ನಾವಿನ್ನೂ ಮೊಕ್ತಾ ಭೆಟ್ಟಿಯಾಗಿಲ್ಲ. ರೈತ ಪತ್ರಿಕೆಯಾದ “ಅಡಿಕೆ ಪತ್ರಿಕೆಯಲ್ಲಿ” ಅವರ ATV (All Terrain Vehicle) ಬಗ್ಗೆ ಒಂದು ಲೇಖನ ಇತ್ತು. ಈ ವಾಹನವನ್ನು ಅವರು ‘ಸದಾ (ಸಕಲ ದಾರಿ ಸಂಚಾರಿ- ಶ್ರಿ ಪಡ್ರೆ ನಾಮಕರಣ) ಸಂಚಾರಿ’ ಎಂದು ಕರೆಯುತ್ತಾರೆ. ಅಡಿಕೆ ಪತ್ರಿಕೆಯಿಂದ ಅವರ ಕನ್ನಡ ಬ್ಲಾಗ್ ಹಳ್ಳಿಯಿಂದ ಓದಿ ತಿಳಿದುಕೊಂಡೆ.
ಬ್ಲಾಗ್ ಓದಿ ಪ್ರಭಾವಿತನಾಗಿ ನನ್ನನ್ನು ನಾನೇ ಅವರಿಗೆ ಪರಿಚಯಿಸಿಕೊಂಡೆ. ಗೋವಿಂದಭಟ್ ನೇಲ್ಯಾರು ಅವರು ತನ್ನ ಕನ್ನಡ ಬ್ಲಾಗಿನಲ್ಲಿ ತನ್ನನ್ನು ವರ್ಣಿಸಿಕೊಂಡ ರೀತಿ ಇದು: ಹಿಂದೊಮ್ಮೆ ಸೈಕಲ್ ಜತೆಗೆ ಪ್ರಪಂಚ ಸುತ್ತಿದೆ. ಹಕ್ಕಿಯಂತೆ ಹಾರುವ ಆಸೆಯಲ್ಲಿ ಯಡವಟ್ಟಾಗಿ ಬೆನ್ನೆಲುಬು ಡಮಾರ್. ಸದಾ ಬಾದಿಸುವ ನೋವು ಮರೆಯಲು ಹಾಗೂ ಅನಿಸಿಕೆಗಳ ಹಂಚಿಕೊಳ್ಳಲು ಈ ಬರವಣಿಗೆ. ಈಗ ದಕ್ಷಿಣ ಕನ್ನಡದಲ್ಲಿ ಅಡಿಕೆ ಕೃಷಿಕ. “2010 ಮೇ ತಿಂಗಳಿನಲ್ಲಿ ಅವರ ಹೊಸಾ ಆಂಗ್ಲ ಭಾಷೆಯ ಭ್ಲಾಗ್ ಕಣ್ಣಿಗೆ ಬಿತ್ತು. ಇದೇನಪ್ಪಾ, Recumbent trike? ಎಂಬ ಕುತೂಹಲವೇ ಆ ಬ್ಲಾಗನ್ನು ಹಿಂಬಾಲಿಸುವಂತೆ ಮಾಡಿತು. ಇಂದು ಐವತ್ತೆರಡರ ಹರೆಯದ ಶ್ರೀ ಗೋವಿಂದ ಭಟ್ಟರು ಸೈಕಲಿನಲ್ಲೇ ಪ್ರಪಂಚ ಸುತ್ತಿ ಬಂದ ಸಾಹಸಿಯಾದರೂ, ಪವರ್ಡ್ ಹ್ಯಾಂಗ್ ಗ್ಲೈಡರ್ ಹಾರಿಸುವಾಗ ಅವಘಡಕ್ಕೊಳಗಾಗಿ ಬೆನ್ನು ಮೂಳೆಗೆ ಪೆಟ್ಟು ಬಿತ್ತು, ಅವರ ಮೇಲೆ ನಡೆದ ಹಲವು ಆಪರೇಶನ್ ಗಳು ನಿರೀಕ್ಷಿತ ಫಲ ನೀಡದೇಹೋದುವು! ತನ್ನ ಮನೆಯ ಜಗಲಿಯಲ್ಲೇ ಉಳಿದು ಅಡಿಕೆತೋಟ ನಿಭಾಯಿಸುತ್ತಾ ಮನೆಯಲ್ಲೇ ಉಳಿಯುವ ಪರಿಸ್ಥಿತಿ ಬಂತು. ಭಟ್ಟರು