚೆ ಕಟ್ಟಿ ಇಕ್ತಿದ್ರು. ಜನ ಒಬೊಬ್ರು ಒನೊಂದು ಹರಕೆ ಹೊತ್ಕೊಂಡು, ಆ ಉಂಡೆ ಮ್ಯಾಗೆ ಹಾಲು, ತುಪ್ಪ, ಮೊಸರು ತಂದು ಸುರೀತಿದ್ರು. ಗುಡಿಯಾಗ್ಲ ದ್ಯಾವ್ರಿಗೆ ಪೂಜೆ ಆದ್ ಮ್ಯಾಕೆ, ಬೊಮ್ಮಪ್ಪುಂಗೆ ಪೂಜೆ ಮಾಡಿ, ಎಡೆಗುಳ್ಗೆಲ್ಲಾ ಅರ್ಸಣ, ಕುಂಕ್ಮ, ಹುವ್ವ ಇಕ್ತಾರೆ. ಅದೆಲ್ಲಾ ಆದ್ ಮ್ಯಾಕೆ ಪರ್ಸಾದ ಅಂಬ್ತ ಅದುನ್ನ ಕೊಡ್ತಾರೆ. ಅದುಕ್ಕೂ ಒಂದು ಪದ್ಧತಿ ಐತೆ. ಪೂಜಾರಪ್ಪ ಮೊದ್ಲು ಅಲ್ಲಿ ಕೂಡೋ ಏಳೆಂಟು ಊರುಗ್ಳ ಯಜಮಾನ್ರಿಗೆ ಒನೊಂದು ಎಡೇಯಾ ಎತ್ತಿ ಕೊಡ್ತಿದ್ದ. ದೊಡ್ಡ ಹೊಸಳ್ಳಿ, ಚಿಕ್ಕಮಾಲೂರು, ಗೊಂದಿಹಳ್ಳಿ, ಮಾವುಕೆರೆ, ಕೆಸ್ತೂರು, ಪುರವಾರ ಇನ್ನಾ ಯಾವ್ಯಾವ್ದೋ ಊರ್ನೋರು ಬತ್ತಿದ್ರು. ಯಾರಾನಾ ಬರ್ದಿದ್ರೆ, ನಮ್ಮೂರಿನ್ ಯಜಮಾನ್ರು ಒಂದು ದೊಡ್ಡ ಬೇಸನ್ ಮಡಿಕ್ಕೊಂಡು ಅದ್ರಾಗೆ ಎಲ್ಲಾ ಇಕ್ಕಿ ಆಮ್ಯಾಕೆ ವಾರಸ್ದಾರ್ರಿಗೆ ತಲುಪಿಸ್ಬೇಕಿತ್ತು. ತೋಟಿಗಾರರು, ತಳಾರರು, ತಮಟೆ ಬಾರ್ಸೋರು, ಅಗಸರು, ಕೊಂಬು ಊದೋರು ಇಂಗೇ ಊರಿನ್ ಎಲ್ಲಾರ್ಗೂ ಆ ಎಡೇನಾಗೆ ಪಾಲು ಇರ್ತಿತ್ತು. ಉಳಿದಿದ್ದನ್ನು ಬಂದ ಜನುಕ್ಕೆಲ್ಲಾ ಹಂಚೋರು.
