ಈ ಕ್ರಿಕೆಟ್ ಹುಚ್ಚು ಬರೆ ಹುಡುಗರಿಗಲ್ಲ, ಹುಡುಗಿಯರಿಗೂ ಇದ್ದಿತು. ನಮ್ಮ ಮನೆಯಲ್ಲೂ ರಾಮೇಶ್ವರಿ, ಎದಿರು ಮನೆಯ ಸ್ವರ್ಣ, ವಿಜಯ, ಪುಷ್ಪರಿಗೂ ಕ್ರಿಕೆಟ್‌ನಲ್ಲಿ ಬಹಳ ಆಸಕ್ತಿ ಇದ್ದು ಅವರೂ ಕ್ರಿಕೆಟ್ ನೋಡಲು ಹೋಗುತ್ತಿದ್ದರು. 1953 ಜನವರಿಯಲ್ಲಿ ಅಖಿಲ ಭಾರತ ವಿಶ್ವವಿದ್ಯಾಲಯಗಳ ಕ್ರಿಕೆಟ್ ಪಂದ್ಯಾವಳಿ ಬೆಂಗಳೂರಿನಲ್ಲಿ ನಡೆಯಿತು. ಅದರ ಹೆಸರು ರೋಹಿಂಗಟನ್ ಬೇರಿಯಾ ಟ್ರೋಪಿ. ಅಂತಿಮ ಪಂದ್ಯ ಬೊಂಬಾಯಿ ಮತ್ತು ದೆಹಲಿ ನಡುವೆ. ಮುಂಬೈಯನ್ನು 287 ಕ್ಕೆ ಸೀಮಿತಗೊಳಿಸಿದ ನಂತರ ದೆಹಲಿಯನ್ನು 215 ಕ್ಕೆ ಕಿತ್ತುಹಾಕಲಾಯಿತು.
ಪಾಲಹಳ್ಳಿ ವಿಶ್ವನಾಥ್ ಬರೆದ ಹೀಗೊಂದು ಕುಟುಂಬದ ಕಥೆ ಪುಸ್ತಕ ಒಂದು ಅಧ್ಯಾಯ ನಿಮ್ಮ ಓದಿಗೆ
ಭಾರತೀಯ ಟೆಸ್ಟ್ ಆಟಗಾರರು ನಮ್ಮ ಮನೆಯಲ್ಲಿ? ಹೌದು, ಕೆಲವರು ಬಂದಿದ್ದರು! ಹೇಗೆ, ಯಾವಾಗ ಇತ್ಯಾದಿ ಪ್ರಶ್ನೆಗಳಿಗೆ ಉತ್ತರ ಕೊಡುವುದಕ್ಕೆ ಮುಂಚೆ ಒಂದು ಪುಟ್ಟ ಪೀಠಿಕೆ: ನಮ್ಮ ಮನೆಯಲ್ಲಿ ಕ್ರಿಕೆಟ್ ಹುಚ್ಚು ಮೊದಲು ಬಂದದ್ದು ನಮ್ಮ ಚಿಕ್ಕಣ್ಣ ಗುಂಡಣ್ಣನಿಗೆ. ಇದರ ಬಗ್ಗೆ ‘ನಮ್ಮ ಮನೆʼ ಪುಸ್ತಕದಿಂದ ಒಂದು ಪುಟ್ಟ ಸುದ್ದಿಯನ್ನು ತೋರಿಸಿದ್ದೆವು: ಕನಸಿನಲ್ಲೂ ಗುಂಡ ‘ಬ್ರಾಡ್ಮನ್ ಬ್ರಾಡ್ಮನ್’ ಎಂದು ಕಿರುಚುತ್ತಿರುತ್ತಾನೆ.”! ಹಾಗೇ ಮನೆಯಲ್ಲಿ ಎಲ್ಲರಿಗೂ ಕ್ರಿಕೆಟ್ಟಿನಲ್ಲಿ ಆಸಕ್ತಿ ಬೆಳೆಯಿತು. ನಾವೆಲ್ಲಾ ರಸ್ತೆಯಲ್ಲಿ, ಪಕ್ಕದ ಮೈದಾನದಲ್ಲಿ, ಟೆನ್ನಿಸ್ ಬಾಲ್ ಕ್ರಿಕೆಟ್ ಆಡಲು ಶುರುಮಾಡಿದ್ದೆವು.
