”ಹೊಟ್ಟೆ ಹಸಿದಿರುತ್ತಿತ್ತು. ತಿಂಡಿಯೊಂದೆ ತಲೆತುಂಬ ತುಂಬಿಕೊಂಡು ಮಂದಿರದತ್ತ ಬಲವಂತವಾಗಿ ಕಾಲೆಳೆದುಕೊಂಡು ಹೋಗುತ್ತಿದ್ದೆ. ಎಷ್ಟು ಬೇಗ ಆದ್ರೆ ಅಷ್ಟು ಬೇಗ ಮನೆ ತಲುಪಿಬಿಡೋದೇ ನನ್ನ ಉದ್ದೇಶವಾಗಿರುತ್ತಿತ್ತು. ಪ್ರಾರ್ಥನಾ ಸಭಾಂಗಣದ ಮುಂದೆ ನಿಂತು ಅಲ್ಲಿದ್ದ ಗಂಟೆ ಬಾರಿಸುತ್ತಿದ್ದೆ.ಪ್ರಾರ್ಥನೆ ಮುಗಿಸಿ ಅದೇ ಕಾಂಪೌಂಡಿನ ಮೂಲೆಯಲ್ಲಿದ್ದ ಅರ್ಚಕನ ಮನೆಮುಂದೆ ನಿಂತು “ಗುಡ್ಮಾರ್ನಿಂಗ್” ಅಂತ ಕಿರುಚುತ್ತಿದ್ದೆ. . ನಾನವನನ್ನ ನೋಡಿದಾಗಲೆಲ್ಲ ಅವನ ಕೆನ್ನೆಗಳು ಊದಿದಂತಿರುತ್ತಿತ್ತು, ದವಡೆಗಳು ಅಲುಗಾಡುತ್ತಿತ್ತು.”
ಹೇಮಾ.ಎಸ್. ಅನುವಾದಿಸಿರುವ ಅಕಿರ ಕುರಸೋವನ ಆತ್ಮಕತೆಯ ಮೂರನೆಯ ಅಧ್ಯಾಯ.
ತಾಯ್ಶೋ ಯುಗದಲ್ಲಿ ಪ್ರೈಮರಿ ಶಾಲೆಯಲ್ಲಿ ಕೆಂಡೊ ಕತ್ತಿವರಸೆಯನ್ನು ಐದನೆಯ ತರಗತಿಯ ಪಠ್ಯಕ್ರಮದಲ್ಲೇ ಸೇರಿಸಿರುತ್ತಿದ್ದರು. ಪ್ರತಿ ವಾರ ಎರಡು ಗಂಟೆಗಳ ಕಾಲ ತರಗತಿಗಳು ನಡೆಯುತ್ತಿತ್ತು. ಆರಂಭದಲ್ಲಿ ಬಿದಿರಿನ ಕತ್ತಿಯಲ್ಲಿ ಅಭ್ಯಾಸ ಮಾಡಿಸುತ್ತಿದ್ದರು. ನಂತರ ಆಕ್ರಮಣ ಮಾಡುವುದು ಹೇಗೆ ಅದರಿಂದ ತಪ್ಪಿಸಿಕೊಳ್ಳುವುದು ಹೇಗೆ ಅಂತ ಹೇಳಿಕೊಡುತ್ತಿದ್ದರು. ಅಂತಿಮವಾಗಿ ಶಾಲೆಯಲ್ಲಿ ತಲೆತಲಾಂತರದಿಂದ ಇರುತ್ತಿದ್ದ ಕತ್ತಿವರಸೆಯ ಉಡುಪುಗಳನ್ನು ತೊಡಬೇಕಿತ್ತು. ಮೂವರಲ್ಲಿ ಉತ್ತಮರಾದ ಇಬ್ಬರನ್ನು ಆಯ್ಕೆ ಮಾಡಲು ನಡೆಸಿದ ಎಷ್ಟೋ ಸ್ಪರ್ಧೆಗಳಲ್ಲಿ ಬಳಸಿರುತ್ತಿದ್ದ ಈ ಉಡುಪುಗಳು ಬೆವರಿನಿಂದ ನಾರುತ್ತಿದ್ದವು. ಸಾಮಾನ್ಯವಾಗಿ ಈ ರಕ್ಷಣಾತಂತ್ರಗಳನ್ನು ಕೆಂಡೊನಲ್ಲಿ ಪರಿಣತಿ ಪಡೆದಿರುತ್ತಿದ್ದ ಶಿಕ್ಷಕರು ಹೇಳಿಕೊಡುತ್ತಿದ್ದರು. ಕೆಲವು ಸಾರಿ ತಮ್ಮ ಸ್ವಂತದ ಕತ್ತಿವರಸೆ ಶಾಲೆ ನಡೆಸುತ್ತಿದ್ದವರು ತಮ್ಮ ಸಹಾಯಕರ ಜೊತೆಯಲ್ಲಿ ಬಂದು ವಿದ್ಯಾರ್ಥಿಗಳು ಕಲಿತಿರುವ ಪಾಠಗಳನ್ನ ತಿದ್ದಿ ತೀಡುತ್ತಿದ್ದರು. ವಿದ್ಯಾರ್ಥಿಗಳಲ್ಲಿ ಅತ್ಯುತ್ತಮವಾಗಿ ಕಲಿಯುತ್ತಿರುವವರನ್ನು ಆಯ್ಕೆ ಮಾಡಿ ಅವರಿಗೆ ವಿಶೇಷವಾಗಿ ಹೇಳಿಕೊಡುತ್ತಿದ್ದರು. ಕೆಲವೊಮ್ಮೆ ಶಿಕ್ಷಕ ಮತ್ತು ಅವರ ಸಹಾಯಕ ನಿಜವಾದ ಕತ್ತಿಯನ್ನು ಬಳಸಿ ತಮ್ಮ ಶಾಲೆಯ ಶೈಲಿಯ ತಂತ್ರಗಳನ್ನು ಮಾಡಿ ತೋರಿಸುತ್ತಿದ್ದರು.
ಕುರೊದ ಪ್ರೈಮರಿ ಶಾಲೆಗೆ ಬರುತ್ತಿದ್ದ ಕತ್ತಿವರಸೆಯ ಗುರುಗಳ ಹೆಸರು ಒಚಿಯಾಯ್ ಮಾಗೊಸಬುರೊ (ಅಥ್ವಾ ಅವರು ಮಾಟಸಬುರೋ ಇರಬಹುದು. ಅವರದು ಟಿಪಿಕಲ್ ಕಠಾರಿವೀರರ ರೀತಿಯ ಹೆಸರು ನಂಗೆ ನೆನಪಿಲ್ಲ.) ಆತ ಅಪ್ರತಿಮ ಶಕ್ತಿವಂತ. ಆತ ತನ್ನ ಸಹಾಯಕನ ಜೊತೆ ಕತ್ತಿವರಸೆಯನ್ನ ಪ್ರದರ್ಶಿಸಿದಾಗ ಅವನ ಶೈಲಿಯನ್ನ ನೋಡೋಕೆ ಅದ್ಭುತವಾಗಿರೋದು. ವಿದ್ಯಾರ್ಥಿಗಳೆಲ್ಲ ಉಸಿರು ಬಿಗಿಹಿಡಿದು ನೋಡೋರು.
