ಅಳಿಲು ತಾನು ಸಂಗ್ರಹಿಸಿದ ಕಾಳುಗಳನ್ನು ಯಾರಿಗೂ ಕಾಣದಂತೆ ಬಚ್ಚಿಟ್ಟು ಎಲ್ಲಿ ಬಚ್ಚಿಟ್ಟಿದ್ದೇನೆನ್ನುವುದನ್ನು ಮರೆತ ಹಾಗೆ ಹಿರಿಯ ಬರಹಗಾರ ಕೆ.ವಿ. ತಿರುಮಲೇಶ್ ಅವರು ಇತಿಹಾಸದ ಕುರಿತು ಮಾಡಿಕೊಂಡು ಮರೆತಿದ್ದ ಟಿಪ್ಪಣಿಗಳ ಪುಸ್ತಕವೊಂದು ಈಗ ಬಹು ವರ್ಷಗಳ ನಂತರ ಸಿಕ್ಕಿದೆ. ಅವು ಭಾರತದ ರಾಜವಂಶಗಳನ್ನು ಅರಿಯುವ ನಿಟ್ಟಿನಲ್ಲಿ ಪೋಣಿಸಿಕೊಂಡ ಶತಮಾನಗಳ ಮಾಹಿತಿ. ಈ ಮಾಹಿತಿಯನ್ನು ಲೇಖನ ರೂಪದಲ್ಲಿ ಅವರು ಬರೆಯಲಿದ್ದು, ʼನನ್ನ ಹಿಸ್ಟರಿ ಪುಸ್ತಕʼ ಸರಣಿ ಲೇಖನಗಳು ಪ್ರಕಟವಾಗಲಿವೆ. ಸರಣಿಯ ಮೊದಲ ಬರಹ ಇಂದಿನ ಓದಿಗಾಗಿ.

“Those who cannot remember the past are condemned to repeat it.”
(George Santayana)

