ಈ ಯುದ್ಧದ ಸಂದರ್ಭದಲ್ಲಿ ನಮ್ಮ ಮಧ್ಯೆ ಮಾತಿಗೆ ಮಾತು ಬೆಳೆಯಿತು. ಅವರೆಲ್ಲ ಸೇರಿ ಮುಸ್ಲಿಮರನ್ನು ಹೀಯಾಳಿಸಿದರು. ನಾನು ಅಪಮಾನಿತನಾಗಿ ಎದ್ದು ‘ಬೆಳಿಗ್ಗೆ ಮಿಲಿಟರಿ ಸೇರುವೆ’ ಎಂದು ಹೇಳಿ ಹೊರಗೆ ಬಂದು ಸಿದ್ಧೇಶ್ವರ ಗುಡಿಗೆ ಹೋಗಿ, ಕಟ್ಟೆಯ ಮೇಲೆ ಮಲಗಿದೆ. ಚಳಿಯಿಂದಾಗಿ ರಾತ್ರಿಯಿಡಿ ಸರಿಯಾಗಿ ನಿದ್ದೆ ಬರಲಿಲ್ಲ. ಬೆಳಿಗ್ಗೆ ಎದ್ದು ಸ್ಟೇಷನ್ ರೋಡ್‌ನಲ್ಲಿರುವ ಐಬಿ ಕಡೆಗೆ ಹೊರಟೆ. ಯುದ್ಧದ ಸಂದರ್ಭವಾಗಿದ್ದರಿಂದ 14 ವರ್ಷ ಮೀರಿದ ಬಾಲಕರನ್ನೂ ಅಲ್ಲಿ ಮಿಲಿಟರಿಗೆ ಸೇರಿಸಿಕೊಳ್ಳುತ್ತಿದ್ದರು. ನಾನು ಎಲ್ಲ ದೈಹಿಕ ಪರೀಕ್ಷೆಯಲ್ಲಿ ಉತ್ತೀರ್ಣನಾದೆ. ಆದರೆ ತೂಕ ಕಡಿಮೆ ಇತ್ತು. ಅಷ್ಟೊತ್ತಿಗೆ ನನ್ನ ಅಜ್ಜಿ ಮತ್ತು ತಾಯಿ ಬಂದು ಅಳುತ್ತ ನಿಂತಿದ್ದರು.
ರಂಜಾನ್ ದರ್ಗಾ ಬರೆಯುವ ನೆನಪಾದಾಗಲೆಲ್ಲ ಸರಣಿಯ 44ನೇ ಕಂತು ಇಲ್ಲಿದೆ.
ಉಜ್ಬೆಕಿಸ್ತಾನ್ ರಾಜಧಾನಿ ತಾಷ್ಕೆಂಟಲ್ಲಿ ‘ಹೊಟೇಲ್ ತಾಷ್ಕೆಂಟ್’ ಅತಿ ದೊಡ್ಡ ಹೊಟೇಲ್. ಬೆಂಗಳೂರಿನ ಹೊಟೇಲ್ ಅಶೋಕಾದಲ್ಲಿ ಅನೇಕ ಸಲ ವಿವಿಧ ಸಂದರ್ಭಗಳಲ್ಲಿ ತಿಂಡಿ, ಊಟ ಮಾಡಿದ್ದರೂ ಉಳಿದುಕೊಳ್ಳುವ ಪ್ರಸಂಗ ಬಂದಿರಲಿಲ್ಲ. 1983ನೇ ಆಗಸ್ಟ್ 13ರಂದು ಅಂಥ ಹೊಟೇಲ್‌ನಲ್ಲಿ ಇರುವ ಸಮಯ ಒದಗಿ ಬಂದಿತು. ನಮ್ಮ ಗುಡ್ ವಿಲ್ ಡೆಲಿಗೇಷನ್ನಿನ ಏಳೂ ಜನರಿಗೆ ಪ್ರತ್ಯೇಕ ಕೋಣೆಗಳ ವ್ಯವಸ್ಥೆ ಮಾಡಿದ್ದರು. ಆದರೆ ನಮ್ಮ ಪಂಚತಾರಾ ಹೋಟೆಲ್‌ಗಳಲ್ಲಿರುವ ಅನವಶ್ಯಕ ಐಷಾರಾಮಿ ವಸ್ತುಗಳು ಆ ಕೋಣೆಗಳಲ್ಲಿ ಇರಲಿಲ್ಲ.
ಒಳ್ಳೆಯ ಮಂಚ ಮತ್ತು ಗಾದಿ ಇದ್ದರೂ ಒಬ್ಬ ಮನುಷ್ಯನಿಗೆ ಎಷ್ಟು ಬೇಕೋ ಅಷ್ಟು ಮಾತ್ರ ಉದ್ದ ಅಗಲಗಳನ್ನು ಹೊಂದಿತ್ತು. ಅಲ್ಲಿನ ಚಳಿ ತಡೆಯುವಂಥ ಆಕರ್ಷಕ ರಗ್ಗು ಮತ್ತು ಅದರೊಳಗೆ ಕಾಟನ್ ಹೊದಿಕೆ ಇತ್ತು. ಒಳ ಉಡುಪುಗಳನ್ನು ತೊಳೆದು ಹಾಕಲು ಸ್ಟೀಲ್ ಪೈಪುಗಳಿದ್ದು ಅವುಗಳ ಒಳಗೆ ಉಗಿ ತುಂಬಿರುವುದರಿಂದ ಅವು ಬೇಗನೆ ಒಣಗುತ್ತಿದ್ದವು. ಚಳಿ ತಡೆಯುವುದಕ್ಕಾಗಿ ಕೋಣೆ ಬೆಚ್ಚಗೆ ಮಾಡುವ ಉಗಿ ಪೈಪುಗಳಿದ್ದವು. ಸೋಪ್ ಸ್ಟ್ಯಾಂಡಲ್ಲಿ ರ್ಯಾಪರ್ ಇಲ್ಲದ ಸೋಪು ಇಡಲಾಗಿತ್ತು. ಅದು ಚಿಕ್ಕ ಮೆಡಿಮಿಕ್ಸ್ ಹಾಗೆ ಒಂದು ದಿನಕ್ಕೆ ಮಾತ್ರ ಸಾಕಾಗುವಷ್ಟಿತ್ತು. ಆ ದುಡಿಯುವ ಜನರ ಶ್ರೀಮಂತ ದೇಶ ತನ್ನ ಸಂಪನ್ಮೂಲಗಳನ್ನು ಎಷ್ಟೊಂದು ಕಾಳಜಿಯಿಂದ ವ್ಯಯಿಸುತ್ತದೆ ಎಂದು ಯೋಚಿಸಿದೆ. ಹೋಟೆಲ್‌ಗಳಲ್ಲಿ ಹೀಗೆ ರ್ಯಾಪರ ಬಳಕೆ ಮಾಡದೆ ಇರುವುದರಿಂದ ಎಷ್ಟೊಂದು ಮರಗಳು ಉಳಿಯಬಹುದು. ರ್ಯಾಪರ್ ಉತ್ಪಾದನೆಯ ಖರ್ಚು ಎಷ್ಟೊಂದು ಉಳಿಯಬಹುದು ಎಂಬ ತರ್ಕದಲ್ಲಿ ಸಂತೋಷಪಟ್ಟೆ.
