“ನಾನು ಆಲಿಸುವೆ. ನಾನು ಆಲಿಸುವೆ, ನಾನು ವೀಕ್ಷಿಸುವೆ. ಸೃಜನಶೀಲತೆಗೆ ಯಾವುದೇ ನಿಯಮಗಳು ತಿಳಿದಿಲ್ಲ. ಯಾರೋ ಹೇಳಿದ ಯಾವುದೋ ಒಂದು ಮಾತಿನಿಂದ ಅಥವಾ ನೀವು ನೋಡಿದ ಯಾವುದೋ ಒಂದು ಮುಖದಿಂದ ಕಾದಂಬರಿಯ ಕಲ್ಪನೆಯನ್ನು ನೀವು ಪಡೆಯಬಹುದು. ಯಹೂದಿ ಧಾರ್ಮಿಕ ಪಂಡಿತನೊಬ್ಬ ನನಗೆ ಹೇಳಿದ ಒಮ್ಮೆ, ದೇವರು ಮೋಶೆಯ ಜತೆ ಆ ಪೊದೆಯಲ್ಲಿ ಮಾತನಾಡಿದಾಗ ಗುಡುಗಿನ ಧ್ವನಿಯಲ್ಲಿ ಮಾತನಾಡಿರಲಿಲ್ಲ, ಬಲು ಕ್ಷೀಣವಾದ ಧ್ವನಿಯಲ್ಲಿ ಮಾತನಾಡಿದ್ದ.”
ಎಸ್. ಜಯಶ್ರೀನಿವಾಸ ರಾವ್ ಬರೆಯುವ “ಲೋಕ ಕಾವ್ಯ ವಿಹಾರ” ಸರಣಿಯಲ್ಲಿ ಸ್ವೀಡೆನ್ ದೇಶದ ಕವಿ ಲಾರ್ಸ್ ಗುಸ್ಟಾ‌ಫ್ಸನ್-ರವರ
(Lars Gustafsson, 1936-2016) ಕಾವ್ಯದ ಕುರಿತ ಬರಹ ಹಾಗೂ ಅವರ ಕೆಲವು ಅನುವಾದಿತ ಕವಿತೆಗಳು ನಿಮ್ಮ ಓದಿಗೆ

1936-ರಲ್ಲಿ ಸ್ವೀಡನ್ ದೇಶದ ವಸ್ತೆರೋಸ್ (Västerås) ನಗರದಲ್ಲಿ ಜನಿಸಿದ ಲಾರ್ಸ್ ಗುಸ್ಟಾಫ್ಸನ್, ಸ್ವೀಡಿಷ್ ಸಾಹಿತ್ಯದಲ್ಲಿ ಯಾವಾಗಲೂ ಹೊರಗಿನವರಾಗಿಯೇ ಉಳಿದರು. ವಸ್ತೆರೋಸ್ ಜಿಮ್ನೇಷಿಯಮ್-ನಲ್ಲಿ ತಮ್ಮ ಮಾಧ್ಯಮಿಕ ಶಿಕ್ಷಣವನ್ನು ಪೂರ್ಣಗೊಳಿಸಿದ ಗುಸ್ಟಾ‌ಫ್ಸನ್, ಊಪ್ಸಾಲಾ ವಿಶ್ವವಿದ್ಯಾಲಯದಲ್ಲಿ ಸಾಹಿತ್ಯ, ಸೌಂದರ್ಯಶಾಸ್ತ್ರ, ಸಮಾಜಶಾಸ್ತ್ರ ಮತ್ತು ತತ್ತ್ವಶಾಸ್ತ್ರ ಅಧ್ಯಯನ ಮಾಡಿ, 1960-ರಲ್ಲಿ ತತ್ವಶಾಸ್ತ್ರದಲ್ಲಿ ಪದವಿ ಪಡೆದರು. 1978-ರಲ್ಲಿ, ಅವರ ಇಪ್ಪತ್ತೈದನೆಯ ವಯಸ್ಸಿನಲ್ಲಿ, ‘ವಾಕ್ಕು ಮತ್ತು ಸಾಹಿತ್ಯ’ ವಿಷಯದ ಕುರಿತ ಮಹಾಪ್ರಬಂಧಕ್ಕಾಗಿ ಸೈದ್ಧಾಂತಿಕ ತತ್ತ್ವಶಾಸ್ತ್ರ ವಿಭಾಗದಲ್ಲಿ ಪಿಎಚ್‌.ಡಿ. ಪಡೆದರು ಹಾಗೂ ಜೀವಮಾನದುದ್ದಕ್ಕೂ ವೈಜ್ಞಾನಿಕ ವಿಷಯಗಳಲ್ಲಿ ಆಸಕ್ತಿಯನ್ನು ಉಳಿಸಿಕೊಂಡಿದ್ದರು. ಈ ಆಸಕ್ತಿಯು ಅವರನ್ನು ಸಾಹಿತ್ಯಿಕ ಬರಹಗಾರನೊಬ್ಬ ಸಾಮಾನ್ಯವಾಗಿ ಅನ್ವೇಷಿಸದಂತಹ ಕ್ಷೇತ್ರಗಳೊಳಗೆ ಕೊಂಡೊಯ್ದು, ಈ ಕ್ಷೇತ್ರಗಳ ವಿಷಯಗಳನ್ನು ಅವರ ಕಾದಂಬರಿಗಳು ಮತ್ತು ಕಾವ್ಯಗಳಲ್ಲಿ ಪರಿಶೋಧಿಸುವಂತೆ ಪ್ರೇರೇಪಿಸಿತು.

