ಅದೊಂದು ನಾವು ಅಂದುಕೊಂಡಂತೆ ಇದ್ದ ತೇಜಸ್ವಿಯವರ ಮನೆ ಥರನೆ ಇತ್ತು. ನನ್ನ ತಮ್ಮ ಕೇಳೆಬಿಟ್ಟ.ಈ ತಲೆ ಮೇಲೆ ಇರೋ ಚಿತ್ರ ಎಲ್ಲೋ ನೋಡ್ದಂಗೆ ಇದ್ಯಲ್ಲ ಅಂತ!. ನಾವು ನಾಕೂ ಜನ “ಲೇ, ಅದು ಕುವೆಂಪು ಅಲ್ವೇನೋ” ಅಂತ ಕೇಳುದ್ವಿ.ಅವನು ಓ ಹಂಗ, ಕರೆಕ್ಟ್ ಬಿಡ್ರಮ್ಮ ಅಂತ ಹೇಳಿ ಸುಮ್ನೆ ಕೂತ.ಅಷ್ಟೊತ್ತಿಗೆ ಮೆಲ್ಲಗೆ ನಡೆದುಕೊಂಡ ಬಂದ ತೇಜಸ್ವಿ ಬೆತ್ತದ ಕುರ್ಚಿ ಮೇಲೆ ಕೂತರು.
ನರೇಂದ್ರ ಶಿವನಗೆರೆ ಎಂಬ ಯುವ ಲೇಖಕ ಪೂರ್ಣಚಂದ್ರ ತೇಜಸ್ವಿಯವರನ್ನು ಕಂಡುಬಂದ ಪ್ರಸಂಗ.

 

ತುಂಬಾ ಹಳೆಯ ಕಥೆ. ಹೇಳಬೇಕು ಅಂದರೆ ಸರಿ ಸುಮಾರು ಇಪ್ಪತ್ತು, ಇಪ್ಪತ್ತೆರಡು ವರ್ಷದ ಹಿಂದೆ. ನಾವು ಅಂದ್ರೆ ಐದು ಜನ, ನಾನು, ನನ್ನ ಅಕ್ಕ, ನನ್ನ ತಮ್ಮ ಮತ್ತು ಇನ್ನಿಬ್ಬರು ದೊಡ್ಡಮ್ಮನ ಮಕ್ಕಳು ಚಿಕ್ಕಮಗಳೂರು ಪ್ರವಾಸದಲ್ಲಿ ಇದ್ದ್ವಿ. ನಮ್ಮೆಲ್ಲರಿಗೂ ಪ್ರಕೃತಿ ಅಂದ್ರೆ ತುಂಬಾ ಇಸ್ಟದ ಸಂಗತಿ. ಆಗ ನಾನು ಇನ್ನೂ ಪದವಿಯ ಎರಡನೇ ವರ್ಷದಲ್ಲಿ ಇದ್ದೆ. ಆವಾಗ ನಮ್ಮದೊಂದು ಪ್ರವಾಸದ ವರ್ತುಲ ಇತ್ತು. ನಾವು ಬೆಂಗಳೂರಿಂದ ಹೊರಟು ಚಿಕ್ಕಮಗಳೂರು ತಲುಪಿ, ಅಲ್ಲಿ ಒಳ್ಳೆ ಚಿಕ್ಕಮಗಳೂರು ಕಾಫೀ ಕುಡಿದು, ತಿರುತಿರುವಾದ ರಸ್ತೆಗಳಲ್ಲಿ ಸಾಗಿ ಬಾಳೆಹೊನ್ನೂರು ಮತ್ತು ಜಯಪುರ ತಲುಪುತ್ತಾ ಇದ್ದ್ವಿ. ಜಯಪುರ ಅಂದ್ರೆ ಅದೊಂದು ಮಳೆ, ಗಾಳಿಯ ಊರು. ಕೆಳಗೆ ಗುಡ್ಡದ ತಪ್ಪಲಲ್ಲಿ ತಣ್ಣಗೆ ಮಲಗಿರುವ ಸಣ್ಣ ಊರು. ಆಗಿನ ಕಾಲಕ್ಕೆ ಆ ಊರು ವರ್ಷದ ಹನ್ನೆರಡು ತಿಂಗಳೂ ಬರೀ ಮಳೆ, ಮಂಜು ಮತ್ತು ಗಾಳಿಯಲ್ಲಿ ಮಲಗಿರೋ ಊರು. ನಾವು ಮೆಲ್ಲಗೆ ಆ ಊರನ್ನು ಬಿಟ್ಟು ಮುಂದುವರಿದರೆ ಸಿಕ್ಕುವುದು ಒಂದು ದೊಡ್ಡ ಗುಡ್ಡ. ತಿರುವು ತಿರುವುತ್ತಾ ಗುಡ್ಡ ಹತ್ತಿ, ಅದೇ ದಾರಿಯಲ್ಲಿ ಸಾಗಿದರೆ ನೀವು ಗುಡ್ಡದ ತುದಿಯ ದಾರಿಯಲ್ಲಿ ಮುಂದುವರಿಯುತ್ತಾ ಇರುತ್ತೀರಿ. ಆ ದಾರಿ ಒಂದು ಮೋಡದ ಹಾದಿ, ಸುತ್ತಲೂ ಕಾಫಿ ತೋಟ, ಬಲ ಬದಿ ಒಂದು ಗುಡ್ಡ, ಎಡ ಬದಿಯಲ್ಲಿ ದೊಡ್ಡ ಹರಿಯುವ ತುಂಬು ಹೊಳೆ. ಹೊಳೆಗೆ ತಗಲಿಕೊಂಡೇ ಮತ್ತೊಂದು ದೊಡ್ಡ ಗುಡ್ಡ, ಸುತ್ತ ಕವಿದ ಮಳೆ ಮೋಡಗಳು. ಗುಡ್ಡದ ತುದಿಯಲ್ಲಿ, ಮೋಡದ ಮಡಿಲಲ್ಲಿ ಹರಿಯುವ ಹೊಳೆ ಅಂದ್ರೆ ನಾನು ನೋಡಿರುವ ಹಾಗೆ ಇದೊಂದೇ. ನೀವೇನಾದ್ರೂ ತುಂಬು ಬೆಳದಿಂಗಳ ರಾತ್ರಿಯಲ್ಲಿ ಆ ದಾರಿಯಲ್ಲಿ ಸಾಗುತ್ತಿದ್ದರೆ ನಿಮಗೆ ಒಂದು ಹೊಸ ಅನುಭವ ಗ್ಯಾರಂಟಿ. ಹಾಗೆ ನೀವು ಮುಂದುವರೆದು ಗುಡ್ಡ ಇಳಿದರೆ ನಿಮಗೆ ಸಿಗುವುದೇ ಶೃಂಗೇರಿ. ಶೃಂಗೇರಿಯಿಂದ ಕುದುರೆಮುಖ, ಅಲ್ಲಿಂದ ಸಂಸೆ, ಕಳಸ, ಕೊಟ್ಟಿಗೆಹಾರ, ಮೂಡಿಗೆರೆ ಮುಂದೆ ಬೆಂಗಳೂರು ನಮ್ಮ ಪ್ರವಾಸದ ಒಂದು ವರ್ತುಲ.