ದೆಹಲಿಯಿಂದ ತಾಷ್ಕೆಂಟ್‌ಗೆ ಎರಡು ಗಂಟೆ ವಿಮಾನಯಾನ. ಮಧ್ಯಾಹ್ನದ ಊಟ ಮುಗಿಸಿದ ನಂತರ ಒಂದಿಷ್ಟು ವಿಶ್ರಾಂತಿ ತೆಗೆದುಕೊಳ್ಳುವ ವೇಳೆ ಒಂದು ಘಟನೆ ನಡೆಯಿತು. ನಾನು ಬಹುಶಃ ಹತ್ತನೆಯ ಮಹಡಿಯಲ್ಲಿದ್ದರಬಹುದು. ‘ರಾಮಸ್ವಾಮಿ ಐಸಾ, ಜೋರ್ ದಬಾಕೆ ಐಸಾʼ ಎಂದ ಹಾಗೆ ಸಮೂಹ ಧ್ವನಿ ಕೇಳಿಸತೊಡಗಿತು. ನನಗೆ ಆಶ್ಚರ್ಯವೆನಿಸಿತು. ಕಿಟಕಿಯಿಂದ ನೋಡಿದೆ ರಸ್ತೆ ಆಚೆ ಬದಿಯಲ್ಲಿ ಕಾರ್ಮಿಕರು ಉದ್ದನೆಯ ಕಬ್ಬಿಣದ ವಸ್ತುವೊಂದನ್ನು ಎಬ್ಬಿಸಿ ಕುಣಿಯಲ್ಲಿ ನಿಲ್ಲಿಸುತ್ತಿದ್ದರು. ನನಗೋ ಎಲ್ಲಿಲ್ಲದ ಖುಷಿ. ಏಕೆಂದರೆ ‘ದುಡಿಯುವ ವರ್ಗಕ್ಕೆ ಒಂದೇ ಲಯ ಇದೆ’ ಎಂಬ ಸತ್ಯವನ್ನು ಅರಿತ ಕ್ಷಣ ಅದಾಗಿತ್ತು. ನಾನು ಎಷ್ಟೊಂದು ಉತ್ಸುಕನಾಗಿದ್ದೆನೆಂದರೆ ಆ ಹರೆಯದಲ್ಲಿ ಲಿಫ್ಟ್ ಕೂಡ ನೆನಪಾಗದೆ ಸರ ಸರನೆ ಆ ಹತ್ತು ಮಹಡಿಯ ಮೆಟ್ಟಿಲುಗಳನ್ನು ಇಳಿದು ಅವರ ಬಳಿ ಹೋಗಿ ‘ತವಾರಿಷ್ ಮಿನ್ಯಾ ಜಾವುತ್ ರಂಜಾನ್. ಇಂಜಿಷ್ಕಿ ದ್ರುಜಿಯೆ’ (ಸಂಗಾತಿ, ನನ್ನ ಹೆಸರು ರಂಜಾನ್, ಭಾರತದ ಮಿತ್ರ) ಎಂದು ಅರ್ಧಮರ್ಧ ರಷ್ಯನ್ ಭಾಷೆಯಲ್ಲಿ ಹೇಳಿದೆ. (ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಎಂ.ಎ. ಭಾಷಾ ವಿಜ್ಞಾನ ಓದುವ ವೇಳೆ ರಷ್ಯನ್ ಭಾಷೆಯಲ್ಲಿ ಡಿಪ್ಲೋಮಾ ಮಾಡುವಾಗ ಕಲಿತ ಒಂದಿಷ್ಟು ಶಬ್ದಗಳನ್ನು ಹಾಗೂ ಹೀಗೂ ಈ ಪ್ರವಾಸದಲ್ಲಿ ಬಳಸುತ್ತಿದ್ದೆ.) ಅವರು ಖುಷಿಯಿಂದ ಸ್ಪಸ್ಸಿಬಾ (ಥ್ಯಾಂಕ್ಸ್) ಎಂದು ಹೇಳಿದರು. ‘ಕಾಕ್ ವಾ ಜಾವೂತ್’ (ನಿಮ್ಮ ಹೆಸರೇನು) ಎಂದು ಕೇಳಿದೆ. ಅದೇನೋ ಹೇಳಿದರು. ಅದು ಪರ್ಷಿಯನ್ ಹೆಸರಾಗಿತ್ತು. ಅವರ ಕೈ ಕುಲುಕಲು ಹೋದೆ. ಅವರು ತಮ್ಮದು ಗಲೀಜು ಕೈ ಎಂದು ಕೈ ಹಿಂದೆ ಸರಿಸಿದರು. ಆದರೂ ನಾನು ಕೈ ಕುಲುಕಿದೆ. ಅವರು ಖುಷಿ ಪಟ್ಟರು. ನಾನು ಅಲ್ಲಿ ಉಳಿದುಕೊಂಡಿದ್ದೇನೆ ಎಂದೆ. ಅವರು ಆಶ್ಚರ್ಯದಿಂದ ಅಲ್ಲಿ ಉಳಿದದ್ದಾ ಎನ್ನುವ ಹಾಗೆ ನೋಡಿದರು. ನನಗೆ ಒಂಥರಾ ಅನಿಸಿತು. ಆ ಮೇಲೆ ಗೊತ್ತಾಯಿತು. ಅವರ ಕೂಲಿ ಮೇಸ್ತ್ರಿಯ ಪಗಾರಿ ಗಿಂತ ಹೆಚ್ಚಿಗೆ ಇರುತ್ತದೆ. ಮನಸ್ಸು ಮಾಡಿದರೆ ಅವರು ಕೂಡ ಪಂಚತಾರಾ ಹೋಟೆಲ್‌ಗಳಲ್ಲಿ ಇರಬಹುದು ಎಂಬುದು. ಖುಷಿಯಿಂದ ವಾಪಸ್ ಬಂದು ಒಂದಿಷ್ಟು ರೆಸ್ಟ್ ತೆಗೆದುಕೊಂಡೆ.
ಸಾಯಂಕಾಲ ಏಳೂ ಜನ ಸೇರಿ ಸಮೀಪದಲ್ಲಿನ ಮೆಟ್ರೋ ಮತ್ತು ಗಾರ್ಡನ್ ನೋಡಲು ಹೊರಟೆವು. ಅಲ್ಲಿನದು ಅಂಡರ್ ಗ್ರೌಂಡ್ ಮೆಟ್ರೋ ವ್ಯವಸ್ಥೆ. ಅದು ಎಷ್ಟೊಂದು ಸುಂದರವಾಗಿತ್ತೆಂದರೆ ಯಾವುದೋ ಅರಮನೆ ಒಳಗೆ ಪ್ರವೇಶ ಮಾಡುತ್ತಿದ್ದೇವೆ ಎಂದು ಅನಿಸಿತು. ಇದನ್ನೆಲ್ಲ ನೋಡಿಕೊಂಡು ಗಾರ್ಡನ್‌ಗೆ ಹೋದೆವು. ಆ ಗಾರ್ಡನ್ ಬಹಳ ಹಿಡಿಸಿತು. ಬಡ ದೇಶಗಳು ಕೂಡ ಅಂಥ ಆಕರ್ಷಕ ಗಾರ್ಡನ್ ಮಾಡಬಹುದು. ಆ ಉದ್ಯಾನವನದೊಳಗೆ ಸುಂದರವಾದ ಮಣ್ಣಿನ ರಸ್ತೆಗಳು. ವೈವಿಧ್ಯಮಯವಾದ ಮರಗಿಡಬಳ್ಳಿಗಳು. ನಮ್ಮ ಕಮ್ಮಾರರೇ ಮಾಡುವಂಥ ಗಟ್ಟಿಯಾದ ಮತ್ತು ಸುಂದರವಾದ ಮಕ್ಕಳ ಆಟಿಕೆ ಉಪಕರಣಗಳು. ಸೋವಿಯತ್ ದೇಶದ ಕ್ರಾಂತಿಯ ಕುರಿತ ಸಾಕ್ಷ್ಯಚಿತ್ರಗಳನ್ನು ತೋರಿಸುವ ಮಿನಿ ಓಪನ್ ಥಿಯೆಟರ್. ಹೀಗೆ ಎಲ್ಲವೂ ಆ ಉದ್ಯಾನವನದಲ್ಲಿ ವ್ಯವಸ್ಥಿತವಾಗಿದ್ದವು. ಆದರೆ ಎಲ್ಲಿಯೂ ದುಂದುವೆಚ್ಚದ ಕುರುಹುಗಳು ಇರಲಿಲ್ಲ.
