ಮದುವೆ ಸಂದರ್ಭದಲ್ಲಿ ಬ್ಯಾಟಿ ಕೊಡದಿದ್ದರೆ ಕುಲದಿಂದ ಬಹಿಷ್ಕಾರ ಹಾಕುವ ಪದ್ಧತಿಯಿತ್ತು. ಮದುವೆ ದೈವಕ್ಕೆ ಬರದಿದ್ದರೆ ಆತನನ್ನು ಬಹಿಷ್ಕಾರ ಹಾಕುವ ಪದ್ಧತಿ ಇತ್ತು. ಇದರಲ್ಲಿ ಚಾಜಾ ಏರುಕಟ್ಟುವ ಪದ್ಧತಿ ಚಾಲ್ತಿಯಲ್ಲಿತ್ತು. ಅಂದರೆ ಒಂದಷ್ಟು ಮಾಂಸದ ತುಂಡನ್ನು ಅರಿವೆಯಲ್ಲಿ ಗಂಟುಕಟ್ಟಿ ಅದನ್ನು ಮೇಲೆ ಕಟ್ಟಿದರೆ `ಏರುಗಟ್ಟೋದು’ ಎಂದು ಕರೆಯುತ್ತಿದ್ದರು. ಈ ಪದ್ಧತಿ ಮೂಲಕ ಕುಲದಿಂದ ಬಹಿಷ್ಕಾರ ಹಾಕುವುದಿತ್ತು. ಹೀಗೆ ಮದುವೆಯಲ್ಲಿ ಮಾಡುತ್ತಿದ್ದ ಮಾಂಸಾಹಾರ ಇಂತಹ ಸಮಸ್ಯೆಗಳಿಗೆ ಮುಳುವಾಯಿತು.
ಡಾ. ಅರುಣ್ ಜೋಳದಕೂಡ್ಲಿಗಿ ಬರೆಯುವ ಗಂಟಿಚೋರರ ಕಥನ ಸರಣಿಯ ಹದಿನೇಳನೆಯ ಕಂತು
ಗಂಟಿಚೋರ ಸಮುದಾಯದಲ್ಲಿ ಒಂದು ಆಂತರಿಕ ಕುಲಪಂಚಾಯ್ತಿ ವ್ಯವಸ್ಥೆ ಇತ್ತು. ಇದೀಗ ಈ ವ್ಯವಸ್ಥೆ ಒಂದಷ್ಟು ಸಡಿಲಗೊಂಡಂತೆ ಕಾಣುತ್ತದೆ. ಇದು ಆಧುನಿಕ ಸಂಘಟನೆಗಳ ರೂಪದಲ್ಲಿ ಹೊಸ ಆಯಾಮವನ್ನು ಪಡೆದುಕೊಂಡಂತಿದೆ. ಹಿಂದೆ ಇದ್ದ ಕುಲಪಂಚಾಯ್ತಿ ವ್ಯವಸ್ಥೆಯ ಕೆಲವು ಮುಖ್ಯ ಸಂಗತಿಗಳು ಈ ಸಮುದಾಯದ ಕೆಲವು ವಿಶಿಷ್ಠ ಸಂಗತಿಗಳನ್ನು ಗುರುತಿಸಲು ಸಾಧ್ಯವಿದೆ. ಈ ಸಮುದಾಯದಲ್ಲಿ ಹಿರಿಯರಾದ ಮತ್ತು ಸಮುದಾಯದ ಗೌರವಕ್ಕೆ ಪಾತ್ರರಾದ ಐದು ಜನರನ್ನು ಪಂಚರು ಎಂದು ನೇಮಿಸುತ್ತಿದ್ದರು. ಈ ಪಂಚರು ಇಡೀ ಕುಲಪಂಚಾಯ್ತಿ ವ್ಯವಸ್ಥೆಯ ಕೇಂದ್ರ ಬಿಂದುವಾಗಿದ್ದರು.
