ಒಂದೇ ಉಸಿರ್ನಾಗೆ ಅಂಗೇ ವಾಪಸ್ ತಿರುಗ್ದೆ. ಒಂದು ಕಿತ, ಅಲ್ಲಾ ಕಾಲು ನೋಡ್ಬೇಕಿತ್ತು.‌ ತಿರುಗ್ಸಿದ್ರೆ ಮಾತ್ರ ದೆವ್ವ ಅಲ್ವಾ ಅಂತ ಅನ್ನುಸ್ತು. ಇನ್ನೊಂದು ಕಿತ ಬ್ಯಾಡ್ವೇ ಬ್ಯಾಡ, ತೋಳ ‍ದೆವ್ವ ಅಲ್ಲ. ಒಂದ್ಕಿತ ಹಿಂದುಕ್ ತಿರ್ಗಿ ನೋಡ್ತಿವ್ನಿ, ಅನುಮಕ್ಕ ಕೈ ತೋರ್ಸಿ ನಿಲ್ಲು ಅಂತಾವ್ಳೆ. ಹಿಂದಿಂದೇನೆ ಬರ್ತಾವ್ಳೆ. ದ್ಯಾವ್ರೆ ಏನ್ ಮಾಡ್ಲಿ. ಈಗೇನಾರಾ ಈ ತೋಳುದ್ ಕೈಯಾಗೆ ಸಿಕ್ಕಿ ಸತ್ತು ನರಕುಕ್ಕೇನಾರೂ ಹೋದ್ರೆ, ದರದರನೆ ಎಳ್ಕೋ ಹೋಗಿ ಬಿಸಿ ಬಿಸಿ ಎಣ್ಣೆ‌ ಕುದಿಯೋ ಬಾಂಡ್ಲೀಗೆ ಹಾಕಿ ಬೋಂಡಾ ಬಜ್ಜಿ ತರ ತೇಲುಸ್ತಾರೆ ಅನ್ನೋದು ನೆಪ್ಪಾತು.
ಸುಮಾ ಸತೀಶ್ “ರಂಗಿನ ರಾಟೆ” ಸರಣಿಯಲ್ಲಿ ಊರ ಜನರ ತೊಡೆನಡುಗಿಸಿದ ತೋಳದ ಕತೆ

ಸರೊತ್ನಾಗೆ ಎಚ್ರಾಯ್ತು. ವಂದಕ್ಕೆ ಹೋಗಾಕೆ ಅಮ್ಮನ್ನ‌ ಎಬ್ಬಿಸೋಕ್ ನೋಡ್ತೀನಿ, ಮಗ್ಗುಲಾಗೆ ಅಪ್ಪ- ಅಮ್ಮ ಇಬ್ರೂವೆ ಕಾಣುಸ್ತಿಲ್ಲ. ಸ್ಯಾನೆ ದಿಗಿಲಾಯ್ತು. ತೋಳ ಎತ್ತಾಕ್ಕೊಂಡು ಓಯ್ತೇನೋ ಅನ್ ಕೋಂತಾ ಅಳು ಬರಂಗಾಯ್ತು. ಮೆಲ್ಲಕೆ ಅತ್ಲಾಗೆ ಇತ್ಲಾಗೆ ಕಣ್ಣು ತಿರುಗುಸ್ದೆ. ಲೈಟ್ ಆಕಿತ್ತು. ತೋಳ ಕತ್ಲಲ್ಲಿ ಅಲ್ವೇ ಬರಾದು ಅಂತ ಅನ್ನುಸ್ತು. ಅಂಗೇ ಕಣ್ಣ ಪಿಳಿಪಿಳಿ ಬಿಟ್ಟುಕೊಂಡೇ ಯೋಸ್ನೆ ಮಾಡ್ತಿವ್ನಿ, ಅಷ್ಟರಾಗೆ ಸರ್ಯಾಗಿ ನನ್ನ ನ್ಯಾರಕ್ಕೆ ಗ್ವಾಡೆ ಮ್ಯಾಗುಲ್ದು ದೊಡ್ಡ ದೊಡ್ಡ ಕಣ್ಣು ಬುಟ್ಟುಕೊಂಡು ನನ್ನೇ ನುಂಗೋ ಅಂಗೆ ನೋಡ್ತಾ ಐತೆ. ತಲೆ ಬ್ಯಾರೆ ಮ್ಯಾಕೆ ಎತ್ತೈತೆ.‌ ಇನ್ನೇನು ನನ್ಮ್ಯಾಕೆ ಎಗರೇ ಬುಡ್ತು ಅಂತಾವ ಎದ್ರಿ ಎಳ್ಳೀಕಾಯಾಗಿ ಕಣ್ ಮುಚ್ಬುಟ್ಟೆ. ಅಲ್ಲಾ ಸ್ಯಾನೆ ದೊಡ್ಡದಾಗೈತೆ ಅಂದ್ ಮ್ಯಾಗೆ ಅದು ಹಲ್ಲಿ ಅಲ್ಲ ಅನ್ನುಸ್ತೈತೆ. ಜನಾ ಅಂಬೋ ಅಂಗೆ ಇದು ಯಾಸ ಹಾಕ್ಕಂಡು ಬಂದಿರೋ ತೋಳ್ವೇಯಾ. ನಾಯಾಗ್ತೈತೆ, ಬೆಕ್ಕಾಗ್ತೈತೆ ಅಂದ್ ಮ್ಯಾಕೆ ಹಲ್ಲಿನೂ ಆಗಿರ್ಬೈದು. ನನ್ನ ಎತ್ತಾಕ್ಕೊಂಡು ವಾಗೋದು ದಿಟ ಅನ್ನುಸ್ ಬುಡ್ತು. ಕಿರ್ಚಾಣಾ ಅಂದ್ರೆ ನಾಲಗೆ ಬಿದ್ದೋಗೈತೆ. ಅತ್ಲಾಗೆ ಇತ್ಲಾಗೆ ಅಳ್ಳಾಡೋಕೂ ಆಗ್ದಂಗೆ ಮೈಯೂವೆ ಮರಗಟ್ಟೈತೆ. ನನ್ ಕತಿ‌ ಮುಗ್ದೋಯ್ತು ಅಂಬ್ತ ದ್ಯಾವ್ರನ್ನ ನೆಪ್ಪು ಮಾಡ್ಕೊಂಡೆ. ಯಾವ್ ದ್ಯಾವ್ರು ಅಂತ ಯೋಸ್ನೆ ಮಾಡಿ, ಊರ ಜನ ಎಲ್ಲ ಯೋಳ್ತಾರಲ್ಲ, ಇಂತ ದುಷ್ಟ ಸಕ್ತಿ ಬಂದಾಗ ಅನುಮಪ್ಪಾನೇ ಕಾಯೋದು ಅಂಬ್ತ ಅನ್ ಕೊಂತಾ ಮನಸಾಗೆ ಸುರು ಮಾಡ್ಕಂಡೆ. ಅಷ್ಟರಾಗೆ ಮನೆ ಮುಂದ್ಲಿಂದ ಗಲಾಟೆ ಕ್ಯೋಳ್ತು.‌ ತಕ್ಸಣ,’ಓ ಅಪ್ಪ ಅಮ್ಮ‌ ಎಲ್ಲಾ ಆಚೆ ಸೇರವ್ರೆ. ಊರ ಜನಾನೂವೇ ಸೇರವ್ರೆ’ ಅಂಬೋದು ಗಟ್ಟಿ ಮಾಡ್ಕಂಡೆ.