ಆ ಸಲವೂ ಹಾಗೇ ಆಯ್ತು. ಅದೆ ದಾರಿಯಲ್ಲಿ ಹೋಗಿ ಶೃಂಗೇರಿ ತಲುಪಿದ್ದು ಆಯ್ತು. ಅದು ಆಗಸ್ಟ್ ಕಳೆದು ಒಳ್ಳೆ ಮಲೆನಾಡಿನ ಮಳೆ ಮುಗಿದು ಶೃಂಗೇರಿಗೆ ಸ್ವಲ್ಪ ಚಳಿ ಹಿಡಿದಿತ್ತು. ಹೋಗಿದ್ದು ತಲುಪಿದ್ದು ಎಲ್ಲ ಆಗುವಾಗ ಸಮಯ ರಾತ್ರಿ ಆಗಿತ್ತು, ಸೀದಾ ಹೋಗಿ ಶಾರದಮ್ಮನವರ ದರ್ಶನ ಮಾಡಿ ಒಳ್ಳೆ ಊಟ ಮಾಡಿ ಮಲಗಿದ್ದಾಯ್ತು. ನಮ್ಮ ಈ ಗ್ಯಾಂಗ್ ಜೊತೆ ಹೋದ್ರೆ ಇರುವ ತಾಪತ್ರಯ ಅಂದ್ರೆ ಎಲ್ಲೆ ಹೋಗ್ಲಿ ಬೆಳಬೆಳ್ಳಿಗ್ಗೇನೇ ಎದ್ದೇಳಬೇಕು. ನೀವೇನಾದ್ರೂನೂ ಕಾಡು ಗೀಡು ಅಂತ ಹೋದ್ರೆ ಕತ್ಲು ಕತ್ಲು ಇರುವಾಗಲೇ ಏಳಬೇಕು. ಈ ನಮ್ಮ ಗ್ಯಾಂಗ್ ಸದಸ್ಯರ ಪ್ರಕಾರ ಪ್ರಾಣಿ, ಪಕ್ಷಿ ನೋಡ್ಬೇಕು ಅಂದ್ರೆ ಅದೊಂದು ಸಕಾಲ ಅಂತೆ. ನಾವು ಎಲ್ಲ ಬೇಗ ಎದ್ದು ಅವತ್ತಿನ ಪ್ಲಾನ್ ಸಿದ್ಧ ಮಾಡಿದ್ವಿ. ಪ್ಲಾನ್ ಏನಪ್ಪಾ ಅಂದ್ರೆ ಉಳುವೆ ಪಕ್ಷಿಧಾಮಕ್ಕೆ ಹೋಗೋದು ಅಂತ. ಸರಿ ಆಯ್ತೂಂತ ಹೊರಟಿದ್ದೂ ಆಯ್ತು, ಶೃಂಗೇರಿಯಿಂದ ಒಂದು ಐದು ಕಿಲೋಮೀಟರು ದೂರ ಹರಿಹರಪುರದ ರಸ್ತೆಯಲ್ಲಿ ತುಂಗ ನದಿಯವರೆಗೆ ಹೋಗಿ ಅಲ್ಲೇ ಕಾರು ನಿಲ್ಲಿಸಿ, ಮೆಲ್ಲಗೆ ಸ್ವಲ್ಪ ರಸ್ತೆಯಿಂದ ಕೆಳಗೆ ಇಳಿದರೆ ಸಿಕ್ಕುವುದೇ ಭಟ್ಟರ ಮನೆ. ಚುಮುಚುಮು ಬೆಳಗಿನ ಎಂಟು ಗಂಟೆಗೆ ಭಟ್ಟರ ಮನೆ ಮುಂದೆ ನಿಂತಿದ್ದಾಯ್ತು. ಮಲೆನಾಡ ಶೈಲಿಯ ಹಳೆಯ ಮನೆ, ಮನೆ ಮುಂದೆ ಮರದ ಗೇಟು, ಜಗ್ಗನೆ ಸಪೂರ ನಾಯಿಯೊಂದು ಚಂಗನೆ ನೆಗೆದು, ನಮ್ಮ ಮುಂದೆ ಬಂದು ಬೊಗಳಲು ಶುರುವಿಟ್ಟಿತು. ಭಟ್ಟರು ಮನೆ ಇಂದ ಹೊರಗೆ ಬಂದು ನಮ್ಮನ್ನು ನೋಡಿ ಸ್ವಾಗತಿಸಿದರು.

