ಅವರು ನನ್ನ ಹೆಸರು ಕೇಳಿದರು. ತಮ್ಮ ಬಗ್ಗೆ ತಿಳಿಸಿದರು. ಅವರು ಬೆಳಗಾವಿ ಕಡೆಯವರು. ಜಮೀನುದಾರರು. ನನ್ನ ಹೆಸರು ಕೇಳಿದರು. ನನ್ನ ‘ಜಾಣತನ’ಕ್ಕೆ ಅವರು ಮೆಚ್ಚಿಕೊಂಡಿದ್ದರು. ತಮಗೆ ಮಕ್ಕಳಿಲ್ಲವೆಂದೂ ನನಗೆ ದತ್ತು ತೆಗೆದುಕೊಳ್ಳುವುದಾಗಿಯೂ ತಿಳಿಸಿದರು. ನನ್ನ ಅಭಿಪ್ರಾಯ ಕೇಳಿದರು. ನಾನು ಒಪ್ಪಿದೆ. (ಅವರಿಗಾಗಲಿ ನನಗಾಗಲಿ ಹಿಂದೂ ಮುಸ್ಲಿಂ ಎಂಬ ಭಾವವೇ ಇರಲಿಲ್ಲ.) ಹಾಗಾದರೆ ನಿಮ್ಮ ಮನೆಯ ವಿಳಾಸ ಹೇಳು ಎಂದಾಗ ಹೇಳಿದೆ. ಅವರು ತಮ್ಮ ಪುಟ್ಟ ಡೈರಿಯಲ್ಲಿ ಬರೆದುಕೊಂಡರು. ಅಲ್ಲಿಯೆ ಇದ್ದ ಹೋಟೆಲ್‌ಗೆ ಕರೆದುಕೊಂಡು ಹೋದರು. ಬೇಸನ್ ಉಂಡಿ ಕೊಡಿಸಿದರು.
ರಂಜಾನ್ ದರ್ಗಾ ಬರೆಯುವ ಆತ್ಮಕತೆ ʻನೆನಪಾದಾಗಲೆಲ್ಲʼ ಸರಣಿಯ 57ನೇ ಕಂತು ನಿಮ್ಮ ಓದಿಗೆ.
1961-1962ರಲ್ಲಿ ನಾನು ಐದನೇ ಇಯತ್ತೆ ಇದ್ದಾಗಿನ ಪ್ರಸಂಗವಿದು. ಎಫ್.ವೈ. (ಆಗ ಪಿ.ಯು.ಸಿ. ಒಂದೇ ವರ್ಷದ್ದಾಗಿತ್ತು. ಅದಕ್ಕೆ ಫಸ್ಟ್ ಇಯರ್ ಎನ್ನುತ್ತಿದ್ದರು.) ಓದುತ್ತಿದ್ದ ನನ್ನ ಹಿರಿಯ ಮಿತ್ರ ಶಿವಶರಣ ಅವರು ತಮ್ಮ ಗ್ರಾಮವಾದ ಡೊಮ್ಮನಾಳಕ್ಕೆ ಹೋಗಿದ್ದರು. ಅವರು ರವಿವಾರ ವಾಪಸ್ ಬರುವವರಿದ್ದರು. ಅವರನ್ನು ಬರಮಾಡಿಕೊಳ್ಳಲು ಬಸ್ ಸ್ಟ್ಯಾಂಡ್‌ಗೆ ಹೋಗಿದ್ದೆ. ಜಿಲ್ಲಾ ಕೇಂದ್ರವಾದ ವಿಜಾಪುರದಲ್ಲಿ ಆ ಕಾಲದಲ್ಲಿ ಬಸ್ ನಿಲ್ದಾಣವಿರಲಿಲ್ಲ! ವಿಜಾಪುರದ ಅತಿ ದೊಡ್ಡ ಬಾವಿಯಾದ ತಾಜ್ ಬಾವಡಿಯ ಬಲಗಡೆ ಗೋಡೆಯ ಭಾಗವಾಗಿ ವಿಶಾಲವಾದ ಕಮಾನುಗಳಿಂದ ಕೂಡಿದ ಉದ್ದನೆಯ ಕೋಣೆಗಳ ಸಾಲೇ ವಿಜಾಪುರ ನಗರದ ಬಸ್ ಸ್ಟ್ಯಾಂಡ್ ಆಗಿತ್ತು! ಆ ಕೋಣೆಸಾಲುಗಳ ಕೊನೆಯಲ್ಲಿನ ಇನ್ನೂ ವಿಶಾಲವಾದ ಕೋಣೆಯಲ್ಲಿ ಒಂದು ಹೋಟೆಲ್ ನಡೆಯುತ್ತಿತ್ತು. ಮುಂದೆ ಹತ್ತಾರು ರೆಡ್‌ಬೋರ್ಡ್ ಬಸ್‌ಗಳು ನಿಲ್ಲುವಷ್ಟು ವಿಶಾಲವಾದ ಜಾಗವಿತ್ತು. ಆಗ ವಿಜಾಪುರ-ಬೆಂಗಳೂರು ಬಸ್ ಕೂಡ ಇರಲಿಲ್ಲ. ಸಿಟಿಬಸ್‌ಗಳಾಗಲೀ, ಆಟೋಗಳಾಗಲೀ, ಸೈಕಲ್ ರಿಕ್ಷಾಗಳಾಗಲೀ ಇರಲಿಲ್ಲ. ಗಂಟೆಗೆ ಒಂದಾಣೆಯಂತೆ ಬಾಡಿಗೆ ಸೈಕಲ್‌ಗಳು ಸಿಗುತ್ತಿದ್ದವು. ಮಹಿಳೆಯರಿಗೆ ಕಾಲ್ನಡಿಗೆಯೆ ಗತಿ. ಏನಿದ್ದರೂ ಟಾಂಗಾಗಳದ್ದೇ ದರ್ಬಾರು.
