ನಮ್ಮ ಕಾಲದಲ್ಲಿ ವ್ಯಕ್ತಿಯ ಸ್ವತಂತ್ರ ಚೇತನಕ್ಕೆ ಹಾಗೂ ವೈಯುಕ್ತಿಕ ವಿಶಿಷ್ಟತೆಗಳಿಗೆ ಮನ್ನಣೆ ನೀಡುವ ಶಿಕ್ಷಕರಿದ್ದರು. ಇವತ್ತಿನ ಶಿಕ್ಷಕರಿಗೆ ಅವರನ್ನು ಹೋಲಿಸಿದಾಗ ಇಂದು ಬಹಳ ಮಂದಿ ಕೇವಲ “ಸಂಬಳ”ಕ್ಕಾಗಿ ಶಿಕ್ಷಕರಾದವರಿದ್ದಾರೆ. ಈ ರೀತಿಯ ಬ್ಯೂರೊಕ್ರೆಸಿಯ ಸ್ವಭಾವದವರು ಶಿಕ್ಷಕರಾಗಿ ಮಾಡುವ ಪಾಠ ನಿಜಕ್ಕೂ ಏನನ್ನೂ ಕಲಿಸುವುದಿಲ್ಲ. ಆ ಪಾಠಗಳಲ್ಲಿ ಸತ್ವವಿರುವುದಿಲ್ಲ. ಇಂದಿನ ವಿದ್ಯಾರ್ಥಿಗಳು ಹೆಚ್ಚಿನ ಸಮಯವನ್ನು ಕಾಮಿಕ್ ಪುಸ್ತಕಗಳನ್ನು ಓದುವುದರಲ್ಲಿ ಕಳೆಯುತ್ತಿರುವುದರಲ್ಲಿ ಆಶ್ಚರ್ಯವಿಲ್ಲ. ಪ್ರಾಥಮಿಕ ಶಾಲೆಯಲ್ಲಿದ್ದಾಗ ಶ್ರೀ ತಚಿಕವಾವರಂತಹ ಅದ್ಭುತ ಮೇಷ್ಟ್ರು ನನಗೆ ಸಿಕ್ಕರು.
ಹೇಮಾ.ಎಸ್. ಅನುವಾದಿಸಿರುವ ಅಕಿರ ಕುರಸೋವ ಆತ್ಮಕತೆಯ ಮತ್ತೊಂದು ಅಧ್ಯಾಯ.

 

ಓಚನೊಮಿಜೊದಲ್ಲಿದ್ದ ಕೆಕಾ ಶಾಲೆ ಬೆಂಕಿಯಲ್ಲಿ ಸುಟ್ಟುಹೋಯಿತು. ಸುಟ್ಟುಬೂದಿಯಾಗಿದ್ದ ಶಾಲೆಯ ಅವಶೇಷಗಳನ್ನು ನೋಡಿದ ತಕ್ಷಣ ನನ್ನ ಮನಸಿಗೆ “ಆಹ್ ಬೇಸಿಗೆ ರಜೆ ಇನ್ನೂ ಹೆಚ್ಚಿಗೆ ಸಿಗುತ್ತೆ” ಅಂತ ಖುಷಿಯಾಯಿತು. ಈಗ ಇದನ್ನು ಬರಿಯುತ್ತಿರುವಾಗ ನಾನು ಸ್ವಲ್ಪ ಕೂಡ ಸೂಕ್ಷ್ಮತೆಯಿಲ್ಲದವನು ಅನ್ನಿಸಬಹುದು. ಆದರೆ ಮಾಧ್ಯಮಿಕ ಶಾಲೆಯ ಅಷ್ಟೇನೂ ಬುದ್ಧಿವಂತನಲ್ಲದ ವಿದ್ಯಾರ್ಥಿಯ ಭಾವನೆಗಳನ್ನು ಪ್ರಾಮಾಣಿಕವಾಗಿ ಹೇಳಬೇಕು ಅಂದರೆ ಅವನಿಗೆ ಹೀಗೆ ಅನ್ನಿಸಿದ್ದು.

