ಅವರು ಜೀವನದಲ್ಲಿ ಸಾಲವನ್ನೇ ಮಾಡಲಿಲ್ಲ. ದುಡಿಮೆಯೆ ಅವರ ಬ್ಯಾಂಕು. ವಾಪಸ್ ಮಾಡುವ ಶಕ್ತಿಇಲ್ಲವೆಂದ ಮೇಲೆ ಸಾಲ ಮಾಡಬಾರದು ಎಂಬುದು ಅವರ ಅರ್ಥಶಾಸ್ತ್ರ ದ ನೀತಿಯಾಗಿತ್ತು. ಸಮಾಜ ಜಾತಿ ಉಪಜಾತಿಗಳ ಬಂಧನದಲ್ಲಿ ಸಿಕ್ಕಿ ಹಾಕಿಕೊಂಡಿದ್ದರೂ ಅಸ್ಪೃಶ್ಯತೆಯನ್ನು ಆಚರಿಸುತ್ತಿದ್ದರೂ ಆ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ. ‘ನೀವು ಹಾಗಿರಬೇಕು, ಹೀಗಿರಬೇಕು’ ಎಂದು ಯಾರಿಗೂ ಉಪದೇಶ ಮಾಡಲಿಲ್ಲ. ಆದರೆ ಸ್ವಂತಕ್ಕೆ ಜಾತಿ, ಧರ್ಮ ಮತ್ತು ಅಸ್ಪೃಶ್ಯತೆ ಮುಂತಾದವುಗಳನ್ನು ಮೀರಿ ಬದುಕಿದವರು. ನಾನು ಶನಿವಾರ ಜನಿಸಿದ್ದರಿಂದ ಪ್ರತಿ ಶನಿವಾರ ನನ್ನನ್ನು ಕರೆದುಕೊಂಡು ಶನಿದೇವರ ಗುಡಿಗೆ ಹೋಗುತ್ತಿದ್ದರು. ಪಕ್ಕದಲ್ಲೇ ಇದ್ದ ರಾಮದೇವರ ಗುಡಿಗೆ ಹೋಗಿ ನಮಸ್ಕರಿಸಿ ಬರುತ್ತಿದ್ದರು. ರಂಜಾನ್ ದರ್ಗಾ ಬರೆಯುವ ನೆನಪಾದಾಗಲೆಲ್ಲ ಸರಣಿಯ ೪೧ನೇ ಕಂತು ಇಲ್ಲಿದೆ.
ನನ್ನ ನಿರಕ್ಷರಿ ತಂದೆ ಪ್ರಭಾವ ಬೀರಿದಷ್ಟು ನನ್ನ ಮೇಲೆ ಯಾರೂ ಪ್ರಭಾವ ಬೀರಿಲ್ಲ. ಅವರ ಜೀವನದರ್ಶನದಿಂದಾಗಿ ನನಗೆ ಶರಣರ, ಸೂಫಿಗಳ, ಸಂತರ, ದಾಸರ ಮತ್ತು ತತ್ತ್ವಪದಕಾರರ ದರ್ಶನವಾಯಿತು. ಅವರಿಂದಾಗಿ ನನಗೆ ನ್ಯಾಯ, ಮನಶ್ಶಾಸ್ತ್ರ ಸಾಮಾಜಿಕ ಮನಶ್ಶಾಸ್ತ್ರ, ಸಮಾಜವಿಜ್ಞಾನ, ಅರ್ಥಶಾಸ್ತ್ರ, ವಿಶ್ವಮಾನವ ಸಂಸ್ಕಾರ ಮತ್ತು ಕಾಯಕ ಸಿದ್ಧಾಂತ ಅರ್ಥವಾದವು. ಅವರು ಬದುಕಿನ ಮಹಾಕಾವ್ಯವೂ ಮತ್ತು ವಿಶ್ವಧರ್ಮದ ಧರ್ಮಗ್ರಂಥವೂ ಆಗಿದ್ದರು. ಯಾವುದೇ ಪರಿಶುದ್ಧ ಮಾನವನ ಮನಸ್ಸಿನಲ್ಲಿ ಇವೆಲ್ಲ ಲೋಕಹಿತಾರ್ಥಕ್ಕೆ ಅನುಗುಣವಾಗಿ ಸಹಜವಾಗಿಯೇ ಇರುತ್ತವೆ ಎಂಬುದರ ಸಾಕ್ಷಾತ್ಕಾರ ಅವರ ಬದುಕಿನ ರೀತಿಯಲ್ಲಿ ಕಂಡುಕೊಂಡೆ.
