ಅವರ ನಂತರದ ಕವನಗಳಲ್ಲಿ ಆಮೂಲಾಗ್ರ ಬದಲಾವಣೆಗಳನ್ನು ಕಾಣಬಹುದು. ಪ್ರತಿಮೆಗಳಿಂದ ತುಂಬಿದ ಸಂಕೀರ್ಣ ಕಾವ್ಯಧಾಟಿಯನ್ನು ತೊರೆದು ಸರಳವಾದ ಸಣ್ಣದಾದ ಕಿರುಚಿತ್ರದಂತಹ ಕವನಗಳನ್ನು ಬರೆಯತೊಡಗಿದರು. ಆಂತರಿಕ ಆತ್ಮಾವಲೋಕನದ ಅನಿವಾರ್ಯತೆಯ ಹಾಗೂ ಹಲವು ತರದ ಶೂನ್ಯತೆಗಳಿಗೆ ಮಣಿಯಲು ಒಪ್ಪದಿರುವುದರ ಪರಿಣಾಮವಾಗಿ ಹುಟ್ಟಿದ ಕಾವ್ಯಮಾದರಿ ಇದು ಎಂದು ಅವರೇ ಹೇಳುತ್ತಾರೆ. ಜಗತ್ತನ್ನು ಸುಳ್ಳುಗಳಿಂದ ಶುದ್ಧಿಗೊಳಿಸುವ ಹಂಬಲವೂ ಇದರಲ್ಲಿ ಅಡಗಿದೆ.
ಎಸ್. ಜಯಶ್ರೀನಿವಾಸ ರಾವ್ ಬರೆಯುವ “ಲೋಕ ಕಾವ್ಯ ವಿಹಾರ” ಸರಣಿಯಲ್ಲಿ ಪೋಲಂಡ್ ದೇಶದ ಕವಿ ರಿಶಾರ್ಡ ಕ್ರಿನಿತ್‌ಸ್ಕಿ-ಯವರ (Ryszard Krynicki, 1943) ಕಾವ್ಯದ ಕುರಿತ ಬರಹ ಹಾಗೂ ಅವರ ಕೆಲವು ಅನುವಾದಿತ ಕವಿತೆಗಳು ನಿಮ್ಮ ಓದಿಗೆ

ರಿಶಾರ್ಡ್ ಕ್ರಿನಿತ್‌ಸ್ಕಿಯವರು ಯುದ್ಧೋತ್ತರ ಸಮಕಾಲೀನ ಪೋಲಿಷ್ ಸಾಹಿತ್ಯದ ‘ಹೊಸ ಅಲೆ’-ಯ (Nowa Fala) ಒಬ್ಬ ಪ್ರಮುಖ ಕವಿ ಹಾಗೂ ಅನುವಾದಕರು. 1964-ರಲ್ಲಿ ಬರೆಯಲು ಪ್ರಾರಂಭಿಸಿದ ಇವರ ಮೊದಲ ಕವನ ಸಂಕಲನ 1968-ರಲ್ಲಿ ಪ್ರಕಟವಾಯಿತು. 1970 ಹಾಗೂ 1980-ರ ದಶಕಗಳಲ್ಲಿ ಅವರು ಪೋಲಂಡಿನ ಕಮ್ಯೂನಿಸ್ಟ್ ಸರಕಾರದ ವಿರುದ್ಧ ಪ್ರತಿಭಟನೆಯ ಚಟುವಟಿಕೆಗಳಲ್ಲಿ ಸಕ್ರಿಯ ಪಾತ್ರ ವಹಿಸಿದರು. ಪೋಲಂಡ್ ದೇಶದ ಸಂವಿಧಾನಕ್ಕೆ ಪ್ರಜಾವಿರೋಧಿ ಬದಲಾವಣೆಗಳನ್ನು ಮಾಡಿದ ಸರಕಾರದ ವಿರುದ್ಧವಾಗಿ ಪೋಲಿಷ್ ಬರಹಗಾರರು-ಚಿಂತಕರು ಬರೆದ ‘Letter of 59’-ಗೆ ಒಬ್ಬ ರುಜುದಾರನಾಗಿದ್ದಕ್ಕಾಗಿ 1976-80-ರ ಅವಧಿಯಲ್ಲಿ ಅವರ ಬರಹಗಳನ್ನು ಅಧಿಕೃತವಾಗಿ ನಿಷೇಧಿಸಲಾಯಿತು. ಅವರ ಎರಡನೆಯ ಕವನ ಸಂಕಲನವನ್ನು ಕಮ್ಯೂನಿಸ್ಟ್ ಸರಕಾರವು ಸೆನ್ಸಾರ್ ಮಾಡಿ ಪ್ರಕಟಣೆಗೆ ಅನುಮತಿ ನೀಡಿತು. ಇದರ ನಂತರ, ಅವರ ಕವನ ಸಂಕಲನಗಳನ್ನು ಪ್ಯಾರಿಸ್-ನಿಂದ ಹಾಗೂ ಪೋಲಂಡಿನ ಭೂಗತ ಪ್ರಕಾಶನಗಳಿಂದ ಪ್ರಕಟಿಸಲಾಯಿತು.

ರಿಶಾರ್ಡ್ ಕ್ರಿನಿತ್‌ಸ್ಕಿಯವರು ತಮ್ಮ ಆರಂಭಿಕ ಕವನಗಳಲ್ಲಿ ಕಾವ್ಯಾಲಂಕಾರಗಳನ್ನು ಹಾಗೂ ಪ್ರತಿಮೆಗಳನ್ನು ಹೆಚ್ಚಾಗಿಯೇ ಬಳಸುತ್ತಿದ್ದರು. ಈ ಕವನಗಳಲ್ಲಿ ಅವರು ಜಗತ್ತನ್ನು ಒಂದು ಅಹಿತಕರವಾದ ಹಾಗೂ ಭಯ ಹುಟ್ಟಿಸುವಂತಹ ಸ್ಥಳವಾಗಿ ಹಾಗೂ ನಮ್ಮ ವಾಸ್ತವವನ್ನು ಶೂನ್ಯತೆ ತುಂಬಿದ ಒಂದು ಗೊಂದಲಮಯ ದುಃಸ್ವಪ್ನವೆಂಬಂತೆ ವರ್ಣಿಸಿದರು. ಒಂದು ನಿರಂಕುಶ ಸಿದ್ಧಾಂತದ ಭಾಷೆಯಲ್ಲಿ ಅಡಗಿರುವ ಹುಸಿತನವನ್ನು ಗ್ರಹಿಸಲು ಅವರು ತಮ್ಮ ಕಾವ್ಯದಲ್ಲಿ ಮುಖ್ಯವಾಗಿ ಭಾಷೆಗೆ ಕೇಂದ್ರಸ್ಥಾನ ಕೊಟ್ಟರು.

ಅವರ ನಂತರದ ಕವನಗಳಲ್ಲಿ ಆಮೂಲಾಗ್ರ ಬದಲಾವಣೆಗಳನ್ನು ಕಾಣಬಹುದು. ಪ್ರತಿಮೆಗಳಿಂದ ತುಂಬಿದ ಸಂಕೀರ್ಣ ಕಾವ್ಯಧಾಟಿಯನ್ನು ತೊರೆದು ಸರಳವಾದ ಸಣ್ಣದಾದ ಕಿರುಚಿತ್ರದಂತಹ ಕವನಗಳನ್ನು ಬರೆಯತೊಡಗಿದರು. ಆಂತರಿಕ ಆತ್ಮಾವಲೋಕನದ ಅನಿವಾರ್ಯತೆಯ ಹಾಗೂ ಹಲವು ತರದ ಶೂನ್ಯತೆಗಳಿಗೆ ಮಣಿಯಲು ಒಪ್ಪದಿರುವುದರ ಪರಿಣಾಮವಾಗಿ ಹುಟ್ಟಿದ ಕಾವ್ಯಮಾದರಿ ಇದು ಎಂದು ಅವರೇ ಹೇಳುತ್ತಾರೆ. ಜಗತ್ತನ್ನು ಸುಳ್ಳುಗಳಿಂದ ಶುದ್ಧಿಗೊಳಿಸುವ ಹಂಬಲವೂ ಇದರಲ್ಲಿ ಅಡಗಿದೆ.