ತನ್ನ ಬರಹಗಳಲ್ಲಿ ವೈಜ್ಞಾನಿಕ ವಿಷಯಗಳನ್ನು ಸೇರಿಸುವ ಮೂಲಕ ಕವಿ ಅಥವಾ ಕಾದಂಬರಿಕಾರನಾಗಿ ತಾನು ಹೆಚ್ಚು ಮಹತ್ವವುಳ್ಳ ಬರಹಗಾರನೆಂದು ತೋರಿಸಿಕೊಳ್ಳಲು ಲಾರ್ಸ್ ಗುಸ್ಟಾ‌ಫ್ಸನ್ ಎಂದಿಗೂ ಪ್ರಯತ್ನಿಸಲಿಲ್ಲ; ಅವರು ಮೊದಲಿನಿಂದಲೂ – ವಿಶೇಷವಾಗಿ ಅವರ ಕಾವ್ಯದಲ್ಲಿ – ಈ ವೈಜ್ಞಾನಿಕ ದೃಷ್ಟಿಕೋನ (ನಿರ್ದಿಷ್ಟವಾಗಿ ಭೌತಶಾಸ್ತ್ರ) ತನ್ನ ಕಾವ್ಯ ಬರವಣಿಗೆಗೆ ಎಷ್ಟರ ಮಟ್ಟಿಗೆ ಹೊಸ ಆರಂಭದ ಬಿಂದುವನ್ನು ಒದಗಿಸಬಹುದು ಎಂಬ ಪ್ರಶ್ನೆಯನ್ನು ತನಿಖೆ ಮಾಡಿದರು; ಅಂದರೆ, ಈ ಆರಂಭದ ಬಿಂದು ಸಾಂಪ್ರದಾಯಿಕವಾದ ಸಾಂಕೇತಿಕ ಕಾವ್ಯಾತ್ಮಕತೆಯ ಜಾಗವನ್ನು ತೆಗೆದುಕೊಳ್ಳಬಲ್ಲುದಾ ಎಂಬ ತನಿಖೆ. ಈ ಶೋಧನೆ ಅವರನ್ನು ಒಬ್ಬ ‘ಗಣಿತೀಯ ಗೀತರಚನೆಕಾರ’ನನ್ನಾಗಿ (mathematical lyricist) ಮಾಡುತ್ತದೆ, ಒಂದು ಹೊಸ ರೀತಿಯ ಕವಿ.

1962-ರಲ್ಲಿ ಪ್ರಕಟವಾದ ಅವರ ಮೊದಲ ಸಂಗ್ರಹದಲ್ಲಿಯೇ (Ballongfararna [The Balloonists]), ತನ್ನನ್ನು ನೋಡುವವರನ್ನು ಸಹಿಸದ ಒಂದು ಯಂತ್ರದ ರೂಪಕವಿದೆ. ‘ಪ್ರಪಂಚವೊಂದು ಯಂತ್ರದಂತೆ’ ಎನ್ನುವ ರೂಪಕ ವಿಶಿಷ್ಟವಾಗಿ ಹತ್ತೊಂಬತ್ತನೇ ಶತಮಾನದ ರೂಪಕವಾಗಿದೆ; ಈ ರೂಪಕಕ್ಕೆ ‘ಪ್ರಪಂಚವೊಂದು ಅದೃಶ್ಯ ಯಂತ್ರ’ ಎಂಬ ಇಪ್ಪತ್ತನೇಯ ಶತಮಾನದ ರೂಪಕ ಉತ್ತರಾಧಿಕಾರಿಯಾಗಿದೆ. ಲಾರ್ಸ್ ಗುಸ್ಟಾ‌ಫ್ಸನ್ ಅವರ ಕಾವ್ಯದಲ್ಲಿ ಮನುಷ್ಯನ ಪಾತ್ರ ಒಬ್ಬ ಭಾವೋದ್ರಿಕ್ತ ವೀಕ್ಷಕನ ಪಾತ್ರಕ್ಕೆ ತಗ್ಗಿಹೋಗಿ, ಗೋಚರ ಪ್ರಪಂಚವು ತನ್ನ ಸಂವೇದನಾ ಗ್ರಹಿಕೆಯ ಹೊರಗೆ ‘ವಿಭಿನ್ನವಾಗಿ ಗೋಚರಿಸುವ’ ಜಗತ್ತಿನಲ್ಲಿ ಮುಂದುವರಿಯುತ್ತದೆ ಎಂದು ತಿಳಿದಿರುತ್ತಾನೆ. ಈ ಜಗತ್ತು ಅವರ ಕಾವ್ಯದ ಸಾಲುಗಳ ನಡುವೆ ಭಾಸವಾಗುತ್ತದೆ ಹಾಗೂ ಇನ್ನೂ ಮಾನವ ವೀಕ್ಷಣೆ ಮತ್ತು ವ್ಯಾಖ್ಯಾನಕ್ಕೆ ಒಳಪಟ್ಟಿಲ್ಲವಾದ ಕಾರಣ ಸ್ವರ್ಗದಂತಹ ಲಕ್ಷಣಗಳನ್ನು ಹೊಂದಿರುತ್ತದೆ.

ಲಾರ್ಸ್ ಗುಸ್ಟಾ‌ಫ್ಸನ್ ಅವರ ಕಾವ್ಯವನ್ನು ಕೇಂದ್ರಾಭಿಮುಖ ಎನ್ನುವುದಕ್ಕಿಂತ ಕೇಂದ್ರಾಪಗಾಮಿ ಎಂದು ಕರೆಯಬಹುದು; ಅವರ ಕಾವ್ಯವು ಗೋಚರ ಮತ್ತು ಅಗೋಚರದ ನಡುವಿನಲ್ಲಿರುವ ಒಂದು ಮಧ್ಯ-ನೆಲವನ್ನು ಹುಡುಕುತ್ತಿರುತ್ತದೆ, ಆದರೆ ಅಷ್ಟೇ ಲೌಕಿಕವಾದ ಜಗತ್ತನ್ನು ಕೂಡ ಹುಡುಕುತ್ತಿರುತ್ತದೆ. ‘ಈ ಜಗತ್ತು ನಿಜವಲ್ಲ’ ಎಂದು ಡಚ್ ಕವಿ ಹ್ಯಾನ್ಸ್ ಲೋಡಿಜೆನ್ (Hans Lodeizen) ಒಮ್ಮೆ ಹೇಳಿದರು. ಈ ಮಾತಿಗೆ ಲಾರ್ಸ್ ಗುಸ್ಟಾ‌ಫ್ಸನ್ ಹೀಗೆ ಉತ್ತರ ನೀಡಿಯಾರು: ಈ ಜಗತ್ತು ಒಂದೇ ನಿಜ ಜಗತ್ತಲ್ಲ, ಅಥವಾ, ಈ ಜಗತ್ತು ನಾವಿರುವುದಕ್ಕಿಂತ ಹೆಚ್ಚು ನಿಜವಾಗಿರಬಹುದು.

