ನನ್ನ ಕುರುಡುತನದ ಒಂದು ಮುಖ್ಯ ಪರಿಣಾಮವೆಂದರೆ, ನಾನು ಕ್ರಮೇಣ ಮುಕ್ತಛಂದವನ್ನು ತೊರೆದು ಕ್ಲಾಸಿಕಲ್ ಛಂದೋಬದ್ಧತೆಯನ್ನು ಸ್ವೀಕರಿಸಿದುದು. ನಿಜ ಎಂದರೆ ಕುರುಡುತನ ನನ್ನನ್ನು ಮತ್ತೆ ಕವಿತೆ ಬರೆಯುವ ಹಾಗೆ ಮಾಡಿತು. ಕರಡು ಆವೃತ್ತಿಗಳು ನನಗೆ ಸಾಧ್ಯವಿರದ ಕಾರಣ, ನಾನು ನೆನಪನ್ನು ಅವಲಂಬಿಸಬೇಕಾಗಿ ಬಂತು. ಗದ್ಯಕ್ಕಿಂತ ಪದ್ಯ, ಅನಿಯತ ಪದ್ಯರೂಪಕ್ಕಿಂತ ನಿಯತ ಪದ್ಯರೂಪ, ನೆನಪಿಟ್ಟುಕೊಳ್ಳುವುದಕ್ಕೆ ಹೆಚ್ಚು ಸುಲಭ ಎನ್ನುವುದು ಸ್ಪಷ್ಟವೇ ಇದೆ.
ಕೆ.ವಿ. ತಿರುಮಲೇಶ್ ಅನುವಾದಿಸಿದ ಜಾರ್ಜ್ ಲೂಯಿಸ್ ಬೋರ್ಹೆಸ್ ನ ಆತ್ಮಕಥಾ ರೂಪದ ಪ್ರಬಂಧದ ನಾಲ್ಕನೆಯ ಕಂತು
ಪರಿಪಕ್ವತೆ
ಮುಖ್ಯವಾಗಿ ಪುಸ್ತಕಗಳಿಗೆ ಮುಡಿಪಾಗಿಟ್ಟ ನನ್ನ ಜೀವನದಲ್ಲಿ ನಾನು ಕಾದಂಬರಿಗಳನ್ನು ಓದಿದ್ದು ಕಡಿಮೆ, ಮತ್ತು ಹೆಚ್ಚಿನ ಸನ್ನಿವೇಶಗಳಲ್ಲಿ ಅವುಗಳ ಕೊನೆಯ ಪುಟಕ್ಕೆ ನನ್ನನ್ನು ತಲುಪುವಂತೆ ಮಾಡಿದ್ದು ನನ್ನ ಕರ್ತವ್ಯ ಪ್ರಜ್ಞೆ ಮಾತ್ರ. ಅದೇ ವೇಳೆ ನಾನು ಯಾವತ್ತೂ ಒಬ್ಬ ಕತೆಗಳ ಓದುಗ ಮತ್ತು ಮರು ಓದುಗನಾಗಿದ್ದೆ. ಸ್ಟೀವನ್ಸನ್, ಕಿಪ್ಲಿಂಗ್, ಜೇಮ್ಸ್, ಕಾನ್ರಾಡ್, ಪೋ, ಚೆಸ್ಟರ್ಟನ್, ಲೇನ್ ನ ಅರೇಬಿಯನ್ ನೈಟ್ಸ್, ಮತ್ತು ಹಾಥಾರ್ನ್ ನ ಕೆಲವು ಕತೆಗಳ ಓದು ನನಗೆ ಅಭ್ಯಾಸವಾಗಿಬಿಟ್ಟಿದೆ. ನನಗೆ ನೆನಪಿರುವಾಗಿನಿಂದಲೂ. ‘ಡಾನ್ ಕ್ವಿಕ್ಸಾಟ್’ ಮತ್ತು ‘ಹಕ್ಲ್ ಬರಿ ಫಿನ್ನ್’ನಂಥ ಶ್ರೇಷ್ಠ ಕಾದಂಬರಿಗಳು ನಿಜವಾಗಿ ಆಕಾರ ರಹಿತ ಎನ್ನುವ ಭಾವನೆ ಸಣ್ಣ ಕತೆಯ ಪ್ರಕಾರದ ಬಗೆಗಿನ ನನ್ನ ರುಚಿಯನ್ನು ಬಲಪಡಿಸಿತು. ಸಣ್ಣ ಕತೆಯ ಅನಿವಾರ್ಯ ಗುಣಗಳೆಂದರೆ, ಆರ್ಥಿಕತೆ, ಮತ್ತು ಸ್ಪಷ್ಟವಾಗಿ ಉಲ್ಲೇಖಿಸಿದ ಆರಂಭ, ಮಧ್ಯ, ಮತ್ತು ಅಂತ್ಯ. ಆದರೆ, ಒಬ್ಬ ಲೇಖಕನಾಗಿ, ಸಣ್ಣ ಕತೆ ನನ್ನ ಅಳವಿಗೆ ಮೀರಿದುದೆಂದು ನನ್ನ ಭಾವನೆಯಾಗಿತ್ತು, ಒಂದು ಸುದೀರ್ಘಕಾಲದ ಸುತ್ತು ಬಳಸಿನ ಅಧೈರ್ಯದ ಕಥನ ಪ್ರಯೋಗಗಳ ಸರಣಿಯ ನಂತರವೇ ನಾನು ನಿಜವಾದ ಕತೆಗಳನ್ನು ಬರೆಯಲು ಕುಳಿತುದು.
ನನಗೆ ಸುಮಾರು ಆರು ವರ್ಷಗಳೇ ಹಿಡಿದುವು, 1927ರಿಂದ 1933ರ ವರೆಗೆ, ಪೂರ್ಣ ಪ್ರಮಾಣದ ಸ್ವಪ್ರಜ್ಞೆಯ ಶಬ್ದಚಿತ್ರ ‘ಹೋಂಬ್ರೆಸ್ ಪೆಲಿಯರೋನ್’ನಿಂದ ನನ್ನ ಮೊತ್ತ ಮೊದಲ ಪಕ್ಕಾ ಸಣ್ಣ ಕತೆಯಾದ – ‘ಹೋಂಬ್ರ ದ ಲಾ ಎಸ್ಕ್ವಿನಾ ರೊಸಾಡಾ’ಕ್ಕೆ (‘ರಸ್ತೆಯಂಚಿನ ಮನುಷ್ಯ’) ಎಂಬಲ್ಲಿಗೆ – ಸಾಗುವುದಕ್ಕೆ. ನನ್ನೊಬ್ಬ ಗೆಳೆಯ ಡಾನ್ ನಿಕೊಲಾಸ್ ಪರದೆಸ್ ಎಂಬವ, ಹಿಂದಣ ರಾಜಕೀಯ ಧುರೀಣ ಮತ್ತು ನಗರದ ಉತ್ತರ ಭಾಗದ ಔದ್ಯೋಗಿಕ ಜೂಜುಕಾರ, ತೀರಿಕೊಂಡಿದ್ದ, ಮತ್ತು ಅವನ ಧ್ವನಿ, ದಂತಕತೆಗಳು, ಹಾಗೂ ಅವುಗಳನ್ನು ಹೇಳುವ ಅವನ ಪ್ರತ್ಯೇಕ ರೀತಿ ಇತ್ಯಾದಿಗಳಲ್ಲಿ ಸ್ವಲ್ಪವನ್ನಾದರೂ ನಾನು ದಾಖಲಿಸ ಬಯಸಿದ್ದೆ. ಪ್ರತಿಯೊಂದು ಪುಟದ ಮೇಲೆಯೂ ನಾನು ಕಷ್ಟಪಟ್ಟು ದುಡಿದೆ, ಪ್ರತಿಯೊಂದು ವಾಕ್ಯವನ್ನೂ ಉಚ್ಚರಿಸಿ ನೋಡುತ್ತ, ಮತ್ತು ಅದನ್ನು ಅವನದೇ ಧ್ವನಿಗಳಲ್ಲಿ ಶಬ್ದಗಳ ಮೂಲಕ ಹಿಡಿಯಲು ಶ್ರಮಿಸುತ್ತ. ಆ ಕಾಲದಲ್ಲಿ ನಾವು ಆಂಡ್ರೋಗೆಯಲ್ಲಿ ಬದುಕು ಕಳೆಯುತ್ತಿದ್ದೆವು, ಮತ್ತು ನನ್ನ ತಾಯಿ ಪುಸ್ತಕದ ವಸ್ತುವನ್ನು ಸಮ್ಮತಿಸಲಾರಳು ಎಂದು ನನಗೆ ಗೊತ್ತಿದ್ದ ಕಾರಣ, ಹಲವಾರು ತಿಂಗಳ ಕಾಲ ನಾನು ರಹಸ್ಯವಾಗಿ ಬರೆದೆ.
ಮೂಲತಃ ‘ಹೋಂಬ್ರೆಸ್ ದ ಲಾ ಒರಿಲ್ಲಾಸ್’ (‘ಊರ ಹೊರಗಿನ ಮನುಷ್ಯರು’) ಎಂಬ ಹೆಸರಿನ ಕತೆ ‘ಕ್ರಿಟಿಕಾ’ ಎಂಬ ಪೀತ ದಿನ ಪತ್ರಿಕೆಗೆ ನಾನು ಸಂಪಾದಿಸುತ್ತಿದ್ದ ಶನಿವಾರದ ಪುರವಣಿಯಲ್ಲಿ ಬಂತು. ಆದರೆ ಲಜ್ಜೆಯಿಂದಾಗಿ, ಹಾಗೂ ಪ್ರಾಯಶಃ ಕತೆ ನನ್ನ ಮಟ್ಟಕ್ಕಿಂತ ಸ್ವಲ್ಪ ಕೆಳಗಿನದು ಎಂಬ ಭಾವನೆಯಿಂದಾಗಿ, ನಾನು ಗುಪ್ತನಾಮ ನೀಡಿದ್ದೆ – ನನ್ನ ಒಬ್ಬಾನೊಬ್ಬ ಮುತ್ತಜ್ಜನದು, ಫ್ರಾನ್ಸಿಸ್ಕೋ ಬುಸ್ಟೋಸ್. ಕತೆ ಜನಪ್ರಿಯವಾಯಿತಾದರೂ, ನನಗೆ ಮುಖ ಕೆಂಪಾಗುವವರೆಗೆ (ಈವತ್ತು ಅದು ನನಗೆ ನಾಟಕೀಯ ಎಂದು ಮಾತ್ರ ಅನಿಸುತ್ತದೆ, ಹಾಗೂ ಉತ್ಪ್ರೇಕ್ಷಿತ ವರ್ತನೆಗಳದು, ಪಾತ್ರಗಳು ಹುಸಿಯಾದುವು), ಅದನ್ನು ನಾನೆಂದೂ ಹೊಸತನ್ನು ಸುರುಮಾಡುವ ಒಂದು ತಾಣವೆಂದು ತಿಳಿದಿರಲಿಲ್ಲ. ಅದೊಂದು ತರ ವಿಚಿತ್ರವಾಗಿ ಇದೆ ಅಷ್ಟೆ.
ಸಣ್ಣ ಕತೆಗಾರನಾಗಿ ನನ್ನ ನಿಜವಾದ ಜೀವನ ಸುರುವಾಗುವುದು ‘ಹಿಸ್ಟೋರಿಯಾ ಯುನಿವರ್ಸಾಲ್ ದ ಲಾ ಇನ್ಫಾಮಿಯಾ’ (‘ಅಪಖ್ಯಾತಿಯ ಒಂದು ಜಾಗತಿಕ ಚರಿತ್ರೆ’) ಎಂಬ ನುಡಿಚಿತ್ರಗಳ ಒಂದು ಸರಣಿಯಿಂದ. ಇವನ್ನು ನಾನು ‘ಕ್ರಿಟಿಕಾ’ಕ್ಕೆ 1933-1934ರಲ್ಲಿ ಅಂಕಣಗಳಾಗಿ ಬರೆದೆ. ಇದರ ವ್ಯಂಗ್ಯವೆಂದರೆ, ‘ರಸ್ತೆಯಂಚಿನ ಮನುಷ್ಯ’ ನಿಜಕ್ಕೂ ಒಂದು ಕತೆಯಾಗಿತ್ತು, ಆದರೆ ಈ ನುಡಿಚಿತ್ರಗಳು ಮತ್ತು ಅವುಗಳನ್ನು ಅನುಸರಿಸಿ ಬಂದ ಹಲವಾರು ಕಥಾನಕಗಳು ಮತ್ತು ನನ್ನನ್ನು ನಿಜವಾದ ಕತೆಗಳಲ್ಲಿಗೆ ನಿಧಾನವಾಗಿ ಒಯ್ದಂಥವು, ಮೋಸಗಳು ಮತ್ತು ಹುಸಿ ಲೇಖನಗಳ ರೀತಿಯಲ್ಲಿ ಇದ್ದುವು. ಮಾರ್ಸೆಲ್ ಶ್ವಾಬ್ ‘ಇಮ್ಯಾಜಿನರಿ ಲೈವ್ಸ್’ನಲ್ಲಿ ಮಾಡಿದುದನ್ನು ಪುನರಾವರ್ತಿಸುವುದು ನನಗೆ ಬೇಕಿರಲಿಲ್ಲ. ಅವನು ನಿಜವಾದ ಜನರ, ಆದರೆ ಯಾರ ಬದುಕಿನ ಬಗ್ಗೆ ಏನೂ ಅಥವಾ ಹೆಚ್ಚೇನೂ ದಾಖಲೆಯಿಲ್ಲವೋ ಅಂಥವರ ಜೀವನ ಚರಿತ್ರೆಯನ್ನು ಊಹಿಸಿ ಬರೆದಿದ್ದ. ನಾನಾದರೋ ಗೊತ್ತಿದ್ದ ವ್ಯಕ್ತಿಗಳ ಬದುಕುಗಳ ಕುರಿತಾಗಿಯೇ ಅಧ್ಯಯನ ಮಾಡಿ, ನನ್ನದೇ ಹುಚ್ಚು ಮನಸ್ಸಿಗನುಸಾರ ಅವುಗಳನ್ನು ತಿರುಚಿ ಬದಲಾಯಿಸಿಕೊಂಡೆ.
ಉದಾಹರಣೆಗೆ, ಹರ್ಬರ್ಟ್ ಆಸ್ಬೊರಿಯ ‘ದ ಗ್ಯಾಂಗ್ಸ್ ಆಫ್ ನ್ಯೂ ಯಾರ್ಕ್’ ಓದಿದ ನಂತರ ಆ ಯೆಹೂದಿ ಗನ್ ಮ್ಯಾನ್ ಮಂಕ್ ಈಸ್ಟ್ಮ್ಯಾನ್ ನ ನನ್ನದೇ ಆವೃತ್ತಿಯನ್ನು ತಯಾರಿಸಿದೆ, ನಾನು ಆರಿಸಿಕೊಂಡ ಅಧಿಕೃತ ಮೂಲಕ್ಕೆ ತೀರಾ ತದ್ವಿರುದ್ಧವಾಗಿ. ಅದನ್ನೇ ನಾನು ಬಿಲ್ಲಿ ದ ಕಿಡ್ ಗೆ ಮಾಡಿದೆ, ಹಾಗೂ ಜಾನ್ ಮುರೆಲ್ ಗೆ (ಮುರೆಲ್ಗೆ ನಾನು ಲಾಝರೆಸ್ ಮೋರೆಲ್ ಎಂದು ಮರು ನಾಮಕರಣ ಮಾಡಿದೆ ಕೂಡ), ಖೋರಾಸಾನ್ ನ ಮುಖಪರದೆಯ ಪ್ರವಾದಿಗೆ, ಟಿಕ್ಬೋರ್ನ್ ಕ್ಲೈಮೆಂಟ್ ಗೆ, ಮತ್ತು ಇತರ ಹಲವಾರು ಪಾತ್ರಗಳಿಗೆ. ನಾನು ಪುಸ್ತಕ ಪ್ರಕಟಣೆಯ ಬಗ್ಗೆ ಎಂದೂ ಯೋಚಿಸಲಿಲ್ಲ. ಆ ಬಿಡಿ ಲೇಖನಗಳು ‘ಕ್ರಿಟಿಕಾ’ದ ಜನಪ್ರಿಯ ಓದಿಗೆಂದು ಬರೆದದ್ದು ಮತ್ತು ಬೇಕೆಂದೇ ರಂಜನೀಯವಾಗಿದ್ದುವು. ನುಡಿಚಿತ್ರಗಳ ಈ ರಹಸ್ಯ ಮೌಲ್ಯ – ಅವುಗಳ ಬರವಣಿಗೆ ನನಗೆ ಕೊಟ್ಟ ಸಂತೋಷದ ಹೊರತಾಗಿ – ಅವು ಕಥನ ಪ್ರಯೋಗಗಳಾಗಿದ್ದುವು ಎನ್ನುವ ಸತ್ಯದಲ್ಲಿತ್ತು ಎಂದು ನನಗೀಗ ಅನಿಸುತ್ತದೆ. ಸಾಮಾನ್ಯ ಕಥಾ ವಸ್ತು ಮತ್ತು ಸಂದರ್ಭಗಳು ನನಗೆ ದೊರಕಿದ್ದರಿಂದ, ನಾನು ಮಾಡಬೇಕಿದ್ದುದು ಕೇವಲ ಚಿತ್ರವತ್ತಾದ ಬದಲಾವಣೆಗಳ ಗುಚ್ಛಗಳನ್ನು ಹೆಣೆಯುವುದಷ್ಟೆ ಆಗಿತ್ತು.