ನಾನು ತಪ್ಪು ಮಾಡಿದಾಗ ಪ್ರಾಮಾಣಿಕವಾಗಿ ಅದನ್ನು ಒಪ್ಪಿಕೊಂಡುಬಿಡುತ್ತಿದ್ದೆ. ಶಾಲೆಯಲ್ಲಿ ಏನಾದರೂ ತಪ್ಪು ಮಾಡಿದಾಗ ಶಿಕ್ಷಕರು ಯಾರು ಮಾಡಿದ್ದು ಎಂದು ಕೇಳಿದರೆ ಪ್ರಾಮಾಣಿಕವಾಗಿ ಕೈ ಎತ್ತುತ್ತಿದ್ದೆ. ಆ ರೀತಿ ಹೇಳಿದ ತಕ್ಷಣ ಶಿಕ್ಷಕರು ತಮ್ಮ ಗ್ರೇಡ್ ಪುಸ್ತಕ ತೆಗೆದು ವರ್ತನೆಗೆ (conduct ) ಸೊನ್ನೆ ಅಂಕ ನೀಡುತ್ತಿದ್ದರು.

ನಮಗೆ ಹೊಸ ಶಿಕ್ಷಕರು ಬಂದಾಗಲೂ ನನ್ನ ಪ್ರಾಮಾಣಿಕತೆಯನ್ನು ಮುಂದುವರೆಸಿದೆ. ಯಾರು ಮಾಡಿದ್ದು ಅಂತ ಕೇಳಿದ ತಕ್ಷಣ ಕೈ ಎತ್ತಿದೆ. ಅದಕ್ಕೆ ಆ ಹೊಸ ಮೇಷ್ಟ್ರು ನೀನು ಜವಾಬ್ದಾರಿಯಿಂದ ನುಣುಚಿಕೊಳ್ಳಲಿಲ್ಲ ನೋಡು ಎಂದು ತಮ್ಮ ಗ್ರೇಡ್ ಪುಸ್ತಕ ತೆಗೆದು ವರ್ತನೆಗೆ (conduct) ನೂರು ಅಂಕ ಕೊಟ್ಟರು. ಈ ಇಬ್ಬರು ಮೇಷ್ಟ್ರಲ್ಲಿ ಯಾರು ಸರಿ ಅಂತ ನನಗೆ ಗೊತ್ತಿಲ್ಲ. ಆದರೆ ನೂರು ಅಂಕ ಕೊಟ್ಟವರು ಹೆಚ್ಚು ಇಷ್ಟವಾದರು. ಅವರ ಹೆಸರು ಓಹರಾ ಯೋಯಿಚಿ. ಅವರೇ ನನ್ನ ಪ್ರಬಂಧವನ್ನು ನೋಡಿ “ಇದು ಕೆಕಾ ಶಾಲೆ ಶುರುವಾದಾಗಿಂದಲೂ ಬಂದಿರುವ ಪ್ರಬಂಧಗಳಲ್ಲೇ ಅತ್ಯುತ್ತಮವಾದದ್ದು” ಅಂದಿದ್ದು.

