ಕಣ್ಣೀರ ಕಣ್ಣರೆಪ್ಪೆಗಳು ತಡೆಯದಾದವು. ತುಳುಕಿದವು. ಹೇಳಿದೆ. ‘ನಾನಲ್ಲ ಕಥೆ ಬರೆದದ್ದು. ಕಥೆಯ ನನ್ನ ತಾಯಿ ಹೇಳಿ ಬರೆಸಿದಳು. ನನ್ನ ತಾಯಿ ಈಗ ನನ್ನ ನೆತ್ತರಲ್ಲಿ ಮಾತ್ರ ಬದುಕಿ ಉಳಿದಿದ್ದಾಳೆ. ಅವಳ ಆತ್ಮ ನನ್ನ ಎದೆಗೂಡ ದೇಗುಲದಲ್ಲಿ ನನ್ನ ಚೈತನ್ಯವಾಗಿದೆ… ಅವಳ ಮೌನ ನನ್ನ ಭಾಷೆಯಾಗಿದೆ. ಅವಳ ಕಿಚ್ಚು ನನ್ನ ಬರೆಹದ ಬೆಳಕಾಗಿದೆ… ನಾನು ನೆಪದ ಕಥೆಗಾರ ಅಷ್ಟೇ… ಅವಳೇ ನನ್ನ ಬರೆಹದ ಬೇರು ಕಾಂಡ ರೆಂಬೆ ಕೊಂಬೆ ಚಿಗುರು ಎಲ್ಲ… ಎಲ್ಲ ಅವಳೇ… ನನ್ನದೇನಿದ್ದರೂ ಅವಳ ಕಥೆಯ ನೆರಳು ಅಷ್ಟೇ’ ಎಂದೆ.
ಮೊಗಳ್ಳಿ ಗಣೇಶ್ ಬರೆಯುವ “ನನ್ನ ಅನಂತ ಅಸ್ಪೃಶ್ಯ ಆಕಾಶ” ಆತ್ಮಕತೆ ಸರಣಿಯ 34ನೇ ಕಂತು
ಮನುಷ್ಯ ಸಾಯುತ್ತಾನೆ ನಿಜ; ಆದರೆ ಅವನ ಪ್ರಜ್ಞೆ ಅಳಿಯುವುದಿಲ್ಲ! ಅದಕ್ಕೇನು ಆಧಾರ ಎಂದು ಕೇಳಿತು ಮನ. ಮನಸ್ಸಿಗೆ ಮನಸ್ಸಾಕ್ಷಿಯೇ ನೆನಪು… ಹೇಗೆ? ಗೊತ್ತಿಲ್ಲ! ಅರಿವಿಲ್ಲದ್ದ ನುಡಿಯಬಾರದಲ್ಲವೇ? ಅರಿವು ದಾರಿ ಹುಡುಕುವುದೇ ತನಗೇನೂ ಗೊತ್ತಿಲ್ಲ ಎಂಬ ಪ್ರಜ್ಞೆಯಿಂದ. ಅಂದರೆ ಪ್ರಜ್ಞೆ ಶಾಶ್ವತ… ಅದು ಶರೀರದ ಹೊರಗಿನ ಸಂಗತಿಯೇ? ಇರಬಹುದು. ಶರೀರ ಅಶರೀರದಿಂದ ತಾನೆ ಸೃಷ್ಠಿಯಾದದ್ದು… ಅಶರೀರ ಶರೀರ ಆಗಿದ್ದು ಹೇಗೆ? ಅದು ನನಗೆ ನಿಲುಕದ ಸಂಗತಿ! ನಿನಗೆ ಗೊತ್ತಿದೆ ಆತ್ಮವೇ; ಬಚ್ಚಿಡುವೆ ಯಾಕೆ? ನಿಗೂಢಗಳು ಬೆತ್ತಲಾಗಬಾರದು! ಆಕಾಶ ಬೆತ್ತಲಿದೆಯಲ್ಲಾ… ಅದು ನಿನ್ನ ಭ್ರಮೆ. ಮುಚ್ಚಿಕೊಂಡಿರುವುದನ್ನೆಲ್ಲ ತೆರೆದುಕೊಂಡಿದೆ ಎಂದು ತಿಳಿದಿರುವೆ! ಬಿಚ್ಚಿದ್ದೆಲ್ಲ ಬಯಲಲ್ಲ. ಬಯಲೆಲ್ಲ ಬಿಚ್ಚಿಕೊಂಡಿಯೂ ಇಲ್ಲ! ಏನಿದರ ಅರ್ಥ? ಈ ವಿಶ್ವ ಯಾರಿಗೂ ಅರ್ಥವಾಗಿಲ್ಲ. ಆಗುವುದೂ ಇಲ್ಲ. ಬೆತ್ತಲಾಗಿರುವೆ ಎಂದುಕೊಂಡಿರುವೆಯಲ್ಲವೇ… ನಿಜಾ; ಮೇಲ್ನೋಟಕ್ಕೆ ಬೆತ್ತಲು ಅಷ್ಟೇ… ನಿನ್ನೊಳಗಿನದೇನೂ ಬೆತ್ತಲೆ ಆಗಿಯೇ ಇಲ್ಲವಲ್ಲಾ. ಗೊಮ್ಮಟ ಬೆತ್ತಲೆಯೆ? ಇಲ್ಲ! ಬೆತ್ತಲೆತನ ಎನ್ನುವುದು ಒಂದು ಹುಸಿ ಎಂದು ದೈತ್ಯವಾಗಿ ನಿಂತು ತೋರಿರುವ ಒಂದು ರೂಪಕ ಅಷ್ಟೇ. ರೂಪಕಗಳು ಯಾವತ್ತೂ ಬೆತ್ತಲೆ ಅಲ್ಲ… ಎಲ್ಲೆಲ್ಲಿಗೊ ಕರೆದೊಯ್ಯುತ್ತಿರುವೆ… ಅಷ್ಟೆಲ್ಲ ನಡೆಯಲಾರೆ…
ಹಗಲು ಬೆತ್ತಲೆ ಅನಿಸುತ್ತದೆ ಅಲ್ಲವೇ… ರಾತ್ರಿ ಬಚ್ಚಿಟ್ಟುಕೊಂಡಿದೆಯೆ? ಹೀಗೆ ಎರಡೂ ದ್ವಂದ್ವ ಅಲ್ಲ. ಬೆಳಕೊಳಗೆ ಕತ್ತಲೆಯೊ… ಅದರಲ್ಲೇ ಬೆಳಕೊ… ಬೆಳಕು ಎಲ್ಲಿಂದ ಬಂತು ಈ ಆಕಾಶ ಕಾಯಗಳಿಗೆ? ಕಾಣುವ ಕಾಣದ ಎರಡು ಬೆಳಕಿವೆ. ಕಂಡ ಬೆಳಕೇ ಬೆಳಕಲ್ಲ. ಕಾಣದ ಬೆಳಕನ್ನು ಕಾಣಬೇಕು… ಯಾವುದು ಆ ಕಾಣದ ಬೆಳಕು? ಈ ಕ್ಷುದ್ರ ಲೋಕದಲ್ಲಿ ಕಾಣದೇ ಉಳಿದಿರುವ ಬೆಳಕೇ ಅಪಾರ… ಬಿಡಿಸಿ ಹೇಳು? ಕತ್ತಲೆಯೂ ಬೆಳಕೇ? ಸಾಧ್ಯವೇ? ನಿನ್ನ ಕಣ್ಣಿಗೆ ಕಾಣದೇ ಉಳಿದಿದ್ದೆಲ್ಲ ಕತ್ತಲು ಎಂದರೆ ಅದು ನಿನ್ನ ದೃಷ್ಠಿಯ ಮಿತಿ. ನೀನು ಕಾಣಲಾಗದ್ದನ್ನೆಲ್ಲ ಅದೇ ಕತ್ತಲಲ್ಲಿ ಎಷ್ಟೋ ಜೀವಿಗಳು ಕಾಣಬಲ್ಲವು. ಹೂವುಗಳು ಕತ್ತಲಲ್ಲೂ ಅರಳುತ್ತವೆ! ಅಂದರೆ ಆ ಹೂಗಳಿಗೆ ಬೆಳಕಿನ ಬೇರೊಂದು ಚಲನೆ ಇದೆ ಎಂದು ಅರ್ಥ. ಕತ್ತಲನ್ನು ಮನುಷ್ಯ ಶೋಧಿಸಿಕೊಂಡೇ ಇಲ್ಲಾ. ಅನಂತ ಕತ್ತಲಲ್ಲಿ ಏನೇನಿದೆಯೊ… ಕಂಡದ್ದು ಮಾತ್ರ ಸತ್ಯವಲ್ಲ. ನಾವು ಕತ್ತಲಲ್ಲಿ ಕೇವಲ ಭಯವ ಕಂಡೆವು. ಭ್ರಮೆಯ ಭಾವಿಸಿದೆವು… ಬೆಳಕು ತೋರಿಸಿದ್ದು ಅಷ್ಟೊಂದು ಇರಬಹುದು. ಕತ್ತಲಲ್ಲೆ ಅಪಾರ ಬಾಕಿ ಉಳಿದಿರುವುದು! ಒಳ್ಳೆಯದು ಕೆಟ್ಟದ್ದು ಎಂದು ವಿಂಗಡಿಸಿ ಯೋಚಿಸುತ್ತಿರುವೆಯಾ? ಇಲ್ಲ ಇಲ್ಲಿ ಅವೆರಡೂ ಸಾಪೇಕ್ಷ. ಅವೆರಡೂ ಈಗ ತಾನೆ ಹುಟ್ಟಿ ಅಂಬೆಗಾಲಿಕ್ಕಿವೆ. ನಿರ್ಧರಿಸುವುದೇ ಮೊದಲ ತಪ್ಪು. ಇವತ್ತಿನ ಒಳ್ಳೆಯದು ನಾಳಿನ ಕೆಟ್ಟದ್ದು. ಆ ಕೆಟ್ಟದ್ದು ಬದಲಾಗಲು ಕಾಲಾಂತರಗಳೇ ಬೇಕು.
ಹೀಗೆ ತರ್ಕವಿಲ್ಲದೆ ಚಿಂತಿಸುವುದೆ ತಪ್ಪು ಅಲ್ಲವೇ… ಇರಬಹುದು; ಆದರೆ ತರ್ಕವೂ ಆ ಕಾಲದ ಸಂದರ್ಭದ ಒಂದು ಉಪಾಯ ಅಷ್ಟೇ… ನೀನು ಏನೇನೊ ಓದಿಕೊಂಡು ಹುಚ್ಚಾಗಿದ್ದೀಯೇ… ವಾಸ್ತವಕ್ಕೆ ಬಾ! ಹಾಂ; ನಿಜವೇ… ಇದು ಕನಸಿನ ಜೊತೆಗಿನ ಸಂವಾದ ಆಗಿತ್ತೆ? ಹೇ ಕನಸೇ; ನೀನು ಯಾರು? ಯಾಕೆ ಸುಪ್ತ ಪ್ರಜ್ಞೆಯಲ್ಲಿ ಬಚ್ಚಿಟ್ಟುಕೊಂಡು ಬೆತ್ತಲೆಯ ಬಗ್ಗೆ ಮಾತನಾಡುತ್ತಿದ್ದೆ ಎಂದು ಎದ್ದು ಕೂತೆ. ರಾತ್ರಿ ಎರಡು ಗಂಟೆಯಾಗಿತ್ತು. ಮಧ್ಯಏಷ್ಯಾದ ಸೂಫಿ ಸಂಗೀತವ ಆಲಿಸಿ… ಮರುಳುಗಾಡಿನ ಜನಪದ ಹಾಡುಗಳ ಕೇಳಿ ಮಲಗಿದ್ದೆ. ಮರುಭೂಮಿಯಲ್ಲಿ ಮಲಗಿ ಕನಸಿನ ಜೊತೆ ಮಾತನಾಡುತ್ತಿದ್ದೆನೇನೊ… ಈ ದರಿದ್ರ ಊರು ಬಿಟ್ಟು ಮರುಭೂಮಿಯ ಚೆಲುವೆಯ ಜೊತೆ ಒಂದು ಒಂಟೆಯ ಮೇಲೆ ಕೂತು ಪಯಣ ಮಾಡಬೇಕು ಎನಿಸಿತು. ತಲೆಭಾರವಾಗಿತ್ತು. ಹಾಗೇ ಒರಗಿದೆ. ಬೆಳಿಗ್ಗೆ ತಡವಾಗಿ ಎದ್ದಿದ್ದೆ.
