ದೀಪಾವಳಿ ಟೇಮ್ನಾಗೆ ಉಚ್ಚೆಳ್ಳು ಗಿಡಗಳಲ್ಲಿ ಅಚ್ಚ ಅರಿಶಿನ ಬಣ್ಣ ಹುಯ್ದಂಗೆ ಹುವ್ವ ತುಂಬಕಂತಿತ್ತು. ಅವು ದೀಪಾವಳಿ ಹಬ್ಬದಾಗೆ ಶ್ರೇಷ್ಠವಂತೆ. ಅವುನ್ನ ತಂದು ಹೊಸಿಲಿಗೆ ಇಟ್ಟು ದೀಪ ಮುಟ್ಟಿಸ್ತಿದ್ರು. ಎಲ್ಲಾ ಹೊಸಿಲಿಗೂ ದೀಪ ಮುಟ್ಟಿಸ್ಬೇಕು. ತುಳಸಿ ಗಿಡದ ಹತ್ರ, ದೀಪದ ಸಾಲು ಇಡ್ತಿದ್ರು. ಉಚ್ಚೆಳ್ಳು ಗಿಡ ಸಿಗ್ದೇ ಇದ್ದೋರು ತಂಗಡಿ ಗಿಡದ ಹುವ್ವ ತಂದು ಇಡ್ತಿದ್ರು. ಅದೂ ಹಳದೀ ಬಣ್ವೇಯಾ. ಸಣ್ಣ ಸಣ್ಣ ಹುವ್ವ. ಇತ್ತಿತ್ಲಾಗೆ ಜನ ಹಳದಿ ಬಣ್ಣವಿದ್ರೆ ಸಾಕು ಉಚ್ಚೆಳ್ಳೇನು, ತಂಗಡೀ ಏನು, ಚೆಂಡೂವ ಏನು ಸ್ಯಾಮಂತಿ ಆದ್ರೇನು ಅಂತ ಎಲ್ಲಾ ಇಡಾಕೆ ಸುರು ಆಗೈತೆ.
ಸುಮಾ ಸತೀಶ್ “ರಂಗಿನ ರಾಟೆ” ಸರಣಿಯಲ್ಲಿ ಹಳ್ಳಿ ಹಬ್ಬಗಳ ಸಂಭ್ರಮಗಳ ವಿವರಗಳು ಇಲ್ಲಿದೆ
ನಮ್ಮನ್ಯಾಗೆ ದೀಪಾವಳಿ ಹಬ್ಬ ಬಲು ಜೋರು. ನಮ್ಗೆ ಉಗಾದೀಗಿಂತ್ಲೂವೇ ದೀಪೋಳೀನೇ ಖುಷಿ ಆಗ್ತಿತ್ತು. ನಮ್ಗೆ ಅದೇ ವರ್ಸಾವದಿ ಹಬ್ಬ. ಹೊಸೊರ್ಸದ ತರ. ಯಾಕೇಂದ್ರೆ ನಮ್ಮನ್ಯಾಗೆ ದೀಪಾವಳಿ ನೋಪಿ (ಕೇದಾರೇಶ್ವರ ವ್ರತ) ಇತ್ತು. ಇದು ಅಪರೂಪದ್ದು. ಎಲ್ಲಾರ ಮನ್ಯಾಗೂ ಇರ್ತಿರ್ಲಿಲ್ಲ.
ಒಂದು ವಾರ ಮುಂಚಿಂದ್ಲೂ ತಯಾರಿ ನಡೀತಿತ್ತೋ. ಹಬ್ಬ ನಾಕು ದಿವ್ಸ. ಒಂದತ್ತು ದಿನ ಮನೆ ತುಂಬಾ ಪರಿಸೆ ತರ ಇರ್ತಿತ್ತು. ಮನ್ಯಾಗಿನ್ ಪಾತ್ರೆ, ಪಗಡ, ಪೆಟ್ಟಿಗೆ, ಟ್ರಂಕು, ವಾಡೆ ಎಲ್ಲಾನೂ ಆಚಿಕ್ ಬರ್ತಿದ್ವು. ರಂಗೋಲಿ ಪುಡಿ, ಮಣ್ಣು ಹಾಕಿ, ರಾಗಿ ಪಾತ್ರೆ, ಹಿತ್ತಾಳೆ ಪಾತ್ರೇಗೆ ಹುಣಿಸೆ ಹಣ್ಣಾಕಿ ಗಸಗಸ ಬೆಳಗಿ ಇಕ್ಕಿದ್ರೆ ಪಳಪಳಾಂತ ದಿವಿನಾಗಿ ಹೊಳೀತಿದ್ವು. ಜಂತೆ ಮನೆ. ಜಂತೇಗೆಲ್ಲ ಗಂಜಲ ಎರೀತಿದ್ವು. ಹುಳ ಹುಪ್ಪಟೆ ಬರ್ದೆ ಇರ್ಲಿ ಅಂತ. ಆಮ್ಯಾಕೆ ಮನೆ ಒಳೀಕ್ಕೆ, ಹೊರೀಕ್ಕೆಲ್ಲ ಸುಣ್ಣ ಬಳೀತಿದ್ರು. ಪಡಸಾಲೆನಾಗೆ ಹೊಸಾ ರಂಗೋಲಿ ಬರೀತಿದ್ರು. ಹೋದ ವರ್ಸದ್ದು ನೆಲ ಒರೆಸೀ ಒರೆಸೀ ಹಳೇದಾಗಿರ್ತಿತ್ತಲ್ಲ. ಸುದ್ದೆ ಮಣ್ಣಾಗೆ ಹೊಸ್ಲು ಸಾರಿಸ್ತಿದ್ರು. ಅರಿಸಿಣ ತಿಕ್ತಿದ್ರು.