ಹೌದು, ಭೂತ ಕಾಲವನ್ನು ಮರೆಯಬಾರದು, ಆದರೆ ಮರೆತುಬಿಡುತ್ತೇವೆ. ಏನು ಮಾಡಲಿ? ಎಷ್ಟಾದರೂ ನಾವು ಮನುಷ್ಯರು. ಎಲ್ಲವನ್ನೂ ತಿಳಿದವರು ಯಾರೂ ಇಲ್ಲ. ನೆನಪಿಟ್ಟುಕೊಂಡವರೂ ಇಲ್ಲ. ನನಗಂತೂ ನೆನಪಿನ ಶಕ್ತಿ ಬಹಳ ಕಡಿಮೆ. ಮರೆವು ಜಾಸ್ತಿ. ಕೆಲವು ದಿವಸಗಳಿಂದ ನಾನು ಬಹು ಕಾಲದಿಂದಲೂ ನನ್ನಲ್ಲಿದ್ದ ಒಂದು ಕಟ್ಟು ಎಕ್ಸರ್‍ಸೈಜ್ ಪುಸ್ತಕಗಳಿಗಾಗಿ ಹುಡುಕುತ್ತಿದ್ದೆ, ಆದರೆ ಅವು ನಾನೇ ಜೋಪಾನವಾಗಿ ಇಟ್ಟಿದ್ದ (ಅಥವಾ ಹಾಗೆ ಭಾವಿಸಿದ್ದ) ಶೆಲ್ಫ್‍ನ ಮಾಮೂಲಿ ಜಾಗದಲ್ಲಿ ಇರಲಿಲ್ಲ. ಅರೆ! ಎಲ್ಲಿ ಹೋದುವು ಎಂದು ಗಾಬರಿಯಾಯಿತು. ಪುಸ್ತಕಗಳನ್ನು ‘ಒತ್ತರೆ’ ಮಾಡುವ ಆತುರದಲ್ಲಿ ಅಚಾತುರ್ಯದಿಂದ ರದ್ದಿಗೆ ಹಾಕಿಬಿಟ್ಟೆನೇ? ಇರಲಾರದು ಎನಿಸಿತು. ಇವು ನಾನು ಎಷ್ಟೋ ವರ್ಷಗಳಿಂದ ನನ್ನ ಜೊತೆ ಯಾತಕ್ಕೋ ಇರಿಸಿಕೊಂಡಿದ್ದ ಪುಸ್ತಕಗಳು. ಬಹಳ ಅಪರೂಪಕ್ಕೆ ಅವುಗಳ ಒಳಗೆ ಕಣ್ಣು ಹಾಯಿಸಿ ಮತ್ತೆ ಮುಚ್ಚಿಡುತ್ತಿದ್ದೆ. ಈಗೆಲ್ಲಿ ಹೋದುವು? ನಾನೇ ಬೇರೆಲ್ಲೋ ಇನ್ನೊಂದು ಶೆಲ್ಫಿನಲ್ಲಿ ಇರಿಸಿರಬಹುದೇ? ಆದರೆ ಯಾಕೆ? ನೆನಪು ಮಾಡಲು ಯತ್ನಿಸಿದಷ್ಟೂ ನೆನಪಾಗಲೊಲ್ಲದು. ಇನ್ನು ಯಾವುದೋ ಪುಸ್ತಕವನ್ನು ಹುಡುಕುತ್ತಿರುವಾಗ ಇವು ಥಟ್ಟನೆ ಸಿಗಬಹುದು ಎಂದುಕೊಂಡೆ. ನನ್ನಲ್ಲಿರುವ ಎಲ್ಲಾ ಪುಸ್ತಕಗಳನ್ನು ಕ್ರಮಬದ್ಧವಾಗಿ ಇರಿಸಲು ನಾನು ಎಷ್ಟು ಸಂಕಲ್ಪ ಮಾಡಿದರೂ ಅದು ನನ್ನಿಂದ ಸಾಧ್ಯವಾಗುತ್ತಿಲ್ಲ. ಹಿಂದೆ ಅಪರೂಪಕ್ಕೆ ಧೂಳೊರೆಸಿ ಇಡುತ್ತಿದ್ದೆ. ಈಗ ದೇಹ ದೌರ್ಬಲ್ಯದ ಕಾರಣ ಅದೂ ಗ್ರಹಿಸಿದಷ್ಟು ನನ್ನಿಂದ ಸಾಧ್ಯವಾಗುತ್ತಿಲ್ಲ. ಉಸಿರಾಟದ ತೊಂದರೆ ಬೇರೆ. ಹೀಗೆ ಬೇಜಾರದಲ್ಲಿದ್ದ ಕಾಲದಲ್ಲೇ ನನಗೆ ನನ್ನ ಎಕ್ಸರ್‍ಸೈಜ್ ಪುಸ್ತಕಗಳು ಇನ್ನೊಂದೆಡೆ ಸಿಕ್ಕಿದುವು! ನನಗಾದ ಸಂತೋಷ ಅಷ್ಟಿಷ್ಟಲ್ಲ. ಹೆಚ್ಚಿನ ಭದ್ರತೆಗಾಗಿ ನಾನೇ ಅವುಗಳನ್ನು ಹೊಸ ಜಾಗದಲ್ಲಿರಿಸಿ ಮರೆತುಬಿಟ್ಟಿದ್ದೆ. ಗಾದೆ ಮಾತಿನ ಅಳಿಲು ತಾನು ಸಂಗ್ರಹಿಸಿದ ಕಾಳುಗಳನ್ನು ಯಾರಿಗೂ ಕಾಣದಂತೆ ಬಚ್ಚಿಟ್ಟು ಎಲ್ಲಿ ಬಚ್ಚಿಟ್ಟಿದ್ದೇನೆನ್ನುವುದನ್ನು ಮರೆತ ಹಾಗೆ.