ಬಸ್ ಸ್ಟ್ಯಾಂಡಲ್ಲಿ ಬಸ್ ಕಾಯುತ್ತ ಕುಳಿತಾಗ ಪಕ್ಕದಲ್ಲೊಬ್ಬರು ದಪ್ಪನೆಯ ಮೀಸೆಯ ಧಾಡಸಿ ಮನುಷ್ಯ ಕುಳಿತಿದ್ದರು. ಬಗಲಲ್ಲಿ ರಿವಾಲ್ವರ್ ಇತ್ತು. ನಾನು ಕುತೂಹಲದಿಂದ ಅದನ್ನೇ ನೋಡುತ್ತಿದ್ದೆ. ಅವರು ಮಾತನಾಡಿಸಿದರು. ನಾನು ಬಂದ ಕಾರಣ ತಿಳಿಸಿದೆ. ನನ್ನ ದೃಷ್ಟಿ ರಿವಾಲ್ವರ್ ಮೇಲೆ ಇದ್ದುದನ್ನು ಗಮನಿಸಿದ ಅವರು ಅದನ್ನು ಕವಚದಿಂದ ತೆಗೆದು ನನ್ನ ಕೈಯಲ್ಲಿ ಕೊಟ್ಟರು. ಆ ಕಪ್ಪನೆಯ ರಿವಾಲ್ವರ್ ಭಾರ ಎನಿಸಿತು. ಆದರೆ ನನ್ನ ಖುಷಿಗೆ ಮೇರೆ ಇರಲಿಲ್ಲ. ಅದರಲ್ಲಿ ಗುಂಡುಗಳು ಇರದ ಕಾರಣ ಯಾವುದೇ ಭಯವಿರಲಿಲ್ಲ. ಅದನ್ನು ಮಡಚಿದಾಗ ಓಪನ್ ಆಯಿತು. ಅದು ಏಳು ಗುಂಡುಗಳನ್ನು ತುಂಬಿಕೊಳ್ಳುವ ರಿವಾಲ್ವರ್ ಆಗಿದ್ದ ನೆನಪು. ಅವರು ಏನೂ ಹೇಳಲಿಲ್ಲ. ಆದರೆ ನಾನು ಅದರ ಮೇಲೆ ಮಾಡುತ್ತಿರುವ ಪ್ರಯೋಗವನ್ನು ತದೇಕ ಚಿತ್ತದಿಂದ ನೋಡುತ್ತಿದ್ದರು. ಟ್ರಿಗ್ಗರ್ ಒತ್ತಿದಾಗ ಒಂದು ಗುಂಡಿನ ದುಂಡನೆಯ ಖಾನೆ ಮುಂದು ಸರಿದು ಇನ್ನೊಂದು ಗುಂಡಿನ ಖಾನೆ ಮುಂದಕ್ಕೆ ಬರುತ್ತಿತ್ತು.