ಬಿಕಾನೇರ್ ಪ್ರಿನ್ಸ್ ಮತ್ತು ಇತರ ಮೂವರು ಗಾರ್ಡನ್ ಒಳಗೆ ಮೊದಲು ಪ್ರವೇಶ ಮಾಡಿದರು. ನಾವು ಮೂವರು ಸ್ವಲ್ಪ ಹಿಂದೆ ಇದ್ದೆವು. ಮಧ್ಯೆ ತಂದೆ ತಾಯಿ ಮತ್ತು ಮೂರ್ನಾಲ್ಕು ವರ್ಷದ ಮಗಳು ಜೊತೆಯಾಗಿ ಹೊರಟಿದ್ದರು. ಎಲ್ಲರೂ ಕೈ ಹಿಡಿದುಕೊಂಡು ನಡೆಯುವುದು ಅಲ್ಲಿಯ ಸಂಪ್ರದಾಯ. (ಬಹುಶಃ ಯುದ್ಧದಿಂದ ಘಾಸಿಗೊಂಡ ದೇಶಗಳಲ್ಲೆಲ್ಲ ಹೀಗೆ ಕೈ ಹಿಡಿದುಕೊಂಡು ನಡೆಯುತ್ತಾರೆ ಎಂಬುದು ಮುಂದಿನ ವಿದೇಶ ಪ್ರವಾಸಗಳಲ್ಲಿ ನನ್ನ ಅನುಭವಕ್ಕೆ ಬಂದಿತು.)
ಆಗಿನ ಕಾಲದಲ್ಲಿ ಏರ್ ಇಂಡಿಯಾದಲ್ಲಿ ಪ್ರಯಾಣಿಕರಿಗೆ ಲಿಂಬಿಹುಳಿ, ಆರೆಂಜ್ ಮುಂತಾದ ಪೆಪ್ಪರಮೆಂಟ್ ಮತ್ತು ಕಿವಿಯಲ್ಲಿ ಇಟ್ಟುಕೊಳ್ಳಲು ಕಾಟನ್ ಕೊಡುತ್ತಿದ್ದರು. ವಿಮಾನ ಯಾನದ ಅನುಭವವಿಲ್ಲದವರಿಗೆ ಪೆಪ್ಪರಮೆಂಟ್ ರಿಲೀಫ್ ಕೊಡುತ್ತಿತ್ತು. ವಿಮಾನದ ಶಬ್ದದಿಂದ ಸ್ವಲ್ಪ ಬಚಾವ್ ಆಗಲು ಕಿವಿಗೆ ಕಾಟನ್ ಕೊಡುತ್ತಿದ್ದರು. ನಮ್ಮ ಪ್ರಿನ್ಸ್ ಒಂದಿಷ್ಟು ಹೆಚ್ಚಿಗೆ ಪೆಪ್ಪರಮೆಂಟ್ ಅನ್ನು ಶೇರವಾನಿಯಲ್ಲಿ ತುಂಬಿಕೊಂಡಿದ್ದ. ಹೀಗೆ ಹೋಗುವಾಗ, ಆತ ಪೆಪ್ಪರಮೆಂಟ್ ತಿಂದು ಹಾದಿಯ ಮೇಲೆಯೆ ರ್ಯಾಪರ್ ಬೀಸಾಕಿದ. ತಂದೆ ತಾಯಿ ಜೊತೆ ನಮ್ಮ ಮುಂದೆ ಹೊರಟಿದ್ದ ಆ ಬಾಲಕಿ ಕೂಡಲೆ ತಾಯಿಯ ಕೈ ಬಿಟ್ಟು ಆ ರ್ಯಾಪರ್ ಎತ್ತಿಕೊಂಡು ರಸ್ತೆ ಪಕ್ಕದಲ್ಲಿದ್ದ ಡಸ್ಟ್‌ಬಿನ್‌ಗೆ ಹಾಕಿ ಕೈ ಒರೆಸಿಕೊಳ್ಳುತ್ತ ಬಂದು ತಾಯಿಯ ಕೈಹಿಡಿದು ಮುನ್ನಡೆದಳು. ಸ್ವಚ್ಛತೆಯ ಸಂಸ್ಕಾರದಿಂದ ನಾವು ಬಹಳ ದೂರ ಇದ್ದೇವೆ ಎನಿಸಿತು. (ಈಗ ಕೂಡ ಹಾಗೇ ಅನಿಸುತ್ತಿದೆ).
ಗಾರ್ಡನ್‌ನಲ್ಲಿ ಇಬ್ಬರು ಹಿರಿಯರ ಜೊತೆ ಮಾತನಾಡ ಬಯಸಿದೆ. ನಾನು ಹೇಳುವುದೆಲ್ಲ ಅವರಿಗೆ ಅರ್ಥವಾಗಲಿಲ್ಲ. ಅವರು ಹೇಳುವುದು ನನಗೆ ಅರ್ಥವಾಗಲಿಲ್ಲ. ಒಂದಂತೂ ಅರ್ಥವಾಯಿತು. ಅವರು ಈ ಸುಸ್ಥಿತಿಗೆ ಬರಲು ಬಹಳ ಕಷ್ಟಪಟ್ಟಿದ್ದು.
ಉದ್ಯಾನ ಸುತ್ತಾಡಿದ ಮೇಲೆ ಅಕ್ಟೋಬರ್ 1917ರ ಕ್ರಾಂತಿಯ ಸಾಕ್ಷ್ಯಚಿತ್ರವೊಂದನ್ನು ನೋಡಿ ಹೊರಗೆ ಬಂದು ಅಲ್ಲಿನ ಮುಖ್ಯ ರಸ್ತೆಯಲ್ಲಿ ಒಂದು ಸುತ್ತು ಹಾಕತೊಡಗಿದೆವು. ಎಲ್ಲೆಡೆ ಭಾರತದ ಧ್ವಜಗಳು ಮತ್ತು ಧ್ವಜದ ಗುರುತಿನ ಬಂಟಿಂಗ್ (ತೋರಣ)ಗಳು ನನ್ನನ್ನು ಮಂತ್ರಮುಗ್ಧವಾಗಿಸಿದವು. ಭಾರತೀಯ ಸಂಗೀತ ಸಿತಾರ, ಶಹನಾಹಿ ಮೂಲಕ ಹೊರಹೊಮ್ಮುತ್ತಿದ್ದು ಆ ಸಾಯಂಕಾಲದ ವೇಳೆ ಇನ್ನೂ ಆಹ್ಲಾದಕರವಾಗಿ ಕೇಳಿಸುತ್ತಿತ್ತು. ಎಷ್ಟೋ ಜನ ನಮಗೆ ವಿಶ್ ಮಾಡುತ್ತಿದ್ದರು. ‘ವುಯ್ ಆರ್ ಫ್ರಾಮ್ ಇಂಡಿಯಾ’ ಎಂದಾಗ ಇಂಜಿಷ್ಕಿ ದ್ರುಜಿಯೆ (ಭಾರತದ ಮಿತ್ರರು) ಎಂದು ಖುಷಿ ಪಡುತ್ತಿದ್ದರು.