ಅದೇ ಗಂಗೋತ್ರಿ. ಇಲ್ಲಿ ತನಗೆ ನೆಲೆ ಇಲ್ಲ… ಬೇಗ ದಾರಿ ಹುಡುಕು… ಎಲ್ಲಿಯಾದರು ದೂರ ತೊಲಗು ಎಂದು ಮನಸ್ಸು ಹೇಳುತ್ತಲೇ ಇತ್ತು. ಹಾಗಾದರೆ… ನಾನು ಈ ದೇಶದಲ್ಲಿ ಬದುಕಲು ಅಯೋಗ್ಯನೆ? ಇಲ್ಲಿ ಈ ಗಾಳಿ ಬೆಳಕು ನೀರು ಮಣ್ಣು ಆಕಾಶ ನನ್ನವಲ್ಲವೇ… ಅವೆಲ್ಲ ನನ್ನ ರಕ್ತದಲ್ಲಿ ಅಡಕವಾಗಿಲ್ಲವೇ… ಭೂಮಿಯ ಬಿಟ್ಟು ಎಲ್ಲಿ ಹೋಗಲಿ… ಸಾಯಲೇ… ಸತ್ತರೆ ಮುಗಿದು ಹೋಗುತ್ತದೆಯೇ… ತಥ್ ಬರೀ ಇಂತದೇ ರಗಳೆ ಮನವಾಯಿತಲ್ಲ ಎಂದು ಸಂಸ್ಥೆಗೆ ಬಂದೆ. ತರಗತಿ ಮುಗಿಸಿದೆ. ಆಳವಾಗಿ ಹೇಳುವವರೂ ಇಲ್ಲ ಕೇಳಿ ಕಲಿಯುವರೂ ಇಲ್ಲಾ. `ಹೇ; ಏನೇನೊ ರೀಲು ಬಿಡ್ತಾನೇ… ತಲೆ ಬುಡಾನೇ ಇಲ್ಲಾ; ಎಲ್ಲಾ ನಕಲಿ… ಜಂಗ್ಲಿ’ ಎಂದಿದ್ದರು ಗಾದೆ ಪ್ರಾಧ್ಯಾಪಕರು. ಅವರಂತೆ ಹಳೆ ಕಾಲದ ಪಾಠಗಳ ಮಾಡಲು ನನಗೆ ಸಾಧ್ಯವಿರಲಿಲ್ಲ. ಸೃಜನಶೀಲವಾದ ಅರಿವ ದಾರಿಯನ್ನು ಶೋಧಿಸಿಕೊಳ್ಳುತ್ತ ಸಾಗುವ ಸಮಷ್ಠಿ ಪ್ರಜ್ಞೆಯ ಆರ್ದ್ರತೆಯ ಪಾಠಕ್ರಮ ನನ್ನದಾಗಿತ್ತು. ಯಾರನ್ನೂ ನಕಲು ಮಾಡುತ್ತಿರಲಿಲ್ಲ. ಅರಿವು ತಂತಾನೆ ಘಟಿಸಿ ಬರುತ್ತಿತ್ತು.
ಎಲ್ಲರನ್ನು ಮೆಚ್ಚಿಸಲು ನಾಟಕ ಆಡಲು ನನಗೆ ಯಾಕೆ ಬರುವುದಿಲ್ಲ ಎಂದು ಕೇಳಿಕೊಂಡೆ. ನನ್ನದು ಕೆಟ್ಟ ಸ್ವಾಭಿಮಾನ ಇರಬಹುದೇ… ಕಥೆಗಾರ ಎಂಬ ಜಂಬ ಬಂದು ಬಿಟ್ಟಿದೆಯೇ… ಇಲ್ಲವಲ್ಲಾ. ಬರೆದು ಪಡೆದು ಮೆರೆಯುವುದಕ್ಕೆ ಏನಿದೆ ಎಂದು ತಗ್ಗಿದ್ದೆ. ಅದೊಂದು ಭಾನುವಾರ ಮೆಸ್ ಹಾಲಲ್ಲಿ ಊಟ ಮುಗಿಸಿ ಟಿ.ವಿ. ನೋಡುತ್ತ ಕೂತಿದ್ದೆ. ಯಾವುದೊ ಭಾಷೆಯ ಅವಾರ್ಡ್ ಮೂವಿ ಪ್ರಸಾರವಾಗುತ್ತಿತ್ತು. ನೋಡುತ್ತಿದ್ದೆ. ಒಂದು ವಿಶಾಲ ಭತ್ತದ ಬಯಲಿನ ದೃಶ್ಯ ಎದುರಾಯಿತು. ಸೆಳೆಯಿತು. ಆ ಸುಂದರ ಬಯಲನ್ನು ಬಡ ಹೆಂಗಸು ಆಸೆಗಣ್ಣಿಂದ ತುಂಬಿಕೊಳ್ಳುತ್ತಿದ್ದ ಕ್ಷಣ. ತಟ್ಟನೆ ನನ್ನ ತಲೆಯಲ್ಲಿ ನನ್ನ ಊರ ಬಾಲ್ಯದ ಭತ್ತದ ಬಯಲು ಎದುರಾಗಿ ನಿಮಿಷವೂ ತಡಮಾಡದೆ ರೂಮಿಗೆ ಬಂದೆ. ನೋಡಿದರೆ ಬಿಳಿಹಾಳೆಗಳು ಮುಗಿದಿವೆ! ಜೆರಾಕ್ಸ್ ಮಾಡಿಸಿದ್ದ ನೋಟ್ಸ್‌ಗಳ ಹಿಂಬದಿ ಖಾಲಿ ಇತ್ತು. `ಭತ್ತ’ ಎಂದು ಶೀರ್ಷಿಕೆ ಬರೆದೆ. `ಕೊಯ್ಲು ಮಾಡಿ ತಂದ ಭತ್ತವ ಬಿಸಿಲಿಗೆ ಒಣಹಾಕುವಂತೆ ಇಡೀ ಕೇರಿಯ ಜನ ಚಿನ್ನದ ಬಣ್ಣದ ಭತ್ತದ ಕಾಳುಗಳನ್ನು ಆಕಾಶದ ಅಗಲಕ್ಕೂ ಒಣಹಾಕಿರುವಂತೆ ಕಂಡಿತು. ಆ ತಾರಕ್ಕಿಗಳು ಅನ್ನದ ಅಗುಳಿನಂತೆ ಮಿನುಗುತ್ತಿದ್ದವು’ ಎಂದು ಉಕ್ಕಿ ಬಂದ ಭಾವವನ್ನು ಬರೆಯುತ್ತ ಸಾಗಿದೆ. ಕೊನೆ ಸಾಲು ಮುಗಿವ ತನಕ ಕೈ ಬಿಡದೆ ತಲೆ ಎತ್ತದೆ ಮುಳುಗಿ ಹೋಗಿದ್ದೆ. ಅದು ಕೂಡ ನನ್ನ ಬಾಲ್ಯದ ಒಂದು ದಿನದ ಅನುಭವ ಆಗಿತ್ತು. ಗೆಳೆಯರು ಸಿಗಲಿಲ್ಲ. ಮರುದಿನ ತಿದ್ದಿದೆ. ಅಂದರೆ ಮರು ರೂಪಿಸಿದೆ. ಅವತ್ತೇ ಪ್ರಜಾವಾಣಿ ದೀಪಾವಳಿ ಕಥೆಯ ಸ್ಪರ್ಧೆಗೆ ಕೊನೆಯ ದಿನವಾಗಿತ್ತು. ಉಪೇಕ್ಷಿಸಿದ್ದೆ. ಬಹುಮಾನ ಬರುತ್ತೊ ಇಲ್ಲವೊ… ಒಟ್ಟಿನಲ್ಲಿ ತಲುಪಿಸುವ ಎಂಬ ಒತ್ತಡ ಉಂಟಾಯಿತು. ಬಸ್ಸೇರಿ ಬೆಂಗಳೂರಿನ ಎಂ.ಜಿ. ರಸ್ತೆಯ ಪ್ರಜಾವಾಣಿ ಪತ್ರಿಕೆಯ ಕಛೇರಿಗೆ ಮೊದಲ ಬಾರಿಗೆ ಪ್ರವೇಶಿಸಿದ್ದೆ. ಈ ಪತ್ರಿಕೆಯ ಕಛೇರಿ ಇಷ್ಟೊಂದು ದೊಡ್ಡದೇ ಎಂದು ಅಚ್ಚರಿ ಆಯಿತು. ಸಂಪಾದಕರನ್ನು ಕಾಣಲು ಕೋರಿದೆ. ವಿಚಾರಿಸಿದರು. ಅರೇ; ನೀವೆನಾ ಬುಗುರಿ ಕಥೆಗಾರ ಎಂದು ಒಳ ಕರೆದು; ಮೂರನೇ ಮಹಡಿಗೆ ಕಳುಹಿಸಿಕೊಟ್ಟರು. ಅಲ್ಲಿ ಪ್ರಜಾವಾಣಿಯ ಸಾಪ್ತಾಹಿಕ ಪುರವಣಿಯ ಸಂಪಾದಕರ ಕೊಠಡಿಯ ತೋರಿದರು. ಪರಿಚಯ ಮಾಡಿಕೊಂಡೆ. ಆ ಸಂಪಾದಕರು ಎದ್ದು ನಿಂತು ನನ್ನ ಎರಡೂ ಕೈಗಳ ಹಿಡಿದು ಆಪ್ತವಾಗಿ ಕೂರಿಸಿಕೊಂಡರು. ಅವರ ಹೆಸರು ಡಿ.ವಿ. ರಾಜಶೇಖರ್. ಮೂಲತಃ ಕವಿಯಾಗಿದ್ದರು. ಅವರ ಸಂಕಲನದ ಬಗ್ಗೆ ಮಾತಾಡಿದೆ. ಕೆಳಗೆ ಕಾಫಿ ಹೌಸ್‌ಗೆ ಕರೆದೊಯ್ದು ಪ್ರೀತಿ ತೋರಿದರು. ಕಥೆಯ ಕೊಟ್ಟು ಬಂದು ಮರೆತಿದ್ದೆ.
ಊರಲ್ಲಿ ತಾತ ಪತ್ರ ಬರೆಸಿದ್ದ. ನಿನ್ನನ್ನು ನೋಡಬೇಕು… ಹೆಚ್ಚು ದಿನ ಇರಲಾರೆ ಅನಿಸುತ್ತಿದೆ. ಬಂದು ಹೋಗು ಎಂದು ಕೇಳಿದ್ದ. ಉತ್ಸಾಹ ಬರಲಿಲ್ಲ. ಮತ್ತೆ ಮತ್ತೆ ಅಲ್ಲಿ ಹೋಗಿ ಅಪಮಾನ ಮಾಡಿಸಿಕೊಳ್ಳುವುದು ಸಾಧ್ಯವಿರಲಿಲ್ಲ. ಆದರೆ ಆ ತೋಪಮ್ಮ, ಮಡಕೂಸಮ್ಮ, ಅತ್ತೆಯರು… ಆ ಕಾಲದ ಹಳೆಯ ಜೀವಗಳು ಹೇಗಿವೆಯೊ ಎಂದು ರಾತ್ರಿ ವೇಳೆ ಮಲಗಿ ಮನದಲ್ಲೆ ಅಲ್ಲೆಲ್ಲ ಅಡ್ಡಾಡಿ ಕಂಡು ಬರುತ್ತಿದ್ದೆ ಒಂದು ದೆವ್ವದಂತೆ. ದೀಪಾವಳಿ ಬಂದಿತ್ತು. ನನ್ನ ಕಥೆಗೆ ಮತ್ತೆ ಮೊದಲ ಬಹುಮಾನ ಬಂದಿತ್ತು. ಬಹುಶಃ ಓ.ಎಲ್. ನಾಗಭೂಷಣ್ ಅವರು ತೀರ್ಪುಗಾರರಾಗಿದ್ದರು. ಹೆಚ್ಚು ವಾಸ್ತವವಾದಿ ದಂಗೆಯ ಸ್ವಭಾವದ ಕಥೆ ಅದಾಗಿತ್ತಾದರೂ ಅದನ್ನು ದಾಟಿತ್ತು. ಹೊಗಳಿಕೆಯೊ ಹೊಗಳಿಕೆ. ಭಾರವಾಗಿ ಬಿದ್ದುಹೋಗುವಂತಾಗಿದ್ದೆ. ನನ್ನ ಕಥೆಗಳೇ ನನಗೆ ಶತ್ರುಗಳ ಪಡೆಯನ್ನು ಕಟ್ಟಿಕೊಟ್ಟಿದ್ದವು. ದಲಿತ ಬಂಡಾಯದ ಲೇಖಕರು ಅಸೂಯೆಯಲ್ಲಿ ಪ್ರತಿಕ್ರಿಯಿಸಿದ್ದರು. ಇನ್ನಾರ ದೂರಲಿ… ಕರೆಯಬೇಕಾದವರೇ ತೊಲಗು ಎನ್ನುವಾಗ ಯಾರ ಅಂಗಳದಲ್ಲಿ ನಿಂತು ಬೊಗಸೆಯೊಡ್ಡಿ ನೀರಬೇಡಲಿ… ಈ ಜನರೇ ಹೀಗೆ ಎಂದು ಅವರಿಂದ ದೂರವೇ ಸರಿದೆ. ವಿಚಿತ್ರ ಎಂದರೆ ಬ್ರಾಹ್ಮಣ ಲೇಖಕರು ʼಬಾಬಾ ನಮ್ಮ ಮನೆಗೆ ಬಾʼ ಎಂದು ಬಾಯ್ತುಂಬ ಕರೆಯತೊಡಗಿದರು. ʻತೊಲಗು ಎನ್ನುವವರೂ ಬೇಡಾ; ಬಾಬಾ ಎನ್ನುವವರೂ ಬೇಡʼಎಂದು ಅಂತರ ಕಾಯ್ದುಕೊಂಡೆ. ಹುಡುಗಿಯರೊ, ಬೆಡಗಿಯರೊ ಹಿಂಬಾಲಿಸಿದರು. ಆ ತಲಕಾಡಿನ ಮರಳ ದಂಡೆಯ ಹುಡುಗಿಯೇ ನೆನಪಾಗುತ್ತಿದ್ದಳು. ಬಿಟ್ಟು ಬಿಡು ಅವಳ. ಅನೀತಿಗಿಲ್ಲ ಕೊನೆ. ಬಿಟ್ಟು ಬಿಡು ಅವಳ ಎಂದಿತ್ತು ಯಾವುದೊ ನೆರಳು ನನ್ನ ಹೆಗಲ ಹಿಂದೆ ಬಂದಂತೆ… ಹಿಂತಿರುಗಿ ನೋಡಿದ್ದೆ. ಹೌದಲ್ಲವೇ… ಎಲ್ಲೆಲ್ಲಿಂದಲೊ ಬಂದಿರುವೆ. ನಾಳೆ ಇನ್ನೂ ಹೆಚ್ಚಿನ ಕೇಡಿನ ದಿನಗಳು ಕಾಯುತ್ತಿರಬಹುದು… ಮೊದಲು ಅವುಗಳನ್ನು ಎದುರಿಸುವ ಎಂದು ಅನ್ಯಮನಸ್ಕನಾಗುತ್ತಿದ್ದೆ.
