ಅವರು ರಮಣೀಯ ದೃಶ್ಯಗಳನ್ನು ಕಲ್ಪಿಸಿಕೊಳ್ಳುವುದಿಲ್ಲ; ಬದಲಿಗೆ ದಿನನಿತ್ಯದ ವಿದ್ಯಮಾನಗಳ ಜತೆಗೆ ನಗರ ಮತ್ತು ಅದರ ನಿವಾಸಿಗಳ ಜತೆ ಜರಗಿದ ಮಾತುಕತೆಗಳಲ್ಲಿ ಅವರು ಪಡೆದ ಸಂತೋಷಕ್ಕೆ ಒತ್ತು ನೀಡುತ್ತಾರೆ. ಈ ಕವಿತೆಗಳ ವಿಶಿಷ್ಟ ಛಾಪು ಕವಿಯ ಮೌಖಿಕ ವಾಕ್ಚಾತುರ್ಯವೂ ಆಗಿದೆ; ಲಯ ಮತ್ತು ಮನವಿ ಜತೆಯಾಗಿರುವ ಕವಿತೆಗಳಿವು, ಮತ್ತು ಈ ಕವನಗಳು ವೋಲ್ಡ್‌ ಅವರಿಗೆ ವಿಶಾಲವಾದ ಮತ್ತು ನಿಷ್ಠಾವಂತ ಓದುಗರ ಸಮೂಹವನ್ನು ತಂದುಕೊಟ್ಟಿತ್ತು.
ಎಸ್. ಜಯಶ್ರೀನಿವಾಸ ರಾವ್ ಬರೆಯುವ “ಲೋಕ ಕಾವ್ಯ ವಿಹಾರ” ನೋರ್ವೇ (Norway) ದೇಶದ ಕವಿ ಯಾನ್ ಎರಿಕ್ ವೊಲ್ಡ್-ರ (Jan Erik Vold) ಕಾವ್ಯದ ಕುರಿತ ಬರಹ ಹಾಗೂ ಅವರ ಕೆಲವು ಅನುವಾದಿತ ಕವಿತೆಗಳು ನಿಮ್ಮ ಓದಿಗೆ

ಯಾನ್ ಎರಿಕ್ ವೋಲ್ಡ್-ರವರು ನೋರ್ವೇ ದೇಶದ ರಾಜಧಾನಿ ಓಸ್ಲೋ (Oslo) ನಗರದಲ್ಲಿ 1939-ರಲ್ಲಿ ಜನಿಸಿದರು. 1960-ರ ದಶಕದಲ್ಲಿ ಅವರು ಓಸ್ಲೋ, ಉಪ್ಸಾಲಾ (ಸ್ವೀಡನ್) ಮತ್ತು ಸ್ಯಾಂಟಾ ಬಾರ್ಬರಾ (ಕ್ಯಾಲಿಫೋರ್ನಿಯಾ) ವಿಶ್ವವಿದ್ಯಾಲಯಗಳಲ್ಲಿ ಭಾಷೆ ಮತ್ತು ಸಾಹಿತ್ಯವನ್ನು ಅಧ್ಯಯನ ಮಾಡಿದರು. 1965-ರಲ್ಲಿ ಅವರು ತಮ್ಮ ಮೊದಲ ಕವನ ಸಂಕಲನವನ್ನು ಪ್ರಕಟಿಸಿದರು ಮತ್ತು ಅಂದಿನಿಂದ ಹಲವು ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡರು.

1960-ರ ದಶಕದಲ್ಲಿ ಯಾನ್ ಎರಿಕ್ ವೋಲ್ಡ್-ರವರು ನಾರ್ವೇಜಿಯನ್ ಕಾವ್ಯಕ್ಕೆ ಹೊಸ ಜೀವವನ್ನು ತಂದರು. ‘ಪ್ರೊಫಿಲ್’ (Profil) ಎಂಬ ಆಗಿನ ಪ್ರಭಾವಿ ವಿದ್ಯಾರ್ಥಿ ಸಾಹಿತ್ಯಿಕ ಪತ್ರಿಕೆಯ ಜತೆ ಹುಟ್ಟಿಕೊಂಡ “ಪ್ರೊಫಿಲ್‌ಜೆನರೇಶನ್” (Profilgeneration) ಎಂಬ ಸಾಹಿತ್ಯವಲಯದ ಪ್ರಮುಖ ಸದಸ್ಯರಾಗಿದ್ದರು. ಈ ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ ಲೇಖನಗಳು ಆ ಕಾಲದಲ್ಲಿ ನಾರ್ವೇಜಿಯನ್ ಸಾಹಿತ್ಯವನ್ನು ಆವರಿಸಿದ ನಿಗೂಢ ಮತ್ತು ಅಮೂರ್ತ ಅಲಂಕಾರಶಾಸ್ತ್ರವನ್ನು ಪ್ರಶ್ನಿಸಿದವು. ಹೊಸ ಪೀಳಿಗೆಯಲ್ಲಿ ಕವಿಗಳು ಮತ್ತು ಗದ್ಯ ಬರಹಗಾರರು ತಮ್ಮ ಪುಸ್ತಕಗಳಿಗೆ ಹೆಚ್ಚು ವಿನೋದಮಯ ಆಕಾರವನ್ನು ನೀಡಿದರು, ತಮ್ಮನ್ನು ಅಂತರರಾಷ್ಟ್ರೀಯ ಸಾಹಿತ್ಯದ ಹೊಸ ಅಲೆಗಳಿಗೆ ತೆರೆದುಕೊಂಡರು. ಆದಾಗ್ಯೂ, ಯಾನ್ ಎರಿಕ್ ವೋಲ್ಡ್ ಅಮೇರಿಕದ ಕಡೆಗೆ ತಿರುಗಿದರು. ಜ್ಯಾಜ಼್ (Jazz) ಸಂಗೀತದಲ್ಲಿರುವ ಅವರ ಆಸಕ್ತಿಯ ಮೂಲಕ, ಅವರು ಅಮೇರಿಕನ್ ಬೀಟ್ ಪೀಳಿಗೆಗೆ (American Beat generation) ಸೇರಿದ ಕವಿಗಳ ಬಗ್ಗೆ ತಿಳಿದುಕೊಂಡರು ಮತ್ತು ಬೀಟ್ (Beat) ಕವಿಗಳಂತೆ, ಅವರು ಪೂರ್ವದ ದೇಶಗಳ ಜೀವನ ಮತ್ತು ಕಾವ್ಯದಲ್ಲಿರುವ Zen-Buddhist ಮನೋವೃತ್ತಿಯ ಸಂವೇದನೆಯನ್ನು ಬೆಳೆಸಿಕೊಂಡರು.