ಆ ದಿನಗಳಲ್ಲಿ ಟೊಕಿಯೊ ಇಂಪಿರಿಯಲ್ ವಿಶ್ವವಿದ್ಯಾಲಯಕ್ಕೆ (ಈಗ ಅದು ಟೊಕಿಯೊ ವಿಶ್ವವಿದ್ಯಾಲಯ) ಪ್ರವೇಶ ಪಡೆಯುತ್ತಿದ್ದವರಲ್ಲಿ ಕೆಕಾ ಮಾಧ್ಯಮಿಕ ಶಾಲೆಯ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿತ್ತು. ಅದು ಶಾಲೆಗೆ ಹೆಮ್ಮೆಯ ವಿಷಯವಾಗಿತ್ತು. ಓಹರಾ ಹೇಳುತ್ತಿದ್ದರು “ದೆವ್ವ ಕೂಡ ಖಾಸಗಿ ವಿಶ್ವವಿದ್ಯಾಲಯಕ್ಕೆ ಸೇರಬಹುದು” ಅಂತ. ಈಗ ಅದು ಅಷ್ಟು ಸುಲಭವಲ್ಲ. ಆದರೆ ದುಡ್ಡಿರುವ ದೆವ್ವವಾದರೆ ಈಗಲೂ ಒಳನುಸುಳಬಲ್ಲದು. ನನಗೆ ನಮ್ಮ ವ್ಯಾಕರಣದ ಮೇಷ್ಟ್ರು ಓಹರಾ ಅಂದರೆ ಬಹಳ ಇಷ್ಟ. ನಮ್ಮ ಇತಿಹಾಸದ ಮೇಷ್ಟ್ರು ಇವಾಮಾಟ್ಸು ಗೊರೊ ಕೂಡ ಬಹಳ ಇಷ್ಟವಾಗುತ್ತಿದ್ದರು. ನನ್ನ ತರಗತಿಯ ರಿಪೋರ್ಟ್ ಕಾರ್ಡ್ ಪ್ರಕಾರ ನಾನು ಇವರ ಅಚ್ಚುಮೆಚ್ಚಿನ ವಿದ್ಯಾರ್ಥಿ. ಅವರು ನಿಜಕ್ಕೂ ಅದ್ಭುತ ಮೇಷ್ಟ್ರು. ನಿಜವಾದ ಮೇಷ್ಟ್ರು, ಮೇಷ್ಟ್ರ ರೀತಿ ಇರಲ್ಲ. ಈ ವ್ಯಕ್ತಿ ಇದ್ದದ್ದು ಹಾಗೆ. ತರಗತಿಯಲ್ಲಿ ಯಾರಾದರೂ ಕಿಟಕಿಯಿಂದಾಚೆ ನೋಡುತ್ತಾ ಕೂತಿದ್ದರೆ ಅಥವ ಪಕ್ಕದವರ ಜೊತೆ ಮಾತಾಡುತ್ತಿದ್ದರೆ ಇವಾಮಾಟ್ಸು ಸಿಟ್ಟಲ್ಲಿ ಬಳಪದ ತುಂಡುಗಳನ್ನು ಅವರತ್ತ ಒಂದಾದ ಮೇಲೊಂದರಂತೆ ಎಸೆಯುತ್ತಿದ್ದರು. ಹಾಗಾಗಿ ಅವರ ಹತ್ತಿರವಿರುತ್ತಿದ್ದ ಬಳಪಗಳು ಬಲುಬೇಗ ಖಾಲಿಯಾಗುತ್ತಿದ್ದವು. ಬಳಪ ಇಲ್ಲದೆ ಪಾಠ ಮಾಡಲು ಆಗಲ್ಲ ಅಂತ ಹೇಳಿ ನಸುನಕ್ಕು ಅದುಇದು ಮಾತಾಡಲು ಶುರುಮಾಡುತ್ತಿದ್ದರು. ಯಾವುದೇ ಪಠ್ಯಪುಸ್ತಕದ ಪಾಠಕ್ಕಿಂತ ಅವರ ಈ ರೀತಿಯ ಮಾತುಕತೆಗಳೇ ಹೆಚ್ಚು ಮಾಹಿತಿಗಳಿಂದ ಕೂಡಿ ಆಸಕ್ತಿಯುತವಾಗಿರುತ್ತಿತ್ತು.