ನನ್ನ ಬಾಲ್ಯಕಾಲದಲ್ಲಿ ಪ್ರಚಲಿತವಿದ್ದ ಸುಮಾರು 8” X 6.5” ಚದರಳತೆಯ ಸುಮಾರು ನಲುವತ್ತು ಪುಟಗಳ ನೋಟ್ ಪುಸ್ತಕಗಳು ಅವು. ಒಟ್ಟು ಐದು. ಈಗ ಮುಟ್ಟಿದರೆ ಮುರಿದುಹೋಗುವ ಸ್ಥಿತಿಯಲ್ಲಿವೆ. ಏನಿವುಗಳ ವಿಶೇಷತೆ ಎನ್ನುವುದನ್ನು ಹೇಳುತ್ತೇನೆ. ನಾನು ಪ್ರೌಢ ಶಿಕ್ಷಣ ಕಲಿಯುವಾಗ (1956ರ ಸುಮಾರಿಗೆ) ನಮಗೆ Ancient Culture ಎಂಬ ಪಠ್ಯ ವಿಷಯವೊಂದು ಪಾಠಪಟ್ಟಿಯಲ್ಲಿ ಇತ್ತು. ಅದು ವಾಸ್ತವದಲ್ಲಿ ಪ್ರಾಚೀನ ಭಾರತದ ರಾಜಕೀಯ ಮತ್ತು ಸಾಂಸ್ಕೃತಿಕ ಚರಿತ್ರೆಯಾಗಿತ್ತು, ಲೋಕ ಚರಿತ್ರೆಯಲ್ಲ. ಮಧ್ಯಕಾಲೀನವಾಗಲಿ ಆಧುನಿಕವಾಗಲಿ ಅಲ್ಲ. ಕಾಕುಂಜೆ ಗಣಪತಿ ಭಟ್ ಎನ್ನುವ ಉತ್ಸಾಹಿ ಯುವ ಅಧ್ಯಾಪಕರೊಬ್ಬರು ನಮಗದನ್ನು ಕಲಿಸುತ್ತಿದ್ದರು. ಅವರು ಯಾವ ವಿಷಯವನ್ನಾದರೂ ಬಹಳ ಸ್ಫೂರ್ತಿಯಿಂದ ಪಾಠ ಮಾಡುತ್ತಿದ್ದರು. ಈ ಚರಿತ್ರೆಯನ್ನೂ ಹಾಗೆಯೆ, ಇದೆಲ್ಲ ಈಗತಾನೆ ನಡೆಯಿತು ಎಂಬಂತೆ ಕಣ್ಣಿಗೆ ಕಟ್ಟುವ ರೀತಿಯಲ್ಲಿ, ಆದರೆ ಯಾವುದೇ ಅತಿಶಯೋಕ್ತಿಯೂ ಇಲ್ಲದೆಯೆ, ಕಲಿಸುತ್ತಿದ್ದರು. ಈ ಹಿಸ್ಟರಿಗೆ ಪ್ರತ್ಯೇಕ ಪಠ್ಯ ಪುಸ್ತಕ ಇರದ ಕಾರಣ ಅವರು ಪಾಠದ ಕೊನೆಯಲ್ಲಿ ಉಕ್ತ ಲೇಖನಗಳನ್ನು (ಡಿಕ್ಟೇಶನ್) ಕೊಡುತ್ತಿದ್ದರು. ತರಗತಿಯಲ್ಲಿ ನಾನು ಇವೆಲ್ಲವನ್ನು ಅನನ್ಯ ಶ್ರದ್ಧೆಯಿಂದ ಬರೆದುಕೊಂಡುದು ಮಾತ್ರವಲ್ಲ, ಮನೆಗೆ ಹೋಗಿ ಅವುಗಳ ಶುದ್ಧ ಪ್ರತಿಯನ್ನು ಬೇರೆ ಪುಸ್ತಕಗಳಲ್ಲಿ ಮಾಡಿ ಇಟ್ಟುಕೊಳ್ಳುತ್ತಿದ್ದೆ. ಇವೇ ಈ ಐದು ಪುಸ್ತಕಗಳ ಜನನ ರಹಸ್ಯ. ಉಪಯೋಗ ಮುಗಿದ ಮೇಲೆ ವಸ್ತುಗಳನ್ನು ಇನ್ನು ರಗಳೆ ಬೇಡವೆಂದು ಕೂಡಲೇ ದೂರ ಎಸೆದುಬಿಡುವಷ್ಟು ಅನುಕೂಲವಾದಿಯಲ್ಲ ನಾನು. ಹಲವನ್ನು ಭಾವನಾತ್ಮಕ ಕಾರಣಕ್ಕೆ ಇಟ್ಟುಕೊಂಡಿದ್ದೇನೆ. ಅಲ್ಲದೆ ಚರಿತ್ರೆಯೆಂದರೆ ನನಗೆ ಅದೊಂದು ಖುಷಿ ಕೂಡ. ಕೆಲವು ಚಾರಿತ್ರಿಕ ಹೆಸರುಗಳನ್ನು ಕೇಳಲು ರೋಮಾಂಚನವಾಗುತ್ತದೆ.

ಪ್ರೌಢ ಶಾಲಾ ವಿದ್ಯಾರ್ಥಿಯಾಗಿ ನಾನು ಯಾಕೆ ಈ ಪ್ರಾಚೀನ ಭಾರತದ ಇತಿಹಾಸವನ್ನು ಸ್ವಲ್ಪ ವಿಸ್ತಾರವಾಗಿಯೇ ಕಲಿಯಬೇಕಾಯಿತು ಎಂದು ನೀವು ಕೇಳಬಹುದು. ಇದಕ್ಕೆ ಕಾರಣವವೆಂದರೆ, ನಾನು ಪ್ರೌಢಶಾಲೆಯಲ್ಲಿ ಓದಿದ್ದು OSSLC (Oriental Secondary School Leaving Certificate) ಎಂಬ ಸ್ಕೂಲ್ ಫೈನಲ್ ಪರೀಕ್ಷೆಗೆ. ಇದು ಆಗಿನ ಕಾಲದ ಮದರಾಸ್ ಸಂಸ್ಥಾನ ನಡೆಸಿದ ಒಂದು ಅಲ್ಪಾಯುಶಿ ಪ್ರಯೋಗವಾಗಿತ್ತು. ಗಣಿತ ಮತ್ತು ವಿಜ್ಞಾನದ ಬದಲು ಮಾನವಿಕ (ಭಾಷೆ, ಸಾಹಿತ್ಯ, ಚರಿತ್ರೆ) ವಿಷಯಗಳಿಗೆ ಹೆಚ್ಚು ಪ್ರಾಧಾನ್ಯತೆ ಕೊಡುವಂಥ ಒಂದು ಸಮಾನಾಂತರ ಆಯ್ಕೆ. ಆದರೆ ಇದರ ಶೈಕ್ಷಣಿಕ ತತ್ವದ ಕುರಿತು, ಸಾಧಕ ಬಾಧಕಗಳ ಕುರಿತು, ವಿದ್ಯಾರ್ಥಿಗಳಾದ ನಮಗೆ ಏನೊಂದೂ ಗೊತ್ತಿರಲಿಲ್ಲ. (ಹೈಸ್ಕೂಲು ಆರಂಭವಾದ ನಮ್ಮ ಒಂದು ಬ್ಯಾಚಿಗೆ ಮಾತ್ರವೇ ಓ ಎಸ್ ಎಸ್ ಎಲ್ ಸಿ ಇದ್ದುದು!)

