ಹೈದರಾಬಾದ್‌ನ ಲೋಕಲ್ ಟ್ರೇನ್‌ಗಗಳಲ್ಲಿ ಸುತ್ತಿದ, ರಸ್ತೆಬದಿ ನಿಂತು, ಕೆಂಡದಲ್ಲಿ ಕಾಯಿಸಿದ ಮುಸುಕಿನ ಜೋಳ ತಿನ್ನುವ, ಭಾನುವಾರದ ಫುಟ್‌ಪಾತ್ ಪುಸ್ತಕಗಳ ಅಂಗಡಿಗಳನ್ನು ಆಸಕ್ತಿಗಳಿಂದ ತಿರುಗುತ್ತ ಪುಸ್ತಕ ಕೊಳ್ಳುವ, ಹೈದರಾಬಾದನ್ನು, ಇಲ್ಲಿಯ ಕನ್ನಡ ಸಂಘಗಳನ್ನು, ಕನ್ನಡಿಗರನ್ನು, ಬಹಳ ಆಸ್ಥೆ – ಅಕಾರಾಸ್ಥೆಗಳಿಂದ ಪ್ರೀತಿಸುವ, ಆ ಮಹಾನ್ ಚೇತನಕ್ಕೆ, ಕಣ್ತುಂಬಿದ ವಿದಾಯ ಹೇಳುವುದನ್ನು ಬಿಟ್ಟು, ಬೇರೇನು ಉಳಿದಿದೆ!!
ಇಂದು ಬೆಳಗ್ಗೆ ಅಗಲಿದ ಕೆ.ವಿ. ತಿರುಮಲೇಶರ ಕುರಿತು ಗೋನವಾರ್ ಕಿಶನ್ ರಾವ್ ಆಪ್ತ ಬರಹ
ನನ್ನ ಮತ್ತು ತಿರುಮಲೇಶರ ಸಂಬಂಧ ಸುಮಾರು ನಾಲ್ಕು ದಶಕಗಳಿಗೂ ಮೀರಿದ್ದು. ಪ್ರತಿ ಸಾಹಿತ್ಯ ಪ್ರಕ್ರಿಯೆಗಳಲ್ಲಿ, ನನ್ನ ಗುರುವಾಗಿದ್ದು, ಮಾರ್ಗದರ್ಶಕರಾಗಿದ್ದರು. ಎಲ್ಲವನ್ನು ಮೀರಿ ನಿಂತ, ಸ್ನೇಹಿತರಾಗಿದ್ದರು. ಅವರ ನಿಧನ, ಕನ್ನಡ ಸಾಹಿತ್ಯಲೋಕದ ಜೊತೆಗೆ, ವೈಯಕ್ತಿಕವಾಗಿ ತುಂಬಲಾರದ ಕಂದರ ಏರ್ಪಡಿಸಿದೆ. ಅವರಿಗೆ ೮೦ ವರುಷಗಳಾದ ಸಂಭ್ರಮ ಪಟ್ಟದ್ದು, ಗಣ್ಯ ಸಾಹಿತಿಗಳೆಲ್ಲ ಅವರಿಗೆ ಅಭಿನಂದಿಸಿದ್ದು. “ತಿರುಮಲೇಶ ೮೦” ರ ಈ ವಿಶೇಷ ಅಭಿನಂದನಾ ಬರಹಗಳಿಗೆ ಮುಂಚೂಣಿಯಾಗಿ ನಿಂತದ್ದು ಇಂದು ನೆನಪು. ಕರ್ನಾಟಕ ಸಾಹಿತ್ಯ ಅಕಾಡೆಮಿಗಾಗಿ, ಶ್ರೀ. ಎಸ್.ಆರ್. ವಿಜಯಾ ಶಂಕರ ಅವರೊಂದಿಗೆ ತಿರುಮಲೇಶರನ್ನು ಸಂದರ್ಶಿಸಿದ ಸಂಗತಿ, ಸಂಗಾತ ಪತ್ರಿಕೆಗಾಗಿ, ವಿಶೇಷ ಸಂದರ್ಶನ ಎಲ್ಲವು ಚಿರಕಾಲ ನೆನಪಿನಲ್ಲಿ ಉಳಿಯವ ವಿಷಯಗಳು. ಅವರ “ಅವ್ಯಯ ಕಾವ್ಯ” ದ ಮೇಲೆ ನಾನು ಬರೆದ ಲೇಖನ ಓದಿ ವ್ಯಕ್ತಪಡಿಸಿದ ಸಂತಸದ ದಿನವನ್ನು ಮರೆಯಲಾದೀತೆ?