ನನ್ನ ಮತ್ತಿನ ಕತೆ, ‘ದ ಎಪ್ರೋಚ್ ಟು ಅಲ್-ಮು’ಖ್ತಾಸಿಮ್’, 1935ರಲ್ಲಿ ಬರೆದದ್ದು, ಒಂದು ಮೋಸವೂ ಹೌದು, ಹುಸಿ ಲೇಖನವೂ ಹೌದು. ಅದು ಮೂರು ವರ್ಷಗಳ ಹಿಂದೆ ಬಾಂಬೆಯಲ್ಲಿ ಪ್ರಕಟವಾದ ಒಂದು ಪುಸ್ತಕದ ವಿಮರ್ಶೆ ಎಂಬ ರೀತಿಯಲ್ಲಿ ಇದೆ. ಅದರ ಸುಳ್ಳು ದ್ವಿತೀಯ ಆವೃತ್ತಿಗೆ ನಾನು ನಿಜವಾದ ಪ್ರಕಾಶಕನ ಹೆಸರನ್ನು, ವಿಕ್ಟರ್ ಗೊಲಾಂಝ್, ಹೊಂದಿಸಿದೆ, ಹಾಗೂ ನಿಜ ಲೇಖಕಿ ಡೊರೊಥಿ ಎಲ್. ಸೇಯರ್ಸ್ ನ ಕೈಯಿಂದ ಒಂದು ಮುನ್ನುಡಿಯನ್ನು ಕೂಡ. ಆದರೆ ಪುಸ್ತಕ ಮತ್ತು ಅದರ ಲೇಖಕ ಪೂರ್ತಿ ನನ್ನವೇ ನಿರ್ಮಿತಿಗಳು. ಕೆಲವು ಅಧ್ಯಾಯಗಳ ಕಥಾ ಹಂದರ ಮತ್ತು ವಿವರಗಳನ್ನು ನೀಡಿದೆ – ಕಿಪ್ಲಿಂಗ್ ನಿಂದ ತೆಗೆದುಕೊಂಡು, ಹಾಗೂ ಹನ್ನೆರಡನೆ ಶತಮಾನದ ಪರ್ಶಿಯನ್ ಅನುಭಾವಿ ಫರೀದ್ ಉದ್-ದಿನ್ ಅತ್ತರ್ ನನ್ನು ಅಳವಡಿಸಿಕೊಂಡು — ನಂತರ ಜಾಗರೂಕತೆಯಿಂದ ಅದರ (ತಥಾಕಥಿತ ಬಾಂಬೆ ಪುಸ್ತಕದ) ಕುಂದು ಕೊರತೆಗಳನ್ನು ಮುದ್ರಿಸಿದೆ. ಕತೆ ಮುಂದಿನ ವರ್ಷ ‘ಹಿಸ್ಟೋರಿಯಾ ದ ಲ ಇಟರ್ನಿಡಾಡ್’ (‘ಅನಂತತೆಯ ಇತಿಹಾಸ’) ಎಂಬ ನನ್ನ ಲೇಖನಗಳ ಸಂಪುಟದಲ್ಲಿ ಪ್ರಕಟವಾಯಿತು, ಪುಸ್ತಕದ ಕೊನೆಯಲ್ಲಿ ಸಮಾಧಿಯಾಗಿ, ‘ದಿ ಆರ್ಟ್ ಆಫ್ ಇನ್ಸಲ್ಟ್’ (‘ಬಯ್ಗುಳ ಕಲೆ’) ಬಗೆಗಿನ ಇನ್ನೊಂದು ಲೇಖನದ ಜೊತೆ. ‘ದ ಎಪ್ರೋಚ್ ಟು ಅಲ್-ಮು’ಖ್ತಾಸಿಮ್’ ಓದಿದವರು ಅದನ್ನು ಅದರ ಮುಖಬೆಲೆಯಲ್ಲೇ (ಮೇಲ್ನೋಟಕ್ಕೇ) ಓದಿದರು, ಮತ್ತು ನನ್ನೊಬ್ಬ ಮಿತ್ರ ಒಂದು ಪ್ರತಿಯನ್ನು ಲಂಡನ್ ನಿಂದ ತರಿಸಿಕೊಂಡ. 1942ರಲ್ಲಷ್ಟೆ ನಾನದನ್ನು ಒಂದು ಕತೆಯಾಗಿ ಪ್ರಕಟಿಸಿದ್ದು. ನನ್ನ ಮೊದಲ ಕಥಾಸಂಕಲನವಾದ ‘ಎಲ್ ಜಾರ್ಡಿನ್ ದ ಸೆಂಡೆರೊಸ್ ಕ ಸೆ ಬಿಫುರ್ಕನ್’ (‘ಕವಲು ದಾರಿಗಳ ಉದ್ಯಾನ’) ಎಂಬುದರಲ್ಲಿ. ಬಹುಶಃ ನಾನು ಈ ಕತೆಗೆ ಅನ್ಯಾಯ ಮಾಡಿದ್ದೆ; ಅದೀಗ ನನ್ನನ್ನು ಅದೆಂತೋ ಕಾಯುತ್ತಿದ್ದ, ಸಣ್ಣ ಕತೆಗಾರನಾಗಿ ನನ್ನ ಪ್ರಸಿದ್ಧಿ ನೆಲೆನಿಲ್ಲಬೇಕಾಗಿದ್ದ ಕತೆಗಳ ಮುನ್ಸೂಚನೆ ನೀಡಿದುದು ಮಾತ್ರವಲ್ಲ, ಅವುಗಳ ವಿನ್ಯಾಸವನ್ನೂ ಸಿದ್ಧಗೊಳಿಸಿತು.
1937ರ ಸುಮಾರಿಗೆ ನಾನು ನನ್ನ ಪೂರ್ಣಾವಧಿಯ ಕೆಲಸ ಹಿಡಿದೆ. ಈ ಹಿಂದೆ ನಾನು ಸಣ್ಣ ಪುಟ್ಟ ಸಂಪಾದನಾ ಕಾರ್ಯಗಳನ್ನು ನಿರ್ವಹಿಸಿದ್ದೆ. ‘ಕ್ರಿಟಿಕಾ’ದ ಪುರವಣಿಯಿತ್ತು, ಅದೊಂದು ಬಣ್ಣ ಬಣ್ಣದ, ದಟ್ಟವಾದ ಸಚಿತ್ರ ಮನರಂಜನಾ ಹಾಳೆ. ‘ಎಲ್ ಹೋಗರ್’ ಇತ್ತು, ಅದೊಂದು ಜನಪ್ರಿಯ ಸೊಸೈಟಿ (ಮೇಲ್ಸಮಾಜದ) ವಾರಪತ್ರಿಕೆ, ನಾನದಕ್ಕೆ ತಿಂಗಳಿಗೆ ಎರಡು ಬಾರಿ ಒಂದೆರಡು ಸಾಹಿತ್ಯಿಕ ಪುಟಗಳನ್ನು ತುಂಬುತ್ತಿದ್ದೆ, ವಿದೇಶೀ ಪುಸ್ತಕಗಳ ಮತ್ತು ಲೇಖಕರ ಬಗ್ಗೆ. ನಾನು ಸುದ್ದಿ ಸುರುಳಿ (‘ನ್ಯೂಸ್ ರೀಲ್’) ಪಠ್ಯಗಳನ್ನು ಸಹಾ ಬರೆದಿದ್ದೆ, ಮತ್ತು ‘ಉರ್ಬೆ’ ಎಂಬ ಒಂದು ಹುಸಿ ವೈಜ್ಞಾನಿಕ ಪತ್ರಿಕೆಯ ಸಂಪಾದಕನೂ ಆಗಿದ್ದೆ; ಅದು ನಿಜಕ್ಕೂ ಖಾಸಗಿ ಒಡೆತನದ ಬ್ಯೂನೋಸ್ ಏರಿಸ್ ಸಬ್-ವೇ (ತುರಂಗ ಮಾರ್ಗ) ವ್ಯವಸ್ಥೆಯ ಪ್ರಸಾರಾಂಗವಾಗಿತ್ತು. ಇವೆಲ್ಲವೂ ಸಣ್ಣ ಪ್ರಮಾಣದ ಸಂಬಳ ತರುವ ಉದ್ಯೋಗಗಳಾಗಿದ್ದುವು, ಹಾಗೂ ನಮ್ಮ ಮನೆಯ ಖರ್ಚುವೆಚ್ಚಕ್ಕೆ ಕೊಡುಗೆ ನೀಡಬೇಕಿದ್ದ ವಯಸ್ಸನ್ನು ನಾನು ಎಂದೋ ಮೀರಿಬಿಟ್ಟಿದ್ದೆ. ಈಗ ನನಗೆ ಮಿತ್ರರ ನೆರವಿನಿಂದ ಮುನಿಸಿಪಲ್ ಲೈಬ್ರರಿಯ ಮುಗುವೆಲ್ ಕನೆ ಶಾಖೆಯಲ್ಲಿ ಒಂದು ಸಹಾಯಕನ ಕೆಲಸ ದೊರಕಿತ್ತು. ಈ ಶಾಖೆಯಿದ್ದುದು ನಗರದ ನೀರಸ ಮತ್ತು ಒಣ ನೈಋತ್ಯ ಭಾಗದಲ್ಲಿ. ನನ್ನ ಕೆಳಗೆ ಎರಡನೆ ಮತ್ತು ಮೂರನೆ ಸಹಾಯಕರಿದ್ದರೂ, ನನ್ನ ಮೇಲೆ ನಿರ್ದೇಶಕರು, ಮತ್ತು ಒಂದನೆ, ಎರಡನೆ, ಮತ್ತು ಮೂರನೆ ಅಧಿಕಾರಿಗಳೂ ಇದ್ದರು. ನನಗೆ ತಿಂಗಳಿಗೆ ನೂರ ಹತ್ತು ಪೆಸೋಸ್ ಸಂಬಳ ಬರುತ್ತಿತ್ತು, ನಂತರ ಅದು ಇನ್ನೂರ ನಲುವತ್ತರ ತನಕ ಏರಿತು. ಇವು ಸುಮಾರಾಗಿ ಎಪ್ಪತ್ತು ಅಥವಾ ಎಂಬತ್ತು ಅಮೇರಿಕನ್ ಡಾಲರುಗಳಿಗೆ ಸಮಾನವಿದ್ದುವು.
ಲೈಬ್ರರಿಯಲ್ಲಿ ನಾವು ಕೆಲಸ ಮಾಡಿದ್ದು ಕಡಿಮೆ. ಹದಿನೈದು ಜನ ಸುಲಭವಾಗಿ ಮಾಡುವ ಕೆಲಸಕ್ಕೆ ನಾವು ಐವತ್ತು ಜನ ಇದ್ದೆವು. ನನ್ನ ಕೆಲಸ, ಇತರ ಹದಿನೈದೋ ಇಪ್ಪತ್ತೋ ಸಹೋದ್ಯೋಗಿಗಳ ಜೊತೆ, ಅಲ್ಲಿದ್ದ ಪುಸ್ತಕಗಳ ವರ್ಗೀಕರಣ ಮತ್ತು ಪಟ್ಟೀಕರಣವಾಗಿತ್ತು (ಕ್ಯಾಟಲಾಗಿಂಗ್). ಈ ತನಕ ಅವು ಹಾಗೆಯೇ ಇದ್ದುವು. ಆದರೆ ಸಂಗ್ರಹ ಎಷ್ಟು ಚಿಕ್ಕದಿತ್ತೆಂದರೆ, ವ್ಯವಸ್ಥೆಯ ಸಹಾಯವಿಲ್ಲದೆಯೂ ನಮಗೆ ಬೇಕಾದ ಪುಸ್ತಕಗಳನ್ನು ಎಲ್ಲಿ ಹುಡುಕಬೇಕು ಎನ್ನುವುದು ನಮಗೆ ಗೊತ್ತಿತ್ತು; ಆದ್ದರಿಂದ ಆ ವ್ಯವಸ್ಥೆಯನ್ನು ಕಷ್ಟದಿಂದ ನಾವು ಕೈಗೊಂಡರೂ, ಅದರ ಅಗತ್ಯ ಯಾರಿಗೂ ಇರಲಿಲ್ಲ, ಯಾರೂ ಅದನ್ನು ಬಳಸಲೂ ಇಲ್ಲ. ಮೊದಲ ದಿನ ನಾನು ಪ್ರಾಮಾಣಿಕವಾಗಿ ದುಡಿದೆ. ಮರುದಿನ ನನ್ನ ಕೆಲವು ಸಹೋದ್ಯೋಗಿಗಳು ಬದಿಗೆ ಕರೆದು ನೀನು ಈ ತರ ಮಾಡುವುದು ಸರಿಯಲ್ಲ ಎಂದರು, ಯಾಕೆಂದರೆ ಅದು ಅವರನ್ನು ಎತ್ತಿ ತೋರಿಸುತ್ತಿತ್ತು. ‘ಅಲ್ಲದೆ ಈ ಪಟ್ಟೀಕರಣವನ್ನು ಯೋಜಿಸಿದ್ದು ನಮಗೆ ಕೆಲಸದ ನೆಪ ನೀಡುವುದಕ್ಕಾದ ಕಾರಣ, ನೀನು ನಮಗೆ ಕೆಲಸ ಇಲ್ಲದಂತೆ ಮಾಡುವಿ,’ ಎಂದು ವಾದಿಸಿದರು. ನಾನಂದೆ, ಅವರ ನೂರರ ಬದಲು ನಾನು ನಾನ್ನೂರು ಶೀರ್ಷಿಕೆಗಳನ್ನು ವರ್ಗೀಕರಿಸಿದ್ದೆ ಎಂದು. ‘ಸರಿ, ನೀನು ಹಾಗೆ ಮಾಡಿದರೆ, ಬಾಸ್ ಗೆ ಸಿಟ್ಟು ಬರುತ್ತದೆ, ನಮ್ಮನ್ನು ಏನು ಮಾಡಬೇಕೆನ್ನುವುದು ಅವರಿಗೆ ಗೊತ್ತಾಗುವುದಿಲ್ಲ.’ ವಾಸ್ತವತೆಗಾಗಿ, ನನಗೆ ಹೇಳಲಾಯಿತು, ಅಂದಿನಿಂದ ನಾನು ಒಂದು ದಿನ ಎಂಬತ್ಮೂರು ಪುಸ್ತಕಗಳನ್ನು ಮಾಡುವುದು, ತೊಂಬತ್ತು ಇನ್ನೊಂದು ದಿನ, ಮತ್ತು ನೂರ ನಾಲ್ಕು ಮೂರನೆ ದಿನ.
ನಾನು ಲೈಬ್ರರಿಯಲ್ಲಿ ಒಂಬತ್ತು ವರ್ಷ ಕಾಲ ಕಳೆದೆ. ಅವು ಗಟ್ಟಿಯಾದ ಅಸುಖದ ಒಂಬತ್ತು ವರ್ಷಗಳು. ಕೆಲಸದ ವೇಳೆ ಉಳಿದ ಜನ ಕುದುರೆ ಪಂದ್ಯ, ಕಾಲ್ಚೆಂಡು (ಸಾಕರ್) ಪಂದ್ಯಗಳು, ಮತ್ತು ಅಶ್ಲೀಲ ಕತೆಗಳಲ್ಲಲ್ಲದೆ ಇನ್ನು ಯಾವುದರಲ್ಲೂ ಆಸಕ್ತರಾಗಿರಲಿಲ್ಲ. ಒಮ್ಮೆ ಒಬ್ಬ ಓದುಗಳು, ಲೇಡೀಸ್ ರೂಮಿಗೆ ಹೋಗುವ ದಾರಿಯಲ್ಲಿ, ಲೈಂಗಿಕ ಅತ್ಯಾಚಾರಕ್ಕೆ ಒಳಗಾದಳು. ಪ್ರತಿಯೊಬ್ಬರೂ ಹೇಳಿದ್ದು ಅಂಥ ಸಂಗತಿಗಳು ಆಗುವುದು ಸಿದ್ಧ, ಯಾಕೆಂದರೆ ಗಂಡಸರ ಶೌಚಾಲಯ ಮತ್ತು ಹೆಂಗಸರ ಶೌಚಾಲಯ ಅಕ್ಕ ಪಕ್ಕದಲ್ಲೇ ಇದ್ದುವು. ಒಂದು ದಿನ ಉನ್ನತ ಮಟ್ಟದ ಮತ್ತು ಒಳ್ಳೆ ಉದ್ದೇಶದ ಇಬ್ಬರು ಸ್ನೇಹಿತೆಯರು ನನ್ನನ್ನು ಕೆಲಸದ ವೇಳೆ ಭೇಟಿಯಾಗಲು ಬಂದರು. ಒಂದೆರಡು ದಿನಗಳ ನಂತರ ಅವರು ನನಗೆ ಫೋನ್ ಮಾಡಿ ಹೇಳಿದರು, ‘ಅಂಥದೊಂದು ಜಾಗದಲ್ಲಿ ಕೆಲಸ ಮಾಡುವುದು ನಿಮಗೆ ನಿಜಕ್ಕೂ ಮೋಜೆನಿಸಬಹುದು, ಆದರೆ ತಿಂಗಳು ಕಳೆಯುವ ಮೊದಲು ಒಂಬೈನೂರು ಪೆಸೋ ಆದರೂ ಕೈಗೆ ಸಿಗುವ ಕೆಲಸವೊಂದನ್ನು ನೀವು ಕಂಡುಕೊಳ್ಳುವಿರಾಗಿ ನಮಗೆ ಮಾತು ಕೊಡಿ.’ ಹಾಗೆ ಮಾಡುವುದಾಗಿ ನಾನವರಿಗೆ ಮಾತು ಕೊಟ್ಟೆ. ವ್ಯಂಗ್ಯವೆಂದರೆ ಆ ಕಾಲಕ್ಕೆ ಒಬ್ಬ ಲೇಖಕನಾಗಿ ನಾನು ಎಲ್ಲ ಕಡೆ ಸಾಕಷ್ಟು ಪ್ರಸಿದ್ಧನಾಗಿದ್ದೆ, ನನ್ನ ಲೈಬ್ರರಿಯೊಂದನ್ನು ಹೊರತುಪಡಿಸಿ.
