ನಮ್ಮ ರಾಮಪ್ಪ ಊರ್ ಮಂದೀಗೆಲ್ಲಾ ಬೋ ಒಳ್ಳೆವ್ನೂಂತ ಹೆಸ್ರು ತಕಂಡಿದ್ದ. ಯಾರೂ ಶತ್ರುಗ್ಳೆ ಇರ್ಲಿಲ್ಲ. ಯಾರಿಗಾನಾ ಮನ್ಯಾಗೆ ಮದ್ವಿ ಮುಂಜೀ ಅಂದ್ರೆ ವಸಿ ಸ್ಯಾನೆ ನೀರು ಬಿಡೋದು, ನಲ್ಲಿ ತಾವ ಹೆಂಗುಸ್ರು, ನಾನ್ ಬಿಂದಿಗೆ ಮಡಗಿದ್ದೆ, ನಾನು ಮೊದ್ಲು ಅಂತ ಜಗ್ಳ ಪಗ್ಳ ತೆಗುದ್ರೋ ನಾಜೂಕಾಗಿ ಬಿಡುಸ್ತಿದ್ದ. ಯಾರ್ನೂ ರೇಗ್ದೇ, ಕ್ವಾಪಾ ಮಾಡ್ ಕಣ್ದೆ ಸಲೀಸಾಗಿ ತಮಾಸಿ ಮಾಡ್ಕಂಡು, ರೇಗುಸ್ಕಂಡು ಜೀವ ತಣ್ಣಗೆ ಮಾಡ್ತಿದ್ದ. ಯಾರ್ ತಾವ್ಲೂ ಜಗ್ಳ ಮಾಡ್ಕಂಡಿದ್ದೇ ಇಲ್ಲ. ಊರ ಹೆಂಗುಸ್ರ ಪಾಲಿಗೆಲ್ಲಾ ಒಳ್ಳೆವ್ನೇ.
ಸುಮಾ ಸತೀಶ್ “ರಂಗಿನ ರಾಟೆ” ಸರಣಿಯಲ್ಲಿ ಚಿಕ್ಕರಾಮಪ್ಪ ಎಂಬುವವರ ಕುರಿತು ಬರಹ ನಿಮ್ಮ ಓದಿಗೆ

ನಂಗೆ ಬುದ್ಧಿ ಬರೋತ್ಗಾಗ್ಲೇ ರಾಮಪ್ಪುಂಗೆ ಒಂದೈವತ್ತು ವರ್ಸ ಆಗಿತ್ತೂಂತ ಅನ್ಸತೈತೆ. ತಲೆಗೂದ್ಲೂ ನರೆ ಬಂದಿತ್ತು. ಆದ್ರೂವೇ ಚಿಕ್ಕರಾಮಪ್ಪ ಅಂತ್ಲೇಯಾ ಕರೀತಿದ್ದಿದ್ದು. ಯಾತುಕ್ಕೇಂದ್ರೆ ಅವ್ರ ಅಪ್ಪ ಅಮ್ಮ ಇಕ್ಕಿದ್ದೇ ಅಂಗೆ. ಚಿಕ್ಕರಾಮಪ್ಪ ಅಂತ್ಲೆ. ಅದುಕ್ಕೂ ಒಂದು ಕಾರಣವೂ ಐತೆ. ಆಯಪ್ಪನ ಅಣ್ಣನೂ ರಾಮಪ್ಪನೇಯಾ. ಈಯಪ್ಪನ ಹೆಸ್ರೂವೇ ರಾಮಪ್ಪಾಂತ್ಲೇ ಇಕ್ಕೌರೆ. ಅದ್ಯಾತುಕ್ಕೋ ಗೊತ್ತಿಲ್ಲ. ಇಬ್ರೂವೇ ರಾಮಪ್ಪ.‌ ಒಬ್ರುನ್ನ ಕರುದ್ರೆ ಇಬ್ರೂ ಓ‌‌ ಅನ್ನಾಕಿಲ್ವೇ? ಅದ್ಕೇಯಾ ಪಿಲಾನ್ ಮಾಡಿ, ದೊಡ್ಡವುಂಗೆ ದೊಡ್ಡ ರಾಮಪ್ಪ, ಚಿಕ್ಕವುಂಗೆ ಚಿಕ್ಕ ರಾಮಪ್ಪ ಅಂತ ಕರ್ಯಾಕೆ ಸುರು ಹಚ್ಕೊಂಡಿದ್ರು. ತೆಲುಗಿನಾಗೆ ಪೆದ್ದ ರಾಮುಡು, ಚಿನ್ನ ರಾಮುಡು ಆಗಿತ್ತು. ಒನ್ನೊಂದ್ ಕಿತ ಚಿನ್ನ ಹೋಗಿ ಸನ್ನ ಆಗ್ತಿತ್ತು. ಸನ್ನ ರಾಮಪ್ಪಾನೋ ಚಿನ್ನ ರಾಮಪ್ಪಾನೋ ಆಗ್ತಿದ್ದ. ನಮ್ಮನ್ಯಾಗೆ ಚಿನ್ನ ರಾಮಪ್ಪಾಂತ್ಲೇ ಕರೀತಿದ್ರು.

