ತನ್ಮಾತ್ರ ಬಹುಶ ತನ್ನ ಕಾಲಕ್ಕೆ ಮೀರಿದ ಸಿನೆಮಾ. ಮಧ್ಯಮ ವರ್ಗದ ಕುಟುಂಬವೊಂದರ ಮುಖ್ಯಸ್ಥನಿಗೆ ಪ್ರಿ -ಸೆನೈಲ್ ಡಿಮೆನ್ಶಿಯಾ ಬಂದರೆ ಅದರಿಂದಾಗುವ ಆರ್ಥಿಕ, ಮಾನಸಿಕ, ಮತ್ತು ಸಾಮಾಜಿಕ ಹಿಂಸೆಗಳ ಪರಿಣಾಮಕಾರಿ ಚಿತ್ರಣ ಈ ಸಿನೆಮಾದಲ್ಲಿ ಮೂಡಿದೆ. ಪ್ರಿ-ಸೆನೈಲ್ ಡಿಮೆನ್ಷಿಯಾ ೬೫ ವರ್ಷಕ್ಕೆ ಮುನ್ನವೇ ಕಾಣಿಸಿಕೊಳ್ಳುವ ಡಿಮೆನ್ಷಿಯಾಗೆ ಕೊಟ್ಟ ಹೆಸರು. ಕೆಲವೊಮ್ಮೆ ಅದು ೪೦ರ ವಯಸ್ಸಿನಲ್ಲೇ ಕಾಡುವದೂ ಉಂಟು. ಈ ಸಿನೆಮಾದ ಹೀರೋಗೆ ಆಗೋದು ಅದೇ.
“ಡೆಮೆನ್ಷಿಯಾ” ಎಂಬ ಕಾಯಿಲೆ ಸಾಮಾನ್ಯವಾಗುತ್ತಿರುವ ಈ ಸಮಯದಲ್ಲಿ ಅದರ ಕುರಿತಾದ ಚಲನಚಿತ್ರಗಳ ಕುರಿತು ಮುರಳಿ ಹತ್ವಾರ್ ಬರಹ ನಿಮ್ಮ ಓದಿಗೆ
ನೆನಪುಗಳು ಜೀವನದ ಗಡಿಯಾರದ ಮುಳ್ಳುಗಳಿದ್ದಂತೆ. ಕ್ಷಣ ಕ್ಷಣಕ್ಕೂ ಹೊಸ ಹೊಸ ನೆನಪುಗಳನ್ನು ಕಟ್ಟಿ ಕೊಡುತ್ತ, ಮತ್ತೆ ಮತ್ತೆ ಆ ನೆನಪುಗಳನ್ನ ಹೊಳಪಿಸುತ್ತ, ಕಾಲ ಕಳೆದಂತೆ ಸಣ್ಣದಾಗಿಸುತ್ತ, ಇನ್ನೇನು ಮರೆತೇ ಹೋಯಿತು ಎನ್ನುವ ಹೊತ್ತಿಗೆ ಮತ್ತೆ ಹೊಸದಾಗಿಸಿ ಹಿಗ್ಗಿಸುವ, ಆ ಹಿಗ್ಗಿನಲ್ಲಿ ಜೀವನದ ಚಕ್ರವನ್ನ ಓಡಿಸುವ ಶಕ್ತಿಯ ಇಂಜಿನ್, ನೆನಪು. ಆ ನೆನಪೆನ್ನುವದು ಇರುವುದರಿಂದಲೇ ಕಲಿಯುವದು, ದುಡಿಯುವದು, ಉಳಿಸುವದು, ಬೆಳೆಸುವದು ಇವೆಲ್ಲವುದಕ್ಕೂ ಅರ್ಥ. ಸರಿಸುಮಾರು ಅಕ್ಷರಾಭ್ಯಾಸದಿಂದ ಆರಂಭವಾಗುವ ನೆನಪು ಕಟ್ಟುವ ಕೆಲಸ ಕೊನೆಯಾಗುವದು ಮುಪ್ಪಿನ ಅತಿ ಅಂಚಿನಲ್ಲಿ. ಆದರೆ ದೇಹಕ್ಕೆ ಮುಪ್ಪು ಮುತ್ತುವ ಆರಂಭದಲ್ಲೇ ನೆನಪನ್ನು ನಿಧಾನವಾಗಿ ಕಳೆಯುತ್ತಾ, ತಾರ್ಕಿಕ ಆಲೋಚನೆಯ ಶಕ್ತಿಯನ್ನು ಕರಗಿಸುತ್ತ, ಭಾವ ತೀವ್ರತೆಯ ಅಲೆಗಳಲ್ಲಿ ಮನಸ್ಸನ್ನು ಮುಳುಗಿಸುವ ಖಾಯಿಲೆ ಡೆಮೆನ್ಷಿಯಾ.