ವೋಲ್ಡ್ ಅವರ ಆರಂಭದ ಕವನಗಳು ಆಂತರಿಕ ರೂಪಕಗಳಿಗೆ ಒಂದು ಮೂರ್ತ ಆಧಾರವನ್ನು ನೀಡುತ್ತವೆ ಎಂಬ ಅಂಶದಿಂದ ನಿರೂಪಿಸಲ್ಪಟ್ಟಿದೆ. ನಾರ್ವೇಜಿಯನ್ ಸಂದರ್ಭದಲ್ಲಿ ಅವರ ನಾಲ್ಕು ಆರಂಭಿಕ ಸಂಕಲನಗಳನ್ನು ಪ್ರಾಯೋಗಿಕ ಎಂದು ಕರೆಯಬಹುದಾದರೂ, ದೈನಂದಿನ, ಸರಳ ಸಂದರ್ಭಗಳು ಮತ್ತು ಭಾಷೆಯನ್ನು ಈ ಸಂಕಲನಗಳಲ್ಲಿ ನಾವು ಕಾಣುತ್ತೇವೆ. 1968-ರಲ್ಲಿ Mor Godhjertas glade versjon. Ja (The Happy Version of Mother Kind-Heart. Yes) ಎಂಬ ಕವನ ಸಂಕಲನದ ಪ್ರಕಟಣೆಯೊಂದಿಗೆ ಅವರ ಸಾಹಿತ್ಯಜೀವನ ಒಂದು ದೊಡ್ಡ ತಿರುವು ಪಡೆಯಿತು. ರೂಪಕಗಳಿಲ್ಲದ ದೀರ್ಘ ಕವಿತೆಗಳಲ್ಲಿ ಹತ್ತಿರವಿರುವುದನ್ನು ಅವರು ವರ್ಣಿಸುತ್ತಾರೆ. ಅವರು ರಮಣೀಯ ದೃಶ್ಯಗಳನ್ನು ಕಲ್ಪಿಸಿಕೊಳ್ಳುವುದಿಲ್ಲ; ಬದಲಿಗೆ ದಿನನಿತ್ಯದ ವಿದ್ಯಮಾನಗಳ ಜತೆಗೆ ನಗರ ಮತ್ತು ಅದರ ನಿವಾಸಿಗಳ ಜತೆ ಜರಗಿದ ಮಾತುಕತೆಗಳಲ್ಲಿ ಅವರು ಪಡೆದ ಸಂತೋಷಕ್ಕೆ ಒತ್ತು ನೀಡುತ್ತಾರೆ. ಈ ಕವಿತೆಗಳ ವಿಶಿಷ್ಟ ಛಾಪು ಕವಿಯ ಮೌಖಿಕ ವಾಕ್ಚಾತುರ್ಯವೂ ಆಗಿದೆ; ಲಯ ಮತ್ತು ಮನವಿ ಜತೆಯಾಗಿರುವ ಕವಿತೆಗಳಿವು, ಮತ್ತು ಈ ಕವನಗಳು ವೋಲ್ಡ್‌ ಅವರಿಗೆ ವಿಶಾಲವಾದ ಮತ್ತು ನಿಷ್ಠಾವಂತ ಓದುಗರ ಸಮೂಹವನ್ನು ತಂದುಕೊಟ್ಟಿತ್ತು.

ಅವರ ಮುಂದಿನ ಸಂಗ್ರಹ, kykelipi (1969), ಒಂದು ಅಸಂಬದ್ಧ ಕವಿತೆಯನ್ನು (nonsense poem) ಓದುಗರ ಮುಂದಿಟ್ಟಿತು; ಅನೇಕ ಓದುಗರಿಗೆ ಇದು ಪ್ರಚೋದನಾತ್ಮಕವಾಗಿ ಕಂಡುಬಂದು, ಪತ್ರಿಕೆಗಳಲ್ಲಿ ಆಧುನಿಕ ಕಾವ್ಯವನ್ನು ವಿರೋಧಿಸಲು ಪ್ರಾರಂಭಿಸಿದರು. kykelipi ಸಂಕಲನದಲ್ಲಿ ವಿಕಟ ವಿನೋದ (black humour) ಮತ್ತು ವಿಕೃತ ಚಿತ್ರಗಳು (grotesque) ಕಂಡುಬರುತ್ತವೆ, ಆದಾಗ್ಯೂ ಈ ಸಂಕಲನ ಜನರ ನಡುವಿನ ಭಾಷಾ ಮತ್ತು ಭಾವನಾತ್ಮಕ ಸಂಪರ್ಕಕ್ಕೆ ಬಾಗಿಲು ತೆರೆಯುತ್ತದೆ. 1970-ರ ದಶಕದಲ್ಲಿ ವೋಲ್ಡ್ ನಾಲ್ಕು ಕವನ ಸಂಕಲನಗಳನ್ನು ಪ್ರಕಟಿಸಿದರು. spor, snø (track, snow; 1970) ಎಂಬುದು ಜ್ಯಾಪನೀಸ್ ಹಾಯ್ಕು ಪದ್ಯಗಳ ಧಾಟಿಯಲ್ಲಿ ಬರೆದ ಅಡಕವಾದ ಸಂಕ್ಷಿಪ್ತ ಕವಿತೆಗಳ ಸಂಕಲನ; ಹಾಗೂ ಈ ಸಂಕಲನ ಪೂರ್ವದ ದೇಶಗಳ ಕಾವ್ಯದ ಬಗ್ಗೆ ನೋರ್ವೇಯಲ್ಲಿ ಆಸಕ್ತಿಯನ್ನು ಹುಟ್ಟುಹಾಕಿತು. sirkel, sirkel. Boken om prins Adrians reise (circle, circle. The Book about the Journey of Prince Adrian; 1979) ಎಂಬುದು ಓಸ್ಲೋದಿಂದ ರಷ್ಯಾದ ಮೂಲಕ ಜಪಾನ್‌-ಗೆ, ಮತ್ತೆ ಅಲ್ಲಿಂದ ಪೆಸಿಫಿಕ್‌ ಮಹಾಸಾಗರವನ್ನು ದಾಟಿ ಅಮೆರಿಕಾಗೆ ಹೋಗುವ ಹಾಗೂ ಮತ್ತೆ, ನ್ಯೂಯಾರ್ಕ್‌ನಿಂದ ಓಸ್ಲೋಗೆ ಹಿಂತಿರುಗಿ ಬರುವ ಒಂದು ವೃತ್ತ ಸಂಪೂರ್ಣಗೊಂಡ ಪ್ರಯಾಣವನ್ನು ವಿವರಿಸುವ ಕವನಗಳ ಒಂದು ವ್ಯಾಪಕವಾದ ಸಂಗ್ರಹ; ಪ್ರಯಾಣಿಕರೊಳಗೆ ನಡೆಯುವ ಆಂತರಿಕ ಪ್ರಕ್ರಿಯೆಯನ್ನು ಈ ಸಂಗ್ರಹ ಪ್ರತಿಬಿಂಬಿಸುತ್ತದೆ.

1987-ರಲ್ಲಿ ಪ್ರಕಟವಾದ Sorgen. Sangen. Veien. (The Sorrow. The Song. The Way.) ಹಾಗೂ 1988-ರಲ್ಲಿ ಪ್ರಕಟವಾದ En som het Abel Ek (The one called Abel Ek) ಎರಡೂ ಸಂಕಲನಗಳು ಗಾಢವಾದ, ಅಸ್ತಿತ್ವವಾದದ ಕಡೆಗೆ ಹೆಚ್ಚಾಗಿ ವಾಲುವ, ನಿಕಟತೆ, ದುಃಖ ಮತ್ತು ಸಾವಿನ ಮೇಲೆ ಕೇಂದ್ರೀಕೃತವಾಗಿರುವ ಕವನಗಳ ಸಂಕಲನಗಳಾಗಿವೆ. ಹಾಗಿದ್ದೂ, En som het Abel Ek ಸಂಕಲನದ ಕವನಗಳು ಹಗುರತೆಯನ್ನು ಹೊಂದಿವೆ; ದುಃಖದ ಮೂಲಕ ಬದುಕುವುದು ಸಂತೋಷದ ಹಾದಿಯನ್ನು ತೆರೆಯುತ್ತದೆ ಎಂದು ಇಲ್ಲಿನ ಕವನಗಳು ಒತ್ತಿಹೇಳುತ್ತದೆ. ಎರಡೂ ಸಂಕಲನಗಳು ಯಾನ್ ಎರಿಕ್ ವೋಲ್ಡ್‌-ರ ಸರಳ, ಸಂವಾದಾತ್ಮಕ ಮತ್ತು ರೂಪಕ-ವಿರೋಧಿ ಅಭಿವ್ಯಕ್ತಿಯನ್ನು ಪ್ರದರ್ಶಿಸುತ್ತವೆ. 1989-ರಲ್ಲಿ ಪ್ರಕಟವಾದ Elg (Elk) ಅವರ ಅತ್ಯಂತ ಬಹಿರ್ಮುಖವಾದ ಮತ್ತು ಜನಪ್ರಿಯ ಸಂಗ್ರಹವೆಂದು ಹೇಳಬೇಕು. ಎಲ್ಲಾ ತರಹದ ಸಿದ್ಧಾಂತಗಳ ಜತೆಗೆ ರಾಜಕೀಯವಾಗಿ ಅವರ ಸಂಬಂಧ ಹೇಗಿತ್ತು ಎಂಬುದು ಈ ಕವನಗಳಲ್ಲಿ ಕಂಡುಬರುತ್ತವೆ. ಇಲ್ಲಿ, ರಾಜಕಾರಣಿಗಳ ವಿರುದ್ಧ ದ್ವೇಶದ ಹಾಗೂ ಚುಚ್ಚುಮಾತಿನ ಕವನಗಳ ಜತೆಗೆ ನೋರ್ವೇ ದೇಶ ತನ್ನ ವ್ಯಕ್ತಿತ್ವ ಕಳೆದುಕೊಳ್ಳುತ್ತಿರುವ ಬಗ್ಗೆ ಆತಂಕದ ಕವನಗಳನ್ನೂ ಕಾಣುತ್ತೇವೆ. Tolv meditasjoner (Twelve Meditations; 2002) ಮತ್ತು Drømmemakeren sa (The Dreammaker Said; 2004) ಹೆಸರಿನ ಸಂಕಲನಗಳ ಮೂಲಕ ಯಾನ್ ಎರಿಕ್ ವೋಲ್ಡ್ ಅವರು ಅಂತರ್ದೃಷ್ಟಿಯ ಮತ್ತು ಜಾಗತಿಕ ಕಾವ್ಯವನ್ನು ಪರಿಚಯಿಸಿದರು. 2011-ರಲ್ಲಿ ಪ್ರಕಟವಾದ ಅವರ ಸಂಗ್ರಹ, Store hvite bok å se (Big White Book to See), ಇದೇ ಧಾಟಿಯಲ್ಲಿ ಮುಂದುವರಿಯುತ್ತದೆ.

ಕವಿಯಲ್ಲದೆ ಪ್ರಬಂಧಕಾರರಾಗಿಯೂ ಹೆಸರು ಪಡೆದ ಯಾನ್ ಎರಿಕ್ ವೋಲ್ಡ್, ತಮ್ಮ ಸಾಹಿತ್ಯಜೀವನದಲ್ಲಿ ಹಲವಾರು ಪ್ರತಿಷ್ಠಿತ ಪುರಸ್ಕಾರಗಳನ್ನು ಪಡೆದಿದ್ದಾರೆ. 1965-ರಲ್ಲಿ ತಮ್ಮ ಮೊದಲ ಕವನ ಸಂಕಲನಕ್ಕೆ Tarjei Vesaas’ debutantpris, 1968-ರಲ್ಲಿ Gyldendal’s Endowment, 1981-ರಲ್ಲಿ Aschehoug Prize, 1993-ರಲ್ಲಿ ಕಾವ್ಯಕ್ಕಾಗಿರುವ Brage Prize, 2000-ರಲ್ಲಿ Gyldendal Prize, ಹಾಗೂ 2004-ರಲ್ಲಿ Anvil Award, ಇವರು ಪಡೆದ ಕೆಲವು ಸಮ್ಮಾನಗಳು. 1979 ಹಾಗೂ 1999-ರಲ್ಲಿ ಅವರನ್ನು Nordic Council-ನ ಸಾಹಿತ್ಯ ಪ್ರಶಸ್ತಿಗೆ ನೇಮಿಸಲಾಯಿತು.

ಯಾನ್ ಎರಿಕ್ ವೋಲ್ಡ್-ರವರು ಪ್ರಬಂಧಕಾರರಾಗಿ ಮತ್ತು ಸಾಂಸ್ಕೃತಿಕ ವಿಷಯಗಳ ಚರ್ಚಾಕಾರರಾಗಿಯೂ ಮೆಚ್ಚುಗೆ ಪಡೆದಿದ್ದಾರೆ ಮತ್ತು ಕಾವ್ಯ ಮತ್ತು ರಾಜಕೀಯ ವಿಷಯಗಳ ಕುರಿತು ಹಲವಾರು ಮುಖ್ಯ ಚರ್ಚೆಗಳನ್ನು ಮೊದಲಿಸಿದ್ದಾರೆ. ಕವಿಯಾಗಿ ಅವರು ಕವನಗಳ ಓದುವಿಕೆಗೆ, ವಾಚನಕ್ಕೆ ಒತ್ತು ನೀಡುತ್ತಾರೆ. ಪ್ರಸಿದ್ಧ ಜ್ಯಾಜ಼್ ಸಂಗೀತಗಾರರಾದ ಚೆಟ್ ಬೇಕರ್ ಮತ್ತು ಬಿಲ್ ಫ್ರಿಸೆಲ್-ರವರ ನಿಕಟ ಸಹಕಾರದೊಂದಿಗೆ ಹಲವಾರು ಧ್ವನಿಸುರುಳಿಗಳನ್ನು ಹೊರತಂದಿದ್ದಾರೆ. ಒಬ್ಬ ಕಲಾವಿದನಾಗಿ ಅವರ ವೃತ್ತಿಜೀವನದುದ್ದಕ್ಕೂ ಅವರು ತಮ್ಮ ಕಾವ್ಯದಿಂದ ಮತ್ತು ರಾಜಕೀಯ ದೃಷ್ಟಿಕೋನದಿಂದ ಸಾರ್ವಜನಿಕರನ್ನು ತಲುಪಲು ಸಮರ್ಥರಾಗಿದ್ದಾರೆ. ನಾರ್ವೇಜಿಯನ್ ಕಾವ್ಯದ ನವೀಕರಣದ ದಿಕ್ಕಿನಲ್ಲಿ ಅವರ ಕೊಡುಗೆ ಅಪಾರವಾಗಿದೆ, ಜತೆಗೆ ಭಾವಗೀತಾತ್ಮಕ ಕಾವ್ಯದಲ್ಲಿ ಆಸಕ್ತಿಯನ್ನೂ ಸೃಷ್ಟಿಸಿದರು.

ನಾನು ಇಲ್ಲಿ ಕನ್ನಡಕ್ಕೆ ಅನುವಾದಿಸಿರುವ ಯಾನ್ ಎರಿಕ್ ವೊಲ್ಡ್-ರ ಎಲ್ಲಾ ಕವನಗಳನ್ನು ಸ್ವತಃ ಯಾನ್ ಎರಿಕ್ ವೊಲ್ಡ್-ರವರೇ ಮೂಲ ನಾರ್ವೇಜಿಯನ್ ಭಾಷೆಯಿಂದ ಇಂಗ್ಲಿಷಿಗೆ ಅನುವಾದಿಸಿರುವರು.


ಕನ್ನಡಿಗೆ ಗೊತ್ತಿಲ್ಲ. ಕಡಲಿಗೆ ಗೊತ್ತು
ಮೂಲ: Mirror Doesn’t Know. Ocean Knows

ದೇಗುಲದ ಘಂಟೆಗಳು
ಘಣಘಣಸುತ್ತಿವೆ.
ಬುದ್ಧ ನಗುತ್ತಾನೆ.
ಏಸು ರಕ್ತಸ್ರವಿಸುತ್ತಿದ್ದಾನೆ.
ಬುದ್ಧ ದುಃಖದ ಬಗ್ಗೆ
ಮಾತನಾಡುತ್ತಾನೆ.
ಏಸು ಮೋಕ್ಷದ ಬಗ್ಗೆ.
ಬುದ್ಧ ದಾರಿಯ ಬಗ್ಗೆ
ಮಾತನಾಡುತ್ತಾನೆ.
ಏಸು ಲಕ್ಷ್ಯದ ಬಗ್ಗೆ.