ಈಗಾಗಲೇ 1960-ರ ಹೊತ್ತಿಗೆ ಗುಸ್ಟಾಫ್ಸನ್ ನಿಯಮಿತವಾಗಿ ಕಾದಂಬರಿಗಳು ಮತ್ತು ಕವನಗಳನ್ನು ಪ್ರಕಟಿಸುತ್ತಿದ್ದರು. ಅವರ ಸಾಹಿತ್ಯಿಕ ಕಾರ್ಯದ ಜೊತೆಗೆ, ಅವರು 1962-ರಿಂದ 1972-ರವರೆಗೆ ಹೆಸರಾಂತ ಸಾಹಿತ್ಯಿಕ ಜರ್ನಲ್ Bonniers Litterära Magasin-ನ ಪ್ರಧಾನ ಸಂಪಾದಕರಾಗಿದ್ದರು. ಈ ಸಮಯದಲ್ಲಿ ಅವರು ವಿಶೇಷವಾಗಿ “ಗ್ರೂಪ್ 47″ (Gruppe 47) ಎಂಬ ಜರ್ಮನ್ ಸಾಹಿತ್ಯಿಕ ಒಕ್ಕೂಟದ ಲೇಖಕರೊಂದಿಗೆ ಸಂಪರ್ಕ ಸ್ಥಾಪಿಸಿದರು. 1972-ರಲ್ಲಿ, DAAD ಫೆಲೋಶಿಪ್ ಮೂಲಕ ಅವರು ಪಶ್ಚಿಮ ಬರ್ಲಿನ್‌-ಗೆ ಬಂದು, ಎರಡು ವರ್ಷಗಳ ಕಾಲ ವಾಸ ಮಾಡಿದರು. ಈ ಅವಧಿಯಲ್ಲಿ, ಅವರು ಆಸ್ಟ್ರೇಲಿಯಾ, ಸಿಂಗಪೂರ್, ಜಪಾನ್, ಇಸ್ರೇಯಿಲ್ ಮತ್ತು ಅಮೇರಿಕಾ ದೇಶಗಳಿಗೆ ವ್ಯಾಪಕವಾಗಿ ಪ್ರಯಾಣಿಸಿದರು. ಅವರ ವೃತ್ತಿಜೀವನದುದ್ದಕ್ಕೂ, ಅವರು ಅನೇಕ ಅಂತರರಾಷ್ಟ್ರೀಯ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರು. ಅಮೇರಿಕಾದ ಖ್ಯಾತ ಲೇಖಕ ಜಾನ್ ಅಪ್‌ಡೈಕ್ ಗುಸ್ಟಾಫ್‌ಸನ್‌-ರನ್ನು ಹೀಗೆ ವರ್ಣಿಸಿದರು, “ಗುಸ್ಟಾಫ್‌ಸನ್‌-ರ ವಿಚಾರಗೋಷ್ಠಿಗಳಲ್ಲಿ ಭಾಗವಹಿಸುವಿಕೆ ಅಸೂಯೆ ಪಡುವಂತಹದ್ದು. ಅವರು ನೀರಿನಿಂದ ಹೊರಗಿದ್ದಂತೆ ಯಾವತ್ತೂ ಅನಿಸದ ಒಬ್ಬ ಕೆಂಪು ಗಡ್ಡದ ಮೀನು, ಹಾಗೂ ಪುಸ್ತಕಗಳು, ಆಲೋಚನೆಗಳು ಮತ್ತು ಸಂವಾದಗಳನ್ನು ಸಮಾನವಾಗಿ ಪ್ರೀತಿಸುವ, ಯಾವ ಕೂಟದಲ್ಲೂ ತಮ್ಮ ಪ್ರಾವೀಣ್ಯತೆಯಿಂದ ಮನಗೆಲ್ಲುವ ಲೇಖಕ.”

ಗುಸ್ಟಾಫ್‌ಸನ್‌-ರು ತಮ್ಮ ಜೀವಮಾನದುದ್ದಕ್ಕೂ ಕವನ, ಕಾದಂಬರಿಗಳು, ಸಣ್ಣ ಕಥೆಗಳು, ವಿಮರ್ಶಾತ್ಮಕ ಪ್ರಬಂಧಗಳು ಮತ್ತು ಸಂಪಾದಕೀಯಗಳನ್ನು ಪ್ರಕಟಿಸುತ್ತಾ ಬಂದವರು. ಅವರು ಸ್ವೀಡಿಷ್ ಬರಹಗಾರರಾಗಿ ಅಂತರರಾಷ್ಟ್ರೀಯ ಮನ್ನಣೆಯನ್ನು ಪಡೆದರು. 1983-ರಲ್ಲಿ ಫ್ರಾನ್ಸ್ ದೇಶದ Prix européen de l’essai Charles-Veillon ಪ್ರಶಸ್ತಿ , 1989-ರಲ್ಲಿ ಇಟಲಿ ದೇಶ ಕೊಡುವ ಯೂರೋಪಿನ ಪ್ರತಿಷ್ಠಿತ ಅಂತರರಾಷ್ಟ್ರೀಯ ಸಾಹಿತ್ಯಿಕ ಜೀವಮಾನ ಪ್ರಶಸ್ತಿ, Una Vita per la Letteratura, ಮತ್ತು 1990-ರಲ್ಲಿ ಸ್ವೀಡನ್ ದೇಶದ Bellman Prize ಸೇರಿದಂತೆ 1990-ರ ಹೊತ್ತಿಗಾಗಲೆ ಅವರು ಸುಮಾರು ಹನ್ನೆರಡು ಪ್ರಮುಖ ಸಾಹಿತ್ಯ ಪ್ರಶಸ್ತಿಗಳನ್ನು ಪಡೆದರು. 1994-ರಲ್ಲಿ ಕವಿತೆಗಾಗಿ John Simon Guggenheim Memorial Foundation Fellowship ಪಡೆದರು. ಅವರು ಪಡೆದ ಇತರ ಪ್ರಶಸ್ತಿಗಳಲ್ಲಿ 2006-ರಲ್ಲಿ ಪಡೆದ Gerard-Bonnier-Preis, 2009-ರಲ್ಲಿ ಪಡೆದ Goethe Medal, 2015-ರಲ್ಲಿ ಪಡೆದ Thomas Mann Prize, ಹಾಗೂ 2016-ರಲ್ಲಿ ಇಟಲಿ ದೇಶದಲ್ಲಿ ಪಡೆದ International Nonino Prize.