ಎಲ್ಲರಿಗೆ ತಿಳಿದಿರುವಂತೆ ನವ್ಯೋತ್ತರದ ನಂತರ ದಿನಗಳಲ್ಲಿ ಕನ್ನಡ ಕವಿತೆ ಒಂದು ವಿಧವಾದ ವಿಚಿತ್ರ ಕಾಲಘಟ್ಟದಲ್ಲಿ ಸಂಚರಿಸುತ್ತಿತ್ತು. ಕವಿತೆ ಬರೆಯಲು ವಿಷಯವೇ ಇಲ್ಲ ಎಂದಾದಾಗ, ತಿರುಮಲೇಶರು ಏನೆಲ್ಲ ವಿಷಯಗಳು ಕವಿತೆಯಾಗಬಲ್ಲವು ಎಂದು ತೋರಿಸಿಕೊಟ್ಟರು. ತಾರನಾಕಾದ ಚೌಕ, ಪೆಂಟಯ್ಯನ ಅಂಗಿ, ಆಬಿಡ್ಸ ರಸ್ತೆ, ಒಂದು ಕುಂಬಳಕಾಯಿ, ಹೆಚ್ಚುವುದು ನೂರು ಮಂದಿ ಹೀಗೆ ಅವರ ಕವಿತೆಗಳನ್ನು ಬರೆಯುತ್ತಲೇ ಹೋದರು. ಅದು ಅವರ ವಿಶೇಷತೆ.
ಕಾಸರಗೋಡು ಜಿಲ್ಲೆಯ ಕಾರಡ್ಕ ಸಮೀಪ ಇರುವ ಹಳ್ಳಿಯಲ್ಲಿ 12-09 – 1940 ರಲ್ಲಿ ಜನಿಸಿದ, ತಿರುಮಲೇಶರು ಆಧುನಿಕ ಕನ್ನಡ ಸಾಹಿತ್ಯ ಸಂದರ್ಭದಲ್ಲಿ, ಗುರುತಿಸಬಹುದಾದ, ಪ್ರಮುಖ ಕವಿಗಳಲ್ಲಿ ಒಬ್ಬರು. ಬಹುಮುಖ ಪ್ರತಿಭೆಯ — ಕಾವ್ಯ, ಮಹಾಕಾವ್ಯ, ಕಾದಂಬರಿ, ಕಥಾ ಸಂಕಲನಗಳು, ವೈಚಾರಿಕ ಕೃತಿಗಳು, ಅಂಕಣ ಬರಹಗಳು, ನಾಟಕ ಇತ್ಯಾದಿ ಸಮೃದ್ಧ ಸಾಹಿತ್ಯ ನೀಡಿದ ಅವರನ್ನು ಕವಿ ಎಂದೇ ಗುರುತಿಸುವುದು ಸರಿಯಾದರು, ಉಳಿದ ಪ್ರಕಾರದಲ್ಲಿ, ಅವರು ಬರೆದ ಸಣ್ಣ ಕಥಾ ಸಂಕಲನಗಳು, ಕಾದಂಬರಿಗಳು, ಅಂಕಣ ಬರಹಗಳು, ನಾಟಕಗಳು, ಮಹತ್ವದ ಕೃತಿಗಳೇ!! (೧೯೬೦ ರಲ್ಲಿ ಕತೆ, ಕವಿತೆ, ಲೇಖನಗಳನ್ನು ಬರೆಯಲು ಪ್ರಾರಂಭಿಸಿದ ಅವರು ಸಾಕಷ್ಟು ಪ್ರಮಾಣದ ಕೃತಿಗಳನ್ನು ರಚಿಸಿದ್ದಾರೆ. ಅವುಗಳಲ್ಲಿ ೧೧ ಕವನ ಸಂಕಲನಗಳು, ೩ ಮಕ್ಕಳ ಕವಿತಾ ಸಂಕಲನಗಳು, ೫ ಕಥಾ ಸಂಕಲನಗಳು, ೩ ಕಾದಂಬರಿಗಳು, ೨ ನಾಟಕಗಳು, ೧೨ ವಿಮರ್ಶೆ, ಸಾಹಿತ್ಯ ಲೇಖನಗಳು ಆಳ-ನಿರಾಳ ೧,೨,೩,೪ ಅಂಕಣ ಬರಹಗಳು, ೮ ಭಾಷಾಂತರಗಳು ಸೇರಿವೆ. ಅಲ್ಲದೆ ಇಂಗ್ಲಿಷ್‌ನಲ್ಲಿ, The Landscape of Language- Issues of Kannada Linguistics ಎನ್ನುವ ಬಹು ಬೆಲೆಯುಳ್ಳ ಕೃತಿ ಜೊತೆಗೆ, ಇನ್ನೂ ಮೂರು ಕೃತಿಗಳನ್ನು ರಚಿಸಿದ್ದಾರೆ. ಮತ್ತು ಭಾಷಾ ಶಾಸ್ತ್ರದ ಮೇಲಿನ ಐವತ್ತಕ್ಕೂ ಹೆಚ್ಚು ಲೇಖನಗಳನ್ನು ಪ್ರಮುಖ, ರಾಷ್ಟ್ರೀಯ, ಅಂತರಾಷ್ಟ್ರೀಯ, ಪತ್ರಿಕೆಗಳಲ್ಲಿ, ಸಂಪುಟಗಳಲ್ಲಿ ಪ್ರಕಟಿಸಿದ್ದಾರೆ.)
ತಿರುಮಲೇಶರ ೧೧ ಕವಿತೆ ಸಂಕಲನಗಳಲ್ಲಿ ೪ ಮಹಾಕಾವ್ಯದ ಸ್ವರೂಪ ಹೊಂದಿದವುಗಳು ಎಂದು ಗುರುತಿಸಲಾಗಿದೆ. ಅವುಗಳು ‘ಅವಧ’, ‘ಅಕ್ಷಯ ಕಾವ್ಯ’, ‘ಅವ್ಯಯ ಕಾವ್ಯ ಮತ್ತು ಇತ್ತೀಚೆಗಷ್ಟೆ ಪ್ರಕಟಗೊಂಡ ಮಕ್ಕಳ ಕಾವ್ಯವಾದ “ಆದಿಕಾವ್ಯ”ದ ಹತ್ತು ಸಂಪುಟಗಳು. ಅವರ ‘ಸಮ್ಮುಖ’ ಕ್ಕೆ ಕರ್ನಾಟಕ ಸಾಹಿತ್ಯ ಪ್ರಶಸ್ತಿ ಹಾಗೂ ಗೌರವ ಸಾಹಿತ್ಯ ಪ್ರಶಸ್ತಿ, ‘ಅಕ್ಷಯ ಕಾವ್ಯ’ಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿದೆ. ಅಲ್ಲದೆ ಕೇರಳದ ಕುಮಾರನ್ ಆಶಾನ್ ಪ್ರಶಸ್ತಿ, ಕಾಂತಾವರದ ವರ್ಧಮಾನ ಪ್ರಶಸ್ತಿ, ನಿರಂಜನ ಪ್ರಶಸ್ತಿ, ಹಾ.ಮಾ.ನ ಪ್ರಶಸ್ತಿ ಸಂದಿವೆ. ಎಳೆಯತನದಿಂದಲೇ ಅವರಿಗಿರುವ ಪುಸ್ತಕ ಪ್ರೀತಿ, ಜ್ಞಾನವನ್ನು ಅರಸಿಕೊಂಡು ಹೋಗುವ ಅವರ ಹಂಬಲವನ್ನು ಈ ಇಳಿವಯಸ್ಸಿನಲ್ಲಿಯೂ ಮುಂದುವರಿಯುತ್ತಿರುವುದನ್ನು ಕಾಣುತ್ತೇವೆ. ಪ್ರಕೃತಿ ಪರಿಸರದ ವಿದ್ಯಮಾನಗಳ ಕುರಿತಂತೆ, ಅವರಿಗೆ ಇರುವ ವಿಸ್ಮಯ, ಕುತೂಹಲಗಳು ಬೆರಗು ಮೂಡಿಸುತ್ತವೆ. ಈ ವರುಷ ಪ್ರಕಟಗೊಂಡ ಅವರ ಕೊನೆಯ ಸಂಕಲನ “ಪುಟ್ಟನ ಮನ” ಸಾಕ್ಷಿ.