ಮಾದಿಗರ ಹಟ್ಟೀಲಿ ಒಂದು ನರಸಿಂಹ ಸೋಮಿದು ಗುಡಿ ಐತೆ. ಅವ್ರು ಆ ದ್ಯಾವ್ರನ್ನು ಪರಿಷೇಗೆ ಹೊತ್ತುಕೊಂಡು ಬರ್ತಾರೆ. ತಂಬಿಟ್ಟಿನ ಆರತಿ ಮಾಡ್ಕೊಂಡು ಅದಿಕ್ಕೆ ಕಣಗಲೆ, ಚೆಂಡು ಹುವ್ವಗಳನ್ನು ಏರಿಸಿದ ಕಡ್ಡಿ ಚುಚ್ಚಿ ಸೊಗಸು ಮಾಡ್ಕೊಂಡು ಬರ್ತಾರೆ. ಅಂಗೇ ಬ್ಯಾರೆ ಜನವೂ ಆರತಿ ತಕ್ಕೊಂಡು ಬರ್ತಾರೆ. ಊರಿನ್ ಹೆಣ್ಣುಮಕ್ಕಳೆಲ್ಲ ಮನ್ಯಾಗೆ ಸೀ ಮಾಡಿ, ತಂಬಿಟ್ಟು ಮಾಡ್ತಾರೆ. ಮಾದಿಗ್ರು ಈ ಕದಿರಪ್ಪುಂಗೇ ಬೋ ನಡ್ಕೊಂಬ್ತಾರೆ. ಅವ್ರು ಯಾರಾನ ಹರಕೆ ಮಾಡ್ಕ್ಯಂಡಾಗ ಕದಿರಪ್ಪನ್ ಮೆರವಣಿಗೆ ವಿಗ್ರಹವ ಇಲ್ಲಿಂದ ಹೊತ್ಕೊಂಡು ಅವ್ರ ಹಟ್ಯಾಗಿರೋ ನರಸಿಂಹಪ್ಪನ ಗುಡೀಮಟ ಮೆರೋಣಿಗೆ ತಕೋ ಓಯ್ತಾರೆ. ಅಲ್ಲಿ ಪೂಜೆ ಮಾಡಿ ವಾಪ್ಸು ಕರ್ಕೊಂಬರ್ತಾರೆ. ಅವುರ್ಗೆ ಈ ದ್ಯಾವ್ರು ಅಂದ್ರೆ ಸ್ಯಾನೆ ಬಕ್ತಿ.
ಪರಿಷೇ ದಿನ ಗುಡೀ ಮುಂದುಕ್ಕೆ ಸಮಾರಾದ್ನೆ ಆಗ್ತೈತೆ. ಅನ್ನ, ಸಾರು, ಪಾಯಸ, ಚಿತ್ರಾನ್ನ ಮಾಡುಸ್ತಾರೆ. ಜನ ಹರಕೆ ಹೊತ್ತುಕೊಂಡು ಕದಿರಪ್ಪಂಗೆ ಕಾಳು ಕಡಿ ದವಸ ದಾನ್ಯ ಕೊಡ್ತಾರೆ. ಅದೆಲ್ಲ ಸೇರ್ಸಿ ಎಲ್ರೂ ಕೂಡೀ ಅಡಿಗೆ ಮಾಡಿಸ್ತಾರೆ. ನಮ್ಮಪ್ಪನೂ ಎಡೆಗೆ ಬೇಕಾಗೋ ಅಕ್ಕಿ ಹಂಗೇ ಪಾಯಸಕ್ಕೆ ಬೆಲ್ಲ, ಬೇಳೆ ಎಲ್ಲ ಕೊಡಿಸ್ತಾರೆ. ಈವಾಗ್ಲೂ ಹತತ್ರ ಏಳುನೂರ್ ಎಂಟುನೂರ್ ಜನುದ್ ಮ್ಯಾಗೆ ಸೇರ್ತಾರೆ. ಆಸೂ ಜನುಕ್ಕೆ ಈವಾಗ ಶಾಮಿಯಾನ ಹಾಕ್ಸಿ ಕುಂತ್ಕಣಾಕೆ ನೆಳ್ಳು ಮಾಡ್ತಾರೆ.