ಗಂಜಲ ಅಂಬೋದು ಮಡೀ ಮಾಡೋ ತೀರ್ಥ ಆಗಿತ್ತು. ಇಡೀ ಮನೇಗೆ ಗಂಜಲ ಹಾಕಿ ಸಾರ್ಸಿದ್ರೆ ಅದ್ರ ವಾಸ್ನೇ ನಮ್ಗೆ ಘಂ ಅನ್ನುಸ್ತಿತ್ತು. ಅಡಿಗೆ ಮನೇ, ನಡುಮನೇ ಮಾತ್ರ ಅಮ್ಮ ಅಪ್ಪ ನಾವು ಸೇರಿಕೊಂಡು ಕಿಲೀನ್ ಮಾಡ್ತಿದ್ವು. ಉಳಿಕೇದೆಲ್ಲ ರಾಮಪ್ಪ, ನಾಗಮ್ಮ, ಕಮಲಮ್ಮ, ದಾಳಪ್ಪ, ಅವ್ರೂ ಇವ್ರೂ ಸೇರ್ಕಂಡು ಮಾಡ್ತಿದ್ರು. ಒಟ್ನಾಗೆ ಹಬ್ಬದಷ್ಟು ಹೊತ್ಗೆ ನಮ್ ಕಣ್ಗೆ ಮನೇ ಹೊಸ್ದಾಗಿ ಕಾಣ್ತಿತ್ತು. ಇದ್ರ ಸಂದೀನಾಗೆ ನಮ್ಗೆ ಅತ್ತೆದೀರು ಅವ್ರ ಮಕ್ಕಳು ನಂಟ್ರು ಯಾರ್ಯಾರು ಬರ್ತಾರೆ ಅನ್ನೋ ಕಾತುರ್ವೂ ಇರ್ತಿತ್ತು. ಆಯಾ ಊರುಗ್ಳ ಬಸ್ಸು ಬಂದ್ರೆ ಕಣ್ಣು ಅತ್ಲಾಗೇ ಇರ್ತಿತ್ತು. ಒಂದಿಬ್ರು ಮೂವರಾದ್ರೂ ಅತ್ತೆದೀರು ಬರ್ತಿದ್ರು. ಮಕ್ಕಳು ಮರಿ, ಅವ್ರೂ ಇವ್ರೂ ಸೇರಿ ಒಂದದಿನೈದು ಇಪ್ಪತ್ತು ಜನಾನಾರ ಸೇರ್ತಿದ್ರು. ಅಲ್ಲಿಗೆ ಹಬ್ಬಕ್ಕೆ ಕಳೇ ಏರ್ತಿತ್ತು.
ಕಜ್ಜಾಯ ಅನ್ನೋ ಯಾಗ
ಇದ್ಕಿಂತ್ಲೂ ಮುಖ್ಯ ಕೆಲ್ಸ ಕಜ್ಜಾಯ ಮಾಡಾದು. ಒಂದು ವಾರೊಪ್ಪತ್ತಿಗೆ ಮದ್ಲೇ ಕೆಲ್ಸಾ ಸುರು ಆಗ್ತಿತ್ತು. ನಮ್ಮಜ್ಜಿ ಕಾಲ್ದಾಗೆ ಇದುಕ್ಕೇಂತ್ಲೇ ಗಂಗಸಾಲ ಅಂಬೋ ಅಕ್ಕಿ ಬೆಳೀತಿದ್ರು. ಅದು ಘಮಗುಡುತ್ತಿತ್ತು. ಕೆಂಪಕ್ಕಿ, ಬುಡ್ಡುಕೆ ಇರ್ತಿತ್ತು. ನಾಕೈದು ಸೇರು ಬತ್ತ ತಕಾ ಬಂದು ಮಡಿಯಾಗೆ ಮಾಡ್ಬೇಕಿತ್ತು. ಖಾಲಿ ಹೊಟ್ಯಾಗೆ ಬೋ ಭಯ ಭಕ್ತೀಲಿಂದ ಮಾಡ್ತಿದ್ರು. ಅಕ್ಕಿ ಕೇರೋ ಮರಗಳಿಗೆ(ಮೊರ) ದೆಕ್ಲು ಗಂಜಲ ಸಾರ್ಸಿ ಇಕ್ಕಂತಿದ್ರು. ಒನಕೆ ಒರಳು ಎಲ್ಲಾ ಪಳಗುಟ್ಟಿಸಿ ರೆಡಿ ಇಕ್ಕಣಾದು. ಬತ್ತ ಕುಟ್ಟಿ, ಹೊಟ್ಟು ತೂರಿ, ಅಕ್ಕಿ ಕೇರಿ ತಕಣಾದು ಒಂದು ದಿನ. ತಿರ್ಗ ದಿನ( ಮಾರನೇ ದಿನ) ಅಕ್ಕಿ ನೆನಾಕಿ, ನೆಂದ ಮ್ಯಾಗೆ ವಡಾಕಿ( ಸೋಸಿ), ನೆಳ್ಳಾಗೆ ಆರಾಕೋದು(ಒಣಗ್ಸೋದು).
ಅದ್ನ ಬೀಸೋಕಲ್ಲಾಗೆ ಹಾಕಿ ಬೀಸೋದು. ಇಲ್ಲಾ ಒರಳಾಗೆ ಹಾಕಿ ಕುಟ್ಟೋದೋ ಮಾಡ್ತಿದ್ರು. ಅದುನ್ನ ಜರಡಿ ಹಿಡ್ದು ನುಣ್ಣಕಿರೋ ಹಿಟ್ನ ತಕಂಡು ಪಾಕ ಹಿಡಿಯೋರು. ಒಂದು ದೊಡ್ಡ ಕೊಳದಪ್ಪಲೇಲಿ ಪಾಕ ಹಿಡುದ್ರೆ, ಬೇಜಾನ್ ಕಜ್ಜಾಯ ಆಗ್ತಿದ್ವು. ದೀಪಾವಳಿ ನೋಪೀಗೆ( ವ್ರತ) ಅದೇ ಮುಖ್ಯ. ಬಂದೋರ್ಗೆಲ್ಲ ಕೊಡಾಕೆ ಬೇಕಿತ್ತು. ಇಲ್ಲೊಂದು ನಂಬಿಕೆ ಇತ್ತು. ಕಜ್ಜಾಯ ಪಾಕ ಚೆಂದಾಕಿ ಬಂದ್ರೆ ಆ ವರ್ಸವೆಲ್ಲಾ ಮನ್ಯಾಗೆ ಆರಾಮ್ ಇರ್ತೈತೆ. ಏನಾರಾ ಕೆಟ್ಟೋಯ್ತೋ ದಿಗಿಲು ಹತ್ಕಂತಿತ್ತು. ಏನ್ ತೊಂದ್ರೆ ತಾಪತ್ರಯ ಬರ್ತೈತೋ ಅಂತ. ಅದ್ಕೇಯಾ ಪಾಕ ಬರಾವರ್ಗೆ ಒಂದು ತೊಟ್ಟು ನೀರೂ ಬಾಯಿಗೆ ಹಾಕ್ತಿರಲಿಲ್ಲ.