ಎಂಗೋ ದೈರ್ಯ ತುಂಬ್ಕೊಂಡು ಜೈ ಅನುಮಪ್ಪ ಅಂತಾ ಒಂದೇ ಏಟ್ಗೆ ಸೊಳ್ಳೆ ಪರ್ದೆ ಎತ್ ಬಿಸಾಕಿ, ಸರಕ್ನೆ ತಲ್ ಬಾಗಿಲ ತಾವ್ಕೆ ಹಾರ್ಕೊಂಡೆ. ಬಾಗ್ಲು ಎಳ್ದಿದ್ ಜೋರ್ಗೆ ದಡಾರ್ ಅಂತ ತೆಕ್ಕೊಂತು. ಬುಡಕ್ನೆ ಆಚೀಕ್ ನೆಗ್ದು ಉಸ್ರು‌ ಬುಟ್ಟೆ. ನೋಡ್ತಿವ್ನಿ, ಸುಮಾರು ಅರವತ್ತು ಎಪ್ಪತ್ತು ಜನದ್ ಮ್ಯಾಗವ್ರೆ. ಬಾಗಿಲ್ ಸದ್ದಾಗಿದ್ಕೆ ನನ್ನೇ ನೋಡ್ತವ್ರೆ. ನಾಚ್ಕೆ ಆಯ್ತು.‌ ಅಮ್ಮನ‌ ತೊಡೆ ಮ್ಯಾಗೆ ಸೇರ್ಕೊಂಡೆ. ಜೋರ್ ಜೋರ್ ಮಾತುಕತೆ ನಡೀತಾ ಇತ್ತು. ‘ಅಣೋ, ಇವತ್ತು ನನ್ ಗಾಚಾರ ನೆಟ್ಗಿತ್ತು. ಇನ್ನೇನು ಅದ್ರ ಕೈಯಾಗಿ ಸಿಕ್ಕಿ ಈಟೋತ್ಗೆ ನಿಗಿರ್ಕೋಬ್ಯಾಕಿತ್ತು. ನನ್‌ ಎಂಡ್ರು ತಾಳಿ ಗಟ್ಟಿಗಿತ್ತೋ, ಬದುಕ್ಕೊಂಡೆ’. ‘ಸಾಮೇ ಅವ್ನು ಎದ್ರುಪುಕ್ಲ. ಇವತ್ತು ಆ ತ್ವಾಳದ್ ಗಾಚಾರ ನೆಟ್ಟಗಿತ್ತು. ನನ್‌ ಕೈಗೆ ಸಿಕ್ಕಾಕ್ಕೊಂಡಿದ್ರೆ ಮಾಡ್ತಿದ್ದೆ ಮಾರಿ ಅಬ್ವ. ಮುಂಡೇ ಗಂಡುಂದು ‌ಆ ಸರ್ಕಾರಿ ಬಾವಿ ರಾಟೆ ಮ್ಯಾಗೆ ಕುಂತಿತ್ತು. ಇಡಿಯಾಮಾ ಅಂಬೋ ಅಷ್ಟರಾಗೆ ಒಳೀಕ್ ದಬ್ಬಾಕ್ಕೊಂತು. ಬಗ್ಗಿ ನೋಡ್ತಿವ್ನಿ ಎಲ್ಲೂ ಕಾಣುಸ್ನಿಲ್ಲ. ಬಾವಿ ನೀರು ಅಳ್ಳಾಡ್ಲೇ ಇಲ್ಲಾಂತಿವ್ನಿ. ಮಂತ್ರಸಕ್ತಿಯಿಂದ ಮಾಯ್ವಾಗೈತೆ’. ‘ಇವತ್ತು ಅಮಾಸಿ ಕಣೇಳಿ. ಯಾತುರ್ದೂ ಇಲ್ಲದಿದ್ದಾಗ್ಲೇ ಆ ತ್ವಾಳಕ್ಕೆ ಬೋ ಸಕ್ತಿ. ಇನ್ನಾ ಅಮಾಸಿ ಅಂದ್ರೆ ಕ್ಯೋಳ್ಬೇಕೇನ್ಲಾ? ನೂರು‌ ದಪ ಸ್ಯಾನೆ ಸಕ್ತಿ ಇರ್ತೈತೆ. ನಿನ್ ಮುಸುಡೀಗೆ ಅದುನ್ನ ಎದುರ್ಸೋ ಯೇಗ್ತೆ ಐತೇನ್ಲಾ?‌ ನಿನ್ ಕಿತ್ತೋಗಿರೋ ದೊಣ್ಣೆ ಪೆಟ್ಟೂ ಅದುಕ್ಕೊಂದು ಲೆಕ್ಕವೇನ್ಲಾ ತಿಮ್ಮ? ಯೋನೋ ನಿನ್ ಕೊಳ್ಳಾಗ್ಲ ತಾಯ್ತದಿಂದ ಬದೀಕ್ಕೊಂಡೆ ಕಣೇಳು.‌ ಇಲ್ದಿದ್ರೆ ಬಡ್ದು ಬಾಯಾಗಾಕ್ಕೊಣ್ದೆ ಬಿಡ್ತಿತ್ತೇನ್ಲಾ ಮಂಕ್ ಸಾಮ್ರಾಣಿ? ಎಂಗಾನಾ ಆಗ್ಲಿ ನಾಳೀಕ್ ಒಂದು ದಿನ ಸರ್ಕಾರಿ ಬಾವ್ಯಾಗ್ಳ ನೀರು ಯಾರೂ ಕುಡೀಬ್ಯಾಡ್ರಪ್ಪೋ. ಯಾರಾನಾ ನಿಗುರ್ಕೊಂಡ್ರೆ ಯೋನ್ ಮಾಡಾಣ?’. ಅಂತ ಡಂಗೂರ ಬ್ಯಾರೆ ಸಾರುದ್ನಾ, ಇದುನ್ ಕ್ಯೋಳಿದ್ ಮ್ಯಾಗೆ ಒಂದಿನ ಯೋನು ಎಲ್ಡು ಮೂರು ದಿನುದ್ ಗಂಟ ಆ ಬಾವಿ ಕಡೀಕ್ ಹೋಗಿದ್ರೆ! ಯಪ್ಪೋ ಸಿವ್ನೆ ಇಂಗೇ‌ ಇವ್ರ ಮಾತು ಎದ್ರುದೋರ್ ಮ್ಯಾಕೆ ಹಗ್ಗ ಎಸ್ದಂಗೆ ಇತ್ತು.

