Advertisement
‘ದಿ ಫೈಯರ್’….: ಡಾ. ಶ್ರೀಪಾದ ಭಟ್‌ ಬರಹ

‘ದಿ ಫೈಯರ್’….: ಡಾ. ಶ್ರೀಪಾದ ಭಟ್‌ ಬರಹ

ವಸಾಹತುಶಾಹಿಯ ದೌರ್ಜನ್ಯಕ್ಕೆ ತೀವ್ರ ಬಲಿಯಾಗಿ ಅದರಿಂದ ಹೊರಬಂದು ಸ್ವತಂತ್ರ ವ್ಯಕ್ತಿತ್ವಕ್ಕಾಗಿ ನಡೆಸಿದ ಪ್ರಯತ್ನದ ಭಾಗವಾಗಿ ಇಂತಹ ಬರಹಗಳನ್ನು ನಾವು ಮುಖಾಮುಖಿಯಾಗುವುದು ಸಾಂಸ್ಕೃತಿಕ ಸ್ವರೂಪದಲ್ಲಿ ವಸಾಹತುಶಾಹಿಗೆ ಎದುರಾಗುವ ಒಂದು ಬಗೆ ಎಂದೇ ಈ ಪ್ರಯತ್ನವನ್ನು ನೋಡಬಹುದಾಗಿದೆ. ನಮ್ಮ ಸಂಸ್ಕೃತಿ, ಜೀವನ ವಿಧಾನಗಳನ್ನು ಸಂರಕ್ಷಿಸಿಕೊಳ್ಳುವ ಹೋರಾಟದ ನೆಲೆ ಭಾರತಕ್ಕೂ, ಲ್ಯಾಟಿನ್ ಅಮೇರಿಕಕ್ಕೂ ಒಂದೇ ಆಗಿದೆ ಎಂಬುದನ್ನು ತಜ್ಞರು ಈಗಾಗಲೇ ತಿಳಿಸಿಯಾಗಿದೆ.
ಸಂತೋಷ ಪಟ್ಲ ನಿರ್ದೇಶನದ ‘ದಿ ಫೈಯರ್’ ರಂಗ ಪ್ರಯೋಗದ ಕುರಿತು ಡಾ. ಶ್ರೀಪಾದ ಭಟ್‌ ಬರಹ

