ಹತ್ತೊಂಬತ್ತೆಯ ಶತಮಾನದ ಬ್ರಿಟನ್ನಿಗೂ, ಇಂದಿನ ಭಾರತಕ್ಕೂ ಹಲವಾರು ವ್ಯತ್ಯಾಸಗಳಿರಬಹುದು. ಆದರೆ, ಯಾವುದೇ ಶತಮಾನದ ಯಾವುದೇ ಸರ್ಕಾರಕ್ಕೂ ಅಂಕಿ-ಅಂಶಗಳೆಂದರೆ ಒಂದು ರೀತಿಯ ಅಲರ್ಜಿಯೇ. ತಾವು ನಿರ್ಮಿಸಿದ ಜಗತ್ತಿನ ಅತ್ಯಂತ ಎತ್ತರದ ಪ್ರತಿಮೆಯ ಕುರಿತು ಪುಂಖಾನುಪುಂಖವಾಗಿ ತುತ್ತೂರಿ ಊದುವ ಸರ್ಕಾರಗಳಿಗೆ ವಿವರವಾದ ಅಂಕಿ-ಅಂಶಗಳನ್ನು ನೀಡಲು ಭಯವಾದರೂ ಏತಕ್ಕೆ?! ಸಂಖ್ಯೆಗಳಿಗೆ ಪದಗಳಿಗಿರುವ ಅರ್ಥ-ವೈಶಾಲ್ಯವಿಲ್ಲವಲ್ಲ, ಅದಕ್ಕಿರಬಹುದೇ? ಮಾತನ್ನು ಬಗ್ಗಿಸಬಹುದು. ಅಂಕಿ-ಸಂಖ್ಯೆಗಳನ್ನು ಬಾಗಿಸಲೆತ್ನಿಸಿದರೆ ಅವು ಮುರಿಯುತ್ತವೆ.
ಶೇಷಾದ್ರಿ ಗಂಜೂರು ಬರೆಯುವ ವಿಜ್ಞಾನ ಸರಣಿ
ಇಪ್ಪತ್ತನೆಯ ಶತಮಾನದ ಆರಂಭವನ್ನು, ಆಧುನಿಕ ಪ್ರಪಂಚದ ಆರಂಭವೂ ಹೌದು ಎನ್ನಬಹುದು. ಆ ಸಮಯದಲ್ಲಿ, ಭಾರತವೂ ಸೇರಿದಂತೆ ಜಗತ್ತಿನ ಹಲವೆಡೆ ವಸಾಹತುಶಾಹಿ ಸರ್ಕಾರಗಳು ಇನ್ನೂ ಇದ್ದರೂ ಅವನ್ನು ಎದುರಿಸುವ ಚಳವಳಿಗಳು ಬಲಯುತವಾಗುತ್ತಿದ್ದವು. ಸ್ವಾಯತ್ತತೆ, ಪ್ರಜಾಸತ್ತೆಯ ಬಗೆಗಿನ ಅರಿವು ಹಲವು ದೇಶಗಳಲ್ಲಿ ಮೂಡುತ್ತಿತ್ತು. ವಿದ್ಯುತ್ ಶಕ್ತಿ, ರೈಲ್ವೇ ಇತ್ಯಾದಿ ತಂತ್ರಜ್ಞಾನಗಳು ವಿಶ್ವಾದ್ಯಂತ ಹಬ್ಬಲಾರಂಭಿಸಿದ್ದವು. ಯಾವುದೋ ಕಾಲದಿಂದ ನಿರ್ಮಿಸಿಕೊಂಡು ಬಂದಿದ್ದ ಸಾಂಸ್ಕೃತಿಕ ಬೇಲಿಗಳು ಕುಸಿಯಲಾರಂಭಿಸಿದ್ದವು. ಒಟ್ಟಿನಲ್ಲಿ ಪ್ರಪಂಚ ಒಮ್ಮೆಲೆ ಸಂಕೀರ್ಣವಾಗತೊಡಗಿತ್ತು. ಇಂತಹ ಸಂದರ್ಭದಲ್ಲಿ ಬಂದದ್ದು ಬ್ರಿಟಿಷ್ ಲೇಖಕ ಎಚ್.ಜಿ.ವೆಲ್ಸ್‌ನ “Mankind in the Making” ಎಂಬ ಪುಸ್ತಕ.
ಈ ಪುಸ್ತಕದಲ್ಲಿ, ವೆಲ್ಸ್, ಸಂಕೀರ್ಣ ಪ್ರಪಂಚದಲ್ಲಿ, ಅದರಲ್ಲೂ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಉತ್ತಮ ಪ್ರಜೆಯಾಗಿರಲು ಎಂತಹ ಶಿಕ್ಷಣದ ಅಗತ್ಯವಿದೆ ಎಂಬುದನ್ನು ಚರ್ಚಿಸುತ್ತಾನೆ. ಅದರಲ್ಲಿ ಅವನು ಹೇಳುವ ಈ ಮಾತುಗಳು ಇಂದಿಗೂ ಪ್ರಸಕ್ತವಾಗಿವೆ: “ವಿಜ್ಞಾನವಿರಲಿ, ಅರ್ಥಶಾಸ್ತ್ರವಿರಲಿ, ಸಾಮಾಜಿಕ ಮತ್ತು ರಾಜಕೀಯ ಸಮಸ್ಯೆಗಳಿರಲಿ ಅವನ್ನು ಪೂರ್ಣವಾಗಿ ಅರ್ಥಮಾಡಿಕೊಳ್ಳಲು ಗಣಿತದ ಮೂಲಕ ವಿಶ್ಲೇಷಿಸುವ ಶಿಕ್ಷಣದ ಅಗತ್ಯವಿದೆ….[ಹೊಸದಾಗಿ ಸಂಕೀರ್ಣಗೊಳ್ಳುತ್ತಿರುವ ಈ ಪ್ರಪಂಚದಲ್ಲಿ] ಉತ್ತಮ ಪ್ರಜೆಯಾಗಿರಲು ಓದು-ಬರಹದಷ್ಟೇ ಅಂಕಿ ಅಂಶಗಳನ್ನು ಗಣಿತದ ಮೂಲಕ ವಿಶ್ಲೇಷಿಸುವ ಸಾಮರ್ಥ್ಯವೂ ಇರಲೇಬೇಕು.”
ವೆಲ್ಸ್‌ನ ಆ ಪುಸ್ತಕ ಪ್ರಕಟವಾಗಿದ್ದು ೧೯೦೩ರಲ್ಲಿ. ಒಂದು ಶತಮಾನಕ್ಕೂ ಹೆಚ್ಚಿನ ಕಾಲಾನಂತರದ ಇಂದಿನ ಸಮಾಜದಲ್ಲಿ ಅಂತಹ ಶಿಕ್ಷಣ ಬೇಡ, ಕನಿಷ್ಠ ಅಂತಹ ಮನಸ್ಥಿತಿಯಾದರೂ ರೂಪುಗೊಂಡಿದೆಯೇ?