ಅವರಿಗೂ ಗೊತ್ತು ಬರುವವರು ಹಕ್ಕಿ, ಕೊಕ್ಕರೆ ನೋಡಲು ಬಂದವರು ಅಂತ. ಭಟ್ಟರು ಹಚ ಹಚ ಅಂತ ಹೇಳಿ ನಾಯಿಯನ್ನು ಗದರಿ ಸುಮ್ಮನಾಗಿಸಿ ನಮ್ಮನ್ನು ತೋಟದ ಒಳಗೆ ಪಕ್ಷಿಧಾಮಕ್ಕೆ ಕರೆದೊಯ್ದರು. ಮನೆಯಿಂದ ಹೆಜ್ಜೆಯಿಟ್ಟರೆ ಭಟ್ಟರ ಸೊಂಪಾದ ಅಡಿಕೆ ತೋಟ. ಇನ್ನೂ ಮುಂಜಾನೆ ಮಂಜಿಗೆ ತೊಯ್ದು ಗಂ ಎನ್ನುವ ತೋಟ. ಯಾರನ್ನೂ ಮತ್ತೇರಿಸುವ ಅಡಿಕೆ ಹೊಂಬಾಳೆಯ ಸುವಾಸನೆ. ಬೆಳಗಿನ ಗಾಳಿಗೆ ಸುಯ್ಯುವ ಅಡಿಕೆ ಗಿಡಗಳು, ಎರಡು ಗುಡ್ಡಗಳ ನಡುವೆ ಕಣಿವೆಯಲ್ಲಿ ಇರುವ ತೋಟದ ಗಿಡಗಳ ಮಧ್ಯ ಸುಳಿಯುವ ಕುಳಿರ್ಗಾಳಿ. ಹಾಗೇ ನಡೆಯುತ್ತಾ ಮುಂದೆ ಹೋದರೆ ತೋಟ ಸ್ವಲ್ಪ ಸ್ವಲ್ಪವೇ ಜೌಗಾಗುತ್ತಾ ಕೆರೆಯೊಂದು ಕಾಣಿಸಿತು. ತುಂಬಾ ದೊಡ್ಡ ಕೆರೆ ಏನಲ್ಲ, ಸ್ವಲ್ಪ ನೀರು ನಿಂತ ಸ್ಥಳ ಅಷ್ಟೇ, ಅಲ್ಲಲ್ಲಿ ಮರಗಳು ಒಣಗಿ ನೀರಲ್ಲಿ ನಿಂತಿದ್ದವು. ಅವುಗಳ ಮೇಲೆ ಕರಿ, ಬಿಳಿಯ ದೇಶ, ವಿದೇಶದ ತರಾವರಿ ಹಕ್ಕಿಗಳು ಕುಂತಿದ್ದವು. ಭಟ್ಟರಿಗೆ ಹಕ್ಕಿಗಳ ಮೇಲೆ ತುಂಬಾ ಪ್ರೀತಿ, ಕಷ್ಟವಾದರೂ ಸಹ ಹಕ್ಕಿಗಳಿಗೆ ಸ್ವಲ್ಪವೂ ಬಾಧೆ ಬರದ ರೀತಿಯಲ್ಲಿ ತೋಟ ಮಾಡ್ತಿದ್ದರು. ಭಟ್ಟರು ನಮ್ಮ ಕಡೆ ತಿರುಗಿ ನನಗೆ ತೋಟಕ್ಕಿಂತ ಈ ಪಕ್ಷಿಗಳ ಮೇಲೆ ಪ್ರೀತಿ ಜಾಸ್ತಿ ಕಣ್ರೀ ಅಂದ್ರು. ಆದ್ರೆ ಎಷ್ಟು ದಿನ ಈ ಪಕ್ಷಿಗಳು ಇಲ್ಲಿಗೆ ಬರ್ತವೆ ಅಂತ ಹೇಳಾಕೆ ಆಗಲ್ಲ ಅಂದ್ರು. ನಾವು ಯಾಕೆ ಸರ್ ಅಂತ ಕೇಳಿದ್ದಕ್ಕೆ, ಈ ಕರೆಂಟ್ನಾವ್ರು ಇಲ್ಲಿ ಹೈ ಟೆನ್ಶನ್ ವಯರ್ ಎಳೀತಾರಂತೆ ಕಣ್ರೀ, ಈ ತೋಟದ ಮೇಲೇನೆ ಹೋಗುತ್ತಂತೆ ಅಂದ್ರು. ಹೈ ಟೆನ್ಶನ್ ವಯರ್ ಇಲ್ಲಿಂದ ಹೋದ್ರೆ ಇನ್ಯಾವ ಪಕ್ಷಿ ಬರ್ತಾವ್ರಿ ಇಲ್ಲಿಗೆ ಅಂತ ಅಂದ್ರು, ಅಲ್ಲಿ ಒಂದು ನಿಮಿಷ ಬರೀ ಮೌನ. ಭಟ್ಟರು ಹೇಳ್ತಾ ಹೋದ್ರು, ನಾನು ತೇಜಸ್ವಿಗೆ ಫೋನ್ ಮಾಡಿ ಹೇಳ್ದೆ, ಅವ್ರು ಒಂದು ದಿನ ಇಲ್ಲಿಗೆ ಬರ್ತೀನಿ, ಬಂದು