ಹೆಮಿಂಗ್ವೆ ತಮ್ಮ ಪ್ಯಾರಿಸ್ ದಿನಗಳ ಕುರಿತು ಬರೆದ ‘ಅ ಮೂವೆಬಲ್ ಫೀಸ್ಟ್’ ಪ್ರಕಟವಾಗಿದ್ದು ಅವರು ತೀರಿಕೊಂಡ ಬಳಿಕ, 1964ರಲ್ಲಿ. ಆದರೆ ಈ ಪುಸ್ತಕಕ್ಕೆ ಬೇಕಾದ ಸಾಮಗ್ರಿಯನ್ನು ಡೈರಿ ರೂಪದಲ್ಲಿ ಅವರು ಬರೆದಿದ್ದು 1920ರ ಆಸುಪಾಸಿನಲ್ಲಿ. ಅಂದರೆ ತಮ್ಮ ಪ್ರಥಮ ಕಾದಂಬರಿ ‘ದಿ ಸನ್ ಆಲ್ಸೋ ರೈಸಸ್’ಗಿಂಥ ಮೊದಲು. ಅವರು ಸಾವಿಗೆ ಶರಣಾಗಬೇಕೆಂದು ನಿರ್ಧರಿಸಿದ ಸಮಯದಲ್ಲಿ ಈ ಪುಸ್ತಕವನ್ನು ಇನ್ನೊಮ್ಮೆ ತಿದ್ದುತ್ತಿದ್ದರು ಎಂಬುದು ಇಲ್ಲಿನ ಬರಹಗಳ ಪ್ರಾಮುಖ್ಯತೆಯನ್ನು ಸಾರುತ್ತವೆ. ಅರ್ನೆಸ್ಟ್ ಹೆಮಿಂಗ್ವೆ ಪುಸ್ತಕದ ಕುರಿತು ಕಾವ್ಯಾ ಕಡಮೆ ಬರೆದ ವಿಶ್ಲೇಷಣೆ ಇಲ್ಲಿದೆ.

 

ಅರ್ನೆಸ್ಟ್ ಹೆಮಿಂಗ್ವೆ ಜಗತ್ತಿನ ಸಾಹಿತ್ಯ ನಕಾಶೆಯಲ್ಲಿ ಬಹು ಸೆಲೆಬ್ರೇಟೆಡ್ ಹೆಸರು. ಅವರು ಬರವಣಿಗೆಯ ದೊಂದಿಯೊಂದನ್ನೇ ಹೃದಯದೊಳಗಿಟ್ಟುಕೊಂಡು ಪ್ರಪಂಚದಾದ್ಯಂತ ಸಂಚರಿಸಿದವರು. ಮೊದಲು ಪತ್ರಕರ್ತ, ನಂತರ ಕಥೆಗಾರ- ಕಾದಂಬರಿಕಾರರಾಗಿ ಸಂವೇದನೆ ಚುರುಕುಗೊಳಿಸುವಲ್ಲೆಲ್ಲ ಪಾದ ಬೆಳೆಸಿದವರು. “Never go on trips with anyone you do not love” ಎಂಬ ಅನುಭವ ದ್ರವ್ಯವನ್ನು ಲೋಕಕ್ಕೆ ಉಣಬಡಿಸಿದವರು.

“ಯೌವನದಲ್ಲಿ ಒಂದಿಷ್ಟು ಕಾಲ ಪ್ಯಾರಿಸ್ ನಗರದಲ್ಲಿ ಬದುಕುವ ಸೌಭಾಗ್ಯ ದೊರಕಿದರೆ, ನಂತರ ಎಲ್ಲಿಗೇ ಹೋದರೂ ಆ ಊರಿನ ತುಣುಕೊಂದು ನಿಮ್ಮಲ್ಲಿ ಉಳಿದೇ ಹೋಗುತ್ತದೆ” ಎಂದು ಪ್ಯಾರಿಸ್ ನಗರವನ್ನು ಮೆಚ್ಚಿ ಬರೆದವರು ಅವರು. ಹೆಮಿಂಗ್ವೆ ತಮ್ಮ ಪ್ಯಾರಿಸ್ ದಿನಗಳ ಕುರಿತು ಬರೆದ ‘ಅ ಮೂವೆಬಲ್ ಫೀಸ್ಟ್’ ಪ್ರಕಟವಾಗಿದ್ದು ಅವರು ತೀರಿಕೊಂಡ ಬಳಿಕ, 1964ರಲ್ಲಿ. ಆದರೆ ಈ ಪುಸ್ತಕಕ್ಕೆ ಬೇಕಾದ ಸಾಮಗ್ರಿಯನ್ನು ಡೈರಿ ರೂಪದಲ್ಲಿ ಅವರು ಬರೆದಿದ್ದು 1920ರ ಆಸುಪಾಸಿನಲ್ಲಿ. ಅಂದರೆ ತಮ್ಮ ಪ್ರಥಮ ಕಾದಂಬರಿ ‘ದಿ ಸನ್ ಆಲ್ಸೋ ರೈಸಸ್’ಗಿಂಥ ಮೊದಲು. ಅವರು ಸಾವಿಗೆ ಶರಣಾಗಬೇಕೆಂದು ನಿರ್ಧರಿಸಿದ ಸಮಯದಲ್ಲಿ ಈ ಪುಸ್ತಕವನ್ನು ಇನ್ನೊಮ್ಮೆ ತಿದ್ದುತ್ತಿದ್ದರು ಎಂಬುದು ಇಲ್ಲಿನ ಬರಹಗಳ ಪ್ರಾಮುಖ್ಯತೆಯನ್ನು ಸಾರುತ್ತವೆ. ಅವರು “This book contains material from the remises of my memory and of my heart. Even if the one has been tampered with and the other does not exist” ಎಂದು ಕಲುಕಿ ನುಡಿದಿದ್ದು ಈ ಪುಸ್ತಕದ್ದೇ ಮುನ್ನುಡಿಯಲ್ಲಿ.