ವಿಶೇಷ ಗಮನಹರಿಸಿ ಕಲಿಸಲು ಆಯ್ಕೆ ಮಾಡಿಕೊಂಡ ವಿದ್ಯಾರ್ಥಿಗಳಲ್ಲಿ ನಾನು ಕೂಡ ಒಬ್ಬ. ಆತ ನನಗೆ ವೈಯುಕ್ತಿಕವಾಗಿ ಪಾಠ ಹೇಳಿಕೊಡ್ತಿದ್ದರು. ಒಂದು ಸಾರಿ ಇದ್ದಕ್ಕಿದ್ದಂತೆ ಹುಮ್ಮಸ್ಸಿನಲ್ಲಿ ನಾನು ಅವರೊಂದಿಗೆ ಕತ್ತಿವರಸೆಗೆ ಇಳಿದುಬಿಟ್ಟೆ. ನನ್ನ ಬಿದಿರಿನ ಕತ್ತಿಯನ್ನ ಎತ್ತಿ “ಹೋಯ್” ಅಂತ ಕೂಗಿದ್ದೆ (ಅಂದರೆ ಆಕ್ರಮಣ ಮಾಡುತ್ತಿದ್ದೇನೆ ಎಂದರ್ಥ). ನಾನವರತ್ತ ಕತ್ತಿ ಬೀಸುತ್ತಿದ್ದ ಹಾಗೇ ಯಾರೋ ನನ್ನ ನೆಲದಿಂದ ಮೇಲಕ್ಕೆ ಎತ್ತಿದಂತೆ ಅನ್ನಿಸಿತು. ಕಾಲುಗಳನ್ನ ಗಾಳಿಯಲು ಬಡಿಯಲು ಶುರುಮಾಡಿದ್ದೆ. ಒಚಿಯಾಯ್ ಮಾಗೊಸಬುರೊ ನನ್ನನ್ನ ತಮ್ಮ ಭುಜದೆತ್ತರಕ್ಕೆ ಎತ್ತಿ ಹಿಡಿದಿದ್ದರು. ನಾನು ಅಚ್ಚರಿಯಿಂದ ದಂಗಾಗಿಹೋದೆ. ಅವರ ಬಗೆಗಿನ ಗೌರವ ದುಪ್ಪಟ್ಟಾಯಿತು.
ನೇರವಾಗಿ ಅಪ್ಪನ ಹತ್ತಿರ ಹೋಗಿ ಒಚಿಯಾಯ್ ಅವರ ಕತ್ತಿವರಸೆಯ ಶಾಲೆಗೆ ಸೇರಿಸಲು ಕೇಳಿಕೊಂಡೆ. ಅಪ್ಪನಿಗೆ ಬಹಳ ಖುಷಿಯಾಯ್ತು. ನನ್ನ ಬೇಡಿಕೆಯಿಂದ ಅವರಲ್ಲಿ ಹರಿಯುತ್ತಿದ್ದ ಸಮುರಾಯ್ ಗಳ ರಕ್ತ ಉಕ್ಕಿತೋ ಅಥವ ಅವರೊಳಗಿನ ಮಿಲಿಟರಿ ಅಕಾಡೆಮಿಯ ಮೇಷ್ಟ್ರ ಚೈತನ್ಯ ಚಿಮ್ಮಿತೋ ಗೊತ್ತಿಲ್ಲ. ಅದೇನೇ ಆದರೂ ಪರಿಣಾಮ ಮಾತ್ರ ಗಮನಾರ್ಹವಾಗಿತ್ತು.
ನಮ್ಮಣ್ಣನ ಬಗ್ಗೆ ಅಪ್ಪನ ನಿರೀಕ್ಷೆಗಳೆಲ್ಲ ಹುಸಿಯಾಗುತ್ತಿದ್ದ ಕಾಲದಲ್ಲಿ ಇದು ನಡೆದದ್ದು. ಇಷ್ಟುದಿನ ನನ್ನ ಮುದ್ದು ಮಾಡಿ ಹಾಳುಮಾಡಿದ್ದರು. ಈಗ ಅಣ್ಣನಿಂದ ನನ್ನ ಕಡೆಗೆ ಅವರ ಗಮನ ಹರಿಯಿತು. ನನ್ನ ಕಡೆ ಹೆಚ್ಚು ಗಮನನೀಡಲಾರಂಭಿಸಿದರು. ನನ್ನೊಡನೆ ಹೆಚ್ಚು ಶಿಸ್ತಿನಿಂದ ಇರಲು ಶುರುಮಾಡಿದರು.
ನಾನು ಕತ್ತಿವರಸೆ ಕಲಿಯುವುದಕ್ಕೆ ಅಪ್ಪ ಮನಃಪೂರ್ವಕವಾಗಿ ಒಪ್ಪಿಕೊಂಡಿದ್ದರು. ಅದರ ಜೊತೆಗೆ ಕ್ಯಾಲಿಗ್ರಫಿಯನ್ನು ಕಲಿಯಲು ಒತ್ತಾಯಿಸಿದರು. ಎಲ್ಲಕ್ಕಿಂತ ಹೆಚ್ಚಾಗಿ ಬೆಳಗಿನ ಹೊತ್ತು ಒಚಿಯಾಯ್ ಶಾಲೆಯಲ್ಲಿ ಕೆಂಡೋ ತರಗತಿಯನ್ನ ಮುಗಿಸಿಬರುವಾಗ ಹಚಿಮಾನ್ ಮಂದಿರಕ್ಕೆ ಭೇಟಿ ಕೊಟ್ಟು ಗೌರವ ಸಲ್ಲಿಸಲು ಹೇಳಿದ್ದರು. ಆತ್ಮಶಕ್ತಿಯ ಬೆಳವಣಿಗೆಗೆ ಇದು ಒಳ್ಳೆಯದು ಅಂತ ಹಾಗೆ ಮಾಡಲು ಹೇಳಿದ್ದರು. ಒಚಿಯಾಯ್ ಶಾಲೆ ಮನೆಯಿಂದ ಬಹಳ ದೂರವಿತ್ತು. ಮನೆಯಿಂದ ಕುರೊದ ಪ್ರೈಮರಿ ಶಾಲೆಯೇ ಸಾಕಷ್ಟು ದೂರವಿತ್ತು. ಮಗುವಿನ ಕಾಲುಗಳನ್ನು ಸುಸ್ತು ಮಾಡಲು ಆ ದೂರವೇ ಸಾಕಿತ್ತು. ಒಚಿಯಾಯ್ ಶಾಲೆ ಅದಕ್ಕಿಂತ ಐದುಪಟ್ಟು ದೂರವಿತ್ತು. ಅದೃಷ್ಟವಶಾತ್ ನಮ್ಮಪ್ಪ ಪ್ರತಿ ದಿನ ಬೆಳಗ್ಗೆ ಭೇಟಿ ನೀಡಲು ಹೇಳಿದ್ದ ಆ ಮಂದಿರ ಕುರೊದ ಪ್ರೈಮರಿ ಶಾಲೆಯ ದಾರಿಯಲ್ಲಿತ್ತು ಮತ್ತದು ಹೆಚ್ಚು ಕಡಿಮೆ ನಾನು ಹೋಗುತ್ತಿದ್ದ ಕತ್ತಿವರಸೆ ಶಾಲೆಯ ದಾರಿಯಲ್ಲೇ ಇತ್ತು. ಆದರೆ ಅಪ್ಪನ ಮಾತಿನಂತೆ ನಡೆಯಲು ನಾನು ಪ್ರತಿದಿನ ಬೆಳಗ್ಗೆ ಒಚಿಯಾಯ್ ಶಾಲೆಗೆ ಹೋಗಿ ವಾಪಸ್ಸು ಬರುವಾಗ ಮಂದಿರಕ್ಕೆ ಹೋಗಿ ಮನೆಗೆ ಬಂದು ತಿಂಡಿ ತಿಂದು ಕುರೊದ ಪ್ರೈಮರಿ ಶಾಲೆಗೆ ಹೋಗಬೇಕಿತ್ತು. ಶಾಲೆ ಮುಗಿದ ನಂತರ ಕ್ಯಾಲಿಗ್ರಫಿ ಕಲಿಸೋ ಮೇಷ್ಟ್ರ ಮನೆಗೆ ಹೋಗಬೇಕಿತ್ತು. ಅದೃಷ್ಟವಶಾತ್ ಅವರ ಮನೆ ಶಾಲೆಯ ದಾರಿಯಲ್ಲೇ ಇತ್ತು. ಅದಾದ ಮೇಲೆ ನಾನು ತಚಿಕಾವ ಅವರ ಮನೆಗೆ ಹೋಗುತ್ತಿದ್ದೆ.