ನೋಡ್ತೀನಿ ಅಂತ ಹೇಳಿದ್ದಾರೆ ಅಂತ ಅಂದ್ರು. ನಮಗೆ ಪಕ್ಕಂತ ಸಾರ್, ತೇಜಸ್ವಿ ಬರ್ತೀನಿ ಅಂತ ಹೇಳಿದರ ಅಂತ ಕೇಳಿದ್ವಿ. ಹೂಂ ನಾನು ಮಾಡ್ಬೇಕಾಗಿದುನ್ನೆಲ್ಲ ಮಾಡಿ ಆಯ್ತು, ಈ ಕರೆಂಟ್ ಡಿಪಾರ್ಟ್ಮೆಂಟ್ನಾವ್ರು ಕೇಳ್ತಿಲ್ಲ, ಇಲ್ಲೆ ವೈಯರ್ ಎಳೀಬೇಕು ಅಂತ ಅವ್ರು, ಅದ್ಕೆ ತೇಜಸ್ವಿ ಅವ್ರಿಗೆ ಫೋನ್ ಮಾಡ್ಬೇಕಾಯ್ತು. ಅವರು ವಿಷ್ಯ ಕೇಳ್ತಿದ್ದಂಗೆ ಬಹಳ ವ್ಯಥೆ ಪಟ್ಟ್ರು. ಒಂದು ದಿನ ಬಂದೆ ಬರ್ತೀನಿ, ಈ ಪಕ್ಷಿಗಳುನ್ನ ಕಾಪಾಡ್ಕೋಬೇಕು ಕಣ್ರೀ ಅಂತ ಹೇಳಿದ್ದಾರೆ ಅಂದ್ರು. ಇನ್ನೇನು ಈ ತಿಂಗ್ಳಲ್ಲೇ ಬರ್ಬಹುದು ಅಂತ ಭಟ್ಟರು ಹೇಳುದ್ರು. ನಮಗೆ ತೇಜಸ್ವಿ ಅಂತ ಮಹಾನ್ ವ್ಯಕ್ತಿ ಎಲ್ಲೋ ಯಾವ್ದೋ ಮಲೆನಾಡಿನ ಮೂಲೆಲಿ ಇರೋ ಪಕ್ಷಿಗಳ ಬಗ್ಗೆ ಅಷ್ಟೊಂದು ಕಳಕಳಿಯನ್ನ ಹೊಂದಿರೋದು ನೋಡಿ ಖುಷಿ ಆಯ್ತು. ಮತ್ತೆ ಹಕ್ಕಿಗಳ ಬಗ್ಗೆ ವ್ಯಥೆ ಕೂಡ ಆಯ್ತು. ಅಲ್ಲಿಂದ ಭಟ್ಟರು ನಮ್ಮನ್ನು ಅವರ ಮನೆಗೆ ಕರೆದುಕೊಂಡು ಹೋದ್ರು. ಬಿಸಿ ಬಿಸಿ ಮಲೆನಾಡಿನ ಕಾಫಿಯ ಸಮಾರಾಧನೆ ಆಯ್ತು. ಕಾಫಿಯ ಸಮಾರಾಧನೆ ಮಾಡಿದ್ದು ಶಾರದಾ ಉಳುವೆ. ಶಾರದಾರವರು ಕೂಡ ಹಕ್ಕಿಗಳ ಬಗ್ಗೆ ಒಲವು ಹೊಂದಿದವ್ರೆ, ಹಾಗೇ ಮಾತಾಡ್ತಾ ಮಾತಾಡ್ತಾ ಅವ್ರು ಕೂಡ ಕನ್ನಡಲ್ಲಿ ಬರೆಯುತ್ತಾರೆ ಅಂತ ಗೊತ್ತಾಯ್ತು. ಅವರು ತಾವು ಬರೆದ ಎರಡು ಕನ್ನಡದ ಕಥೆ ಪುಸ್ತಕಗಳನ್ನ ಒತ್ತಾಯದ ಪ್ರೀತಿಯಿಂದ ಕೊಟ್ರು. ಮಲೆನಾಡಿನವರ ಒತ್ತಾಯ ಪ್ರೀತಿ ಅಂದ್ರೆ ನಿಮಗೆ ಗೊತ್ತಲ್ಲ!.

ಚುಮುಚುಮು ಬೆಳಗಿನ ಎಂಟು ಗಂಟೆಗೆ ಭಟ್ಟರ ಮನೆ ಮುಂದೆ ನಿಂತಿದ್ದಾಯ್ತು. ಮಲೆನಾಡ ಶೈಲಿಯ ಹಳೆಯ ಮನೆ, ಮನೆ ಮುಂದೆ ಮರದ ಗೇಟು, ಜಗ್ಗನೆ ಸಪೂರ ನಾಯಿಯೊಂದು ಚಂಗನೆ ನೆಗೆದು, ನಮ್ಮ ಮುಂದೆ ಬಂದು ಬೊಗಳಲು ಶುರುವಿಟ್ಟಿತು. ಭಟ್ಟರು ಮನೆ ಇಂದ ಹೊರಗೆ ಬಂದು ನಮ್ಮನ್ನು ನೋಡಿ ಸ್ವಾಗತಿಸಿದರು.

