ನನ್ನನ್ನು ಕಡೆಗಣಿಸಿ ನೋಡುತ್ತಿದ್ದವರಲ್ಲಿ ವಿಚಿತ್ರ ಮೌನ ಆವರಿಸಿತ್ತು. ಅಂದುಕೊಳ್ಳದೇ ಇದ್ದ ಅಸಾಧ್ಯವೊಂದು ಘಟಿಸಿತು: ಕಡೆಯಲ್ಲಿ ಕೋಲನ್ನು ಹಾರಲು ಉಳಿದ ಸ್ಪರ್ಧಿ ನಾನೊಬ್ಬನೇ. ದನದ ಮಾಂಸದ ತುಂಡು ಮತ್ತು ನನ್ನ ಸಹಪಾಠಿಗಳು ನಂಬಲಿಕ್ಕಾಗದೆ ನನ್ನತ್ತ ನೋಡುತ್ತಿದ್ದರು. ಇದು ಹೇಗೆ ಸಾಧ್ಯವಾಯಿತು? ಕೋಲಿನತ್ತ ಓಡುತ್ತಿದ್ದಂತೆ ನನಗೆ ಕಾಣಿಸಿದ್ದೇನು? ನಾನು ಮೊದಲ ಸಾರಿ ಓಡಲು ಶುರುಮಾಡಿದಾಗಿನಿಂದ ಪ್ರತಿಬಾರಿ ಓಡುವಾಗಲೂ ಮುಸಿನಗುತ್ತಿರುವ ಸದ್ದು ಕೇಳುತ್ತಿತ್ತು. ನನ್ನ ಮುಖದಲ್ಲೊಂದು ವಿಲಕ್ಷಣ ಭಾವ ಹಾದುಹೋಗಿರಬೇಕು. ಈಗಲೂ ಅದರ ಬಗ್ಗೆ ಯೋಚಿಸಿದಾಗ ನನಗದು ಅರ್ಥವಾಗಿಲ್ಲ. ಅದು ಕನಸೇ? ಪ್ರತಿ ದೈಹಿಕ ಶಿಕ್ಷಣದ ತರಗತಿಯಲ್ಲಿ ಎಲ್ಲರಿಗೂ ನಗೆಯ ವಸ್ತುವಾಗಿದ್ದ ಹುಡುಗ ತನ್ನ ಗೆಲುವನ್ನು ಕುರಿತು ಕಂಡ ಕನಸೇ?
ಹೇಮಾ.ಎಸ್. ಅನುವಾದಿಸಿರುವ ಅಕಿರ ಕುರಸೋವನ ಆತ್ಮಕತೆಯ ಎಂಟನೆಯ ಅಧ್ಯಾಯ.
ಕೆಕಾ ಮಾಧ್ಯಮಿಕ ಶಾಲೆಗೆ ಸೇರಿದಾಗ ಅದು ಟೋಕಿಯೊದ ಓಚನೊಮಿಜು (Ochanomizu ) ಜಿಲ್ಲೆಯ ಕೆಕಾ ವಾಣಿಜ್ಯ ಶಾಲೆಯ ಪಕ್ಕದಲ್ಲಿತ್ತು (ಇಲ್ಲೇ ವೆಕ್ಸಾ ಓದಿದ್ದು). ಇಂದಿಗೂ ಅದು ಜುಂತೆಂದೋ ಆಸ್ಪತ್ರೆ ಮತ್ತು ವಿಶಾಲ ರಸ್ತೆಯ ನಡುವೆಯಿದೆ. ಓಚನೊಮಿಜು (Ochanomizu ) ಎಂದರೆ “ಟೀಗಾಗಿ ನೀರು” ಎಂದರ್ಥ. ನನ್ನ ಕಾಲದಲ್ಲಿ ಆ ಊರು ಕಾಣುತ್ತಿದ್ದದ್ದು ಹಾಗೆಯೇ. ಕೆಕಾ ಶಾಲೆಯ ಹಾಡು “ಚಹಾ ಕಣಿವೆಯ ನೋಡಿ…” ಇದಕ್ಕೆ ಪುರಾವೆ. ಸ್ವಲ್ಪ ಉತ್ಪ್ರೇಕ್ಷೆ ಎನಿಸಿದರೂ ಅದು ಚೀನಾದ ಕೆಲವು ಪ್ರಸಿದ್ಧ ಸುಂದರ ಪ್ರಾಕೃತಿಕ ಪ್ರದೇಶಗಳ ಸೌಂದರ್ಯವನ್ನು ಹೋಲುತ್ತಿತ್ತು.
