ಈಗಲೂ ನನಗದು ಅಮೂಲ್ಯ ನೆನಪು. ಇಂದು ಅದನ್ನು ಓದಿದರೂ ನಾಚಿಕೊಳ್ಳುತ್ತೇನೆ. ಬೆಳಗಿನ ಹೊತ್ತು ಎಡದಲ್ಲಿಯೂ ಮಧ್ಯಾಹ್ನದ ಹೊತ್ತು ಬಲದಲ್ಲಿಯೂ ತೊರೆಯಂತೆ ಕಾಣುತ್ತಿದ್ದ ಆ ಕೆಂಪು ಕಲ್ಲಿನ ದೊಡ್ಡ ಗೋಡೆಯ ಬಗ್ಗೆ ನಾನಾಗ ಯಾಕೆ ಬರೆಯಲಿಲ್ಲ ಅಂತ ಆಶ್ಚರ್ಯವಾಗುತ್ತದೆ. ಆ ಗೋಡೆ ಚಳಿಗಾಲದಲ್ಲಿ ತಣ್ಣಗಿನ ಗಾಳಿಯಿಂದ ನನ್ನನ್ನು ರಕ್ಷಿಸಿತ್ತು. ಆದರೆ ಬೇಸಿಗೆಯಲ್ಲಿ ಸೂರ್ಯನ ಧಗೆಯನ್ನು ಮತ್ತಷ್ಟು ಹೆಚ್ಚಿಸಿ ಬೇಯಿಸಿತ್ತು. ಅದನ್ನಂತೂ ಸಹಿಸಲು ಅಸಾಧ್ಯವಾಗಿತ್ತು. ಇಂದು ಆ ಗೋಡೆಯ ಬಗ್ಗೆ ಬರೆಯಲು ಹೋದರೆ ಸಾಧ್ಯವಾಗುತ್ತಿಲ್ಲ. ಕಾಂಟೊದಲ್ಲಾದ ಭಾರಿ ಭೂಕಂಪದಲ್ಲಿ ಆ ಗೋಡೆ ನಿರ್ನಾಮವಾಗಿ ಹೋಯಿತು. ಅದರ ಒಂದೇ ಒಂದು ಇಟ್ಟಿಗೆ ಸಹ ಉಳಿಯಲಿಲ್ಲ.
ಹೇಮಾ.ಎಸ್. ಅನುವಾದಿಸಿರುವ ಅಕಿರ ಕುರಸೋವನ ಆತ್ಮಕತೆಯ ಮತ್ತೊಂದು ಅಧ್ಯಾಯ.
ನನ್ನ ಮಾಧ್ಯಮಿಕ ಶಾಲೆಯ ಕುರಿತ ನೆನಪುಗಳನ್ನು ಕುರಿತು ಬರೆಯುವಾಗ ಶಸ್ತ್ರಾಸ್ತ್ರ ಸಂಗ್ರಹಾಗಾರದ ಸುತ್ತಲಿದ್ದ ಕೆಂಪು ಕಲ್ಲಿನ ದೊಡ್ಡ ಗೋಡೆಯ ಕುರಿತು ಬರೆಯದೆ ಇರುವುದು ಸಾಧ್ಯವಿಲ್ಲ. ಪ್ರತಿದಿನ ಶಾಲೆಗೆ ಈ ಗೋಡೆಯ ಪಕ್ಕದಲ್ಲೇ ಹಾದುಹೋಗುತ್ತಿದ್ದೆ. ಮೊದಮೊದಲು ಹೀಗೆ ನಡೆದು ಹೋಗುತ್ತಿರಲಿಲ್ಲ. ಕೊಯಿಶಿಕಾವ ಗೊಕೆಂಚೊ (Koishikawa Gokencho)ದಲ್ಲಿನ ನಮ್ಮ ಮನೆಯ ಹತ್ತಿರವಿದ್ದ ಒಮಗರಿ (Omagari) ನಿಲ್ದಾಣದಿಂದ ಸ್ಟ್ರೀಟ್ಕಾರಿನಲ್ಲಿ ಹೋಗುತ್ತಿದ್ದೆ. ಇದಬಾಶಿಯಲ್ಲಿ (Iidabashi) ಇಳಿದು ಮತ್ತೊಂದು ಟ್ರಾಮ್ ಹತ್ತಿ ಹಾಂಗೋ ಮೊಟೋಮಾಚಿ (Hongō Motomachi)ಗೆ ಹೋಗಿ ಅಲ್ಲಿಂದ ನಡೆದು ಹೋಗುತ್ತಿದ್ದೆ. ಕೆಲವು ದಿನಗಳು ಹೀಗೆ ಓಡಾಡುತ್ತಿದ್ದೆ. ಒಮ್ಮೆ ಸ್ಟ್ರೀಟ್ಕಾರಿನಲ್ಲಿ ಅದೆಂಥದ್ದೋ ವಿಚಿತ್ರವಾದ ಘಟನೆ ನಡೆಯಿತು. ಆ ಘಟನೆಯ ನಂತರ ಮತ್ತೆ ನನಗೆ ಅದರಲ್ಲಿ ಹೋಗುವುದು ಇಷ್ಟವಾಗಲಿಲ್ಲ. ಅದು ನಡೆದದ್ದು ನನ್ನದೇ ತಪ್ಪಿನಿಂದ ಆದರೂ ಆ ಘಟನೆಯಿಂದ ಹೆದರಿಬಿಟ್ಟೆ.