ಇದಿಷ್ಟೂ ಒಂದು ಕತಿ ಆದ್ರೆ ನಮಗೆಲ್ಲಾ ಖುಸಿ ಕೊಡೊ ಇನ್ನೊಂದು ಐನಾತಿ ಕತೆ ಅಲ್ಲಿಗೆ ಬರೋ ಆಟುದ್ ಸಾಮಾನು, ತಿಂಡಿಗಳ್ದು. ಬೆಳಗ್ಗೆಲ್ಲಾ ದ್ಯಾವ್ರ ಪೂಜೆ, ಬೂತಪ್ಪಗಳ ಕುಣ್ತ, ದಾಸಪ್ಪಗಳ ಆಚಾರ ನೋಡಿ ಬಯ ಭಕ್ತಿ ಅಂಬೋದು ಉಕ್ಕಿ ಬರ್ತಿತ್ತು. ಬೋ ಖುಸೀಲಿಂದ್ಲೆ ಕಣ್ ತುಂಬ್ಕೊಂತಿದ್ವಿ. ಅದಾದ್ ಮ್ಯಾಗ್ಲಿಂದ ಗುಡೀ ಮಗ್ಗುಲ ಜಾಗದಾಗಿರೋ ಜಾತ್ರೆ ಸಾಮಾನ್ ತಾವ ಜನ ಗುಂಪು ಕೂಡ್ಕೊಂತಿತ್ತು. ಬಳೆಗಾರ್ರು ತರತರದ್ದು ಗಾಜಿನಬಳೆ, ಮಕ್ಕಳಿಗೆ ಪ್ಲಾಸ್ಟಿಕ್‌ಬಳೆ ತರ್ತಿದ್ರು. ಮನೆ ಹೆಣ್ಣುಮಕ್ಕಳಿಗೆ ಬಳೆ ತೊಡಿಸುಸ್ತಿದ್ರು. ಅಲ್ಲಿ ಬಂದೋರ್ಗೆ ಒಂದಿಬ್ರುಗಾನಾ ತೊಡಿಸ್ತಿದ್ರು. ಮಲ್ಲಿಗೆ, ಕಾಕಡ, ಕನಕಾಂಬರ, ಸ್ಯಾವಂತಿಗೆ ಹುವ್ವ ತಕೊಂಡು ಅಲ್ಲಿರೋ ಹೆಣ್ಣೈಕ್ಳಿಗೆಲ್ಲಾ ಒಂದು ಬೆಳ್ಳಷ್ಟು ಕತ್ತರಿಸಿ ಹಂಚ್ತಿದ್ರು. ರಂಗಿನ ರಾಟೆ ಬರ್ತಿತ್ತು. ಅದ್ರಾಗೆ ನಾಕೋ ಆರೋ ತೊಟ್ಟಿಲು ಇರ್ತಿದ್ವು. ನಾವೂ ಜೊತೆಗಾತೀರು ಅದ್ರಾಗೆ ಕುಂತ್ಕೊಂಡು ಸುಂಸುಮ್ಕೆ ಕಿರ್ಚೋದು. ಬಾಂಬೆ ಮಿಠಾಯಿ ಮಾರೋನ್ ತಾವ ಕೈಗೆ ಗುಲಾಬಿ ಬಣ್ಣುದ್ ಮಿಠಾಯ್ನಾಗೆ ಗಡಿಯಾರ್ವೋ, ಇಮಾನ್ವೋ, ಸೈಕಲ್ಲೋ ಮಾಡ್ಸಿ ಹಾಕ್ಕೊಂಡು ನೆಕ್ಕೋಂತಾ ಮುಂದ್ಕೆ ಹೋಗೋದು. ಬಣ್ಣದ ಸಕ್ಕರೆ ಕಡ್ಡಿ, ಅಜ್ಜಿ ಕೂದ್ಲು, ಹಾಲೈಸು, ಟೂಬೈಸು, ಕೆಂಪೈಸು, ಬೆಂಡು ಬತ್ತಾಸು, ಕಳ್ಳೆಕಾಯಿ, ಕಳ್ಳೆಪುರಿ, ಕಾರಸೇವೆ ತಕೊಂಡು ತಿಂಬೋದು. ನಮ್ತಾವ ಜಾಸ್ತಿ ಕಾಸಿರ್ತಿರಲಿಲ್ಲ. ಒಬೊಬ್ರು ಒಂದೊಂದು ತಕೊಂಡು ಹಂಚಿಕೊಂಡು ತಿಂತಿದ್ವಿ. ಎಂಜ್ಲು ಪಂಜ್ಲು ಗೊತ್ತಿರ್ಲಿಲ್ಲ. ಕಾಗೆ ಎಂಜ್ಲೂ ನಡೀತಿತ್ತು. ಇದ್ದಿದ್ರಾಗೆ ಹೊಸ ಲಂಗ ಇಕ್ಕೊಂಡು, ತಲೇಗೆ ದಪ್ಪನಾಗಿ ಎಣ್ಣಿ ಒತ್ತಿ ಬಾಚ್ಕೊಂಡು, ಬಿಗ್ಯಾಗಿ ಎಲ್ಡು ಜಡೆ ಬಿಗಿದು, ಬಣ್ಣಬಣ್ಣದ ಟೇಪು ಸುತ್ಕೊಂಡು ಮನೇಗ್ಳಿಂದ ನಮ್ ಮೆರವಣಿಗೆ ಹೊಂಡುತಿತ್ತು. ಎಲ್ಡೂ ಜಡೇ ಕೂಡಿಸೋ ಅಂಗೆ ಸೇತುವೆ ತರ ನೀಲಿ ಬಣ್ಣುದ್ ಪಟುಕದ ಹುವ್ವಾನೋ, ಸ್ಯಾಮಂತಿ ಹುವ್ವಾನೋ ಉಯ್ಯಾಲೆ ಆಡ್ತಿತ್ತು. ಒಂದೆಲ್ಡು ಹುವ್ವದ ಪಿನ್ನೂವೇ ತಲ್ಯಾಗೆ ಚುಚ್ಕೊಂಡಿರ್ತಿದ್ವಿ. ಅಲ್ಲಿ ಯಾರಾನಾ ಹುವ್ವ ಕೊಟ್ರೆ ಸೇತುವೆ ಮ್ಯಾಗೆ ಆಕಡೀಕೆ ಈಕಡೀಕ್ಕೆ ಸಿಗ್ಸಿಕೊಣೋದು. ಕಾಮನಬಿಲ್ಲಿನ ಬಣ್ಣಗೋಳು ತಲೆಮ್ಯಾಗೆ ಇರ್ತಿತ್ತು.
ಇದೆಲ್ಲಾ ಯಾವ ಜಾತ್ರೇನಾಗಾರೂ ಇರ್ತೈತೆ ಕಣೇಳಿ. ಸ್ಯಾನೆ ವಿಸೇಸವಾದ್ದು ಅಂದ್ರೆ ಆಟುದ್ ಸಾಮಾನಿನ ಬುಟ್ಟಿಗ್ಳು. ಕಾರು ಬೈಕು ಅಲ್ಲ ಬುಡಿ. ಆ ಬುಟ್ಟಿಗ್ಳಾಗೆ ಬುಡಿಗೆಗಳು ಇರ್ತಿದ್ವು. ಎಲ್ಡು-ಮೂರು ಬೆಟ್ಟಿನ ಗಾತ್ರದ ಮಣ್ಣಿನ ಮಡಿಕೆ ಕುಡಿಕೆಗಳು, ಒಲೆ, ಬಟ್ಟಲು, ಮುಚ್ಚಳ, ಸೌಟು, ಹಂಚು ಇಂತಾ ಅಡ್ಗೆ ಮನೆ ಸಾಮಾನು. ಹುಡುಗೀರೆಲ್ಲಾ ಅಲ್ಲೇ ಸೇರ್ಕಂಡು ಒಬ್ಬಳು ಬಟ್ಟಲು ತಕಂಡ್ರೆ, ಇನ್ನೊಬ್ಬಳು