ತಚಿಕಾವ ಅವರ ಮನೆಗೆ ಹೋಗುತ್ತಿದ್ದದ್ದು ನನ್ನ ಆಯ್ಕೆಯಾಗಿತ್ತು. ತಚಿಕಾವ ಅಷ್ಟೊತ್ತಿಗೆ ಕುರೊದ ಪ್ರೈಮರಿ ಶಾಲೆ ಬಿಟ್ಟಿದ್ದರು. ಆದರೆ ವೆಕ್ಸ ಮತ್ತು ನಾನು ಅವರ ಮನೆಗೆ ನಿರಂತರವಾಗಿ ಹೋಗುತ್ತಿದ್ದೆವು. ಸ್ವತಂತ್ರ ಶಿಕ್ಷಣ ಮತ್ತು ವ್ಯಕ್ತಿವಿಶಿಷ್ಟತೆಯನ್ನ ಆತ ಗೌರವಿಸುತ್ತಿದ್ದರು. ಅದಕ್ಕೆ ಸೂಕ್ತ ವಾತಾವರಣವನ್ನ ಕಲ್ಪಿಸುತ್ತಿದ್ದರು. ಅವರೊಂದಿಗೆ ಸಾಕಷ್ಟು ಸಾರ್ಥಕ ದಿನಗಳನ್ನು ಕಳೆದವು. ಹಾಗೆಯೇ ಅವರ ಹೆಂಡತಿಯ ಪ್ರೀತಿಯ ಸತ್ಕಾರವನ್ನು ಸವಿದೆವು. ಬೇರೇನೇ ಕೆಲಸಗಳಿದ್ದರೂ ಅವರೊಂದಿಗೆ ಕಳೆಯುವ ಸಮಯವನ್ನ ಎಂದೂ ತಪ್ಪಿಸಿಕೊಳ್ಳುತ್ತಿರಲಿಲ್ಲ.
ಈ ನಿತ್ಯದ ಕೆಲಸಗಳನ್ನ ಮಾಡಲು ಪ್ರತಿದಿನ ಸೂರ್ಯ ಹುಟ್ಟೋಕು ಮುಂಚೆ ಮನೆಬಿಟ್ಟು ಸೂರ್ಯ ಮುಳುಗಿದ ಮೇಲೆ ಮನೆಗೆ ಬರುತ್ತಿದ್ದೆ. ಮಂದಿರಕ್ಕೆ ಭೇಟಿ ಕೊಡೋದನ್ನ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೆ. ಆದರೆ ಅಪ್ಪ ಬಿಡ್ತಿರಲಿಲ್ಲ. ನನ್ನ ದೈವಭಕ್ತಿಯ ರೆಕಾರ್ಡು ಅಂತ ಹೇಳಿ ನಂಗೊಂದು ಡೈರಿ ಕೊಟ್ಟಿದ್ದರು. ಪ್ರತಿಬೆಳಗ್ಗೆ ಮಂದಿರಕ್ಕೆ ಹೋಗಿ ಅಲ್ಲಿಂದ ಮುದ್ರೆ ಒತ್ತಿಸ್ಕೊಂಡು ಬರಬೇಕಿತ್ತು.
ತಪ್ಪಿಸಿಕೊಳ್ಳೋಕೆ ದಾರಿಯೇ ಇರಲಿಲ್ಲ. ಕೆಂಡೋ ಕಲಿತಿನಿ ಅಂತ ನಾನು ಮುಗ್ಧವಾಗಿ ಕೇಳಿದ್ದರ ಪರಿಣಾಮವಾಗಿ ಅಂದುಕೊಂಡಿರದೇ ಇದ್ದ ಕೆಲಸಗಳಲ್ಲಿ ಸಿಕ್ಕಿಹಾಕಿಕೊಳ್ಳಬೇಕಾಯಿತು. ಆದರೆ ನಾನೇ ಸೇರ್ಕೋತಿನಿ ಅಂತ ಕೇಳಿದ್ದರಿಂದ ಏನೂ ಮಾಡೋ ಹಾಗಿರಲಿಲ್ಲ. ಒಚಿಯಾಯ್ ಕತ್ತಿವರಸೆ ಶಾಲೆಗೆ ಸೇರುವ ದಿನ ಅಪ್ಪ ಜೊತೆಯಲ್ಲಿ ಬಂದಿದ್ದರು. ಅದಾದ ಮೇಲೆ ಕುರೊದ ಪ್ರೈಮರಿ ಶಾಲೆಯಿಂದ ಉತ್ತೀರ್ಣನಾಗೋವರೆಗೂ ಪ್ರತಿದಿನ ಈ ಕೆಲಸಗಳನ್ನ ಹಲವು ವರ್ಷಗಳವರೆಗೆ ಮಾಡಿದೆ. ಭಾನುವಾರಗಳಲ್ಲಿ ಮತ್ತು ಬೇಸಿಗೆ ರಜೆಯಲ್ಲಿ ಮಾತ್ರ ಇವುಗಳಿಂದ ಬಿಡುವಿರುತ್ತಿತ್ತು.
ಅಪ್ಪ ಮರದ ಶೂಗಳಿಗೆ ದಪ್ಪಕ್ಕಿರುತ್ತಿದ್ದ ಟಬಿ ಕಾಲುಚೀಲಗಳನ್ನು ಚಳಿಗಾಲದಲ್ಲಿ ಕೂಡ ಹಾಕಿಕೊಳ್ಳಲು ಒಪ್ಪುತ್ತಿರಲಿಲ್ಲ. ಹಾಗಾಗಿ ಪಾದಗಳು ಚಳಿಗಾಲದಲ್ಲಿ ಒಣಗಿ ಬಿರುಕುಬಿಡುತ್ತಿದ್ದವು. ನಮ್ಮಮ್ಮ ಬಿಸಿನೀರಿನಲ್ಲಿ ಕಾಲಿಡಿಸಿ ಔಷಧ ಹಚ್ಚಿ ವಾಸಿಮಾಡಲು ಯತ್ನಿಸುತ್ತಿದ್ದಳು.
ವಿಶೇಷ ಗಮನಹರಿಸಿ ಕಲಿಸಲು ಆಯ್ಕೆ ಮಾಡಿಕೊಂಡ ವಿದ್ಯಾರ್ಥಿಗಳಲ್ಲಿ ನಾನು ಕೂಡ ಒಬ್ಬ. ಆತ ನನಗೆ ವೈಯುಕ್ತಿಕವಾಗಿ ಪಾಠ ಹೇಳಿಕೊಡ್ತಿದ್ದರು. ಒಂದು ಸಾರಿ ಇದ್ದಕ್ಕಿದ್ದಂತೆ ಹುಮ್ಮಸ್ಸಿನಲ್ಲಿ ನಾನು ಅವರೊಂದಿಗೆ ಕತ್ತಿವರಸೆಗೆ ಇಳಿದುಬಿಟ್ಟೆ. ನನ್ನ ಬಿದಿರಿನ ಕತ್ತಿಯನ್ನ ಎತ್ತಿ “ಹೋಯ್” ಅಂತ ಕೂಗಿದ್ದೆ.