ಸೊಲ್ಪ ವರ್ಸ ಆದ್ ಮ್ಯಾಗೆ ಗಂಗಸಾಲ ಅಕ್ಕಿ ಬೆಳೆಯಾದು ನಿಂತೋಯ್ತು. ಯಾಕೇಂದ್ರೆ ಇದ ಬೆಳ್ಯಾಕೆ ಜಾಸ್ತಿ ನೀರು ಬೇಕಿತ್ತು. ನೀರಿನ್ ಒರತೆ ಕಮ್ಮಿ ಆದ್ ಮ್ಯಾಗೆ ಬೆಳಿಯಾಕೂ ಕಷ್ಟ ಆಗಿ ನಿಲ್ಸಿದ್ರು. ಆಮ್ಯಾಕೆ ಮಾಮೂಲಿ ಬತ್ವೇ ಹಾಕಿ ಮಾಡ್ತಿದ್ರು.
ನಮ್ಮಪ್ಪುಂಗೆ ಮದ್ವೆ ಆಗಿ ನಮ್ಮಮ್ಮ ಬಂದ್ ಮ್ಯಾಕೂ ಸೊಲ್ಪ ವರ್ಸ ಇಂಗೇ ನಡೀತು. ಆಮ್ಯಾಕೆ ಅಜ್ಜಿ, ನಿಂಗೆ ಕಷ್ಟ ಆಗ್ತೈತೆ ಕಣಮ್ಮಿ, ಬತ್ತ ಕುಟ್ಟೋದು ಬ್ಯಾಡ. ಅಕ್ಕಿ ಹಾಕೇ ಮಾಡಾಣಾ ಅಂತ ಸುರು ಮಾಡಿದ್ರು. ಅಂಗೂ ವಸಿ ವರ್ಷ ನಡೀತು. ಆಮ್ಯಾಕೆ ಅಷ್ಟೂ ಕಜ್ಜಾಯ ಮಡೀಲೇ ಮಾಡಾದು ಕಷ್ಟ. ಪೂಜೇಗೆ ನೈವೇದ್ಯ ಇಕ್ಕೋಕೆ ಎಷ್ಟು ಬೇಕೋ ಅಷ್ಟು ಮಾತ್ರ ಮಡೀಲಿ ಮಾಡಿ ಉಳಿದಿದ್ದನ್ನು ಆಳುಗಳ ಕೈಯಾಗೆ ಕುಟ್ಟಿಸಿ ಮಾಡಾಕೆ ಸುರು ಆತು. ಇಂಗೇ ಕಜ್ಜಾಯದ ಕತೆ ಕಾಲದಿಂದ ಕಾಲುಕ್ಕೆ ಬದ್ಲಾಗ್ತಾ ಬಂತು. ನಾವೂ ನಾಜೂಕಾಗ್ತಾ ಆಗ್ತಾ ಅದೂ ನಾಜೂಕಾಗ್ತಾ ಬಂತು. ನಮ್ಮಜ್ಜಿ ನಮ್ಮಮ್ಮುಂಗೆ ಸುಲ್ಭ ಮಾಡ್ದಂಗೆ, ನಮ್ಮಮ್ಮ ನಮ್ಮತ್ತಿಗೇಗೆ ಇನ್ನಾ ಸುಲ್ಭ ಮಾಡುದ್ರು. ಕಜ್ಜಾಯ ಮಾಡಾದು ಸ್ಯಾನೆ ರೇಜಿಗೆ ಕೆಲ್ಸ ಅಂತ ಆಟೊತ್ಗಾಗ್ಲೇ ಬೆಂಗಳೂರ್ನಾಗೆ ಇದ್ದ ನಮ್ಮ ಚಿಕ್ಕ ತಾತನ ಮನ್ಯಾಗೆ ಸೊಸೇದೀರ್ಗೆ ಕಜ್ಜಾಯದ ಬದ್ಲಿ ಬಾಳೆ ಹಣ್ಣು ಇಕ್ಸಿ ಪೂಜೆ ಮಾಡಾ ರೂಡಿ ಮಾಡ್ಸಿದ್ರು. ನಮ್ಮಮ್ಮನೂ ಅಂಗೇ ಮಾಡ್ಸುದ್ರು. ಈಗ ದೀಪಾವಳಿ ಅಂದ್ರೆ ಮನ್ಯಾಗೆ ಕಜ್ಜಾಯದ ಸಂಭ್ರಮ ಇಲ್ಲ.
ನೀರ್ ತುಂಬಾ ಹಬ್ಬ
ಬಚ್ಚಲು ಮನೇಲಿ ರಾಗೀದು ಹಂಡೆ ಒಲೆ ಇತ್ತು. ಗಾರುಗುಂತ(ಗಾರೆಯಲ್ಲಿ ಕಟ್ಟಿಸಿದ ತೊಟ್ಟೀನ ತೆಲುಗಿನಾಗೆ ಹಿಂಗೇ ಯೋಳ್ತಿದ್ವಿ) ಇತ್ತು. ಗಾರೆ ಕಟ್ಟಿರ್ತಿದ್ದ ಅವೆರಡನ್ನೂ ಚೆನ್ನಾಗಿ ತೊಳೆದು ಮಡಗಿರ್ತಿದ್ರು. ಕಟ್ಟಿಗೆ ಇಕ್ಕಾ ಅಟ್ಟಾನೂ ಕಿಲೀನ್ ಮಾಡ್ಸಿರ್ತಿದ್ರು. ಹಂಡೇ ಒಲೆ ಮುಂದ್ಕೇ ಕಟ್ಟೆ ಇರ್ತಿತ್ತಲ್ಲ ಅದ್ರ ಮ್ಯಾಗೆ ರಂಗೋಲಿ ಬಿಟ್ಟು, ಅರ್ಸಣ ಕುಂಕ್ಮ ಹಚ್ಚಿ, ಹೂವ ಇಕ್ಕಿ, ಸಾಮ್ರಾಣಿಕಡ್ಡಿ ಬೆಳಗಿ, ಮಂಗಳಾರ್ತಿ ಮಾಡಿ, ಪೂಜೆ ಮಾಡಿ, ನೀರು ತುಂಬ್ಸಿರ್ತಿದ್ವಿ. ರಾತ್ರೇನೆ, ಒಲೆಗೆ ಹೊಟ್ಟು, ತೆಂಗಿನ ಮಟ್ಟೆ, ಸೌದೆ ಒಟ್ಟಿ ನಮ್ಮ ರಾಮಪ್ಪ ರೆಡಿ ಇಕ್ಕಿರ್ತಿದ್ದ.