1927ರ ಅಂದಿನ ನನ್ನ ತರಗತಿಯ ಪ್ರಗತಿ ವರದಿಯಲ್ಲಿನ ಭಾಗವೊಂದು ಆ ಸಮಯದಲ್ಲಿನ ಓಚನೊಮಿಜುವಿನ (Ochanomizu ) ಭೂಪ್ರದೇಶ ಮತ್ತು ಮಾಧ್ಯಮಿಕ ಶಾಲೆಯ ಮೊದಲೆರಡು ವರ್ಷಗಳಲ್ಲಿ ನಾನು ಹೇಗಿದ್ದೆ ಎನ್ನುವುದನ್ನು ತೋರಿಸುವಂತಿದೆ. ಇದನ್ನು ಆ ಕಾಲದ ನನ್ನ ಗೆಳೆಯನೊಬ್ಬ ಬರೆದದ್ದು. ಅದನ್ನಿಲ್ಲಿ ಕೊಟ್ಟಿದ್ದೇನೆ:
ಓಚನೊಮಿಜುವಿನ (Ochanomizu ) ಏರಿ ದಟ್ಟ ಹುಲ್ಲನ್ನು ಹೊದ್ದು ಮಲಗಿತ್ತು. ಆ ಹುಲ್ಲಿನ ವಾಸನೆ ಮರೆಯಲಾಗದ್ದು. ಆ ಕಾಲುವೆಯ ಜಾಗ ಸದಾ ಕಾಡುವಂಥದ್ದು. ತರಗತಿಗಳು ಮುಗಿದು ಶಾಲೆಯ ಪುಟ್ಟಗೇಟಿನಿಂದ ಹೊರ ಬರುತ್ತಿದ್ದಂತೆ ಕೆಕಾ ಮಾಧ್ಯಮಿಕ ಶಾಲೆಯಿಂದ ಬಿಡುಗಡೆ ಸಿಕ್ಕಂತೆ ಅನ್ನಿಸುತ್ತಿತ್ತು. ಹೊಂಗೊ ಮೋಟೋಮಾಚಿಯಲ್ಲಿ (Hongō Motomachi) ಟ್ರಾಲಿ ನಿಲ್ಲುತ್ತಿದ್ದ ದೊಡ್ಡ ರಸ್ತೆಯನ್ನು ದಾಟಿ “ಪ್ರವೇಶ ನಿಷಿದ್ಧ” ಎಂದು ಹಾಕಿದ್ದ ಬೋರ್ಡನ್ನು ದಾಟಿ ಸುತ್ತಲಿನವರ ಕಣ್ತಪ್ಪಿಸಿ ದಟ್ಟ ಹಸಿರಿನ ನಡುವೆ ನುಸುಳಲು ಸಮಯಕ್ಕಾಗಿ ಕಾಯುತ್ತಿದ್ದೆ. ಹುಲ್ಲಿನ ಮಧ್ಯೆ ಕಣ್ಮರೆಯಾಗುತ್ತಿದ್ದಂತೆ ಕಡಿದಾದ ಇಳಿಜಾರಿನ ಕಡೆ ಹೆಜ್ಜೆ ಹಾಕುತ್ತಿದ್ದೆ. ಜಾರಿ ಬೀಳುವ ಭಯವಿಲ್ಲದ ಸಮತಟ್ಟಾದ ಜಾಗಕ್ಕೆ ತಲುಪುತ್ತಿದ್ದಂತೆ ಸ್ಕೂಲು ಬ್ಯಾಗನ್ನು ನೆಲದ ಮೇಲೆಸೆದು ಅದನ್ನೇ ತಲೆದಿಂಬಾಗಿಸಿಕೊಂಡು ಹುಲ್ಲಿನ ಮೇಲೆ ಅಂಗಾತ ಮಲಗಿಬಿಡುತ್ತಿದ್ದೆ.