ಶೃಂಗೇರಿಯಿಂದ ಕುದುರೆಮುಖ, ಅಲ್ಲಿಂದ ಭದ್ರಾ ನದಿಗುಂಟ ಸಾಗಿ ಕಳಸ ಸೇರಿ, ಮೇಗೂರು, ಕೆಳಗೂರು ಬಿದ್ದು, ಕೊಟ್ಟಿಗೆಹಾರ ತಲುಪಿ ಅಲ್ಲಿಂದ ಮೂಡಿಗೆರೆ ತಲುಪುವ ವೇಳೆಗೆ ಹೊತ್ತು ಮುಸ್ಸಂಜೆಯಾಗಿತ್ತು. ಪೇಟೆಯ ತುಂಡಾಡಿ ದನಗಳೆಲ್ಲಾ ಮನೆ ಸೇರುವ ಸಮಯ, ಗೋಧೂಳಿ!. ಮೂಡಿಗೆರೆಯ ಟಿ.ಬಿ.ಯಲ್ಲಿ ವಾಸ್ತವ್ಯ ಮಾಡುವುದು ಎಂದಾಯ್ತು. ಮತ್ತೆ ಸಂಜೆ ಹ್ಯಾಗೆ ಕಳೆಯುವುದು ಅಂತ ಎಲ್ಲ ಸೇರಿ ಚರ್ಚೆ ಮಾಡಿದಾಗ ಹೊಳೆದದ್ದು ತೇಜಸ್ವಿಯವರನ್ನು ಯಾಕೆ ಭೇಟಿ ಮಾಡಬಾರದು ಅಂತ. ಆಗ ನಾವೆಲ್ಲ ಸಣ್ಣ ಹುಡುಗ, ಹುಡುಗಿಯರು. ಐದು ಜನರಲ್ಲಿ ನಾಲ್ವರು ಆಗಲೇ ತೇಜಸ್ವಿಯವರ ಕರ್ವಾಲೊ ಕಥೆಯನ್ನು ಓದಿ ಅವರ ಕಟ್ಟಾ ಅಭಿಮಾನಿಗಳಾಗಿದ್ದವರು. ಅವರನ್ನು ಹೇಗೆ ಭೇಟಿ ಮಾಡೋದು ಅನ್ನೋ ಭಯ ಬೇರೆ. ದೊಡ್ಡ ಮನುಷ್ಯರು ಅವರು, ನಮ್ಮಂಥ ಸಣ್ಣ ಹುಡುಗರನ್ನು ನೋಡಿ ಬೈದು ಗಿಯ್ದುಬಿಟ್ಟರೆ ಏನು ಕಥೆ ಅಂತ ಅಳುಕು ಬೇರೆ. ಏನೋ, ಎಲ್ಲ ಸೇರಿ ತುಂಬಾ ಧೈರ್ಯ ಮಾಡಿ ಅವ್ರ ಎಸ್ಟೇಟಿನ ಗೇಟಿನತ್ರ ನಿಂತಿದ್ದಾಯ್ತು. ಯಾಕೆ ಅಂತ ಕೇಳ್ರಿ, ಅಯ್ಯೋ ಮಾರಾಯ್ರೆ ಕಿವಿ ಅನ್ನೋ ನಾಯಿ ಬೇರೆ ಇರುತ್ತಲ್ಲವ ಅಲ್ಲಿ!. ಯಾರಿಗೂ ಒಳಕ್ಕೆ ಹೋಗೋ ಧೈರ್ಯ ಬರ್ಲಿಲ್ಲ. ಒಂದು ಅರ್ಧ ಗಂಟೆ ಆಯ್ತು, ಮೆಲ್ಲಗೆ ಕತ್ತಲು ಮೂಡಕ್ಕೆ ಆರಂಭ ಆಯ್ತು, ಜೀರ್ ಅನ್ನೋ ಜೀರ್ಜಿಂಬೆ ಸದ್ದು ಶುರುವಾಯ್ತು. ಇನ್ನೇನು ನಾವೆಲ್ಲ ಧೈರ್ಯ ಸಾಲದೆ ವಾಪಸ್ಸು ಹೊರಡಬೇಕು ಅನ್ನಿಸೋ ಹೊತ್ತಿಗೆ ಸರಿಯಾಗಿ ಸ್ಕೂಟರ್ ಬೆಳಕು ಮತ್ತು ಸದ್ದು ಕೇಳಿಸ್ತು. ಒಂದು ಮನುಷ್ಯ ಆಕೃತಿಯೊಂದು ಮೆಲ್ಲಗೆ ಸ್ಕೂಟರ್ ಇಳಿದು ನಮ್ಮತ್ತ ನೋಡಿ, ಏನು ಯಾರು ಅಂತ ಕೇಳಿದ್ರು. ಅವರ ಹೆಸ್ರು ಪ್ರಭಾಕರ್ ಇರ್ಬೇಕು, ತುಂಬಾ ವರ್ಷ ಆಯ್ತು ಅಸ್ಟೊಂದು ನೆನಪಿಲ್ಲ. ನಾವು ನಮ್ಮ ಬಗ್ಗೆ ಅವರಿಗೆ ತಿಳಿಸಿದ್ವಿ. ಅವರು ನಮನ್ನ ಬನ್ನಿ ನನ್ನ ಜೊತೆ ಅಂತ ತುಂಬಾ ಕುಶಾಲಾಗಿ ಹೇಳಿ ಸೀದಾ ತೇಜಸ್ವಿ ಮನೆ ಬಾಗಿಲಿಗೆ ಬಿಟ್ಟು, ‘ಕದ ತಟ್ಟಿ, ಬಾಗಿಲು ತೆಗೀತಾರೆ, ನನಗೆ ಸ್ವಲ್ಪ ಅರ್ಜೆಂಟು