ನರಕ ಚತುರ್ದಶಿ
ಬೆಳಗ್ಗೇಯಿಂದ್ಲೇ ತಲೆಗೆ ಎಣ್ಣೆ ಹಚ್ಕಳಾ ಕೆಲಸ. ಅಮ್ಮಂದ್ರು ಮಕ್ಕಳ್ಗೆ ಹಚ್ಚಿ, ಅವ್ರೂ ಹಚ್ಕಂಡು, ದೊಡ್ಡ ಬಟ್ಟಲುಗಳಾಗೆ ಸೀಗೆಪುಡಿ, ಸುಜ್ಜಿಲಪುಡಿ, ಅಂಟುವಾಳದ ಕಾಯಿ ಹಾಕಿ ಕಲ್ಸಿ ಇಡ್ತಿದ್ರು. ಎಲ್ರುನ್ನೂ ಬಚ್ಚಲಿಗೇ ಎಳ್ಕಂಡು ಹೋಗಿ ರಪರಪ ತಲೆ ತಿಕ್ಕಿ, ದಬದಬಾಂತ ನೀರು ಸುರ್ದು ಆಚ್ಗೆ ಹಾಕಿ ಉಸ್ ಅಂತ ಉಸುರ್ ಬಿಡ್ತಿದ್ರು. ಬಚ್ಚಲು ಮನೇ ತುಂಬಾ ಹೊಗೆ ಸುತ್ಕೊಂಡು ಕಣ್ ಬಿಟ್ರೆ ಗಂವ್ ಅಂಬಂಗೆ ಹೊಗೆ ಮುಸುಕಿರ್ತಿತ್ತು. ಒಲೇಲಿ ಬರಾ ಹೊಗೆ, ಹಬೆಯಾಡೋ ಬಿಸಿ ನೀರಿನ್ ಹೊಗೆ ಕೂಡಿರ್ತಿತ್ತು. ಊದುಕೊಳಪೀನಾ ಒಲೆ ಬಾಯೊಳಿಕ್ಕೆ ಇಟ್ಟು ಊದಿ ಊದಿ ಅದು ಮಸಿಕಟ್ಟಿ ಗಬ್ಬೆದ್ದಿರ್ತಿತ್ತು. ಊದೋರ ಮುಖ ಮೂತಿ ಎಲ್ಲಾ ಮಸೀನೆ.
ತಲೇಗೆ ಸ್ನಾನ ಮಾಡುದ್ರೆ ಅವತ್ತಿನ ಕೆಲ್ಸ ಮುಗೀತು. ಸೀ ಅಡುಗೆ ಮಾಡ್ತಿದ್ರು. ತಿನ್ ಕಂಡು ನಂಟರ ಮಕ್ಕಳ ಜೊತೆ ಅಡ್ಡಾಡಕೊಂಡು ಇರೋದು ಆಟೇಯಾ.
ಕೇದಾರೇಶ್ವರ ನೋಪಿ
ಮಾರನೇ ದಿನ್ವೇ ನಮ್ಗೆ ದೊಡ್ಡದು. ದೀಪಾವಳಿ ಅಮಾಸೆ ದಿನ ಸಂಜೀಕೆ ಈ ಪೂಜೆ ಮಾಡ್ತಿದ್ರು. ಒಂದು ನಾಕು ಗಂಟೇ ಹೊತ್ಗೆ ಸುರು ಮಾಡಿದ್ರೆ ಆರೂವರೆ ಹೊತ್ಗೆ ಮುಗೀತಿತ್ತು.
ತೆಂಗಿನಕಾಯಿ ಕಳಸ ಮಾಡಿ ಅದುನ್ನ ಈಶ್ವರ ಅಂತ ಪೂಜೆ ಮಾಡ್ತಿದ್ವು. ತೆಂಗಿನಕಾಯಿಗೆ ಅಲಂಕಾರ ಮಾಡ್ತಿದ್ರು. ಕಣ್ಣು, ಮೂಗು, ಪೇಪರ್ನಾಗೆ ವಿಭೂತಿ ಪಟ್ಟೆ ಮಾಡಿ ಅಂಟಿಸತಿದ್ರು. ಈಶ್ವರಪ್ಪನ ಜೊತ್ಯಾಗೆ ಗೌರಮ್ಮನೂ ಬೇಕಲ್ಲ. ಅರಿಶಿಣದಾಗೆ ಗೌರಮ್ಮನ್ನ ಮಾಡಿ, ಕುಂಕ್ಮ ಇಡ್ತಿದ್ರು. ಗಣಪ್ಪ ಬೇಕಲ್ಲ. ಮೊದುಲ್ನೇ ಪೂಜೆ ಅವುಂಗೇ ಅಲ್ವೇ? ಸೆಗಣೀನಾಗೆ ಬೆನಕಪ್ಪನ್ನ ಮಾಡಿ ಅದುಕ್ಕೆ ಪಿಳ್ಳೆರಾಯ ಅಂತ ಯೋಳ್ಕಂಡು ಕುಂಕ್ಮ ಇಕ್ಕಿ, ಗರಿಕೆ ಚುಚ್ಚುತಿದ್ರು. ಅಲ್ಲಿಗೆ ಶಿವಪ್ಪನ ಸಂಸಾರ ಅಲ್ಲೇ ಇರ್ತಿತ್ತು.
ಪೂಜೇಗೆ ಇಡಾ ಸಾಮಾನು
ಕಲಶದ ಅಕ್ಕಪಕ್ಕದಾಗೆ 21 ಜೋಡಿ ಕಜ್ಜಾಯ ಅಂದ್ರೆ 42, ವಿಳೇದೆಲೆ, ಬಿಲ್ಲಡಿಕೆ(ಬಟ್ಟಲು ಅಡಿಕೆ), ಅರಿಸಿಣದ ಕೊಂಬು ಎಲ್ಲಾನೂವೇ 21 ಜೋಡಿ ಜೋಡಿಸಿರ್ತಿದ್ರು. ಈ ಪೂಜೇ ಇಸೇಸ ಅಂದ್ರೆ ಎಲ್ಲಾ 21 ಸಂಖ್ಯೆ ಇರ್ಬೇಕು. ಐನೋರು ಪೂಜೇ ಮಾಡಾವಾಗ ದಂಪತಿಗೆ ಕೈಗೆ ದಾರ ಕಟ್ಟಿಸ್ತಿದ್ರು. ಈ ಪೂಜೆ ದಂಪತಿ ಮಾತ್ರಾ ಮಾಡ್ಬೇಕು. ಶಿವ ಅರ್ಧನಾರೀಶ್ವರ ಅಲ್ಲ್ವೇ? ಪೂಜೆ ಸುರು ಮಾಡಾ ಮುಂಚೆ ಹೋದ ವರ್ಷದ ದಾರ ಕಟ್ಟಿಕೊಂಡು ಕೂತ್ಕಣಾದು. ಆಮ್ಯಾಕೆ ಈ ವರ್ಷದ ದಾರ ಕಟ್ಟಿಸತಿದ್ರು. 21 ಎಳೆ ರೇಷ್ಮೆ ನೂಲು ಒಟ್ಟು ಮಾಡ್ಕಂಡು ಹೊಸ್ಕೋಬೇಕು. ಜನಿವಾರದ ದಾರ ತಕಂಡು ಕತ್ತರಿಸಿ ಉದ್ದಕ್ಕೆ ಮಾಡ್ಕಂಡು ಹೊಸ್ಕೊಂಡಿರೋ ಈ ರೇಷ್ಮೆ ದಾರದಿಂದ 21 ಗಂಟು ಹಾಕಬೇಕು. ಅದುನ್ನ ಗಂಡ ಹೆಂಡ್ರು ಒಬ್ಬರಿಗೊಬ್ಬರು ಕಟ್ಕಾಬೇಕು. ಎರಡೊರ್ಷದ ಹಳೆ ಜನಿವಾರ ನದಿಗೋ ಕೆರೆಗೋ ಬಿಡಬೇಕು. ನಮ್ಮನೇ ದ್ಯಾವ್ರು ನಂಜನಗೂಡು ನಂಜುಂಡೇಶ್ವರ. ವರ್ಷಕ್ಕೆ ಒಂದು ದಪಾನಾರಾ ಗ್ಯಾರಂಟಿ ಹೋಗ್ತಿದ್ವಿ. ಆಗ ಅಲ್ಲೇ ಕಪಿಲಾ ನದೀಲಿ ಬಿಡ್ತಿದ್ರು.