ಬೆಳಗಿನ ಹೊತ್ತು ಟ್ರಾಮ್ ಯಾವಾಗಲೂ ತುಂಬಿರುತ್ತಿತ್ತು. ಜನರು ಬಾಗಿಲಿನ ತುದಿಯವರೆಗೂ ತುಂಬಿಕೊಂಡಿದ್ದು ಹೊರಗೆ ಜೋತಾಡುತ್ತಿರುತ್ತಿದ್ದರು. ಒಂದು ದಿನ ನಾನು ಹೀಗೆ ಬಾಗಿಲಿನಲ್ಲಿ ನೇತಾಡುತ್ತಾ ಹೋಗುತ್ತಿರುವಾಗ ಇದ್ದಕ್ಕಿದ್ದಂತೆ ಬದುಕಿನಲ್ಲಿನ ಎಲ್ಲವೂ ನೀರಸ ಹಾಗೂ ನಿಷ್ಪ್ರಯೋಜಕವಾದದ್ದು ಅಂತನ್ನಿಸಿಬಿಟ್ಟಿತು. ಹಿಡಿದಿದ್ದ ಹಿಡಿಯನ್ನು ಬಿಟ್ಟುಬಿಟ್ಟೆ. ಇಬ್ಬರು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ನಡುವೆ ನಿಂತಿದ್ದೆ. ಅವರು ನನ್ನ ಹಾಗೇ ಬಾಗಿಲಿನಲ್ಲಿ ನೇತಾಡುತ್ತಿದ್ದರು. ಅವರ ನಡುವೆ ಸಿಕ್ಕಿಕೊಂಡಿದ್ದರಿಂದ ಕೆಳಗೆ ಬೀಳಲಿಲ್ಲ. ಫುಟ್ಬೋರ್ಡ್ ಮೇಲೆ ಒಂದೇ ಕಾಲಿನಲ್ಲಿ ನಿಂತಿದ್ದೆನಾದ್ದರಿಂದ ಕೈಬಿಟ್ಟ ತಕ್ಷಣ ಹಿಂದಕ್ಕೆ ವಾಲಿದೆ.
ತಕ್ಷಣ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಲ್ಲಿ ಒಬ್ಬ ಕೂಗಿಕೊಂಡು ಒಂದು ಕೈಯಲ್ಲಿ ನಾನು ಭುಜಕ್ಕೆ ಹಾಕಿಕೊಂಡಿದ್ದ ಶಾಲೆಯ ಬ್ಯಾಗನ್ನು ಹಿಡಿದು ನನ್ನನ್ನು ಎಳೆದುಕೊಂಡ. ಆ ವಿದ್ಯಾರ್ಥಿಯ ಕೈಯಿಂದ ಬಿಡಿಸಿಕೊಂಡ ಮೇಲೆ ಇದಬಾಶಿಯಲ್ಲಿ (Iidabashi) ಇಳಿಯುವವರೆಗೂ ಬಲೆಗೆ ಸಿಕ್ಕ ಮೀನಿನಂತೆ ಒದ್ದಾಡಿದೆ. ಹೆದರಿಕೆಯಿಂದ ಬಿಳುಚಿಕೊಂಡಿದ್ದ ಯುವಕನ ಕಣ್ಣುಗಳನ್ನೇ ನೋಡುತ್ತಿದ್ದೆ.