ನಮ್ಮಮ್ಮ ಟಿಪಿಕಲ್ ಮೆಯ್ಜಿ ಕಾಲದ ಹೆಂಗಸು. ಆಗ ಜಪಾನಿನಲ್ಲಿ ಆಧುನಿಕತೆಯ ಗಾಳಿ ಬೀಸುತ್ತಿತ್ತಾದರೂ ಹೆಂಗಸರು ತಮ್ಮ ತಂದೆ, ಗಂಡ, ಸಹೋದರ ಅಥವಾ ಮಕ್ಕಳಿಗಾಗಿ ತ್ಯಾಗ ಮಾಡಬೇಕೆಂದು ನಿರೀಕ್ಷಿಸುತ್ತಿದ್ದರು. ಅದೆಲ್ಲಕ್ಕಿಂತ ಹೆಚ್ಚಾಗಿ ನನ್ನಮ್ಮ ಮಿಲಿಟರಿಯವನ ಹೆಂಡತಿ. (ಹಲವು ವರ್ಷಗಳ ನಂತರ ಐತಿಹಾಸಿಕ ಕಾದಂಬರಿಕಾರ ಯಮಾಮೊಟೊ ಶುಗೊರೊನ ಕಾದಂಬರಿ ನಿಹೊನ್ ಫ್ಯುಡೊಕಿ (ಜಪಾನಿ ಮಹಿಳೆಯ ಕರ್ತವ್ಯಗಳು) ಓದಿದೆ. ಇಲ್ಲಿನ ಪಾತ್ರಗಳಲ್ಲಿ ನನ್ನಮ್ಮನನ್ನೇ ಕಂಡಂತಾಗಿ ಇದು ನನ್ನ ಮನಮುಟ್ಟಿತು.) ನಮ್ಮಪ್ಪನ ಗಮನಕ್ಕೆ ಬಾರದ ಹಾಗೆ ಆಕೆ ನನ್ನೆಲ್ಲ ದೂರುಗಳನ್ನು ಕೇಳಿಸಿಕೊಳ್ಳುತ್ತಿದ್ದಳು. ಈಗ ಆಕೆಯನ್ನು ಕುರಿತು ಬರೆಯುತ್ತಿರುವುದು ಆಕೆಯನ್ನು ಯಾವುದೋ ನೀತಿಬೋಧೆಯ ಕತೆಯ ನಾಯಕಿಯನ್ನಾಗಿ ಮಾಡಲು ನಾನು ಪ್ರಯತ್ನಿಸುತ್ತಿರುವಂತೆ ಕಾಣಬಹುದು. ಆದರೆ ಅದು ಹಾಗಲ್ಲ. ಆಕೆ ನಿಜಕ್ಕೂ ಮೃದು ಮನಸ್ಸಿನಾಕೆ. ಇಂತಹವುಗಳನ್ನು ಆಕೆ ಬಹಳ ಸಹಜವಾಗಿ ಮಾಡಿಬಿಡುತ್ತಿದ್ದಳು.
ಮೊದಲಿಗೆ ನಂಗನ್ನಿಸೋದು ಇಂತಹ ವಿಷಯಗಳು ಮೇಲ್ನೋಟಕ್ಕೆ ಕಾಣುವುದಕ್ಕಿಂತ ತದ್ವಿರುದ್ಧವಾಗಿರುತ್ತವೆ. ನಮ್ಮಪ್ಪ ತುಂಬ ಭಾವುಕ ವ್ಯಕ್ತಿ. ನನ್ನಮ್ಮ ವಾಸ್ತವವಾದಿ. ಯುದ್ಧದ ಸಮಯದಲ್ಲಿ ನಮ್ಮಪ್ಪ ಅಮ್ಮನನ್ನು ಅಕಿಟ ಪ್ರಿಫೆಕ್ಚುರ್ ಗೆ ಸ್ಥಳಾಂತರಿಸಲಾಗಿತ್ತು. ಅದೆಂತಹ ಪರಿಸ್ಥಿತಿಯೆಂದರೆ ಮತ್ತೆ ಬಹುಶಃ ನಾವೆಂದೂ ಭೇಟಿಯಾಗಲು ಸಾಧ್ಯವಿರಲಿಲ್ಲ. ಅಂತಹ ಸಮಯದಲ್ಲಿ ಒಮ್ಮೆ ನಾನವರನ್ನು ಭೇಟಿ ಮಾಡಲು ಹೋಗಿದ್ದೆ. ಮನೆಯ ಎದುರಿಗಿನ ರಸ್ತೆಯಲ್ಲಿ ನಡೆದು ಹೋಗುತ್ತಾ ಗೇಟಿನ ಹತ್ತಿರ ನಾನು ಹೋಗುತ್ತಿರುವುದನ್ನೇ ನೋಡುತ್ತಾ ನಿಂತಿದ್ದ ಅಪ್ಪ-ಅಮ್ಮನತ್ತ ಆಗಾಗ ತಿರುಗಿ ನೋಡುತ್ತಾ ನಡೆಯುತ್ತಿದ್ದೆ. ನಮ್ಮಮ್ಮ ತಕ್ಷಣ ಮನೆಯೊಳಗೆ ಹೋದಳು. ನಮ್ಮಪ್ಪ ಮಾತ್ರ ನಾನು ಹೋಗುತ್ತಿರುವುದನ್ನೇ ನೋಡುತ್ತ ನಿಂತಿದ್ದ. ಅವನು ಕಾಣಿಸದಷ್ಟು ಸಣ್ಣ ಆಕೃತಿಯಾಗುವವರೆಗೆ ಅವನತ್ತ ತಿರುಗಿ ನೋಡುತ್ತ ನಡೆದೆ.
ಯುದ್ಧದ ಸಮಯದಲ್ಲಿ “ಅಪ್ಪ ನೀನು ಬಲು ಬಲಶಾಲಿ” (ಚಿಚಿ ಯೊ, ಅನಾತ ವಾ ತ್ಸುಯೊಕಾತ್ತಾ) ಅನ್ನೋ ಜನಪ್ರಿಯ ಹಾಡನ್ನ ಹಾಡುತ್ತಿದ್ದರು. ಆದರೆ ನಾನು “ಅಮ್ಮ ನೀನು ಬಲು ಬಲಶಾಲಿ” ಅಂತ ಹೇಳಕ್ಕೆ ಇಷ್ಟಪಡ್ತೀನಿ. ನನ್ನಮ್ಮನ ಸಾಮರ್ಥ್ಯವಿದ್ದದ್ದು ಆಕೆಯ ಸಹಿಷ್ಣುತೆಯಲ್ಲಿ. ಅದಕ್ಕೊಂದು ಅದ್ಭುತ ಉದಾಹರಣೆ ನಂಗೆ ನೆನಪಿದೆ. ಅಡುಗೆಮನೆಯಲ್ಲಿ ಒಂದು ಸಾರಿ ಮೀನನ್ನ (ಟೆಂಪ್ಯರ ಅನ್ನೋ ಖಾದ್ಯ) ಹುರಿಯುತ್ತಿರಬೇಕಾದರೆ ಬಾಂಡಲಿಯಲ್ಲಿದ್ದ ಎಣ್ಣೆಗೆ ಬೆಂಕಿ ಹೊತ್ತಿಕೊಂಡುಬಿಟ್ಟಿತು. ಬೇರೆಯ ಕಡೆ ಬೆಂಕಿ ಹಬ್ಬಿಕೊಳ್ಳುವ ಮೊದಲೇ ಆಕೆ ಬರೀ ಕೈಯಲ್ಲಿ ಆ ಬಾಂಡಲಿಯನ್ನು ಎತ್ತಿಕೊಂಡು ಒಂದಿಷ್ಟು ನೋವನ್ನಾಗಲೀ ಆತಂಕವನ್ನಾಗಲಿ ತೋರಿಸಿಕೊಳ್ಳದೆ ಹೊರಗಡೆಯ ತೋಟದಲ್ಲಿಟ್ಟು ಬೆಂಕಿ ಆರಿಸಿದ್ದಳು. ಅವಳ ರೆಪ್ಪೆಗಳು, ಹುಬ್ಬುಗಳು ಬೆಂಕಿಯ ಶಾಖಕ್ಕೆ ಸುಟ್ಟುಹೋಗಿತ್ತು.