ಪಂಚಾಮೃತ ಅಭಿಷೇಕ
ಶಿವಪ್ಪ ಅಭಿಷೇಕ ಪ್ರಿಯ. ಜಲಾಭಿಷೇಕ ಮಾಡ್ತಿದ್ರು.(ನೀರ್ನಾಗೆ) ನಾವು ಕಾಯ್ಕೋಂತಾ ಕೂತಿರ್ತಿದ್ದು ಅದುಕ್ಕಲ್ಲ, ಅದುಕ್ಕಿಂತ್ಲೂ ಪಂಚಾಮೃತ ಅಭಿಷೇಕ ಮಾಡ್ತಿದ್ರು. ಅದು ಪರಮಾಮೃತವೇ ನಮ್ಮ ಪಾಲಿಗೆ. ಹಸಿ ಹಣ್ಣು, ಒಣ ಹಣ್ಣು, ಜೇನುತುಪ್ಪ( ಅದೂ ಹೊಸದಾಗಿ ಜೇನುಗೂಡಿಂದ ಬಿಡಿಸಿದ ಜೇನುರೊಟ್ಟಿಯಿಂದ ಹಿಂಡಿ ತೊಟ್ಟಿಕ್ಕಿಸಿಕೊಂಡು ತಂದಿರ್ತಿದ್ರು). ಎಮ್ಮಿ ಹಾಲು, ಚಾಕು ತಕಂಡು ಕುಯ್ಯೋ ಅಂಗಿರೋ ಗಟ್ಟಿ ಕೆನೆಮೊಸರು ಅಬ್ಬಾ! ಸ್ವರ್ಗುಕ್ಕೆ ಮೂರೇ ಗೇಣು. ಪೂಜೆ ಆಗುತ್ಲೇ ದೊಡ್ಡ ಲೋಟ ಹಿಡ್ಕಂಡು ಕಾಯ್ತಿದ್ವಿ. ಮಂಗಳಾರ್ತಿ ಮುಗೀತ್ಲೇ ಪಂಚಾಮೃತ ಹಂಚಾಕೆ ಸುರು ಆಗ್ತಿತ್ತು. ಅರ್ದ ಹೊಟ್ಟೆ ಅಲ್ಲೇ ತುಂಬ್ತಿತ್ತು.
ಸಮಾರಾಧನೆ
ಪೂಜೇ ಮುಗಿದಿದ್ದ ತಕ್ಷಣ ಫಲಾರ (ಫಲಾಹಾರ) ಕೊಡ್ತಿದ್ರು. ಅವತ್ತು ಅಪ್ಪ ಅಮ್ಮ ಪೂಜೆ ಮುಗಿಯಾಗಂಟ ಒಂದು ತೊಟ್ಟು ನೀರ್ನೂ ಬಾಯಿಗೆ ಹಾಕ್ತಿರಲಿಲ್ಲ. ರಾತ್ರೇಗೆ ಒಂದೇ ಕಿತ ಫಲಾರ್ವೇ. ಅದೂ ಎಂತಾ ತರಾವರಿ ಇರ್ತಿತ್ತು ಅಂದ್ರೆ ನಾವು ಬೆಳಗ್ಗೆ ನಾಷ್ಟಾನೂ ಮಾಡಿ ಮಧ್ಯಾನವೂ ಮುಕ್ಕಿದ್ರೂ ರಾತ್ರೆ ಫಲಾರಕ್ಕೂ ಕಾಯೋದು. ನಂಟರು ಅಕ್ಕ ತಂಗೀರು ಒಂದಿಪ್ಪತ್ತು ಜನ್ವಾದ್ರೆ, ಊರಜನ ಒಂದು ನೂರಾಗ್ತಿದ್ರು. ತಾತನ ಕಾಲ್ದಾಗೆ ನಂಟರು ಮಾತ್ರ ಇದ್ರು. ಅಪ್ಪನ ಕಾಲಕ್ಕೆ ಊರ್ ಜನಾ ಸೇರ್ತಿದ್ರು. ನಮ್ಮೂರ ಪಕ್ಕ ಇರಾ ದೊಡ್ಡಮಾಲೂರಿಂದ ಬ್ರಾಮ್ರು ಐನೋರ್ನ ಅಡಿಗೆಗೆ ಕರುಸ್ತಿದ್ರು. ಅವ್ರು ಮಡಿಯಾಗೆ ಎಲ್ಲಾನೂ ಮಾಡ್ತಿದ್ರು. ನಮ್ಮ ಮನೆ ಪಕ್ಕದಾಗೆ ನಮ್ದು ಹಳೆಮನೆ ಒಂದಿತ್ತು. ಅಲ್ಲಿ ಅಂಗಳದಾಗೆ ಒಂದು ಬಾವಿ ಇತ್ತು. ಅದರ ಮಗ್ಗುಲಾಗೆ ಕಲ್ಲು ಇಕ್ಕಿ ಸೌದೆ ಒಲೆ ಮಾಡ್ಕಂಡು, ದೊಡ್ಡ ದೊಡ್ಡ ಕೊಳಗಗಳಲ್ಲಿ ತರಕಾರಿ ಉಪ್ಪಿಟ್ಟು, ಕೇಸರಿಬಾತು, ಗೊಜ್ಜು ಅವಲಕ್ಕಿ, ಕಡಲೆಬೇಳೆ ಹುಸ್ಲಿ(ಹುಸಳಿ), ಹೆಸರುಬೇಳೆ ಕೋಸಂಬರಿ, ಬಾಳೆಹಣ್ಣಿನ ರಸಾಯನ ಇಷ್ಟೂ ಪದಾರ್ಥ ಮಾಡ್ತಿದ್ರು. ಬಿಸಿ ಬಿಸಿ ಹೊಗೆ ಬರಾ ಉಪ್ಪಿಟ್ಟು ಬೇಷಾಗಿರ್ತಿತ್ತು. ಪಡಸಾಲೇನಾಗೆ ಉದ್ದುಕ್ಕೂ ಚಾಪೆ ಹಾಸಿ ನಾವೆಲ್ಲಾ ಕೂತ್ಕಂತಿದ್ವು. ಅಪ್ಪನ ಸಿನೇಹಿತ್ರು, ಊರಿನ್ ಮುಖ್ಯಸ್ಥರು, ಬ್ರಾಮ್ರು ಎಲ್ಲಾ ಒಟ್ಟಿಗೆ ಕುಂತ್ಕಂತಿದ್ವು. ಬಾಳೆಲೇಲಿ ನಮ್ಗೆ ಬಡಿಸ್ತಿದ್ರು. ಅಂಗಳದಾಗೆ ವಿಶಾಲವಾಗಿ ಕಲ್ಲು ಹಾಕ್ಸಿದ್ವಿ. ಊರಿನ ಒಂದು ನೂರು ಜನ ಹೆಂಗುಸ್ರೂ ಗಂಡಸ್ರೂ ಅಲ್ಲೇ ಕುಂತು ಉಣ್ತಿದ್ರು. ಇಸ್ತ್ರೆಲೇಲಿ (ಒಣಗಿದ ಮುತ್ತುಗದೆಲೆ) ಎಲ್ಲಾನೂ ಬಡಿಸ್ತಿದ್ರು. ಎಲ್ರೂ ಹೊಟ್ತುಂಬಾ ಉಂಡ್ರೆ, ಮನೆ ಕೆಲಸಕ್ಕೆ, ತೋಟದ ಕೆಲಸಕ್ಕೆ ಬರಾ ಆಳುಗಳು, ಆಯಗಾರರು ಮಂಕರೀಗ್ಳಲ್ಲಿ ಮನೇಗೂ ತಕಂಡು ಹೋಗ್ತಿದ್ರು. ಅದುಕ್ಕೇಂತ್ಲೇ ಸೇರುಗಟ್ಟಲೇ ಮಾಡಿಸ್ತಿದ್ರು. ಇಲ್ಲಿಗೇ ಪೂಜೆ, ಫಲಾರಾ ಮುಗೀತಿತ್ತು. ಅಲ್ಲಿಗೆ ಒಂದು ಎಂಟು ಗಂಟೆ ಆಗ್ತಿತ್ತು.
ಪಟಾಕಿ ಸಂತೆ
ನಮ್ಮನೇಲಿ ಅಮಾಸೆ ದಿನ್ವೇ ಪಟಾಕಿ ಹಚ್ಚಾದು. ಯಾಕೇಂದ್ರೆ ಜನಾ ಸೇರಿರ್ತಿದ್ರಲ್ಲ ಅದುಕ್ಕೆ. ಅಪ್ಪ ಮೊದಲಿಂದಲೂ ಒಂದು ಪಟಾಕೀನೂ ಹಚ್ಚಿದವ್ರಲ್ಲ. ಆದ್ರೂ ರಾಸಿ ರಾಸಿ ತರಾವರಿ ಪಟಾಕಿ ವರ್ಸೊರ್ಸವೂ ದಂಡಿಯಾಗಿ ತರ್ತಿದ್ರು. ಫಲಾರ ಮುಗಿದ್ ಮ್ಯಾಗೆ ಅಪ್ಪ ಅಂಗಳದಾಗೆ ಕಟ್ಟೆ ಮ್ಯಾಕೆ ಕುಂತ್ಕಳಾರು. ಪಟಾಕಿ ತಂದು ಆಚೆ ಮಡಗೋರು. ಕೆಲಸದವರು, ಜನಾ ಎಲ್ಲಾ ಫಲಾರಾ ಆಗಿರ್ತಿತ್ತಲ್ಲ, ಅಡಕೆಲೆ, ಕಡ್ಡಿಪುಡಿ, ಹೊಗೆಸೊಪ್ಪು ಹಾಕ್ಕೊಂಡು ಜಗೀತಾ ಕುಂತಕಂತಿದ್ರು. ಮನೆ ಮುಂದ್ಲೇ ಊರಿನ್ ದೊಡ್ಡ ಬಯಲು ಇತ್ತು. ಅವುರ್ ಮಕ್ಕಳು ಪಟಾಕಿ ತಕಂಡು ಹಚ್ಚಿ ಖುಷಿ ಪಡ್ತಿದ್ರು. ಅಪ್ಪುಂಗೆ ಅವ್ರ ಖುಷಿ ನೋಡಿ ಬಲ್ ಖುಷಿ ಆಗೋದು. ನಂಟರು ಮಕ್ಕಳು ಪಟಾಕಿ ಹಚ್ಚೋರು. ಇನ್ನಾ ನಮ್ಮಣ್ಣ ಹುಟ್ಟಿ, ಪಟಾಕಿ ಹಚ್ಚಾ ಅಂಗಾದ್ ಮ್ಯಾಕೆ ಅವ್ನೂ ಸೇರ್ಕಂತಿದ್ದ. ಆದ್ರೂವೆ ಊರ ಹುಡುಗ್ರಿಗೆ ಪಟಾಕಿ ಕೊಡಾದು ನಿಲ್ಲುಸ್ಲಿಲ್ಲ. ಅಣ್ಣಾನೂ ಎಲ್ರಿಗೂ ಹಂಚಿ, ಅವ್ರು ಹೊಡಿಯಾದ್ ನೋಡಿ ಖುಷಿ ಪಡ್ತಿದ್ದ. ನಾವೂ ಬರೇ ಸುರ್ ಸುರ್ ಬತ್ತಿ ಹಚ್ಕೊಂಡು ಲಕ್ಷ್ಮಿ ಪಟಾಕಿ ಆಟಂ ಬಾಂಬು ಹಚ್ಚಾ ಹುಡುಗ್ರನ್ನು ನೋಡ್ಕಂಡು ಬೆರಗಾಗಿ ನಿಂತ್ಕಂತಿದ್ವಿ. ಪಟಾಕಿ ಖಾಲಿಯಾಗಾಗಂಟ ಈ ಸಂತೆ ಇರ್ತಿತ್ತು. ಆಮ್ಯಾಕೆ ಹೋಗಿ ಮಲುಕ್ಕೊಂತಿದ್ವಿ.
