‘ನ್ಯಾಯನಿಷ್ಠುರಿ, ಲೋಕವಿರೋಧಿ, ಶರಣನಾರಿಗೂ ಅಂಜುವವನಲ್ಲʼ ಎಂಬಂಥ ವ್ಯಕ್ತಿತ್ವ ಅವರದು. ಹೀಗೆ ಮಾತನಾಡಿದರೆ ಆಡಳಿತ ವರ್ಗಕ್ಕಾಗಲೀ ರಾಜ್ಯಶಕ್ತಿಗಾಗಲೀ ತಮ್ಮ ಬಗ್ಗೆ ಯಾವ ಭಾವನೆ ಮೂಡಬಹುದು; ಅದರಿಂದ ತಮಗೆ ಯಾವ ತೊಂದರೆಯಾಗಬಹುದು ಎಂಬ ಲೆಕ್ಕಾಚಾರವನ್ನು ಅವರು ಎಂದೂ ಹಾಕಿದವರಲ್ಲ. ಮನುಷ್ಯರ ಬಗ್ಗೆ ಇರುವ ಅವರ ಕಾಳಜಿಯೆ ಅಂಥದ್ದು. ಆ ಕಾಲದಲ್ಲಿ ಅವರು ಒಂದು ರೀತಿಯ ಏಕಾಂಗವೀರರಾಗಿದ್ದರು. ಸದಾ ಕ್ರಿಯಾಶೀಲವಾಗಿರುವ ಅವರ ವ್ಯಕ್ತಿತ್ವ ನನ್ನಂಥವರ ಮೇಲೆ ಆಳವಾದ ಪರಿಣಾಮ ಬೀರಿತು. ಎಷ್ಟೇ ಕಷ್ಟಕಾರ್ಪಣ್ಯಗಳು ಬಂದರೂ ಎದೆಗುಂದದೆ ಮುನ್ನಡೆಯುವ ಛಲವನ್ನು ಸಾಧಿಸಲು ಸಹಕಾರಿಯಾಯಿತು.
ರಂಜಾನ್ ದರ್ಗಾ ಬರೆಯುವ ಆತ್ಮಕತೆ ʻನೆನಪಾದಾಗಲೆಲ್ಲʼ ಸರಣಿಯ 86ನೇ ಕಂತು ನಿಮ್ಮ ಓದಿಗೆ
ಮಾರ್ಕ್ಸ್‌ವಾದಿ ಚಿಂತಕ ಮತ್ತು ಹೋರಾಟಗಾರ ಕುವಲಯಶ್ಯಾಮ ಶರ್ಮಾ (ಡಾ. ಕೆ.ಎಸ್. ಶರ್ಮಾ) ಅವರು ೧೯೩೪ನೇ ಸೆಪ್ಟೆಂಬರ್ ೩೦ರಂದು ಚಿಕ್ಕಬಳ್ಳಾಪುರದಲ್ಲಿ ಜನಿಸಿದರೂ ಬದುಕಿನ ಬಹುಭಾಗವನ್ನು ಹುಬ್ಬಳ್ಳಿ- ಧಾರವಾಡದಲ್ಲೇ ಕಳೆದಿದ್ದಾರೆ. ವೇದ ವಿದ್ವಾಂಸರಾಗಿದ್ದ ತಂದೆ ಎಂಬಾರ್ ಭಾಸ್ಕರಾಚಾರ್ಯರು ಸ್ವಾತಂತ್ರ್ಯ ಹೋರಾಟಗಾರರೂ ಗ್ರಂಥಕರ್ತರೂ ಮುದ್ರಕರೂ ಆಗಿದ್ದರು. ತಾಯಿ ಸಂಪತ್ತಮ್ಮ. ತೆಲುಗು ಮಾತೃಭಾಷೆಯ ಅವರ ಬದುಕು ಕನ್ನಡಮಯವಾಗಿದ್ದು ದುಡಿಯವ ವರ್ಗಕ್ಕೆ ಮೀಸಲಾಗಿದೆ.
ಶಿಕ್ಷಣ ಬೆಂಗಳೂರಿನಲ್ಲಾದರೂ ಕಾಯಕ ಕ್ಷೇತ್ರ ಹುಬ್ಬಳ್ಳಿ-ಧಾರವಾಡವಾಗಿದೆ. ಶರ್ಮಾ ಅವರ ೭೫ನೇ ಜನ್ಮದಿನ ಆಚರಿಸಿ ೧೫ ವರ್ಷಗಳು ಕಳೆದವು. ಅವರು ಇಂದಿಗೂ ದುಡಿಯುವ ವರ್ಗದ ಏಳ್ಗೆಗಾಗಿ ಸದಾ ಚಿಂತನೆ ಮಾಡುತ್ತಾರೆ.