ನನಗೆ ನೆನಪಿದೆ ನನ್ನ ಸಹೋದ್ಯೋಗಿಯೊಬ್ಬ ಒಂದು ಎನ್ಸೈಕ್ಲೋಪೇಡಿಯಾದಲ್ಲಿ ಜಾರ್ಜ್ ಲುಯಿಸ್ ಬೋರ್ಹೆಸ್ ಎಂಬ ಒಬ್ಬನ ಹೆಸರನ್ನು ಕಂಡು – ಅದು ನಮ್ಮಿಬ್ಬರ ಹೆಸರುಗಳ ಮತ್ತು ಜನ್ಮ ದಿನಾಂಕಗಳ ಸಾಮ್ಯತೆಯ ಆಕಸ್ಮಿಕದ ಬಗ್ಗೆ ಅವನನ್ನು ಅಚ್ಚರಿಪಡುವಂತೆ ಮಾಡಿತು. ಈ ವರ್ಷಗಳಲ್ಲಿ ಆಗೀಗ ನಾವು ಮುನಿಸಿಪಲ್ ಕೆಲಸಗಾರರಿಗೆ ಎರಡು ಪೌಂಡುಗಳ ಮದ್ಯದ ಪ್ಯಾಕೇಜು ಮನೆಗೆ ಒಯ್ಯಲು ಉಡುಗೊರೆಯಾಗಿ ದೊರಕುತ್ತಿತ್ತು. ಕೆಲವೊಮ್ಮೆ ಸಂಜೆ ಟ್ರ್ಯಾಮ್ ಹಿಡಿಯಲು ಹತ್ತು ಬ್ಲಾಕುಗಳಷ್ಟು ನಡೆಯುವಾಗ ನನಗೆ ಕಣ್ಣಲ್ಲಿ ನೀರು ಬರುತ್ತಿತ್ತು. ಮೇಲಿನಿಂದ ದೊರಕುತ್ತಿದ್ದ ಈ ಸಣ್ಣ ಉಡುಗೊರೆಗಳು ಸದಾ ನನ್ನ ದೀನ ಮತ್ತು ದಯನೀಯ ಜೀವನಾವಸ್ಥೆಯನ್ನು ನೆನಪು ಮಾಡಿ ಕೊಡುತ್ತಿದ್ದುವು.
ಪ್ರತಿ ದಿನವೂ ಕೆಲವು ಗಂಟೆಗಳ ಕಾಲ, ಟ್ರ್ಯಾಮಿನಲ್ಲಿ ಹಿಂದೆ ಮುಂದೆ ಪ್ರಯಾಣಿಸುತ್ತ, ನಾನು ‘ದ ಡಿವೈನ್ ಕಾಮೆಡಿ’ಗೆ ಪ್ರವೇಶ ಗಿಟ್ಟಿಸಿಕೊಂಡೆ; ಇದರಲ್ಲಿ ‘ಪರ್ಗೇಟರಿ’ಯ ವರೆಗೆ ನನಗೆ ಸಹಾಯಕ್ಕೆ ಬಂದುದು ಜಾನ್ ಐಟ್ಕಿನ್ ಕಾರ್ಲೈಲ್ ನ ಗದ್ಯಾನುವಾದ ಮತ್ತು ಉಳಿದದ್ದನ್ನು ನನ್ನ ಪರಿಶ್ರಮದಿಂದಲೇ ಮೇಲೇರಿದೆ. ನನ್ನೆಲ್ಲಾ ಲೈಬ್ರರಿ ಕೆಲಸವನ್ನು ಮೊದಲ ಗಂಟೆಯಲ್ಲೇ ಮಾಡಿ ಮುಗಿಸುತ್ತಿದ್ದೆ, ಆಮೇಲೆ ಬೇಸ್ಮೆಂಟಿಗೆ ಹೋಗಿಬಿಡುತ್ತಿದ್ದೆ, ಅಲ್ಲಿ ಮುಂದಿನ ಐದು ಗಂಟೆ ವೇಳೆ ನನ್ನದೇ ಓದು ಬರಹದಲ್ಲಿ ಕಳೆಯುತ್ತಿದ್ದೆ. ಈ ಥರ ನಾನು ಗಿಬ್ಬನ್ ನ ‘ಡಿಕ್ಲೈನ್ ಏಂಡ್ ಫಾಲ್’ನ ಆರು ಸಂಪುಟಗಳನ್ನು ಮತ್ತು ವಿಸೆಂಟ್ ಫೆಡಲ್ ಲೋಪೆಝ್ ನ ‘ಹಿಸ್ಟರಿ ಆಫ್ ದಿ ಅರ್ಜೆಂಟೈನ್ ರಿಪಬ್ಲಿಕ್’ನ ಹಲವಾರು ಸಂಪುಟಗಳನ್ನು ಮತ್ತೊಮ್ಮೆ ಓದಿಮುಗಿಸಿದ್ದು ನೆನಪಿದೆ. ಲಿಯೋನ್ ಬ್ಲೋಯ್, ಕ್ಲಾಡೆಲ್, ಗ್ರೌಸ್ಸಾಕ್, ಮತ್ತು ಬರ್ನಾರ್ಡ್ ಶಾರನ್ನು ಓದಿದೆ. ರಜಾ ದಿನಗಳಲ್ಲಿ ನಾನು ಫಾಕ್ನರ್ ಮತ್ತು ವರ್ಜೀನಿಯಾ ವೂಲ್ಫ್ ರನ್ನ ಭಾಷಾಂತರಿಸಿದೆ. ಒಂದು ಹಂತದಲ್ಲಿ ನನ್ನನ್ನು ಮೂರನೆ ಅಧಿಕಾರಿಯ ತಲೆ ಸುತ್ತು ಬರುವ ಸ್ಥಾನಕ್ಕೆ ಏರಿಸಲಾಯಿತು. ಒಂದು ಬೆಳಿಗ್ಗೆ ಅಮ್ಮನಿಂದ ಫೋನ್ ಕರೆ ಬಂತು, ನಾನು ಅನುಮತಿ ಪಡೆದು ಮನೆಗೆ ಹೋದೆ; ನನ್ನ ಅಪ್ಪ ಸಾಯುವುದನ್ನು ನೋಡುವ ಕಾಲಕ್ಕೆ ಮನೆ ತಲುಪಿದೆ. ಅಪ್ಪ ಬಹಳ ಕಾಲ ಸಂಕಟ ಪಟ್ಟಿದ್ದು, ಸಾವಿಗಾಗಿ ಅಸಹನೆಯಿಂದ ಕಾಯುತ್ತಿದ್ದರು.
ಅದು 1938ರ ಕ್ರಿಸ್ಮಸ್ ಹಿಂದಣ ದಿನವಾಗಿತ್ತು – ನನ್ನ ತಂದೆ ತೀರಿಹೋದ ಅದೇ ವರ್ಷ – ನನಗೆ ತೀವ್ರವಾದೊಂದು ಅಪಘಾತ ಸಂಭವಿಸಿತು. ನಾನು ಒಂದು ಮೆಟ್ಟಿಲ ಸಾಲಿನಲ್ಲಿ ಓಡುತ್ತಿದ್ದೆ, ಫಕ್ಕನೆ ನನ್ನ ನೆತ್ತಿಯನ್ನು ಏನೋ ತಡವಿದಂತಾಯಿತು; ಹೊಸತಾಗಿ ಬಣ್ಣ ಬಳಿದ ತೆರೆದ ಕಿಟಿಕಿಯೊಂದರ ಚೌಕಟ್ಟು ತಲೆಗೆ ಬಡಿದಿತ್ತು. ಪ್ರಥಮ ಚಿಕಿತ್ಸೆ ನಡೆದಿದ್ದರೂ ಗಾಯಕ್ಕೆ ನಂಜು ತಗಲಿತ್ತು. ಒಂದು ವಾರದ ಕಾಲ ನಾನು ರಾತ್ರಿ ನಿದ್ರಿಸಲಾಗಲಿಲ್ಲ, ಭ್ರಮೆಗಳಿಗೆ ಮತ್ತು ತೀವ್ರ ಜ್ವರಕ್ಕೆ ಒಳಗಾದೆ. ಒಂದು ಸಂಜೆ ನಾನು ಮಾತಾಡುವ ಶಕ್ತಿಯನ್ನು ಕಳೆದುಕೊಂಡೆ, ತುರ್ತು ಶಸ್ತ್ರಚಿಕಿತ್ಸೆಗೋಸ್ಕರ ನನ್ನನ್ನು ಕೂಡಲೇ ಆಸ್ಪತ್ರೆಗೆ ಸೇರಿಸಲಾಯಿತು. ಸೆಪ್ಟಿಸಿಮಿಯಾ (ನಂಜು ಹರಡುವಿಕೆ) ಕಾಲಿಟ್ಟಿತ್ತು. ಹಾಗೂ ಒಂದು ತಿಂಗಳ ಕಾಲ, ನಾನು ಸಾವು ಬದುಕಿನ ನಡುವೆ ಹೊರಳಾಡಿದೆ, ಎಲ್ಲಾ ನನಗೆ ಗೊತ್ತಿಲ್ಲದೆಯೇ. (ಬಹು ಕಾಲದ ನಂತರ ನಾನಿದರ ಬಗ್ಗೆ ‘ದ ಸೌತ್’ ಎಂಬ ಕತೆಯಲ್ಲಿ ಬರೆದೆ.) ನನಗೆ ಗುಣವಾಗಲು ಸುರುವಾದಾಗ ನಾನು ನನ್ನ ಮಾನಸಿಕ ಸ್ಥಿರತೆಯ ಕುರಿತು ಆತಂಕಗೊಂಡೆ. ನಾನು ತರಿಸಿಕೊಂಡಿದ್ದ ಸಿ. ಎಸ್. ಲೆವಿಸ್ನ ‘ಔಟ್ ಆಫ್ ದ ಸೈಲೆಂಟ್ ಪ್ಲಾನೆಟ್’ನ್ನ ನನಗೆ ಓದಿ ಹೇಳಲು ಅಮ್ಮ ಬಯಸಿದ್ದಳು. ಆದರೆ ಎರಡು ಮೂರು ರಾತ್ರಿಗಳ ಕಾಲ ನಾನದನ್ನು ಮುಂದೂಡುತ್ತಿದ್ದೆ ಎನ್ನುವುದು ನೆನಪಿದೆ. ಕೊನೆಗೂ ಅಮ್ಮ ಯಶಸ್ವಿಯಾದಳು, ಆದರೆ ಒಂದೆರಡು ಪುಟ ಕೇಳುವಷ್ಟರಲ್ಲಿ ನಾನು ಅಳಲು ಸುರುಮಾಡಿದೆ. ಯಾಕೆ ಕಣ್ಣೀರು ಎಂದು ಕೇಳಿದಳು ಅಮ್ಮ. ‘ನನಗೆ ಅರ್ಥವಾಗುತ್ತಿದೆ ಎಂದು ಅಳುತ್ತಿದ್ದೇನೆ,’ ಎಂದೆ. ಸ್ವಲ್ಪ ಸಮಯದ ನಂತರ ನಾನಿನ್ನು ಎಂದಾದರೂ ಬರೆಯಬಲ್ಲೆನೇ ಎಂಬ ಸಂದೇಹ ನನಗೆ ಬರತೊಡಗಿತು.
ಹಿಂದೆ ನಾನು ಸಾಕಷ್ಟು ಕವಿತೆಗಳನ್ನು ಮತ್ತು ಕೆಲವು ಕಿರು ವಿಮರ್ಶೆಗಳನ್ನು ಬರೆದಿದ್ದೆ. ನಾನು ಯೋಚಿಸಿದೆ, ಈಗ ನಾನೊಂದು ವಿಮರ್ಶೆ ಬರೆದು ಸೋತರೆ, ಬೌದ್ಧಿಕವಾಗಿ ಮುಗಿದ ಹಾಗೆಯೇ, ನಾನಿದು ವರೆಗೆ ಪ್ರಯತ್ನಿಸದೆ ಇರುವುದನ್ನು ಪ್ರಯತ್ನಿಸಿ ಅದರಲ್ಲಿ ಸೋತರೆ ಅದು ದೊಡ್ಡ ವಿಷಯವಲ್ಲ, ಅಲ್ಲದೆ ನನ್ನನ್ನು ನಾನು ಅಂತಿಮ ದರ್ಶನಕ್ಕೆ ಸಿದ್ಧಗೊಳಿಸಿದಂತೆಯೂ ಆಗಬಹುದು. ಒಂದು ಕತೆ ಬರೆಯುವುದೆಂದು ನಿರ್ಧರಿಸಿದೆ, ಪರಿಣಾಮ ‘ಪಿಯರಿ ಮೆನಾರ್ಡ್, ಡಾನ್ ಕ್ವಿಕ್ಸಾಟ್ ನ ಲೇಖಕ.’
‘ಪಿಯರಿ ಮೆನಾರ್ಡ್,’ ಅದರ ಹಿಂದಣ ‘ದಿ ಎಪ್ರೋಚ್ ಟು ಅಲ್-ಮು’ಖ್ತಸಿಮ್’ನಂತೆಯೇ, ಇನ್ನೂ ಲೇಖನ ಮತ್ತು ನಿಜವಾದ ಕತೆಯ ಮಧ್ಯದಲ್ಲಿ ನೆಲಸಿತ್ತು. ಆಮೇಲೆ ನಾನು ಇನ್ನಷ್ಟು ಮಹತ್ವಾಕಾಂಕ್ಷೆಯದೊಂದನ್ನು ಪ್ರಯತ್ನಿಸಿದೆ – ‘ಟ್ಲೋನ್, ಉಖ್ಬಾರ್, ಓರ್ಬಿಸ್ ಟರ್ಶಿಯಸ್,’ ನಮ್ಮ ಸದ್ಯದ ಜಗತ್ತನ್ನು ಕೊನೆಯಲ್ಲಿ ಸ್ಥಳಾಂತರಗೊಳಿಸುವ ಒಂದು ಹೊಸ ಜಗತ್ತಿನ ಶೋಧದ ಕುರಿತು. ಎರಡೂ ಕತೆಗಳೂ ವಿಕ್ಟೋರಿಯಾ ಒ’ಕಾಂಪೋನ ಪತ್ರಿಕೆ ‘ಸ್ಯೂರ್’ನಲ್ಲಿ ಪ್ರಕಟವಾದುವು. ನಾನು ನನ್ನ ಲೈಬ್ರರಿಯಲ್ಲಿನ ಬರವಣಿಗೆಯನ್ನು ಮುಂದುವರಿಸಿದೆ. ತಮ್ಮ ಸದ್ದುಗದ್ದಲದ ಮೋಜುಮಸ್ತಿಯನ್ನು ಅವರೊಂದಿಗೆ ಹಂಚಿಕೊಳ್ಳದ್ದಕ್ಕೆ ನನ್ನ ಸಹಚರರು ನನ್ನನ್ನೊಬ್ಬ ದ್ರೋಹಿಯೆಂದು ತಿಳಿದುಕೊಂಡಿದ್ದರೂ, ಬೇಸ್ಮೆಂಟಿನಲ್ಲಿ ನಾನು ನನ್ನ ಕೆಲಸವನ್ನು ಮಾಡುತ್ತಲೇ ಹೋದೆ. ವಾತಾವರಣ ಬಿಸಿಯಾಗಿದ್ದಾಗ, ಸಮತಟ್ಟಾದ ಮಾಡಿನ ಮೇಲೆ ನನ್ನ ಓದು ಬರಹ ಸಾಗುತ್ತಿತ್ತು. ನನ್ನ ಕಾಫ್ಕಿಯನ್ ಕತೆ ‘ದಿ ಲೈಬ್ರರಿ ಆಫ್ ಬೇಬೆಲ್’ ಆ ಮುನಿಸಿಪಲ್ ಲೈಬ್ರರಿಯ ದುಃಸ್ವಪ್ನಕಾರಕ ಆವೃತ್ತಿ ಅಥವಾ ಅತಿಶಯೋಕ್ತಿಯಾಗಿ ಕಲ್ಪಿಸಲ್ಪಟ್ಟದ್ದಾಗಿತ್ತು, ಮತ್ತು ಪಠ್ಯದಲ್ಲಿನ ಕೆಲವೊಂದು ವಿವರಗಳಿಗೆ ವಿಶೇಷವಾದ ಮಹತ್ವವೇನೂ ಇಲ್ಲ.