ನಮ್ಮ‌ಮನ್ಯಾಗೆ ಮನೇ ಮಗನ ತರಾನೇ ಆಗಿದ್ದ ರಾಮಪ್ಪ. ತೆಂಗಿನ ಮರದ ತರ ಸಣ್ಣಕೆ ಉದ್ದೂಕೆ ಇದ್ದ. ಉದ್ದೂಕಿರೋ ಅಂಗಿ ಇಕ್ಕಂತಿದ್ದ. ಮಂಡಿ ತಕ ಬರಾಂಗೆ ಪಟಾಪಟಿ ನಿಕ್ಕರ್ ಹಾಕ್ಕಂತಿದ್ದ. ಪಂಚೆ ಇಕ್ಕಂತಿರ್ಲಿಲ್ಲ. ಹಬ್ಬ ಹುಣ್ಣಿಮೇನಾಗೆ ಮಾತ್ರ ಒಂದು ಪಂಚೆ ಇಕ್ಕಂತಿದ್ದ. ಉಳಿದಂಗೆ ಬರೀ ನಿಕ್ಕರೇಯಾ. ಬೋ ಚುರುಕಾಗಿ ಅಡ್ಡಾಡ್ತಿದ್ದ. ಏಸೊಂದು ಕೆಲ್ಸ ‌ಮಾಡ್ತಿದ್ದಾಂದ್ರೆ ಹಟ್ಯಾಗೆ ಹೆಂಗುಸ್ರೂ ಆಸೊಂದು ಮಾಡಾಕಿಲ್ವೇನೋ ಅನ್ನಂಗೆ.