ಬಲಿಪಾಡ್ಯಮಿ
ಪೂಜೇ ಮಾಡೋರೂ ಜೋಡೀನೆ. ಪೂಜೆ ಮಾಡುಸ್ಕೊಳ್ಳಾದೂ ಜೋಡೀನೆ.(ಗೌರಿ – ಈಶ್ವರ) ಅಂಗಾಗಿ ಮಾರನೇ ದಿನ ಬ್ರಾಮ್ಮರ ದಂಪತೀನ ಬೆಳಗ್ಗೇನೆ ಕರೆಸ್ತಿದ್ರು. ಸ್ವಾಮಿಗಳೋರು, ಅಮ್ಮಯ್ಯನೋರು ಇಬ್ರೂ ಬರ್ತಿದ್ರು. ಅಮ್ಮಯ್ಯನೋರ್ನ ದೇವ್ರ ಮುಂದೆ ಕುಂಡ್ರಿಸಿ, ಸಾಮ್ರಾಣಿ ಧೂಪ್ವ ಹಾಕ್ತಿದ್ರು. ಬೀಸಣಿಗೆ ಬೀಸೋರು. ಆಮ್ಯಾಕೆ ಅವ್ರಿಗೆ ಮಡಿಲಕ್ಕಿ ಕಟ್ಟೋರು. ಸ್ವಾಮಿಳೋರ್ಗೆ ಸ್ವಯಂಪಾಕ ಅಂತ ಒಂದು ದಿನದ ಅಡುಗೇಗೆ ಬೇಕಾಗೋ ದಿನಸಿ, ತರಕಾರಿ ಸಮಸ್ತವೂ ಕೊಟ್ಟು, ಇನ್ನಾ ಏನಾರಾ ಬಿಟ್ಟಿದ್ರೆ ಅಂತ ದಕ್ಷಿಣೇನೂ ಕೊಟ್ಟು, ನಮಸ್ಕಾರಾ ಮಾಡ್ಕೊಂಡು ಕಳಿಸ್ತಿದ್ರು. ಅವ್ರು ಅತ್ಲಾಗೇ ಹೋಗ್ತಿದ್ದಂಗೇಯಾ ಪಾರಣೇಂತ ಬೆಳಗ್ಗೇನೇ ಅಡುಗೆ ಮಾಡಿ ದೇವ್ರಿಗೆ ನೈವೇದ್ಯ ಮಾಡಿರ್ತಿದ್ರು. ಚಿತ್ರಾನ್ನ, ಒಬ್ಬಟ್ಟು, ಅನ್ನ, ಸಾರು, ಕೋಸಂಬ್ರಿ, ಪಲ್ಯ, ತವ್ವೆ ಮಾಡ್ತಿದ್ರು. ತಿನ್ ಕೊಂಡು ಊರು ಸುತ್ತೋಕೆ ಹೋಗ್ತಿದ್ವಿ.
ಕಿರು ದೀಪಾವಳಿ
ಅಪ್ಪಿ ತಪ್ಪಿ ಏನಾರಾ ಮುಟ್ಟು ಚೆಟ್ಟು ಆಗೀನೋ, ಸೂತಕ ಪಾತಕ ಬಂದೋ, ಪುರುಡೋ (ಮನೇಲಿ ಕೂಸು ಹುಟ್ಟಿದ್ರೆ) ಗಿರುಡೋ ಬಂದಿದ್ರೆ ಕೇದಾರೇಶ್ವರ ವ್ರತ ಮಾಡ್ತಿರ್ಲಿಲ್ಲ. ಕಿರು ದೀಪಾವಳಿಗೆ ಅಂದ್ರೆ ಸರ್ಯಾಗಿ ಮುಂದ್ಲ ಅಮಾಸೇಗೆ ಮಾಡ್ತಿದ್ರು.
ಇನ್ನೊಂದು ಮುಖ್ಯವಾದ್ದು ಅಂದ್ರೆ ದೀಪಾವಳಿ ಟೇಮ್ನಾಗೆ ಉಚ್ಚೆಳ್ಳು ಗಿಡಗಳಲ್ಲಿ ಅಚ್ಚ ಅರಿಶಿನ ಬಣ್ಣ ಹುಯ್ದಂಗೆ ಹುವ್ವ ತುಂಬಕಂತಿತ್ತು. ಅವು ದೀಪಾವಳಿ ಹಬ್ಬದಾಗೆ ಶ್ರೇಷ್ಠವಂತೆ. ಅವುನ್ನ ತಂದು ಹೊಸಿಲಿಗೆ ಇಟ್ಟು ದೀಪ ಮುಟ್ಟಿಸ್ತಿದ್ರು. ಎಲ್ಲಾ ಹೊಸಿಲಿಗೂ ದೀಪ ಮುಟ್ಟಿಸ್ಬೇಕು. ತುಳಸಿ ಗಿಡದ ಹತ್ರ, ದೀಪದ ಸಾಲು ಇಡ್ತಿದ್ರು. ಉಚ್ಚೆಳ್ಳು ಗಿಡ ಸಿಗ್ದೇ ಇದ್ದೋರು ತಂಗಡಿ ಗಿಡದ ಹುವ್ವ ತಂದು ಇಡ್ತಿದ್ರು. ಅದೂ ಹಳದೀ ಬಣ್ವೇಯಾ. ಸಣ್ಣ ಸಣ್ಣ ಹುವ್ವ. ಇತ್ತಿತ್ಲಾಗೆ ಜನ ಹಳದಿ ಬಣ್ಣವಿದ್ರೆ ಸಾಕು ಉಚ್ಚೆಳ್ಳೇನು, ತಂಗಡೀ ಏನು, ಚೆಂಡೂವ ಏನು ಸ್ಯಾಮಂತಿ ಆದ್ರೇನು ಅಂತ ಎಲ್ಲಾ ಇಡಾಕೆ ಸುರು ಆಗೈತೆ. ಈಗಿನ ಪ್ಯಾಸನ್ನು ಸ್ಯಾಮಂತಿ. ಅದ್ರಾಗೆ ತರಾವರಿ ಬಂದದೆ.