ಇವಾಮಾಟ್ಸು ಅವರ ಪರಿಪೂರ್ಣ ವ್ಯಕ್ತಿತ್ವದ ವಿಶೇಷತೆ ವರ್ಷದ ಕೊನೆಯ ಪರೀಕ್ಷೆಯಲ್ಲಿ ಅನಾವರಣಗೊಳ್ಳುತ್ತಿತ್ತು. ವರ್ಷದ ಕೊನೆಯಲ್ಲಿನ ಅಂತಿಮ ಪರೀಕ್ಷೆಯ ಹೊತ್ತಿನಲ್ಲಿ ಅವರ ವ್ಯಕ್ತಿತ್ವದ ವಿಶಿಷ್ಟತೆ ತನ್ನದೇ ಶೈಲಿಯಲ್ಲಿ ಅನಾವರಣಗೊಳ್ಳುತ್ತಿತ್ತು. ಆಯಾ ವಿಷಯಕ್ಕೆ ಸಂಬಂಧಿಸಿದ ಶಿಕ್ಷಕರು ತಮ್ಮ ಪತ್ರಿಕೆಯ ದಿನ ಪ್ರತಿ ತರಗತಿಗೂ ಭೇಟಿನೀಡುತ್ತಿದ್ದರು. ಉಳಿದಂತೆ ಆಯಾ ತರಗತಿಯ ಮೇಲ್ವಿಚಾರಣೆಯನ್ನು ಆ ವಿಷಯಕ್ಕೆ ಸಂಬಂಧಿಸದ ಮೇಲ್ವಿಚಾರಕರು ವಹಿಸಿಕೊಂಡಿರುತ್ತಿದ್ದರು. ಆ ಸಮಯದಲ್ಲಿ ಇವಾಮಾಟ್ಸು ಮೇಷ್ಟ್ರೇನಾದರೂ ತರಗತಿಯೊಳಗೆ ಬಂದರೆ ಇಡೀ ತರಗತಿಯಲ್ಲಿ ಖುಷಿಯ ಅಲೆಗಳೆದ್ದು ಮಕ್ಕಳು ಉತ್ಸಾಹದಿಂದ ಕೂಗುತ್ತಿದ್ದರು. ಅದಕ್ಕೆ ಕಾರಣವೇನೆಂದರೆ ಇವಾಮಾಟ್ಸು ಅವರಿಗೆ ಪರೀಕ್ಷೆಯ ಮೇಲ್ವಿಚಾರಕನ ಔಪಚಾರಿಕ ಕ್ರಮಗಳಲ್ಲಿ ಆಸಕ್ತಿಯಿರಲಿಲ್ಲ. ಯಾರಾದರೂ ವಿದ್ಯಾರ್ಥಿ ಪ್ರಶ್ನೆಪತ್ರಿಕೆಯಲ್ಲಿ ಯಾವುದಾದರೂ ಪ್ರಶ್ನೆಗೆ ಉತ್ತರ ತಿಳಿಯದೆ ಒದ್ದಾಡುತ್ತಿದ್ದರೆ ಇವಾಮಾಟ್ಸು ಅವನ ಹತ್ತಿರ ಹೋಗಿ ಬೆನ್ನಹಿಂದೆ ನಿಂತು ಯಾವ ಪ್ರಶ್ನೆ ಅವನಿಗೆ ತೊಂದರೆ ಕೊಡುತ್ತಿದೆ ಎಂದು ಬಗ್ಗಿ ನೋಡುತ್ತಿದ್ದರು. ಆಗ ನಡೆಯುತ್ತಿದ್ದ ಘಟನೆ ಹೀಗಿರುತ್ತಿತ್ತು :

ನಮಗೆ ಹೊಸ ಶಿಕ್ಷಕರು ಬಂದಾಗಲೂ ನನ್ನ ಪ್ರಾಮಾಣಿಕತೆಯನ್ನು ಮುಂದುವರೆಸಿದೆ. ಯಾರು ಮಾಡಿದ್ದು ಅಂತ ಕೇಳಿದ ತಕ್ಷಣ ಕೈ ಎತ್ತಿದೆ. ಅದಕ್ಕೆ ಆ ಹೊಸ ಮೇಷ್ಟ್ರು ನೀನು ಜವಾಬ್ದಾರಿಯಿಂದ ನುಣುಚಿಕೊಳ್ಳಲಿಲ್ಲ ನೋಡು ಎಂದು ತಮ್ಮ ಗ್ರೇಡ್ ಪುಸ್ತಕ ತೆಗೆದು ವರ್ತನೆಗೆ (conduct) ನೂರು ಅಂಕ ಕೊಟ್ಟರು.