ಹಳ್ಳೆಣ್ಣೆ ‌ಮಾಲೀಸು

ನಮ್ಮಪ್ಪುಂಗೆ ರೂಡಿ ಆಗಿದ್ದು, ಮಾಲೀಸು ಮಾಡಾಕೆ ಬಂದ ಮ್ಯಾಗೆ. ವಾರುಕ್ಕೆ ಒಂದ್ ಕಿತ ಮೈ ತುಂಬಾ ಹಳ್ಳೆಣ್ಣೆ ಹಚ್ಚಿ, ಚೆಂದಾಕಿ ಮಾಲೀಶ್ ಮಾಡ್ತಿದ್ದ. ಕೈ ಕಾಲು ಬೆನ್ನು ತಲೆ ಎಲ್ಲಾದ್ಕೂ ಹಳ್ಳೆಣ್ಣೆ ಕೈತುಂಬಾ ಸುರ್ಕೊಂಡು ಪಟಪಟಾಂತ ಹೊಡೀತಿದ್ದ. ನರಗುಳ್ನ ಹಿಡ್ಕಂಡು ಮಾಲೀಸ್ ಮಾಡ್ತಿದ್ದ. ಕೈಕಾಲು ನೋವೆಲ್ಲಾ ಮಾಯಾ ಆಗ್ತಿತ್ತು. ನಂಗೆ ಈವಪ್ಪನ ನೆಪ್ಪಾದಾಗ್ಲೆಲ್ಲಾ ಕುವೆಂಪು ಅವರ ಅಜ್ಜಯ್ಯನ ಅಭ್ಯಂಗನದ ಕತೇನೇ ಕಣ್ಮುಂದ್ಕೆ ಬರ್ತೈತೆ. ಯಾಕೇಂದ್ರೆ ಅಪ್ಪಂಗೆ, ಅಣ್ಣಂಗೆ ಮಾತ್ರಾ ಅಲ್ಲ, ಮನೀಗ್ ಬಂದಿರಾ ಗಂಡು ಹುಡುಗ್ರಿಗೆ ದೆಕ್ಲೂ(ಸಹಿತ) ಹಳ್ಳೆಣ್ಣೆ ಸ್ನಾನಾ ಮಾಡುಸ್ತಿದ್ದ. ಹಳೇ ಗೋಣೀಚೀಲ ಹಾಕಿ ಕುಂಡ್ರಿಸಿ, ಅಂಗೈಯ ಬಟ್ಟಲು ಮಾಡ್ಕಂಡು, ಅದ್ರ ತುಂಬಾ ಎಣ್ಣೆ ಸುರ್ಕೊಂಡು ಮಾಲೀಸು ಮಾಡ್ತಿದ್ರೆ, ಗೋಣೀಚೀಲ್ವೂ ಎಣ್ಣೆ ಸ್ನಾನ ಮಾಡ್ತಿತ್ತು. ಆಮ್ಯಾಕೆ ಅದ್ನೂವೇ ಚೌಳು ಮಣ್ಣು ಸುರ್ದು ರಪರಪನೆ ಕಲ್ಲಿನ ಮ್ಯಾಗೆ ಹೊಡ್ದೇ ಕಿಲೀನ್ ಮಾಡ್ಬೇಕಿತ್ತು. ಎಣ್ಣೆ ಹಾಕೋದು ಒಂದು ಕತೇ ಆದ್ರೆ, ಮುಂದಿಂದು ಅದ್ನ ತೆಗೆಯಾದು. ರಾತ್ರೀನೇ ಒಲೀಗೆ ಹುಣಿಸೇ ಹೊಟ್ಟು ತುಂಬಿ ಉರಿ ಹಾಕ್ತಿದ್ದ. ಅದ್ರ ಕಾವಿಗೆ ಹಂಡೆ ಚೆಂದಾಕಿ ಬಿಸಿ ಆಗಿ, ನೀರು ಮಳ್ಳೋಗ್ತಿತ್ತು.(ಮರಳು) ಮಸಳೋ ನೀರಿಗೆ ತಣ್ಣೀರು ಬೆರ್ಸಿ ಸ್ನಾನ ಮಾಡ್ತಿದ್ವಿ. ತಲೇಗೆ ಎಣ್ಣೆ ನೀರಾಕ್ಕೊಂಡ್ರೆ ಆ ನೀರು ಸಾಲ್ತಿರಲಿಲ್ಲ. ಅದ್ಕೇಯಾ ತಿರ್ಗಾ ಬೆಳಿಗ್ಗೇಗೆ ತೆಂಗಿನ್ ಮಟ್ಟೆ, ಕಟ್ಟಿಗೆ, ಎಲ್ಲಾ ತುರುಕಿ ಉರಿ ಹಾಕ್ತಿದ್ದ. ಬೆಳ್ ಬೆಳಗ್ಗೆ ನೆತ್ತೀಗೆ ಎಣ್ಣೆ ಹಾಕಿದ್ರೆ ಒಂದೆರಡು ಗಂಟೆ‌ ಅಂಗೆ ನೆನಕಂಬೋದು. ಯಾಪಾಟಿ ಉಷ್ಣ ನೆತ್ತಿಗೇರಿದ್ರೂ ಎದುರ್ಕೊಂಡು ಓಡೋಯ್ತಾ ಇರ್ಬೇಕು ಆಪಾಟಿ ಎಣ್ಣೆ ಹಾಕ್ತಿದ್ದ. ಬಾಟ್ಲುಗಟ್ಲೆ ಹಳ್ಳೆಣ್ಣೆ ಖರ್ಚಾಗ್ತಿತ್ತು. ಈಗ ಕಾಲು ಲೀಟರ್ ತಂದು ಮಡಿಕ್ಕೊಂಡ್ರೆ ಆರು ತಿಂಗಳಾದ್ರೂ ಅಂಗೇ ಕುಂತಿರ್ತೈತೆ. ಬಿಡಿ ಅತ್ಲಾಗೆ ಹಾಳಾಗೋಗ್ಲಿ.

ಎಣ್ಣೆ ಹಾಕಿದ್ದಾದ್ ಮ್ಯಾಗೆ ಮುಂದಿನ್ ಕತೇಗೆ ಹೋಗಾಣ.

ಆಮ್ಯಾಕೆ ಸೀಗೆಪುಡಿ, ಚಿಗುರು ಪುಡಿ ಹಾಕಿ ತಲೆ ಮೈಕೈ ಉಜ್ಜಿದ್ರೆ‌ ಪಳಪಳಾಂತ ಹೊಳೀಬೇಕು‌ ಅಂಗೆ ಮಾಡ್ತಿದ್ದ. ಒಂದು ಹಂಡೆ ಬಿಸಿ ಬಿಸಿ ನೀರು ಸುರೀತಿದ್ದ. ಬಚ್ಚಲು ಮನೇಗ್ಳಿಂದ ಹೊರೀಕ್ ಬಂದೇಟ್ಗೆ ಸುಸ್ತಾಗಿರ್ತಿತ್ತು. ತಿಂಡಿ ಗಿಂಡಿ ತಿಂದು ಮಲಿಕ್ಕ ಬಿಟ್ರೆ ಗಟ್ಟಿ ನಿದ್ದೇನೇಯಾ. ಮನ್ಯಾಗೆ ವಾರಕ್ಕೊಂದು ದಪ ಅದೊಂದು ದೊಡ್ಡ ಸಂಭ್ರಮ ಆಗಿತ್ತು. ಸನಿವಾರ(ಶನಿವಾರ) ಅಪ್ಪುಂಗೆ‌ ಹಳ್ಳೆಣ್ಣೆ ಸ್ನಾನ ತಪ್ತಿರ್ಲಿಲ್ಲ. ಶನ್ ಶನಿವಾರ ವಾರ ಮಾಡ್ತಿದ್ರು. ಅವೊತ್ತು ಈರುಳ್ಳಿ ಬೆಳ್ಳುಳ್ಳಿ ತಿಂತಿರ್ಲಿಲ್ಲ. ‌ಹೊಲುದ್ ತಾವ್ಕೆ ಹೋಗಿ ನರಸಿಂಹ ಸ್ವಾಮಿ ಗುಡೀಲಿ ಕಾಯಿ ಒಡುಸ್ಕೊಂಡು ಬರ್ತಿದ್ರು.