ಅಲ್ಲಿಯೆ ರಸ್ತೆ ಬದಿ ಇದ್ದ ಫೋಟೊ ಸ್ಟುಡಿಯೊ ಸರಳ ಸುಂದರವಾಗಿತ್ತು. ಅಲ್ಲಿ ಅನೇಕ ಫೋಟೊಗಳನ್ನು ತೂಗು ಹಾಕಿದ್ದರು. ಅವುಗಳಲ್ಲಿ ಉಜ್ಬೆಕ್ ಸುಂದರಿಯೊಬ್ಬಳ ದೊಡ್ಡ ಕಪ್ಪುಬಿಳುಪಿನ ಫೋಟೊ ಇದ್ದು ಆಕೆಯ ಕೊರಳಲ್ಲಿ ಆಕರ್ಷಕ ಮುತ್ತಿನ ಹಾರ ಇದ್ದದ್ದು ನೆನಪಿದೆ. ಆಕೆ ಬಹುಶಃ ಚಿತ್ರತಾರೆಯಾಗಿರಬಹದು.
ಸಂಜೆಯಾಗುತ್ತಿದ್ದಂತೆ ರೇಡಿಯೋ ತಾಷ್ಕೆಂಟ್‌ನಲ್ಲಿ ನಮ್ಮ ಹಿಂದಿ ಸಿನಿಮಾ ಹಾಡುಗಳು ಶುರುವಾದವು. “ಮೈ ಆವಾರಾ ಹ್ಞೂ” ಹಾಡು ಕೇಳಿ ಆಶ್ಚರ್ಯವೆನಿಸಿತು. ಈ “ಆವಾರಾ” ಹಾಡು ಸೋವಿಯತ್ ದೇಶದಲ್ಲಿ ಪ್ರಸಿದ್ಧವಾಗಿದ್ದು ನನಗೆ ಮೊದಲೇ ತಿಳಿದಿತ್ತು. ರಾಜಕಪೂರ್ (ಬಹುಶಃ ನರ್ಗಿಸ್ ಜೊತೆ ಸೇರಿ) ಮಾಸ್ಕೋಗೆ ಭೇಟಿ ನೀಡಿದಾಗ ಅವರನ್ನು ವಿಮಾನ ನಿಲ್ದಾಣದಿಂದ ತೆರೆದ ವಾಹನದಲ್ಲಿ ಕರೆದೊಯ್ಯಲಾದ ವಿಡಿಯೋ ಕ್ಲಿಪ್ ಅನ್ನು ಮೊದಲೇ ನೋಡಿದ್ದೆ. ಆಗ ರಸ್ತೆಯ ಎರಡೂ ಬದಿಯಲ್ಲಿ ನಿಂತ ರಷ್ಯನ್ ಜನ “ಮೈ ಆವಾರಾ ಹ್ಞೂ” ಹಾಡುತ್ತಿದ್ದರು. ನಮ್ಮ ದೇಶದಲ್ಲಿ ರಾಜಕಪೂರ್‌ಗೆ ‘ಪೀಪಲ್ಸ್ ಸ್ಟಾರ್’ ಎಂದು ಕರೆಯುತ್ತಿದ್ದರು.
ತಾಷ್ಕೆಂಟಲ್ಲಿ ನನಗೆ ಬಹಳ ಹಿಡಿಸಿದ ಸ್ಮಾರಕವೆಂದರೆ ಅಲ್ಲಿನ ಪೀಪಲ್ಸ್ ಫ್ರೆಂಡ್‍ಶಿಪ್ ಕಾನ್ಸರ್ಟ್ ಹಾಲ್ ಮುಂದೆ ಇರುವ ಕಮ್ಮಾರ ದಂಪತಿ, ತಾವು ಸಾಕಿದ 15 ಅನಾಥ ಮಕ್ಕಳ ಜೊತೆಗಿರುವ ಮೂರ್ತಿ. ಎರಡನೇ ಮಹಾಯುದ್ಧದಲ್ಲಿ ಅನಾಥರಾದ 15 ಮಕ್ಕಳನ್ನು ಆ ಬಡ ದಂಪತಿ ಯುದ್ಧ ಮುಗಿಯುವವರೆಗೆ ಅಂದರೆ ಐದಾರು ವರ್ಷ ಕಷ್ಟಪಟ್ಟು ದುಡಿದು ಸಾಕಿದ್ದರು. ಯುದ್ಧಾನಂತರ ಈ ವಿಷಯ ಸರ್ಕಾರದ ಗಮನಕ್ಕೆ ಬಂದಿತು. ಸರ್ಕಾರ ಕೃತಜ್ಞತಾಪೂರ್ವಕವಾಗಿ 15 ಮಕ್ಕಳ ಜೊತೆ ಅವರ ಮೂರ್ತಿಯನ್ನು ಪ್ರತಿಷ್ಠಾಪಿಸಿತು. ಈ ಮೂರ್ತಿ ಮಾನವೀಯತೆಯ ಸಂಕೇತವಾಗಿ ಕಂಗೊಳಿಸುತ್ತಿದೆ.
ನಾನು ಬಹುಶಃ ಹತ್ತನೆಯ ಮಹಡಿಯಲ್ಲಿದ್ದರಬಹುದು. ‘ರಾಮಸ್ವಾಮಿ ಐಸಾ, ಜೋರ್ ದಬಾಕೆ ಐಸಾʼ ಎಂದ ಹಾಗೆ ಸಮೂಹ ಧ್ವನಿ ಕೇಳಿಸತೊಡಗಿತು. ನನಗೆ ಆಶ್ಚರ್ಯವೆನಿಸಿತು. ಕಿಟಕಿಯಿಂದ ನೋಡಿದೆ ರಸ್ತೆ ಆಚೆ ಬದಿಯಲ್ಲಿ ಕಾರ್ಮಿಕರು ಉದ್ದನೆಯ ಕಬ್ಬಿಣದ ವಸ್ತುವೊಂದನ್ನು ಎಬ್ಬಿಸಿ ಕುಣಿಯಲ್ಲಿ ನಿಲ್ಲಿಸುತ್ತಿದ್ದರು. ನನಗೋ ಎಲ್ಲಿಲ್ಲದ ಖುಷಿ. ಏಕೆಂದರೆ ‘ದುಡಿಯುವ ವರ್ಗಕ್ಕೆ ಒಂದೇ ಲಯ ಇದೆ’ ಎಂಬ ಸತ್ಯವನ್ನು ಅರಿತ ಕ್ಷಣ ಅದಾಗಿತ್ತು.