*

ಬುದ್ಧ ಹೇಳುತ್ತಾನೆ:
ಯಾವಾಗಲೂ
ನೋಯುತ್ತೆ.
ಏಸು ಹೇಳುತ್ತಾನೆ:
ಕೊನೆಯಲ್ಲಿ
ಮೋಕ್ಷ ಸಿಗುತ್ತೆ.
ಬುದ್ಧ ಹೇಳುತ್ತಾನೆ:
ಹೆಚ್ಚೆಂದರೆ ಅದು
ಎಲ್ಲವನ್ನೂ ಅಳಿಸಲು
ಆದೇಶಿಸುವ ಚಿಹ್ನೆಯಾಗಿರುತ್ತೆ.

*

ನೀರು ತನ್ನ ಮನಸ್ಸನ್ನು
ಬದಲಾಯಿಸುವುದಿಲ್ಲ.
ನೀರನ್ನು ಮತ್ತೆ ಮತ್ತೆ
ಕೇಳಬೇಕೆಂಬ ಅಗತ್ಯವಿಲ್ಲ.
ನೀರು ಥರ್ಮಾಮೀಟರ್-ನ್ನು
ಅನುಸರಿಸುತ್ತೆ.
ನೀರ್ಗಲ್ಲು. ದ್ರವ. ಆವಿ.
ಇದೆಲ್ಲಾ ನನಗ್ಯಾಕೆ?

*

ಮೋಡ.
ಸಮುದ್ರ.
ಹಿಮನದಿ.
ನಾನ್ಯಾವಾಗ
ತಲೆಕೆಡಿಸಿಕೊಂಡಿದ್ದೆ?
ಏರುವ ನೀರು.
ಮುಳುಗುವ ನೀರು.
ಎಲ್ಲವನ್ನೂ ಉರುಟಾಗಿಸಿ
ನಯವಾಗಿಸುತ್ತೆ ನೀರು.
ಒರಟಾಗಿರುವುದು
ಉರುಟಾಗುತ್ತೆ.
ಒರಟಾಗಿರುವುದು
ಉರುಟಾಗುತ್ತೆ.
ನಂತರ ಬೆಳಕು
ಆರಿ ಹೋಗುತ್ತೆ.

*

ಅವನು ಕೊಲ್ಲುವುದಕ್ಕೆಂದೇ
ಗುಂಡು ಹಾರಿಸುವ.
ಅವನು ಕೊಲ್ಲುವುದಕ್ಕೆಂದೇ
ಬಾಂಬಿನ ಬೆಲ್ಟನ್ನು ಬಿಗಿದು ಕಟ್ಟಿಕೊಂಡ.
ಅವನ ಯೋಚನೆ ಬಂದೂಕಿನ
ಕುದುರೆಯ ಮೇಲಿದೆ,
ಅದನ್ನು ಚಾಲೂ
ಮಾಡುವುದರ ಮೇಲಿದೆ.
ಅದು ಯೋಚನೆಯೇನಲ್ಲ.
ಅದು ಒತ್ತಾಯ.

*

ನಾವು ಬೆಟ್ಟದ ಜನರನ್ನು
ಕೊಲ್ಲುವೆವು
ಒತ್ತಾಯದ ಮೇರೆಗೆ.
ಬೆಟ್ಟದ ಜನರು ನಮ್ಮನ್ನು
ಕೊಲ್ಲುವರು
ಒತ್ತಾಯದ ಮೇರೆಗೆ.
ನಾವು, ಏಕೆಂದರೆ ನಮ್ಮಲ್ಲಿ
ವಿಚಾರಗಳಿವೆ.
ವಿಚಾರಗಳು
ಗಾಳಿಯಿಂದ ತಯಾರಾದವು.
ಬೆಟ್ಟದ ಜನರು ಅಲ್ಲಿಗೆ ಸೇರಿದವರು.

*

ಕಡಿಬಂಡೆಯೆದುರು
ಇನ್ನೊಂದು ಕಡಿಬಂಡೆ, ಎಂದರೆ
ಅಲ್ಲಿ ಮಾರುಲಿ ಉಲಿವುದೆ?
ಆದರೆ, ಒಂದು ಬೆಟ್ಟ ಇನ್ನೊಂದನ್ನು
ಸಿಡಿಸಿ ಚೂರುಚೂರು ಮಾಡಿದಾಗ?
ಅಥವಾ ತನ್ನನ್ನು ಸಿಡಿಸಿಕೊಂಡು
ಚೂರು ಚೂರಾದಾಗ?
ಆವಾಗ ನೀವು ಗುಹೆಗಳಲ್ಲಿ
ಸೇರಿಕೊಂಡು ಕಾಯಬೇಕು.
ಬೆಟ್ಟವನ್ನು ಒಂದು ಪಿರಮಿಡ್-ನ
ಆಕಾರದಲ್ಲಿ ರೂಪಿಸುವ ತನಕ.

*

ಕನ್ನಡಿಯ ಪ್ರತಿಫಲನದಲ್ಲಿ
ಕನಿಷ್ಠವಾದುದು
ಗರಿಷ್ಠವಾಗಿರುತ್ತೆ.
ಆದರೆ, ಕನ್ನಡಿ ಒಡೆದಾಗ?
ಕನ್ನಡಿಯನ್ನು ಒಡೆಯಲಾಗದು,
ಒಡೆಯಲಾಗದು,
ಒಡೆಯಲಾಗದು.
ಅದು ಕಡಲಾಗಿದ್ದಿದ್ದರೆ?

*

ಒಂದು ದೂರವ್ಯಾಪ್ತಿಯ ದುರ್ಬೀನುಳ್ಳ
ಬಂದೂಕಿನಿಂದ ಕನ್ನಡಿಯನ್ನು
ಛಿದ್ರಗೊಳಿಸಲಾಗದು.
ಕನ್ನಡಿ ಏರಲಷ್ಟೇ ಸಾಧ್ಯ.
ಅಥವಾ ಮುಳುಗಲೂ ಬಹುದು.
ಕನ್ನಡಿ ಮುಳುಗಿದರೆ,
ನಾವೆಲ್ಲರೂ ಏರುವೆವು,
ತಲೆಕೆಳಗಾಗಿ.

*

ಕನ್ನಡಿ ಏರಿದಾಗ,
ನಾವೆಲ್ಲರೂ ಮುಳುಗುವೆವು,
ನಿಜವಾಗಿಯೂ.
ನಾವೆಲ್ಲರೂ, ಪ್ರತಿಯೊಬ್ಬರೂ ಅಲ್ಲ.
ಬಡವರು ಮಾತ್ರ.
ಬಡವರು ಅದೃಶ್ಯರಾದಾಗ,
ಉಳಿದವರು ಉದ್ಭವಿಸುತ್ತಾರೆ.
ಎಲ್ಲಾ ಆದ ಮೇಲೆ,
ನಮ್ಮ ಸರದಿ ಬರುತ್ತೆ.

*

ಸಮುದ್ರದಲ್ಲಿನ ಒಂದು ಲೈಟ್‌ಹೌಸಿನ ಹಾಗೆ
ಎಂಪಾಯರ್ ಸ್ಟೇಟ್ ಬಿಲ್ಡಿಂಗ್
ತನ್ನ ಬೆಳಕನ್ನು ಚೆಲ್ಲುತ್ತೆ.
ಆವಾಗ ನಮಗೆ ಅರಿವಾಗುತ್ತೆ
‘ಟೆರರ್’ ಪದದ ಅರ್ಥವೇನೆಂದು.
ಆವಾಗ ಹುತಾತ್ಮ ಪೈಲಟ್-ರ
ಅವಶ್ಯಕತೆ ಇರಲ್ಲ.

*

ನಮಗೆ ಗೊತ್ತಿರುವ ವಿಷಯಗಳ ಬಗ್ಗೆ
ನಾವು ಸುಮ್ಮನಿರುತ್ತೇವೆ.
ಬುದ್ಧಿವಂತರು
ಸುಮ್ಮನಿರುತ್ತಾರೆ.
ದಡ್ಡರು
ಸುಮ್ಮನಿರುತ್ತಾರೆ.
ಬುದ್ಧಿವಂತರು ಮತ್ತು
ದಡ್ಡರ ಮಧ್ಯೆ ಏನೂ
ವ್ಯತ್ಯಾಸವಿಲ್ಲ.
ಕನ್ನಡಿಗಿದು ಗೊತ್ತಿಲ್ಲ.
ಕಡಲಿಗೆ ಗೊತ್ತು.


ಕಪಿಂಗಮರಾಂಗಿ ದ್ವೀಪದ ಹಕ್ಕಿ
ಮೂಲ: The Bird from Kapingamarangi


ಅಂದ್ರೆ, ಇಲ್ಲವನ್ನು ಇಲ್ಲದಿಂದ
ಬದಲಿಸಿಡಬಹುದು ಅಂತ ಹೇಳ್ತಿಯಾ?

ರಾಜಕುಮಾರ ಕೇಳಿದ.
ಹೌದು, ಹಾಗಂತನಿಸುತ್ತದೆ,
ಕಪಿಂಗಮರಾಂಗಿ ದ್ವೀಪದ ಹಕ್ಕಿ ಹೇಳಿತು,

ಆದರೆ ನೀನು ಹೌದು ಮತ್ತು ಇಲ್ಲದರ
ಮಧ್ಯೆ ಯಾವುದೇ ಭೇದ ಮಾಡದ ಪಕ್ಷದಲ್ಲಿ ಮಾತ್ರ.


ಹೌದು ಮತ್ತು ಇಲ್ಲದರ ಮಧ್ಯೆ
ಯಾವುದೇ ಭೇದ ಮಾಡಬಾರದು,
ರಾಜಕುಮಾರ ಏಡ್ರಿಯನ್ ಕೇಳಿದ,

ಹೇಗೆ ಸಾಧ್ಯ?
ನೋಡುವಾ, ಮೊದಲು ನಿನಗೆ ಒಂದು ಅಸಲಾದ
ಇಲ್ಲದ ತುಣುಕು ಸಿಕ್ಕಬೇಕು.
ಆವಾಗ ನಿನಗೆ ಗೊತ್ತಾಗುತ್ತೆ ಅದನ್ನು

ಕೊಟ್ಟುಬಿಡುವುದರಲ್ಲಿ ನಿನಗೆ ಯಾವ ಖರ್ಚೂ ಇಲ್ಲ,
ಇಟ್ಟುಕೊಳ್ಳುವುದರಲ್ಲಿ ಕೂಡ ಯಾವ ಖರ್ಚೂ ಇಲ್ಲ.


ಏಡ್ರಿಯನ್
ಕೇಳಿದ: ಹೇಗೆ ಗೊತ್ತಾಗಬೇಕು
ಇಲ್ಲದ ತುಣುಕು ಅಸಲೋ
ಅಲ್ಲವೋ ಎಂದು?
ತನ್ನ ಕೊಕ್ಕನ್ನು

ಏರಿಸಿ ಹಕ್ಕಿ ಹೇಳಿತ್ತು:
ಯಾವಾಗ ಇರುವುದು ಇಲ್ಲದಿರುವುದರಷ್ಟೇ
ನಿಜವೆಂದನಿಸುವಾಗ, ಹಾಗೂ ಯಾವಾಗ

ಇಲ್ಲದಿರುವುದು ಇರುವುದರಷ್ಟೇ
ನಿಜವೆಂದನಿಸುವಾಗ – ಆಗ ತಾನೆ
ನಿನ್ನ ಎದೆಗುದಿ
ಕೊನೆಯಾಗುವುದು.


ಅದೊಂದು ಸುಂದರವಾದ
ದಿನ.
ಒಂದು ಸಣ್ಣ ದ್ವೀಪದ ಸುತ್ತ
ಭಾರಿ ಅಲೆಗಳು ಅಪ್ಪಳಿಸುತ್ತಿದ್ದವು
ದೂರ

ಸಮುದ್ರದಲ್ಲಿ.
ರಾಜಕುಮಾರ ಸಮುದ್ರದಡದಲ್ಲಿ ಮಲಗಿದ್ದ
ಸೂರ್ಯನಡಿಯಲ್ಲಿ,
ಭಾಷೆಯಿಂದಾಚೆ.
ಕಣ್ಣುಗಳ ಒರೆಸಿಕೊಂಡು

ತಲೆಯಾಡಿಸಿ ಒಪ್ಪಿಗೆಸೂಚಿಸಿದ, ಆಗ ಹಕ್ಕಿ ಘೋಷಿಸಿತು:
ರಾಜಕುಮಾರ ಏಡ್ರಿಯನ್, ನಾನು ಬಲು ದೂರದಿಂದ
ಹಾರಿಕೊಂಡು ಬಂದಿರುವೆ, ಇಡೀ ದೂರವ ದಾಟಿ
ಬಂದಿರುವೆ ಕಪಿಂಗಮರಾಂಗಿಯಿಂದ,

ನಿನಗಾಗಿ ಇಲ್ಲಮೆಯ
ಹಾಡನ್ನು ಹಾಡಲು: “ಯಾವಾಗ ಇಲ್ಲಮೆ

ಇಲ್ಲಮೆಯೊಂದಿಗೆ ಸೇರುತ್ತದೋ,
ಆಗ ಏನೂ
ಹೊರಬರುವುದಿಲ್ಲ, ಏನೂ ಹೊರಬರುವುದಿಲ್ಲ.
ಯಾವಾಗ ಇಲ್ಲಮೆಗೆ

ಏನೂ
ಬೇಡವೋ, ಯಾವುದರ ಕೊರತೆಯೂ ಇರುವುದಿಲ್ಲವೋ – ಆಗ ತಾನೆ
ಎಲ್ಲವೂ ಶಾಂತವಾಗಿರುತ್ತದೆ.”
ಸೂರ್ಯನ ಗಿರಣಿ ಬೀಸುತ್ತಿತ್ತು, ಮರಳು
ಸುಡುತ್ತಿತ್ತು, ತಾನೆಲ್ಲಿದ್ದೇನೆಂದು
ರಾಜಕುಮಾರನಿಗೆ
ಗುರುತಿರಲಿಲ್ಲ.
ರಾಜಕುಮಾರ, ಅಂವ ಸುಮ್ಮನೆ
ನಕ್ಕ.


ಮರ ಮತ್ತು ಅ-ಮರ
ಮೂಲ: The Tree and the Non-Tree


ಒಂದು ಮರ
ಮರವಾಗಿರುತ್ತೆ, ಅದು ಯಾವತ್ತೂ
ಪತ್ರಿಕೆಗಳಿಗೆ ಸಂದರ್ಶನ ಕೊಡುವುದಿಲ್ಲ,
ಗಾಳಿಯಲ್ಲಿ ತೂಗುವಾಗಲೂ ಸರಿ
ಅಥವಾ
ಬಿರಿಗಾಳಿಯಲ್ಲಿ ಬಿದ್ದಾಗಲೂ ಸರಿ.
ಒಂದು ಮರ
ಮರವಾಗಿರುತ್ತೆ
ಮತ್ತೆ ಒಂದು ದಿನ
ಅದು
ಇರುವುದಿಲ್ಲ.