ಸಮುದಾಯದ ಯಾವುದೇ ಇಕ್ಕಟ್ಟುಗಳು, ಸಂದಿಗ್ಧತೆಗಳು, ಸಂಕಷ್ಟಗಳು ತಲೆದೋರಿದಾಗ ಈ ಪಂಚರ ಮುಂದೆ ವ್ಯಾಜ್ಯಗಳ ರೀತಿಯಲ್ಲಿ ಹಾಜರಾಗುತ್ತಿದ್ದವು. ಈ ಪಂಚರು ಕುಲಪಂಚಾಯ್ತಿ ವ್ಯವಸ್ಥೆಯ ರೀತಿ ನಡೆಗಳನ್ನು ಆಧರಿಸಿ ಒಂದು ತೀರ್ಮಾನವನ್ನು ಮಾಡುತ್ತಿದ್ದರು. ಈ ತೀರ್ಮಾನಕ್ಕೆ ಇಡೀ ಸಮುದಾಯ ತಲೆಬಾಗುತ್ತಿತ್ತು. ವಿವಾಹ ಸಂಬಂಧಗಳ ಮಾತುಕತೆ ಮತ್ತು ಆಚರಣೆ ಪಂಚರ ಸಮ್ಮುಖದಲ್ಲಿಯೇ ನೆರವೇರುತ್ತಿದ್ದವು. ಜಾತಿ ಪಂಚಾಯ್ತಿಗೆ ಅಧ್ಯಕ್ಷ, ಉಪಾಧ್ಯಕ್ಷ, ಗೌಡ ಮೂರು ಹಂತದ ಅಧಿಕಾರ ಹಂಚಿಕೆ ಇರುತ್ತಿತ್ತು. ಇದರಲ್ಲಿ ಗೌಡ ವ್ಯಾಜ್ಯಕ್ಕೆ ಸಂಬಂಧಿಸಿದ ಮಾತುಕತೆ ಮಾಡಿ ಪಂಚಾಯ್ತಿಗೆ ತರುತ್ತಿದ್ದ.
ವ್ಯಾಜ್ಯ ತಂದವರು ಪಂಚಾಯ್ತಿಗೆ ಚಾಜಾ ಕಟ್ಟಬೇಕಿತ್ತು. ತಮ್ಮ ಸಮುದಾಯದ ಹಿರಿಯರೊಬ್ಬರು ಇವರಿಗೆ ಜಾಮೀನು ಕೊಡಬೇಕಿತ್ತು. ವ್ಯಾಜ್ಯದವರು ಪಂಚಾಯ್ತಿ ತೀರ್ಮಾನವನ್ನು ಗೌರವಿಸದಿದ್ದರೆ ಜಾಮೀನುದಾರ ಪಂಚಾಯ್ತಿಗೆ ದಂಡ ಕಟ್ಟಬೇಕಿತ್ತು. ಇಲ್ಲವೆ ಬೆನ್ನಮೇಲೆ ಕಲ್ಲು ಹೊತ್ತು ಬಗ್ಗಬೇಕಿತ್ತು. ಕೆಲವೊಮ್ಮೆ ಹಲವು ಜನ ತಪ್ಪಿತಸ್ಥರ ಆರೋಪದಲ್ಲಿ ಇರುವ ಒಬ್ಬ ತಪ್ಪಿತಸ್ಥನನ್ನು ಗುರುತಿಸಲು ಪಂಚಾಯ್ತಿ ವ್ಯವಸ್ಥೆಯಲ್ಲಿ ಒಂದು ಸಾಂಪ್ರದಾಯಿಕ ಪದ್ಧತಿ ಇತ್ತು. ಉದಾಹರಣೆಗೆ, ಅಂಗೈಲಿ ಬೂದಿಗೆ ಉಗುಳು ಬೆರೆಸಿ ಉಂಡೆ ಮಾಡಬೇಕಿತ್ತು. ತಪ್ಪಿತಸ್ಥ ಭಯಕ್ಕೆ ಬಾಯಿ ಒಣಗಿ ಉಗುಳು ಬರದೆ ಬೂದಿ ಉಂಡೆ ಮಾಡಲಾಗದೆ ಸಿಕ್ಕಿಹಾಕಿಕೊಳ್ಳುವ ಸಂಭವವಿತ್ತು.