ಆಮೇಲೆ ಡಾಕ್ಟರು ಬಂದು ಸುಟ್ಟುಕಪ್ಪಾಗಿದ್ದ ಅವಳ ಕೈಗೆ ಔಷಧಿ ಹಾಕಿದ್ದರು. ನನ್ನ ಕೈಲಿ ಅದನ್ನ ನೋಡೋಕೆ ಆಗ್ತಿರಲಿಲ್ಲ. ಆದರೆ ಅಮ್ಮನ ಮುಖದಲ್ಲಿ ಒಂಚೂರು ಕೂಡ ಭಯ ಕಾಣಿಸಿರಲಿಲ್ಲ. ಬ್ಯಾಂಡೇಜ್ ಹಾಕಿದ್ದ ಕೈಗಳಿಂದ ಏನನ್ನಾದರೂ ಹಿಡಿಯಲು ಅವಳಿಗೆ ತಿಂಗಳು ಬೇಕಾಯಿತು. ಆ ಕೈಗಳನ್ನು ಎದೆಯ ಹತ್ತಿರ ಇಟ್ಟುಕೊಂಡು ಸುಮ್ಮನೆ ಕೂತಿರುತ್ತಿದ್ದಳೇ ವಿನಃ ಎಂದೂ ಕೂಡ ನೋವಿನ ಮಾತಾಡಲಿಲ್ಲ. ನಾನೆಷ್ಟೇ ಪ್ರಯತ್ನಸಿದರೂ ನಂಗೆ ಹಾಗಿರಲು ಸಾಧ್ಯವೇ ಇಲ್ಲ.
ಹೇಳುತ್ತಿದ್ದ ವಿಷಯ ಬಿಟ್ಟು ಬೇರೇನೋ ಹೇಳಲು ಶುರುಮಾಡಿದೆ. ಮತ್ತೆ ವಿಷಯಕ್ಕೆ ವಾಪಸ್ಸು ಬರೋಣ. ಒಚಿಯಾಯ್ ಕತ್ತಿವರಸೆ ಶಾಲೆ, ಕೆಂಡೋ ಮತ್ತು ನಾನು. ಒಚಿಯಾಯ್ ಶಾಲೆಗೆ ಹೋಗಲು ಶುರುಮಾಡಿದಾಗ ಕತ್ತಿವರಸೆಯ ಬಗ್ಗೆ ಅಪಾರ ಪ್ರೀತಿಯಿತ್ತು. ನಾನಾಗ ಚಿಕ್ಕ ಹುಡುಗ ಹಾಗಾಗಿ ನನ್ನ ಈ ವರ್ತನೆ ನಿರೀಕ್ಷಿತವಾದದ್ದೇ. ಅಷ್ಟು ಹೊತ್ತಿಗೆ ತಚಿಕಾವ ಅವರ ಲೈಬ್ರರಿಯಲ್ಲಿದ್ದ ಕತ್ತಿವರಸೆಯಲ್ಲಿ ಪ್ರವೀಣರಾಗಿದ್ದ ತ್ಸುಕಾಹಾರ ಬೊಕ್ಯುಡೆನ್ (1489- 1571) ಇಂದ ಅರಾಕಿ ಮಾತಾಏಮೊಮ್ (1599- 1637) ವರೆಗೆ ಎಲ್ಲರ ಬಗೆಗಿನ ಪುಸ್ತಕಗಳನ್ನು ಓದಿದ್ದೆ. ಆಗಿನ ನನ್ನ ಬಟ್ಟೆಗಳು ಮೊರಿಮುರ ಗಕ್ವೆನ್ ರೀತಿಯಲ್ಲಿ ಇರಲಿಲ್ಲ. ಬದಲಿಗೆ ಕುರೊಡ ಪ್ರೈಮರಿ ಸ್ಕೂಲಿನ ಸಮವಸ್ತ್ರ ಅದು ಭವಿಷ್ಯದ ಸಮುರಾಯ್ ಗೆ ಹೊಂದುವಂತಿತ್ತು. ಅಗಲತೋಳಿನ ಸೊಂಟಪಟ್ಟಿಯಿದ್ದ ನಿಲುವಂಗಿ ಅದರೊಂದಿಗೆ ದಪ್ಪಬಟ್ಟೆಯ ಪ್ಯಾಂಟುಗಳು, ಮರದ ಶೂ- ಇದು ಆಗಿನ ನನ್ನ ವೇಷಭೂಷಣ. ನಿಮಗಿದರ ಸ್ಪಷ್ಟ ಕಲ್ಪನೆ ಬರಬೇಕೆಂದರೆ ನನ್ನ ಮೊದಲ ಚಿತ್ರದಲ್ಲಿನ ಸುಗಾತಾ ಸಾನ್ಶಿರೊ ಪಾತ್ರದಲ್ಲಿ ಫ್ಯುಜಿತ ಸುಸುಮುನನ್ನು ಕಲ್ಪಿಸಿಕೊಳ್ಳಿ. ಆಮೇಲೆ ಅವನನ್ನು ಸ್ವಲ್ಪ ಅದುಮಿದರೆ ಕುಳ್ಳಗೆ ಅಗಲವಾಗ್ತಾನಲ್ಲ ಹಾಗೆ ಕಲ್ಪಿಸಿಕೊಳ್ಳಿ. ಈಗ ಅವನು ಕೈಯಲ್ಲಿ ಬಿದಿರಿನ ಕತ್ತಿ ಹಿಡಿದು ಸೊಂಟಪಟ್ಟಿ ಕಟ್ಟಿಕೊಂಡು ಹೋಗುತ್ತಿರುವಂತೆ ಊಹಿಸಿಕೊಳ್ಳಿ. ಆಗ ನಿಮಗೊಂದು ಐಡಿಯಾ ಸಿಗುತ್ತೆ.
ಪ್ರತಿಬೆಳಗ್ಗೆ ಸೂರ್ಯ ಹುಟ್ಟುವುದಕ್ಕೂ ಮೊದಲೇ ಬೀದಿದೀಪಗಳ ಬೆಳಕಿನಲ್ಲಿ ಎಡೊಗಾವಾ ನದಿ ಪಕ್ಕದ ರಸ್ತೆಯಲ್ಲಿ ನಡೆದುಹೋಗುತ್ತಿದ್ದೆ. ಮರದ ಶೂಗಳು ನೆಲಕ್ಕೆ ತಗುಲುವಾಗ ಸದ್ದಾಗುತ್ತಿತ್ತು. ಕೊವಿಜಕ್ಯುರಬಾಶಿ ಸೇತುವೆ, ಇಶಕಿರಿಬಾಶಿ ಸೇತುವೆ ಮೂಲಕ ಹಾದು ಹೋಗುತ್ತಿದ್ದೆ. ಇಶಕಿರಿಬಾಶಿ ಸೇತುವೆ ದಾಟುತ್ತಿದ್ದ ಹಾಗೇ ಟ್ರಾಲಿ ಹಳಿಗಳು ಸಿಗುತ್ತಿದ್ದವು. ಹತ್ತೊರಿಬಾಶಿ ಸೇತುವೆಯನ್ನು ದಾಟುತ್ತಿರುವಾಗ ದಿನದ ಮೊದಲ ಟ್ರಾಲಿ ನನ್ನ ವಿರುದ್ಧ ದಿಕ್ಕಿನತ್ತ ಹೋಗುತ್ತಿತ್ತು. ಎಡೊಗಾವಾಬಾಶಿ ಸೇತುವೆಯನ್ನು ದಾಟುತ್ತಿದ್ದೆ. ಇಲ್ಲಿಗೆ ಬರುವ ವೇಳೆಗೆ ಮೂವತ್ತು ನಿಮಿಷಗಳಾಗುತ್ತಿತ್ತು.