ಎರಡನೇ ಮಹಾಯುದ್ಧದಲ್ಲಿ ಸೋವಿಯತ್ ದೇಶದ ಎರಡು ಕೋಟಿ ಜನ ಸತ್ತರು. 10 ಲಕ್ಷಕ್ಕೂ ಹೆಚ್ಚು ಜನ ನಿರಾಶ್ರಿತರಾಗಿ ದಿಕ್ಕಾಪಾಲಾದರು. ವಿವಿಧ ಜನಾಂಗಗಳ 2 ಲಕ್ಷ ಮಂದಿ ಅನಾಥ ಮಕ್ಕಳು ತಾಷ್ಕೆಂಟ್ ಕಡೆ ಬಂದರು. ತಾಷ್ಕೆಂಟ್ ರೈಲು ನಿಲ್ದಾಣದಲ್ಲಿ ಪ್ರತಿದಿನ 400 ರಷ್ಟು ಅನಾಥ ಮಕ್ಕಳು ಬರುತ್ತಿದ್ದರು. ಅಲ್ಲಿನ ಸಾವಿರಾರು ಕುಟುಂಬಗಳು ವಿವಿಧ ಜನಾಂಗಗಳ ಮಕ್ಕಳ ಪೋಷಣೆ ಮಾಡಿದವು. ಅವುಗಳ ಹಿನ್ನೆಲೆ ಕೇಳಲಿಲ್ಲ. ಹೆಸರು ಕೇಳಲಿಲ್ಲ. ತಮ್ಮದೇ ಹೆಸರಿಟ್ಟು ತಮ್ಮ ಮಕ್ಕಳಂತೆ ನೋಡಿಕೊಂಡವು. ಉಜ್ಬೆಕಿಸ್ತಾನ್ ಜನರು ಆತಿಥ್ಯಕ್ಕೆ ಪ್ರಸಿದ್ಧರು. ಅವರು ದಪ್ಪನೆಯ ರೊಟ್ಟಿ ಮತ್ತು ಉಪ್ಪಿನಿಂದ ಅತಿಥಿಗಳನ್ನು ಸ್ವಾಗತಿಸುತ್ತಾರೆ. ಇದು ದಾಸೋಹ ಭಾವ. ಯಾರೂ ಉಪವಾಸ ಬೀಳಬಾರದು ಎಂಬುದರ ಸಂಕೇತ. ಇದು ಉಜ್ಬೆಕಿಸ್ತಾನ ಸಂಸ್ಕೃತಿ. ಅದಕ್ಕೆ ‘ರೊಟ್ಟಿಯ ನಾಡು’ ಎಂದು ಕರೆಯುತ್ತಾರೆ. ಅವರು ಮಾಡುವ ದಪ್ಪನೆಯ ಪೌಷ್ಟಿಕಾಂಶಗಳಿಂದ ಕೂಡಿದ ರೊಟ್ಟಿ ಒಂದು ವರ್ಷದವರೆಗೆ ಇಡಬಹುದು. ಅವರು ದಾಸೋಹದಲ್ಲಿ ಸಂತಸ ಪಡುತ್ತಾರೆ. ಮದುವೆ ಮುಂತಾದ ಸಮಾರಂಭಗಳಲ್ಲಿ ನಮ್ಮ ಹಾಗೆಯೆ ಸಾವಿರಾರು ಜನರಿಗೆ ಸಾಕಾಗುವಷ್ಟು ಅಡುಗೆ ತಯಾರಿಸುತ್ತಾರೆ. ಇಂಥದ್ದು ಅಂದಿನ ಸೋವಿಯತ್ ದೇಶದ ಎಲ್ಲ ಗಣರಾಜ್ಯಗಳಲ್ಲಿ ಈ ಸಂಪ್ರದಾಯವಿಲ್ಲ. ಅವುಗಳಲ್ಲಿನ ಮಧ್ಯ ಏಷ್ಯಾದ 5 ಮುಸ್ಲಿಂ ಪ್ರಾಬಲ್ಯದ ಗಣರಾಜ್ಯಗಳಲ್ಲಿ ಈ ಸಂಪ್ರದಾಯವಿದೆ. ಈಗ ಅವೆಲ್ಲ ಸ್ವತಂತ್ರ ದೇಶಗಳಾಗಿವೆ. ಉಜ್ಬೆಕಿಸ್ತಾನದಲ್ಲಿ ನೂರು ಜನಾಂಗೀಯ ಸಮುದಾಯಗಳು ಒಂದಾಗಿ ಬದುಕುತ್ತಿವೆ. ಇದು ಅವರ ಮಾನವೀಯ ಸ್ಪಂದನದ ಸಂಕೇತ.
ಮರುದಿನ ಶಾಸ್ತ್ರಿ ಸ್ಮಾರಕ ಹಿಂದಿ ಮಾಧ್ಯಮ ಸ್ಕೂಲ್‌ಗೆ ಭೇಟಿ ನೀಡಲು ಹೋಗುವಾಗ ಬೃಹತ್ತಾದ “ಗಂಗಾ ಬಜಾರ್” ಕಣ್ಣಿಗೆ ಬಿದ್ದಿತು. ಅಲ್ಲಿ ಭಾರತದ ಎಲ್ಲ ಪ್ರದೇಶಗಳ ಕಲಾತ್ಮಕ ವಸ್ತುಗಳು, ಆಹಾರ ಪದಾರ್ಥಗಳು, ಕಾಫಿಪುಡಿ ಮುಂತಾದವು ಸಿಗುತ್ತವೆ. ಅಂದು ಭಾರತದಿಂದ ಹೊಸ ವಸ್ತುಗಳು ಬಂದದ್ದರಿಂದ ಗಂಗಾ ಬಜಾರ್ ಮುಂದೆ ದೊಡ್ಡ ಕ್ಯೂ ಇತ್ತು. ಅಲ್ಲಿಯ ಜನರಿಗೆ ಭಾರತದ ಕಾಫಿ ಎಂದರೆ ಬಹಳ ಇಷ್ಟ. ಅವರು ಬಿಸ್ಕತ್ ಜೊತೆ ಬ್ಲ್ಯಾಕ್ ಕಾಫಿ ಕುಡಿಯುತ್ತಾರೆ.
ಶಾಸ್ತ್ರಿ ಸ್ಮಾರಕ ಸ್ಕೂಲ್ ಇನ್ನೂ ದೂರ ಇತ್ತು. ರಸ್ತೆ ಬಲಗಡೆ ಎತ್ತರದ ಪ್ರದೇಶದಲ್ಲಿ ಅರ್ಧ ಬಿದ್ದ ಮನೆಗಳು ಕಂಡವು. ಅವುಗಳನ್ನು ಬಟ್ಟೆಯಿಂದ ಮುಚ್ಚಲಾಗಿತ್ತು. ಕಾರು ನಿಲ್ಲಿಸಲು ನಮ್ಮ ಗೈಡ್‌ಗೆ ಹೇಳಿದೆ. ಕಾರು ನಿಲ್ಲಿಸಿ ಕಾರಣ ಕೇಳಿದಳು. ಅಲ್ಲಿರುವ ಜನರಿಗೆ ಭೇಟಿ ಮಾಡಬಹುದೆ? ಎಂದೆ. ಅವರು ಕರೆದುಕೊಂಡು ಹೋದರು.