ಅಹಂಕಾರ ಮತ್ತು ಐಹಿಕ ಆಸೆಗಳಿಂದ ಮುಕ್ತವಾದ ಬದುಕು, ಮಾನಸಿಕ ಮತ್ತು ದೈಹಿಕ ಆರೋಗ್ಯ ಕಾಪಾಡಿಕೊಳ್ಳುವುದರ ಮೂಲಕ ಬರುವ ಆತ್ಮವಿಶ್ವಾಸ, ಯಾರ ಹಂಗಿಗೂ ಒಳಗಾಗದೆ ಕಾಯಕದಿಂದಲೇ ಬದುಕುವ ಛಲ, ಘನತೆಯಿಂದ ಕೂಡಿದ ವ್ಯವಹಾರ, ಸೌಮ್ಯ ಆದರೆ ನ್ಯಾಯಯುತ ಮಾತುಗಳು, ಅಪರಿಗ್ರಹ ಪ್ರಜ್ಞೆ, ಜಾತಿ ಮತ್ತು ಧಾರ್ಮಿಕತೆಯ ಚೌಕಟ್ಟುಗಳ ಬಗ್ಗೆ ತಲೆಕೆಡಿಸಿಕೊಳ್ಳದೆ ಧರ್ಮವಂತನಾಗಿ ಬದುಕುವುದು, ಬೇರೆಯವರ ಜೀವನವಿಧಾನವನ್ನು ಪ್ರಶ್ನಿಸದೆ ಇರುವುದು. ಬಡತನದ ಹಗ್ಗದ ಮೇಲೆ ಬೀಳದ ಹಾಗೆ ನಡೆಯುವುದು, ಒಳ್ಳೆಯದನ್ನು ನೆನಪಿಸಿಕೊಳ್ಳುವುದು, ಒಳ್ಳೆಯದನ್ನು ಮಾಡುವುದು, ಯಾವುದೇ ಕೆಟ್ಟ ಹವ್ಯಾಸಗಳಿಲ್ಲದೆ ಕಾಯಕದ ಆನಂದದಲ್ಲಿ ಬದುಕುವುದು ಅವರ ಜೀವನ ವಿಧಾನವಾಗಿತ್ತು.
ಅವರ ಶಿಸ್ತಿನ ಜೀವನ ಮತ್ತು ಕಾಯಕ ಪ್ರಜ್ಞೆಯ ಮುಂದೆ ಬದುಕಿನ ಎಲ್ಲ ಸಂಕಟಗಳ ನಿವಾರಣೆಯಾಗುತ್ತಿತ್ತು. ಇದು ಅವರ ಅರ್ಥಶಾಸ್ತ್ರದ ರಹಸ್ಯವಾಗಿತ್ತು. ಅವರಿಗೆ ಚಹಾ ಕುಡಿಯುವ ಚಟವೂ ಇದ್ದಿದ್ದಿಲ್ಲ. ಅವರೆಂದೂ ಹೋಟೆಲ್‌ನಲ್ಲಿ ಕಾಲಿಡಲಿಲ್ಲ. ಸ್ವಚ್ಛತೆ ಅವರ ಬದುಕಿನ ಭಾಗವಾಗಿತ್ತು. ಬೆಳಿಗ್ಗೆ ಎದ್ದು ವಿಜಾಪುರ ನಗರದಲ್ಲೇ ನಾವಿದ್ದ ಮನೆಗೆ ಸ್ವಲ್ಪ ದೂರದಲ್ಲಿರುವ ರಾಮುದಾದಾ ಅವರ ತೋಟಕ್ಕೆ ಹೋಗುವುದು. ಅವರ ಜೊತೆ ತರಕಾರಿ ತೆಗೆದು ಸೂಡು ಕಟ್ಟುವಲ್ಲಿ ಸಹಾಯ ಮಾಡುವುದು. ನಂತರ ಅವರ ಬಾವಿಯಲ್ಲಿ ಸ್ನಾನ ಮಾಡಿದ ನಂತರ ಮನೆಗೆ ಬಂದು ಏನೇ ಇದ್ದರೂ ತೃಪ್ತಿಯಿಂದ ಊಟ ಮಾಡುವುದು. ಹಮಾಲಿ ಕೆಲಸಕ್ಕೆ ಅಡತಿ ಅಂಗಡಿಗೆ ಹೋಗುವುದು. ಮಧ್ಯಾಹ್ನ, ಬುತ್ತಿಯಲ್ಲಿನ ರೊಟ್ಟಿ ತಿನ್ನುವುದು. ರಾತ್ರಿ ಮನೆಯ ಒಳಗಡೆ ಬರುವ ಮೊದಲು ದನಗಳ ಕೊಟ್ಟಿಗೆಗೆ ಹೋಗಿ ಅವುಗಳ ಮೈ ಸವರಿ ಬರುವುದು. (ಹೀಗೆ ಮಾಡುವುದು ಅನಿವಾರ್ಯವಾಗಿತ್ತು. ಏಕೆಂದರೆ ಆ ರಾತ್ರಿಯ ಕತ್ತಲಲ್ಲಿ ಈ ದನಗಳು ಅದು ಹೇಗೋ ನನ್ನ ತಂದೆ ಬರುವುದುದನ್ನು ದೂರದಿಂದಲೇ ಕಂಡು ಹಿಡಿದು ಅಂಬಾ ಎಂದು ಕೂಗುತ್ತಿದ್ದವು. ನನಗೆ ಇದು ಇಂದಿಗೂ ಆಶ್ವರ್ಯವೆನಿಸುತ್ತದೆ. ದನಗಳಿಗೂ ಮಾನವರ ವಾಸನೆ ಗೊತ್ತಾಗುವುದೆ? ಪ್ರತಿಯೊಬ್ಬರ ಶರೀರದ ವಾಸನೆ ಬೇರೆ ಬೇರೆಯಾಗಿರುವುದೆ?) ಮನೆಯ ಒಳಗಡೆ ಬರುವಾಗ ಅವರು ಕೈಕಾಲು ಮುಖ ತೊಳೆದುಕೊಂಡೇ ಒಳಗೆ ಬರುತ್ತಿದ್ದರು. ಮನೆ ಮುಂದಿನ ಶೆಡ್ಡಿನಲ್ಲಿ ದನಗಳು, ಕುರಿಗಳು, ಮನೆ ಮುಂದಿನ ಪಂಜರದಲ್ಲಿ ಬಾತುಕೋಳಿಗಳು. ಆಚೆ ಕಡೆ ಆಯ್ದು ತಂದ ಶೆಗಣಿಯಿಂದ ತಯಾರಿಸಿದ ಕುಳ್ಳಿನ (ಬೆರಣಿಯ) ಬಣಬೆ. ಈಚೆ ಕಡೆ ಕೋಳಿ ಬುಟ್ಟಿಗಳು.