ನೀರ್ಜಾಲು, ಕಾಸರಗೋಡು ಮತ್ತು ತಿರುವನಂತಪುರಗಳಲ್ಲಿ ವಿದ್ಯಾಭ್ಯಾಸ ಪೂರೈಸಿದ ಅವರು ಕೇರಳದ ಶಿಕ್ಷಣ ಇಲಾಖೆಯಲ್ಲಿ 1967-74 ರ ಅವಧಿಯವರೆಗೆ ಇಂಗ್ಲಿಷ್ ಪ್ರಾಧ್ಯಾಪಕರಾಗಿ ವೃತ್ತಿ ಜೀವನ ಆರಂಭಿಸಿದರು. 1975 – 76 ರ ವರೆಗೆ ಹೈದರಾಬಾದ್ ನ CIEFL (ಇಂದಿನ IFLU) ನಲ್ಲಿ ಎಂ.ಲಿಟ್ ವಾಸಂಗ ನಂತರ PhD ಪೂರ್ಣ ಗೊಳಿಸಿದ ಮೇಲೆ, ಅಲ್ಲಿಯೇ 1977 ರಲ್ಲಿ ಪ್ರಾಧ್ಯಾಪಕರಾಗಿ ನಿಯುಕ್ತಿಗೊಂಡು, ಮೇಲೇರುತ್ತ ಅಸೋಸಿಯೇಟ್ ಫೆಲೋ, ರೀಡರ್, ಪ್ರೊಫೆಸರ್, ಆಗಿ 2002 ರಲ್ಲಿ ವೃತ್ತಿಯಿಂದ ವಿರಮಿಸಿದರು. ಅಮೇರಿಕೆಯ ರೆಡಿಂಗ್ ವಿಶ್ವವಿದ್ಯಾಲಯದಿಂದ ಅನ್ವಯಿಕ, ಭಾಷಾ ವಿಜ್ಞಾನದಲ್ಲಿ ಎಂ.ಎ. ಮತ್ತು CIEFL ನಲ್ಲಿ, Reordering Rules in English and Kannada ವಿಷಯದ ಮೇಲೆ PhD ಪಡೆದದ್ದು ವಿಶೇಷತೆ.
2002-03 ಮತ್ತು 2006 – 11 ಅವಧಿಯಲ್ಲಿ ಅಮೇರಿಕೆಯ ಅಯೋವಾ ವಿಶ್ವವಿದ್ಯಾಲಯ ಮತ್ತು ಕೊಲ್ಲಿ ರಾಷ್ಟ್ರಗಳ ಯಮೆನ್‌ನಲ್ಲಿ ಸಹ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ ಹಿರಿಮೆ ಅವರದು. ಕವಿ ಓದುಗರನ್ನು ಹುಡುಕಿಕೊಂಡು ಹೋಗಬಾರದು. ಓದುಗ ಕವಿಯನ್ನು ಹುಡುಕಿಕೊಂಡು ಬರಬೇಕು ಎನ್ನುವುದು ಅವರ ಸಿದ್ಧಾಂತವಾಗಿತ್ತು. ಮತ್ತು ಅವರ ಅದಕ್ಕೆ ಬದ್ಧರಾಗಿದ್ದರು. ಅವರೇ ಹೇಳುವಂತೆ:
“ನಾನು ಕೆಲವು ಪುಸ್ತಕಗಳನ್ನು ಬರೆದಿದ್ದೇನೆ. ಆಸಕ್ತಿ ಇದ್ದರೆ ಓದಿ. ಇಲ್ಲವಾದರೆ ಬೇಡ.