“ಏನಾಯ್ತು? ನಿನಗೆ ಅದನ್ನು ಬಿಡಿಸಲು ಗೊತ್ತಾಗುತ್ತಿಲ್ಲವಾ? ನೋಡು ಅದನ್ನು ಹೀಗೆ ಮಾಡಬೇಕು” ಎಂದು ಇವಾಮಾಟ್ಸು ಅದನ್ನು ಬಿಡಿಸುವುದು ಹೇಗೆ ಎಂದು ಹೇಳಲು ಶುರುಮಾಡುತ್ತಿದ್ದರು. ವಿದ್ಯಾರ್ಥಿಗೆ ಆಗಲೂ ಅರ್ಥವಾಗದೆ ನೋಡುತ್ತಿದ್ದರೆ “ಇನ್ನೂ ಅರ್ಥವಾಗಿಲ್ಲವಾ? ದಡ್ಡ” ಎಂದು ಕಪ್ಪುಹಲಗೆಯ ಹತ್ತಿರ ಹೋಗಿ ಇಡೀ ಸಮಸ್ಯೆಯನ್ನು ಬಿಡಿಸಿ ವಿವರಿಸಿ “ಈಗ ಅರ್ಥವಾಯಿತಾ?” ಅಂತ ಕೇಳುತ್ತಿದ್ದರು. ಅವರೆಷ್ಟು ಚೆನ್ನಾಗಿ ವಿವರಿಸುತ್ತಿದ್ದರೆಂದರೆ ಎಂತಹ ದಡ್ಡನಿಗಾದರೂ ಅವರು ಹೇಳಿದ್ದು ಅರ್ಥವಾಗಿ ಉತ್ತರ ಬರೆದುಬಿಡುತ್ತಿದ್ದ. ನನಗೆ ಗಣಿತ ಅಂದರೆ ಕಷ್ಟ. ಆದರೆ ಇವಾಮಾಟ್ಸು ಮೇಲ್ವಿಚಾರಕರಾಗಿ ಬಂದಾಗ ನನಗೆ ಗಣಿತದಲ್ಲಿ ನೂರಕ್ಕೆ ನೂರು ಬರುತ್ತಿತ್ತು. ಒಮ್ಮೆ ವರ್ಷದ ಕೊನೆಯಲ್ಲಿ ಇತಿಹಾಸದ ಪರೀಕ್ಷೆಯನ್ನು ತೆಗೆದುಕೊಂಡಿದ್ದೆ. ಅದರಲ್ಲಿ ಹತ್ತು ಪ್ರಶ್ನೆಗಳಿದ್ದವು. ಅವುಗಳಲ್ಲಿ ಯಾವುದಕ್ಕೂ ಉತ್ತರ ಗೊತ್ತಿರಲಿಲ್ಲ. ಇತಿಹಾಸವನ್ನು ಪಾಠಮಾಡುತ್ತಿದ್ದ ಮೇಷ್ಟ್ರು ಇವಾಮಾಟ್ಸು. ಹಾಗಾಗಿ ಅವರು ಪರೀಕ್ಷೆಯ ಮೇಲ್ವಿಚಾರಕರಾಗಿ ಬಂದಿರಲಿಲ್ಲ. ಇನ್ನೇನು ಮಾಡುವುದು ಯಾವುದಕ್ಕೂ ಉತ್ತರಿಸದೆ ಬಿಟ್ಟುಬಿಡೋಣ ಅಂತ ಅಂದುಕೊಂಡೆ. ಆದರೂ ಹತಾಶೆಯಿಂದ ಯಾವುದಾದರೂ ಒಂದು ಪ್ರಶ್ನೆಗೆ ಉತ್ತರ ಬರಿಯೋಣ ಅಂತ ಅನ್ನಿಸಿತು.

“ರಾಜಮನೆತನಕ್ಕೆ ಸೇರಿದ ಮೂರು ಅಮೂಲ್ಯ ವಸ್ತುಗಳ ಕುರಿತು ನಿಮ್ಮ ಅಭಿಪ್ರಾಯವನ್ನು ತಿಳಿಸಿ” ಎನ್ನುವ ಪ್ರಶ್ನೆಗೆ ಬಾಯಿಗೆ ಬಂದಹಾಗೆ ಮೂರು ಪುಟಗಳ ಉತ್ತರ ಬರೆದೆ. ಆ ಉತ್ತರ ಹೀಗಿತ್ತು : “ಈ ಮೂರು ಅಮೂಲ್ಯ ವಸ್ತುಗಳ ಬಗ್ಗೆ ನಾನು ಕೂಡ ಬಹಳ ಕೇಳಿದ್ದೇನೆ. ಆದರೆ ಕಣ್ಣಾರೆ ನೋಡಿಲ್ಲ. ಹಾಗಾಗಿ ಅವುಗಳ ಬಗ್ಗೆ ಏನನ್ನಿಸುತ್ತೆ ಅಂತ ಬರೆಯಲು ಆಗುವುದಿಲ್ಲ. ಉದಾಹರಣೆಗೆ ಯಾಟಾ – ನೋ – ಕಾಗಾಮಿ ಪವಿತ್ರ ಕನ್ನಡಿಯನ್ನೇ ತೆಗೆದುಕೊಳ್ಳಿ. ಅದೆಷ್ಟು ಪವಿತ್ರವಾದದ್ದು ಎಂದರೆ ಅದನ್ನು ನೋಡಲು ಯಾರಿಗೂ ಅವಕಾಶವಿಲ್ಲ. ಹಾಗಾಗಿ ವಾಸ್ತವದಲ್ಲಿ ಅದು ದುಂಡಗಿನ ಕನ್ನಡಿ ಅಲ್ಲದಿರಬಹುದು. ಅದು ಚೌಕಾಕಾರದಲ್ಲಿರಬಹುದು ಇಲ್ಲವೇ ತ್ರಿಭುಜಾಕಾರದಲ್ಲಿರಬಹುದು. ನನ್ನ ಕಣ್ಣಾರೆ ನೋಡಿದ ವಸ್ತುಗಳನ್ನು ಕುರಿತು ಮಾತ್ರ ಮಾತಾಡಬಲ್ಲೆ. ಹಾಗೂ ಆಧಾರವಿರುವಂತಹ ವಸ್ತುಗಳನ್ನು ಮಾತ್ರ ನಂಬುತ್ತೇನೆ.”