ಗ್ಯಾಂಗ್ ಮ್ಯಾನು

ಇಂಗೆ ಮೊದ್ ಮೊದ್ಲು ವಾರುಕ್ಕೊಂದು ಕಿತ ಮಾಲೀಸು ಮಾಡಾಕೇಂತ ಮನೇಗೇ ಬರ್ತಿದ್ದ ನಮ್ಮ ರಾಮಪ್ಪ. ಅಪ್ಪ‌ ಪಂಚಾಯ್ತಿ ಚೇರ್ಮನ್ನು ಆಗಿದ್ರಲ್ಲ. ಆಗ ನಂಗೊಂದು ಕೆಲ್ಸ ಕೊಡ್ಸಣ್ಣ ಅಂತ ಬೆನ್ನು ಬಿದ್ದಿದ್ದ. ಎಂತಾ ಕೆಲ್ಸಾ ಮಾರಾಯಾ ಅಂದ್ರೆ, ನಮ್ಮಣ್ಣುಂಗೆ ಸಿಕ್ಕಿರಾ ಕೆಲ್ಸ ಐತಲ್ಲ, ಅಂತಾದ್ದೇ ಬೇಕೂಂತ ಹಠ ಹಿಡ್ದಿದ್ದ. ಅವ್ರಣ್ಣ ಗ್ಯಾಂಗ್ ಮ್ಯಾನು ಆಗಿದ್ದ. ಈ ಗ್ಯಾಂಗ್ ಮ್ಯಾನಿನ ಕೆಲ್ಸ ಏನಪ್ಪಾಂದ್ರೆ ಟಾರು ರಸ್ತೇನಾಗೆ ದಿನಸಾಲ ಮೇಗೆ(ದಿನ ಕಳೆದಂಗೆ) ಸವ್ದೂ ಸವ್ದೂ ಗುಂಡಿ ಗಿಂಡಿ ಬಿದ್ದಿರ್ತೈತಲ್ಲ, ಅವುನ್ನ ಮುಚ್ಚಾ ಕೆಲ್ಸ. ಬೆಳಗೆದ್ದು ದಿನಾ ರಸ್ತೆ ಮ್ಯಾಗೆ ಒಂದು ಎರ್ಡು ಮೂರು ಮೈಲಿ ಉದ್ದೂಕೆ ನಡ್ಕೋ ಹೋಗೋದು. ಎಲ್ಲಾನಾ ಗುಂಡಿ ಕಾಣ್ತೋ ಅದ್ರಾಗೆ ಜಲ್ಲಿ ಕಲ್ಲು ಇಲ್ಲಾ ಮಣ್ಣು ಹಾಕಿ ಮುಚ್ಚಾದು. ಗುಂಡಿ ಇಲ್ಲದಿದ್ರೆ ಸುಮ್ಕೆ ವಾಪಸ್ ಬರಾದು. ಸ್ಯಾನೆ ಕೆಲ್ಸ ಏನೂ ಇಲ್ದೆ ಸಂಬ್ಳ ತಕಂತಿದ್ದ ದೊಡ್ಡ ರಾಮಪ್ಪ. ಪಿ ಡಬ್ಲೂಡಿ (PWD) ಡಿಪಾರ್ಟ್ಮೆಂಟ್‌ನಿಂದ ಈ ಕೆಲ್ಸಾ ಕೊಟ್ಟಿದ್ರು. ಸರ್ಕಾರಿ ಸಂಬಳ ತಕಂತಿದ್ದ. ಒಂದು ಏಳೆಂಟು ಮೈಲೀ ರಸ್ತೇಗೆ ಒಂದು ‌ಮೂರ್ನಾಕು ಜನ ಗ್ಯಾಂಗ್ ಮ್ಯಾನುಗ್ಳು ಇರ್ತಿದ್ರು. ಒಬ್ಬೊಬ್ಬರೂ ಒಂದೆರ್ಡು ಮೂರು ಕಿಲೋಮೀಟ್ರು ನೋಡ್ಕಂತಿದ್ರು.