‘ದ ಲಾಟರಿ ಇನ್ ಬ್ಯಾಬಿಲೋನ್,’ ‘ಡೆತ್ ಏಂಡ್ ದ ಕಂಪಾಸ್,’ ‘ದ ಸರ್ಕ್ಯುಲರ್ ರೂಯಿನ್ಸ್,’ ಇಡಿಯಾಗಿ ಅಥವಾ ಭಾಗವಾಗಿ ನಾನು ಬರೆದುದು ಕೆಲಸದಿಂದ ತಪ್ಪಿಸಿಕೊಂಡೆ. ಇದು ಮತ್ತು ಇನ್ನಿತರ ಕತೆಗಳು ಸೇರಿ ‘ದ ಗಾರ್ಡನ್ ಆಫ್ ಬ್ರಾಂಚಿಂಗ್ ಪಾತ್ಸ್’ ಆಯಿತು. 1944ರಲ್ಲಿ ಇದೇ ಪುಸ್ತಕವನ್ನೇ ವಿಸ್ತರಿಸಿ ಶೀರ್ಷಿಕೆ ಬದಲಾಯಿಸಿ ‘ಫಿಕ್ಷಿಯೊನೆಸ್’ ಮಾಡಲಾಯಿತು. ‘ಫಿಕ್ಷಿಯೊನೆಸ್’ ಮತ್ತು ‘ಎಲ್ ಅಲೆಫ್’ (1940 ಮತ್ತು 1952), ನನ್ನ ಎರಡನೆ ಸಣ್ಣ ಕತೆಗಳ ಸಂಕಲನ, ನನ್ನ ಪ್ರಮುಖ ಪುಸ್ತಕಗಳೆಂದು ನಾನು ತಿಳಿದಿದ್ದೇನೆ.
1946ರಲ್ಲಿ ನಾನು ಹೆಸರು ನೆನೆಯಲು ಬಯಸದ ಒಬ್ಬ ರಾಷ್ಟ್ರಾಧ್ಯಕ್ಷ ಅಧಿಕಾರಕ್ಕೆ ಬಂದ. ಕೆಲವೇ ದಿನಗಳ ನಂತರ ಒಂದು ದಿನ ನನ್ನನ್ನು ಲೈಬ್ರರಿಯಿಂದ ವರ್ಗ ಮಾಡಿ ಸಾರ್ವಜನಿಕ ಮಾರುಕಟ್ಟೆಗಳಲ್ಲಿ ಕೋಳಿ ಮತ್ತು ಮೊಲಗಳ ಪರೀಕ್ಷಣಾ ಅಧಿಕಾರಿಯಾಗಿ ಭಡ್ತಿ ನೀಡಿ ನನ್ನನ್ನು ‘ಗೌರವಿಸಲಾಗಿದೆ’ ಎನ್ನುವ ಸುದ್ದಿ ಬಂತು. ಇದೆಲ್ಲಾ ಏನು ಎಂದು ತಿಳಿಯಲು ನಾನು ಪಬ್ಲಿಕ್ ಹಾಲಿಗೆ (ಅಠಾರಾ ಕಚೇರಿ) ಹೋದೆ. ‘ನೋಡಿ, ಲೈಬ್ರರಿಯ ಇಷ್ಟೊಂದು ಮಂದಿ ಕೆಲಸದವರಲ್ಲಿ ಈ ಹೊಸ ಹುದ್ದೆಗೆ ನನ್ನನ್ನೇ ಆರಿಸಿದ್ದು ಸ್ವಲ್ಪ ವಿಲಕ್ಷಣ ಎನಿಸುತ್ತದೆ,’ ಎಂದೆ. ಗುಮಾಸ್ತ ಉತ್ತರಿಸಿದ, ‘ನೀವು ಎಲೈಡರ (ಮೈತ್ರಿಕೂಟದ) ಪಕ್ಷದಲ್ಲಿದ್ದಿರಿ, ಮತ್ತೇನು ನಿರೀಕ್ಷಿಸುತ್ತೀರಿ?’ ಅವನ ಮಾತು ಉತ್ತರಿಸಲಾರದಂತೆ ಇತ್ತು; ಮರು ದಿನ ನನ್ನ ಕೆಲಸಕ್ಕೆ ರಾಜಿನಾಮೆ ಸಲ್ಲಿಸಿದೆ. ನನ್ನ ಮಿತ್ರರು ಒಡನೆಯೆ ನನ್ನ ಸುತ್ತ ಸೇರಿ ಒಂದು ಸಾರ್ವಜನಿಕ ಔತಣ ನೀಡಿದರು. ಆ ಸಂದರ್ಭಕ್ಕೆ ನಾನೊಂದು ಭಾಷಣ ತಯಾರಿಸಿದೆ, ಆದರೆ ಓದಲು ಲಜ್ಜೆಯಾಗಿ ನನ್ನ ಗೆಳೆಯ ಪೆಡ್ರೋ ಹೆನ್ರಿಕೆಝ್ ಉರೆಞನಿಗೆ ಅದನ್ನು ನನಗೋಸ್ಕರ ಓದಲು ಕೇಳಿಕೊಂಡೆ.
ನಾನೀಗ ನೌಕರಿಯಿಲ್ಲದೆ ಇದ್ದೆ. ಕೆಲವು ತಿಂಗಳುಗಳ ಹಿಂದೆ ಒಬ್ಬಳು ವಯಸ್ಸಾದ ಇಂಗ್ಲಿಷ್ ಮಹಿಳೆ ನನ್ನ ಚಾದೆಲೆಗಳನ್ನು ಓದಿ ಭವಿಷ್ಯ ನುಡಿದಿದ್ದಳು, ನಾನು ಬೇಗನೆ ದೇಶ ವಿದೇಶ ಸಂಚರಿಸಲಿದ್ದೇನೆ, ಭಾಷಣಗಳನ್ನು ಕೊಡಲಿದ್ದೇನೆ, ಮತ್ತು ಆ ಮೂಲಕ ಬಹಳ ಮೊತ್ತದ ಹಣ ಸಂಪಾದಿಸಲಿದ್ದೇನೆ ಎಂಬುದಾಗಿ. ನಾನಿದನ್ನು ನನ್ನ ಅಮ್ಮನಿಗೆ ಹೇಳಿದಾಗ ಇಬ್ಬರೂ ನಗಾಡಿದೆವು, ಯಾಕೆಂದರೆ ಸಾರ್ವಜನಿಕ ಭಾಷಣ ನನ್ನ ಸಾಮರ್ಥ್ಯಕ್ಕೆ ತೀರಾ ಮೀರಿದ ಸಂಗತಿಯಾಗಿತ್ತು. ಈ ಸಂಧಿಯಲ್ಲಿ ಒಬ್ಬ ಗೆಳೆಯ ನನ್ನ ರಕ್ಷಣೆಗೆ ಬಂದ, ಹಾಗೂ ಆ ಮೂಲಕ ಎಸೋಸಿಯಾಸಿಯೋನ್ ಅರ್ಜೆಂಟಿನಾ ದ ಕಲ್ಚುರಾ ಇಂಗ್ಲಿಸಾದಲ್ಲಿ ನಾನು ಆಂಗ್ಲ ಅಧ್ಯಾಪಕನಾದೆ. ಅದೇ ವೇಳೆಗೆ ನನ್ನನ್ನು ಕೊಲೇಜಿಯೋ ಲಿಬ್ರ ದ ಎಸ್ಟೂಡಿಯೋಸ್ ಸುಪೀರಿಯೊರೆಸ್ ನಲ್ಲಿ ಅಭಿಜಾತ ಅಮೇರಿಕನ್ ಸಾಹಿತ್ಯದ ಬಗ್ಗೆ ಉಪನ್ಯಾಸ ನೀಡಲು ಕೇಳಿಕೊಳ್ಳಲಾಯಿತು. ಈ ಜಂಟಿ ಕೊಡುಗೆಗಳನ್ನು ತರಗತಿಗಳು ಸುರುವಾಗುವ ಮೂರು ತಿಂಗಳು ಮೊದಲೇ ನೀಡಿದ ಕಾರಣ, ನಾನು ಸ್ವೀಕರಿಸಿಕೊಂಡೆ, ಸುರಕ್ಷಿತ ಎನ್ನುವ ಭಾವದಿಂದ. ಆದರೆ ಸಮಯ ಹತ್ತಿರ ಬರುತ್ತಿದ್ದಂತೆ, ನನಗೆ ಹೆಚ್ಚೆಚ್ಚು ಹಿಂಜರಿಕೆ ಸುರುವಾಯಿತು. ನನ್ನ ಉಪನ್ಯಾಸ ಸರಣಿ ಹಾಥೋರ್ನ್, ಪೋ, ಥೊರೋ, ಎಮರ್ಸನ್, ಮೆಲ್ವಿಲ್, ವ್ಬಿಟ್ಮನ್, ಟ್ವೇನ್, ಹೆನ್ರಿ ಜೇಮ್ಸ್, ಮತ್ತು ವೆಬ್ಲೆನ್ ಕುರಿತಾಗಿತ್ತು. ಮೊತ್ತ ಮೊದಲಿನದನ್ನು ನಾನು ಬರೆದಿಟ್ಟೆ. ಆದರೆ ಎರಡನೆಯದನ್ನು ಬರೆಯಲು ನನಗೆ ಸಮಯವಿರಲಿಲ್ಲ. ಅಲ್ಲದೆ ಮೊದಲ ಉಪನ್ಯಾಸವನ್ನು ಡೂಮ್ಸ್ ಡೇ (‘ಅಂತಿಮ ದಿನ’) ಎಂದುಕೊಂಡು, ನನಗನಿಸಿತು ತದನಂತರ ಅನಂತತೆ ಮಾತ್ರವೇ ಬರಬಲ್ಲುದು. ಮೊದಲಿನದು ಸಾಕಷ್ಟು ಚೆನ್ನಾಗಿಯೇ ಆಯಿತು – ಪವಾಡವೆಂಬಂತೆ. ಎರಡನೆ ಉಪನ್ಯಾಸದ ಎರಡು ರಾತ್ರಿಗಳ ಮೊದಲು ನಾನು ನನ್ನ ತಾಯಿಯನ್ನ ಅದ್ರೋಗೆಯ ಸುತ್ತ ಸಾಕಷ್ಟು ವೇಳೆ ನಡೆಯಲು ಕರೆದುಕೊಂಡು ಹೋದೆ; ನನ್ನ ಉಪನ್ಯಾಸಕ್ಕೆ ತಗಲುವ ಸಮಯವನ್ನು ಅವಳಿಂದ ತಿಳಿದುಕೊಳ್ಳಬೇಕಾಗಿತ್ತು.
ನಾನು ನನ್ನ ಮಾತಿನ ಅಭ್ಯಾಸ ನೀಡಿದೆ. ದೀರ್ಘವಾದಂತೆ ಅನಿಸಿತು ಎಂದಳು ಅವಳು. ‘ಹಾಗಿದ್ದರೆ ನಾನು ಬಚಾವು,’ ಎಂದೆ. ಬೇಗ ಮುಗಿಯುತ್ತದೆ ಎನ್ನುವುದು ನನ್ನ ಭಯವಾಗಿತ್ತು. ಹಾಗೆ, ನಲುವತ್ತೇಳರ ವಯಸ್ಸಿನಲ್ಲಿ ಒಂದು ಹೊಸ ಹಾಗೂ ಲವಲವಿಕೆಯ ಬದುಕು ನನಗಾಗಿ ತೆರೆದುಕೊಳ್ಳುವುದನ್ನು ನಾನು ಕಂಡೆ. ಅರ್ಜೆಂಟೀನಾ ಮತ್ತು ಉರುಗ್ವೆಯಲ್ಲಿ ನಾನು ಉಪನ್ಯಾಸಗಳನ್ನು ನೀಡುತ್ತ ಉದ್ದಕ್ಕೂ ಸಂಚರಿಸಿದೆ, ಸ್ವೀಡೆನ್ ಬೋರ್ಗ್, ಬ್ಲೇಕ್, ಪರ್ಶಿಯನ್ ಮತ್ತು ಚೈನೀಸ್ ಅನುಭಾವಿಗಳ ಕುರಿತು, ಬುದ್ಧಿಸಂ, ಗೌಚೆಸ್ಕೊ ಕಾವ್ಯ, ಮಾರ್ಟಿನ್ ಬೂಬರ್, ಕಬಾಲಾ, ಅರೇಬಿಯನ್ ನೈಟ್ಸ್, ಟಿ. ಇ. ಲಾರೆನ್ಸ್, ಮಧ್ಯಕಾಲೀನ ಜರ್ಮನ್ ಕಾವ್ಯ, ಐಸ್ಲ್ಯಾಂಡಿಕ್ ಸಾಗಾಗಳು (ವೀರ ಗಾಥೆಗಳು), ಹೈನ್, ಡಾಂಟೆ, ಎಕ್ಸ್ಪ್ರೆಶನಿಸಂ ಮತ್ತು ಸರ್ವಾಂಟಿಸ್ ಬಗ್ಗೆ. ಶಹರದಿಂದ ಶಹರಕ್ಕೆ ಹೋದೆ, ಮುಂದೆಂದೂ ನೋಡಲಾರದ ಹೋಟೆಲುಗಳಲ್ಲಿ ರಾತ್ರಿ ಕಳೆಯುತ್ತ. ಕೆಲವು ಸಲ ನನ್ನ ತಾಯಿ ಅಥವಾ ಗೆಳೆಯ ನನ್ನ ಜೊತೆ ಇರುತ್ತಿದ್ದರು. ನನಗೆ ಲೈಬ್ರರಿಯಲ್ಲಿ ಸಿಗುತ್ತಿದ್ದುದಕ್ಕಿಂತ ಎಷ್ಟೋ ಜಾಸ್ತಿ ಹಣ ಸಿಗತೊಡಗಿತು, ಆದರೆ ನಾನು ಕೆಲಸದಿಂದ ಖುಷಿಪಟ್ಟೆ, ಅದು ನನಗೆ ಸಮರ್ಥನೆಯಾಯಿತು.
ಈ ವರ್ಷಗಳ ಒಂದು ಮುಖ್ಯ ಘಟನೆ — ಹಾಗೂ ನನ್ನ ಬದುಕಿನದು ಕೂಡ — ಅಡೋಲ್ಫೋ ಬಿಯೋಯ್ ಕಾಸರೆಸ್ ನ ಜೊತೆಗಿನ ನನ್ನ ಗೆಳೆತನದ ಆರಂಭ. ನಾವು 1930ರಲ್ಲಿ ಅಥವಾ 1931ರಲ್ಲಿ ಭೇಟಿಯಾದೆವು. ಅವನಿಗೆ ಆಗ ಹದಿನೇಳು ವರ್ಷ, ನನಗೆ ಆಗತಾನೆ ಮೂವತ್ತು ದಾಟಿತ್ತು. ಇಂಥ ಸನ್ನಿವೇಶಗಳಲ್ಲಿ ಹಿರಿ ವಯಸ್ಸಿನ ಮನುಷ್ಯ ಯಜಮಾನನೆಂದೂ, ಕಿರಿ ವಯಸ್ಸಿನವ ಅವನ ಶಿಷ್ಯನೆಂದೂ ತಿಳಿದುಕೊಳ್ಳುವುದು ಸಾಧಾರಣ. ಆರಂಭದಲ್ಲಿ ನಮ್ಮ ನಡುವೆ ಇದು ಹೀಗೆಯೇ ಇದ್ದಿರಬಹುದು, ಅದರೆ ಹಲವು ವರ್ಷಗಳ ನಂತರ, ನಾವು ಒಟ್ಟಿಗೆ ಕೆಲಸ ಮಾಡಲು ಸುರುಮಾಡಿದಾಗ, ಬಿಯೋಯ್ ನಿಜಕ್ಕೂ ಮತ್ತು ರಹಸ್ಯವಾಗಿಯೂ ಯಜಮಾನನಾಗಿದ್ದ. ಅವನೂ ನಾನೂ ಹಲವು ವಿಭಿನ್ನ ಸಾಹಿತ್ಯಿಕ ಪ್ರಯತ್ನಗಳನ್ನು ನಡೆಸಿದೆವು. ಅರ್ಜೆಂಟೈನ್ ಕವಿತೆಗಳ ಸಂಗ್ರಹಗಳನ್ನು ತಂದೆವು, ಅದೇ ರೀತಿ ಅದ್ಭುತರಮ್ಯ ಕತೆಗಳ ಮತ್ತು ಪತ್ತೇದಾರಿ ಕತೆಗಳ ಸಂಗ್ರಹಗಳನ್ನು; ನಾವು ಲೇಖನಗಳನ್ನು ಮತ್ತು ಅವತರಣಿಕೆಗಳನ್ನು ಬರೆದೆವು; ಸರ್ ಥಾಮಸ್ ಬ್ರೌನ್ ಮತ್ತು ಗ್ರಾಶಿಯನ್ ಗೆ ಟಿಪ್ಪಣಿಗಳನ್ನು ಬರೆದೆವು; ಬೀರ್ಬೋಮ್, ಕಿಪ್ಲಿಂಗ್, ವೆಲ್ಸ್, ಮತ್ತು ಲಾರ್ಡ್ ಡನ್ಸನಿ ಮುಂತಾದವರ ಕತೆಗಳ ಅನುವಾದ ಮಾಡಿದೆವು; ನಾವೊಂದು ಪತ್ರಿಕೆಯನ್ನು ಸ್ಥಾಪಿಸಿದೆವು, ‘ಡೆಸ್ಟಿಯೆಂಪೋ’ ಅಂತ, ಮೂರು ಸಂಚಿಕೆಗಳಲ್ಲಿ ನಿಂತಿತು; ನಾವು ಫಿಲ್ಮ್ ಬರಹಗಳನ್ನು ಕೂಡ ಬರೆದೆವು, ಅವು ಅಪವಾದವಿಲ್ಲದೆ ತಿರಸ್ಕರಿಸಲ್ಪಟ್ಟುವು. ದೀನ, ದೀರ್ಘ, ಬರೋಕ್ (ಸುತ್ತಿ ಸುಳಿಯುವ) ನನ್ನ ರುಚಿಯ ವಿರುದ್ಧವಾಗಿ ಬಿಯೋಯ್ ನನಗೆ ನಿರಾಳತೆ ಮತ್ತು ನಿಯಂತ್ರಣ ಹೆಚ್ಚು ಅಪೇಕ್ಷಣೀಯ ಎಂಬುದನ್ನು ಕಲಿಸಿದ. ಬೀಸು ಮಾತಿನಲ್ಲಿ ಹೇಳಬಹುದಾದರೆ, ಬಿಯೋಯ್ ನನ್ನನ್ನು ಕ್ರಮೇಣ ಕ್ಲಾಸಿಸಂ (ಅಭಿಜಾತ ಮಾರ್ಗ) ಕಡೆಗೆ ಒಯ್ದ.
