ಎರಡನೇ ಪ್ರತಾಪರುದ್ರ ಯಾ ರುದ್ರದೇವ ರುದ್ರಾಂಬಳ ಮೊಮ್ಮಗನಾಗಿದ್ದು, ಆಕೆಯ ಅನಂತರ ಪಟ್ಟಕ್ಕೆ ಬಂದು ಅಕ್ಕ ಪಕ್ಕದ ದಂಗೆಗಳನ್ನು ಅಣಗಿಸಿ ಪ್ರಬಲನಾದನು. ದೆಹಲಿಯ ಸುಲ್ತಾನರು ದಕ್ಷಿಣವನ್ನು ಪ್ರವೇಶಿಸಿದುದು ಇವನ ಕಾಲದಲ್ಲೇ. ವಾರಂಗಲ್ಲಿಗೆ ಲಗ್ಗೆಯಿಟ್ಟ ಮುಸ್ಲಿಮ್ ಸೈನ್ಯವನ್ನು ಮೂರು ಬಾರಿ ಅವನು ಎದುರಿಸಬೇಕಾಯಿತು. 1309ರಲ್ಲಿ ಅಲ್ಲಾ ಉದ್ದೀನ ಖಿಲ್ಜಿಯಿಂದ ದಂಡನಾಯಕನಾಗಿ ನಿಯುಕ್ತನಾದ ಮಾಲಿಕ್ ಕಾಫಿರನು ವಾರಂಗಲ್ಲಿನ ಮೇಲೆ ಲಗ್ಗೆಯಿಟ್ಟನು. ಇದರಲ್ಲಿ ಜಯಶಾಲಿಯಾದ ಕಾಫಿರನು ನಗರವನ್ನೆಲ್ಲ ಲೂಟಿ ಮಾಡಿದನು.
ಕೆ.ವಿ. ತಿರುಮಲೇಶ್ ಬರೆಯುವ ‘ನನ್ನ ಹಿಸ್ಟರಿ ಪುಸ್ತಕ’ ಸರಣಿಯ ಮತ್ತೊಂದು ಬರಹ ಇಲ್ಲಿದೆ.

ರಾಷ್ಟ್ರಕೂಟರು

ದಂತಿದುರ್ಗನು (745-750) ಪಲ್ಲವರೊಡನೆ ಒಪ್ಪಂದವನ್ನು ಮಾಡಿಕೊಂಡು ಗುರ್ಜರರನ್ನು, ಗುಜರಾತಿನ ಚಾಲುಕ್ಯರನ್ನು ಸೋಲಿಸಿ ತನ್ನ ರಾಜ್ಯವನ್ನು ವಿಸ್ತರಿಸಿದನು, ಬಾದಾಮಿಯ ಚಾಲುಕ್ಯ ಎರಡನೇ ಕೀರ್ತಿವರ್ಮನನ್ನು ಸೋಲಿಸಿ ಮಹಾರಾಷ್ಟ್ರದ ಉತ್ತರಭಾಗವನ್ನು ಪಡೆದನು. ದಂತಿದುರ್ಗನು ಹಿಂದೂ ಧಾರ್ಮಿಕರಿಗೆ ದಾನಧರ್ಮಗಳನ್ನು ಮಾಡುತ್ತಿದ್ದನು.

ಒಂದನೇ ಕೃಷ್ಣನು (756-775) ಪಟ್ಟವೇರಿದೊಡನೆಯೇ ಪಶ್ಚಿಮದ ಚಾಲುಕ್ಯರನ್ನೂ, ಪಶ್ಚಿಮದ ಗಂಗರನ್ನೂ ಗೆದ್ದು ಸಾಮ್ರಾಜ್ಯವನ್ನು ವಿಸ್ತರಿಸಿದನು. ಇವನು ಕಲಾ ಪ್ರೋತ್ಸಾಹಕನಾಗಿದ್ದು ಎಲ್ಲೋರದ ಕೈಲಾಸ ದೇವಾಲಯವನ್ನು ನಿರ್ಮಿಸಿದನು.

ಕೃಷ್ಣನ ಮಗನಾದ ಎರಡನೇ ಗೋವಿಂದನ ದುರಾಡಳಿತವು 780ರಲ್ಲಿ ಪಟ್ಟವೇರಿದ ಅವನ ತಮ್ಮ ಧ್ರುವನಿಂದ ಸುಧಾರಿಸಲ್ಪಟ್ಟಿತು. ಇವನು ಗಂಗ ಅರಸ ಶಿವ ವರ್ಷನನ್ನೂ, ದಂತಿವರ್ಮ ಪಲ್ಲವನನ್ನೂ ಸೋಲಿಸಿದನು.

ಮೂರನೇ ಗೋವಿಂದ (794-814): ಕಿರಿಯವನಾದ ಗೋವಿಂದನು ಧ್ರುವನ ಅಪೇಕ್ಷೆಯ ಪ್ರಕಾರ ರಾಜನಾದೊಡನೆಯೇ ಇವನ ಸೋದರ ಸ್ತಂಭನು ದಂಗೆಯೆದ್ದನು. ಅವನನ್ನು ಪಶ್ಚಿಮ ಗಂಗ ರಾಜ್ಯಕ್ಕೆ ಅಧಿಕಾರಿಯನ್ನಾಗಿ ಮಾಡಿದೊಡನೆಯೇ ಗಂಗ ಶಿವಮಾರನು ತೊಂದರೆ ಕೊಡಲು ಸುರುಮಾಡಿದನು. ಧ್ರುವನು ಕೂಡಲೇ ತನ್ನ ಗಂಗ ಸಾಮ್ರಾಜ್ಯವನ್ನು ವಶಪಡಿಸಿಕೊಂಡನು. ಪಲ್ಲವ ದಂತಿವರ್ಮನನ್ನೂ, ಚಾಲುಕ್ಯ ಎರಡನೇ ವಿಜಯಾದಿತ್ಯನನ್ನೂ ಸೋಲಿಸಿ, ಉತ್ತರ ದಂಡಯಾತ್ರೆಯನ್ನು ಕೈಗೊಂಡು ಗುರ್ಜರದ ಎರಡನೇ ನಾಗಭಟನನ್ನೂ ಬಂಗಾಲದ ಧರ್ಮಪಾಲನನ್ನೂ ಸೋಲಿಸಿದನು. ಇವನ ಶೌರ್ಯಕ್ಕೆ ಹೆದರಿ ಸಿಂಹಳದ ಅರಸ ತಾನಾಗಿ ಶರಣಾಗತನಾದನು.