1966ನೇ ಏಪ್ರಿಲ್ 26ರಂದು ಬೆಳಿಗ್ಗೆ 5.24ರ ವೇಳಿಗೆ ಸಂಭವಿಸಿದ ಭೂಕಂಪದಲ್ಲಿ 20 ಸಾವಿರ ಕಟ್ಟಡಗಳು ಅಂದರೆ ಸುಮಾರು ಅರ್ಧದಷ್ಟು ತಾಷ್ಕೆಂಟ್ ನಗರ ಒಂದೇ ಕ್ಷಣದಲ್ಲಿ ನಾಶವಾಗಿತ್ತು. ಸರ್ಕಾರ ಜನಶಕ್ತಿಯ ಸಹಾಯದೊಂದಿಗೆ ನಿರಂತರ ಶ್ರಮದಿಂದ ಆ ಅರ್ಧ ನಗರದ ಪುನರ್ ನಿರ್ಮಾಣ ಮಾಡಿತು. ಈ ಎತ್ತರ ಪ್ರದೇಶದ ನಿವಾಸಿಗಳಿಗೂ ವಸತಿ ವ್ಯವಸ್ಥೆ ಮಾಡಿತು. ಅವರು ತಮಗೆ ಕೊಟ್ಟ ವಸತಿ ನಿಲಯಗಳನ್ನು ಪಡೆದುಕೊಂಡರು. ಆದರೆ ಅಲ್ಲಿಗೆ ಹೋಗಲಿಲ್ಲ. ಕಾರಣ ಕೇಳಿದಾಗ, ‘ಹೇಗೆ ಹೋಗೋದು? ಇಲ್ಲಿ ನಮ್ಮ ಹಿರಿಯರ ನೆನಪುಗಳಿವೆ’ ಎಂದರು! ನಾನು ಒಂದು ಕ್ಷಣ ತಬ್ಬಿಬ್ಬಾದೆ. ನಾನು ಹುಟ್ಟಿ ಬೆಳೆದ ಕಡೆಯಲ್ಲೂ ಇಂಥ ಘಟನೆಗಳನ್ನು ಕೇಳಿದ್ದೇನೆ. ಮಕ್ಕಳು ನಗರಗಳಲ್ಲಿ ದೊಡ್ಡ ಮನೆ ಕಟ್ಟಿದರೂ ಹಳ್ಳಿಗರು ತಮ್ಮ ಗುಡಿಸಲು ಬಿಟ್ಟು ಮಕ್ಕಳ ದೊಡ್ಡ ಮನೆಗಳಲ್ಲಿ ಹೋಗಿ ಇರ ಬಯಸುವುದಿಲ್ಲ. ಯಾವುದೇ ವ್ಯವಸ್ಥೆಯಲ್ಲಿ ಮನುಷ್ಯನ ಭಾವಲೋಕ ಒಂದೇ ಆಗಿರುತ್ತದೆ ಎಂಬ ಸತ್ಯದ ಸಾಕ್ಷಾತ್ಕಾರವಾಯಿತು. ಅವರ ಬಗ್ಗೆ ಹೆಮ್ಮೆ ಎನಿಸಿತು. ಆದರೆ ನನ್ನ ಜೊತೆ ಇದ್ದವರಿಗೆ ‘ಇದು ಅವಾಸ್ತವ’ ಎನಿಸಿತು. ತಾಷ್ಕೆಂಟ್ ನಗರದಲ್ಲಿ ಈ ಭೂಕಂಪದ ವೇಳೆಯಲ್ಲಿ ಪರಿಹಾರ ಕಾರ್ಯ ಮಾಡಿದ ವೀರರಿಗೆ ಮತ್ತು ಜೀವ ಕಳೆದುಕೊಂಡವರಿಗೆ ಸರ್ಕಾರ ಸ್ಮಾರಕವೊಂದನ್ನು ನಿರ್ಮಿಸುವ ಮೂಲಕ ಶ್ಲಾಘನೀಯ ಕಾರ್ಯ ಮಾಡಿದೆ.
ನಾವು ಶಾಸ್ತ್ರಿ ಸ್ಮಾರಕ ಹಿಂದೀ ಸ್ಕೂಲ್‌ಗೆ ಭೇಟಿ ನೀಡಿದಾಗ ಹೃದಯಂಗಮ ಸ್ವಾಗತ ಸಿಕ್ಕಿತು. ಬಾಲಕಿಯರು ಭಾರತೀಯ ಸಂಸ್ಕೃತಿಯ ಪ್ರಕಾರ ಹಿಂದಿಯಲ್ಲಿ ಸ್ವಾಗತಿಸಿದರು. ಅಲ್ಲಿಯೂ ತಿವರ್ಣ ಧ್ವಜ ಎದ್ದು ಕಾಣುತ್ತಿತ್ತು. ಸೋವಿಯತ್ ದೇಶದಲ್ಲಿ ಭಾರತದ ಸ್ವಾತಂತ್ರ್ಯೋತ್ಸವವನ್ನು ಒಂದು ವಾರ ಕಾಲ ಆಚರಿಸುತ್ತಿದ್ದರು. (ಅದು ಒಡೆದು 15 ರಾಷ್ಟ್ರಗಳಾದ ನಂತರ ಏನಾಗಿದೆಯೋ ಗೊತ್ತಿಲ್ಲ. ಆದರೆ ಉಜ್ಬೆಕಿಸ್ತಾನದಲ್ಲಿ ಲಾಲ ಬಹಾದ್ದೂರ ಶಾಸ್ತ್ರಿಗಳ ಬಗ್ಗೆ ಇಂದಿಗೂ ಅದೇ ಗೌರವವಿದೆ ಎಂಬುದನ್ನು ತಿಳಿದುಕೊಂಡಿರುವೆ.)
ತಾಷ್ಕೆಂಟಲ್ಲಿ ಲಾಲಬಹಾದ್ದೂರ ಶಾಸ್ತ್ರಿ ಹೆಸರಿನಲ್ಲಿ ಬೀದಿ ಇದೆ. ಸುಂದರ ಉದ್ಯಾನ ನಿರ್ಮಿಸಿ ಲಾಲಬಹದ್ದೂರ ಶಾಸ್ತ್ರಿಗಳ ಎದೆಮಟ್ಟದ ಮೂರ್ತಿಯ ಸ್ಥಾಪನೆ ಮಾಡಿದ್ದಾರೆ. ಭಾರತೀಯರಿಗೆ ಅದೊಂದು ಪ್ರೇಕ್ಷಣೀಯ ಸ್ಥಳವಾಗಿದೆ.
ಲಾಲಬಹದ್ದೂರ ಶಾಸ್ತ್ರಿಗಳು 1964ನೇ ಜೂನ್ 9ರಿಂದ 1966ನೇ ಜನವರಿ 11ರವರೆಗೆ ಭಾರತದ ಎರಡನೇ ಪ್ರಧಾನಿಯಾಗಿದ್ದರು. 1965ನೇ ಆಗಸ್ಟ್ 1 ರಂದು ಪಾಕಿಸ್ತಾನ ಭಾರತದ ಮೇಲೆ ಯುದ್ಧ ಸಾರಿತು. ವಿಶ್ವಸಂಸ್ಥೆಯ ಮಧ್ಯಸ್ಥಿಕೆಯಿಂದಾಗಿ 1965ನೇ ಸೆಪ್ಟೆಂಬರ್ 23ರಂದು ಯುದ್ಧ ವಿರಾಮ ಘೋಷಿಸಲಾಯಿತು. ಅಂದಿನ ಸೋವಿಯತ್ ದೇಶದ ಪ್ರಧಾನಿ ಅಲೆಕ್ಸಿ ಕೊಸಿಗಿನ್ ಮಧ್ಯಸ್ಥಿಕೆಯಲ್ಲಿ ಭಾರತ ಪಾಕಿಸ್ತಾನ ಮಧ್ಯದ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಹಿಡಿಯುವುದಕ್ಕಾಗಿ ತಾಷ್ಕೆಂಟಲ್ಲಿ ಭಾರತದ ಪ್ರಧಾನಿ ಲಾಲಬಹದ್ದೂರ ಶಾಸ್ತ್ರಿ ಮತ್ತು ಪಾಕಿಸ್ತಾನದ ಅಧ್ಯಕ್ಷ ಅಯೂಬ್ ಖಾನ್ ಅವರ ಜಂಟೀ ಸಭೆ ಕರೆಯಲಾಯಿತು. ಈ ಶಾಂತಿ ಒಪ್ಪಂದ ಸಭೆ 1966ನೇ ಜನವರಿ 3 ರಂದು ಪ್ರಾರಂಭವಾಗಿ ಜನವರಿ 10ರವರೆಗೆ ನಡೆಯಿತು. ಎರಡೂ ದೇಶಗಳ ಮಧ್ಯದ ಈ ಐತಿಹಾಸಿಕ ಶಾಂತಿ ಒಪ್ಪಂದವಾದ ‘ತಾಷ್ಕೆಂಟ್ ಘೋಷಣೆ’ಗೆ ಜನವರಿ 10ರಂದು ಸಹಿ ಹಾಕಲಾಯಿತು. ಅಂದೇ ರಾತ್ರಿ ಲಾಲಬಹದ್ದೂರ ಶಾಸ್ತ್ರಿ ಅವರು ತಮ್ಮ ಪತ್ನಿ ಲಲಿತಾ ಶಾಸ್ತ್ರಿ ಅವರಿಗೆ ಫೋನ್ ಮಾಡಿದರು. ಮಗಳು ಫೋನ್ ತೆಗೆದುಕೊಂಡಳು. ಶಾಸ್ತ್ರಿ ಅವರ ಪತ್ನಿ ಫೋನ್ ತೆಗೆದುಕೊಳ್ಳಲು ನಿರಾಕರಿಸಿದರು. ಒಪ್ಪಂದದ ಪ್ರಕಾರ ಹಾಜಿಪೀರ್ ಮತ್ತು ರಜಿತವಾಲ್ ಪ್ರದೇಶಗಳನ್ನು ಪಾಕಿಸ್ತಾನಕ್ಕೆ ಬಿಟ್ಟುಕೊಡಬೇಕಿತ್ತು. ಇದರಿಂದ ಲಲಿತಾ ಶಾಸ್ತ್ರಿ ಅವರು ಬೇಸರಗೊಂಡ ಕಾರಣ ಫೋನ್ ತೆಗೆದುಕೊಳ್ಳಲಿಲ್ಲ. ಶಾಸ್ತ್ರಿ ಅವರು ಭಾರತದಲ್ಲಿ ಈ ಒಪ್ಪಂದಕ್ಕೆ ಸಂಬಂಧಿಸಿದಂತೆ ಯಾವ ರೀತಿ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂಬುದನ್ನು ಪ್ರಧಾನಿ ಕಚೇರಿಯ ಅಧಿಕಾರಿಗಳಿಂದ ತಿಳಿದುಕೊಂಡರು.