ಬಹುಶಃ ನಾನು ಈ ಕತೆಗೆ ಅನ್ಯಾಯ ಮಾಡಿದ್ದೆ; ಅದೀಗ ನನ್ನನ್ನು ಅದೆಂತೋ ಕಾಯುತ್ತಿದ್ದ, ಸಣ್ಣ ಕತೆಗಾರನಾಗಿ ನನ್ನ ಪ್ರಸಿದ್ಧಿ ನೆಲೆನಿಲ್ಲಬೇಕಾಗಿದ್ದ ಕತೆಗಳ ಮುನ್ಸೂಚನೆ ನೀಡಿದುದು ಮಾತ್ರವಲ್ಲ, ಅವುಗಳ ವಿನ್ಯಾಸವನ್ನೂ ಸಿದ್ಧಗೊಳಿಸಿತು.
ನಲುವತ್ತರ ಆರಂಭದಲ್ಲಿರಬೇಕು, ನಾವು ಸಹಭಾಗಿತ್ವದಲ್ಲಿ ಬರೆಯಲು ಸುರುಮಾಡಿದೆವು – ಅಲ್ಲಿಯವರೆಗೆ ಅಸಾಧ್ಯವೆಂದೇ ನಾನು ಪರಿಗಣಿಸಿದ ಸಾಧನೆ ಅದು. ಒಂದು ಪತ್ತೇದಾರಿ ಕತೆಗೋಸ್ಕರ ನಾನು ಹಂದರವನ್ನು ಕಲ್ಪನೆ ಮಾಡಿದ್ದೆ, ನಮ್ಮಿಬ್ಬರಿಗೂ ಅದು ಚೆನ್ನಾಗಿದೆ ಅನಿಸಿತ್ತು. ಒಂದು ಮಳೆಯ ಮುಂಜಾನೆ, ಅವನಂದ ನಾವದನ್ನು ಯತ್ನಿಸಬೇಕು ಎಂಬುದಾಗಿ. ನಾನು ಹೆಚ್ಚು ಮನಸ್ಸಿಲ್ಲದೆ ಒಪ್ಪಿಕೊಂಡೆ, ಮತ್ತು ಅದೇ ಮುಂಜಾನೆ ಸ್ವಲ್ಪ ಸಮಯದ ನಂತರ ಅದು ಸಂಭವಿಸಿಯೇ ಬಿಟ್ಟಿತು. ಒಬ್ಬ ಮೂರನೆ ಮನುಷ್ಯ, ಹೊನೋರಿಯೋ ಬುಸ್ಟೋಸ್ ಡೊಮೆಕ್ ಮೂಡಿ ಬಂದ, ಮತ್ತು ಕತೆಯನ್ನು ಕೈಗೆ ತೆಗೆದುಕೊಂಡ. ಕೊನೆಗೆ ಅವನು ಕಬ್ಬಿಣದ ಬಡಿಗೆಯಿಂದ ನಮ್ಮನ್ನು ಆಳಲು ತೊಡಗಿದ, ಮೊದಮೊದಲು ನಮಗದು ಮೋಜೆನಿಸಿತು, ನಂತರ ಹತಾಶೆ: ಅವನು ನಮಗಿಂತ ಪೂರ್ತಿ ವಿಭಿನ್ನನಾಗಿದ್ದ, ಅವನದೇ ಹುಚ್ಚಾಟಗಳು, ಅವನದೇ ದ್ವಂದ್ವಾರ್ಥ, ಮತ್ತು ಅವನದೇ ಅತಿ ವಿಸ್ತಾರದ ಬರವಣಿಗೆ ಶೈಲಿ.
ಡೊಮೆಕ್ ಎಂಬುದು ಬಿಯೋಯ್ ನ ಮುತ್ತಜ್ಜನೊಬ್ಬನ ಹೆಸರು, ಬುಸ್ಟೋಸ್ ಎಂಬುದು ಕೋರ್ದೋಬಾದ ನನ್ನದೊಬ್ಬ ಮುತ್ತಜ್ಜನದು. ಬುಸ್ಟೋಸ್ ಡೊಮೆಕ್ ನ ಮೊದಲ ಪುಸ್ತಕ ‘ಸಿಕ್ಸ್ ಪ್ರಾಬ್ಲೆಮ್ಸ್ ಫಾರ್ ಡಾನ್ ಇಸಿದ್ರೊ ಪರೋದಿ’ (1942). ಅದನ್ನು ಬರೆಯುವ ಅವಧಿಯಲ್ಲಿ ಅವನು (ಹೊನೋರಿಯೋ ಬುಸ್ಟೋಸ್ ಡೊಮೆಕ್) ನಿಯಂತ್ರಣ ತಪ್ಪಿದ್ದೇ ಇಲ್ಲ. ಮ್ಯಾಕ್ಸ್ ಕರಾಡೋ ಒಬ್ಬ ಕುರುಡ ಪತ್ತೇದಾರನನ್ನು ಪ್ರಯತ್ನಿಸಿದ್ದ; ಬಿಯೋಯ್ ಮತ್ತು ನಾನು ಒಂದು ಹೆಜ್ಜೆ ಮುಂದೆ ಹೋಗಿ ನಮ್ಮ ಪತ್ತೇದಾರನನ್ನು ಕಾರಾಗೃಹದ ಕೋಣೆಯಲ್ಲಿರಿಸಿದೆವು. ಕೃತಿ ಅರ್ಜೆಂಟೈನ್ ರಾಜಕೀಯದ ಮೇಲಣ ವಿಡಂಬನೆಯೂ ಆಗಿತ್ತು. ಹಲವು ವರ್ಷಗಳ ತನಕ ಬುಸ್ಟೋಸ್ ಮತ್ತು ಡಾಮೆಕ್ ನ ಜೋಡಿ ಅಸ್ತಿತ್ವ ಯಾರಿಗೂ ಹೇಳಿರಲಿಲ್ಲ. ಕೊನೆಗೂ ಅದು ಗೊತ್ತಾದಾಗ, ಜನ ಅಂದುಕೊಂಡರು, ಬುಸ್ಟೋಸ್ ಒಂದು ತಮಾಷೆಯಾದ ಕಾರಣ, ಅವನ ಬರಹಗಳನ್ನು ಗಂಭೀರವಾಗಿ ತೆತೆದುಕೊಳ್ಳಬೇಕಾಗಿಲ್ಲ ಎಂಬುದಾಗಿ.
ನಮ್ಮ ಮುಂದಣ ಸಹಭಾಗಿತ್ವ ಒಂದು ಪತ್ತೇದಾರಿ ಕಾದಂಬರಿ, ‘ಎ ಮಾಡೆಲ್ ಫಾರ್ ಡೆತ್.’ ಇದು ಎಷ್ಟೊಂದು ವೈಯಕ್ತಿಕವಾಗಿತ್ತು ಹಾಗೂ ಖಾಸಗಿ ಹಾಸ್ಯಗಳಿಂದ ತುಂಬಿತ್ತು ಎಂದರೆ ನಾವಿದನ್ನು ಮಾರಾಟಕ್ಕಿಲ್ಲದ ಆವೃತ್ತಿಯಲ್ಲಿ ತಂದೆವು. ಈ ಪುಸ್ತಕದ ಲೇಖಕನಿಗೆ ನಾವು ಬಿ. ಸುವಾರೆಝ್ ಲಿಂಚ್ ಎಂದು ಹೆಸರಿಟ್ಟೆವು. ‘ಬಿ’ ಬಿಯೋಯ್ ಮತ್ತು ಬೋರ್ಹೆಸ್ ಗೆ, ‘ಸುವಾರೆಝ್’ ನನ್ನ ಇನ್ನೊಬ್ಬ ಮುತ್ತಜ್ಜನಿಗೋಸ್ಕರ ಮತ್ತು ‘ಲಿಂಚ್’ ಬಿಯೋಸ್ ನ ಇನ್ನೊಬ್ಬ ಮುತ್ತಜ್ಜನಿಗೋಸ್ಕರ. ಬುಸ್ಟೋಸ್ ಡೊಮೆಕ್ 1946ರಲ್ಲಿ ಇನ್ನೊಂದು ಖಾಸಗಿ ಆವೃತ್ತಿಯಾಗಿ ಪ್ರಕಟವಾಯಿತು, ಈ ಸಲ ಎರಡು ಕತೆಗಳ ಸಂಪುಟ, ‘ಟೂ ಮೆಮೊರೆಬಲ್ ಫ್ಯಾಂಟಸೀಸ್’ ಎಂಬುದಾಗಿ. ದೀರ್ಘ ಗ್ರಹಣದ ನಂತರ ಬುಸ್ಟೋಸ್ ಮತ್ತೊಮ್ಮೆ ಲೇಖನಿ ಎತ್ತಿಕೊಂಡ, ಮತ್ತು 1967ರಲ್ಲಿ, ತನ್ನ ‘ಕ್ರಾನಿಕ್ಲ್ಸ್’ ಹೊರ ತಂದ.
ಇವೆಲ್ಲವೂ ಕಾಲ್ಪನಿಕ, ಮತ್ತು ಅಸಾಧಾರಣ ರೀತಿಯಲ್ಲಿ ಆಧುನಿಕರಾಗಿದ್ದ ಕಲಾವಿದರ ಕುರಿತು ಬರೆದ ಲೇಖನಗಳಾಗಿದ್ದುವು – ವಾಸ್ತುಶಿಲ್ಪಿಗಳು, ಶಿಲ್ಪಿಗಳು, ಚಿತ್ರ ಕಲಾವಿದರು, ಬಾಣಸಿಗರು, ಕವಿಗಳು, ಕಾದಂಬರಿಕಾರರು, ವಸ್ತ್ರವಿನ್ಯಾಸಕಾರರು ಮುಂತಾದವರ ಕುರಿತು – ಆಧುನಿಕತೆಯ ಆರಾಧಕನಾದ ಒಬ್ಬ ವಿಮರ್ಶಕನಿಂದ ಎಂಬ ರೀತಿಯಲ್ಲಿ. ಆದರೆ ಲೇಖಕ ಮತ್ತು ಅವನು ಚಿತ್ರಿಸುವ ಜನ ಇಬ್ಬರೂ ಮೂರ್ಖರು, ಮತ್ತು ಯಾರು ಯಾರನ್ನು ಸೋಲಿಸುತ್ತಿದ್ದಾರೋ ಹೇಳುವುದು ಕಷ್ಟ. ಪುಸ್ತಕವನ್ನು ಅರ್ಪಿಸಿದ್ದು ‘ಮರೆತು ಹೋದ ಆ ಮೂವರು ಶ್ರೇಷ್ಠರಿಗೆ – ಪಿಕಾಸೋ, ಜಾಯ್ಸ್, ಮತ್ತು ಲೆ ಕೋರ್ಬುಸಿಯರ್ಗೆ.’ ಪುಸ್ತಕದ ಶೈಲಿಯೇ ಒಂದು ಅಣಕವಾಗಿತ್ತು. ಬುಸ್ಟೋಸ್ ಸಾಹಿತ್ಯಿಕ ಪತ್ರಿಕಾ ಭಾಷೆಯಲ್ಲಿ ಬರೆಯುತ್ತಾನೆ, ಹೊಸ ಹೊಸ ಸೃಷ್ಟಿಗಳಲ್ಲಿ ತುಂಬಿ ತುಳುಕಾಡುತ್ತ, ಲ್ಯಾಟಿನೇಟ್ ಶಬ್ದ ಭಂಡಾರ, ಕ್ಲೀಷೆಗಳು (ಸವಕಲು ಮಾತುಗಳು), ಮಿಶ್ರ ರೂಪಕಗಳು, ನಾನ್-ಸೆಕ್ವಿಟರುಗಳು (ಕಾರ್ಯ ಕಾರಣ ಸಂಬಂಧವಿರದ ಅತಾರ್ಕಿಕತ್ವಗಳು), ಶಬ್ದಾಡಂಬರ.
ಸಹಭಾಗಿತ್ವ ಹೇಗೆ ಸಾಧ್ಯ ಎಂದು ಪದೇ ಪದೇ ನನ್ನನ್ನು ಕೇಳಿದವರಿದ್ದಾರೆ. ನನಗನಿಸುತ್ತದೆ, ಅದಕ್ಕೆ ಅಹಮಿನ (ಈಗೋ), ಡಾಂಭಿಕತೆಯ, ಬಹುಶಃ ಪರಸ್ಪರ ಮರ್ಯಾದೆಯ, ಜಂಟಿ ವರ್ಜನೆ ಅಗತ್ಯ ಎಂದು. ಸಹಭಾಗಿಗಳು ತಮ್ಮನ್ನು ತಾವು ಮರೆಯಬೇಕು, ಮತ್ತು ಕೃತಿಯ ಕುರಿತು ಮಾತ್ರ ಯೋಚಿಸಬೇಕು. ನಿಜ ಎಂದರೆ, ಯಾವುದಾದರೊಂದು ಜೋಕು ಅಥವಾ ವಿಶೇಷಣಪದ ಮೇಜಿನ ನನ್ನ ಬದಿಯಿಂದ ಬಂತೋ ಅಥವಾ ಬಿಯೋಯ್ ನ ಬದಿಯಿಂದ ಬಂತೋ ಎಂದು ಯಾರಾದರೂ ತಿಳಿಯಲು ಅಪೇಕ್ಷಿಸಿದಾಗ, ಪ್ರಾಮಾಣಿಕವಾಗಿಯೂ ನಾನವನಿಗೆ ಏನೂ ಹೇಳಲಾರೆ. ನಾನು ಇತರ ಮಿತ್ರರ ಜೊತೆ ಕೂಡ ಕೂಡಿ ಬರೆಯಲು ಪ್ರಯತ್ನಿಸಿದ್ದೇನೆ – ಅವರಲ್ಲಿ ಕೆಲವರು ನನಗೆ ಬಹಳ ಹತ್ತಿರದವರು – ಆದರೆ ಖಡಾ ಖಂಡಿತವಾಗಿರಲು ಅವರ ಅಸಾಮರ್ಥ್ಯ ಒಂದಾದರೆ, ದಪ್ಪ ಚರ್ಮದವರಾಗಿರಲು ಅವರ ಅಸಾಮರ್ಥ್ಯ ಇನ್ನೊಂದು, ಅಂತೂ ಯೋಜನೆಯನ್ನು ಅಸಾಧ್ಯಗೊಳಿಸಿತು. ‘ಬುಸ್ಟೋಸ್ ಡೊಮೆಕ್ ನ ಕ್ರಾನಿಕ್ಲ್ಸ್’ ಕುರಿತಾದರೆ, ಅವು ನನ್ನ ಹೆಸರಿನಲ್ಲಿ ಬರೆದ ಯಾವುದೇ ಬರಹಕ್ಕಿಂತ ಚೆನ್ನಾಗಿದ್ದುವು, ಹಾಗೂ ಬಿಯೋಯ್ ಸ್ವಂತ ಬರೆದ ಬರಹಗಳಿಗೆ ಸರಿ ಸಮಾನ ಇದ್ದುವು.