ಅಮಾಸಿ ಕತ್ಲಾಗೂ‌ ಈಸೋಂದ್ ಜನಾ ಸೇರಿದ್ರು.‌ ಬೀದಿ ದೀಪ್ಗೋಳು ಎಲ್ಲೋ ಮೂಲೇಗ್ಳಾಗೆ ಮಿಣುಕ್ ಅಂಬ್ತಿದ್ವು. ನಮ್ ಮನೆ ಮುಂದ್ಲ ಅಂಗಳದಾಗೆ ಕಲ್ಲು ಚಪ್ಪಡಿ ಆಕ್ಸಿದ್ವೋ. ತುಳ್ಸಿ ಗಿಡದ ಮಗ್ಗುಲಾಗೆ ಒಂದು ಉದ್ದುಕಿರೋ ಕಟ್ಟೆ ಇತ್ತು. ಅದ್ರ ಮ್ಯಾಗೆ ಅಪ್ಪ, ಗೌಡ್ನೋರು ಕುಂತಿದ್ರೆ ಜನಾ ಎಲ್ಲಾ ಕೆಳ್ಗೆ ಕುಂತ್ಕೊಂಡು ಮಾತುಕತೆ ಬೇಸಾಗ್ ನಡೀತಿತ್ತು. ಅಷ್ಟರಾಗೆ ಯಾರ್ಗೋ ಆಕಾಸ್ದಾಗೆ ಇಚಿತ್ರ ಕಾಣುಸ್ತು. ‘ನೋಡ್ರಪ್ಪೋ ನೋಡ್ರಿ, ಆಕಾಸ್ದಾಗೆ ತ್ವಾಳದ್ ರೂಪ ಕಾಣ್ತಾ ಐತೆ. ನಮ್ ಕೈಯಾಗ್ಲಿಂದ ತಪ್ಪುಸ್ಕೊಂಡು ಮ್ಯಾಗ್ಲಿಂದ ನೋಡ್ತಾ ಐತೆ’ ಅಂಬ್ತ ಬ್ಯಾರೆ ಉಳಾ ಬುಟ್ನಾ. ತಕಾ ತಲಾಕೊಂದೊಂದ್ ಮಾತು ಸುರು ಆಯ್ತು. ಎಲ್ರ ಕಣ್ಗೂ ಭ್ರಮೇ ಅಂಬೋ ಪೊರೆ ಮುಚ್ಕೊಂತು. ಇಂಗೇ ಬಾಯಿ ಬಿದ್ದೋಗಾಗಂಟ ಮಾತಾಡಿ ಆಮ್ಯಾಕೆ ಅಂಗಳದ ಮೂಲೇನಾಗೆ ಮಡಗಿದ್ದ ದೊಣ್ಣೆಗ್ಳು, ಲಾಟೀನುಗ್ಳು ತಕ್ಕಂಡು ಹೊಂಟ್ರು. ಇವುರ್ ಮನೆ ಹಾಳಾಗ, ಕತೆ ಕಟ್ಟೊ‌ ಹುಚ್ನಾಗೆ ನಮ್ಮಂತ ಸಣ್ಣೈಕ್ಳ ಗತಿ ಏನಾಗ್ಬೇಕು ಅಂಬ್ತ ಇಚಾರ ಮಾಡ್ತವೇ ಇವು?

ಪಾವಗಡದ ತ್ವಾಳದ ಇಸ್ಯ ಆಗಿನ ಕಾಲ್ದಾಗೆ ಬೋ ಪೇಮಸ್ಸಾಗಿತ್ತು. ಯಾರ್ ಬಾಯಾಗ್ಲಾರಾ ಅದೇ ಇಸ್ಯವೇ. ಮಾಡೋ ಕ್ಯಾಮೆ ಎಲ್ಲಾ ಬುಟ್ಟು ಅಳ್ಳೀಕಟ್ಟೆ ಮ್ಯಾಗೆ ಕುಂತು ಬರೀ ಇಂತಾ ಮಾತೇಯಾ. ಆ ಊರ್ನಾಗೆ ಅಂಗಾಯ್ತಂತೆ. ಈ ಊರ್ನಾಗೆ ಇಂಗಾಯ್ತಂತೆ. ಅಂಗ್ ನೋಡುದ್ರೆ ಪಾವಗೋಡದಿಂದ ಮಧುಗಿರಿಗೆ ಸುಮಾರು ಒಂದು‌ ಮೂವತ್ತು ಮೈಲಿ ಇರ್ಬೋದು. ಆ ಬಡ್ಡಿಮಗಂದು ತ್ವಾಳ ಆಸು ದೂರ್ದಿಂದ ಇಲ್ಲೀಗಂಟ ಅದೆಂಗ್ ‌ಬಂತೋಪ್ಪ. ಅಲ್ಲೇ ಬೇಕಾದಷ್ಟು ಕುರಿ, ಮ್ಯಾಕೆ, ಕೋಳಿಪಿಳ್ಳೆಗಳು ಇದ್ವು. ಆದ್ರೂ‌ ಮುಂಡೇದುಕ್ಕೆ ದುರಾಸೆ ಕಣೇಳಿ. ನಮ್ ರಾಜ್ ಮಾರಾಜ್ರಂಗೆ, ಪಾಳೇಗಾರ್ರಂಗೆ ವಸಿ ಜಾಗಾ ಸಾಲಾಕಿಲ್ಲ.‌ ಇದೂ ಇರ್ಲಿ. ಪಕ್ಕುದ್ದೂ ಇರ್ಲಿ.