ಒಂದು ಜೂನ್ ದಿನದ
ಬಂಗಾರದ ಮುಸ್ಸಂಜೆಯ ಪರದೆಯ ಮೇಲೆ
ಒಂದು ಮರದ ಹೊರಗೆರೆ ಎಳೆಯಲಾಗಿದೆ,
ಬ್ಲಾಕ್‌ಬರ್ಡ್ ಹಕ್ಕಿಯೊಂದನ್ನು
ಅದು
ದೇವಲೋಕದ ಮಹಲುಗಳತ್ತ
ಏರಿಸುತ್ತಿದೆಯೋ, ಇಲ್ಲವೋ.
ಮರ ಸುಮ್ಮನಿರುತ್ತೆ,
ಆ ಹಾಡು ಅದನ್ನು
ನಯವಾಗಿ ಬೇರುಗಳಿಂದ
ಮೇಲೆಳೆಯುತ್ತಿರುವಾಗ.


ಒಂದು ಮರ
ಯಾರದೇ ಬರವಿಗಾಗಿ,
ಮಳೆಯ ಸುರುವಿಗಾಗಿ,
ಕ್ಲೋರೋಫಿಲ್ ತನ್ನ
ಕೆಲಸ ಮಾಡುವುದಕ್ಕಾಗಿ,
ಕಾಯುವುದಿಲ್ಲ.
ಒಂದು ಮರ
ಒದ್ದಾಡುತ್ತಿರುತ್ತೆ ಗಾಳಿಯ ಬಗ್ಗೆ ಯೋಚಿಸುತ್ತಾ,
ಗಾಳಿಯ ಮನಸ್ಸಲ್ಲಿ ಏನಿರುವುದೆಂದು ಅರಿಯದೇ.


ತನ್ನದೇ ದೇಹದ ಮಗ್ನತೆಯಲ್ಲಿ,
ಆ ಮರ ನಿಂತಿದೆ, ತನ್ನ ನೆರಳನ್ನು
ಸೂರ್ಯನ ಕಡೆಗೆ, ಗಾಳಿಯ ಕಡೆಗೆ
ತಿರುಗಿಸುತ್ತೆ.
ಬ್ರಹ್ಮಾಂಡದ ಹೊತ್ತಳಕದ ಲಯವನ್ನು
ಪ್ರತಿಬಿಂಬಿಸುತ್ತೆ ಅದು
ಯಾವೊಂದು ಶಬ್ದವೂ ನುಡಿಯದೇ.


ಆ ಮರ ಮತ್ತು ಅದರ ಸೋದರ
ಅ-ಮರ,
ನಾವು ನೆಲೆಸಿರುವ ನೆಲದಲ್ಲಿ
ನೆಟ್ಟಿರುವ
ರಟ್ಟಿನ ಬೊಂಬೆಗಳು.
ಈ ನೆಲದಡಿಯ ಅಂತಸ್ತಿನಲ್ಲಿ
ಬೇರುಗಳು ಕತ್ತಲನ್ನು
ಹೀರುತ್ತಿವೆ.
ಗಾಳಿಯು ಅದೃಶ್ಯವಾಗುತ್ತಿರುವ
ವರ್ಣ
ಮಾಲೆ.


ಅ-ಮರ ಉತ್ತರಿಸುತ್ತೆ:
ನೀನು ಇರುವೆ, ಏಕೆಂದರೆ
ಬೆಳಕು ಕೊಟ್ಟ ಮಾತನ್ನು
ನೀನು ನಡೆಸಿರುವೆ.
ನನ್ನಿಂದ ಏನೂ ನಡೆಸಿಲಿಕ್ಕಾಗಲ್ಲ,
ಇದೆ ಮತ್ತು ಇತ್ತು-ಗಳ
ಮಧ್ಯೆ ವ್ಯತ್ಯಾಸ ಗೊತ್ತಿಲ್ಲ,
ನನ್ನ ಗತಿ ಏನು?
ಕತ್ತಲ ಮಸಿಕುಡಿಕೆಯೊಳಗೆ
ಬೇರುಗಳು
ಕಾಲಕಳೆಯುತ್ತಿವೆ.


ಆದಾಗ್ಯೂ, ನಾವು ಇನ್ನೂ
ಅ-ಬೇರುಗಳ ಬಗ್ಗೆ
ಮಾತನಾಡಿಲ್ಲ.
ನಾವು ಇನ್ನೂ
ಅ-ಬೇರುಗಳ
ತಲೆಕೆಳಗಾಗಿ ಪ್ರತಿಬಿಂಬಿತವಾದ
ಮರದ ಬಗ್ಗೆ ಮಾತನಾಡಿಲ್ಲ.
ಇಲ್ಲದ ಓಕ್ ಮರದ
ಸಲೆಬೇರು ಅದು.


ಕತ್ತಲಲ್ಲಿ ಸಿನಿಮಾ ಸುರುಳಿಯ
ಮೇಲೆ ಚಿತ್ರಗಳು ಕಾಣಿಸಲ್ಲ.
ಕತ್ತಲಲ್ಲಿ ಸ್ಮಾರಕ ಚಿಹ್ನೆಗಳ
ಒಂದು ಕಂಬ ಉದ್ಭವಿಸುತ್ತೆ,
ನಾವು ಹತ್ತಿರದಿಂದ ನೋಡಿದಾಗ
ಅದರ ಮೇಲಿನ ಕೆತ್ತನೆಗಳು
ಮಾಸಿಹೋಗುತ್ತವೆ.
ನಿಮ್ಮ ಬೆರಳ್ತುದಿಗಳಿಂದ
ಮಾತ್ರ ನೋಡಬಲ್ಲಿರಿ,
ಅದೊಂದೇ ಮಾರ್ಗ ನೋಡುವುದಕ್ಕೆ.


ಸ್ಮಾರಕ
ಚಿಹ್ನೆಗಳ
ಕಂಬ
ತನ್ನನ್ನು
ಒಂದು ತೇಲುಬುರುಡೆಯಾಗಿ
ಬಗ್ಗಿಸಿಕೊಳ್ಳುತ್ತೆ.
ಸಮಯ
ಕುಸಿದುಹೋಗುತ್ತೆ,
ಚಂಡಮಾರುತ
ಏರುತ್ತ ಹಾರಿಹೋಗುತ್ತೆ.
ನಮ್ಮೆಲರ ಕೈಗಳು ತುಂಬಿದ್ದವು.

೧೦
ಬೆಳಕಿನ
ಸ್ಥಂಭ
ಮಾಯವಾಗಿ ಹೋಗಿಬಿಟ್ಟಿದೆ.
ಘನಾಕೃತಿಯ ಕತ್ತಲೆ
ಹಿಗ್ಗುತ್ತಿದೆ.
ನಾನು ತೆಳ್ಳನೆಯ ಹೊದಿಕೆಯಂತಹ
ಶೂನ್ಯದ ಮೇಲೆ ನಡೆದುಕೊಂಡು ಹೋದೆ.
ನಾನು ಜೌಗುನೆಲದ ಮೇಲೆ ನಡೆದುಕೊಂಡು
ಹೋದೆನಾ?
ನಾನು ಹಿಮಪದರಿನ ಮೇಲೆ ನಡೆದುಕೊಂಡು
ಹೋದೆನಾ?
ನಾನೊಂದು ಮುಳುಗದಿದ್ದ ಹಕ್ಕಿಯಾಗಿದ್ದೆನಾ?