ಅವರ ಶಿಸ್ತಿನ ಜೀವನ ಮತ್ತು ಕಾಯಕ ಪ್ರಜ್ಞೆಯ ಮುಂದೆ ಬದುಕಿನ ಎಲ್ಲ ಸಂಕಟಗಳ ನಿವಾರಣೆಯಾಗುತ್ತಿತ್ತು. ಇದು ಅವರ ಅರ್ಥಶಾಸ್ತ್ರದ ರಹಸ್ಯವಾಗಿತ್ತು. ಅವರಿಗೆ ಚಹಾ ಕುಡಿಯುವ ಚಟವೂ ಇದ್ದಿದ್ದಿಲ್ಲ. ಅವರೆಂದೂ ಹೋಟೆಲ್‌ನಲ್ಲಿ ಕಾಲಿಡಲಿಲ್ಲ. ಸ್ವಚ್ಛತೆ ಅವರ ಬದುಕಿನ ಭಾಗವಾಗಿತ್ತು.
ಮೂರಂಕಣದ ಮನೆಯಲ್ಲಿ ನಾವು. ಹೊರಗಿರುವಂಥ ಎಲ್ಲವೂ ನಮ್ಮ ಆರ್ಥಿಕ ಸ್ಥಿತಿಗೆ ಸಹಕಾರಿಯಾಗುವಂಥವು. ರಾತ್ರಿ ಊಟಕ್ಕೆ ಮೊದಲು ಮಕ್ಕಳ ಜೊತೆ ಕೂಡುತ್ತಿದ್ದರು. ಅವರ ದಣಿದ ದೇಹದ ವಾಸನೆ ಆಹ್ಲಾದಕರವಾಗಿರುತ್ತಿತ್ತು. ನಾವು ಮಕ್ಕಳು ಅವರ ಕೈಕಾಲು ಒತ್ತುತ್ತಿದ್ದೆವು. ಆ ಮೇಲೆ ಬಿಸಿ ಬಿಸಿ ರೊಟ್ಟಿ ಊಟ. (ಆ ಕಾಲದಲ್ಲಿ ಅಕ್ಕಿ ಶ್ರೀಮಂತರ ಮತ್ತು ರೋಗಿಗಳ ಆಹಾರವಾಗಿತ್ತು. ರೊಟ್ಟಿ ಎಲ್ಲರ ಆಹಾರ. ವಿಜಾಪುರದವರಿಗೆ ರೊಟ್ಟಿಯೇ ಅಮೃತ.) ಹೀಗೆ ಅವರ ಬದುಕಿನಲ್ಲಿ ಎಲ್ಲವೂ ವ್ಯವಸ್ಥಿತ.
ಅವರಿಗೆ ಪ್ರತಿಯೊಂದೂ ನೀಟಾಗಿರಬೇಕು. ಅನೇಕ ಕೆಲಸಗಳಲ್ಲಿ ಅವರು ತಜ್ಞರಾಗಿದ್ದರು. ಅವರು ಬಹಳ ಚೆನ್ನಾಗಿ ಮೀನಿನ ಬಲೆ ನೇಯುತ್ತಿದ್ದರು. ಅವರು ತುಂಬಿದ ಚೀಲ ಎತ್ತಲು ಇರುವ ಹುಕ್ಕು ಕೂಡ ಕಲಾತ್ಮಕವಾಗಿರುತ್ತಿತ್ತು. ಅದಕ್ಕೆ ಅವರು ಸುತಳಿಯಿಂದ ಎಷ್ಟು ಚೆನ್ನಾಗಿ ಹಿಡಿ ಹಾಕಿದ್ದರೆಂದರೆ ಅದನ್ನು ನೋಡಿದರೆ ಖುಷಿಯಾಗುತ್ತಿತ್ತು. (ಈಗ ನನಗೆ ಅನಿಸುತ್ತದೆ, ಹಾಗೆ ಅಷ್ಟು ನಿಖರವಾಗಿ ಕಂಪ್ಯೂಟರ್ ಸಹಾಯದಿಂದ ಮಾಡಲು ಮಾತ್ರ ಸಾಧ್ಯ ಎಂದು.)