ಅವರು ನನ್ನ ಹೆಸರು ಕೇಳಿದರು. ತಮ್ಮ ಬಗ್ಗೆ ತಿಳಿಸಿದರು. ಅವರು ಬೆಳಗಾವಿ ಕಡೆಯವರು. ಜಮೀನುದಾರರು. (ಯಾವುದೋ ಊರ ಗೌಡರು ಇದ್ದಿರಬಹುದು. ಅವರು ಹಾಗೆ ಹೇಳಿದ್ದು ಮಾತ್ರ ನೆನಪಿಲ್ಲ.) ನನ್ನ ಹೆಸರು ಕೇಳಿದರು. ನನ್ನ ‘ಜಾಣತನ’ಕ್ಕೆ ಅವರು ಮೆಚ್ಚಿಕೊಂಡಿದ್ದರು. ತಮಗೆ ಮಕ್ಕಳಿಲ್ಲವೆಂದೂ ನನಗೆ ದತ್ತು ತೆಗೆದುಕೊಳ್ಳುವುದಾಗಿಯೂ ತಿಳಿಸಿದರು. ನನ್ನ ಅಭಿಪ್ರಾಯ ಕೇಳಿದರು. ನಾನು ಒಪ್ಪಿದೆ. (ಅವರಿಗಾಗಲಿ ನನಗಾಗಲಿ ಹಿಂದೂ ಮುಸ್ಲಿಂ ಎಂಬ ಭಾವವೇ ಇರಲಿಲ್ಲ.) ಹಾಗಾದರೆ ನಿಮ್ಮ ಮನೆಯ ವಿಳಾಸ ಹೇಳು ಎಂದಾಗ ಹೇಳಿದೆ. ಅವರು ತಮ್ಮ ಪುಟ್ಟ ಡೈರಿಯಲ್ಲಿ ಬರೆದುಕೊಂಡರು. ಅಲ್ಲಿಯೆ ಇದ್ದ ಹೋಟೆಲ್‌ಗೆ ಕರೆದುಕೊಂಡು ಹೋದರು. ಬೇಸನ್ ಉಂಡಿ ಕೊಡಿಸಿದರು. ಇಬ್ಬರೂ ಪೂರಿ ತಿಂದೆವು. ಚಹಾ ಕುಡಿದು ಹೊರ ಬರುವಷ್ಟರಲ್ಲಿ ನಾನು ಕಾಯುತ್ತಿದ್ದ ಬಸ್ ಬಂದಿತು. ಶಿವಶರಣ ಬಸ್ಸಿಂದ ಇಳಿದರು. ನಾನು ಇವರಿಗೆ ಕೃತಜ್ಞತೆಯೊಂದಿಗೆ ‘ಹೋಗ್ತೀನ್ರಿ’ ಎಂದು ಹೇಳಿ ಶಿವಶರಣ ಜೊತೆ ಹೊರಟೆ.
ಸ್ವಲ್ಪ ದಿನಗಳ ನಂತರ ಈ ಘಟನೆ ಮರೆತುಹೋಗಿತ್ತು. ಒಂದೆರಡು ತಿಂಗಳು ಕಳೆದಿರಬಹುದು. ನಾನು ಶಾಲೆ ಬಿಟ್ಟನಂತರ ಮನೆಗೆ ಬಂದಾಗ ನನ್ನ ತಾಯಿ ಹೇಳಿದಳು. ‘ಯಾರೋ ಒಬ್ಬರು ಟಾಂಗಾದಲ್ಲಿ ಬಂದಿದ್ದರು. ನಿನ್ನ ದತ್ತಕ್ಕ ತೊಗೊಳುದಾಗಿ ಹೇಳಿದರು. ಆಗುದಿಲ್ರಿ ಅಂತ ಹೇಳ್ದೆ. ಅವರು ಹೋದ್ರು’ ಎಂದು ತಿಳಿಸಿದರು. ನನಗೆ ಬಹಳ ಬೇಸರವಾಯಿತು. ಆಮೇಲೆ ಅವರು ಬರಲಿಲ್ಲ. ನನಗೋ ಅವರ ಹೆಸರೂ ಗೊತ್ತಿರಲಿಲ್ಲ. ತದನಂತರ ಅವರು ನೆನಪಾಗಿ ಉಳಿದರು. ನಮ್ಮ ಸಮಾಜ ಎಷ್ಟೊಂದು ತಿಳಿ ಮನಸ್ಸಿನದಾಗಿತ್ತು! ಜನರ ಪ್ರೀತಿ, ವಿಶ್ವಾಸ ಮತ್ತು ಜಗಳಗಳು ಓಪನ್ ಆಗಿ ಇದ್ದವು. ‘ಇಂದಿನ ಸಮಾಜದಲ್ಲಿ ನಾನು ಹೊರಗಿನವನು’ ಎಂಬ ಭಾವ ಕಾಡುತ್ತಲೇ ಇದೆ.