*****
“ದೀಪದ ದಾದಿ” ಎಂದೇ ಸುವಿಖ್ಯಾತವಾಗಿರುವ ಫ್ಲಾರೆನ್ಸ್ ನೈಟಿಂಗೇಲ್‌ಳ ಹೆಸರು ಬಹುಮಟ್ಟಿನವರಿಗೆ ಅಪರಿಚಿತವೇನಲ್ಲ. ನರ್ಸಿಂಗ್ ವೃತ್ತಿಗೆ ಹೊಸದೊಂದು ಆಯಾಮವನ್ನೇ ನೀಡಿ, ಅದರ ಘನತೆ-ಗೌರವಗಳನ್ನು ಹೆಚ್ಚಿಸಿದಾಕೆ ಅವಳು. ನರ್ಸಿಂಗ್ ಪದ್ಧತಿಯಲ್ಲಿ ಹಲವಾರು ಸುಧಾರಣೆಗಳನ್ನು ತಂದು ಲೆಕ್ಕವಿಲ್ಲದಷ್ಟು ಮಂದಿಯ ಜೀವ ಉಳಿಸಿದ ಆಕೆಯ ಜೀವನ ಚರಿತ್ರೆಯನ್ನು ನಮ್ಮಲ್ಲಿ ಹಲವರು ಶಾಲೆಯ ಪಠ್ಯಗಳಲ್ಲಿಯೂ ಓದಿರಬಹುದು.
ನರ್ಸಿಂಗ್ ವೃತ್ತಿಯಲ್ಲಿ ಆಕೆಯ ಹಿರಿಮೆಯ ಕುರಿತು ಹಲವರು ತಿಳಿದಿರಬಹುದಾದರೂ, ಗಣಿತ, ಅದರಲ್ಲೂ ಸಂಖ್ಯಾಶಾಸ್ತ್ರ (Statistics) ವಿಚಾರದಲ್ಲಿ ಆಕೆ ಗಳಿಸಿದ್ದ ನೈಪುಣ್ಯತೆಯ ಅರಿವು ಬಹಳ ಜನರಿಗೆ ಇರಲಿಕ್ಕಿಲ್ಲ. ಸಂಖ್ಯಾಶಾಸ್ತ್ರದಲ್ಲಿ ಆಕೆಯ ಪರಿಣಿತಿ ಎಷ್ಟಿತ್ತೆಂದರೆ, ಬ್ರಿಟನ್ನಿನ ಪ್ರತಿಷ್ಠಿತ ರಾಯಲ್ ಇನ್ಸ್ಟಿಟ್ಯೂಟ್ ಆಫ್ ಸ್ಟಾಟಿಸ್ಟಿಕ್ಸ್ ತನ್ನ ಸದಸ್ಯತ್ವ ನೀಡಿದ ಪ್ರಪ್ರಥಮ ಮಹಿಳೆ ನೈಟಿಂಗೇಲ್.
೧೮೫೩ರಲ್ಲಿ ಕ್ರಿಮಿಯನ್ ಯುದ್ಧ ಆರಂಭವಾಗುವ ವೇಳೆಗೆ, ಸಂಖ್ಯಾಶಾಸ್ತ್ರ ಮತ್ತು ನರ್ಸಿಂಗ್ ವ್ಯವಸ್ಥೆ ಇವೆರಡರಲ್ಲೂ ನೈಟಿಂಗೇಲ್ ಹೆಸರು ಗಳಿಸಿದ್ದಳು. ಶ್ರೀಮಂತ ಕುಟುಂಬದಲ್ಲಿ ಹುಟ್ಟಿ ಬೆಳೆದಿದ್ದ ಆಕೆ, ಗಣಿತವೂ ಸೇರಿದಂತೆ ಹಲವಾರು ವಿಷಯಗಳಲ್ಲಿ ಪರಿಣಿತರಿಂದ ಶಿಕ್ಷಣ ಪಡೆದಿದ್ದಳು. ಖ್ಯಾತ ಗಣಿತಜ್ಞ ಮತ್ತು ಕಂಪ್ಯೂಟರ್ ಪಿತಾಮಹನೆನ್ನಿಸಿದ ಚಾರ್ಲ್ಸ್ ಬ್ಯಾಬೇಜ್ ಅವಳ ಗಣಿತ ಶಿಕ್ಷಕರಲ್ಲಿ ಒಬ್ಬ. ಗಣಿತವನ್ನು “ಅತ್ಯುನ್ನತ ವಿಜ್ಞಾನ”ವೆಂದೇ ಅವಳು ಪರಿಗಣಿಸಿದ್ದರೂ, ಉದಾರ ಮಾನವತಾವಾದಿ ಕುಟುಂಬ ಪರಿಸರದಲ್ಲಿ ಬೆಳೆದಿದ್ದ ಆಕೆ, ನರ್ಸಿಂಗ್ ರಂಗವನ್ನು ಪ್ರವೇಶಿಸಿದ್ದರಲ್ಲಿ ಅಚ್ಚರಿಯೇನೂ ಇಲ್ಲ.
೧೮೫೩ರ ಅಂತ್ಯದ ವೇಳೆಗೆ ಆರಂಭವಾದ ಈ ಕ್ರಿಮಿಯನ್ ಯುದ್ಧದಲ್ಲಿ, ರಷ್ಯನ್ನರು ಒಂದು ಪಕ್ಷದಲ್ಲಿದ್ದರೆ, ಅವರ ವಿರೋಧಿ ಬಣದಲ್ಲಿ ಬ್ರಿಟನ್, ಫ್ರಾನ್ಸ್ ಮತ್ತು ಆಟ್ಟೋಮನ್ ಸಾಮ್ರಾಜ್ಯ (ಇಂದಿನ ಟರ್ಕಿ) ಇದ್ದವು. ೧೮೫೪ರ ಹೊತ್ತಿಗೆ, ಆ ಯುದ್ಧದ ಭೀಕರತೆ ಹೆಚ್ಚಿ, ಬ್ರಿಟಿಷ್ ಸೈನಿಕರು ಹೆಚ್ಚಿನ ಸಂಖ್ಯೆಯಲ್ಲಿ ಗಾಯಗೊಂಡು ಮರಣ ಹೊಂದುವುದು ಪ್ರಾರಂಭವಾದಾಗ, ಅಂದಿನ ಬ್ರಿಟಿಷ್ ಸರ್ಕಾರ ನೈಟಿಂಗೇಲ್ ನಾಯಕತ್ವದಲ್ಲಿ ೩೮ ಜನ ನರ್ಸ್‌ಗಳನ್ನು ಟರ್ಕಿಯ ರಣರಂಗಕ್ಕೆ ಕಳುಹಿಸಿತು.
