ಎಸ್ಸೆಮ್ಮೆಸ್ ಭಾಷೆಯಂತೆ ಕವಿತೆಯೂ, ಗಂಭೀರ ಸಾಹಿತ್ಯ ಬರಹಗಳೂ ಸರಳವಾಗಿರಬೇಕು, ಅರ್ಥವಾಗಿಬಿಡಬೇಕು ಎಂದು ಹೇಳುತ್ತಾರೆ ಹಲವರು. ಹಾಗಾದರೆ ಏನಾಗುತ್ತದೆ? ಒಂದು ಲಯದಲ್ಲಿರುವ ಸರಳ ಪದ್ಯ ಸಾಲುಗಳು ಒಂದೊಮ್ಮೆ ಓದುಗನಿಗೆ ಸಂಪೂರ್ಣ ಅರ್ಥವಾಗಿ ಹೋಗಿ, ಅನಂತರ ದಿನವೂ ಪಠಿಸುವ ಸ್ತೋತ್ರದಂತೆ, ಭಜನಾ ಪದ್ಯದಂತೆ ನಾಲಗೆ ಮೇಲಿನ ಹಾಡಿಕೆ ಮಾತ್ರ ಆಗಿಬಿಡಬಹುದು. ಸರಳತೆಯ ಸಮಸ್ಯೆ ಇದು, ಸಂಪೂರ್ಣ ಅರ್ಥವಾಗಿಬಿಡುವುದರ ದುರಂತ ಇದು. ಅದೇ ಒಂದು ಉತ್ಕೃಷ್ಟ ಕವಿತೆ ಹಾಗಾಗುವುದಿಲ್ಲ. ಅದು ಚೆಸ್ ಆಟದಂತೆ ಸಮಸ್ಯೆಗಳನ್ನು ಬಿಡಿಸುವ ಟ್ರಿಕ್ ಗಳ ಮಜಾ ಕೊಡುತ್ತಾ ಆಟವನ್ನು ಬಿಡಿಸುತ್ತಲೇ ಎಲ್ಲಾ ಮುಗಿದುಹೋಗುವುದಿಲ್ಲ. ಅದು ಒಳಗೊಳಗೇ ನಿರಂತರವಾಗಿ ಹರಿಯುತ್ತಿರುವ ಒಳನೋಟ. ಇದು ಯಾವತ್ತೂ ಅರ್ಥದ ಹಂತವನ್ನು ತಲುಪಿ, ಆವಿಯಾಗಿ ಹೋಗುವುದಿಲ್ಲ. ಶ್ರೇಷ್ಠ ಎಂಬ ಹಣೆಪಟ್ಟಿಯ ಯಾವೊಬ್ಬ ಲೇಖಕನೂ ಅರ್ಥದ ಬಟಾಬಯಲನ್ನು ಸೃಷ್ಟಿಸಿ ಹೋಗಿಲ್ಲ. ಅರ್ಥದ ಬಾಗಿಲಿನ ಎದುರು ನಿಂತ ಓದುಗನ ಆಚೆ ಇನ್ನೇನು ಬಾಗಿಲು ತೆಗೆದೇಬಿಟ್ಟೆ ಎಂಬಂತ ವಿಶ್ವಾಸ ಉಳಿಸುತ್ತಾ ನಿಂತಿದ್ದಾನೆ.