ಹಲವು ಅಪರಾಧವನ್ನು ಹನುಮಂತ ದೇವರ ಸಮ್ಮುಖದಲ್ಲಿ ಪತ್ತೆಹಚ್ಚುವ ಕೆಲಸ ಆಗುತ್ತಿತ್ತು. ನಾನು ತಪ್ಪು ಮಾಡಿಲ್ಲವೆಂದು ಹನುಮಂತ ದೇವಸ್ಥಾನದಲ್ಲಿ ದೀಪ ಹಚ್ಚುವುದು, ಪಾದ ಮುಟ್ಟುವುದು, ಆಣೆ ಮಾಡುವುದು ನಡೆಯುತ್ತಿತ್ತು. ಅಂತೆಯೇ ತಪ್ಪಿತಸ್ಥರ ತಂದೆ, ತಾಯಿ ಅಥವಾ ಸಂಬಂಧಿಕರನ್ನು ಮಲಗಿಸಿ ತಪ್ಪು ಮಾಡಿಲ್ಲವೆಂದು ಅವರನ್ನು ದಾಟಬೇಕಿತ್ತು. ತಪ್ಪು ಮಾಡಿಯೂ ಹೀಗೆ ದಾಟಿದರೆ ದಾಟಿಸಿಕೊಂಡವರ ಜೀವಕ್ಕೆ ಕುತ್ತು ಎಂಬ ನಂಬಿಕೆ ಇತ್ತು.
ಕುಲಪಂಚಾಯ್ತಿ ತಪ್ಪಿತಸ್ಥರನ್ನು ಗುರುತಿಸಿ ಶಿಕ್ಷೆಯನ್ನೂ ಸಹ ಕೊಡುವ ಅಧಿಕಾರವನ್ನು ಹೊಂದಿತ್ತು. ತಪ್ಪಿನ ಗಂಭೀರತೆಯನ್ನು ಆಧರಿಸಿ ಹಲವು ಬಗೆಯ ಶಿಕ್ಷೆಗಳನ್ನು ಕೊಡುತ್ತಿದ್ದರು. ಹಣರೂಪದ ದಂಡವಿತ್ತು, ಕೆಲ ತಿಂಗಳು ವರ್ಷ ಕುಲದಿಂದ ಹೊರ ಹಾಕುವ ಶಿಕ್ಷೆ ಇತ್ತು. ಅತಿ ದೊಡ್ಡ ಶಿಕ್ಷೆಯೆಂದರೆ ಶಾಶ್ವತವಾಗಿ ಕುಲದಿಂದ ಹೊರಹಾಕುವುದಾಗಿತ್ತು. ಹೀಗೆ ಕುಲದಿಂದ ಹೊರ ಹಾಕಿದವರನ್ನು ಪಂಚಾಯ್ತಿಯ ಗಮನಕ್ಕೆ ಬರದಂತೆ ಅವರ ಜತೆ ಮಾತುಕತೆ ಕೊಡುಕೊಳೆ ಸಂಬಂಧ ಮಾಡಿದವರಿಗೂ ಪಂಚಾಯ್ತಿ ಶಿಕ್ಷೆ ವಿಧಿಸುತ್ತಿತ್ತು.
ಹಲವು ಕಾರಣಗಳಿಗೆ ಜಾತಿ ಬಹಿಷ್ಕಾರ ಹಾಕುವ ಪದ್ಧತಿ ಇತ್ತು. ಗುಂಪಾಗಿ ಕಳವು ಮಾಡಿ, ಹೀಗೆ ಗುಂಪು ಕಳವಿನ ಸಂಪತ್ತನ್ನು ಹಂಚಿಕೊಳ್ಳುವಲ್ಲಿ ಮೋಸ ಮಾಡಿದರೆ ಅಥವಾ ತಾನು ಇತರರಿಗೆ ತಿಳಿಯದಂತೆ ಬಚ್ಚಿಟ್ಟು ವಂಚನೆ ಮಾಡಿದರೆ ಅಂತವರನ್ನು ಕುಲಬಹಿಷ್ಕಾರ ಹಾಕುವ ಪದ್ಧತಿ ಇತ್ತು. ಇಂಥವನನ್ನು ಮತ್ಯಾರೂ ಕಳವು ಮಾಡಲು ಸೇರಿಸಿಕೊಳ್ಳುವಂತಿಲ್ಲ. ಹಾಗೆ ಸೇರಿಸಿಕೊಂಡರೆ ನಮ್ಮ ದೈವಕ್ಕೆ ದಂಡ ಕಟ್ಟಬೇಕಿತ್ತು. ಹಾಗಾಗಿ ಬಹಿಷ್ಕಾರಕ್ಕೆ ಒಳಗಾದವರ ಸುದ್ದಿಯನ್ನು ಎಲ್ಲಾ ಭಾಗದ ಗಂಟಿಚೋರರಿಗೂ ತಿಳಿಸಿ ಈತನನ್ನು ಯಾರೂ ಕುಲದಲ್ಲಿ ಒಕ್ಕುಬಳಕೆ ಮಾಡಬಾರದು ಎಂದು ಹೇಳಲಾಗುತ್ತಿತ್ತು.
ಮದುವೆ ಸಂದರ್ಭದಲ್ಲಿ ಬ್ಯಾಟಿ ಕೊಡದಿದ್ದರೆ ಕುಲದಿಂದ ಬಹಿಷ್ಕಾರ ಹಾಕುವ ಪದ್ಧತಿಯಿತ್ತು. ಮದುವೆ ದೈವಕ್ಕೆ ಬರದಿದ್ದರೆ ಆತನನ್ನು ಬಹಿಷ್ಕಾರ ಹಾಕುವ ಪದ್ಧತಿ ಇತ್ತು. ಇದರಲ್ಲಿ ಚಾಜಾ ಏರುಕಟ್ಟುವ ಪದ್ಧತಿ ಚಾಲ್ತಿಯಲ್ಲಿತ್ತು. ಅಂದರೆ ಒಂದಷ್ಟು ಮಾಂಸದ ತುಂಡನ್ನು ಅರಿವೆಯಲ್ಲಿ ಗಂಟುಕಟ್ಟಿ ಅದನ್ನು ಮೇಲೆ ಕಟ್ಟಿದರೆ `ಏರುಗಟ್ಟೋದು’ ಎಂದು ಕರೆಯುತ್ತಿದ್ದರು. ಈ ಪದ್ಧತಿ ಮೂಲಕ ಕುಲದಿಂದ ಬಹಿಷ್ಕಾರ ಹಾಕುವುದಿತ್ತು. ಹೀಗೆ ಮದುವೆಯಲ್ಲಿ ಮಾಡುತ್ತಿದ್ದ ಮಾಂಸಾಹಾರ ಇಂತಹ ಸಮಸ್ಯೆಗಳಿಗೆ ಮುಳುವಾಯಿತು. ಅಂತೆಯೇ ಮದುವೆ ಜನಕ್ಕೆಲ್ಲಾ ಮಾಂಸಾಹಾರ ಹಾಕುವುದು ಕಷ್ಟದ ಸಂಗತಿಯೂ ಆಗಿತ್ತು. ಮಾಂಸದ ಬೆಲೆ ಏರುತ್ತಾ ಬಂದಂತೆ, ಗಂಟಿಚೋರರ ಮದುವೆಗಳಲ್ಲಿ ಮಾಂಸಾಹಾರ ನಿಂತಿತು.
ಸಮುದಾಯದ ಯಾವುದೇ ಇಕ್ಕಟ್ಟುಗಳು, ಸಂದಿಗ್ಧತೆಗಳು, ಸಂಕಷ್ಟಗಳು ತಲೆದೋರಿದಾಗ ಈ ಪಂಚರ ಮುಂದೆ ವ್ಯಾಜ್ಯಗಳ ರೀತಿಯಲ್ಲಿ ಹಾಜರಾಗುತ್ತಿದ್ದವು. ಈ ಪಂಚರು ಕುಲಪಂಚಾಯ್ತಿ ವ್ಯವಸ್ಥೆಯ ರೀತಿ ನಡೆಗಳನ್ನು ಆಧರಿಸಿ ಒಂದು ತೀರ್ಮಾನವನ್ನು ಮಾಡುತ್ತಿದ್ದರು. ಈ ತೀರ್ಮಾನಕ್ಕೆ ಇಡೀ ಸಮುದಾಯ ತಲೆಬಾಗುತ್ತಿತ್ತು.
ಜಾತಿ ಒಳಗ ತಗೋಳ್ಳೋದು:
ನಾನಾ ಕಾರಣಗಳಿಗೆ ಬಹಿಷ್ಕಾರಕ್ಕೆ ಒಳಗಾದವರನ್ನು ಮತ್ತೆ ಕುಲದ ಒಳಗೆ ಹಾಕಿಕೊಳ್ಳುವ `ಇಂತಿಷ್ಟು ದಂಡಕಟ್ಟುವ’ ಪದ್ಧತಿ ಇತ್ತು. ಇದು ಆಯಾ ಬಹಿಷ್ಕಾರದ ಕಾರಣಗಳಿಗೆ ತಕ್ಕಂತೆ ದಂಡದ ಪ್ರಮಾಣ ನಿರ್ಧಾರವಾಗುತ್ತಿತ್ತು. ದಂಡವು `ವರ’ದ ಲೆಕ್ಕದಲ್ಲಿರುತ್ತಿತ್ತು. ಒಂದು ವರಕ್ಕೆ 4 ರೂಪಾಯಿ ಕೊಡಬೇಕಿತ್ತು. ಹತ್ತು ವರಕ್ಕೆ 40 ರೂನಷ್ಟು ಹಣವನ್ನು ದೈವಕ್ಕೆ ಕಟ್ಟಬೇಕಿತ್ತು. ದಂಡ ಕಟ್ಟಿದ ಮೇಲೆ ಸಾಮಾನ್ಯವಾಗಿ ಎಲ್ಲರೂ ದೈವಕ್ಕೆ ಬ್ಯಾಟಿಕೊಡಬೇಕಿತ್ತು. ಆಗ ದೈವಕ್ಕೆ ಊಟಕೊಟ್ಟರೆಂದು ಅಂತವರನ್ನು ಕುಲದಲ್ಲಿ ಒಕ್ಕುಬಳಕೆಗೆ ಮುಕ್ತರನ್ನಾಗಿಸುತ್ತಿದ್ದರು.