ನೈಟಿಂಗೇಲ್ ಟರ್ಕಿಗೆ ಬರುವ ಹೊತ್ತಿಗೆ, ಅಲ್ಲಿನ ಮಿಲಿಟರಿ ಆಸ್ಪತ್ರೆಯ ಪರಿಸ್ಥಿತಿ ಬಿಗಡಾಯಿಸಿತ್ತು. ಆಸ್ಪತ್ರೆಯೊಂದರಲ್ಲಿ ಇರಬೇಕಿದ್ದ ಸಲಕರಣೆಗಳಿರಲಿ, ಸಾಮಾನ್ಯ ನೈರ್ಮಲ್ಯವೂ ಅಲ್ಲಿರಲಿಲ್ಲ. ಆಸ್ಪತ್ರೆಯಲ್ಲಿಯೇ ಟೈಫಸ್, ಟೈಫಾಯಿಡ್, ಕಾಲೆರಾಗಳಂತಹ ಸಾಂಕ್ರಾಮಿಕ ರೋಗಗಳು ಮನೆ ಮಾಡಿದ್ದವು. ಆ ಆಸ್ಪತ್ರೆಯಲ್ಲಿ ಬಹುಮಟ್ಟಿಗೆ ಸಾಮಾನ್ಯ ಸೈನಿಕರೇ ಗಾಯಾಳುಗಳಾಗಿ ದಾಖಲಾಗುತ್ತಿದ್ದುದ್ದರಿಂದ, ಅಲ್ಲಿದ್ದ ಸೇನೆಯ ಆಫೀಸರುಗಳಾಗಲೀ, ಲಂಡನ್ನಿನ ಪಾರ್ಲಿಮೆಂಟಿನಲ್ಲಿ ಕುಳಿತಿದ್ದ ರಾಜಕಾರಣಿಗಳಾಗಲೀ ಅದರ ಸ್ಥಿತಿ-ಗತಿಗಳ ಬಗೆಗೆ ಲಕ್ಷ್ಯವಿರಿಸಿರಲಿಲ್ಲ.
ರಣರಂಗದ ಆ ಆಸ್ಪತ್ರೆಗೆ ನೈಟಿಂಗೇಲ್ ಕಾಲಿಟ್ಟ ನಂತರ, ನೈರ್ಮಲ್ಯ ಮತ್ತು ನರ್ಸಿಂಗ್ ವಿಷಯಗಳಲ್ಲಿ ಅವಳು ತಂದ ಸುಧಾರಣೆಗಳು ಮತ್ತು ಅವು ಸೈನಿಕರ ಜೀವ ರಕ್ಷಿಸುವಲ್ಲಿ ಪಡೆದ ಯಶಸ್ಸು ಇಂದು ಎಲ್ಲರಿಗೂ ತಿಳಿದ ಸಂಗತಿ. ಆದರೆ, ಆ ಯಶಸ್ಸಿನ ಹಿಂದಿನ ಪರಿಶ್ರಮ, ಅದಕ್ಕೆ ಬೇಕಿದ್ದ ಸಂಖ್ಯಾಶಾಸ್ತ್ರದ ತಜ್ಞತೆ ಮತ್ತು ಬಲಿಷ್ಠ ರಾಜಕೀಯ ನಾಯಕರನ್ನೂ ಎದುರುಹಾಕಿಕೊಳ್ಳುವಂತಹ ಆಕೆಯ ಧೀಮಂತತನವನ್ನು ನಾವು ಮತ್ತಷ್ಟು ಗಮನಿಸಬೇಕು.
ಉದಾಹರಣೆಗೆ, ಟರ್ಕಿಗೆ ಬಂದ ಕೆಲವೇ ವಾರಗಳಲ್ಲಿ, ತನ್ನ ತಂಡವನ್ನು ಅಲ್ಲಿಗೆ ಸರಿಯಾದ ಸಲಕರಣೆ-ಸಿದ್ಧತೆಗಳಿಲ್ಲದೆ ಕಳುಹಿಸಿದ್ದ ಬ್ರಿಟನ್ನಿನ್ನ ಕ್ಯಾಬಿನೆಟ್ ಮಂತ್ರಿಗೆ ಆಕೆ ನೇರವಾಗಿ ಈ ರೀತಿ ಪತ್ರ ಬರೆಯುತ್ತಾಳೆ: “[ನಿಮ್ಮ ನಿರ್ಲಕ್ಷ್ಯದಿಂದ] ನನ್ನ ಹೃದಯಕ್ಕೆ ಹತ್ತಿರವಾದ ಪರಿಶ್ರಮವನ್ನೇ ಬಲಿಗೊಟ್ಟಿದ್ದೀರಿ. ಈ ಗಹನ ಪರಿಸ್ಥಿತಿಯಲ್ಲಿ ಇದೊಂದು ಸಣ್ಣ ವಿಷಯವಿರಬಹುದು, ಆದರೆ, [ನೀವು] ನನ್ನನ್ನೇ ಬಲಿ ಮಾಡಿದ್ದೀರಿ.”