(Yamamoto Kajiro)

ಇವಾಮಾಟ್ಸು ಮೇಷ್ಟ್ರು ಉತ್ತರಪತ್ರಿಕೆಗಳ ಮೌಲ್ಯಮಾಪನ ಮುಗಿಸಿ ವಿದ್ಯಾರ್ಥಿಗಳಿಗೆ ಹಿಂತಿರುಗಿಸುವ ದಿನ ಬಂತು. “ಇಲ್ಲೊಂದು ಉತ್ತರ ಪತ್ರಿಕೆ ಕುತೂಹಲಕಾರಿಯಾಗಿದೆ. ಹತ್ತರಲ್ಲಿ ಒಂದು ಪ್ರಶ್ನೆಗೆ ಮಾತ್ರ ಉತ್ತರ ಬರೆದಿದ್ದಾನೆ. ಆದರೆ ಉತ್ತರ ಬಹಳ ಆಸಕ್ತಿ ಹುಟ್ಟಿಸುವಂತಿದೆ. ಇದೇ ಮೊದಲ ಸಲ ಇಷ್ಟು ನೈಜವಾದ ಉತ್ತರವನ್ನು ನೋಡಿದ್ದು. ಈ ಉತ್ತರವನ್ನು ಬರೆದ ವಿದ್ಯಾರ್ಥಿ ಭರವಸೆ ಹುಟ್ಟಿಸುವಂತಹವನು. ಹೌದು ನೂರಕ್ಕೆ ನೂರು ಪ್ರತಿಶತ ಅದು ಮತ್ತಾರೂ ಅಲ್ಲ ಕುರೊಸಾವ!!”

ಅವರು ಉತ್ತರಪತ್ರಿಕೆಯನ್ನು ನನ್ನತ್ತ ಚಾಚಿದರು. ಎಲ್ಲರ ಕಣ್ಣುಗಳು ನನ್ನತ್ತ ಹೊರಳಿದವು. ನಾಚಿಕೆಯಿಂದ ಕೆಂಪಾಗಿ ನನ್ನ ಜಾಗದಲ್ಲಿ ಮುದುಡಿ ಕೂತುಬಿಟ್ಟೆ. ಬಹಳ ಹೊತ್ತಿನವರೆಗೆ ಅಲ್ಲಿಂದ ಕದಲಲು ಕೂಡ ಸಾಧ್ಯವಾಗಲಿಲ್ಲ.