ವಾಜಪೇಯಿ ಮತ್ತು ಕೃಷ್ಣಾ ಮೆನನ್ ಈ ಒಪ್ಪಂದವನ್ನು ಟೀಕಿಸಿದ್ದು ರಾತ್ರಿ ಗೊತ್ತಾಯಿತು. ತದನಂತರ ಶಾಸ್ತ್ರಿಗಳು ದಣಿದವರಂತೆ ಕಾಣುತ್ತಿದ್ದರು ಎಂದು ಜೊತೆಗಿದ್ದವರು ತಿಳಿಸಿದ್ದು ದಾಖಲೆಯಾಗಿದೆ. ರಾತ್ರಿ ಒಂದಿಷ್ಟು ಊಟ ಮಾಡಿ ಮಲಗಿದವರು ತಡರಾತ್ರಿ 1.30ರ ಸುಮಾರಿಗೆ ಅಂದರೆ 1966ನೇ ಜನವರಿ 11ರಂದು ಹೃದಯಾಘಾತದಿಂದ ತೀರಿಕೊಂಡಿದ್ದಾರೆ ಎಂದು ವೈದ್ಯರು ಘೋಷಿಸಿದರು. 1959ರಲ್ಲಿ ಕೂಡ ಅವರಿಗೆ ಹೃದಯಾಘಾತವಾಗಿತ್ತು ಎಂದು ಅವರ ಸಿಬ್ಬಂದಿ ಜೊತೆಗಿದ್ದ ಖ್ಯಾತ ಪತ್ರಕರ್ತ ಕುಲದೀಪ್ ನಯ್ಯರ್ ಬರೆದಿದ್ದಾರೆ.
ಶಾಸ್ತ್ರಿ ಅವರ ಸಾವು ಸಂಶಯಕ್ಕೆ ಎಡೆಮಾಡಿಕೊಟ್ಟಿತು. ಈ ಸಾವು ನಿಗೂಢವಾಗಿದೆ ಎಂದು ಲಲಿತಾ ಶಾಸ್ತ್ರಿ ಅವರು ತಿಳಿಸಿದರು. ತಾಷ್ಕೆಂಟಲ್ಲಿ ಮರಣೋತ್ತರ ಶವ ಪರೀಕ್ಷೆ ನಡೆಯಲಿಲ್ಲ. ದೆಹಲಿಯಲ್ಲೂ ನಡೆಯಲಿಲ್ಲ!
ಈ ಒಪ್ಪಂದಕ್ಕೆ ಭಾರತದಲ್ಲಿ ಟೀಕೆಗಳು ಬಂದ ರೀತಿಯಲ್ಲೇ ಪಾಕಿಸ್ತಾನದಲ್ಲಿ ಕೂಡ ಟೀಕೆಗಳು ಬಂದವು. ಕೊನೆಗೆ ಅಯೂಬ್ ಖಾನ್ ಅಧ್ಯಕ್ಷ ಪದವಿಯಿಂದ ಇಳಿಯಬೇಕಾಯಿತು. ‘ಪತ್ನಿ ಲಲಿತಾ ಶಾಸ್ತ್ರಿ ಬೇಸರಗೊಂಡಾಗ ಮತ್ತು ವಿರೋಧ ಪಕ್ಷದ ನಾಯಕರು ಟೀಕಿಸಿದಾಗ ಸೂಕ್ಷ್ಮ ಮನಸ್ಸಿನ ಶಾಸ್ತ್ರಿಗಳಿಗೆ ಹೇಗಾಗಿರಬೇಡ’ ಎಂಬ ವಿಚಾರ ನೆನಪಾದಾಗಲೆಲ್ಲ ನನಗೆ ಕಾಡುತ್ತಲೇ ಇದೆ.
18 ತಿಂಗಳು ಪ್ರಧಾನಿಯಾಗಿದ್ದ ಶಾಸ್ತ್ರಿಗಳು ಭಾರತೀಯ ಮನಸ್ಸನ್ನು ಗೆದ್ದಿದ್ದರು. ಯುದ್ಧ ಸಂದರ್ಭದಲ್ಲಿ ಆಹಾರ ಕೊರತೆಯುಂಟಾಗುವ ಸಾಧ್ಯತೆ ಇದ್ದಾಗ ಪ್ರತಿ ಸೋಮವಾರ ರಾತ್ರಿ ಉಪವಾಸ ಮಾಡಬೇಕೆಂದು ಶಾಸ್ತ್ರಿಗಳು ಕರೆ ನೀಡಿದರು. ಭಾರತೀಯರು ಅವರ ಮಾತನ್ನು ಪಾಲಿಸಿದರು. ಆಗ 8ನೇ ಇಯತ್ತೆ ಓದುತ್ತಿದ್ದ ನಾನು ಕೂಡ ಅವರ ಕರೆಯನ್ನು ನಿಷ್ಠೆಯಿಂದ ಪಾಲಿಸಿದೆ. ಹೊಟೇಲ್‌ಗಳು ಸೋಮವಾರ ರಾತ್ರಿ ಮುಚ್ಚಿರುತ್ತಿದ್ದವು.
1964ನೇ ಅಕ್ಟೋಬರ್ 19 ರಂದು ಅಲಹಾಬಾದ್‌ನಲ್ಲಿ ಅವರು ಮಾಡಿದ “ಜೈ ಜವಾನ್ ಜೈ ಕಿಸಾನ್” ಘೋಷಣೆ ಭಾರತೀಯರಲ್ಲಿ ಹೊಸ ಹುರುಪು ತುಂಬಿತು. ನಂತರ ಪಾಕಿಸ್ತಾನ ದಂಡೆತ್ತಿ ಬಂದಾಗ ಭಾರತದ ಸೈನಿಕರು ಪಾಕ್ ಸೈನ್ಯವನ್ನು ಲಾಹೋರ್ ವರೆಗೂ ಅಟ್ಟಿಸಿಕೊಂಡು ಹೋಗಿದ್ದರು.