ಅಲ್ಲಿಂದ ಮುಂದೆ ಹದಿನೈದು ನಿಮಿಷ ಒತೊವ ದಿಕ್ಕಿನತ್ತ ನಡೆಯುತ್ತಿದ್ದೆ. ಅಲ್ಲಿ ಎಡಕ್ಕೆ ತಿರುಗಿ ನಿಧಾನವಾಗಿ ಮೆಜಿರೊ ಬೆಟ್ಟ ಹತ್ತುತ್ತಿದ್ದೆ. ಸುಮಾರು ಇಪ್ಪತ್ತು ನಿಮಿಷಗಳು ಕಳೆಯುವಷ್ಟರಲ್ಲಿ ಒಚಿಯಾಯ್ ಶಾಲೆಯಲ್ಲಿ ಬೆಳಗಿನ ಪಾಠಗಳು ಶುರುವಾಗುತ್ತಿವೆ ಅನ್ನೋದನ್ನ ಸಾರುವ ಡ್ರಮ್ ಸದ್ದು ಕೇಳುತ್ತಿತ್ತು. ಸದ್ದು ಕೇಳುತ್ತಿದ್ದ ಹಾಗೇ ಬೇಗಬೇಗ ಹೆಜ್ಜೆ ಹಾಕುತ್ತಾ ಹದಿನೈದು ನಿಮಿಷದಲ್ಲಿ ಶಾಲೆ ತಲುಪುತ್ತಿದ್ದೆ. ಮನೆಬಿಟ್ಟು ಅಕ್ಕಪಕ್ಕ ಏನೂ ನೋಡದೆ ಇಲ್ಲಿಗೆ ಬಂದು ತಲುಪಲು ಒಂದು ಗಂಟೆ ಇಪ್ಪತ್ತು ನಿಮಿಷ ಬೇಕಿತ್ತು.
ಒಚಿಯಾಯ್ ಶಾಲೆಯಲ್ಲಿ ಪಾಠಗಳು ಶುರುವಾಗುತ್ತಿದ್ದದ್ದು ಧ್ಯಾನದ ಮೂಲಕ. ಒಚಿಯಾಯ್ ಮಾಗೊಎಮೊನ್ (ಅದೇನಪ್ಪ ಅವರ ಹೆಸರು?) ಅವರ ಶಿಷ್ಯರೆಲ್ಲ ಒಟ್ಟಿಗೆ ನೆಲದ ಮೇಲೆ ಶಿನ್ತೊ ವಿಗ್ರಹಗಳಿಟ್ಟಿದ್ದ ದಿಕ್ಕಿನತ್ತ ತಿರುಗಿ ಕುಳಿತಿರುತ್ತಿದ್ದರು. ವಿಗ್ರಹಗಳ ಮುಂದೆ ಮೇಣದ ಬತ್ತಿಗಳನ್ನು ಹಚ್ಚಿಟ್ಟಿರುತ್ತಿದ್ದರು. ನಾವೆಲ್ಲ ನಾಭಿಯತ್ತ ನಮ್ಮೆಲ್ಲ ಗಮನವನ್ನು, ಶಕ್ತಿಯನ್ನು ಕೇಂದ್ರಿಕರಿಸಿ ಜಗತ್ತಿನ ಬಗೆಗಿನ ಎಲ್ಲ ಯೋಚನೆಗಳನ್ನು ಬದಿಗೊತ್ತುವ ಮೂಲಕ ನಮ್ಮ ಧ್ಯಾನ ಶುರುವಾಗುತ್ತಿತ್ತು. ನಾವು ಕೂರುತ್ತಿದ್ದ ಕೋಣೆಯ ನೆಲ ಒರಟಾಗಿ ತಣ್ಣಗಿರುತ್ತಿತ್ತು. ಬೆಚ್ಚಗಿನ ಬಟ್ಟೆಯಿಲ್ಲದೆ ಬರೀ ಕತ್ತಿವರಸೆಯ ಬಟ್ಟೆಯೊಂದನ್ನೇ ಹಾಕಿಕೊಂಡು ಚಳಿಗಾಲದ ಥಂಡಿಯಲ್ಲಿ ಇಲ್ಲಿ ಕೂರಬೇಕೆಂದರೆ ನಮ್ಮೆಲ್ಲ ಶಕ್ತಿಯನ್ನು ನಾಭಿಯಲ್ಲಿ ಕೇಂದ್ರೀಕರಿಸಲೇಬೇಕಿತ್ತು. ಎಷ್ಟು ಚಳಿಯಾಗುತ್ತಿತ್ತು ಅಂದರೆ ಹಲ್ಲುಗಳು ಗದಗುಟ್ಟಿಹೋಗೋದು. ಹಾಗಿರಬೇಕಾದರೆ ಜಗತ್ತಿನ ಯಾವ ಚಿಂತೆಗೆ ತಾನೆ ತಲೆಯಲ್ಲಿ ಜಾಗವಿರಲು ಸಾಧ್ಯ. ಚಳಿಯಲ್ಲಿ ನಾವು ಯೋಚನೆ ಮಾಡ್ತಾ ಇದ್ದದ್ದು ಎಷ್ಟು ಬೇಗ ಸಾಧ್ಯ್ವೋ ಅಷ್ಟು ಬೇಗ ಮೈಕಾಯಿಸಿಕೊಳ್ಳುವ ಬಗ್ಗೆ. ಉಳಿದ ದಿನಗಳಲ್ಲಿ ಧ್ಯಾನ ನಿಜಕ್ಕೂ ಅದ್ಭುತ ಶಕ್ತಿಯ ಪರಿಚಯ ಮಾಡಿಕೊಡುತ್ತಿತ್ತು. ಮನಸ್ಸಿನ ತೊಡಕುಗಳನ್ನೆಲ್ಲ ಕಿತ್ತುಹಾಕಿಬಿಡುತ್ತಿತ್ತು. ಕಡೆಯಲ್ಲಿ ಆಕ್ರಮಣ ಮತ್ತು ಸಂರಕ್ಷಣಾ ವಿಧಾನಗಳ ಅಭ್ಯಾಸ ಮಾಡಿಸುತ್ತಿದ್ದರು.
ನಮ್ಮ ಕೌಶಲಗಳಿಗನುಗುಣವಾಗಿ ನಮ್ಮನ್ನು ಗುಂಪುಗಳಾಗಿ ಮಾಡುತ್ತಿದ್ದರು. ಮೂವತ್ತು ನಿಮಿಷ ಈ ಗುಂಪುಗಳಲ್ಲಿ ಅಭ್ಯಾಸ ಮಾಡಿದ ಮೇಲೆ ಮತ್ತೆ ಮೊದಲಿನಂತೆ ಒಟ್ಟಿಗೆ ಕೂತು ನಮ್ಮ ಗುರುಗಳಿಗೆ ಧನ್ಯವಾದಗಳನ್ನ ಹೇಳುತ್ತಿದ್ದೆವು. ಇದೊಂದು ಮೂವತ್ತು ನಿಮಿಷ ಆಗೋದು. ಅಲ್ಲಿಗೆ ಆವತ್ತಿನ ಪಾಠ ಮುಗಿಯೋದು. ಅಭ್ಯಾಸ ಮುಗಿಸಿ ಮಂದಿರಕ್ಕೆ ಹೋಗೊ ಹೊತ್ತಿಗೆ ಹೆಜ್ಜೆಗಳು ಭಾರವಾಗಿಬಿಡುತ್ತಿತ್ತು.