ಈ ಸಾಹಿತ್ಯ ಇದೆ ನೋಡಿ, ಒಂದು ಕಾದಂಬರಿ, ಒಂದು ಕಥೆ ಅಥವಾ ಇನ್ನೇನು ಇದ್ದರೂ ಅದನ್ನು ಓದುಗರಿಗೆ ತಲುಪಿಸುವ ವ್ಯವಸ್ಥೆ ಆಗಬೇಕು. ಬರಿ ಒಂದು ಟೆಕ್ಸ್ಟ್ ಕೊಟ್ಟು ಓದಿ ಎಂದರೆ ಸಾಲದು. ಅದರ ಬಗ್ಗೆ ಯಾರು ಏನು ಹೇಳಿದ್ದಾರೆ. ಅದರ ಸುತ್ತಣ ಭೂಮಿಕೆ ಏನು? ಎನ್ನುವುದನ್ನು ಹೇಳುವವರೂ ಬೇಕು. ಅದು ಕೂಡ ಬಹಳ ಮುಖ್ಯ. ಕಿಶನ್ ರಾವ್ ಇದನ್ನೆಲ್ಲ ನೀವು ಮಾಡಿದ್ದೀರಿ ನನಗೆ ಗೊತ್ತು. ಇದನ್ನು ನಾನು ಸಾಹಿತ್ಯದ Support System ಎಂದು ಅಂದುಕೊಳ್ಳುತ್ತೇನೆ. ಈ ಸಪೋರ್ಟ್ ವ್ಯವಸ್ಥೆ ಬೇಕೇ ಬೇಕಾಗುತ್ತದೆ. ಒಂದು ಆಸ್ಪತ್ರೆಯಲ್ಲಿ ಬರೀ ವೈದ್ಯರು ಇದ್ದರೆ ಸಾಲದು. ದಾದಿಯರು ಬೇಕು, ಯಂತ್ರಗಳು ಬೇಕು, ಅದರಲ್ಲಿ ತರಬೇತು ಪಡೆದ, ಪ್ರಯೋಗಾಲಯ ಸಿಬ್ಬಂದಿ, ಎಕ್ಸ್- ರೇ ತೆಗೆಯುವ ಜನ, ಹೀಗೆ ಏನೆಲ್ಲ ಬೇಕಾಗುತ್ತದೆ. ನಾನು ಒಂದು ಒಳ್ಳೆಯ ಪುಸ್ತಕ ಓದಿದಾಗ ಅದಕ್ಕೆ ಸಂಬಂಧಿಸಿದ, ವಿವರ, ಅದರಿಂದ ಬಂದ ಅನಿಸಿಕೆ, ಚರ್ಚೆ, ಸಂವಾದ ಮೊದಲಾದ ವಿವರಗಳನ್ನು ಹಲವು ಕಡೆ ನನ್ನ ಬರಹಗಳಿಂದ ನೀಡಲು ಪ್ರಯತ್ನ ಮಾಡುತ್ತೇನೆ. ಇದು ಒಂದು ಕೊಂಡಿ(Link). ಈ ಲಿಂಕ್ ಕೊಡುವ ಕೆಲಸ ನಾನು ಮಾಡುತ್ತಿದ್ದೇನೆ.. ನನ್ನ ಆಳ-ನಿರಾಳದಂತಹ ಪುಸ್ತಕಗಳಲ್ಲಿ.
ಎಲ್ಲರೂ ಈ ಕೆಲಸ ಮಾಡಬೇಕು ಎಂದು ನನ್ನ ಅಪೇಕ್ಷೆ.”