ಅಮೋಘವರ್ಷನ (614-880) ಕಾಲದಲ್ಲಿ ಪಶ್ಚಿಮದ ಗಂಗರು ಸ್ವತಂತ್ರರಾದರು. ಒಮ್ಮೆ ಪದಚ್ಯುತನಾದರೂ, 821ರಲ್ಲಿ ರಾಜ್ಯವನ್ನು ಪುನರ್ ಸ್ಥಾಪಿಸಲು ಅಮೋಘವರ್ಷನು ಸಮರ್ಥನಾದನು. ಗಂಗರೊಡನೆ ಬಂಧುತ್ವವನ್ನು ಮಾಡಿಕೊಂಡನು. ಅವನ ಹಿಂದುಸ್ಥಾನದ ಪ್ರಾಂತ್ಯಗಳನ್ನು ಗುರ್ಜರ ಮಿಹಿರ ಭೋಜನು ಆಕ್ರಮಿಸಿದನು. ಅಮೋಘವರ್ಷನು ಗುಜರಾತಿನ ಚಾಲುಕ್ಯರೊಡಗೂಡಿ, ಪೂರ್ವ ಚಾಲುಕ್ಯ ಮೂರನೇ ವಿಜಯಾದಿತ್ಯನನ್ನು ಸೋಲಿಸಿದನು. ಅಮೋಘವರ್ಷನು ಜೈನನಾಗಿದ್ದನು. ನೃಪತುಂಗನೆಂದೂ ಹೆಸರಾಂತ ಈತನು ಕನ್ನಡದಲ್ಲಿ ಕವಿರಾಜಮಾರ್ಗವನ್ನೂ, ಸಂಸ್ಕೃತದಲ್ಲಿ ಪ್ರಶ್ನೋತ್ತರಮಾಲಾ ಎಂಬ ಗ್ರಂಥವನ್ನೂ ಬರೆದನು. ಮಾನ್ಯಖೇಟದಲ್ಲಿ ಹೊಸ ರಾಜಧಾನಿಯನ್ನು ನಿರ್ಮಿಸಿದನು.

ಎರಡನೇ ಕೃಷ್ಣನು ಗುಜರಾತಿನ ಮಿಹಿರಭೋಜನೊಂದಿಗೆ ಸಮರ ಸಾರಿದರೂ, ಉತ್ತರದ ಪ್ರಾಂತಗಳನ್ನು ಗೆದ್ದುಕೊಳ್ಳಲಾರದೆ ಹೋದನು. ಆದರೂ ಗುಜರಾತಿನ ಚಾಲುಕ್ಯರನ್ನು ತನ್ನ ಅಧೀನದಲ್ಲಿ ಇರಿಸಿಕೊಂಡನು. ಪೂರ್ವ ಚಾಲುಕ್ಯರು ಸ್ವತಂತ್ರರಾದರು. ಕೃಷ್ಣನು ಜೈನನಾಗಿದ್ದನು.

ಮೂರನೇ ಇಂದ್ರನು (912-919) ಮೂರನೇ ಗೋವಿಂದನ ಕಾಲದಲ್ಲಿ ತಮ್ಮ ಬಳಿ ಇದ್ದ ರಾಜ್ಯಗಳನ್ನೆಲ್ಲ ಪುನಃ ವಶಪಡಿಸಿಕೊಳ್ಳಲು ಸಮರ್ಥನಾದನು. ಉತ್ತರದ ಪರಮರ, ಗುರ್ಜರ, ಪ್ರತೀಹಾರ ರಾಜರನ್ನು ಸೋಲಿಸಿ ಕನೋಜದ ವರೆಗೆ ತನ್ನ ರಾಜ್ಯವನ್ನು ವಿಸ್ತರಿಸಿದನು. ಇವನ ಅನಂತರ ರಾಜರುಗಳಾದ ಎರಡನೇ ಅಮೋಘವರ್ಷ ಮತ್ತು ನಾಲ್ಕನೇ ಗೋವಿಂದರು ಸುಖಾಭಿಲಾಷಿಗಳಾಗಿದ್ದುದರಿಂದ ರಾಷ್ಟ್ರಕೂಟ ಸಾಮ್ರಾಜ್ಯವು ಸಡಿಲವಾಯಿತು.

ಮೂರನೇ ಕೃಷ್ಣ (939-968). ಮೂರನೇ ಅಮೋಘವರ್ಷನು ಶಾಂತಿಪ್ರಿಯನಾಗಿದ್ದುದರಿಂದ ಅವನ ಮಗ ಕೃಷ್ಣನು ಬೇಗನೆ ಆಡಳಿತವನ್ನು ವಹಿಸಿಕೊಂಡನು. ಈತನು ಪಶ್ಚಿಮದ ಗಂಗರ ಸಹಾಯವನ್ನು ಪಡೆದು, ಚೋಳ ಅರಸರ ಮೇಲೆ ಯುದ್ಧ ಸಾರಿ ಅವನನ್ನು ಕೊಂದನು. ತೊಂಡಮಂಡಲಂ ಕಾಂಚಿಗಳನ್ನು ವಶಪಡಿಸಿಕೊಂಡನು. ಪೂರ್ವದ ಚಾಲುಕ್ಯರನ್ನು ಜಯಿಸಿದನು. ಕವಿ ಪೊನ್ನನು ಮೂರನೇ ಕೃಷ್ಣನ ಆಸ್ಥಾನದಲ್ಲಿದ್ದನು. ಆದಿಕವಿ ಪಂಪನು ಈತನ ಮಾಂಡಲಿಕನಾದ (ವೆಮುಲವಾಡ/ ವೆಂಗಿಯ) ಚಾಲುಕ್ಯರ ಎರಡನೇ ಅರಿಕೇಸರಿಯ ಆಸ್ಥಾನದಲ್ಲಿದ್ದನು.