ಗುಸ್ಟಾಫ್ಸನ್ ಅವರ ಎರಡು ಪ್ರಮುಖ ಆಸಕ್ತಿಯ ಕ್ಷೇತ್ರಗಳು ಅವರ ವೃತ್ತಿಜೀವನದ ಆರಂಭದಿಂದಲೂ ಪರಸ್ಪರ ಪ್ರಭಾವ ಬೀರಿವೆ. “ಕೆಲವೊಮ್ಮೆ ನನ್ನ ಸಾಹಿತ್ಯ ಕಾರ್ಯ ಮತ್ತು ನನ್ನ ತಾತ್ವಿಕ ಕಾರ್ಯಗಳ ನಡುವೆ ನಾನು ಯಾವುದೇ ತೀಕ್ಷ್ಣವಾದ ಗಡಿಯನ್ನು ಕಾಣುವುದಿಲ್ಲ,” ಎಂದು ಅವರು 2003-ರಲ್ಲಿ ಒಮ್ಮೆ ಬರೆದಿದ್ದರು. “ಸಾಹಿತ್ಯವನ್ನು ತನ್ನ ಸಾಧನಗಳಲ್ಲಿ ಒಂದನ್ನಾಗಿ ಪರಿವರ್ತಿಸಿದ ತತ್ವಜ್ಞಾನಿ ಎಂದು ನನ್ನನ್ನು ನಾನು ಪರಿಗಣಿಸುತ್ತೇನೆ.” ಅವರು ತಮ್ಮ ಸ್ಫೂರ್ತಿಯನ್ನು ಎಲ್ಲಿ ಕಂಡುಕೊಳ್ಳುತ್ತಾನೆ ಎಂದು ಕೇಳಿದಾಗ, ಗಸ್ಟಾಫ್ಸನ್ ಉತ್ತರಿಸಿದರು, “ನಾನು ಆಲಿಸುವೆ. ನಾನು ಆಲಿಸುವೆ, ನಾನು ವೀಕ್ಷಿಸುವೆ. ಸೃಜನಶೀಲತೆಗೆ ಯಾವುದೇ ನಿಯಮಗಳು ತಿಳಿದಿಲ್ಲ. ಯಾರೋ ಹೇಳಿದ ಯಾವುದೋ ಒಂದು ಮಾತಿನಿಂದ ಅಥವಾ ನೀವು ನೋಡಿದ ಯಾವುದೋ ಒಂದು ಮುಖದಿಂದ ಕಾದಂಬರಿಯ ಕಲ್ಪನೆಯನ್ನು ನೀವು ಪಡೆಯಬಹುದು. ಯಹೂದಿ ಧಾರ್ಮಿಕ ಪಂಡಿತನೊಬ್ಬ ನನಗೆ ಹೇಳಿದ ಒಮ್ಮೆ, ದೇವರು ಮೋಶೆಯ ಜತೆ ಆ ಪೊದೆಯಲ್ಲಿ ಮಾತನಾಡಿದಾಗ ಗುಡುಗಿನ ಧ್ವನಿಯಲ್ಲಿ ಮಾತನಾಡಿರಲಿಲ್ಲ, ಬಲು ಕ್ಷೀಣವಾದ ಧ್ವನಿಯಲ್ಲಿ ಮಾತನಾಡಿದ್ದ. ಆ ಧ್ವನಿ ಕೇಳಿಸಬೇಕಾದರೆ ನೀವು ಎಚ್ಚರಿಕೆಯಿಂದ ಆಲಿಸಬೇಕು, ನೀವು ಚುರುಕಾಗಿರಬೇಕು.”

ಅಮೇರಿಕದ ಖ್ಯಾತ ಕವಿ ಹಾಗೂ ಅನುವಾದಕರಾದ ಜೇನ್ ಹರ್ಶ್‌ಫೀಲ್ಡ್ (Jane Hirshfield), ಲಾರ್ಸ್ ಗುಸ್ಟಾಫ್ಸನ್-ರ ಕಾವ್ಯದ ಬಗ್ಗೆ ಹೀಗೆನ್ನುತ್ತಾರೆ: “ಲಾರ್ಸ್ ಗುಸ್ಟಾಫ್ಸನ್ ಅವರ ಕವಿತೆಗಳಲ್ಲಿ ವಿಮಾನಗಳು ಮತ್ತು ಬೆಳ್ಳಿಯ ಗಣಿಗಳು, ದೂರದ ಉತ್ತರಕ್ಕೆ ಪ್ರಯಾಣಿಸುತ್ತಿರುವ ನಾಯಿಗಳು ಕಂಡುಬರುತ್ತವೆ, ತನ್ನ ಮಗನ ಅಕ್ವೇರಿಯಮ್‌ನಿಂದ ತಪ್ಪಿಸಿಕೊಂಡ ವರ್ಷಗಳ ನಂತರ ಕಪಾಟಿನಲ್ಲಿರುವ ಅರಿಸ್ಟಾಟಲ್-ನ ಪುಸ್ತಕದ ಪುಟಗಳ ನಡುವೆ ಒತ್ತಿದ ಒಂದು ಸಣ್ಣ ಮುಳ್ಳುನಳ್ಳಿ ಮೀನು ಕಂಡುಬರುತ್ತದೆ. ಅವರ ಕವಿತೆಗಳಲ್ಲಿ ಶಾಸ್ತ್ರೀಯ ಸಂಗೀತದ ತುಣುಕುಗಳ, ತತ್ವಜ್ಞಾನಿಗಳ, ಮಧ್ಯಕಾಲೀನ ಆ್ಯರಬಿಕ್ ವಿದ್ವಾಂಸರ, ಐತಿಹಾಸಿಕ ಪರಿಶೋಧಕರ, ಕಲ್ಲಿನ ಗೋಡೆಗಳ, ಆ್ಯಸ್ಪೆನ್ ಮರಗಳ, ಮೀನುಗಳ ಹೆಸರುಗಳು ಬರುತ್ತವೆ… ಇಂಗ್ಲಿಷ್ ಅನುವಾದದಲ್ಲಿ ಕಂಡುಬರುವಂತೆ, ಅವರ ಕವಿತೆಗಳು ತಮ್ಮದೇ ಆದ ಕಾವ್ಯಾತ್ಮಕತೆಯ ಬಗ್ಗೆ ಗದ್ದಲ ಮಾಡುವುದಿಲ್ಲ. ಬದಲಾಗಿ, ಅವರ ಕವನಗಳು ಬಜಾರಿನ ಅಂಗಡಿಗಳ ಮಧ್ಯೆ ತಿರುಗಾಡುತ್ತಿರುವ ಒಬ್ಬ ದರ್ಶಕನಂತೆ ಮುಕ್ತವಾಗಿ ಮಾನವ ಅಸ್ತಿತ್ವದ ಆಂತರಿಕ ಮತ್ತು ಬಾಹ್ಯ ಕ್ಷೇತ್ರಗಳನ್ನು ಆಲೋಚಿಸುವ ವ್ಯಕ್ತಿಯ ಧ್ವನಿಯನ್ನು ಪ್ರಸ್ತುತಪಡಿಸುತ್ತವೆ. ಅವರ ಕವಿತೆಗಳನ್ನು ಓದುತ್ತಿರುವಾಗ ನಿಮ್ಮ ಮುಂದೆ ಪಾದರಕ್ಷೆಗಳ ಅಂಗಡಿ ಅಥವಾ ಮಸಾಲೆಗಳ ಅಂಗಡಿ ಬರುವುದೋ, ಅಥವಾ ಒಂದು ಝರಿಯನ್ನು ಅಥವಾ ಒಂದು ಲೈಬ್ರರಿಯನ್ನು ನೋಡುವಿರಾ ಎಂದು ನಿಮಗೆ ಗೊತ್ತಿರದು. ಅವರ ಪುಸ್ತಕಗಳು ಗ್ರಹಿಕೆಗಳು ಮತ್ತು ಅನುಭವಗಳ ಸಂಕಲನವಾಗುತ್ತವೆ, ಅವು ಸದ್ದಿಲ್ಲದೆ, ಚಾತುರ್ಯದಿಂದ, ಸಂಭವನೀಯ ಜಗತ್ತನ್ನು ವಿಸ್ತರಿಸುತ್ತವೆ. ಸಾಮಾನ್ಯ ವಸ್ತು ಮತ್ತು ಪ್ರಾಪಂಚಿಕ ಸನ್ನಿವೇಶವು ಅರಿಸ್ಟಾಟಲ್‌-ನ ಪುಟಗಳನ್ನು ಒಮ್ಮೆ ಪ್ರವೇಶಿಸಿದ ಆ ಸಣ್ಣ ಕಳೆದುಹೋದ ಮುಳ್ಳುನಳ್ಳಿ ಮೀನಿನಷ್ಟು ನಿಗೂಢವಾಗಿ ಆಧ್ಯಾತ್ಮಿಕತೆಯನ್ನು ತಲುಪುತ್ತದೆ. ಕವಿಯಾಗಿ ನನ್ನ ಕಾವ್ಯಜೀವನದುದ್ದಕ್ಕೂ ನಾನು ಗುಸ್ಟಾಫ್ಸನ್ ಅವರ ಕವಿತೆಗಳಿಂದ ಕಲಿತಿದ್ದೇನೆ; ಮಾನವಳಾಗಿ ಮೂವತ್ತೈದು ವರ್ಷಗಳಿಂದ ಅವರ ಕವನಗಳಿಂದ ಭಾವುಕಳಾಗಿದ್ದೇನೆ, ಬೆಚ್ಚಿಬಿದ್ದಿದ್ದೇನೆ, ಮತ್ತು ಅವರ ಕವನಗಳ ಜತೆ ನಡೆದಿದ್ದೇನೆ.”