ವಾಟರ್ ಮ್ಯಾನು

ಸರಿ ಆಟೊತ್ಗೆ NRWS ಸ್ಕೀಮು ಸರ್ಕಾರದಿಂದ ಬಂತಲ್ಲ, ಅದೇಯಾ ಹಳ್ಳಿಗ್ಳಾಗೆ ಬೋರ್ ಹಾಕ್ಸಿ, ಬೀದಿಗಳಾಗೆ ಕೊಳಾಯಿ ಹಾಕ್ಸಿ ಕೊಡೋ ಯೋಜ್ನೆ‌. ಅದ್ರಾಗೆ ನಮ್ಮ ರಾಮಪ್ಪುಂಗೆ ವಾಟರ್ ಮ್ಯಾನ್ ಕೆಲ್ಸ ಕೊಡಿಸಿದ್ರು. ಊರಿಗೆಲ್ಲ ದಿನಾ ಹೊತ್ತಾರೆ ಮತ್ತೆ ಹೊತ್ತು ಮುಳುಗೋ ಟೇಮ್ನಾಗೆ ಕೊಳಾಯಿನಾಗೆ ನೀರು ಬಿಡಾ ಕೆಲ್ಸ. ಒಂದು ನಲವತ್ತು ಐವತ್ತು ರೂಪಾಯಿ ಸಂಬಳಾ ಬರ್ತಿತ್ತು.‌ ಅದ್ನ ಪಂಚಾಯ್ತೀಗ್ಳಿಂದ ಕೊಡ್ತಿದ್ರು. ಆವಪ್ಪ ನೀರು ಬಿಡಾಕಿದ್ದ ಕರೆಂಟ್ ರೂಮು ಅಥವಾ ನೀರಿನ ರೂಮು ನಮ್ಮನೇ ನ್ಯಾರುಕ್ಕೇ ಇತ್ತಾ.‌ ತಕಳಪ್ಪ, ಕೆಲ್ಸ ಕೊಡಿಸಿದ್ ಖುಶೀಲಿ ಬೆಳಗೂ ಬೈಗೂ ನಮ್ಮನೇಲಿ ಎಲ್ಲಾ ಕೆಲ್ಸ ಬೊಗ್ಸೆ ಮಾಡ್ಕೊಡ್ತಿದ್ದ.‌ ಆಗಿನ್ ಕಾಲುಕ್ಕೆ ಎಣ್ ಮಕ್ಕಳಿಗೇಂತ್ಲೇ ಕಟ್ಟು ಮಾಡಿದ್ದ ಕೆಲ್ಸಾನೂ ಮಾಡ್ಕೊಡ್ತಿದ್ದ ಅಂಬೋದು ಸೋಜಿಗ್ವೇ ಸೈ.

