”ಆದರೆ ನಿಜಕ್ಕೂ ನಂತರದ ದಿನಗಳಲ್ಲಿ ಅಲ್ಲೊಂದು ಪವಾಡವೇ ನಡೆದುಹೋಯಿತು.ಅದುವರೆಗೆ ಒಂದೇ ಒಂದೂ ಮಾತನಾಡದ ಅಜ್ಜ-ಅಮ್ಮುಮ್ಮ ಇಬ್ಬರೂ ಮಾತನಾಡತೊಡಗಿದರು. ಎಲ್ಲಕ್ಕಿಂತ ಮುಖ್ಯವಾಗಿ ಅಮ್ಮುಮ್ಮ ಈಗೀಗ ಗೋಡೆ ಬಳಿ ಹೋಗುತ್ತಿರಲಿಲ್ಲ. ಅಜ್ಜನ ಹತ್ತಿರವೇ ಮಾತನಾಡುತ್ತಿದ್ದಳು. ಪ್ರೀತಿಯಿಂದ ಚಹಾ ಮಾಡಿ ತನ್ನ ಕೈಯಾರೆ ಅವನಿಗೆ ತಂದುಕೊಡುತ್ತಿದ್ದಳು. ಹೆಬ್ಬಾಗಿಲ ಕಟ್ಟೆಯ ಮೇಲೆ ಕೂತು ಅಜ್ಜನಿಗೆ ಅಂಬಾಡಿ ಎಲೆಗೆ ತುಸುವೇ ಸುಣ್ಣ ಹಚ್ಚಿ ಕವಳ ತಯಾರಿಸಿ ಅವನ ಬಾಯಿಗಿಡುತ್ತಿದ್ದಳು”
ಪತ್ರಕರ್ತೆ ಭಾರತಿ ಹೆಗಡೆ ಬರೆಯುವ ಸಿದ್ದಾಪುರ ಸೀಮೆಯ ಕಥೆಗಳ ಮೂರನೆಯ ಕಂತು.

 

“ಅವನು ಇಲ್ಲಿರುವನೇ.. ಈ ಕಂಬದಲ್ಲಿಯೂ ಇರುವನೇ.. ಇಲ್ಲಿ.. ಇಲ್ಲಿ..’ ಎಂದು ಪ್ರತಿ ಕಂಬವನ್ನು ತನ್ನ ಗದೆಯಿಂದ ಒಡೆಯುವ ಭಕ್ತ ಪ್ರಹ್ಲಾದ ಸಿನಿಮಾದಲ್ಲಿ ಬರುವ ಹಿರಣ್ಯಕಶುಪುವಿನ ಹಾಗೆ, “ಅಲ್ಲಿಯೂ ಇರುವನು ತಂದೆಯೇ” ಎಂದು ಪ್ರತಿ ಕಂಬದಲ್ಲೂ ಶ್ರೀಹರಿಯನ್ನು ಕಾಣುತ್ತೇನೆಂಬ ಬಲವಾದ ನಂಬಿಕೆಯುಳ್ಳ ಪ್ರಹ್ಲಾದನ ಹಾಗೆ, ಯಾವುದಾದರೂ ಒಂದು ಕಂಬದಲ್ಲಿ, ಕಂಬ ಒಡೆದು ಉದ್ಭವಿಸುವ ನರಸಿಂಹನ ಹಾಗೆ ಈ ಮನೆಯ ಗೋಡೆಗಳಲ್ಲೂ ಇಂಥ ಒಂದು ನರಸಿಂಹನಥರದ್ದೇನಾದರೂ ಎಂದಾದರೂ ಉದ್ಭವಿಸಬಹುದಾ? ಈ ಮನೆಯ ಗೋಡೆಗಳೊಳಗೆ ಯಾರಾದರೂ ಮನುಷ್ಯರು ಸಿಕ್ಕಿಕೊಂಡಿದ್ದಾರಾ, ಅವರೆಂದಾದರೂ ಗೋಡೆಯೊಡೆದು ಧುತ್ತೆಂದು ಎದುರು ನಿಂತುಬಿಡುತ್ತಾರಾ ಎಂದು ಬಲವಾಗಿ ಅನಿಸುವುದಕ್ಕೆ ಕಾರಣಗಳಿದ್ದವು.

ಆ ಮನೆಯ ಅಮ್ಮುಮ್ಮ ಗೋಡೆಯೊಂದಿಗೆ ಸದಾ ಮಾತನಾಡುತ್ತಿದ್ದಳು. ಅವಳೆಂದೂ ಅಜ್ಜನ ಹತ್ತಿರ ನೇರವಾಗಿ ಮಾತನಾಡಿದ್ದೇ ಕಾಣೆ. ಮನೆಗೆ ಯಾರಾದ್ರೂ ನೆಂಟರು ಬಂದರೆ, ಅಜ್ಜ, ಅಲ್ಲಿರುವ ಯಾವುದಾದರೂ ಚಿಕ್ಕ ಮಕ್ಕಳ ಹತ್ತಿರ “ನಿನ್ನ ಅಮ್ಮುಮ್ಮಂಗೆ ಹೇಳು, ಚಾ ಮಾಡವಡ ಹೇಳಿ” ಎಂದರೆ, ಅವಳು ಮಾತ್ರ ಗೋಡೆ ಕಡೆ ತಿರುಗಿ “ಚಾ ಬೇಕ ಎಂತದೇನ..” ಎಂದು ಕೇಳುತ್ತಿದ್ದಳು. ಹೀಗೆ ಚಾ ಬೇಕಾ, ಊಟಕ್ಕೆ ಬನ್ನಿ, ತಿಂಡಿಗೆ ಬನ್ನಿ, ಮಜ್ಜಿಗೆ ಬೇಕಾ ಎಂಬಲ್ಲಿಂದ ಶುರುವಾಗಿ, ತಲೆನೋವಿದ್ದರೆ, ಜ್ವರ ಬಂದರೆ ಕಷಾಯ ಮಾಡಕ್ಯ ಬರವ ಎಂದೂ ಗೋಡೆಯ ಬಳಿಯೇ ಕೇಳುತ್ತಿದ್ದಳು. ಹಾಗೆ ಕರೆದಾಗಲೆಲ್ಲ ಅದು ತನಗೆಯೇ ಎಂದು ಭಾವಿಸುತ್ತಿದ್ದ ಅಜ್ಜ.

ಅವರ ಮನೆಯ ಗೋಡೆಯನ್ನು ಎಂತದ್ರಿಂದ ಮಾಡಿದ್ದಾರೆ. ನಮ್ಮಮಾತು ಕೇಳುವ ಹಾಗೇನಾದರೂ ವಿಶೇಷ ವಸ್ತುವನ್ನು ಸೇರಿಸಿ ಕಟ್ಟಿದ್ದಾರಾ ಎಂದೆಲ್ಲ ಚಿಕ್ಕವರಿರುವಾಗ ನಮಗೆ ಅನಿಸುತ್ತಿತ್ತು. ಗೋಡೆಗೂ ಅವಳಿಗೂ ಎಷ್ಟು ಸಖ್ಯವೆಂದರೆ, ಅಡುಗೆ ಮನೆಯಲ್ಲಿ ಕೆಲಸ ಮಾಡುತ್ತಿದ್ದಾಗಲೂ ತಕ್ಷಣ ಆ ಕೆಲಸ ನಿಲ್ಲಿಸಿ ನಡುಮನೆಯ ಗೋಡೆಯ ಬಳಿ ನಿಂತು ಏನೇನೋ ಹೇಳುವಷ್ಟು ಆ ಗೋಡೆ ಅವಳನ್ನು ಕರೆಯುತ್ತಿತ್ತು. ಸಿದ್ದಾಪುರದಿಂದ ಸ್ವಲ್ಪವೇ ದೂರವಿರುವ, ಗೀಜಗೋಡಿನ ಆ ಅಜ್ಜನ ಮನೆಗೂ ನಮಗೂ ಯಾವ ಸಂಬಂಧ ಎಂಬುದು ಖಂಡಿತ ನನಗೆ ಗೊತ್ತಿರಲಿಲ್ಲ. ಆದರೆ ಸಂಬಂಧಕ್ಕಿಂತಲೂ ಇಬ್ಬರ ಮನೆಗೂ ನಡಪತ್ತು ಹೆಚ್ಚಾಗಿತ್ತು. ಅವರು ಸಿದ್ದಾಪುರದಲ್ಲಿ ವಾರಕ್ಕೊಮ್ಮೆ ನಡೆಯುವ ಸಂತೆಗೆ ಬಂದಾಗಲೆಲ್ಲ ನಮ್ಮಮನೆಗೆ ಭೇಟಿ ನೀಡಿಯೇ ಹೋಗುತ್ತಿದ್ದರು. ನಾವು ಕೂಡ ಅವರ ಮನೆಗೆ ಹೋಗಿ ವಾರಗಟ್ಟಲೆ ಉಳಿಯುತ್ತಿದ್ದುದುಂಟು. ಹಾಗೆ ಹೋದಾಗಲೆಲ್ಲ ನನಗೆ ತುಂಬ ಕುತೂಹಲವಿದ್ದದ್ದು ಅಮ್ಮುಮ್ಮ ಮಾತನಾಡುವ ಆ ಗೋಡೆ.