ಕೆಳಗೆ ನೀರಿನ ಹತ್ತಿರ ತುದಿಯಲ್ಲಿ ಒಬ್ಬರು ನಡೆಯಬಹುದಾದಷ್ಟು ಜಾಗವಿತ್ತು. ಸುಯ್ದೊಬಶಿ (Suidōbashi ) ಸಿಗುವವರೆಗೆ ಅಲ್ಲಿ ನಡೆದು ಹೋಗಿ ಮತ್ತೆ ದಂಡೆ ಏರಿ ರಸ್ತೆಗೆ ವಾಪಸ್ಸಾಗುತ್ತಿದ್ದೆ….
ಶಾಲೆಯಿಂದ ನೇರವಾಗಿ ಮನೆಗೆ ಹೋಗಲು ಇಷ್ಟವಿಲ್ಲದೆ ಹೀಗೆ ಮಾಡುತ್ತಿದ್ದೆ. ನನ್ನ ತರಹಾನೇ ಅಂದುಕೊಂಡಿದ್ದವನು ನನ್ನ ಗೆಳೆಯ ಕುರೊಸಾವ ಅಕಿರ. ನಾವಿಬ್ಬರೂ ಆ ದಂಡೆಯನ್ನು ಒಟ್ಟಾಗಿ ಎರಡು ಮೂರು ಸಾರಿ ಹತ್ತಿಇಳಿದಿದೀವಿ. ಒಂದು ಸಲ ಹುಲ್ಲಿನ ನಡುವೆ ಸುರತದಲ್ಲಿ ತೊಡಗಿದ್ದ ಜಂಟಿ ಹಾವುಗಳನ್ನು ತುಳಿದುಬಿಟ್ಟಿದ್ದೆವು. ಒಂದಕ್ಕೊಂದು ಬೆಸೆದುಕೊಂಡಿದ್ದ ಹಾವುಗಳು ಎದ್ದು ನಿಂತದ್ದು ನೋಡಿ ತುಂಬ ಭಯವಾಯಿತು.
ಕುರೊಸಾವ ಅಕಿರ ಪ್ರಬಂಧ ಬರೆಯುವುದರಲ್ಲಿ, ಚಿತ್ರಕಲೆಯಲ್ಲಿ ಬಿಟ್ಟರೆ ಉಳಿದ ವಿಷಯಗಳಲ್ಲಿ ಬಹಳ ಹಿಂದುಳಿದಿದ್ದ. ಅವನ ಚಿತ್ರಗಳು ಸಾಮಾನ್ಯವಾಗಿ ಸ್ಕೂಲಿನ ಪತ್ರಿಕೆಯಲ್ಲಿ ಪ್ರಕಟವಾಗುತ್ತಿತ್ತು. ಹೀಗೆ ಪ್ರಕಟವಾಗಿದ್ದ ‘ಹಣ್ಣಿನ ಜೀವನ’ ಎನ್ನುವ ಚಿತ್ರ ನನ್ನ ಬಹಳ ಸೆಳೆದಿತ್ತು. ಒರಿಜನಲ್ ಚಿತ್ರದ ಪರಿಣಾಮ ಇನ್ನೂ ಹೆಚ್ಚು ದಟ್ಟವಾದದ್ದು. ಅವನಷ್ಟು ಪ್ರತಿಭಾವಂತನಾಗಿದ್ದರಿಂದಲೇ ನಮ್ಮ ಯುವ ಉತ್ಸಾಹಿ ಮೇಷ್ಟ್ರು ಇವಾಮಾಟ್ಸು ಗೊರೊ (Iwamatsu Gorō) ಅವನಿಗೆ ವಿಶೇಷ ಗಮನಕೊಡುತ್ತಿದ್ದರು ಅಂತ ಕೇಳಿದ್ದೆ.