ಕಾನೂನು ಪ್ರಾಧ್ಯಾಪಕ, ಪತ್ರಕರ್ತ, ಮಾರ್ಕ್ಸ್‌ವಾದಿ ವಿದ್ವಾಂಸ, ಸಾಹಿತಿ, ಸಂಘಟನಾ ಚತುರ, ಸದಾ ದುಡಿಯುವ ವರ್ಗದ ಹೋರಾಟದಲ್ಲಿ ತೊಡಗಿದ ಕಾಯ್ದೆತಜ್ಞ, ಪ್ರಕಾಶಕ ಹೀಗೆ ಅನೇಕ ಕೆಲಸ ಕಾರ್ಯಗಳಲ್ಲಿ ಶರ್ಮಾ ಅವರು ತೊಡಗುತ್ತಲೇ ಕಾನೂನಿನ ಹೋರಾಟ ಮಾಡುತ್ತ ದಿನಗೂಲಿಗಳಿಗೆ ಖಾಯಂ ನೌಕರಿಯ ಐತಿಹಾಸಿಕ ವಿಜಯ ದೊರಕಿಸಿ “ದಿನಗೂಲಿಗಳ ಮಹಾತ್ಮ” ಎನಿಸಿದ್ದಾರೆ. “ದುಡಿಯುವ ಕೈಗಳೇ ಆಳುವ ಕೈಗಳಾಗಬೇಕು” ಎಂಬುದು ಅವರ ಘೋಷವಾಕ್ಯವಾಗಿದೆ.
“ಕರ್ನಾಟಕ ರಾಜ್ಯ ಸರ್ಕಾರಿ ದಿನಗೂಲಿ ನೌಕರರ ಮಹಾಮಂಡಲ” ಮತ್ತು “ಭಾರತೀಯ ಕ್ರಾಂತಿಕಾರಿ ಕಾರ್ಮಿಕ ಸಂಘಗಳ ಒಕ್ಕೂಟ” ಸಂಸ್ಥೆಗಳ ಸಂಸ್ಥಾಪಕ ಅಧ್ಯಕ್ಷರಾಗಿ ಕಾರ್ಮಿಕ ವರ್ಗಕ್ಕೆ ನ್ಯಾಯ ಒದಗಿಸಿದ್ದಾರೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನೌಕಕರ ಹೋರಾಟದ ನಾಯಕತ್ವವನ್ನು ವಹಿಸಿ ಅವರಿಗೆ ಸೌಲಭ್ಯ ದೊರೆಯುವಂತೆ ಮಾಡಿದ್ದಾರೆ. ಇತರ ೨೪ ಕಾರ್ಮಿಕ ಸಂಘಗಳ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ.
ಧಾರವಾಡದ ಟೈವಾಕ್ ಗಡಿಯಾರ ಕಂಪನಿಯ ಕಾರ್ಮಿಕರಿಗೆ ನ್ಯಾಯ ಒದಗಿಸಲು ಅವರು ಮೊದಲ ಬಾರಿಗೆ ೧೯೫೮ರಲ್ಲಿ ಹೋರಾಟ ಪ್ರಾರಂಭಿಸಿದರು. ದಿನಗೂಲಿ ನೌಕರರ ಹೋರಾಟಕ್ಕೆ ನ್ಯಾಯ ಸಿಗುವವರೆಗೆ ಮೊದಲ ಹಂತದ ೩೨ ವರ್ಷಗಳ ಇತಿಹಾಸವಿದೆ. ಶರ್ಮಾ ಅವರ ನಾಯಕತ್ವದಲ್ಲಿ ಕರ್ನಾಟಕದ ದಿನಗೂಲಿ ನೌಕರರು ಪಟ್ಟು ಬಿಡದೆ ಹೋರಾಡಿದ ಫಲವಾಗಿ ಸರ್ವೋಚ್ಚ ನ್ಯಾಯಾಲಯ ೧೯೯೦ನೇ ಫೆಬ್ರುವರಿ ೨೩ರಂದು ಇಡೀ ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ “೧೦ ವರ್ಷ ಕೆಲಸ ಮಾಡಿದ ದಿನಗೂಲಿ ನೌಕರರನ್ನು ಖಾಯಂ ಮಾಡಬೇಕು” ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿತು. ಈ ಐತಿಹಾಸಿಕ ತೀರ್ಪು ನೀಡಿದವರು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಾಗಿದ್ದ ರಂಗನಾಥ ಮಿಶ್ರಾ. ಅವರು ಬಸವತತ್ತ್ವವನ್ನು ಮೆಚ್ಚಿಕೊಂಡವರಾಗಿದ್ದರು. (೧೯೮೬ರಲ್ಲಿ ಮಹಾದೇವ ಹೊರಟ್ಟಿ ಅವರ ಅಧ್ಯಕ್ಷತೆಯಲ್ಲಿ ಪ್ರಾರಂಭಿಸಿದ “ಬಸವ ಶಾಂತಿ ಯಾತ್ರೆ” ಮೂಲಕ ಏರ್ಪಡಿಸಿದ್ದ ಬಸವ ಕಲ್ಯಾಣ ಮತ್ತು ಉಳವಿ ಕ್ಷೇತ್ರಗಳ ಸಮಾರಂಭಗಳಲ್ಲಿ ಕೂಡ ರಂಗನಾಥ ಮಿಶ್ರಾ ಅವರು ಭಾಗವಹಿಸಿ ಬಸವಣ್ಣನವರ ಕುರಿತು ಮಾತನಾಡಿದ್ದರು.)