ಜೊತೆಗೆ ಅವಳಿಗೊಂದು ವಿಚಿತ್ರ ಕಾಯಿಲೆ ಇತ್ತು. ಅವಳು ಏನಾದರೂ ಕೆಲಸ ಮಾಡುವಾಗ ನಡುನಡುವೆ ಏ… ಏ… ಎಂದು ಕೂಗುತ್ತ ಮತ್ತೆ ಮತ್ತೆ ಕುಟ್ಟುತ್ತಿದ್ದಳು. ಬೆಳಗ್ಗೆ ಹೊಸ್ತಿಲು ಒರೆಸುವಾಗ ಆ ಒರೆಸುವ ಬಟ್ಟೆಯಲ್ಲೇ ಹೊಸ್ತಿಲು ಪಟ್ಟಿಯನ್ನು ಕುಟ್ಟುತ್ತಿದ್ದಳು. ಪಾತ್ರೆ ತೊಳೆಯುವಾಗ ಪಾತ್ರೆ ಉಜ್ಜುತ್ತಿದ್ದ ಹಾಗೆಯೇ ಪಾತ್ರೆಯನ್ನೇ ಏ.. ಏ.. ಎನ್ನುತ್ತಾ ಕಲ್ಲಿಗೆ ಕುಟ್ಟುತ್ತಿದ್ದಳು. ಎರಡೂ ಕಡೆ ಹಲ್ಲಿರುವ ಬಾಚಣಿಗೆಯಿಂದ ತಲೆಬಾಚುವಾಗ ತನ್ನ ತಲೆಗೆ ತಾನೇ ಏ.. ಏಹ್… ಎಂದು ಶಬ್ದ ಮಾಡುತ್ತ ಕುಟ್ಟಿಕೊಳ್ಳುತ್ತಿದ್ದಳು. ಮೊದಮೊದಲು ನಮಗೆ ಇವೆಲ್ಲ ವಿಚಿತ್ರವೆನಿಸುತ್ತಿತ್ತು.

ಏಳೋ… ಹತ್ತೋ.. ಎಷ್ಟಂಕಣದ ಮನೆಯೆಂದೂ ಗೊತ್ತಾಗದಷ್ಟು ದೊಡ್ಡದಾದ ಆ ಮನೆಯಲ್ಲಿ ಚಿಕ್ಕ ಚಿಕ್ಕಕೋಣೆಗಳು ಹೆಚ್ಚಿದ್ದವು. ದೊಡ್ಡದಾದ ಪಾಗಾರ, ನಡುವೆ ಅಂಗಳ, ನಂತರ ಜಗುಲಿ, ಜಗುಲಿ ತುಂಬ ಇರುವ ಮರದ ಕಪ್ಪು ಕಂಬಗಳು, ಹೂವುಗಳ ಚಿತ್ತಾರದ ಮರದ ಪ್ರಧಾನ ಬಾಗಿಲು, ಬಾಗಿಲಿಗೆ ಹಿತ್ತಾಳೆಯ ಬಳೆಯಾಕಾರದ ದೊಡ್ಡ ಹಿಡಿಕೆ, ಬಾಗಿಲು ತೆರೆದರೆ ಎರಡೂ ಕಡೆ ಏನಿದೆ ಎಂದೂ ಗೊತ್ತಾಗದಷ್ಟು ಕತ್ತಲು ಕೋಣೆ, ಅಂದರೆ ಅದೇ ನಡುಮನೆ, ಅದನ್ನು ದಾಟಿದರೆ ದೇವರ ಮನೆ, ನಂತರ ದೊಡ್ಡದಾದ ಅಡುಗೆ ಮನೆ. ನಮಗೆ ಅಂದರೆ ಆ ಮನೆಯ ಮೊಮ್ಮಕ್ಕಳು ಸೇರಿ ನಾವು ನಾಲ್ಕೈದು ಹುಡುಗರಿಗೆ ಸದಾ ಕುತೂಹಲವಿದ್ದದ್ದು ನಡುಮನೆಯ ಗೋಡೆ. ದೇವರ ಮನೆಗೆ ತಾಕಿದಂತಿದ್ದ ನಡುಮನೆಯಲ್ಲಿ ನಿಂತು ಗೋಡೆಯ ಕಡೆಗೆ ತಿರುಗಿ ಅಮ್ಮುಮ್ಮ ಒಮ್ಮೊಮ್ಮೆ ದೊಡ್ಡದಾಗಿ, ಒಮ್ಮೊಮ್ಮೆ ಒಳಬಾಯಲ್ಲೇನೋ ಮಣಮಣ ಹೇಳುತ್ತಿದ್ದಳು. ಯಾರಿಗಾದರೂ ಶಾಪ ಹಾಕುತ್ತಿದ್ದಳಾ ಎಂದುಕೊಂಡು ಅವಳ ಹಿಂದೆಯೇ ದೂರದಲ್ಲಿ ನಿಂತು ನೋಡುತ್ತಿದ್ದೆವು.

ಆದರೆ ಅಮ್ಮುಮ್ಮ ಏ… ಏ.. ಎಂದು ಇಲ್ಲಿ ನೆಲ ಕುಟ್ಟುವ ಹಾಗೆಯೇ ಕುಟ್ಟಿ, ನಿಧಾನಕ್ಕೆ ಗೋಡೆಯನ್ನು ಸವರುತ್ತ ನಿಲ್ಲುತ್ತಿದ್ದಳು. “ಚಾ.. ಬೇಕ ನಿಂಗಕ್ಕಿಗೆ. ಯಾಲಕ್ಕಿ ಹಾಕಿ ಚಾ ಮಾಡಕ್ಯ ಬರ್ಲಾ…’ ಎಂದು ಕೇಳುತ್ತಿದ್ದಳು ಅಲ್ಲಿ ಯಾರೋ ಇದ್ದಾರೆಂದುಕೊಂಡು. “ತಡೀರಿ.. ಈಗ್ಲೇ ಮಾಡಕ್ಯ ಬತ್ತಿ. ಎಲ್ಲೂ ಹೋಗಡಿ….’ ಎಂದು ಹೇಳಿ ಸೀದಾ ಅಡುಗೆ ಮನೆಗೆ ಬಂದವಳು ಸರಸರನೆ ಚಹಾ ಮಾಡುತ್ತಿದ್ದಳು. ಆ ಸಮಯದಲ್ಲಿ ನಾವು ತಕ್ಷಣ ಗೋಡೆ ಹತ್ರ ಹೋದ್ರೆ ಅಲ್ಯಾರೂ ಇರುತ್ತಿರಲಿಲ್ಲ. ಅರೆ.. ಮತ್ತೆ ಅಮ್ಮುಮ್ಮ ಯಾರ್ಹತ್ರ ಮಾತಾಡ್ತಿದ್ದಳು. ಗೋಡೆಗೇನಾದ್ರೂ ಕಿಟಕಿ ಇದ್ಯಾ, ಕಿಟಕಿಯಿಂದ ಯಾರಾದರೂ ಬಂದು ಮಾಯವಾಗಿ ಹೋದರಾ ಎಂದುಕೊಂಡರೆ ಆ ಗೋಡೆಗೆ ಕಿಟಕಿಯೇ ಇರಲಿಲ್ಲ. ಹಾಗಿದ್ದರೆ ಅಮ್ಮುಮ್ಮ ಯಾರಹತ್ರ ಹಾಗೆಲ್ಲ ಮಾತನಾಡುತ್ತಿದ್ದಳು? ಯಾಕೆ ಹಾಗೆ ಮಾತನಾಡುತ್ತಿದ್ದಳು? ಹಾಗೆ ನೋಡಿದರೆ ಅದು ಶ್ರೀಮಂತರ ಮನೆ. ಅಮ್ಮುಮ್ಮನೂ ಸಾಕಷ್ಟು ಶ್ರೀಮಂತರ ಮನೆಯಿಂದಲೇ ಬಂದವಳು. ನಗನಾಣ್ಯಗಳ ಜೊತೆಗೆ ಅವಳಿಗೆ ಜಮೀನನ್ನೂ ನೀಡಿದ್ದರು ಅವಳ ತವರುಮನೆಯಲ್ಲಿ. ಅವಳ ಪಾಲಿಗೆ ಬಂದ ಒಂದಷ್ಟು ಜಮೀನನ್ನೂ ಅಜ್ಜನೇ ನೋಡಿಕೊಳ್ಳುತ್ತಿದ್ದ.