‌ ನಂಗೂ, ನಮಪ್ಪಂಗೂ, ಚಿಗಪ್ಪಂಗೂ ಆಯ್ತು, ನಮ್ ಕೂಸಿಗೂ ಬ್ಯಾಡ್ವೇ, ನಮ್‌ ಮರಿ ಮಕ್ಳಿಗೂ ಬ್ಯಾಡ್ವೆ ಅಂಬೋ ನರ್ ಮನುಸ್ಯನ್ ಮನ್ಸು ಅದುಕ್ಕೂವೇ. ಆ ಕಿರಾತಕ್ ನನ್ ಮಗಂದು ತ್ವಾಳವೂ ಅಂಗೇ ಎಲ್ಲಾ ಊರ್ನೂ ನುಂಗಿ‌ ನೀರು‌ ಕುಡ್ಕೊಂತಾ, ಒಂದೊಂದೇ ಊರ್ ದಾಟ್ಕೊಂಡು ನಮ್ಮೂರ್ಗೂ ಬಂದೇ ಬುಡ್ತು. ಊರಿಗ್ ಬಂದೋಳು ನೀರಿಗ್ ಬರಾಕಿಲ್ವೆ ಅನ್ನಂಗೆ, ಮ್ಯಾಕೆ ಗೀಕೆ ತಂಟೆಗೆ ಬರ್ದೇ ಇರ್ತೈತೆ ಅಂಬೋದು ಜನ್ರ ಮಾತು.‌ ಯಾವ್ದೋ ಮ್ಯಾಕೆ ಮರಿ ಸತ್ತೋಯ್ತು ಅಂದ್ರೆ ತ್ವಾಳದ್ದೇ ಕಾಟ ಅಂಬ್ತ ತೀರ್ಮಾನ. ಆದ್ರೆ ನಂಗೆ ತಿಳ್ದಂಗೆ ನಮ್ಮೂರ್ನಾಗೆ ಯಾರ ಮನೆ ಕುರಿ ಕೋಳೀನೂ ಮಾಯಾ ಆಗಿದ್ದು ಕಾಣೆ. ಈ ಜನಗೋಳ್ ಗಲಾಟೇನಾಗೆ, ರಾತ್ರಿ ಗಸ್ತಿನಾಗೆ ಪಾಪ ಅದುಕ್ಕೆ ಒಂದು ಇಲೀ ಸೈತ ಇಡ್ಯೋಕಾಗ್ನಿಲ್ಲ. ಆದ್ರೂ ಇಡೀ ಊರ್ನೇ ಪತರಗುಟ್ಟಿಸಿ ಅಲ್ಲಾಡುಸ್ಬಿಟ್ಟಿತ್ತು ಅಂಬೋದೇ ಸೋಜಿಗ ಆಗಿತ್ತು. ಒಂದು ದೊಡ್ಡ ಸೈನ್ಯಾನೆ ಮಾಡ್ಕ್ಯಂಡು ದೊಡ್ಡ ದೊಡ್ಡ ದೊಣ್ಣೆ ಇಡ್ಕಂಡು ನಮ್ಮೂರಿನ್ ದೊಣ್ಣೆನಾಯಕ್ರು ಗಂವ್ ಅಂಬೋ ಕತ್ತಲಾಗೆ ನೆಲುದ್ ಮ್ಯಾಕೆ ದೊಣ್ಣೆ ಬಡ್ಕೊಂಡು ಸದ್ದು ಮಾಡ್ತಾ ಅಡ್ಡಾಡ್ತಿದ್ರು. ಆ ಸದ್ದಿಗೇ ತೋಳ ಬಚ್ಚಿಟ್ಕೋಬೇಕಿತ್ತು. ತಳಾರ ಲಿಂಗಪ್ಪ, ಗಿರಿಯಪ್ಪನವರ ಲಿಂಗಪ್ಪ, ಬಡಗಿ ರಾಮಯ್ಯ, ಬಾವಿಮನೆ ಲಿಂಗಪ್ಪ, ನೀರಗಂಟಿ ಅನುಮಂತಪ್ಪ, ಮಾರಪ್ಪನವರ ಗ‌ಂಗಪ್ಪ, ಹೊಲೇರ ನ್ಯಾತಪ್ಪ, ನೀರಗಂಟಿ ಕೋಡಪ್ಪ, ಮಾಯಲ ಮರಾಠಿ(ಮಾದಿಗರ ನರಸಿಂಹಯ್ಯ ಅಂಬ್ತ ಈವಪ್ಪನ ಎಸ್ರು. ಬಯಲು ನಾಟಕದಾಗೆ ಗನಗೋರ ಪಾತ್ರ ಮಾಡ್ತಿದ್ದ. ಅದ್ಕೇಯಾ ಇಂಗೆ ಅಡ್ಡೆಸ್ರು ಬಂದಿತ್ತು.) ಇವ್ರೆಲ್ಲಾ ಆ ರಾತ್ರಿ ಸೈನ್ಯದ ನಾಯಕರು. ಇವರ ಅಡೀನಾಗೆ ಒಂದು ನಲವತ್ತೈವತ್ತು ಜನ ಚಿಗ್ರು ಮೀಸೆ ಬಂದಿರೋ ಹುಡುಗ್ರು ಇದ್ರು. ನಾಯಕ್ರು ಒಂದೆಲ್ಡು ಕಿತ ಬಂದು ಉಸ್ತುವಾರಿ ಮಾಡ್ತಿದ್ರು. ಈ ಹೈಕ್ಳು ಊಟ ಮಾಡ್ಕ್ಯಂಡು ನಿದ್ದೆ ಬರಾಗಂಟ ಊರು ತಿರುಗ್ತಿದ್ರು.‌ ದೊಣ್ಣೆ ಕುಟ್ಕೊಂಡು, ಕ್ಯಾಕೆ ಹಾಕ್ಕೊಂಡು, ಹರಟೆ ಹೊಡ್ಕೊಂಡು ತಿರುಗ್ತಿದ್ರು. ಅವ್ರ ಗಲಾಟೇನಾಗೆ ಜನ್ರೂ ಎದ್ದೆದ್ದು ಕುಂತು ಬಾಯಿ ಆಡುಸ್ತಿದ್ರು.