ಕಾರ್ತೀಕ
ಅಮಾಸೆ ಇಂದ ಕಾರ್ತೀಕ ಶುರು ಆಗ್ತೈತೆ. ಕಾರ್ತೀಕ ಇಡೀ ಊರಿನ ಜನಾ ಮಾಡ್ತಾರೆ. ಎಲ್ಲಾ ಗುಡೀ ತಾವಾನೂ ನಡೀತೈತೆ. ಒಂದು ತಿಂಗಳು ಪೂರಾ ಒನ್ನೊಂದು ದಿನ ಒಬ್ಬೊಬ್ಬರು ಮನೇದು ಪೂಜೆ ಮಾಡುಸ್ತಾರೆ. ಮಾರಮ್ಮನಿಗೆ ನಡಕಂಬೋರು ಮಾರಮ್ಮನಿಗೆ, ನರಸಿಂಹ ಸ್ವಾಮಿ ಒಕ್ಕಲು ನರಸಿಂಹ ಸ್ವಾಮಿಗೆ, ಲಿಂಗಾಯಿತ್ರು ಈಶ್ವರನ ಗುಡೀಲಿ ಪೂಜೆ ಮಾಡುಸ್ತಾರೆ. ಮಕ್ಕಳು ಎಲ್ಲಾ ಗುಡೀ ತಾವ್ಲೂ ಹೋಗ್ತಾರೆ. ಚರ್ಪು ಸಿಕ್ತೈತೆ ಅಂತ. ಅವ್ರವ್ರ ಶಕ್ತಿ ಇದ್ದಂಗೆ ಚರ್ಪು ಹಂಚ್ತಾರೆ. ಸಕ್ಕರೆ – ಕಳ್ಳೆಪಪ್ಪು, ಕಾಳು ಉಸುಳಿ, ಬಾಳೆಹಣ್ಣಿನ ರಸಾಯನ, ಅನುಕೂಲ ಇದ್ದೋರು ಪುಳೋಗ್ರೆ, ಚಿತ್ರಾನ್ನ ಮಾಡುಸ್ತಾರೆ. ಅಮಾಸೆ ಹಿಂದು ಮುಂದ್ಲ ಕೊನೇ ಪೂಜೆ ಮಾಡುಸ್ತಾರೆ. ಎಲೆಪೂಜೆ (ವಿಳೇದೆಲೆ ಹಾರ ಏರ್ಸಿ ಅಲಂಕಾರ ಮಾಡ್ತಾರೆ) ಕಟ್ಟುಸ್ತಾರೆ. ಸ್ಯಾನೆ ಅನುಕೂಲ ಇದ್ದೋರು ಬಾಳು ಪೂಜೆ (ಬಾಳೆಕಂದಿನಾಗೆ ತೇಟು ತೇರಿನಂತೆಯೇ ಮಾಡ್ತಾರೆ) ಕಟ್ಟುಸ್ತಾರೆ. ಅದುಕ್ಕೆ ಹುವ್ವ ಚುಚ್ಚಿ ಅಲಂಕಾರ ಮಾಡ್ಸತಾರೆ. ಮಂಗಳವಾರ ಶುಕ್ರವಾರ ಕೊನೆ ಆದ್ರೆ ಹೆಣ್ಣು ದೇವತೇಗಳ್ಗೆ ಪೂಜೆ. ಸೋಮವಾರ ಆದ್ರೆ ಶಿವಪ್ಪಂಗೆ. ಆಯಾ ವಾರ ನೋಡ್ಕಂಡು ಯಾವ ದೇವ್ರ ವಾರಾನೋ ಆ ದೇವ್ರಿಗೆ ವಿಸೇಸ ಪೂಜೆ ಮಾಡುಸ್ತಾರೆ. ತಿರ್ಗ ಅಮಾಸೆ ಬರಾಗಂಟ ಕಾರ್ತೀಕದ ಸಂಭ್ರಮ ಇರ್ತೈತೆ.
ಎಲ್ಲಾ ಗುಡೀ ತಾವ್ಲೂ ದೀಪಾ ಹಚ್ಚಾಕೆ ಜನ್ರು ಗುಂಪು ಗುಂಪಾಗಿ ಹೋಗ್ತಾರೆ. ದೀಪ ಹಚ್ಚಿ ಅದುಕ್ಕೆ ಪೂಜೆ ಮಾಡಿ, ದೇವ್ರುಗೆ ಬೆಳಗಿ, ಕೊನೇಗೆ ದೇವ್ರ ಮುಂದೆ ಎಲೆ ಇಕ್ಕಿ ಅದ್ರ ಮೇಲೆ ಅಕ್ಕಿ ಹಾಕಿ, ದೀಪ ಇಟ್ಟು ಬರ್ತಾರೆ.
ಸುಮಾ ಸತೀಶ್ ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಚಿಕ್ಕಮಾಲೂರು ಗ್ರಾಮದವರು. ಬರವಣಿಗೆಯ ಜೊತೆಗೆ ಸಾಹಿತ್ಯ ಸಂಘಟನೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಕಿರುನಾಟಕಗಳ ರಚನೆ, ನಿರ್ದೇಶನ ಮತ್ತು ಅಭಿನಯ ಜೊತೆಗೆ ಏಕಪಾತ್ರಾಭಿನಯ ಇವರ ಹವ್ಯಾಸ. ಮಿರ್ಚಿ ಮಸಾಲೆ ಮತ್ತು ಇತರೆ ನಗೆ ನಾಟಕಗಳು , ಅವನಿ ( ಕವನ ಸಂಕಲನ), ವಚನ ಸಿರಿ (ಆಧುನಿಕ ವಚನಗಳು), ಹಾದಿಯಲ್ಲಿನ ಮುಳ್ಳುಗಳು ( ವೈಚಾರಿಕ ಲೇಖನ ಸಂಕಲನ), ಬಳಗ ಬಳ್ಳಿಯ ಸುತ್ತ (ಸಂ. ಕೃತಿ), ಶೂನ್ಯದಿಂದ ಸಿಂಹಾಸನದವರೆಗೆ ( ವ್ಯಕ್ತಿ ಚಿತ್ರಣ), ಭಾವಯಾನ ( ಸಂ. ಕೃತಿ), ಮನನ – ಮಂಥನ ( ವಿಮರ್ಶಾ ಬರೆಹಗಳು), ವಿಹಾರ (ಆಧುನಿಕ ವಚನಗಳು), ಕರ್ನಾಟಕದ ಅನನ್ಯ ಸಾಧಕಿಯರು ಭಾಗ 6 (ಡಾ. ಎಚ್. ಗಿರಿಜಮ್ಮನವರ ಬದುಕು – ಬರೆಹ) ಇವರ ಪ್ರಕಟಿತ ಕೃತಿಗಳು.