ಅಕ್ಕನನ್ನು ಮರೆತೇ ಹೋಗಿದ್ದೆ. ಆ ತಮ್ಮ ಎಲ್ಲಿ ಆ ಬೆಂಗಳೂರಿನ ಗಲ್ಲಿಯಲ್ಲಿ ಕುಡಿದು ಬಿದ್ದು ಹೋದನೊ ಎಂದು ನನ್ನ ಹಿನ್ನೆಲೆಯ ಬಗ್ಗೆ ನನಗೇ ಅಸಹ್ಯವಾಗುತ್ತಿತ್ತು. ನನ್ನೊಳಗೇ ಒಂದು ನರಕವಿತ್ತು. ಅದನ್ನು ಸುಧಾರಿಸಿಕೊಳ್ಳಲು ಬಹಳ ಹೆಣಗಾಡುತಿದ್ದೆ. ಅದಕ್ಕೇ ಕಥೆಗಳ ಬರೆದೆನೇನೊ. ತುಂಬ ಜತನವಾಗಿ ಬಚ್ಚಿಟ್ಟುಕೊಂಡಿದ್ದೆ. ಕಾಣುತ್ತಿದ್ದುದೇ ಒಂದು; ಕಾಣದೇ ಹೋಗುತ್ತಿದ್ದುದೇ ಇನ್ನೊಂದು. ನಡೆ ನುಡಿಯೇ ಒಂದು; ಹಾಡದೆ ತೋರದೆ ಉಳಿದಿದ್ದೇ ಮತ್ತೊಂದು. ಮನುಷ್ಯ ನುಡಿದಿದ್ದಕ್ಕಿಂತಲೂ ನುಡಿಯದೇ ಬಿಟ್ಟ ಮಾತುಗಳೇ ಅಪಾರ. ಕೆಲವರು ವಾಚಾಳಿಯಾಗಿ ವಟಗುಟ್ಟಿ ಸಾಯುತ್ತಾರೆ. ಮಡಿಯುವಾಗಲೂ ಒಂದು ಒಳ್ಳೆಯ ಮಾತು ಆಡಿರುವುದಿಲ್ಲ. ಮತ್ತೆ ಕೆಲವರೊ; ನನ್ನ ತಾಯಂತವರು ಇಡೀ ಜೀವನದಲ್ಲಿ ಹೆಚ್ಚೆಂದರೆ ಒಂದು ನೂರು ಪದಗಳನ್ನೂ ಬಳಸಿರುವುದಿಲ್ಲ. ದಿನವಲ್ಲ ವಾರವಲ್ಲಾ… ತಿಂಗಳಾನುಗಟ್ಟಲೆ ಮಾತೇ ಆಡದೆ ಅಳಿದು ಹೋದವರು ಎಷ್ಟು ಮಂದಿಯೊ… ಅಷ್ಟೆಲ್ಲ ಮಾತಾಡಿದವರು ಯಕಶ್ಚಿತ್ ಒಂದು ಕೆಡು ನುಡಿಯನ್ನು ಕಟಕಟಾ ಎಂದು ಹಲ್ಲು ಕಡಿದಂತೆ ಬೊಗಳಿರುತ್ತಾರೆ… ಅಷ್ಟೇ; ಅಲ್ಲಿ ನಿಜವಾದ ಮಾನವ ಮಾತೇ ಇರುವುದಿಲ್ಲ. ಆ ಆದಿ ಮಾನವ ಒಂದು ವರ್ಷದಲ್ಲಿ ಎಷ್ಟು ಪದಗಳ ಬದುಕಿಗಾಗಿ ಬಳಸುತ್ತಿದ್ದ… ಸನ್ನೆಗಳು ಸಾಕಾಗಿದ್ದವು. ಈಗ ಮಾತುಗಳು ಆಯುಧಗಳಿಗಿಂತಲೂ ಅಪಾಯಕಾರಿಯಾಗಿವೆ…
ಸಂಸ್ಥೆಯ ಪುಟ್ಟ ಲೈಬ್ರರಿಯಲ್ಲಿ ಸಿಮಿಯಾಲಜಿ… ಶಬ್ದಾರ್ಥ ವಿಜ್ಞಾನವನ್ನು ಓದುತ್ತಿದ್ದೆ. ಟಿಪ್ಪಣಿ ಬರೆದುಕೊಳ್ಳುತ್ತಿದ್ದೆ. ಪ್ರತಿ ಶಬ್ಧದ ಸಂಕೇತ ಮತ್ತು ಅರ್ಥಗಳ ಫಿಲಸಾಫಿಕಲ್ ಸ್ಟಡಿ ಆಗ ನನಗೆ ಅಚ್ಚು ಮೆಚ್ಚಿನದಾಗಿತ್ತು. ಮನೋ ವಿಜ್ಞಾನವೂ ಈ ಅಧ್ಯಯನದ ಕೊಂಡಿಯಾಗಿತ್ತು. ಫರ್ಡಿನಂಡ್ ಡಿ. ಸಸ್ಸೂರ್, ರೊಲ್ಯಾಂಡ್ ಬಾರ್ತೋಸ್, ಲೆವಿಸ್ಟ್ರಾಸ್, ಜಾಕೊಬ್ ಡೆರಿಡಾ ಮುಂತಾದವರೆಲ್ಲ `ಅರ್ಥ’ವನ್ನು ಪಾರಮಾರ್ಥಿಕ ಎಂಬಂತೆ ಮಾತು, ಮಾನವ, ಸೃಷ್ಟಿ, ಸಂವಹನಗಳ ಅಂತರಾಳವನ್ನು ಬಹಳ ಸೂಕ್ಷ್ಮ ನೆಲೆಗಳಲ್ಲಿ ಮಂಡಿಸಿದ್ದಾರೆ… ನಮ್ಮಲ್ಲಿ ಅಂತಹ ಒಂದೇ ಒಂದು ಸ್ವಂತದ ಲೇಖನವನ್ನು ಯಾರೂ ಬರೆದಿಲ್ಲವಲ್ಲಾ… ಎ.ಕೆ. ರಾಮಾನುಜನ್ ಅವರ ಮಾತಲ್ಲಿ ಆ ವಿಚಾರಗಳ ಕೇಳಿಸಿಕೊಂಡಿದ್ದೆ. ಇಲ್ಲಿನ ಭಾಷಾ ವಿಜ್ಞಾನಿಗಳಿಗೆ ಒಂದು ಅರ್ಥಪೂರ್ಣ ವಾಕ್ಯವನ್ನು ಮಾಂತ್ರಿಕವಾಗಿ ಹೇಳಲಿಕ್ಕೇ ಬರುವುದಿಲ್ಲ. ಇನ್ನು ಅವರಿಗೆ ಡೆರಿಡಾನ ಬಗ್ಗೆ ತಿಳಿಯಲು ಹೇಗೆ ಸಾಧ್ಯ ಎಂದು ಒತ್ತಡದಲ್ಲಿ ಗಡ್ಡವನ್ನು ಉಜ್ಜಿಕೊಳ್ಳುತ್ತಿದ್ದೆ. ಆ ಲೈಬ್ರರಿಯನ್ನು ನೋಡಿಕೊಳ್ಳುತ್ತಿದ್ದವನು ವರಾಂಡದಲ್ಲಿ ಯಾರ ಜೊತೆಯೊ ಮಾತಾಡಿಸುತ್ತಿರುವುದು ಕಿರಿಕಿರಿ ಮಾಡಿತು. `ಸಾರ್… ಅವರು ಇಲ್ಲೇ ಇದ್ದಾರೆ… ಕರಿಲಾ ಸಾರ್’ ಎನ್ನುತ್ತಿದ್ದ. ಯಾರೊ ನನ್ನನ್ನು ಕೇಳಿಕೊಂಡು ಬಂದಿದ್ದರು. ಆತ ಗಾಬರಿಯಲ್ಲಿ ದೌಡಾಯಿಸಿ ಬಂದು; `ಸಾಹೇಬ್ರು… ದೊಡ್ಡ ಸಾಹಿತಿಗಳು ಬಂದವ್ರೇ… ಬಾರಪ್ಪಾ ಕರೀತಾವ್ರೆ’ ಎಂದ. ವಯಸ್ಸಾಗಿತ್ತು. ಹಳ್ಳಿಗ ಯಾರೆಂದು ಹೊರಬಂದೆ. ಸಂಸ್ಥೆಯ ಹೆಬ್ಬಾಗಿಲ ಮುಂದೆ ಯು.ಆರ್. ಅನಂತಮೂರ್ತಿ ನಿಂತಿದ್ದರು. ಕ್ಷಣ ಅಳುಕಿ ಅಲುಗಾಡಿದೆ. ಆಹಾ! ದೇವರು ಪ್ರತ್ಯಕ್ಷನಾಗುತ್ತಾನೆ ಎನ್ನುತ್ತಾರಲ್ಲಾ… ಇದೇನಾ ಎಂದು ಮುನ್ನುಗ್ಗಿ ʻಸಾರ್ ನಮಸ್ಕಾರʼಎಂದು ಕೈ ಮುಗಿದೆ.
‘ಕೈ ಮುಗಿಯಬಾರದು. ಕೈ ಹಿಡಿದುಕೊಳ್ಳಬೇಕು. ನಿನ್ನನ್ನು ನೋಡಬೇಕು ಎಂದು ಬಹಳ ಸಲ ಅನ್ನಿಸಿತ್ತು. ಇವತ್ತು ಅದು ಕೂಡಿ ಬಂತು’ ಎಂದು ಕೈ ಕುಲುಕಿ ಹೆಗಲ ಮೇಲೆ ಕೈ ಹಾಕಿ ಎಳೆದು ಅಪ್ಪಿಕೊಂಡು ಬೆನ್ನು ತಟ್ಟಿದರು. ನನಗೆ ಗರಬಡಿದಂತಾಗಿತ್ತು. ಒಂದೇ ಕ್ಷಣದಲ್ಲಿ ಮೋಡಿ ಮಾಡಿಬಿಟ್ಟಿದ್ದರು. ಅವರನ್ನು ತಂದೆಯ ಸ್ಥಾನದಲ್ಲಿಟ್ಟು ಭಾವಿಸಿದೆ. ಕ್ಯಾಂಟೀನಿಗೆ ಕರೆತಂದರು. ದಾರಿಯ ಉದ್ದಕ್ಕೂ ಎಲ್ಲರೂ ಅನಂತಮೂರ್ತಿ ಅವರನ್ನೆ ನೋಡುತ್ತಿದ್ದರು. ಅಲ್ಲಿಂದ ಇಲ್ಲಿಗೆ ಬರುವಷ್ಟರಲ್ಲಿ ಇವರಿಗೆ ಇಷ್ಟೊಂದು ಜನ ನಮಸ್ಕಾರ ಮಾಡಿದರಲ್ಲಾ… ಅವರ ಜೊತೆಗೆ ನನ್ನನ್ನೂ ನೋಡಿದರಲ್ಲಾ ಎಂದು ಬಹಳ ಕಾಲದ ಗಾಯದ ಕಣ್ಣೀರು ಆನಂದ ಬಾಷ್ಪವಾಗಿ ತುಳುಕಲು ಮುಂದಾಗುತ್ತಿತ್ತು. ತಡೆದುಕೊಂಡೆ. ʻಸಾಕು ಬಿಡು ಈ ಪಾಪಿಗೆ ಇಷ್ಟಾದರೂ ನಾಲ್ಕಕ್ಷರದ ಕಥೆಯ ಯೋಗ್ಯತೆ ಬಂತಲ್ಲಾʼ ಎಂದು ಸಂತೋಷಪಡಲೊ ದುಃಖ ಪಡಲೊ ತಿಳಿಯದೆ ಅವರ ಜೊತೆ ಹೆಜ್ಜೆ ಹಾಕಿ ಕ್ಯಾಂಟೀನಿನ ಮೆಟ್ಟಿಲು ಹತ್ತಿ ಒಳ ಬಂದೆ.