ಇಂಗೇ ಒಂದು ದಿನ ನಮ್ ಮನಿ ಬಾಗ್ಲ ದಡದಡನೆ ಬಡುದ್ರು. ನಾವೂ ನಿದ್ದೆಲಿಂದ ಎದ್ವು. ಬೆಕ್ಕಿನ ರೂಪ್ದಾಗೆ ಬಂದಿತ್ತಂತೆ ತ್ವಾಳ. ನಮ್ಮನಿ ಹಳೇ ರೂಮಿನ ಕಿಡಕೀ ದಸಿ ತೂರ್ಕೊಂಡು ಒಳೀಕ್ ಬತ್ತಂತೆ.‌ ಗಾಬ್ರಿ ಬಿದ್ದು ನಾವೂ ನೋಡಿದ್ವಿ. ಆ ರೂಮ್ನಾಗೆ ಇಂಚೂ ಬಿಡ್ದ‌ಂಗೆ ತಡಕಾಡೀರು. ಹಳೇ ಮಡಿಕೆ ದೆಕ್ಲು ಬಿಡ್ದಂಗೆ ಬಗ್ಗಿ‌ ನೋಡೀರು. ಓ ಮಾಯಾ ಆಗೈತೆ ಅಂಬ್ತ ವಾಪಸ್ ಓದ್ರು. ನಂಗೆ ಒಂದು ವಾರದ್ ಗಂಟ ಆ ರೂಮ್ಗೋಗೋಕೆ ದಿಗಿಲಾಗ್ತಿತ್ತು. ಇಡೀ ಊರಿನ್ ಮಕ್ಕಳೆಲ್ಲ ಬಯ ಬಿದ್ದೋಗಿದ್ವು. ನಾವ್ ಮಾತಾಡಾವಾಗ ತ್ವಾಳದ್ ಇಸ್ಯ ಉಸ್ರು ಸುತ ಬುಡ್ತಿರ್ನಿಲ್ಲ. ಅದೆಲ್ಲಾರಾ ಸಂದ್ಯಾಗಿದ್ದು ನಮ್ ಮಾತ್ ಕ್ಯೋಳಿಸ್ಕೊಂಡು ಆಮ್ಯಾಕೆ ಒಬ್ರೇ ಇರಾವಾಗ ಎಳ್ಕೋ ಓದ್ರೆ. ಸೂರಪ್ಪ ನೆತ್ತಿ ಮ್ಯಾಗೆ ಸುಡೋವಾಗ್ಲೂ ನಾವು ಒಬ್ಬರೇ ವಡ್ಡಾಡ್ತಿರ್ಲಿಲ್ಲ. ಆಟ ಗೀಟ ಬಂದಾಗಿತ್ತು. ಎಲ್ ಓದ್ರೂ ನಾಕೈದು ಜನ ಇದ್ರೆ ಮಾತ್ರ. ಕೊಳ್ಳಾಗಿನ್ ಅಂತ್ರ ಕೈಯಾಗೆ ಇಡ್ದೇ ನಮ್‌ ತಾರಾಟ. ವೀರಾಪುರುದ್ ವೆಂಕಟಾಚಾರಿ, ನಮ್ಮೂರಿನ್ ಮುನಿಯಾಚಾರಿ ತಾಯಿತ ಮಾಡ್ಕೊಡಾರು. ಬೇಜಾನ್ ಡಿಮಾಂಡು ಅವ್ರ ತಾಯಿತಗೋಳ್ಗೆ. ಅವ್ರು ಉಸ್ರು ಬುಡಾಕೂ ಪುರುಸೊತ್ತಿಲ್ಲದಂಗೆ ಜನ‌ ಮುತ್ಕಣಾರು.

ದಿನಾ ರಾತ್ರಿ ಮನಿಕ್ಕಣಾಕ್ ಮುಂಚೆ ನಮ್‌ ಅಂಗಳದಾಗೆ ದೊಣ್ಣೆ ನಾಯಕ್ರ ಮೀಟಿಂಗು. ನೆನ್ನೆ ಏನಾತು? ನಂಟ್ರ ಊರಾಗೆ ಯಾವ್ ಕತಿ ನಡೀತು ಅಂಬ್ತ ಯಾಪಾಟಿ ಕತೆ ಕಕ್ಕೋರು.‌‌ ‘ನಿನ್ನೆ ದಿನಾ ಗೌಡ್ನೋರ ಮನೆ‌ ಮುಂದ್ಲಾಸಿ ಹೋಗ್ತಿದ್ನಾ ಅಲ್ಲೊಂದು ಕರೇ ನಾಯಿ ನನ್ನೇ ದುರ್ ದುರ್ನೆ ನೋಡ್ತೈತೆ. ನಮ್ಮೂರ್ನಾಗೆ ಅಂತ ನಾಯಿ ಕಂಡಿಲ್ಲ ಬುಡು. ಇದ್ದಿಲ್ಗಿಂತ ಕರ್ರಗೈತೆ. ದೊಣ್ಣೆ ಬೀಸ್ದೆ ನೋಡೂ, ಓಡ್ತು. ಅಟ್ಟಾಡುಸ್ಕೊಂಡು ಓದೇಟ್ಗೆ, ಮಾದಿಗ್ರ ಹಟ್ಯಾಗಾಸಿ ಹೋಗಿ ನರಸಿಂಹಪ್ಪನ್ ಗುಡೀ ಮಗ್ಗುಲಾಗೆ ಮಾಯಾ ಆಗೋಯ್ತು’. ಓತಿಕ್ಯಾತುಂಗೆ ಬೇಲಿ ಸಾಕ್ಸಿ ಅಂಬಂಗೆ ಇನ್ನೊಬ್ಬ ಸುರು ಅಚ್ಕಂಡ. ‘ ಅಯ್ ಬರೇ ನಾಯಿ, ಬೆಕ್ಕು, ಕಲ್ಡಿ ರೂಪ್ದಾಗೆ ಬರ್ತೈತೆ ಅಂಬ್ತ ಮಾಡೀರೇನು? ನಮ್‌ ನಂಟ ಪಾವ್ಗೋಡದಾಗೆ ಇರೋದು. ಅಲ್ಲಿ ಮೊನ್ನೆ ದಿನಾ ನರ್ ಮನುಸ್ಯನ್ ಯಾಸದಾಗೆ ಬಂದಿತ್ತಂತಪ್ಪೊ. ತಮ್ಮನ್ ಯಾಸ್ದಾಗೆ ಅಣ್ಣುನ್ನ ಯಾಮಾರಿಸ್ತಂತೆ’. ನಿಜುದ್ ತಲೆ ಮ್ಯಾಗೆ ಒಡ್ದಂಗೆ ಯೋಳ್ತಿದ್ರೆ, ‘ಇದ್ರೂ ಇರಬೈದು, ಮಾಯಾ ಮಂತ್ರ ಕಲಿತ್ ಮ್ಯಾಕೆ ಪ್ರಾಣಿ ಯೋನೂ ಮನುಸ್ಯ ಯೋನೂ, ರೂಪಾಂತ್ರ ಆಗೋ ಸಕ್ತಿ ಇದ್ರೆ ಏನ್ ಬೇಕಾರ ಆಗ್ಬೈದು ಕಣ್ಲಾ’ ಅಂಬ್ತ ಹಣ್ಣು ಹಣ್ಣು ಮುದುಕಪ್ಪನ ತೀರ್ಮಾನ.