ಅಂಬಿಕಾತನಯ ದತ್ತನನ್ನು ಬೇಂದ್ರೆ ಬರೆದಾಗ ಅದೆಲ್ಲಾ ಬೇಂದ್ರೆಗೇ ಸಂಪೂರ್ಣ ಅರ್ಥವಾಗದೇ ಇರಬಹುದು. ಅವರ ಆ ಕಾಲದ ಓದುಗನಿಗಂತೂ ಅರ್ಥವಾಗಲೇ ಇಲ್ಲ. ಅವರ ಮುಂದಿನ ತಲೆಮಾರಿಗೆ ಅವರವರ ರೀತಿಯಲ್ಲೇ ಅರ್ಥವಾಗುತ್ತಾ ಹೋದರು. ನಮ್ಮ ಜನರೇಷನ್ ಗೆ ಒಂದು ಥರ, ನಮ್ಮ ಮುಂದಿನ ತಲೆಮಾರಿಗೆ ಇನ್ನೊಂದು ಥರ. ಅವರು ಸಂಪೂರ್ಣ ಅರ್ಥವಾಗದೇ ಇದ್ದ ಕಾರಣಕ್ಕೇ ಅವರು ತಲೆಮಾರಿನಿಂದ ತಲೆಮಾರಿಗೆ ಹೊಸ ಹೊಸದಾಗಿ ಹುಟ್ಟುತ್ತಾ ಹೋಗಿದ್ದಾರೆ.  ಅಡಿಗರು ಒಂದಲ್ಲ, ನಾಲ್ಕಾರು ತಲೆಮಾರಿನ ಕಣ್ಣು ತೆರೆಸುವ ಕವಿ ಯಾಕೆ ಆಗಬಲ್ಲರೆಂದರೆ ಅವರು ಯಾವುದೋ ಒಂದು ದಿನ ಇಡೀ ಸಮೂಹಕ್ಕೆ ಸಂಪೂರ್ಣ ಅರ್ಥವಾಗಿಬಿಟ್ಟು ಅಧ್ಯಾಯವನ್ನು ಮುಗಿಸಿ, ಮರೆವಿಗೆ ಸಂದುಹೋಗುವುದಿಲ್ಲ. ಅವರೆಲ್ಲಾ ಯಾಕೆ ಪಂಪ, ಕುಮಾರವ್ಯಾಸ, ರನ್ನ, ಜನ್ನ, ರಾಘವಾಂಕರೆಲ್ಲಾ ಹೊಸ ಹೊಸ ವ್ಯಾಖ್ಯಾನಗಳಿಗೆ ಸಿಕ್ಕಿ ಹೊಸ ಹೊಸ ಅರ್ಥದೊಂದಿಗೆ ಪರಿಚಯಿಸಲ್ಪಡುತ್ತಾ ಹೋಗುವುದು ಅವರ ಕಾವ್ಯದ ಸೆಳವು ಸಂಪೂರ್ಣ ಅರ್ಥವಾಗದೇ. ಯಾರ, ಯಾವ ಬಗೆಯ ವ್ಯಾಖ್ಯಾನಗಳೂ ಅವರ ಕಾವ್ಯವನ್ನು ಹೊಸ ಹೊಸ ಅರ್ಥದ ಮನೆಗೆ ಕರೆದುಕೊಂಡು ಹೋಗುತ್ತವೆ. ಆ ಅರ್ಥ ಇನ್ನೊಂದು ಹೊಸ ಸಾಕ್ಷಾತ್ಕಾರದತ್ತ ಕರೆದೊಯ್ಯುತ್ತದೆ. ಕವಿಯ ಅಥವಾ ಶ್ರೇಷ್ಠ ಲೇಖಕನ ಶ್ರೇಷ್ಠತೆ ಇರುವುದು ಆತನಲ್ಲಲ್ಲ, ಆತನನ್ನು ಅರಿಯುತ್ತಾ ಹೋಗುವ ಓದುಗನೊಳಗಿನ ಸಾಕ್ಷಾತ್ಕಾರದಲ್ಲಿ.

ಇದಮಿತ್ಥಂ ಎಂಬ ಸರಳತೆಯಲ್ಲಿ, ಇದೇ ತಿಳಿ ಎಂಬ ಅರ್ಥದ ಹಗ್ಗದಲ್ಲೆತ್ತಿದ ಕೊಡದಲ್ಲಿ ಯಾವ ಶ್ರೇಷ್ಠತೆಯ ಜೀವಜಲ ಉಳಿದೀತು?
ಮಲೆಯಾಳಂನ ಖ್ಯಾತ ಕವಿ ಕೆ. ಸಚ್ಚಿದಾನಂದನ್ ಅವರಿಗೆ ಸಂದರ್ಶಕನೊಬ್ಬ ಪ್ರಶ್ನೆ ಕೇಳಿದ: ‘ಕವಿತೆ ಎಂದರೇನು, ವ್ಯಾಖ್ಯಾನಿಸುವಿರಾ?’
ಸಚ್ಚಿದಾನಂದನ್ ವಿವರಿಸಿದರು: ‘ಯಾವುದನ್ನು ವ್ಯಾಖ್ಯಾನಿಸಲಾಗುವುದಿಲ್ಲವೋ ಅದನ್ನು ಕವಿತೆ ಎಂದು ವ್ಯಾಖ್ಯಾನಿಸಬಹುದು!’

ಸರಿ, ಅಷ್ಟಕ್ಕೂ ಅರ್ಥವೆಂಬುದು ಏನು?

ಅರ್ಥವಿಲ್ಲ, ಸ್ವಾರ್ಥವಿಲ್ಲ, ಬರಿಯ ಭಾವಗೀತ… ಎಂದು ಬೇಂದ್ರೆ ಬರೆದದ್ದೇ ಒಬ್ಬೊಬ್ಬರಿಗೆ ಒಂದೊಂದು ಅರ್ಥದಲ್ಲಿ ಕೇಳಿಸುತ್ತಿರುವಾಗ ಅರ್ಥವಾಗುವುದು ಎಂದರೆ ಏನು? ಜನ ಸಾಮಾನ್ಯನಿಗೆ ಧರಣಿ ಮಂಡಲ ಮಧ್ಯದೊಳಗೆ ಒಂದು ಹಾಡು. ಮಕ್ಕಳಿಗೆ ಆ ಹಾಡೊಳಗೊಂದು ಕತೆ. ದೊಡ್ಡವರಿಗೆ ನಮ್ಮ ಭಾರತೀಯ ಸಂಸ್ಕೃತಿ. ಮಾನವತಾವಾದಿಗೆ ಅತ್ಯಂತ ದೊಡ್ಡ ಮಾನವೀಯ ಉಪಾಖ್ಯಾನ. ಗಾಂಧೀಜಿಯಂಥ ದಾರ್ಶನಿಕರ ಕಣ್ಣಿಗೆ ಅಹಿಂಸೆಯ ಸರಳ ವ್ಯಾಖ್ಯಾನ. ಮಕ್ಕಳ ಕಣ್ಣಿಗೆ ಅಮ್ಮನನ್ನು ಕಳೆದುಕೊಂಡ ಕರು ತಾನು, ಮುದ್ದು ಕಂದನನ್ನು ಮಡಿಲಲ್ಲಿ ಮಲಗಿಸಿಕೊಂಡು ಕತೆ ಕೇಳುವ ತಾಯಿಗೆ ತಾನೇ ಆ ಕಾಮಧೇನು. ಒಂದು ಕತೆ, ಕವಿತೆ ಅರ್ಥ ಪಡೆದುಕೊಳ್ಳುವುದು ಒಂದೊಂದು ಭಾವಲೋಕಕ್ಕೆ ಬಿದ್ದ ಮೇಲೆ.