ಆಗೆಲ್ಲ ಕ್ಯಾಂಟೀನ್ ಅಷ್ಟು ಅಡ್ವಾನ್ಸ್ ಆಗಿರಲಿಲ್ಲ. ಚಹಾ ಕುಡಿಯುತ್ತ ಅವರ ಎದಿರು ಕೂತೆ. ತಂತಾನೆ ಅವರ ಬಾಯಲ್ಲಿ ಪಶ್ಚಿಮದ ಅಪ್ರತಿಮ ಕವಿಗಳು ಮಾತಾಗಿ ಸಾಗಿ ಬಂದರು. ಚಿನುವಾ ಅಚಿಬೆ, ವೋಲೆ ಷೋಯಿಂಕಾರ ಬರಹಗಳ ವಿವರಿಸಿದರು. ತಾಳದೆ ಆಗ ನಾನು ಓದಿದ್ದ ಅಂಕಲ್‌ಟಾಮ್ಸ್ ಕ್ಯಾಬಿನ್ ಕಾದಂಬರಿ ಬಗ್ಗೆ ಹೇಳಿದ ಕೂಡಲೆ ಕ್ಷಣ ತಣ್ಣಗಾಗಿ ವಿಸ್ಮಯದಿಂದ ದಿಟ್ಟಿಸಿದರು. ನನ್ನನ್ನು ನಾನು ತೋರಿಸಿಕೊಳ್ಳುವ ಸ್ವಭಾವವೂ ಇತ್ತು. ದೊಡ್ಡವರ ಮುಂದೆ ಮಾತ್ರ ಹಾಗೆ ಮಾಡುತ್ತಿದ್ದೆ. ಸರ್ವಾಂಟೀಸನ ʻಡಾನ್‍ಕ್ವಿಯೋಟೆʼ ಕಾದಂಬರಿಯನ್ನೂ ಓದಿರುವೆ ಎಂದೆ. ‘ಗ್ರೇಟ್… ನೀನು ಸಣ್ಣ ಹುಡುಗ ಅಲ್ಲ ಎಂದು ನಿನ್ನ ಬರಹವೇ ಹೇಳಿಬಿಟ್ಟಿತ್ತು. ಇಷ್ಟೆಲ್ಲ ಓದಿರುವ ಒಬ್ಬ ದಲಿತ ಹುಡುಗ ನನ್ನ ಪಾಲಿಗೆ ಗ್ರೇಟ್ ರೈಟರ್… ಬಾ… ಡಿಪಾರ್ಟ್‌ಮೆಂಟಿಗೆ ಹೋಗುವ… ಅಲ್ಲಿ ಆರಾಮಾಗಿ ಮಾತಾಡುವಾ’ ಎಂದು ಕರೆದೊಯ್ದರು. ಆ ಇಂಗ್ಲೀಷ್ ವಿಭಾಗದಲ್ಲಿ ಅದ್ಧೂರಿ ಸುಂದರಿಯರಿದ್ದರು. ಆಗ ಅವರ ನೆರಳು ಸೋಕಿದರೆ ಸಾಕು; ಅದೇ ನನ್ನ ಪುಣ್ಯ ಎಂದುಕೊಳ್ಳುತ್ತಿದ್ದೆ. ಅವರು ನನ್ನ ನೋಡಿ ನಗಾಡಿದರು. ಕೆಲವರು ಕಣ್ಣು ಮಿಟುಕಿಸಿದರು. ಎಷ್ಟೇ ಆಗಲಿ ಜೋರಿದ್ದರು.
ಪುಟ್ಟ ಕೊಠಡಿಯ ತುಂಬ ಬರೀ ಪುಸ್ತಕಗಳೇ ಇಡುಕಿರಿದಿದ್ದವು. ಎಂತಹ ಬಂಧನವಾಗಿ ಬಿಟ್ಟಿತು ಎಂಬುದನ್ನು ಶಬ್ಧಗಳಲ್ಲಿ ಹಿಡಿದಿಡಲಾರೆ. ಆ ದಿನವೆಲ್ಲ ಅವರ ಜೊತೆಯೇ ಇದ್ದೆ. ಕುವೆಂಪು ನಗರದ ಮನೆಗೆ ಕರೆದೊಯ್ದರು. ತಮ್ಮ ಮನೆಯ ಒಳ ಕೊಠಡಿಯಲ್ಲಿ ಕೂತು ಆದಿ ಮಾನವರ ಕಾಲದಿಂದಲೂ ನಾವು ಜೊತೆಯಲ್ಲೇ ಇದ್ದೆವು ಎಂಬಂತೆ ಮಾತಾಡಿಕೊಂಡೆವು. ಹಾಸ್ಟಲಿಗೆ ಹಿಂತಿರುಗಿದ್ದೆ ತಡವಾಗಿ. ತಲೆ ತುಂಬ ಅವರ ಪ್ರೀತಿಯೇ ರಿಂಗಣಿಸುತಿತ್ತು. ಒಂದು ವಾರ ಬಿಟ್ಟು ಅವರತ್ತ ನಾನೆ ಹೋದೆ. ಮಧ್ಯಾಹ್ನದ ಹೊತ್ತು. ಬಿಡುವಿತ್ತು ಅವರಿಗೆ. ಹುಣಸೂರು ರಸ್ತೆಯ ಪಬ್ ಹೌಸಿಗೆ ಕ್ಯಾಂಟೀನಿನ ಮುಂದಿನಿಂದ ಒಂದು ಕಾಲುದಾರಿ ಇತ್ತು. ಎರಡೂ ಕೈಗಳ ಹಿಂದಕ್ಕೆ ಕಟ್ಟಿಕೊಂಡು ಮುನ್ನಡೆದರು. ‘ಎಲ್ಲಿಗೆ ಸಾರ್’ ಎಂದೆ. ‘ಬಾರಯ್ಯಾ… ತುಂಬ ಶೆಕೆಯಿದೆ… ಬಿಯರ್ ಕುಡಿಸುವೆ’ ಎಂದರು. ‘ಓಕೇ ಸಾರ್’ ಎಂದು ದಾಪುಗಾಲಾಕಿದೆ. ಮಗ್ ಬಿಯರ್ ತಂದಿತ್ತರು. ಶೇಂಗಾ ಮಸಾಲೆ ಇತ್ತು. ಥಂಡಿಯಾದ ಪೀಪಾಯಿಯ ಬಿಯರ್. ಹೊಟ್ಟೆ ತುಂಬ ಕುಡಿದೆ. ಅವರ ಅನಂತ ವಿಚಾರಗಳ ಸಂಯೋಗವೇ ವಿಚಿತ್ರ… ಆದರೆ ದಿವ್ಯ ಸುಖದವು. ತಲೆದೂಗಿ ಆಲಿಸುತ್ತಿದ್ದೆ. ಕೇಳಿಸಿಕೊಂಡೇ ಇರದಿದ್ದ ಮಾತುಗಳ ನಾದಬ್ರಹ್ಮನಂತೆ ನುಡಿಯುತ್ತಿದ್ದರು. ಅಹಾ! ಎಷ್ಟೊಂದು ಪರಿಭಾಷೆಗಳಿವೆ ಈ ವ್ಯಕ್ತಿಯಲ್ಲಿ… ಇಂತಲ್ಲೇ ಮಾತನ್ನು ಕಲಿಯಬೇಕಿರುವುದು ಎಂದು ಮೂಕವಿಸ್ಮಿತನಾಗಿದ್ದೆ. ನೆತ್ತಿಯಲ್ಲಿ ನಿಶೆಯೆಂಬ ಚೆಲುವೆ ಆ ತಪಸ್ವಿಯ ಮಾತಿಗೆ ಭಂಗ ಉಂಟುಮಾಡು ಎಂಬಂತೆ ಏನೇನೊ ಪ್ರಶ್ನೆ ಹಾಕುತಿದ್ದಳು. ಬಾಯಿ ಬಿಡಲಿಲ್ಲ.
ಈ ದರಿದ್ರ ಊರು ಬಿಟ್ಟು ಮರುಭೂಮಿಯ ಚೆಲುವೆಯ ಜೊತೆ ಒಂದು ಒಂಟೆಯ ಮೇಲೆ ಕೂತು ಪಯಣ ಮಾಡಬೇಕು ಎನಿಸಿತು. ತಲೆಭಾರವಾಗಿತ್ತು. ಹಾಗೇ ಒರಗಿದೆ. ಬೆಳಿಗ್ಗೆ ತಡವಾಗಿ ಎದ್ದಿದ್ದೆ. ಅದೇ ಗಂಗೋತ್ರಿ. ಇಲ್ಲಿ ತನಗೆ ನೆಲೆ ಇಲ್ಲ… ಬೇಗ ದಾರಿ ಹುಡುಕು… ಎಲ್ಲಿಯಾದರು ದೂರ ತೊಲಗು ಎಂದು ಮನಸ್ಸು ಹೇಳುತ್ತಲೇ ಇತ್ತು.
ಅವರೆ ಒಂದು ಪ್ರಶ್ನೆ ಕೇಳಿದರು… ‘ನಿನ್ನ ತಂದೆ ತಾಯಿ ಏನ್ಮಾಡ್ತಾರಯ್ಯಾ… ನೀನು ಕಥೆ ಬರೆಯೋದು ಅವರಿಗೆ ಗೊತ್ತಾ… ನಿನ್ನ ತಾಯಿ ನಿನ್ನ ಕಥೆ ಓದಿದ್ದಾರಾ… ನಿನಗೆ ಒಂದು ಒಳ್ಳೆಯ ಸಂಸ್ಕಾರ ಸಿಕ್ಕಿರಬೇಕು! ಇಲ್ಲದಿದ್ದರೆ ಈ ಪರಿಯ ಮಾಂತ್ರಿಕಭಾಷೆ ಭಾವದಿವ್ಯತೆ ಹೇಗೆ ತಾನೆ ಸಾಧ್ಯವಾಗುತಿತ್ತು… ನಿನ್ನ ಹಳ್ಳಿಯ ನೋಡಬೇಕಲ್ಲಯ್ಯಾ… ಕರೆದೊಯ್ಯುವೆಯಾ’ ಎಂದಿದ್ದೇ ತಡ ನನ್ನ ನಿಶೆಯೆಲ್ಲ ಇಳಿದು ಮೆತ್ತಗಾದೆ. ‘ಮಾತಾಡೂsss ಯಾಕೆ ಡಲ್ಲಾದೆ… ಎನಿ ಪ್ರಾಬ್ಲಮ್’ ಎಂದು ಮುಖವ ಓದತೊಡಗಿದರು.
‘ಇನ್ನೊಂದು ಮಗ್ ಬಿಯರ್ ತಾರಪ್ಪಾ’ ಎಂದು ವೆಯ್ಟರ್‌ಗೆ ಹೇಳಿದರು. ಎತ್ತಿ ಗಟಗಟನೆ ಕುಡಿದು ನಗಾಡಿದೆ. ನಗುನಗುತ್ತಲೇ ಅಳುತ್ತಿದ್ದೆ. ಪೆಚ್ಚಾದರು. ‘ಫಿಶ್… ಚಿಕನ್… ಏನ್ ತಿಂತೀಯಾ ಹೇಳೂ…’ ನಮ್ಮಪ್ಪ ಮನುಷ್ಯರ ರಕ್ತವ ಹೀರಿ ಹೀರಿ ಜೀವಂತ ಕಿತ್ತುಕಿತ್ತು ತಿಂದು ಬಿಟ್ಟಿದ್ದಾನೆ… ನಾನೀಗ ಯಾವ ಮಾಂಸವನ್ನೂ ತಿನ್ನಲಾರದ ಸ್ಥಿತಿಯಲ್ಲಿ ಇದ್ದೇನೆ ಎಂದು ಮನದಲ್ಲೆ ಅಂದುಕೊಂಡೆ. ನುಡಿಯಲಾರದ್ದನ್ನೆಲ್ಲ ಇವರ ಮುಂದೆ ನುಡಿದು ಇವರಿಗೂ ಆ ಗಾಯವ ಯಾಕೆ ಅಂಟಿಸಲಿ ಎಂದು ‘ಏನೂ ಬೇಡ ಸಾರ್… ನಿಮ್ಮ ಮಾಂತ್ರಿಕ ನುಡಿಯ ಬೆಡಗು… ಈ ಪ್ರಿತಿ, ಈ ವಿಶ್ವಾಸ ಇಷ್ಟು ಸಾಕು ನನ್ನ ಯೋಗ್ಯತೆಗೆ’ ಎಂದೆ. ‘ವಿನಯದಲ್ಲಿ ಮುಳುಗಿದ್ದೀಯೇ; ನಿಶೆಯಲ್ಲಾದರು ಗರ್ವದಿಂದಿರು. ಈ ಅಸ್ಪೃಶ್ಯತೆಯಲ್ಲಿ ಉರಿದುರಿದು ವಜ್ರವಾಗಿ ಬಂದಿದ್ದೀಯೆ. ಯಾರೂ ನಿನ್ನ ದಮನ ಮಾಡಲಾರರು. ನಿನ್ನ ವಿನಯವನ್ನು ಈ ನೀಚ ಸಮಾಜ ಗುಲಾಮಗಿರಿಗೆ ಬಳಸಿಕೊಳ್ಳುತ್ತದೆ. ಅಂಬೇಡ್ಕರ್ ಅವರನ್ನು ಓದಿದ್ದೀಯಲ್ಲಾ… ಆ ಮಹಾತ್ಮ ಗಾಂಧಿಯನ್ನೆ ಲೆಕ್ಕಕ್ಕೆ ತೆಗೆದುಕೊಂಡಿದ್ದರೇನು? ಯಾವುದಕ್ಕೂ ಅಂಜಬೇಡ. ನನ್ನಲ್ಲಿ ತಪ್ಪು ಕಂಡರೂ ಎಗ್ಗಿಲ್ಲದೆ ಎತ್ತಿ ಆಡು’ ಎಂದು ಮೊದಲು ಕೇಳಿದ್ದ ಪ್ರಶ್ನೆಗೆ ಉತ್ತರ ನಿರೀಕ್ಷಿಸುತ್ತಲೇ ಇದ್ದರು. ‘ನಿಮ್ಮ ತಾಯಿಗೆ ಈಗ ಎಷ್ಟು ವರ್ಷ… ಆರೋಗ್ಯವಾಗಿದ್ದಾರಾ… ನೋಡಿ ಬರಲು ಹೋಗ್ತಿರ್ತೀಯಾ’ ಎಂದು ಕೆದಕಿದರು.