ಕಣ್ಣುಕುಕ್ಕುವಷ್ಟು ಸುಂದರಿಯಾಗಿದ್ದ ಅಮ್ಮುಮ್ಮನಿಗೂ ಕಪ್ಪಗೆ ತೊಳೆದಿಟ್ಟ ಯಜ್ಞೇಶ್ವರನ ಹಾಗಿರುವ ಅಜ್ಜನೊಂದಿಗೆ ಹೇಗೆ ಮದುವೆಯಾಯಿತು ಎಂಬುದೇ ಸೋಜಿಗ. ಗಂಡಸೇನು ಹೇಗಿದ್ದರೂ ನಡೆಯುತ್ತಿತ್ತಲ್ಲ. ಅದೂ ಆಕಾಲದಲ್ಲಿ ಹೆಣ್ಣನ್ನು ಕೇಳುವವರಾದರೂ ಯಾರಿದ್ದರು?

ಅಮ್ಮುಮ್ಮ, ನಿನ್ನ ಮದುವೆ ಯಾವಾಗಾಯ್ತು, ಮದುವೆಗಿಂತ ಮುಂಚೆ ನೀ ಅಜ್ಜನ್ನ ನೋಡಿದ್ಯ ಎಂದು ಕೇಳಿದ್ರೆ ಇಲ್ಯಪ್ಪಾ.. ಆಗೆಲ್ಲ ಎಂತ ನೋಡದು? ಎಂದು ತುಸುವೇ ನಾಚಿಕೊಂಡು ಕೆಲಸದಲ್ಲಿ ಮಗ್ನಳಾಗುತ್ತಿದ್ದಳು. ಹೀಗೆ ಅದೆಷ್ಟನೇ ವಯಸ್ಸು ಎಂದು ತಿಳಿಯದ ವಯಸ್ಸಲ್ಲಿ ಅವಳ ಮದುವೆಯಾಗಿ ಈ ಮನೆಗೆ ಬಂದವಳು ಬಹುಶಃ ಮತ್ತೆಲ್ಲೂ ಹೋಗಿದ್ದು ಸುಳ್ಳು. ಇಡೀ ದಿನ ಮನೆಗೆಲಸ, ಅಜ್ಜ ಮಕ್ಕಳ ಸೇವೆ, ಕೊಟ್ಟಿಗೆ ಕೆಲಸ ಇವುಗಳಲ್ಲೇ ಸರಿದುಹೋಗುತ್ತಿತ್ತು ಅವಳ ಬದುಕು. ಇಂಥ ಶ್ರೀಮಂತೆ,  ಸುಂದರಿ, ಯಾವ ಆಳಿಗೂ ಕಡಿಮೆ ಇರದಂತೆ ಮನೆಗೆಲಸ ಮಾಡುತ್ತಿದ್ದ, ಇಡೀ ಮನೆಯನ್ನು ಪೈಟ್ ಆಗಿಟ್ಟುಕೊಳ್ಳುತ್ತಿದ್ದ ಅಮ್ಮುಮ್ಮ ಯಾಕೆ ಗೋಡೆಹತ್ರ ಮಾತನಾಡುತ್ತಿದ್ದಳು. ಯಾಕೆ ನೆಲ ಕುಟ್ಟುತ್ತಿದ್ದಳು. ಯಾಕೆ ತನ್ನ ತಲೆಯನ್ನೇ ಬಾಚಣಿಗೆಯಲ್ಲಿ ಕುಟ್ಟಿಕೊಳ್ಳುತ್ತಿದ್ದಳು? ಅಜ್ಜ ಯಾಕೆ ಅಮ್ಮುಮ್ಮನ ಹತ್ರ ಮಾತನಾಡುತ್ತಿರಲಿಲ್ಲ.. ಎಂಬೆಲ್ಲ ಪ್ರಶ್ನೆಗಳು ನಮ್ಮಲ್ಲಿ ಏಳುತ್ತಿದ್ದವು ಅಷ್ಟೆ.

ಅವರ ಮನೆಯ ಗೋಡೆಯನ್ನು ಎಂತದ್ರಿಂದ ಮಾಡಿದ್ದಾರೆ. ನಮ್ಮಮಾತು ಕೇಳುವ ಹಾಗೇನಾದರೂ ವಿಶೇಷ ವಸ್ತುವನ್ನು ಸೇರಿಸಿ ಕಟ್ಟಿದ್ದಾರಾ ಎಂದೆಲ್ಲ ಚಿಕ್ಕವರಿರುವಾಗ ನಮಗೆ ಅನಿಸುತ್ತಿತ್ತು. ಗೋಡೆಗೂ ಅವಳಿಗೂ ಎಷ್ಟು ಸಖ್ಯವೆಂದರೆ, ಅಡುಗೆ ಮನೆಯಲ್ಲಿ ಕೆಲಸ ಮಾಡುತ್ತಿದ್ದಾಗಲೂ ತಕ್ಷಣ ಆ ಕೆಲಸ ನಿಲ್ಲಿಸಿ ನಡುಮನೆಯ ಗೋಡೆಯ ಬಳಿ ನಿಂತು ಏನೇನೋ ಹೇಳುವಷ್ಟು ಆ ಗೋಡೆ ಅವಳನ್ನು ಕರೆಯುತ್ತಿತ್ತು.

ಅದನ್ನು ಪ್ರಶ್ನಿಸುವವರಾರೂ ಇರಲಿಲ್ಲ. ಆರಡಿ ಎತ್ತರದ ಕಪ್ಪಗೆ ಇದ್ದ ಅಜ್ಜನ ದರ್ಪದ ಮುಂದೆ ಮೂರಡಿಯ ಬೆಳ್ಳಗೆ ಇರುವ ಅಮ್ಮುಮ್ಮ ಗುಬ್ಬಚ್ಚಿಯಂತಾಗುತ್ತಿದ್ದಳು. ಇಡೀದಿನ ಮನೆಗೆಲಸ ಬಿಟ್ಟರೆ ಬೇರೇನೂ ಮಾಡುತ್ತಿರಲಿಲ್ಲ. ಮನೆಯನ್ನು ತುಂಬ ಸ್ವಚ್ಛವಾಗಿಡಬೇಕಾಗಿತ್ತು ಅವರ ಮನೆಯಲ್ಲಿ. ಅವರ ಮನೆಯ ಸ್ವಚ್ಛತೆ ಎಷ್ಟಿತ್ತೆಂದರೆ, ಅವರ ಮನೆಯ ಕಡವಾರ ( ಅಂದರೆ ಮಲೆನಾಡುಗಳಲ್ಲಿ ಪ್ರತಿ ಮನೆಗಳಿಗೂ ಬಚ್ಚಲು ಮತ್ತು ಪಾತ್ರೆ ತೊಳೆದ ನೀರು ಹೋಗಲು ಮಾಡಿಕೊಂಡ ಚರಂಡಿ ವ್ಯವಸ್ಥೆ) ಕೂಡ ನಮ್ಮನೆ ಅಡುಗೆ ಮನೆಗಿಂತಲೂ ಚೊಕ್ಕವಾಗಿರುತ್ತಿತ್ತು ಎಂದು ನೆಂಟರಿಷ್ಟರ ಮನೆಯ ಹೆಂಗಸರೆಲ್ಲ ಮಾತನಾಡಿಕೊಳ್ಳುವಷ್ಟು ಅವರ ಮನೆಚೊಕ್ಕವಾಗಿರುತ್ತಿತ್ತು. ಸದಾ ಅವಳ ಸೀರೆಯ ನೆರಿಗೆ ಮತ್ತು ಸೆರಗು ಎರಡನ್ನೂ ಎತ್ತಿ ಸೊಂಟಕ್ಕೆ ಸಿಕ್ಕಿಸಿಕೊಂಡು ಕೆಲಸಕ್ಕೆ ಅಣಿಯಾದವಳಂತೆ ಇರುತ್ತಿದ್ದಳು. ಹೀಗೆ ಅಜ್ಜ-ಅಮ್ಮುಮ್ಮ ಮಾತನಾಡಿಕೊಳ್ಳದಿದ್ದರೇನಂತೆ. ಮಕ್ಕಳು ಮಾತ್ರ ದಂಡಿಯಾಗಿ ಹುಟ್ಟಿದವು. ಮೂವರು ಹೆಣ್ಣುಮಕ್ಕಳು, 5 ಗಂಡುಮಕ್ಕಳ ತಾಯಿಯಾದ ಅಮ್ಮುಮ್ಮನಷ್ಟು ಚೆಂದ ಮಕ್ಕಳ್ಯಾರೂ ಇರಲಿಲ್ಲ.