ಮೂರು ರಾಜ ಕುಟುಂಬಗಳು

ಬಂಗಾಳದ ಪಾಲರು

ಒಂದನೇ ಗೋಪಾಲನು (765-769) ಬಿಹಾರದ ಓದಂತಪುರಿಯಲ್ಲೊಂದು ವಿಶ್ವವಿದ್ಯಾಲಯವನ್ನು ಸ್ಥಾಪಿಸಿದನು. ನಲಂದದ ತಕ್ಷಶಿಲೆಗಳಂತೆ ಇದೂ ಭಾರತದ ಪ್ರಾಚೀನ ವಿಶ್ವವಿದ್ಯಾಲಯಗಳಲ್ಲಿ ಒಂದು. ಗೋಪಾಲನು ರಾಜ್ಯದ ಶಾಂತಿ ಸುಭಿಕ್ಷೆಗಳಿಗಾಗಿ ದುಡಿದನು.

ಧರ್ಮಪಾಲನು (769-815) ಕನೋಜದ ತನಕ ತನ್ನ ರಾಜ್ಯವನ್ನು ವಿಸ್ತರಿಸಿದರೂ, ಎರಡನೇ ನಾಗಭಟನು ಕನೋಜವನ್ನು ಈತನಿಂದ ಕಿತ್ತುಕೊಂಡನು. ಮೂರನೇ ಗೋವಿಂದನಿಂದ ಈತನು ಸೋಲಿಸಲ್ಪಟ್ಟನು. ಇವನು ಬೌದ್ಧ ದೇವಾಲಯಗಳನ್ನು ಸ್ಥಾಪಿಸಿದನಲ್ಲದೆ, ವಿಕ್ರಮಶಿಲೆಯಲ್ಲಿ ವಿಶ್ವವಿದ್ಯಾಲಯವನ್ನು ಕಟ್ಟಿಸಿದನು.

ದೇವಪಾಲನು (815-854) ರಾಜ್ಯವನ್ನು ವಿಸ್ತರಿಸಿದನು. ಸುಮಾತ್ರಾ ದ್ವೀಪದ ಅರಸ ಶೈಲೇಂದ್ರನ ಸಂಪರ್ಕವನ್ನು ಸಾಧಿಸಿಕೊಂಡು ಅಲ್ಲಿ ಹಿಂದೂ ಸಂಸ್ಕೃತಿಯನ್ನು ಬಿತ್ತಿದನು.

ವಾರಂಗಲ್ಲದ ಕಾಕತೀಯರು

ಮೊದಲನೇ ಪ್ರೋಲನು ವಂಶದ ಮೂಲ ರಾಜನಾದರೂ, ಎರಡನೇ ಪ್ರೋಲನು ಕೃಷ್ಣ ಗೋದಾವರಿಗಳ ನಡುವಣ ಪ್ರದೇಶಗಳನ್ನು ಗೆದ್ದುಕೊಂಡು ಕಾಕತೀಯ ಸಾಮ್ರಾಜ್ಯದ ನಿಜವಾದ ಸಂಸ್ಥಾಪಕನಾದನು. ಇವನು ಕೃಷಿಕರಿಗೆ ಸಹಾಯ ಮಾಡಿ ತನ್ನ ದೇಶದಲ್ಲಿ ಬೇಸಾಯವನ್ನು ಅಭಿವೃದ್ಧಿಪಡಿಸಿದನು.

ಒಂದನೇ ಪ್ರತಾಪರುದ್ರನು ವಾರಂಗಲ್ಲನ್ನು ರಾಜಧಾನಿಯನ್ನಾಗಿ ಮಾಡಿ, ದೇವಗಿರಿಯ ತನಕ ರಾಜ್ಯವನ್ನು ವಿಸ್ತರಿಸಿಕೊಂಡನು. ಇವನು ಸಂಸ್ಕೃತ ಮತ್ತು ತೆಲುಗು ಭಾಷೆಗಳಲ್ಲಿ ನೀತಿಪಾಠವೆಂಬ ಕೃತಿಯನ್ನು ರಚಿಸಿದನು. ವೀರಶೈವ ಕವಿಗಳು ಇವನ ಆಶ್ರಯವನ್ನು ಹೊಂದಿದ್ದರು. ಕನ್ನಡದಲ್ಲಿ ಶತಕವನ್ನು ಬರೆದ ಸೋಮನಾಥನು ಇವನ ಕಾಲದಲ್ಲಿದ್ದನು.

ಗಣಪತಿ ದೇವ (1199-1261). ಪ್ರತಾಪರುದ್ರನ ಅನಂತರ ಮಹಾದೇವನ ಕಾಲದಲ್ಲಿ ಲಯಿಸಿದ ರಾಜ್ಯವು ಗಣಪತಿಯಿಂದ 1199ರಲ್ಲಿ ಪುನರ್ ಸ್ಥಾಪಿಸಲ್ಪಟ್ಟಿತು. ಇವನು ಕಾಂಚಿಯ ತನಕದ ರಾಜ್ಯವನ್ನು ಸ್ಥಾಪಿಸಿದನು. ಆದರೆ ಪಾಂಡ್ಯರಿಂದ ಸೋಲಿಸಲ್ಪಟ್ಟುದರಿಂದ ನೆಲ್ಲೂರಿನ ದಕ್ಷಿಣ ಭಾಗವನ್ನು ಕಳೆದುಕೊಂಡನು. ಇವನು ವಿದ್ಯೆ, ಕಲೆಗಳನ್ನು ಪ್ರೋತ್ಸಾಹಿಸಿದನಲ್ಲದೆ, ಸಮುದ್ರ ವ್ಯಾಪಾರವನ್ನು ಅಭಿವೃದ್ಧಿಗೆ ತಂದನು.