ವಿಜಾಪುರದಲ್ಲಿನ ನಮ್ಮ ನಾವಿಗಲ್ಲಿ ಸರ್ವಜನಾಂಗಗಳ ಶಾಂತಿಯ ತೋಟವಾಗಿತ್ತು. ಮರಾಠಿ ಮಾತನಾಡುವ ನಾವಿ (ಹಡಪದ) ಸಮಾಜದವರು, ದುಡಿಯಲು ರಾಯಚೂರು ಕಡೆಯಿಂದ ಬಂದ ಕುಟುಂಬಗಳು (ಅವರಿಗೆ ಮೊಘಲಾಯಿ ಕಡೆಯಿಂದ ಬಂದವರು ಎಂದು ಸ್ಥಳೀಯರು ಹೇಳುತ್ತಿದ್ದರು.) ಕನ್ನಡ ಮಾತನಾಡುವ ಹಡಪದ ಸಮಾಜದವರು, ಗಾಣಿಗರು, ಬಣಜಿಗರು, ಪಂಚಮಸಾಲಿಗಳು ಮುಂತಾದ ಲಿಂಗಾಯತರು. (ಇವರೆಲ್ಲರಿಗೆ ಜನ ಲಿಂಗಾಯತರು ಎಂದೇ ಕರೆಯುತ್ತಿದ್ದರು. ಆದರೆ ಕ್ಷೌರಿಕರು ಮತ್ತು ಗಾಣಿಗರ ಮುಖವನ್ನು ಬೆಳಿಗ್ಗೆ ಎದ್ದಕೂಡಲೆ ನೋಡಬಾರದು ಎಂಬ ಮೂಢನಂಬಿಕೆ ಪ್ರಚಲಿತವಾಗಿತ್ತು.) ಐನಾರರು, ಮುಸ್ಲಿಮರು, ಸಮಗಾರರು, ಮಚಗಾರರು, ದಲಿತರು ಮುಂತಾದವರು ನಾವಿಗಲ್ಲಿಯ ಭಾಗವಾಗಿದ್ದರು. ಈ ಎಲ್ಲ ಜಾತಿ ಧರ್ಮಗಳವರಲ್ಲಿ ಬಡವರದೇ ಸಿಂಹಪಾಲು. ಸ್ವಲ್ಪ ದೊಡ್ಡ ಮನೆ ಮತ್ತು ಚಿಕ್ಕ ವ್ಯಾಪಾರಿಗಳು ಕೂಡ ಶ್ರೀಮಂತರೆಂದೇ ಭಾವಿಸಿದ್ದರು. ಅದೇನೇ ಇದ್ದರೂ ಸಮಾಜದಲ್ಲಿ ಯಾರೂ ಧಿಮಾಕು ತೋರಿಸುತ್ತಿದ್ದಿಲ್ಲ. ಜಾತಿ, ಅಸ್ಪೃಶ್ಯತೆಯಂಥ ಅನಿಷ್ಟಗಳು ರೂಢಿಗತವಾಗಿ ದೈನಂದಿನ ಬದುಕಿನಲ್ಲಿದ್ದವು. ಆದರೆ ಮನಸ್ಸಿಗೆ ತಾಕಿರಲಿಲ್ಲ.
ಆಗಿನ ಕಾಲದಲ್ಲಿ ಹಣದ ಚಲಾವಣೆ ಬಹಳ ಕಡಿಮೆ ಇತ್ತು. ಎಲ್ಲೆಡೆ ಚಿಲ್ಲರೆ ಹಣದ್ದೇ ಕಾರುಬಾರು. ತೂತಿನ ದುಡ್ಡು ಅತಿ ಹೆಚ್ಚು ಚಲಾವಣೆಯಯಾಗುತ್ತಿದ್ದ ನಾಣ್ಯವಾಗಿತ್ತು. (ಆಗಿನ್ನೂ ನಯಾಪೈಸೆ ಬಂದಿರಲಿಲ್ಲ.) 64 ದುಡ್ಡು ಕೂಡಿದರೆ ಒಂದು ರೂಪಾಯಿ ಆಗುತ್ತಿತ್ತು. ನಾಲ್ಕು ದುಡ್ಡು ಕೂಡಿದರೆ ಆಣೆ, ಎರಡು ಆಣೆ ಕೂಡಿದರೆ ಚವಲಿ, ಎರಡು ಚವಲಿ ಕೂಡಿದರೆ ಒಂದು ಪಾವಲಿ, ಎರಡು ಪಾವಲಿ ಕೂಡಿದರೆ ಎಂಟಾಣೆ, ಎರಡು ಎಂಟಾಣೆ ಕೂಡಿದರೆ ಒಂದು ರೂಪಾಯಿ(64 ದುಡ್ಡು).