೧೧
ಬಂಡೆ
ಮುಳುಗಿತು.
ನಿಗೂಢ
ಸ್ಪ್ರೂಸ್ ಮರಗಳ ಕಾಡಿನೊಳಗೆ
ಹಕ್ಕಿಯು ಹಾರಿ ಹೋಯಿತು.
ಎಲ್ಲೋ ಹೋಗಿ ಕೂರುತ್ತೆ,
ಅದೊಂದು ಗೂಬೆಯಾಗಿತ್ತು.
ಎಲ್ಲದರ ಗುರುತು ಹಿಡಿಯುತ್ತೆ,
ಎಲ್ಲವನ್ನೂ ಎರಡಕ್ಷರಗಳಲ್ಲಿ ನೋಡುತ್ತೆ.
ಮನುಷ್ಯನ ಹಿಂಗತ್ತಿನ ಮೇಲೆ ರೋಮ
ನಿಮಿರುತ್ತೆ.

೧೨
ಮರುದಿವಸ
ಬೆಳಕು ತಿರುಗಿ
ಬಂತು.
ಯಾರಿಂದಲೂ ಸೂರ್ಯನನ್ನು
ನೇರವಾಗಿ ನೋಡಲು ಸಾಧ್ಯವಿಲ್ಲ.
ಹುಲ್ಲು ತೂಗಾಡುತ್ತಿದೆ,
ಏನೂ ಆಗಿಲ್ಲವೆಂಬಂತೆ.
ಕಿಟಕಿಯ ಚೌಕಟ್ಟಿನಿಂದ
ನೊಣಗಳು ಹೊರಬಂದವು
ಸಾವಿನಿಂದ ಎಚ್ಚರವಾದಂತೆ.
ಕಿಟಕಿಗಾಜಿನ ಮೇಲೆ ಎಗರುತ್ತಿದ್ದವು,
ಹೊರಗೆ ಹೋಗಬೇಕು ಅವಕ್ಕೆ.


ಯಾವ ಹಕ್ಕಿಗಳೂ ಹಾಡುತ್ತಿಲ್ಲವೆಂಬ ನಿಜ
ಮೂಲ: The Fact that No Birds Sing

ದುಃಖ ಬಂದಾಗ, ಅದಕ್ಕೊಂದು ಭಾಷೆ ಅಂತ ಇರುವುದಿಲ್ಲ.
ದುಃಖವೆಂಬುದು ಕತ್ತಲು, ಅದು ಶೂನ್ಯ, ಅದೊಂದು ಹಂಬಲ –
ಹಲವು ಹೆಸರುಗಳನ್ನು ಬಳಸಬಹುದು,
ಆದರೆ ಅವು ಯಾವುದೂ ದುಃಖಕ್ಕೆ ಸಮನಾಗಿಲ್ಲ.
ದುಃಖವನ್ನು ಹೊತ್ತಿರುವುದೆಂದರೆ
ಬೆಳಗ್ಗೆ ನಿದ್ದೆಯಿಂದೇಳಲು ಮನಸ್ಸಿಲ್ಲದಿರುವುದು,
ರಸ್ತೆಯ ಮೇಲಿಂದ ಕಾಲನ್ನು ಎತ್ತಲಾಗದಿರುವುದು,
ನಿನ್ನೆ, ಮೊನ್ನೆ, ನಿನ್ನೆಯಿಂದ ಎರಡು ದಿನಗಳ ಹಿಂದೆ
ಅನುಭವಿಸಿದ ಮತ್ತದೇ ಹೃದಯದ ಇರಿತದಿಂದ
ಬಿಡುಗಡೆ ದೊರಕದಿರುವುದು,
ಪ್ರತಿ ಸಲ ಊರಿನ ಅದೇ ತಾಣಗಳನ್ನು,
ಮನಸ್ಸಿನ ಅದೇ ನಿಸರ್ಗಚಿತ್ರಗಳನ್ನು,
ಅದೇ ಹೆಸರುಗಳನ್ನು
ಹಾದುಹೋಗುವಾಗ,
ನೀನೇನು ಕಳೆದುಕೊಂಡಿರುವೆಯೆಂದು ಅರಿವಾಗುತ್ತೆ:
ಒಂದು ದೇಹ, ಒಂದು ನಗು, ಒಂದು ಹಗುರತೆ –
ನಿನ್ನ ಕಣ್ಣುಗಳ ಜತೆ ಕೂಡಲು ಒಂದು ಜತೆ ಕಣ್ಣುಗಳು.
ಈ ಕಣ್ಣುಗಳಿಗೆ ಹೆಸರೇನಾದರೂ ಇವೆಯೆ?
ಅವುಗಳನ್ನು Oscar ಎಂದು ಕರೆಯುತ್ತಾರೆಯೆ?
ಅವುಗಳನ್ನು Kathinka ಎಂದು ಕರೆಯುತ್ತಾರೆಯೆ?
O ಅಥವಾ K ಅಕ್ಷರಗಳು ಇನ್ನಿಲ್ಲವೆಂಬ ನಿಜ
ಅರ್ಥವಾಗುತ್ತಿಲ್ಲ, ಅರ್ಥವಾಗುತ್ತಿಲ್ಲ, ಅರ್ಥವಾಗುತ್ತಿಲ್ಲ –
ಅದಕ್ಕೊಂದು ಹೆಸರೇನಾದರೂ ಇದೆಯೆ?
K ಅಥವಾ O ಅಕ್ಷರಗಳು ಇನ್ನು ಮುಂದೆ
ನಿನ್ನ ಹಣೆಯನ್ನು ಸಾಂತ್ವನದ
ಕೈಗಳಿಂದ ನೇವರಿಸಲಾರವು ಎಂಬ ನಿಜ
ಮಾತಿಗೂ ಮೀರಿದ ನೋವನ್ನು ತರಿಸುತ್ತದೆ –
ಅದಕ್ಕೊಂದು ಹೆಸರೇನಾದರೂ ಇದೆಯೆ?
ಯಾವ ಹಕ್ಕಿಗಳೂ ಹಾಡುತ್ತಿಲ್ಲವೆಂಬ ನಿಜ.
ದುಃಖವೆಂಬ ಹೆಸರಿನ ಕತ್ತಲದು.
ಏಳು ವರ್ಷಕ್ಕಿಂತ ಹೆಚ್ಚು ಉಳಿಯುವುದಿಲ್ಲ.


ಯಾರೂ ಈ ಹಿಂದೆ ಅಲೆಯನ್ನು ಬಿಡಿಸಿರದ ಹಾಗೆ ಅಲೆಯನ್ನು ಬಿಡಿಸಿದ
ಗತಕಾಲದ ಮಹಾಚಿತ್ರಕಾರ ಹೊಕುಸಾಯ್
ಮೂಲ: Hokusai, the old master, who painted a wave like no one before him had painted a wave

ಹೊಕುಸಾಯ್
ಹತ್ತಿರ ಹತ್ತಿರ
ತೊಂಬತ್ತರವರೆಗೆ ಬದುಕಿದ. ಅವನಿಗೆ ಎಪ್ಪತ್ತೈದು
ವರ್ಷ ವಯಸ್ಸಾದಾಗ, ತಾನು ಬಿಡಿಸಿದ

ಚಿತ್ರಗಳ ಬಗ್ಗೆ ಅವನಂದ: ನನ್ನ ಆರನೆಯ
ವಯಸ್ಸಿನಲ್ಲಿ ನಾನು ಚಿತ್ರ ಬಿಡಿಸಿಲು
ಪ್ರಾರಂಭಿಸಿದೆ. ನಾನು ಐವತ್ತು ತಲುಪುವ ಮುನ್ನ
ಏನೇನು ಸಾಧಿಸಿದೆನೊ, ಅದು ಯಾವ
ಲೆಕ್ಕಕ್ಕೂ ಇಲ್ಲ.
ನನಗೆ ಎಪ್ಪತ್ತು ತುಂಬಿದಾಗ
ಕೂಡ ಉತ್ತಮವೆನ್ನುವಂತಹ ಯಾವುದನ್ನೂ
ಸೃಷ್ಟಿಸಿರಲಿಲ್ಲ. ನನ್ನ ಎಪ್ಪತ್ತಮೂರನೆಯ ವಯಸ್ಸಿನಲ್ಲಿ