ಕಣ್ಣೀರ ಕಣ್ಣರೆಪ್ಪೆಗಳು ತಡೆಯದಾದವು. ತುಳುಕಿದವು. ಹೇಳಿದೆ. ‘ನಾನಲ್ಲ ಕಥೆ ಬರೆದದ್ದು. ಕಥೆಯ ನನ್ನ ತಾಯಿ ಹೇಳಿ ಬರೆಸಿದಳು. ನನ್ನ ತಾಯಿ ಈಗ ನನ್ನ ನೆತ್ತರಲ್ಲಿ ಮಾತ್ರ ಬದುಕಿ ಉಳಿದಿದ್ದಾಳೆ. ಅವಳ ಆತ್ಮ ನನ್ನ ಎದೆಗೂಡ ದೇಗುಲದಲ್ಲಿ ನನ್ನ ಚೈತನ್ಯವಾಗಿದೆ… ಅವಳ ಮೌನ ನನ್ನ ಭಾಷೆಯಾಗಿದೆ. ಅವಳ ಕಿಚ್ಚು ನನ್ನ ಬರೆಹದ ಬೆಳಕಾಗಿದೆ… ನಾನು ನೆಪದ ಕಥೆಗಾರ ಅಷ್ಟೇ… ಅವಳೇ ನನ್ನ ಬರೆಹದ ಬೇರು ಕಾಂಡ ರೆಂಬೆ ಕೊಂಬೆ ಚಿಗುರು ಎಲ್ಲ… ಎಲ್ಲ ಅವಳೇ… ನನ್ನದೇನಿದ್ದರೂ ಅವಳ ಕಥೆಯ ನೆರಳು ಅಷ್ಟೇ’ ಎಂದೆ.
ಸುಮಾರು ಹೊತ್ತು ಮಾತಾಡಲಿಲ್ಲ. ಸಂಜೆ ಮುಗಿದು ರಾತ್ರಿ ಬಂದಿತ್ತು. ಇಬ್ಬರೂ ಎಲ್ಲಿದ್ದೆವೊ ಗೊತ್ತಿಲ್ಲ. ಮಾತಾಡಿದ್ದೆಲ್ಲ ಅಳಿದು ಹೋದಂತಾಗಿ ಮತ್ತೆ ಏನೊ ನುಡಿಯಲು ತೊದಲುತ್ತಿದ್ದೆ. ವಿಸ್ಕಿ ಕುಡಿಯುವೆ ಎಂದೆ. ಕಾಕ್‌ಟೇಲ್ ಕಷ್ಟ ಅಲ್ಲವೇ ಎಂದರು. ಎಂಡಗುಡುಕರ ಊರುಕೇರಿ ಮನೆಯಿಂದ ಬಂದಿರುವ ನನಗೆ ಏನೂ ಆಗಲ್ಲ ಎಂದೆ. ಸ್ಟ್ರಾಂಗ್ ವಿಸ್ಕಿ ರಂಗೇರಿಸಿತು. ʻಎಲಿಜಿ ರಿಟರ್ನ್ ಇನ್ ಎ ಕಂಟ್ರಿ ಚರ್ಚ್‌ಯಾರ್ಡ್ʼ ಪದ್ಯವನ್ನು ನನ್ನ ತಾಯಿಯ ನೋವಿನ ಮೂಲಕ ಗಾಢವಾಗಿ ವಿವರಿಸಿ ವಿಶ್ಲೇಷಿಸಿದರು. ಆ ಮೊದಲೆ ನಾನದನ್ನು ಬಿ.ಎ.ಯಲ್ಲಿ ಪಠ್ಯವಾಗಿ ತಿಳಿದಿದ್ದೆ. ಹೊತ್ತಾಗಿತ್ತು. ಮರಳಿದ್ದೆವು. ಆನಂತರ ಪ್ರತಿದಿನ ತನ್ನ ಜೊತೆ ವಾಕ್‌ಗೆ ಬರಬೇಕೆಂದು ತಾಕೀತು ಮಾಡಿದರು. ಸಂಜೆಯ ಆ ಮೈಸೂರಿನ ಹಿತವಾದ ತಂಗಾಳಿಯಲ್ಲಿ ವಿಹಾರ ಮಾಡುವುದೇ ಒಂದು ಆನಂದ. ಪ್ರಸಿದ್ಧ ಇಂಗ್ಲೀಷ್ ಕವಿಗಳ ಬಗ್ಗೆ ನಿರಂತರವಾಗಿ ಯೋಗಿಯಾಗಿ ಮೈ ಮರೆತು ವಿವರಿಸುತ್ತಿದ್ದರು. ಅವರಿಂದ ಬಹಳಷ್ಟನ್ನು ಕಲಿತಿದ್ದೆ. ಒಮ್ಮೆಯೂ ಯಾವತ್ತೂ ಅವರು ಕಿಡಿಗೇಡಿಗಳ ಬಗ್ಗೆ ಮಾತನಾಡುತ್ತಿರಲಿಲ್ಲ. ಎಲ್ಲ ಒಳ್ಳೆಯದನ್ನೆ ಕಲಿಸುತ್ತಿದ್ದರು. ಸಲೀಸಾಗಿ ನಾನವರ ಶಿಷ್ಯ ಆಗಿಬಿಟ್ಟಿದ್ದೆ.
ಕೇಡು ಎಲ್ಲೆಲ್ಲಿ ಸಂಚು ರೂಪಿಸುತ್ತ ಕೂತಿರುತ್ತದೊ… ಜಾತಿ ಎಲ್ಲಿ ಸತ್ತಿರುತ್ತದೆ, ಎಲ್ಲಿ ಎಗರಾಡುತ್ತ ತೊಡೆ ತಟ್ಟುತ್ತಿರುತ್ತದೆ… ಬೆಚ್ಚನೆಯ ಅವಳೊಬ್ಬಳು ಕರೆದಾಗ ಜಾತಿ ಬೇಲಿ ದಾಟಿಬಿಡುತ್ತದೆ. ತೀಟೆ ತೀರಿಸಿಕೊಂಡು ಮತ್ತೆ ಮೃಗೀಯ ಆಗಿಬಿಡುತ್ತದೆ. ಅದೇ ಮಮಕಾರದ ಉಪ್ಪು ಮಾರುವ ಪಳನಿಸ್ವಾಮಿಯ ತೋಳುಗಳಲ್ಲಿ ಆಕಸ್ಮಿಕವಾಗಿ ತೂರಿ ಬಂದ ಯಾರದೊ ಚೂರಿ ಇರಿತದಲ್ಲಿ ಪ್ರಾಣಪಕ್ಷಿ ಹಾರಿ ಹೋಗುವಾಗ ಹೇಗೆ ಜಾತಿ ತಂತಾನೆ ನಾಶವಾಗಿ ಆ ಸ್ಲಮ್ಮಿನ ಕರಿಯ ಪಳನಿಯ ಬೆವರ ವಾಸನೆಯೂ ಅಯ್ಯಂಗಾರಿಯ ಮಗಳಾದ ಅಲಮೇಲುವಿಗೆ ಹಿತ ಎನಿಸುತ್ತದೆ… ದಿವಾಕರ್ ಬರೆದಿದ್ದ ಕಥೆಯ ದೃಶ್ಯ ಹಾಯ್ದು ಹೋಯಿತು. ಬ್ರಾಹ್ಮಣ್ಯದ ನೆಪದಲ್ಲಿ ಕೆಲವು ಬ್ರಾಹ್ಮಣ ಲೇಖಕರ ವಿರುದ್ಧ ದಲಿತ ಹುಡುಗರನ್ನು ಎತ್ತಿಕಟ್ಟಿದ್ದರೇನೊ… ಯಾರೊ ಒಂದು ರಾತ್ರಿ ಹೊರಗಿನ ಗೂಂಡಾ ವಿದ್ಯಾರ್ಥಿಗಳ ಕರೆಸಿ ಅವರ ಮೂಲಕ ಅವಾಚ್ಯ ನೀಚ ನೀಲಿ ಚಿತ್ರಗಳ ಮೂಲಕ ಗೋಡೆ ಬರಹ ಮಾಡಿಸಿದ್ದರು. ಅನಂತಮೂರ್ತಿ ಅವರ ಮೇಲೆ ದಾಳಿಗೆ ಯತ್ನಿಸಿ ಅವರ ವಿಭಾಗದ ಕೊಠಡಿಗೆ ಬೆಂಕಿ ಹಚ್ಚಿದ್ದರು. ಅನಾಹುತ ಆಗಿರಲಿಲ್ಲ. ಬ್ರಾಹ್ಮಣ್ಯದ ವಿರುದ್ಧ ಬಂಡಾಯ ಎದ್ದಿದ್ದ ನನ್ನ ಮೇಲೆ ಆ ಆರೋಪಗಳ ಹೊರಿಸಲು ಕ್ರಿಮಿ ಪ್ರಾಧ್ಯಾಪಕ ಮುಂದಾಗಿದ್ದ. ಸ್ವತಃ ಇಂಟಲಿಜೆನ್ಸ್‌ನವರೆ ನಂಬಿರಲಿಲ್ಲ. ಅಂತೂ ಅಂತಲ್ಲೆಲ್ಲ ನನ್ನ ಹೆಸರನ್ನು ಗಂಟುಹಾಕುವ ಯತ್ನ ನಡೆಯುತ್ತಲೇ ಇದ್ದವು.