ಒಲೆ ತಕಣಾದು. ಐದು ಪೈಸೆ, ಹತ್ತು ಪೈಸೆ, ಜಾಸ್ತಿ ಅಂದ್ರೆ ನಾಕಾಣೆ ಇರ್ತಿದ್ವು. ನಮ್ಗೋ ತಲಾಕೈವತ್ತು ಪೈಸೇ ಸಿಕ್ತಿದ್ರೆ ಹೆಚ್ಚು. ಅಪ್ಪಿತಪ್ಪಿ ಒಂದು ರೂಪಾಯೇನಾರಾ ಸಿಕ್ಕಿತೋ ಗನವಾಗಿರ್ತಿತ್ತು. ಅದ್ರಾಗೇ ನಮ್ ಕಾರ್ ಬಾರೇಲ್ಲಾ ನಡೀಬೇಕು. ಎಲ್ಲಾ ಕುಂಬಾರ್ರು ಈ ಸಾಮಾನು ಮಾಡ್ತಿರ್ಲಿಲ್ಲ. ಇದುಕ್ಕೆ ಸ್ಯಾನೆ ಟೇಮ್ ಬೇಕಿತ್ತು. ಸಮಾದಾನವಾಗಿ ಮಾಡ್ಬೇಕಿತ್ತು. ವಯಸ್ಸಾದೋರು ಮಾಡ್ಕೊಂಡು ಬರ್ತಿದ್ರು. ನಾವು ಅದ್ರಾಗೆ ಮನ್ಯಾಗಿಂದ ಅಡ್ಗೆ ಸಾಮಾನ್ ತಂದು ಇಕ್ಕೊಂಡು ಆಡ್ತಿದ್ವಿ. ಕಾಡಿ ಬೇಡಿ ಕಳ್ಳೆಪೊಪ್ಪು, ಕಳ್ಳೆಬೀಜ, ಹುಣಿಸೆಹಣ್ಣು, ಬೆಲ್ಲ, ಉಪ್ಪು ತಕಾಬಂದು ಆಡೋದು. ಕರೇ ಮಡಕೆ ಸಾಮಾನು ಸೊಲ್ಪ ಕಮ್ಮಿ ರೈಟು. ಅದು ತುಸ ವಡ್ಡೊಡ್ಡಾಗಿರ್ತಿತ್ತು. ಕೆಂಪುದಾದ್ರೆ ವಸಿ ರೈಟು ಜಾಸ್ತಿ. ಅವು ನಾಜೂಕಾಗಿರ್ತಿದ್ವು. ಮೊದ್ಲಿಂದ್ಲೂ ಎಲ್ಲುರ್ಗೂ ಕೆಂಪು ಅಂದ್ರೆ ಕಣ್ಣಿಗೆ ಖುಸೀನೆ ಅಲ್ವೇ. ನಮ್ಗೋ ಅವು ಎಟುಕ್ತಿರ್ಲಿಲ್ಲ. ಒಂದೋ ಎಲ್ಡೋ ತಕಂಡು ಗುಡ್ಡೆ ಆಕ್ಕಂತಿದ್ವಿ. ಎಷ್ಟು ಉಶಾರಾಗಿ ಆಡ್ತಿದ್ವಿ ಅಂದ್ರೆ, ಮೂರ್ ನಾಕು ವರ್ಸದ ಗಂಟ ಬುಡಿಗೆಗಳ್ನ ಜ್ವಾಪಾನ್ವಾಗಿ ಮಡಕ್ಕೊಂತಿದ್ವಿ. ವರ್ಸೊರ್ಸುದ್ದೂ ಸೇರ್ಕಂಡು ಅಂಗೇ ಸ್ಯಾನೆ ಪಾತ್ರೆ ಜೋಡುಸ್ಕೊಂತಿದ್ವು. ಐದಾರು ಜನದ್ ತಾವ ಕೂಡಿ ಏಸೊಂದು ಇರ್ತಿದ್ವಲ್ಲ.
