ಅವಳ ಹಾಡು, ಭೇಟಿಗೆ ಸಾಕ್ಷಿಯಾಗುತ್ತಿದ್ದ ಸೇತುವೆ ಎಲ್ಲವೂ ಪ್ರತ್ಯಕ್ಷವಾಗಿ ಮಾಯವಾಗುತ್ತದೆ. ಸಂವಾದ ಸಾಗುತ್ತಿರಬೇಕಾದರೆ ವಿದ್ಯುತ್ ರೆಪ್ಪೆಯ ಮುಚ್ಚುತ್ತದೆ. ದೀಪ ತರಲೆಂದು ರಾಮ್ ಹೋದಾಗ, ಜಾನು ಹಾಡನೊಂದು ಹಾಡುತ್ತಾಳೆ. ಬೇರೆ ಯಾವ ಹಾಡೂ ಅಲ್ಲ. ಪ್ರತಿ ಬಾರಿ ಅವಳು ವೇದಿಕೆಯೇರಿದಾಗ, ಅವನು ಕೋರಿಕೆಯಿಡುತ್ತಿದ್ದದ್ದೇ ಆ ಹಾಡಿಗಾಗಿ. ಆದರೆ ಅವಳೆಂದಿಗೂ ಆ ಹಾಡನ್ನು ಹಾಡಲೇ ಇಲ್ಲ. ಆದರೆ ಅಂದು ರಾಮ್‌ನ ಆಸೆಯನ್ನು ಈಡೇರಿಸುತ್ತಾಳೆ. ಕತ್ತಲಿಗೂ ಅಸೂಯೆಯಾಗಿ ಸುಮ್ಮನೆ ಎದ್ದು ನಡೆದುಬಿಡುತ್ತದೆ.
ರಾಮ್ ಪ್ರಕಾಶ್ ರೈ ಕೆ. ಬರೆಯುವ “ಸಿನಿ ಪನೋರಮಾ” ಸರಣಿಯಲ್ಲಿ ತಮಿಳಿನ ಪ್ರೇಮ್ ಕುಮಾರ್ ಅವರ ನಿರ್ದೇಶನದ ‘96’ಸಿನಿಮಾದ ವಿಶ್ಲೇಷಣೆ

ಕನಸಲಿ ನಡೆಸು ಬಿಸಿಲಾದರೆ
ಒಲವನೆ ಬಡಿಸು ಹಸಿವಾದರೆ
ಜಗವಾ ಮರೆಸು
ನಗುವ ಮುಡಿಸು
ನೀ ನನ್ನ ಪ್ರೇಮಿ ಆದರೆ
ಹೃದಯವು ಹೂವಿನ ಚಪ್ಪರ
ಅದರಲಿ ನಿನ್ನದೇ ಅಬ್ಬರ
-ಜಯಂತ ಕಾಯ್ಕಿಣಿ

(ಪ್ರೇಮ್ ಕುಮಾರ್)

ಪ್ರೇಮವೊಂದು ಕಾಲಾತೀತ ಭಾವ. ಎಂದೂ ಮುಗಿಯದ ಪಯಣ. ಪೂರ್ಣ ವಿರಾಮವೇ ಇಲ್ಲದ ವಾಕ್ಯ. ಪ್ರೀತಿಸಿದ ಮನಸುಗಳ ನಡುವೆ ಕಣಿವೆ ಎದುರಾದರೂ, ಪ್ರೀತಿ ಶಾಶ್ವತ, ಎಂದೂ ಖಾಲಿಯಾಗದ ಸಾಗರ. ಪ್ರೇಮದ ಅತಿ ಮಧುರ ಅನುಭೂತಿಯೇ ಕಾಯುವಿಕೆ. ಅನುದಿನವೂ ಚಂದಿರನ ಬರುವಿಕೆಗೆ ಕಾಯುವ ಆಗಸದಂತೆ, ಕಡು ಬೇಸಿಗೆಗೆ ಬೆವರಿ ಬೇಸತ್ತು ಜಡಿಮಳೆಗೆ ಕಾಯುವ ಭೂರಮೆಯಂತೆ, ಮಗುವಿನ ಸ್ಪರ್ಶಕ್ಕೆ ಕಾಯುವ ಅಮ್ಮನ ಮಡಿಲಿನಂತೆ ಅವಳ ಕಣ್ಣುಗಳು, ಅವನ ಅಪ್ಪುಗೆ, ಅವಳ ನಗು, ಅವನ ಸಡಗರಕ್ಕೆ ಕಾತರಿಸುವ ಮನಸು ಮನಸುಗಳ ಮೊಹಬ್ಬತೇ ಪ್ರೇಮ. ಮರೆತು ಹೋಗುವ ಹಳೆಯ ಬದುಕು, ಧಿಗಿಣ ತೆಗೆದು ಮನವ ಕಾಡುವ ಹೊಸ ಹೊಸ ಕನಸುಗಳು, ಆಸೆಗಳು, ಉಸಿರಿನ ಬಿಸಿ, ಕಣ್ಣೋಟದ ತಂಗಾಳಿಗೆ ಕರಗುವ ದೇಹ ಹೀಗೆ ಪ್ರೀತಿಯೊಂದು ಅಬ್ಬರದ ಅಲೆ. ತೀರದ ಮೇಲಿರುವ ಗುರುತುಗಳೆಲ್ಲವ ಅಳಿಸಿ, ಹೊಸ ರೂಪು-ರೇಷೆಯ ನೀಡುವ ತೆರನಾದದ್ದು. ಇಂತಿರುವಾಗ, ಯುಗ ಯುಗಗಳೆ ಸಾಗಲಿ, ನಮ್ಮ ಪ್ರೀತಿ ಶಾಶ್ವತ ಎಂದು ಜೀವಿಸಿದ ಮನಸ್ಸುಗಳು ದೂರವಾಗಿ ದ್ವಿ ದಶಕಗಳ ನಂತರ ಸಂಧಿಸುವ, ಅಸಂಖ್ಯ ದಿನಗಳು ಉರುಳಿದರೂ ತಿಳಿನೀರಿನಲ್ಲಿ ಕಾಣುವ ಪರಿಪೂರ್ಣ ಚಿತ್ರದಂತೆ, ಜಾಗ ಖಾಲಿಯಿಲ್ಲದ ಸಂತೆಯಲ್ಲೂ ಅವಳೊಬ್ಬಳೇ ಕಾಣುವಂತೆ, ಒಲವ ಉಸಿರಾಡಿದ ಜೀವಗಳ ಕಥಾನಕವೇ ಪ್ರೇಮ ಕುಮಾರ್ ಅವರ ‘96’.

ಆತ ರಾಮ್. ಪ್ರವಾಸಿ ಛಾಯಾಗ್ರಾಹಕ. ದೇವಸ್ಥಾನಗಳ ಅದ್ಭುತ ಸೌಂದರ್ಯ, ಬಣ್ಣ ಮೆತ್ತಿಕೊಂಡ ಶಹರಗಳು ಮತ್ತದರ ಬದುಕು, ಸಾಗರದ ನರ್ತನ, ಸೇತುವೆಗಳ ಮೌನ, ಅಜ್ಜನ ಗಡ್ಡದಂತೆ ಬೆಳ್ಳಗಾಗಿ ಕುಳಿತ ಹಿಮದ ರಾಶಿ, ಮರುಭೂಮಿಯ ಹಾಡಿಗೆ ತಲೆಯಾಡಿಸುವ ಒಂಟೆ ಎಲ್ಲವೂ ಆತನ ಕ್ಯಾಮೆರಾದೊಳಗೆ ಬಂಧಿಸಲ್ಪಟ್ಟಿವೆ. ಒಂದಷ್ಟು ಕಿರಿಯ ಕಲಿಕಾ ಛಾಯಾಗ್ರಾಹಕರಿಗೆ ಪಾಠವನ್ನು ಕಲಿಸುವ ಪ್ರವೃತ್ತಿಯನ್ನು ಇಟ್ಟುಕೊಂಡಿದ್ದ. ಹೀಗಿರುವಾಗ ಒಂದು ದಿನ ಕೆಲಸದ ನಿಮಿತ್ತ ಹೋಗಲೆಂದು, ಕಲಿಕಾ ಶಿಬಿರದಲ್ಲಿದ್ದ ಯುವತಿಯನ್ನು ವಾಹನ ಚಲಾಯಿಸಲೆಂದು ತಿಳಿಸಿ ತಾನು ಕಾರಿನಲ್ಲಿ ನಿದ್ರಿಸುತ್ತಾನೆ. ಕಣ್ಣು ತೆರೆದರೆ ಕಾರು ತಂಜಾವೂರಿನ ರಸ್ತೆಯಲ್ಲಿ ಹೆಜ್ಜೆ ಹಾಕುತ್ತಿದೆ. ಥಟ್ಟನೆ ಅವನ ನೆನಪುಗಳು ಸಾಗರದ ಹಿನ್ನೀರಿನಂತೆ ಹಿಂದಕ್ಕೆ ಸಾಗುತ್ತದೆ. ಅವನು ಕಲಿತ ಶಾಲೆಗೆ ತೆರಳಿ, ವಾಚ್ ಮ್ಯಾನ್‌ನೊಂದಿಗೆ ನಗುವ ಚೆಲ್ಲಿ, ಹಳೆಯ ದಿನಗಳ ಹೊತ್ತ ಪುಸ್ತಕದ ಕದವ ತೆರೆಯುತ್ತಾನೆ. ಶಾಲೆಯ ಬೆಂಚಿನ ಮೇಲೆ ಕುಳಿತು, ಭಾಗಶಃ ತುಕ್ಕು ಹಿಡಿಸಿಕೊಂಡು ಮುಖ ಸಪ್ಪಗೆ ಮಾಡಿ ಕುಳಿತ ಗಂಟೆಯ ನೇವರಿಸಿ ಕ್ಯಾಲೆಂಡರ್‌ಗೆ ರಿವರ್ಸ್ ಗೇರ್ ಹಾಕುತ್ತಾನೆ.