ಈ ತೀರ್ಪಿನ ಪ್ರಕಾರ ರಾಜ್ಯ ಸರ್ಕಾರ ೬೬ ಸಾವಿರ ದಿನಗೂಲಿ ನೌಕರರನ್ನು ಖಾಯಂ ಮಾಡಿತು. ರಾಜ್ಯದ ದಿನಗೂಲಿ ನೌಕರರ ಪರವಾಗಿ ಬಂದ ಈ ತೀರ್ಪಿನಿಂದ ದೇಶದ ೨೦ ಲಕ್ಷ ದಿನಗೂಲಿ ನೌಕರರಿಗೆ ಲಾಭವಾಯಿತು!
ದಿನಗೂಲಿ ನೌಕರರು ಸನ್ಮಾನಿಸಿ ಅರ್ಪಿಸಿದ ಹಮ್ಮಿಣಿಯಿಂದ ಶರ್ಮಾ ಅವರು ಹುಬ್ಬಳ್ಳಿಯ ಗೋಕುಲರಸ್ತೆ ಬಳಿ ೧೦ ಎಕರೆ ಜಮೀನು ಖರೀದಿಸಿ “ವಿಶ್ವ ಶ್ರಮ ಚೇತನ” ಕ್ಯಾಂಪಸ್ ನಿರ್ಮಿಸಿದರು. ಅದು ಆರೋಗ್ಯ, ಶಿಕ್ಷಣ, ಸಂಸ್ಕೃತಿ ಮತ್ತು ಸಾಹಿತ್ಯ ಕೇಂದ್ರವಾಗಿ ಬೆಳೆದು ನಿಂತಿದೆ.
ಕಾಲೇಜ್ ಆಫ್ ಕಂಪ್ಯೂಟರ್ ಅಪ್ಲಿಕೇಷನ್ಸ್, ಪುರೋಗಾಮಿ ಸಾಹಿತ್ಯ ಪ್ರಕಾಶನ, ಆಫ್‌ಸೆಟ್ ಮುದ್ರಣ ಹಾಗೂ ಪ್ರಕಾಶನ ಸಂಸ್ಥೆ, ಔದ್ಯೋಗಿಕ ತರಬೇತಿ ಕೇಂದ್ರ, ಶಿಶುವಿಹಾರ, ಪ್ರಾಥಮಿಕ ಶಾಲೆ, ಪ್ರೌಢಶಾಲೆ, ನಿಸರ್ಗ ಚಿಕಿತ್ಸಾಲಯ ಹಾಗೂ ಯೋಗ ವಿಜ್ಞಾನ ಕೇಂದ್ರ, ಕಲ್ಯಾಣ ಸಭಾಭವನ, ಬೇಂದ್ರೆ ಸ್ಮಾರಕ, ದ.ರಾ. ಬೇಂದ್ರೆ ಸಂಶೋಧನಾ ಸಮುಚ್ಚಯ, ದ.ರಾ. ಬೇಂದ್ರೆ ಸಂಗೀತ ಅಕಾಡೆಮಿ ಮುಂತಾದ ಸಾಮಾಜಿಕ ಅಭಿವೃದ್ಧಿ ಸಂಸ್ಥೆಗಳಿಂದ “ವಿಶ್ವ ಶ್ರಮ ಚೇತನ” ಕ್ಯಾಂಪಸ್ ಕಂಗೊಳಿಸುತ್ತಿದೆ.
ಶರ್ಮಾ ಅವರು ಮಾಲಿಕರ ಆ ಸ್ಥಳವನ್ನು ಕಾರ್ಮಿಕರ ಹಣದಿಂದ ಪಡೆದದ್ದು ಹೆಮ್ಮೆಯ ಸಂಗತಿಯಾಗಿದೆ. ಹಾಗೆ ಪಡೆದ ಸ್ಥಳವನ್ನು ಕಾರ್ಮಿಕರ ಮತ್ತು ಒಟ್ಟಾರೆ ಜನಸಾಮಾನ್ಯರ ಉತ್ತಮ ಭವಿಷ್ಯಕ್ಕಾಗಿ ಶ್ರದ್ಧೆಯಿಂದ ಬಳಸುತ್ತ ಮಹತ್ತರವಾದುದನ್ನು ಸಾಧಿಸಿ ತೋರಿಸಿದ್ದಾರೆ.