ಜನಾ ಅಂಬೋ ಅಂಗೆ ಇದು ಯಾಸ ಹಾಕ್ಕಂಡು ಬಂದಿರೋ ತೋಳ್ವೇಯಾ. ನಾಯಾಗ್ತೈತೆ, ಬೆಕ್ಕಾಗ್ತೈತೆ ಅಂದ್ ಮ್ಯಾಕೆ ಹಲ್ಲಿನೂ ಆಗಿರ್ಬೈದು. ನನ್ನ ಎತ್ತಾಕ್ಕೊಂಡು ವಾಗೋದು ದಿಟ ಅನ್ನುಸ್ ಬುಡ್ತು. ಕಿರ್ಚಾಣಾ ಅಂದ್ರೆ ನಾಲಗೆ ಬಿದ್ದೋಗೈತೆ. ಅತ್ಲಾಗೆ ಇತ್ಲಾಗೆ ಅಳ್ಳಾಡೋಕೂ ಆಗ್ದಂಗೆ ಮೈಯೂವೆ ಮರಗಟ್ಟೈತೆ. ನನ್ ಕತಿ‌ ಮುಗ್ದೋಯ್ತು ಅಂಬ್ತ ದ್ಯಾವ್ರನ್ನ ನೆಪ್ಪು ಮಾಡ್ಕೊಂಡೆ.

ನಮ್ಮೂರಿನ ಜನಗೋಳ ಈ ಕತೆ ಚಿತ್ರಕತೆ ಏಸ್ ರಸವತ್ತಾಗಿರ್ತಿತ್ತು ಅಂದ್ರೆ ಇಷ್ಟ ಬಂದಂಗೆ ಹೆಣೆದು ಬಿಸಾಕೋರು. ಈಗಿನ್ ಕಾಲುದ್ ಒಳ್ಳೆ ಥ್ರಿಲ್ಲರ್ – ಕಿಲ್ಲರ್ ಕತೇಗುಳ್ನ ನಿವಾಳ್ಸಿ ಎಸೀಬೇಕು ಅಂಗಿರ್ತಿತ್ತು. ಮೈಮ್ಯಾಗೆ ಗುಳ್ಳೆ ಏಳ್ಸೋ ಈಪಾಟಿ ಕಲ್ಪಿಸೋ ಸಕ್ತಿಗೆ ಯಾರಾನಾ ಆಸ್ಕರ್ರೋ ಬಾಸ್ಕರ್ರೋ ಕಣ್‌ ಮುಚ್ಕೊಂಡು ಸಲೀಸಾಗಿ ಕೊಡ್ಬೈದಿತ್ತು. ಬಾಯಿ ಮ್ಯಾಗೆ ಬೆಳ್ಳಿಡೋದಲ್ಲ, ಬಾಯೊಳಿಕ್ಕೇ ಇಕ್ಕೊಂಡು ಕಚ್ಕೊಂಡ್ರೂ ಗೊತ್ತಾಗ್ದಂಗೆ ಮೈಮರ್ಯೋಂತ ಬೆರಗು ಕಾಣ್ರಪ್ಪೋ. ಈ ಹುಚಾಟ್ವ ಇವತ್ತು ನೆನುಸ್ಕೊಂಡ್ರೆ ನಗಾ. ಆವತ್ತು ಭೀತಿ ಮುಚ್ಕೊಂಡು ಜೀವ ಅಂಗೈಯಾಗಿಟ್ಟು‌ ತಿರುಗ್ತಿದ್ದ್ವೋ.

ಒಂದಿನಾ ಇಸ್ಕೂಲಿಂದ ಬಂದ ಮ್ಯಾಗೆ ಸಂಜೀನಾಗ, ತ್ವಾಟಕ್ಕೋಗಿ ಸೀನೀರು ತಕಂಬಾ ಅಂಬ್ತ ಅಮ್ಮ ಯೋಳಿದ್ಲು. ನಾನೂ ಬಿಂದ್ಗೆ ತಕಂಡು ಇಂದ್ರ ಮನೆಗೋಗಿ ಬಾರಮ್ಮಿ ಹೋಗಾಮಾ ಅಂತ ಕರ್ದೆ. ಅವ್ಳೂ, ಈಗ್ ತಾನೆ ತಂದಿವ್ನಿ ಬರಾಕಿಲ್ಲ ಅಂದ್ಬುಟ್ಲು. ಸರಿ, ಅರ್ಧ ದಾರೀಗಂಟ ಬಂದಿವ್ನಿ, ಅಂಗೇ ತಂದ್ ಬಿಡಾಣಾ ಅಂತ ಹೋದೆ. ಯಾವಾಗ್ಲೂ ನಮ್ ತೋಟ್ದಾಗೆ ಜನ ಇದ್ದೇ ಇರ್ತಾರೆ. ಕದಿರಪ್ಪನ ಗುಡೀಗೆ ಬರೋರು, ಒಣ್ಗಿದ್ ಪುಳ್ಳೆ ಆರ್ಸಾಕೆ ಬರೋರು, ನೀರು ನಿಡಿಗೆ ಬರೋರು, ಬಟ್ಟೆ ಒಗಿಯಾಕ್ ಬರೋರು ಇರ್ತಿದ್ರು. ಅವತ್ತು ನನ್ ಗಾಚಾರಕ್ಕೆ ಒಂದ್ ಪಿಳ್ಳೆ ಸೈತ ಇಲ್ಲ. ದಿಗಿಲು ಗಂವ್ ಅಂತೈತೆ. ಇಡೀ ತೋಟಾನೆ ತೋಳ್ವೇನೋ, ನನ್ನುನ್ ನುಂಗೇ ಬುಡ್ತೇನೋ ಅನುಸ್ಬುಡ್ತು. ತೋಟ ಕಾಯೋ ದಾಳಪ್ನೂ ಇಲ್ಲ.‌ ಅಂಗೇ ಮುಂದುಕ್ ಹೋದೆ. ತೊಟ್ಟಿ ತಾವಿಂದ ಕೆಳೀಕ್ ಬೀಳೋ ನೀರು ಹಿಡಿಯಾಕೆ ಇನ್ನೊಂದು ಇಪ್ಪತ್ತು ಹೆಜ್ಜೆ ಐತೆ. ತೊಟ್ಟಿ ಮಗ್ಗುಲಾಗೆ ದಾಳಪ್ನ ಎಂಡ್ರು ಹನುಮಕ್ಕ ನಿಂತೌಳೆ. ವಸಿ ದೈರ್ಯ ಬಂತು. ಮುಂದುಕ್ ಹೆಜ್ಜೆ ಇಕ್ಕ್ಬೇಕು, ಯಾಕೋ ಅನ್ಮಾನ ಬಂತು. ಅನುಮಕ್ಕ ಅಳ್ಳಾಡ್ತಾನೆ ಇಲ್ಲ. ಕಣ್ಣು ಗರಗರ ತಿರುಗ್ತಾ ಇದ್ದಂಗೈತೆ. ಮೈಯಾಗೆ ನೀರಿಳೀತು. ತೋಳದ ಕತೆಗ್ಳು ಬೇತಾಳದಂಗೆ ಬೆನ್ನು ಬಿದ್ದಿದ್ವಲ್ಲ. ನಾನು ಬ್ಯಾರೆ ಚಂದಮಾಮ, ಬೊಂಬೆಮನೆ ಕತೆಗ್ಳಾಗೆ ಮಾಂತ್ರಿಕರು, ದೆವ್ವದ ಕತೆ ಓದಿ ಓದಿ, ಕಲ್ಪಿಸೋದು ಸ್ಯಾನೆ ಇತ್ತು. ಅದುಕ್ಕೆ ಜನ್ರು ಬ್ಯಾರೆ ಒಗ್ಗರ್ಣೆ ಹಾಕಿ ಜಾಸ್ತೀನೇ ಆಗಿತ್ತು. ಒಂದೇ ಉಸಿರ್ನಾಗೆ ಅಂಗೇ ವಾಪಸ್ ತಿರುಗ್ದೆ. ಒಂದು ಕಿತ, ಅಲ್ಲಾ ಕಾಲು ನೋಡ್ಬೇಕಿತ್ತು.