ಚರಿತ್ರೆಯೆಂದರೆ ಸಮಾಧಿಯಲ್ಲಿಯೋ, ಜೈಲಿನಲ್ಲಿಯೋ, ಮ್ಯೂಜಿಯಮ್ಮಿನಲ್ಲಿಯೋ ಇಡಬೇಕಾದುದಲ್ಲ; ಅದೂ ಉಸಿರಾಡಿಸುತ್ತದೆ, ನಿರಂತರ ಸೃಷ್ಟಿಸಲ್ಪಡುತ್ತದೆ, ಮರೆವಿನ ರೋಗದ ಬದಲು ಬೆಂಕಿಯ ನೆನಪೂ ಆಗಲು ಸಾಧ್ಯ ಎನ್ನುತ್ತಾನೆ ಲ್ಯಾಟಿನ್ ಅಮೆರಿಕಾದ ಸ್ಮೃತಿಯ ಕುರಿತು ಬರೆದ ಪ್ರಮುಖ ಬರಹಗಾರ ಎಡುವರ್ಡೋಗೆಲಿಯಾನೊ. ಆತನ ಪುಸ್ತಕದ ಹೆಸರು ‘ಮೆಮೊರಿ ಆಫ್ ಫೈಯರ್’. ಆತ ಅದನ್ನು ಬರೆದ ರೀತಿ ಮಾತ್ರ ನಮಗೆ ತೀರ ಹೊಚ್ಚ ಹೊಸದು. ಅದು ಕಾದಂಬರಿಯೋ, ಮಹಾಕಾವ್ಯವೋ, ದಾಖಲೆಯೋ ಹೀಗೆ ಯಾವುದೇ ಅಳತೆಗೂ ಒಗ್ಗದ, ಹಿಡಿಯಲಾರದ ಬಗೆ ಅದು. ಮಾಯಾ ವಾಸ್ತವ ಅನ್ನುವ ಹೆಸರಿನಲ್ಲಿಯೂ ಇದನ್ನು ಗುರುತಿಸುತ್ತಿದ್ದಾರೆ. ಅವನ ಈ ಕೃತಿ, ತೀವ್ರ ಅನುಕಂಪ ಮತ್ತು ಕುದಿವ ವ್ಯಂಗ್ಯದಿಂದ ಕೂಡಿದ್ದು, ನಾಟಕೀಯ ವರ್ತಮಾನಕಾಲದ ನಿರೂಪಣಾ ತಂತ್ರ ಅದಕ್ಕಿದೆ ಅನ್ನುತ್ತಾರೆ ಅದರ ಕೆಲಭಾಗಗಳನ್ನು ಬೆಂಕಿಯ ನೆನಪು ಎಂಬ ಹೆಸರಿನಲ್ಲಿ ಅನುವಾದಿಸಿದ ಕೆ.ಪಿ.ಸುರೇಶ್ ಅವರು. ಇತಿಹಾಸದ ನಗಣ್ಯ ಘಟನೆಗಳು, ನಿರ್ಲಕ್ಷಿತ ವ್ಯಕ್ತಿಗಳು, ಸಾಮಾನ್ಯರು ಹೇಳದೇ ಕೇಳದೇ ಗೇಟು ತಳ್ಳಿಕೊಂಡು ಬಂದು ಕೂತಂತಿರುವ ಇಲ್ಲಿಯ ಕೆಲವು ಘಟನೆಗಳನ್ನು ಸಂತೋಷ್ ಪಟ್ಲ ರಂಗಕ್ಕೆ ತಂದಿದ್ದಾರೆ.

ವಸಾಹತುಶಾಹಿಯ ದೌರ್ಜನ್ಯಕ್ಕೆ ತೀವ್ರ ಬಲಿಯಾಗಿ ಅದರಿಂದ ಹೊರಬಂದು ಸ್ವತಂತ್ರ ವ್ಯಕ್ತಿತ್ವಕ್ಕಾಗಿ ನಡೆಸಿದ ಪ್ರಯತ್ನದ ಭಾಗವಾಗಿ ಇಂತಹ ಬರಹಗಳನ್ನು ನಾವು ಮುಖಾಮುಖಿಯಾಗುವುದು ಸಾಂಸ್ಕೃತಿಕ ಸ್ವರೂಪದಲ್ಲಿ ವಸಾಹತುಶಾಹಿಗೆ ಎದುರಾಗುವ ಒಂದು ಬಗೆ ಎಂದೇ ಈ ಪ್ರಯತ್ನವನ್ನು ನೋಡಬಹುದಾಗಿದೆ. ನಮ್ಮ ಸಂಸ್ಕೃತಿ, ಜೀವನ ವಿಧಾನಗಳನ್ನು ಸಂರಕ್ಷಿಸಿಕೊಳ್ಳುವ ಹೋರಾಟದ ನೆಲೆ ಭಾರತಕ್ಕೂ, ಲ್ಯಾಟಿನ್ ಅಮೇರಿಕಕ್ಕೂ ಒಂದೇ ಆಗಿದೆ ಎಂಬುದನ್ನು ತಜ್ಞರು ಈಗಾಗಲೇ ತಿಳಿಸಿಯಾಗಿದೆ.

ಈ ಎಲ್ಲ ಹಿನ್ನೆಲೆಯಲ್ಲಿ ಸಂತೋಷರ ಈ ರಂಗಪ್ರಯತ್ನ ಸಕಾಲಿಕ ಮತ್ತು ಮಹತ್ವದ್ದು. ಸಿದ್ಧ ನಾಟಕದ ಯಾವ ಮಾದರಿಯನ್ನೂ ಅನುಕರಿಸಿದ ಇದರ ರಂಗಪಠ್ಯವೇ ರಂಗಪ್ರದರ್ಶನದ ಬಹುದೊಡ್ಡ ಸವಾಲು. ಮೂಲ ಪಠ್ಯದ ಸೃಷ್ಟಿಕಾರನೇ ಹೇಳಿಕೊಂಡ ಹಾಗೆ ‘ನಮ್ಮ ವಾಸ್ತವವನ್ನು ವಿಶ್ವಸನೀಯವಾಗಿ ಅಭಿವ್ಯಕ್ತಿಸಿಕೊಳ್ಳಬಲ್ಲ ಪಾರಂಪರಿಕ ವಿಧಾನಗಳೇ ಇಲ್ಲ’. ಅಂತೆಯೇ ಇಂತವುಗಳ ರಂಗಾಭಿವ್ಯಕ್ತಿಯಲ್ಲಿಯೂ ಬೇಲಿ ಹರಿದು, ಹೊಸ ಹಾದಿ ಸೃಷ್ಟಿಸಿಕೊಳ್ಳಬೇಕಾದ ಸೃಜನಶೀಲ ಒತ್ತಡವೂ ಇರುತ್ತದೆ. ಸಂತೋಷ್ ಈ ಹಾದಿಯಲ್ಲಿ ಹೆಜ್ಜೆ ಇಡುತ್ತಿದ್ದಾರೆ ಅನ್ನುವುದೇ ಸಂತಸದ ಸಂಗತಿ. ಪ್ರಜ್ಞೆಯ ಪರಿಧಿಯನ್ನು ವಿಸ್ತರಿಸ ಬಯಸುವ ಇಂತಹ ರಂಗಭಾಷೆಯ ಶೋಧ ಯಾವಕಾಲಕ್ಕೂ ಅಗತ್ಯವೇ ಮತ್ತು ನವೀನವೇ.

ಸುಮಾರು 10 ದೃಶ್ಯಗಳಲ್ಲಿ ಇದು ಹರಡಿಕೊಂಡಿದೆ. ಭೂಮಿ ಮತ್ತು ಭೂಮಿಜರ ಸೃಷ್ಟಿಪುರಾಣದ ಕತೆ ಮೊದಲ ಮೂರು ದೃಶ್ಯದಲ್ಲಿ ಹರಡಿಕೊಂಡಿದ್ದರೆ, ದೃಶ್ಯ 4 ರಲ್ಲಿ ಜೀವ ಮತ್ತು ಸಾವಿನ ಬಗ್ಗೆ, ಅಗೋಚರ ಶಕ್ತಿಗಳ ಬಗ್ಗೆ, ಒಂದೆಡೆ ಸ್ಥಾಯಿಯಾಗುತ್ತಲೇ ಕೊಳೆಯ ತೊಡಗುವ ಬದುಕಿನ ಬಗ್ಗೆ, ಕನಸು ಮತ್ತು ಎಚ್ಚರದ ಮಾತುಗಳಿವೆ. ದೃಶ್ಯ 5, ಕೋಲಂಬಸ್‌ನ ಭೂಶೋಧ ಮತ್ತು ವಸಾಹತು ಆಕ್ರಮಣದ ಮಾದರಿಯಬಗ್ಗೆ ಮಾಹಿತಿ ನೀಡಿದರೆ ದೃಶ್ಯ 6 ಮತ್ತು 7, ಧರ್ಮ ಮತ್ತು ಪ್ರಭುತ್ವದ ಅನೈತಿಕ ಸಂಬಂಧಗಳ ಬಗ್ಗೆ ಹಾಗೂ ಅದರಿಂದಾಗುವ ಜೀವಹಿಂಸೆಗಳ ಮಾದರಿಗಳನ್ನು ಕಾಣಿಸುತ್ತದೆ. ಜತೆಗಿರಬೇಕಾದ ಒತ್ತಡದಲ್ಲಿ ಸೃಷ್ಟಿಯಾಗುವ ಸಂಭ್ರಮ ಮತ್ತು ಶಂಕೆ, ಸಹಬಾಳ್ವೆ ಮತ್ತು ಜಗಳ, ಖಾಸಗಿ ಆಸ್ತಿಯ ಉಗಮದಿಂದಾದ ನರಳಾಟ ಇವುಗಳನ್ನು ದೃಶ್ಯ 8 ಮನಗಾಣಿಸಿದರೆ, ದೃಶ್ಯ 9 ಮತ್ತು 10, ಮಹಿಳೆಯನ್ನು ಆಸ್ತಿಯ ಭಾಗವಾಗಿಸಿಕೊಂಡ ವಿಧಾನ ಹಾಗೂ ಪ್ರತಿರೋಧದ ನೆಲೆಗಳನ್ನು ಕಾಣಿಸುತ್ತದೆ.