ಎಂ.ಎ. (ರಾಜ್ಯಶಾಸ್ತ್ರ ಮತ್ತು ಸಮಾಜಶಾಸ್ತ್ರ), ಎಂ.ಎ. (ಇಂಗ್ಲಿಷ್), ಡಿ.ಪಿ.ಎ, ಎಲ್.ಎಲ್.ಎಂ, ಮತ್ತು ರಾಜ್ಯಶಾಸ್ತ್ರದಲ್ಲಿ ಪಿಎಚ್.ಡಿ. ಪಡೆದ ಡಾ. ಕೆ.ಎಸ್. ಶರ್ಮಾ ಅವರನ್ನು ೧೯೭೫ರಿಂದ ಬಲ್ಲೆ. ನಾನು ಅವರನ್ನು ಮೊದಲ ಬಾರಿಗೆ ಭೇಟಿಯಾದದ್ದು ಹುಬ್ಬಳ್ಳಿಯ ಜೆ.ಎಸ್.ಎಸ್. ಸಕ್ರಿ ಕಾನೂನು ಮಹಾವಿದ್ಯಾಲಯದಲ್ಲಿ ಎಂಬ ನೆನಪು. ಅಲ್ಲಿ ಅವರು ಲಾ ಪ್ರೊಫೆಸರ್ ಆಗಿದ್ದರು. ಆಗ ನಾನು ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಭಾಷಾವಿಜ್ಞಾನದ ವಿದ್ಯಾರ್ಥಿಯಾಗಿದ್ದೆ. ವಿದ್ಯಾರ್ಥಿ ಸಂಘಟನೆಯಾದ ಎ.ಐ.ಎಸ್.ಎಫ್. ಅನ್ನು ವಿಶ್ವವಿದ್ಯಾಲಯದಲ್ಲಿ ಮೊದಲ ಬಾರಿಗೆ ಸಂಘಟಿಸಿದ್ದೆ. ಆದರೆ ಎಸ್.ಎಫ್.ಐ. ಸಂಘಟನೆಯ ನಾಯಕರಾದ ಕಾಮ್ರೇಡ್ ವಿ.ಎನ್. ಹಳಕಟ್ಟಿ ಮತ್ತು ಇತರ ಸಂಗಾತಿಗಳ ಜೊತೆ ಹಾರ್ದಿಕ ಸಂಬಂಧವಿಟ್ಟುಕೊಂಡು ಒಂದಾಗಿ ವಿದ್ಯಾರ್ಥಿಗಳ ಹಕ್ಕುಗಳಿಗಾಗಿ ಹೋರಾಟ ಮಾಡುತ್ತಿದ್ದೆವು.
ಅಪ್ಪಾಸಾಹೇಬ ಯರನಾಳ, ಮೋಹನ ಹಿಪ್ಪರಗಿ, ರುದ್ರಪ್ಪ ಕಾಯಿ, ಮುಂತಾದ ಎ.ಐ.ಎಸ್.ಎಫ್. ಗೆಳೆಯರು ಮತ್ತು ಹಳಕಟ್ಟಿ, ಹದ್ಲಿ, ಹಾಗೂ ಇತರ ಎಸ್.ಎಫ್.ಐ. ಗೆಳೆಯರಿಗೆ ಡಾ. ಕೆ.ಎಸ್. ಶರ್ಮಾ ಮತ್ತು ಆಗ ಧಾರವಾಡ ಕೃಷಿ ಕಾಲೇಜಿನಲ್ಲಿ ಸೈಕಾಲಾಜಿ ಪ್ರೊಫೆಸರ್ ಆಗಿದ್ದ ಡಾ. ಬಿ.ಕೃಷ್ಣಮೂರ್ತಿ ಅವರು ಮಾರ್ಗದರ್ಶಿಗಳಂತೆ ಇದ್ದರು. ನಾನು ಅವಕಾಶ ಸಿಕ್ಕಾಗಲೆಲ್ಲ ಇವರ ಜೊತೆ ಕಮ್ಯುನಿಜಂ ಬಗ್ಗೆ ಚರ್ಚಿಸುತ್ತಿದ್ದೆ.