ರುದ್ರಾಂಬ (1261-1291). ಗಣಪತಿಯ ಮಗಳು ರುದ್ರಾಂಬ (ರುದ್ರಮ ದೇವಿ) ‘ಮಹಾರಾಜ’ ಎಂಬ ಬಿರುದನ್ನು ಧರಿಸಿ ಪಟ್ಟಕ್ಕೆ ಬಂದಳು. ಇವಳ ಕಾಲದ ಸ್ಥಿತಿಯ ಕೆಲವು ವಿವರಗಳು ಆಗ ಭಾರತವನ್ನು ಸಂದರ್ಶಿದ ಮಾರ್ಕೋ ಪೋಲೋನ ಬರಹಗಳಿಂದ ದೊರಕುತ್ತವೆ. “ಜಾಣೆಯಾದ ಈ ರಾಣಿಯು ತನ್ನ ಹಿಂದಿನ ಅರಸರಿಗಿಂತಲೂ ಚೆನ್ನಾಗಿ ಆಡಳಿತ ನಡೆಸುತ್ತಿದ್ದಾಳೆ. ಜನರಿಗೆ ನ್ಯಾಯ ದೊರಕಿಸುವುದಕ್ಕಾಗಿ ಮತ್ತು ಶಾಂತಿಸ್ಥಾಪನೆಗಾಗಿ ಶ್ರಮಿಸುತ್ತಿದ್ದಾಳೆ. ಈಕೆಯು ಜನರ ಪ್ರೀತಿಗೆ ಪಾತ್ರಳಾಗಿದ್ದಾಳೆ. ಇಲ್ಲಿ ಜೀವನಕ್ಕೆ ಅವಶ್ಯವಾದ ಎಲ್ಲ ವಸ್ತುಗಳೂ ದೊರಕುತ್ತವೆ.”

ಎರಡನೇ ಪ್ರತಾಪರುದ್ರ ಯಾ ರುದ್ರದೇವ (1291-1323) ರುದ್ರಾಂಬಳ ಮೊಮ್ಮಗನಾಗಿದ್ದು, ಆಕೆಯ ಅನಂತರ ಪಟ್ಟಕ್ಕೆ ಬಂದು ಅಕ್ಕ ಪಕ್ಕದ ದಂಗೆಗಳನ್ನು ಅಣಗಿಸಿ ಪ್ರಬಲನಾದನು. ದೆಹಲಿಯ ಸುಲ್ತಾನರು ದಕ್ಷಿಣವನ್ನು ಪ್ರವೇಶಿಸಿದುದು ಇವನ ಕಾಲದಲ್ಲೇ. ವಾರಂಗಲ್ಲಿಗೆ ಲಗ್ಗೆಯಿಟ್ಟ ಮುಸ್ಲಿಮ್ ಸೈನ್ಯವನ್ನು ಮೂರು ಬಾರಿ ಅವನು ಎದುರಿಸಬೇಕಾಯಿತು. 1309ರಲ್ಲಿ ಅಲ್ಲಾ ಉದ್ದೀನ ಖಿಲ್ಜಿಯಿಂದ ದಂಡನಾಯಕನಾಗಿ ನಿಯುಕ್ತನಾದ ಮಾಲಿಕ್ ಕಾಫಿರನು ವಾರಂಗಲ್ಲಿನ ಮೇಲೆ ಲಗ್ಗೆಯಿಟ್ಟನು. ಇದರಲ್ಲಿ ಜಯಶಾಲಿಯಾದ ಕಾಫಿರನು ನಗರವನ್ನೆಲ್ಲ ಲೂಟಿ ಮಾಡಿದನು. 1318ರಲ್ಲಿ ಖುಸ್ರು ಖಾನನು ಇನ್ನೊಂದು ಧಾಳಿ ಮಾಡಿ, ಪ್ರತಾಪಸಿಂಹನು ದೆಹಲಿಗೆ ಪ್ರತಿ ವರ್ಷವೂ ಭಾರೀ ಮೊತ್ತದ ಕಪ್ಪ ಕಾಣಿಕೆಗಳನ್ನು ಸಲ್ಲಿಸುವಂತೆ ಬರೆಯಿಸಿಕೊಂಡನು. ಈ ಒಪ್ಪಂದಕ್ಕೆ ಅರಸನು ತಪ್ಪಿದ್ದಕ್ಕಾಗಿ 1323ರಲ್ಲಿ ಹೂಡಲ್ಪಟ್ಟ ನಿರ್ಣಾಯಕ ಯದ್ಧದಲ್ಲಿ ಪ್ರತಾಪರುದ್ರನು ಸೋತು ಬಂದಿಯಾಗಿ, ದೆಹಲಿಗೆ ಒಯ್ಯಲ್ಪಡುತ್ತಿದ್ದಾಗ ದಾರಿಯಲ್ಲಿ ತೀರಿಕೊಂಡನು. ಕಾಕತೀಯ ಸಾಮ್ರಾಜ್ಯವು ಹೀಗೆ ಅಂತ್ಯವಾಯಿತು. ವಾರಂಗಲ್ಲು ದೆಹಲಿ ಸುಲ್ತಾನರ ವಶವಾಯಿತು.

ಮೂರನೇ ಅಮೋಘವರ್ಷನು ಶಾಂತಿಪ್ರಿಯನಾಗಿದ್ದುದರಿಂದ ಅವನ ಮಗ ಕೃಷ್ಣನು ಬೇಗನೆ ಆಡಳಿತವನ್ನು ವಹಿಸಿಕೊಂಡನು. ಈತನು ಪಶ್ಚಿಮದ ಗಂಗರ ಸಹಾಯವನ್ನು ಪಡೆದು, ಚೋಳ ಅರಸರ ಮೇಲೆ ಯುದ್ಧ ಸಾರಿ ಅವನನ್ನು ಕೊಂದನು. ತೊಂಡಮಂಡಲಂ ಕಾಂಚಿಗಳನ್ನು ವಶಪಡಿಸಿಕೊಂಡನು.