ಆಗಿನ ಕಾಲದಲ್ಲಿ ಒಂದು ರೂಪಾಯಿಯ ಮಹತ್ವ ಎಷ್ಟಿತ್ತೆಂದರೆ ಒಬ್ಬ ಪ್ರಸಿದ್ಧ ಕಲಾವಿದ ಹದಿವಯಸ್ಸಿನಲ್ಲಿ ಒಂದು ರೂಪಾಯಿಯ ನೋಟನ್ನು ರೂಪಾಯಿ ನೋಟಿನ ಹಾಗೆಯೆ ಚಿತ್ರಿಸಿ ಕಿರಾಣಿ ಅಂಗಡಿಯಲ್ಲಿ ತನಗೆ ಬೇಕಾದ ವಸ್ತುಗಳನ್ನು ಕೊಂಡಿದ್ದ! ಕಿರಾಣಿ ಅಂಗಡಿಯಲ್ಲಿ ತೂತಿನ ದುಡ್ಡುಗಳೇ ತುಂಬಿರುತ್ತಿದ್ದವು. ಯಾರಾದರೂ ರೂಪಾಯಿ ಅಥವಾ ಎರಡು ರೂಪಾಯಿ ಚಿಲ್ಲರೆ ಕೇಳಿದರೆ ಅಂಗಡಿಯವರು ಖುಷಿಯಿಂದ ಚಿಲ್ಲರೆ ಕೊಡುತ್ತಿದ್ದರು. ಮನೆಗೆಲಸದವರಿಗೆ ತಿಂಗಳಿಗೆ ಎರಡು ಅಥವಾ ಮೂರು ರೂಪಾಯಿ ಕೂಲಿ ಇರುತ್ತಿತ್ತು! 25 ರೂಪಾಯಿಗೆ ಒಂದು ಚೀಲ (100 ಕಿಲೊ) ಜೋಳ ಸಿಗುತ್ತಿತ್ತು. ಒಂದು ರೂಪಾಯಿಗೆ ನೂರು ಕುಳ್ಳು (ಬೆರಣಿ)ಗಳನ್ನು ದೂರದಿಂದ ಮನೆಗೆ ತಂದು ಸುರಿಯುತ್ತಿದ್ದರು.
ಒಂದೆರಡು ತಿಂಗಳು ಕಳೆದಿರಬಹುದು. ನಾನು ಶಾಲೆ ಬಿಟ್ಟನಂತರ ಮನೆಗೆ ಬಂದಾಗ ನನ್ನ ತಾಯಿ ಹೇಳಿದಳು. ‘ಯಾರೋ ಒಬ್ಬರು ಟಾಂಗಾದಲ್ಲಿ ಬಂದಿದ್ದರು. ನಿನ್ನ ದತ್ತಕ್ಕ ತೊಗೊಳುದಾಗಿ ಹೇಳಿದರು. ಆಗುದಿಲ್ರಿ ಅಂತ ಹೇಳ್ದೆ. ಅವರು ಹೋದ್ರು’ ಎಂದು ತಿಳಿಸಿದರು. ನನಗೆ ಬಹಳ ಬೇಸರವಾಯಿತು. ಆಮೇಲೆ ಅವರು ಬರಲಿಲ್ಲ. ನನಗೋ ಅವರ ಹೆಸರೂ ಗೊತ್ತಿರಲಿಲ್ಲ. ತದನಂತರ ಅವರು ನೆನಪಾಗಿ ಉಳಿದರು. ನಮ್ಮ ಸಮಾಜ ಎಷ್ಟೊಂದು ತಿಳಿ ಮನಸ್ಸಿನದಾಗಿತ್ತು!
