ಕುವೆಂಪು, ಬೇಂದ್ರೆ, ನಿರಂಜನ, ಚದುರಂಗ, ಅಡಿಗ, ಅನಂತಮೂರ್ತಿ, ಶ್ರೀರಂಗ, ಡಿ.ವಿ.ಜಿ ಮುಂತಾದ ಹಿರಿಯ ಲೇಖಕರ ಸಾಹಿತ್ಯ ಸೃಷ್ಟಿಯಿಂದ ಹಿಡಿದು ಆಗಷ್ಟೇ ಸಾಹಿತ್ಯಕ್ಷೇತ್ರ ಪ್ರವೇಶಿಸಿದ ಭರವಸೆದಾಯಕ ಬರಹಗಾರರ ಸಾಹಿತ್ಯದ ವರೆಗೂ ಆಮೂರ್ ಅವರು ವಿಮರ್ಶೆ ಬರೆದರು. ಅವರ ವಿಮರ್ಶೆಯ ಒಳನೋಟಗಳು ಅವರ ಪ್ರತಿಭಾವಂತಿಕೆಗೆ ಸಾಕ್ಷಿಯಾಗಿವೆ. ಕನ್ನಡದ ಕತೆ, ಕಾದಂಬರಿ, ಕಾವ್ಯ, ವಿಮರ್ಶೆ, ನಾಟಕ ಹೀಗೆ ಹಲವು ಪ್ರಕಾರಗಳಲ್ಲಿ ಸೃಷ್ಟಿಯಾದ ಸಾಹಿತ್ಯ ರಾಶಿಯನ್ನು ಅವರು ತಮ್ಮ ವಿಮರ್ಶೆಯ ತೆಕ್ಕೆಯೊಳಗೆ ತೆಗೆದುಕೊಂಡಿದ್ದಾರೆ. ಸಾಹಿತ್ಯದ ಸೂಕ್ಷ್ಮಾವಲೋಕನವನ್ನು ಅವರ ವಿಮರ್ಶೆಯಲ್ಲಿ ಕಾಣುತ್ತೇವೆ.
ಇಂದು ನಿಧನರಾದ ವಿಮರ್ಶಕ ಡಾ. ಜಿ.ಎಸ್. ಆಮೂರರ ಕುರಿತು ಅಶೋಕ್ ಶೆಟ್ಟರ್ ಬರೆದ ಲೇಖನ

 

ಕನ್ನಡದ ಪ್ರಮುಖ ವಿಮರ್ಶಕ ಡಾ. ಗುರುರಾಜ ಶಾಮಾಚಾರ್ಯ ಆಮೂರ್ ತೊಂಬತ್ತೈದು ವರ್ಷಗಳ ತುಂಬು ಬಾಳು ಬದುಕಿ ಇಂದು (2020 ನೇ ಇಸ್ವಿ ಸೆಪ್ಟೆಂಬರ್ 28) ಬೆಳಗಿನ ಜಾವ ನಿಧನ ಹೊಂದಿದ್ದಾರೆ. ಮಿಲ್ಟನ್, ಮನೋಹರ್ ಮಳಗೊಂಕರ, ಯು.ಆರ್. ಅನಂತಮೂರ್ತಿ, ಗಿರೀಶ್ ಕಾರ್ನಾಡ್, ಅ.ನ.ಕೃಷ್ಣರಾಯ, ದ.ರಾ.ಬೇಂದ್ರೆ, ಕುವೆಂಪು, ಮೊದಲಾದ ಸಾಹಿತಿಗಳ ಬಗ್ಗೆ ಮತ್ತು ಕನ್ನಡ ಹಾಗೂ ಇಂಗ್ಲೀಷ್ ಸಾಹಿತ್ಯದ ವಿವಿಧ ಆಯಾಮಗಳ ಕುರಿತು ವಿಸ್ತಾರವಾಗಿ ಬರೆದ ಅವರು ರಾಗ-ದ್ವೇಷಗಳಿಲ್ಲದ ಸಮಚಿತ್ತದ ವಿಮರ್ಶಕರಾಗಿಯೇ ಪರಿಚಿತರು. 1996ರಲ್ಲಿ ಕೆಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮತ್ತು 2006ರಲ್ಲಿ ಪಂಪ ಪ್ರಶಸ್ತಿ ಪುರಸ್ಕೃತರಾಗಿದ್ದ ಆಮೂರರಿಗೆ ಇತ್ತೀಚೆಗಷ್ಟೇ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಸ್ಥಾಪಿಸಿದ ಜೀವಮಾನ ಸಾಧನೆಗಾಗಿ ಕೊಡಮಾಡುವ ‘ನೃಪತುಂಗ ಪ್ರಶಸ್ತಿ’ ಕೂಡ ಘೋಷಿತವಾಗಿತ್ತು. ಆದರೆ ದುರದೃಷ್ಟವಶಾತ್ ಅದನ್ನವರು ಪಡೆದುಕೊಳ್ಳುವ ಮುನ್ನವೇ ಕಾಲವಶರಾಗಿದ್ದಾರೆ.