ದೇವಗಿರಿಯ ಯಾದವರು

ಭಿಲ್ಲಮ (1178-1191). ಸಾವಿರದ ನೂರ ಎಪ್ಪತ್ತೆಂಟರಲ್ಲಿ ಯಾದವರ ಭಿಲ್ಲಮನು ದೇವಗಿರಿಯಲ್ಲಿ ಸ್ವತಂತ್ರ ರಾಜ್ಯವನ್ನು ಕಟ್ಟಿ, ದೇವಗಿರಿಯಿಂದ ಕೃಷ್ಣಾ ನದೀ ದಂಡೆಯ ತನಕ ರಾಜ್ಯ ವಿಸ್ತರಣೆ ಮಾಡಿದನು.

ಚೈತ್ರಪಾ ಅಥವಾ ಜೈತುಗಿಯು ಹೊಯ್ಸಳರನ್ನು ಸೋಲಿಸಿದನಲ್ಲದೆ, ಕಾಳಚೂರ್ಯರ ಮೇಲೆ ಅಧಿಕಾರವನ್ನು ಸ್ಥಾಪಿಸಿದನು. ಇವನು ವೇದ, ನ್ಯಾಯ, ಮೀಮಾಂಸೆಗಳಲ್ಲಿ ಪಾರಂಗತನಾಗಿದ್ದನು.

ಸಿಂಘಣನು (1210-1242) ಗುಜರಾತು, ಹೊಯ್ಸಳ ಮತ್ತು ಕೊಲ್ಲಾಪುರ ರಾಜ್ಯಗಳ ಮೇಲೆ ಯುದ್ಧ ಸಾರಿ ವಿಜಯಿಯಾದನು. ಯಾದವರಲ್ಲಿ ಪ್ರಬಲ ಅರಸನಾಗಿದ್ದ ಇವನು ವಿದ್ಯೆ, ಸಾಹಿತ್ಯಗಳ ಪ್ರೋತ್ಸಾಹಕನಾಗಿದ್ದನು. ಸಂಗೀತರತ್ನಾಕರವನ್ನು ಬರೆದ ಶಾಙ್ರ್ಗಧರನು ಸಿಂಘಣನ ಆಶ್ರಯವನ್ನು ಪಡೆದಿದ್ದನು.

ರಾಯ್ ರಾಯನ್ ರಾಮಚಂದ್ರನು (1271-1309) ಮೈಸೂರಿನ ತನಕ ರಾಜ್ಯವನ್ನು ವಿಸ್ತರಿಸಿದನು. 1292ರಲ್ಲಿ ಅಲ್ಲಾ ಉದ್ದೀನ್ ಖಿಲ್ಜಿಯು ದಂಡೆತ್ತಿ ಬಂದನು. ಯಾದವ ಸೈನ್ಯವು ಬೇರೆಡೆ ಯುದ್ಧದಲ್ಲಿ ನಿರತವಾಗಿದ್ದರೂ ಅದನ್ನು ಸಂಗ್ರಹಿಸಿಕೊಂಡು ಈತನ ಮಗ ಶಂಕರನು ಖಿಲ್ಜಿಯನ್ನು ಸೋಲಿಸಿದನು. ಆದರೆ ಅಪಪ್ರಚಾರದ ದೆಸೆಯಿಂದ ಯಾದವರು ಖಿಲ್ಜಿಗೆ ಶರಣಾಗಬೇಕಾಯಿತು. ರಾಮಚಂದ್ರನು ಖಜಾನೆಯ ದ್ರವ್ಯವನ್ನೆಲ್ಲ ಆಕ್ರಮಿಗೆ ಕೊಟ್ಟು, ಪ್ರತಿ ವರ್ಷವೂ ಕಪ್ಪ ತೆರಲು ಒಪ್ಪಿದನು. ಈ ಒಪ್ಪಂದಕ್ಕೆ ತಪ್ಪಿದುದರಿಂದ ರಾಮಚಂದ್ರನು ಬಂಧಿಸಲ್ಪಟ್ಟು ಬಲಾತ್ಕಾರವಾಗಿ ದೆಹಲಿಗೆ ಒಯ್ಯಲ್ಪಟ್ಟನು. ಆರು ತಿಂಗಳ ಸೆರೆಯನ್ನು ಮುಗಿಸಿ ಖಿಲ್ಜಿಯ ಅಪ್ಪಣೆ ಮೇರೆಗೆ ಪುನಃ ದೇವಗಿರಿಗೆ ಬಂದು, ರಾಯ್ ರಾಯನ್ ಎಂಬ ಬಿರುದನ್ನು ಧರಿಸಿಕೊಂಡು ಅಧೀನ ರಾಜನಾಗಿ ರಾಜ್ಯಭಾರ ವಹಿಸಿಕೊಂಡನು.

ಶಂಕರನು ಕಪ್ಪ ಕೊಡಲು ಒಪ್ಪದೆ ಇದ್ದುದರಿಂದ ಯುದ್ಧದಲ್ಲಿ ಹತನಾದನು. ಇವನ ಅನಂತರದ ಹರಪಾಲನು ಕೂಡಾ ದಂಗೆಯೆದ್ದು ಮುಸಲ್ಮಾನರನ್ನು ದೇವಗಿರಿಯಿಂದ ಓಡಿಸಿದುದರಿಂದ ಚಿತ್ರಹಿಂಸೆಗೊಳಗಾದನು. ರಾಜ್ಯವು ಅಲ್ಲಾ ಉದ್ದೀನನ ಸಾಮ್ರಾಜ್ಯಕ್ಕೆ ಸೇರಿಸಲ್ಪಟ್ಟಿತು.