ಅವರು ದನಕರುಗಳ ಮತ್ತು ಆಡಿನ ವೈದ್ಯರ ಹಾಗಿದ್ದರು. ಯಾವ ರೋಗಕ್ಕೆ ಯಾವ ಮನೆಮದ್ದು ಎಂಬುದರ ಪರಿಜ್ಞಾನವಿತ್ತು. ಆಕಳು ಮತ್ತು ಆಡುಗಳು ಈಯುವಾಗ ಗರ್ಭಕೋಶದಲ್ಲಿ ಮರಿ ಅಡ್ಡವಾಗಿ ತೊಂದರೆಯಾದರೆ ಅವುಗಳಿಗೆ ಪ್ರಾಣಾಪಾಯವಾಗದಹಾಗೆ ಈಯುವಂತೆ ಮಾಡುವುದೂ ಗೊತ್ತಿತ್ತು. ಬೆಲ್ಲದ ಪೆಂಟಿಗಳಿಗೆ ತಟ್ಟು ಹೊಲಿಯುವುದರಲ್ಲಿನ ಅವರ ಪ್ರತಿಭೆಯನ್ನು ರೈತರೂ ಮೆಚ್ಚುತ್ತಿದ್ದರು. ರೈತರ ಹಳ್ಳಿಗಳಿಗೆ ಹೋಗಿ ನೂರಾರು ಬೆಲ್ಲದ ಪೆಂಟಿಗಳಿಗೆ ಗೋಣಿತಟ್ಟು ಹೊಲಿದು ಬರುತ್ತಿದ್ದರು. ಅಡತಿ ಅಂಗಡಿಗೆ ಶುಕ್ರವಾರ ರಜೆ ಇರುವುದರಿಂದ ಅಂದು ಮಾತ್ರ ಅವರು ಈ ಕೆಲಸ ಮಾಡುತ್ತಿದ್ದರು. ಬೆಲ್ಲದ ಪಂಟಿಗಳನ್ನು ಬೆಲೆ ಬಂದ ಮೇಲೆ ಮಾರುವುದಕ್ಕೆ ಮೊದಲು ಅವುಗಳಿಗೆ ತಟ್ಟು ಹೊಲಿದು ರಕ್ಷಿಸಿಡುವುದು ರೈತರಿಗೆ ಅವಶ್ಯವಾಗಿತ್ತು. ಹೀಗೆ ಅವರದು ಅವಿಶ್ರಾಂತ ದುಡಿಮೆ. ಒಂದು ಕೆಲಸದಿಂದ ಇನ್ನೊಂದು ಕೆಲಸದಲ್ಲಿ ತೊಡಗುವುದೇ ಅವರಿಗೆ ವಿಶ್ರಾಂತಿ ಆಗಿತ್ತು. ಹೊಲದ ಮತ್ತು ತೋಟದ ಕೆಲಸಗಳಲ್ಲೂ ಅವರದು ಎತ್ತಿದ ಕೈ.
ಅವರು ದನಕರುಗಳ ಮತ್ತು ಆಡಿನ ವೈದ್ಯರ ಹಾಗಿದ್ದರು. ಯಾವ ರೋಗಕ್ಕೆ ಯಾವ ಮನೆಮದ್ದು ಎಂಬುದರ ಪರಿಜ್ಞಾನವಿತ್ತು. ಆಕಳು ಮತ್ತು ಆಡುಗಳು ಈಯುವಾಗ ಗರ್ಭಕೋಶದಲ್ಲಿ ಮರಿ ಅಡ್ಡವಾಗಿ ತೊಂದರೆಯಾದರೆ ಅವುಗಳಿಗೆ ಪ್ರಾಣಾಪಾಯವಾಗದಹಾಗೆ ಈಯುವಂತೆ ಮಾಡುವುದೂ ಗೊತ್ತಿತ್ತು. ಬೆಲ್ಲದ ಪೆಂಟಿಗಳಿಗೆ ತಟ್ಟು ಹೊಲಿಯುವುದರಲ್ಲಿನ ಅವರ ಪ್ರತಿಭೆಯನ್ನು ರೈತರೂ ಮೆಚ್ಚುತ್ತಿದ್ದರು.