1950ರಲ್ಲಿ ನಾನು ಸೊಸೈಡಾಡ್ ಅರ್ಜೆಂಟೀನಾ ದ ಎಸ್ಕ್ರಿಟೋರೆಸ್ ನ (ಅರ್ಜೆಂಟೈನ್ ಸೊಸೈಟಿ ಆಫ್ ರೈಟರ್ಸ್ ನ) ಅಧ್ಯಕ್ಷನಾಗಿ ಚುನಾಯಿಸಲ್ಪಟ್ಟೆ. ಅರ್ಜೆಂಟೈನ್ ರಿಪಬ್ಲಿಕ್ ಇಂದು ಹೇಗೋ ಹಾಗೆ ಅಂದೂ ಒಂದು ಮಿದು ದೇಶವಾಗಿತ್ತು. ಹಾಗೂ SADE (ಸೊಸೈಡಾಡ್ ಅರ್ಜೆಂಟೀನಾ ದ ಎಸ್ಕ್ರಿಟೋರೆಸ್) ನಿರಂಕುಶ ಪ್ರಭುತ್ವದ ವಿರುದ್ಧ ನಿಂತಿದ್ದ ಶಕ್ತಿಕೇಂದ್ರಗಳಲ್ಲಿ ಒಂದಾಗಿತ್ತು. ಇದೆಷ್ಟು ವ್ಯಕ್ತವಾಗಿತ್ತು ಎಂದರೆ ಕ್ರಾಂತಿಯ ತನಕ ಹಲವು ಗಣ್ಯ ಸಾಹಿತಿಗಳು ಅದರ ಹೊಸ್ತಿಲೊಳಕ್ಕೆ ಕಾಲಿಡಲು ಹಿಂಜರಿಯುತ್ತಿದ್ದರು. ನಿರಂಕುಶ ಪ್ರಭುತ್ವದ ಒಂದು ಸ್ವಭಾವ ಏನಾಗಿತ್ತೆಂದರೆ ಅದರ ಸ್ವಘೋಷಿತ ಬೆಂಬಲಿಗರು ಸಹಾ ತಾವು ನಿಜಕ್ಕೂ ಸರಕಾರವನ್ನು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ, ಬರೇ ಸ್ವಹಿತದ ಕಾರಣ ನಟನೆ ಮಾಡುತ್ತಿದ್ದೇವೆ ಎನ್ನುವುದನ್ನು ಸ್ಪಷ್ಟಪಡಿಸುತ್ತಿದ್ದರು. ಇದು ಅರ್ಥವಾಗುತ್ತಿತ್ತು ಹಾಗೂ ಕ್ಷಮಿಸಲ್ಪಡುತ್ತಿತ್ತು ಕೂಡ, ಯಾಕೆಂದರೆ ನನ್ನ ದೇಶೀಯರಲ್ಲಿ ಹಲವರಿಗೆ ಒಂದು ವೈಚಾರಿಕ ಮನಃಸಾಕ್ಷಿಯಿತ್ತು, ನೈತಿಕ ಮನಃಸಾಕ್ಷಿ ಇಲ್ಲದೆ ಇದ್ದರೂ. ಪೆರೋನ್ ಮತ್ತು ಅವನ ಪತ್ನಿಯ ಕುರಿತಾದ ಹೆಚ್ಚೂ ಕಡಿಮೆ ಎಲ್ಲಾ ಅಶ್ಲೀಲ ತಮಾಷೆಗಳೂ ಹುಟ್ಟಿ ಬಂದದ್ದು ಪೆರೋನಿಸ್ಟರಿಂದಲೇ, ತಮ್ಮ ಮುಖ ಉಳಿಸಿಕೊಳ್ಳುವ ಪ್ರಯತ್ನದಲ್ಲಿ. SADE ಕ್ರಮೇಣ ಮುಚ್ಚಲ್ಪಟ್ಟಿತು.
ಅಲ್ಲಿ ನೀಡಲು ನನಗೆ ಅನುಮತಿಯಿದ್ದ ಕೊನೆಯ ಉಪನ್ಯಾಸದ ನೆನಪಿದೆ. ತೀರಾ ಚಿಕ್ಕದಾದ ಒಂದು ಶ್ರಾವಕ ಸಮೂಹ; ಅವರ ನಡುವೆ ಗೊಂದಲದಲ್ಲಿದ್ದ ಒಬ್ಬ ಪೋಲೀಸ್ ಪರ್ಶಿಯನ್ ಸೂಫಿಸಂ ಕುರಿತಾದ ನನ್ನ ಕೆಲವೊಂದು ಮಾತುಗಳನ್ನು ತನ್ನಿಂದಾದಷ್ಟು ಒಡ್ಡೊಡ್ಡಾಗಿ ಟಿಪ್ಪಣಿ ಮಾಡಿಕೊಳ್ಳಲು ಶ್ರಮಿಸುತ್ತಿದ್ದ. ಈ ನೀರಸವೂ ಆಶಾರಹಿತವೂ ಆದ ಅವಧಿಯಲ್ಲಿ ನನ್ನ ತಾಯಿಯನ್ನು — ಅವಳ ವಯಸ್ಸು ಆಗ ಎಪ್ಪತ್ತರಲ್ಲಿತ್ತು — ಗೃಹಬಂಧನದಲ್ಲಿ ಇರಿಸಿದ್ದರು. ನನ್ನ ತಂಗಿ ಮತ್ತು ಒಬ್ಬ ಹತ್ತಿರದ ಬಂಧು ಜೈಲಿನಲ್ಲಿ ಒಂದು ತಿಂಗಳು ಕಳೆದರು. ಸ್ವತಃ ನನ್ನ ಪಾದಗಳಿಗೆ ಒಬ್ಬ ಬೇಹುಗಾರ ಅಂಟಿಕೊಂಡಿದ್ದ, ಅವನನ್ನು ನಾನು ಮೊದಲು ದೀರ್ಘವೂ ಉದ್ದೇಶರಹಿತವೂ ಆದ ನಡೆತಗಳಿಗೆ ಅಲೆಸಿದೆ, ನಂತರ ಅವನೊಂದಿಗೆ ಗೆಳೆತನ ಮಾಡಿಕೊಂಡೆ. ತಾನೂ ಪೆರೋನನ್ನು ದ್ವೇಷಿಸುತ್ತೇನೆ ಎಂದು ಅವನು ಒಪ್ಪಿಕೊಂಡ, ಆದರೆ ಆಜ್ಞೆಗಳನ್ನು ಪಾಲಿಸುತ್ತಿದ್ದೇನೆ ಎಂದ. ಅರ್ನೆಸ್ಟೋ ಪಲಾಸಿಯೋ ಒಮ್ಮೆ ನನ್ನನ್ನು ‘ಅನಾಮಿಕ’ನಿಗೆ (ಅಧ್ಯಕ್ಷನಿಗೆ) ಪರಿಚಯ ಮಾಡಿಸಲು ಮುಂದಾದ, ಆದರೆ ನನಗವನನ್ನು ಭೇಟಿಯಾಗುವುದು ಬೇಕಿರಲಿಲ್ಲ. ನಾನು ಯಾವ ಮನುಷ್ಯನ ಕೈ ಕುಲುಕಲಾರೆನೋ, ಅವನಿಗೆ ನಾನು ಪರಿಚಯಿಸಲ್ಪಡುವುದು ಹೇಗೆ?
ಎಂದಿನಿಂದಲೋ ಆಶಿಸುತ್ತಿದ್ದ ಕ್ರಾಂತಿ ಸೆಪ್ಟೆಂಬರ್ 1955ರಲ್ಲಿ ಬಂತು. ಒಂದು ನಿದ್ರಾಹೀನ, ತಲ್ಲಣದ ರಾತ್ರಿಯ ನಂತರ, ಇಡೀ ಜನಸಮೂಹ ರಸ್ತೆಗಳಿಗೆ ಇಳಿಯಿತು, ಕ್ರಾಂತಿಗೆ ಜೈಕಾರ ಹಾಕುತ್ತ, ಕೋರ್ದೋಬಾದ ಹೆಸರು ಕೂಗುತ್ತ, ಯಾಕೆಂದರೆ ಹೆಚ್ಚಿನ ಹೋರಾಟ ಅಲ್ಲಿ ನಡೆದಿತ್ತು. ನಾವೆಷ್ಟು ಮಂತ್ರಮುಗ್ಧರಾಗಿದ್ದೆವೆಂದರೆ, ಮೂಳೆ ಕೊರೆಯುತ್ತಿದ್ದ ಮಳೆಯ ಗೊಡವೆ ಕೂಡ ನಮಗಿರಲಿಲ್ಲ. ನಾವೆಷ್ಟು ಸಂತೋಷಗೊಂಡಿದ್ದೆವೆಂದರೆ, ಬಿದ್ದ ನಿರಂಕುಶ ಪ್ರಭುವಿನ ವಿರುದ್ಧ ಯಾರೂ ಒಂದು ಚಕಾರ ಶಬ್ದವನ್ನೂ ಎತ್ತಲಿಲ್ಲ. ಪೆರೋನ್ ಅಡಗಿದ, ಮತ್ತು ಆಮೇಲೆ ಅವನಿಗೆ ದೇಶ ಬಿಡಲು ಅವಕಾಶ ಮಾಡಿ ಕೊಡಲಾಯಿತು. ಅವನು ಎಷ್ಟು ಹಣ ಅಪಹರಿಸಿದ ಎನ್ನುವುದು ಯಾರಿಗೂ ಗೊತಿಲ್ಲ.
ನನ್ನ ಇಬ್ಬರು ಅತ್ಯಂತ ಆತ್ಮೀಯ ಮಿತ್ರೆಯರು, ಎಸ್ತರ್ ಝೆಂಬೊರೈನ್ ದ ಟೊರೆಸ್ ಮತ್ತು ವಿಕ್ಟೋರಿಯಾ ಒಕ್ಯಾಂಪೋ ನನ್ನನ್ನು ನ್ಯಾಶನಲ್ ಲೈಬ್ರರಿಯ ನಿರ್ದೇಶಕ ಹುದ್ದೆಗೆ ನೇಮಿಸಲಾಗುವ ಸಾಧ್ಯತೆಯ ಕನಸು ಕಾಣತೊಡಗಿದರು. ಇದೊಂದು ಆಗದ ಹೋಗದ ಯೋಜನೆಯೆಂದು ನನಗನಿಸಿತು; ಹೆಚ್ಚೆಂದರೆ, ಸಣ್ಣದೊಂದು ಪೇಟೆಯಲ್ಲಿ, ಅದೂ ನಗರದ ತೆಂಕು ದಿಕ್ಕಿನಲ್ಲಿ, ಲೈಬ್ರರಿಯೊಂದರ ನಿರ್ದೇಶಕತ್ವವನ್ನಷ್ಟೇ ನಾನು ಬಯಸಿದ್ದು. ಒಂದು ದಿನದ ಒಳಗೆ, ‘ಸ್ಯೂರ್’ ಪತ್ರಿಕೆ (ವಿಕ್ಟೋರಿಯಾ ಒಕ್ಯಾಂಪೋ ಎಂದು ಓದಿ), ಮರಳಿ ಸುರುವಾದ SADE (ಕಾರ್ಲೋಸ್ ಅಲ್ಬರ್ಟೋ ಎರ್ರೋ ಎಂದು ಓದಿ), ಸೊಸಿಯೆಡಾಡ್ ಅರ್ಜೆಂಟೀನಾ ದ ಕಲ್ಚುರಾ ಆಂಗ್ಲೆಸ್ (ಕಾರ್ಲೋಸ್ ಡೆಲ್ ಕಾಂಪೆಲ್ಲೋ ಎಂದು ಓದಿ) ಮತ್ತು ಕೊಲೆಜಿಯೋ ಲಿಬ್ರ ದ ಎಸ್ಟೂಡಿಯೋಸ್ ಸುಪೀರಿಯೊರೆಸ್ (ಲೂಯಿಸ್ ರೈಸಿಗ್ ಎಂದು ಓದಿ) ಸಹಿ ಮಾಡಿದ ಒಂದು ಮನವಿ ಸಿದ್ಧವಾಯಿತು. ಇದನ್ನು ವಿದ್ಯಾಮಂತ್ರಿಯ ಮೇಜಿನಲ್ಲಿ ಇರಿಸಲಾಯಿತು. ಕೊನೆಗೂ ನಾನು ಪ್ರಭಾರಿ ಅಧ್ಯಕ್ಷರಾದ ಜನರಲ್ ಎಡುವರ್ಡೋ ಲೊನಾರ್ಡಿಯವರಿಂದ ನ್ಯಾಶನಲ್ ಲೈಬ್ರರಿಯ ನಿರ್ದೇಶಕ ಹುದ್ದೆಗೆ ನೇಮಿಸಲ್ಪಟ್ಟೆ.
ಅದರ ಕೆಲವು ದಿನಗಳ ಹಿಂದೆ ಒಂದು ರಾತ್ರಿ ನಾನು ಮತ್ತು ನನ್ನ ತಾಯಿ ಲೈಬ್ರರಿ ತನಕ ಹೋಗಿದ್ದೆವು, ಕಟ್ಟಡ ನೋಡುವುದಕ್ಕೆ, ಆದರೆ ಮೂಢನಂಬಿಕೆ ಅಡ್ಡ ಬಂದು ನಾನು ಒಳಗೆ ಹೋಗಲು ನಿರಾಕರಿಸಿದೆ. ‘ಕೆಲಸ ಸಿಗುವ ವರೆಗೆ ಇಲ್ಲ,’ ಎಂದೆ. ಅದೇ ವಾರ ಲೈಬ್ರರಿಯ ಚಾರ್ಜು ತೆಗೆದುಕೊಳ್ಳುವುದಕ್ಕೆ ನನಗೆ ಕರೆ ಬಂತು. ನನ್ನ ಕುಟುಂಬ ಜೊತೆಯಲ್ಲಿ ಇತ್ತು, ನಾನು ಅಲ್ಲಿನ ಉದ್ಯೋಗಿಗಳ ಮುಂದೆ ಒಂದು ಭಾಷಣ ಮಾಡಿದೆ, ನಾನು ನಿಜಕ್ಕೂ ನಿರ್ದೇಶಕ ಎಂದು — ಹಾಗೆಂದು ನಂಬಲು ಕಷ್ಟವಾದ ನಿರ್ದೇಶಕ ಎಂದು. ಅದೇ ವೇಳೆ, ಜೋಸೆ ಎಡ್ಮುಂಡೋ ಕ್ಲೆಮುಂಟೆ ಸಹಾಯಕ ನಿರ್ದೇಶಕನಾದ. ಈತ ಕೆಲವು ವರ್ಷಗಳ ಮೊದಲು ನನ್ನ ಇಡೀ ಬರಹಗಳ ಸಂಪುಟಗಳನ್ನು ಪ್ರಕಟಿಸುವಂತೆ ಎಮೆಸೆಯನ್ನು ಒತ್ತಾಯಿಸುವುದರಲ್ಲಿ ಸಫಲನಾಗಿದ್ದ. ನಾನೊಬ್ಬ ಜನ ಎಂಬ ಭಾವನೆ ನನಗೆ ಬಂದುದು ನಿಜ, ಆದರೆ ಮುಂದಿನ ಮೂರು ತಿಂಗಳುಗಳ ತನಕ ನಮಗೆ ಸಂಬಳ ಸಿಗಲಿಲ್ಲ. ನನಗಿಂತ ಮೊದಲಿನ ನಿರ್ದೇಶಕರು — ಅವರೊಬ್ಬ ಪೆರೊನಿಸ್ಟ್ ಆಗಿದ್ದರು — ಅಧಿಕೃತವಾಗಿ ಉಚ್ಛಾಟಿಸಲ್ಪಟ್ಟಿದ್ದರು ಎಂದು ನನಗನಿಸುವುದಿಲ್ಲ. ಆದರೆ ಅವರು ಮತ್ತೆಂದೂ ಲೈಬ್ರರಿಗೆ ಬರಲಿಲ್ಲ ಅಷ್ಟೆ. ಸರಕಾರದವರು ಕೆಲಸಕ್ಕೆ ನನ್ನನ್ನು ಹೆಸರಿಸಿದರಲ್ಲದೆ, ಹಿಂದಿನವರನ್ನು ಕಿತ್ತು ಹಾಕುವ ಶ್ರಮ ವಹಿಸಲಿಲ್ಲ.
ಇನ್ನೊಂದು ಸಂತೋಷ ನನಗೆ ಮುಂದಿನ ವರ್ಷವೇ ಲಭ್ಯವಾಯಿತು. ಯುನಿವರ್ಸಿಟಿ ಆಫ್ ಬ್ಯೂನೋಸ್ ಏರಿಸ್ ನಲ್ಲಿ ನನ್ನನ್ನು ಇಂಗ್ಲಿಷ್ ಮತ್ತು ಅಮೇರಿಕನ್ ಸಾಹಿತ್ಯದ ಪ್ರೊಫೆಸರ್ ಆಗಿ ನೇಮಕ ಮಾಡಿದರು. ಬೇರೆ ಅರ್ಜಿದಾರರು ಬಹಳ ಕಷ್ಟಪಟ್ಟು ತಮ್ಮ ಅನುವಾದಗಳು, ಲೇಖನಗಳು, ಉಪನ್ಯಾಸಗಳು, ಮತ್ತು ಇತರ ಸಾಧನೆಗಳ ಪಟ್ಟಿಗಳನ್ನು ನೀಡಿದ್ದರೆ, ನಾನು ಈ ಮುಂದಿನ ಹೇಳಿಕೆಗೆ ನನ್ನನ್ನು ಮಿತಿಗೊಳಿಸಿದೆ: ‘ನನಗೆ ತಿಳಿಯದೆಯೆ ನಾನು ನನ್ನ ಜೀವನದ ಉದ್ದಕ್ಕೂ ಈ ಕೆಲಸಕ್ಕಾಗಿ ನನ್ನನ್ನು ತಯಾರಿಗೊಳಿಸುತ್ತ ಇದ್ದೆ.’ ನನ್ನ ಈ ಸಾದಾ ಸಮೀಪನ ನನಗೆ ದಿನವನ್ನು ಗೆದ್ದುಕೊಟ್ಟಿತು. ನನ್ನನ್ನು ತೆಗೆದುಕೊಂಡರು, ಹಾಗೂ ನಾನು ಯುನಿವರ್ಸಿಟಿಯಲ್ಲಿ ಹತ್ತು ಹನ್ನೆರಡು ಸಂತಸದ ವರ್ಷಗಳನ್ನು ಕಳೆದೆ.
ನನ್ನ ಕುರುಡು ಚಿಕ್ಕಂದಿನಿಂದಲೂ ಸ್ವಲ್ಪ ಸ್ವಲ್ಪವೇ ಹೆಚ್ಚಾಗುತ್ತ ಬರುತ್ತಿತ್ತು. ಅದೊಂದು ನಿಧಾನ ಗತಿಯ ಬೇಸಿಗೆಯ ಮುಸ್ಸಂಜೆ. ಅದರಲ್ಲಿ ಪ್ರತ್ಯೇಕ ದಾರುಣವಾದ್ದಾಗಲಿ, ನಾಟಕೀಯವಾದ್ದಾಗಲಿ ಏನೂ ಇರಲಿಲ್ಲ. 1927ರಿಂದ ಸುರುವಾಗಿ ನಾನು ಎಂಟು ಬಾರಿ ಕಣ್ಣಿನ ಶಸ್ತ್ರಚಿಕಿತ್ಸೆಗೆ ಒಳಗಾದೆ, ಆದರೆ 1950ರ ಕೊನೆಭಾಗದಲ್ಲಿ, ನಾನು ‘ಪೋಯಮ್ ಆಫ್ ದ ಗಿಫ್ಟ್ಸ್’ ಬರೆದ ಕಾಲದಿಂದ, ಓದಲು ಮತ್ತು ಬರೆಯಲು ನಾನು ಕುರುಡನಾಗಿದ್ದೇನೆ. ಅಂಧತ್ವ ನನ್ನ ಕುಟುಂಬದಲ್ಲೇ ಇತ್ತು; ನನ್ನ ಮುತ್ತಜ್ಜ ಎಡ್ವರ್ಡ್ ಯಂಗ್ ಹಸ್ಲಮ್ ನ ಕಣ್ಣಿನ ಶಸ್ತ್ರಚಿಕಿತ್ಸೆಯ ಸವಿವರ ಲೇಖನವೊಂದು ಲಂಡನ್ ನ ‘ಲಾನ್ಸೆಟ್’ ವೈದ್ಯಕೀಯ ಪತ್ರಿಕೆಯ ಪುಟಗಳಲ್ಲಿ ಪ್ರಕಟವಾಗಿತ್ತು. ಅಂಧತ್ವ ನ್ಯಾಶನಲ್ ಲೈಬ್ರರಿಯ ನಿರ್ದೇಶಕರನ್ನೂ ಬಾಧಿಸುತ್ತಿತ್ತೆಂದು ತೋರುತ್ತದೆ. ನನ್ನ ಸುಪ್ರಸಿದ್ಧರಾದ ಪೂರ್ವಿಕರಲ್ಲಿ ಇಬ್ಬರು, ಜೋಸೆ ಮರ್ಮೋಲ್ ಮತ್ತು ಪಾಲ್ ಗ್ರೌಸಾಕ್, ಇದೇ ವಿಧಿಯನ್ನು ಅನುಭವಿಸಿದರು. ನನ್ನ ಕವಿತೆಯಲ್ಲಿ ನಾನು ದೇವರ ವ್ಯಂಗ್ಯದ ಕುರಿತು ಮಾತಾಡುತ್ತೇನೆ, ಒಂದೇ ಕಾಲಕ್ಕೆ ನನಗೆ 800,000 ಪುಸ್ತಕಗಳನ್ನೂ ಕತ್ತಲನ್ನೂ ಕರುಣಿಸಿದ್ದಕ್ಕೆ.
ನನ್ನ ಕುರುಡುತನದ ಒಂದು ಮುಖ್ಯ ಪರಿಣಾಮವೆಂದರೆ, ನಾನು ಕ್ರಮೇಣ ಮುಕ್ತಛಂದವನ್ನು ತೊರೆದು ಕ್ಲಾಸಿಕಲ್ ಛಂದೋಬದ್ಧತೆಯನ್ನು ಸ್ವೀಕರಿಸಿದುದು. ನಿಜ ಎಂದರೆ ಕುರುಡುತನ ನನ್ನನ್ನು ಮತ್ತೆ ಕವಿತೆ ಬರೆಯುವ ಹಾಗೆ ಮಾಡಿತು. ಕರಡು ಆವೃತ್ತಿಗಳು ನನಗೆ ಸಾಧ್ಯವಿರದ ಕಾರಣ, ನಾನು ನೆನಪನ್ನು ಅವಲಂಬಿಸಬೇಕಾಗಿ ಬಂತು. ಗದ್ಯಕ್ಕಿಂತ ಪದ್ಯ, ಅನಿಯತ ಪದ್ಯರೂಪಕ್ಕಿಂತ ನಿಯತ ಪದ್ಯರೂಪ, ನೆನಪಿಟ್ಟುಕೊಳ್ಳುವುದಕ್ಕೆ ಹೆಚ್ಚು ಸುಲಭ ಎನ್ನುವುದು ಸ್ಪಷ್ಟವೇ ಇದೆ.
ಕ್ರಮಬದ್ಧವಾದ ಪದ್ಯ ಸಾಗಾಣಿಕೆಗೆ ಅನುಕೂಲ. ಒಂದು ಸುನೀತವನ್ನು ರಚಿಸುತ್ತ, ತಿದ್ದಿ ತೀಡುತ್ತ ರಸ್ತೆಯಲ್ಲಿ ನಡೆಯಬಹುದು ಅಥವಾ ತುರಂಗಮಾರ್ಗದಲ್ಲಿ ಸಾಗಬಹುದು, ಯಾಕೆಂದರೆ ಪ್ರಾಸ ಮತ್ತು ಛಂದಸ್ಸಿಗೆ ಸ್ಮೃತಿ ಶಕ್ತಿಯ ಗುಣವಿದೆ. ಈ ವರ್ಷಗಳಲ್ಲಿ ನಾನು ಡಜನುಗಟ್ಟಲೆ ಸುನೀತಗಳನ್ನೂ, ಹನ್ನೊಂದು ಸಿಲಬಲ್ ಗಳ ನಾಲ್ಕು ಸಾಲಿನ ಚರಣಗಳ (ಸ್ಟಾಂಜಾಗಳ) ಸುದೀರ್ಘ ಕವಿತೆಗಳನ್ನೂ ರಚಿಸಿದೆ. ನಾನಂದುಕೊಂಡೆ, ನಾನು ಲುಗೋನೆಸ್ ನನ್ನು ನನ್ನ ಗುರುವಾಗಿ ತೆಗೆದುಕೊಂಡಿದ್ದೆ ಎಂದು, ಆದರೆ ಅವುಗಳ ಬರಹ ರೂಪಗಳನ್ನು ನೋಡಿದಾಗ ನನ್ನ ಗೆಳೆಯರಂದರು, ದುರದೃಷ್ಟವಶಾತ್ ಅವು ಹಾಗಿಲ್ಲ ಎಂದು. ನನ್ನವು ಅವನ ಕವಿತೆಗಳಿಗಿಂತ ತೀರಾ ಭಿನ್ನವಾಗಿದ್ದುವು. ನಂತರದ ನನ್ನ ಕವಿತೆಗಳಲ್ಲಿ ಒಂದು ಕಥನ ಗುಣವಂತೂ ಇದ್ದೇ ಇದೆ. ವಾಸ್ತವದಲ್ಲಿ ನಾನು ನನ್ನ ಕವಿತೆಗಳಿಗೊಂದು ಕಥಾವಸ್ತುವನ್ನ ಕಲ್ಪಿಸುತ್ತೇನೆ. ಬಹುಶಃ ಲುಗೋನೆಸ್ ಮತ್ತು ನನ್ನ ಕವಿತೆಗಳ ಮುಖ್ಯ ವ್ಯತ್ಯಾಸವೆಂದರೆ, ಅವನು ಫ್ರೆಂಚ್ ಸಾಹಿತ್ಯವನ್ನು ತನ್ನ ಮಾದರಿಯಾಗಿ ತೆಗೆದುಕೊಂಡ, ಹಾಗೂ ಒಂದು ಫ್ರೆಂಚ್ ಬೌದ್ಧಿಕ ಜಗತ್ತಿನಲ್ಲಿ ಜೀವಿಸಿದ, ನಾನಾದರೆ ಇಂಗ್ಲಿಷ್ ಸಾಹಿತ್ಯವನ್ನು ಸ್ವೀಕರಿಸಿಕೊಂಡೆ.
ಈ ಹೊಸ ಕಾವ್ಯ ಕ್ರಿಯೆಯಲ್ಲಿ ನಾನೊಂದು ಕವಿತಾ ಸರಣಿಯ ಬಗ್ಗೆ ಯೋಚಿಸಲಿಲ್ಲ, ನಾನು ಹಿಂದೆ ಯಾವತ್ತೂ ಮಾಡುತ್ತಿದ್ದಂತೆ, ಬದಲು ಒಂದೊಂದು ಕವಿತೆಯನ್ನೂ ಅದರಷ್ಟಕ್ಕೇ ಇಡಿಯಾಗಿ ಯೋಚಿಸುವುದರಲ್ಲಿ ಆಸಕ್ತಿ ವಹಿಸಿದೆ. ಈ ತರ ನಾನು ವಿವಿಧ ವಸ್ತುಗಳ ಕುರಿತು ಬರೆದೆ, ಎಮರ್ಸನ್ ಮತ್ತು ವೈನ್ ಗ್ಲಾಸು, ಸ್ನೋರಿ ಸ್ಟುರ್ಲುಸೊನ್ ಮತ್ತು ಗಂಟೆ ಗ್ಲಾಸು, ನನ್ನ ಅಜ್ಜನ ಮರಣ ಮತ್ತು ಒಂದನೆ ಚಾರ್ಲ್ಸ್ ನ ಶಿರಚ್ಛೇದನ ಇತ್ಯಾದಿ. ನನ್ನ ಸಾಹಿತ್ಯಿಕ ಹೀರೋಗಳ ಶರಾ ಬರೆಯಲೂ ನಾನು ಮುಂದಾದೆ: ಪೋ, ಸ್ವೀಡನ್ಬೋರ್ಗ್, ವ್ಹಿಟ್ಮನ್, ಹೈನ, ಕೆಮೊಯೆಸ್, ಜೊನಾಥನ್ ಎಡ್ವರ್ಡ್ಸ್, ಮತ್ತು ಸರ್ವಾಂಟಿಸ್, ಮತ್ತು ಖಂಡಿತವಾಗಿ, ಕನ್ನಡಿಗಳಿಗೂ, ಮಿನೊಟಾರಿಗೂ, ಚಾಕುಗಳಿಗೂ ಸಲ್ಲತಕ್ಕ ಗೌರವ ಕೂಡ ಸಂದಿತು.
ರೂಪಕಕ್ಕೆ ನಾನು ಯಾವಾಗಲೂ ಆಕರ್ಷಿತನಾಗಿದ್ದೆ. ಈ ಒಲವು ನನ್ನನ್ನು ಸರಳ ಸ್ಯಾಕ್ಸನ್ ಹಾಗೂ ಅತಿ ವಿಸ್ತೃತ ನೋರ್ಸ್ ‘ಕೆನ್ನಿಂಗ್ಸ್’ಗಳನ್ನು (kennings) ಅಧ್ಯಯನ ಮಾಡಲು ಪ್ರೇರೇಪಿಸಿತು. 1932ರಷ್ಟು ಹಿಂದೆಯೇ ನಾನು ಅವುಗಳ ಕುರಿತು ಒಂದು ಲೇಖನ ಕೂಡ ಬರೆದಿದ್ದೆ. ಸಾಧ್ಯವಿರುವಷ್ಟು ಮಟ್ಟಿಗೆ, ನೇರ ನಾಮ ಪದಗಳ ಬದಲು ರೂಪಕಗಳಿಂದ ಸೂಚಿಸುವ ಚಾತುರ್ಯ, ಇವುಗಳಲ್ಲಿ ರೂಪಕಗಳು ಏಕಕಾಲಕ್ಕೆ ಪರಂಪರಾಗತವೂ ಸ್ವೇಚ್ಛಾನುಸಾರವೂ ಆಗಿದ್ದು, ನನ್ನನ್ನು ಚಕಿತನನ್ನಾಗಿ ಮಾಡಿದುವು, ಮತ್ತು ಮನಸ್ಸಿಗೆ ಹಿಡಿಸಿದುವು. ನಂತರ ನಾನು ಊಹಿಸಿದ್ದೆಂದರೆ, ಈ ರೂಪಕಗಳ ಉದ್ದೇಶವಿರುವುದು ಸಂಯುಕ್ತಪದಗಳ ಆಡಂಬರ ಮತ್ತು ಸಂದರ್ಭ ನೀಡುವ ಸಂತೋಷದಲ್ಲಿ ಮಾತ್ರವೇ ಅಲ್ಲ, ಅವು ಅನುಪ್ರಾಸದ ಅಗತ್ಯವನ್ನೂ ಪೂರೈಸುತ್ತವೆ ಎನ್ನುವುದನ್ನು. ಅವುಗಳನ್ನಷ್ಟೇ ತೆಗೆದುಕೊಂಡರೆ ಕೆನ್ನಿಂಗ್ಸ್ ಅಷ್ಟೇನೂ ಸ್ವಾರಸ್ಯಕರವಲ್ಲ. ಹಡಗನ್ನು ‘ಕಡಲ ಕುದುರೆ’ಯೆಂದು, ಮತ್ತು ಮುಕ್ತ ಸಮುದ್ರವನ್ನು ‘ತಿಮಿಂಗಿಲ ಮಾರ್ಗ’ವೆಂದು ಕರೆಯುವುದರಲ್ಲಿ ದೊಡ್ಡ ಸಾಧನೆಯಿಲ್ಲ. ನೋರ್ಸ್ ಲಾವಣಿಗಾರರು ಒಂದು ಹೆಜ್ಜೆ ಮುಂದೆ ಹೋದರು; ಅವರು ಸಮುದ್ರವನ್ನು ‘ಕಡಲ ಕುದುರೆಯ ಮಾರ್ಗ’ ಎಂದು ಕರೆದರು, ಆ ಮೂಲಕ ಮೂಲದಲ್ಲಿ ಒಂದು ಪ್ರತಿಮೆಯಾಗಿದ್ದುದು ಈಗ ಒಂದು ಪ್ರಯಾಸಕರ ಸಮೀಕರಣವಾಯಿತು. ಅದರಿಂದ ಕೆನ್ನಿಂಗ್ಸ್ ಕುರಿತಾದ ನನ್ನ ಶೋಧ ನನ್ನನ್ನು ಹಳೆ ಇಂಗ್ಲಿಷ್ ಮತ್ತು ಹಳೆ ನೋರ್ಸ್ ಭಾಷೆಗಳನ್ನು ಅಭ್ಯಾಸ ಮಾಡಲು ಹಚ್ಚಿತು. ಈ ದಿಕ್ಕಿನಲ್ಲಿ ನನ್ನನ್ನು ಒತ್ತಾಯಿಸಿದ ಇನ್ನೊಂದು ಕಾರಣವೆಂದರೆ ನನ್ನ ಪೂರ್ವಜರ ವಂಶ.
ಅದು ನನ್ನದೊಂದು ರೊಮ್ಯಾಂಟಿಕ್ ಮೂಢನಂಬಿಕೆಗಿಂತ ಹೆಚ್ಚಲ್ಲದಿದ್ದರೇನಾಯಿತು, ಆದರೆ ಮುತ್ತಜ್ಜ ಹಸ್ಲಮ್ ನಾರ್ತಂಬ್ರಿಯಾ ಮತ್ತು ಮರ್ಸಿಯಾದಲ್ಲಿ ಅಥವಾ ಈವತ್ತು ಕರೆಯುವಂತೆ, ನಾರ್ತಂಬರ್ಲ್ಯಾಂಡ್ ಮತ್ತು ಮಿಡ್ಲ್ಯಾಂಡ್ಸ್ ನಲ್ಲಿ ನೆಲಸಿದ್ದರು ಎನ್ನುವುದು ನನ್ನನ್ನೊಂದು ಸ್ಯಾಕ್ಸನ್ ಇಲ್ಲವೇ ಬಹುಶಃ ಡೇನಿಶ್ ಗತಕ್ಕೆ ಕೊಳಿಕೆ ಹಾಕುತ್ತದೆ. (ಔತ್ತರೇಯ ಗತದ ಕುರಿತಾದ ನನ್ನ ಅಂಥಾ ಒಲವು ನನ್ನ ಹೆಚ್ಚು ರಾಷ್ಟ್ರೀಯ ಮನಸ್ಸಿನ ಕೆಲವು ದೇಶೀಯರಿಂದ ಅಸಮಾಧಾನಕ್ಕೆ ಗುರಿಯಾಗಿದೆ, ಅವರು ನನ್ನನ್ನೊಬ್ಬ ಇಂಗ್ಲಿಷ್ ಮನ್ ಎಂದು ಕರೆಯುತ್ತಾರೆ, ಆದರೆ ಹಲವು ಇಂಗ್ಲಿಷ್ ಸಂಗತಿಗಳು ನನಗೆ ಪರಕೀಯ ಎನ್ನುವುದನ್ನು ನಾನು ತೋರಿಸಿಕೊಡಬೇಕಾಗಿಲ್ಲ: ಉದಾಹರಣೆಗೆ, ಚಹಾ, ರಾಜಕುಟುಂಬ, ‘ಪುರುಷ’ ಆಟೋಟಗಳು, ಏನನ್ನೂ ಲೆಕ್ಕಿಸದ ಶೇಕ್ಸ್ಪಿಯರ್ ಬರೆದ ಪ್ರತಿ ಸಾಲಿನ ಆರಾಧನೆ.)