ಮಾಡ್ದೇ ಇದ್ದ ಕೆಲ್ಸವೇ ಇಲ್ಲ

ಬೆಳ ಬೆಳಗಾನಾ ಹಾಸ್ಗೆ ಸುತ್ತೋದ್ರಿಂದ ಹಿಡ್ದು ರಾತ್ರೆ ಹಾಸ್ಗೇ ಹಾಸಾ ಗಂಟಾ ನೋಡ್ಕಂತಿದ್ದ. ನೀರೊಲೆಗೆ ಪುಳ್ಳೆ ಹಾಕಿ, ಹಾಸ್ಗೆ ಸುತ್ತಿ, ಕಸಾ‌ ಉಡುಗ್ತಿದ್ದ.(ಗುಡಿಸೋದು) ತರಕಾರಿ ಹಚ್ಚಿ ಕೊಡ್ತಿದ್ದ. ನಾಷ್ಟಾಕ್ಕಾ, ಸಾರಿಗಾ, ರೊಟ್ಟೀಗಾ ಅಂತ ಕ್ಯೋಳಿ ಬಲು ಪಸಂದಾಗಿ ಹಚ್ಚುತ್ತಿದ್ದ. ಸಾರಿಗೆ ಒರಳಿನಾಗೆ ಮಸಾಲೆ ಕುಟ್ಟಿ ಕೊಡೋದು, ಖಾರ ಕುಟ್ಟಿ ಕೊಡೋದು ಎಲ್ಲಾದ್ಕೂ ಸೈ. ದೋಸೆಗೆ ಇಡ್ಲಿಗೇ ಅಕ್ಕಿ ನೆನಾಕಿ, ಆರ್ಸಿ, ರೆಡೀ ಇಕ್ಕಿರ್ತಿದ್ರು ನಮ್ಮಮ್ಮ. ಅದುನ್ನ ಕುಟ್ಟಿ ಕೊಡ್ತಿದ್ದ. ನಮ್ಮಮ್ಮ‌ ಜರಡೀ ಹಿಡ್ಕೊಂಡು ನೀರಲ್ಲಿ ನೆನೆಸಿಕ್ಕೋರು. ಸ್ಯಾನೆ ಹೂವ ಇದ್ದಾಗ ಅದುನ್ನ ನಮ್ಮಮ್ಮ ಕಟ್ಟುತ್ತಾ ಇದ್ರೆ ತಾನೂ ಕುಂತು ಹುವ್ವಾನೂ ಕಟ್ದಿದ್ದ ಆಸಾಮಿ. ರಾತ್ರೆ ಹಾಸ್ಗೆ ಹಾಕಿ, ಸೊಳ್ಳೆ ಪರ್ದಾ ಕಟ್ಟಿ, ಮನೆಗೆ ಹೋಗ್ತಿದ್ದ. ಅಲ್ಲಿಗೆ ಡ್ಯೂಟಿ ಮುಗೀತು. ಅನ್ನಯ್ಯ ಅಕ್ಕಯ್ಯ ಅಂಬ್ತಾ ಬಾಯ್ತುಂಬಾ ಕರ್ಕೊಂಡು ಅಡ್ಡಾಡ್ತಿದ್ದ. ನಮ್ ತಾತ ಪೆದ್ದಯ್ಯ, ಅಜ್ಜಿ ಪೆದ್ದಮ್ಮ ಆಗಿದ್ರು.

ರಾಮಪ್ಪನ ಸಂಬಳ

ಪಂಚಾಯ್ತೀನೋರು ಕೊಡ್ತಿದ್ದ ಸಂಬಳ ಚೆಂದಾಕಿತ್ತು. ಎಲ್ಡು ಹೆಣ್ಣು, ಎಲ್ಡು ಗಂಡು ಮಕ್ಕಳು ಇದ್ವು. ಅಪ್ಪ ಜನತಾ ಯೋಜನೇನಾಗೆ ಮನೆ ಕಟ್ಟಾಕೆ ಜಾಗ ಕೊಡ್ಸಿದ್ರು. ಮನ್ಯಾಗೆ ಆಸೋಂದು ಕೆಲ್ಸಾ ಮಾಡ್ತಿದ್ದ. ಸುಮ್ಕೆ ಎಂಗಿರಾದು. ದಿನಾ ರಾತ್ರೆ ಬೀಡಿ ಕಾಸಾಕೆ ಹತ್ತು ಪೈಸೆ‌ ಕೊಡ್ತಿದ್ರು. ಬೆಂಕಿ ಪಟ್ನ ಖಾಲಿ ಆಗಿದ್ದಾಗ “ಅಕ್ಕೋ ಇಪೊದ್ದು ಪಾವಲಾ ಈಯಿ. ಅಗ್ಗಿ ಪೆಟ್ಟಿ ತೀಸ್ಕೋವಲ್ಲ” (ಅಕ್ಕೋ ಇವತ್ತು ನಾಲ್ಕಾಣೆ ಕೊಡು. ಬೆಂಕಿ ಪಟ್ನ ತಕಾಬೇಕು)ಅಂತ ಕೇಳಿ ಇಸ್ಕಂತಿದ್ದ. ಜಲೀಲ್ ಬೀಡಿ ಕಾಸ್ತಿದ್ದ.( ಸೇದೋದು) ನಮ್ ತ್ವಾಟದಾಗಿಂದ ಬೇಕ್ ಬೇಕಾದಾಗ ತರಕಾರಿ ಪರಕಾರಿ ಕಿತ್ಕೋ ಹೋಗೋ ಅಧಿಕಾರ ಇತ್ತು. ಮನೀಗೆ ಬೇಕಾದ ಕಾಯಿ, ಬೆಲ್ಲ, ಹುಣಿಸೆ ಹಣ್ಣು, ಕಟಾವು ಮಾಡಿದ್ ಕಾಲ್ದಾಗೆ ಕಣ‌ ಮಾಡ್ದಾಗ ದವಸ ದಾನ್ಯಾ ಎಲ್ಲಾ ಕೊಡ್ತಿದ್ರು. ನೀರೊಲೆಗೆ, ಸೌದೆ ಒಲೇಗೆ ಬ್ಯಾಕಾಗಿರೋ ಸೌದೆ, ತೆಂಗಿನ ಮಟ್ಟೆ, ಹುಣಿಸೆ ಹೊಟ್ಟು ಎಲ್ಲಾ ಸಿಗ್ತಿತ್ತು. ಅಡಿಕೆಲೆಗೆ ಕಾಸೂ ಕೊಡ್ತಿದ್ರು. ಕಾಪೀ ಕಾಸಿ ಕೊಡಕ್ಕಾ ಅಂತ ಕೇಳ್ತಿದ್ದ. ಒನ್ನೊಂದು ಸತಿ ತಿಂಡಿ ಪಂಡಿ ತಿಂಬ್ತಿದ್ದ. ಸಾರು ಬುಡಕ್ಕಾ ಅಂತ ಬೇಕಾದ್ರೆ ಸಾರು ತಕಾ ಓಯ್ತಿದ್ದ. ಮುದ್ದೆ ಉಂಡ್ರೇನೇ ಜೀವಕ್ಕೆ ನೆಮ್ದಿ ಅಂತಾವಾ ಮನ್ಯಾಗೆ ಹಿಟ್ಟು ಉಂಡು ಬರ್ತಿದ್ದ. ಅಪ್ರೂಪುಕ್ಕೆ ನಮ್ಮನ್ಯಾಗೆ ಉಣ್ತಿದ್ದ. ಹಬ್ಬ ಹರಿದಿನದಾಗೆ ಮಾತ್ರ ಒಬ್ಬಟ್ಟು, ಅನ್ನ ಅದೂ ಇದೂ ಮನೇಗೆ ತಕಂಡೋಗ್ತಿದ್ದ. ಸಂಜೆ ಹೊತ್ನಾಗೆ‌ ಮಾತ್ರ ಕಾಪೀ ಜೊತ್ಗೆ ಹಾಳೂ ಮೂಳೂ(ಈ ಸ್ನ್ಯಾಕ್ಸ್ ಅತ್ವಾ ಕುರುಕುಲು ತಿಂಡೀಗೆ ನಮ್‌ ಕಡೆ ಅಂಗೇ ಯೋಳ್ತಿದ್ವಿ. ಈಗ್ಲೂ ಹಾಳೂ ಮೂಳೂ ಅಂತ್ಲೇಯಾ ಅನ್ನೋದು.) ತಿನ್ನಾಕೆ ಆಸೆ ಮಾಡ್ತಿದ್ದ. ಇದೇ ರಾಮಪ್ಪನ ಸಂಬಳ ಉಂಬಳ.