1925ರಲ್ಲಿ ಧಾರವಾಡ ಜಿಲ್ಲೆಯ ಬೊಮ್ಮನಹಳ್ಳಿಯಲ್ಲಿ ಜನಿಸಿದ ಆಮೂರರು ಧಾರವಾಡದ ಕರ್ನಾಟಕ ಕಾಲೇಜ್ ನಲ್ಲಿ ಬಿ.ಎ ಆನರ್ಸ್ ಪದವಿ ಪಡೆದರು. ಧಾರವಾಡದಲ್ಲಿ ಓದುತ್ತಿದ್ದಾಗ ತಾವು, ತಮ್ಮ ಸಹಪಾಠಿಯಾಗಿದ್ದ (ಕರ್ನಾಟಕದ ಮಾಜಿ ಮುಖ್ಯಮಂತ್ರಿ) ದಿ. ಎಸ್.ಆರ್.ಬೊಮ್ಮಾಯಿ ಮತ್ತಿತರ ಕೆಲವರು ರಾಯಿಸ್ಟ್ಸ್ (ಎಂ.ಎನ್. ರಾಯ್ವಾದಿ) ಆಗಿದ್ದು ಮಾನವೇಂದ್ರನಾಥ್ ರಾಯ್ ಅವರ ರಾಜಕೀಯ, ಸಾಮಾಜಿಕ ಚಿಂತನೆಗಳ ಪ್ರಭಾವಕ್ಕೆ ಒಳಗಾಗಿದ್ದುದಾಗಿ ಆಮೂರ್ ನೆನಪಿಸಿಕೊಳ್ಳುತ್ತಿದ್ದರು. ಆದರೆ ನಂತರದ ಕಾಲಾವಧಿಯಲ್ಲಿ ಅವರು ಸಿದ್ಧಾಂತಗಳನ್ನಾಧರಿಸಿ ಅಸ್ತಿತ್ವಕ್ಕೆ ಬಂದ ಸಾಹಿತ್ಯಿಕ ಚಳುವಳಿಗಳೊಂದಿಗೆ ಗುರುತಿಸಿಕೊಳ್ಳಲಿಲ್ಲ. ಮುಂಬೈ ವಿಶ್ವವಿದ್ಯಾಲಯದಿಂದ ಇಂಗ್ಲೀಷ್ ನಲ್ಲಿ ಸ್ನಾತಕೋತ್ತರ ಪದವಿ ಪಡೆದ ನಂತರ ಕೆಲ ಕಾಲ ಕುಮಟೆಯ ಎ.ವಿ.ಬಾಳಿಗಾ ಕಾಲೇಜಿನಲ್ಲಿ, ಗದಗಿನ ತೋಂಟದಾರ್ಯ ಕಾಲೇಜಿನಲ್ಲಿ ಆಮೂರರು ಪಾಠ ಮಾಡಿದ್ದರು. ಬಾಳಿಗಾ ಕಾಲೇಜಿನ ವಾಚನಾಲಯದ ಸಂಗ್ರಹದಲ್ಲಿದ್ದ ಸಂಸ್ಕೃತವನ್ನೂ ಒಳಗೊಂಡು ಸಾಹಿತ್ಯಕ್ಕೆ ಸಂಬಂಧಿಸಿದ ಎಲ್ಲ ಪುಸ್ತಕಗಳನ್ನು ಸಾದ್ಯಂತವಾಗಿ ಓದಲು ಸಾಧ್ಯವಾದದ್ದು ಆಮೇಲೆ ತಮ್ಮ ವಿಮರ್ಶಾವೃತ್ತಿಯಲ್ಲಿ ನೆರವಿಗೆ ಬಂದುದಾಗಿ ಅವರು ಹೇಳುತ್ತಿದ್ದರು.