ನಮ್ಮ ಕಾಲದಲ್ಲಿ ವ್ಯಕ್ತಿಯ ಸ್ವತಂತ್ರ ಚೇತನಕ್ಕೆ ಹಾಗೂ ವೈಯುಕ್ತಿಕ ವಿಶಿಷ್ಟತೆಗಳಿಗೆ ಮನ್ನಣೆ ನೀಡುವ ಶಿಕ್ಷಕರಿದ್ದರು. ಇವತ್ತಿನ ಶಿಕ್ಷಕರಿಗೆ ಅವರನ್ನು ಹೋಲಿಸಿದಾಗ ಇಂದು ಬಹಳ ಮಂದಿ ಕೇವಲ “ಸಂಬಳ”ಕ್ಕಾಗಿ ಶಿಕ್ಷಕರಾದವರಿದ್ದಾರೆ. ಈ ರೀತಿಯ ಬ್ಯೂರೊಕ್ರೆಸಿಯ ಸ್ವಭಾವದವರು ಶಿಕ್ಷಕರಾಗಿ ಮಾಡುವ ಪಾಠ ನಿಜಕ್ಕೂ ಏನನ್ನೂ ಕಲಿಸುವುದಿಲ್ಲ. ಆ ಪಾಠಗಳಲ್ಲಿ ಸತ್ವವಿರುವುದಿಲ್ಲ. ಇಂದಿನ ವಿದ್ಯಾರ್ಥಿಗಳು ಹೆಚ್ಚಿನ ಸಮಯವನ್ನು ಕಾಮಿಕ್ ಪುಸ್ತಕಗಳನ್ನು ಓದುವುದರಲ್ಲಿ ಕಳೆಯುತ್ತಿರುವುದರಲ್ಲಿ ಆಶ್ಚರ್ಯವಿಲ್ಲ. ಪ್ರಾಥಮಿಕ ಶಾಲೆಯಲ್ಲಿದ್ದಾಗ ಶ್ರೀ ತಚಿಕವಾವರಂತಹ ಅದ್ಭುತ ಮೇಷ್ಟ್ರು ನನಗೆ ಸಿಕ್ಕರು. ಮಾಧ್ಯಮಿಕ ಶಾಲೆಗೆ ಬಂದಾಗ ಶ್ರೀ ಒಹ್ರಾ ಮತ್ತು ಶ್ರೀ ಇವಾಮಾಟ್ಸು ಸಿಕ್ಕರು. ಇವರೆಲ್ಲ ನನ್ನ ವೈಯುಕ್ತಿಕ ಸಾಮರ್ಥ್ಯವನ್ನು ಗುರುತಿಸಿ ಅದನ್ನು ಬೆಳೆಸಿಕೊಳ್ಳಲು ಪ್ರೋತ್ಸಾಹಿಸಿದರು. ಒಳ್ಳೆಯ ಮೇಷ್ಟ್ರುಗಳು ಸಿಕ್ಕದ್ದು ನನ್ನ ಅದೃಷ್ಟ.

ನಂತರ ಚಿತ್ರೋದ್ಯಮವನ್ನು ಪ್ರವೇಶಿಸಿದಾಗ ನನಗೆ “ಯಮ – ಸ್ಯಾನ್”ರಂತಹ ಅದ್ಭುತ ಮೇಷ್ಟ್ರು ಸಿಕ್ಕರು (director Yamamoto Kajiro, 1902-1973). ಇಟಾಮಿ ಮನ್ಸಕು (Itami Mansaku (1900-1946)ರಂತಹ ನಿರ್ದೇಶಕರು ಪ್ರೀತಿಯಿಂದ ಪ್ರೋತ್ಸಾಹಿಸಿದರು. ಮೋರಿಟಾ ನೋಬಿಯೋಶಿ (Morita Nobuyoshi)ಯಂತಹ ನಿರ್ಮಾಪಕರಿಂದ ಅತ್ಯುತ್ತಮ ತರಬೇತಿಯನ್ನು ಪಡೆದೆ. ಇವರಲ್ಲದೆ ಗುರುಗಳಂತೆ ಗೌರವಾದರಗಳಿಂದ ನೋಡುವ ಇನ್ನೂ ಹಲವು ನಿರ್ದೇಶಕರಿದ್ದಾರೆ : ಶಿಮಾಜು಼ ಯಾಸುಜಿರೊ (Shimazu Yasujiro (1897-1945), ಯಮನಕ ಸಾದೊ (Yamanaka Sadao (1909-1938), ಮಿಜೊಗುಚಿ ಕೆಂಜಿ (Mizoguchi Kenji), ಓಜು ಯಾಸುಜಿರೊ (Ozu Yasujiro ) ಮತ್ತು ನರುಸೆ ಮಿಕಿಯೊ (Naruse Mikio). ಇವರೆಲ್ಲರ ಕುರಿತು ಯೋಚಿಸುವಾಗ ಹಳೆಯ ಹಾಡೊಂದನ್ನು ಗುನುಗಬೇಕೆನಿಸುತ್ತದೆ “…. ನಮ್ಮ ಗುರುಗಳ ಕರುಣೆಗೆ ಧನ್ಯವಾದಗಳು ಅವರ ಪ್ರೀತಿಆದರಗಳನ್ನು ಪಡೆದವು…” ಆದರೆ ಇವರಲ್ಲಿ ಯಾರೊಬ್ಬರು ಈಗ ನನ್ನ ಧ್ವನಿಯನ್ನು ಆಲಿಸಲಾರರು.