ಕೊರವರ ಹೆಣ್ಣು ಮಕ್ಕಳು ಪೊರಕೆ, ಬುಟ್ಟಿ ಮುಂತಾದವುಗಳನ್ನು ರೊಟ್ಟಿಯ ಲೆಕ್ಕದಲ್ಲಿ ಕೂಡ ಮಾರುತ್ತಿದ್ದರು. ಲಂಬಾಣಿ ಹೆಣ್ಣುಮಕ್ಕಳು ಮೊಸರು ಮಾರಲು ಬರುತ್ತಿದ್ದರು. ಯಾವ ಗ್ಲಾಸಲ್ಲಿ ಜೋಳ, ಗೋದಿ ತುಂಬಿ ಕೊಡುತ್ತಿದ್ದೆವೋ ಅದೇ ಗ್ಲಾಸ್ ತುಂಬಿ ಮೊಸರು ಕೊಡುತ್ತಿದ್ದರು. ಹೀಗೆ ಬಾರ್ಟರ್ ಸಿಸ್ಟಂ ಕೂಡ ಕಾಣಬಹುದಾಗಿತ್ತು. ಬಹಳಷ್ಟು ಜನರು 60 ರೂಪಾಯಿಗೆ ಮೂರಿಪ್ಪತ್ತು ಎನ್ನುತ್ತಿದ್ದರು. ಮೂರು ಇಪ್ಪತ್ತರದ ಹತ್ತು ಎಂದರೆ 70 ರೂಪಾಯಿ. ಶಂಬೋರ್ ಎಂದರೆ ನೂರು ರೂಪಾಯಿ. ಅಲ್ಲಿಗೆ ಇವರ ಲೆಕ್ಕ ಮುಗಿಯಿತು. ಯಾವ ಸಮಾಜದಲ್ಲಿ ಹಣದ ಚಲಾವಣೆ ಕಡಿಮೆ ಇರುತ್ತದೆಯೋ ಆ ಸಮಾಜದಲ್ಲಿ ಗುಣದ ಚಲಾವಣೆ ಜಾಸ್ತಿ ಇರುತ್ತದೆ.
ನಮ್ಮ ಬಾಡಿಗೆ ಮನೆ ಎದುರಿಗೆ ಕ್ಷೀರಸಾಗರ ಅಡ್ಡಹೆಸರಿನ ನಾವಿ ಸಮಾಜದವರ ಮನೆ ಇತ್ತು. ಅಣ್ಣ ತಮ್ಮಂದಿರಿಬ್ಬರು ಅನ್ಯೋನ್ಯವಾಗಿದ್ದರು. ಇಬ್ಬರೂ ಕ್ಷೌರಿಕ ವೃತ್ತಿಯನ್ನು ಮಾಡುತ್ತಿದ್ದರು. ಅವರ ಸಲೂನ್ ನಗರದ ಗಾಂಧಿಚೌಕ್ ಬಳಿ ಮುಖ್ಯರಸ್ತೆಯ ಮಹಡಿಯ ಮೇಲೆ ವಿಶಾಲವಾಗಿತ್ತು. ಬಹಳಷ್ಟು ವರ್ಷಗಳಿಂದ ಅವರು ಅಲ್ಲಿ ಬಾಡಿಗೆಗೆ ಇದ್ದರು. ಒಮ್ಮೆ ಮಾಲೀಕರು ಬಂದು ತಮ್ಮ ಉಪಯೋಗಕ್ಕೆ ಮಹಡಿ ಬೇಕೆಂದು ಕೇಳಿದಾಗ ಅವರು ತಮ್ಮ ಭವಿಷ್ಯವನ್ನು ಬದಿಗೊತ್ತಿ ಬಿಟ್ಟುಕೊಟ್ಟರು. ಅಂಥ ಸಾತ್ವಿಕರು ಅವರು.
ಅವರು ನಮಗಿಂತ ಹೆಚ್ಚು ಅನುಕೂಲಸ್ಥರಾಗಿದ್ದರು. ಅವರ ವಿಶಾಲವಾದ ಜಾಗದಲ್ಲಿ ಒಂದಿಷ್ಟು ಜಾಗವನ್ನು ನಮ್ಮ ಆಕಳು ಕಟ್ಟಲು ಉಚಿತವಾಗಿ ಕೊಟ್ಟಿದ್ದರು. ಹಸಿವಾದಾಗ ಅವರ ಮನೆಗೆ ಹೋಗಿ ತಿನ್ನುವಷ್ಟು ಅನ್ಯೋನ್ಯವಾಗಿತ್ತು ನಮ್ಮ ಸಂಬಂಧ. ಆ ಇಬ್ಬರು ಅಣ್ಣ ತಮ್ಮಂದಿರರಿಗೆ ಹೆಣ್ಣು ಮಕ್ಕಳಿದ್ದರು. ಆದರೆ ಅಣ್ಣನಿಗೆ ಮಾತ್ರ ಒಬ್ಬ ಮಗನಿದ್ದ. ಆತನ ಹೆಸರು ಶ್ರೀಮಂತ ಎಂದು ನೆನಪಾಗುತ್ತಿದೆ. ಆತ ನನ್ನ ವಾರಿಗೆಯವನಿದ್ದ. ಬಣ್ಣದಲ್ಲೂ ಗುಣದಲ್ಲೂ ಚಿನ್ನದಂಥ ಹುಡುಗ.