ಅವಳೊಬ್ಬಳಿದ್ದಳು; ಒಲವ ಅಮೃತಾಧಾರೆ ಜಾನು ಉರುಫ್ ಜಾನಕೀದೇವಿ. ಅಪ್ರತಿಮ ಸುಂದರಿಯಲ್ಲ. ಆದರೆ ಅವನ ಹೃದಯಕ್ಕೆ ಅವಳೇ ಅಧಿಪತಿ. ಅವನ ಕನಸಿಗೆ ಅವಳೇ ಬಣ್ಣ ಹಚ್ಚುವವಳು. ಅವಳೊಂದಿಗೆ ಕಳೆದ ಕ್ಷಣಗಳು, ಅವಳ ಕೋಗಿಲೆ ಕಂಠದಿಂದ ಸಿಹಿತಿನಿಸಿನ ಆಸ್ವಾದನೆಯ ತೆರನಾಗಿ ಹೊರಬರುತ್ತಿದ್ದ ಹಾಡಿನ ಸಾಲುಗಳು ಎಲ್ಲವೂ ನೆನಪಾಗಿ ಕೆನ್ನೆಗಳು ಕಣ್ಣ ರೆಪ್ಪೆಗೆ ಮುತ್ತಿಡಲು ನೆಪವಾಗುತ್ತದೆ ಗೋಡೆಯ ಮೇಲೆ ಅಂಟಿದ್ದ 96 ನೇ ಬ್ಯಾಚಿನ ಹೆಸರುಗಳು ಸೇರಿಕೊಂಡಂತೆ. ಮುಂದೆ ಪಯಣ ಸಾಗುತ್ತದೆ. ವಾಟ್ಸ್ ಆಪಿನಲ್ಲಿ 96 ನೇ ಬ್ಯಾಚಿನ ಗುಂಪು ಶುರುವಾಗಿ, ಸ್ನೇಹ ಸಂಗಮ ಕೂಟ ನಡೆಸುವುದೆಂದು ನಿರ್ಧಾರವಾಗುತ್ತದೆ. ಎಲ್ಲರೂ ಜೊತೆಯಾಗುತ್ತಾರೆ. ರಾಮ್‌ನ ಕಣ್ಣುಗಳು ಜಾನಕಿಗೆ ಕಾಯುತ್ತದೆ. ಕೊನೆಗೂ ವನವಾಸ ಕಳೆದು ಜಾನಕಿಯ ದರ್ಶನ ರಾಮನಿಗಾಗುತ್ತದೆ. ಅವಳ ಕಣ್ಣುಗಳ ಪ್ರಖರತೆಗೆ ಸಿಲುಕಿ ಗುಬ್ಬಚ್ಚಿಯಂತೆ ನಲುಗುತ್ತಾನೆ ರಾಮ್. ಅವಳಿಗೆ ಮದುವೆಯಾಗಿರುತ್ತದೆ. ಅವನು ಮಾತ್ರ ಅವಳ ನೆನಪುಗಳೊಂದಿಗೆ ವಿವಾಹಗೊಂಡಿರುತ್ತಾನೆ. ಮಾತು ಆರಂಭಗೊಳ್ಳುತ್ತದೆ.