ಒಂದನೆಯ ಮಹಾಯುದ್ಧ ಆಗಷ್ಟೇ ಮುಗಿದ ಸಮಯವದು. ಅಮೆರಿಕದ ಪತ್ರಿಕೆಯೊಂದಕ್ಕೆ ವಿದೇಶಿ ವರದಿಗಾರರಾಗಿ ಹೆಮಿಂಗ್ವೆ ಪ್ಯಾರಿಸ್ಸಿಗೆ ತೆರಳುತ್ತಾರೆ. ಅವರ ಮೊದಲ ಹೆಂಡತಿ ಹ್ಯಾಡ್ಲಿ, ಪುಟ್ಟ ಮಗು ‘ಬಂಬಿ’ ಕೂಡ ಅವರ ಜೊತೆಯಾಗುತ್ತಾರೆ. ಯುದ್ಧದ ಮೊದಲು ಮುಖ್ಯವಾಗಿದ್ದ ಸಂಗತಿಗಳೆಲ್ಲ ಅರ್ಥ ಕಳೆದುಕೊಂಡಿದ್ದ ಆ ಸಮಯದಲ್ಲಿ ಯೂರೋಪಿನ ಯುವಜನರ ಪ್ರಜ್ಞೆ, ಮನಸ್ಸುಗಳು ಹೇಗೆ ಆಳವಾಗಿ ಘಾಸಿಗೊಂಡಿದ್ದವು ಎಂಬ ಕುರಿತೂ ಹೆಮಿಂಗ್ವೆ ಬರೆಯುತ್ತಾರೆ. ಹಾಗೆಯೇ ಯುದ್ಧದ ಜೊತೆಗೆ ಸಂಕಷ್ಟಗಳೆಲ್ಲ ಮುಗಿದುಹೋಗಿ, ಒಂದು ಬಗೆಯ ನಿರಾಳತೆ- ಉತ್ಸಾಹಗಳೂ ಎಲ್ಲರ ಮಾತು- ನಡೆಗಳಲ್ಲಿ ಎದ್ದು ಕಾಣುತ್ತಿದ್ದವು ಎನ್ನುತ್ತಾರೆ. ಪ್ಯಾರಿಸ್ಸಿನಲ್ಲಿ ಆ ಕಾಲದ ಸಾಹಿತ್ಯ ದಿಗ್ಗಜರೆಲ್ಲರ ಸಮೂಹವೇ ನೆರೆದಿದೆ. ಅಮೆರಿಕನ್ನರ ಆರ್ಥಿಕ ಪರಿಸ್ಥಿತಿ ನಿಧಾನವಾಗಿ ಸುಧಾರಿಸುತ್ತಿದ್ದ ದಿನಗಳು ಅವಾಗಿದ್ದರಿಂದ ಕಲೆ- ಸಾಹಿತ್ಯದಲ್ಲಿ ಆಸಕ್ತಿ- ಪರಿಶ್ರಮಗಳಿದ್ದ ಯುವಜನರೆಲ್ಲ ಮೆಲ್ಲಗೆ ಪ್ಯಾರಿಸ್ಸಿನ ಸ್ವಚ್ಛಂದಕ್ಕೆ ಮನಸೋತು ಆಗಮಿಸುತ್ತಿದ್ದಾರೆ.