ನಾನು ನೋಡಿದ ಮೊದಲ ದೊಡ್ಡ ಪಂದ್ಯ? ಬಹುಶಃ 1951-1952 (ಆಗ ನನ್ನ ವಯಸ್ಸು 9+) ರಣಜಿ ಟ್ರೋಫಿ ಪಂದ್ಯ. ಬಾಂಬೆ ಮತ್ತು ಮೈಸೂರಿನ ಮಧ್ಯೆ. ಪಂದ್ಯವು ಪೆರೇಡ್ ಮೈದಾನದಲ್ಲಿ ನಡೆಯಿತು (ನಂತರದ ಪಂದ್ಯಗಳನ್ನು ಸೆಂಟ್ರಲ್ ಕಾಲೇಜು ಮೈದಾನಕ್ಕೆ ಸ್ಥಳಾಂತರಿಸಲಾಯಿತು), ಕಡೆಯ ದಿನ ಮಧ್ಯಾಹ್ನ. ಮಳೆ ಬಂದು ನಿಂತಿತ್ತು. ಒಂದು ತುದಿಯಿಂದ ದತ್ತು ಫಡ್ಕರ್ (ವೇಗದ ಬೌಲರ್) ಮತ್ತು ಇನ್ನೊಂದು ತುದಿಯಿಂದ ವಿನೂ ಮಂಕಡ್ (ಸ್ಪಿನ್ನರ್) ಮೈಸೂರನ್ನು ಬಹಳ ಕಡಿಮೆ ಸ್ಕೋರ್‌ಗೆ (30 ಕ್ಕಿಂತ ಕಡಿಮೆ) ಔಟ್ ಮಾಡಿದ್ದರು.
ಬಾಂಬೆ ತಂಡವು ಬಸವನಗುಡಿಯ ಕೃಷ್ಣರಾವ್ ಪಾರ್ಕ್ ಎದುರಿನ ದೊಡ್ಡ ಮನೆಯಲ್ಲಿ (ಬಾಂಬೆ ಹೌಸ್ ಎಂದು ಕರೆಯುತ್ತಿದ್ದರು. ಇಂದಿನ ಮಾಧವರಾವ್ ವೃತ್ತದಲ್ಲಿ ಇದೆ. ಈಗ ಅದು ದೊಡ್ಡ ಅಪಾರ್ಟ್‌ಮೆಂಟು ಕಟ್ಟಡ) ಉಳಿದುಕೊಂಡಿದ್ದಾರೆ ಎಂಬ ಸುದ್ದಿ (ಗಾಳಿ?) ನಮ್ಮನ್ನು ತಲಪಿದ್ದು ನಾವೆಲ್ಲ ಮಕ್ಕಳು ಇಡೀ ದಿನ ಮನೆಯ ಎದುರಿನ ಫುಟ್‌ಪಾತ್‌ನಲ್ಲಿ ಗಂಟೆಗಟ್ಟಲೆ ಝಾಂಡಾ ಊರಿದ್ದೆವು. ಬಸವನಗುಡಿಯ ಬೇರೆ ಬೇರೆ ಕಡೆಯಿಂದಲೂ ಮಕ್ಕಳು ಬಂದಿದ್ದರು. ಬಹಳ ಪೈಪೋಟಿ! ಕೆಲವರು ಫಡ್ಕರನ್ನು ನೋಡಿದೆವು ಎಂದೂ ಕೆಲವರು ಮಂಕಡ್ ನನ್ನು ನೋಡಿದೆವು ಎಂದು ಜಂಭ ಕೊಚ್ಚಿಕೊಳ್ಳುತ್ತಿದ್ದರು.. ನಾನಂತೂ ಒಂದು ಕಿಟಕಿಯಲ್ಲಿ ಬ್ರಿಲ್ಕ್ರೀಮ್ ಹಾಕಿಕೊಂಡಿದ್ದ ವಿನೂ ಮಂಕಡನ ಚಹರೆಯನ್ನು ಗಮನಿಸಿದ್ದೆ ಎಂದು ಎಲ್ಲರಿಗೂ ಹೇಳಿಕೊಂಡುಬಂದು ಸಂತೋಷದಿಂದ ಇದ್ದೆ. (ಭಾರತೀಯ ಕ್ರಿಕಟ್ ಇತಿಹಾಸದಲ್ಲಿ ಆಲ್ ರೌಂಡರರ ಪಟ್ಟಿಯಲ್ಲಿ ಮಂಕಡ್ ಗೆ ಅಗ್ರ ಸ್ಥಾನ!) ನಮ್ಮ ಭಾಗ್ಯವನ್ನು ನೋಡಿ ಹೊಟ್ಟೆ ಉರಿದುಕೊಂಡಿದ್ದ ಕೆಲವು ಹುಡುಗರು ಬೊಂಬಾಯಿ ಆಟಗಾರರು ಆ ಮನೇಗೆ ಬರದೆ ಕಂಟೋನ್ಮೆಂಟಿನಲ್ಲೆ ಉಳಿದುಕೊಂಡರು ಎಂದು ಸುದ್ದಿ ಹಬ್ಬಿಸಲು ನೋಡಿದರು.
ಆ ದಿನಗಳಲ್ಲಿ ಬೆಂಗಳೂರಿನಲ್ಲಿ ಟೆಸ್ಟ್ ಪಂದ್ಯಗಳು ನಡೆಯುತ್ತಿರಲಿಲ್ಲ. ದಕ್ಷಿಣದಲ್ಲಿ ಆ ಸೌಭಾಗ್ಯ ಮದ್ರಾಸ್‌ಗೆ ಮೀಸಲಿಡಲಾಗಿತ್ತು. ಬೆಂಗಳೂರಿನಲ್ಲಿ ಅತಿಥಿಗಳ ವಿರುದ್ಧ ದಕ್ಷಿಣ ವಲಯದ ಪಂದ್ಯವನ್ನು ಅಥವಾ ಸಂಯೋಜಿತ ವಿಶ್ವವಿದ್ಯಾಲಯ ತಂಡದ ಪಂದ್ಯವನ್ನು ಆಯೋಜಿಸುತ್ತಿದ್ದರು. ನಾವು ಈ ‘ದೊಡ್ಡ’ ಪಂದ್ಯಗಳಲ್ಲದೆ ಅನೇಕ ರಣಜಿ ಟ್ರೋಫಿ ಇತ್ಯಾದಿ ಪಂದ್ಯಗಳಿಗೂ ಹೋಗುತ್ತಿದ್ದೆವು. ಒಂದು ಬಾರಿ ಮೈಸೂರು-ಮದ್ರಾಸ್ ಪಂದ್ಯವಿತ್ತು. ಮದರಾಸಿನ ದೊಡ್ಡ ಆಟಗಾರ ಸಿ.ಡಿ.ಗೋಪಿನಾಥ್ (ಆಮೇಲೆ ಅವರು ಟೆಸ್ಟುಗಳಲ್ಲಿ ಆಡಿದರು ಮತ್ತು ಕ್ರಿಕೆಟ್ ಆಡಳಿತ ವರ್ಗದಲ್ಲಿ ಬಹಳ ಮೇಲಿದ್ದರು) ಎಂಬುವವರು ಬಂದಿದ್ದರು. ಪಂದ್ಯದ ಹಿಂದಿನ ದಿನವೇ. ನಾನು ಮತ್ತು ಕಸಿನ್ ಬಾಬು ಸೆಂಟ್ರಲ್ ಕಾಲೇಜು ಕ್ರಿಕೆಟ್ ಮೈದಾನಕ್ಕೆ ಹೋಗಿದ್ದೆವು. ಅಲ್ಲಿ ಗೋಪೀನಾಥರನ್ನು ನೋಡಿದ ತಕ್ಷಣ ಅವರ ಬಳಿ ಹಸ್ತಾಕ್ಷರಕ್ಕೋಸ್ಕರ ಹೋದೆವು. ಅವರಿಗೆ ಸಹಿ ಮಾಡಲು ಬಾಬು ತನ್ನ ಪೆನ್ ಕೊಟ್ಟ; ಅದು ಬರೆಯದಿದ್ದಾಗ ಗೋಪಿನಾಥರು ಒಂದೆರಡು ಬಾರಿ ಕೈ ಕೊಡವಿದರು. ಆಗ ಸ್ವಲ್ಪ ಶಾಯಿ (ಇಂಕು) ಬಾಬುವಿನ ಕೈ ಮೆಲೆ ಬಿತ್ತು. ಅದಾದ 4-5 ದಿನಗಳು ಬಾಬು ತನ್ನ ಕೈ ತೊಳೆಯಲಿಲ್ಲ. ಕಡೆಗೆ ಮನೆಯವರು ಯಾರೋ ಬೈದು ಅವನ ಕೈ ತೊಳೆಸಿದರು.
ಕೆಲವರು ಫಡ್ಕರನ್ನು ನೋಡಿದೆವು ಎಂದೂ ಕೆಲವರು ಮಂಕಡ್ ನನ್ನು ನೋಡಿದೆವು ಎಂದು ಜಂಭ ಕೊಚ್ಚಿಕೊಳ್ಳುತ್ತಿದ್ದರು.. ನಾನಂತೂ ಒಂದು ಕಿಟಕಿಯಲ್ಲಿ ಬ್ರಿಲ್ಕ್ರೀಮ್ ಹಾಕಿಕೊಂಡಿದ್ದ ವಿನೂ ಮಂಕಡನ ಚಹರೆಯನ್ನು ಗಮನಿಸಿದ್ದೆ ಎಂದು ಎಲ್ಲರಿಗೂ ಹೇಳಿಕೊಂಡುಬಂದು ಸಂತೋಷದಿಂದ ಇದ್ದೆ.
ನಾನು ನೋಡಿದ ಮೊದಲ ಅಂತರರಾಷ್ಟ್ರೀಯ ಪಂದ್ಯ (1952/3) ಪಾಕಿಸ್ತಾನದ ವಿರುದ್ಧ ನಡೆಯಿತು: ಡಿಸೆಂಬರ್ 1952ರಲ್ಲಿ ನಡೆದ ಪಂದ್ಯಕ್ಕೆ ನಾಲ್ಕು ಆಣೆ ಕೊಟ್ಟು ನಾವು ಶಾಲಾಹುಡುಗರ ಆವರಣದಲ್ಲಿದ್ದೆವು. ಬೆಳಿಗ್ಗೆಯೇ ಮನೆಯಿಂದ ನಡೆದು ಅವೆನ್ಯೂ ರಸ್ತೆ ಮೂಲಕ ಮೈದಾನವನ್ನು ತಲಪಿದ್ದೆವು. ಎಲ್ಲೆಲ್ಲೂ ಜನ. ನಮಗೋ ಏನೋ ಉತ್ಸಾಹ. ಏನು ನೋಡಿದೆವೋ ಗೊತ್ತಿಲ್ಲ, ಅಂತೂ ಕೂಗಿದ್ದೂ ಕೂಗಿದ್ದು. ಮ್ಯಾಚಿಗೆ ಹೋಗಿ ಬರುವುದು ದೊಡ್ಡ ಅನುಭವ! ಆದರೂ ನಿಧಾನವಾಗಿ ಕ್ರಿಕೆಟ್ ನೋಡಿ ಆಸ್ವಾದಿಸಲು ಕಲಿತೆವು. ಒಳ್ಳೆಯ ಕವರ್ ಡ್ರೈವ್ ನೋಡುವುದು ಜೀವನದ ಮುಖ್ಯ ಘಳಿಗೆಯಲ್ಲಿ ಒಂದಲ್ಲವೇ! ಪಾಕೀಸ್ತಾನದಲ್ಲಿ ತಂಡದಲ್ಲಿ ಯುವ ಹನೀಫ್ ಬಹಳ ಹೆಸರು ಮಾಡಿದ್ದರು, ಇನ್ನೂ ಮಾಡುವವರಿದ್ದರು.. ತಂಡದ ನೇತೃತ್ವವನ್ನು ಅಬ್ದುಲ್ ಹಫೀಜ್ ಕರ್ದಾರ್ ವಹಿಸಿದ್ದರು. ನಮ್ಮ ಕಡೆ ಸುಂದರಮ್ ಮತ್ತು ಕೆನ್ನಿ ಚೆನ್ನಾಗಿ ಆಡಿದ ನೆನಪು. ಹೌದು, ಪಾಕೀಸ್ತಾನದ ಜೊತೆ ಯುದ್ಧವಾಗಿತ್ತು, ಆದರೆ ಇಂದಿನ ಮನೋಭಾವವಿರಲಿಲ್ಲ. ನಂತರದ ವರ್ಷಗಳಲ್ಲಿ ಇನ್ನು ಹೆಚ್ಚು ಪಂದ್ಯಗಳಿಗೆ ಹೋಗಲು ಶುರುಮಾಡಿದೆವು. ಬೇರೆ ಬೇರೆ ದೇಶದವರು! ಹಾಲ್, ಗಿಲ್ಕ್ರಿಸ್ಟ್, ಸೋಬರ್ಸ್, ಕನ್ಹೈ, ಬುಚರ್ (ವೆಸ್ಟ್ ಇಂಡೀಸ್‌ನಿಂದ), ಹಾರ್ವೆ, ಬೆನಾಡ್, ಒನಿಲ್ (ಆಸ್ಟ್ರೇಲಿಯಾದಿಂದ), ಗ್ರೇವನಿ, ಮೇ, ಸ್ಟ್ಯಾಥಮ್ (ಇಂಗ್ಲೆಂಡ್‌ನಿಂದ) ಆಡಿದ ಪಂದ್ಯಗಳನ್ನು ನೋಡಿದ ನೆನಪು. ಮೈಸೂರು ರಣಜಿ ತಂಡವು ಉತ್ತಮ ಕ್ರಿಕೆಟಿಗರನ್ನು ಹೊಂದಿತ್ತು ಆದರೆ ಆ ದಿನಗಳಲ್ಲಿ ಬೊಂಬಾಯಿಯವರಿಗೆ ಬಿಟ್ಟು ಬೇರೆಯವರಿಗೆ ಟೆಸ್ಟ್ ಅವಕಾಶಗಳು ಸಿಗುತ್ತಿರಲಿಲ್ಲ. ನೆನಪಿಗೆ ಬರುವ ಹೆಸರುಗಳು: ಸಲೂಸ್ ನಜರೆತ್, ಟಿ.ಡಿ.ಕೃಷ್ಣ, ಎಲ್.ಟಿ.ಸುಬ್ಬು, ಎಲ್.ಟಿ. ಆದಿಶೇಷ್,ಎ.ಎಸ್.ಕೃಷ್ಣಸ್ವಾಮಿ, ಕಸ್ತೂರಿರಂಗನ್, ಬಾಲಾಜಿ ಇತ್ಯಾದಿ. ನಗರದ ಎರಡು ಪ್ರಮುಖ ಕ್ರಿಕೆಟಿಂಗ್ ತಂಡಗಳು ಬೆಂಗಳೂರು ಕ್ರಿಕೆಟಿಗರು ಮತ್ತು ಸಿಟಿ ಕ್ರಿಕೆಟಿಗರು.
