ಮೊದಲ ಪ್ರಯತ್ನ…. ಕೋಲನ್ನು ಹಿಡಿದು ಅಷ್ಟು ದೂರದಿಂದ ಓಡುತ್ತಾ ಬಂದ ಡೂಪ್ಲ್ಯಾಂಟೀಸ್‌ನನ್ನು ಎರಡನೇ ಸ್ಥಾನದಲ್ಲಿದ್ದ ಅಮೆರಿಕಾದ ಕೆಂಡ್ರಿಕ್ಸ್ ಹುರಿದುಂಬಿಸುತ್ತಿದ್ದ… ಪ್ರೋತ್ಸಾಹಿಸುತ್ತಿದ್ದ… ಎಲ್ಲರದ್ದೂ ಒಂದೇ ಚೀತ್ಕಾರ… “ಗೋ ಮಾಂಡೋ… ಗೋ..” ಮಾಂಡೋ… ಕೋಲನ್ನು ಬಾಕ್ಸ್‌ಗೆ ನೆಟ್ಟು ಗಾಳಿಯಲ್ಲಿ ಗಿರಕಿ ಹೊಡೆದು, ಅಡ್ಡ ಕೋಲನ್ನು ದಾಟಿ, ಇನ್ನೇನು ಕೈಯನ್ನು ಮೇಲೆತ್ತಬೇಕು.. ಮಾಂಡೋನೊಡನೆ ಅಡ್ಡ ಕೋಲೂ ಕೆಳಗುರುಳಿತ್ತು… ನಿಶ್ಯಬ್ದ… ಲಯಬದ್ಧವಾಗಿ ಚೀರುತ್ತಿದ್ದವರೆಲ್ಲಾ ‘ಓ….’ ಎಂದು ನಿಟ್ಟುಸಿರುಬಿಟ್ಟಿದ್ದರು.
ಕಾರ್ತಿಕ್ ಕೃಷ್ಣ ಬರೆಯುವ “ಒಲಂಪಿಕ್ಸ್ ಅಂಗಣ” ಸರಣಿಯಲ್ಲಿ ಪೋಲ್ ವಾಲ್ಟ್ ಕ್ರೀಡಾಪಟುವೊಬ್ಬ ನಿರ್ಮಿಸಿದ ದಾಖಲೆಯ ಕುರಿತ ಬರಹ ನಿಮ್ಮ ಓದಿಗೆ
ಅಂದು ಪ್ಯಾರಿಸಿನ ಸ್ಟೆಡೆ ಡಿ ಫ್ರಾನ್ಸ್ ಕ್ರೀಡಾಂಗಣ ಜನರಿಂದ ಕಿಕ್ಕಿರಿದು ತುಂಬಿತ್ತು. ಗಡಿ, ದೇಶ, ವೈಮನಸ್ಯಗಳನ್ನು ದಾಟಿ ಹತ್ತಿರತ್ತಿರ ಸುಮಾರು ಎಪ್ಪತ್ತೈದು ಸಾವಿರ ಜನರು ಒಬ್ಬ ಪೋಲ್ ವಾಲ್ಟ್ ಕ್ರೀಡಾಪಟು ರಾಕೆಟ್‌ನಂತೆ ಆಕಾಶಕ್ಕೆ ಚಿಮ್ಮುವುದನ್ನು ಬೆರಗುಗಣ್ಣಿನಿಂದ ನೋಡುತ್ತಿದ್ದರು. ಲಯಬದ್ಧ ಕರತಾಡನ ಸ್ಟೇಡಿಯಮ್ಮಿನ ಮೂಲೆ ಮೂಲೆಯಲ್ಲೂ ಮಿಂಚಿನ ಸಂಚಾರವನ್ನುಂಟುಮಾಡುತ್ತಿತ್ತು. ಕೆಲವರು ‘ಗೋ ಮಾಂಡೋ ..6.25’ ಎಂದು ಬರೆದಿದ್ದ ಪೋಸ್ಟರ್ ಹಿಡಿದು ಅವನನ್ನು ಪ್ರೋತ್ಸಾಹಿಸುತ್ತಿದ್ದರು. ಅವರೆಲ್ಲರೂ ಸ್ಟೆಡೆ ಡಿ ಫ್ರಾನ್ಸ್‌ನಲ್ಲಿ ನಡೆಯುತ್ತಿದ್ದ ಬೇರೆಲ್ಲ ಆಟವನ್ನು ನಿರ್ಲಕ್ಷಿಸಿ, ಅವನನೊಬ್ಬನನ್ನೇ ನೋಡಲು ಕಾರಣವೇನು ಗೊತ್ತೇ? ಆತ ಪ್ಯಾರಿಸ್ಸಿನ ಆ ತಿಳಿ ಸಂಜೆಯಲ್ಲಿ ಪೋಲ್ ವಾಲ್ಟಿನಲ್ಲಿ ತಾನೇ ನಿರ್ಮಿಸಿದ್ದ ವಿಶ್ವದಾಖಲೆಯನ್ನು ಮುರಿಯುವ ಯತ್ನದಲ್ಲಿದ್ದ.
ಆತನೇ ಕಳೆದ ನಾಲ್ಕು ವರ್ಷದಲ್ಲಿ ಏಳು ಬಾರಿ ತನ್ನದೇ ದಾಖಲೆಯನ್ನು ಮುರಿಯುತ್ತ ಬಂದು ಇದೀಗ ಕ್ರೀಡೆಗಳ ಹಬ್ಬವೆಂದೇ ಹೆಸರಾಗಿರುವ ಒಲಿಂಪಿಕ್ ಕೂಟದಲ್ಲಿ ಎಂಟನೇ ಬಾರಿ ವಿಶ್ವದಾಖಲೆಯ ಬರೆಯಲು ಅಣಿಯಾಗುತ್ತಿದ್ದ ಸ್ವೀಡನ್ನಿನ 25 ವರುಷದ, ಅರ್ಮಾಂಡ್ ‘ಮಾಂಡೋ’ ಡೂಪ್ಲ್ಯಾಂಟೀಸ್! ಒಲಿಂಪಿಕ್ ದಾಖಲೆ ಹಾಗೂ ತನ್ನದೇ ವಿಶ್ವದಾಖಲೆಯನ್ನು ಮುರಿಯಲು ಆತ ಹಾರಬೇಕಾದ ಎತ್ತರ 6.25 ಮೀಟರ್.
ಮೊದಲ ಪ್ರಯತ್ನ…. ಕೋಲನ್ನು ಹಿಡಿದು ಅಷ್ಟು ದೂರದಿಂದ ಓಡುತ್ತಾ ಬಂದ ಡೂಪ್ಲ್ಯಾಂಟೀಸ್‌ನನ್ನು ಎರಡನೇ ಸ್ಥಾನದಲ್ಲಿದ್ದ ಅಮೆರಿಕಾದ ಕೆಂಡ್ರಿಕ್ಸ್ ಹುರಿದುಂಬಿಸುತ್ತಿದ್ದ… ಪ್ರೋತ್ಸಾಹಿಸುತ್ತಿದ್ದ… ಎಲ್ಲರದ್ದೂ ಒಂದೇ ಚೀತ್ಕಾರ… ಗೋ ಮಾಂಡೋ… ಗೋ ಮಾಂಡೋ… ಕೋಲನ್ನು ಬಾಕ್ಸ್‌ಗೆ ನೆಟ್ಟು ಗಾಳಿಯಲ್ಲಿ ಗಿರಕಿ ಹೊಡೆದು, ಅಡ್ಡ ಕೋಲನ್ನು ದಾಟಿ, ಇನ್ನೇನು ಕೈಯನ್ನು ಮೇಲೆತ್ತಬೇಕು.. ಮಾಂಡೋನೊಡನೆ ಅಡ್ಡ ಕೋಲೂ ಕೆಳಗುರುಳಿತ್ತು… ನಿಶ್ಯಬ್ದ..ಲ ಯಬದ್ಧವಾಗಿ ಚೀರುತ್ತಿದ್ದವರೆಲ್ಲಾ ‘ಓ….’ ಎಂದು ನಿಟ್ಟುಸಿರುಬಿಟ್ಟಿದ್ದರು.