ದೈಹಿಕ ಶಿಕ್ಷಣದಲ್ಲಿ ಕುರೊಸಾವನ ಸಾಮರ್ಥ್ಯ ಸೊನ್ನೆ. ವ್ಯಾಯಾಮದ ಸಮಯದಲ್ಲಿ ಅವನ ಕಾಲುಗಳು ಮೊದಲಿಂದ ಕೊನೆಯವರೆಗೆ ಬಾರನ್ನು(ದಂಡ) ಹಿಡಿದು ಮರಳಿನಲ್ಲಿ ಅಂಟಿಕೊಂಡು ನಿಂತಿರುತ್ತಿದ್ದವೇ ಹೊರತು ಮೇಲೇರಿ ತೂಗಿದ್ದೇ ಇಲ್ಲ. ನನಗಂತೂ ಅವನನ್ನು ಹಾಗೇ ನೋಡಿದರೆ ಆತಂಕವಾಗುತ್ತಿತ್ತು. ಕುರೊಸಾವನದು ಹೆಣ್ಣುದನಿ. ಅವನ ಜೊತೆ ದಂಡೆಯ ಕೆಳಗಿಳಿದು ಹೋಗಿ ಉದ್ದಕ್ಕೆ ಬಿಳುಚಿಕೊಂಡಿದ್ದ ಈ ಹುಡುಗನ ಭುಜಕ್ಕೆ ಭುಜ ತಾಗಿಸಿ ಅಂಗಾತ ಮಲಗಿ ಆಕಾಶ ನೋಡುವಾಗ ಕಟುಮಧುರ ಭಾವನೆಯೊಂದು ಮನಸ್ಸಿನಲ್ಲಿ ಸುಳಿದು ಹೋದದ್ದು ನೆನಪಿದೆ.
ಇದನ್ನು ಓದುತ್ತಿರುವಾಗ ಈ ವಯಸ್ಸಿನಲ್ಲಿ ಕೂಡ ಕೆಲವು ದುರ್ಬಲ ಗುಣಗಳು ನನ್ನಲ್ಲಿವೆ ಅಂತ ಅನ್ನಿಸಿತು. ಇದರಲ್ಲಿ ಒಂದು ಸಮಾಧಾನದ ಸಂಗತಿಯೆಂದರೆ ಆಗ ಮೃದುವಾಗಿದ್ದವನು ಈಗ ಮೃದುತ್ವ ಹೋಗಿ “ಸ್ವಲ್ಪ ಕಠೋರತೆ” ಬಂದಿದೆ. ಬಹುಶಃ ಸ್ವಲ್ಪ ದೊಡ್ಡವನಾಗಿರಬೇಕು. ಹಿಂದಿನ ನೆನಪುಗಳನ್ನು ನೋಡಿದಾಗ ಯಾವುದೇ ಸಂದರ್ಭವಾದರೂ ಆ ಸಮಯದಲ್ಲಿ ನನಗೆ ನಾನು ನೆನಪಿರುವ ರೀತಿಗೂ ಕುರೊಸಾವ ಅಕಿರ ಬೇರೆಯವರಿಗೆ ಅದೇ ಸಂದರ್ಭಗಳಲ್ಲಿ ನೆನಪಿರುವ ರೀತಿಗೂ ಬಹಳ ವ್ಯತ್ಯಾಸವಿದೆ. ಅದಕ್ಕೆ ನಂಗೆ ಆಶ್ಚರ್ಯವಾಗುತ್ತೆ. ಕಠಾರಿವೀರನಾಗಬೇಕು ಅಂತ ಅಂದುಕೊಂಡ ಕ್ಷಣದಿಂದ ನನ್ನನ್ನು ನಾನು ಗಂಡುಗಲಿಯಂತೆ ಕಲ್ಪಿಸಿಕೊಂಡಿದ್ದೆ. ಮೇಲೆ ಉಲ್ಲೇಖಿಸಿದೆನಲ್ಲ ಆ ಲೇಖಕನಿಗೆ ನನ್ನ ದೈಹಿಕ ಸಾಮರ್ಥ್ಯ “ಸೊನ್ನೆ” ಅನ್ನಿಸಲು ಕಾರಣಗಳೇನಿರಬಹುದು? ಅದೇಕೋ ಈ ವಿಷಯವನ್ನು ಒಪ್ಪಲಾಗುತ್ತಿಲ್ಲ.