ಪ್ಯಾರಿಸ್ಸಿನ ಕೆಫೆಗಳು, ಬೇಕರಿಗಳು, ಬಾರ್‌ಗಳು, ಕುದುರೆ ರೇಸ್‌ಗಳು, ಕಲಾ ಮ್ಯೂಸಿಯಂಗಳ ಜೊತೆಗೆ ಆ ಊರಿನ ಹವೆಯಲ್ಲೇ ಬೆರೆತುಹೋದ ಮುಕ್ತತೆಗೆ ಮಾರು ಹೋಗುತ್ತಾರೆ ಹೆಮಿಂಗ್ವೆ. ಅಂದಿನ ಪ್ರಮುಖ ಸಾಹಿತಿಗಳಾದ ಗರ್ಟುಡ್ ಸ್ಟೈನ್, ಎಜ್ರಾ ಪೌಂಡ್, ಎಫ್ ಸ್ಕಾಟ್ ಫಿಡ್ಜರಾಲ್ಡ್, ಜೇಮ್ಸ್ ಜಾಯ್ಸ್ ಮುಂತಾದವರ ಒಡನಾಟದ ವಿವರಗಳು ಇಲ್ಲಿವೆ. ಪರೋಪಕಾರಿಯಾದ ಎಜ್ರಾ ಪೌಂಡ್ ಆಗಷ್ಟೇ ಬರೆಯಲು ಶುರುಮಾಡಿದ ಪ್ರತಿಭಾವಂತ ಕವಿ ಟಿ ಎಸ್ ಎಲಿಯಟ್‌ರಿಗಾಗಿ ಚಂದಾ ಎತ್ತಲು ಪ್ರಯತ್ನಿಸಿದ ಸ್ವಾರಸ್ಯಕರ ಘಟನೆ ಈ ಪುಸ್ತಕದಲ್ಲಿ ದಾಖಲಾಗಿದೆ. ಬ್ಯಾಂಕ್ ಉದ್ಯೋಗಿಯಾದ ಟಿ ಎಸ್ ಎಲಿಯಟ್, ತಮ್ಮ ನೌಕರಿ ಬಿಟ್ಟು ಪೂರ್ಣಾವಧಿ ಕವಿಯಾಗುವಂತೆ ಮಾಡಬೇಕು ಎನ್ನುವುದು ಸ್ವತಃ ಕವಿಯಾದ ಎಜ್ರಾ ಪೌಂಡ್‌ರ ಮನದಾಸೆ. ಆದರೆ ಎಲಿಯಟ್ ತಮ್ಮ ಪ್ರಥಮ ಸಂಕಲನ ‘ದಿ ವೇಸ್ಟ್ ಲ್ಯಾಂಡ್’ ಪ್ರಕಟಿಸಿದ ಮೇಲೆ ಅವರಿಗಾಗಿ ಯಾರೂ ಚಂದಾ ಎತ್ತಬೇಕಾಗಲಿಲ್ಲ, ದಿನ ಬೆಳಗಾಗುವುದರೊಳಗೆ ಸಾಹಿತ್ಯ ಲೋಕ ಅವರನ್ನು ತೆರೆದ ಬಾಹುಗಳಿಂದ ಅಪ್ಪಿ ಶಿಖರಕ್ಕೇರಿಸಿತು ಎಂಬ ಸಂಗತಿಯನ್ನು ನೆನಪಿಸಿಕೊಳ್ಳುತ್ತಾರೆ.

ಬರಹಗಾರ್ತಿ ಗರ್ಟುಡ್ ಸ್ಟೈನ್ ಎಂದರೆ ಹೆಮಿಂಗ್ವೆಯವರಿಗೆ ಬಹಳ ಅಭಿಮಾನ. ಪ್ಯಾರಿಸ್ಸಿಗೆ ಮೊದಲು ಬಂದಾಗ ಹಿರಿಯಕ್ಕನ ಹಾಗೆ ನಿಂತು ತನ್ನನ್ನೂ ತನ್ನ ಕುಟುಂಬವನ್ನೂ ಈ ಅಜ್ಞಾತ ಊರಿನೊಳಗೆ ಹೇಗೆ ಬರಮಾಡಿಕೊಂಡರು ಎಂಬುದನ್ನು ಅಕರಾಸ್ಥೆಯಿಂದ ಬರೆಯುತ್ತಾರೆ. “ನೀವೆಲ್ಲ, ಯುದ್ಧದ ಆಸುಪಾಸಿನ ತರುಣರು. ನಿಮಗೆ ಯಾವುದರಲ್ಲೂ ನಂಬಿಕೆಯಿಲ್ಲ. ಕುಡಿತದ ಚಟಕ್ಕೆ ಬಿದ್ದು ಹಾಳಾಗುತ್ತಿದ್ದೀರ. ನನ್ನ ಪ್ರಕಾರ ನಿಮ್ಮದು ಒಂದು lost ಜನರೇಷನ್” ಎನ್ನುತ್ತಾರೆ ಹೆಮಿಂಗ್ವೆಯನ್ನುದ್ದೇಶಿಸಿ ಸ್ಟೈನ್. “ವಿವಿಧ ಕಲಾವಿದರ ಕಲಾ ಪ್ರದರ್ಶನಗಳಿಗೆ ಹೋಗು. ಇತ್ತೀಚಿನ ಯುವಕರು ಎಷ್ಟು ಸೊಗಸಾಗಿ ಕಲಾಪ್ರಯೋಗಗಳಿಗೆ ತೆರೆದುಕೊಂಡಿದ್ದಾರೆ. ಈಗಲೇ ಕೊಂಡು ಇಟ್ಟುಕೊಂಡರೆ ಅದು ಒಳ್ಳೆಯ ಇನ್‌ವೆಸ್ಟ್‌ಮೆಂಟೆ. ಸ್ವಲ್ಪ ಹೊಸ ಬಟ್ಟೆ ಕೊಂಡುಕೊಳ್ಳುವುದನ್ನೋ, ಇತರ ಮುಖ್ಯವಲ್ಲದ ಐಶಾರಾಮವನ್ನೋ ತ್ಯಾಗ ಮಾಡಿದರೆ ಕಲೆಯನ್ನು ಕೊಳ್ಳಬಹುದು” ಎನ್ನುತ್ತಾರೆ.