ಗಂಟಿಚೋರ ಸಮುದಾಯದ ಕುಲಪಂಚಾಯ್ತಿ ವ್ಯವಸ್ಥೆಯನ್ನು ಸರಿಯಾಗಿ ಗ್ರಹಿಸಿದ ಬ್ರಿಟಿಷರು ಸೆಟ್ಲಮೆಂಟುಗಳಲ್ಲಿ ಗಂಟಿಚೋರ ಸಮುದಾಯದ `ಪಂಚಾಯ್ತಿ ನಿರ್ದೇಶಕರ ಮಂಡಳಿ’ ಯನ್ನು ಸ್ಥಾಪಿಸಿದ್ದರು. ಸಮುದಾಯದ ಹಿರಿಯರನ್ನೇ ಪಂಚರನ್ನಾಗಿ ನೇಮಿಸಲಾಗುತ್ತಿತ್ತು. ಬಹಳ ಮುಖ್ಯವಾಗಿ ಗಂಟಿಚೋರ ಸಮುದಾಯ ಕುಲಪಂಚಾಯ್ತಿಗೆ ಹೆಚ್ಚು ಗೌರವ ಕೊಡುತ್ತಿದ್ದುದನ್ನು ಬ್ರಿಟೀಷರು ಅರಿತಿದ್ದರು. ಹಾಗಾಗಿ ಈ ಪಂಚಾಯ್ತಿ ನಿರ್ದೇಶಕರ ಮಂಡಳಿಯ ಮೂಲಕ ಪರೋಕ್ಷವಾಗಿ ಈ ಸಮುದಾಯವನ್ನು ನಿಯಂತ್ರಿಸುತ್ತಿದ್ದ ಜಾಣ್ಮೆ ಇದರಲ್ಲಿತ್ತು. ಹುಬ್ಬಳ್ಳಿ ಸೆಟ್ಲಮೆಂಟ್ ಅಧಿಕಾರಿ ಓ.ಹೆಚ್.ಬಿ ಸ್ಟಾರ್ಟೆ ಅವರ ವರದಿಗಳಲ್ಲಿ ಈ ಮಂಡಳಿಗಳ ಕಾರ್ಯವೈಖರಿಯ ಬಗ್ಗೆ ಮಾಹಿತಿಗಳು ಲಭ್ಯವಾಗುತ್ತವೆ. ಇದೀಗ ಗಂಟಿಚೋರ ಸಮುದಾಯದಲ್ಲಿ ಕುಲಪಂಚಾಯ್ತಿ ವ್ಯವಸ್ಥೆ ಸಡಿಲಗೊಂಡಿದೆ.
ಸಮುದಾಯದ ರಾಜಕೀಯ ಪ್ರಾತಿನಿಧ್ಯ
ಈ ಮುಂಚೆ ಪ್ರಸ್ತಾಪಿಸಿದಂತೆ ಗಂಟಿಚೋರ ಸಮುದಾಯದ ರಾಜಕೀಯ ಪ್ರಾತಿನಿಧ್ಯ ತುಂಬಾ ಕಡಿಮೆ ಇದೆ. ಇದು ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿಗೆ ಹೆಚ್ಚು ಸೀಮಿತವಾಗಿದೆ. ಇದನ್ನು ಇತರೆ ಜಿಲ್ಲೆ ತಾಲೂಕು ಗ್ರಾಮಗಳಿಗೂ ವಿಸ್ತರಿಸಬೇಕಿದೆ. ಮುಖ್ಯವಾಗಿ ಸಮುದಾಯದ ರಾಜಕೀಯ ಪ್ರಾತಿನಿಧ್ಯಕ್ಕಾಗಿಯೂ ಭಿನ್ನಾಭಿಪ್ರಾಯಗಳನ್ನು ಬಿಟ್ಟು ಒಟ್ಟಾಗಬೇಕಿದೆ. ಹೀಗೆ ರಾಜಕೀಯ ಪ್ರಾತಿನಿಧ್ಯದ ಕೆಲವು ಸಂಗತಿಗಳನ್ನು ಇಲ್ಲಿ ಚರ್ಚಿಸಲಾಗಿದೆ.