ನಾನು ಇಲ್ಲಿ ಕನ್ನಡ ಭಾಷೆಗೆ ಅನುವಾದಿಸಿರುವ ಲಾರ್ಸ್ ಗುಸ್ಟಾಫ್ಸನ್-ರ ಎಲ್ಲಾ ಎಂಟು ಕವನಗಳನ್ನು ಜಾನ್ ಐಯರ್ನ್ಸ-ರವರು (John Irons) ಮೂಲ ಸ್ವೀಡಿಷ್ ಭಾಷೆಯಿಂದ ಇಂಗ್ಲಿಷಿಗೆ ಅನುವಾದಿಸಿರುವರು.


ಎಲ್ಲಾ ವಿಚಿತ್ರ ಚಿಕ್ಕ ವಸ್ತುಗಳು
ಮೂಲ: All crazy small objects

ಈ ಎಲ್ಲಾ ವಿಚಿತ್ರ ಚಿಕ್ಕ ವಸ್ತುಗಳು,
ನಮ್ಮ ಜೀವನದ ಗತಿಯಲ್ಲಿ ನಮ್ಮತ್ತ ಬರುವ ವಸ್ತುಗಳು,
ಪ್ರತಿಯೊಂದು ಅದರದೇ ತಾಣದಿಂದ,
ಪ್ರತಿಯೊಂದು ಅದರದೇ ಪ್ರತೀಕದಿಂದ.
ಆರ್ಲೆಸ್-ನ ರಸ್ತೆಬದಿಯಲ್ಲಿ ದೊರಕಿದ
ಸವೆದು ತೆಳ್ಳಗಾದ ಅಲುಗಿನ,
ಸವೆದ ಮರದ ಹಿಡಿಯುಳ್ಳ
ಆ ಹಳೆಯ ಓರಣಗತ್ತಿ.
ಮಾರಿ ಲುಯ್ಸೆನ್-ಸ್ಟಾಡ್ಟ್-ನಲ್ಲಿ
ಒಂದು ಕಾಲದಲ್ಲಿ ಬರ್ಲಿನ್ ಗೋಡೆಯಿದ್ದ
ತಾಣದ ಹತ್ತಿರವಿದ್ದ ಅವನ ಸ್ಟುಡಿಯೋದಲ್ಲಿ
ಕಲಾಕಾರನೊಬ್ಬ ಹಳೆಯ ಬಾಗಿಲಹಿಡಿಗಳಿಂದ
ನನಗಾಗಿ ಬೆಸೆದ ಹಸಿರು ಬಣ್ಣಕ್ಕೆ ತಿರುಗುತ್ತಿರುವ
ಆ ಹಿತ್ತಾಳೆಯ ಶಿಲ್ಪ.

ಆ ಶಿಲ್ಪಿ ಪೂರಾ ಹುಚ್ಚನಾಗಿದ್ದ.
ಆ ಛಿದ್ರಮನಸ್ಕ ಭಾಷೆಯಿಂದ ಮಾತ್ರ
ಅವನನ್ನು ಸಂಭೋಧಿಸಬಹುದಾಗಿತ್ತು.
ಅವನ ಕಲೆ, ಏನಿಲ್ಲದಿದ್ದರೂ,
ಒಂದು ಜೇಡರಹುಳುವನ್ನು ಹೋಲುತ್ತದೆ.
ಆದರೆ ಬಲೆಯಿಲ್ಲದ ಜೇಡರಹುಳು.
ಮಗುವೊಂದು ಹಿಂದೆಂದೋ ನನಗೆ ಕೊಟ್ಟ
ಯಾವುದೋ ಕಸದಗುಪ್ಪೆಯಿಂದ ಹೆಕ್ಕಿದ
ಮೀನುಮೂತಿಯ ಬಾಯಿಯಿರುವ
ಆ ಸಣ್ಣ ನೀಲಿಬಣ್ಣದ ಶೀಶೆ.