ಹೆಮಿಂಗ್ವೆ ಸ್ಟೈನ್‌ರ ಹತ್ತಿರ ಮಾತನಾಡುವಾಗ, ಅವರ ಪತ್ನಿ ಹ್ಯಾಡ್ಲಿ ಸ್ಟೈನ್‌ರ ಸಂಗಾತಿ ಆಲಿಸ್ ಬಳಿ ಒಳಕೋಣೆಯಲ್ಲಿ ಹರಟುತ್ತಾರೆ. ತನ್ನನ್ನು ‘ದಿ ವೈಫ್’ ಎಂದು ಉದಾಸೀನ ಮಾಡುತ್ತಾರೆ ಎಂದು ಹ್ಯಾಡ್ಲಿಗೆ ಸ್ಟೈನ್‌ರ ಬಗ್ಗೆ ಕಂಡೂ ಕಾಣದಂತೆ ಮುನಿಸು. ಹೀಗಿದ್ದಾಗ ಒಮ್ಮೆ ಅನಿರೀಕ್ಷಿತವಾಗಿ ಸ್ಟೈನ್‌ರ ಮನೆಗೆ ಹೊಕ್ಕಾಗ ಒಳಕೋಣೆಯಲ್ಲಿ ಅವರು ಯಾರ ಬಳಿಯೋ ಅತ್ಯಂತ ದೀನರಾಗಿ ಬೇಡಿಕೊಳ್ಳುತ್ತಿರುವುದನ್ನು ಹೆಮಿಂಗ್ವೆ ಕೇಳಿಸಿಕೊಂಡುಬಿಡುತ್ತಾರೆ. ಈ ಘಟನೆ, ಯಾಕೋ ಗೊತ್ತಿಲ್ಲ, ಸ್ಟೈನ್‌ರ ಮೇಲಿನ ಆದರವನ್ನು ಕಡಿಮೆ ಮಾಡುತ್ತದೆ. “ಆ ನಂತರವೂ ಸ್ಟೈನ್‌ರನ್ನು ಬಹಳ ಸರ್ತಿ ಭೇಟಿ ಮಾಡಿದ್ದೇನೆ ನಾನು. ಆದರೆ ಅದೇಕೋ ಮೊದಲಿನ ಸ್ನೇಹ- ಗೌರವಗಳಿಂದ ಅವರನ್ನು ಕಾಣುವುದು ನನಗೆ ಸಾಧ್ಯವಾಗದೇ ಹೋಯಿತು” ಎನ್ನುತ್ತಾರೆ.