ರಿಶಾರ್ಡ್ ಕ್ರಿನಿತ್‌ಸ್ಕಿಯವರ ಸುಮಾರು 14 ಕವನ ಸಂಕಲನಗಳು ಪ್ರಕಟವಾಗಿದ್ದು, ಅವರ ಕವನಗಳು ಯೂರೋಪಿನ ಬಹಳಷ್ಟು ಭಾಷೆಗಳಿಗೆ ಅನುವಾದಗೊಂಡಿವೆ. ಯೂರೋಪಿನಾದ್ಯಂತ ಖ್ಯಾತಿಹೊಂದಿದ ಕವಿಯಾಗಿ ಇವರು ಹಲವು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಪುರಸ್ಕಾರಗಳು ಹಾಗು ಸನ್ಮಾನಗಳಿಗೆ ಪಾತ್ರರಾಗಿದ್ದಾರೆ. ಜರ್ಮನ್ ಕವಿಗಳಾದ ಪಾಲ್ ಸೆಲಾನ್, ನೆಲಿ ಸಾಕ್ಸ, ಬ್ರೆಖ್ಟ್. ಗಾಟ್‌ಫ್ರೀಡ್ ಬೆನ್, ರಾಯ್ನರ ಕುನ್ಜ಼್ ಅವರ ಕವನಗಳನ್ನು ಜರ್ಮನ್ ಭಾಷೆಯಿಂದ ಪೋಲೊಷ್ ಭಾಷೆಗೆ ಅನುವಾದಿಸಿರುವ ರಿಶಾರ್ಡ್ ಕ್ರಿನಿತ್‌ಸ್ಕಿಯವರು ಒಬ್ಬ ಶ್ರೇಷ್ಠ ಅನುವಾದಕರೆಂದೂ ಹೆಸರು ಪಡೆದಿದ್ದಾರೆ.

ನಾನು ಕನ್ನಡಕ್ಕೆ ಅನುವಾದಿಸಿರುವ ಇಲ್ಲಿರುವ ರಿಶಾರ್ಡ್ ಕ್ರಿನಿತ್‌ಸ್ಕಿಯವರ ಎಲ್ಲಾ ಕವನಗಳನ್ನು ಅಲಿಸಾ ವ್ಯಾಲೆಸ್-ರವರು (Alyssa Valles) ಮೂಲ ಪೋಲಿಷ್ ಭಾಷೆಯಿಂದ ಇಂಗ್ಲಿಷ್‌-ಗೆ ಅನುವಾದಿಸಿದ್ದಾರೆ.

*****

1
ಸುಟ್ಟ ಕಾಗದದ ಚೂರುಗಳು
ಮೂಲ: Scraps of Burnt Paper

ಸುಟ್ಟ ಕಾಗದದ ಆಕಾಶಕಾಯಗಳು
ರಸ್ತೆಯಲ್ಲಿ ಬೀಳುತ್ತಲಿವೆ:

ಕೆಲವೇ ವರ್ಷಗಳ ಅಥವಾ ಕೆಲವು ಸಾವಿರ ವರ್ಷಗಳ ಹಿಂದೆ
ನೀವು ಯೋಚಿಸಿರಬಹುದು,
ಸ್ವರ್ಗವೂ ಸಹ ಸ್ಥಳದ ಅಭಾವದಿಂದ ಒದ್ದಾಡುತ್ತಿದೆ,
ಹಾಗೆಯೇ, ಅದು ಆಗಿಂದಾಗ,
ಈ ಭೂಮಿಯಲ್ಲಿ ಆದಿಯಿಂದ ನಡೆದಾಡಿದ
ಪ್ರತಿಯೊಬ್ಬರ ಪ್ರತಿಯೊಂದು ಕೃತ್ಯವನ್ನು
ದಾಖಲಿಸಿರುವ ಕಡತಗಳನ್ನು
ಸುಟ್ಟು ಹಾಕುತ್ತದೆ;

ಈಗ ನಿಮಗನಿಸುವುದನ್ನು
ನೀವು ಹಣೆಬರಹವೆಂದೋ ಅಥವಾ
ನಂಬಿಕೆಯ ಅಭಾವವೆಂದೋ ಕರೆಯಲಾಗದು.