ಲಕ್ಷ್ಮೀಧರ, ಶಾಙ್ರ್ಗಧರ, ಹೇಮಾದ್ರಿ ಮೊದಲಾದವರ ಶಾಸ್ತ್ರಗ್ರಂಥಗಳು, ಧಾರ್ಮಿಕ ಗ್ರಂಥಗಳು ಮತ್ತು ವೈಜ್ಞಾನಿಕ ಗ್ರಂಥಗಳು ಈ ಕಾಲದಲ್ಲಿ ರಚಿತವಾದುವು. ಜ್ಞಾನದೇವ, ನಾಮದೇವ ಮೊದಲಾದ ಭಕ್ತಿಪಂಥದ ಪ್ರಚಾರಕರೂ ಈ ಕಾಲದಲ್ಲಿದ್ದವರು.

ದ್ವಾರಸಮುದ್ರದ ಹೊಯ್ಸಳರು

ಕಲ್ಯಾಣದ ಚಾಲುಕ್ಯರ ಸಾಮಂತರಾಗಿದ್ದ ಹೊಯ್ಸಳರು, ಚಾಲುಕ್ಯರು ಚೋಳರ ಜತೆ ಯುದ್ಧದಲ್ಲಿ ನಿರತರಾಗಿದ್ದ ಸಂದರ್ಭದಲ್ಲಿ ಸ್ವಾತಂತ್ರ್ಯವನ್ನು ಗಳಿಸಿಕೊಂಡರು. ಒಂದನೇ ಬಲ್ಲಾಳನು 1100ರಲ್ಲಿ ಬೇಲೂರನ್ನು ರಾಜಧಾನಿಯಾಗಿ ಮಾಡಿಕೊಂಡು ರಾಜ್ಯವಾಳತೊಡಗಿದನು. ದ್ವಾರಸಮುದ್ರದ ಮೇಲೆ ನಡೆದ ಒಂದು ದಾಳಿಯನ್ನು ಹೊಡೆದೋಡಿಸಿ ರಾಜ್ಯವನ್ನು ಸುರಕ್ಷಿತಗೊಳಿಸಿದನು.

1111ರಲ್ಲಿ ಅವನ ಮಗನಾದ ಬಿಟ್ಟಿದೇವನು ಪಟ್ಟವೇರಿದನು. ಚೋಳರಿಂದ ಗಂಗವಾಡಿಯನ್ನು ಗೆದ್ದು ‘ತಲಕಾಡುಕೊಂಡನ್’ ಎಂಬ ಬಿರುದನ್ನು ಧರಿಸಿದನು. ಈ ಬಳಿಕ ತಮಿಳುನಾಡಿನ ದಿಗ್ವಿಜಯವನ್ನು ಕೈಗೊಂಡು ರಾಮೇಶ್ವರದ ತನಕ ಮುಂದುವರಿದನು. ದ್ವಾರಸಮುದ್ರಕ್ಕೆ (ದೋರಸಮುದ್ರ / ಹಳೆಬೀಡು) ತನ್ನ ರಾಜಧಾನಿಯನ್ನು ವರ್ಗಾಯಿಸಿದನು. ಮೊದಲು ಜೈನನಾಗಿದ್ದ ಬಿಟ್ಟಿದೇವನು, ವಿಶಿಷ್ಟಾದ್ವೈತ ಮತಸ್ಥಾಪಕರಾದ ರಾಮಾನುಜಾಚಾರ್ಯರ ಪ್ರಭಾವಕ್ಕೊಳಗಾಗಿ ವಿಷ್ಣುದೇವ ಎಂಬ ಹೆಸರನ್ನು ಧರಿಸಿ ವೈಷ್ಣವನಾದನು. ಆದರೆ ಅವನು ಇತರ ಮತಗಳನ್ನು ಕಡೆಗಣಿಸಲಿಲ್ಲ. ಜೈನ ಮತ್ತು ಶೈವ ಮತಗಳು ಇವನ ಸಹಾಯವನ್ನು ಪಡೆದಿದ್ದುವು. ಬೇಲೂರಿನ ಚೆನ್ನಕೇಶವ ದೇವಾಲಯ ಮತ್ತು ಇನ್ನಿತರ ದೇವಾಲಯಗಳು ಇವನಿಂದ ನಿರ್ಮಿತವಾದುವು.

ವಿಷ್ಣುವರ್ಧನನ ಕಾಲವಾದಾಗ ಅವನ ಮಗ ನರಸಿಂಹನು ಕೇವಲ ಎಂಟು ವರ್ಷದ ಬಾಲಕನಾಗಿದ್ದನು. ಅವನಿಂದ ರಾಜ್ಯವಾಳುವುದು ಸಾಧ್ಯವಿರಲಿಲ್ಲ. ಈತನ ರಾಜ್ಯದ ಕೆಲವಂಶಗಳು ಚಾಲುಕ್ಯರಿಂದ ಕಿತ್ತೆಸೆಯಲ್ಪಟ್ಟುವು. ಅವನು ಪ್ರಾಯಕ್ಕೆ ಬಂದ ಅನಂತರ ರಾಜ್ಯಭಾರದ ಕಡೆ ಲಕ್ಷ್ಯವೀಯದೆ ವಿಲಾಸಿಯಾಗಿದ್ದನು. 1173ರಲ್ಲಿ ಅಧಿಕಾರಕ್ಕೆ ಬಂದ ಎರಡನೇ ಬಲ್ಲಾಳನು ತನ್ನ ವಂಶವನ್ನು ಪ್ರಖ್ಯಾತಿಗೆ ತಂದನು. ದೇವಗಿರಿಯ ಯಾದವ ಅರಸನಾದ ಬಿಲ್ಲಮನನ್ನು ಸೋಲಿಸಿ, ರಾಜ್ಯವನ್ನು ಕೃಷ್ಣಾನದಿಯ ತನಕ ವಿಸ್ತರಿಸಿದನು. ಹನ್ನೆರಡನೇ ಶತಮಾನದಲ್ಲಿ ಪ್ರತಿಷ್ಠೆಗೆ ಬಂದ ಹೊಯ್ಸಳ ರಾಜ್ಯವು ವಿಜಯನಗರ ಸಾಮ್ರಾಜ್ಯವು ಸ್ಥಾಪನೆಯಾಗುವ ತನಕ ದಕ್ಷಿಣ ಹಿಂದುಸ್ಥಾನದಲ್ಲಿ ಬಲಿಷ್ಠ ರಾಜ್ಯವಾಗಿಯೆ ಉಳಿಯಿತು.