ತಮ್ಮನ್ನು ಟಾಟಿ ಎಂದು ಕರೆಯುತ್ತ ಮುದ್ದುಗರೆಯುತ್ತಿದ್ದ ಮೊದಲ ಹೆಂಡತಿ ಹ್ಯಾಡ್ಲಿ ಕುರಿತು ಈ ಕೃತಿಯಲ್ಲಿ ಬಹಳ ಆಪ್ತವಾದ ವಿವರಗಳಿವೆ. ಒಮ್ಮೆ ಉದ್ದ ಕೂದಲು ಬಿಡಬೇಕೆಂದು ಹೆಮಿಂಗ್ವೆಯವರಿಗೆ ಆಸೆಯಾಗುತ್ತದೆ. ಹ್ಯಾಡ್ಲಿ “ಹಾಗಾದ್ರೆ ಟಾಟಿ, ಈಗ ಇಬ್ಬರೂ ಒಂದೇ ಉದ್ದಕ್ಕೆ ಕೂದಲನ್ನು ಕತ್ತರಿಸಿಕೊಂಡುಬಿಡೋಣ. ನಂತರ ಇಬ್ಬರ ಕೂದಲೂ ಒಂದೇ ಬಗೆಯಲ್ಲಿ ಬೆಳೆಯುತ್ತದೆ. ನಮ್ಮಿಬ್ಬರದೂ ಒಂದೇ ಕೇಶವಿನ್ಯಾಸವಿದ್ದರೆ ಎಷ್ಟು ಚೆನ್ನ” ಅಂತ ಮೆಚ್ಚಿ ನುಡಿಯುತ್ತಾರೆ. ಹೆಮಿಂಗ್ವೆ ಎರಡನೆಯ ಹೆಂಡತಿ ಪೌಲೀನ್‌ರನ್ನು ಭೇಟಿಯಾಗಿದ್ದು, ಪ್ರೇಮದಲ್ಲಿ ಬಿದ್ದು ಅವರನ್ನು ವರಿಸಲು ನಿಶ್ಚಯಿಸಿದ್ದು, ಹ್ಯಾಡ್ಲಿಗೆ ವಿಚ್ಛೇದನ ನೀಡಿದ್ದು ಎಲ್ಲ ಪ್ಯಾರಿಸ್ಸಿನಲ್ಲೇ. ಹ್ಯಾಡ್ಲಿಗೆ ನೋವು- ಅವಮಾನವನ್ನುಂಟು ಮಾಡಿದೆ ಅಂತ ಹೆಮಿಂಗ್ವೆ ಆಳವಾಗಿ ಪಶ್ಚಾತಾಪ ಪಟ್ಟು ಬರೆದ ಸಾಲುಗಳಿವೆ. ಕೊನೆಯ ಅಧ್ಯಾಯದಲ್ಲಿ ಈ ಪುಸ್ತಕಕ್ಕೆ ಹ್ಯಾಡ್ಲಿಯೇ ನಾಯಕಿ ಅಂತ ಅನುಮಾನವಿಲ್ಲದೇ ನುಡಿಯುತ್ತಾರೆ. ಇಬ್ಬರೂ ಜೊತೆಯಾಗಿ ಪ್ಯಾರಿಸ್ಸಿನ ಬೀದಿಗಳಲ್ಲಿ ಸುತ್ತಿದ್ದು, ರೇಸ್ ಕೋರ್ಸ್‌ಗಳಿಗೆ ಹೋಗಿದ್ದು, ಸ್ನೇಹಿತರ ವಲಯ ಹಿಗ್ಗಿಸಿಕೊಂಡಿದ್ದು, ಅವರ ಮೊದಲ ಕಾದಂಬರಿ ‘ದ ಸನ್ ಆಲ್ಸೋ ರೈಸಸ್’ ಬರೆಯುವಾಗಿನ ಅನುಭವಗಳು, ಮೊದಲ ಡ್ರಾಫ್ಟಿಗೆ ಸ್ನೇಹಿತರಿಂದ ಬಂದ ಪ್ರತಿಕ್ರಿಯೆಗಳು ಎಲ್ಲದರ ಬಗ್ಗೆ ಗಾಢವಾಗಿ ಬರೆಯುತ್ತಾರೆ.

ಯುದ್ಧದ ಮೊದಲು ಮುಖ್ಯವಾಗಿದ್ದ ಸಂಗತಿಗಳೆಲ್ಲ ಅರ್ಥ ಕಳೆದುಕೊಂಡಿದ್ದ ಆ ಸಮಯದಲ್ಲಿ ಯೂರೋಪಿನ ಯುವಜನರ ಪ್ರಜ್ಞೆ, ಮನಸ್ಸುಗಳು ಹೇಗೆ ಆಳವಾಗಿ ಘಾಸಿಗೊಂಡಿದ್ದವು ಎಂಬ ಕುರಿತೂ ಹೆಮಿಂಗ್ವೆ ಬರೆಯುತ್ತಾರೆ.

ಒಮ್ಮೆ ಮಾತ್ರ ಕೆಲಸದ ನಿಮಿತ್ತ ಹೆಮಿಂಗ್ವೆ ಸ್ವಿಡ್ಜರ್‌ಲ್ಯಾಂಡ್‌ಗೆ ಹೋಗಬೇಕಾಗಿ ಬಂದಿದೆ. ಸ್ವಿಡ್ಜರ್‌ಲ್ಯಾಂಡಿನ ಸ್ನೇಹಿತರಿಗೆ ಓದಿಸಲು ತಮ್ಮ ಯಾವ ಬರಹದ ಪ್ರತಿಯನ್ನೂ ತಂದಿಲ್ಲವಲ್ಲ ಅಂತ ಹಲುಬುತ್ತಿದ್ದವರಿಗೆ ಸರ್ಪ್ರೈಸ್ ಕೊಡಲು ಪ್ಯಾರಿಸ್ಸಿನಿಂದ ಬರುವಾಗ ಹ್ಯಾಡ್ಲಿ, ಹೆಮಿಂಗ್ವೆ ಅಲ್ಲಿನ ತನಕ ಬರೆದಿದ್ದ ಬರಹಗಳನ್ನೂ, ಕಾರ್ಬನ್ ಪ್ರತಿಗಳನ್ನೂ ಒಂದು ಸೂಟ್‌ಕೇಸಿನಲ್ಲಿ ತುಂಬಿ ಸ್ವಿಡ್ಜರ್‌ಲ್ಯಾಂಡಿನ ಟ್ರೇನನ್ನು ಏರುತ್ತಾರೆ. ಪ್ರಯಾಣ ದೀರ್ಘವಾಗಿರುತ್ತದೆ ಎಂದು ನೀರು ಕೊಳ್ಳಲು ಟ್ರೇನು ಇಳಿದು ಹೋದ ಐದೇ ನಿಮಿಷದಲ್ಲಿ ಆ ಸೂಟ್‌ಕೇಸನ್ನು ಕಳ್ಳ ಹೊತ್ತೊಯ್ದಾಗಿದೆ.