ಈಗಾಗಲೇ ಐದು ಕೋಟಿಗೂ ಹೆಚ್ಚು ಜನರಿಗೆ ಅಂಟಿರುವ, ವರ್ಷಕ್ಕೆ ೧ ಕೋಟಿಯಷ್ಟು ಹೆಚ್ಚುತ್ತಿರುವ, ಡಿಮೆನ್ಷಿಯಾ ಈಗೀಗ ಜನಸಾಮಾನ್ಯರ ಮನೆ, ಮನಸ್ಸನ್ನ ಹೊಕ್ಕಿದೆ. ಹಾಗೆಯೇ, ಬೆಳ್ಳಿ ಪರದೆಯ ಮೇಲೂ ಅದರ ವಿವಿಧ ಮುಖಗಳ, ಪರಿಣಾಮಗಳ ಪರಿಚಯ, ವಿಮರ್ಶೆಯ ಪ್ರಯತ್ನವೂ. ಅಂತಹವುಗಳಲ್ಲಿ ಮೂರು ವಿಶಿಷ್ಟ ಪ್ರಯೋಗಗಳು, ತನ್ಮಾತ್ರ (ಮಲಯಾಳಂ, ೨೦೦೫; ಮೋಹನಲಾಲ್), ದ ಫಾದರ್ (ಇಂಗ್ಲಿಷ್,೨೦೨೦, ಅಂಥೋನಿ ಹಾಪ್ಕಿನ್ಸ್), ರಿಮೆಂಬರ್ (ಇಂಗ್ಲಿಷ್, ೨೦೧೫, ಕ್ರಿಸ್ಟೋಫೆರ್ ಪ್ಲಮ್ಮರ್).
ತನ್ಮಾತ್ರ ಬಹುಶ ತನ್ನ ಕಾಲಕ್ಕೆ ಮೀರಿದ ಸಿನೆಮಾ. ಮಧ್ಯಮ ವರ್ಗದ ಕುಟುಂಬವೊಂದರ ಮುಖ್ಯಸ್ಥನಿಗೆ ಪ್ರಿ -ಸೆನೈಲ್ ಡಿಮೆನ್ಶಿಯಾ ಬಂದರೆ ಅದರಿಂದಾಗುವ ಆರ್ಥಿಕ, ಮಾನಸಿಕ, ಮತ್ತು ಸಾಮಾಜಿಕ ಹಿಂಸೆಗಳ ಪರಿಣಾಮಕಾರಿ ಚಿತ್ರಣ ಈ ಸಿನೆಮಾದಲ್ಲಿ ಮೂಡಿದೆ. ಪ್ರಿ-ಸೆನೈಲ್ ಡಿಮೆನ್ಷಿಯಾ ೬೫ ವರ್ಷಕ್ಕೆ ಮುನ್ನವೇ ಕಾಣಿಸಿಕೊಳ್ಳುವ ಡಿಮೆನ್ಷಿಯಾಗೆ ಕೊಟ್ಟ ಹೆಸರು. ಕೆಲವೊಮ್ಮೆ ಅದು ೪೦ರ ವಯಸ್ಸಿನಲ್ಲೇ ಕಾಡುವದೂ ಉಂಟು. ಈ ಸಿನೆಮಾದ ಹೀರೋಗೆ ಆಗೋದು ಅದೇ. ಮೊದಮೊದಲು ಕೆಲಸದಲ್ಲಿ ಹಣ ಎಣಿಸಲು ಕಷ್ಟವೆನಿಸುತ್ತ ಮತ್ತೆ ತ್ವರಿತವಾಗಿ ತೀವ್ರವಾಗುತ್ತ ಸಾಗುವ ಡಿಮೆನ್ಷಿಯಾ ಆ ಹೀರೊನ ಮನಸ್ಸಿಗೆ ತರುವ ಕ್ಷೋಭೆ, ಅಪಮಾನ, ಅವಮಾನ, ಮುರಿಯುವ ಕನಸುಗಳು; ಅವನ ಮನೆಯವರಿಗೆ ಆಗುವ ಆರ್ಥಿಕ ನಷ್ಟ, ಮತ್ತೆ ಅವರೆಲ್ಲರ ಮಾನಸಿಕ ತೊಳಲಾಟಗಳು ಉಂಟುಮಾಡುವ ಉತ್ಪಾತಗಳು, ಎಲ್ಲವನ್ನೂ ಸಹಜದಂತೆ ಚಿತ್ರಿಸಿದ್ದರಿಂದ ಈ ಸಿನೆಮಾ ಆಗಾಗ ಕಾಡುತ್ತ ಮನಸ್ಸಿನಲ್ಲಿ ಉಳಿಯುತ್ತದೆ.
“ದ ಫಾದರ್” ಒಂದು ವಿಶಿಷ್ಟ ಸಿನೆಮಾ. ಇದರ ಕಥೆ ಸರಳ: ಕೇರ್ ಹೋಂ ನವರ ಆರೈಕೆಯಲ್ಲಿರುವ ಡಿಮೆನ್ಷಿಯಾ ಇರುವ ಒಬ್ಬ ವೃದ್ಧ ಮತ್ತು ಅವನ ಮಗಳ ನಡುವಿನ ಸಂವಾದದ ಕಥೆ. ಆದರೆ ಚಿತ್ರಕಥೆ ಸಂಕೀರ್ಣ – ಡಿಮೆನ್ಷಿಯಾ ತಿಂದ ತಲೆಯಷ್ಟು. ಸಿನೆಮಾ ಬೆಳೆಯುವದು ಡಿಮೆನ್ಷಿಯಾದ ಆ ವೃದ್ಧನ ಆ ಕ್ಷಣದ ನೆನಪು ಮತ್ತು ಅದು ಹುಟ್ಟಿಸುವ ಮಾತು. ಹಾಗಾಗಿ, ಈ ಸಿನೆಮಾ ಒಮ್ಮೆ ಮುಂದೆ ಒಮ್ಮೆ ಹಿಂದೆ, ಮತ್ತೆ ಆಚೆ ಈಚೆ ದಿಕ್ಕಿಲ್ಲದಂತೆ ಓಡುತ್ತದೆ. ಒಮ್ಮೆ ದೊಡ್ಡ ಮನೆಯಲ್ಲಿ ಕುಳಿತು ಮಗಳೊಟ್ಟಿಗೆ ಈಗಷ್ಟೇ ಊಟ ಮಾಡಿದ ಹಾಗೆ, ಮತ್ತೊಮ್ಮೆ ಅವಳ ಗಂಡ (ಈಗ ಮಾಜಿ)ನೊಟ್ಟಿಗೆ ಮಾತಾಡಿದ ಹಾಗೆ, ಈಗಷ್ಟೇ ಸ್ನಾನ ಮಾಡಿದ್ದನ್ನ ಮರೆತ ಹಾಗೆ. ಹೀಗೆ, ಕಂಪ್ಯೂಟರ್ ಭಾಷೆಯಲ್ಲಿ ಹೇಳುವಂತೆ, ಯಾವ ಯಾವತ್ತಿನ ಬ್ಯಾಕಪ್ಪಿನಲ್ಲಿ ಸಿಸ್ಟಮ್ ಓಪನ್ ಆಗುತ್ತದೋ ಹಾಗೆ ಅವತ್ತಿನ ದಿನ ಅಥವಾ ಆ ಕ್ಷಣ. ಕೊನೆಯಲ್ಲಿ, ಸಣ್ಣ ಗೊಂಬೆಯೊಂದನ್ನು ಎದೆಗಪ್ಪಿಕೊಂಡು ‘ಅಮ್ಮಾ’ ಎಂದು ನಾಯಕ ಅಳುವ ಸೀನಿನಲ್ಲಿ ಸಿನೆಮಾ ಮುಗಿಯುವಹೊತ್ತಿಗೆ, ಈ ಸಿನೆಮಾ ಸ್ಪಂದಿಸುವ ಮನಸ್ಸುಗಳಲ್ಲಿ ನೋವಿನ ಎಳೆಯೊಂದನ್ನು ಎಳೆದು, ನೂರಾರು ಉತ್ತರವಿಲ್ಲದ ಪ್ರಶ್ನೆಗಳನ್ನು ಕೇಳಿಸುತ್ತದೆ. ಮನೆಯಲ್ಲಿ ಹಿರಿಯರಿರುವವರು ಮತ್ತೆ ಹಿರಿಯರಾಗುವವರಿರುವವರು ಅವಶ್ಯವಾಗಿ ನೋಡಬೇಕಾದ ಸಿನೆಮಾ ಇದು.
ರಿಮೆಂಬರ್, ಡಿಮೆನ್ಷಿಯಾವನ್ನ ಒಂದು ರೂಪಕವನ್ನಾಗಿ ಅಳವಡಿಸಿಕೊಂಡಿದೆ. ಎರಡನೆ ಮಹಾಯುದ್ಧದ ಸಮಯದಲ್ಲಿ ನಾಝಿಗಳು ನಡೆಸಿದ ಯಹೂದಿಗಳ ಮಾರಣ ಹೋಮವನ್ನ ಜಗತ್ತು ಎಂದೂ ಮರೆಯದು ಎನ್ನುವ ಕಥೆ ಇದರ ಎಳೆ. ಕಥಾ ನಾಯಕ, ಅಮೆರಿಕಾದಲ್ಲಿ ನೆಲೆಸಿರುವ ಒಬ್ಬ ಯಹೂದಿ ಮತ್ತು ಡೆಮೆನ್ಷಿಯಾ ರೋಗಿ. ಅವನಿಗೆ ಸ್ನೇಹಿತನೆಂದು ಪರಿಚಯಿಸಿಕೊಳ್ಳುವ ವ್ಯಕ್ತಿಯೊಬ್ಬ, ನಾಯಕನಿಗೆ ಅವನ ಮನೆಯವರನ್ನ ಕೊಂದ ನಾಝಿಗಳ ಮಿಲಿಟರಿ ಕಮ್ಯಾಂಡರ್ ಒಬ್ಬ ಅಮೇರಿಕಾದಲ್ಲಿ ಅಡಗಿದ್ದಾನೆಂದು ಹೇಳಿ, ಅವನನ್ನ ಸಾಯಿಸುವ ಕೆಲಸವನ್ನ ಒಪ್ಪಿಸುತ್ತಾನೆ. ಆ ‘ಸ್ನೇಹಿತ’ ಮತ್ತೆ ಮತ್ತೆ ತಲೆಗೆ ತುಂಬುವ ವಿಷಯಗಳಂತೆ ನಡೆವ ನಾಯಕ, ಚಿತ್ರದ ಕೊನೆಗೆ ತನ್ನ ಟಾರ್ಗೆಟ್ಟಿನ ಮನೆ ತಲುಪುತ್ತಾನೆ. ಆಗ ತೆರೆದುಕೊಳ್ಳುವ ವಿಚಾರ, ಆ ನಾಯಕ ಮತ್ತು ಅವನ ಟಾರ್ಗೆಟ್ ಇಬ್ಬರೂ ‘ಯಹೂದಿ’ ಗಳೆಂದು ಮೋಸದ ಹೊಸ ಹುಟ್ಟು ಪಡೆದು ಯುದ್ಧದ ನಂತರ ಅಮೇರಿಕಾದಲ್ಲಿ ಅಡಗಿಕೊಂಡ ನಾಝಿ ಸೈನಿಕರೆಂದು. ಅವರಿಬ್ಬರ ಸಾವಿನಲ್ಲಿ ಸಿನೆಮಾ ಮುಗಿಯುತ್ತದೆ.