ಸ್ವಾಭಾವಿಕವಾಗಿಯೇ, ಅವು ಮಾತಾಡಲ್ಲ.
ಅವು ಇದರ ಯಾ ಅದರ,
ಯಾವುದರ ಪ್ರತೀಕವೂ ಅಲ್ಲ.
ಅವು ಬಂದಿಳಿದಿವೆ ಆಕಾರಗಳ ಆಕಾಶದಿಂದ
ಬರೆಯುವ ಮೇಜುಗಳ ಮೇಲೆ,
ಜನ್ನಲ ಗೂಡುಗಳಲ್ಲಿ
ಸ್ವಲ್ಪ ಹೊತ್ತು ಕೂರಲು,
ಅವುಗಳ ಆಗಮನಕ್ಕೆ ನಾವು ಆಭಾರಿಯಾಗಿದ್ದೇವೆ.


ಕಬ್ಬಿಣದ್ದೆಲ್ಲ ತುಕ್ಕಾಗಲು ಹಂಬಲಿಸುತ್ತೆ
ಮೂಲ: All iron longs to become rust

ಕಬ್ಬಿಣದ್ದೆಲ್ಲ ತುಕ್ಕಾಗಲು ಹಂಬಲಿಸುತ್ತೆ,
ಅಂತ ಹೇಳಿದ ಆ ಮುದಿ ಲೋಹತಜ್ಞ.

ಅದು ಗಾಳಿಯ ಜತೆ ಕೂಡಲು ಬಯಸುತ್ತೆ,
ನದಿತಳಕ್ಕೆ ಮುಳುಗಲು ಬಯಸುತ್ತೆ,

ಕೆಮ್ಮಣ್ಣಾಗಲು ಬಯಸುತ್ತೆ. ತನ್ನ ವಿಯೋಜನೆಗಾಗಿ
ಹಂಬಲಿಸುವುದು ಕಬ್ಬಿಣ ಮಾತ್ರವಲ್ಲ.

ಆದರ್ಶರಾಜ್ಯಗಳು ಬಲಹೀನವಾಗಿ ಕುಸಿದು
ಮಾತುಗಾರಿಕೆಯಾಗಿಬಿಡುತ್ತವೆ.

ಜಂಬದ ಏಕದೇವವಾದ ಕೂಡ ತುಕ್ಕುಹಿಡಿಯುತ್ತಾ
ಹಿತವಾಗಿ ತುಂಬಿತುಳುಕುವ
ನಿರ್ನೈತಿಕ ಬಹುದೇವವಾದವಾಗುತ್ತೆ.

ಹರಿತವಾದ ಕತ್ತಿಗಳು, ಹೊಳೆಯುವ ಖಡ್ಗಗಳು,
ಭಾರಿ ಕೊಡಲಿಗಳು
ಉಳಿಯುವುದಿಲ್ಲ ಕೊನೆಯವರೆಗೂ.

ಕಬ್ಬಿಣದ್ದೆಲ್ಲ ತುಕ್ಕಾಗಲು ಶ್ರಮಿಸುತ್ತೆ.
ಅಂತ ಹೇಳಿದ ಆ ಮುದಿ ಲೋಹತಜ್ಞ.


ಕನ್ನಡಿಯೊಳಗಿನಿಂದ
ಮೂಲ: Through the looking glass

ಪ್ರಿಯೆ,
ಒಬ್ಬರಿನ್ನೊಬ್ಬರಿಂದ ದೂರ ದೂರ ಮಲಗಿದ್ದೇವೆ
ನಾವು ರಾತ್ರಿಯನ್ನಾದರೂ ಹಂಚಿಕೊಂಡಿದ್ದೇವೆ

ಮತ್ತೆ ಒಬ್ಬರನ್ನೊಬ್ಬರು ಕನಸಲ್ಲಿ ಕಾಣುತ್ತೇವೆ
ನಾನೇನಾದರೂ ಈಗ ನಿದ್ದೆಯಿಂದೆದ್ದರೆ
ನಾನಿರಲಾರೆ.

ನಿನ್ನನ್ನು ಕನಸುವ ನನ್ನನ್ನು
ನೀ ಕನಸುವೆ.

ನಾ ನಿನ್ನನ್ನು ನಿದ್ದೆಯಿಂದೆಬ್ಬಿಸಿದರೆ
ನಾನು ಅದೃಶ್ಯನಾಗುವೆ.


ಆನಂದ
ಮೂಲ: Happiness

ಮೇ ಮಾಸದಲ್ಲಿ ಯಾರೋ ಒಬ್ಬ
ಘಂಟೆಗಳ ನಾದಕ್ಕೆ ನಿದ್ದೆಯಿಂದೇಳುತ್ತಾನೆ
ತನ್ನ ಬದುಕಿನ ಎಲ್ಲಾ ಭಾನುವಾರಗಳನ್ನು
ನೆನಪಿಸಿಕೊಳ್ಳುತ್ತಾನೆ,

ಹುಷಾರಾಗಿ ಹೆಜ್ಜೆಯಿಡುತ್ತಾ ಹೊರಗೆ ತನ್ನ
ತೋಟದೊಳಗೆ ಕಾಲಿಡುತ್ತಾನೆ
ಅಲ್ಲಿ ಹಿಂದೆಂದಿಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ
ಹಕ್ಕಿಗಳಿರುವುದನ್ನು ಕಾಣುತ್ತಾನೆ

ಕೂತಿದ್ದವು ಅವು
ಹಿಂಡು ಹಿಂಡಾಗಿ ಕೊಂಬೆಗಳ ಮೇಲೆ,
ಹಿಂಡು ಹಿಂಡಾಗಿ ನೆಲದ ಮೇಲೆ,
ಆದರೋ, ಅವು ರೆಕ್ಕೆಪುಕ್ಕಗಳ ಪಟಪಟನೆಯೊಂದಿಗೆ
ಮೇಲೇರಿ ಹಾರಿ ಹೋದವು.

ಮತ್ತೂ ಶಾಂತವಾಗಿ ಹೆಜ್ಜೆಯಿಡುತ್ತಾ ಅವನು
ಒಂದು ಅಪೂರ್ವವಾದ ದಿನದೊಳಗೆ ಕಾಲಿಡುತ್ತಾನೆ.

ಹಸಿರು ಬಳ್ಳಿಮಾಡದ ಅಂತರಾಳದ ಮೂಲೆಯಲ್ಲಿ
ಅವನು ಮರುಪಡೆಯುತ್ತಾನೆ ಆನಂದವನ್ನು:
ನೆಲದೊಳಗೆ ಎರಡು ಗಾಜುಗುಂಡುಗಳು.