ಆಸ್ಪತ್ರೆಯ ನಿರ್ವಹಣೆ, ನರ್ಸ್‌ಗಳ ಮೇಲ್ವಿಚಾರಿಕೆ, ಸಲಕರಣೆ-ಸಿದ್ಧತೆಗಳ ಬಗೆಗೆ ಕಾಲಕಾಲಕ್ಕೆ ಬ್ರಿಟಿಷ್ ಸರ್ಕಾರಕ್ಕೆ ಬಿಸಿ ಮುಟ್ಟಿಸುವುದರಲ್ಲಿನ ಪರಿಶ್ರಮದ ಜೊತೆಗೇ, ನೈಟಿಂಗೇಲ್, ರಣರಂಗದ ಆಸ್ಪತ್ರೆಗಳಲ್ಲಿ ದಾಖಲಾಗುವ ಪ್ರತಿ ಸೈನಿಕನ ಕುರಿತು ಅಂಕಿ-ಅಂಶಗಳನ್ನು ಕೂಲಂಕುಶವಾಗಿ ಸಂಗ್ರಹಿಸಿ ಅವನ್ನು ಸಂಖ್ಯಾಶಾಸ್ತ್ರದ ಮೂಲಕ ವಿಶ್ಲೇಷಿಸುತ್ತಾಳೆ. ಸಾವಿಗೀಡಾಗುವ ಸೈನಿಕರ ಮರಣದ ಹಿಂದಿನ ಕಾರಣಗಳನ್ನು ಗಮನಿಸಿ ಹಲವಾರು ಮಹತ್ವದ ವರದಿಗಳನ್ನು ಸರ್ಕಾರಕ್ಕೆ ನೀಡುತ್ತಾಳೆ. ಅವಳ ವಿಶ್ಲೇಷಣೆಗಳು ಸೈನಿಕರ ಮರಣದ ಕುರಿತು ಬೆಚ್ಚು ಬೀಳುವಂತಹ ವಿಷಯಗಳನ್ನು ಹೊರತರುತ್ತವೆ. ಉದಾಹರಣೆಗೆ, ಕ್ರಿಮಿಯನ್ ಯುದ್ಧದಲ್ಲಿ ಸತ್ತ ಬ್ರಿಟಿಷ್ ಸೈನಿಕರ ಒಟ್ಟು ಸಂಖ್ಯೆ ೨೧,೦೯೭. ಆದರೆ ಅದರಲ್ಲಿ ೧೬,೩೨೩ಮಂದಿ ಸತ್ತದ್ದು ಆಸ್ಪತ್ರೆಯಲ್ಲಿ ತಗುಲಿದ ಸಾಂಕ್ರಾಮಿಕ ರೋಗಗಳಿಂದ. ಅಂದರೆ ಮುಕ್ಕಾಲು ಭಾಗ ಸಾವುಗಳು ತಡೆಗಟ್ಟಬಹುದಿದ್ದ ಸಾವುಗಳು!
ಯುದ್ಧದ ನಂತರ ಬ್ರಿಟನ್ನಿಗೆ ವಾಪಸಾದ ಮೇಲೆ, ನೈಟಿಂಗೇಲ್ ಸುಮ್ಮನೆ ಕೂಡುವುದಿಲ್ಲ. ತಾನು ಯುದ್ಧರಂಗದ ಆಸ್ಪತ್ರೆಗಳಲ್ಲಿ ಜಾರಿಗೆ ತಂದಿದ್ದ ಹಲವಾರು ಸುಧಾರಣೆಗಳನ್ನು ಬ್ರಿಟನ್ನಿನ ಆರೋಗ್ಯ ವ್ಯವಸ್ಥೆಯಲ್ಲಿ ತರಲು ಶತಾಯ-ಗತಾಯ ಪ್ರಯತ್ನಿಸುತ್ತಾಳೆ. ಬ್ರಿಟಿಷ್ ಸರ್ಕಾರಕ್ಕೆ ಅಂಕಿ-ಅಂಶ, ವಿಶ್ಲೇಷಣೆಗಳುಳ್ಳ ಹಲವಾರು ವರದಿಗಳನ್ನು ಸಲ್ಲಿಸುತ್ತಾಳೆ. ಆದರೆ, ಆ ಅಂಕಿ-ಅಂಶಗಳು ಸರ್ಕಾರದ ವೈಫಲ್ಯಗಳನ್ನು ತೋರುವುದರಿಂದ, ಆ ವರದಿಗಳನ್ನು ಜಾರಿಗೆ ತರುವುದಿರಲಿ, ಯಾರ ಕಣ್ಣಿಗೂ ಅವು ಬೀಳಬಾರದೆಂದು, ಅವನ್ನು “ಕಾನ್ಫಿಡೆನ್ಷಿಯಲ್” ಎಂದು ಮುದ್ರೆ ಹಾಕಿ ಬ್ರಿಟಿಷ್ ಸರ್ಕಾರ ಕಪಾಟಿನಲ್ಲಿ ಬೀಗ ಹಾಕಿ ಇಡುತ್ತದೆ. ಸರ್ಕಾರದ ಈ ನಡೆವಳಿಕೆಯಿಂದ ಬೇಸತ್ತುವ ನೈಟಿಂಗೇಲ್, ಈ “ಕಾನ್ಫಿಡೆನ್ಷಿಯಲ್” ವರದಿಗಳನ್ನು ತಾನೇ ಯಾರಿಗೂ ತಿಳಿಯದಂತೆ ಹೊರಹಾಕಲು ಪ್ರಯತ್ನಿಸುತ್ತಾಳೆ. ಕೊನೆಗೆ, ಅದೂ ಸಹ ಅಷ್ಟೊಂದು ಯಶಸ್ವಿಯಾಗದಿದ್ದಾಗ, ಹ್ಯಾರಿಯೆಟ್ ಮಾರ್ಟಿನೂ ಎಂಬ ಕಾದಂಬರಿಕಾರ್ತಿ/ಲೇಖಕಿಯನ್ನು ಸಂಪರ್ಕಿಸುತ್ತಾಳೆ.
ಸಂಖ್ಯಾಶಾಸ್ತ್ರ, ಅಂಕಿ-ಅಂಶಗಳುಳ್ಳ ತನ್ನ ವರದಿಗಳನ್ನು ಪುಸ್ತಕ ರೂಪದಲ್ಲಿ ಜನ-ಸಾಮಾನ್ಯರಿಗೂ ಅರ್ಥವಾಗುವಂತೆ ತಲುಪಿಸಿ, ಆರೋಗ್ಯ ವ್ಯವಸ್ಥೆಯಲ್ಲಿ ಸುಧಾರಣೆ ತರಲು ಸರ್ಕಾರದ ಮೇಲೆ ಒತ್ತಡ ಬೀರುವಂತೆ ಮಾಡುವುದು ಆಕೆಯ ಆಶಯವಾಗಿರುತ್ತದೆ. ಅವರಿಬ್ಬರೂ ಸೇರಿ ಕೊನೆಗೂ “England and Her Soldiers” ಎಂಬ ಪುಸ್ತಕವನ್ನು ಪ್ರಕಟಿಸುತ್ತಾರೆ. ಬ್ರಿಟಿಷ್ ಸರ್ಕಾರ ಅದರ ಯಶಸ್ಸಿಗೂ ಅಡ್ದಿ ಮಾಡುತ್ತದೆ. ಆದರೆ, ಅಮೆರಿಕದಲ್ಲಿ ಆ ಪುಸ್ತಕ ಯಶ ಕಾಣುತ್ತದೆ. ಅಲ್ಲಿನ ಆಸ್ಪತ್ರೆ ಮತ್ತು ಆರೋಗ್ಯ ವ್ಯವಸ್ಥೆಗಳು ನೈಟಿಂಗೇಲ್ ಸೂಚಿಸುವ ಸುಧಾರಣೆಗಳನ್ನು ತಮ್ಮ ದೇಶದಲ್ಲಿ ಜಾರಿಗೆ ತರಲು ಆರಂಭಿಸುತ್ತಾರೆ.