ತುಂಬ ಶಿಸ್ತಿನ ಮನುಷ್ಯ ಅಜ್ಜ ಯಾರಿಗೂ ಹೆದರುವ ಪೈಕಿಯಾಗಿರಲಿಲ್ಲ. ಜಮೀನಿನ ತಕರಾರಿನ ವಿಷಯವಾಗಿ ಪಕ್ಕದ ಮನೆ ರಾಂಭಟ್ರ ಬಳಿ ಜಗಳವಾಡಿ, ಕೋರ್ಟಿಗೂ ಹೋಗಿ ಜಮೀನು ತನ್ನ ಪರವೇ ಮಾಡಿಕೊಂಡು ಬಂದಿದ್ದರಿಂದ ಊರವರೆಲ್ಲ ಅವನ ಉಸಾಬರಿಯೇ ಬೇಡಪ್ಪ ಎನಿಸುವಷ್ಟು ದರ್ಪ ಅಜ್ಜನಲ್ಲಿತ್ತು. ಇಂಥ ಅಜ್ಜ ಅಮ್ಮುಮ್ಮನ ಹತ್ರ ಇವ ಮಾತನಾಡುತ್ತಿರಲಿಲ್ಲವೋ, ಇವನ ಹತ್ತಿರ ಅಮ್ಮುಮ್ಮನೇ ಮಾತನಾಡುತ್ತಿರಲಿಲ್ಲವೋ… ಎಂಬುದು ತಿಳಿಯುತ್ತಿರಲಿಲ್ಲ. ಒಟ್ಟಿನಲ್ಲಿ ಇಬ್ಬರೂ ಮಾತನಾಡಿಕೊಳ್ಳುತ್ತಿರಲಿಲ್ಲ ಅಷ್ಟೆ. ಹೀಗೆ ಅಮ್ಮುಮ್ಮ ಗೋಡೆ ಹತ್ತಿರ ಮಾತನಾಡುತ್ತ ಆಡುತ್ತ ತುಂಬ ವರ್ಷಗಳು ಕಳೆದು ಹೋದವು. ಮಕ್ಕಳೆಲ್ಲ ದೊಡ್ಡವರಾದರು. ಅಜ್ಜನಿಗೂ ವಯಸ್ಸಾಗಿ, ಬೆನ್ನು ಬಾಗಿ, ಮನೆಯಲ್ಲೇ ಹೆಚ್ಚಿರುತ್ತಿದ್ದ. ಹೀಗಿದ್ದೂ ಅವ ಅಮ್ಮುಮ್ಮನ ಹತ್ತಿರ ಮಾತು ಮಾತ್ರ ಈಗಲೂ ಆಡುತ್ತಿರಲಿಲ್ಲ. ಈಗೆಲ್ಲ ಮಕ್ಕಳದ್ದೇ ದರ್ಬಾರು. ದೊಡ್ಡ ಮಗ ರಾಮಚಂದ್ರ ಪೌರೋಹಿತ್ಯ ಅದು ಇದು ಎಂದು ಮನೆಯಲ್ಲೇ ಇದ್ದ. ಉಳಿದ ಮಕ್ಕಳು ಬೇರೆಬೇರೆ ಕಡೆ ಇದ್ದರು. ಮೂವರು ಹೆಣ್ಣುಮಕ್ಕಳನ್ನು ಮದುವೆ ಮಾಡಿಕೊಟ್ಟಿದ್ದರು. ಆದರೆ ಅಮ್ಮುಮ್ಮನ ಗೋಡೆ ಸಾಂಗತ್ಯ ಮತ್ತು ನೆಲ ಕುಟ್ಟುವುದು ಮಾತ್ರ ಕಿಂಚಿತ್ತೂ ಕಡಿಮೆಯಾಗಲಿಲ್ಲ. ನಾವೆಲ್ಲ ಶಾಲೆಗೆ ಹೋಗುವಾಗ ಸ್ವಲ್ಪ ಸರಿ ಇದ್ದಿದ್ದಳು. ನಂತರ ಹೀಗೆ ಗೋಡೆಯೊಂದಿಗೆ ಮಾತನಾಡುತ್ತಿದ್ದಳು ಎಂದಿದ್ದ ದೊಡ್ಡಮಗ ರಾಮಚಂದ್ರ ಒಮ್ಮೆ.

ಆ ಮನೆಯಲ್ಲಿ ಮನೆಗೆಲಸ ಮಾಡದಿದ್ದವರು ಮನುಷ್ಯರೇ ಅಲ್ಲ ಎಂಬಂತೆ ನೋಡುತ್ತಿದ್ದರು. ಯಾರು ಹೆಚ್ಚು ಕೆಲಸ ಮಾಡುತ್ತಾರೋ ಅವರೆಲ್ಲ ಸಿಕ್ಕಾಪಟ್ಟೆ ಒಳ್ಳೆಯವರಾಗಿಬಿಡುತ್ತಿದ್ದರು. ಮಕ್ಕಳೆಲ್ಲರೂ ಹೆಚ್ಚುಕಮ್ಮಿ ಒಂದೇ ತೆರನಾಗಿದ್ದರು. ಅಜ್ಜನದ್ದೇ ಗುಣಲಕ್ಷಣ. ಆದರೆ ಆ ಅಜ್ಜ ಮತ್ತು ಅವನ ಮಕ್ಕಳೆಲ್ಲ ಒಂಥರದ ಚಪ್ಪಹರುಕತನದವರು. ಅವರೊಂದಿಗೆ ಹೆಣ್ಣುಮಕ್ಕಳು ಮಾತನಾಡಲು ಮುಜುಗರಪಟ್ಟುಕೊಳ್ಳುತ್ತಿದ್ದರು. ಯಾರಾದರೂ ಮುಟ್ಟಾಗದ ಹೆಣ್ಣುಮಕ್ಕಳು ಬಂದರೆ, ಮುಟ್ಟಾದ ಮೇಲೆ ಹೇಗಿರಬೇಕು, ಏನು ಹಾಕಿಕೊಳ್ಳಬೇಕೆಂದು ಪಕ್ಕದಮನೆಯ ಅತ್ತೆ ಹತ್ರ ಕೇಳಿ ಕಲತ್ಗ ಎಂದೆಲ್ಲ ಅದೇ ದೊಡ್ಡ ತಮಾಶೆಯೆಂಬಂತೆ ಆಡಿಕೊಂಡು ಮಜಾ ತಗೋತಿದ್ದರು. ಆ ಹೆಣ್ಣುಮಕ್ಕಳೆಲ್ಲ ಇಶ್ಶಿಶ್ಶೀ.. ಎಂದು ಮುಖ ಸಿಂಡರಿಸಿ ಮತ್ತೆ ಅವರ ಮುಂದೆ ಸುಳಿಯುತ್ತಿರಲಿಲ್ಲ. ಅಜ್ಜ ಮತ್ತು ದೊಡ್ಡ ಮಗ ರಾಮಚಂದ್ರನಂತೂ ಪರಸ್ಪರ ಸ್ಪರ್ಧೆಗೆ ಬಿದ್ದವರಂತೆ ಬಂಡ ಹಲುಬುತ್ತಿದ್ದರು.

ಒಂದುಸಲ ದಿವರ ಪೈಕಿ ಕೆರೆದೇವಿಗೆ ಎತ್ತು ಹೊತ್ತು ತೊಡೆ ಬಳಿ ಗಾಯವಾಗಿಬಿಟ್ಟಿತ್ತು. ಅದಕ್ಕೆ ಅವಳು ನಾಕು ದಿವಸ ಕೆಲಸಕ್ಕೇ ಬಂದಿರಲಿಲ್ಲ. ನಂತರ ಕೆಲಸಕ್ಕೆ ಬಂದಮೇಲೆ ಅಜ್ಜ ಎಲ್ಲರ ಮುಂದೂ “ಕೆರೆದೇವಿ ಗಟ್ಟಾಕಿ ಹೊತ್ತುಬಿಟೈತೆ.. ಇಲ್ಲೇ ಹೊತ್ತುಬಿಟ್ಟೈತೇ…” ಎಂದು ತೊಡೆ ತೋರಿಸಿ ಕೇಳುತ್ತಿದ್ದರೆ ಕೆರೆದೀವಿ “ಸುಮ್ಕಿರ್ರಾ…..” ಎಂದು ಕವಳ ಹಾಕಿದ ಬಾಯನ್ನು ಮತ್ತಷ್ಟು ಅಗಲಿಸಿ ನಾಚಿ ಕೊಟ್ಟಿಗೆ ಕೆಲಸಕ್ಕೆ ಹೋಗುತ್ತಿದ್ದಳು. ಅಲ್ಲಿದ್ದವರೆಲ್ಲ ಮುಸಿಮುಸಿ ನಗುತ್ತಿದ್ದರು. ಹೀಗೆ ಅಜ್ಜನ ಮುಂದೆ ಯಾರಾದರೂ ಹೆಣ್ಣುಮಕ್ಕಳು ಬರಲು ಹೆದರಿಕೊಳ್ಳುತ್ತಿದ್ದರು. ಯಾರಿದ್ದ ಯಾರಿಲ್ಲ ಎಂದು ನೋಡದೆ ಎಲ್ಲರ ಮುಂದೂ ಹೀಗಿದ್ದೇ ಏನಾದರೂ ಪೋಲಿ ಜೋಕು ಹೇಳುತ್ತಾನೆಂದು.