ಈಗಂತೂ ತೀರಾ ಹಣ್ಣು ಹಣ್ಣು ಮುದುಕ್ರು ಒಂದಿಬ್ಬರು ಇಂತಾ ಬುಡಿಗೆಗುಳ್ನ ತಕಂಡು ಬರ್ತಾರೆ. ಇನ್ನೊಂದೆಲ್ಡು ವರ್ಸಕ್ಕೆ ಅವ್ರೂ ಮಾಡಾಕಿಲ್ಲ. ಈಗ್ನೋರು ಯಾರೂ ಕಲ್ತೂ ಇಲ್ಲ. ಅಷ್ಟು ಸಮಾದಾನ್ವೂ ಇಲ್ಲ. ಅಲ್ಲಿಗೇ ನಮ್ಮ ಬಾಲ್ಯದ ಬುಡಿಗೆಗಳು ಕತ್ಯಾಗೆ ಮಾತ್ರವೇ ಉಳ್ಕೊಂತವೆ. ಈಗ್ಲೂ ಮನಸಾಗೆ ಆ ಬುಡಿಗೆಗಳು ಬುಡುಬುಡಿಕೆ ನುಡಿಸ್ತಾನೆ ಅವ್ವೆ. ಕದಿರಿ ಹುಣ್ಣಿಮಿ ಪರಿಷೇ ಕಣ್ಮುಂದೆ ಬಂದ್ ತಕ್ಸಣ ನೆಪ್ಪಾಗೋದು ಬೂತಪ್ಪಗೋಳು ಅಂಗೇ ಬುಡಿಗೆಗೋಳು.
ಸುಮಾ ಸತೀಶ್ ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಚಿಕ್ಕಮಾಲೂರು ಗ್ರಾಮದವರು. ಬರವಣಿಗೆಯ ಜೊತೆಗೆ ಸಾಹಿತ್ಯ ಸಂಘಟನೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಕಿರುನಾಟಕಗಳ ರಚನೆ, ನಿರ್ದೇಶನ ಮತ್ತು ಅಭಿನಯ ಜೊತೆಗೆ ಏಕಪಾತ್ರಾಭಿನಯ ಇವರ ಹವ್ಯಾಸ. ಮಿರ್ಚಿ ಮಸಾಲೆ ಮತ್ತು ಇತರೆ ನಗೆ ನಾಟಕಗಳು , ಅವನಿ ( ಕವನ ಸಂಕಲನ), ವಚನ ಸಿರಿ (ಆಧುನಿಕ ವಚನಗಳು), ಹಾದಿಯಲ್ಲಿನ ಮುಳ್ಳುಗಳು ( ವೈಚಾರಿಕ ಲೇಖನ ಸಂಕಲನ), ಬಳಗ ಬಳ್ಳಿಯ ಸುತ್ತ (ಸಂ. ಕೃತಿ), ಶೂನ್ಯದಿಂದ ಸಿಂಹಾಸನದವರೆಗೆ ( ವ್ಯಕ್ತಿ ಚಿತ್ರಣ), ಭಾವಯಾನ ( ಸಂ. ಕೃತಿ), ಮನನ – ಮಂಥನ ( ವಿಮರ್ಶಾ ಬರೆಹಗಳು), ವಿಹಾರ (ಆಧುನಿಕ ವಚನಗಳು), ಕರ್ನಾಟಕದ ಅನನ್ಯ ಸಾಧಕಿಯರು ಭಾಗ 6 (ಡಾ. ಎಚ್. ಗಿರಿಜಮ್ಮನವರ ಬದುಕು – ಬರೆಹ) ಇವರ ಪ್ರಕಟಿತ ಕೃತಿಗಳು.