ಎರಡನೇ ಪ್ರಯತ್ನ… ಕರತಾಡನ.. ಗೋ ಮಾಂಡೋ.. ಎಂಬ ಚೀತ್ಕಾರ.. ಅಷ್ಟೇ ವೇಗವಾಗಿ ಮತ್ತೊಮ್ಮೆ ಚಿಮ್ಮಿದ ಮಾಂಡೋನೊಡನೆ ಮತ್ತೊಮ್ಮೆ ಅಷ್ಟೇ ವೇಗವಾಗಿ ಅಡ್ಡ ಕೋಲೂ ನೆಲಕ್ಕುರುಳಿತ್ತು. ಸ್ಟೆಡೆ ಡಿ ಫ್ರಾನ್ಸ್ ನಲ್ಲಿ ಸ್ಮಶಾನ ಮೌನ… ಪ್ರೇಕ್ಷಕರ ನಡುವಿನಲ್ಲಿ ಕೂತಿದ್ದ ಅವನ ಗೆಳತಿಯ ಕಣ್ಣಿನಲ್ಲಿ ಕಾಣುತ್ತಿದ್ದದ್ದು ವಿಷಾದವೋ, ಭಯವೋ, ನಂಬಿಕೆಯೋ… ಆದರೆ ಮಾಂಡೋ ತನ್ನ ಸೋಲನ್ನು ಒಪ್ಪಿಕೊಂಡು, ಇದ್ದುದರಲ್ಲಿ ನೆಮ್ಮದಿಯಾಗಿರುವ ಜಾಯಮಾನದವನಲ್ಲ ನೋಡಿ… ಮತ್ತೆ ಬಂದ ಮಾಂಡೋ.. ತನ್ನ ಕೊನೆಯ ಅಟೆಂಪ್ಟ್‌ಗಾಗಿ.. ತನ್ನೆಲ್ಲ ಭಯವನ್ನು, ಅಪನಂಬಿಕೆಯನ್ನು ಕೊಡವಿಕೊಂಡು.. ಸ್ಟೆಡೆ ಡಿ ಫ್ರಾನ್ಸಿನಲ್ಲಿ ಮತ್ತೊಮ್ಮೆ ವಿದ್ಯುತ್ ಸಂಚಾರವಾಗಿತ್ತು. ಪ್ರೇಕ್ಷಕರೆಲ್ಲರೂ ತಮ್ಮ ಸೀಟಿನ ಅಂಚಿಗೆ ಬಂದು ಮಾಂಡೋನನ್ನು ನೋಡುತ್ತಿದ್ದರು. ಮತ್ತೊಮ್ಮೆ ಲಯಬದ್ಧ ಕರತಾಡನ… ಮಾಂಡೋ ಉಸಿರನ್ನು ದೀರ್ಘವಾಗಿ ಒಳಗೆಳೆದುಕೊಂಡು ಓಡುತ್ತಾ ಬಂದ… ಕೋಲನ್ನು ಬಾಕ್ಸಿಗೆ ನೆಟ್ಟು ಆಕಾಶಕ್ಕೆ ಚಿಮ್ಮಿದ… ಅಲ್ಲೇ ಗಿರಕಿ ಹೊಡೆದು, ಅಡ್ಡ ಕೋಲನ್ನು ದಾಟಿ, ಅಷ್ಟೇ ನಾಜೂಕಾಗಿ ಕೈಗಳನ್ನು ಈಚೆಗೆ ಎಳೆದುಕೊಂಡು, ಅದೇ ಕೈಗಳನ್ನು ಎದೆಗೆ ಒತ್ತಿಕೊಂಡು, ನೆಲಹಾಸಿನಿಂದ ಪುಟಿದೆದ್ದು ಎಂಟನೇ ಬಾರಿ ವಿಶ್ವದಾಖಲೆಯ ಬರೆದು ತನ್ನದೇ ದಾಖಲೆಯನ್ನು ಮತ್ತೊಮ್ಮೆ ಮುರಿದ!