ಇಷ್ಟೆಲ್ಲ ಚಪ್ಪಹರಕರಾಗಿರುವ ಅವರ ಮನೆಯಲ್ಲಿ ತುಂಬ ಮಡಿಮಾಡುತ್ತಿದ್ದರು. ಗಂಡಸರಿಗೆ ಪ್ಯಾಂಟು ಶರ್ಟ್ ಕೂಡ ಅಷ್ಟಿದೆಯೋ ಇಲ್ಲವೋ ಮಡಿ ಪಂಚೆ ಮಾತ್ರ ತುಂಬ ಇತ್ತು. ದಿನಾ ಬೆಳಿಗ್ಗೆ ಬೇಗ ಸ್ನಾನ ಮಾಡಿ ಮಡಿ ಉಟ್ಟು, ಸಂದ್ಯಾವಂದನೆ ಮಾಡಿ, ಪೂಜೆ ಮಾಡುವಂಥ ಮಹಾನುಭಾವರ ಬಾಯಲ್ಲಿ ಸದಾ ಇಂಥ ಪದಗಳೇ. ಹೆಣ್ಣುಮಕ್ಕಳೆಂದರೆ ಒಂದೂ ಮಾತನಾಡದೆ, ಸದಾ ಮನೆಗೆಲಸ ಮಾಡಿಕೊಂಡು ಯಾರೊಬ್ಬರಿಗೂ ಜವಾಬು ನೀಡದೆ, ಏನನ್ನೂ ಬಯಸದೆ, ಅವರು ತಂದು ಹಾಕಿದ್ದನ್ನು ಬಾಯಿಮುಚ್ಚಿಕೊಂಡು ತಿನ್ನೋ ದನಗಳ ಹಾಗಿದ್ದರೆ ಅವರೆಲ್ಲ ಸಿಕ್ಕಾಪಟ್ಟೆ ಒಳ್ಳೆಯವರು ಎಂದು ತಿಳಿಯುವಂಥವರು. ಇಂಥ ಮಹಾನುಭಾವರಿಗೆ ಅಮ್ಮುಮ್ಮನ ಕುರಿತು ಆಕ್ಷೇಪವಿದ್ದದ್ದು ಅವಳ ಕೆಲಸದ ಮೇಲಾಗಿರಲಿಲ್ಲ. ಏ..ಏಹ್..ಎಂದು ನೆಲ ಅಥವಾ ಪಾತ್ರೆ ಕುಟ್ಟುವುದಕ್ಕಾಗಿಯೂ ಆಗಿರಲಿಲ್ಲ. ಬದಲಾಗಿ ಅವಳು ಗೋಡೆಯ ಬಳಿ ಬಂದು ಮುಕ್ತವಾಗಿ ಮಾತನಾಡುವುದು.

ಮೊದಮೊದಲು ಈ ಕುರಿತು ಯಾರೂ ಅಷ್ಟಾಗಿ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಆದರೆ ಮಕ್ಕಳೆಲ್ಲ ದೊಡ್ಡವರಾಗುತ್ತಿದ್ದಂತೆ, ಅದರಲ್ಲೂ ಗಂಡುಮಕ್ಕಳು ದೊಡ್ಡವರಾಗುತ್ತಿದ್ದಂತೆ ಅವರಿಗೆ ಅಮ್ಮನ ಈ ನಡವಳಿಕೆ ಆಕ್ಷೇಪಾರ್ಹವಾಗುತ್ತಿದ್ದವು. ಹೇಳಿಕೇಳಿ ಒಬ್ಬ ಹೆಣ್ಣು ಅಷ್ಟು ಮುಕ್ತವಾಗಿ ಹಾಗೆಲ್ಲ ಮಾತನಾಡುವುದೆಂದರೇನು? ಗಂಡಸು ನಾಕು ಜನರ ಮುಂದೆ ಬೇಕಾದರೂ ಪೋಲಿ ಜೋಕು ಹೇಳಿ ಚಪ್ಪರಿಸಿದರೂ ನಡೆದುಬಿಡುತ್ತದೆ. ಆದರೆ ಒಬ್ಬ ಹೆಣ್ಣು ಅದರಲ್ಲೂ ಮದುವೆ ವಯಸ್ಸು ಮೀರಿದ ಮಕ್ಕಳೆದುರಿಗೆಲ್ಲ ಹೀಗೆಲ್ಲ ಮಾತನಾಡುವುದು ಸರಿಯೇ. ಹೀಗೆ ಇತರ ಮಕ್ಕಳೆಲ್ಲ ಒಳಗೊಳಗೇ ಗೊಣಗಿದರೂ ದೊಡ್ಡ ಮಗ ರಾಮಚಂದ್ರ ಮಾತ್ರ ಎದುರಾಎದುರೇ ಸಿಟ್ಟಿನಿಂದ ಬೈಯುತ್ತಿದ್ದ. ಒಮ್ಮೊಮ್ಮೆ ತಡೆಯಲಾರದೆ ಹೊಡೆದದ್ದೂ ಇದೆ.

ಯಾರು ಬೈದರೂ, ಹೊಡೆದರೂ ಅಮ್ಮುಮ್ಮ ಮಾತ್ರ ತನ್ನ ಗೋಡೆಯೊಂದಿಗಿನ ಸಂವಾದ ಮಾತ್ರ ಬಿಟ್ಟವಳಲ್ಲ. ಎಷ್ಟೆಂದರೆ ಒಂದು ಸಲ ಮಟಮಟ ಮಧ್ಯಾಹ್ನ ಅಜ್ಜ ತೋಟದ ಕೆಲಸ ಮುಗಿಸಿ ಬಂದವನು ಉಸ್ಸೆಂದು ಅಲ್ಲೇ ಜಗುಲಿ ಕಟ್ಟೆ ಮೇಲೆ ಕೂತವನು ಸುತ್ತ ನೋಡಿದ. ಯಾರೂ ಕಾಣದ್ದನ್ನು ಕಂಡು, ಜೋರಾಗಿ ಅಮ್ಮುಮ್ಮಂಗೆ ಕೇಳಿಸುವ ಹಾಗೆ “ಮಜ್ಜಿಗೆ ಬೇಕು…” ಎಂದು ಕೂಗಿದ. ತಕ್ಷಣ ಅಮ್ಮುಮ್ಮ ಒಂದು ದೊಡ್ಡ ಲೋಟದಲ್ಲಿ ಮಜ್ಜಿಗೆ ತಂದು ಅಜ್ಜನ ಮುಂದೆ ಹಿಡಿದಳು. ಮಜ್ಜಿಗೆ ತೆಗೆದುಕೊಂಡವನು ತಟ್ಟೆಯಲ್ಲಿ ನೊಣ ಬಿದ್ದು ತೇಲುತ್ತಿದ್ದುದನ್ನು ಕಂಡು ಸಿಟ್ಟು ಬಂದು ಅಮ್ಮುಮ್ಮನ ಮುಖಕ್ಕೇ ಮಜ್ಜಿಗೆಯನ್ನು ಎರಚಿಬಿಟ್ಟ. ತಕ್ಷಣ ಅಮ್ಮುಮ್ಮ ಬಚ್ಚಲು ಮನೆಗೆ ಹೋಗಿ ಮುಖ ತೊಳೆದುಕೊಂಡು ಬಂದು ಸೀದ ಗೋಡೆಯ ಬಳಿ ಹೋಗಿ ಗೋಡೆಗೆ ತನ್ನ ಕೆನ್ನೆಯನ್ನು ತುಂಬ ಹೊತ್ತು ಉಜ್ಜುತ್ತ ನಿಂತಳು. ನಾವೆಲ್ಲ ಪಾಪ ಎಂಬಂತೆ ನೋಡುತ್ತ ನಿಂತರೆ ರಾಮಚಂದ್ರ ಮಾತ್ರ “ಸಾಕು ನಡಿ… ಊಟಕ್ಕೆ ಹೊತ್ತಾತು. ಇನ್ನೂ ಅಡುಗ್ಯಾಯ್ದಿಲ್ಲೆ. ನೈವೇದ್ಯಕ್ಕೆ ಅನ್ನ ಆಗವು, ಸ್ನಾನ ಮಾಡಕ್ಯಂಡು ಅನ್ನಕ್ಕಿಡು” ಎಂದು ಆದೇಶ ಮಾಡಿದಂತೆ ಹೇಳಿದ. ಅಮ್ಮುಮ್ಮ ಗೋಡೆಗೆ ಉಜ್ಜಿದ್ದರಿಂದ ಕೆಂಪಗಾಗಿರುವ ತನ್ನ ಕೆನ್ನೆಯನ್ನು ತಾನೇ ಸವರಿಕೊಳ್ಳುತ್ತ ನಿಧಾನಕ್ಕೆ ಹೋದಳು. ಯಾರೇನೇ ಬೈಯಲಿ, ಹೊಡೆಯಲಿ, ಅಮ್ಮುಮ್ಮ ಗೋಡೆ ಬಳಿ ಏನನ್ನೋ ಹೇಳುತ್ತ ಕಾಲಕಳೆಯುತ್ತಿದ್ದಳು.