ಹೊಟ್ಟೆ ಹಸಿದಿರುತ್ತಿತ್ತು. ತಿಂಡಿಯೊಂದೆ ತಲೆತುಂಬ ತುಂಬಿಕೊಂಡು ಮಂದಿರದತ್ತ ಬಲವಂತವಾಗಿ ಕಾಲೆಳೆದುಕೊಂಡು ಹೋಗುತ್ತಿದ್ದೆ. ಎಷ್ಟು ಬೇಗ ಆದ್ರೆ ಅಷ್ಟು ಬೇಗ ಮನೆ ತಲುಪಿಬಿಡೋದೇ ನನ್ನ ಉದ್ದೇಶವಾಗಿರುತ್ತಿತ್ತು. ಪ್ರಾರ್ಥನಾ ಸಭಾಂಗಣದ ಮುಂದೆ ನಿಂತು ಅಲ್ಲಿದ್ದ ಗಂಟೆ ಬಾರಿಸುತ್ತಿದ್ದೆ. (ಮುಖ್ಯ ಮಂದಿರದ ಹುಂಡಿಯ ಮೇಲೆ ಈ ಗಂಟೆಯನ್ನ ಕಟ್ಟಿ ಅದನ್ನು ಬಾರಿಸಲು ಒಂದು ಬಟ್ಟೆಯ ಹಗ್ಗ ಅದಕ್ಕೆ ಕಟ್ಟಿ ಬಿಟ್ಟಿರುತ್ತಿದ್ದರು). ಪ್ರಾರ್ಥನೆ ಮುಗಿಸಿ ಅದೇ ಕಾಂಪೌಂಡಿನ ಮೂಲೆಯಲ್ಲಿದ್ದ ಅರ್ಚಕನ ಮನೆಮುಂದೆ ನಿಂತು “ಗುಡ್ಮಾರ್ನಿಂಗ್” ಅಂತ ಕಿರುಚುತ್ತಿದ್ದೆ. ನಿಲುವಂಗಿ ಮತ್ತು ಪೈಜಾಮ ಧರಿಸಿರುತ್ತಿದ್ದ, ಬೆಳ್ಳಗಿದ್ದ ಆ ಅರ್ಚಕ ಹೊರಬರುತ್ತಿದ್ದ. ಒಂದು ಮಾತೂ ಆಡದೆ ನನ್ನ ಡೈರಿ ತೊಗೊಂಡು ದಿನಾಂಕ ಅಂತಿರುತ್ತಿದ್ದ ಕಡೆ ಮಂದಿರದ ಸೀಲ್ ಒತ್ತಿ ಕೊಡುತ್ತಿದ್ದ. ನಾನವನನ್ನ ನೋಡಿದಾಗಲೆಲ್ಲ ಅವನ ಕೆನ್ನೆಗಳು ಊದಿದಂತಿರುತ್ತಿತ್ತು, ದವಡೆಗಳು ಅಲುಗಾಡುತ್ತಿತ್ತು. ಆತ ತಿಂಡಿ ತಿನ್ನುತ್ತಿರುವಾಗಲೇ ನನ್ನ ಕೈಗೆ ಸಿಕ್ಕಿಬೀಳುತ್ತಿದ್ದರು. ಮಂದಿರದ ಮೆಟ್ಟಿಲುಗಳನ್ನು ಇಳಿಯುತ್ತಾ ಕುರೊದ ಶಾಲೆಯ ಮುಂದೆ ನಡೆದು ಬರುತ್ತಿದ್ದೆ. ತಿಂಡಿ ತಿಂದು ಮತ್ತೆ ಶಾಲೆಗೆ ಬರಬೇಕಿತ್ತಲ್ಲ, ಬೇಗಬೇಗ ಮನೆ ಕಡೆ ಹೆಜ್ಜೆ ಹಾಕುತ್ತಿದ್ದೆ. ಇಶ್ಕಿರಿಬಾಶಿ ಸೇತುವೆ ದಾಟಿ ಎಡೊಗಾವ ನದಿ ದಂಡೆಯ ಪಕ್ಕ ನಡೀತಾ ಮನೆ ತಲುಪೋ ಹೊತ್ತಿಗೆ ಸೂರ್ಯ ಮುಖ ತೋರಿಸಿರುತ್ತಿದ್ದ. ಪ್ರತಿ ಸಾರಿ ಸೂರ್ಯನನ್ನ ನೋಡಿದಾಗಲೂ ಇನ್ನು ನನ್ನ ದಿನ ಒಬ್ಬ ಮಾಮೂಲಿ ಹುಡುಗನ ದಿನದಂತೆ ಶುರುವಾಗುವುದು ಅಂತನ್ನಿಸುತ್ತಿತ್ತು. ಹಾಗೆ ಅನ್ನಿಸುತ್ತಿದ್ದದ್ದು ತೃಪ್ತಿಯಿಂದಾನೇ ಹೊರತು ಬೇಸರದಿಂದಲ್ಲ.
ಎಷ್ಟು ಚಳಿಯಾಗುತ್ತಿತ್ತು ಅಂದರೆ ಹಲ್ಲುಗಳು ಗದಗುಟ್ಟಿಹೋಗೋದು. ಹಾಗಿರಬೇಕಾದರೆ ಜಗತ್ತಿನ ಯಾವ ಚಿಂತೆಗೆ ತಾನೆ ತಲೆಯಲ್ಲಿ ಜಾಗವಿರಲು ಸಾಧ್ಯ. ಚಳಿಯಲ್ಲಿ ನಾವು ಯೋಚನೆ ಮಾಡ್ತಾ ಇದ್ದದ್ದು ಎಷ್ಟು ಬೇಗ ಸಾಧ್ಯ್ವೋ ಅಷ್ಟು ಬೇಗ ಮೈಕಾಯಿಸಿಕೊಳ್ಳುವ ಬಗ್ಗೆ. ಉಳಿದ ದಿನಗಳಲ್ಲಿ ಧ್ಯಾನ ನಿಜಕ್ಕೂ ಅದ್ಭುತ ಶಕ್ತಿಯ ಪರಿಚಯ ಮಾಡಿಕೊಡುತ್ತಿತ್ತು. ಮನಸ್ಸಿನ ತೊಡಕುಗಳನ್ನೆಲ್ಲ ಕಿತ್ತುಹಾಕಿಬಿಡುತ್ತಿತ್ತು.
ಅಲ್ಲಿಂದ ಮಾಮೂಲಿ ಪುಟ್ಟಹುಡುಗನ ದಿನ ಶುರುವಾಗೋದು. ಅದರಲ್ಲಿ ಮಾಮೂಲಿ ದಿನಚರಿಗಳಿರುತ್ತಿತ್ತು. ತಿಂಡಿ ತಿನ್ನು, ಸ್ಕೂಲಿಗೆ ಹೋಗು ಮತ್ತೆ ಮಧ್ಯಾಹ್ನ ಮನೆಗೆ ಬಾ ಇಷ್ಟೇ. ಆದರೆ ತಚಿಕಾವ ಅವರ ಪಾಠಗಳನ್ನ ಕೇಳಿದ್ದರಿಂದ ಈಗ ಶಾಲೆಯ ಪಾಠಗಳಲ್ಲಿನ ಕೊರತೆ ಎದ್ದು ಕಾಣುತ್ತಿತ್ತು. ತರಗತಿಗಳಲ್ಲಿ ಕಳೆಯುತ್ತಿದ್ದ ಗಂಟೆಗಟ್ಟಲೆ ಸಮಯ ಒಂದಿಷ್ಟೂ ಇಷ್ಟವಾಗ್ತಿರಲಿಲ್ಲ ಮಹಾಬೋರು ಅನ್ನಿಸೋದು. ಅದನ್ನು ಮಾಡಲೇಬೇಕಲ್ಲ ಅನ್ನೋ ನೋವಿರುತ್ತಿತ್ತು. ನಮ್ಮ ತರಗತಿಗಳನ್ನು ತೆಗೆದುಕೊಳ್ಳುತ್ತಿದ್ದ ಹೊಸ ಮೇಷ್ಟ್ರಿಗೆ ನಾನು ಹೊಂದಿಕೊಂಡಿರಲಿಲ್ಲ. ನಾನು ಆ ಶಾಲೆ ಬಿಡುವವರೆಗೂ ಇಬ್ಬರ ನಡುವೆ ಒಂದು ರೀತಿಯಲ್ಲಿ ಅಹಂನ ತಿಕ್ಕಾಟ ನಡೀತಾನೆ ಇತ್ತು. ಅವರು ತಚಿಕಾವ ಅವರ ಶೈಕ್ಷಣಿಕ ತತ್ವಗಳನ್ನ ವಿರೋಧಿಸುತ್ತಿದ್ದರು. ಅದರ ಶಿಕ್ಷಣ ವಿಧಾನಗಳ ಬಗ್ಗೆ ಕಟು ಟೀಕೆಗಳನ್ನು ಮಾಡುತ್ತಲೇ ಇರುತ್ತಿದ್ದರು. “ತಚಿಕಾವ ಹೀಗೆ ಹೇಳಿರಬೇಕಿಲ್ಲ” ಅಥವ “ತಚಿಕಾವ ಹೀಗೆ ಮಾಡಿರಬೇಕಲ್ಲ” ಅಂತ ಕುಹಕದ ನಗೆಯೊಂದಿಗೆ ಹೇಳುತ್ತಿದ್ದರು. ಅವರು ಪ್ರತಿ ಸಾರಿ ಇದನ್ನ ಹೇಳಿದಾಗಲೂ ಪಕ್ಕ ಕೂತಿರುತ್ತಿದ್ದ ಯೆಕುಸಾನ ಕಾಲಿಗೆ ತಿವಿಯುತ್ತಿದ್ದೆ. ವೆಕ್ಸ ತಕ್ಷಣ ನಕ್ಕು ಪ್ರತಿಕ್ರಿಯಿಸುತ್ತಿದ್ದ. ಹೀಗಿದ್ದಾಗ ಒಂದು ಸಲ:
ಕಲಾ ತರಗತಿಯಲ್ಲಿಟ್ಟಿದ್ದ ಹೂಕುಂಡ ಮತ್ತು ಅದರಲ್ಲಿದ್ದ ಹೂಗಳನ್ನು ಬರೀಬೇಕಿತ್ತು. ನಾನು ಆ ಹೂಕುಂಡದ ಒಟ್ಟು ಗಾತ್ರಕ್ಕೆ ಗಮನಕೊಟ್ಟು ಅದರ ನೆರಳು ಬಿದ್ದ ಕಡೆಗಳಲ್ಲಿ ಕಡುನೇರಳೆ ಬಣ್ಣವನ್ನು ಹಚ್ಚಿದ್ದೆ. ಆ ಹೂಗುಚ್ಚದಲ್ಲಿದ್ದ ಎಲೆಗಳನ್ನು ಹಸಿರು ಹೊಗೆಯಂತೆ ಚಿತ್ರಿಸಿದೆ. ಅರಳಿರುವ ಹೂಗಳನ್ನು ಗುಲಾಬಿ, ಬಿಳಿ ಬಣ್ಣಗಳಲ್ಲಿ ಅಲ್ಲಲ್ಲಿ ಚದುರಿರುವ ಹಾಗೆ ಚಿತ್ರಿಸಿದೆ. ಹೊಸ ಮೇಷ್ಟ್ರು ನನ್ನ ಚಿತ್ರವನ್ನು ತೆಗೆದುಕೊಂಡು ಕಪ್ಪು ಹಲಗೆಯ ಪಕ್ಕದಲ್ಲಿದ್ದ ಬೋರ್ಡಿಗೆ ಸಿಕ್ಕಿಸಿ ‘ನೋಡಿ ಇಲ್ಲಿ ಇದು ವಿದ್ಯಾರ್ಥಿಗಳ ಕ್ಯಾಲಿಗ್ರಫಿ ಅಥವ ಕಂಪೋಸಿಷನ್ ಅಥವ ಚಿತ್ರಕ್ಕೆ ಅತ್ಯುತ್ತಮ ಮಾದರಿ. ನಾವೆಲ್ಲ ಇದನ್ನ ಅನುಸರಿಸಬೇಕು’ ಅಂದರು. “ಕುರಸೋವ ನಿಂತ್ಕೋ” ಅಂದರು. ನನ್ನ ಹೊಗಳಬಹುದು ಅಂತ ತುಂಬ ಖುಷಿಯಾಗಿ ಹೆಮ್ಮೆಯಿಂದ ನಿಂತುಕೊಂಡೆ. ಆದರೆ ಹೊಸ ಮೇಷ್ಟ್ರು ನನ್ನ ಚಿತ್ರದತ್ತ ಬೆರಳು ಮಾಡಿ ತೋರಿಸುತ್ತ ಚೆನ್ನಾಗಿ ಬೈದರು.
“ಏನಿದು ಈ ನೇರಳೆ ಬಣ್ಣ? ಹೂಕುಂಡಕ್ಕೆ ಯಾಕೆ ಇದನ್ನ ಹಾಕಿದೀಯಾ? ಈ ತರಹದ ಬಣ್ಣ ಇಲ್ಲಿ ಎಲ್ಲಿದೆ? ಏನಿದು ಹಸಿರು ಬಣ್ಣ ಮೋಡದ ಹಾಗಿದೆಯಲ್ಲ? ನಿಂಗೇನು ಹುಚ್ಚಾ ಇದು ಆ ಹೂಗಳ ಎಲೆಗಳ ಹಾಗೆ ಕಾಣಿಸ್ತಿದಿಯಾ?” ಅವರ ಮಾತುಗಳಲ್ಲಿ ವ್ಯಂಗ್ಯ, ವಿಷ ತುಂಬಿತ್ತು. ಅವರ ಬೈಗುಳದ ತುಂಬ ಅವರ ಕೆಟ್ಟಮನಸ್ಸಿನ ಪ್ರತಿಬಿಂಬವಿತ್ತು. ಮರದ ಹಾಗೆ ನಿಂತುಬಿಟ್ಟೆ. ನನ್ನ ಮುಖ ಕಳೆಗುಂದಿತು. ಆದರೆ ಇದೆಲ್ಲ ಯಾಕೆ?
ಶಾಲೆ ಮುಗಿದ ಮೇಲೆ ನನ್ನ ಗಾಯಗಳಿಗೆ ನಾನೇ ಮದ್ದು ಹಾಕಿಕೊಳ್ಳುತ್ತಾ ಹತ್ತೋರಿಜಕಾದ ಇಳಿಜಾರಿನಲ್ಲಿ ಸುಮ್ಮನೆ ನಡೆದು ಹೋಗುತ್ತಿದ್ದೆ. ವೆಕ್ಸ ನನ್ನ ಹಿಂದೆ ಓಡಿ ಬಂದ. “ಕುರೊ ಚಾನ್ ಅದು ನಿಜಕ್ಕೂ ಕೆಟ್ಟದ್ದು? ತುಂಬ ಕೆಟ್ಟದ್ದು ಅಲ್ವಾ? ಭಯಂಕರ! ಕ್ಷಮಿಸಕ್ಕೆ ಆಗಲ್ಲ.” ಅಂತ ದಾರಿಯುದ್ದಕ್ಕೂ ಹೇಳ್ತಾನೆ ಬಂದ.
ಮನುಷ್ಯನ ಮನಸ್ಸಿನ ಕ್ರೌರ್ಯದ ಅನುಭವವಾದದ್ದು ಅದೇ ಮೊದಲ ಸಲ. ಆ ಮೇಷ್ಟ್ರ ಹತ್ತಿರ ಎಂದೂ ಖುಷಿಯಿಂದ ಪಾಠ ಕಲಿಯಲು ಆಗಲಿಲ್ಲ. ಆದರೆ ಮತ್ತೆಂದೂ ಆ ಮೇಷ್ಟ್ರಿಗೆ ನನ್ನ ಟೀಕೆ ಮಾಡೋ ಅವಕಾಶ ಸಿಗದ ಹಾಗೆ ಕಷ್ಟಪಟ್ಟು ಓದುವ ಏಕಾಗ್ರತೆಯನ್ನ ಬೆಳೆಸಿಕೊಂಡೆ.
ಕನ್ನಡ ಉಪನ್ಯಾಸಕಿ.ಇಂಗ್ಲೀಷ್ ಹಾಗೂ ಹಿಂದಿಯಿಂದ ಲೇಖನ, ಕತೆ ಹಾಗೂ ಕವನಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಇವರ ಅನುವಾದಗಳು ಹಲವು ಪತ್ರಿಕೆಯಲ್ಲಿ ಪ್ರಕಟಗೊಂಡಿವೆ. ಇರಾನಿನ ಚಲನಚಿತ್ರ ನಿರ್ದೇಶಕ ಅಬ್ಬಾಸ್ ಕಿರಸ್ತೋಮಿಯ ಕಿರುಪದ್ಯಗಳ ಅನುವಾದ ‘ಹೆಸರಿಲ್ಲದ ಹೂ’ ಪ್ರಕಟಿತ ಸಂಕಲನ..