ಈ ಕ್ರಿಕೆಟ್ ಹುಚ್ಚು ಬರೆ ಹುಡುಗರಿಗಲ್ಲ, ಹುಡುಗಿಯರಿಗೂ ಇದ್ದಿತು. ನಮ್ಮ ಮನೆಯಲ್ಲೂ ರಾಮೇಶ್ವರಿ, ಎದಿರು ಮನೆಯ ಸ್ವರ್ಣ, ವಿಜಯ, ಪುಷ್ಪರಿಗೂ ಕ್ರಿಕೆಟ್‌ನಲ್ಲಿ ಬಹಳ ಆಸಕ್ತಿ ಇದ್ದು ಅವರೂ ಕ್ರಿಕೆಟ್ ನೋಡಲು ಹೋಗುತ್ತಿದ್ದರು. 1953 ಜನವರಿಯಲ್ಲಿ ಅಖಿಲ ಭಾರತ ವಿಶ್ವವಿದ್ಯಾಲಯಗಳ ಕ್ರಿಕೆಟ್ ಪಂದ್ಯಾವಳಿ ಬೆ0ಗಳೂರಿನಲ್ಲಿ ನಡೆಯಿತು. ಅದರ ಹೆಸರು ರೋಹಿಂಗಟನ್ ಬೇರಿಯಾ ಟ್ರೋಪಿ. ಅಂತಿಮ ಪಂದ್ಯ ಬೊಂಬಾಯಿ ಮತ್ತು ದೆಹಲಿ ಮಧ್ಯೆ. ಮುಂಬೈಯನ್ನು 287 ಕ್ಕೆ ಸೀಮಿತಗೊಳಿಸಿದ ನಂತರ ದೆಹಲಿಯನ್ನು 215 ಕ್ಕೆ ಕಿತ್ತುಹಾಕಲಾಯಿತು. ಅದು ಏನೇ ಇರಲಿ, ಮ್ಯಾಚು ನೋಡಲು ಹೋದ ಸೋದರಿ ರಾಮೇಶ್ವರಿ ಮತ್ತು ಅವಳ ಸ್ನೇಹಿತರು ಕ್ರಿಕೆಟಿಗರನ್ನು ಮನೆಗೆ ರಾತ್ರಿ ಭೋಜನಕ್ಕೆ ಕರೆದರು. ಅವರು ಬಂದರೇ? ನಾವು ಹುಡುಗರು ಅಥವಾ ಗುಂಡಣ್ಣ ಕರೆದಿದ್ದರೆ ಅವರು ಪ್ರಾಯಃ ಬರುತ್ತಿರಲಿಲ್ಲ, ಅಲ್ಲವೆ!
ಹುಡುಗಿಯರು ಕರೆದರು, ಅಂತು ಅವರು ಖುಷಿಯಿಂದ ಬಂದರು, ಉಂಡರು, ಹೋದರು! ಬಂದವರಲ್ಲಿ ಕೆಲವರ ಹೆಸರು ಚೆನ್ನಾಗಿ ನೆನಪಿನಲ್ಲಿದೆ. ಜಿ.ಆರ್. ಸುಂದರಮ್(ವೇಗದ ಬೌಲರ್), ನರೇಂದ್ರ ತಮ್ಹಾನೆ (ಭಾರತಕ್ಕೆ ವಿಕೆಟ್ ಕೀಪರ್), ಆರ್.ಬಿ.ಕೆನ್ನಿ (99 ಕ್ಕೆ ಸ್ವಲ್ಪ ಹೆಚ್ಚು ಬಾರಿಯೇ ಔ ಟ್ ಆಗುತ್ತಿದ್ದರು).