ಭಾರತ ಪಾಕ್ ಯುದ್ಧದ ಸಂದರ್ಭದಲ್ಲಿನ ಒಂದು ಘಟನೆ ನೆನಪಾಗುತ್ತಿದೆ. ನಾವು ನಾಲ್ಕೈದು ಜನ ಎಂಟನೆಯ ಇಯತ್ತೆ ಗೆಳೆಯರು, ನಮ್ಮ ನಾವಿಗಲ್ಲಿ ಮನೆ ಬಳಿ ಇದ್ದ ಗೆಳೆಯ ಮಲ್ಲೇಶಪ್ಪ ಪಾಟೀಲ ಮನೆಯಲ್ಲಿ ರಾತ್ರಿ ಕೂಡಿ ಓದುತ್ತ ಅಲ್ಲೇ ಮಲಗುತ್ತಿದ್ದೆವು. ಈ ಯುದ್ಧದ ಸಂದರ್ಭದಲ್ಲಿ ನಮ್ಮ ಮಧ್ಯೆ ಮಾತಿಗೆ ಮಾತು ಬೆಳೆಯಿತು. ಅವರೆಲ್ಲ ಸೇರಿ ಮುಸ್ಲಿಮರನ್ನು ಹೀಯಾಳಿಸಿದರು. ನಾನು ಅಪಮಾನಿತನಾಗಿ ಎದ್ದು ‘ಬೆಳಿಗ್ಗೆ ಮಿಲಿಟರಿ ಸೇರುವೆ’ ಎಂದು ಹೇಳಿ ಹೊರಗೆ ಬಂದು ಸಿದ್ಧೇಶ್ವರ ಗುಡಿಗೆ ಹೋಗಿ, ಕಟ್ಟೆಯ ಮೇಲೆ ಮಲಗಿದೆ. ಚಳಿಯಿಂದಾಗಿ ರಾತ್ರಿಯಿಡಿ ಸರಿಯಾಗಿ ನಿದ್ದೆ ಬರಲಿಲ್ಲ. ಬೆಳಿಗ್ಗೆ ಎದ್ದು ಸ್ಟೇಷನ್ ರೋಡ್‌ನಲ್ಲಿರುವ ಐಬಿ ಕಡೆಗೆ ಹೊರಟೆ. ಯುದ್ಧದ ಸಂದರ್ಭವಾಗಿದ್ದರಿಂದ 14 ವರ್ಷ ಮೀರಿದ ಬಾಲಕರನ್ನೂ ಅಲ್ಲಿ ಮಿಲಿಟರಿಗೆ ಸೇರಿಸಿಕೊಳ್ಳುತ್ತಿದ್ದರು. ನಾನು ಎಲ್ಲ ದೈಹಿಕ ಪರೀಕ್ಷೆಯಲ್ಲಿ ಉತ್ತೀರ್ಣನಾದೆ. ಆದರೆ ತೂಕ ಕಡಿಮೆ ಇತ್ತು. ಅಷ್ಟೊತ್ತಿಗೆ ನನ್ನ ಅಜ್ಜಿ ಮತ್ತು ತಾಯಿ ಬಂದು ಅಳುತ್ತ ನಿಂತಿದ್ದರು. ಬೆಳಿಗ್ಗೆ ಮನೆಗೆ ಬರದ ಕಾರಣ ಮಲ್ಲೇಶಪ್ಪನಿಗೆ ಕೇಳಿರಬಹುದು, ಆತ ನಾನು ಇಲ್ಲಿಗೆ ಹೋಗಿದ್ದರ ಬಗ್ಗೆ ತಿಳಿಸಿರಬಹುದು ಎಂದು ಊಹಿಸಿದೆ. ಆಯ್ಕೆ ಮಾಡುವ ಮಿಲಿಟರಿ ಅಧಿಕಾರಿಗೆ ನನ್ನ ಅಜ್ಜಿ ಮತ್ತು ತಾಯಿಯ ಪರಿಸ್ಥಿತಿ ಅರ್ಥವಾಯಿತು. ಮುಂದಿನ ಸಲ ತೂಕ ಹೆಚ್ಚಿಸಿಕೊಂಡು ಬರಬೇಕೆಂದು ಹೊರಗೆ ಕಳುಹಿಸಿದರು. ಆಗ ಬಹಳ ದುಃಖಿಯಾಗಿದ್ದೆ.
(ಮುಂದುವರೆಯುವುದು)
ಕನ್ನಡದ ಹಿರಿಯ ಲೇಖಕರು ಮತ್ತು ಪತ್ರಕರ್ತರು. ಬಂಡಾಯ ಕಾವ್ಯದ ಮುಂಚೂಣಿಯಲ್ಲಿದ್ದವರು. ವಿಜಾಪುರ ಮೂಲದ ಇವರು ಧಾರವಾಡ ನಿವಾಸಿಗಳು. ಕಾವ್ಯ ಬಂತು ಬೀದಿಗೆ (ಕಾವ್ಯ -೧೯೭೮), ಹೊಕ್ಕಳಲ್ಲಿ ಹೂವಿದೆ (ಕಾವ್ಯ), ಸಾಹಿತ್ಯ ಮತ್ತು ಸಮಾಜ, ಅಮೃತ ಮತ್ತು ವಿಷ, ನೆಲ್ಸನ್ ಮಂಡೇಲಾ, ಮೂರ್ತ ಮತ್ತು ಅಮೂರ್ತ, ಸೌಹಾರ್ದ ಸೌರಭ, ಅಹಿಂದ ಏಕೆ? ಬಸವಣ್ಣನವರ ದೇವರು, ವಚನ ಬೆಳಕು, ಬಸವ ಧರ್ಮದ ವಿಶ್ವಸಂದೇಶ, ಬಸವಪ್ರಜ್ಞೆ, ನಡೆ ನುಡಿ ಸಿದ್ಧಾಂತ, ಲಿಂಗವ ಪೂಜಿಸಿ ಫಲವೇನಯ್ಯಾ, ಜಾತಿ ವ್ಯವಸ್ಥೆಗೆ ಸವಾಲಾದ ಶರಣರು, ಶರಣರ ಸಮಗ್ರ ಕ್ರಾಂತಿ, ಬಸವಣ್ಣ ಮತ್ತು ಅಂಬೇಡ್ಕರ್, ಬಸವಣ್ಣ ಏಕೆ ಬೇಕು?, ಲಿಂಗವಂತ ಧರ್ಮದಲ್ಲಿ ಏನುಂಟು ಏನಿಲ್ಲ?, ದಾಸೋಹ ಜ್ಞಾನಿ ನುಲಿಯ ಚಂದಯ್ಯ (ಸಂಶೋಧನೆ) ಮುಂತಾದವು ಅವರ ಪ್ರಕಟಿತ ಕೃತಿಗಳಾಗಿವೆ. ಕರ್ನಾಟಕ ಸರ್ಕಾರದ ರಾಷ್ಟ್ರೀಯ ಬಸವ ಪುರಸ್ಕಾರ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಮಾಧ್ಯಮ ಅಕಾಡೆಮಿ ಗೌರವ ಪ್ರಶಸ್ತಿ ಮುಂತಾದ ೫೨ ಪ್ರಶಸ್ತಿಗಳಿಗೆ ಭಾಜನರಾದ ರಂಜಾನ್ ದರ್ಗಾ ಅವರು ಬಂಡಾಯ ಸಾಹಿತ್ಯ ಪರಂಪರೆಯ ಶಕ್ತಿಶಾಲಿ ಕವಿಗಳಲ್ಲಿ ಒಬ್ಬರು. ಅಮೆರಿಕಾ, ನೆದರ್ಲ್ಯಾಂಡ್ಸ್, ಲೆಬನಾನ್, ಕೆನಡಾ, ಫ್ರಾನ್ಸ್, ಆಸ್ಟ್ರೇಲಿಯಾ ಸೇರಿದಂತೆ ಇನ್ನೂ ಹಲವು ದೇಶಗಳಲ್ಲಿ ಶರಣ ಸಂಸ್ಕೃತಿ, ಶಾಂತಿ ಮತ್ತು ಮಾನವ ಏಕತೆ ಕುರಿತು ಉಪನ್ಯಾಸ ನೀಡಿದ್ದಾರೆ.