ಕೃಷ್ಣಮೂರ್ತಿ ಅವರ ಸಾಮಾಜಿಕ ಮನೋವಿಜ್ಞಾನದ ವಿಚಾರಗಳು ಮತ್ತು ಶರ್ಮಾ ಅವರ ಹೋರಾಟದ ಚಿಂತನಾ ಕ್ರಮ ನನಗೆ ಬಹಳ ಹಿಡಿಸುತ್ತಿದ್ದವು. ಶರ್ಮಾ ಅವರು ಪ್ರಖರ ಭಾಷಣಕಾರರು. ಅವರು ತಮ್ಮ ಸೈದ್ಧಾಂತಿಕ ಚಿಂತನೆಗಳನ್ನು ಮನಂಬುಗುವಂತೆ ತಿಳಿಸುವ ಸಾಮರ್ಥ್ಯವುಳ್ಳವರು. ಅವರ ಮಾತಿನಲ್ಲಿ ಅಂಕಿ ಅಂಶಗಳ ಜೊತೆ ಖಚಿತತೆ ಇದೆ.
‘ನ್ಯಾಯನಿಷ್ಠುರಿ, ಲೋಕವಿರೋಧಿ, ಶರಣನಾರಿಗೂ ಅಂಜುವವನಲ್ಲʼ ಎಂಬಂಥ ವ್ಯಕ್ತಿತ್ವ ಅವರದು. ಹೀಗೆ ಮಾತನಾಡಿದರೆ ಆಡಳಿತ ವರ್ಗಕ್ಕಾಗಲೀ ರಾಜ್ಯಶಕ್ತಿಗಾಗಲೀ ತಮ್ಮ ಬಗ್ಗೆ ಯಾವ ಭಾವನೆ ಮೂಡಬಹುದು; ಅದರಿಂದ ತಮಗೆ ಯಾವ ತೊಂದರೆಯಾಗಬಹುದು ಎಂಬ ಲೆಕ್ಕಾಚಾರವನ್ನು ಅವರು ಎಂದೂ ಹಾಕಿದವರಲ್ಲ. ಮನುಷ್ಯರ ಬಗ್ಗೆ ಇರುವ ಅವರ ಕಾಳಜಿಯೆ ಅಂಥದ್ದು. ಆ ಕಾಲದಲ್ಲಿ ಅವರು ಒಂದು ರೀತಿಯ ಏಕಾಂಗವೀರರಾಗಿದ್ದರು. ಸದಾ ಕ್ರಿಯಾಶೀಲವಾಗಿರುವ ಅವರ ವ್ಯಕ್ತಿತ್ವ ನನ್ನಂಥವರ ಮೇಲೆ ಆಳವಾದ ಪರಿಣಾಮ ಬೀರಿತು. ಎಷ್ಟೇ ಕಷ್ಟಕಾರ್ಪಣ್ಯಗಳು ಬಂದರೂ ಎದೆಗುಂದದೆ ಮುನ್ನಡೆಯುವ ಛಲವನ್ನು ಸಾಧಿಸಲು ಸಹಕಾರಿಯಾಯಿತು.
ವ್ಯಕ್ತಿಗತವಾಗಿ ಶರ್ಮಾಜಿ ಬಹಳ ಸೌಮ್ಯ ಸ್ವಭಾವದವರು. ಎಲ್ಲರನ್ನೂ ಸಮಾನವಾಗಿ ಗೌರವದಿಂದ ಕಾಣುವ ಗುಣವುಳ್ಳವರು. ಗುಣಗ್ರಾಹಿಗಳು. ವ್ಯಕ್ತಿ ಸಣ್ಣವನಿರಲಿ ದೊಡ್ಡವನಿರಲಿ ಸಲಹೆ ಬಯಸಿ ಬಂದಾಗ, ಅವರ ಕಣ್ಣಲ್ಲಿ ಇಬ್ಬರೂ ಸಮಾನರು. ಎಂಥ ಪ್ರಸಂಗದಲ್ಲೂ ತಾಳ್ಮೆಯನ್ನು ಕಳೆದುಕೊಳ್ಳದಂಥ ವ್ಯಕ್ತಿತ್ವ. ಯಾರ ಮನಸ್ಸಿಗೂ ನೋವಾಗದಂತೆ ಸತ್ಯದ ಪ್ರತಿಪಾದನೆ ಮಾಡುವ ಅಗಾಧ ಶಕ್ತಿ ಅವರಲ್ಲಿದೆ. ಅವರು ಸಿಡಿಮಿಡಿಗೊಳ್ಳುವುದನ್ನು ನಾನು ನೋಡಲೇ ಇಲ್ಲ. ಅವರಿಗೆ ವಿಶ್ರಾಂತಿ ಎಂಬುದೇ ಗೊತ್ತಿಲ್ಲ. ಒಂದು ಕಾರ್ಯದಿಂದ ಇನ್ನೊಂದು ಕಾರ್ಯದಲ್ಲಿ ತೊಡಗಿಕೊಳ್ಳುವುದೇ ಅವರಿಗೆ ವಿಶ್ರಾಂತಿ.