‌ ತಿರುಗ್ಸಿದ್ರೆ ಮಾತ್ರ ದೆವ್ವ ಅಲ್ವಾ ಅಂತ ಅನ್ನುಸ್ತು. ಇನ್ನೊಂದು ಕಿತ ಬ್ಯಾಡ್ವೇ ಬ್ಯಾಡ, ತೋಳ ‍ದೆವ್ವ ಅಲ್ಲ. ಅದು ಮಾಂತ್ರಿಕ, ಅದ್ರ ಸಾವಾಸ ನಂಗ್ಯಾಕೆ ಅಂತ ದಡಗುಟ್ಟಿಕೊಂಡು ಬಂದೆ. ಒಂದ್ಕಿತ ಹಿಂದುಕ್ ತಿರ್ಗಿ ನೋಡ್ತಿವ್ನಿ, ಅನುಮಕ್ಕ ಕೈ ತೋರ್ಸಿ ನಿಲ್ಲು ಅಂತಾವ್ಳೆ. ಹಿಂದಿಂದೇನೆ ಬರ್ತಾವ್ಳೆ. ದ್ಯಾವ್ರೆ ಏನ್ ಮಾಡ್ಲಿ. ಮನ್ಯಾಗೆ ಮಾಘ ಪುರಾಣ, ಕಾರ್ತೀಕ ಪುರಾಣದ ಪುಸ್ತಕಗಳು ನಮ್ಮಜ್ಜಿ ಕಾಲುದ್ದಿದ್ವು. ಅದ್ನ ಓದಿ ಓದಿ ನರಕ, ಸ್ವರ್ಗ ಅಂಬೋದು ತಲ್ಯಾಗೆ ಕುಂತಿತ್ತು. ಈಗೇನಾರಾ ಈ ತೋಳುದ್ ಕೈಯಾಗೆ ಸಿಕ್ಕಿ ಸತ್ತು ನರಕುಕ್ಕೇನಾರೂ ಹೋದ್ರೆ, ದರದರನೆ ಎಳ್ಕೋ ಹೋಗಿ ಬಿಸಿ ಬಿಸಿ ಎಣ್ಣೆ‌ ಕುದಿಯೋ ಬಾಂಡ್ಲೀಗೆ ಹಾಕಿ ಬೋಂಡಾ ಬಜ್ಜಿ ತರ ತೇಲುಸ್ತಾರೆ ಅನ್ನೋದು ನೆಪ್ಪಾತು. ಪುಣ್ಯದ ಪುಟ ತುಂಬ್ಸಾಕೆ ಅಜಾಮಿಳನ ಕತೆ ನೆಪ್ಪು ಮಾಡ್ಕೊಂಡೆ. ಸಾಯಾಗಂಟ ಪಾಪದ್ ಕೆಲ್ಸಾ ಮಾಡೀನೂ ಸಾಯೋ ಹೊತ್ನಾಗೆ ನಾರಾಯಣ ಅಂಬ್ತ ಮಗುನ್ ಹೆಸ್ರು ಕರೆದಿದ್ಕೆ ಸ್ವರ್ಗಕ್ಕೆ ಹೊಂಟೋದ. ನಮ್ಮಜ್ಜಿ ಯಾವಾಗ್ಲೂ ನಾರಾಯಣ ಅಂತಾನೇ ಜಪ ಮಾಡ್ತಿದ್ಲು. ನಾನೂ ನಾರಾಯಣ ಅಂತ ಯೋಳ್ಕೊಂತಾ ಓಡ್ದೆ. ಸಾದ್ಯ ಆದ್ರೆ ತೋಳ್ದಿಂದ ತಪ್ಪುಸ್ಕೊಂಡು ಬದುಕ್ಕೊಳ್ಳಾಣಾ ಅಂತ. ಆ ಆತುರ್ದಾಗೆ ಎಡವಿ ಬಿಂದಿಗೆ ಕೆಳೀಕ್ ಬಿತ್ತು. ತಿರ್ಗಿ ಸೈತ ನೋಡ್ದಂಗೆ ಓಡ್ದೆ. ಮನೆ ಸಿಗಾ ತಂಕ ನಿಲ್ಲಲಿಲ್ಲ. ಅಮ್ಮ‌ ಗಾಬ್ರಿ ಬಿದ್ದು ಯೇನಾಯ್ತೆ ಅಂದ್ರೂ ಉತ್ರ ಕೊಡ್ಲಿಲ್ಲ. ಭಯ್ದಾಗೆ ಹೊಟ್ಟೆ ಪತರಗುಟ್ಟಿ, ವಂದ ಮಾಡೋಕೆ ಓಡೋದೆ. ಹನುಮಕ್ಕ ಹಿಂದೇನೇ ಬಂದೋಳೇ, ಅಕ್ಕೋ, ಸುಮಕ್ಕ ನೀರು ತಕಾ ಬರ್ದೆ ಅಂಗೇ‌ ಬಂದೌಳೆ. ಬಿಂದಿಗೇನೂ ಅಲ್ಲೇ ಬೀಳುಸ್ಕೊಂಡು ಬಂದೌಳೆ. ಅದ್ಕೇಯಾ ಬಿಂದ್ಗೆ ತಕ್ಕಂಡು ನಾನೇ ಬಂದೆ. ನಾನೂವೇ ಆಗ್ನಿಂದ ಕರೀತಾನೇ ಇವ್ನಿ. ಯಾಕೋ ಹೆದುರ್ ಕೊಂಡೌಳೆ’ ಅಂದ್ಲು. ನಮ್ಮಮ್ಮ ‘ಅವುಳ್ಗೆ ವಂದಕ್ಕೆ ಹೋಗ್ಬೇಕಿತ್ತೇನೋ, ವಾಪಸ್ ಬಂದೌಳೆ’ ಅಂದ್ಲು. ಒಳ್ಗೇ ನಿಂತು ಕೇಳುಸ್ಕೊಂತಿದ್ನಾ, ನಾಚ್ಕೇ ಆಗೋಯ್ತು. ಥೋ, ಸುಮ್ ಸುಮ್ಕೆ ಹೆದ್ರಿಕೋಬಿಟ್ಟೆ ಅನ್ಸಿತ್ತು. ಕುಂತ್ರೂ ನಿಂತ್ರೂ ತೋಳುದ್ ದ್ಯಾನ, ಜೀವಕ್ಕಿಲ್ಲ ಸಮಾದಾನ ಅನ್ನಂಗೆ ನಮ್ ಕತೆ ದ್ಯಾವ್ರಿಗೇ ಪಿರೂತಿ ಆಗಿತ್ತು ಬುಡಿ.