ರಾಜಕೀಯವಾಗಿ ರಾಯಭಾಗ ತಾಲೂಕಿನ ಶಾಹುಪಾರ್ಕ್‌ನಲ್ಲಿ ಹೆಚ್ಚು ಜನರು ಸ್ಥಳೀಯ ಸರಕಾರದಲ್ಲಿ ಭಾಗಿಯಾಗಿದ್ದಾರೆ. ಸಾಯಿನಾಥ ಗಾಯಕವಾಡ ಅವರು ಶಾಹುಪಾರ್ಕಲ್ಲಿ ಸತತ ಮೂರು ಅವಧಿಗೆ ಗ್ರಾಮ ಪಂಚಾಯ್ತಿ ಸದಸ್ಯರಾಗಿ ಕೆಲಸ ಮಾಡಿದ್ದಾರೆ. ಸದ್ಯಕ್ಕೆ ಸಾಯಿನಾಥ ಅವರ ಪತ್ನಿಯಾದ ಉಷಾ ಸಾಯಿನಾಥ ಗಾಯಕವಾಡ ಅವರು ರಾಯಭಾಗ ಗ್ರಾಮೀಣ ಗ್ರಾಮ ಪಂಚಾಯ್ತಿಯ ವಾರ್ಡ್ 10 ರಲ್ಲಿ ಗ್ರಾಮ ಪಂಚಾಯ್ತಿ ಸದಸ್ಯರಾಗಿದ್ದಾರೆ. ಶಾಹುಪಾರ್ಕ್‌ನ ರಮೇಶ ಗಾಯಕವಾಡ ಅವರು ಮಾಜಿ ತಾಲೂಕ ಪಂಚಾಯ್ತಿಯ ಉಪಾಧ್ಯಕ್ಷರಾಗಿಯೂ, ಮಾಜಿ ತಾಲೂಕ ಪಂಚಾಯ್ತಿ ಸದಸ್ಯರಾಗಿಯೂ ಕೆಲಸ ನಿರ್ವಹಿಸಿದ್ದಾರೆ. ಸುನೀಲ ಗಾಯಕವಾಡ ಅವರು ಗ್ರಾಮ ಪಂಚಾಯ್ತಿಗೆ ಮೂರು ಬಾರಿ ಸದಸ್ಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದೀಗ ಶಾಹುಪಾರ್ಕಲ್ಲಿರುವ ಕೃಷಿಪತ್ತಿನ ಸಂಘವು ಸ್ಥಾಪನೆಯಾಗಿದ್ದು ಸಾಯಿನಾಥ ಅವರು ಇದರ ಅಧ್ಯಕ್ಷರಾಗಿದ್ದಾರೆ.