ವಾಸ್ತವತೆಯ ದರ್ಶನ ಮಾಡಿಸುವಲ್ಲಿ, ಅಂಕಿ-ಅಂಶಗಳು – ಬರೀ ಪದಗಳಿಗಿಂತ – ಪರಿಣಾಮಕಾರಿ ಎನ್ನುವುದು ನಿಜವಾದರೂ, ಈ ಅಂಕಿ-ಅಂಶಗಳನ್ನು ಓದುಗರ ಮುಂದೆ ಹೇಗೆ ಮುಂದಿಡಬೇಕು ಎನ್ನುವುದು ಗಮನಿಸಬೇಕಾದ ವಿಚಾರ. ಇದರ ಬಗೆಗೆ, ನೈಟಿಂಗೇಲಳಿಗೆ ಬಾಲ್ಯದಿಂದಲೇ ಅಪಾರ ಆಸಕ್ತಿ ಇತ್ತೆಂದೆನ್ನಿಸುತ್ತದೆ. ಇಂದು, ಕಾರ್ಪೋರೇಟ್ ಆಫೀಸ್‌ಗಳಿಂದ ಹಿಡಿದು ದಿನ ಪತ್ರಿಕೆಗಳ ಲೇಖನಗಳಲ್ಲೂ ಕಂಡು ಬರುವ “ಪೈ ಚಾರ್ಟ್” ಎಂದು ಕರೆಯಲ್ಪಡುವ ಚಾರ್ಟ್ ಅನ್ನು ಉಪಯೋಗಿಸಿದ ಮೊದಲಿಗರಲ್ಲಿ, ಫ್ಲಾರೆನ್ಸ್ ನೈಟಿಂಗೇಲ್ ಒಬ್ಬಳು. ಅಂಕಿ-ಅಂಶಗಳನ್ನು ಚಿತ್ರಗಳ ಮೂಲಕ ಬಿಂಬಿಸುವುದರಲ್ಲಿ ಅಪಾರ ಪರಿಣಿತಿ ಪಡೆದಿದ್ದ ಆಕೆ, “ಪೋಲಾರ್ ಏರಿಯಾ ಡಯಾಗ್ರಮ್” ಅಥವಾ “ನೈಟಿಂಗೇಲ್ ರೋಸ್” ಎಂದು ಕರೆಯಲ್ಪಡುವ ಚಾರ್ಟ್‌ನ ಸೃಷ್ಟಿಕರ್ತೆ ಸಹ. ಹ್ಯಾರಿಯೆಟ್ ಮಾರ್ಟಿನೂ ಜೊತೆಗೂಡಿ ಪ್ರಕಟಿಸಿದ ಪುಸ್ತಕದ ಆದಿ ಭಾಗದಲ್ಲೇ ಇಂತಹದೊಂದು ನೈಟಿಂಗೇಲ್ “ಗುಲಾಬಿ”ಯನ್ನು ಕಾಣಬಹುದು.
೧೮೫೭ರ ಸಿಪಾಯಿ ದಂಗೆಯ ನಂತರ, ಭಾರತದಲ್ಲಿನ ಬ್ರಿಟಿಷ್ ಸೈನಿಕರ ಸ್ಥಿತಿ ಗತಿಗಳ ಕುರಿತು ಗಮನಹರಿಸುವ ನೈಟಿಂಗೇಲ್, ಭಾರತದ ಜನತೆಯ ಹಿತದ ಬಗೆಗೆ ಚಿಂತಿಸದೇ ಭಾರತದಲ್ಲಿರುವ ಬ್ರಿಟಿಷ್ ಸೈನಿಕರ ಹಿತವನ್ನು ಕಾಪಾಡುವುದು ಸಾಧ್ಯವಿಲ್ಲ ಎನ್ನುತ್ತಾಳೆ. ಭಾರತೀಯರ ಆರೋಗ್ಯ ಮತ್ತು ಬ್ರಿಟಿಷ್ ಸೈನಿಕರ ಆರೋಗ್ಯ ಇವೆರಡನ್ನು ಒಂದರಿಂದ ಇನ್ನೊಂದು ಬೇರ್ಪಡಿಸಲು ಸಾಧ್ಯವಿಲ್ಲ ಎಂಬ ವಾದ ಮಂಡಿಸುತ್ತಾಳೆ. ಅಂಕಿ-ಅಂಶಗಳ ಸಾಕ್ಷ್ಯಾಧಾರಗಳಿಂದ ಕೂಡಿದ ಅವಳ ಒತ್ತಾಯ ಪೂರ್ವಕ ಅಧ್ಯಯನಗಳಿಗೆ ಮಣಿಯುವ ಬ್ರಿಟಿಷ್ ಸರ್ಕಾರ, ಭಾರತದಲ್ಲಿನ ತಮ್ಮ ಆಡಳಿತದಲ್ಲಿರುವ ಪ್ರದೇಶಗಳಲ್ಲಿ ಗ್ರಾಮ ನೈರ್ಮಲ್ಯತೆಯ ಬಗೆಗೆ ಮಾಹಿತಿ ಸಂಗ್ರಹಿಸಿ ಅಧ್ಯಯನ ನಡೆಸಲು ರಾಯಲ್ ಕಮಿಷನ್ ಒಂದನ್ನು ನೇಮಿಸುತ್ತದೆ. ನೈಟಿಂಗೇಲ್‌ಳ ಒತ್ತಾಯದಿಂದ ಆದ ಸುಧಾರಣೆಗಳ ಬಲದಿಂದ, ಮುಂದಿನ ಹತ್ತು ವರ್ಷಗಳಲ್ಲಿ ಭಾರತದಲ್ಲಿನ ಬ್ರಿಟಿಷ್ ಸೈನಿಕರ ಸಾವಿನ ಸಂಖ್ಯೆ ಸಾವಿರಕ್ಕೆ ೬೯ ಇದ್ದದ್ದು, ಸಾವಿರಕ್ಕೆ ೧೮ಗೆ ಇಳಿಯುತ್ತದೆ.
ಆ ಆಸ್ಪತ್ರೆಯಲ್ಲಿ ಬಹುಮಟ್ಟಿಗೆ ಸಾಮಾನ್ಯ ಸೈನಿಕರೇ ಗಾಯಾಳುಗಳಾಗಿ ದಾಖಲಾಗುತ್ತಿದ್ದುದ್ದರಿಂದ, ಅಲ್ಲಿದ್ದ ಸೇನೆಯ ಆಫೀಸರುಗಳಾಗಲೀ, ಲಂಡನ್ನಿನ ಪಾರ್ಲಿಮೆಂಟಿನಲ್ಲಿ ಕುಳಿತಿದ್ದ ರಾಜಕಾರಣಿಗಳಾಗಲೀ ಅದರ ಸ್ಥಿತಿ-ಗತಿಗಳ ಬಗೆಗೆ ಲಕ್ಷ್ಯವಿರಿಸಿರಲಿಲ್ಲ.