ಉತ್ತಮ ಶೈಕ್ಷಣಿಕ ಹಿನ್ನೆಲೆ ಹೊಂದಿರುವ ಪತ್ನಿ ನಿರ್ಮಲಾ ಅವರೊಂದಿಗೆ ಹೈದರಾಬಾದ್‌ನಲ್ಲಿ ವಾಸಿಸುತ್ತಿರುವ ಅವರಿಗೆ ಮೂರು ಜನ ಹೆಣ್ಣುಮಕ್ಕಳು. ಪ್ರೀತಿ ಸಂಯುಕ್ತ, ಸಿಂಧು ಅವಲೋಕಿತ, ಅಪೂರ್ವ ಅಪರಿಮಿತ. ನಾಲ್ಕು ಮೊಮ್ಮಕ್ಕಳ ತಾತ ತಿರುಮಲೇಶರದು ಸಂತೃಪ್ತ ಬದುಕಾಗಿತ್ತು.
ಹೈದರಾಬಾದ್‌ನ ಲೋಕಲ್ ಟ್ರೇನ್‌ಗಗಳಲ್ಲಿ ಸುತ್ತಿದ, ರಸ್ತೆಬದಿ ನಿಂತು, ಕೆಂಡದಲ್ಲಿ ಕಾಯಿಸಿದ ಮುಸುಕಿನ ಜೋಳ ತಿನ್ನುವ, ಭಾನುವಾರದ ಫುಟ್‌ಪಾತ್ ಪುಸ್ತಕಗಳ ಅಂಗಡಿಗಳನ್ನು ಆಸಕ್ತಿಗಳಿಂದ ತಿರುಗುತ್ತ ಪುಸ್ತಕ ಕೊಳ್ಳುವ, ಹೈದರಾಬಾದನ್ನು, ಇಲ್ಲಿಯ ಕನ್ನಡ ಸಂಘಗಳನ್ನು, ಕನ್ನಡಿಗರನ್ನು, ಬಹಳ ಆಸ್ಥೆ – ಅಕಾರಾಸ್ಥೆಗಳಿಂದ ಪ್ರೀತಿಸುವ, ಆ ಮಹಾನ್ ಚೇತನಕ್ಕೆ, ಕಣ್ತುಂಬಿದ ವಿದಾಯ ಹೇಳುವುದನ್ನು ಬಿಟ್ಟು, ಬೇರೇನೂ ಹೇಳುವದಿದೆ!!
ಹೋಗಿ ಬನ್ನಿ ಸರ್ ನಮಸ್ಕಾರ.
ಗೋನವಾರ ಕಿಶನ್ ರಾವ್ ನಿವೃತ್ತ ಕನ್ನಡ ಉಪನ್ಯಾಸಕರು. ಹೈದರಾಬಾದಿನ ನೃಪತುಂಗ ಕನ್ನಡ ವಿದ್ಯಾಸಂಸ್ಥೆಗಳಲ್ಲಿ ಮೂರು ದಶಕಗಳ ಕಾಲ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದಾರೆ. ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಆಸಕ್ತಿ. ಅಂಕಣ ಬರಹ, ಅನುವಾದ, ವಿಮರ್ಶೆ, ನಾಟಕ ರಚನೆಯಲ್ಲಿ ತೊಡಗಿದ್ದಾರೆ. ಕತೆಗಳು, ವಿಮರ್ಶಾ ಬರಹಗಳು ನಾಟಕಗಳು ಅನೇಕ ಪತ್ರಿಕೆಗಳಲ್ಲಿ ಪ್ರಕಟ. ಝುಕ್ ಝುಕ್ ಭಯ್ಯಾ ತಾಲಮ್ ತಾಲ್ (ಮಕ್ಕಳ ನಾಟಕ), ತೆಲುಗು ವಿಪ್ಲವ ಸಾಹಿತಿ ಶ್ರೀ. ಶ್ರೀ ಯವರ ಮಹಾಪ್ರಸ್ತಾನ ಕವಿತೆಗಳ ಸಮಗ್ರ ಅನುವಾದ, ಕುಮಾತವ್ಯಾಸ ಅಧಾರಿತ ಅಂಕಣ ಬರಹಗಳು “ನುಡಿಕಾರಣ” ಶೀರ್ಷಿಕೆಯಡಿ ನಸುಕು.ಕಾಮ್ ನಲ್ಲಿ ಪ್ರಕಟವಾಗಿವೆ.
ಸೂಕ್ತವಾದ ಬರಹ