ನಂತರ ಹ್ಯಾಡ್ಲಿ ಅಳುತ್ತ ಈ ಸಂಗತಿ ತಿಳಿಸಿದಾಗ “ಇರಲಿ ಬಿಡು, ಆ ಪ್ರತಿಗಳು ಎಲ್ಲಿಯಾದರೂ ಸಿಕ್ಕೇ ಸಿಗುತ್ತದೆ” ಎಂದು ಸಮಾಧಾನ ಪಡಿಸುತ್ತಾರೆ ಹೆಮಿಂಗ್ವೆ. “ಇಲ್ಲ ಟಾಟಿ, ದಯವಿಟ್ಟು ಕ್ಷಮಿಸು. ಎಲ್ಲ ಮೂಲ ಪ್ರತಿಗಳೂ, ಕಾರ್ಬನ್ ಪ್ರತಿಗಳೂ ಅದೇ ಸೂಟ್‌ಕೇಸಿನಲ್ಲಿ ಇದ್ದವು” ಎಂದಾಗ ನಡೆದ ಪ್ರಮಾದದ ಗಾಂಭೀರ್ಯ ತಟ್ಟಲು ಕಥೆಗಾರರಿಗೆ ಘಂಟೆಗಳೇ ಹಿಡಿಯುತ್ತವೆ. ಹ್ಯಾಡ್ಲಿ ಹೇಳಿದ್ದು ನಿಜವಿರುತ್ತದೆ. ಅವರು ವರ್ಷಗಳ ಅವಧಿಯಲ್ಲಿ ಬರೆದ ಪದ್ಯಗಳು, ಕಥೆಗಳು, ಕಾದಂಬರಿ, ಲೇಖನಗಳು ಎಲ್ಲ ಬರೆದೇ ಇಲ್ಲವೇನೋ ಎಂಬಂತೆ ಕಳೆದು ಹೋಗಿವೆ. ಯಾವುದೋ ಪತ್ರಿಕೆಗಳಿಂದ ಅಸ್ವೀಕೃತವಾಗಿ ಮರಳಿದ ಒಂದಿಷ್ಟು ಪದ್ಯಗಳ ಹೊರತಾಗಿ ಎಲ್ಲ ಬರಹಗಳೂ ಮಾಯವಾಗಿವೆ. “ಆ ಘಟನೆಯಾದ ಮೇಲೆ ಎಲ್ಲವನ್ನೂ ಹೊಸತಾಗಿ ಕಟ್ಟುವುದು ಹೇಗೆಂದು ಅನುಭವವಾಯಿತು” ಎಂದು ಬರೆಯುತ್ತಾರೆ.

ಆ ಕಾಲದ ಇನ್ನೊಬ್ಬ ಮುಖ್ಯ ಕಾದಂಬರಿಕಾರ ಎಫ್ ಸ್ಕಾಟ್ ಫಿಡ್ಜರಾಲ್ಡ್‌ರ ಜೊತೆಗಿನ ಸ್ನೇಹ, ತಿರುಗಾಟಗಳು ಓದಲು ಮುದ ನೀಡುವಂತಿವೆ. ಸ್ಕಾಟ್‌ರ ಪತ್ನಿ, ಸ್ವತಃ ಕವಿಯಾದ ಝೆಲ್ಡಾ ಮತ್ತು ಸ್ಕಾಟ್‌ರ ಸಂಬಂಧದ ಬಗೆಗಿನ ಸೂಕ್ಷ್ಮ ಒಳನೋಟಗಳಿವೆ. ಈಗ ಅಮೆರಿಕನ್ ಕ್ಲಾಸಿಕ್ ಎಂಬ ಬಿರುದು ಪಡೆದ ಸ್ಕಾಟ್‌ರ ಕಾದಂಬರಿ ‘ದ ಗ್ರೇಟ್ ಗ್ಯಾಟ್ಸ್‌ಬಿ’ಯ ಮೊದಲ ಪ್ರತಿಯನ್ನು ಓದಿ ಈ ಯುವಕನ ದೈತ್ಯ ಪ್ರತಿಭೆಯ ಅರಿವಾಯಿತು ಎನ್ನುತ್ತಾರೆ. ಅವರಿಬ್ಬರೂ ಲಿಯಾನ್ ಎಂಬ ಊರಿಗೆ ಹೋದಾಗ ನಡೆದ ಘಟನೆಗಳ ವಿವರ ತುಟಿಯಂಚಲ್ಲಿ ನಗು ಮೂಡಿಸುತ್ತದೆ.