ಮಹಾರಾಷ್ಟ್ರದ ಔರಂಗಾಬಾದ್ ನ ಮರಾಠವಾಡ ವಿಶ್ವವಿದ್ಯಾಲಯದ ಇಂಗ್ಲೀಷ್ ವಿಭಾಗದಲ್ಲಿ ನಿಯುಕ್ತರಾಗಿ ಸುದೀರ್ಘ ಕಾಲ ಕರ್ನಾಟಕದ ಹೊರಗೇ ಇದ್ದ ಆಮೂರ್, ‘ದಿ ಕಾನ್ಸೆಪ್ಟ್ ಆಫ್ ಕಾಮೆಡಿ: ಎ ರಿ-ಸ್ಟೇಟ್ಮೆಂಟ್’ ಎಂಬ ತಮ್ಮ ಮಹಾಪ್ರಬಂಧಕ್ಕೆ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ ಪಡೆದಿದ್ದರು. ಫಾರಬಿಡನ್ ಫ್ರುಟ್: ವ್ಯೂಜ್ ಆನ್ ಇಂಡೋ-ಆಂಗ್ಲಿಯನ್ ಫಿಕ್ಶನ್, ಕಲೋನಿಯಲ್ ಕಾನ್ಶಿಯಸ್ನೆಸ್ ಇನ್ ಕಾಮನ್ವೆಲ್ಥ್ ಲಿಟರೇಚರ್, ಕ್ರಿಯೇಶನ್ಸ್ ಆ್ಯಂಡ್ ಟ್ರಾನ್ಸ್ಕ್ರಿಯೇಶನ್ಸ್, ಇಮೇಜಸ್ ಆ್ಯಂಡ್ ಇಂಪ್ರೆಶನ್ಸ್: ಎಸ್ಸೇಜ್ ಮೇನ್ಲೀ ಆನ್ ಕಂಟೆಂಪರರಿ ಇಂಡಿಯನ್ ಲಿಟರೇಚರ್, ಟ್ರಾನ್ಸಗ್ರೆಶನ್ಸ್: ಸ್ಟಡೀಸ್ ಇನ್ ಇಂಡಿಯನ್ ಲಿಟರೇಚರ್ ಇನ್ ಇಂಗ್ಲೀಷ್, ಪರ್ಸೆಪ್ಶನ್ಸ್ ಆಫ್ ಮಾಡರ್ನ್ ಇಂಡಿಯನ್ ಲಿಟರೇಚರ್, ಕಲ್ಕತ್ತೆಯ ರೈಟರ್ಸ್ ವರ್ಕಶಾಪ್ ಪ್ರಕಟಿಸಿದ ದಿ ಪೊಯೆಟಿಕ್ಸ್ ಆಫ್ ಟಿ.ಎಸ್. ಎಲಿಯಟ್: ಆ್ಯನ್ ಅಪ್ರೋಚ್ ಹಾಗೂ ಐಡಿಯಾಸ್ ಆ್ಯಂಡ್ ಇಮೇಜಸ್ ಇವು ಅವರು ಇಂಗ್ಲೀಷ್ ನಲ್ಲಿ ಬರೆದ ಮುಖ್ಯ ಪ್ರಕಟಿತ ಕೃತಿಗಳು. ಶಾಂತಿನಾಥ್ ದೇಸಾಯಿಯವರ ‘ಓಂ ಣಮೋ’ ಕಾದಂಬರಿಯನ್ನು ಅದೇ ಶೀರ್ಷಿಕೆಯಲ್ಲಿ ಮತ್ತು ಆದ್ಯ ರಂಗಾಚಾರ್ಯ(ಶ್ರೀರಂಗ)ರ ನಾಟಕಗಳನ್ನು ಲಿಸನ್ ಜನಮೇಜಯ ಆ್ಯಂಡ್ ಅದರ್ ಪ್ಲೇಜ್ ಎಂಬ ಶೀರ್ಷಿಕೆಯಡಿ ಅವರು ಇಂಗ್ಲೀಷ್ ಗೆ ಅನುವಾದಿಸಿದ್ದಾರೆ. ಫುಲ್ ಬ್ರೈಟ್ ಸೀನಿಯರ್ ಸ್ಕಾಲರ್ಶಿಪ್ ಪಡೆದು ಅವರು 1972-73 ರಲ್ಲಿ ಕ್ಯಾಲಿಪೋರ್ನಿಯಾ ಮತ್ತು ಏಲ್ (Yale) ವಿಶ್ವವಿದ್ಯಾಲಯಗಳಲ್ಲಿ ಕೆಲ ಕಾಲ ಬೋಧನೆ-ಅಭ್ಯಾಸ ಮಾಡಿದರು. ನಿವೃತ್ತಿಯ ನಂತರ ಆಮೂರ್ ಅವರು 1980 ದಶಕದಲ್ಲಿ ಧಾರವಾಡದಲ್ಲಿ ನೆಲೆಸಿದರು. ಆದ್ಯತೆಯ ಮೇರೆಗೆ ಕನ್ನಡ ಸಾಹಿತ್ಯ ಕುರಿತು ಮತ್ತು ಕನ್ನಡದಲ್ಲೇ ಕೃತಿರಚನೆ ಮಾಡತೊಡಗಿದರು. ಅದಾಗಲೇ ಬೇಂದ್ರೆಯವರ ಮುನ್ನುಡಿಯೊಂದಿಗೆ ಅವರ ಕೃತಿಪರೀಕ್ಷೆ ಎಂಬ ವಿಮರ್ಶಾ ಲೇಖನಗಳ ಸಂಕಲನ ಪ್ರಕಟವಾಗಿತ್ತು. ಆಮೇಲೆ ಅವರು ಅರ್ಥಲೋಕ, ಭುವನದ ಭಾಗ್ಯ, ಕಾದಂಬರಿಯ ಸ್ವರೂಪ, ಕನ್ನಡದಲ್ಲಿ ಕಾದಂಬರಿಯ ಬೆಳವಣಿಗೆ, ವ್ಯವಸಾಯ, ಸೀಮೋಲ್ಲಂಘನ, ಒಮ್ಮುಖ ಮೊದಲಾದ ವಿಮರ್ಶಾ ಕೃತಿಗಳನ್ನು ಪ್ರಕಟಿಸಿದರು. ಧಾರವಾಡದ ರಮಾಕಾಂತ್ ಜೋಶಿಯವರ ಸಹಭಾಗಿತ್ವದಲ್ಲಿ ರಾಘವೇಂದ್ರ ಖಾಸನೀಸ್ ಸಮಗ್ರ ಎಂಬ ಶೀರ್ಷಿಕೆಯಲ್ಲಿ ಅವರು ಖಾಸನೀಸ್ ಅವರ ಸಾಹಿತ್ಯವನ್ನು ಸಂಕಲಿಸಿದ್ದಾರೆ. ಸಾಹಿತ್ಯ ಅಕಾಡೆಮಿಯ ಮೇಕರ್ಸ್ ಆಫ್ ಇಂಡಿಯನ್ ಲಿಟರೇಚರ್ ಮಾಲೆಗೆ ದ.ರಾ.ಬೇಂದ್ರೆ, ಅ.ನ.ಕೃಷ್ಣರಾಯ ಮೊದಲಾದವರ ಕುರಿತು ಕೃತಿರಚನೆ ಮಾಡಿದ್ದಾರೆ.

ಒಮ್ಮೆ ಕವಿಮಿತ್ರರೊಬ್ಬರ ಪ್ರೇಮವಿವಾಹದ ನೋಂದಣಿ ಮಾಡಿಸಿ ನೋಂದಣಾಧಿಕಾರಿಯವರ ಕಚೇರಿಯಿಂದ ಒಂದು ಕಿಲೊಮೀಟರ್ ನಡೆದು ಆಝಾದ ಉಪವನದ ಹೊಟೆಲ್ ನಲ್ಲಿ ಊಟ ಮಾಡುತ್ತ “ನೋಡ್ರಿ ಸರ, ನಾನು ನನ್ನ ಮೊದಲ ಕವನ ಸಂಗ್ರಹ ಪ್ರಕಟಿಸುವ ಸಿದ್ಧತೆಯಲ್ಲಿದ್ದೇನೆ. ಅದಕ್ಕೆ ಮುನ್ನುಡಿ ಅಂತ ಏನಾದರೂ ಇದ್ದರೆ ನಿಮ್ಮದೇ ಇರುತ್ತದೆ, ಇಲ್ಲದಿದ್ದರೆ ಯಾರ ಮುನ್ನುಡಿಯೂ ಇಲ್ಲದೇ ಪ್ರಕಟವಾಗುತ್ತದೆ” ಎಂಬ ನನ್ನ ಆಗ್ರಹಕ್ಕೆ ನಕ್ಕು 1992 ರಲ್ಲಿ ಪ್ರಕಟವಾದ ನನ್ನ “ವಿಶ್ವವಿದ್ಯಾಲಯದ ವಾಚನಾಲಯದೊಳಗೆ” ಕವನ ಸಂಕಲನಕ್ಕೆ ಮುನ್ನುಡಿಯನ್ನು ಆಮೂರರು ಬರೆದಿದ್ದರು. ಯಾವುದೇ ಹಮ್ಮು ಬಿಮ್ಮುಗಳಿಲ್ಲದ ಈ ವಿದ್ವಾಂಸರ ಜೊತೆಗಿನ ಒಡನಾಟ ನನಗಿಷ್ಟವಾಗುತಿತ್ತು. ಆಗಿನ ಇತರ ಕನ್ನಡ ವಿಮರ್ಶಕರಿಗಿಂತ ಆಮೂರರು ಹೆಚ್ಚು ಅಪ್ಡೇಟೆಡ್ ಇರುತ್ತಿದ್ದರು. ಪೋಸ್ಟ್-ಮಾಡರ್ನಿಸ್ಟ್ ಚಿಂತನೆಯ ಕುರಿತು ತಮ್ಮದೇ ಖಚಿತ ಒಳನೋಟಗಳನ್ನು ಹೊಂದಿದ್ದರು. ಮರಾಠವಾಡಾ ಯೂನಿವರ್ಸಿಟಿಯ ತಮ್ಮ ದಿನಗಳ ಕುರಿತು ಹೇಳುತ್ತಿದ್ದರು. ಅಲ್ಲಿ ಕೆಲ ವರ್ಷ ತಮ್ಮ ಸಹೋದ್ಯೋಗಿಯಾಗಿದ್ದ, ಸುಪ್ರಸಿದ್ಧ ಕೋಸಲಾ ಕೃತಿಯ ಲೇಖಕ ಬಾಲಚಂದ್ರ ನೇಮಾಡೆಯವರೊಂದಿಗಿನ ಒಡನಾಟದಿಂದ ಮರಾಠಿ ದಲಿತ ಸಾಹಿತ್ಯದ ಔಚಿತ್ಯವನ್ನರಿತವರಾಗಿದ್ದರು. ಕನ್ನಡದ ದಲಿತ ಸಾಹಿತ್ಯದ ಕುರಿತು ಮಾತನಾಡುತ್ತಿದ್ದರು. ಅವರು ವಾಸವಾಗಿದ್ದ ನವೋದಯನಗರದಲ್ಲೇ ನಾನೂ ಒಂದು ಬಾಡಿಗೆ ಮನೆಯಲ್ಲಿದ್ದುದರಿಂದ ಅವರ ಮನೆಗೆ ನಿಯಮಿತವಾಗೇ ಹೋಗುತ್ತಿದ್ದೆ. ತಮ್ಮ ವಾರಿಗೆಯ, ತಮಗಿಂತ ತುಸು ಚಿಕ್ಕವರಾದ ಸಾಹಿತಿ-ವಿಮರ್ಶಕರ ಕುರಿತು ಅವರು ಹೇಳುತ್ತಿದ್ದ ವಿಷಯಗಳು ಕುತೂಹಲಕಾರಿಯಾಗಿರುತ್ತಿದ್ದವು.

ಯಾವುದೋ ಒಂದು ವಿಷಯವನ್ನು ಹೇಳತೊಡಗುವ ಮುನ್ನ (ಉದಾ: ಚೆನ್ನಬಸವನಾಯಕ ಕೃತಿಯನ್ನು ಇತರ ಭಾರತೀಯ ಭಾಷೆಗಳಿಗೆ ಅನುವಾದಿಸುವ ಯೋಜನೆಗೆ ವಿರೋಧ ಬಂದಾಗ ಅದು ಪ್ರಧಾನಿ ನೆಹರೂ ವರೆಗೆ ಹೋಗಿ ಅದರ ಅನುವಾದದ ಭಾಗಗಳನ್ನು ಓದಿ ಅದನ್ನು ಪ್ರಕಟಿಸದಿರಲು ಅವರು ನಿರ್ಧರಿಸಿದ್ದು, ಐಯ್ಯಾಮ್ ನಾಟ್ ಇನ್ ಫೆವರ್ ಆಫ್ ಇಟ್ಸ್ ಟ್ರಾನ್ಸಲೇಶನ್, ನಾಟ್ ಬಿಕಾಜ್ ಇಟ್ ಈಜ್ ಕಾಂಟ್ರೊವರ್ಸಿಯಲ್ ಬಟ್ ಬಿಕಾಜ್ ಇಟ್ ಈಜ್ ನಾಟ್ ಎ ವೆರಿ ಗುಡ್ ವರ್ಕ್ ಎಂದದ್ದು ಇತ್ಯಾದಿ) “ಅದನ್ನ ನಾ ನಿಮಗ ಹೇಳೇನೇನು?” ಎಂದು ಕೇಳುತ್ತಿದ್ದರು. ಇಲ್ಲ ಎಂದರೆ ಹೇಳುತ್ತಿದ್ದರು. ಒಮ್ಮೊಮ್ಮೆ ಹಾಗೆ ಕೇಳದೇ ಹಿಂದಿನ ಸಲ ಹೋದಾಗ ಹೇಳಿದ ವಿಷಯಗಳನ್ನೇ ಮತ್ತೊಮ್ಮೆ ಹೇಳುತ್ತಿದ್ದರು. ಆದರೆ ಅವರ ಮಾತುಗಳು ಇಂಟರೆಸ್ಟಿಂಗ್ ಇರುತ್ತಿದ್ದವು. ಅನಂತಮೂರ್ತಿ ಹ್ಯಾಜ್ ಎ ವೆರಿ ಚಾರ್ಮಿಂಗ್ ಪರ್ಸನಾಲಿಟಿ, ಹೀ ವೀಲ್ಡ್ಸ್ ಕನ್ಸೀಡರೇಬಲ್ ಇನಫ್ಲುಯೆನ್ಸ್, ಅನಂತಮೂರ್ತಿ ತಮ್ಮ ಕಾದಂಬರಿಗಳಲ್ಲಿ ಅಸಾಮಾನ್ಯ ನಾಯಕಪಾತ್ರಗಳನ್ನು ಸೃಷ್ಟಿಸಲೆಳಸುತ್ತಾರೆ, ‘ಸಂಸ್ಕಾರ’ ಒಂದು ಅವಾಸ್ತವ ಸಮಸ್ಯೆಯ ಸುತ್ತ ಸುತ್ತುತ್ತದೆ, ನಾರಣಪ್ಪನಂಥವರ ಶವ ಸಂಸ್ಕಾರ ಹೇಗೆ ಮಾಡಬೇಕೆಂದು ಶಾಸ್ತ್ರ ನೋಡುತ್ತ, ದೇವರ ಹೂ ಬೀಳುವದನ್ನು ನೋಡುತ್ತ ಯಾರು ಕೂಡ್ರುತ್ತಾರೆ? ಮೃತ ಶರೀರಕ್ಕೊಂದು ಗತಿ ಕಾಣಿಸಬೇಕು ಅಷ್ಟೇ, ಅಲ್ಲವೇ? ದೇವನೂರರ ಕತೆಯಲ್ಲಿ ಕದ್ದ ಶೇಂಗಾ ಮೂಟೆಯನ್ನು ಎಲ್ಲಿ ಬಚ್ಚಿಟ್ಟಿದ್ದಾರೆ ಎಂಬುದರಾಚೆ ಪೋಲೀಸರ ಯೋಚನೆ ದಾಟುವದೇ ಇಲ್ಲ. ಅದನ್ನಿಡೀ ಅವರು ತಿಂದು ಮುಗಿಸಿರಬಹುದೆಂದು ಅವರ ಯೋಚನೆಗೂ ದಕ್ಕದಿರುವದು ಆಳುವ ವರ್ಗಕ್ಕೆ ದಲಿತರ ಹಸಿವಿನ ಕಲ್ಪನೆಯೇ ಇಲ್ಲವೆಂಬುದರ ಸೂಚನೆ. (ಒಬ್ಬ ವಿಮರ್ಶಕರ ಹೆಸರು ಹೇಳಿ) ಅವರೊಂದಿಗೆ ಮಾತನಾಡುತ್ತ ನನಗೆ ತೋಚಿದ ಒಂದು ಓದಿನ ಹೊಸ ಹೊಳಹು ಹಂಚಿಕೊಂಡೇನು ಎನ್ನುವಂತಿಲ್ಲ, ಅದು ಅವರದೇ ಹೊಳಹು ಎಂಬಂತೆ ಅವರ ಲೇಖನದಲ್ಲಿ ಪ್ರಕಟವಾಗಲಿಕ್ಕಿಲ್ಲವೆಂಬ ಖಾತ್ರಿ ಇಲ್ಲ.. ಇತ್ಯಾದಿ.