ಕುರೊಸಾವ ಅಕಿರ ಪ್ರಬಂಧ ಬರೆಯುವುದರಲ್ಲಿ, ಚಿತ್ರಕಲೆಯಲ್ಲಿ ಬಿಟ್ಟರೆ ಉಳಿದ ವಿಷಯಗಳಲ್ಲಿ ಬಹಳ ಹಿಂದುಳಿದಿದ್ದ. ಅವನ ಚಿತ್ರಗಳು ಸಾಮಾನ್ಯವಾಗಿ ಸ್ಕೂಲಿನ ಪತ್ರಿಕೆಯಲ್ಲಿ ಪ್ರಕಟವಾಗುತ್ತಿತ್ತು. ಹೀಗೆ ಪ್ರಕಟವಾಗಿದ್ದ ‘ಹಣ್ಣಿನ ಜೀವನ’ ಎನ್ನುವ ಚಿತ್ರ ನನ್ನ ಬಹಳ ಸೆಳೆದಿತ್ತು.
ನನ್ನ ತೋಳುಗಳಲ್ಲಿ ಹೆಚ್ಚು ಶಕ್ತಿಯಿರಲಿಲ್ಲ. ಹಾಗಾಗಿ ನಾನು ಬಾರನ್ನು (ದಂಡವನ್ನು) ಹಿಡಿದು ಸುಮ್ಮನೆ ನಿಲ್ಲುತ್ತಿದ್ದೆ ಎನ್ನುವುದು ಸತ್ಯ. ಬಾರನ್ನು ಹಿಡಿದು ಮೇಲಕ್ಕೆ ತೂಗುವುದು ನನ್ನಿಂದ ಆಗುತ್ತಿರಲಿಲ್ಲ ಎನ್ನುವುದು ಸತ್ಯ. ಆದರೆ ನನ್ನ ದೈಹಿಕ ಸಾಮರ್ಥ್ಯ ಸೊನ್ನೆ ಎನ್ನುವುದು ಸುಳ್ಳು. ತೋಳುಗಳ ಶಕ್ತಿಯನ್ನು ಆಧರಿಸದ ಬೇರೆಲ್ಲ ಆಟಗಳನ್ನು ಚೆನ್ನಾಗಿ ಆಡುತ್ತಿದ್ದೆ. ಆಗಲೇ ಹೇಳಿದೆನಲ್ಲ ಕೆಂಡೋ ಸಮರಕಲೆ ಅದರಲ್ಲಿ ಉತ್ತಮ ಶ್ರೇಣಿಯನ್ನು ಪಡೆದಿದ್ದೆ. ಬೇಸ್ ಬಾಲಿನಲ್ಲಿ ನಾನು ಎಸೆಯುತ್ತಿದ್ದ ಚೆಂಡನ್ನು ಹಿಡಿಯಲು ಹೆದರುತ್ತಿದ್ದರು. ಚೆಂಡನ್ನು ಎದುರಾಳಿಗಳಿಂದ ಕಸಿಯುವ ಕಲೆ ಚೆನ್ನಾಗಿ ಕರಗತವಾಗಿತ್ತು. ಈಜಿನಲ್ಲಿ ಎರಡು ಜಪಾನಿ ಶೈಲಿಯ ಈಜಿನಲ್ಲಿ ಪರಿಣತಿ ಹೊಂದಿದ್ದೆ. ಆಮೇಲೆ ಆಸ್ಟ್ರೇಲಿಯನ್ ಶೈಲಿಯ ಈಜನ್ನು ಕೂಡ ಕಲಿತೆ. ನನಗೆ ವೇಗವಾಗಿ ಈಜಲು ಬರುವುದಿಲ್ಲ. ಆದರೆ ಈ ವಯಸ್ಸಿನಲ್ಲೂ ಕೂಡ ಆರಾಮವಾಗಿ ಈಜಬಲ್ಲೆ. ಗಾಲ್ಫ್ ಅಷ್ಟು ಚೆನ್ನಾಗಿ ಆಡಲು ಬರುವುದಿಲ್ಲ. ಆದರೂ ಆ ಆಟವನ್ನು ಆಡದೆ ಬಿಟ್ಟಿಲ್ಲ.