ಇದಾಬಾಶಿಯಲ್ಲಿ (Iidabashi) ಟ್ರಾಮ್ನಿಂದ ಇಳಿಯುತ್ತಿದ್ದಂತೆ ಇಬ್ಬರು ವಿದ್ಯಾರ್ಥಿಗಳಿಗೂ ಹೋದ ಜೀವ ಬಂದಂತಾಯಿತು. “ಏನಾಯಿತು ನಿಂಗೆ?” ಅಂತ ಕೇಳೀದರು. ಏನಾಯಿತು ಅಂತ ನನಗೇ ಗೊತ್ತಿರಲಿಲ್ಲ. ತಲೆತಗ್ಗಿಸಿ ಟ್ರಾಮ್ ಹತ್ತಬೇಕಿದ್ದ ನಿಲ್ದಾಣದತ್ತ ನಡೆದುಹೋದೆ. “ಹುಷಾರಾಗಿದ್ದೀಯಾ ತಾನೇ?” ಅಂತ ಕೇಳಿದರು. ಅವರು ನನ್ನನ್ನೇ ಹಿಂಬಾಲಿಸುತ್ತಿರುವಂತೆ ಅನ್ನಿಸಿತು. ಓಚನೊಮಿಜುವಿಗೆ (Ochanomizu) ಹೋಗುತ್ತಿದ್ದ ಟ್ರಾಮ್ ಹಿಂದೆ ಓಡಿಹೋಗಿ ಅದನ್ನು ಹತ್ತಿಕೊಂಡೆ. ಹಿಂತಿರುಗಿ ನೋಡಿದಾಗ ಆ ಇಬ್ಬರು ವಿದ್ಯಾರ್ಥಿಗಳು ನನ್ನತ್ತ ಅಚ್ಚರಿಯಿಂದ ನೋಡುತ್ತಿರುವುದು ಕಾಣಿಸಿತು. ನಿಜ ಅದರಲ್ಲಿ ಆಶ್ಚರ್ಯವೇನಿಲ್ಲ ಏಕೆಂದರೆ ನನ್ನ ನಡವಳಿಕೆಯ ಬಗ್ಗೆ ನನಗೆ ಅಚ್ಚರಿಯಾಗಿತ್ತು. ಅದಾದ ನಂತರ ಸ್ಟ್ರೀಟ್ಕಾರಿನಲ್ಲಿ ಹೋಗುವುದನ್ನು ಬಿಟ್ಟುಬಿಟ್ಟೆ.
ಪ್ರಾಥಮಿಕ ಶಾಲೆಯಲ್ಲಿದ್ದಾಗಿಂದಲೂ ಒಚಿಯಾಯ್ ಕತ್ತಿವರಸೆ ಶಾಲೆಗೆ ಹೋಗಲು ದಾರಿ ದೂರವಾಗಿದ್ದರೂ ನಡೆದುಕೊಂಡೆ ಹೋಗುತ್ತಿದ್ದೆ. ಅದಕ್ಕಿಂತ ಹೆಚ್ಚಾಗಿ ನಡೆದುಕೊಂಡು ಹೋಗುವುದರಿಂದ ಸ್ಟ್ರೀಟ್ಕಾರಿನ ಟಿಕೇಟಿನ ಹಣ ಉಳಿಯುತ್ತಿತ್ತು. ಆ ಸಮಯದಲ್ಲಿ ಹೊಸದಾಗಿ ಹತ್ತಿಸಿಕೊಂಡಿದ್ದ ಪುಸ್ತಕಗಳನ್ನು ಕೊಳ್ಳುವ ಹುಚ್ಚಿಗೆ ಆ ಹಣ ಬಳಸಬಹುದಿತ್ತು.