ನಮ್ಮೊಬ್ಬೊಬ್ಬರದೂ ಒಂದೊಂದು ಭಾವಕೋಶ. ಈ ಭಾವಲೋಕ ಇನ್ನೊಬ್ಬನ ಭಾವಕೋಶಕ್ಕೆ ಗೊತ್ತೇ ಆಗದಷ್ಟು ವೈಯಕ್ತಿಕವಾದ್ದು. ಆ ವ್ಯಕ್ತಿ ಹುಟ್ಟಿದ್ದೆಲ್ಲಿ, ಹುಟ್ಟಿನಿಂದ ಒದಗಿಬಂದ ಆ ವ್ಯಕ್ತಿಯ ಪರಿಸರ, ಸಂಸ್ಕಾರ, ಆಚಾರ, ವಿಚಾರ, ಬೆಳವಣಿಗೆಯ ಹಂತದಲ್ಲಾದ ಪ್ರಭಾವ ಎಲ್ಲವೂ ಸೇರಿ ಆ ಭಾವಕೋಶ ರೂಪುಗೊಂಡಿರುತ್ತದೆ. ಇದರ ಜೊತೆ ಆ ವ್ಯಕ್ತಿಯ ಸಾಮರ್ಥ್ಯ, ಪ್ರತಿಭೆಗಳು ಸೇರಿಕೊಳ್ಳಬಹುದು. ಇದೆಲ್ಲದರ ಮೇಲೆ ಅರ್ಥವೆನ್ನುವುದು ಸವಾರಿ ಹೊರಡುತ್ತದೆ. ಸಾಮಾನ್ಯನಿಗೆ ಅದು ಕಲ್ಲು, ಶಿಲ್ಪಿಗೆ ಶಿಲೆ, ಕವಿಗೆ ಅಹಲ್ಯೆ, ಇಂಜಿನಿಯರನಿಗೆ ದುಮ್ಮಿಕ್ಕುವ ನೀರ ನಿಯಂತ್ರಿಸಬಲ್ಲ ಕಲೆ, ಭಕ್ತನಿಗೆ ದೇವ.  ಇದನ್ನೇ ಶ್ರೇಷ್ಠ ಜಪಾನಿ ನಿರ್ದೇಶಕ ಅಕಿರೋ ಕುರಾಸಾವಾ ‘ರಷೋಮನ್’ ಸಿನಿಮಾದಲ್ಲಿ ಹೇಳಿದ. ಸತ್ಯ ಎನ್ನುವುದು ‘ಇರುವುದಲ್ಲ’. ಅದು ‘ಅವರವರ ಗ್ರಹಿಕೆ’ಯಿಂದ ಮೂಡಿದ್ದು ಅಂತ ಹೇಳಿ ಜಗತ್ತಿಗೇ ಶ್ರೇಷ್ಠನಾದ. ಸತ್ಯ ಹೇಗೆ ಅವರವರ ಗ್ರಹಿಕೆಯಂತೆಯೋ ಅರ್ಥವೂ ಹಾಗೇ. ಅರ್ಥವೇ ಪರಮಾರ್ಥ. ಪರಮಾರ್ಥನಿಂದ ಪರಮಾತ್ಮ. ಮತ್ತೆ ಪರಮಾತ್ಮ ಅವರವರ ಭಾವಕ್ಕೆ, ಭಕ್ತಿಗೆ. ಏ ಸತ್, ವಿಪ್ರಾ ಬಹುದಾ ವದಂತಿ. ಅಂದರೆ ದೇವನೆಂಬ ಆರೋಪವಿರುವ ಶಕ್ತಿಯೊಂದು ಇರುತ್ತದೆ. ಅದನ್ನು ತಿಳಿದವರು ಅವರಿಗೆ ತೋಚಿದ ರೂಪದಲ್ಲಿ, ಭಾವದಲ್ಲಿ ಕಲ್ಪಿಸಿಕೊಳ್ಳುತ್ತಾ ಹೋಗುತ್ತಾರೆ. ಈ ಅರ್ಥವೂ ಹಾಗೇ, ಅವನಿಗೆ ಕಂಡದ್ದು ಅವನ ವ್ಯಾಖ್ಯಾನ, ನನಗೆ ಕಂಡಿದ್ದು ನನ್ನ ಆಖ್ಯಾನ.

ತುಂಬ ಹಿಂದೆ ಓದಿದ ಕವಿತೆ ಇದು.