ಜನ ಸಾಮಾನ್ಯರ ಆರೋಗ್ಯದ ಹಿತರಕ್ಷಣೆಗೆ, ವೈದ್ಯಕೀಯ ರಂಗದಲ್ಲಿನ ಬೆಳವಣಿಗೆಗಳಿಗಿಂತ, ಸ್ವಚ್ಛತೆ ಮತ್ತು ಗ್ರಾಮ ನೈರ್ಮಲ್ಯ ಹಾಗೂ ಅವನ್ನು ಪರಿಣಾಮಕಾರಿಯಾಗಿ ತರಲು ಆಡಳಿತ ವ್ಯವಸ್ಥೆಯ ಸುಧಾರಣೆಯೇ ಮುಖ್ಯವೆಂದು ಮನಗಾಣುವ ನೈಟಿಂಗೇಲ್, ಸ್ಯಾನಿಟೇಷನ್ ಮತ್ತು ಡ್ರೇನೇಜ್ ವ್ಯವಸ್ಥೆಗಳ ಬಗೆಗೆ ಅಧ್ಯಯನ ನಡೆಸಿ, ಸರ್ಕಾರಕ್ಕೆ ಮಾಹಿತಿ ಪೂರ್ವಕ ವರದಿಗಳನ್ನು ಸಲ್ಲಿಸುತ್ತಾಳೆ.
ಹಲವಾರು ಇತಿಹಾಸಕಾರರ ಪ್ರಕಾರ, ೧೮೭೦ರಿಂದ ೧೯೩೦ರ ವರೆಗಿನ ೬೦ ವರ್ಷಗಳ ಅವಧಿಯಲ್ಲಿ, ವೈದ್ಯಕೀಯ ರಂಗದಲ್ಲಿ ಅಂತಹ ಮಹತ್ತರ ಬೆಳವಣಿಗೆಗಳೇನೂ ಕಂಡು ಬರುವುದಿಲ್ಲ. ಆದರೂ, ಮನುಷ್ಯನ ಜೀವಿತಾವಧಿ ಸುಮಾರು ೨೦ ವರ್ಷ ಹೆಚ್ಚುತ್ತದೆ. ಇದರ ಹಿಂದಿನ ಕಾರಣ, ಸ್ಯಾನಿಟೇಷನ್ ವ್ಯವಸ್ಥೆಯಲ್ಲಿ ಆದ ಕ್ರಾಂತಿಕಾರಕ ಸುಧಾರಣೆಗಳು.
ಒಂದು ವಿಚಿತ್ರವೆಂದರೆ, ನೈಟಿಂಗೇಲ್ ಒತ್ತಾಯ ಪೂರ್ವಕವಾಗಿ ಮಾಡಿದ ಹಲವಾರು ಸುಧಾರಣೆಗಳನ್ನು ಜಾರಿಗೆ ತರುವ ಬ್ರಿಟಿಷ್ ಸರ್ಕಾರ, ತೀರಾ ಇತ್ತೀಚಿನವರೆಗೆ, ಆಕೆಯ “England and Her Soldiers” ಪುಸ್ತಕ ಪ್ರಕಟವಾಗಿ ನೂರು ವರ್ಷ ಮೇಲ್ಪಟ್ಟ ನಂತರವೂ, ಆಕೆಯ ವಿಶ್ಲೇಷಣೆಗಳನ್ನು ಒಪ್ಪಲು ಸಿದ್ಧರಿರುವುದಿಲ್ಲ; ೧೯೭೪ರಲ್ಲಿಯೂ ಬ್ರಿಟನ್ನಿನ ಮಿಲಿಟರಿ ಅಧಿಕಾರ ವರ್ಗ, ನೂರಿಪ್ಪತ್ತು ವರ್ಷಗಳ ಹಿಂದಿನ ಮಿಲಿಟರಿ ಆಸ್ಪತ್ರೆಗಳ ಪರಿಸ್ಥಿತಿ ಉತ್ತಮವಿತ್ತೆಂದೇ ವಾದಗಳನ್ನು ಮಂಡಿಸುತ್ತದೆ!
*****
ಹತ್ತೊಂಬತ್ತೆಯ ಶತಮಾನದ ಬ್ರಿಟನ್ನಿಗೂ, ಇಂದಿನ ಭಾರತಕ್ಕೂ ಹಲವಾರು ವ್ಯತ್ಯಾಸಗಳಿರಬಹುದು. ಆದರೆ, ಯಾವುದೇ ಶತಮಾನದ ಯಾವುದೇ ಸರ್ಕಾರಕ್ಕೂ ಅಂಕಿ-ಅಂಶಗಳೆಂದರೆ ಒಂದು ರೀತಿಯ ಅಲರ್ಜಿಯೇ. ತಾವು ನಿರ್ಮಿಸಿದ ಜಗತ್ತಿನ ಅತ್ಯಂತ ಎತ್ತರದ ಪ್ರತಿಮೆಯ ಕುರಿತು ಪುಂಖಾನುಪುಂಖವಾಗಿ ತುತ್ತೂರಿ ಊದುವ ಸರ್ಕಾರಗಳಿಗೆ ವಿವರವಾದ ಅಂಕಿ-ಅಂಶಗಳನ್ನು ನೀಡಲು ಭಯವಾದರೂ ಏತಕ್ಕೆ?! ಸಂಖ್ಯೆಗಳಿಗೆ ಪದಗಳಿಗಿರುವ ಅರ್ಥ-ವೈಶಾಲ್ಯವಿಲ್ಲವಲ್ಲ, ಅದಕ್ಕಿರಬಹುದೇ? ಮಾತನ್ನು ಬಗ್ಗಿಸಬಹುದು. ಅಂಕಿ-ಸಂಖ್ಯೆಗಳನ್ನು ಬಾಗಿಸಲೆತ್ನಿಸಿದರೆ ಅವು ಮುರಿಯುತ್ತವೆ.
ಮಾತಿಗೆ ನುಣುಪಿದ್ದರೆ, ಅಂಕಿ-ಸಂಖ್ಯೆಗಳಿಗಿರುವುದು ಜಿಗುಟು! ನುಣುಚಿಕೊಳ್ಳಲೆತ್ನಿಸುವವರಿಗೆ “ಮನ್ ಕೀ ಬಾತ್” ಅಷ್ಟೇ ಸರಿಯೆನ್ನಿಸುವುದರಲ್ಲಿ ಆಶ್ಚರ್ಯವೇನೂ ಇಲ್ಲ.