ಬೆಳಗ್ಗೆ ಮನೆಯಿಂದ ಹೊರಟು ಎಡಗೋವಾ (Edogawa) ನದಿಗುಂಟ ನಡೆದು ಇದಾಬಾಶಿಯಲ್ಲಿ (Iidabashi)ನ ಸೇತುವೆ ಹತ್ತಿರ ತಲುಪುತ್ತಿದ್ದೆ. ಅಲ್ಲಿಂದ ಟ್ರಾಮ್ ಹೋಗುವ ಹಾದಿಯಲ್ಲೇ ನಡೆದುಕೊಂಡು ಹೋಗಿ ಬಲಕ್ಕೆ ತಿರುಗಿಕೊಳ್ಳುತ್ತಿದ್ದೆ. ಅಲ್ಲಿಂದ ಸ್ವಲ್ಪ ಮುಂದಕ್ಕೆ ಹೋಗುತ್ತಿದ್ದಂತೆ ನನ್ನ ಎಡಕ್ಕೆ ಆ ಶಸ್ತ್ರಾಗಾರದ ಕೆಂಪು ಕಲ್ಲಿನ ದೊಡ್ಡ ಗೋಡೆ ಸಿಗುತ್ತಿತ್ತು. ಆ ಗೋಡೆ ನೋಡಲು ಅದಕ್ಕೆ ಕೊನೆಯೇ ಇಲ್ಲವೇನೋ ಎನ್ನುವಂತಿತ್ತು. ಆ ಗೋಡೆಗೆ ಅಂಟಿಕೊಂಡಂತೆ ಕೌಂಟ್ ಮಿಟೊನ ಟೊಕಿಯೊ ಮಹಲಿನ ಕೊರಾಕುನ್ (Kōrakuen) ಉದ್ಯಾನವಿತ್ತು. ಅಲ್ಲಿಂದ ಮುಂದೆ ಬಲಕ್ಕೆ ಸುಡೋಬಶಿ (Suidōbashi) ತಿರುವು ಸಿಗುತ್ತಿತ್ತು. ಅಲ್ಲೇ ದೂರದಲ್ಲಿ ಮಹಾನ್ ವ್ಯಕ್ತಿಯೊಬ್ಬನ ಮನೆ ಮುಂದಿನ ಗೇಟಿನ ರೀತಿ ದೊಡ್ಡ ಹಿನೊಕಿ ಸೈಪ್ರಸ್ ನಿಂತಿರುತ್ತಿತ್ತು. ಅದರ ತುದಿಯಲ್ಲಿ ಓಚನೊಮಿಜುವಿಗೆ (Ochanomizu) ಸಾಗುವ ಸಣ್ಣ ಇಳಿಜಾರಿನ ಹಾದಿಯಿತ್ತು. ದಿನವೂ ಅದೇ ದಾರಿಯಲ್ಲಿ ಹೋಗುತ್ತಿದ್ದೆ. ಆ ದಾರಿಯಲ್ಲಿ ಹೋಗುವಾಗ ಬರುವಾಗ ಯಾವಾಗಲೂ ಓದುತ್ತಿದ್ದೆ.
ಈ ಹಾದಿಯಲ್ಲಿ ನಡೆಯುವಾಗಲೇ ಜಪಾನಿ ಕಾದಂಬರಿಕಾರರಾದ ಹಿಗುಚಿ ಇಚಿಯೊ (Higuchi Ichiyō (1872 – 1896), ಕುನಿಕಿಡಾ ದೊಪ್ಪ (Kunikida Doppo (1871-1908), ನ್ಯಾಟ್ಸುಮ್ ಸೋಸೆಕಿ (Natsume Sōseki (1867-1916) ಮತ್ತು ರಷ್ಯನ್ ಕಾದಂಬರಿಕಾರ ಇವಾನ್ ತುರ್ಗೆನೆವ್ನನ್ನು ಓದಿದ್ದು. ನನ್ನಕ್ಕ ಮತ್ತು ಅಣ್ಣಂದಿರಿಂದ ತೆಗೆದುಕೊಂಡ ಪುಸ್ತಕಗಳು ಹಾಗೂ ನಾನೇ ಕೊಂಡುಕೊಂಡ ಪುಸ್ತಕಗಳನ್ನು ಓದಿದೆ. ಅರ್ಥವಾಗಲಿ ಬಿಡಲಿ ಕೈಗೆ ಸಿಕ್ಕಿದ್ದನ್ನೆಲ್ಲ ಓದುತ್ತಿದ್ದೆ.
ಬದುಕಿನ ಆ ಹಂತದಲ್ಲಿ ಜನರ ಬಗ್ಗೆ ಹೆಚ್ಚಾಗಿ ಅರ್ಥವಾಗುತ್ತಿರಲಿಲ್ಲ ಆದರೆ ಪ್ರಕೃತಿ ವರ್ಣನೆಗಳು ಅರ್ಥವಾಗುತ್ತಿದ್ದವು. ತುರ್ಗೆನೆವ್ನ The Rendezvousನ ಆರಂಭದಲ್ಲಿ ಬರುವ ವರ್ಣನೆಯೊಂದನ್ನು ಮತ್ತೆ ಮತ್ತೆ ಓದುತ್ತಿದ್ದೆ. ಆ ವರ್ಣನೆ ಹೀಗಿದೆ “ಕಾಡಿನ ಮರಗಳ ಎಲೆಗಳ ಸದ್ದಿನಿಂದಲೇ ಋತುಗಳನ್ನು ಗುರುತಿಸಿಬಿಡಬಹುದು”.