ಅಂತೆಯೇ ಗಣಪತಿ ಮೇಷ್ಟ್ರು ಯಾವ ಮೂಲಗಳಿಂದ ನಮಗೆ ಉಕ್ತ ಲೇಖನಗಳನ್ನು ಕೊಡುತ್ತಿದ್ದರೋ ನನಗೆ ತಿಳಿಯದು. ಈಗ ನಿಮಗಿಲ್ಲಿ ಕೊಡುತ್ತಿರುವುದು ನಾನು ಕ್ಲಾಸಿನಲ್ಲಿ ವಿಧೇಯ ವಿದ್ಯಾರ್ಥಿಯಾಗಿ ನನಗೋಸ್ಕರ ಬೇಗ ಬೇಗನೆ ಬರೆದುಕೊಂಡುದು; ಇನ್ನು ಕೆಲವು ಭಾಗಗಳು ಹರಿದುಹೋಗಿವೆ, ಗೆದ್ದಲಿಗೆ ಆಹಾರವಾಗಿವೆ, ಕಾಗದಗಳು ಮುಟ್ಟಿದರೆ ಮುರಿಯುತ್ತಿವೆ. ಬರೆದ ಶಾಯಿ ಮಾಯ್ದುಹೋಗಿದೆ. ಹಲವೆಡೆ ಅಕ್ಷರಗಳನ್ನು ಊಹಿಸಬೇಕಾಗುತ್ತದೆ. 15-16 ವರ್ಷದ ಹದಿ ಹರೆಯದ ವಿದ್ಯಾರ್ಥಿಯಾಗಿದ್ದ ನನ್ನ ಕೈಬರಹ ಅಜ್ಞಾನಕ್ಕೂ ತುತ್ತಾಗಿದೆ. ಇಲ್ಲಿ ವಸ್ತುವಿಷಯಗಳು, ರಾಜ ಮಹಾಜರುಗಳ ಹೆಸರುಗಳು ಇಡುಕಿದ್ದು ವಿಶ್ಲೇಷಣೆ ಕಡಿಮೆ ಎನಿಸುತ್ತದೆ, ಕೆಲವು ಪ್ರಮುಖ ವಿವರಗಳೇ ಇಲ್ಲ, ಇನ್ನು ಕೆಲವು ಪುನರುಕ್ತಿಗಳೂ ಇವೆ. ಹೀಗೆ ಅಪರಿಪೂರ್ಣವಾಗಿ, ಅರೆಬರೆಯಾಗಿ ನಿಮಗಿದನ್ನು ನೀಡುತ್ತಿರುವುದಕ್ಕೆ ಉದಾರ ಮನಸ್ಸಿನಿಂದ ನನ್ನನ್ನು ಕ್ಷಮಿಸಿ. ಈ ಟಿಪ್ಪಣಿಗಳ ಗುಣಾಂಶಗಳು ಏನಿದ್ದರೂ ನನ್ನ ಮೇಷ್ಟ್ರಿಗೆ ಸೇರಿದ್ದು. ಕೊರತೆಗಳು ನನಗೆ. ಯಾವುದೋ ಪ್ರೀತಿಯಿಂದ ಈ ಕಂಪ್ಯೂಟರ್ ಲಿಪೀಕರಣವನ್ನು ಮಾಡಿ ಆಸಕ್ತ ಓದುಗರಿಗೆ ನನ್ನ ಈ ಟಿಪ್ಪಣಿ ಪುಸ್ತಕಗಳಿಂದ ಕೆಲವು ಆಯ್ದ ಭಾಗಗಳನ್ನು ಕೊಡುತ್ತಿದ್ದೇನೆ. ಪ್ರಾಚೀನ ಭಾರತ ಚರಿತ್ರೆಯ ಒಂದು ಮುಗ್ಧ ರೂಪ ನಿಮಗೆ ಸಿಗಬಹುದು.

ಮುಂಬರುವ ಪ್ರಾಚೀನ ಭಾರತದ ಪ್ರಸಿದ್ಧ ರಾಜ ವಂಶಾವಳಿಗಳು ಮತ್ತು ಇತರ ವಿಷಯಗಳು ಹೀಗಿವೆ:

ಮೌರ್ಯರು,  ಸಂಗವಂಶ, ತಮಿಳು ಅರಸರು, ಕಳಿಂಗರು, ಶಾತವಾಹನರು, ಕುಶಾನರು, ಬೆಕ್ಟ್ರಿಯಾನರು,ಶಕರು,
ವಕಟಕರು, ಗುಪ್ತರು, ಹೂಣರು, ಯಶೋಧರ್ಮ, ಪಲ್ಲವರು, ಕಲಭ್ರರು, ಪುಷ್ಯಭೂತಿ ವಂಶ, ಯಶೋವರ್ಮನ್
ಪಲ್ಲವರ ಪುನರುದಯ, ಪಾಂಡ್ಯರ ಪ್ರಾದುರ್ಭಾವ, ಕನ್ನಡದ ಕಡುಗಲಿಗಳು, ಮೂರು ರಾಜಕುಟುಂಬಗಳು, ರಾಜ್ಯಭಾರಕ್ರಮದಲ್ಲಿ ವೈವಿಧ್ಯ
ವಿವಿಧ ಧರ್ಮಗಳು, ಸಾಮಾಜಿಕ ಜೀವನ, ಸಂಸ್ಕೃತಿ,,ಕಲೆ, ಸಾಹಿತ್ಯ