ಜಾತಿ ಎಲ್ಲೆಲ್ಲಿ ರಕ್ತಪಾತ ಎಸಗುತ್ತದೆ… ಯಾಕೆ ಹಾಗೆ ಎಂದು ಚಿಂತಿಸಿದೆ. ಜಾತಿಯ ಮೂಲ ನರಭಕ್ಷಕ ಪ್ರವೃತ್ತಿಯಲ್ಲಿ ಅನಾದಿಯಿಂದ ಅಡಗಿ ಕೂತು ಎಲ್ಲದರ ಸೂತ್ರದಾರನಾಗಿದೆ ಎನಿಸಿತು. ಮೃಗ ಸ್ವಭಾವ ಜಾತಿಯ ಮೂಲಗುಣ. ಜಾತಿಗೆ ಹೇಯವಾದ ಮೇಲರಿಮೆ ಇದೆ. ಅದು ಅತ್ಯುಗ್ರ ಸ್ವಾರ್ಥಿ. ಜಾತಿ ಜನಾಂಗ ದ್ವೇಷಗಳು ಸ್ವಮಾನವ ಸ್ವಾಹಿಗಳು. ಜಾತಿಗೆ ಜಾತಿಯೇ ವೈರಿ ಎಂದಿದ್ದಾರಲ್ಲಾ… ಬೇರೆ ಯಾರೂ ಬೇಕಾಗಿಲ್ಲ ಈ ಸಮಾಜಗಳ ಹತ್ಯೆ ಮಾಡಲು. ಘೋರವಾದ ನರಮೇಧಗಳು ನಾಳೆ ಖಂಡಿತ ಆಗುತ್ತವೆ. ತಡೆಯುವವರು ಯಾರೂ ಇರುವುದಿಲ್ಲ. ದೇವರು ಬರುವುದಿಲ್ಲ. ಭೂಮಿ ಮೇಲೆ ಹುಟ್ಟಿ ಬೆಳೆದು ಮೆರೆದ ಎಷ್ಟೋ ಜೀವಿಗಳು ಇಂದು ಎಲ್ಲೂ ಇಲ್ಲವೇ ಇಲ್ಲವಲ್ಲಾ… ನನ್ನನ್ನು ನಾನೇ ಕೊಂದುಕೊಳ್ಳುತ್ತಿರುವೆ ಎಚ್ಚರ ಬರುವಷ್ಟರಲ್ಲಿ ಕಾಲ ಮುಂದೆ ಹೊರಟು ಹೋಗಿರುತ್ತದೆ. ಬದುಕಿ ಉಳಿಯುವ ಸಲುವಾಗಿ ಮಾನವ ಪಾಡು ಹೀಗೆ ತಾಳ್ಮೆಗೆಟ್ಟು ಅವಿವೇಕದಲ್ಲಿ ಜಾತಿಯ ಬಾಂಬುಗಳ ಎದೆಗೆ ಕಟ್ಟಿಕೊಂಡಿವೆ ಎಂದೆನಿಸುವುದಿಲ್ಲ. ಜಾಗೃತಿಯಲ್ಲೇ ಮನುಷ್ಯ ಅತ್ಯಂತ ಅಜಾಗರೂಕ ದುರಂತಗಳ ಮೈಮೇಲೆ ಎಳೆದುಕೊಳ್ಳುವುದು. ಚರಿತ್ರೆಯ ಪುಟಗಳಲ್ಲಿ ಎಷ್ಟೊಂದು ಪುರಾವೆಗಳಿದ್ದಾವಲ್ಲಾ…
ಛೇ; ಇದೆಂತಹ ಕಾಲ… ಅರಿವೇ ಇಲ್ಲ… ಯೋಗ್ಯ ಗುರುವೇ ಇಲ್ಲ… ಗುರಿಗಳೆಲ್ಲ ಗುರಿಗೆ ವಿರುದ್ಧವಾದವು ಎಂದು ತರಗತಿ ಮುಗಿಸಿ ಬಂದು ಅಂಚೆ ನೋಡಿದೆ. ಮೈಕೇಲ್ ಮುಂದಿನ ವಾರವೇ ಬರುವನಿದ್ದ. ಉಳಿಕೆ ಪಳಿಕೆ ಕ್ಷೇತ್ರಕಾರ್ಯ ಬಾಕಿ ಇತ್ತು. ಮನಸ್ಸು ಬೆಳಗಿತು. ಕ್ಷೇತ್ರಕಾರ್ಯ ರಜೆ ಹಾಕಿ ಮೈಕೇಲ್ ಜೊತೆ ಹೊರಟೆ. ಅಮೆರಿಕಾದಿಂದ ನನಗಾಗಿ ಲೆವಿಸ್ ಜೀನ್ಸ್ ಪ್ಯಾಂಟ್‌ಗಳ ತಂದಿದ್ದ. ಎಲ್ಲೆಡೆ ತರಾತುರಿ. ಸಮಯ ಇಲ್ಲ ಎಂದು ಪರದಾಡುತ್ತಿದ್ದ. ಮುಖ್ಯವಾಗಿ ಈ ಸಲ ಶಿಳ್ಳೆಕ್ಯಾತರ ತೊಗಲುಗೊಂಬೆ ಆಟದ ಬಗ್ಗೆ ಗಮನ ಹರಿಸಿದ್ದೆವು. ಮರದ ಗೊಂಬೆಯಾಟದ ಆ ಗುಬ್ಬಿ ಹಳ್ಳಿಗೆ ಬಂದೆವು. ಅವರ ಸಂಬಂಧಿಕರೊಬ್ಬರು ತೀರಿಕೊಂಡಿದ್ದರು. ಏನೂ ಮಾಡುವಂತಿರಲಿಲ್ಲ. ಆ ಕಪ್ಪು ಚೆಲುವೆಗೆ ಮದುವೆ ಆಗಿತ್ತು. ನಮ್ಮ ಕಂಡು ಎದ್ದು ಬಂದು ನೀರುಕೊಟ್ಟಳು. ಅವಳ ಮುಖದಲ್ಲಿ ವೈರಾಗ್ಯವಿತ್ತು. ಅವಳ ಗಂಡ ಒಂದು ಕಟ್ಟಿರುವೆಯಂತಿದ್ದ. ಅವನ ಮೀಸೆ ತುದಿಗಳು ಇರುವೆಯ ಕೊಂಡಿಯಂತೆ ಕಂಡವು. ಅವಳು ಏನನ್ನೂ ಮಾತಾಡಲಿಲ್ಲ. ಸತ್ತವರ ಮನೆಯಲ್ಲಿ ಸರಸವೇ; ಅಧ್ಯಯನವೇ… ಬೇಡ ಬಾ ಎಂದು ವಾಪಸ್ಸು ಬಂದು ಮುಂದಿನ ಊರ ದಾರಿ ಹುಡುಕಿದೆವು. ಒಂದು ಬಂಡಿಯ ಬಾಡಿಗೆಗೆ ಹಿಡಿದೆವು. ಮಳೆಗಾಳಿ ಬಿಸಿಲನ್ನು ತಡೆಯುವಂತೆ ಬಂಡಿಗೆ ಕಮಾನು ಮಾಡಿದ್ದರು. ಅದರಲ್ಲಿ ಕೂತು ಇನ್ನೊಂದು ಹಳ್ಳಿಗೆ ಬಂದೆವು.
ಕಳೆದ ಬಾರಿಯೇ ಈ ಮರದಗೊಂಬೆಯಾಟ ಸಾಕು ಎಂದು ಗೊಂಬೆಗಳ ಅಟ್ಟದ ಮೇಲೆ ಎಸೆದುಬಿಟ್ಟಿದ್ದೇವೆ ಎಂದಿದ್ದರು ಗಂಡ ಹೆಂಡತಿ. ಒಮ್ಮೆ ಆ ಗೊಂಬೆಗಳ ಸಲುವಾಗಿಯೇ ಅವರು ಕಿತ್ತಾಡಿಕೊಂಡು ಮೂರು ನಾಲ್ಕು ಗೊಂಬೆಗಳನ್ನೆ ಸೌದೆಯಂತೆ ಬಳಸಿ ಉರಿಸಿ ಅಡುಗೆ ಮಾಡಿ ಬೂದಿ ಮಾಡಿದ್ದಳು ಅವನ ಹೆಂಡತಿ. ಈಗಲೂ ಅವಳೇ ಉರಿಯುತ್ತಿರುವ ಒಂದು ಗೊಂಬೆಯಂತೆ ಕಿಡಿಯಾದಳು. ಅದರಿಂದ ಮತ್ತೆ ಮತ್ತೆ ಜಗಳ ಆಗಿತ್ತೆನಿಸಿತು. ಆಕೆ ಅಟ್ಟದಿಂದ ಗೊಂಬೆಗಳ ಚೀಲಗಳ ಎಸೆದಳು. ಹಾಡಿ ನಲಿದು ರಂಜಿಸಿದ್ದ ಆ ಗೊಂಬೆಗಳೀಗ ಶವಗಳಂತೆ ಉದುರಿ ಬಿದ್ದವು. ಕಲೆ ಎಂದರೆ ಇಷ್ಟೆಯೇ ಎನಿಸಿತು. ಇವುಗಳ ಎತ್ತಿಕೊಂಡು ಹೋಗಿ… ಇವುಗಳಿಂದ ನಮ್ಮ ವಂಶವೆ ಹಾಳಾಯಿತು ಎಂದು ರುದ್ರಿಯಾದಳು. ಗಂಡ ಹೆಂಡಿರು ಬಡಿದಾಡಿಕೊಂಡರು. ಮೈಕೇಲ್ ರೆಕಾರ್ಡ್ ಮಾಡಿಕೊಂಡ. ನನಗೆ ಅದು ಅಧ್ಯಯನದ ವಸ್ತು ವಿಷಯ ಆಗಿರಲಿಲ್ಲ. ಕಾರಣ ಕೇಳಿದ. ನಾಲ್ಕು ಬಾರಿಸಿದ. ಚಾಮುಂಡಿಯಾದ ಅವಳು ಆ ಗಂಡ… ಬಡಪಾಯಿ ಕಲಾವಿದನ ಹಿಡಿದೆಳೆದು ಪಂಚೆ ಒದರಿ ಹೋಗುವಂತೆ ತಲೆ ಕೆಳಗಾಗಿ ಹಿಡಿದೆತ್ತಿದ್ದಳು. ಅವನ ಪೀಚಲು ಕಾಲುಗಳು ಸಣ್ಣಗೆ ಕಡ್ಡಿಯಂತೆ ಮರದ ಗೊಂಬೆಯ ಕಾಲಿನಂತೆಯೆ ಕಂಡವು. ಬಿಡಿಸಲು ಮುಂದಾದೆ. ಅವನ ದೊಗಳೆ ಚಡ್ಡಿ ಎಲ್ಲಿ ಬಿದ್ದು ಹೋಗುತ್ತದೊ ಎಂದು ಆತಂಕವಾಯಿತು!
‘ಬಿಡಮ್ಮೀ; ಏಯ್ ನಿಂದಮ್ಮಯ್ಯ ಅಂತಿನೀ… ಬಿಡಮ್ಮಿ… ವಟ್ಟೆಲಿರುದೆಲ್ಲ ಬಾಯ್ಗೆ ಬತ್ತಾದೇ… ಬಿಡಮ್ಮೀ ನಾನೇನು ಗೊಂಬೆಯೇ’ ಎಂದು ವಿನಂತಿಸಿದ. ಥೇಟ್ ಗೊಂಬೆ ಆಟವನ್ನು ಆಡಿಸಿದಂತೆಯೆ ಮಾಡಿಬಿಟ್ಟಿದ್ದಳು. ತಪಕ್ಕೆಂದು ಕೈ ಬಿಟ್ಟು ಬೀಳಿಸಿದಳು… ಮೈಕೇಲ್ ಪಾದ ಹಿಡಿದು… ನಿನ್ನ ಪಾದವೇ ಗತೀ… ಯೀ ಯೆಲ್ಲ ಗೊಂಬೆಗಳ ತಕ್ಕಂದೋಗಪ್ಪಾ… ಒಂದ್ಕಾಲ್ಕೆ ಇವು ಅನ್ನ ನೀಡಿದ್ದೋ… ಯೀಗ ಇವೇ ನನ್ನ ಜೀವ ತಿಂತಾವೆ… ತಕಂದೋಗೊ ಪರಂಗಿ ದೊರೆಯೇ’ ಎಂದು ಬಲವಾಗಿ ಕಾಲು ಹಿಡಿದ. ಮೈಕೇಲ್‌ಗೆ ವಿವರಿಸಿದೆ. ಪರಿಸ್ಥಿತಿ ಅರ್ಥ ಆಗಿತ್ತು. ‘ಅವ್ರು ಕೊಟ್ಟಷ್ಟು ಕಾಸು ಕೊಡ್ಲಿ ಕನಪ್ಪಾ… ವಸಿ ಯಾಪಾರ ಮಾಡ್ಕೊಡಪ್ಪಾ…’ ಎಂದು ನನ್ನತ್ತ ಕೈ ಮುಗಿದು ಕೇಳಿದ. ದಲ್ಲಾಳಿಯಾಗಲೇ… ನ್ಯಾಯ ಬೆಲೆಯ ಕಟ್ಟಲೇ… ಇವರ ಕಲೆಗೆ ಬೆಲೆ ಸಾಧ್ಯವೇ… ಒಂದು ವೃತ್ತಿಯಾಗಿ ತಲೆಮಾರುಗಳ ದಾಟಿ ಬಂದು ಈಗ ಇವರ ತಲೆನೋವಾಗಿರುವ ಕಲೆಯ ಪರಿಸ್ಥಿತಿಯ ಏನೆಂದು ಅರ್ಥೈಸಲೀ… ಕಾಲನಿರ್ಣಯದ ಬೆಲೆಯ ಮುಂದೆ ಇನ್ನಾರ ಬೆಲೆಯೂ ಅಂತಿಮ ಅಲ್ಲ ಎನಿಸಿತು.
ಹೆಂಡತಿ ಜೋರು ಮಾಡುತ್ತಿದ್ದಳು… ‘ಇವು ಗೊಂಬೆ ಅಲ್ಲಾ… ಹೆಣಗಳು ಇವು. ಇವುಗಳಿಂದ ಆಟವೇ; ನೋಟವೇ; ಜೀವನವೇ. ದುಡ್ಡನ್ನು ನನ್ನ ಕೈಯಲ್ಲಿ ಕೊಡಿಸು. ಹೆಂಗೊ ಬೇರೆ ದಾರಿ ನೋಡ್ಕತಿನಿ’ ಎಂದಳು. ‘ಏನಮ್ಮ ಬೇರೆ ದಾರಿ’ ದಾರಿ ಅಂದ್ರೇನು… ‘ಅದೇ ನನ್ನ ಮಗಳ ಮನೆ ಸೇರ್ಕಂದು ಯೇನಾರ ಯಾಪಾರ ಮಾಡ್ತಿನಿ’ ಅಂದಳು. ಕಲೆ ಬೇಡವಾಗಿ ಈಗ ವ್ಯಾಪಾರ ಬೇಕಾಗಿತ್ತು. ಎಲ್ಲಾ ಕಡೆ ಇದೇ ಆಗ್ತಿರೋದು… ಎಲ್ಲಿ ವ್ಯಾಪಾರ ಇಲ್ಲಾ… ಮೈಕೇಲ್‌ಗೆ ಮಾರ್ಮಿಕವಾಗಿ ಹೇಳಿದೆ. ಬಹಳ ಸಂತೋಷ ಪಟ್ಟ. ‘ಒಳ್ಳೆಯದು… ವಿ ಕೆನ್ ಡು ಬೆಟರ್ ಬ್ಯುಸಿನೆಸ್’ ಎಂದ. ಎಲ್ಲ ಸಂಬಂಧಗಳು ವ್ಯಾಪಾರವಾಗುತ್ತಿದ್ದವು. ಸುಮಾರು ಗೊಂಬೆಗಳಿದ್ದವು. ಇಪ್ಪತ್ತೈದು ಸಾವಿರ ರೂಗಳ ಇಬ್ಬರಿಗೂ ಕೊಡು ಎಂದೆ. ಹಂಚಿಕೊಟ್ಟ. ಪಟಕ್ಕೆಂದು ಗಂಡನ ಕೈಲಿದ್ದ ಹಣವನ್ನೂ ಕಸಿದುಕೊಂಡಳು. ಅನ್ಯಾಯ… ಅವನ ಹಣವ ಅವನಿಗೆ ಕೊಟ್ಟು ಬಿಡಮ್ಮ… ಮತ್ತೆ ಹೆಚ್ಚುವರಿಯಾಗಿ ನಿನಗೆ ಹಣಕೊಡಿಸುವೆ ಎಂದು ಅವಳಿಂದ ಕಿತ್ತು ಆಕೆಯ ಗಂಡನ ಜೇಬಿಗಿಟ್ಟು ಜೋಪಾನ ಎಂದೆ.