ನನಗೆ ಪಶುಗಳ, ಸಸ್ಯಗಳ ಮೂಲ ಸ್ವರೂಪಗಳ
ಅರಿವಾಗತೊಡಗಿತ್ತು. ನನಗೆ ಎಂಬತ್ತಾಗುವಾಗ

ನನ್ನ ಅರಿವು ಇನ್ನೂ ಆಳವಾಗುವುದು, ಮತ್ತೆ
ನನಗೆ ತೊಂಬತ್ತಾಗುವಾಗ
ನನ್ನ ಕಲೆಯ ಅಂತರಾಳದ
ರಹಸ್ಯಗಳು ತಿಳಿವುದು ನನಗೆ –

ಅಂದರೆ, ನನಗೆ
ನೂರು ವರ್ಷ ತುಂಬಿದಾಗ ನಾನು
ಸ್ತುತ್ಯರ್ಹ ಚಿತ್ರಗಳನ್ನು ಸೃಷ್ಟಿಸಬಲ್ಲೆನು. ನಂತರದ

ವರ್ಷಗಳಲ್ಲಿ ಕೂಡ ಹಾಗೇ, ಎಂದು
ಬೇರೆಯಾಗಿ ಹೇಳಬೇಕಾಗಿಲ್ಲ.
ಈಗ ಮುಖ್ಯ ವಿಷಯವೇನೆಂದರೆ
ನಾನು ಹೀಗೇ ಮುಂದುವರೆಯಬೇಕು.

‘ಹೊಕುಸಾಯ್’ ಎಂಬ ನಾಮದಿಂದಲೆ ಖ್ಯಾತಿ ಪಡೆದ ಕಟ್ಸುಶಿಕಾ ಹೊಕುಸಾಯ್ (Katsushika Hokusai, 1760-1849), ಜಪಾನ್ ದೇಶದ ಎಡೋ ಅವಧಿಯ (Edo Period) ‘ಉಕಿಯೊ-ಇ’ (ukiyo-e) ಶೈಲಿಯ ಚಿತ್ರಕಲಾವಿದರಾಗಿದ್ದರು. “ಮೌಂಟ್ ಫ್ಯೂಜಿಯ ಮುವತ್ತಾರು ನೋಟಗಳು” (Thirty-Six Views of Mount Fuji) ಎಂಬ ಮರದ ಪಡಿಯಚ್ಚು ಮುದ್ರಣ ಸರಣಿಗೆ (woodblock print series) ಅವರು ಹೆಸರುವಾಸಿಯಾಗಿದ್ದಾರೆ. The Great Wave off Kanagawa (ಕನಾಗವಾದಿಂದ ಕಂಡ ಮಹಾ ಅಲೆ) ಎಂಬ ಪ್ರಖ್ಯಾತ ಚಿತ್ರ ಈ ಸರಣಿಯ ಭಾಗವಾಗಿದೆ. ವಿಲಾಸಿನಿಯರು ಮತ್ತು ನಟ-ನಟಿಯರ ಮೇಲೆ ಹೆಚ್ಚಾಗಿ ಕೇಂದ್ರೀಕೃತವಾಗಿದ್ದ ಭಾವಚಿತ್ರದ ಸಂಪ್ರದಾಯದಿಂದ ‘ಉಕಿಯೋ-ಇ’ ಶೈಲಿಯನ್ನು ಭೂದೃಶ್ಯಗಳು, ಸಸ್ಯಗಳು ಮತ್ತು ಪ್ರಾಣಿಗಳ ಕಡೆಗೆ ಕೇಂದ್ರೀಕರಿಸಿ, ‘ಉಕಿಯೋ-ಇ’-ನ್ನು ಹೆಚ್ಚು ವಿಸ್ತೃತವಾದ ಕಲೆಯ ಶೈಲಿಯಾಗಿ ಅಭಿವೃದ್ಧಿ ಪಡಿಸುವಲ್ಲಿ ಹೊಕುಸಾಯ್ ಪ್ರಮುಖ ಪಾತ್ರ ವಹಿಸಿದರು. 19-ನೇ ಶತಮಾನದ ಉತ್ತರಾರ್ಧದಲ್ಲಿ ಯುರೋಪಿನಾದ್ಯಂತ ಹರಡಿದ ‘ಜಾಪೋನಿಸ್ಮ’ ಅಲೆಯ (Japonisme Wave) ಸಮಯದಲ್ಲಿ ಹೊಕುಸಾಯ್-ಯವರ ಚಿತ್ರಗಳು ವಿನ್ಸೆಂಟ್ ವ್ಯಾನ್ ಗೊ (Vincent van Gogh) ಮತ್ತು ಕ್ಲೋಡ್ ಮೊನೇ ಯವರ (Claude Monet) ಮೇಲೆ ಮಹತ್ವದ ಪ್ರಭಾವವನ್ನು ಬೀರಿದವು ಎಂದು ಭಾವಿಸಲಾಗಿದೆ. ಹೊಕುಸಾಯ್-ರವರ The Great Wave off Kanagawa ವಿಶ್ವವಿಖ್ಯಾತ ಚಿತ್ರವನ್ನು ನಮ್ಮಲ್ಲಿ ಹೆಚ್ಚಿನವರು ಎಲ್ಲಾದರೂ ನೋಡಿಯೇ ಇರುತ್ತೇವೆ; ಈ ಚಿತ್ರವನ್ನು ಕೂಡ ಇಲ್ಲಿ ಪೋಸ್ಟ್ ಮಾಡಿರುವೆ.


ಜುಯ್ಕಾನ್ ಎಂಬ ಜೋಗಿ
ಮೂಲ: Zuikan the hermit

ಜುಯ್ಕಾನ್ ಅಂತ ಒಬ್ಬ ಜೋಗಿಯಿದ್ದ,
ಕೆಲವೊಮ್ಮೆ ತನ್ನನ್ನೇ ಕರೆಯುತ್ತಿದ್ದ:
“ಜುಯ್ಕಾನ್?”
ನಂತರ ಅವನೇ ಉತ್ತರಿಸುತ್ತಿದ್ದ: “ಹಾಂ!”

ಅವನೇ ಕರೆಯುವನು “ಜುಯ್ಕಾನ್?” ಎಂದು
ಅವನೇ ಉತ್ತರಿಸುವನು “ಹಾಂ!” ಎಂದು

ಜುಯ್ಕಾನ್ ಎಂಬ ಜೋಗಿ
ಅಲ್ಲಿ ಬೆಟ್ಟದ ಮೇಲೆ
ಏಕಾಂತ ವಾಸಿಸುತ್ತಿದ್ದ,
ಮತ್ತೆ,
ಅವನಿಗೆ ಚೆನ್ನಾಗಿ ಗೊತ್ತು
ಅವನು ಯಾರೆಂದು.

ಆದರೆ ಕೆಲವೊಮ್ಮೆ ಹೇಗಾಗುತ್ತದೆಂದರೆ
ಅವನು ಚಿಂತನೆಗಳಲ್ಲಿ ಮೈಮರೆಯುತ್ತಿದ್ದ.

ಹೀಗೆ ಅವನು ಚಿಂತನೆಗಳಲ್ಲಿ ಮೈಮರೆತಾಗ
ಅವನು ತನ್ನನ್ನೇ ಕರೆಯುತ್ತಿದ್ದ:
“ಜುಯ್ಕಾನ್?”
“ಹಾಂ!”

Zuikan: ಒಬ್ಬ ಜೆನ್ ಮಾಸ್ಟರ್ Zen Master