2
ನೀನು ದಾಟುವ ರಸ್ತೆ
ಮೂಲ: The Street you Cross

ನೀನು ದಾಟುವ ರಸ್ತೆ
ಕವಲೊಡೆಯುತ್ತದೆ ಎರಡಾಗಿ, ಮೂರಾಗಿ:

ಈಗ ನೀನು ಗಮನಿಸಿದೆಯಲ್ಲ, ಯಾರೋ
ಯಾವಾಗಲೂ ನಿನ್ನನ್ನು ಹಿಂಬಾಲಿಸುತ್ತಿದ್ದಾರೆಂದು,
ಮತ್ತೆ ಆ ಬದಿಯಲ್ಲಿ ಬೇರೆ ಯಾರೋ,
ಅಂದರೆ ಅವನು ತನ್ನ ಏಕಮಾತ್ರ ಬದುಕಿನ ಈ ಒಂದು ಕ್ಷಣವನ್ನು
ಪೂರ್ತಿಯಾಗಿ ಅವನದೇ ಹೆಜ್ಜೆಗಳನ್ನ ಬೆನ್ನಟ್ಟುವುದಕ್ಕಾಗಿ ಮೀಸಲಿಟ್ಟಿದ್ದಾನೆ,

ಇನ್ನು ಮುಂದೆ ಭ್ರಮೆ ಬೇಡ:

ನಿನ್ನ ಕಣ್ಣೆದುರಿಗೇ ಕಾಣಿಸುವುದು,
ತತ್ವಜಿಜ್ಞಾಸೆ ಒಂದು ನಿರರ್ಥಕ ಚಿತ್ತಕ್ರೀಡೆಯಾಗಿರುವುದಿಲ್ಲ,
ಮತ್ತೆ ನಿನ್ನ “ನೀನು” ಏಕಾಕಿಯಾಗಿದೆ ಎಂದನಿಸಬಹುದು.
ಅದು ಒಂಟಿಯಾಗಿಲ್ಲ,
ಅದು ಸಹನಾಭರಿತ ಭೂಮಿಯ ಮೇಲೆ ಗೊತ್ತುಗುರಿಯಿಲ್ಲದೇ ಅಲೆಯುವುದೂ ಇಲ್ಲ:

ಇದು
ಯಾವ ಬೆಲೆಯೂ ತೆತ್ತಬಲ್ಲ

ಯಾರದೋ ಇರುವಿಕೆಯ ಬಯಕೆಯನ್ನು ಸಾಬೀತುಪಡಿಸುತ್ತದೆ.

3
‘O’
ಮೂಲ: O

Optimism ದಿನದಿಂದ ದಿನಕ್ಕೆ ಬೆಳೆಯುತ್ತಿದೆ:

ದಿನದಿಂದ ದಿನಕ್ಕೆ ಅದರ ‘O’ ಉಬ್ಬುತ್ತದೆ,
ಅದರ ‘O’ಗೆ ವಿರುದ್ಧವಾಗಿ, ಅದರ ‘p’
(ಅಲ್ಲಿಂದಲೇ pessimism ಪ್ರಾರಂಭವಾಗುತ್ತೆ)
ಹಿಗ್ಗುವುದೂ ಇಲ್ಲ ಕುಗ್ಗುವುದೂ ಇಲ್ಲ,
ತಂತಾನಾಗಿಯೇ ಇರುತ್ತೆ
(ವಾಸ್ತವವಾಗಿ ಅದೇ ಜಾಗದಲ್ಲಿರುತ್ತೆ,
ವೈಯಕ್ತಿಕವಾಗಿ ಆಕಾರದಲ್ಲಿ ಕುಗ್ಗುತ್ತಿದೆ).
‘O’, ಪದಗಳು ನಿನ್ನ ವರ್ಣಿಸಲು ಸೋಲುತ್ತವೆ:

ನೀನು ‘O’ ಮೂಲಕ ಮಾತಾಡುವೆ,
ನೀನು ‘O’ ಮೂಲಕ ಇಣುಕಿ ನೋಡುವೆ,
ನೀನು ‘O’ ಮೂಲಕ ಕೇಳಿಸಿಕೊಳ್ಳುವೆ,
ನೀನು ‘O’-ನ ಆಂತರಿಕ ಇಂಗಿತಗಳನ್ನು ತೃಪ್ತಿಪಡಿಸುವೆ,
ನಿದ್ರಿಸುವೆ ನೀನು ದಪ್ಪನೆಯ ‘O’ ಒಂದನ್ನು ಬಾಯಲ್ಲಿಟ್ಟುಕೊಂಡು,
ಏಳುವೆ ನೀನು ಅದಕ್ಕಿಂತಲೂ ದಪ್ಪವಾದ ‘O’-ನೊಂದಿಗೆ:
ನೀನು ಇನ್ನೂ, ಮತ್ತೂ ತೆರೆದುಕೊಳ್ಳುವೆ,
ನಿನ್ನ ಬಾಯಿ ಇನ್ನೂ, ಮತ್ತೂ ಅಗಲವಾಗಿ ತೆರೆಯುತ್ತೆ,
ಕಿರುಚಲಿಕ್ಕಲ್ಲ, ನಗಲಿಕ್ಕಲ್ಲ,
ಒಪ್ಪವಾಗಲ್ಲ, ಊಹೆಗೂ ಮೀರಿದ್ದು.

ಇದು ಊಹೆಗೂ ಮೀರಿದ್ದು: ನೀನೇಳುವೆ,
ನಿನ್ನ ಬಾಯಿಯೊಳಗೆ ಹಿಗ್ಗುತ್ತಿರುವ ‘O’ನೊಂದಿಗೆ,
ಅದು ಅಕ್ಷರವಾ? ಅಂಕಿನಾ? ಸ್ವರವಾ?
ತನ್ನನ್ನು ಮೀರಿ ಬೇರೆ ಯಾವ ಲೋಕವೂ ಕಾಣಿಸದದಕೆ.

4
ಹಗುರವಾಗಿ ಅಗ್ಗವಾಗಿ
ಮೂಲ: Lighter and Cheaper

ಬರೀ ಭೂಪಟಗಳಲ್ಲಿ ಮಾತ್ರ
ಇರುವ ದೇಶವಲ್ಲ ಇದು,
ಇಲ್ಲಿ ಮಾತ್ರವೇ ನೀವು ನಿಜಕ್ಕೂ
ನಿಮ್ಮ ಜೀವನೋಪಾಯವನ್ನು ಸಾಗಿಸಬಹುದು:

ಇಲ್ಲಿ ಜೀವನ ನಿರಂತರವಾಗಿ
ಹಗುರವಾಗುತ್ತಾ, ಅಗ್ಗವಾಗುತ್ತಾ ಇರುತ್ತೆ,
ಗಾಳಿಗಿಂತ ಹಗುರ,
ಗಾಳಿಗಿಂತ ಅಗ್ಗ,

ಗಾಳಿ,
ನಿಮ್ಮ ಚಲನವಲನಗಳಿಗೆ ಅಡ್ಡಿ ಬರುವುದಿಲ್ಲ,
ನಿಮಗಿಂತ ಮೇಲೆ ತನ್ನನ್ನು ಏರಿಸಿಕೊಳ್ಳುವುದಿಲ್ಲ,
ಕೊಲ್ಲುವುದಿಲ್ಲ,
ಸುಳ್ಳು ಹೇಳುವುದಿಲ್ಲ,
ನೋಡಿದ್ದೇನನ್ನೂ, ಕೇಳಿದ್ದೇನನ್ನೂ
ಹೊರಗೆಡವುದಿಲ್ಲ,

ಬೇರೊಂದು ಲೋಕದಿಂದ ಬಂದ ನವಾಗಮನಿಯೇ,
ನಾವಿಬ್ಬರೂ ಅದೇ ಗಾಳಿಯನ್ನು ಉಸಿರಾಡುತ್ತೇವೆ,

ಆದರೆ ನಾನದನ್ನು ಬೇರೆ ರೀತಿ ಉಸಿರಾಡುವೆ.

5
ನೀವು ಈ ಲಕೋಟೆಯನ್ನು ತೆರೆಯುವುದಾದರೆ
ಮೂಲ: If you Open this Letter

ಇಷ್ಟೊಂದು ಸಮಯದ ನಂತರ
ಕೊನೆಗೂ ನಿಮಗೆ ತಲುಪಿದ ಪತ್ರದ
ಲಕೋಟೆಯನ್ನು ನೀವು ತೆರೆಯುವುದಾದರೆ,
ಅದರೊಳಗಿಂದ ಊದಿರುವ ಕಣ್ಣಗುಡ್ಡೆಯೊಂದು
ಹೊರ ಬಿತ್ತೆಂದರೆ,