ಬಾಲೆಹೊಸೂರು ಗ್ರಾಮ ಪಂಚಾಯ್ತಿಯಲ್ಲಿ ಭರತರಾಜ ಹನಮಪ್ಪ ಗುಡಿಗೇರಿ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದರು. ಸದ್ಯಕ್ಕೆ ಗಂಗವ್ವ ಪಾರಪ್ಪ ಕಟ್ಟೀಮನಿ ಗ್ರಾಮ ಪಂಚಾಯ್ತಿ ಸದಸ್ಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮಹಾಲಿಂಗಪುರದ ಬುದ್ನಿಪೀಡಿಯಲ್ಲಿ ಶಿವಲಿಂಗ ಪರಸಪ್ಪ ಗಂಟಿ ಗ್ರಾಮ ಪಂಚಾಯ್ತಿ ಸದಸ್ಯರಾಗಿದ್ದಾರೆ. ಬೈಲಹೊಂಗಲ ತಾಲೂಕಿನ ನಾವಲಗಟ್ಟಿ ಗ್ರಾಮದ ಲಲಿತ ರಾಚಪ್ಪ ಪಾತ್ರೋಟ್ ಅವರು ದೊಡ್ಡ ಕಲಾವಿದೆಯಾಗಿ ಹೆಸರು ಮಾಡಿದ್ದಾರೆ. ಅಂತೆಯೇ ಸಾರ್ವಜನಿಕ ಸೇವೆಯನ್ನು 1987 ರಲ್ಲಿ ಮಂಡಲ ಪಂಚಾಯ್ತಿ ಸದಸ್ಯರಾಗಿ ಕೆಲಸ ಮಾಡಿರುತ್ತಾರೆ. ನಿಂಗಪ್ಪ ಯಮನಪ್ಪ ತಳದಮನಿ, ಗಂಗೂಬಾಯಿ ರಾಜಕುಮಾರ ತಳದಮನಿ ಅವರು ಮಾಜಿ ಗ್ರಾಮಪಂಚಾಯ್ತಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಲಕ್ಷ್ಮಿಭಾಯಿ ಫಕೀರಪ್ಪ ತಳದಮನಿ ಅವರು ಮಾಜಿ ಗ್ರಾಮಪಂಚಾಯ್ತಿ ಸದಸ್ಯರಾಗಿದ್ದರು. ಇವರು ಮಾಜಿ ಗ್ರಾಮಪಂಚಾಯ್ತಿ ಉಪಾಧ್ಯಕ್ಷರೂ ಆಗಿದ್ದರು. ರಾಯಭಾಗ ತಾಲೂಕಿನ ಯಡ್ರಾವಿಯಲ್ಲಿ ಶಾರದ ದತ್ತು ಜಾದವ ಗ್ರಾಮ ಪಂಚಾಯ್ತಿ ಸದಸ್ಯರಾಗಿದ್ದರು. ಬೆಂಡವಾಡ ಗ್ರಾಮ ಪಂಚಾಯತಿಯಲ್ಲಿ ಮಂಗಲ ಶಿವಾಜಿ ಗಾಯಕವಾಡ ಅವರು ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷರು.
ಗೋಕಾಕ ತಾಲೂಕಿನ ಹಳ್ಳೂರಿನ ವಕೀಲರಾದ ಉದಯಕುಮಾರ್ ಸಿಂಪಿ ಅವರು ಹಳ್ಳೂರ್ ಕ್ಷೇತ್ರದಿಂದ ಆಯ್ಕೆಯಾಗಿದ್ದ ಮಾಜಿ ಜಿಲ್ಲಾಪಂಚಾಯ್ತಿ ಸದಸ್ಯರಾಗಿದ್ದಾರೆ. ನಿಂಗವ್ವ ಮಲ್ಲಪ್ಪ ಬೂತಪ್ಪಗೋಳ್, ರಂಗಪ್ಪ ಭೀಮಪ್ಪ ಸಿಂಪಿಗೇರ ಅವರು ಹಳ್ಳೂರಿನ ಮಾಜಿ ಗ್ರಾಮಪಂಚಾಯ್ತಿ ಸದಸ್ಯರಾಗಿದ್ದಾರೆ. ಸದ್ಯಕ್ಕೆ ತಾರವ್ವ ಭೀಮಪ್ಪ ಗಂಟಿಚೋರ್ ಅವರು ಗ್ರಾಮಪಂಚಾಯ್ತಿ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.