ಹರಸಾಹಸ ಪಟ್ಟು ಮನೆಯ ಸುತ್ತಮುತ್ತ ಓಡಾಡಲು ಚೈನಾದಿಂದ ಒಂದು ಸದಾ ಸಂಚಾರಿ ವಾಹನ ತರಿಸಿಕೊಂಡು ಅದರ ಸವಾರಿಗೆ ತನ್ನ ಜರ್ಜರಿತ ದೇಹವನ್ನು ಪಳಗಿಸಿಕೊಂಡು ತನ್ನ ತೋಟದ ಕೆಲಸಗಳನ್ನು ನಿಭಾಯಿಸತೊಡಗಿದರು. ಒಂದುದಿನ ತನ್ನ ಹದಿಹರೆಯದ ಹೈಸ್ಕೂಲ್ ಓದುವ ಮಕ್ಕಳಾದ ಅನಿಲ್ ಮತ್ತು ಸುನಿಲ್ ಅವರನ್ನು ಕರೆದುಕೊಂಡು ಮಂಗಳೂರಿನಿಂದ ಮಲ್ಪೆಯ ತನಕ ಕಡಲತೀರದಲ್ಲೇ ಮರಳಿನ ಮೇಲೆ ತಮ್ಮ ಸದಾ ಸಂಚಾರಿಯ ಸವಾರಿಮಾಡಿ ಆತ್ಮ ಸ್ಥೈರ್ಯ ಹೆಚ್ಚಿಸಿಕೊಂಡರು. ಕಾಲಿಗೆ ಚಕ್ರ ಕಟ್ಟಿಕೊಂಡೇ ಹುಟ್ಟಿದ ಭಟ್ಟರ ಸಂಚಾರದ ಹುಚ್ಚಿಗೆ ಕಿಚ್ಚು ಹತ್ತಿಸಿದ್ದು Recumbent Tricyle. ಫೆಬ್ರವರಿ ತಿಂಗಳಿನಿಂದ ಭಟ್ಟರು ತಮ್ಮ ಮುಂದಿನ ಪ್ರಯಾಣದ ಕನಸಿನ ಕುದುರೆಯಾದ ತ್ರಿಚಕ್ರಿಯ ಬೆನ್ನು ಹತ್ತಿದರು. ತನಗೆ ಅನುಕೂಲ ಆಗುವಂತಿರುವ ಆರಾಮ ಕುರ್ಚಿಯಲ್ಲಿ ಕುಳಿತೇ ಪೆಡಲ್ ಚಲಾಯಿಸುವ ತ್ರಿಚಕ್ರಿಗೆ ಪ್ರತೀ ನಿತ್ಯ ಚಾರ್ಜ್ ಮಾಡಿ ಬಳಸಬಹುದಾದ ಬ್ಯಾಟರಿಗಳು “ಪೆಡಲಿಂಗಿನ ಮಟ್ಟಿಗೆ ಸ್ವಲ್ಪ ಒತ್ತಾಸೆ” ನೀಡುತ್ತವಂತೆ! ತಮಗೆ ಬೇಕಾದ ವಾಹನವನ್ನು ತಮ್ಮ ತೋಟದ ಮನೆಯಲ್ಲೇ ಜೋಡಿಸಿಕೊಂಡರು. ಇಂಗ್ಲಂಡ್ ಮತ್ತು ಚೈನಾಗಳಿಂದ ಬಿಡಿಭಾಗಗಳನ್ನು ತರಿಸಿ ತ್ರಿಚಕ್ರಿಯನ್ನು ಜೋಡಿಸಿ ಟ್ರಯಲ್ ರನ್ ಮಾಡಿ ನೋಡಿದರು. ಒಂದು ದಿನ ಮಳೆಬರುವಂತಿದ್ದರೂ ಧೈರ್ಯ ಮಾಡಿ ಶಿರಾಡಿ 2500 ಅಡಿಗಳ ಘಾಟಿಯನ್ನು ಏರಿ ತನ್ನ ಮನಸ್ಸಿಗೆ ಧೈರ್ಯ ತಂದುಕೊಂಡರು. ಹದಿನೇಳು ಅಗೋಸ್ತು ದಿನದ ರಾತ್ರಿ ಏಕಾಕಿಯಾಗಿ ತಿರುವನಂತಪುರಕ್ಕೆ ರೈಲಿನಲ್ಲಿ ಪಯಣಿಸಿ ನಿನ್ನೆ ಬೆಳಗ್ಗೆ ತಮ್ಮ ತ್ರಿಚಕ್ರಿಯನ್ನೇರಿ ಪ್ರಯಾಣಿಸಿದ್ದಾರೆ. ಇಂದು ಬೆಳಗ್ಗೆ ತಿರುವನಂತಪುರದಿಂದ ಪೆಡಲ್ ತುಳಿಯುತ್ತಾ ಹೊರಟು ನೂರು ಕಿ.