ದನ ಕುರಿ ಕಟ್ಟಲು ಮತ್ತು ಮೇಯಿಸಲು ಜಾಗದ ಅವಶ್ಯಕತೆ ಇದ್ದುದರಿಂದ ಹತ್ತು ಗುಂಟೆಯಷ್ಟಿದ್ದ ಒಂದು ತುಂಡು ಬೀಳು ಭೂಮಿಯನ್ನು ವರ್ಷಕ್ಕೆ ಒಂದಿಷ್ಟು ಹಣ ಕೊಡುವ ಲೆಕ್ಕದಲ್ಲಿ ಬಾಡಿಗೆ ಪಡೆದಿದ್ದರು. ಲಿಂಗದ ಗುಡಿಗೆ ಹೋಗುವ ದಾರಿಯ ಬಳಿಯ ಕೋಟೆ ಗೋಡೆಯ ಹಿಂದ ಆ ಜಾಗವಿತ್ತು. ಜಾಗದ ಮಾಲೀಕ ಸಹಕಾರಿ ಬ್ಯಾಂಕೊಂದರಲ್ಲಿ ಸಿಪಾಯಿ ಆಗಿದ್ದರು. ನನ್ನ ತಂದೆ ಬೆಳದಿಂಗಳ ರಾತ್ರಿಯಲ್ಲಿ ಅಲ್ಲಿ ಅಗೆದು ಅಗೆದು ಒಂದು ಚಿಕ್ಕ ಬಾವಿ ತೋಡಿದರು. ಅದರಲ್ಲಿ ನೀರೂ ಬಂತು. ಒಂದು ಸಲ ಆ ಭೂಮಿಯ ಮಾಲೀಕ ಅಲ್ಲಿಂದ ಹಾದು ಹೋಗುವಾಗ ಆ ಭೂಮಿ ಹಸಿರಾಗಿದ್ದನ್ನು ನೋಡಿ ಆಶ್ಚರ್ಯಚಕಿತರಾಗಿ ನಿಂತರು. ಆ ಇಡೀ ಪ್ರದೇಶ ಗೋವಿನಜೋಳದ ಹಸಿರಿನಿಂದ ಕಂಗೊಳಿಸುತ್ತಿತ್ತು. ‘ಅಬ್ದುಲ್ ಸಾಬ್ ಈ ಜಾಗ ನಿಮ್ಮದು. ನಿಮ್ಮ ಹೆಸರಿಗೆ ಹಚ್ಚುವೆ’ ಎಂದು ಸಂತೋಷದಿಂದ ಹೇಳಿದರು. ಆದರೆ ನನ್ನ ತಂದೆ ಒಪ್ಪಲಿಲ್ಲ. ನಿಮ್ಮ ಹೆಸರಲ್ಲೇ ಇರಲಿ’ ಎಂದರು!
ದನಗಳು, ಕುರಿಗಳು, ಕೋಳಿಗಳು, ನಾಯಿಗಳು ಅವರ ಬದುಕಿನಲ್ಲಿ ಮಹತ್ವದ ಪಾತ್ರ ವಹಿಸಿದವು. ಅವೆಲ್ಲ ಅವರಿಗೆ ಕುಟುಂಬದ ಸದಸ್ಯರಂತೆ ಆಗಿದ್ದವು. ನಮ್ಮ ನಾಯಿಗಳಿಗೆ ರೊಟ್ಟಿ ತಿನ್ನುವ ಆಸೆ. ರಾತ್ರಿ ಸ್ವಲ್ಪ ದೂರದಲ್ಲಿದ್ದ ನಮ್ಮ ಮನೆಗೆ ಬಂದು ಮನೆಯೊಳಗೆ ಕೂಡುತ್ತಿದ್ದವು. ನನ್ನ ತಾಯಿ ಬಿಸಿ ರೊಟ್ಟಿ ಮಾಡಿ ಹಾಕುತ್ತಿದ್ದಳು. ಒಂದು ದಿನ ಅವೆಲ್ಲ ರೊಟ್ಟಿ ತಿನ್ನುವುದನ್ನು ಬಿಟ್ಟು ಓಡ ತೊಡಗಿದವು. ಏನಾಯಿತೆಂದು ಹೊರಗೆ ಹೋದರೆ ನನ್ನ ತಂದೆ ಬರುವುದು ಕಾಣಿಸಿತು. ನನ್ನ ತಂದೆ ಮನೆ ಮುಂದೆ ಬರುವುದರೊಳಗಾಗಿ ನಾನು ನಡೆದ ಘಟನೆ ಹೇಳಿದೆ. ನಾಯಿಗಳು ನನ್ನ ತಾಯಿಯ ಪ್ರೀತಿ ಮತ್ತು ನನ್ನ ತಂದೆಯೆ ಶಿಸ್ತಿಗೆ ಅಂಜಿ ಬದುಕುತ್ತಿದ್ದವು. ಆ ಎಲ್ಲ ನಾಯಿಗಳ ರೊಟ್ಟಿ ತರಲು ಹೇಳಿದರು. ನಾನು ಕೂಡಿಸಿ ಕೊಟ್ಟೆ. ಅವರು ಆ ರೊಟ್ಟಿಗಳನ್ನು ತೆಗೆದುಕೊಂಡು ಆ ಪುಟ್ಟ ತೋಟಕ್ಕೆ ಹೋಗಿ ಅವುಗಳಿಗೆ ತಿನಿಸಿ ಬಂದರು.
ದನಗಳು ಮತ್ತು ನಾಯಿಗಳು ಸತ್ತರೆ ತೋಟದ ಬದುವಿನ ಪಕ್ಕದಲ್ಲಿ ಭೂಮಿ ಅಗೆದು ಅವುಗಳ ಶವಸಂಸ್ಕಾರ ಮಾಡುತ್ತಿದ್ದರು. ನಾವೆಲ್ಲ ನಮ್ಮ ಮನೆಯ ಸದಸ್ಯ ಸತ್ತ ಹಾಗೆ ದುಃಖಿಸುತ್ತಿದ್ದೆವು. ಭೂಮಿಯಲ್ಲಿ ದುಡಿಯುವುದು ಮತ್ತು ಎತ್ತುಗಳನ್ನು ಸಾಕುವುದು ಅವರಿಗೆ ಎಲ್ಲಿಲ್ಲದ ಖುಷಿ. ‘ಅಬ್ದುಲ್ ಸಾಬ್ ನಿಮಗೆ ಭೂಮಿ ಇಲ್ಲ, ಎತ್ತುಗಳನ್ನು ತೆಗೆದುಕೊಂಡು ಏನು ಮಾಡುವಿರಿ’ ಎಂದು ಅನೇಕರು ಅವರನ್ನು ಪ್ರಶ್ನಿಸುತ್ತಿದ್ದರು. ಆಗ ಅವರು ನಕ್ಕು ಸುಮ್ಮನಾಗುತ್ತಿದ್ದರು.
ಅವರು ಜೀವನದಲ್ಲಿ ಮಕ್ಕಳಿಂದ ಏನನ್ನೂ ಬಯಸಲಿಲ್ಲ. ಕೊನೆಯವರೆಗೂ ತಮ್ಮ ದುಡಿಮೆಯಲ್ಲೇ ಬದುಕಿದರು. ವಯೋಸಹಜ ಅಶಕ್ತತನದಿಂದಾಗಿ ಅವರು ಹಮಾಲಿ ಕೆಲಸ ಬಿಟ್ಟಮೇಲೆ ಎಮ್ಮೆ ಸಾಕಿದರು. ಬಡ ಬಾಣಂತಿಯರ ಮಕ್ಕಳಿಗಾಗಿ ಉಚಿತವಾಗಿ ಹಾಲು ಕೊಡುತ್ತಿದ್ದರು. ಹಾಲಿನಲ್ಲಿ ಎಂದೂ ನೀರು ಬೆರಸಲಿಲ್ಲ. ಜನರು ಪಾಳಿ ಹಚ್ಚಿ ಹಾಲು ಒಯ್ಯುತ್ತಿದ್ದರು. ಅವರು ತಮ್ಮ ಅಂತಿಮ ಸಂಸ್ಕಾರಕ್ಕೂ ಹಣ ಇಟ್ಟಿದ್ದರು!
ಅವರು ಜೀವನದಲ್ಲಿ ಸಾಲವನ್ನೇ ಮಾಡಲಿಲ್ಲ. ದುಡಿಮೆಯೆ ಅವರ ಬ್ಯಾಂಕು. ಒಂದೇ ಒಂದು ಸಲ ಅವರ ಪ್ರಿಯ ಮಿತ್ರ ಹಮಾಲ ಶಿವಪ್ಪ ಅವರಲ್ಲಿ ನೂರು ರೂಪಾಯಿ ಸಾಲ ಮಾಡಿದ್ದರು. ಒಂದು ವಾರದ ನಂತರ ಅದೇ ನೋಟನ್ನು ಒಯ್ದು ವಾಪಸ್ ಕೊಟ್ಟರು. ಸಾಲ ಪಡೆದ ಮೇಲೆ ಒಂದು ವಾರ ಲೆಕ್ಕಾಚಾರ ಹಾಕಿದರು. ಅವರಿಗೆ ಸಾಲ ವಾಪಸ್ ಮಾಡುವ ದಾರಿ ಕಾಣಲಿಲ್ಲ. ವಾಪಸ್ ಮಾಡುವ ಶಕ್ತಿ ಇಲ್ಲವೆಂದ ಮೇಲೆ ಸಾಲ ಮಾಡಬಾರದು ಎಂಬುದು ಅವರ ಅರ್ಥಶಾಸ್ತ್ರ ದ ನೀತಿಯಾಗಿತ್ತು.
ಸಮಾಜ ಜಾತಿ ಉಪಜಾತಿಗಳ ಬಂಧನದಲ್ಲಿ ಸಿಕ್ಕಿ ಹಾಕಿಕೊಂಡಿದ್ದರೂ ಅಸ್ಪೃಶ್ಯತೆಯನ್ನು ಆಚರಿಸುತ್ತಿದ್ದರೂ ಅವರಿಂದೂ ಆ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ. ‘ನೀವು ಹಾಗಿರಬೇಕು, ಹೀಗಿರಬೇಕು’ ಎಂದು ಯಾರಿಗೂ ಉಪದೇಶ ಮಾಡಲಿಲ್ಲ. ಆದರೆ ಸ್ವಂತಕ್ಕೆ ಜಾತಿ, ಧರ್ಮ ಮತ್ತು ಅಸ್ಪೃಶ್ಯತೆ ಮುಂತಾದವುಗಳನ್ನು ಮೀರಿ ಬದುಕಿದವರು. ನಾನು ಶನಿವಾರ ಜನಿಸಿದ್ದರಿಂದ ಪ್ರತಿ ಶನಿವಾರ ನನ್ನನ್ನು ಕರೆದುಕೊಂಡು ಶನಿದೇವರ ಗುಡಿಗೆ ಹೋಗುತ್ತಿದ್ದರು. ಪಕ್ಕದಲ್ಲೇ ಇದ್ದ ರಾಮದೇವರ ಗುಡಿಗೆ ಹೋಗಿ ನಮಸ್ಕರಿಸಿ ಬರುತ್ತಿದ್ದರು.