ನಾನು ಯೂನಿವರ್ಸಿಟಿ ಸ್ಟಾಫ್ ಕ್ವಾರ್ಟರ್ಸ್ ಗೆ ಹೋದ ಮೇಲೆ ಆಮೂರ್ ಅವರಲ್ಲಿಗೆ ಹೋಗುವದು ಕಡಿಮೆ ಆಯಿತು. ಆ ಮಧ್ಯೆ ಅವರು ಕೆಲ ದಿನ ಬೆಂಗಳೂರಿನಲ್ಲಿ ತಮ್ಮ ಮಗನ ಮನೆಯಲ್ಲಿ ಇರುತ್ತಿದ್ದರು. ಆದರೆ ಧಾರವಾಡದಂತೆ ಅದು ಅವರಿಗೆ ಕಂಫರ್ಟೆಬಲ್ ಅನ್ನಿಸುತ್ತಿರಲಿಲ್ಲ. ಧಾರವಾಡದಲ್ಲಾದರೆ ಹೇರ್ ಕಟಿಂಗ್ ಎಲ್ಲಿ ಮಾಡಿಸಬೇಕು ಎಂಬುದಕ್ಕೆಲ್ಲ ಯೋಚಿಸುವ ಪ್ರಮೇಯವಿರುವುದಿಲ್ಲ. ಇಲ್ಲಿ ಅಂಥ ಎಲ್ಲ ವ್ಯವಸ್ಥೆಗಳು ನಿರ್ಧರಿತವಿರುತ್ತವೆ. ಬೆಂಗಳೂರಿನಲ್ಲಾದರೆ ಅಂಥವನ್ನೂ ಯೋಚಿಸಬೇಕೆಂದು ಹೇಳುತ್ತಿದ್ದರು. ಆಗೊಮ್ಮೆ ಈಗೊಮ್ಮೆ ನಾನವರನ್ನು ಕಾಣಲು ಹೋಗುತ್ತಿದ್ದೆ. ಇಲ್ಲವಾದರೂ ಅವರು ಬೆಳಿಗ್ಗೆ ಸ್ಪೋರ್ಟ ಶೂಸ್ ಧರಿಸಿ ಟೈವಾಕ್ ಫ್ಯಾಕ್ಟರಿ ಸ್ಥಿತವಿರುವ ಗುಡ್ಡದ ಕೆಳಗಿನ ಕಣಿವೆಗಳ ದಾರಿಯಲ್ಲಿ ವಾಕಿಂಗ್ ಬಂದಲ್ಲಿ ಸಿಕ್ಕಾಗ ಅಷ್ಟಿಷ್ಟು ಮಾತನಾಡುತ್ತಿದ್ದೆವು.

(ಅಶೋಕ್ ಶೆಟ್ಟರ್)

ಕುವೆಂಪು, ಬೇಂದ್ರೆ, ನಿರಂಜನ, ಚದುರಂಗ, ಅಡಿಗ, ಅನಂತಮೂರ್ತಿ, ಶ್ರೀರಂಗ, ಡಿ.ವಿ.ಜಿ ಮುಂತಾದ ಹಿರಿಯ ಲೇಖಕರ ಸಾಹಿತ್ಯ ಸೃಷ್ಟಿಯಿಂದ ಹಿಡಿದು ಆಗಷ್ಟೇ ಸಾಹಿತ್ಯಕ್ಷೇತ್ರ ಪ್ರವೇಶಿಸಿದ ಭರವಸೆದಾಯಕ ಬರಹಗಾರರ ಸಾಹಿತ್ಯದ ವರೆಗೂ ಆಮೂರ್ ಅವರು ವಿಮರ್ಶೆ ಬರೆದರು. ಅವರ ವಿಮರ್ಶೆಯ ಒಳನೋಟಗಳು ಅವರ ಪ್ರತಿಭಾವಂತಿಕೆಗೆ ಸಾಕ್ಷಿಯಾಗಿವೆ. ಕನ್ನಡದ ಕತೆ, ಕಾದಂಬರಿ, ಕಾವ್ಯ, ವಿಮರ್ಶೆ, ನಾಟಕ ಹೀಗೆ ಹಲವು ಪ್ರಕಾರಗಳಲ್ಲಿ ಸೃಷ್ಟಿಯಾದ ಸಾಹಿತ್ಯ ರಾಶಿಯನ್ನು ಅವರು ತಮ್ಮ ವಿಮರ್ಶೆಯ ತೆಕ್ಕೆಯೊಳಗೆ ತೆಗೆದುಕೊಂಡಿದ್ದಾರೆ. ಸಾಹಿತ್ಯದ ಸೂಕ್ಷ್ಮಾವಲೋಕನವನ್ನು ಅವರ ವಿಮರ್ಶೆಯಲ್ಲಿ ಕಾಣುತ್ತೇವೆ. ಅವುಗಳ ಮೌಲ್ಯೀಕರಣಕ್ಕೆ ಆಮೂರರಲ್ಲಿ ಸಾಹಿತ್ಯದ ವಿಸ್ತೃತವೂ ಆಳವೂ ಆದ ಅಧ್ಯಯನದ ಹಿನ್ನೆಲೆ ಇರುವದು ಗಮನಕ್ಕೆ ಬರುತ್ತದೆ. ಅವರ ವಿಮರ್ಶಾತ್ಮಕ ಒಳನೋಟಗಳು ಮತ್ತು ತೀರ್ಮಾನಗಳಿಗೆ ಹಿನ್ನೆಲೆಯಲ್ಲಿ ಅಪಾರ ಪರಿಶ್ರಮವಿರುವುದು ವೇದ್ಯವಾಗುತ್ತದೆ. ಆಮೂರರು ಏನು ಹೇಳಿದ್ದಾರೆ ಎನ್ನುವದನ್ನು ಗಂಭೀರ ವಿಮರ್ಶೆ ಲಕ್ಷಿಸದಿರುವದು ಅಶಕ್ಯ.