ಹೇರ್ ಕಟಿಂಗ್ ಸಲೂನ್ ಕಳೆದುಕೊಂಡ ಮೇಲೆ ಅವರ ಆರ್ಥಿಕ ಪರಿಸ್ಥಿತಿ ಹದಗೆಡಲು ಪ್ರಾರಂಭಿಸಿತು. ಅದೇ ವೇಳೆಯಲ್ಲಿ ಕೊಲ್ಹಾಪುರದ ಶಾಹು ಮಹಾರಾಜರ ಅರಮನೆಯಲ್ಲಿ ಒಬ್ಬ ಕೆಲಸದ ಹುಡಗ ಬೇಕಾಗಿದೆ ಎಂದು ಅವರ ಕೊಲ್ಹಾಪುರದ ಸಂಬಂಧಿಕರು ಹೇಳಿ ಶ್ರೀಮಂತನನ್ನು ಕರೆದುಕೊಂಡು ಹೋಗುವುದಾಗಿ ತಿಳಿಸಿದರು. ಅರಮನೆಯ ಮಕ್ಕಳ ಜೊತೆ ಇರುವುದು, ಅವರ ಜೊತೆ ಶಾಲೆ ಕಲಿಯುವುದು, ಅರಮನೆಯಲ್ಲಿ ಇದ್ದುಕೊಂಡೇ ಓದುವುದು ಮುಂತಾದ ಕನಸುಗಳ ಒಪ್ಪಂದ ಅದಾಗಿತ್ತು. ಮನೆಯವರು ಬಹಳ ಖುಷಿಯಿಂದ ಕಳುಹಿಸಿಕೊಟ್ಟರು. ಅಂಥ ಗೆಳೆಯನನ್ನು ಕಳೆದುಕೊಂಡ ನಾನು ಬಹಳ ದುಃಖಪಟ್ಟೆ.
ಕೊಲ್ಹಾಪುರ ಶಾಹು ಮಹಾರಾಜರ ಬಗ್ಗೆ ಆ ವಯಸ್ಸಿನಲ್ಲಿ ನನಗೆ ಏನೂ ಗೊತ್ತಿರಲಿಲ್ಲ. ಅವರು ಜಾತಿ ಮತ್ತು ಅಸ್ಪೃಶ್ಯತೆ ವಿರುದ್ಧ ಜನಜಾಗೃತಿ ಮೂಡಿಸಿದ ಮೊದಲ ರಾಜ. ತಾವು ನಿಧನರಾದಾಗ ಶವಸಂಸ್ಕಾರದ ವಿಧಿವಿಧಾನಗಳಿಗೆ ಬ್ರಾಹ್ಮಣರನ್ನು ಕರೆಸಬಾರದು ಎಂದು ಹೇಳಿದವರು. ಅರಮನೆಯನ್ನು ಜಾತಿವ್ಯವಸ್ಥೆಯಿಂದ ಮುಕ್ತಗೊಳಿಸಿದವರು. ಆ ಸಂಸ್ಕಾರದಿಂದಲೇ ನನ್ನ ನಾವಿ ಸಮಾಜದ ಗೆಳೆಯ ಶ್ರೀಮಂತನಿಗೆ ಅರಮನೆಯಲ್ಲಿ ಸ್ಥಾನ ಸಿಕ್ಕಿತು.
ಶ್ರೀಮಂತ ಕೊಲ್ಹಾಪುರಕ್ಕೆ ಹೋಗಿ ಒಂದು ವರ್ಷ ಆಗಿರಲಿಲ್ಲ. ಅರಮನೆಯ ಆವರಣದಲ್ಲಿನ ಗಿಡಕ್ಕೆ ಜೋಕಾಲಿ ಕಟ್ಟಲು ಹೋಗಿ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ. ಈ ಸುದ್ದಿ ಕೇಳಿ ನಾವಿಗಲ್ಲಿಗೆ ನಾವಿಗಲ್ಲಿಯೇ ಮರುಗಿತು. ಮಗನ ಪಾರ್ಥಿವ ಶರೀರವನ್ನು ರಾಜಮನೆತನದ ಗೌರವದೊಂದಿಗೆ ಗಂಧದ ಕಟ್ಟಿಗೆಯ ಚಿತೆಯಲ್ಲಿ ದಹನ ಮಾಡಿದರು ಎಂಬುದೊಂದೇ ಮನೆಯವರ ಸಮಾಧಾನವಾಗಿತ್ತು.