ಒಂದು ಸಲವಂತೂ ಸರಿಯಾಗಿ ನೆನಪಿದೆ ನನಗೆ. ಅವತ್ತು ಚೌತಿ ಹಬ್ಬದ ತಯಾರಿ ನಡೆಯುತ್ತಿತ್ತು. ಹಬ್ಬಕ್ಕೆ 15 ದಿವಸಕ್ಕಿಂತ ಮುಂಚೆಯೇ ಊರವರೆಲ್ಲ ಸೇರಿ ಮನೆಮನೆಯಲ್ಲಿ ಚಕ್ಕುಲಿ ಕಂಬಳ ಮಾಡುತ್ತಿದ್ದರು. ಆಗ ಅಜ್ಜ ಮನೆಯವರಿಗೆಲ್ಲ ಬಟ್ಟೆ ತಂದಿದ್ದ. ಅಮ್ಮುಮ್ಮಂಗೂ ಒಂದು ಸೀರೆ ತಂದಿದ್ದ. “ಏ… ನಿನ್ನ ಅಮ್ಮುಮ್ಮಂಗೆ ಕೊಡು” ಎಂದು ಅಲ್ಲಿಯೇ ಆಡಿಕೊಂಡಿದ್ದ ಮೊಮ್ಮಗಳಿಗೆ ಕೊಟ್ಟ. ನೇರಳೆ ಬಣ್ಣದ, ಜರಿಯಂಚಿನ ಆ ಸೀರೆಯನ್ನು ಆ ಕ್ಷಣವೇ ಉಟ್ಟ ಅಮ್ಮುಮ್ಮ ಅಜ್ಜನೆದುರಿಗೆ ಬಂದು ನಿಲ್ಲುತ್ತಾಳೆಂದು ಭಾವಿಸಿದರೆ ಅವಳು ಹೋದದ್ದು ಮಾತ್ರ ನಡುಮನೆಗೆ. ಮೊದಲೇ ಬೆಳ್ಳಗೆ ಚೆಂದುಳ್ಳಿ ಚೆಲುವೆಯಾಗಿದ್ದ ಅಮ್ಮುಮ್ಮ ಆ ನೀಲಿ ಸೀರೆಯಲ್ಲಿ ಮತ್ತೂ ಚೆಂದಕಾಣುತ್ತಿದ್ದಳು. ನೇರಳೆ ಬಣ್ಣದ ಸೀರೆ ಉಟ್ಟು, ತಲೆಗೂದಲನ್ನು ಗಂಟುಹಾಕಿಕೊಂಡು ಮೇಲೊಂದು ಕೆಂಪಗಿನ ಅಬ್ಬಲಿಗೆ ಹೂವಿನ ದಂಡೆಯನ್ನು ಗಂಟಿನ ಸುತ್ತವೂ ಕಟ್ಟಿ, ಕಿವಿಗೆರಡು ಬಿಳಿ-ಕೆಂಪಿನ ಹರಳುಗಳ ಬೆಂಡೋಲೆ, ಅದರ ಮೇಲೆ ಬಂಗಾರದಿಂದ ಕಟ್ಟಿದ ಮುತ್ತಿನ ಬುಗುಡಿ, ಮೂಗಿಗೆರಡು ಹೊಳೆವ ಮೂಗುಬೊಟ್ಟು, ಕತ್ತಲ್ಲಿರುವ ಎರಡೆಳೆ ಅವಲಕ್ಕಿ ಸರ, ಕೈಗೆರೆಡು ಬಂಗಾರದ ಪಾಟಲಿ, ಗಾಜಿನ ಬಳೆಯ ಜೊತೆಗೆ ಪಾಟಲಿ ಮತ್ತು ಮಗೆಕಾಯಿ ಬೀಜ ಮಾಟದ ಮತ್ತೆರಡು ಬಳೆ, ಎಲ್ಲವೂ ನೇರಳೆ ಸೀರೆಯ ಮೇಲೆ ಫಳಕ್ಕನೆ ಹೊಳೆದು ಅಮ್ಮುಮ್ಮ ನವರಾತ್ರಿಯಲ್ಲಿ ಹೂವು ಬಂಗಾರಗಳಿಂದ ಅಲಂಕರಿಸಿಕೊಂಡು ಪೂಜೆಗೆ ಸಿದ್ಧಗೊಂಡಿರುವ ಥೇಟು ಅಮ್ನೋರ ಹಾಗೆಯೇ ಕಾಣುತ್ತಿದ್ದಳು. ಹೀಗೆ ಅಲಂಕರಿಸಿಕೊಂಡ ಅಮ್ಮುಮ್ಮ ಗೋಡೆ ಹತ್ರ ಹೋಗಿನಿಂತು ಸೀರೆನೆಲ್ಲ ಮುಟ್ಟಿ ಮುಟ್ಟಿ ನೋಡಿಕೊಳ್ಳುತ್ತ “ಹ್ಯಾಂಗ್ ಕಾಣ್ತೀ… ಆನು…” ಎಂದು ಕೇಳಿದಳು. ಅಲ್ಲಿಂದ ಉತ್ತರ ಬರುತ್ತೋ ಇಲ್ಲವೋ ಸಂಬಂಧವಿಲ್ಲದವಳ ಹಾಗೆ ತಾನೇ ಉತ್ತರಿಸುತ್ತಿದ್ದಳು. ಮತ್ತೆ ಪ್ರಶ್ನೆ ಮಾಡುತ್ತಿದ್ದಳು, ಹಿಂದೆಮುಂದೆ ಸೀರೆ ನೆರಿಗೆ ಸರಿ ಮಾಡಿಕೊಳ್ಳುತ್ತ ಮಾತನಾಡುವ ಅಮ್ಮುಮ್ಮ, ಅಲ್ಲೇನಾದರೂ ಕನ್ನಡಿ ಇತ್ತಾ ಎಂದೆನಿಸುವಷ್ಟು ತಲ್ಲೀನಳಾಗುತ್ತಿದ್ದಳು. ಅವಳಪಾಡಿಗೆ ಅವಳನ್ನು ಬಿಟ್ಟರೂ….

ಹೇಳಿಕೇಳಿ ಒಬ್ಬ ಹೆಣ್ಣು ಅಷ್ಟು ಮುಕ್ತವಾಗಿ ಹಾಗೆಲ್ಲ ಮಾತನಾಡುವುದೆಂದರೇನು? ಗಂಡಸು ನಾಕು ಜನರ ಮುಂದೆ ಬೇಕಾದರೂ ಪೋಲಿ ಜೋಕು ಹೇಳಿ ಚಪ್ಪರಿಸಿದರೂ ನಡೆದುಬಿಡುತ್ತದೆ. ಆದರೆ ಒಬ್ಬ ಹೆಣ್ಣು ಅದರಲ್ಲೂ ಮದುವೆ ವಯಸ್ಸು ಮೀರಿದ ಮಕ್ಕಳೆದುರಿಗೆಲ್ಲ ಹೀಗೆಲ್ಲ ಮಾತನಾಡುವುದು ಸರಿಯೇ. ಹೀಗೆ ಇತರ ಮಕ್ಕಳೆಲ್ಲ ಒಳಗೊಳಗೇ ಗೊಣಗಿದರೂ ದೊಡ್ಡ ಮಗ ರಾಮಚಂದ್ರ ಮಾತ್ರ ಎದುರಾಎದುರೇ ಸಿಟ್ಟಿನಿಂದ ಬೈಯುತ್ತಿದ್ದ.