ಮೀ. ದೂರದ ಕನ್ಯಾಕುಮಾರಿಯನ್ನು ಮಧ್ಯಾಹ್ನ ಹನ್ನೆರಡೂರೆಗೆ ಸೇರಿದ್ದಾರೆ. ತನ್ನಲ್ಲಿರುವ ಲ್ಯಾಪ್ ಟಾಪ್, ಜಿ.ಪಿ.ಎಸ್., ಮೊಬೈಲ್, ಡಿಜಿಟಲ್ ಕೆಮೆರಾ ಬಳಸುತ್ತಾ ತಮ್ಮ ಈ ದಿನದ -‘ಪ್ರೋಗ್ರೆಸ್ ರೆಪೋರ್ಟ್’ ಅನ್ನು ತಮ್ಮ ಬ್ಲಾಗಿಗೆ ಈಗಾಗಲೇ ಏರಿಸಿದ್ದಾರೆ. ಗೋವಿಂದ ಭಟ್ಟರ ತ್ರಿಚಕ್ರಿಯ ವಿವರಗಳು ಮತ್ತು ಅವರ ದೈಹಿಕ ತೊಂದರೆಗಳ ವಿವರಗಳು ಅವರ ಬ್ಲಾಗಿನಲ್ಲೇ ಸಿಗುತ್ತವೆ. ಆ ಬಗ್ಗೆ ನನ್ನ ವಿವರಣೆ ಖಂಡಿತವಾಗಿ ಇಲ್ಲಿ ಅಗತ್ಯ ಇಲ್ಲ… ಇದೇ ಶುಕ್ರವಾರ ಅಂದರೆ ಅಗೋಸ್ತು ಇಪ್ಪತ್ತನೇ ತಾರೀಕು ತನ್ನ ತ್ರಿಚಕ್ರಿಯ ಪೆಡಲು ತುಳಿಯುತ್ತಾ ಸಾಗುವ ಗೋವಿಂದ ಭಟ್ ಅವರು ತನ್ನ “ಆ ಸೇತು ಹಿಮಾಚಲ ಪ್ರವಾಸ” ಪ್ರಾರಂಭಿಸುತ್ತಾ ಇದ್ದಾರೆ. ನಮ್ಮ ದೇಶದ ಉದ್ದವನ್ನೇ ಅಳೆಯುವ ಈ ತ್ರಿಚಕ್ರಿಯ ಪೆಡಲ್ ತುಳಿತದ ಪ್ರವಾಸವನ್ನು ಇದುವರೆಗೆ ಯಾರೂ ಮಾಡಿಲ್ಲ. ಭಟ್ ಅವರು ಶ್ರೀಮಂತ ವರ್ಗಕ್ಕೆ ಸೇರಿದವರಲ್ಲ. ಅವರು ಯಾರಿಗೂ ಕೈಚಾಚದ ಸ್ವಾಭಿಮಾನಿ, ಪರಿಸರ ಪ್ರೇಮಿ ಮತ್ತು ದೇಶಪ್ರೇಮಿ. ಅವರು ಅಮುಂಡ್ಸೆನ್. ಶ್ಯಾಕಲ್ಟನ್, ಕೊಲಂಬಸ್ ಮುಂತಾದ ಅದಮ್ಯ ಸಾಹಸಿಗಳ ಸಾಲಿಗೆ ‘ಅವರ ಸರಿಸಾಟಿಯಾಗಿ’ ನಿಲ್ಲಬಲ್ಲ ಅಪರೂಪದ ಸಾಹಸಿ ವ್ಯಕ್ತಿ ಎಂದು ಮಾತ್ರ ನಾನು ಹೇಳಬಲ್ಲೆ. ಅವರಿಗೆ ಕೆಂಡಸಂಪಿಗೆಯ ಓದುಗರು ಕೂಡಾ ಶುಭ ಹಾರೈಸಲಿ! -ಎಂಬ ಸಕಾರಣಕ್ಕೆ ಈ ಲೇಖನ. |
ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