 

 

 

 

 

 

1.
ಒಂದು ಕಾಡು
ಆ ಕಾಡಿನಲ್ಲೊಂದು ಹುಲಿ
ದಿನವೂ ರಾತ್ರಿ ಮಲಗುವಾಗ ಆ ಹುಲಿಗೆ
ಒಂದೇ ಚಿಂತೆ:
ಬೆಳಕಾದೊಡನೆ ಓಡಬೇಕು.
ಜೋರಾಗಿ… ಇನ್ನೂ… ಇನ್ನೂ,
ಮುಂದೆ ಓಡುತ್ತಿರುವ ಜಿಂಕೆಯನ್ನಟ್ಟಿ
ಹಿಡಿಯಬೇಕು
ಇಲ್ಲವೋ ನಾಳೆ ನನಗೆ ಹೊಟ್ಟೆಗಿಲ್ಲ…
ನಾ ಸತ್ತೆ
ದೇವರೇ ಕೈ ಬಿಡಬೇಡ, ಕಾಪಾಡು
ಓಡುವ ಶಕ್ತಿ ಕೊಡು.

2.
ಅದೇ ಕಾಡಿನ ಇನ್ನೊಂದು ಕಡೆ
ಒಂದು ಜಿಂಕೆ.
ದಿನವೂ ರಾತ್ರಿ ಮಲಗುವಾಗ ಆ ಜಿಂಕೆಗೂ
ಅದೇ ಚಿಂತೆ:
ಬೆಳಗಾದೊಡನೆ ಓಡಬೇಕು
ಜೋರಾಗಿ… ಇನ್ನೂ…ಇನ್ನೂ
ಹಿಂದಿಂದ ಬೆನ್ನಟ್ಟಿ ಬರುವ
ಹುಲಿಯ ಬೇಟೆಯಾಗದೇ ಇರಲು
ಓಡಲೇಬೇಕು.
ಇಲ್ಲವೋ ನಾ ಸತ್ತೆ
ದೇವರೇ ಕೈ ಬಿಡಬೇಡ, ಕಾಪಾಡು
ಓಡುವ ಶಕ್ತಿ ಕೊಡು.

3.
ಈಗ ಕಾಡು ಹೋಗಿ ನಗರವಾಗಿದೆ
ಹುಲಿ ಜಿಂಕೆಯ ಭಯ ಬೆಸೆದು
ಹುಟ್ಟಿ ಬಂದಂತೆ ಈಗ ಈ ಇಬ್ಬಂದಿ ಮನುಷ್ಯ- ಮೃಗ
ಅದಕ್ಕೂ ಚಿಂತೆ: ಓಡಬೇಕು
ಹಗಲೂ ರಾತ್ರಿ, ಹುಲಿ ಜಿಂಕೆಗಳೆರಡನ್ನೂ ಮೀರಿಸುವಂತೆ
ಜೋರಾಗಿ … ಇನ್ನೂ… ಇನ್ನೂ
ಹಿಂದಿನಿಂದ ಹುಲಿಯಂತೆ ಬೇಟೆ ಅರಸುತ್ತಾ
ಮುಂದಿನ ಜಿಂಕೆಯಂತೆ ಬೇಟೆಯಾಗದೇ ಇರಲು
ಬದುಕ ಪೈಪೋಟಿಯಲಿ ಓಡುತ್ತಲೇ ಇರಬೇಕು.
ಇಲ್ಲವೋ ನಾ ಸತ್ತೆ.
ದೇವರೇ ಕೈ ಬಿಡಬೇಡ ಕಾಪಾಡು
ಓಡುವ ಶಕ್ತಿ ಕೊಡು.