ಒಮ್ಮೆ ಇದು ವಿಕೋಪಕ್ಕೆ ಹೋಗುವಂಥ ಸಂದರ್ಭ ಬಂದುಬಿಟ್ಟಿತು. ಅದು ರಾಮಚಂದ್ರನ ಮದುವೆಯಾದ ಹೊಸತು. ಹಾಗಾಗಿ ಮನೆಯಲ್ಲೇ ಹೆಚ್ಚು ಇರುತ್ತಿದ್ದ. ಹೊಸ ಹೆಂಡತಿ, ಹೊಸ ಸಂಬಂಧ. ಎಲ್ಲವೂ ಹೊಸತು.. ಆ ಹೆಂಡತಿಗೂ ಅಮ್ಮುಮ್ಮನ ಈ ಹವ್ಯಾಸಗಳೆಲ್ಲ ಹೊಸತು. ಮೊದಮೊದಲು ಅವಳು ನೆಲ ಕುಟ್ಟುವುದು, ತಲೆಗೆ ಬಾಚಣಿಗೆಯಿಂದಲೇ ಕುಟ್ಟಿಕೊಳ್ಳುವುದೆಲ್ಲ ವಿಚಿತ್ರವೆನಿಸುತ್ತಿತ್ತು ಅವಳಿಗೆ. ಎಲ್ಲಕ್ಕಿಂತಲೂ ಮುಖ್ಯವಾಗಿ ಅವಳು ಗೋಡೆಯ ಬಳಿ ಹೋಗಿ ನಿಂತು ಗೋಡೆಯನ್ನು ಸವರುತ್ತ ಪ್ರೀತಿಯಿಂದ ಮಾತನಾಡುವುದೆಲ್ಲ ನೋಡಿ ಆಘಾತಕ್ಕೊಳಗಾಗಿ ಗಂಡನಬಳಿ ಕೇಳಿಯೂಬಿಟ್ಟಿದ್ದಳು. ಅತ್ತೆ ಯಾಕೆ ಹಾಗೆಲ್ಲ ನಡೆದುಕೊಳ್ಳುತ್ತಾಳೆಂದು. ಅವಳಿಗೆ ಮಳ್ಳು ಅದಕ್ಕೆ… ಎಂದು ಸಿಡುಕಿನಿಂದ ಹೇಳಿದ್ದ. ಅವತ್ತು ಕೊಟ್ಟಿಗೆ ಕೆಲಸ ಮುಗಿಸಿ ಬಂದ ರಾಮಚಂದ್ರ ಸೀದಾ ಒಳಕ್ಕೆ ಬಂದು ನೋಡುತ್ತಾನೆ, ನಡುಮನೆಯಲ್ಲಿ ಇವನ ಹೊಸ ನೆಂಟರು, ಹಳೆ ನೆಂಟರೆಲ್ಲ ಸೇರಿ ದೊಡ್ಡ ದಂಡೇ ಸೇರಿಬಿಟ್ಟಿತ್ತು. ಎಲ್ಲರನ್ನೂ ಸರಿಸಿ ಒಳಗೆ ಹೋಗಿ ನೋಡಿದರೆ, ಅವತ್ತೂ ಚೆಂದವಾಗಿ ಅಲಂಕರಿಸಿಕೊಂಡ ಅಮ್ಮುಮ್ಮ ಗೋಡೆಯನ್ನು ಸವರುತ್ತ ತುಂಬ ರಮ್ಯವಾಗಿ ಮಾತನಾಡುತ್ತಿದ್ದಳು. ಸುತ್ತಲಿನವರ ಪರಿವೆಯೇ ಇಲ್ಲದವಳಂತೆ. ಅದನ್ನು ನೋಡಿ ಎಲ್ಲಿತ್ತೋ ಸಿಟ್ಟು ರಾಮಚಂದ್ರನಿಗೆ, “ಬಾ.. ಇಲ್ಲಿ.. ನೀನು ಇಪ್ಪದು ಇಲ್ಲಲ್ಲ… ಬ್ಯಾರೆನೇ ಜಾಗ ಇದ್ದು ಅದಕ್ಕೆ…” ಎಂದು ಅವಳ ಕೈ ಹಿಡಿದು ದರದರನೆ ಎಳೆದುಕೊಂಡು ಹೋದ. ಸೀದಾ ಅವಳನ್ನು ಮನೆಯ ಹಿಂಬದಿಯ ಕೊಟ್ಟಿಗೆಯಾಚೆಗಿನ ಒಂದು ಸಣ್ಣ ಗುಡಿಸಲಿನಲ್ಲಿ ಕೂಡಿಹಾಕಿ, ಒಂದೆರೆಡು ದಿವಸ ಇಲ್ಲೇ ಬಿದ್ದಿರು, ಬುದ್ಧಿ ಬತ್ತು ನಿಂಗೆ ಎಂದು ಬಾಗಿಲು ಜಡಿದು ಬಂದ. ಹಾಗೆ ಅವಳನ್ನು ಎಳೆದೊಯ್ಯುವಾಗ ಮೌನವಾಗಿ, ತಿರುತಿರುಗಿ ಅಜ್ಜನನ್ನು ನೋಡಿದಳು ಅಮ್ಮುಮ್ಮ. ಮನುಷ್ಯ ಪ್ರಪಂಚದಿಂದಲೇ ಅವಳನ್ನು ದೂರ ತಳ್ಳುತ್ತಿರುವಂತೆ ಭಾಸವಾಗುತ್ತಿತ್ತು.

(ಇಲ್ಲಸ್ಟ್ರೇಷನ್ ಕಲೆ: ರೂಪಶ್ರೀ ಕಲ್ಲಿಗನೂರ್)

ಸೊಂಗೆಯನ್ನು ಮೇಲೆ ಮುಚ್ಚಿ, ಹಗರದಬ್ಬೆ ತಟ್ಟಿ ಕಟ್ಟಿದಂತಹ ಒಂದು ಗುಡಿಸಲು. ಅಲ್ಲಿ ಗೋಡೆಗಳೇ ಇರಲಿಲ್ಲ. ಹಾಗಾಗಿ ಅಮ್ಮುಮ್ಮ ಅಲ್ಲೇನು ಮಾಡುತ್ತಾಳೆ, ಹಗರದಬ್ಬೆಯ ತಟ್ಟಿಯನ್ನೇ ಗೋಡೆಯೆಂದು ತಿಳಿದು ಅದನ್ನೇ ಪ್ರೀತಿ ಮಾಡುತ್ತಾಳಾ ಎಂದು ನಾವು ತಿಳಿದರೆ ಅದು ತಪ್ಪಾಗಿತ್ತು. ಅಮ್ಮುಮ್ಮ ಅವತ್ತು ಹಗಲೆಲ್ಲ ಸುಮ್ಮನಿದ್ದರೂ ರಾತ್ರಿಯಿಂದಲೇ ಜೋರು ಶಬ್ದ ಮಾಡುತ್ತ ನೆಲ ಕುಟ್ಟುವುದು ಜಾಸ್ತಿಯಾಯಿತು. ಎಲ್ಲಕ್ಕಿಂತ ಮುಖ್ಯವಾಗಿ ಎಂದಿಗೂ ಅವಳ ಬಾಯಲ್ಲಿ ಬರದ ಪದಗಳೆಲ್ಲ ಅಲ್ಲಿ ನುಗ್ಗುತ್ತಿದ್ದವು, ರಂಡೆ, ಮುಂಡೆ, ಹಲ್ಕಟ್ ರಂಡೆ, ಬೋಸುಡಿಕೆ… ಹೀಗೆ ಮನುಷ್ಯ ಮಾತ್ರದವರಿಂದ ಏನೇನು ಪದಗಳು ಬರಲು ಸಾಧ್ಯವೋ ಅವೆಲ್ಲವೂ ಅಲ್ಲಿ ಬರುತ್ತಿದ್ದವು. ಆದರೆ ಹೀಗೆ ಬೈದರೂ.. ನಡುನಡುವೆ “ಏ ಸಾವಿತ್ರಿ… ಬಚ್ಚಲು ಮನೆನ ಕತ್ತಕಡಿಯಿಂದ್ಲೇ ತರಿಯೇ, ಇಲ್ದಿದ್ರೆ ಹಮಾಸ್ಲುಗಟ್ಯಗ್ಯತ್ತು… ಅಡುಗೆ ಮನೆ ಒಲೆನ ಸರಿಯಾಗಿ ಒರಸಗ್ಯಳಿ, ನಿನ್ನಜ್ಜಂಗೆ ಯಾಲಕ್ಕಿ ಹಾಕಿದ ಚಾ ನೇ ಆಗವು ಅದ್ನೇ ಮಾಡಿಕೊಡಿ…” ಹೀಗೆ ಕುಳಿತಲ್ಲಿಯೇ ಆದೇಶ ನೀಡುತ್ತಿದ್ದಳು.

ಅವಳನ್ನು ಹಾಗೆ ಗುಡಿಸಲಿಗೆ ನೂಕಿದ ಮೇಲೆ ಅಜ್ಜನೂ ಸ್ವಲ್ಪ ಮಂಕಾದಂತೆನಿಸಿತು. ಚಾ ಬೇಕೆಂದು ಯಾರೊಡನೆಯೂ ಕೇಳುತ್ತಿರಲಿಲ್ಲ. ಬೇಕೆಂದರೆ ತಾನೇ ಹೋಗಿ ಮಾಡಿಕೊಂಡು ಕುಡಿಯುತ್ತಿದ್ದ. ಹೀಗೇ ಸ್ವಲ್ಪ ದಿನ ಮುಂದುವರಿಯಿತು. ಅಮ್ಮುಮ್ಮ ಈ ಕೂಗಾಟ ಮತ್ತು ಆದೇಶಿಸುವುದೆರಡನ್ನೂ ನಿಲ್ಲಿಸಿರಲಿಲ್ಲ. ಅದೇನಾಯಿತೋ… ಒಂದಿನ ಸಿದ್ದಾಪುರದ ಸಂತೆಗೆಂದು ಹೋದ ಅಜ್ಜ ಸೀದಾ ಮನೆಗೆ ಬಂದವನೇ ಹಿಂದುಗಡೆ ಹೋಗಿ ಗುಡಿಸಲ ಬಾಗಿಲು ತೆರೆದು ಅಮ್ಮುಮ್ಮನ ಕೈಹಿಡಿದು ಮನೆ ಒಳಗೆ ಕರೆದುಕೊಂಡು ಬಂದುಬಿಟ್ಟ ಎಲ್ಲರೂ ನೋಡುತ್ತಿದ್ದಂತೆ. ಸ್ವತಃ ರಾಮಚಂದ್ರ ನೋಡುತ್ತಿದ್ದರೂ ಅಪ್ಪನ ಆ ಹೊತ್ತಿನ ಧೈರ್ಯಕ್ಕೆ ಏನೂ ಹೇಳಲಾರದವನಂತೆ ನಿಂತಿದ್ದ. ಅಜ್ಜ ಅಮ್ಮುಮ್ಮನ್ನು ಒಳಗೆ ಕರೆದುಕೊಂಡು ಬಂದವನೇ ಬಚ್ಚಲು ಮನೆಗೆ ಕರೆದುಕೊಂಡು ಹೋಗಿ ಸ್ನಾನ ಮಾಡು ಎಂದು ಅವಳ ಸೀರೆ, ಟವಲು ಎಲ್ಲ ಅವನೇ ತಂದುಕೊಟ್ಟ. ಎಲ್ಲರೂ ಅವಾಕ್ಕಾಗಿ ನೋಡುತ್ತ ನಿಂತರು ಈ ದೃಶ್ಯವನ್ನು ಯಾವುದೋ ಪವಾಡವೇ ಸಂಭವಿಸಿದಂತೆ.