ಅವಳಿಗೆ ರಾಮ್‌ನನ್ನು ಮತ್ತೆ ಹೈಸ್ಕೂಲ್ ದಿನಗಳಂತೆ ನೋಡಬೇಕೆನ್ನುವ ಬಯಕೆ. ಮುಖದ ಸುತ್ತ ಹಬ್ಬಿದ ಕೂದಲುಗಳ ಸಂಹರಿಸಿ, ಶಿರದ ನಡುವಿನಿಂದ ಕೇಶವನ್ನು ಎರಡೂ ಬದಿಗೂ ಇಳಿಬಿಟ್ಟು ಸಣ್ಣ ಯುವಕನಂತೆ ಆತ ಕಂಡಾಗ ಅವಳಿಗೆ ಪುಳಕ. ಹೋಟೆಲಿನ ರೂಮಿನಲ್ಲಿ ಕುಳಿತು ಮಾತು ಮುಂದುವರೆಸುತ್ತಾರೆ. ಅವಳ ಹಾಡು, ಭೇಟಿಗೆ ಸಾಕ್ಷಿಯಾಗುತ್ತಿದ್ದ ಸೇತುವೆ ಎಲ್ಲವೂ ಪ್ರತ್ಯಕ್ಷವಾಗಿ ಮಾಯವಾಗುತ್ತದೆ. ಸಂವಾದ ಸಾಗುತ್ತಿರಬೇಕಾದರೆ ವಿದ್ಯುತ್ ರೆಪ್ಪೆಯ ಮುಚ್ಚುತ್ತದೆ. ದೀಪ ತರಲೆಂದು ರಾಮ್ ಹೋದಾಗ, ಜಾನು ಹಾಡನೊಂದು ಹಾಡುತ್ತಾಳೆ. ಬೇರೆ ಯಾವ ಹಾಡೂ ಅಲ್ಲ. ಪ್ರತಿ ಬಾರಿ ಅವಳು ವೇದಿಕೆಯೇರಿದಾಗ, ಅವನು ಕೋರಿಕೆಯಿಡುತ್ತಿದ್ದದ್ದೇ ಆ ಹಾಡಿಗಾಗಿ. ಆದರೆ ಅವಳೆಂದಿಗೂ ಆ ಹಾಡನ್ನು ಹಾಡಲೇ ಇಲ್ಲ. ಆದರೆ ಅಂದು ರಾಮ್‌ನ ಆಸೆಯನ್ನು ಈಡೇರಿಸುತ್ತಾಳೆ. ಕತ್ತಲಿಗೂ ಅಸೂಯೆಯಾಗಿ ಸುಮ್ಮನೆ ಎದ್ದು ನಡೆದು ಬಿಡುತ್ತದೆ. ಮುಂದೆ ತಮ್ಮ ಹೈಸ್ಕೂಲ್ ದಿನಗಳ ಪ್ರೇಮದ ಆರಂಭ, ಅವಳ ಹಠಾತ್ ನಿರ್ಗಮನ, ಮದುವೆ ಎಲ್ಲವೂ ಪದಗಳ ರೂಪ ಪಡೆಯುತ್ತದೆ. ಅವಳು ನಿದ್ದೆಯ ಮೊರೆ ಹೋದರೂ, ರಾಮ್ ತನ್ನ ಮುಗ್ಧ ಕಣ್ಣುಗಳಿಂದ ಅವಳನ್ನೇ ದಿಟ್ಟಿಸುತ್ತಾನೆ, ಗರ್ಭಗುಡಿ ತೆರೆದಾಗ ಭಕುತರೆಲ್ಲರೂ ದೇವರಲ್ಲೇ ಲೀನವಾಗುವಂತೆ. ಅವಳ ಕತ್ತಿನಲ್ಲಿ ಮುದುರಿ ಕುಳಿತಿದ್ದ ಮಂಗಳ ಸೂತ್ರಕ್ಕೆ ನಮಸ್ಕರಿಸಿ ನೆಲದ ಮೇಲೆ ಮಲಗಿ ಬಿಡುತ್ತಾನೆ. ಮುಂದೆ ಅವಳು ಹಿಂತಿರುಗಿ ಹೋಗುವ ಸಮಯ ಬರುತ್ತದೆ. ಅವಳ ನೆನಪಿನಲ್ಲಿ ಕಳೆದ ಅದೆಷ್ಟೋ ಮಳೆಗಾಲ ಅಂದು ಅವನ ಮನಸ್ಸನ್ನು ಒದ್ದೆಗೊಳಿಸುತ್ತದೆ. ವಿಮಾನ ನೆಲವ ತೊರೆದು ಆಗಸದ ಮೋಹಕ್ಕೆ ಬೀಳುತ್ತದೆ. ಅವನು ಅವಳ ನೆನಪಿನ ಮಳಿಗೆಗೊಂದು ಹೊಸ ಅನುಭವನ್ನು ಸೇರಿಸಿ ಸಾಗುತ್ತಾನೆ. ಹೀಗೆ, ಪ್ರೀತಿಯೆಂದರೆ ಮುಗಿದು ಹೋಗುವ ಸಣ್ಣ ