ಸೇಟ್‌ಜೀ ಒಬ್ಬರು ಬೆಂಗಳೂರಿನಿಂದ ಮುಂಬೈಗೆ ಹೆಚ್ಚುವರಿ ಗೋಲ್ಡ್ ಬಿಸ್ಕೆಟ್ ಸಾಗಿಸುವ ಮಾಹಿತಿ ಸಂಗ್ರಹಿಸಿ ಪ್ಲಾನ್ ಮಾಡಿದಂತೆ ಅವರೆಲ್ಲ ಸೇರಿ ‘ರಾಬರಿ’ ಮಾಡಿದರು. ಎಲ್ಲವೂ ಪ್ಲಾನ್ ಪ್ರಕಾರವೇ ನಡೆಯಿತು, ಆದರೆ ತಪ್ಪಿಸಿಕೊಳ್ಳುವಾಗ ಈ ಟೀಮಿನ ಇಬ್ಬರು ಸಿಕ್ಕಿಹಾಕಿಕೊಂಡರು.  ಮರುದಿನ ದೊಡ್ಡ ಸುದ್ದಿಯಾಯಿತು. ಸಿಕ್ಕಿಹಾಕಿಕೊಂಡ ಸದಸ್ಯರು ಕಳ್ಳತನದ ಕುರಿತು ಬಾಯಿಬಿಡಲಿಲ್ಲ. ಆಗ ಪೊಲೀಸರೊಂದು ಉಪಾಯ ಮಾಡಿ, ಬಂಧಿತರನ್ನು ಬಿಡುಗಡೆ ಮಾಡಲು ನಿರ್ಧರಿಸಿದರು. ಮುಂದೇನಾಯಿತು ?
‘ಗಂಟಿಚೋರರ ಕಥನಗಳು’ ಸರಣಿಯಲ್ಲಿ ಡಾ.ಅರುಣ್ ಜೋಳದ ಕೂಡ್ಲಿಗಿ ಬರಹ. 

 

ಕರ್ನಾಟಕದಲ್ಲಿ ನೆಲೆಸಿದ ಗಂಟಿಚೋರ್ ಸಮುದಾಯದ ಹಿರಿಯರನ್ನು ಮಾತನಾಡಿಸಿದರೆ ಕಾಣಸಿಗುವ ಚಿತ್ರಗಳು ಭಿನ್ನವಾಗಿದೆ. ಮೂಲತಃ ಕಳ್ಳತನವೇ ನಮ್ಮ ಕುಲವೃತ್ತಿ ಎಂದು ಹೇಳುತ್ತಾರೆ. ಈ ವೃತ್ತಿಗೆ ಅಂಟಿಕೊಂಡ ಅನೇಕ ನಂಬಿಕೆಯ ಲೋಕವನ್ನು ಹೇಳತೊಡಗುತ್ತಾರೆ. ಅಂತೆಯೇ ಈ ಸಮುದಾಯವೇ ತನ್ನ ಸಮುದಾಯದ ಚರಿತ್ರೆಯನ್ನು ಹೇಗೆ ರೂಪಿಸಿಕೊಂಡಿದೆ ಎಂದು ನೋಡಿದರೆ ಕುತೂಹಲದ ಸಂಗತಿಗಳು ಬಯಲಿಗೆ ಬರುತ್ತವೆ. ಇದರಲ್ಲಿ ಮುಖ್ಯವಾಗಿ ತುಡುಗುತನದ ಶೌರ್ಯ ಸಾಹಸಗಳ ಬಗ್ಗೆ ಹೆಮ್ಮೆ ಮೂಡುವುದನ್ನು ಕಾಣಬಹುದು. ಈ ವಿವರಗಳು ಈ ಸಮುದಾಯದ ಮಾನಸಿಕ ಬಿಡುಗಡೆಯಂತೆಯೂ ಕಾಣುತ್ತದೆ. ಕಾರಣ ಹೊರಜಗತ್ತು ‘ತುಡುಗುತನ’ವನ್ನು ಅಪರಾಧಿ ಚಟುವಟಿಕೆಯನ್ನಾಗಿ ನೋಡಿದರೆ, ಇದೇ ಚಟುವಟಿಕೆಯನ್ನು ಸಕಾರಾತ್ಮಕ ನಡೆಯಂತೆ ಅದನ್ನು ಮೌಲ್ಯೀಕರಿಸುವತ್ತ ಈ ಚರಿತ್ರೆ ಸಾಗುತ್ತದೆ.

ಮುಖ್ಯವಾಗಿ ಗಂಟಿಚೋರ್ ಸಮುದಾಯ ಕಟ್ಟಿಕೊಂಡ ಚರಿತ್ರೆಯ ಸಂಗತಿಗಳು ವಿಶಿಷ್ಟವಾಗಿವೆ. ಮೊದಲನೆಯದಾಗಿ ತಮ್ಮ ಸಮುದಾಯದ ದೊಡ್ಡ ದೊಡ್ಡ ಕಳ್ಳರ ಬಗ್ಗೆ ಕಥನಗಳಿವೆ. ಅಂತೆಯೇ ಜೀವಮಾನದ ಶ್ರೇಷ್ಠವಾದ ವಿಶಿಷ್ಟ ಕಳ್ಳತನಗಳ ಬಗ್ಗೆ ಕಥನಗಳಿವೆ.

ಕಳ್ಳತನಕ್ಕೆ ನೆರವಾಗುವ ದೈವಗಳ ಬಗ್ಗೆ ಪವಾಡದ ರೀತಿಯ ಕಥನಗಳಿವೆ. ಅಂತೆಯೇ ಈ ಎಲ್ಲಾ ಬಗೆಯ ಕಥನಗಳಲ್ಲಿ ತುಡುಗುತನವನ್ನು ಮೌಲ್ಯೀಕರಿಸುತ್ತಾ ಅದರ ಹಿರಿಮೆಯನ್ನು ಹೆಚ್ಚಿಸುವ ಧಾಟಿಯಲ್ಲಿ ವಿವರಿಸುತ್ತಾ ಹೋಗುತ್ತಾರೆ. ಹೀಗೆ ಹೇಳುತ್ತಲೇ ಸಣ್ಣ ಧ್ವನಿಯಲ್ಲಿ ‘ಈಗ ಎಲ್ಲಾನು ಬಿಟ್ ಬಿಟ್ಟೀವಿ ಸಾರ್’ ಈಗಿನ ಹುಡುಗರು ಮರ್ಯಾದೆಗೆ ಅಂಜುತ್ತಾರೆ. ಪೊಲೀಸರ ಕಾಟಾನೂ ಜಾಸ್ತಿ, ಅಂತೆಯೇ ‘ನಮ್ಮ ಮಕ್ಕಳು ಶಾಲಿ ಕಲೀಲಿಕತ್ಯಾವ, ನೌಕರಿ ಸೇರಲಿಕತ್ಯಾವ’ ಎಂದು ವಾಸ್ತವದ ಜತೆ ತಮ್ಮ ಬದುಕನ್ನು ಬೆಸೆಯುತ್ತಾರೆ. ಹೀಗೆ ಗಂಟಿಚೋರರು ತಮ್ಮ ಕುಲದ ಚರಿತ್ರೆಯನ್ನು ದಾಖಲಿಸಿಕೊಳ್ಳುವ ಕೆಲವು ಸಂಗತಿಗಳನ್ನು ಈ ಕೆಳಗಿನಂತೆ ಹೇಳಿಕೊಳ್ಳುತ್ತಾರೆ.

1898 ರ ಗವರ್ನರ್ ಸಲೂನು ಕಳವು

1898 ರಲ್ಲಿ ಸದರ್ನ್ ಮರಾಠಾ ರೈಲ್ವೇನಲ್ಲಿ ಮುಂಬೈ ಗವರ್ನರ್ ಒಬ್ಬರು ಪ್ರಯಾಣಿಸುತ್ತಿದ್ದರು. ಇವರು ಫಸ್ಟ್ ಕ್ಲಾಸ್ ಬೋಗಿಯಲ್ಲಿದ್ದರು. ಗವರ್ನರ್ ಆದ ಕಾರಣ ಬಿಗಿಯಾದ ಬಂದೋಬಸ್ತನ್ನು ಏರ್ಪಡಿಸಲಾಗಿತ್ತು. ಪೊಲೀಸರು ಕಿಕ್ಕಿರಿದಂತೆ ಕಾವಲಿಗಿದ್ದರು. ಈ ಮಧ್ಯೆ ಗಂಟಿಚೋರ್ ಒಬ್ಬರಿಗೆ ಈ ಗವರ್ನರ್ ಪ್ರಯಾಣ ತಿಳಿದಿದೆ. ಗವರ್ನರ್ ಬಳಸುವ ಪ್ರತಿ ವಸ್ತುವೂ ಮೌಲ್ಯಯುತವಾಗಿರುತ್ತವೆ. ಹೇಗಾದರೂ ಸರಿ ಅವರ ಬ್ಯಾಗನ್ನು ಕದಿಯಬೇಕೆಂದು, ಶ್ರೀಮಂತ ವೇಷದಲ್ಲಿ ಗವರ್ನರ್ ಇದ್ದ ಬೋಗಿಯ ಆಚೆಯ ಬೋಗಿಯೊಂದರಲ್ಲಿ ಗಂಟಿಚೋರ್ ವ್ಯಕ್ತಿಯೊಬ್ಬ ಪ್ರಯಾಣಿಸುತ್ತಿದ್ದ. ಗವರ್ನರ್ ಬೋಗಿಯಲ್ಲಿ ದೀಪ ಉರಿಯುತ್ತಿದ್ದರೂ, ಪೊಲೀಸರ ಬೆಂಗಾವಲಿದ್ದರೂ ಗವರ್ನರ್ ಅವರ ಕೆಲವು ಮೌಲ್ಯಯುತ ಸಾಮಾನುಗಳನ್ನು ಕಳುವು ಮಾಡಲಾಯಿತು. ಮರುದಿನ ಪತ್ರಿಕೆಗಳಲ್ಲಿ ದೊಡ್ಡ ಸುದ್ದಿಯಾಯಿತು. ಆದರೂ ಕದ್ದ ಗಂಟಿಚೋರ್ ಸಿಗಲೇ ಇಲ್ಲ (ಆರ್.ಎಲ್.ಹಂಸನೂರು:2008:88-89).

ಗದಗ-ಬೆಟಗೇರಿ ಸೆಟಲ್‌ಮೆಂಟ್ ಆಫೀಸರ್ ಮನೆ ಕಳವು

ನಮ್ಮ ಹಿರೇರು ಹೇಳಿದ ಕಥೆ ಎಂದು ಬಾಲೆಹೊಸೂರಿನ ಹಿರಿಯರು ಹೇಳಿದ ಕಥೆ ವಿಶಿಷ್ಟವಾಗಿದೆ. ಗದಗ ಬೆಟಗೇರಿ ಸೆಟಲ್‌ಮೆಂಟ್ ಆಫೀಸರ್ ಒಬ್ಬ ತುಂಬಾ ಸ್ಟ್ರಿಕ್ಟ್ ಇದ್ದರಂತೆ. ಇವರು ಗಂಟಿಚೋರ್ ಸಮುದಾಯವನ್ನು ಯಾವಾಗಲೂ ಹೀಯಾಳಿಸಿ ಅವಮಾನಿಸಿ ಬೈಯುತ್ತಿದ್ದರಂತೆ. ಹೀಗಿರಲು ಒಮ್ಮೆ ಸಮುದಾಯದವರು ‘ಉದ್ಯೋಗ ಕೊಡ್ರಿ ಅಂದರೆ ನಾವು ತುಡುಗು ಮಾಡದು ಬಿಡ್ತೀವಿ, ಸುಮ್ಮನ ನಮ್ಮನ್ನ ಬೈಯಬ್ಯಾಡ್ರಿ’ ಅಂದರಂತೆ. ಆಗ ಆಫೀಸರ್ ನೀವೇನು ತುಡುಗು ಬಿಡೋದು, ನಾನ ಬಿಡಸ್ತೀನಿ. ಇನ್ನು ಮುಂದೆ ಅದೆಂಗೆ ತುಡುಗು ಮಾಡ್ತೀರಿ ನಾನು ನೋಡ್ತೀನಿ. ನಿಮ್ಮನ್ನೆಲ್ಲಾ ಒದ್ದು ಜೈಲಿಗೆ ಹಾಕೋದು ಬಿಟ್ಟು, ಕೆಲಸ ಬೇರೆ ಕೊಡಬೇಕಾ? ಎಂದು ಗದರಿದನಂತೆ.

ಇದರಿಂದ ಬೇಸರವಾದ ಸಮುದಾಯದ ಹಿರಿಯರು ‘ನಮ್ಮನ್ನ ಹಿಡೀತಾನಂತೆ ಈ ಆಫೀಸರ್, ನಮ್ಮ ತಾಕತ್ತು ಏನಂತ ತೋರಿಸಲೇಬೇಕು’ ಅನ್ಕೊಂಡು, ಒಂದಿನ ಸೆಟಲ್‌ಮೆಂಟ್ ಆಫೀಸರ್ ಇರುವ ಮನೆಗೆ ಕನ್ನ ಹಾಕಿ ಆತನ ಹಣ ಬಂಗಾರ ಎಲ್ಲವನ್ನು ಆಫೀಸರ್ ಮಲಗಿದ್ದ ಮಂಚದ ಮುಂದೆ ಇಟ್ಟುಕೊಂಡು ಬೆಳಗಿನವರೆಗೂ ಕೂತು. ಜನ ಓಡಾಡಲು ಶುರು ಮಾಡಿದಾಗ ತಪ್ಪಿಸಿಕೊಂಡರಂತೆ. ಇದು ಗಂಟಿಚೋರರು ತಮ್ಮ ಚಾಕಚಕ್ಯತೆಯನ್ನು ಮನವರಿಕೆ ಮಾಡುವ ಮತ್ತು ‘ನಿನ್ನ ಮನೆಯನ್ನು ತುಡುಗು ಮಾಡಿದ್ರ ನಮ್ಮನ್ನ ಹಿಡಿಯೋಕೆ ಆಗಲಿಲ್ಲ, ಇನ್ನ ಬೇರೆಯವರ ಮನೆಗಳನ್ನು ತುಡುಗು ಮಾಡಿದ್ರ ನೀ ಏನ್ ಹಿಡೀತೀಯ’ ಎನ್ನುವುದನ್ನು ಆ ಆಫೀಸರ್‍ಗೆ ಮನವರಿಕೆ ಮಾಡುವುದಾಗಿತ್ತು. ಈ ಅವಮಾನಕ್ಕೆ ಬೆಚ್ಚಿಬಿದ್ದ ಬ್ರಿಟಿಷ್ ಆಫೀಸರ್ ಗಂಟಿಚೋರ್ ರ ಬಗ್ಗೆ ಅವಮಾನಿಸಿ ಬೈಯುವುದನ್ನು ನಿಲ್ಲಿಸಿದನಂತೆ. ಹೀಗೆ ಈ ಕಥೆಯನ್ನು ಹೇಳುವಾಗ ಈ ಸಮುದಾಯದ ಹಿರಿಯರ ಮುಖದಲ್ಲಿ ‘ನೋಡ್ರಿ ನಾವು ಸೆಟಲ್‌ಮೆಂಟ್ ಆಫಿಸರನ್ನೇ ಬಿಟ್ಟವರಲ್ಲ’ ಎಂಬ ಗೆಲುವಿನ ಭಾವ ಕಾಣುತ್ತಿತ್ತು.

ಜಂಗಳದರ ಮನಿ ಕಳವು

ಜಂಗಳದವರು ಎನ್ನುವ ಶ್ರೀಮಂತರ ಮನೆಯ ಅಜ್ಜಿಯ ಶವದ ಮೇಲಿನ ಬಂಗಾರವನ್ನು ಕಳವು ಮಾಡಿದ ಸಂಗತಿ ವಿಶಿಷ್ಟವಾಗಿದೆ. ಜಂಗಳದವರ ಅಜ್ಜಿಯ ದೇಹವನ್ನು ಪೂಜಿಸಿ, ಬಂಗಾರದ ಒಡವೆಗಳನ್ನೆಲ್ಲಾ ಹಾಕಿ ಶೃಂಗಾರ ಮಾಡಿಸಿ ಕೂಡಿಸಿದ್ದರಂತೆ. ರಾತ್ರಿಪೂರಾ ಭಜನೆ ಇತ್ತು. ಈ ಅಜ್ಜಿಯ ಕೊರಳಲ್ಲಿನ ಬಂಗಾರವನ್ನು ನೋಡಿದ ಗಂಟಿಚೋರ್ ಮಂದಿ, ಹೇಗಾದರೂ ಮಾಡಿ ಈ ಬಂಗಾರವನ್ನು ಹೊಡೆಯಬೇಕೆಂದು ಯೋಚಿಸಿದರು. ಆಗ ವಿದ್ಯುತ್ ಇರಲಿಲ್ಲ. ಗೊರವಿನ ಬೊಡ್ಡೆಯನ್ನು ಉರಿಸುತ್ತಾ ಬೆಳಕು ಮಾಡಬೇಕಿತ್ತು. ಈ ಸಂದರ್ಭದಲ್ಲಿ ಒಂದಿಬ್ಬರು ಭಜನೆ ಮಾಡುವವರ ನೆಪದಲ್ಲಿ ಮನೆಯ ಮುಂದೆ ಸೇರಿದರು.

ಭಜನೆ ನಡೆಯುತ್ತಿತ್ತು. ಮಧ್ಯರಾತ್ರಿಯ ಹೊತ್ತಿಗೆ ಗೊರವಿನ ಕಟ್ಟಿಗೆ ಮುಗಿದು ಬೆಂಕಿಯ ಬೆಳಕು ಮಂದವಾಯಿತು. ಉಳಿದಂತೆ ಅಜ್ಜಿಯ ದೇಹದ ಮುಂದೆ ಎರಡು ದೀಪಗಳು ಮಾತ್ರ ಉರಿಯುತ್ತಿದ್ದವು. ಜನರು ನಿದ್ದೆಯ ಜೋಂಪಲ್ಲಿದ್ದರು. ಭಜನೆಯೂ ಕಳೆಗುಂದಿತ್ತು. ಈ ಸಂದರ್ಭವನ್ನು ಅರಿತ ಗಂಟಿಚೋರ್ ಸಮುದಾಯದ ಮನುಷ್ಯ ಕತ್ತಲಲ್ಲಿ ಅಜ್ಜಿಯ ದೇಹದ ಹಿಂದಕ್ಕೆ ಹೋಗಿ ಹೆಣದ ಎರಡೂ ಕೈಗಳನ್ನು ಹಿಡಿದು ಮುಂದೆ ಉರಿಯುತ್ತಿದ್ದ ಎರಡು ದೀಪಗಳನ್ನು ರಪ್ಪನೆ ಹೊಡೆಸಿದನಂತೆ. ಆಗ ಪೂರ್ಣ ಕತ್ತಲಾಗಿದೆ. ಇದನ್ನು ನೋಡಿದ ಜನರು ಗಾಬರಿಯಾಗಿ ಅಜ್ಜಿ ದೆವ್ವವಾಗಿದ್ದಾಳೆಂದು ಎದ್ದು ಓಡತೊಡಗಿದರು. ನಂತರ ತಡವರಿಸಿ ದೀಪ ಹಚ್ಚುವ ವೇಳೆಗೆ ಅಜ್ಜಿಯ ಕೊರಳಲ್ಲಿ ಹಾಕಿ ಶೃಂಗಾರ ಮಾಡಿದ ಬಂಗಾರವೆಲ್ಲಾ ಕಳವಾಗಿತ್ತು. ಮನೆಯವರು ಅತ್ತು ಕರೆದು ಹುಡುಕಾಡಿದರೂ ಬಂಗಾರ ಮಾತ್ರ ಸಿಗಲಿಲ್ಲ.

ಹನುಮಂತ ದೇವರಿಗೆ ಮಡ್ಡಿಗಿ ಕಳವು ಮಾಡಿದ್ದು

ಬಾಲೆಹೊಸೂರು ಗಂಟಿಚೋರರು ಹೆಚ್ಚಿರುವ ಊರು. ಈ ಊರಿನಲ್ಲಿ ತುಡುಗು ಮಾಡಲು ಹೋಗುವ ಮೊದಲು ಹನುಮಂತನಲ್ಲಿ ಪ್ರಸಾದ ಕೇಳುತ್ತಿದ್ದರು. ಈ ಪ್ರಸಾದವನ್ನು ಆಧರಿಸಿ ಕಳ್ಳತನಕ್ಕೆ ಹೋಗುತ್ತಿದ್ದರು. ಇಂತಹ ಗಂಟಿಚೋರರ ಇಷ್ಟದೈವ ಹನುಮಂತನ ಗುಡಿಕಟ್ಟಲು ಸಮುದಾಯದವರು ಯೋಚಿಸಿದರು. ಆಗ ಕಟ್ಟಡ ಶುರುವಾಗಿ ಮಾಳಿಗೆಯವರೆಗೂ ಬಂತು. ಆಗ ಮಾಳಿಗೆಗೆ ಹಾಕಲು ಮಡ್ಡಿಗಿ(ಮರದ ತೊಲೆ ಕಂಭಗಳು) ಇರಲಿಲ್ಲ. ಇದೇ ಸಂದರ್ಭಕ್ಕೆ ಸವಣೂರಿನ ನವಾಬನು ದೊಡ್ಡದಾದ ವಾಡೆಯೊಂದನ್ನು ಕಟ್ಟಿಸಲು ಮಡ್ಡಿಗಿ ಯನ್ನು ಕೆತ್ತಿಸಿ ಇಟ್ಟಿದ್ದ ವಿಷಯ ತಿಳಿಯಿತು. ಇವನ್ನು ಕಳವು ಮಾಡಬೇಕೆಂದು ನಿರ್ಧರಿಸಿದ ಬಾಲೆಹೊಸೂರು ಗಂಟಿಚೋರರು ಹತ್ತಿಪ್ಪತ್ತು ಎತ್ತಿನ ಗಾಡಿ ಕಟ್ಟಿಕೊಂಡು ರಾತ್ರಿಯೇ ಸವಣೂರಿಗೆ ಹೋಗಿ ಮಡ್ಡಿಗಿಯನ್ನು ಕದ್ದು ಬಂಡಿಗಳಲ್ಲಿ ಹೇರಿಕೊಂಡು ತಂದರು. ಬಂದವರೆ ಎಲ್ಲರೂ ಸೇರಿ ಗುಡಿಗೆ ಮಡ್ಡಗಿ ಏರಿಸಿ ಮೇಲುಮುದ್ದೆ ಹಾಕಿ ಮುಗಿಸಿಬಿಟ್ಟರಂತೆ.

ಮರುದಿನ ಸವಣೂರಿನ ನವಾಬರಿಗೆ ಈ ವಿಷಯ ತಿಳಿದು, ಬಂಡಿಗಳ ಜಾಡು ಹಿಡಿದು ಹುಡುಕಿಕೊಂಡು ಸರಿಯಾಗಿ ಬಾಲೆಹೊಸೂರು ಹನುಮಂತನ ಗುಡಿಯ ಬಳಿ ಬಂದರಂತೆ. ಮಡ್ಡಿಗಿಯು ಹನುಮಂತ ದೇವರ ಮಾಳಿಗೆಗೆ ಏರಿದ್ದನ್ನು ನೋಡಿ, ದೇವರ ಗುಡಿಯಾದ್ದರಿಂದ ಕೀಳುವುದು ಸರಿಯಲ್ಲವೆಂದು ಬಗೆದು ಸವಣೂರಿನ ನವಾಬನ ಕಡೆಯವರು ವಾಪಸ್ಸು ಮರಳಿದರಂತೆ. ಇದರ ಸೇಡು ತೀರಿಸಿಕೊಳ್ಳಲು ಹೋಗುವಾಗ ಕಣಗಳಲ್ಲಿರುವ ಮರ ಮುಟ್ಟು, ಹೊಲದಲ್ಲಿರುವ ಬೆಳೆಗಳು, ಸೊಪ್ಪಿನ ಬಣವೆ, ಹೊಲದ ಬದಿಯ ಮರಗಳು ಹೀಗೆ ಕೈಗೆ ಸಿಕ್ಕಿದ್ದನ್ನೆಲ್ಲ ದೋಚಿಕೊಂಡು ಹೋದರಂತೆ. ಈಗಲೂ ಬಾಲೆಹೊಸೂರು ಹನುಮಂತನ ದೇವಸ್ಥಾನದಲ್ಲಿ ಸವಣೂರು ನವಾಬರ ಮಡ್ಡಿಗಿಯನ್ನು ನೋಡಬಹುದಾಗಿದೆ. ಈ ಇಡೀ ದೇವಸ್ಥಾನವನ್ನು ತುಡುಗು ಮಾಡಿದ ಇಟ್ಟಿಗೆ, ಕಲ್ಲು, ಕಡಪ, ಮಣ್ಣು, ಉಸುಕಿನಿಂದಲೇ ಗುಡಿ ಕಟ್ಟಿದೆವು ಎಂದು ಬಾಲೆಹೊಸೂರಿನ ಗಂಟಿಚೋರ ಹಿರಿಯರು ಹೇಳುತ್ತಾರೆ.

‘ಈಗ ಎಲ್ಲಾನು ಬಿಟ್ ಬಿಟ್ಟೀವಿ ಸಾರ್’ ಈಗಿನ ಹುಡುಗರು ಮರ್ಯಾದೆಗೆ ಅಂಜುತ್ತಾರೆ ಎಂದು ಗಂಟಿಚೋರರ ಹಿರಿಯರು ಸಣ್ಣ ದನಿಯಲ್ಲಿ ಈಗ ಹೇಳುತ್ತಾರೆ.  ‘ಪೊಲೀಸರ ಕಾಟಾನೂ ಜಾಸ್ತಿ, ಅಂತೆಯೇ ನಮ್ಮ ಮಕ್ಕಳು ಶಾಲಿ ಕಲೀಲಿಕತ್ಯಾವ, ನೌಕರಿ ಸೇರಲಿಕತ್ಯಾವ’ ಎಂದು ವಾಸ್ತವದ ಜತೆ ತಮ್ಮ ಬದುಕನ್ನು ಬೆಸೆಯುತ್ತಾರೆ. ಹೀಗೆ ಗಂಟಿಚೋರರು ತಮ್ಮ ಕುಲದ ಚರಿತ್ರೆಯನ್ನು ದಾಖಲಿಸಿಕೊಳ್ಳುವ ಕೆಲವು ಸಂಗತಿಗಳನ್ನು ಈ ಕೆಳಗಿನಂತೆ ಹೇಳಿಕೊಳ್ಳುತ್ತಾರೆ.

ಮಹಾಲಕ್ಷ್ಮಿ ಎಕ್ಸ್‌ಪ್ರೆಸ್ ಟ್ರೇನ್ ರಾಬರಿ

ಇದು 1982ರಲ್ಲಿ ನಡೆದ ಘಟನೆ. ಇಡೀ ದೇಶವ್ಯಾಪಿ ಸುದ್ದಿಯಾದ ಸಂಗತಿಯಾಗಿತ್ತು. ಇದೊಂದು ಸಿನಿಮೀಯವಾಗಿ ನಡೆದ ಘಟನಾವಳಿಗಳಂತಿದೆ. ರಾಯಭಾಗ ತಾಲೂಕಿನ ಜೋಡಟ್ಟಿಯ ಮತ್ತು ಹುಬ್ಬಳ್ಳಿಯ ಕೆಲವರು ಸೇರಿ ಒಂದು ತೀರ್ಮಾನ ಮಾಡಿದರು. ಅದೇನೆಂದರೆ ಪದೇ ಪದೇ ಚಿಕ್ಕಪುಟ್ಟ ಕಳ್ಳತನ ಮಾಡಿ ಉದ್ಧಾರವಾಗುವುದು ಸಾಧ್ಯವಿಲ್ಲ. ಹಾಗಾಗಿ ಒಂದೇ ಬಾರಿಗೆ ದೊಡ್ಡದೊಂದು ಕಳ್ಳತನ ಮಾಡಿ ಧಿಡೀರ್ ಶ್ರೀಮಂತರಾಗಿ ಮತ್ತೆಂದೂ ಕಳ್ಳತನ ಮಾಡದಂತೆ ಬದುಕಿದರಾಯಿತು ಎನ್ನುವುದಾಗಿತ್ತು. ಈ ಯೋಚನೆಗೆ ಪೂರಕವಾಗಿ ದೊಡ್ಡದೊಂದು ‘ರಾಬರಿ’ ಮಾಡಲು ಹವಣಿಸುತ್ತಿದ್ದಾಗ ಒಂದು ಸಂಗತಿ ಇವರ ಗಮನಕ್ಕೆ ಬರುತ್ತದೆ. ಬೆಂಗಳೂರಿನ ಒಬ್ಬ ಸೇಟು ಬಾಂಬೆಗೆ ಗೋಲ್ಡ್ ಬಿಸ್ಕೆಟನ್ನು ಸಾಗಿಸುತ್ತಿದ್ದನಂತೆ. ಈ ಸೇಟುವಿನ ಬಗ್ಗೆ ಸರಿಯಾದ ಮಾಹಿತಿ ಕಲೆ ಹಾಕಿದ್ದಾರೆ. ಹೀಗೆ ಮಾಹಿತಿ ಕಲೆಹಾಕಿ ಕನಿಷ್ಠ ಆರು ತಿಂಗಳುಗಳ ಕಾಲ ಈ ರಾಬರಿಗೆ ಸಿದ್ಧತೆಯನ್ನು ಮಾಡಿಕೊಂಡಿದ್ದಾರೆ. ಇದರ ಪ್ರಕಾರ ರೈಲ್ವೇ ಚೈನ್ ಎಳೆಯುವುದು, ಟ್ರೇನ್ ನಿಂತ ತಕ್ಷಣ ಓಡಿ ತಪ್ಪಿಸಿಕೊಳ್ಳುವುದು, ತಪ್ಪಿಸಿಕೊಂಡ ಸ್ಥಳದಲ್ಲಿ ಮೊದಲೇ ಒಂದಷ್ಟು ಈ ಟೀಮಿನ ಸದಸ್ಯರು ಬಂದಿರುವುದು, ಅವರು ಹೀಗೆ ಕದ್ದುತಂದ ಪೆಟ್ಟಿಗೆಗಳನ್ನು ಹೊತ್ತೊಯ್ಯುವುದು ಹೀಗೆ ಸರಿಯಾಗಿ ಪ್ಲಾನ್ ಮಾಡಿದ್ದರು. ಹೀಗೆ ರೈಲ್ವೇ ಚೈನ್ ಎಳೆಯುವ ಸ್ಥಳವನ್ನೂ ಕೂಡ ಆಯ್ಕೆ ಮಾಡಿದ್ದರು. ಇಷ್ಟೆಲ್ಲಾ ಆದ ಮೇಲೆ ಸೇಟ್‌ಜೀ ಬೆಂಗಳೂರಿನಿಂದ ಮುಂಬೈಗೆ ಹೆಚ್ಚುವರಿ ಗೋಲ್ಡ್ ಬಿಸ್ಕೆಟ್ ಸಾಗಿಸುವ ಮಾಹಿತಿ ಸಂಗ್ರಹಿಸಿ ಮೊದಲೇ ಪ್ಲಾನ್ ಮಾಡಿದಂತೆ ರಾಬರಿ ಮಾಡಿದರು. ಎಲ್ಲವೂ ಪ್ಲಾನ್ ಪ್ರಕಾರವೇ ನಡೆಯಿತು, ಆದರೆ ತಪ್ಪಿಸಿಕೊಳ್ಳುವಾಗ ಈ ಟೀಮಿನ ಇಬ್ಬರು ಸಿಕ್ಕಿಹಾಕಿಕೊಂಡರು.

ಮರುದಿನ ದೊಡ್ಡ ಸುದ್ದಿಯಾಯಿತು. ಟೀಮಿನ ಸದಸ್ಯರು ಸಿಕ್ಕರೆ ವಿನಾ ಕದ್ದ ಪೆಟ್ಟಿಗೆಗಳು ಸಿಕ್ಕಲಿಲ್ಲ. ಸಿಕ್ಕಿಹಾಕಿಕೊಂಡ ಸದಸ್ಯರನ್ನು ಎಷ್ಟೇ ಚಿತ್ರಹಿಂಸೆ ಕೊಟ್ಟರೂ ಯಾವೊಂದು ಸಂಗತಿಯನ್ನೂ ಬಿಟ್ಟುಕೊಡಲಿಲ್ಲ. ಪೊಲೀಸರಿಗೆ ಇದೊಂದು ದೊಡ್ಡ ಸಮಸ್ಯೆಯಾಯಿತು. ಹೀಗಿರುವಾಗ ಪೊಲೀಸರು ಒಂದು ತಂತ್ರ ಹೂಡಿದರು. ಬಂಧಿತರಾದ ಇಬ್ಬರಿಗೂ ನೀವು ಎಷ್ಟೇ ಕೇಳಿದರೂ ಒಪ್ಪುತ್ತಿಲ್ಲ. ಬಹುಶಃ ಈ ರಾಬರಿ ಮಾಡಿದವರು ಬೇರೆಯವರಿದ್ದಾರೆ, ಅವರ ಸುಳಿವು ನಮಗೆ ಸಿಕ್ಕಿದೆ. ನಿಮ್ಮನ್ನು ನಾಳೆ ಬಿಡುಗಡೆ ಮಾಡುತ್ತೇವೆ ಎಂದು ಈ ಇಬ್ಬರಿಗೂ ಹೇಳಿದರು. ಆಗ ಪ್ರತ್ಯೇಕ ಕೋಣೆಯಲ್ಲಿದ್ದ ಇಬ್ಬರನ್ನೂ ಒಂದೇ ಕೋಣೆಗೆ ವರ್ಗಾಯಿಸಿದರು. ಆಗ ಇಬ್ಬರೂ ನಿರಾಳವಾಗಿದ್ದರು. ಸದ್ಯಕ್ಕೆ ತಾವಿಬ್ಬರು ಸತ್ಯ ಹೇಳದ್ದರ ಗಟ್ಟಿತನದ ಬಗ್ಗೆ ಹೆಮ್ಮೆ ಪಟ್ಟುಕೊಂಡರು. ಮೈಮರೆತು ಕೋಣೆಯಲ್ಲಿ ಇಬ್ಬರೂ ರಾಬರಿ ಮಾಡಿದ ಬಗ್ಗೆ ಮಾತುಕತೆ ಮಾಡಿದರು. ನಾವು ಬಿಡುಗಡೆಯಾದ ನಂತರ ಎಷ್ಟು ಪಾಲು ನಮಗೆ ದಕ್ಕಬೇಕು? ಯಾರು ಯಾರಿಗೆ ಎಷ್ಟು ಪಾಲು ಬರಬಹುದು? ಎಷ್ಟು ಗೋಲ್ಡ್ ಬಿಸ್ಕೆಟ್ ಇರಬಹುದು? ಬಿಡುಗಡೆಯಾದ ನಂತರ ಯಾರು ಯಾರ ಮನೆಗೆ ಹೋಗಿ ಈ ಬಗ್ಗೆ ವಿಚಾರಿಸುವುದು? ಎಲ್ಲಿ ಹಂಚಿಕೊಳ್ಳುವುದು ಮುಂತಾಗಿ ಸುದೀರ್ಘವಾಗಿ ಚರ್ಚಿಸಿದರು.

ಇವರಿಗೆ ಅರಿವಿಲ್ಲದಂತೆ ಈ ಕೋಣೆಯಲ್ಲಿ ಪೊಲೀಸರು ಅಡಗಿಸಿಟ್ಟ ರೆಕಾರ್ಡರ್ ಎಲ್ಲವನ್ನೂ ಧ್ವನಿ ಮುದ್ರಿಸಿಕೊಂಡಿತ್ತು. ಈ ಧ್ವನಿಮುದ್ರಣದ ಮಾತುಕತೆ ಕೇಳಿಸಿಕೊಂಡು, ಆ ಇಬ್ಬರನ್ನು ತೀವ್ರಹಿಂಸೆಗೆ ಒಳಪಡಿಸಿ ಎಲ್ಲವನ್ನೂ ಬಾಯಿಬಿಡಿಸಿದರು. ಹೀಗೆ ರಾಬರಿ ಮಾಡಿದ ಇಡೀ ಟೀಮಿನ ಸದಸ್ಯರನ್ನು ಒಬ್ಬೊಬ್ಬರನ್ನಾಗಿ ಬಂಧಿಸಿದರು. ಕದ್ದ ಗೋಲ್ಡ್ ಬಿಸ್ಕೆಟ್ ಒಂದಷ್ಟು ಸಿಗಲೇ ಇಲ್ಲ. ಆದರೆ ಈ ರಾಬರಿ ಮಾಡಿದ ಸದಸ್ಯರು ಜೈಲುವಾಸಿಗಳಾದರು. ಈ ಘಟನೆಯಲ್ಲಿ ಭಾಗವಹಿಸಿದವರ ಹೆಸರು ಹೇಳಲಿಚ್ಛಿಸದ ವ್ಯಕ್ತಿಯೊಬ್ಬರು ಇದನ್ನೊಂದು ಸಾಮಾನ್ಯ ಕತೆಯಂತೆ ಹೇಳಿದರು. ಈ ರಾಬರಿಯ ಆಘಾತದಿಂದ ಆ ನಂತರ ಗಂಟಿಚೋರ್ ಸಮುದಾಯ ಇಂತಹ ದೊಡ್ಡ ರಾಬರಿಗಳನ್ನು ಮಾಡುವುದನ್ನೆ ಕೈಬಿಟ್ಟಿತು. ಇದರ ಆಘಾತಕ್ಕೆ ಸಣ್ಣಪುಟ್ಟ ತುಡುಗು ಮಾಡುತ್ತಿದ್ದವರೂ ಹೆದರಿ ತಮ್ಮ ಕಳ್ಳತನದ ವೃತ್ತಿಯಿಂದ ದೂರ ಸರಿದರು. ಆದರೆ ಈ ಘಟನೆ ಮಾತ್ರ ಈ ಒಂದು ಭಯಾನಕ ಅಧ್ಯಾಯದಂತೆ ಸಮುದಾಯದ ಸ್ಮೃತಿಲೋಕದಲ್ಲಿ ಅಡಗಿ ಕೂತಿದೆ.

(ಹನುಮನ ಗುಡಿ)

ಯಲ್ಲಪ್ಪಜ್ಜ ಪಾರಪ್ಪಜ್ಜರ ಕಳವು

ಬಾಲೆಹೊಸೂರು ಯಲ್ಲಪ್ಪ ಗುಡಗೇರಿ, ಪಾರಪ್ಪ ಕಟ್ಟೀಮನಿ ವಿಶೇಷವಾಗಿ ತುಡುಗು ಮಾಡುತ್ತಿದ್ದ ಬಗ್ಗೆ ಬಾಲೆಹೊಸೂರಿನ ಹಿರಿಯರು ಹೇಳುತ್ತಾರೆ. ಇವರು ಹೊಳೆ ಆಲೂರು, ಮೈಲಾರ, ಹುಲುಗೂರು, ಉಲವತ್ತಿ ಜಾತ್ರಿಗೆ ಕಳವು ಮಾಡಲು ಹೋಗುತ್ತಿದ್ದರಂತೆ. ಇವರ ಕಳ್ಳತನ ಯಾರಿಗೂ ತಿಳಿಯುತ್ತಿರಲಿಲ್ಲವಂತೆ. ತುಡುಗು ಮಾಡಿ ಎಂದೂ ಸಿಕ್ಕಿಹಾಕಿಕೊಂಡಿರಲಿಲ್ಲವಂತೆ. ಇವರ ಈ ಚಾಕಚಕ್ಯತೆಯ ಕುರಿತು ಈ ಸಮುದಾಯದಲ್ಲಿ ಜನಪ್ರಿಯರಾಗಿದ್ದು, ಅವರನ್ನು ಹೀರೋಗಳಂತೆ ಆರಾಧಿಸುತ್ತಿದ್ದರು. ಅಂತೆಯೇ ಹೊಸ ತಲೆಮಾರಿನವರು ತುಡುಗು ಕಲಿಯಲು ಇವರ ಬಳಿ ಕಳ್ಳತನದ ಕತೆಗಳನ್ನು ಕೇಳುತ್ತಾ ತಾವು ಕಳವು ಮಾಡುವ ತಾಲೀಮು ಮಾಡುತ್ತಿದ್ದರಂತೆ.

ಹೀಗೆ ಯಲ್ಲಪ್ಪ ಪಾರಪ್ಪರಂತೆ ಜನಪ್ರಿಯ ಧೀಮಂತ ತುಡುಗು ಮಾಡುವವರ ಬಗ್ಗೆ ಗಂಟಿಚೋರರಲ್ಲಿ ಅನೇಕ ಕಥೆಗಳಿವೆ. ಯಲ್ಲಪ್ಪ ಭೀಮಪ್ಪ ಗುಡಿಗೇರಿ ಎಂಬ ಬಹುದೊಡ್ಡ ಕಳ್ಳನಿದ್ದ ಬಗ್ಗೆ ಬೆರಗಿನಿಂದ ಹೇಳುತ್ತಾರೆ. ಅಂತೆಯೇ ಹನುಮಪ್ಪ ದೊಡ್ಡಭೀಮಪ್ಪ ಎಂಬ ಕಳ್ಳನ ವಿಶಿಷ್ಟತೆಯನ್ನೂ ಕೂಡ ಇವರು ನೆನೆಯುತ್ತಾರೆ. ಇಂತಹ ವಿಶೇಷ ಕಳ್ಳರ ಬಗ್ಗೆ ಪ್ರಾದೇಶಿಕವಾಗಿ ಅನೇಕ ಹೆಸರುಗಳಿವೆ. ಅವರೆಲ್ಲರ ಬಗ್ಗೆಯೇ ವಿಶೇಷವಾಗಿ ದಾಖಲು ಮಾಡುವಷ್ಟಿದೆ. ಇಲ್ಲಿ ಗಂಡುಮಕ್ಕಳಷ್ಟೇ ತುಡುಗು ಮಾಡುವಲ್ಲಿ ಜನಪ್ರಿಯರಾಗಿರಲಿಲ್ಲ ಹೆಣ್ಣುಮಕ್ಕಳು ಸಹ ಜನಪ್ರಿಯವಾಗಿದ್ದರು. ಇವರಲ್ಲಿ ಬೂದ್ಯಾಳ ರಂಗವ್ವ, ಹಂಸನೂರು ಹನುಮವ್ವ ಮುಂತಾದವರನ್ನು ಹೆಸರಿಸಬಹುದು. ಈ ಪಟ್ಟಿಯೂ ಪ್ರಾದೇಶಿಕವಾಗಿ ದೊಡ್ಡದಿದೆ. ಹೀಗೆ ಜನಪ್ರಿಯವಾಗಿದ್ದ ಹಿರಿಯರಲ್ಲಿ  ಕೆಲವರು ಇಳಿವಯಸ್ಸಿನಲ್ಲಿ ಹಳೆ ಕತೆಗಳನ್ನು ಮೆಲುಕು ಹಾಕಿದರೆ ಮತ್ತೆ ಕೆಲವರು ಮೃತರಾಗಿದ್ದಾರೆ.

ಇಲ್ಲಿ ಮುಖ್ಯವಾಗಿ ಹೇಳಲು ಪ್ರಯತ್ನಿಸಿದ್ದು ಆಯಾ ಸಮುದಾಯಗಳು ತಮ್ಮದೇ ಸಮುದಾಯಗಳ ಬಗ್ಗೆ ಸ್ಮೃತಿಲೋಕದಲ್ಲಿ ಚರಿತ್ರೆಯನ್ನು ಕಟ್ಟಿರುತ್ತವೆ. ಈ ಚರಿತ್ರೆಯು ನಾವು ಕಲ್ಪಿಸುವ ಮತ್ತು ಪರಿಭಾವಿಸುವ ಚರಿತ್ರೆಯಂತಿರದೆ ಅದರದ್ದೇ ಆದ ವಿಶಿಷ್ಟತೆಯನ್ನು ಹೊಂದಿರುತ್ತದೆ. ಆದರೆ ಅಧ್ಯಯನಕಾರರಾದ ನಾವುಗಳು ಹೀಗೆ ಸಮುದಾಯ ಕಟ್ಟಿಕೊಂಡ ಚರಿತ್ರೆಯನ್ನು ಕಡೆಗಣಿಸಿ ನಮ್ಮದೇ ಕಣ್ಣೋಟದಿಂದ ಚರಿತ್ರೆಯನ್ನು ಗ್ರಹಿಸುತ್ತಿರುತ್ತೇವೆ. ಇಲ್ಲಿ ಮುಖ್ಯವಾಗಿ ಗಂಟಿಚೋರರು ತಮ್ಮ ಹೊಟ್ಟೆಪಾಡಿನ ಪ್ರವೃತ್ತಿಯಾಗಿದ್ದ ಕಳ್ಳತನಕ್ಕೆ ಹೊಂದಿಕೊಂಡಂತೆ ಕಥನಗಳನ್ನು ಕಟ್ಟಿಕೊಂಡಿದ್ದಾರೆ. ಇಂತಹ ಕಥನಗಳೂ ಈ ಸಮುದಾಯದ ಮೌಖಿಕ ಚರಿತ್ರೆಯೂ ಆಗಿದೆ.

(ಚಿತ್ರಗಳು: ಲೇಖಕರ ಸಂಗ್ರಹದಿಂದ)