ಆ ವೇಳೆಗೆ ಪ್ರಕೃತಿ ವರ್ಣನೆಗಳು ಅರ್ಥವಾಗುತ್ತಿತ್ತು. ಅವುಗಳನ್ನು ಓದಲು ಹೆಚ್ಚು ಖುಷಿಯಾಗುತ್ತಿತ್ತು. ಅವುಗಳಿಂದ ಪ್ರಭಾವಿತನಾಗಿದ್ದೆ. ಆ ಪ್ರಭಾವದಲ್ಲೇ ಪ್ರಬಂಧವನ್ನು ಬರೆದಿದ್ದೆ. ಕೆಕಾ ಮಾಧ್ಯಮಿಕ ಶಾಲೆ ಆರಂಭವಾದಾಗಿಂದ ಇಷ್ಟು ಒಳ್ಳೆಯ ಪ್ರಬಂಧ ಯಾರೂ ಬರೆದಿರಲಿಲ್ಲ ಎಂದು ನಮ್ಮ ವ್ಯಾಕರಣದ ಮೇಷ್ಟ್ರು ಓಹರಾ ಯೋಯಿಚಿ (Ohara Yōichi) ಹೊಗಳಿದ್ದರು. ಈಗಲೂ ನನಗದು ಅಮೂಲ್ಯ ನೆನಪು. ಇಂದು ಅದನ್ನು ಓದಿದರೂ ನಾಚಿಕೊಳ್ಳುತ್ತೇನೆ. ಬೆಳಗಿನ ಹೊತ್ತು ಎಡದಲ್ಲಿಯೂ ಮಧ್ಯಾಹ್ನದ ಹೊತ್ತು ಬಲದಲ್ಲಿಯೂ ತೊರೆಯಂತೆ ಕಾಣುತ್ತಿದ್ದ ಆ ಕೆಂಪು ಕಲ್ಲಿನ ದೊಡ್ಡ ಗೋಡೆಯ ಬಗ್ಗೆ ನಾನಾಗ ಯಾಕೆ ಬರೆಯಲಿಲ್ಲ ಅಂತ ಆಶ್ಚರ್ಯವಾಗುತ್ತದೆ. ಆ ಗೋಡೆ ಚಳಿಗಾಲದಲ್ಲಿ ತಣ್ಣಗಿನ ಗಾಳಿಯಿಂದ ನನ್ನನ್ನು ರಕ್ಷಿಸಿತ್ತು. ಆದರೆ ಬೇಸಿಗೆಯಲ್ಲಿ ಸೂರ್ಯನ ಧಗೆಯನ್ನು ಮತ್ತಷ್ಟು ಹೆಚ್ಚಿಸಿ ಬೇಯಿಸಿತ್ತು. ಅದನ್ನಂತೂ ಸಹಿಸಲು ಅಸಾಧ್ಯವಾಗಿತ್ತು. ಇಂದು ಆ ಗೋಡೆಯ ಬಗ್ಗೆ ಬರೆಯಲು ಹೋದರೆ ಸಾಧ್ಯವಾಗುತ್ತಿಲ್ಲ. ಕಾಂಟೊದಲ್ಲಾದ ಭಾರಿ ಭೂಕಂಪದಲ್ಲಿ ಆ ಗೋಡೆ ನಿರ್ನಾಮವಾಗಿ ಹೋಯಿತು. ಅದರ ಒಂದೇ ಒಂದು ಇಟ್ಟಿಗೆ ಸಹ ಉಳಿಯಲಿಲ್ಲ.
ಕನ್ನಡ ಉಪನ್ಯಾಸಕಿ.ಇಂಗ್ಲೀಷ್ ಹಾಗೂ ಹಿಂದಿಯಿಂದ ಲೇಖನ, ಕತೆ ಹಾಗೂ ಕವನಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಇವರ ಅನುವಾದಗಳು ಹಲವು ಪತ್ರಿಕೆಯಲ್ಲಿ ಪ್ರಕಟಗೊಂಡಿವೆ. ಇರಾನಿನ ಚಲನಚಿತ್ರ ನಿರ್ದೇಶಕ ಅಬ್ಬಾಸ್ ಕಿರಸ್ತೋಮಿಯ ಕಿರುಪದ್ಯಗಳ ಅನುವಾದ ‘ಹೆಸರಿಲ್ಲದ ಹೂ’ ಪ್ರಕಟಿತ ಸಂಕಲನ..