ಇವರ ಕಾಲದಲ್ಲಿ ಅನೇಕ ಜೈನ ಕವಿಗಳು ಕನ್ನಡ ಸಾಹಿತ್ಯವನ್ನು ಬೆಳಗಿಸಿದರು. ಬಿಟ್ಟಿದೇವನ ಆಶ್ರಯದಲ್ಲಿದ್ದ ಅಭಿನವ ಪಂಪನು ಪಂಪರಾಮಾಯಣವನ್ನು ರಚಿಸಿದನು. ಗಿರಿಜಾಕಲ್ಯಾಣದ ಕರ್ತೃವಾದ ಹರೀಶ್ವರ-ಹರಿಹರ-, ಹರಿಶ್ಚಂದ್ರ ಕಾವ್ಯವನ್ನು ಬರೆದ ರಾಘವಾಂಕ ಲೀಲಾವತೀ ಪ್ರಬಂಧವನ್ನು ಬರೆದ ನೇಮಿಚಂದ್ರ ಹೊಯ್ಸಳರ ಆಶ್ರಯವನ್ನು ಪಡೆದಿದ್ದರು.

ಎರಡನೇ ಬಲ್ಲಾಳನ ಅನಂತರ ಎರಡನೇ ನರಸಿಂಹನು 1280ರಲ್ಲಿ ಪಟ್ಟಕ್ಕೆ ಬಂದನು. ದೇವಗಿರಿಯ ಯಾದವರೊಡನೆ ನಡೆದ ಹೋರಾಟದಲ್ಲಿ ಕೃಷ್ಣ ತುಂಗಭದ್ರಾ ನದಿಗಳ ನಡುವಣ ಪ್ರದೇಶವನ್ನು ಕಳೆದುಕೊಂಡನು. ಆದರೆ ದಕ್ಷಿಣಕ್ಕೆ ದಿಗ್ವಿಜಯವನ್ನು ಬೆಳೆಸಿ ರಾಮೇಶ್ವರದಲ್ಲಿ ತನ್ನ ವಿಜಯಸ್ತಂಭವನ್ನು ಸ್ಥಾಪಿಸಿದನು. ಚೋಳ ಅರಸನಾದ ಮೂರನೇ ರಾಜರಾಜನು ದುರ್ಬಲನಾಗಿದ್ದುದರಿಂದ, ಆತನ ರಾಜ್ಯದಲ್ಲಿ ನರಸಿಂಹನ ಅಧಿಕಾರವೇ ಪ್ರಬಲವಾಗಿದ್ದಿತು. ತನ್ನ (ರಾಜರಾಜನ) ಸಾಮಂತನಿಂದ ರಾಜರಾಜನು ಎರಡೆರಡು ಬಾರಿ ಸೆರೆಹಿಡಿಯಲ್ಪಟ್ಟಾಗಲೂ ನರಸಿಂಹನೇ ಆತನನ್ನು ಬಿಡಿಸಿ ರಕ್ಷಿಸಿದನು.

1235ರಲ್ಲಿ ಪಟ್ಟಕ್ಕೆ ಬಂದ ಸೋಮೇಶ್ವರನು ತನ್ನ ತಂದೆಯು ಚೋಳ ರಾಜ್ಯದಲ್ಲಿ ನಡೆಸುತ್ತಿದ್ದ ಅಧಿಕಾರವನ್ನು ಮುಂದುವರಿಸಿದನು. ಶ್ರೀರಂಗದ ಜಂಬುಕೇಶ್ವರ ದೇವಾಲಯದ ಮುಂಭಾಗದ ಗೋಪುರವನ್ನು ರಚಿಸಿದ ಕೀರ್ತಿಯು ಸೋಮೇಶ್ವರನಿಗೆ ಸಲ್ಲುವುದು. ಸೋಮೇಶ್ವರನು ಹೊಯ್ಸಳ ಸಾಮ್ರಾಜ್ಯವನ್ನು ತನ್ನ ಇಬ್ಬರು ಮಕ್ಕಳಿಗೆ ಹಂಚಿದನು.