ನನ್ನ ಸಹಪಾಠಿಗಳಿಗೆ ನಾನು ದುರ್ಬಲನ ಹಾಗೆ ಕಂಡಿದ್ದಲ್ಲಿ ಆಶ್ಚರ್ಯಪಡಬೇಕಾಗಿಲ್ಲ. ನಮ್ಮ ಪಿಟಿ ಮೇಷ್ಟ್ರು ಮಾಜಿ ಸೈನ್ಯಾಧಿಕಾರಿ. ಆತ ತೋಳ್ಬಲವನ್ನು ಆಧರಿಸಿದ ಆಟಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಿದ್ದರು. ಆತನಿಗೆ ಕೆಂಪುಮುಖವಿತ್ತು. ಆತನ ಬೆನ್ನಹಿಂದೆ ನಾವೆಲ್ಲ ಆತನನ್ನು ದನದಮಾಂಸದ ತುಂಡು ಅಂತಲೇ ಕರೆಯುತ್ತಿದ್ದೆವು. ಒಂದು ಸಲ ಈತ ನನ್ನನ್ನು ಬಾರನ್ನು ಹಿಡಿದು ತೂಗುವಂತೆ ಮಾಡಲು ಉಪಾಯ ಹೂಡಿದರು. ನಾನು ಬಾರನ್ನು ಹಿಡಿದು ಎಂದಿನಂತೆ ನಿಂತಿದ್ದಾಗ ಆತ ನನ್ನನ್ನು ಮೇಲಕ್ಕೆ ಎತ್ತಿ ಹಿಡಿಯಲು ಪ್ರಯತ್ನಿಸಿದರು. ಹೀಗೆ ಬಲವಂತವಾಗಿ ನನ್ನನ್ನು ಎತ್ತಿದ್ದು ಇಷ್ಟವಾಗದೆ ಥಟ್ ಅಂತ ಹಿಡಿದುಕೊಂಡಿದ್ದ ಬಾರನ್ನು ಬಿಟ್ಟುಬಿಟ್ಟೆ. ದಪ್ಪಂತ ಮೇಷ್ಟ್ರ ಮೇಲೆ ಬಿದ್ದೆ. ಆತ ನನ್ನ ಭಾರಕ್ಕೆ ನಿಲ್ಲಲಾಗದೆ ಮರಳಿನ ಮೇಲೆ ಬಿದ್ದುಬಿಟ್ಟರು. ಅಡಿಯಿಂದ ಮುಡಿಯವರೆಗೆ ಮರಳು ಮೆತ್ತಿಕೊಂಡ ಮೇಷ್ಟ್ರು ಬ್ರೆಡ್ ಕಟ್ಲೆಟ್ ತರಹ ಕಾಣುತ್ತಿದ್ದರು.