ಕೆಲಸವುಂಟು’ ಅಂತ ಅಂದವರೇ ಬರ್ರ್ ಅಂತ ಸ್ಕೂಟ್ರು ಬಿಟ್ಟುಕೊಂಡು ಹೊರಟೆಹೋದ್ರು. ಅಷ್ಟು ಹೊತ್ತಿಗೆ ಬಾಗಿಲು ತೆರೆಯಿತು, ಯಾರು ಅಂತ ಕೇಳ್ಕೊಂಡು ರಾಜೇಶ್ವರಿ ಮೇಡಂ ಬಾಗಿಲು ತೆಗೆದ್ರು. ನಮನ್ನು ನೋಡಿ ಏನು ಯಾರು ಬೇಕಿತ್ತು ಅಂದ್ರು. ನಾವು ಐದೂ ಜನ ಒಳ್ಳೆ ಬದ್ರವಾಗಿರೋ ಜರ್ಕಿನ್ ಹಾಕಿ ಒಳ್ಳೆ ಕಳ್ಳರ ತರನೇ ಕಾಣಿಸ್ತಿದ್ವಿ. ನಮಗೊ ಒಂಥರಾ ಭಯ, ಮೆಲ್ಲನೆ ‘ಮೇಡಂ ತೇಜಸ್ವಿಯವರನ್ನ ನೋಡ್ಬೇಕಾಗಿತ್ತು’ ಅಂತ ಹೇಳುದ್ವಿ. ಮೇಡಂ ಅವರಿಗೆ ಈ ತರ ಜನ ಬರೋದು, ತೇಜಸ್ವಿಯವರನ್ನ ಕೇಳೋದು ಮಾಮೂಲು ಅಂತ ಅನ್ನಿಸುತ್ತೆ, ಅವ್ರು ನಮ್ಮುನ್ನ ಮೇಲೂ ಕೆಳಗೂ ನೋಡಿ ಒಳಗಡೆ ಬನ್ನಿ ಅಂತ ಕರೆದು ಕೂರಿಸಿದ್ರು. ಇಲ್ಲೆ ಕೂತಿರಿ ನಾನು ತೇಜಸ್ವಿಯವರನ್ನ ಕರೀತೀನಿ ಅಂತ ಹೇಳಿ ಒಳಗಡೆ ಹೋದ್ರು. ನಾವಂತೂ ಗಪ್ ಚಿಪ್ ಆಗಿ ಕೂತಿದ್ವಿ, ಅದು ಲಿವಿಂಗ್ ರೂಮು, ಒಳ್ಳೆ ಮಲೆನಾಡ ಮನೆ ತರಹ, ಸುತ್ತ ಗೋಡೆಗಳು ಗಾರೆಯದು ಇರ್ಬೇಕು, ಅಲ್ಲೇ ಮೂಲೆಯಲ್ಲಿ ಹೆಮ್ಮರದಿಂದ ಮಾಡಿದ ಮೇಜು, ಮೇಜಿನ ಮೇಲೆ ಹರಡಿದ್ದ ದೊಡ್ಡ ದೊಡ್ಡ ಕಟ್ಟು ಗಾಜು ಹಾಕಿದ್ದ ಪೈಂಟಿಂಗ್ಗಳು. ಗೋಡೆಯ ತಲೆ ಮೇಲೆ ಕುವೆಂಪು ರವರ ಚಿತ್ರ. ಸುತ್ತ ತರಾವರಿ ಪೇಂಟಿಂಗ್ ಸಾಮಾನುಗಳು, ಪ್ರಿಂಟ್ ಆಗಿರುವ ಪುಸ್ತಕಗಳು, ಕಾಗದಗಳು…. ಅದೊಂದು ನಾವು ಅಂದುಕೊಂಡಂತೆ ಇದ್ದ ತೇಜಸ್ವಿಯವರ ಮನೆ ಥರನೆ ಇತ್ತು. ನನ್ನ ತಮ್ಮ ಆಗಿನ್ನೊ ಹತ್ತನೇ ತರಗತಿ ಪರೀಕ್ಷೆ ಮಾಡಿ ಮನೆಲೇ ಇದ್ದ, ಅವನಿನ್ನೂ ಚಿಕ್ಕವನು, ಅವನಂತೂ ಕೇಳೆಬಿಟ್ಟ. ಈ ತಲೆ ಮೇಲೆ ಇರೋ ಚಿತ್ರ ಎಲ್ಲೋ ನೋಡ್ದಂಗೆ ಇದ್ಯಲ್ಲ ಅಂತ!. ನಾವು ನಾಕೂ ಜನ “ಲೇ, ಅದು ಕುವೆಂಪು ಅಲ್ವೇನೋ” ಅಂತ ಕೇಳುದ್ವಿ. ಅವನು ಓ ಹಂಗ, ಕರೆಕ್ಟ್ ಬಿಡ್ರಮ್ಮ ಅಂತ ಹೇಳಿ ಸುಮ್ನೆ ಕೂತ. ಅಸ್ಟು ಹೊತ್ತಿಗೆ ಮೆಲ್ಲಗೆ ನಡೆದುಕೊಂಡ ಬಂದ ತೇಜಸ್ವಿ, ಬೆತ್ತದ ಕುರ್ಚಿ ಮೇಲೆ ಕೂತರು. ದೊಗಲೆ ಜೀನ್ಸ್ ಪ್ಯಾಂಟು, ಖಾಧಿ ತರ ಇರೋ ಒಂದು ಅಂಗಿ ಹಾಕಿ, ಕುರುಚಲು ಗಡ್ಡ ಚೂಪು ಕಣ್ಣಿನ ನಮ್ಮ ತೇಜಸ್ವಿ ಸುಮ್ಮನೆ ಕೂತರು.