ಅವನು ಎರಡು-ವರ್ಷದ ಹುಡುಗನಾಗಿದ್ದಾಗ
ಅಲ್ಲಿ ಅಡಗಿಸಿಟ್ಟಿದ್ದ, ಕಳಕೊಂಡಿದ್ದ
ಆ ಎರಡು ಗಾಜುಗುಂಡುಗಳು.

ಅವುಗಳನ್ನು ಅವತ್ತಿನಿಂದಲೂ ಮರುಪಡೆಯಲು
ಅಥವಾ ನೆನಪಿಸಿಕೊಳ್ಳಲು ಸಾಧ್ಯವಾಗಲೇ ಇಲ್ಲ,
ಇಲ್ಲಿಯ ತನಕ,
ಈ ಅನುಕೂಲದ ಕ್ಷಣದ ತನಕ,

ಅವನಿಗೆ ಇದುವೇ ಆನಂದವಾಗಿತ್ತು:
ಅಲ್ಲಿ ಕೂತಿದ್ದವು ಅವು,
ಸ್ಪಷ್ಟವಾಗಿ ಕಾಣುತ್ತಿವೆ ಮತ್ತೊಮ್ಮೆ,

ಈಗಲೂ ಅಸ್ಪರ್ಶಿತ.
ಈ ಬೆಚ್ಚಗಿನ ಬೆಳಕಿನಲ್ಲಿ ಹೇಗೆ ಹೊಳೆಯುತ್ತಿವೆ ಅವು!


ಪರಿಸ್ಥಿತಿಗಳು
ಮೂಲ: The Conditions

ಅಲ್ಲಿರುವ ಎರಡು ಹಳದಿ ಬಣ್ಣದ ಮನೆಗಳು
ನೋಟವನ್ನು ಮರೆಸುತ್ತಿದ್ದವು.
ಆದರೆ ಅವುಗಳ ಹಿಂದೆ, ಒಂದು ರಸ್ತೆಯ,
ಬೆಟ್ಟದ ಹಸಿರು ತಪ್ಪಲಿನ ನಸುನೋಟಗಳು,

ದೂರ, ದೂರದವರೆಗೆ ನಿಶ್ಚಲತೆ
ಎಷ್ಟೆಂದರೆ ಗಾಳಿ ನಿಂತಲ್ಲಿ ಕಂಪಿಸುತ್ತಿತ್ತು.
ಆಗ, ಇದ್ದಕ್ಕಿದ್ದಂತೆ ಅಲ್ಲಿ ಕೆಲ ಜನರು ಕಂಡರು,
ಕೆಂಪು ಜರ್ಸಿಗಳನ್ನು ತೊಟ್ಟಿದ್ದರು.

ಇದು ಎಷ್ಟು ಬೇಗ ನಡೆದುಹೋಯಿತೆಂದರೆ
ಅವರು ಮನಸ್ಸಿನಿಂದ ಮಾಯವಾದರು,
ಆದರೆ ಒಂದು ರೇಸಿನ ದೃಶ್ಯದ ತುಣುಕಿನ
ಹಾಗೆ ಮರಳಿದರು

ಅದರ ಆರಂಭ ಹಾಗೂ ಅಂತ್ಯ ಹೀಗೇ
ನಿರಾಶೆ ಹುಟ್ಟಿಸುವಷ್ಟು ದೃಷ್ಟಿಯಿಂದ ಮರೆಯಾಗಿದೆ.

ಅಸ್ಪಷ್ಟವಾದ ರೇಸಿನ ಪಥದಲ್ಲಿ ಸೈಕಲ್ ಸವಾರರ ಹಾಗೆ,
ಸಂದರ್ಭವೇ ಇಲ್ಲದಂತೆ,
ಅಂದರೆ, ಮೊದಲನೆಯವನು ಕೊನೆಯವನಾಗಿರಬಹುದು
ಅಥವಾ ಇದರ ವಿಪರ್ಯಾಯವಾಗಿಯೂ ಇರಬಹುದು.
ದೃಷ್ಟಿಯಿಂದ ಮರೆಯಾಗಿ ಇಲ್ಲದಿರುವವರೆಗೂ ಇದರ ಇರುವಿಕೆ.

ಆಮೇಲೆ ಒಂದು ಟ್ರೈನು ಹಾದು ಹೋಯಿತು,
ತನ್ನ ಎಲ್ಲಾ ಕಿಟಕಿಗಳನ್ನು ತೆರೆದುಕೊಂಡು ಬೆಸಿಗೆಯ ಉದ್ದಕ್ಕೂ:
ಸುಭದ್ರವಾದ ಸಮಯದ ಒಂದು ಗಾಢವಾದ ನೆನಪು.

ಎಷ್ಟೊಂದು ಮುಕ್ತವಾದ ನಿಸರ್ಗದೃಶ್ಯ, ರಸ್ತೆಗಳು,
ಬೀಸುವ ಕೈಗಳು!

ಮತ್ತೆ, ಓದುತ್ತಿದ್ದ ಪುಸ್ತಕದಿಂದ ನಾನು ತಲೆಯೆತ್ತಿ ನೋಡಿದಾಗ
ಕಿಟಕಿಗಳೆಲ್ಲ ಕತ್ತಲಾಗಿದ್ದವು,
ಥಟ್ಟನೆ ಬೀಸಿದ ಗಾಳಿಗೆ ಒಳಮುಖವಾಗಿ
ಪಟಪಟಿಸುತ್ತಿದ್ದವು ಪರದೆಗಳು.

ನಾನು ನೋಡಿದೆ, ನೋಡುತ್ತಲಿದ್ದೆ. ಚಿರಕಾಲ
ಹೀಗೇ ನೋಡುತ್ತಾ ಇದ್ದಿರಬಹುದು.

ಆಗ ಅರಿತೆ ನಾನು
ಇಂತಹ ವಸ್ತುಗಳಿಂದಲೇ ಮಾಡಲ್ಪಟ್ಟಿವೆ
ಎಲ್ಲಾ ದಿನಗಳೂ.