ದೈಹಿಕ ಶಿಕ್ಷಣದಲ್ಲಿ ಸೊನ್ನೆ ಪಡೆಯುವ ಮೂಲಕ ವರ್ಷದ ಕೊನೆಯಲ್ಲಿ ಶಾಲೆಯಲ್ಲಿ ಹೊಸ ದಾಖಲೆಯನ್ನೇ ಸೃಷ್ಟಿಸಿಬಿಟ್ಟೆ. ಕೆಕಾ ಮಾಧ್ಯಮಿಕ ಶಾಲೆಯ ಇತಿಹಾಸದಲ್ಲೇ ಮೊದಲ ಬಾರಿ ಈ ರೀತಿ ನಡೆದಿತ್ತು.
ಆದರೆ ಈ ಶ್ರೀಮಾನ್ ದನದ ಮಾಂಸದ ತುಂಡಿನ ತರಗತಿಯಲ್ಲಿ ಇದ್ದಕ್ಕಿದ್ದಂತೆ ನನಗೇನೋ ಆಯಿತು. ಒಂದು ದಿನ ಆ ತರಗತಿಯಲ್ಲಿ ಹೈಜಂಪ್ ಸ್ಪರ್ಧೆಯಿತ್ತು. ಯಾರಿಗೆ ಕೋಲಿನ ಮೇಲೆ ಹಾರಲಾಗುತ್ತಿರಲಿಲ್ಲವೋ ಅವರು ಔಟ್ ಆಗುತ್ತಿದ್ದರು. ಕೋಲನ್ನು ಎತ್ತರಕ್ಕೆ ಏರಿಸುತ್ತಿದ್ದಂತೆ ಕಡೆಯಲ್ಲಿ ಯಾರು ಉಳಿಯುತ್ತಾರೆ ಎನ್ನುವ ಸ್ಪರ್ಧೆ. ನನ್ನ ಸರದಿ ಬಂತು. ನಾನು ಓಡಲು ಶುರುಮಾಡುತ್ತಿದ್ದಂತೆ ನನ್ನ ಸ್ನೇಹಿತರೆಲ್ಲ ನಗಲು ಶುರುಮಾಡಿದರು. ನಾನು ನೇರ ಹೋಗಿ ಆ ಕೋಲಿಗೆ ಡಿಕ್ಕಿ ಹೊಡೆದು ಬೀಳುತ್ತೇನೆ ಎನ್ನುವ ನಿರೀಕ್ಷೆಯಲ್ಲಿ ಎಲ್ಲರೂ ನಗುತ್ತಿದ್ದರು. ಆದರೆ ಆ ಕೋಲನ್ನು ಹಾರಿಹೋಗಿದ್ದೆ. ಎಲ್ಲರಿಗೂ ಅದು ಹೇಗಾಯಿತು ಎನ್ನುವ ಪ್ರಶ್ನೆ ಕಾಡತೊಡಗಿತು.
ಪ್ರತಿ ಸುತ್ತಿನಲ್ಲಿ ಕೋಲನ್ನು ಸ್ವಲ್ಪಸ್ವಲ್ಪವೇ ಎತ್ತರಕ್ಕೆ ಏರಿಸಲಾಗುತ್ತಿತ್ತು. ಪ್ರತಿಸುತ್ತಿನಲ್ಲಿ ಸೋತ ಸ್ಪರ್ಧಿಗಳ ಸಂಖ್ಯೆ ಹೆಚ್ಚುತ್ತಲೇ ಹೋಯಿತು. ಆದರೆ ಆ ಕೋಲನ್ನು ಹಾರಿದ ಸ್ಪರ್ಧಿಗಳ ನಡುವೆ ಹಲವು ಸುತ್ತುಗಳ ನಂತರವೂ ನಾನು ಉಳಿದಿದ್ದೆ. ನನ್ನನ್ನು ಕಡೆಗಣಿಸಿ ನೋಡುತ್ತಿದ್ದವರಲ್ಲಿ ವಿಚಿತ್ರ ಮೌನ ಆವರಿಸಿತ್ತು. ಅಂದುಕೊಳ್ಳದೇ ಇದ್ದ ಅಸಾಧ್ಯವೊಂದು