ಬ್ರಿಟಿಷರಿಂದ ಭಾರತಕ್ಕೆ ಸ್ವಾತಂತ್ರ್ಯ ಲಭಿಸಿ ಎಪ್ಪತ್ತೈದು ವಸಂತಗಳು ತುಂಬಿವೆ. ಆ ಹೋರಾಟದ ಹಾದಿಯು ಬಹುದೀರ್ಘವಾದುದು. ಸತ್ಯಾಗ್ರಹ, ಸ್ವದೇಶಿ ಚಿಂತನೆ, ಖಾದಿ ಮತ್ತು ಚರಖಾದ ಮೂಲಕ ನಡೆದ ಅಸಹಕಾರ ಚಳವಳಿಗಳು ಹೋರಾಟದ ಹಾದಿಗೆ ಸಾತ್ವಿಕ ಬಲವನ್ನು ತುಂಬಿವೆ. ಇದರಿಂದಾಗಿ ನಮ್ಮ ದೇಶದ ಸ್ವಾತಂತ್ರ್ಯ ಹೋರಾಟವು ವಿಶ್ವದಲ್ಲಿಯೇ ವಿಭಿನ್ನ ವಾಗಿ ಗುರುತಿಸಿಕೊಳ್ಳುವುದು ಸಾಧ್ಯವಾಗಿದೆ. ಆದರೆ ಈ ಖಾದಿ ಮತ್ತು ಚರಖಾ ಎಂಬ ಮಾಧ್ಯಮಗಳಿಗೆ ಚಳವಳಿಯೊಂದನ್ನು ಕಟ್ಟುವ ಸಾಮರ್ಥ್ಯವಿದೆ ಎಂದು ಮಹಾತ್ಮಾ ಗಾಂಧೀಜಿಯವರು ಹೇಗೆ ಗುರುತಿಸಿದರು, ಆ ಗುರುತಿಸುವಿಕೆಯ ಹಾದಿಯಲ್ಲಿ ಎದುರಾದ ಸವಾಲುಗಳೇನು ಎಂಬುದನ್ನು ಅವರು ತಮ್ಮ ಆತ್ಮಕತೆ ‘ನನ್ನ ಸತ್ಯಾನ್ವೇಷಣೆ’ ಯಲ್ಲಿ ವಿವರಿಸಿದ್ದಾರೆ. ಆ ಎರಡು ಅಧ್ಯಾಯಗಳನ್ನು ನೆನಪಿಸಿಕೊಳ್ಳಲು ಇದೊಂದು ಸುಸಂದರ್ಭ ಅಲ್ಲವೇ.
ಖಾದಿಯ ಜನನ
ನಾನು 1908 ರಲ್ಲಿ ‘ಹಿಂದ್ ಸ್ವರಾಜ್ಯ’ ಪುಸ್ತಕದಲ್ಲಿ ಭಾರತದಲ್ಲಿ ಬೆಳೆಯುತ್ತಿರುವ ದಾರಿದ್ರ್ಯಕ್ಕೆ ರಾಟೆ ಮತ್ತು ಕೈ ಮಗ್ಗವೇ ಬ್ರಹ್ಮಾಸ್ತ್ರವೆಂದು ವಿವರಿಸಿದ್ದೆ. ಆದರೆ ಆಗ ರಾಟೆಯನ್ನಾಗಲೀ, ಕೈಮಗ್ಗವನ್ನಾಗಲೀ ನೋಡಿದ್ದೆನೆಂದು ನನಗೆ ಜ್ಞಾಪಕವಿಲ್ಲ. ಆ ಪುಸ್ತಕ ಬರೆಯುವಾಗ, ಯಾವುದು ಭಾರತದ ದಾರಿದ್ರ್ಯವನ್ನು ಹೋಗಲಾಡಿಸುವುದೋ ಅದೇ ಸ್ವರಾಜ್ಯವನ್ನು ಸ್ಥಾಪಿಸುವುದೆಂದೂ ನಾನು ಭಾವಿಸಿದ್ದೆ. 1915ರಲ್ಲಿ ನಾನು ದಕ್ಷಿಣ ಆಫ್ರಿಕಾದಿಂದ ಹಿಂದಿರುಗಿದಾಗ ರಾಟೆಯನ್ನು ಕಣ್ಣಿನಿಂದಲೂ ನೋಡಿರಲಿಲ್ಲ. ಸಾಬರಮತಿಯಲ್ಲಿ ಸತ್ಯಾಗ್ರಹಾಶ್ರಮ ಸ್ಥಾಪನೆಯಾದ ಮೇಲೆ ಅಲ್ಲಿ ಕೆಲವು ಕೈ ಮಗ್ಗಗಳನ್ನು ಹೂಡಿಸಿದೆವು. ಆದರೆ ನಾವು ಆ ಸಂದರ್ಭದಲ್ಲಿ ಕಷ್ಟವನ್ನು ಎದುರಿಸಬೇಕಾಯಿತು. ನಾವೆಲ್ಲ ಓದಿ ಬರೆಯುವ ಅಥವಾ ವ್ಯಾಪಾರ ಉದ್ಯೋಗಕ್ಕೆ ಸೇರಿದವರಾಗಿದ್ದೆವು. ಕೈಗಾರಿಕಾ ಕುಶಲತೆ ನಮಗಾರಿಗೂ ಇರಲಿಲ್ಲ. ನಾವು ಕೈಮಗ್ಗಗಳಲ್ಲಿ ಕೆಲಸ ಮಾಡುವುದನ್ನು ಕಲಿಸಲು ನಮಗೆ ಒಬ್ಬ ನಿಪುಣ ಕೈ ಮಗ್ಗ ಶಿಕ್ಷಕ ಬೇಕಾಗಿತ್ತು. ಕೊನೆಗೆ ಪಾಲನ್ ಪುರದಿಂದ ಒಬ್ಬ ಶಿಕ್ಷಕನನ್ನು ಕರೆಸಿದೆವು. ಆತ ತನ್ನ ವಿದ್ಯೆಯನ್ನೆಲ್ಲ ನಮಗೆ ಹೇಳಿಕೊಡಲಿಲ್ಲ. ಆದರೆ ಮಗನ್ ಲಾಲ್ ಗಾಂಧೀ ಅಷ್ಟು ಸುಲಭವಾಗಿ ಸೋತು ಹೋಗುವವರಾಗಿರಲಿಲ್ಲ. ಯಂತ್ರೋಪಕರಣಗಳ ವಿಷಯದಲ್ಲಿ ಅವನಿಗೆ ಸ್ವಾಭಾವಿಕವಾದ ಅಭಿರುಚಿಯಿತ್ತು. ಅವನು ಬಹಳ ಬೇಗ ಆ ಕಲೆಯಲ್ಲಿ ಪ್ರವೀಣನಾದ. ಸ್ವಲ್ಪ ಕಾಲದೊಳಗೆ ಆಶ್ರಮದಲ್ಲಿ ಅನೇಕ ನೇಕಾರರು ತರಬೇತುದಾರರಾದರು.
ನಮ್ಮ ಮುಂದೆ ಇದ್ದ ಗುರಿ ಇದು. ನಮ್ಮ ಕೈಯಿಂದ ಸಿದ್ಧವಾದ ಬಟ್ಟೆಗಳನ್ನು ಮಾತ್ರವೇ ನಾವು ಧರಿಸಬೇಕು. ಆದುದರಿಂದ ನಾವು ಮಿಲ್ ಬಟ್ಟೆಗಳನ್ನು ಬಿಟ್ಟುಬಿಟ್ಟೆವು. ಆಶ್ರಮವಾಸಿಗಳೆಲ್ಲ ಭಾರತದ ಗಿರಣಿಗಳ ನೂಲಿನಿಂದ ತಯಾರಾದ ಕೈಮಗ್ಗದ ವಸ್ತ್ರಗಳನ್ನೇ ಧರಿಸಬೇಕೆಂದು ನಿರ್ಣಯಿಸಿಕೊಂಡೆವು. ಈ ಅಭ್ಯಾಸವನ್ನು ಪ್ರಾರಂಭಿಸಿದುದರಿಂದ ನಮಗೆ ಒಂದು ಅನುಭವ ಪ್ರಪಂಚವೇ ತೆರೆಯಿತು. ಇದರಿಂದ ನೇಕಾರರ ಜೀವನ ಸ್ಥಿತಿಗಳು ಅವರು ಮಾಡುತ್ತಿದ್ದ ವಸ್ತ್ರೋತ್ಪಾದನೆ, ನೂಲು ದೊರೆಯಲು ಅವರು ಪಡುತ್ತಿದ್ದ ಕಷ್ಟ, ಅವರು ಮೋಸಕ್ಕೆ ಒಳಗಾಗುತ್ತಿದ್ದುದು, ಕೊನೆಯದಾಗಿ ಹೆಚ್ಚುತ್ತಿರುವ ಅವರ ಸಾಲ, ಅವರ ನೇರ ಸಂಪರ್ಕದಿಂದ ಅರಿಯಲು ನಮಗೆ ಸಾಧ್ಯವಾಯಿತು. ನಮಗೆ ಅವಶ್ಯಕವಾದಷ್ಟು ಬಟ್ಟೆಗಳನ್ನು ಕೂಡಲೇ ತಯಾರಿಸಲು ನಮಗೆ ಶಕ್ತಿಯಿರಲಿಲ್ಲ. ಆದುದರಿಂದ ನಮಗೆ ಉಳಿದ ಮಾರ್ಗ- ನೇಕಾರರಿಂದ ಕೈಮಗ್ಗದ ಬಟ್ಟೆಗಳನ್ನು ಕೊಳ್ಳುವುದೇ ಆಗಿತ್ತು. ಭಾರತದ ಗಿರಣಿ ನೂಲಿನಿಂದ ನೇಯಲ್ಪಟ್ಟ ಬಟ್ಟೆಗಳು, ಬಟ್ಟೆಯ ವ್ಯಾಪಾರಿಗಳಲ್ಲಾಗಲೀ ನೇಯ್ಗೆಯವರಲ್ಲಾಗಲೀ ಸಿದ್ಧವಾಗಿ ದೊರಕುವಂತಿರಲಿಲ್ಲ. ನೇಕಾರರು ನೇಯುತ್ತಿದ್ದ ನವಿರಾದ, ಸೊಗಸಾದ ಬಟ್ಟೆಗಳೆಲ್ಲ ಪರದೇಶದ ಗಿರಣಿ ನೂಲಿನಿಂದ ನೇಯ್ದವಾಗಿದ್ದವು. ಏಕೆಂದರೆ ಭಾರತದ ಗಿರಣಿಗಳಲ್ಲಿ ಹೆಚ್ಚಿನ ನಂಬರಿನ ನೂಲುಗಳು ತಯಾರಾಗುತ್ತಿರಲಿಲ್ಲ. ಇಂದಿಗೂ ಸಹ ಭಾರತದ ಗಿರಣಿಗಳಲ್ಲಿ ಉತ್ತಮವಾದ (ಹೆಚ್ಚಿನ ನಂಬರಿನ) ನೂಲುಗಳು ಮಿತವಾಗಿ ತಯಾರಾಗುತ್ತಿವೆ. ಅತ್ಯುತ್ತಮವಾದ ನೂಲು ಇಲ್ಲಿ ತಯಾರಾಗುವುದೇ ಇಲ್ಲ. ನಾವು ಅತ್ಯಂತ ಶ್ರಮಪಟ್ಟು ನಮಗಾಗಿ ಸ್ವದೇಶಿ ನೂಲನ್ನು ನೇಯುವ ಕೆಲವು ನೇಕಾರರನ್ನು ಕಂಡು ಹಿಡಿದೆವು. ಅವರು ಒಂದು ನಿಯಮವನ್ನು ಒಡ್ಡಿದರು. ತಾವು ತಯಾರಿಸಿದ ಬಟ್ಟೆಗಳನ್ನೆಲ್ಲ ಆಶ್ರಮ ತೆಗೆದುಕೊಳ್ಳಬೇಕೆಂದು. ಹೀಗೆ ಭಾರತದ ಗಿರಣಿಗಳಲ್ಲಿ ತಯಾರಾದ ನೂಲಿನಿಂದ ಬಟ್ಟೆಗಳನ್ನು ನಮ್ಮ ಉಡುಪಾಗಿ ಅಂಗೀಕರಿಸಿ ಮತ್ತು ನಮ್ಮ ಸ್ನೇಹಿತರಲ್ಲಿ ಅದನ್ನು ಪ್ರಚಾರ ಮಾಡುವುದರಿಂದ ನಾವು ಭಾರತದ ಗಿರಣಿಗಳ ಸಂಪರ್ಕವುಂಟಾಯಿತು. ಅವರ ಆಡಳಿತ ವ್ಯವಸ್ಥೆ ಮತ್ತು ಕಷ್ಟ ನಿಷ್ಠುರಗಳ ಪರಿಚಯವೂ ತಕ್ಕಮಟ್ಟಿಗೆ ಆಯಿತು.
ತಾವು ಮಾಡಿದ ನೂಲನ್ನು ತಾವೇ ನೇಯಬೇಕು ಎಂಬುದು ಗಿರಣಿಗಳ ಗುರಿಯಾಗಿದ್ದಿತೆಂದು ನಮಗೆ ಕಂಡಿತು. ಅವರು ಕೈಮಗ್ಗದವರೊಂದಿಗೆ ಸಹಕರಿಸಿದ್ದುದು ಇಚ್ಛಾಪೂರ್ವಕವಾಗಿ ಅಲ್ಲ. ವಿಧಿಯಿಲ್ಲದೆ ಮತ್ತು ತಾತ್ಕಾಲಿಕವಾಗಿ. ನಮಗೆ ಬೇಕಾಗುವ ನೂಲನ್ನು ನಾವು ಎಷ್ಟು ಬೇಗ ನೂಲಲು ಸಾಧ್ಯವಾದೀತು ಎಂದು ನಾವು ಕಾತುರರಾದೆವು. ನಾವು ನಮ್ಮ ನೂಲನ್ನು ನೂತುಕೊಳ್ಳುವವರೆಗೆ ಗಿರಣಿಗಳ ಮೇಲೆ ಅವಲಂಬಿಸಬೇಕಾಗುವುದೆಂಬುದು ನನಗೆ ಸ್ಪಷ್ಟವಾಗಿತ್ತು. ಭಾರತದ ಗಿರಣಿಗಳ ಪ್ರತಿನಿಧಿಗಳಾಗಿ ಮುಂದುವರೆಯುವುದರಿಂದ ನಾವು ದೇಶಕ್ಕೆ ಯಾವ ಸೇವೆಯನ್ನೂ ಮಾಡಿದಂತಾಗುವುದಿಲ್ಲವೆಂಬುದು ನಮಗೆ ತೋರಿತು.
ಈ ಪ್ರಯತ್ನದಲ್ಲಿಯೂ ನಾವು ಬಹಳ ಕಷ್ಟಗಳನ್ನು ಎದುರಿಸಬೇಕಾಯಿತು. ನಮಗೆ ಒಂದು ರಾಟೆಯೂ ಸಿಕ್ಕಲಿಲ್ಲ. ನೂಲುವುದನ್ನು ಕಲಿಸುವವರೂ ಸಿಕ್ಕಲಿಲ್ಲ. ನಾವು ನೂಲಿನ ಉಂಡೆಗಳನ್ನು, ಕಂಟಿಕೆಗಳನ್ನೂ ಮಾಡಲು ಆಶ್ರಮದಲ್ಲಿ ಕೆಲವು ರಾಟೆಗಳನ್ನು ಉಪಯೋಗಿಸುತ್ತಿದ್ದೆವು. ಒಂದು ಸಲ ಕಾಳಿದಾಸ್ ಜವೇರಿಯವರು ನೂಲುವುದನ್ನು ಕಲಿಸಿಕೊಡಬಲ್ಲ ಒಬ್ಬ ಮಹಿಳೆಯನ್ನು ಕಂಡುಹಿಡಿದರು. ನಾವು ಆಕೆಯ ಬಳಿಗೆ ನಮ್ಮ ಆಶ್ರಮದಿಂದ ಒಬ್ಬರನ್ನು ನೂಲುವುದನ್ನು ಕಲಿತುಕೊಂಡು ಬರಲು ಕಳುಹಿಸಿದೆವು. ಅವರು ವಿಷಯಗಳನ್ನು ಹೊಸದಾಗಿ ಕಲಿಯುವುದರಲ್ಲಿ ನಿಪುಣರೆಂದು ಹೆಸರಾಗಿದ್ದರು. ಅವರೂ ಸಹ ಈ ಕಲೆಯ ಮರ್ಮವನ್ನು ಸ್ವಾಧೀನಪಡಿಸಿಕೊಳ್ಳದೇ ಹಿಂದಿರುಗಿದರು. ಹೀಗೆ ಕಾಲ ಕಳೆಯಿತು. ಜತೆಯಲ್ಲಿ ನನ್ನ ಆತುರವೂ ಹೆಚ್ಚುತ್ತಾ ಬಂದಿತು. ಆಶ್ರಮಕ್ಕೆ ಅನಿರೀಕ್ಷಿತವಾಗಿ ಬರುವವರನ್ನೆಲ್ಲ ಅವರಿಗೆ ಈ ವಿಷಯದಲ್ಲಿ ಏನಾದರೂ ತಿಳಿದಿರುವುದೆಂಬ ಸಂಭವ ತೋರಿದರೆ ನಾನು ಆ ಕಲೆಯ ವಿಷಯಗಳಲ್ಲಿ ಅಸಂಖ್ಯಾತ ಪ್ರಶ್ನೆಗಳನ್ನು ಕೇಳುತ್ತಿದ್ದೆ. ಆದರೆ ಈ ವಿದ್ಯೆ ಗೊತ್ತಿದ್ದುದು ಮಹಿಳೆಯರಿಗೆ ಮಾತ್ರ. ಅದೂ ಬಹಳ ಅಪರೂಪವಾಗಿ. ಎಲ್ಲಿಯಾದರೂ ಮೂಲೆಯಲ್ಲಿ ಅಂತಹ ನೂಲುವವರು ಉಳಿದಿದ್ದರೆ ಅವರ ವಿಷಯ ಗೊತ್ತಿರಬಹುದಾದುದು ಕೂಡ ಮಹಿಳೆಯರಿಗೆ ಮಾತ್ರವೇ.
1917ನೇ ಸಂವತ್ಸರದಲ್ಲಿ ಬರೋಡದ ಶಿಕ್ಷಣ ಸಮ್ಮೇಳನದ ಅಧ್ಯಕ್ಷತೆ ವಹಿಸಲು ನನ್ನನ್ನು ಗುಜರಾತೀ ಮಿತ್ರರು ಕರೆದುಕೊಂಡು ಹೋದರು. ಅಲ್ಲಿ ನಾನು ಆ ಅದ್ವಿತೀಯಳಾದ ಶ್ರೀಮತಿ ಗಂಗಾಬಹೆನ್ ಮುಜುಂದಾರಳನ್ನು ನೋಡಿದೆ. ಆಗ ಆಕೆ ವಿಧವೆ. ಆದರೆ ಆಕೆಯ ಸಾಹಸಕ್ಕೆ ಕೊನೆಯೇ ಇರಲಿಲ್ಲ. ಸಾಮಾನ್ಯ ಅರ್ಥದಲ್ಲಿ ಆಕೆ ಶಿಕ್ಷಿತಳಲ್ಲ. ಆದರೆ ಧೈರ್ಯ ವಿವೇಕ ಇವುಗಳಲ್ಲಿ ಆಕೆ ನಮ್ಮ ಸಾಧಾರಣ ಸುಶಿಕ್ಷಿತ ಸ್ತ್ರೀಯರನ್ನು ಸುಲಭವಾಗಿ ಮೀರಿಸಿದಳು. ಆಕೆ ಆಗಲೇ ಅಸ್ಪೃಶ್ಯತೆಯ ಕಳಂಕವನ್ನು ತೊಲಗಿಸಿ ನಿರ್ಭಯವಾಗಿ ಅವರೊಂದಿಗೆ ಬೆರೆತು ಅವರ ಸೇವೆ ಸಲ್ಲಿಸುತ್ತಿದ್ದಳು. ಆಕೆಗೆ ಸ್ವಂತ ಆಸ್ತಿಯಿತ್ತು. ಮತ್ತು ಆಕೆಯ ಅವಶ್ಯಕತೆಗಳು ಮಿತವಾಗಿದ್ದವು. ಆಕೆ ಒಳ್ಳೆಯ ದೃಢಕಾಯಳಾಗಿ ಎಲ್ಲಿಗೆ ಬೇಕಾದರೂ ನಿರ್ಭಯವಾಗಿ ಒಬ್ಬಳೇ ಹೋಗುತ್ತಿದ್ದಳು. ಕುದುರೆ ಸವಾರಿ ಆಕೆಗೆ ಚೆನ್ನಾಗಿ ಅಭ್ಯಾಸವಿತ್ತು. ಗೋಧ್ರಾ ಸಮ್ಮೇಳನದಲ್ಲಿ ನನಗೆ ಇನ್ನೂ ಹೆಚ್ಚಾಗಿ ಆಕೆಯ ಪರಿಚಯವಾಯಿತು. ನೂಲುವವರನ್ನು ಕಂಡು ಹಿಡಿಯಲು ನಾನು ಪಡುತ್ತಿದ್ದ ಕಷ್ಟದ ಕತೆಯನ್ನು ನಾನು ಆಕೆಗೆ ಹೇಳಿದೆ. ‘ರಾಟೆಯನ್ನು ಹುಡುಕಲು ನಾನು ಶ್ರದ್ಧೆಯಿಂದ ಸತತ ಪ್ರಯತ್ನ ಮಾಡುತ್ತೇನೆ’ ಎಂದು ನನಗೆ ವಾಗ್ದಾನ ಮಾಡಿ ಆಕೆ ನನ್ನ ಹೊರೆಯನ್ನು ಕಡಿಮೆ ಮಾಡಿದಳು.
ನಾವು ಅತ್ಯಂತ ಶ್ರಮಪಟ್ಟು ನಮಗಾಗಿ ಸ್ವದೇಶಿ ನೂಲನ್ನು ನೇಯುವ ಕೆಲವು ನೇಕಾರರನ್ನು ಕಂಡು ಹಿಡಿದೆವು. ಅವರು ಒಂದು ನಿಯಮವನ್ನು ಒಡ್ಡಿದರು. ತಾವು ತಯಾರಿಸಿದ ಬಟ್ಟೆಗಳನ್ನೆಲ್ಲ ಆಶ್ರಮ ತೆಗೆದುಕೊಳ್ಳಬೇಕೆಂದು. ಹೀಗೆ ಭಾರತದ ಗಿರಣಿಗಳಲ್ಲಿ ತಯಾರಾದ ನೂಲಿನಿಂದ ಬಟ್ಟೆಗಳನ್ನು ನಮ್ಮ ಉಡುಪಾಗಿ ಅಂಗೀಕರಿಸಿ ಮತ್ತು ನಮ್ಮ ಸ್ನೇಹಿತರಲ್ಲಿ ಅದನ್ನು ಪ್ರಚಾರ ಮಾಡುವುದರಿಂದ ನಾವು ಭಾರತದ ಗಿರಣಿಗಳ ಸಂಪರ್ಕವುಂಟಾಯಿತು.
ಚರಖಾ ಸಿಕ್ಕಿತು!
ಕೊನೆಗೆ ಗುಜರಾತಿನಲ್ಲೆಲ್ಲಾ ವಿಪುಲವಾಗಿ ಅಲೆದಾಡಿದ ಮೇಲೆ ಗಂಗಾಬಹೆನ್‌ಗೆ ಬರೋಡಾದ ವಿಜಾಪುರದಲ್ಲಿ ರಾಟೆ ದೊರಕಿತು. ಅಲ್ಲಿ ಅನೇಕರ ಬಳಿ ರಾಟೆಗಳಿದ್ದವು. ಆದರೆ ಅವರು ಅವುಗಳನ್ನು ಅನುಪಯುಕ್ತವೆಂದು ಅಟ್ಟದ ಮೇಲಕ್ಕೆ ಎಸೆದಿದ್ದರು. ಅವರು ಗಂಗಾಬಹೆನ್‌ಗೆ “ನಮಗೆ ಯಾರಾದರೂ ತಪ್ಪದೆ ಹಂಜಿಗಳನ್ನು ಒದಗಿಸಿ, ನಾವು ನೂಲನ್ನು ಕೊಂಡುಕೊಳ್ಳುವುದಾದರೆ, ಮತ್ತೆ ನೂಲಲು ಸಿದ್ಧರಾಗಿದ್ದೇವೆ” ಎಂದು ತಿಳಿಸಿದರು. ಈ ವಿಷಯ ಗಂಗಾಬಹೆನ್ ನನಗೆ ತಿಳಿಸಿದರು. ಹಂಜಿಯನ್ನು ಒದಗಿಸುವುದು ಕಷ್ಟದ ಕೆಲಸವಾಗಿ ತೋರಿತು. ಈ ಕಷ್ಟವನ್ನು ನಾವು ದಿವಂಗತ ಉಮರ್ ಸೋಬಾನಿಯವರಿಗೆ ಹೇಳಲು ಅವರು ಕೂಡಲೇ ತಮ್ಮ ಗಿರಣಿಯಿಂದ ಬೇಕಾದಷ್ಟು ಹಂಜಿಗಳನ್ನು ಕಳುಹಿಸುವುದಾಗಿ ಹೇಳಿ, ಸಮಸ್ಯೆಯನ್ನು ಬಗೆಹರಿಸಿದರು. ಉಮರ್ ಸೋಬಾನಿಯವರು ನನಗೆ ಕಳುಹಿಸಿದ ಹಂಜಿಗಳನ್ನು, ನಾನು ಗಂಗಾಬಹೆನ್‌ರಿಗೆ ಕಳುಹಿಸಿದೆ. ಸ್ವಲ್ಪ ಕಾಲದೊಳಗೆ ನೂಲು ರಾಶಿರಾಶಿಯಾಗಿ ಬಂದು ಬೀಳಲು ಪ್ರಾರಂಭವಾಯಿತು. ಅದನ್ನು ವ್ಯವಸ್ಥೆಗೊಳಿಸುವುದೇ ನಮಗೆ ಸಮಸ್ಯೆಯಾಯಿತು. ಮಿ. ಉಮರ್ ಸೋಬಾನಿಯವರ ಔದಾರ್ಯವೇನೋ ದೊಡ್ಡದು. ಆದರೆ ಎಂದೆಂದಿಗೂ ಅವರ ಲಾಭವನ್ನೇ ಪಡೆದುಕೊಂಡು ಹೋಗುವುದು ತರವಲ್ಲವಷ್ಟೇ. ಅವರಿಂದ ಹಂಜಿಗಳನ್ನು ತರಿಸುತ್ತಾ ಹೋಗುವುದು ನನ್ನ ಮನಸ್ಸಿಗೆ ಸಮಾಧಾನವಾಗಲಿಲ್ಲ. ಗಿರಣಿ ಹಂಜಿಗಳನ್ನು ಉಪಯೋಗಿಸಬಹುದಾದರೆ ಗಿರಣಿಯ ನೂಲನ್ನೇ ಏಕೆ ಉಪಯೋಗಿಸಬಾರದು? ಹಿಂದಿನ ಕಾಲದಲ್ಲಿ ನೂಲುತ್ತಿದ್ದವರಿಗೆ ಯಾವ ಗಿರಣಿಗಳೂ ಹಂಜಿಯನ್ನು ಒದಗಿಸುತ್ತಿರಲಿಲ್ಲವಷ್ಟೇ. ಹಾಗಾದ ಮೇಲೆ ಅವರು ಹಂಜಿಗಳನ್ನು ಹೇಗೆ ಮಾಡಿಕೊಳ್ಳುತ್ತಿದ್ದರು? ಹೀಗೆ ಯೋಚಿಸುತ್ತಾ ನಾನು ಹಂಜಿಗಳನ್ನೊದಗಿಸಬಲ್ಲ ಪಿಂಜಾರರನ್ನು ಹುಡುಕಬೇಕೆಂದು ಗಂಗಾಬಹೆನ್‌ಗೆ ಸೂಚಿಸಿದೆ. ಆಕೆ ಧೈರ್ಯದಿಂದಲೇ ಈ ಕಾರ್ಯವನ್ನು ಒಪ್ಪಿದಳು. ಹತ್ತಿಯನ್ನು ಎಕ್ಕುವ ಒಬ್ಬ ಪಿಂಜಾರನನ್ನು ಆಕೆ ಗೊತ್ತು ಮಾಡಿದಳು. ಅವನು ತಿಂಗಳಿಗೆ ಮೂವತೈದು ರೂಪಾಯಿಗಳನ್ನೋ ಅಥವಾ ಇನ್ನು ಹೆಚ್ಚು ಹಣವನ್ನೋ ಕೇಳಿದ. ಅವನಿಗೆ ಅಷ್ಟು ಹಣವನ್ನು ಕೊಡುವುದು ಆ ಕಾಲದಲ್ಲಿ ಹೆಚ್ಚಲ್ಲವೆಂದು ನಾನು ಭಾವಿಸಿದೆ. ಎಕ್ಕಿದ್ದ ಹತ್ತಿಯಲ್ಲಿ ಹಂಜಿಯನ್ನು ಮಾಡಲು ಕೆಲವು ಯುವಕರನ್ನು ಆಕೆ ತಯಾರು ಮಾಡಿದಳು. ನಾನು ಬೊಂಬಾಯಿಯಲ್ಲಿ ಹತ್ತಿಗಾಗಿ ಭಿಕ್ಷೆ ಬೇಡಿದೆ. ಯಶವಂತಪ್ರಸಾದ್ ದೇಸಾಯಿಯವರು ಕೂಡಲೇ ಹತ್ತಿಯನ್ನೊದಗಿಸಿದರು. ಗಂಗಾಬಹನ್‌ಳ ಸಾಹಸ ನಿರೀಕ್ಷೆಯನ್ನು ಮೀರಿ ಅಭಿವೃದ್ಧಿ ಹೊಂದಿತು. ವಿಜಾಪುರದ ನೂತ ನೂಲನ್ನೇ ನೇಯಬಲ್ಲ ನೇಕಾರರನ್ನು ಆಕೆ ಹುಡುಕಿದಳು. ಬಹು ಬೇಗ ವಿಜಾಪುರದ ಖಾದಿ ಪ್ರಸಿದ್ಧವಾಯಿತು.
ವಿಜಾಪುರದಲ್ಲಿ ಈ ಕಾರ್ಯಗಳೆಲ್ಲ ನಡೆಯುತ್ತಿರುವಲ್ಲಿ ಆಶ್ರಮದಲ್ಲಿ ಚರಖಾ ಪ್ರಮುಖ ಸ್ಥಾನವನ್ನು ಹೊಂದಿತ್ತು. ಮಗನ್ ಲಾಲ್ ಗಾಂಧೀ ತಮ್ಮ ಯಂತ್ರ ನಿರ್ಮಾಣ ಕೌಶಲ್ಯ ಬುದ್ಧಿಯನ್ನೆಲ್ಲ ಚರಖಾದ ಮೇಲೆ ಉಪಯೋಗಿಸಿ ಅದರಲ್ಲಿ ಅನೇಕ ಸುಧಾರಣೆಗಳನ್ನು ಮಾಡಿದರು. ಆಶ್ರಮದಲ್ಲಿ ಚರಖಾಗಳೂ ಅದರ ಉಪಕರಣಗಳೂ ತಯಾರಾಗತೊಡಗಿದವು. ಆಶ್ರಮದಲ್ಲಿ ತಯಾರಾದ ಮೊದಲನೆಯ ಖಾದಿ ತುಂಡಿಗೆ ಗಜಕ್ಕೆ 17 ಆಣೆ ಬೆಲೆ ಬಿತ್ತು. ಆ ಬೆಲೆಯನ್ನು ಕೊಟ್ಟು ಅದನ್ನು ಕೊಂಡು ಕೊಳ್ಳಬೇಕೆಂದು ನಾನು ಸ್ನೇಹಿತರಿಗೆ ಹೇಳಿದೆ. ಅವರು ಒಪ್ಪಿ ಹಾಗೆಯೇ ಮಾಡಿದರು.
ನಾನು ಬೊಂಬಾಯಿಯಲ್ಲಿ ಕಾಯಿಲೆಯಿಂದ ಮಲಗಿದ್ದೆ. ಆದರೆ ಚರಖಾ ಹುಡುಕಾಡಲು ನನಗೆ ಶಕ್ತಿಯಿತ್ತು. ಕೊನೆಗೆ ಇಬ್ಬರು ನೂಲುವವರನ್ನು ಕಂಡು ಹಿಡಿದೆ. ಅವರು ಒಂದು ಸೇರಿಗೆ (28 ತೊಲ) ಅಥವಾ ಮುಕ್ಕಾಲು ಪೌಂಡು ನೂಲಿಗೆ ಒಂದು ರುಪಾಯಿ ಕೇಳಿದರು. ನನಗೆ ಆಗ ಖಾದಿಯ ಅರ್ಥಶಾಸ್ತ್ರ ಏನೂ ಗೊತ್ತಿರಲಿಲ್ಲ. ಕೈಯಿಂದ ನೂತ ನೂಲಿಗೆ ಎಷ್ಟು ಬೆಲೆಯನ್ನಾದರೂ ಕೊಡಲು ನಾನು ಸಿದ್ಧನಾಗಿದ್ದೆ. ವಿಜಾಪುರದಲ್ಲಿ ಕೊಡುತ್ತಿದ್ದ ನೂಲುವ ನೂಲಿಗೆ ನಾನು ಕೊಡುತ್ತಿದ್ದ ಕೂಲಿಯನ್ನು ಹೋಲಿಸಿದಾಗ ನನ್ನನ್ನು ಮೋಸಗೊಳಿಸುತ್ತಿರುವವರೆಂಬುದು ಗೊತ್ತಾಯಿತು. ಕೂಲಿಯನ್ನು ಸ್ವಲ್ಪವೂ ಕಡಿಮೆ ಮಾಡಿಕೊಳ್ಳಲು ನೂಲುವವರು ಒಪ್ಪಲಿಲ್ಲ. ಆದುದರಿಂದ ನಾನು ಅವರನ್ನು ಕೆಲಸದಿಂದ ಬಿಡಿಸಿಬಿಟ್ಟೆ. ಆದರೆ ಅವರನ್ನು ನಿಯಮಿಸಿಕೊಂಡಿದ್ದ ಉದ್ದೇಶ ಸಫಲವಾಗಿತ್ತು. ಅವರು ಶ್ರೀಮತಿ ಆವಂತಿಕಾ ಬಾಯಿ, ಶ್ರೀ ರಮೀಬಾಯಿ ಕಾಮದಾರ್, ಶಂಕರ್ ಲಾಲ್ ಬ್ಯಾಂಕರರ ವಿಧವೆ ತಾಯಿ ಮತ್ತು ಶ್ರೀಮತಿ ವಸುಮತಿ ಬಹನ್ ರಿಗೆ ನೂಲುವುದನ್ನು ಕಲಿಸಿಕೊಟ್ಟಿದ್ದರು. ಚರಖಾ ನನ್ನ ಕೊಠಡಿಯಲ್ಲಿ ಗೆಲುವಾಗಿ ಹಾಡಲು ಪ್ರಾರಂಭಿಸಿತು. ಅದರ ಧ್ವನಿಯಿಂದ ನನ್ನ ಆರೋಗ್ಯ ಉತ್ತಮವಾಗಲು ಬಹುಮಟ್ಟಿಗೆ ಸಹಾಯಕವಾಯಿತು ಎಂದು ಹೇಳುವುದು ಸ್ವಲ್ಪವೂ ಅತಿಶಯೋಕ್ತಿಯಲ್ಲ. ಅದರ ಪರಿಣಾಮ ದೈಹಿಕಕ್ಕಿಂತ ಮಾನಸಿಕವೆಂಬುದನ್ನು ನಾನು ಒಪ್ಪುತ್ತೇನೆ. ಆದರೆ ಅದರಿಂದ ಮನುಷ್ಯನ ಮಾನಸಿಕ ಪ್ರವೃತ್ತಿಯ ಪರಿಣಾಮ ಎಷ್ಟು ಪ್ರಬಲವಾಗಿ ದೇಹದ ಮೇಲೆ ಆಗುತ್ತದೆ ಎಂಬುದು ಗೊತ್ತಾಗುತ್ತದೆ. ನಾನೂ ಸಹ ನೂಲುವುದಕ್ಕೆ ಕೈ ಹಾಕಿದೆ ಆದರೆ ನನ್ನಿಂದ ಹೆಚ್ಚು ಕೆಲಸವಾಗಲಿಲ್ಲ.
ಬೊಂಬಾಯಿಯಲ್ಲಿ ಮತ್ತೆ ಅದೇ ಹಳೆಯ ಪ್ರಶ್ನೆ. ಕೈಯಿಂದ ಮಾಡಿದ ಹಂಜಿಯನ್ನು ಸಂಪಾದಿಸುವ ಪ್ರಶ್ನೆ ಉದ್ಭವಿಸಿತು. ಒಬ್ಬ ಪಿಂಜಾರ ಹೆಗಲಿಗೆ ತನ್ನ ಬಿಲ್ಲನ್ನು ನೇತು ಹಾಕಿಕೊಂಡು ಅದರ ಠೇಂಕಾರ ಮಾಡುತ್ತ ರವಿಶಂಕರರ ಮನೆಯ ಮುಂದೆ ನಿತ್ಯವೂ ಹೋಗುತ್ತಿದ್ದ. ನಾನು ಅವನನ್ನು ಕರೆಸಿದೆ. ದಿಂಬು ಮೆತ್ತೆಗಳನ್ನು ಮಾಡಲು ಅವನು ಹತ್ತಿ ಎಕ್ಕುತ್ತಿದ್ದ. ಆತ ಹಂಜಿಗಾಗಿ ಹತ್ತಿಯನ್ನು ಎಕ್ಕಲು ಒಪ್ಪಿದರೂ ಹೆಚ್ಚು ಬೆಲೆಯನ್ನು ಕೇಳಿದ. ನಾನು ಅದಕ್ಕೆ ಒಪ್ಪಿದೆ. ಹೀಗೆ ತಯಾರಾದ ನೂಲನ್ನು ಪವಿತ್ರ ಏಕಾದಶಿಯ ದಿವಸ ಹಾರಗಳನ್ನು ಮಾಡಲು ನಾನು ವೈಷ್ಣವ ಮಿತ್ರರಿಗೆ ಕೊಟ್ಟೆ. ಶ್ರೀ ಶಿವಾಜಿ ಬೊಂಬಾಯಿಯಲ್ಲಿ ಒಂದು ನೂಲುವ ತರಗತಿಯನ್ನು ಪ್ರಾರಂಭಿಸಿದರು. ಈ ಎಲ್ಲಾ ಪ್ರಯೋಗಗಳಿಗೂ ಬಹಳ ಹಣ ಬೇಕಾಗುತ್ತಿತ್ತು. ಆದರೆ ಖಾದಿಯಲ್ಲಿ ನಂಬಿಕೆಯುಳ್ಳ ಮಾತೃಭೂಮಿಯ ಭಕ್ತರಾದ ದೇಶಭಕ್ತಿಯಿಂದ ತುಂಬಿದ ಸ್ನೇಹಿತರು ವೆಚ್ಚವನ್ನೆಲ್ಲ ಸಂತೋಷದಿಂದ ವಹಿಸಿಕೊಂಡರು. ನನ್ನ ನಮ್ರ ಅಭಿಪ್ರಾಯದಲ್ಲಿ ಹೀಗೆ ವೆಚ್ಚ ಮಾಡಿದ ಹಣ ವ್ಯರ್ಥವಾಗಲಿಲ್ಲ. ನಮಗೆ ಅದರಿಂದ ಅಮೂಲ್ಯವಾದ ಅನುಭವ ದೊರೆಯಿತು. ಚರಖಾದ ಶಕ್ತಿ ಸಾಮರ್ಥ್ಯಗಳು ನಮಗೆ ಗೊತ್ತಾದವು.
ನನ್ನ ಬಟ್ಟೆಗಳೆಲ್ಲ ಖಾದಿಯೇ ಆಗಿರಬೇಕೆಂಬ ಆತುರ ಅತ್ಯಧಿಕವಾಯಿತು. ನನ್ನ ಧೋತರ ಆವರೆಗೆ ಇನ್ನೂ ಭಾರತದ ಗಿರಣಿಯದೇ ಆಗಿತ್ತು. ಸಾಬರಮತಿ ಆಶ್ರಮದಲ್ಲಿಯೂ ವಿಜಾಪುರದಲ್ಲಿಯೂ ತಯಾರಾದ ಒರಟು ಖಾದಿ ಮೂವತ್ತು ಅಂಗುಲ ಮಾತ್ರ ಅಗಲವಾಗಿರುತ್ತಿತ್ತು. ನಾನು ಗಂಗಾಬಹೆನ್ ಗೆ ‘ನೀವು ಒಂದು ತಿಂಗಳಿನೊಳಗಾಗಿ ನಲವತ್ತೈದು ಅಂಗುಲ ಅಗಲದ ಧೋತ್ರವನ್ನು ನನಗೆ ಕೊಟ್ಟರೆ ಸರಿ. ಇಲ್ಲವಾದರೆ ನಾನು ಒರಟಾದ ಕಡಿಮೆ ಅಗಲದ ಧೋತ್ರವನ್ನೇ ಉಡುತ್ತೇನೆ’ ಎಂದು ಎಚ್ಚರಿಕೆ ಕೊಟ್ಟೆ. ಈ ಅಂತ್ಯ ಎಚ್ಚರಿಕೆಯಿಂದ ಆಕೆ ಬೆಚ್ಚಿದಳು. ಆದರೆ ಆಕೆಯ ಶಕ್ತಿಗೆ ನನ್ನ ಕೇಳಿಕೆ ಮೀರಿದುದಾಗಿಲಿಲ್ಲ. ಆಕೆ ಒಂದು ತಿಂಗಳಿನೊಳಗಾಗಿಯೇ ನನಗೆ 45 ಅಂಗುಲದ ಒಂದು ಜೊತೆ ಖಾದಿ ಪಂಚೆಯನ್ನು ಕಳುಹಿಸಿದಳು. ಹೀಗೆ ಮಾಡಿ ಆಕೆ ನನ್ನನ್ನು ಒಂದು ವಿಷಮ ಪರಿಸ್ಥಿತಿಯಿಂದ ಪಾರು ಮಾಡಿದಳು.
ಅದೇ ಸಮಯದಲ್ಲಿ ಶ್ರೀ ಲಕ್ಷ್ಮೀದಾಸರು, ನೇಕಾರರ ಶ್ರೀ ರಾಮಜೀಯನ್ನೂ ಆತನ ಪತ್ನಿ ಗಂಗಾಬಾಯಿಯನ್ನೂ ಲಾಠಿ ಎಂಬಲ್ಲಿಂದ ಆಶ್ರಮಕ್ಕೆ ಕರೆತಂದರು. ಅವರು ಪಂಚೆಗಳನ್ನು ನೇಯಲು ಮೊದಲು ಮಾಡಿದರು. ಖಾದಿಯ ಪ್ರಸಾರದಲ್ಲಿ ಈ ದಂಪತಿಗಳು ಮಾಡಿದ ಕಾರ್ಯ ಬಹಳ ಗಣನೀಯವಾದುದು. ಅವರು ಗುಜರಾತಿನಲ್ಲಿಯೂ ಬೇರೆ ಎಡೆಗಳಲ್ಲಿಯೂ ಅನೇಕರಿಗೆ ಕೈ ನೂಲಿನಿಂದ ನೇಯುವುದನ್ನು ಕಲಿಸಿದರು. ಮಗ್ಗದ ಮೇಲೆ ಕುಳಿತ ಗಂಗಾಬಾಯಿಯನ್ನು ನೋಡುವುದಂತೂ ಭಾವಪೂರಿತ ದೃಶ್ಯ. ಆ ಅನಕ್ಷರಸ್ಥ, ಆದರೆ ಆತ್ಮ ಪ್ರತ್ಯಯವುಳ್ಳ ಸಹೋದರಿ, ತನ್ನ ಮಗ್ಗದ ಮೇಲೆ ಕುಳಿತು ನೇಯುವಾಗ ಆಕೆ ಅದರಲ್ಲಿಯೇ ಪೂರ್ಣವಾಗಿ ಲೀನವಾಗುತ್ತಾಳೆ. ಆಕೆಯ ಮನಸ್ಸನ್ನು ಬೇರೆ ಕಡೆ ತಿರುಗಿಸಲು ಸಾಧ್ಯವಿಲ್ಲ. ಹಾಗೆಯೇ ಆಕೆಯ ದೃಷ್ಟಿಯನ್ನು ತನಗೆ ಪ್ರಿಯವಾದ ಮಗ್ಗದಿಂದ ನಮ್ಮೆಡೆಗೆ ಎಳೆಯುವುದೂ ಸಾಧ್ಯವಿಲ್ಲ.
ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