ಮಳೆಯ ನಂತರ
ಮೂಲ: After Rain

ಬೇಸಿಗೆ ಮಳೆಯ ನಂತರ ಆಕಾಶ ಒಂದು ಎಕ್ಸ್-ರೇ ಚಿತ್ರದ ಹಾಗೆ,
ಹಾಯುತ್ತಿರುತ್ತವೆ ಅಲ್ಲಿ ಬೆಳಕು ಹಾಗೂ ಮಸುಕು ಛಾಯೆಗಳು.
ಕಾಡು ಶಾಂತವಾಗಿದೆ, ಒಂದೇ ಒಂದು ಹಕ್ಕಿ ಸಹ ಕಾಣಿಸುತ್ತಿಲ್ಲ.
ನಿನ್ನದೇ ಕಣ್ಣು ಮೋಡಗಳ ಕೆಳಗೆ
ಒಂದು ತೊಟ್ಟಿಕ್ಕಿದ ಹನಿಯ ಹಾಗೆ ಕಾಣುತ್ತಿದೆ,
ಈ ಭೂಲೋಕವನ್ನು ಪ್ರತಿಬಿಂಬಿಸುತ್ತಿದೆ:
ಬೆಳಕು ಮತ್ತು ಮಸುಕು ಛಾಯೆಗಳು.
ಮತ್ತೆ ಹಠಾತ್ತಾಗಿ ನೀನು ನಿಜವಾಗಿ
ಯಾರೆಂಬುದನ್ನು ನೀನು ಕಾಣುವೆ:
ಆತ್ಮ ಮತ್ತು ಮೋಡಗಳ ಮಧ್ಯೆ ಒಬ್ಬ ದಿಕ್ಕುತಪ್ಪಿದ ಆಗಂತುಕ,
ಮಾತ್ರ ಒಂದು ಚಿತ್ರದ ತೆಳುವಾದ ಪದರಿನಿಂದ
ಭೂಲೋಕದ ಆಳವಾದ ಕತ್ತಲು ಮತ್ತು
ಕಣ್ಣಿನ ಕತ್ತಲನ್ನು ಬೇರ್ಪಡಿಸಿ ಇಡಲಾಗಿದೆ.


ಈಲ್ ಮೀನು ಮತ್ತು ಬಾವಿ
ಮೂಲ: The Eel and the Well

ಹಳೇಕಾಲದ ಸ್ಕ್ಯಾನಿಯಾ ಪ್ರಾಂತದಲ್ಲಿ
ಒಂದು ಸಂಪ್ರದಾಯವಿತ್ತು:
ಸಮುದ್ರದ ಮರಿ ಈಲ್ ಮೀನುಗಳನ್ನು ಹಿಡಿದು
ಬಾವಿಗಳ ಕತ್ತಲ ಆಳದೊಳಕ್ಕೆ ಇಳಿಬಿಡುತ್ತಿದ್ದರು.
ಈ ಈಲ್ ಮೀನುಗಳು ಆಮೇಲೆ ತಮ್ಮ ಇಡೀ ಜೀವನವನ್ನು
ಈ ಆಳ ಬಾವಿಗಳ ಕತ್ತಲೆಯ ಸೆರೆಯಲ್ಲಿ ಕಳೆಯುತ್ತಿದ್ದವು.
ಅವು ನೀರನ್ನು ಸ್ಫಟಿಕ-ನಿರ್ಮಲವಾಗಿ, ಶುಚಿಯಾಗಿಡುತ್ತಿದ್ದವು.
ಕೆಲವೊಮ್ಮೆ ಬಾವಿಯ ಈಲ್ ಮೀನೊಂದು ಮೇಲಕ್ಕೆ ಬರುವುದು,
ಬಿಳಿಯಾಗಿ, ಭಯಂಕರವಾಗಿ, ಬಕೇಟಿನಲ್ಲಿ ಸಿಕ್ಕಿಬಿದ್ದು,
ಕಣ್ಣುಕಾಣಿಸಿದೆ, ತನ್ನ ದೇಹದ ಒಗಟುಗಳ
ಒಳ ಹೊರ ಸುರುಳುತ್ತಾ, ಅರಿವಿರದೆ,
ಎಲ್ಲರೂ ಸೇರಿ ಅವಸರವಸರವಾಗಿ
ಅದನ್ನು ಮತ್ತೆ ಬಾವಿಯಲ್ಲಿ ಮುಳುಗಿಸುವರು.
ಅನೇಕಸಲ ಆ ಈಲ್ ಮೀನಿನ ಸ್ಥಾನದಲ್ಲಿ
ನಾನಿರುವಂತೆ ಅನಿಸುತ್ತದೆ ನನಗೆ,
ಮಾತ್ರವಲ್ಲ
ಏಕಕಾಲದಲ್ಲಿ ನಾನು ಈಲ್ ಮೀನಾಗಿಯೂ
ಬಾವಿಯಾಗಿಯೂ ಇರುವೆನೆಂದು ಅನಿಸುತ್ತದೆ.
ನಾನು ನನ್ನೊಳಗೇ ಸೆರೆಯಾಗಿರುವೆ,
ಆದರೆ ಈ ಆತ್ಮ ಆಗಲೇ ಬೇರೆ ಏನೋ ಆದಂತಿದೆ.
ನಾನು ಇರುವೆನು ಅಲ್ಲಿ.
ಮತ್ತೆ, ತೊಳೆದು ಶುಚಿಯಾಗಿಸುತ್ತಿರುವೆನು,
ನನ್ನ ಸುರುಳುತ್ತಿರುವ, ಜವುಗಿನಂತ,
ಬಿಳಿ-ಹೊಟ್ಟೆಯ ಇರುವಿಕೆಯಲ್ಲಿ, ಕತ್ತಲೆಯಲ್ಲಿ.


ಶಾಂತ
ಮೂಲ: Smoothness

ಹುಟ್ಟಿನ ಕೇವಲ ಒಂದು ಬೀಸಿನಿಂದ
ಕದಡಬಹುದಾದಂತಹ
ನಿಶ್ಚಲತೆ ಈಗ ಇಲ್ಲಿ ವ್ಯಾಪಿಸಿದೆ.
ಮೆಲ್ಲ ಮೆಲ್ಲನೆ ತಣಿಯುವ ಋತುವಿದು.
ಸರಪಳಿಯನ್ನು ಮೇಲಕ್ಕೆಳೆಯುವ,
ಅದನ್ನು ದೋಣಿಯ ತಳದಲ್ಲಿ ಇಡುವ ಸದ್ದು.
ಈ ಪ್ರತಿಫಲಿಸುವ ಮೇಲ್ಪದರಿನ ವಿಲಕ್ಷಣವಾದ
ಮಹಾ ಶಾಂತತೆಯನ್ನು ಭಂಗಿಸುವೆನೆಂಬ ಭಯದಿಂದ
ನನ್ನ ಹುಟ್ಟನ್ನು ನಾನು ಗಾಳಿಯಲ್ಲೇ ತಾಳಿಸಿಟ್ಟೆರುವೆ.