ಈ ಎಲ್ಲವೂ ಬಿಡಿಬಿಡಿಯಾಗಿ ಕಾಣುವ ಇಡಿಯೊಂದರ ತುಣುಕುಗಳು. ಇದನ್ನು ಜೋಡಿಸಿ ನೋಡಿಕೊಳ್ಳುವ ಜವಾಬ್ದಾರಿಯನ್ನು ಇಂತಹ ಪ್ರಯೋಗಗಳು ಪ್ರೇಕ್ಷಕರಿಗೇ ಬಿಡುತ್ತದೆ. ಅದಕ್ಕಾಗಿಯೇ ಇಲ್ಲಿ ದೃಶ್ಯ ಪ್ರತಿಮೆಗಳನ್ನು ಹೆಣೆಯಲಾಗಿದೆ. ಅವು ಉಂಟು ಮಾಡುವ ಪರಿಣಾಮದ ನೆಲೆಯಲ್ಲಿ ನೋಡುಗರಲ್ಲಿ ಕಥನವೊಂದು ಸೃಷ್ಟಿಯಾಗಬೇಕೆಂದು ಇದು ಬಯಸುತ್ತದೆ.

ಸಂತೋಷ್ ಇಲ್ಲಿ ಮಣ್ಣು ಮತ್ತು ಅದನ್ನು ಸುತ್ತುವರಿದಿರುವ ಸರಹದ್ದನ್ನು, (ಅದಕ್ಕಾಗಿ ಅವರು ಬೋಟ್‌ಗಳನ್ನು ಬಿಗಿಯುವ ಹಗ್ಗವನ್ನು ಬಳಸಿದ್ದಾರೆ. ನಾಟಕದ ವಸ್ತು ವಿಷಯದಲ್ಲಿ ಬೋಟ್ ಹಾಸುಹೊಕ್ಕಾಗಿದೆ. ಈ ಕಾರಣಕ್ಕಾಗಿಯೂ ಇದು ಇಲ್ಲಿ ಬೇರೆಯ ಅರ್ಥವನ್ನೂ ತರಬಲ್ಲದು) ಅಂತೆಯೇ ಬೊಂಬು ಮತ್ತು ಬಟ್ಟೆಗಳಂತಹ ರಂಗಪರಿಕರಗಳನ್ನು ತಮ್ಮ ವಿನ್ಯಾಸದಲ್ಲಿ ತಂದಿದ್ದಾರೆ. ಸಾಂಕೇತಿಕವೂ ಮತ್ತು ಪರಿಣಾಮಕಾರಿಯೂ ಆದ ಇದರ ಕಾಣ್ಕೆ ಅಂತೆಯೇ ಅದನ್ನು ಬೆಳಗಬಲ್ಲ ಸೂಕ್ತ ಬೆಳಕಿನ ನಿರ್ವಹಣೆ ಈ ರಂಗಪ್ರಯೋಗಕ್ಕೆ ಸಾರ್ಥಕವಾಗಿಯೇ ದಕ್ಕಿದೆ.