ಪ್ರೇಕ್ಷಕರ ಚೀತ್ಕಾರ ಮುಗಿಲು ಮುಟ್ಟಿತ್ತು. ಅಲ್ಲಿ ನೆರೆದಿದ್ದ ಅಷ್ಟೂ ಜನರು ಅವನ ಗೆಲುವನ್ನು ತಮ್ಮ ಗೆಲುವಂತೆ ಸಂಭ್ರಮಿಸಿದರು. ಅವರತ್ತ ಕೈಬೀಸುತ್ತಿದ್ದ ಮಾಂಡೋನ ಕಣ್ಣುಗಳು ಹುಡುಕುತ್ತಿದ್ದದ್ದು ಆನಂದಭಾಷ್ಪದಲ್ಲಿ ಮಿಂದಿದ್ದ ಅವಳ ಕಂಗಳನ್ನು. ಗ್ಯಾಲರಿಯಲ್ಲಿ ಅವಳು ಕಂಡೊಡನೆ ಓಡೋಡಿ ಬಂದ ಮಾಂಡೋ ಅವಳನ್ನು ಬಿಗಿದಪ್ಪಿ, ಸಿಹಿಮುತ್ತನಿತ್ತು ತನ್ನ ಗೆಲವಿನ ಸಂಭ್ರಮವನ್ನು ಇಮ್ಮಡಿಗೊಳಿಸಿದ… ಪೋಲ್ ವಾಲ್ಟ್ ಕ್ರೀಡೆಯಲ್ಲಿ ಹೊಸ ಅಧ್ಯಾಯವನ್ನು ಬರೆದ ಮಾಂಡೋ ತಾನು ಪೋಲ್ ವಾಲ್ಟ್ ಕ್ರೀಡೆಯ ಅನಭಿಷಿಕ್ತ ದೊರೆಯೆಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ.
5.90 ಮೀ ಎತ್ತರ ಜಿಗಿದು ದ್ವಿತೀಯ ಸ್ಥಾನದಲ್ಲಿದ್ದ ಕೆಂಡ್ರಿಕ್ಸ್‌ಗಿಂತ ಎಷ್ಟೋ ಮುಂದಿದ್ದ ಮಾಂಡೋ ಗೆ 6.25 ಮೀ ಜಿಗಿಯುವುದು ಅನಿವಾರ್ಯವಾಗಿರಲಿಲ್ಲ. ಆದರೂ ತನ್ನ ಆತ್ಮವಿಶ್ವಾಸವನ್ನು ಕುಗ್ಗಿಸದೆ, ಒತ್ತಡಕ್ಕೆ ಮಣಿಯದೆ, ತನ್ನ ಕೌಶಲ್ಯವನ್ನು ಓರೆಗೆ ಹಚ್ಚಿ ಕೊನೆಯ ಪ್ರಯತ್ನದಲ್ಲಿ ಗುರಿಮುಟ್ಟಿದ ಮಾಂಡೋ ಡೂಪ್ಲ್ಯಾಂಟೀಸಿನಂತ ಕ್ರೀಡಾಪಟುಗಳಿಂದ ಕಲಿಯುವುದು ಎಷ್ಟೊಂದಿದೆ ಅಲ್ಲವೇ?