ಪ್ಯಾರಿಸ್ಸಿನ ಕೆಫೆಗಳಲ್ಲಿ ಕುಳಿತು ಸಂತೆಯ ನಡುವೆಯೂ ಬರವಣಿಗೆಗೆ ಬೇಕಾದ ಏಕಾಂತವನ್ನು ಕಂಡುಕೊಳ್ಳುತ್ತಾರೆ ಹೆಮಿಂಗ್ವೆ. ಆಗೆಲ್ಲ ನೋಟ್‍ಪ್ಯಾಡ್ ಮತ್ತು ಪೆನ್ಸಿಲ್ ಹಿಡಿದು ಕುಳಿತ ಅವರ ಮನಸ್ಸಿನಲ್ಲಿರುವುದು ಒಂದೇ ಮಾತು. “ಒಂದು ವಾಕ್ಯ. ಒಂದೇ ನಿಜವಾದ ವಾಕ್ಯವನ್ನು ಬರೆಯಬೇಕು. ಹಾಗಾದಾಗ ಮುಂದಿನದೆಲ್ಲ ತಾನೇತಾನಾಗಿ ಬರೆಸಿಕೊಳ್ಳುತ್ತದೆ. ನನಗೆ ಗೊತ್ತಿರುವ ಒಂದೇ ಸತ್ಯವಾದ ವಾಕ್ಯ, ಅ ಟ್ರೂಯೆಸ್ಟ್ ಸನ್ಟೆನ್ಸ್ ಯಾವುದು? ಅದನ್ನು ಬರೆಯಬೇಕು ಮೊದಲು” ಎಂದುಕೊಳ್ಳುತ್ತಾರೆ.

ಒಮ್ಮೊಮ್ಮೆ ಜೇಬಿನಲ್ಲಿ ಹಣ ಕಡಿಮೆಯಿರುವುದಕ್ಕೋ, ಇನ್ನೇನೋ ಯೋಚಿಸುತ್ತ ಕೂತು ತಡವಾಗಿಯೋ ಇಡೀ ದಿನ ಊಟವನ್ನೇ ಮಾಡದಿರುವಾಗ ಅಲ್ಲಿಯೇ ಪುಸ್ತಕ ಮಳಿಗೆ ನಡೆಸುತ್ತಿದ್ದ ಸಿಲ್ವಿಯಾ ಬೀಚ್ ಸಮಯಕ್ಕೆ ಸರಿಯಾಗಿ ಊಟ ಮಾಡೆಂದು ಹೇಗೆ ಗದರುತ್ತಿದ್ದರು ಎಂಬ ಮಾಹಿತಿಯಿದೆ. ಸ್ವತಃ ಅಮೆರಿಕನ್ ಆದ, ಆಗ ಪ್ಯಾರಿಸ್ಸಿನಲ್ಲಿ ಶೇಕ್ಸ್‌ಪಿಯರ್‌ ಅಂಡ್ ಕಂಪನಿ ಎಂಬ ಪುಸ್ತಕ ಮಳಿಗೆ ಮತ್ತು ಪಬ್ಲಿಕೇಶನ್ಸ್ ತೆರೆದ ಸಿಲ್ವಿಯಾ ಹೆಮಿಂಗ್ವೆಯವರಿಗೆ ಪಾಳಿಯ ಪ್ರಕಾರ ಹೊಸ ಪುಸ್ತಕಗಳನ್ನು ಓದಲು ಕೊಡುತ್ತಾರೆ. ಅವರ ಮೊದಮೊದಲ ಒಂದಿಷ್ಟು ಕಥೆಗಳನ್ನೂ, ಕವಿತೆಗಳನ್ನೂ ಸೇರಿಸಿ ತಮ್ಮದೇ ಪಬ್ಲಿಕೇಶನ್ನಿನಿಂದ ಪುಸ್ತಕವನ್ನೂ ಪ್ರಕಟಿಸುತ್ತಾರೆ. ಹಾಗೆಯೇ ಈ ಬುಕ್ ಸ್ಟೋರಿನಲ್ಲಿ ಅಂದಿನ ಮಹತ್ವದ ಲೇಖಕರನ್ನು ಭೇಟಿಯಾಗುವ, ಅವರ ಜೊತೆ ಕಲೆಯುವ ಅವಕಾಶವೂ ಹೆಮಿಂಗ್ವೆಯವರಿಗೆ ಸಿಗುತ್ತದೆ.