ಅವರ ಕಾರ್ಯಕ್ಷೇತ್ರಗಳು ಅನೇಕ. ಅಧ್ಯಯನ, ಅಧ್ಯಾಪನ, ಉಪನ್ಯಾಸ, ಕಾನೂನು ಸಲಹೆ, ಸಂಘಟನೆ, ಹೋರಾಟ, ಯುವಕರಿಗೆ ಮತ್ತು ದುಡಿಯುವ ಜನರಿಗೆ ಮಾರ್ಗದರ್ಶನ, ವಿವಿಧ ವಿಷಯಗಳಿಗೆ ಸಂಬಂಧಿಸಿದ ಚಿಂತನಕಮ್ಮಟ, ವಿಚಾರ ಸಂಕಿರಣ, ಸಾಹಿತ್ಯ ರಚನೆ, ಪತ್ರಿಕೋದ್ಯಮ ಹೀಗೆ ಅವರು ಹಲವು ಹದಿನೆಂಟು ರೀತಿಯ ಕಾರ್ಯಗಳಲ್ಲಿ ತಲ್ಲೀನರಾಗಿರುವವರು. ಈ ಇಳಿ ವಯಸ್ಸಿನಲ್ಲೂ ಅವರ ಚಿಂತನೆಯ ಕೇಂದ್ರ ಶ್ರಮಿಕರೇ ಆಗಿದ್ದಾರೆ.
ಡಾ. ಕೆ.ಎಸ್. ಶರ್ಮಾ ಅವರು ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ೩೨ ಕೃತಿಗಳನ್ನು ರಚಿಸಿದ್ದಾರೆ. ಅವರ ಬರವಣಿಗೆ ಕೂಡ ವೈವಿಧ್ಯಮಯವಾಗಿದೆ. ‘ಮಾರ್ಕ್ಸ್ ಮತ್ತು ಮಾರ್ಕ್ಸವಾದʼ, ‘ಲೆನಿನ್ – ಗಾಂಧಿʼ, ‘ಲೆನಿನ್‌ವಾದ – ಗಾಂಧಿವಾದʼ, ‘ಕ್ರಾಂತಿ ಪ್ರತಿಕ್ರಾಂತಿʼ ಮತ್ತು ‘ಹೋಚಿಮಿನ್ʼ ಕೃತಿಗಳು ಮಾರ್ಕ್ಸವಾದದ ಬೆಳವಣಿಗೆ ಮತ್ತು ದೇಶೀ ಗಾಂಧೀವಾದದ ಮುಖಾಮುಖಿಯ ಪರಿಚಯ ಮಾಡಿಕೊಡುತ್ತವೆ. ‘ಸಮಾಜವಾದಿ ಮಹಿಳೆʼ ಮತ್ತು ‘ಮಹಿಳಾ ವಿಮೋಚನೆʼಯಂಥ ಕೃತಿಗಳು ಐದು ದಶಕಗಳಷ್ಟು ಹಿಂದೆಯೆ ಮಹಿಳೆಯ ಸ್ಥಿತಿಗತಿಗಳ ಕುರಿತು ನಮ್ಮನ್ನು ಎಚ್ಚರಿಸಿವೆ. ಅವರು ನಾಟಕ ಮತ್ತು ಕವನ ಸಂಕಲನಗಳನ್ನೂ ಪ್ರಕಟಿಸಿದ್ದಾರೆ. ಡಾ. ಕೆ. ರಾಘವೇಂದ್ರರಾವ್ ಮತ್ತು ಡಾ. ವಾಮನ್ ಬೇಂದ್ರೆ ಅವರ ಜೊತೆ ಸೇರಿ ಬೇಂದ್ರೆ ಕವನಗಳನ್ನು ಇಂಗ್ಲಿಷ್‌ಗೆ ಅನುವಾದ ಮಾಡಿದ್ದಾರೆ. ಸೋವಿಯತ್ ಲ್ಯಾಂಡ್ ನೆಹರೂ ಅವಾರ್ಡ್ ಸೇರಿದಂತೆ ಎಂಟು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ‘ಶ್ರಮಚೇತನʼ, ‘ದಿನಗೂಲಿ ದಿನಕರʼ ಮುಂತಾದ ಅಭಿನಂದನಾ ಗ್ರಂಥಗಳು ಅವರ ವ್ಯಕ್ತಿತ್ವಕ್ಕೆ ಕನ್ನಡಿ ಹಿಡಿಯುತ್ತವೆ.