ಮನೆ ತುಂಬಾ ಮೌನ, ಅಷ್ಟು ಹೊತ್ತಿಗೆ ರಾಜೇಶ್ವರಿ ಮೇಡಂ ಬಂದು ಕುಡಿಯಕ್ಕೆ ಕಾಫಿನಾ ಇಲ್ಲ ಟೀನಾ ಅಂತ ಕೇಳಿದ್ರು. ನಾವು ಏನಾದ್ರೂ ನಡ್ಯೂತ್ತೆ ಅಂತ ಹೇಳಿದ್ವಿ. ತೇಜಸ್ವಿಯವರು ಮೌನ ಮುರಿದು, ನೀವು ಯಾರು, ಏನು ಈ ಕಡೆ ಬಂದಿದ್ದು ಅಂತ ಪ್ರಶ್ನೆ ಹಾಕಿದ್ರು. ನಾವು ನಮ್ಮ ವೃತ್ತಾಂತವನ್ನೆಲ್ಲ ಹೇಳಿ, “ಹಾಗೇ ನಿಮ್ಮನ್ನ ಮಾತಾಡಿಸಿಕೊಂಡು ಹೋಗೋಣ ಅಂತ ಬಂದ್ವಿ” ಅಂತ ಹೇಳಿದ್ವಿ. ಅವ್ರು ಅಲ್ಲಿಂದ ನನ್ನನ್ನ ನೋಡಕ್ಕೆ ಅಸ್ಟು ದೂರದಿಂದ ಬಂದ್ರ ಅಂದ್ರು. ಮೆಲ್ಲನೆ, ನಾವು ಐದೂ ಜನರನ್ನ ಸೆಪರೇಟ್ ಆಗಿ ವಿಚಾರುಸ್ಕಂಡ್ರು, ಕಾಫಿನು ಬಂತು, ಜೊತೆಗೆ ಬಿಸ್ಕೆಟ್ಟು ಸಹ ಬಂತು. ಮೆಲ್ಲನೆ ನಮೆಲ್ಲರಿಗೂ ಮೈಚಳಿ ಬಿಟ್ಟು ಮಾತಾಡೊ ಧೈರ್ಯ ಸ್ಟಾರ್ಟ್ ಆಯ್ತು. ನನ್ನ ತಮ್ಮ ಕೇಳೆ ಬಿಟ್ಟ, ಅಂಕಲ್ ಈ ಚಿತ್ರ ಎಲ್ಲ ನೀವೇ ಬರ್ದಿದ್ದ? ತೇಜಸ್ವಿ ಅವ್ನ ಕಡೆ ತಿರ್ಗುದವ್ರೆ, “ಹೂ ಕಣೋ ನಾನೇ ಬರ್ದಿದ್ದು ಚೆನ್ನಾಗಿ ಇದ್ಯಾ” ಅಂತ ಅಂದ್ರು. “ನೋಡ್ರಿ, ಈ ಪೇಂಟಿಂಗ್ಸ್ ಎಲ್ಲ ಮೈಸೂರು ದಸರಾ ಎಕ್ಸಿಬಿಷಿನ್ಗೆ ಕಳ್ಸಿದ್ದೆ, ಎಲ್ಲ ಆದ್ಮೇಲೆ ನೋಡ್ರಿ ಹೆಂಗೆ ವಾಪಸ್ ಕಳ್ಸಿದ್ದಾರೆ, ಎಲ್ಲ ಫ್ರೇಮ್, ಗಾಜು ಒಡೆದು” ಅಂತ ತೋರ್ಸಿದ್ರು. ಈ ಜನಕ್ಕೆ ಜವಾಬ್ದಾರಿನೇ ಇಲ್ಲ ಕಣ್ರೀ ಅಂತ ಅಂದ್ರು. ನಾವು ಸುಮ್ಮನೆ ಕತ್ತು ಅಲ್ಲಾಡ್ಸಿದ್ವಿ. ಅವ್ರು ಕಥೆ ಬರೆಯುವುದು ನಮಗೆ ಗೊತ್ತಿತ್ತು. ಆದರೆ ಪೇಂಟಿಂಗ್ ಮಾಡುವುದು ಗೊತ್ತಿರ್ಲಿಲ್ಲ. ನಾವು ಅವ್ರನ್ನ ಅದ್ರ ಬಗ್ಗೆ ಕೇಳಿದ್ವಿ. ಅದುಕ್ಕೆ ಅವ್ರು ಹೂ ಇದೊಂದು ಹೊಸ ರೀತಿ ಕಲೆ ಕಣ್ರೀ, ಫೋಟೋ ತೆಗೆಯೋದು ಆಮೇಲೆ ಅದನ್ನ ಗಣಕಯಂತ್ರಕ್ಕೆ ಹಾಕಿ ಎಡಿಟ್ ಮಾಡಿ ಒಳ್ಳೆ ಚಿತ್ರಕಲೆ ತರನೇ ಪೇಂಟಿಂಗ್ ಮಾಡ್ತೀನಿ ಅಂದ್ರು. ನಾವು ಎಲ್ಲರೂ ಹೋಗಿ ಆ ರೂಮ್ ತುಂಬಾ ಇರೋ ಚಿತ್ರಾನೆಲ್ಲ ನೋಡಿ, ಖುಷಿ ಪಟ್ವಿ. ತುಂಬಾ ಚೆನ್ನಾಗಿ ಮಾಡಿದ್ರು, ಎಲ್ಲವೂ ಪರಿಸರದ ಮತ್ತು ಮನುಷ್ಯರ, ಮತ್ತು ಮಲೆನಾಡಿನ ಬದುಕಿನ ಚಿತ್ರಗಳೇ. ನನ್ನ ತಮ್ಮನನ್ನು ನೋಡಿ, “ಏನೋ ಚೆನ್ನಾಗಿ ಇದ್ಯಾ?” ಅಂದ್ರು, “ಅವ್ನು ಹೂ ಅಂಕಲ್ ತುಂಬಾ ಚನ್ನಾಗಿವೆ” ಅಂತ ಅಂದ. ಅಂತಾ ದೊಡ್ಡ ಸಾಹಿತಿಗೆ ಮಕ್ಕಳ ಮೇಲೆ ಎಂತಹ ಪ್ರೀತಿ, ವಿಶ್ವಾಸ. ನಾವು, “ಸರ್ ನಮಗೆ ನಿಮ್ಮ ಹಸ್ತಾಕ್ಷರ ಕೊಡಿ” ಅಂದ್ವಿ. ಅಲ್ಲಿ ಸಣ್ಣ ಸಣ್ಣ ಪೇಪರ್ ಚೂರುಗಳನ್ನ ಕಟ್ ಮಾಡಿ ಇಟ್ಟಿದ್ರು. ಒಂದೊಂದೇ ತೆಗೆದು ಅವರ ಗುಂಡಗಿನ ಹಸ್ತಾಕ್ಷರ ಹಾಕಿ ನಮ್ಮೆಲ್ಲರಿಗೂ ಒಂದೊಂದು ಕೊಟ್ರು. ನಮ್ಗೆಲ್ಲಾ ಪ್ರಪಂಚ ಗೆದ್ದ ಸಂತಸ. ಮುಟ್ಟಿ ಮುಟ್ಟಿ ನೋಡಿ ನಾನು ಜೇಬಲ್ಲಿ ತುಂಬಾ ಜೋಪಾನವಾಗಿ ಇಟ್ಟೆ. ಮತ್ತೆ ಚರ್ಚೆ ಮುಂದುವರಿಯಿತು.