ಸಿ.ಟಿ.ಪಟಂಕರ್, ನಾರಿ ಕಂಟ್ರಾಕ್ಟರ್ (ಒಳ್ಳೆಯ ಆಟಗಾರ; ಆದರೆ ವೆಸ್ಟ್ ಇಂಡೀಸಿನಲ್ಲಿ ತಲೆಗೆ ಪೆಟ್ಟು ಬಿದ್ದು ಆಟ ನಿಲ್ಲಿಸಬೇಕಾಯಿತು). ಹೀಗೆ ಬೊಂಬಾಯಿ ತಂಡದಲ್ಲಿ ಮುಂದೆ ಟೆಸ್ಟ್ ಪಂದ್ಯಗಳಲ್ಲಿ ಆಡುವವರು ಹಲವಾರು ಇದ್ದರು. ಈ ಭೋಜನಕ್ಕೆ ಬಂದವರಲ್ಲಿ ದೆಹಲಿಯ ಎನ್.ಕೆ.ರಾಮನ್ ಮತ್ತು ಮೈಸೂರು ತಂಡದಿಂದ ಎ.ಎಸ್.ಕೃಷ್ಣಸ್ವಾಮಿಯೂ ಇದ್ದರು. ನಾವು ಚಿಕ್ಕ ಹುಡುಗರು ದೂರದಿಂದಲೇ ನೋಡುತ್ತಿದ್ದೆವು. ಹೆಚ್ಚು ವಿವರಗಳು ನೆನಪಿಲ್ಲ! ಈ ಪಂದ್ಯವನ್ನು ಕಳೆದ ದಶಕದಲ್ಲಿ ನಾರಿ ಕಂಟ್ರಾಕ್ಟರ್ ನೆನಪು ಮಾಡಿಕೊಂಡಿದ್ದರು. “ಇನ್ನಿಂಗ್ಸ್‌ನ ಆರಂಭಿಕ ಓವರ್‌ನಲ್ಲಿ ಐದು ಕ್ಯಾಚ್‌ಗಳನ್ನು ಬಿಟ್ಟೆವು ಎಂದು ಹೇಳಿದ್ದರು. ಸುಂದರಮ್ (ಮಂಗಳೂರಿನವರು) ಆಗಾಗ್ಗೆ ಮನೆಗೆ ಬರುತ್ತಿದ್ದರು. ದೆಹಲಿಯ ಎನ್.ಕೆ..ರಾಮನ್ ಎಚ್.ಎಮ್.ಟಿ ಸೇರಿದ್ದು ಅವರೂ ಆಗಾಗ್ಗೆ ಮನೆಗೆ ಬರುತ್ತಿದ್ದರು. ಮುಂದೆ ನಾನೂ ಎರಡು ‘ಕಾಲೇಜು’ ಪಂದ್ಯಗಳನ್ನು ಸೆಂಟ್ರಲ್ ಕಾಲೇಜು ಮೈದಾನದಲ್ಲಿ ಆಡಿದ್ದೆ. ನನ್ನ ಬಹಳ ಹತ್ತಿರದ ಸ್ನೇಹಿತರಲ್ಲೇ ಇಬ್ಬರು ರಣಜಿ ಟ್ರೋಫಿ ಆಡಿದರು.
ಬೆಂಗಳೂರಿನವರಾದ ಪಾಲಹಳ್ಳಿ ವಿಶ್ವನಾಥ್ ಭೌತಶಾಸ್ತ್ರ ಪ್ರಾಧ್ಯಾಪಕರು. ಕ್ಯಾಲಿಫೋರ್ನಿಯಾ, ಮೇರಿಲ್ಯಾಂಡ್ ವಿಶ್ವವಿದ್ಯಾಲಯಗಳಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿದ್ದರು. ಅಮೆರಿಕದ ಫರ್ಮಿಲ್ಯಾಬ್, ಲಾಸ್ ಅಲಮೋಸ್ ಲ್ಯಾಬ್ , ಗೊಡಾರ್ಡ್ ಸ್ಪೇಸ್ ಸೆಂಟರ್ ಗಳಲ್ಲಿ ಅವರು ಸಂಶೋಧನೆಗಳನ್ನು ಮಾಡಿದ್ದಾರೆ. ವಿಜ್ಞಾನ ಬರಹಗಾರರಾದ ಅವರ ಕೃತಿಗಳು, ಆಕಾಶದಲ್ಲೊಂದು ಮನೆ, ಕಣಕಣ ದೇವಕಣ, ಭೂಮಿಯಿಂದ ಬಾನಿನತ್ತ, ಪಾಪ ಪ್ಲೂಟೊ.