ಬೈಲಹೊಂಗಲ ತಾಲೂಕಿನ ನಾವಲಗಟ್ಟಿ ಗ್ರಾಮದ ಶಿವಾಜಿ ಗುರುಬಸಪ್ಪ ಪಾತ್ರೋಟ್ ಅವರು ಒಬ್ಬ ಕಲಾವಿದರಾಗಿದ್ದೂ ತಮ್ಮ ಭಾಗದ ರಾಜಕೀಯ ಚಟುವಟಿಕೆಗಳಲ್ಲಿಯೂ ಕ್ರಿಯಾಶೀಲರಾಗಿದ್ದರು. ನಾವಲಗಟ್ಟಿಯ ಹಾಲು ಉತ್ಪಾದಕರ ಸಹಕಾರಿ ಸಂಘದ ಸಂಸ್ಥಾಪಕ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದಾರೆ. 1980 ರಿಂದ 96 ರವರೆಗೆ ರೈತ ಸಂಘದ ಕಾರ್ಯ ಸಕ್ರಿಯ ಕಾರ್ಯಕರ್ತರಾಗಿ ಕೆಲಸ ಮಾಡಿದ್ದಾರೆ. 2005 ರಿಂದ 2006 ರವರೆಗೆ ನಾವಲಗಟ್ಟಿ ಗ್ರಾಮ ಪಂಚಾಯ್ತಿ ಸದಸ್ಯರಾಗಿ ಕೆಲಸ ಮಾಡಿದ್ದಾರೆ. 1993 ರಿಂದ 2003 ರವರೆಗೆ ಬಿಜಿಪಿ ಪಕ್ಷದ ಕಾರ್ಯಕರ್ತರಾಗಿಯೂ, 2004 ರಿಂದ 2008 ರವರೆಗೆ ಜಾತ್ಯಾತೀತ ಜನತಾದಳದ ಸಾಂಸ್ಕೃತಿಕ ವಿಭಾಗದ ಬೆಳಗಾಂ ಜಿಲ್ಲೆಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ.( ಆರ್.ಎಲ್.ಹಂಸನೂರು:148:2008)
ಅರಣ್ ಜೋಳದಕೂಡ್ಲಿಗಿ ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲೂಕಿನ ಜೋಳದಕೂಡ್ಲಿಗಿಯವರು. ಜಾನಪದ ಎಂ.ಎ ಮತ್ತು ಕನ್ನಡ ಸಾಹಿತ್ಯದಲ್ಲಿ ಎಂ.ಎ ಸ್ನಾತಕೋತ್ತರ ಪದವಿಗಳನ್ನು ಕನ್ನಡ ವಿಶ್ವವಿದ್ಯಾಲಯದಲ್ಲಿ ಪಡೆದರು. ಅಲ್ಲಿಯೇ ಪಿಎಚ್.ಡಿ ಪದವಿ ಪಡೆದು, ಪ್ರಸ್ತುತ ಪೋಸ್ಟ್ ಡಾಕ್ಟರಲ್ ಉನ್ನತ ಸಂಶೋಧನೆಯಲ್ಲಿ ಮುಗಿಸಿದ್ದಾರೆ.ಕರ್ನಾಟಕ ಜಾನಪದ ವಿಶ್ವವಿದ್ಯಾಲಯದಲ್ಲಿ ಅತಿಥಿ ಪ್ರಾಧ್ಯಾಪಕರಾಗಿ ಕೆಲಸ ಮಾಡುತ್ತಿದ್ದಾರೆ. ಪ್ರಕಟಿತ ಕೃತಿಗಳು: ನೆರಳು ಮಾತನಾಡುವ ಹೊತ್ತು (ಕವಿತೆ, 2004) ಸಂಡೂರು ಭೂಹೋರಾಟ ( ಸಂಶೋಧನೆ, 2008) ಅವ್ವನ ಅಂಗನವಾಡಿ ( ಕವನಸಂಕಲನ, 2010), ಕನ್ನಡ ಜಾನಪದ ತಾತ್ವಿಕ ನೆಲೆಗಳು ( ಪಿಎಚ್.ಡಿ ಸಂಶೋಧನೆ, 2012), ಜಾನಪದ ಮುಖಾಮುಖಿ (ಸಂಶೋಧನೆ, 2013), ಜಾನಪದ ವರ್ತಮಾನ (ಸಂಶೋಧನೆ, 2013), ಕನಸೊಡೆದೆದ್ದೆ ( ವಿಮರ್ಶೆ, 2013) ಗಂಟಿಚೋರ್ ಸಮುದಾಯ (ಸಂಶೋಧನೆ, 2016) ತತ್ವಪದ ಪ್ರವೇಶಿಕೆ (ಪ್ರೊ.ರಹಮತ್ ತರೀಕೆರೆ ಅವರ ಜತೆ ಸಹ ಸಂಪಾದಕ, 2017) ಓದು ಒಕ್ಕಾಲು ( ಸಾಹಿತ್ಯ ವಿಮರ್ಶೆ, 2020) ಕೊರೋನಾ ಜಾನಪದ (ನವಜಾನಪದ ಕುರಿತ ಸಂಶೋಧನ ಲೇಖನಗಳ ಸಂಕಲನ, 2020) ನಡುವೆ ಸುಳಿವ ಹೆಣ್ಣು ( ಮಂಜಮ್ಮ ಜೋಗತಿ ಅವರ ಆತ್ಮಕಥನದ ನಿರೂಪಣೆ, 2020)