ನಾನಂತೂ ಬಹಳ ನೋವು ಅನುಭವಿಸಿದೆ. ನನ್ನನ್ನು ದತ್ತು ತೆಗೆದುಕೊಳ್ಳಲು ಬಂದ ಬೆಳಗಾವಿಯ ಆ ವ್ಯಕ್ತಿಯ ಕೋರಿಕೆಯನ್ನು ನನ್ನ ತಾಯಿ ನಿರಾಕರಿಸಿದ್ದು ಹೆಮ್ಮೆ ಎನಿಸಿತು.
(ಚಿತ್ರಗಳು: ಸುನೀಲಕುಮಾರ ಸುಧಾಕರ)
ಕನ್ನಡದ ಹಿರಿಯ ಲೇಖಕರು ಮತ್ತು ಪತ್ರಕರ್ತರು. ಬಂಡಾಯ ಕಾವ್ಯದ ಮುಂಚೂಣಿಯಲ್ಲಿದ್ದವರು. ವಿಜಾಪುರ ಮೂಲದ ಇವರು ಧಾರವಾಡ ನಿವಾಸಿಗಳು. ಕಾವ್ಯ ಬಂತು ಬೀದಿಗೆ (ಕಾವ್ಯ -೧೯೭೮), ಹೊಕ್ಕಳಲ್ಲಿ ಹೂವಿದೆ (ಕಾವ್ಯ), ಸಾಹಿತ್ಯ ಮತ್ತು ಸಮಾಜ, ಅಮೃತ ಮತ್ತು ವಿಷ, ನೆಲ್ಸನ್ ಮಂಡೇಲಾ, ಮೂರ್ತ ಮತ್ತು ಅಮೂರ್ತ, ಸೌಹಾರ್ದ ಸೌರಭ, ಅಹಿಂದ ಏಕೆ? ಬಸವಣ್ಣನವರ ದೇವರು, ವಚನ ಬೆಳಕು, ಬಸವ ಧರ್ಮದ ವಿಶ್ವಸಂದೇಶ, ಬಸವಪ್ರಜ್ಞೆ, ನಡೆ ನುಡಿ ಸಿದ್ಧಾಂತ, ಲಿಂಗವ ಪೂಜಿಸಿ ಫಲವೇನಯ್ಯಾ, ಜಾತಿ ವ್ಯವಸ್ಥೆಗೆ ಸವಾಲಾದ ಶರಣರು, ಶರಣರ ಸಮಗ್ರ ಕ್ರಾಂತಿ, ಬಸವಣ್ಣ ಮತ್ತು ಅಂಬೇಡ್ಕರ್, ಬಸವಣ್ಣ ಏಕೆ ಬೇಕು?, ಲಿಂಗವಂತ ಧರ್ಮದಲ್ಲಿ ಏನುಂಟು ಏನಿಲ್ಲ?, ದಾಸೋಹ ಜ್ಞಾನಿ ನುಲಿಯ ಚಂದಯ್ಯ (ಸಂಶೋಧನೆ) ಮುಂತಾದವು ಅವರ ಪ್ರಕಟಿತ ಕೃತಿಗಳಾಗಿವೆ. ಕರ್ನಾಟಕ ಸರ್ಕಾರದ ರಾಷ್ಟ್ರೀಯ ಬಸವ ಪುರಸ್ಕಾರ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಮಾಧ್ಯಮ ಅಕಾಡೆಮಿ ಗೌರವ ಪ್ರಶಸ್ತಿ ಮುಂತಾದ ೫೨ ಪ್ರಶಸ್ತಿಗಳಿಗೆ ಭಾಜನರಾದ ರಂಜಾನ್ ದರ್ಗಾ ಅವರು ಬಂಡಾಯ ಸಾಹಿತ್ಯ ಪರಂಪರೆಯ ಶಕ್ತಿಶಾಲಿ ಕವಿಗಳಲ್ಲಿ ಒಬ್ಬರು. ಅಮೆರಿಕಾ, ನೆದರ್‌ಲ್ಯಾಂಡ್ಸ್, ಲೆಬನಾನ್, ಕೆನಡಾ, ಫ್ರಾನ್ಸ್, ಆಸ್ಟ್ರೇಲಿಯಾ ಸೇರಿದಂತೆ ಇನ್ನೂ ಹಲವು ದೇಶಗಳಲ್ಲಿ ಶರಣ ಸಂಸ್ಕೃತಿ, ಶಾಂತಿ ಮತ್ತು ಮಾನವ ಏಕತೆ ಕುರಿತು ಉಪನ್ಯಾಸ ನೀಡಿದ್ದಾರೆ.