ವಿಜಾಪುರಕ್ಕೆ ಹತ್ತಿಕೊಂಡಿರುವ ದರ್ಗಾ ಗ್ರಾಮ ಅವರ ಜನ್ಮಸ್ಥಳ. ಅಲ್ಲಿನ ಸೂಫಿ ಸಂತ ಖ್ವಾಜಾ ಅಮೀನ ದರ್ಗಾ ಅವರಿಗೆ ಪಂಚಪ್ರಾಣ. ಪ್ರತಿ ವರ್ಚ ನಿಷ್ಠೆಯಿಂದ ಕಂದೂರಿ ಮಾಡುತ್ತಿದ್ದರು. ರಂಜಾನ್ ಮತ್ತು ಬಕ್ರೀದ್‌ಗಳಲ್ಲಿ ನಮ್ಮನ್ನು ಕರೆದುಕೊಂಡು ಈದಗಾಗೆ ಹೋಗಿ ನಮಾಜ ಮಾಡುತ್ತಿದ್ದರು. ಈ ಎರಡು ನಮಾಜ್ ಬಿಟ್ಟರೆ ಮತ್ತು ನಮಾಜ ಮಾಡುವ ಪ್ರಸಂಗ ಬರುತ್ತಿರಲಿಲ್ಲ. ಒಂದು ದಿನ ಅವರು ಕೆಲಸಕ್ಕೆ ಹೋಗುವಾಗ ಮೌಲ್ಟಿ ಸಾಹೇಬರೊಬ್ಬರು. ಅಬ್ದುಲ್ ಸಾಬ್ ನೀವು ನಮಾಜಕ್ಕೆ ಬರುವುದಿಲ್ಲವಲ್ಲಾ ಎಂದು ಕೇಳಿದರು. ಆಗ ನನ್ನ ತಂದೆ ಕಾಯಕದ ಉಪಕರಣ ತೋರಿಸಿ ಇದೇ ನನ್ನ ನಮಾಜ್ ಎನ್ನುವಂತೆ ಅವರಿಗೆ ಗೌರವ ಸೂಚಿಸಿ ಹೇಳಿದರು.
ಅವರು ಸತ್ಯಸಂದರಾಗಿದ್ದರು. ಶ್ರೀಮಂತರು ಅವರ ಬಳಿ ನ್ಯಾಯ ಕೇಳಲು ಬರುತ್ತಿದ್ದರು. ಅನೇಕ ಮನೆತನಗಳ ನ್ಯಾಯ ಬಗೆಹರಿಸಿದ್ದರು. ಅವರು ಅಂತಸ್ತು ನೋಡದೆ ಎಲ್ಲರಿಗೂ ತಾವೇ ಮೊದಲು ನಮಸ್ಕಾರ ಹೇಳುತ್ತಿದ್ದರು. ಎಲ್ಲರೂ ಅವರನ್ನು ಗೌರವದಿಂದ ಕಾಣುತ್ತಿದ್ದರು. ಅವರ ಪೂರ್ತಿ ಹೆಸರು ಅಬ್ದುಲ್ ಕರೀಂ. ‘ದೇವರ ಗುಲಾಮನಾದ ಕರುಣಾಳು’ ಎಂದು ಆ ಹೆಸರಿನ ಅರ್ಥ. ಅವರಿಗೆ ದೇವರ ಬಗ್ಗೆ ಶ್ರದ್ಧೆಯೂ ಸಕಲಜೀವಿಗಳ ಬಗ್ಗೆ ಕರುಣೆಯೂ ಇತ್ತು. ಯಾರ ಬಗ್ಗೆಯೂ ಕೀಳಾಗಿ ಮಾತನಾಡುತ್ತಿರಲಿಲ್ಲ. ಹಾವುಗಳನ್ನು ಕೂಡ ಹೊಡೆಯಲು ಬಿಡುತ್ತಿರಲಿಲ್ಲ. ಎಲ್ಲದರ ಬಗ್ಗೆಯೂ ಪ್ರೇಮಭಾವವಿತ್ತು. ಅವರು ಮೂಢನಂಬಿಕೆಗಳಿಂದ ಮತ್ತು ಧಾರ್ಮಿಕತೆಯಿಂದ ಮುಕ್ತರಾಗಿದ್ದರು. ದುಡಿಯುವುದು ಮತ್ತು ಸಾಧ್ಯವಾದಷ್ಟು ಪರೋಪಕಾರ ಮಾಡುತ್ತ ಕರುಣೆಯಿಂದ ಬದುಕುವುದು ಅವರ ಧರ್ಮವಾಗಿತ್ತು.
ನನ್ನ “ಸೌಹಾರ್ದ ಸೌರಭ” ಪುಸ್ತಕವನ್ನು ಅವರಿಗೆ ಅರ್ಪಿಸಿದ್ದೇನೆ. ಅರ್ಪಣೆಯ ಸಾಲು: ಆತ ಎಂದೂ ಧರ್ಮಗ್ರಂಥ ಹಿಡಿಯಲಿಲ್ಲ. ಏಕೆಂದರೆ ಓದು ಗೊತ್ತಿರಲಿಲ್ಲ. ಆತ ಎಂದೂ ಮಾನವಧರ್ಮ ಬಿಡಲಿಲ್ಲ. ಏಕೆಂದರೆ ದ್ವೇಷ ಗೊತ್ತಿರಲಿಲ್ಲ.