ಡಿಮೆನ್ಷಿಯಾ ಬರುವ ವರ್ಷಗಳಲ್ಲಿ ಪ್ರತಿ ೧೦-೧೫ ವರ್ಷಕ್ಕೆ ಎರಡರಷ್ಟು ಹೆಚ್ಚು ಜನರನ್ನ ಆವರಿಸಿಕೊಳ್ಳುವ ಖಾಯಿಲೆ. ಸಧ್ಯಕ್ಕೆ ಪರಿಣಾಮಕಾರಿ ಔಷಧವಿಲ್ಲದ ಈ ಖಾಯಿಲೆಗೆ ಸಮಾಧಾನದ, ಸಾಂತ್ವನದ, ಆರೈಕೆಯಷ್ಟೇ ಈಗ ಸಾಧ್ಯ. ಆ ಸಾಧ್ಯತೆಗೆ ಪೂರಕವಾಗುವದು, ಸಾಮಾಜಿಕವಾಗಿ ಮತ್ತು ಸಾರ್ವಜನಿಕವಾಗಿ ಡಿಮೆನ್ಷಿಯಾ ಮತ್ತದರ ಪರಿಣಾಮಗಳ ಬಗ್ಗೆ ನಡೆಯುವ ಅರ್ಥಪೂರ್ಣ ಸಂವಾದ. ಅಂತಹ ಸಂವಾದಗಳನ್ನ ಸುಲಭಗೊಳಿಸುವ ಸಾಧನ ಸಿನೆಮಾ. ಆದ್ದರಿಂದ, ಸಿನೆಮಾಗಳಲ್ಲಿ ಡಿಮೆನ್ಷಿಯಾದ ಬೇರೆ ಬೇರೆ ಮಜಲುಗಳು ಅನಾವರಣಗೊಳ್ಳುವದು ಸಮಾಜದ ಕಾಳಜಿಯ ಒಂದು ರೂಪ. ಹಾಗೆ ಹೆಚ್ಚು ಹೆಚ್ಚು ಆದಷ್ಟೂ ಒಳ್ಳೆಯದೇ.
ಮುರಳಿ ಹತ್ವಾರ್ ಹಾರ್ಮೋನು- ವೈದ್ಯ (ಎಂಡೋಕ್ರಿನಾಲಜಿಸ್ಟ್)ರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕೆಲಸ ಮತ್ತು ವಾಸ ಲಂಡನ್ನಿನಲ್ಲಿ. ಕನ್ನಡದಲ್ಲಿ ಬರೆಯುವುದು ಜೊತೆಗೆ ಕ್ಯಾಮೆರಾ ಕಣ್ಣಿನಲ್ಲಿ ಸುತ್ತಲ ಜಗತ್ತನ್ನು ನೋಡುವುದು ಇವರ ಹವ್ಯಾಸ.