ದೇಹವನ್ನು ಪ್ರಧಾನ ಅಭಿವ್ಯಕ್ತಿಯಾಗಿ ಬಳಸಿದ ಈ ರಂಗ ಪ್ರಯೋಗಕ್ಕೆ ನಟವರ್ಗ ತಮ್ಮ ಬೆವರು ಮತ್ತು ಪ್ರೀತಿಯನ್ನು ಸಮನಾಗಿ ಸುರಿಸಿದೆ. ಅದರ ಕಾವು ಪ್ರೇಕ್ಷಕರನ್ನು ತಟ್ಟುವಷ್ಟು ಗಾಢವೂ ಆಗಿದೆ. ವೃತಿಪರ ನಟರಲ್ಲದ ಆದರೆ ಕಲಾತ್ಮಕ ಅಭಿವ್ಯಕ್ತಿಗೆ ಹಂಬಲಿಸಿದ ನಟರನ್ನು ಈ ಕುರಿತು ತರಬೇತಿ ನೀಡಿದ ನಿರ್ದೇಶಕರಿಗೆ ಅಭಿನಂದನೆ ಸಲ್ಲಲೇ ಬೇಕು.

ನಿಜ. ಸಂಬಂಧವಿಲ್ಲದಂತೆ ಹರಡಿಕೊಂಡಿರುವ ದೃಶ್ಯದ ಕಥೆಗಳಲ್ಲಿ ಒಂದು ಸಾತತ್ಯವನ್ನು ಕಾಣಿಸಲು ನಿರ್ದೇಶಕ ಪ್ರಯತ್ನಿಸಲೇಬೇಕು. ಒಂದು ದೃಶ್ಯ ಇನ್ನೊಂದಕ್ಕೆ ‘ಖೋ’ ಕೊಡುವ ಮಾದರಿ ಇದಕ್ಕೆ ಬೇಕು. ಅದು ಕಥನಗಳು ಸಂದಿಸುವ ಬಿಂದುಗಳನ್ನು ಜೋಡಿಸಿಕೊಳ್ಳಲು ನೆರವಾಗಬಲ್ಲದು. ಆಗ ಪ್ರೇಕ್ಷಕರನ್ನೂ ತಮ್ಮೊಂದಿಗೆ ಕರೆದೊಯ್ಯಲು ನಾಟಕಕ್ಕೆ ಸಾಧ್ಯ. ಮೊದಲ ಮೂರು ದೃಶ್ಯಗಳು ಅನಗತ್ಯ ವಿಲಂಬಿತವಾಗಿದ್ದು ಆ ಕಾರಣದಿಂದಾಗಿ ಕ್ರಿಯೆಗಳ ಪುನರುಕ್ತಿಯಿಂದಾಗಿ ಪ್ರೇಕ್ಷಕರು ಸುಸ್ತಾದರು. ಕಥಾಭಾಗ ಪರಿಚಿತವಲ್ಲದ ಕಾರಣದಿಂದಾಗಿ ಕೆಲವು ರಂಗಕ್ರಿಯೆಗಳನ್ನು ಸಂಯೋಜಿಸಿ ಅದನ್ನು ಸಂವಹನ ಮಾಡಬೇಕಾಗುತ್ತದೆ. ಉದಾ: ಕೋಲಂಬಸ್‌ನ ಹಡಗು ಪ್ರಯಾಣದ ಚಲನೆಯ ಕ್ರಿಯೆಯಿಲ್ಲದೇ ಆತ ಇದ್ದಕ್ಕಿದ್ದಂತೆ ರಂಗದ ಮೇಲೆ ಬಂದು ಅಳುವ, ಹಾರುವ, ಭೂಮಿಯನ್ನು ಚುಂಬಿಸುವ ಕ್ರಿಯೆ ತೋರಿದರೆ ಅದು ಆತನ ರೋಮಾಂಚಿಕತೆಯ ಅಭಿವ್ಯಕ್ತಿಯಂತೆ ಕಾಣುವ ಬದಲು ಅವನು ಅನಗತ್ಯ ಹೊರಳಾಡಿದಂತೆ ಕಾಣುವುದು. ಸಂಗೀತ ಮತ್ತು ಹಲವು ಬಗೆಯ ಸದ್ದುಗಳು ಇವನ್ನು ಮನನೀಯವಾಗಿ ನಿರ್ವಹಿಸಬಹುದೇನೊ.