ಆದರೆ ನಿಜಕ್ಕೂ ನಂತರದ ದಿನಗಳಲ್ಲಿ ಅಲ್ಲೊಂದು ಪವಾಡವೇ ನಡೆದುಹೋಯಿತು. ಅದುವರೆಗೆ ಒಂದೇ ಒಂದೂ ಮಾತನಾಡದ ಅಜ್ಜ-ಅಮ್ಮುಮ್ಮ ಇಬ್ಬರೂ ಮಾತನಾಡತೊಡಗಿದರು. ಎಲ್ಲಕ್ಕಿಂತ ಮುಖ್ಯವಾಗಿ ಅಮ್ಮುಮ್ಮ ಈಗೀಗ ಗೋಡೆ ಬಳಿ ಹೋಗುತ್ತಿರಲಿಲ್ಲ. ಅಜ್ಜನ ಹತ್ತಿರವೇ ಮಾತನಾಡುತ್ತಿದ್ದಳು. ಪ್ರೀತಿಯಿಂದ ಚಹಾ ಮಾಡಿ ತನ್ನ ಕೈಯಾರೆ ಅವನಿಗೆ ತಂದುಕೊಡುತ್ತಿದ್ದಳು. ಹೆಬ್ಬಾಗಿಲ ಕಟ್ಟೆಯ ಮೇಲೆ ಕೂತು ಅಜ್ಜನಿಗೆ ಅಂಬಾಡಿ ಎಲೆಗೆ ತುಸುವೇ ಸುಣ್ಣ ಹಚ್ಚಿ ಕವಳ ತಯಾರಿಸಿ ಅವನ ಬಾಯಿಗಿಡುತ್ತಿದ್ದಳು. ಈ ಕೌತುಕವನ್ನು ಊರವರೆಲ್ಲ ನೋಡಿ, ಇದೇನಾಯಿತು. ಈಗೇನಾದರೂ ಅಜ್ಜನಿಗೇ ಹುಚ್ಚು ಹಿಡೀತಾ ಮತ್ತೆ.. ಎಂದೆಲ್ಲ ಮಾತನಾಡಿಕೊಳ್ಳುವಷ್ಟು ಅಜ್ಜನಲ್ಲಿ ಬದಲಾವಣೆಗಳಾಗಿದ್ದವು.

ಹೀಗೆ ಬದುಕಿನ ಸಂಜೆಯಲ್ಲಿ ಮಾತನಾಡಿಕೊಳ್ಳುತ್ತಿದ್ದ ಅಜ್ಜ-ಅಮ್ಮುಮ್ಮ ಇಬ್ಬರೂ ಒಂದೇ ದಿವಸ ತೀರಿಹೋಗಿದ್ದು ಮಾತ್ರ ವಿಶೇಷವಾಗಿತ್ತು. ಒಬ್ಬರಿಗೆ ವಯಸ್ಸು 90 ಮತ್ತೊಬ್ಬರಿಗೆ 70 ಆಗಿದ್ದಿರಬಹುದು. ಇನ್ನೂ ವಿಶೇಷವೆಂದರೆ ತಾನು ಸತ್ತ ಮೇಲೆ ಹೆಣ ಸುಡಲು ಬೇಕಾಗುವುದೆಂದು ತನಗೂ, ತನ್ನ ಹೆಂಡತಿಗೂ ಸೇರಿ ಕಟ್ಟಿಗೆ ಕಡಿದು ಒಟ್ಟು ಮಾಡಿಟ್ಟಿದ್ದ ಅಜ್ಜ. ಅದೇ ಕಟ್ಟಿಗೆಯಲ್ಲೇ ತಮ್ಮನ್ನು ಸುಡಬೇಕೆಂದು ಮೊದಲೇ ಮಕ್ಕಳಿಗೆ ಹೇಳಿಯೂ ಬಿಟ್ಟಿದ್ದ. ಅವತ್ತು ಅಮ್ಮುಮ್ಮ ಸತ್ತು ಅವಳ ಹೆಣವನ್ನು ಸುಟ್ಟು ಬರುವಷ್ಟರಲ್ಲಿ ಅಜ್ಜನೂ ತೀರಿಹೋಗಿದ್ದ. ಗಂಡ-ಹೆಂಡತಿ ಒಟ್ಟಿಗೇ ಸಾಯುವುದೆಂದರೆ ಪುಣ್ಯ ಇದ್ದವರಿಗೆ ಮಾತ್ರ ಇದೆಲ್ಲ ಸಾಧ್ಯ. ಪುಣ್ಯಾತ್ಮರು ಇಬ್ರೂ ಎಂದು ಮಾತನಾಡಿಕೊಂಡರು ಜನ.

ಅಜ್ಜ-ಅಮ್ಮುಮ್ಮ ಇಬ್ಬರೂ ಹೋದಮೇಲೆ ಆ ಮನೆ ಒಂಥರದಲ್ಲಿ ಬಿಕೋ ಎನ್ನುತ್ತಿತ್ತು. ಮನೆ ಬಿಕೋ ಇರುತ್ತಿತ್ತು ಎಂಬುದಕ್ಕಿಂತಲೂ ನಡುಮನೆಯ ಗೋಡೆ ಅನಾಥವಾಗಿದ್ದಂತೆ ಭಾಸವಾಗುತ್ತಿತ್ತು. ಅಮ್ಮುಮ್ಮ ಬದುಕಿದ್ದಾಗಲೆಲ್ಲ ಆ ಮನೆಯ ಗೋಡೆ ಬಿದ್ದುಹೋದರೇನು ಗತಿ ಎಂದೆನಿಸುತ್ತಿತ್ತು. ಒಂದು ಸಲ ಜೋರು ಮಳೆ – ಗಾಳಿ ಬಂದು ಕೊಟ್ಟಿಗೆ ಮನೆಯ ಹಂಚುಗಳೆಲ್ಲ ಹಾರಿಹೋಗಿದ್ದವು. ಕೆಳಗಿನ ಕೇರಿಯ ಮಂಜನ ಮನೆ ಆ ಗಾಳಿ ಮಳೆಯ ರಭಸಕ್ಕೆ ಬಿದ್ದೇ ಹೋಗಿತ್ತು. ಅದೇ ರೀತಿ ಈ ಮನೆಯ ಗೋಡೆಯೂ ಬಿದ್ದು ಹೋದರೆ ಅಮ್ಮುಮ್ಮ ಏನು ಮಾಡುತ್ತಾಳೆ. ಮನೆಗಳಿಗೆ ಗೋಡೆಗಳೇ ಇಲ್ಲದಿದ್ದರೆ ಅವಳ ಗತಿ ಏನಾಗುತ್ತಿತ್ತು…? ಎಂದೆಲ್ಲ ಅನಿಸುತ್ತಿತ್ತು. ಆದರೀಗ ಅಮ್ಮುಮ್ಮ ಇಲ್ಲ. ಗೋಡೆ ಇದೆ.

ಇದಾಗಿ ಎಷ್ಟೋ ವರ್ಷಗಳ ನಂತರ ಬಂದ ಸುದ್ದಿ. ಈಗೀಗ ಅಮ್ಮುಮ್ಮನ ದೊಡ್ಡ ಸೊಸೆ, ಅಂದರೆ ರಾಮಚಂದ್ರನ ಹೆಂಡತಿಯೂ ಹೀಗೇ ಗೋಡೆ ಬಳಿ ನಿಂತು ಮಾತನಾಡುತ್ತಾಳೆ. ಚಾ ಬೇಕೆಂದರೆ ಗೋಡೆಯ ಹತ್ತಿರವೇ ಕೇಳುತ್ತಾಳೆ. ಅಮ್ಮುಮ್ಮನಗಿಂತಲೂ ಜೋರಾಗಿ ಶಬ್ದ ಮಾಡುತ್ತ ನೆಲ ಕುಟ್ಟುತ್ತಾಳೆ ಎಂದು.
…………ಅಂದರೆ ಈಗಲೂ ಅಲ್ಲಿ ಗೋಡೆ ಇದೆ!

(ಮುಂದುವರಿಯುವುದು)