-ಇದು ಶಾ ಬಾಲುರಾವ್ ಬರೆದ ಓಡುವ ಕರ್ಮ: ಒಂದು ಹಳೆಯ ಹೊಸ ಕತೆ ಕವಿತೆ. ಇದನ್ನು ಓದಿದ್ಯಾವಾಗ ಅಂತ ಸ್ಪಷ್ಟವಾಗಿ ನೆನಪಿಲ್ಲ. ಕಾಲೇಜಿನ ಪ್ರಾರಂಭ ದಿನಗಳಲ್ಲಂತೂ ಹೌದು ಎಂಬ ನೆನಪಷ್ಟೇ ಇದೆ. ಆದರೆ ಆಹಾರದ ಹಿಂದೆ ಓಡುವ ಜಿಂಕೆ, ಜಿಂಕೆಯ ಹಿಂದೆ ಓಡುವ ಹುಲಿ, ಹುಲಿಯ ಹಿಂದೆ ಓಡುವ ನಾವು ಮುಂತಾದ ರೂಪಕದೊಳಗೆ ಅಚ್ಚೊತ್ತಿರುವ ಏನೇನೋ ಭಾವಗಳು ಮಾತ್ರ ಈಗಲೂ ನೆನಪಿದೆ. ಈ ಕವಿತೆಯನ್ನು ಓದುವ ಕಾಲಕ್ಕೆ ಬಹುಶಃ ಕವಿತೆಯೆಂದರೆ ಏನು ಅಂತಲೂ ಗೊತ್ತಿರಲಿಲ್ಲ. ಬೇಟೆಯ ಕಲ್ಪನೆಯಾಗಷ್ಟೇ, ಜೀವನಕ್ಕೆ ಸಂಬಂಧಪಟ್ಟದ್ದು ಎಂಬಷ್ಟೇ ಆಗ ಅರ್ಥವಾಗಿತ್ತು. ಈಗ ಅದನ್ನೇ ಮತ್ತೆ ಓದಿದಾಗ ವಯಸ್ಸಿನಿಂದಾಗಿ ಸ್ವಲ್ಪ ಮಾಗಿದ (ಅಥವಾ ಹಾಗೆ ಬೀಗಿದ) ಓದುಗನಾಗಿ ಸ್ಪಷ್ಟವಾಗಿ ಅರ್ಥವಾಗಿದೆ ಎಂದುಕೊಳ್ಳಬಹುದು ಈಗ. ಇದರಲ್ಲೇನಿದೆ, ಅರ್ಥವಾಗದೇ ಇರುವುದು ಎಂದುಕೊಳ್ಳಲೂಬಹುದು. ಆದರೆ ಇನ್ನು ಹತ್ತು ವರ್ಷಗಳ ನಂತರವೂ ಅದಕ್ಕೂ ಇಪ್ಪತ್ತು ವರ್ಷಗಳ ನಂತರವೂ ಈ ಕವಿತೆ ಇದೇ ರೀತಿ ಅರ್ಥ ಉಳಿಸಿಕೊಳ್ಳುತ್ತದಾದರೆ ಒಂದೋ ಅದು ಕೆಟ್ಟ ಕವಿತೆ ಆಗಿರಬಹುದು ಅಥವಾ ಅರ್ಥ ಮಾಡಿಕೊಳ್ಳುವವನ ಗ್ರಹಿಕೆಯೇ ಎಲ್ಲೋ ನಿಂತುಬಿಟ್ಟಿರಬಹುದು.

ಕವಿತೆಗಳು, ಒಳ್ಳೆಯ ಗದ್ಯ ಮತ್ತು ಚಿಂತನೆಗಳ ಗುಟ್ಟೇ ಇದು ಇರಬಹುದು. ಬಾಲ್ಯದಲ್ಲಿ ಯಾವುದಾದರೂ ಅತ್ಯುತ್ತಮ ಕವಿತೆ ಓದಿದರೆ ಭಾವುಕತೆ ಆವರಿಸಿಬಿಡುತ್ತಿತ್ತು. ಆದರೆ ಅದರ ಅರ್ಥವೇನು ಎಂದರೆ ಹೇಳುವುದಕ್ಕೆ ಖಂಡಿತ ಸಾಧ್ಯವಾಗುತ್ತಿರಲಿಲ್ಲ. ಗಂಟಲಲ್ಲಿ ಸಿಕ್ಕಿಕೊಂಡು ನೆನಪಾಗದ ಯಾವುದೋ ಹಾಡಿನಂತೆ ದಿನಗಟ್ಟಲೆ ವಾರಗಟ್ಟಲೆ ಅದರ ಅರ್ಥವೇನಿರಬಹುದೆಂದು ಆಲೋಚಿಸುತ್ತಾ ಒದ್ದಾಡುತ್ತಾ ಇರಬೇಕಾಗುತ್ತಿತ್ತು. ಅದೊಂದು ಪ್ರಸವ ವೇದನೆಯ ಒದ್ದಾಟ ಇರಬಹುದು, ತೇಗೊಂದು ಬರುವ ಮೊದಲು ಆಗುವ ಸಂಕಟ ಮತ್ತು ತೇಗು ಬಂದ ನಂತರ ಸಿಗುವ ನಿರಾಳತೆಯ ಸಮಾಗಮ ಇರಬಹುದು. ಈ ಎರಡರ ನಡುವಿನ ದಾರಿಯಲ್ಲಿ ಸಿಕ್ಕಿರುವ ಅಸ್ಪಷ್ಟ ಅರಿವೇ ನಿಜವಾದ ಖುಷಿ.