ಅಂದರಿಕೀ ಮಂಚಿವಾಡು ರಾಮಪ್ಪ

ನಮ್ಮ ರಾಮಪ್ಪ ಊರ್ ಮಂದೀಗೆಲ್ಲಾ ಬೋ ಒಳ್ಳೆವ್ನೂಂತ ಹೆಸ್ರು ತಕಂಡಿದ್ದ. ಯಾರೂ ಶತ್ರುಗ್ಳೆ ಇರ್ಲಿಲ್ಲ. ಯಾರಿಗಾನಾ ಮನ್ಯಾಗೆ ಮದ್ವಿ ಮುಂಜೀ ಅಂದ್ರೆ ವಸಿ ಸ್ಯಾನೆ ನೀರು ಬಿಡೋದು, ನಲ್ಲಿ ತಾವ ಹೆಂಗುಸ್ರು, ನಾನ್ ಬಿಂದಿಗೆ ಮಡಗಿದ್ದೆ, ನಾನು ಮೊದ್ಲು ಅಂತ ಜಗ್ಳ ಪಗ್ಳ ತೆಗುದ್ರೋ ನಾಜೂಕಾಗಿ ಬಿಡುಸ್ತಿದ್ದ. ಯಾರ್ನೂ ರೇಗ್ದೇ, ಕ್ವಾಪಾ ಮಾಡ್ ಕಣ್ದೆ ಸಲೀಸಾಗಿ ತಮಾಸಿ ಮಾಡ್ಕಂಡು, ರೇಗುಸ್ಕಂಡು ಜೀವ ತಣ್ಣಗೆ ಮಾಡ್ತಿದ್ದ. ಯಾರ್ ತಾವ್ಲೂ ಜಗ್ಳ ಮಾಡ್ಕಂಡಿದ್ದೇ ಇಲ್ಲ. ಊರ ಹೆಂಗುಸ್ರ ಪಾಲಿಗೆಲ್ಲಾ ಒಳ್ಳೆವ್ನೇ. ನೀರು ನಿಡಿ ಬಿಡ್ತಿದ್ದ. ಜಗ್ಳ ಪಗ್ಳ ಬುಡಿಸ್ತಿದ್ದ. ತಲೆ‌ಮ್ಯಾಗೆ ಭಾರದ ಹೊರೆ ಹೊತ್ಕಂಡು ಬರಾ ಹೆಂಗುಸ್ರಿಗೆ ಹೊರೆ ಹೊರಿಸಾಕೆ, ತಾನೂ ವಸಿ ದೂರ್ಕೆ ಹೊತ್ಕೋ ಹೋಗಾಕೆ, ಮನೀ ತಾವ್ಕೆ ಕೊಟ್ಟು ಬರಾಕೆ ಸೊಂಟ ಕಟ್ಟಿ‌ ನಿಲ್ಲಾ‌ ಆಸಾಮಿ. (ಹೆಂಗ್ಸಿನ ಮನ್ಸು)

ಬಸ್ಸಿಗೆ ಹತ್ಸೋದು ಇಳ್ಸೋದು

ಅಪ್ಪಾ‌ ಎಲ್ಲಾನಾ ಊರಿಗೋಗ್ಬೇಕಾದ್ರೆ ಬಸ್ಸಿನ ತಂಕ ಹೋಗಿ, ಬಸ್ಸತ್ತಿಸಿ ಬರ್ತಿದ್ದ. ಜೊತೇಗೆ ಮನೆ ತಾವ ಬಂದಿರೋ ಜನ್ವೆಲ್ಲಾ ಹೋಗ್ತಿದ್ರು. ಅಣ್ಣಯ್ಯನ್ನ ಬಸ್ಸತ್ತಿಸಿ ಬರಾಮಿ ಅಂತ. ಕಡೇ ಬಸ್ಸು ಬಂತೂಂದ್ರೆ, ಓ ಅಣ್ಣಯ್ಯ ಬರ್ತಾನೆ ಅಂತ ಬಸ್ ಸ್ಟ್ಯಾಂಡ್ ತಾವ್ಕೇ ಹೋಗಿ, ಕರ್ಕಾ ಬರೋರು. ಅಲ್ಲಿನ್ ಸುದ್ದೀ ಮಾತಾಡ್ಕಂತ ಮನೆ ತಾವ ವಸಿ ಹೊತ್ತು ಕುಂತ್ಕಣಾರು.

ಬೆಳಿಗ್ಗೆ ಎದ್ದೇಟಿಗೇ ನಮ್‌ ಕಣ್ಣಿಗೆ ರಾಮಪ್ಪಾನೇ ಕಾಣ್ತಿದ್ದಿದ್ದು. ರಾತ್ರೆ ಮನಿಗೋ ಹೊತ್ನಾಗೂ ರಾಮಪ್ನೇ ಕಾಣ್ತಿದ್ದಿದ್ದು. ರಾಮಪ್ಪ ಇಲ್ದೇ ನಮ್ ದಿನವೇ ಇಲ್ಲ. ಸೂರ್ಯಾನೂ ಆವಪ್ಪನೇ, ಚಂದ್ರಾನೂ ಆವಪ್ಪನೇ. ಸುಸ್ತು ಗಿಸ್ತು ಅಂತ ಕುಂತ್ಕಣಾ ಆಸಾಮಿ ಆಗಿರ್ಲೇ ಇಲ್ಲ.‌ ಬಡಕಲು ಮೈಯಾಗೆ ಅದೇಸು ಸಕ್ತಿ ಇತ್ತು. ನಗ್ತಾ ನಗ್ತಾ, ಎಲ್ಲುರ್ನೂ ನಗಿಸ್ತಾ ತಿರುಗ್ತಿದ್ದ. ನಮ್ಮನೇಗೇ ಬರಾ ನಾಗಮ್ಮ, ಕಮಲಮ್ಮ, ನಂಟ್ರು, ಇಷ್ಟರೂ ಎಲ್ಲಾರ್ನೂ ನಗುಸ್ಕಂತಾ, ಎಲ್ಲಾರ್ಗೂ ಬೇಕಾದೋನಾಗಿದ್ದ ರಾಮಪ್ಪ ಇವತ್ತು ಆಕಾಸದಾಗೆ ನಕ್ಸತ್ರವಾಗೌನೆ. ಬಾಲ್ಯದಾಗೆ ನನ್ನ ಎತ್ತಿ ಆಡಿಸಿ, ಮನೆ ಮಗುಳ್ ತರ ನೋಡ್ಕಂಡಿದ್ದ ಏಸೊಂದು ಜನ ರಾಮಪ್ಪನ ಕೂಟಾ ನಕ್ಸತ್ರವಾಗೌರೆ ಅಂದ್ರೆ ಅವ್ರ ನೆಪ್ಪುಗಳಿಗೆ ಎದೆ ಭಾರ ಆಗೋದ್ರಾಗೆ ಏನು ಸೋಜಿಗ ಐತೆ?