ಗಂಡ ಹೆಂಡಿರ ಜಗಳ ನಿಂತು ಹೋಯಿತು. ನಾಲ್ಕು ದಿನವಾದರೂ ಅವರು ಸಂತೋಷದಿಂದ ತಮ್ಮಗಳ ಮುಖವ ನೋಡಿಕೊಳ್ಳಲಿ ಎಂಬುದು ಮುಖ್ಯವಾಗಿತ್ತು. ಆ ಬಡ ಕಲಾವಿದನಿಗೆ ಜೀವ ಬಂದಂತಾಗಿತ್ತು. ಅವನ ಹೆಂಡತಿಗೆ ಗಂಡನ ಮೇಲೆ ಅದೇನೊ ಪ್ರೀತಿ ಬಂದು ಬಿಟ್ಟಿತು. ಹಣವನ್ನು ತನ್ನ ಕೈಯ್ಯಾರೆ ಎಣಿಸಿದಳು. ಗಂಡ ಎಣಿಸಲಿಲ್ಲ. ಎಣಿಸಿಕೊ ಎಂದೆ. ಎಣಿಸಲು ಬರಲ್ಲ ಎಂದ. ಎಣಿಸಿಕೊಡಲು ಮನಸ್ಸು ಬರಲಿಲ್ಲ. ಆ ಕಲಾವಿದ ಒಂದು ಎತ್ತಿನ ಬಂಡಿಯ ಬಾಡಿಗೆಗೆ ತಂದ. ಹೇರಿಕೊಂಡು ಕೂತೆವು. ಮೈಕೇಲ್‌ಗೆ ಕೇಳಿದೆ… ‘ಈ ಗೊಂಬೆಗಳ ತೆಗೆದುಕೊಂಡು ಹೋಗಿ ಏನು ಮಾಡುವೆ’ ಎಂದೆ. ‘ಒಹ್! ಇದೊಂದು ಟ್ರೆಷರ್… ಬೆಲೆ ಕಟ್ಟಲಾಗದು. ಜಗತ್ತಿನ ಬೇರೆ ಬೇರೆ ದೇಶಗಳ ಗೊಂಬೆಗಳ ಪುಟ್ಟ ಸಂಗ್ರಹವೇ ನನ್ನ ಮನೆಯಲ್ಲಿದೆ. ಮ್ಯೂಸಿಯಂ ಮಾಡುವ ಆಲೋಚನೆ ಇದೆ’ ಎಂದ. ಅಹಾ! ವ್ಯಾಪಾರಿ ಜಗತ್ತೇ ನಾಳೆ ನೀನು ಮಾತನ್ನೆ ಒಂದು ಬೃಹತ್ ಉದ್ಯಮ, ಬಂಡವಾಳ ಮಾಡಿಕೊಂಡು ಬಿಡುತ್ತೀಯೆ ಎಂದು ನೊಂದುಕೊಂಡೆ.
ಇವತ್ತು ಮಾತು ಎಷ್ಟೊಂದು ಬೆಳೆದುಬಿಟ್ಟಿದೆ… ಅರ್ಥ ಬೆಳೆದಿದೆಯೋ ಅನರ್ಥ ಬೊಬ್ಬಿರಿದಿದೆಯೊ… ಆ ಬಂಡಿ ಮಂದ ನಡಿಗೆಯಲ್ಲಿ ನೆಲ್ಲಿಗೆರೆಯ ಅದೇ ಗೆಸ್ಟ್ ಹೌಸಿಗೆ ಬರುವಷ್ಟರಲ್ಲಿ ಹೊತ್ತು ಮೀರಿತ್ತು. ಆ ಒಂದೊಂದು ಗೊಂಬೆಯ ಪಾತ್ರ ವಿವರಗಳ ಮೈಕೇಲ್ ಬರೆದುಕೊಂಡ. ಗೊಂಬೆಯ ಅಲಂಕಾರ ವಿನ್ಯಾಸದ ಒಂದೊಂದು ವಿವರಗಳ ಬಿಡಿಯಾಗಿ ಪ್ರಶ್ನಿಸುತ್ತಾ ಹೋದ. ತೊಗಲುಗೊಂಬೆಗಳಲ್ಲಿ ಪಾತ್ರದ ಕಣ್ಣುಗಳನ್ನು ಚಿತ್ರಿಸಿರುವ ಪರಿಯು ಪಿಕಾಸೋನ ಚಿತ್ರದಂತಿದೆ ಎಂದು ಸಾಂದರ್ಭಿಕವಾಗಿ ಹೇಳಿದ. ಪಾಬ್ಲೊ ಪಿಕಾಸೊನ ಬಗ್ಗೆ ಕೊಂಚ ನನಗೆ ಗೊತ್ತಿತ್ತು. ಆತನ ಪ್ರಖ್ಯಾತ ‘ವೀಪಿಂಗ್ ವಿಮೆನ್’ ಚಿತ್ರ ಕಲಾಕೃತಿಯ ಆಲ್ಪಮ್ ಬುಕ್‌ನಲ್ಲಿ ನೋಡಿದ್ದೆ. ಅದೆಲ್ಲ ಅತ್ತ ಇರಲಿ… ಮತ್ತೆ ಆ ವಿಶ್ವಬ್ರಾಹ್ಮಣನ ಮನೆಯತ್ತ ನಾನು ಕಾಲಿಡುವಂತಿರಲಿಲ್ಲ. ಹೇಳಿಬಿಟ್ಟಿದ್ದೆ… ಆ ಮುಠ್ಠಾಳನ ಮನೆಯ ಬಳಿ ಬರುವುದಿಲ್ಲ ಎಂದು. ಬೇಡ; ಅವನ ಬಳಿ ಬಾಕಿ ಯಾವ ವಿಷಯಗಳೂ ಇಲ್ಲ ಎಂದಿದ್ದ. ನಾಲ್ಕು ದಿನ ಸುತ್ತ ಮುತ್ತ ಹಳ್ಳಿಗಳಲ್ಲಿ ಎತ್ತಿನ ಬಂಡಿಯ ಮೂಲಕ ಸುತ್ತಾಡಿದೆವು. ಆ ಗುಬ್ಬಿಹಳ್ಳಿಗೆ ಹೋಗೋಣವೇ ಎಂದು ಕೇಳಿದೆ. ಅಂತಹ ಆಸಕ್ತಿಯ ಮೈಕೇಲ್ ತೋರಲಿಲ್ಲ.
ಮೈಕೇಲ್‍ನ ಮುಟ್ಟಲು ಬಯಸಿದ್ದ ಆ ಹುಡುಗಿ ಕಂಡಿರಲಿಲ್ಲ. ಗಂಡನ ಮನೆಗೆ ಹೋಗಿದ್ದಳು. ನನಗ್ಯಾಕೆ ಅವಳ ಮೇಲೆ ಕನ್ಸರ್ನ್… ತಂಗಿ ಅಂದುಕೊಂಡಿದ್ದೆನಲ್ಲಾ; ಅದಕ್ಕಿರಬಹುದೇ… ತಿಳಿಯದು ಭಾವನೆಗಳ ಗುಪ್ತ ಅರ್ಥ ವಿಷಯಗಳು… ಶಿಳ್ಳೆಕ್ಯಾತರನ್ನು ಹುಡುಕಿಕೊಂಡು ಹೊರಟೆವು. ಅವರು ಇದ್ದಲ್ಲೇ ಇರುವುದಿಲ್ಲ. ಊರೂರು ಸುತ್ತಿ ತೊಗಲುಗೊಂಬೆ ಆಟ ಆಡಿ ಜೀವನ ಮಾಡುತ್ತ ಬಂದಿದ್ದ ಒಂದು ಅನಾಥ ಸಮುದಾಯ. ಒಂದು ಊರಲ್ಲಿ ಒಂದು ರಾತ್ರಿಯಲ್ಲಿ ಅವರದೇ ಮಾಂತ್ರಿಕ ರಂಗಮಂಚವ ರೂಪಿಸಿ ಅದ್ಭುತವಾಗಿ ಅವರದೇ ಬದುಕಿನ ದಾಟಿಯಲ್ಲಿ ಆಟ ಆಡಿಸುವುದು ಅವರ ವೃತ್ತಿ. ಒಂದು ಪುಟ್ಟ ಕುಟುಂಬ ಸಾಕು ಕತ್ತಲಲ್ಲಿ ಸಿನಿಮಾದಂತೆ ಒಂದು ಮಾಯಾಲೋಕವ ಸೃಷ್ಟಿಸಲು. ಎರಡು ದಿನದ ಒಳಗೇ ಸಿಕ್ಕರು. ನಮ್ಮ ಅದೃಷ್ಟವಾಗಿತ್ತು. ಆ ರಾತ್ರಿಯೆ ಆಟವನ್ನೂ ಕಟ್ಟಿ ಆಡಿ ಬಿಟ್ಟರು. ತೊಗಲು ಗೊಂಬೆ ಆಟ ಅತಿ ಪ್ರಾಚೀನವಾದ ಮಾಂತ್ರಿಕ ರಂಗಭೂಮಿ. ಪ್ರಾಣಿಗಳ ಚರ್ಮದಿಂದ ಮಾಡಿ; ಬಣ್ಣ ತುಂಬಿದ್ದ ಪರಿಯು ಅತಿಮಾನುಷವಾಗಿತ್ತು. ಮೈಕೇಲ್ ನಿಬ್ಬೆರಗಾಗಿದ್ದ. ಆದಿ ಮಾನವನ ಒಂದು ಆಚರಣೆಯಂತಿತ್ತು ಆ ಗೊಂಬೆಯಾಟ. ಮರುದಿನ ಆ ಶಿಳ್ಳೇಕ್ಯಾತರ ಟೆಂಟಿನ ಬಳಿಯೇ ಉಳಿದುಕೊಂಡೆವು. ಆ ಬಣ್ಣಗಾರಿಕೆ, ಮಾತು, ನಟನೆ, ಸಂಗೀತ ನನಗೆ ಎಟುಕದ ಸಂಗತಿಗಳಾಗಿದ್ದವು. ಆ ಶಿಳ್ಳೆಕ್ಯಾತನೊ ಫುಲ್‌ಟೈಂ ಎಣ್ಣೆಕಾರ. ಹೆಂಡತಿ ಸಂಜೆಯಿಂದ ಆರಂಭಿಸುತ್ತಿದ್ದಳು. ಅಹಾ! ಎಷ್ಟೊಂದು ಅನ್ಯೋನ್ಯತೆಯಲ್ಲಿದ್ದಾರಲ್ಲಾ… ರಸಮಯ ಜೀವನ ಅವರದು. ಗಂಡ ಹೆಂಡತಿ ಇಬ್ಬರೇ. ಗಂಡುಮಗ ಬೆಂಗಳೂರು ಸೇರಿಕೊಂಡಿದ್ದ. ಭಾಗಶಃ ಭಟ್ಟಿ ಸಾರಾಯಿ ಕುಡಿದಿದ್ದರು. ವಿವರವಾಗಿ ಟಿಪ್ಪಣಿಗಳ ಮಾಡಿಕೊಂಡ. ಯಾವುದೊ ಒಂದು ಲಟಾರಿ ಸ್ಕೂಟರ್ ಬೊರ್ರೊ ಎಂದು ಧೂಳೆಬ್ಬಿಸಿಕೊಂಡು ಟೆಂಟಿನ ಮುಂದೆಯೆ ಬಂದು ನಿಂತಿತು. ತಕ್ಷಣ ಗೊತ್ತಾಗಲಿಲ್ಲ. ಆ ಪರಿಯ ರಭಸ, ವ್ಯಗ್ರತೆಯ ಕಂಡು ದಿಗಿಲಾಯಿತು. ಬಂದವನು ಆ ವಿಶ್ವಬ್ರಾಹ್ಮಣನಾಗಿದ್ದ. ಅವನ ಮಗ ದೈತ್ಯಾಕಾರವಾಗಿ ಬಡಿದು ಹಾಕುವಂತೆ ನಿಂತಿದ್ದ.