ಬದುಕಿನ ಸಂಭ್ರಮವನ್ನು ಕಾಣಿಸದೇ ನೋವನ್ನು ದಾಟಿಸಲಾಗದು. ಈ ನಿಟ್ಟಿನಲ್ಲಿ ಆರಂಭದಿಂದಲೇ ಕೊನೆಯ ದೃಶ್ಯದ ನೋವಿನ ಪರಿಣಾಮವನ್ನು ಕಾಣಿಸಹೊರಟಿರುವುದರಿಂದ ಏಕತಾನತೆ ಮತ್ತು ಏರು ದನಿಯ ಅಭಿವ್ಯಕ್ತಿ ಅನೇಕಸಾರಿ ಗದ್ದಲವೇ ಆಗಿಬಿಡುತ್ತದೆ. ನಟರು ತಮ್ಮ ಮೊದಲ ದೃಶ್ಯದಲ್ಲಿಯೇ ಕೊನೆಯ ದೃಶ್ಯದ ನೋವನ್ನು ಹೊತ್ತುಬಿಟ್ಟರೆ ಅವರಿಗೂ, ಪ್ರೇಕ್ಷಕರಿಗೂ ಸರ್ಪ್ರೈಸ್ ಎಲಿಮೆಂಟ್ ತಪ್ಪಿಹೋಗುತ್ತದೆ. ನಾಟಕದ ಅವಧಿಯೂ ತುಸು ದೀರ್ಘವೇ ಆಗಿದೆ. ಅದನ್ನೂ ಗಮನಿಸಬಹುದೇನೊ. ಈ ಕುತೂಹಲ ಮತ್ತು ರೋಚಕತೆಯನ್ನು ಉಳಿಸಿಕೊಳ್ಳುವುದು ಯಾವುದೇ ಆಟದ ಮುಖ್ಯ ನಿಯಮ. ಕೊನೆಗೂ ನಾಟಕವೆಂದರೆ ಅದೊಂದು ಆಟವೇ ತಾನೆ?

ಸಂತೊಷ್ ಈಗಾಗಲೇ ತಮ್ಮ ಸಾಮಾಜಿಕ ಬದ್ಧತೆಯ ಅರಿವಿನಿಂದ ತಮ್ಮನ್ನು ರಂಗದಲ್ಲಿ ಗುರುತಿಸಿಕೊಂಡವರು. ಸಾಮಾಜಿಕ ಅಸಮಾನ ಸಂಗತಿಗಳ ಬಗ್ಗೆ ತಮ್ಮ ಆಕ್ರೋಶವನ್ನು ಸಾಕಷ್ಟು ವಾಚ್ಯವಾಗಿಯೇ ಇದುವರೆಗೂ ಅಭಿವ್ಯಕ್ತಿಸಿದ್ದಾರೆ. ಈ ರಂಗ ಪ್ರಯೋಗವು ಅವರ ಸಾಮಾಜಿಕ ವಾಸ್ತವದ ಅಭಿವ್ಯಕ್ತಿಗೆ ಅಗತ್ಯ ಸೌಂದರ್ಯಾತ್ಮಕ ಅಭಿವ್ಯಕ್ತಿಯನ್ನು ಕಾಣಿಸುವ ಹಾದಿಯನ್ನು ಅವರಿಗೇ ಕಾಣುವಂತೆ ಮಾಡಿದೆ. ಒಂದು ಶೈಲಿ ನಮಗೆ ಒಗ್ಗಬೇಕಾದರೆ ಆ ಹಾದಿಯಲ್ಲಿ ಇನ್ನೊಂದಿಷ್ಟು ನಿರಂತರ ಪ್ರಯತ್ನ, ಮತ್ತಷ್ಟು ಅಗೆಯುವಿಕೆ ಅಗತ್ಯ. ಸಂತೋಷ್‌ಗೆ ಈ ಹಾದಿ ಒಗ್ಗಲಿ ಎಂಬ ಹಾರೈಕೆ ನನ್ನದು.