ಬ್ರಿಟನ್ನಿನ ಅಂದಿನ ಕ್ರಿಮಿಯನ್ ಯುದ್ಧಕ್ಕೂ, ಭಾರತದ ಇಂದಿನ ಕೋವಿಡ್ ಯುದ್ಧಕ್ಕೂ ವ್ಯತ್ಯಾಸಗಳಿವೆ, ನಿಜ. ಆದರೆ, ಅಂದು ನೈಟಿಂಗೇಲ್ ತೋರಿಸಿಕೊಟ್ಟಂತೆ, ಇಂದು ಭಾರತದಲ್ಲೂ ಸಹ ಎಷ್ಟೋ ಸಹಸ್ರ ಮಂದಿಯ ಸಾವುಗಳು ಸರ್ಕಾರಿ ಆಡಳಿತ-ಆರೋಗ್ಯ ವ್ಯವಸ್ಥೆಯ ವೈಫಲ್ಯದಿಂದ ಆದ ತಡೆಗಟ್ಟಬಹುದಿದ್ದ ಸಾವುಗಳು. ಅವರಿಗೆ ಕರೋನ ವೈರಸ್ ಸೋಂಕಿದ್ದದ್ದು ನಿಜ. ಆದರೆ, ಸರಿಯಾದ ಸಮಯಕ್ಕೆ ಅವರಿಗೆ ಆಕ್ಸಿಜೆನ್, ವೆಂಟಿಲೇಟರ್, ಇತ್ಯಾದಿಗಳು ಒದಗಿಸಿದ್ದಿದ್ದರೆ ಅವರನ್ನು ಉಳಿಸಿಕೊಳ್ಳಬಹುದಿತ್ತೆಂಬುದೂ ಅಷ್ಟೇ ನಿಜ. ಆಕ್ಸಿಜೆನ್‌ನಿಂದ ವ್ಯಾಕ್ಸೀನ್ ವರೆಗೆ ಎಲ್ಲವೂ ಸರಿಯಿದೆ ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಘೋಷಿಸುತ್ತಲೇ ಇದ್ದರೂ, ಭಾರತದ ಉದ್ದಗಲಕ್ಕೂ ಲೆಕ್ಕವಿಲ್ಲದಷ್ಟು ಮಂದಿ ಸಾವಿಗೀಡಾಗಿದ್ದಾದರೂ ಹೇಗೆ?!
ಚಾಮರಾಜನಗರ ಜಿಲ್ಲೆಯಲ್ಲಿ ಕೆಲವೇ ವಾರಗಳ ಹಿಂದೆ ಆದ ದಾರುಣ ಸಾವುಗಳು ಇಂದು ಬಹು ಚರ್ಚಿತವಾಗಿದೆ. ಇವು ಆಘಾತ ಎನ್ನಿಸಿದರೂ, ಆಶ್ಚರ್ಯದ ವಿಷಯವಲ್ಲ; ಆರೋಗ್ಯದ ಮೂಲ ಸೌಕರ್ಯದ ವಿಷಯಗಳಲ್ಲಿ ಚಾಮರಾಜನಗರ ಮತ್ತು ಕೊಪ್ಪಳ ಜಿಲ್ಲೆಗಳು ಕರ್ನಾಟಕದಲ್ಲಷ್ಟೇ ಅಲ್ಲ, ಇಡೀ ಭಾರತದಲ್ಲೇ ಹಿಂದುಳಿದ ಜಿಲ್ಲೆಗಳ ಸಾಲಿನಲ್ಲಿ ಸೇರಿವೆ. ಅಂಕಿ-ಅಂಶಗಳನ್ನು ಗಮನಿಸಿದವರಿಗೆ ಇದು ಎಂದೋ ತಿಳಿದ ವಿಚಾರ.
ಇದು ಕೇವಲ ಆರೋಗ್ಯ ವ್ಯವಸ್ಥೆಯ ವಿಚಾರವಷ್ಟೇ ಅಲ್ಲ. ದೇಶದ ಆರ್ಥಿಕ ಸುಭದ್ರತೆ, ಬೆಲೆ ಏರಿಕೆ, ನಿರುದ್ಯೋಗ, ಇತ್ಯಾದಿ ಎಷ್ಟೋ ವಿಚಾರಗಳನ್ನು ಕೊಂಚ ಮಟ್ಟಿಗಾದರೂ ಅರ್ಥಮಾಡಿಕೊಳ್ಳಲು, Statistics ಮತ್ತು ಅಂಕಿ-ಅಂಶಗಳ ಕುರಿತಾದ ಜ್ಞಾನ ಬೇಕೇ ಬೇಕು. “ಗಣಿತ” ಹಲವರ ಪಾಲಿಗೆ ಕಬ್ಬಿಣದ ಕಡಲೆ ಎನ್ನಿಸಬಹುದು. ಆದರೆ, ಪ್ರತಿ ಕ್ಷಣವೂ ಸಂಕೀರ್ಣವಾಗುತ್ತಿರುವ ವಿಶ್ವದ ಕಗ್ಗಂಟನ್ನು ಎಳೆ-ಎಳೆಯಾಗಿ ಬಿಚ್ಚಲು, ಅದರ ಮೊರೆ ಹೊಕ್ಕದೆ ಬೇರೆ ದಾರಿಯೇ ಇಲ್ಲ. ಹಾಗೆಂದು, ಪ್ರತಿಯೊಬ್ಬರೂ ಗಣಿತ-ಸಂಖ್ಯಾಶಾಸ್ತ್ರದ ಪಾರಂಗತರಾಗಬೇಕೆಂದೇನೂ ಇಲ್ಲ, ಸಾಮಾನ್ಯವಾದ ಅರಿವು ಇದ್ದರೂ ಸಾಕು. ಎಲ್ಲಕ್ಕಿಂತ ಮುಖ್ಯವಾಗಿ, ಅಂಕಿ-ಅಂಶಗಳನ್ನು ನೀಡುವಂತೆ ಅಧಿಕಾರಷಾಹಿಯ ಮೇಲೆ ಒತ್ತಡ ಹಾಕುವ ಸಂಸ್ಕೃತಿಯೊಂದನ್ನು ಬೆಳೆಸಬೇಕು.