ಮೂರನೇ ಬಲ್ಲಾಳನು 1291ರಲ್ಲಿ ಪಟ್ಟವೇರಿದನು. ಈತನೇ ಕಡೆಯ ಪ್ರಖ್ಯಾತ ಹೊಯ್ಸಳ ಅರಸ. ತುಳುನಾಡನ್ನು ತನ್ನ ಸಾಮ್ರಾಜ್ಯಕ್ಕೆ ಸೇರಿಸಿಕೊಂಡನು. ದೇವಗಿರಿಯ ಯಾದವರನ್ನು ಮತ್ತು ಮಧುರೆಯ ಪಾಂಡ್ಯರನ್ನು ಗೆಲ್ಲುವ ಹಂಚಿಕೆಯನ್ನು ಹೂಡುತಿದ್ದಾಗ (1308) ವೀರಪಾಂಡ್ಯನು ಬಲ್ಲಾಳನಿಗೆ ಸಹಾಯಮಾಡಿದನು. ಮಾಲಿಕ್ ಕಾಫರನ ಧಾಳಿ ನಡೆದು ಬಲ್ಲಾಳನು ಪರಾಜಿತನಾದನು. ಕಾಫರನು ದ್ವಾರಸಮುದ್ರವನ್ನು ಹಾಳುಗೆಡವಿ ಹಿಂತಿರುಗಿದನು. ಮೂರು ವರ್ಷಗಳ ತರುವಾಯ ದ್ವಾರಸಮುದ್ರವು ಸಜ್ಜುಗೊಳಿಸಲ್ಪಟ್ಟಿತು. 1327ರಲ್ಲಿ ಮಹಮ್ಮದ್ ಬಿನ್ ತುಘ್ಲಕನು ಮತ್ತೆ ಹೊಯ್ಸಳರ ಮೇಲೆ ದಾಳಿ ನಡೆಸಿ, ದ್ವಾರಸಮುದ್ರವನ್ನು ಹಾಳುಗೆಡವಿ, ತನ್ನ ಸಾಮ್ರಾಜ್ಯದಲ್ಲಿ ವಿಲೀನಗೊಳಿಸಿದನು. ಮುಂದೆ ಉತ್ತರದಿಂದ ದಾಳಿಯು ನಡೆಯದಂತೆ ಉತ್ತರದ ಗಡಿಯನ್ನು ಭದ್ರಗೊಳಿಸಿ 1335ರಲ್ಲಿ ಮಧುರೆಯಲ್ಲಿ ಅಸ್ತಿತ್ವಕ್ಕೆ ಬಂದ ಗಿಯಾಸುದ್ದೀನನ ಮಾ’ಬರ್ ರಾಜ್ಯವನ್ನು (ಮಧುರೈ ಸುಲ್ತಾನೇಟ್) ಗೆದ್ದುಕೊಳ್ಳುವ ಹಂಚಿಕೆಯನ್ನು ವೀರ ಬಲ್ಲಾಳನು ಹೂಡಿದನು. ಇದಕ್ಕಾಗಿ ಇಪ್ಪತ್ತು ಸಾವಿರ ಮುಸಲ್ಮಾನರನ್ನು ತನ್ನ ಸೇನೆಗೆ ಸೇರಿಸಿ, 1342ರಲ್ಲಿ ಮಾ’ಬರ್ ವಿರುದ್ಧ ಯುದ್ಧ ಸಾರಿದನು. ಆದರೆ ಬಲ್ಲಾಳನು ಸೋತುಹೋದನು.

ಗಿಯಾಸುದ್ದೀನನು ರಾಜನನ್ನು ಕೊಂದು, ಚರ್ಮ ಸುಲಿದು, ಹುಲ್ಲನ್ನು ತುಂಬಿಸಿ ಹೊಲಿದು ರಾಜಧಾನಿಯಲ್ಲಿ ತೂಗಿ ಹಾಕಿದನು. ಬಲ್ಲಾಳನ ಮಗನಾದ ನಾಲ್ಕನೇ ವೀರಬಲ್ಲಾಳನು ತನ್ನ ಅಲ್ಪಾವಧಿಯ ಆಡಳಿತದಲ್ಲಿ ಯುದ್ಧವನ್ನು ಮುಂದುವರಿಸಿ (ಇವನ ವೈರತ್ವ ವಿಜಯನಗರದ ವಿರುದ್ಧವೂ ಇತ್ತು), ಗಿಯಾಸುದ್ದೀನನ ಎದುರು ಕಾಳಗದಲ್ಲಿ ಹತನಾದ. ಅವನ ದೇಹಕ್ಕೂ ಅವನ ತಂದೆಗೆ ದೊರೆತ ಗತಿಯೇ ಒದಗಿತು.

ಕಲೆಗೆ ಪ್ರೋತ್ಸಾಹ

ಹೊಯ್ಸಳ ವಂಶದ ಹೆಚ್ಚಿನ ಅರಸರು ಅನೇಕ ದೇವಾಲಯಗಳನ್ನು ಕಟ್ಟಿಸಿ ಶಿಲ್ಪ ಕಲೆಯನ್ನು ಅಭಿವೃದ್ಧಿಗೆ ತಂದರು. ವಿಷ್ಣುವರ್ಧನನಿಂದ ಬೇಲೂರಿನಲ್ಲಿ ನಿರ್ಮಿತವಾದ ಚೆನ್ನಕೇಶವ ದೇವಾಲಯ, ಹಳೆಬೀಡಿನ ಹೊಯ್ಸಳೇಶ್ವರ ದೇವಾಲಯ, ಸೋಮನಾಥಪುರದ ದೇವಸ್ಥಾನ ಇವುಗಳು ದಕ್ಖಣ ಮಾದರಿಯ ಶಿಲ್ಪಕೃತಿಗಳು. ಈ ಎಲ್ಲಾ ದೇವಸ್ಥಾನಗಳು, ಪ್ರತ್ಯೇಕವಾಗಿ ಹೊಯ್ಸಳೇಶ್ವರ ದೇವಸ್ಥಾನವು, ಅವುಗಳ ಗೋಡೆಗಳ ಮೇಲಣ ಕೆತ್ತನೆ ಕೆಲಸಗಳ ಸೌಂದರ್ಯಾತಿಶಯಕ್ಕೆ ಹೆಸರಾಗಿವೆ. ಈ ದೇವಸ್ಥಾನದಲ್ಲಿ ರಾಮಾಯಣವು ಕೆತ್ತಲ್ಪಟ್ಟದೆ. ಇದರಲ್ಲಿ ಕೆತ್ತಿದ ಆನೆಗಳೇ ಎರಡು ಸಾವಿರಕ್ಕಿಂತ ಅಧಿಕವಾಗಿವೆ. ಕೆತ್ತನೆ ಕೆಲಸವಿಲ್ಲದ ಒಂದಂಗುಲ ಜಾಗವೂ ಇದರ ಗೋಡೆಗಳಲ್ಲಿಲ್ಲ. ಇಷ್ಟು ಹೆಚ್ಚಿನ ಶಿಲ್ಪಗಳಿಂದ ಪ್ರೇಕ್ಷಕನ ಕಣ್ಣುಗಳಿಗೆ ವಿಶ್ರಾಂತಿಯು ದುರ್ಲಭವಾಗಿದೆ. ಮಾನುಷ ಶ್ರಮದ ಅದ್ಭುತ ಪ್ರದರ್ಶನದ ಈ ಶಿಲ್ಪಕೃತಿಗಳಲ್ಲಿ ದಕ್ಷಿಣ ಮಾದರಿಯ ಕಲೆಯು ಪರಿಪೂರ್ಣತೆಯನ್ನು ಪಡೆದಿದೆ.