ಹೆಮಿಂಗ್ವೆ ಬದುಕನ್ನು ತೀವ್ರವಾಗಿ ಜೀವಿಸಿದವರು. ಬಿಡುವಿರದ ಪ್ರಪಂಚ ಪರ್ಯಟನೆ, ಬೇಟೆ, ಬಾಕ್ಸಿಂಗ್, ಕುಡಿತ, ಇಪ್ಪತ್ತೈದು ವರ್ಷದ ಕಾಲಾವಧಿಯಲ್ಲಿ ನಡೆದ ನಾಲ್ಕು ಮದುವೆಗಳು ಇವೆಲ್ಲ ಆ ಮಾತಿಗೆ ಪುರಾವೆ ಒದಗಿಸುತ್ತವೆ. ಒಂದಲ್ಲ, ಎರಡು ಬಾರಿ ಅವರು ಪ್ರಯಾಣಿಸುತ್ತಿದ್ದ ವಿಮಾನ ಕ್ರಾಶ್ ಆದರೂ ವಿಸ್ಮಯಕಾರಿಯಾಗಿ ಬದುಕುಳಿದವರು. ತಮ್ಮ ಬದುಕಿನ ಕಡೆಯ ದಿನಗಳಲ್ಲಿ ಖಿನ್ನತೆ ಮತ್ತು ಇತರ ಮಾನಸಿಕ ಖಾಯಿಲೆಗಳಿಗಾಗಿ ಶಾಕ್ ಟ್ರೀಟ್‌ಮೆಂಟ್‌ಗಳನ್ನು ಅವರು ತೆಗೆದುಕೊಳ್ಳಬೇಕಾಯಿತು. ಆ ಚಿಕಿತ್ಸೆ ಅವರ ನೆನಪುಗಳನ್ನು ಅವರಿಂದ ಕಿತ್ತುಕೊಂಡಿತು. ತಮ್ಮ ಸ್ವಂತ ಹೆಸರೂ ನೆನಪುಳಿಯದ ಕಾಲದಲ್ಲಿ 1961ರ ಜುಲೈ ತಿಂಗಳ ಒಂದು ಮುಂಜಾನೆ ತಮ್ಮದೇ ಬಂದೂಕಿನಿಂದ ಜೀವ ಕಳೆದುಕೊಂಡರು. ಅವರ ಆಗಿನ ಪತ್ನಿ ಮೇರಿ “ಬಂದೂಕನ್ನು ಸ್ವಚ್ಛಗೊಳಿಸಲೆಂದು ತೆಗೆದಿದ್ದರು” ಎಂದು ಹೇಳಿಕೆ ಕೊಟ್ಟರು.

ಬರವಣಿಗೆಯಲ್ಲಿ ಕಾಣುವುದಕ್ಕಿಂಥ ಕಾಣದಿರುವುದೇ ಹೆಚ್ಚಿರಬೇಕು ಎಂಬ ಅವರ ‘ಐಸ್‌ಬರ್ಗ್ ಥಿಯರಿ’ ಕ್ರಮ ಇಂದಿಗೂ ಪ್ರಚಲಿತವಾಗಿದೆ. ಅವರೊಳಗಿನ ಕಾದಂಬರಿಕಾರನನ್ನು ಮೊನಚುಗೊಳಿಸಿದ ಪ್ಯಾರಿಸ್ ನಗರವನ್ನು ಅದದೇ ಹಸಿತನದಲ್ಲಿ ಓದುಗರಿಗೆ ಪರಿಚಯಿಸುವ ಕೃತಿ ‘ಅ ಮೂವೆಬಲ್ ಫೀಸ್ಟ್.’ ಆ ನಂತರದ ವರ್ಷಗಳಲ್ಲಿ ಹೆಮಿಂಗ್ವೆ ಸೃಷ್ಟಿಸಿದ ಕಥಾ ಜಗತ್ತು ಈ ಪುಸ್ತಕದಲ್ಲಿ ಬೀಜರೂಪದಲ್ಲಿವೆ.

ಹೆಮಿಂಗ್ವೆ ಒಳಗೆ ಉಳಿದುಹೋದ ಆ ಕಾಲದ ಪ್ಯಾರಿಸ್ ಹನಿಹನಿಯಾಗಿ ಓದುಗರೆದೆಯನ್ನು ತೊಯ್ಯಿಸುತ್ತದೆ. ವ್ಯಕ್ತಿ ಮತ್ತು ಊರು ಒಂದರೊಳಗೊಂದು ಸೇರಿ ಹೋಗುವುದೆಂದರೆ ಇದೇ ಇರಬೇಕು. ಒಂದೇ ವ್ಯತ್ಯಾಸವೆಂದರೆ, ಪ್ಯಾರಿಸ್ಸಿನ ಉದ್ದಗಲವನ್ನು ಕಷ್ಟಪಟ್ಟಾದರೂ ಅಳೆದು ಬಿಡಬಹುದೇನೋ!