ಸರ್ಕಾರ ಮತ್ತು ಆಡಳಿತ ವ್ಯವಸ್ಥೆಗಳು ನಮಗೆ ನೀಡುವ ಅಂಕಿ-ಅಂಶಗಳನ್ನು ನಂಬುವುದಾದರೂ ಹೇಗೆ?! ಆ ಅಂಕಿ-ಅಂಶಗಳೇ ಸುಳ್ಳಿರಬಹುದಲ್ಲವೇ? ಅಂಕಿ-ಅಂಶಗಳ ನಿರುಪಯುಕ್ತತೆಯ ಕುರಿತು ಮಾರ್ಕ್ ಟ್ವೇನ್ ಹೇಳಿದ “Lies, damned lies, and statistics” ಮಾತಿನಲ್ಲಿ ಸತ್ಯತೆ ಇಲ್ಲದಿಲ್ಲ. ಆದರೆ, ಸರ್ಕಾರ ನೀಡುವ ಅಂಕಿ-ಅಂಶಗಳನ್ನು ಕೊಂಚ ವಿಷದವಾಗಿ ನೋಡಿ, ಅವನ್ನು ಇತರೆ ಅಂಕಿ-ಅಂಶಗಳೊಂದಿಗೆ ತಾಳೆ ಹಾಕಿದರೆ, ಅವುಗಳ ಸತ್ಯ/ಅಸತ್ಯಗಳು ಹೊರ ಬೀಳುತ್ತವೆ ಎಂಬುದೂ ಸಹ ನಿಜ.
ಹಲವು ದಶಕಗಳ ಹಿಂದೆ, ನಾನಿನ್ನೂ ಪ್ರೈಮರಿ ಶಾಲೆಯಲ್ಲಿ ಗಣಿತದ ಮೊದಲ ಪಾಠಗಳನ್ನು ಕಲಿಯುತ್ತಿದ್ದಾಗ, ನಮಗೆ “ಕೂಡಿ ಕಳೆಯುವ” ಲೆಕ್ಕಗಳನ್ನು ಕೊಡುತ್ತಿದ್ದರು. ನಾಲ್ಕು ಸಂಖ್ಯೆಗಳುಳ್ಳ ಐದೋ-ಆರೋ ನಂಬರ್‌ಗಳನ್ನು ಮೊದಲು ಕೂಡಿ, ನಂತರ, ಆ ಕೂಡುವಿಕೆಯ ಒಟ್ಟು ಮೊತ್ತದಿಂದ ಆ ನಂಬರ್‌ಗಳನ್ನು ಒಂದೊಂದಾಗಿ ಕಳೆಯುವುದು ಆ ಲೆಕ್ಕದ ವಿಷಯವಾಗಿತ್ತು. ಆ ಲೆಕ್ಕಕ್ಕೆ ಇದ್ದ ಉತ್ತರ ಒಂದೇ: ಸೊನ್ನೆ. ಹೀಗಾಗಿ, ಎಷ್ಟೋ ಮಂದಿ, ಲೆಕ್ಕದ ಪ್ರತಿ ಹಂತದಲ್ಲೂ ತಪ್ಪುಗಳೇ ಇದ್ದರೂ, ಕೊನೆಯಲ್ಲಿ ಮಾತ್ರ ಸರಿಯಾದ ಉತ್ತರವಾದ “೦೦೦೦”ಯನ್ನೇ ಬರೆಯುತ್ತಿದ್ದರು. ತರಗತಿಯಲ್ಲಿ ೪೦-೫೦ ವಿದ್ಯಾರ್ಥಿಗಳಿರುತ್ತಿದ್ದುದ್ದರಿಂದ, ಶಿಕ್ಷಕರು ಇಂತಹುದರ ಬಗೆಗೆ ಅಷ್ಟಾಗಿ ಗಮನ ಹರಿಸುತ್ತಿರಲಿಲ್ಲ. ನೆಮ್ಮದಿಯ ವಿಷಯವೆಂದರೆ, ಸರ್ಕಾರ ನೀಡುವ ಲೆಕ್ಕಾಚಾರದ ವಿಷಯದಲ್ಲಿ, ಆ ಲೆಕ್ಕಾಚಾರ ನೀಡುವವರಿಗಿಂತ, ಅದರ ಸರಿ-ತಪ್ಪುಗಳನ್ನು ಪರೀಕ್ಷೆ ಮಾಡಬಲ್ಲವರ ಸಂಖ್ಯೇ ಎಷ್ಟೋ ಪಟ್ಟು ಹೆಚ್ಚಿದೆ. ನಾವು ಆ ವಿಷಯದ ಕುರಿತು ಎಚ್ಚೆತ್ತುಕೊಳ್ಳಬೇಕು, ಅಷ್ಟೇ.
ಇಂದು ಕರೋನ ಕಾಡುತ್ತಿದೆ. ಮುಂದೆ ಮತ್ತಿನ್ನೇನೋ ಕಾಡೇ ಕಾಡುತ್ತದೆ. ಅವುಗಳನ್ನು ಸಮರ್ಥವಾಗಿ ಎದುರಿಸುವ ಸರ್ಕಾರ ನಮಗೆ ಬೇಕಿದ್ದರೆ, ಅದಕ್ಕೆ ಮುನ್ನ, ಅಂಕಿ-ಅಂಶ, ಸಂಖ್ಯಾಶಾಸ್ತ್ರವನ್ನು ಓದು-ಬರಹದಷ್ಟೇ ಪಾರಮ್ಯವಾಗಿಸುವ ಸಂಸ್ಕೃತಿಯೊಂದನ್ನು ನಾವು ನಿರ್ಮಿಸಬೇಕಾಗಿದೆ.
ಎಚ್.ಜಿ.ವೆಲ್ಸ್‌ನ ಮಾತು ನೆನಪಿದೆಯಲ್ಲವೇ?!
(ಈ ಲೇಖನದ ಸಂಕ್ಷಿಪ್ತ ಆವೃತ್ತಿ, ಆಂದೋಲನ ದಿನ ಪತ್ರಿಕೆಯಲ್ಲಿ ಕೆಲವು ವಾರಗಳ ಹಿಂದೆ ಪ್ರಕಟವಾಗಿತ್ತು)
ಶೇಷಾದ್ರಿ ಗಂಜೂರು ಕೆಲ ವರ್ಷಗಳ ಕಾಲ ಬಿಹಾರದ ಕಲ್ಲಿದ್ದಲು ಗಣಿಗಳಲ್ಲಿ ಕೆಲಸಮಾಡಿ, ನಂತರ ದಶಕಗಳ ಕಾಲ ಅಮೆರಿಕದಲ್ಲಿ ನೆಲೆಸಿ, ಈಗ ಸದ್ಯಕ್ಕೆ ಕೆನಡಾದಲ್ಲಿ ಕಾಗ್ನಿಟಿವ್ ಕಾಂಪ್ಯೂಟಿಂಗ್ ವಿಷಯದಲ್ಲಿ ಸಂಶೋಧನೆಯಲ್ಲಿ ತೊಡಗಿರುವ ನ್ಯೂರೋಸೈನ್ಸಿನಲ್ಲಿ ಆಸಕ್ತಿಯುಳ್ಳ ವಿಜ್ಞಾನಿ.