ಮಾರ್ಕ್ವೆಜ್ ಅಂತಾನೆ “ಚೆನ್ನಾಗಿ ಬರೆಯುವುದಷ್ಟೇ ಕ್ರಾಂತಿಕಾರಿ ಲೇಖಕನ ಕರ್ತವ್ಯ” ಎಂದು. ಚೆನ್ನಾಗಿ ನಾಟಕ ಮಾಡುವುದೇ ಕ್ರಾಂತಿಯಲ್ಲಿ ಪ್ರೀತಿ ಇಟ್ಟುಕೊಂಡ ರಂಗಕರ್ಮಿಯ ಕರ್ತವ್ಯ. ಆಲ್ ದಿ ಬೆಸ್ಟ್ ಸಂತೊಷ್.

(ನಾಟಕ: ದಿ ಫೈಯರ್, ಅಭಿನಯ: ಭೂಮಿಗೀತ ಸಾಂಸ್ಕೃತಿಕ ವೇದಿಕೆ ಪಟ್ಲ, ಪ್ರಯೋಗ: ಎಂ.ಜಿ.ಎಂ.ಕಾಲೇಜು ಉಡುಪಿ ದಿನಾಂಕ:7 ಜನವರಿ 2025, ಮೂಲ: ಎಡುವರ್ಡೋ ಗೆಲಿಯಾನೊ, ಕನ್ನಡಕ್ಕೆ: ಕೆ.ಪಿ.ಸುರೇಶ, ತುಳು ಅನುವಾದ: ಐ.ಕೆ.ಬೊಳುವಾರು, ರಂಗಪಠ್ಯ ಮತ್ತು ನಿರ್ದೇಶನ: ಸಂತೋಷ ಪಟ್ಲ)

About The Author

ಡಾ. ಶ್ರೀಪಾದ ಭಟ್

ಉತ್ತರ ಕನ್ನಡ ಜಿಲ್ಲೆಯ ರಂಗಭೂಮಿ ಎಂಬ ವಿಷಯದಲ್ಲಿ ಡಾಕ್ಟರೇಟ್ ಮಾಡಿರುವ ಶ್ರೀಪಾದ ಭಟ್, ಸಂಗೀತ, ಸಾಹಿತ್ಯ, ಶಿಕ್ಷಣ ಮತ್ತು ಜನಪದ ಕ್ಷೇತ್ರದಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡವರು. ದೆಹಲಿಯ ಎನ್ ಎಸ್ ಡಿ ಆಯೋಜಿಸಿದ ರಂಗಭಾರತ ಮಹೋತ್ಸವದಲ್ಲಿ ಅವರು ನಿರ್ದೇಶಿಸಿದ ಕರ್ಣಭಾರ ಮತ್ತು ಚಿತ್ರಾ ನಾಟಕ ಪ್ರದರ್ಶನ ಕಂಡಿವೆ. 'ಪಾಪು ಬಾಪು' ಸಾವಿರಕ್ಕೂ ಹೆಚ್ಚು ಪ್ರದರ್ಶನ ಕಂಡ ನಾಟಕ. ಸದಾನಂದ ಸುವರ್ಣ ಪ್ರಶಸ್ತಿ, ಮಂಜುನಾಥ ಉದ್ಯಾವರ ಪ್ರಶಸ್ತಿ ಸೇರಿದಂತೆ ಅನೇಕ ಪುರಸ್ಕಾರಗಳು ಅವರನ್ನು ಅರಸಿಕೊಂಡು ಬಂದಿವೆ.

1 Comment

  1. ಸುಧಾ ಆಡುಕಳ

    ಚಂದದ ಗ್ರಹಿಕೆ ಮತ್ತು ಸೂಕ್ಷ್ಮವಾದ ವಿಮರ್ಶೆ

    Reply

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