*****

ಕೆಲವು ತಮಿಳು ಅರಸರು

ಕ್ರಿ.ಶ. 1ನೇ ಶತಮಾನದಿಂದ ಕ್ರಿ.ಶ. 3ನೇ ಶತಮಾನದ ಕಾಲವನ್ನು ಸಂಗಂ ಕಾಲವೆನ್ನುವರು.
ಚೋಳರು – ಕರಿಕಾಲ ಚೋಳ
ಕಾವೇರಿ ನದಿಯ ಮುಖಜ ಭೂಮಿ ಮತ್ತು ಸುತ್ತಮುತ್ತಲ ಪ್ರದೇಶಗಳೇ ಈತನ ರಾಜ್ಯ. ಉರೈಯಾರ್ ಎಂಬುದು ರಾಜಧಾನಿಯಾಗಿತ್ತು. ಪುಹಾರ್ ಉಪರಾಜಧಾನಿಯಾಗಿತ್ತು. ಪಾಂಡ್ಯ ಮತ್ತು ಚೋಳರನ್ನು ಸೋಲಿಸಿದನು. ಹಿಂದೂ ಆಗಿದ್ದನು. ಉರೈಯಾರ್ ಮತ್ತು ಪುಹಾರ್ ರಾಜಕುಟುಂಬಗಳೊಳಗೆ ಪಟ್ಟಕ್ಕಾಗಿ ಜಗಳವಾದ್ದರಿಂದ ಚೋಳ ಸಾಮ್ರಾಜ್ಯ ನಶಿಸಿಹೋಯಿತು.

ಚೇರರು – ಸೆಂಗುಟ್ಟುವನ್
ಇವನು ‘ಶಿಲಪ್ಪದಿಕಾರಂ’ನ ನಾಯಕನು. ರಾಜಧಾನಿಯು ವಾಂಜಿ ಅರ್ಥಾತ್ ತಿರುವಂಜಿಕಾಲಂ. ಸಮುದ್ರ ಕಳ್ಳರನ್ನು ಅಣಗಿಸಿ ಕ್ರೇಂಗನೂರ್ ಎಂದರೆ ಮುಸಿರಿ ಬಂದರವನ್ನು ರಕ್ಷಿಸಿದನು.
ತೊಂಡಿ ರಾಜಕುಟುಂಬಕ್ಕೆ (ವಾಂಜಿಯು ಇನ್ನೊಂದು ಕುಟುಂಬ) ಸೇರಿದ ಮಂತರಂ ಚೆರಾಲನು ಮತ್ತಿನ ಅಧಿಕಾರಿಯಾಗಿದ್ದನು. ತಲೈಲಂಗಣನಟ್ಟು ಪಾಂಡ್ಯನಿಂದ ಸೋಲಿಸಲ್ಪಟ್ಟನು.

ಪಾಂಡ್ಯರು – ನೆಡುಂಜೆಲಿಯನ್
ಚೇರ, ಚೋಳರನ್ನು ಸೋಲಿಸಿದನು. ತಲೈಲಂಗಣಂ ಎಂಬಲ್ಲಿನ ಐದು ದಂಗೆಕೋರರನ್ನು ಸೋಲಿಸಿ ತಲೈಲಂಗಣನಟ್ಟು ಎಂಬ ಬಿರುದನ್ನು ಪಡೆದನು. ಬ್ರಾಹ್ಮಣಧರ್ಮವನ್ನು ಪ್ರೋತ್ಸಾಹಿಸಿದನು. ಮಧುರೆಯು ಈತನ ರಾಜಧಾನಿಯಾಗಿತ್ತು. ಕೋರ್ಕೆಯು ಬಂದರವಾಗಿತ್ತು.

(ಮುಂದುವರೆಯುವುದು)