1988ರಲ್ಲಿ ಪ್ರಕಟವಾದ ಸಾಹಿತ್ಯಚರಿತ್ರೆ ಮತ್ತು ಸಾಹಿತ್ಯವಿಮರ್ಶೆಗೆ ಸಂಬಂಧಿಸಿದ ಅವರ ಲೇಖನಗಳ ಸಂಕಲನ ಅರ್ಥಲೋಕಕ್ಕೆ ಬರೆದ ಬೆನ್ನುಡಿಯಲ್ಲಿ ಡಿ.ಆರ್.ನಾಗರಾಜ್ ಹೇಳುತ್ತಾರೆ:

ವಿಮರ್ಶಕರಲ್ಲಿ ಎರಡು ಬಗೆಯವರು ಕಾಣುತ್ತಾರೆ. ಮೊದಲ ಗುಂಪಿನವರು ಮೂಲಕೃತಿಯನ್ನು ಮಸುಕಾಗಿಸಿ ತಮ್ಮ ಪ್ರತಿಭೆಯನ್ನು ವಿಜೃಂಭಿಸುತ್ತಾರೆ. ಅದು ಸೃಜನಶೀಲ ಪ್ರತಿಭೆಯ ಹಾಗೆ ಕಾಣಿಸಿಕೊಳ್ಳಲು ಹವಣಿಸುತ್ತದೆ. ವಾಲ್ಟರ್ ಬೆಂಜಮಿನ್ ಆ ರೀತಿಯವನು. ಎರಡನೆಯ ರೀತಿಯವರು ಹೆಚ್ಚು ವಸ್ತುನಿಷ್ಠರು, ನಿಷ್ಠುರರು. ತಾವು ಹಿಂದಕ್ಕೆ ನಿಂತು ತಮ್ಮೆಲ್ಲ ವಿದ್ವತ್, ಧೀಮಂತಿಕೆ ಬಳಸಿ ಕೃತಿಯನ್ನು, ಸಾಹಿತ್ಯ ಪರಂಪರೆಯನ್ನು ಸೊಗಸಾಗಿ ಸ್ಪಷ್ಟವಾಗಿ ವಿವರಿಸುತ್ತಾರೆ. ಲೀವೀಸ್ ಆ ಬಗೆಯವನು. ಕನ್ನಡದ ಹಿರಿಯ ವಿಮರ್ಶಕರಲ್ಲೊಬ್ಬರಾದ ಪ್ರೊ. ಆಮೂರರು ನಾನು ಮೇಲೆ ಹೇಳಿದ ಎರಡನೆಯ ರೀತಿಗೆ ಸೇರಿದವರು.

ಆಮೂರರ ನಿಧನದಿಂದ ಆಧುನಿಕ ಕನ್ನಡ ವಿಮರ್ಶಾ ಪರಂಪರೆಯೊಂದರ ಬಹುಮುಖ್ಯ ಕೊಂಡಿ ಕಳಚಿದಂತಾಗಿದೆ. ಆದರೆ ತಮ್ಮ ಹಲವು ವಿಮರ್ಶಾತ್ಮಕ ಒಳನೋಟಗಳನ್ನು ಡಾ. ಆಮೂರ್ ಅವರು ಸಾಹಿತ್ಯ ವಿಮರ್ಶೆಯ ಪರಂಪರೆಗೆ ಒದಗಿಸಿ ಹೋಗಿದ್ದಾರೆ ಮತ್ತು ಅವು ಸಾಹಿತ್ಯಸೃಷ್ಟಿಯ ಮೌಲ್ಯೀಕರಣಕ್ಕೆ ಮಾರ್ಗದರ್ಶಿಯಾಗುವ ಗಟ್ಟಿತನ ಹೊಂದಿವೆ ಎನ್ನುವದು ಮುಖ್ಯ.

(ಮುಖ್ಯಚಿತ್ರ ಕೃಪೆ: ಎ.ಎನ್. ಮುಕುಂದ)