ಬಹುಶಃ ಶಾ ಬಾಲುರಾವ್ ಅವರ ಈ ಕವಿತೆಯನ್ನು ಆ ಕ್ಷಣಕ್ಕೆ ಯಾರಾದರೂ ಸಿಕ್ಕಿ ನಾಲ್ಕು ಸಾಲುಗಳಲ್ಲಿ, ನಾಲ್ಕು ಪುಟಗಳಲ್ಲಿ ವಿವರಿಸಿ, ಕಾವ್ಯ, ಛಂದಸ್ಸು, ಕವಿ ಸಮಯ, ರೂಪಕ ಮೊದಲಾದ ಈಡಿಯಂಗಳಲ್ಲಿ ಆ ಕವಿತೆಯನ್ನು ಯಾರಾದರೂ ಅರ್ಥದ ಮಟ್ಟಕ್ಕೆ ಇಳಿಸಿಬಿಟ್ಟಿದ್ದರೆ ಆ ಕವಿತೆ ಆ ದಿನವೇ ಸತ್ತು ಹೋಗುತ್ತಿತ್ತು ಅಥವಾ ಇಷ್ಟು ವರ್ಷಗಳ ಕಾಲ ಅಥವಾ ಇನ್ನೂ ಮುಂದೆ ಆ ಹುಲಿ, ಜಿಂಕೆ ಒಬ್ಬ ಕಾವ್ಯಾಸಕ್ತನೊಬ್ಬನನ್ನು ಹೀಗೆ ಬೆನ್ನತ್ತಿಕೊಂಡು ಬರುತ್ತಲೇ ಇರಲಿಲ್ಲ.

ಹಾಗೇ ಇನ್ನಷ್ಟು ಕವಿತೆಗಳು ಓದಿಗೆ ಸಿಕ್ಕಿವೆ, ನನ್ನ ಅರಿವಿನ ಶಕ್ತಿಯ ಮಟ್ಟಕ್ಕೆ ದಕ್ಕುತ್ತಿವೆ. ಅರ್ಥವಾಗದೇ ಇವೆ, ಇದೇ ಅದರ ಅರ್ಥವೇನೋ ಎಂದು ಬಲವಾದ ನಂಬಿಕೆ ಕೊಟ್ಟಿದೆ, ಛೇ ಇದಲ್ಲ ಅರ್ಥ ಎಂದು ದಿಕ್ಕು ತೋಚದೇ ಇದೆ. ಹಾಗಾಗಿ ಕವಿತೆಯ ಬಗ್ಗೆ ಬೆರಗು, ಅದರ ಸೊಬಗು ಇನ್ನೂ ಹೀಗೇ ಇರುತ್ತದೆ.

ಕವಿತೆಯನ್ನು ಅರ್ಥ ಮಾಡಿಸದೇ ಹೋದವರಿಗೆಲ್ಲಾ ಕೋಟಿ ಕೋಟಿ ಧನ್ಯವಾದಗಳು.

(ಮುಖಪುಟ ಚಿತ್ರ: ಕ್ಯಾಟ್ ಈಟಿಂಗ್ ಎ ಬರ್ಡ್, ಕಲಾವಿದ: ಕಲಾವಿದ ಪ್ಯಾಬ್ಲೋ ಪಿಕಾಸೋ, ಊರು/ದೇಶ: ಸ್ಪೇನ್)