ಘಟಿಸಿತು: ಕಡೆಯಲ್ಲಿ ಕೋಲನ್ನು ಹಾರಲು ಉಳಿದ ಸ್ಪರ್ಧಿ ನಾನೊಬ್ಬನೇ. ದನದ ಮಾಂಸದ ತುಂಡು ಮತ್ತು ನನ್ನ ಸಹಪಾಠಿಗಳು ನಂಬಲಿಕ್ಕಾಗದೆ ನನ್ನತ್ತ ನೋಡುತ್ತಿದ್ದರು. ಇದು ಹೇಗೆ ಸಾಧ್ಯವಾಯಿತು? ಕೋಲಿನತ್ತ ಓಡುತ್ತಿದ್ದಂತೆ ನನಗೆ ಕಾಣಿಸಿದ್ದೇನು? ನಾನು ಮೊದಲ ಸಾರಿ ಓಡಲು ಶುರುಮಾಡಿದಾಗಿನಿಂದ ಪ್ರತಿಬಾರಿ ಓಡುವಾಗಲೂ ಮುಸಿನಗುತ್ತಿರುವ ಸದ್ದು ಕೇಳುತ್ತಿತ್ತು. ನನ್ನ ಮುಖದಲ್ಲೊಂದು ವಿಲಕ್ಷಣ ಭಾವ ಹಾದುಹೋಗಿರಬೇಕು. ಈಗಲೂ ಅದರ ಬಗ್ಗೆ ಯೋಚಿಸಿದಾಗ ನನಗದು ಅರ್ಥವಾಗಿಲ್ಲ. ಅದು ಕನಸೇ? ಪ್ರತಿ ದೈಹಿಕ ಶಿಕ್ಷಣದ ತರಗತಿಯಲ್ಲಿ ಎಲ್ಲರಿಗೂ ನಗೆಯ ವಸ್ತುವಾಗಿದ್ದ ಹುಡುಗ ತನ್ನ ಗೆಲುವನ್ನು ಕುರಿತು ಕಂಡ ಕನಸೇ?
ಇಲ್ಲ ಅದು ಕನಸಲ್ಲ. ನಾನು ಆ ಕೋಲನ್ನು ಹಾರುತ್ತಲೇ ಹೋಗಿದ್ದೆ. ಅಂತಿಮವಾಗಿ ನಾನೊಬ್ಬನೇ ಉಳಿದಿದ್ದೆ. ಇನ್ನಷ್ಟು ಬಾರಿ ಅದನ್ನು ಹಾರತ್ತಲೇ ಹೋದೆ. ಯಾರೋ ಯಕ್ಷಿಣಿಗೆ ಈ ಜೀರೋ ಆದ ಹುಡುಗನ ಬಗ್ಗೆ ಪಾಪ ಅನ್ನಿಸಿ ತನ್ನ ರೆಕ್ಕೆಗಳನ್ನು ಅವನಿಗೆ ಕೆಲವು ಗಳಿಗೆಗಳ ಮಟ್ಟಿಗೆ ನೀಡಿರಬೇಕು.
ಕನ್ನಡ ಉಪನ್ಯಾಸಕಿ.ಇಂಗ್ಲೀಷ್ ಹಾಗೂ ಹಿಂದಿಯಿಂದ ಲೇಖನ, ಕತೆ ಹಾಗೂ ಕವನಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಇವರ ಅನುವಾದಗಳು ಹಲವು ಪತ್ರಿಕೆಯಲ್ಲಿ ಪ್ರಕಟಗೊಂಡಿವೆ. ಇರಾನಿನ ಚಲನಚಿತ್ರ ನಿರ್ದೇಶಕ ಅಬ್ಬಾಸ್ ಕಿರಸ್ತೋಮಿಯ ಕಿರುಪದ್ಯಗಳ ಅನುವಾದ ‘ಹೆಸರಿಲ್ಲದ ಹೂ’ ಪ್ರಕಟಿತ ಸಂಕಲನ..