ನನ್ನ ಯುನಿವರ್ಸಿಟಿ ಕೋರ್ಸುಗಳ ಕೊನೆಯಲ್ಲಿ ಒಮ್ಮೆ ನನ್ನ ಹಲವು ಜನ ವಿದ್ಯಾರ್ಥಿಗಳು ನನ್ನನ್ನು ಕಾಣಲು ಲೈಬ್ರರಿಗೆ ಬಂದರು. ನಾಲ್ಕು ತಿಂಗಳ ಅವಧಿಯಲ್ಲಿ ಈಗಷ್ಟೇ ನಾವು ಇಂಗ್ಲಿಷ್ ಸಾಹಿತ್ಯವನ್ನು ಬೆಯೊವುಲ್ಫ್ ನಿಂದ ಬರ್ನಾರ್ಡ್ ಶಾ ತನಕ ಝಾಡಿಸಿದ್ದೆವು, ಮತ್ತು ನನಗನಿಸಿತು, ಈಗ ನಾವು ಏನನ್ನಾದರೂ ಲಕ್ಷ್ಯಪೂರ್ವಕ ಮಾಡಬೇಕು ಎಂದು. ಸುರುವಿಂದ ಸುರುಮಾಡೋಣ ಎಂದೆ, ಅವರು ಒಪ್ಪಿದರು. ಮನೆಯಲ್ಲಿ, ಮೇಲಿನ ಯಾವುದೋ ಒಂದು ಶೆಲ್ಫಿನಲ್ಲಿ, ಸ್ವೀಟ್ ನ ‘ಆಂಗ್ಲೋ-ಸ್ಯಾಕ್ಸನ್ ರೀಡರ್’ ಮತ್ತು ‘ಆಂಗ್ಲೋ-ಸ್ಯಾಕ್ಸನ್ ಕ್ರಾನಿಕ್ಲ್’ನ ಪ್ರತಿಗಳಿದ್ದುವು ಎಂದು ನನಗೆ ಗೊತ್ತಿತ್ತು. ವಿದ್ಯಾರ್ಥಿಗಳು ಮಾರನೆ ಶನಿವಾರ ಮುಂಜಾನೆ ಬಂದಾಗ, ನಾವು ಈ ಎರಡು ಪುಸ್ತಕಗಳನ್ನು ಓದಲು ಸುರುಮಾಡಿದೆವು. ಸಾಧ್ಯವಾದಷ್ಟೂ ವ್ಯಾಕರಣವನ್ನು ಕೈಬಿಟ್ಟೆವು. ಮತ್ತು ಪದಗಳನ್ನು ಜರ್ಮನ್ ನಂತೆ ಉಚ್ಚರಿಸಿದೆವು. ಅಚಾನಕವಾಗಿ, ಒಂದು ವಾಕ್ಯದ ಮೇಲೆ ನಮಗೆ ಪ್ರೀತಿ ಹುಟ್ಟಿತು, ಅದರಲ್ಲಿ ರೋಮ್ ನ ಪ್ರಸ್ತಾಪವಿತ್ತು (ರೋಮೆಬುರ್ಹ್). ಈ ಪದಗಳ ಅಮಲಿನಲ್ಲಿ ನಾವು ಪೆರು ರಸ್ತೆಯಲ್ಲಿ ಉದ್ದಕ್ಕೂ ಓಡಿದೆವು, ಪದಗಳನ್ನು ತಾರಕ ಸ್ವರದಲ್ಲಿ ಕೂಗುತ್ತ.
ಹೀಗೆ ನಾವೊಂದು ದೀರ್ಘ ಸಾಹಸವನ್ನು ಕೈಗೊಂಡಿದ್ದೆವು. ನಾನು ಇಂಗ್ಲಿಷ್ ಸಾಹಿತ್ಯವನ್ನು ಲೋಕದ ಅತ್ಯಂತ ಶ್ರೀಮಂತ ಸಾಹಿತ್ಯವೆಂದು ಯೋಚಿಸಿದ್ದೆ. ಅ ಸಾಹಿತ್ಯದ ಹೊಸ್ತಿಲಲ್ಲೇ ಈಗ ರಹಸ್ಯ ಕೋಣೆಯೊಂದು ಕಾಣಿಸಿಕೊಂಡುದು ನನಗೊಂದು ಹೆಚ್ಚುವರಿ ಉಡುಗೊರೆಯಂತೆ ಬಂತು. ವೈಯಕ್ತಿಕವಾಗಿ, ನನಗೆ ಗೊತ್ತಿತ್ತು ಆ ಸಾಹಸ ಕೊನೆಯಿಲ್ಲದಾಗಿರುತ್ತದೆ, ಮತ್ತು ನಾನು ಹಳೆ ಇಂಗ್ಲಿಷನ್ನು ನನ್ನ ಅಂತಿಮ ದಿನಗಳವರೆಗೆ ಅಧ್ಯಯನ ಮಾಡುತ್ತ ಇರಬಲ್ಲೆ ಎನ್ನುವುದು. ಕಲಿಯುವುದರ ಸುಖ ನನ್ನ ಜೀವನದ ಮಖ್ಯ ಉದ್ದೇಶವಾಗಿತ್ತಲ್ಲದೆ ಸಾಧಿಸುವ ಜಂಭವಲ್ಲ, ಹಾಗೂ ಈ ಕಳೆದ ಹನ್ನೆರಡು ವರ್ಷಗಳಲ್ಲಿ ನನಗೆ ನಿರಾಸೆಯಾಗಿಲ್ಲ. ಇನ್ನು ಹಳೆ ನೋರ್ಸ್ ನಲ್ಲಿ ನನ್ನ ಆಸಕ್ತಿಯ ಬಗ್ಗೆ ಹೇಳುವುದಾದರೆ, ಇದೊಂದು ತಾರ್ಕಿಕ ಹೆಜ್ಜೆಯಾಗಿತ್ತು, ಎರಡೂ ಭಾಷೆಗಳು ಒಂದಕ್ಕೊಂದು ಹತ್ತಿರದಿಂದ ಸಂಬಂಧಿಸಿರುತ್ತ, ಮತ್ತು ಎಲ್ಲಾ ಮಧ್ಯಕಾಲೀನ ಜರ್ಮಾನಿಕ್ ಸಾಹಿತ್ಯದಲ್ಲಿ ಹಳೆ ನೋರ್ಸ್ ಕಿರೀಟ ಪ್ರಾಯದ್ದಾಗಿರುತ್ತ.
ಹಳೆ ಇಂಗ್ಲಿಷ್ ನಲ್ಲಿ ನನ್ನ ಪ್ರಯಾಣ ಶುದ್ಧವಾಗಿ ವೈಯಕ್ತಿಕ, ಆದ್ದರಿಂದ ಅದು ನನ್ನ ಹಲವು ಕವಿತೆಗಳನ್ನು ಪ್ರವೇಶಿಸಿದೆ. ಒಮ್ಮೆ ಒಬ್ಬ ಸಹೋದ್ಯೋಗಿ ನನ್ನನ್ನು ಪಕ್ಕಕ್ಕೆ ಕರೆದು ಗಾಬರಿಯಿಂದ ಅಂದ, ‘“ಎಂಬಾರ್ಕಿಂಗ್ ಆನ್ ಎ ಸ್ಟಡಿ ಆಫ್ ಆಂಗ್ಲೋ-ಸ್ಯಾಕ್ಸನ್ ಗ್ರಾಮರ್” ಎಂಬಂಥ ಕವಿತೆಯನ್ನು ಪ್ರಕಟಿಸಿ ನೀವು ಉದ್ದೇಶಿಸುವುದೇನು?’ ನಾನವನಿಗೆ ವಿವರಿಸಲು ಪ್ರಯತ್ನಿಸಿದೆ, ಆಂಗ್ಲೋ-ಸ್ಯಾಕ್ಸನ್ ಗ್ರಾಮರ್ ನನಗೆ ಸೂರ್ಯಾಸ್ತವನ್ನು ನೋಡುವ ಅಥವಾ ಪ್ರೇಮಪಾಶದಲ್ಲಿ ಬೀಳುವ ಆ ಅಷ್ಟೇ ಅಂತರಂಗದ ಅನುಭವ, ಎಂದು.
1954ರ ಸುಮಾರಿಗೆ ನಾನು ಚಿಕ್ಕ ಚಿಕ್ಕ ಲೇಖನಗಳನ್ನು ಬರೆಯಲು ಸುರುಮಾಡಿದೆ — ನುಡಿ ಚಿತ್ರಗಳು ಮತ್ತು ನೀತಿ ಕಥೆಗಳು. ಒಂದು ದಿನ ನನ್ನ ಎಮೆಸೆ ಗೆಳೆಯ ಕಾರ್ಲೋಸ್ ಫಯಾಸ್ ನನ್ನ ತಥಾಕಥಿತ ಸಮಗ್ರ ಕೃತಿ ಸರಣಿಗೋಸ್ಕರ ನನ್ನಿಂದ ಒಂದು ಹೊಸ ಪುಸ್ತಕ ಬೇಕು ಎಂದ. ನನ್ನಲ್ಲಿ ಅವನಿಗೆ ಕೊಡುವುದಕ್ಕೆ ಏನೂ ಇಲ್ಲವೆಂದು ನಾನಂದೆ, ಆದರೆ ಫ್ರಯಾಸ್ ಬಿಡಬೇಕಲ್ಲ, ಪ್ರತಿಯೊಬ್ಬ ಲೇಖಕನಲ್ಲೂ ಒಂದು ಪುಸ್ತಕ ಇರುತ್ತದೆ, ಅದನ್ನವನು ಹುಡುಕಬೇಕಷ್ಟೆ,’ ಎಂದ. ಒಂದು ಸೋಮಾರಿ ರವಿವಾರ, ಮನೆಯಲ್ಲಿ ಡ್ರಾಯರ್ ಗಳನ್ನು ತಡಕಾಡುತ್ತಿರುವಾಗ, ಇದುವರೆಗೆ ಸಂಕಲನದಲ್ಲಿ ಸೇರಿರದ ಕವಿತೆಗಳನ್ನು ಮತ್ತು ಗದ್ಯ ಬರಹಗಳನ್ನು – ಕೆಲವು ಗದ್ಯ ಬರಹಗಳು ನನ್ನ ‘ಕ್ರಿಟಿಕಾ’ ದಿವಸಗಳಷ್ಟು ಹಿಂದಕ್ಕೆ ಸಂಬಂಧಿಸಿದುವು — ಹುಡುಕಿ ತೆಗೆಯತೊಡಗಿದೆ. ಈ ಚಿತ್ರ ವಿಚಿತ್ರ ತುಣುಕುಗಳು, ಸರಿಯಾಗಿ ಹೆಕ್ಕಿ ತೆಗೆದು ವರ್ಗೀಕರಣಗೊಂಡು, 1960ರಲ್ಲಿ ‘ಎಲ್ ಹಸೆಡೋರ್’ (‘ದ ಮೇಕರ್’) ಎಂಬ ಹೆಸರಿನಲ್ಲಿ ಪ್ರಕಟವಾದುವು. ಸೋಜಿಗವೆಂದರೆ, ನಾನು ಬರೆದುದಾಗಿರದೆ, ಕೂಡಿ ಹಾಕಿದ ಈ ಪುಸ್ತಕ ನನ್ನ ಅತ್ಯಂತ ವೈಯಕ್ತಿಕವೆಂದು, ಮತ್ತು ನನ್ನ ರುಚಿಗೆ ಬಹುಶಃ ಅತ್ಯುತ್ತಮ ಕೃತಿಯೆಂದು, ನನಗನಿಸುತ್ತದೆ. ಕಾರಣ ಬಹಳ ಸುಲಭ. ‘ಎಲ್ ಹಸೆಡೋರ್’ನ ಪುಟಗಳಲ್ಲಿ ಅನಗತ್ಯವಾಗಿ ದಪ್ಪ ಮಾಡಲು ಸೇರಿಸಿಕೊಂಡದ್ದು ಏನೂ ಇಲ್ಲ. ಪ್ರತಿಯೊಂದು ಬರಹವೂ ಆ ಬರಹಕ್ಕೆಂದೇ, ಆಂತರಿಕ ಅಗತ್ಯದಿಂದ ಬರೆದುದು. ಅವುಗಳನ್ನು ನಾನು ಎತ್ತಿಕೊಂಡ ವೇಳೆಗೆ ನನಗನಿಸಿತ್ತು, ಚಂದದ ಬರವಣಿಗೆ ಎನ್ನುವುದೊಂದು ಪ್ರಮಾದ, ದರ್ಪದಿಂದ ಹುಟ್ಟಿದಂಥ ಪ್ರಮಾದ. ನಾನು ಗಟ್ಟಿಯಾಗಿ ನಂಬುವುದೆಂದರೆ, ಒಳ್ಳೆಯ ಬರಹ ಕಣ್ಣಿಗೆ ಬೀಳದಂತೆ ಇರಬೇಕು.
ಆ ಪುಸ್ತಕದ ಕೊನೆಯ ಪುಟದಲ್ಲಿ, ವಿಶ್ವದ ಚಿತ್ರವೊಂದನ್ನು ಮಾಡಲು ಹೊರಟ ಒಬ್ಬ ಮನುಷ್ಯನ ಬಗ್ಗೆ ನಾನು ಹೇಳಿದ್ದೆ. ಅನೇಕ ವರ್ಷಗಳ ನಂತರ ಅವನು ಭಿತ್ತಿಯೊಂದನ್ನು ನೌಕೆಗಳು, ಗೋಪುರಗಳು, ಕುದುರೆಗಳು, ಆಯುಧಗಳು, ಮತ್ತು ಮನುಷ್ಯರ ಚಿತ್ರಗಳಿಂದ ತುಂಬಿದ್ದ; ಕೊನೆಗೂ ಸಾಯುವ ಹೊತ್ತಿಗೆ ಅವನು ಕಂಡುಕೊಂಡದ್ದು ತಾನು ಚಿತ್ರಿಸಿದ್ದು ತನ್ನದೇ ಮುಖದ ಹೋಲಿಕೆಯನ್ನು ಎಂದು. ಇದು ಎಲ್ಲಾ ಪುಸ್ತಕಗಳ ಗತಿಯಾಗಿರಬಹುದು, ಈ ನನ್ನ ಪುಸ್ತಕದ್ದಂತೂ ಖಂಡಿತ.
ಹೈದರಾಬಾದಿನಲ್ಲಿ ನೆಲೆಸಿರುವ ಕನ್ನಡದ ಹಿರಿಯ ಕವಿ, ಲೇಖಕ ಮತ್ತು ಭಾಷಾಶಾಸ್ತ್ರಜ್ಞರು, ಮೂಲತಃ ಕಾಸರಗೋಡಿನ ಬಳಿಯ ಕಾರಡ್ಕದವರು. ಹೈದರಾಬಾದಿನ ಸೆಂಟ್ರಲ್ ಇನ್ಸ್ಟಿಟ್ಯೂಟ್ ಆಫ್ ಇಂಗ್ಲೀಷ್ ಅಂಡ್ ಫಾರಿನ್ ಲಾಂಗ್ವೇಜಸ್ ಸಂಸ್ಥೆಯಲ್ಲಿ ಪ್ರಾಧ್ಯಾಪಕರಾಗಿ ನಿವೃತ್ತಿಯನ್ನು ಹೊಂದಿ, ನಂತರ ಯೆಮನ್ ದೇಶದಲ್ಲಿ ಕೆಲಕಾಲ ಇಂಗ್ಲೀಷ್ ಅಧ್ಯಾಪನ ಮಾಡಿ, ಈಗ ಹೈದರಾಬಾದಿನಲ್ಲಿ ತಮ್ಮ ನಿವೃತ್ತಿ ಜೀವನವನ್ನು ಕಳೆಯುತ್ತಿದ್ದಾರೆ. ನಾಟಕ, ಕವನ, ಕಥೆ, ಕಾದಂಬರಿಗಳನ್ನು ರಚಿಸಿರುವ ಅವರು ಭಾಷಾವಿಜ್ಞಾನ ಕ್ಷೇತ್ರದಲ್ಲಿ ಮೌಲಿಕ ಕೃತಿಗಳನ್ನು ಪ್ರಕಟಿಸಿರುವ ವಿದ್ವಾಂಸರು. ವಿಮರ್ಶಕರು.