ಚಕಿತರಾಗಬೇಡಿ, ನಿಜವಾಗಿಯೂ,
ಪ್ರತಿ ಫೋ‌ನ್ ಕಾಲ್‌ನ ಕೊನೆಯಲ್ಲಿ
ರಿಸೀವರ್‌ನಿಂದ ಕಿವಿಯೊಂದು ಹೊರ ಬೀಳುವುದಾದರೆ
ಅದು ಎಲ್ಲವನ್ನೂ,
ಕಿವಿಯ ಬಡಿಗಲ್ಲುಮೂಳೆಯನ್ನೂ
ಮತ್ತೆ ನಡುಗಿವಿಯ ಸಣ್ಣ ಸಣ್ಣ ಸುತ್ತಿಗೆಮೂಳೆಗಳನ್ನೂ ಕೂಡ
ತನ್ನೊಂದಿಗೆ ಎಳಕೊಂಡು ಬೀಳುವುದಾದರೆ,
ಪ್ರತಿ ಸಲ ನಾನು ಚಕಿತನಾಗಬೇಕೆಂದರೆ
ನಾನೇನು ಮಾಡಲಿ ಹೇಳಿ.

6
ಕಿರುಗವನಗಳು

ಬುದ್ಧ, ಏಸು
ಮೂಲ: Buddha, Christ

ಬುದ್ಧನೇ, ಏಸುವೇ,
ವ್ಯರ್ಥವೇ ನೀವು ಅಡಗಿರುವಿರಿ
ಇಷ್ಟೊಂದು ಅವತಾರಗಳಲ್ಲಿ

ಹೃದಯದಂತೆ
ಮೂಲ: Like the Heart

ಅವಸರವಸರದ ಓಟ ಎತ್ತ ಕಡೆ,
ನನ್ನ ಬಡಪಾಯಿ ಹೃದಯವೇ,
ನೀನಿನ್ನೂ ನಿನ್ನದೇ ಅವತಾರದ ಹುಡುಕಾಟದಲ್ಲಿದ್ದಂತೆ.

ನನ್ನ ನತದೃಷ್ಟ ಮಗನೇ
ಮೂಲ: My Poor Son

ನನ್ನ ನತದೃಷ್ಟ ಮಗನೇ, ನಿನ್ನ ತಾಯನ್ನು ಕ್ಷಮಿಸು
ನನ್ನ ನತದೃಷ್ಟ ಮಗನೇ, ನಿನಗೆ ಜನುಮ ನೀಡಿದ್ದಕ್ಕಾಗಿ ನನ್ನನ್ನು ಕ್ಷಮಿಸು
ಇನ್ನು ಮುಂದೆ ಎಂದೂ ಹೀಗೆ ಮಾಡಲಾರೆ

ಮೋಡಗಳು
ಮೂಲ: Clouds

ಮೋಡಗಳು ನಮ್ಮ ಮೇಲೆ ತೇಲಿಕೊಂಡು ಹೋಗುತ್ತಿರುತ್ತವೆ
ಗೋಚರವಾಗಿ ಅಗೋಚರವಾಗಿ,
ಏನ ಕಂಡರೂ ಯಾರ ಕಂಡರೂ
ಅವು ಅಚ್ಚರಿಗೊಳ್ಳುವುದಿಲ್ಲ.

ಪದಗಳು ಇವೆ ಕೆಲವು
ಮೂಲ: There are Words

ಪದಗಳು ಇವೆ ಕೆಲವು,
ಅವು ನಮ್ಮ ಬಾಯಿಗಳಲ್ಲಿ ಹುಚ್ಚಾಬಟ್ಟೆ ಹಬ್ಬಿ,
ಬೇರೇನೂ ಮಾಡಲ್ಲ, ಬರೀ ನಮ್ಮ ರಕ್ತ ಹೀರುತ್ತವಷ್ಟೇ.

ನನ್ನಿಂದಾಗದು ನಿನ್ನ ಸಹಾಯ
ಮೂಲ: I Can’t Help You

ಓ ಪಾಪದ ಪತಂಗವೇ,
ನನ್ನಿಂದಾಗದು ನಿನ್ನ ಸಹಾಯ,
ದೀಪವ ಆರಿಸಬಲ್ಲೆನಷ್ಟೇ.