(ತೇಜಸ್ವಿ ರಚಿಸಿದ ಒಂದು ವರ್ಣ ಚಿತ್ರ)

ನಾವು “ಸರ್ ನಿಮ್ಮ ‘ಜುಗಾರಿ ಕ್ರಾಸ್’ ಕತೆಯಲ್ಲಿ ಬರೋ ಟ್ರೈನು, ಈ ಸಕ್ಲೇಶ್ಪುರ ಎಡಕುಮೇರಿ ಟ್ರೈನ್ ಅಲ್ವಾ ಸಾರ್ ಅಂತ. ಅವ್ರು ಜೋರಾಗಿ ನಕ್ಕು, “ಏ, ಅಲ್ಲ ಕಣ್ರೀ… ಅದು ಕಥೆ. ಕಥೆ ಯಾವಾಗ್ಲೂ ಕಾಲ್ಪನಿಕ ಕಣ್ರೀ, ಯಾವುದೇ ನೈಜ ವಸ್ತುಗಳಿಗೆ ಸಂಬಂಧ ಇರಲ್ಲ” ಅಂತ ಅಂದ್ರು. ಅಷ್ಟು ಹೊತ್ತಿಗೆ ನನ್ನ ಮೂರು ಜನ ಅಕ್ಕಂದಿರು ರಾಜೇಶ್ವರಿ ಮೇಡಂ ಜೊತೆ ಮನೆ ಒಳಗೆ ಹೋದ್ರು, ನಾನು ನನ್ನ ತಮ್ಮ ಮತ್ತು ತೇಜಸ್ವಿ ಅಷ್ಟೇ ರೂಮಿನ ಒಳಗೆ. ತೇಜಸ್ವಿ ತುಂಬಾ ಆತ್ಮೀಯವಾಗಿ ಎಲ್ಲ ವಿಚಾರಿಸಿದರು. ಹೊರಡುವ ಸಮಯ ಬಂತು, ನಾವು ನಮ್ಮ ಬೆಂಗಳೂರಿನ ವಿಳಾಸ, ಫೋನ್ ನಂಬರ್ ಕೊಟ್ಟ್ವಿ. ತೇಜಸ್ವಿ “ನನಗೆ ಬೆಂಗ್ಳೂರು, ಅದರ ಟ್ರಾಫಿಕ್ ಅಂದ್ರೇ ಅಲರ್ಜೀ ಕಣ್ರೀ ಅಂದ್ರು, ಆದ್ರೂ ಒಂದಿನ ಬರ್ತೀನಿ, ಫೋನ್ ಮಾಡ್ತಿನಿ ಅಂದ್ರು. ಮನೆ ಬಾಗಿಲಿನ ಹತ್ರ ಬಂದಾಗ “ಏನಾದ್ರೂ ಮೂಡ್ಗೆರೆ ಟೀಬಿಲಿ ತೊಂದ್ರೆ ಆದ್ರೆ, ಫೋನ್ ಮಾಡಿ ನಮ್ಮ ಮನೆಗೆ ವಾಪಸ್ಸು ಬಂದುಬಿಡಿ” ಅಂದ್ರು. ನಾವು “ಹೂಂ ಸರ್” ಅಂದೆವು. ತೇಜಸ್ವಿ ಮತ್ತು ಮೇಡಂ ಇಬ್ಬರಿಗೂ ವಿದಾಯ ಹೇಳಿ ಹೊರಟಾಗ, ತೇಜಸ್ವಿ “ನೀವೆಲ್ಲ ಈ ತರ ಜರ್ಕಿನ್ ಹಾಕಿ ಕತ್ತಲಲ್ಲಿ ಬಂದಿದ್ದು ನೋಡಿ ನನಗೆ ಯಾರೋ ಡಕಾಯಿತರೆ ಬಂದ್ರೇನೋ ಅನ್ಸಿತ್ತು ಕಣ್ರೀ” ಅಂದ್ರು. ನಾವೆಲ್ಲ ಅವರ ಮಾತಿಗೆ ನಗುತ್ತಾ, ಅವರಿಗೆ ವಿದಾಯ ಹೇಳಿ ಅಲ್ಲಿಂದ ಹೊರಟು ಬಂದ್ವಿ.

ಆಮೇಲೆ, ಒಂದು ವರ್ಷ ಬೆಂಗಳೂರಲ್ಲಿ ತೇಜಸ್ವಿ ಅವ್ರ ಫೋನ್ ಬಂತಾ? ತೇಜಸ್ವಿ ಅವ್ರ ಫೋನ್ ಬಂತಾ? ಅಂತಾ ನಾವೆಲ್ಲ ಒಬ್ರನ್ನೊಬ್ರು ಕೇಳಿದ್ದೇ ಬಂತು!. ಇಷ್ಟು ವರ್ಷ ಆದ್ಮೇಲೆ ನಮ್ಮ ಆ ಹಳೇ ಫೋನ್ ನಂಬರ್ ಈಗ ಇಲ್ಲ, ಈಗೆಲ್ಲ ಮೊಬೈಲ್ ಫೋನ್ ಅಲ್ವಾ. ಆದ್ರೂ ಹಳೇ ನೆನಪು ಬಂದಾಗ ನಾವೆಲ್ಲ ತೇಜಸ್ವಿ ಅವ್ರ ಫೋನ್ ಬಂತಾ ಅಂತ! ಅವ್ರು ಬೆಂಗ್ಳೂರಿಗೆ ಬರ್ತಾರಾ ಅಂತ!.

(ಆಂದೋಲನ ‘ಹಾಡುಪಾಡು’ ಸಂಚಿಕೆಯಲ್ಲಿ ಪ್ರಕಟವಾದ ಬರಹದ ವಿಸ್ತೃತ ರೂಪ)