#
ಚಿತ್ರಗಳು: ಸುನೀಲಕುಮಾರ ಸುಧಾಕರ
ಕನ್ನಡದ ಹಿರಿಯ ಲೇಖಕರು ಮತ್ತು ಪತ್ರಕರ್ತರು. ಬಂಡಾಯ ಕಾವ್ಯದ ಮುಂಚೂಣಿಯಲ್ಲಿದ್ದವರು. ವಿಜಾಪುರ ಮೂಲದ ಇವರು ಧಾರವಾಡ ನಿವಾಸಿಗಳು. ಕಾವ್ಯ ಬಂತು ಬೀದಿಗೆ (ಕಾವ್ಯ -೧೯೭೮), ಹೊಕ್ಕಳಲ್ಲಿ ಹೂವಿದೆ (ಕಾವ್ಯ), ಸಾಹಿತ್ಯ ಮತ್ತು ಸಮಾಜ, ಅಮೃತ ಮತ್ತು ವಿಷ, ನೆಲ್ಸನ್ ಮಂಡೇಲಾ, ಮೂರ್ತ ಮತ್ತು ಅಮೂರ್ತ, ಸೌಹಾರ್ದ ಸೌರಭ, ಅಹಿಂದ ಏಕೆ? ಬಸವಣ್ಣನವರ ದೇವರು, ವಚನ ಬೆಳಕು, ಬಸವ ಧರ್ಮದ ವಿಶ್ವಸಂದೇಶ, ಬಸವಪ್ರಜ್ಞೆ, ನಡೆ ನುಡಿ ಸಿದ್ಧಾಂತ, ಲಿಂಗವ ಪೂಜಿಸಿ ಫಲವೇನಯ್ಯಾ, ಜಾತಿ ವ್ಯವಸ್ಥೆಗೆ ಸವಾಲಾದ ಶರಣರು, ಶರಣರ ಸಮಗ್ರ ಕ್ರಾಂತಿ, ಬಸವಣ್ಣ ಮತ್ತು ಅಂಬೇಡ್ಕರ್, ಬಸವಣ್ಣ ಏಕೆ ಬೇಕು?, ಲಿಂಗವಂತ ಧರ್ಮದಲ್ಲಿ ಏನುಂಟು ಏನಿಲ್ಲ?, ದಾಸೋಹ ಜ್ಞಾನಿ ನುಲಿಯ ಚಂದಯ್ಯ (ಸಂಶೋಧನೆ) ಮುಂತಾದವು ಅವರ ಪ್ರಕಟಿತ ಕೃತಿಗಳಾಗಿವೆ. ಕರ್ನಾಟಕ ಸರ್ಕಾರದ ರಾಷ್ಟ್ರೀಯ ಬಸವ ಪುರಸ್ಕಾರ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಮಾಧ್ಯಮ ಅಕಾಡೆಮಿ ಗೌರವ ಪ್ರಶಸ್ತಿ ಮುಂತಾದ ೫೨ ಪ್ರಶಸ್ತಿಗಳಿಗೆ ಭಾಜನರಾದ ರಂಜಾನ್ ದರ್ಗಾ ಅವರು ಬಂಡಾಯ ಸಾಹಿತ್ಯ ಪರಂಪರೆಯ ಶಕ್ತಿಶಾಲಿ ಕವಿಗಳಲ್ಲಿ ಒಬ್ಬರು. ಅಮೆರಿಕಾ, ನೆದರ್‌ಲ್ಯಾಂಡ್ಸ್, ಲೆಬನಾನ್, ಕೆನಡಾ, ಫ್ರಾನ್ಸ್, ಆಸ್ಟ್ರೇಲಿಯಾ ಸೇರಿದಂತೆ ಇನ್ನೂ ಹಲವು ದೇಶಗಳಲ್ಲಿ ಶರಣ ಸಂಸ್ಕೃತಿ, ಶಾಂತಿ ಮತ್ತು ಮಾನವ ಏಕತೆ ಕುರಿತು ಉಪನ್ಯಾಸ ನೀಡಿದ್ದಾರೆ.
ಹೃದಯ ಭಾರವಾದಂತಾಯ್ತು ಸರ್ 🙏
ಬಹಳ ಆಪ್ತ ಬರಹ ದರ್ಗಾ ಸರ್
Thanks
A very heart-touching artile. We need to learn and practice to live from his life-style. A very meaningful, inspiring and touching life journey. ಅಬ್ದುಲ್ ಕರೀಂ. ‘ದೇವರ ಗುಲಾಮನಾದ ಕರುಣಾಳು’ ಅಬ್ದುಲ್ ಕರೀಂru ಶರಣru mattu ಸಂತru.
Thanks
ತಂದೆಯ ಆದರ್ಶ ಜೀವನದ ಬಗ್ಗೆ ತುಂಬ ಆಪ್ತವಾದ ಬರಹ 🙏