ಪರಿಸ್ಥಿತಿ ಅರ್ಥವಾಯಿತು. ಮೈಕೇಲ್ ನಮಸ್ಕರಿಸಿದ. ‘ಹೇ; ನಿನ್ನ ಸಜ್ಜನ ಅನ್ಕಂಡಿದ್ನಲ್ಲೊ ಬಿಳಿಯಾ… ಇಲ್ಲಿ ಈ ಹೇಲು ಮಾಳದಲ್ಲಿ ವಾಸ ಮಾಡೊ ಕಿಳ್ಳೇಕ್ಯಾತನ ಕಿಳ್ಳಿ ಆಟವ ನೋಡುಕೆ ಬಂದಿದ್ದೀಯೇನೊ… ಹೇ… ದಲಿತ ಅಲ್ಲುವೆ ನೀನೂ… ಇವನಿಗೆ ಹೇಳೊ… ಈ ಕೂಡ್ಲೇ ಇದ ಬಿಸಾಡಿ; ನನ್ನ ಮನೆಗೆ ಬರಬೇಕು… ಗುರುಗಳಿಗೆ ಗೌರವ ಕೊಟ್ಟು ನಡೆದುಕೊಳ್ಳಬೇಕೆಂದು ಬೊಗಳೊ’ ಎಂದ. ನಾನೇನು ಮಾತಾಡಲಿಲ್ಲ. ಬಹಳ ಕೀಳಾಗಿ ಶಿಳ್ಳೇಕ್ಯಾತರ ಬಯ್ಯುತ್ತಿದ್ದ. ಅವನ ಹೆಂಡತಿ ಗಂಡನ ಪರವಾಗಿ ಬಾಯಿ ಹಾಕಿದಳು. ‘ಲೇ; ಹೋಗೇಲೇ… ಏನೇ ನಿನ್ನಾಟ… ಕಳ್ಳಾಟ… ಸಣ್ಣಾಟ… ತೋರಿಸ್ದೇನೇ ನಿನ್ನ ಕಿಳ್ಳಿಯಾ… ನೋಡ್ದೇನ್ಲಾ …’ ಎಂದು ನನ್ನತ್ತ ನುಗ್ಗಿ ಬಂದ. ‘ಹೇಹೇ; ಹೋಗೊ ಮುದುಕಾ… ವಿಶ್ವಬ್ರಾಹ್ಮಣನ ಬಾಯಲ್ಲಿ ಇದೇನೇನೊ ಇರೊ ಮಾತು… ಯಾವ ಹೀನ ನಡೆ ನಿನ್ನದು’ ಎಂದು ಅತ್ತ ತಳ್ಳಿದೆ. ದಬಕ್ಕನೆ ಉರುಳಿದ. ಮೈಕೇಲ್ ಮೂವೀ ಕ್ಯಾಮರಾ ಎತ್ತಿಕೊಂಡು ಅತ್ತ ಓಡಿ ಹೋಗಿದ್ದ. ಗಲಾಟೆ ಅವನಿಗೆ ಅರ್ಥವಾಗಿತ್ತು. ಬೆಲೆ ಬಾಳುವ ಕ್ಯಾಮರವನ್ನೇ ಮುರಿದು ತುಳಿದು ಹಾಕುವಂತೆ ಅಬ್ಬರಿಸುತ್ತಿದ್ದ. ಬಿದ್ದ ತಂದೆಯ ಕಂಡು ನೆಗೆದು ಬಂದು ಅನಾಮತ್ತಾಗಿ ಹಿಡಿದೆತ್ತಿ ನನ್ನ ಅತ್ತ ಎಸೆದ. ಉರುಳಾಡಿಕೊಂಡು ಬಿದ್ದೆ. ಮೆಲ್ಲಗೆ ಎದ್ದೆ. ಕೈ ಮಿಲಾಯಿಸಲು ಸಾಧ್ಯವಿರಲಿಲ್ಲ. ಕ್ಷಮಿಸಪ್ಪಾ… ಅವರೇ ಎಡವಿ ಬಿದ್ದರು ಎಂದು ಕೈ ಮುಗಿದೆ. ಶಿಳ್ಳೆಕ್ಯಾತ ಗುಡಾರದೊಳಗೆ ನುಗ್ಗಿ ಮಾರುದ್ದದ ಒಂದು ಬರ್ಜಿಯನ್ನೂ ಕೈಗೊಡಲಿಯನ್ನೂ ತಂದು ಹೆಂಡತಿ ಕೈಗೆ ತ್ರಿಶೂಲದಂತಿದ್ದ ಬರ್ಜಿಯ ಕೊಟ್ಟು ತೆಲುಗು ಭಾಷೆಯಲ್ಲಿ ಕಿಟಾರನೆ ಕಿರುಚಿ; ತನ್ನ ಮನೆದೇವರು ಮೈ ಮೇಲೆ ಬಂದಿದೆ ಎಂದು ಅರಚಿ… ಹಹಹಾsss ಹಸಿ ಹಸಿ ರಕ್ತ ಬೇಕು ಮಾಂಸಬೇಕೂ… ತಿಂತಿನಿ ನಿನ್ನಾ ಆಚಾರೀ ಎಂದು ನುಗ್ಗಿದ. ಸಲೀಸಾಗಿ ನನ್ನನ್ನೂ ಎತ್ತಿ ಬಿಸಾಡಿದಂತೆ ಶಿಳ್ಳೆಕ್ಯಾತನ ಅವರು ಮುಟ್ಟುವಂತಿರಲಿಲ್ಲ. ದೂರದಲ್ಲಿ ನೋಡುತ್ತಿದ್ದ ಮೈಕೇಲ್‌ನ ಭಯ ಅರ್ಥವಾಗಿತ್ತು. ಅವನ ಹೆಂಡತಿ ಆ ಮುದುಕನ ಮುಕುಳಿಗೆ ತ್ರಿಶೂಲದಿಂದ ತಿವಿದಿದ್ದಳು. ಈಗ ನಡೆಯುತ್ತಿದ್ದುದೂ ಇನ್ನೊಂದು ಬಗೆಯ ಜೀವಂತ ತೊಗಲುಗೊಂಬೆಯಾಟವೇ! ಆಚಾರಿ ಕಿರುಚಿಕೊಂಡಿದ್ದ. ಮಗ ಗಾಡಿ ಕಿಕ್ ಮಾಡಿ ಅಪ್ಪನ ಕೂರಿಸಿಕೊಂಡು ಪರಾರಿಯಾಗಿದ್ದ.
ಎಲ್ಲಿ ಜನ ಕಟ್ಟಿಕೊಂಡು ಹಿಂತಿರುಗಿ ಬರುವರೊ ಎಂದು ಭಯವಾಯಿತು. ಬಂಡಿಯವನು ಎಲ್ಲಿ ಹೋಗಿದ್ದನೊ ಬಂದ. ಗಡಿಬಿಡಿ ಮಾಡಿದ ಮೈಕೇಲ್. ಬೆಲೆ ಬಾಳುವ ಸೂಕ್ಷ್ಮ ಯಂತ್ರಗಳ ಗಾಡಿಯಲ್ಲಿಟ್ಟೆವು. ಸಂಭಾವನೆ ಕೊಟ್ಟ ಮೈಕೇಲ್. ಹತ್ತು ಸಾವಿರ ರೂಗಳ ಒಮ್ಮೆಗೇ ಅವರು ಕಂಡಿದ್ದರೊ ಏನೊ; ಗೊತ್ತಿರಲಿಲ್ಲ. ಕೊಡುಗೆಯಾಗಿ ಶಿಳ್ಳೆಕ್ಯಾತ ಮೈಕೇಲ್‌ಗೆ ಒಂದು ತೊಗಲು ಗೊಂಬೆ ಕೊಟ್ಟ. ಅದು ಮಾಯಾಜಿಂಕೆಯ ಆಸೆಯಲ್ಲಿ ಸೀತೆ ಅಟ್ಟಿಸಿಕೊಂಡು ಹೋಗುತ್ತಿರುವ ಗೊಂಬೆ. ಆ ಶಿಳ್ಳೆಕ್ಯಾತನ ಸಂಸ್ಕಾರಕ್ಕೆ ಮನದಲ್ಲೆ ವಂದಿಸಿದೆ. ಗಾಡಿ ಜೋರಾಗಿಯೆ ಹೊರಟಿತು. ಮರೆಯ ದಾರಿ ಹಿಡಿದಿದ್ದೆವು. ಅವರು ಬಂದರೂ ಸಿಗಬಾರದು ಎಂಬ ಎಚ್ಚರದಿಂದ… ರಾತ್ರಿಯ ಪಯಣ. ಗಾಢವಾದ ಕತ್ತಲು. ಏನೊ ಹೇಸಿಗೆ ವಾಸನೆ ಬರುತ್ತಲೇ ಇತ್ತು. ಟಾರ್ಚ್ ಹಾಕಿ ನೋಡಿದೆ. ಮೈಕೇಲ್ ಶೂಗೆ ಹೇಸಿಗೆ ಮೆತ್ತಿಕೊಂಡಿತ್ತು. ಆ ಹೇಸಿಗೆ ಮಾಳವ ಜಗಳದಲ್ಲಿ ಮೈಕೇಲ್ ಸರಿಯಾಗಿ ಗ್ರಹಿಸಿರಲಿಲ್ಲ. ಕ್ಯಾಮರಾ ರಕ್ಷಿಸುವ ಭರದಲ್ಲಿ ಎಲ್ಲೆಲ್ಲೊ ಕಾಲು ಕಾಕಿದ್ದ. ಅಲ್ಲೆ ಆ ಕ್ಷಣವೆ ಬಂಡಿ ನಿಲ್ಲಿಸಿ ಕಾಲುವೆಯಲ್ಲಿ ತೊಳೆಸಿದ್ದೆ. ಆ ಶೂಗಳೇ ಬೇಡ ಎಂದು ಅತ್ತ ಎಸೆದು ಬಿಟ್ಟಿದ್ದ. ಉಜ್ಜಿ ಉಜ್ಜಿ ಕೈ ಕಾಲುಗಳ ತೊಳೆದುಕೊಂಡು ಛೀ, ಷಿಟ್ ಎಂದುಕೊಳ್ಳುತ್ತಲೇ ಇದ್ದ. ಒಂದೆಡೆ ನಗು ವಿಷಾದ ಎರಡೂ ಬಂದಿದ್ದವು. ಆದರೆ ಹಾಗೆ ಮಗನ ಕರೆದುಕೊಂಡು ಬಂದು ಆ ವಿಶ್ವಬ್ರಾಹ್ಮಣ ದಾಳಿ ಮಾಡಿದ್ದು ಎದೆಗೆ ತಿವಿಯುತ್ತಲೇ ಇತ್ತು.
ಹದಿನೈದು ದಿನಗಳು ಹೇಗೆ ಮುಗಿದವು ಎಂಬುದೇ ತಿಳಿಯಲಿಲ್ಲ. ಮೈಸೂರಿಗೆ ಹಿಂತಿರುಗಿದ್ದೆ. ಏನೊ ನಿರಾಳ, ಸುಸ್ತು, ನಿದ್ದೆಯ ಅಮಲು. ಮೈಕೇಲ್ ವಿಸ್ಕಿ ಕುಡಿಯೋಣ ಎಂದೆ. ಅವನು ವೈನ್ ಪ್ರಿಯ. ಸಂಪ್ರದಾಯವಾದಿ ಯಹೂದಿ. ಸಭ್ಯ, ನಿಶೆಯೇರಿ ತೂರಾಡಿದೆ. ಇಲ್ಲಿನ ಜಾತಿ ವ್ಯವಸ್ಥೆಯ ವಿವರಿಸಿದೆ. ಆ ಶಿಳ್ಳೆಕ್ಯಾತರ ಮೇಲೆ ನೀನೊಂದು ಡಾಕ್ಯುಮೆಂಟರಿ ಫಿಲ್ಮ್ ಮಾಡು… ನಾನದನ್ನು ಅಮೆರಿಕಾದ ಫಿಲ್ಮ್ ಫೆಸ್ಟಿವಲ್‌ನಲ್ಲಿ ತೆರೆಕಾಣುವಂತೆ ಮಾಡುವೆ ಎಂದ. ಅಹಾ! ಈ ತಿರುಕನಿಗೆ ಅಂತಹ ದುಬಾರಿ ಕನಸು ಬೇಕೇ… ಬೇಡ ಬೇಡಾ… ಇಂಪಾಸಿಬಲ್ ಮೈಕೇಲ್… ಎಟುಕದ್ದಕ್ಕೆ ಕೈ ಚಾಚಬಾರದು. ಈ ದಿನ ಈ ರಾತ್ರಿ ಈ ಕ್ಷಣ ನಾನು ನಿನ್ನೊಡನೆ ಕೂತು ವಿಸ್ಕಿ ಕುಡಿಯುತ್ತಿರುವೆನಲ್ಲಾ ಇದಿಷ್ಟೇ ಐಡಿಯಲ್. ಇದರಾಚೆಗೆ ಹೋಗಲಾರೆ. ನಾಳೆಯನ್ನು ನಾನು ನಂಬುವುದಿಲ್ಲ… ಇನ್ನು ಕನಸುಗಳು… ಗುರಿಗಳು… ಅವೆಲ್ಲ ನನ್ನ ವ್ಯಕ್ತಿತ್ವದಲ್ಲಿ ಇಲ್ಲ. ಫಿಲ್ಮ್ ಮಾಡಲಾರೆ ಎಂದಲ್ಲಾ; ಆ ಪರಿಸ್ಥಿತಿ ಅವಕಾಶ ಸಂದರ್ಭ ನನ್ನ ಪರವಾಗಿ ಇಲ್ಲ ಎಂದು ಹೇಳಿ ಪಾರ್ಟಿ ಮುಗಿಸಿದ್ದೆ. ಹಾಸ್ಟಲಿಗೆ ಹಿಂತಿರುಗಿದ್ದೆ. ಏನೊ ಸಂಚಿನ ವಾಸನೆ ಬಡಿಯಿತು.
ಕಥೆಗಾರ, ಕವಿ ಮತ್ತು ಕಾದಂಬರಿಕಾರ. ಹಂಪಿ ಕನ್ನಡ ವಿಶ್ವವಿದ್ಯಾಲಯದ ಜಾನಪದ ಅಧ್ಯಯನ ವಿಭಾಗದಲ್ಲಿ ಪ್ರಾಧ್ಯಾಪಕರಾಗಿದ್ದಾರೆ.