ಬೇಂದ್ರೆ ಅವರನ್ನು ಶರ್ಮಾ ಅವರು ದಾರ್ಶನಿಕವಾಗಿ ಅರ್ಥೈಸಿದ ರೀತಿ ಅನನ್ಯವಾಗಿದೆ. ಬೇಂದ್ರೆ ಕಾವ್ಯದ ಒಳಜಗತ್ತಿನಲ್ಲಿರುವ ಸಮಾನತೆ, ಮಾನವ ಘನತೆ, ವೈಜ್ಞಾನಿಕ ಮನೋಭಾವ, ಜಾತಿ, ಮತಧರ್ಮಗಳನ್ನು ಮೀರಿದ ವಿಶ್ವಮಾನವತ್ವವನ್ನು ಅವರು ಕಾಣುವ ಪರಿ ಕಂಡು ಬೆರಗಾಗಿದ್ದೇನೆ. ನೆಲದ ಸಂಸ್ಕೃತಿಯನ್ನು ವಿಶ್ವಸಂಸ್ಕೃತಿಯ ಜೊತೆಗೆ ಬೆಸೆಯಬಲ್ಲವರಿಗೆ ಮಾತ್ರ ಇದು ಸಾಧ್ಯ.
ದೇಶೀ ನೆಲೆಯಲ್ಲಿ ನಿಂತು ಗತಿತಾರ್ಕಿಕ ಭೌತಿಕವಾದದ ಪ್ರಜ್ಞೆಯೊಂದಿಗೆ ಬೇಂದ್ರೆ ಪ್ರತಿಭೆಯನ್ನು ಅರ್ಥೈಸುವ ಅವರ ವಿಧಾನ; ಬೇಂದ್ರೆ ಸಾಹಿತ್ಯದ ಮರುಮೌಲ್ಯಮಾಪನಕ್ಕೆ ಒತ್ತಾಯಿಸುತ್ತದೆ. ಶತಮಾನದ ಹಿಂದೆ ಬೇಂದ್ರೆಯವರು ಬರೆದ ‘ಹುಬ್ಬಳ್ಳಿಯಾಂವʼ ಕವನ ಬಂಡವಾಳಶಾಹಿ ವ್ಯವಸ್ಥೆಯ ಆಗಮನವನ್ನು ತಿಳಿಸುತ್ತದೆ. ‘ಕುರುಡು ಕಾಂಚಾಣʼ ಕವನ ಬಂಡವಾಳದ ಅಂತ್ಯವನ್ನು ಸೂಚಿಸುತ್ತದೆ. ‘ಪುಟ್ಟ ವಿಧವೆʼ, ‘ಅನ್ನಾವತಾರʼ, ‘ಅನ್ನ ಬೇಕುʼ, ‘ಸೀಮೋಲ್ಲಂಘನʼ ಮುಂತಾದ ಕವನಗಳು ಧರ್ಮದ ಕರ್ಮಠತನ, ಜನಸಮುದಾಯದ ಸಂಕಷ್ಟ ಮತ್ತು ಆಶಾವಾದಕ್ಕೆ ಸಾಕ್ಷಿಯಾಗಿವೆ. ದ.ರಾ. ಬೇಂದ್ರೆಯವರ ಸಮಗ್ರ ಸಾಹಿತ್ಯ ಸಂಪುಟಗಳನ್ನು ಶರ್ಮಾ ಅವರು ಪ್ರಕಟಿಸಿದ್ದಾರೆ. ಹೀಗೆ ನನಗೆ ಬೇಂದ್ರೆ ಕುರಿತು ಚಿಂತಿಸಲು ಪ್ರೇರಣೆ ನೀಡಿದವರು ಡಾ. ಕೆ.ಎಸ್. ಶರ್ಮಾ ಅವರು.
‘ಡಾ. ಕೆ.ಎಸ್. ಶರ್ಮಾ ಇನ್‌ಸ್ಟಿಟ್ಯೂಟ್ ಆಫ್ ನೇಚರೋಪತಿ ಅಂಡ್ ಯೋಗಿಕ್ ಸೈನ್ಸಿಸ್ʼ ಸಂಸ್ಥೆಯ ಉದ್ಘಾಟನೆಗೆ ಶರ್ಮಾ ಅವರು ನನ್ನನ್ನೂ ಕರೆದಿದ್ದರು. ಆಗ ಅಲ್ಲಿ ಸಹಸ್ರಾರು ಜನ ಖಾಯಂಗೊಂಡ ಸರ್ಕಾರಿ ದಿನಗೂಲಿ ನೌಕರರು ‘ಮಹಾತ್ಮಾ ಶರ್ಮಾ ಅವರಿಗೆ ಜಯವಾಗಲಿʼ ಎಂದು ಘೋಷಣೆ ಕೂಗುತ್ತಿದ್ದರು. ಅದು ನಿಜವಾಗಿಯೂ ಕಾರ್ಮಿಕ ವಿಜಯವೇ ಆಗಿತ್ತು. ಹೊಸ ಬದುಕನ್ನು ಪಡೆದ ಕಾರ್ಮಿಕರ ಪಾಲಿಗೆ ಶರ್ಮಾ ಅವರು ಮಹಾತ್ಮರೇ ಆಗಿದ್ದರು. ಇದೇ ಸಪ್ಟೆಂಬರ್ ೩೦ಕ್ಕೆ ಅವರು ೯೧ನೇ ವರ್ಷಕ್ಕೆ ಕಾಲಿಡುತ್ತಾರೆ. ಡಾ. ಕೆ.ಎಸ್. ಶರ್ಮಾ ಅವರು ನೂರ್ಕಾಲ ಬಾಳುತ್ತ ನಮಗೆಲ್ಲ ಸ್ಫೂರ್ತಿಯ ಚಿಲುಮೆಯಾಗಿ ಇರಲಿ.