ಪಾವಗಡದಾಗೆ ಸುರು ಆಗಿದ್ದು ಈ ಗಲಾಟಿ. ಅಲ್ಲಿ ನಮ್ ಸ್ವಾದರ ಮಾವನ್ ಮನಿ ಇತ್ತು. ನಂಗಂತೂ ಅವ್ರು ಸಾವಿನ್‌ ಬಾಗ್ಲಾಗೆ ಅವ್ರೆ ಅಂಬೋ‌ದು ನೆನುಸ್ಕೊಂಡೇ ಪಾಪಾ ಅನ್ನುಸ್ತಿತ್ತು. ಅಂಗೇ ಈ ತೋಳದ್ ಆಟಗ್ಳು ಕತೆಗ್ಳು ಸುಮಾರು ದಿನ ನಡೀತು. ಒಂದೆಲ್ಡು ತಿಂಗ್ಳಾರಾ ಇತ್ತೇನೋಪ್ಪ. ಆಮ್ಯಾಕೆ ಪಾವಗಡದಾಗೆ ಪೊಲೀಸ್ ನೋರ್ ಕಾವಲು ಹಾಕಿದ್ರು. ಅವ್ರ ಬಂದೋಬಸ್ತಿನಾಗೆ, ಕಂಡೋರ್ಗೆ ಗುಂಡಿಕ್ತೀವಿ ಅಂಬ್ತ ಹೆದುರ್ಸುದ್ ಮ್ಯಾಲೆ ತ್ವಾಳುದ್ ಸದ್ದು ಅಡಗ್ತು. ಅದ್ಯಾರು ಸುರು ಮಾಡಿದ್ರು ಅಂಬೋದುಕ್ಕೂ ಆಮ್ಯಾಲೆ ಏಸೊಂದು ಕತೆಗ್ಳು ಹುಟ್ಕೊಂಡ್ವು ಅಂತೀರಿ. ಕತೆಗೆ ಕಾಲಿಲ್ಲ ನೋಡಿ. ರೆಕ್ಕೆಪುಕ್ಕ ಮಾತ್ರವೇ ಇರೋದು.

ನಮ್ಮೂರ್ನಾಗೂ ಗಸ್ತು ತಿರ್ಗೋ ಹೈಕ್ಳಿಗೆ ಸುಸ್ತಾಯ್ತು. ಏಸು ದಿನಾಂತ ಅವ್ರೂ ನಿದ್ಗೆಟ್ಟು ತಿರ್ಗಾಕಾದೀತು ಯೋಳಿ. ಆಮ್ಯಾಕೆ ಈ ತ್ವಾಳ ಸದ್ದಿಲ್ದಂಗೆ ನೆಪ್ಪಿಂದಾನೂ ನಿಗುರ್ಕೊಂತು ಕಣೇಳಿ. ಮೊದ್ ಮೊದ್ಲು ಬರೀ ತೋಳಾ ಆಗಿತ್ತು. ನಿದಾನುಕ್ಕೆ ಮಂತ್ರ ಸಕ್ತಿ ಪಡ್ಕೊಂತು. ಆಮ್ಯಾಗೆ ರೂಪಾಂತರ ಸಕ್ತಿ ಬ್ಯಾರೆ ಬಂತು. ಜನ್ರನ್ನ ಹೆದುರ್ಸಿ ಹಿಪ್ಪೆ ಮಾಡೋ‌ ಈ ಮೌಡ್ಯಕ್ಕೆ ನಗಾ ಬರ್ಬೇಕೋ? ಹೆದುರ್ಕೋಬೇಕೋ? ಇಲ್ಲಾ, ಈಸೊಂದು ಕಲ್ಪನೆ, ಕತೆ ಕಟ್ಟೊ ಸಕ್ತಿ ಐತಲ್ಲ ಅಂತ ಸೋಜಿಗ ಪಟ್ಕಾಬೇಕಾ? ತಿಳೀವಲ್ದು. ಒಟ್ನಾಗೆ ಆ ಕತೆಗುಳ್ಗೆ ಕಿವಿಯಾಗೋರು, ದನಿಗೂಡ್ಸೋರು, ಬಾಯಾಗೋರು ಸ್ಯಾನೆ ಜನ ಇದ್ರು. ಎಂಗೆಂಗೋ ಸುರು ಆಗಿ ಎಲ್ಲೆಲ್ಗೋ ಹೋಗಿ ಮುಗೀತಿದ್ವು.

ಅಂತೂ ಇಂತೂ ಸುತ್ತಮುತ್ತಾ ನಡೀತಿದ್ದ ಈ ತೋಳದ್ ಗಲಾಟೆ ಮುಗ್ದು ನಾವು ನೆಮ್ದಿಯಿಂದ ಆಟಾಡೋಕೆ, ಊರು ತಿರುಗೋಕೆ ಸ್ಯಾನೆ ದಿನ್ವೇ ಬೇಕಾಯ್ತು. ನಮ್ ಮನಸಾಗೆ ಗೂಡು ಕಟ್ಟಿದ್ ದಿಗಿಲು ದೂರ‌ ಆಗಾಕೆ ಏಸೊಂದು ಅಂತ್ರಗಳು, ಮಂತ್ರಗಳು ಬೇಕಾದ್ವು. ಮಂತ್ರಕ್ಕೇ ಮಾವಿನಕಾಯಿ ಉದುರಾತೇ ಅಂತನ್ನ ಬ್ಯಾಡಿ. ಮುದುರ್ಕೊಂಡಿರೋ ನಮ್ ಮನುಸ್ನ ತಿರ್ಗಾ ಅರಳ್ ಸಾಕೆ ಈ ಮಂತ್ರಸಕ್ತಿನೇ ಬೇಕಿತ್ತೋ. ಶಂಕದಿಂದ ಬಂದ್ರೇನೇ ಅಲ್ವೇ ತೀರ್ತ ಅಂಬೋದು.