ಕನ್ನಡದ ಹಿರಿಯ ಲೇಖಕರು ಮತ್ತು ಪತ್ರಕರ್ತರು. ಬಂಡಾಯ ಕಾವ್ಯದ ಮುಂಚೂಣಿಯಲ್ಲಿದ್ದವರು. ವಿಜಾಪುರ ಮೂಲದ ಇವರು ಧಾರವಾಡ ನಿವಾಸಿಗಳು. ಕಾವ್ಯ ಬಂತು ಬೀದಿಗೆ (ಕಾವ್ಯ -೧೯೭೮), ಹೊಕ್ಕಳಲ್ಲಿ ಹೂವಿದೆ (ಕಾವ್ಯ), ಸಾಹಿತ್ಯ ಮತ್ತು ಸಮಾಜ, ಅಮೃತ ಮತ್ತು ವಿಷ, ನೆಲ್ಸನ್ ಮಂಡೇಲಾ, ಮೂರ್ತ ಮತ್ತು ಅಮೂರ್ತ, ಸೌಹಾರ್ದ ಸೌರಭ, ಅಹಿಂದ ಏಕೆ? ಬಸವಣ್ಣನವರ ದೇವರು, ವಚನ ಬೆಳಕು, ಬಸವ ಧರ್ಮದ ವಿಶ್ವಸಂದೇಶ, ಬಸವಪ್ರಜ್ಞೆ, ನಡೆ ನುಡಿ ಸಿದ್ಧಾಂತ, ಲಿಂಗವ ಪೂಜಿಸಿ ಫಲವೇನಯ್ಯಾ, ಜಾತಿ ವ್ಯವಸ್ಥೆಗೆ ಸವಾಲಾದ ಶರಣರು, ಶರಣರ ಸಮಗ್ರ ಕ್ರಾಂತಿ, ಬಸವಣ್ಣ ಮತ್ತು ಅಂಬೇಡ್ಕರ್, ಬಸವಣ್ಣ ಏಕೆ ಬೇಕು?, ಲಿಂಗವಂತ ಧರ್ಮದಲ್ಲಿ ಏನುಂಟು ಏನಿಲ್ಲ?, ದಾಸೋಹ ಜ್ಞಾನಿ ನುಲಿಯ ಚಂದಯ್ಯ (ಸಂಶೋಧನೆ) ಮುಂತಾದವು ಅವರ ಪ್ರಕಟಿತ ಕೃತಿಗಳಾಗಿವೆ. ಕರ್ನಾಟಕ ಸರ್ಕಾರದ ರಾಷ್ಟ್ರೀಯ ಬಸವ ಪುರಸ್ಕಾರ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಮಾಧ್ಯಮ ಅಕಾಡೆಮಿ ಗೌರವ ಪ್ರಶಸ್ತಿ ಮುಂತಾದ ೫೨ ಪ್ರಶಸ್ತಿಗಳಿಗೆ ಭಾಜನರಾದ ರಂಜಾನ್ ದರ್ಗಾ ಅವರು ಬಂಡಾಯ ಸಾಹಿತ್ಯ ಪರಂಪರೆಯ ಶಕ್ತಿಶಾಲಿ ಕವಿಗಳಲ್ಲಿ ಒಬ್ಬರು. ಅಮೆರಿಕಾ, ನೆದರ್‌ಲ್ಯಾಂಡ್ಸ್, ಲೆಬನಾನ್, ಕೆನಡಾ, ಫ್ರಾನ್ಸ್, ಆಸ್ಟ್ರೇಲಿಯಾ ಸೇರಿದಂತೆ ಇನ್ನೂ ಹಲವು ದೇಶಗಳಲ್ಲಿ ಶರಣ ಸಂಸ್ಕೃತಿ, ಶಾಂತಿ ಮತ್ತು ಮಾನವ ಏಕತೆ ಕುರಿತು ಉಪನ್ಯಾಸ ನೀಡಿದ್ದಾರೆ.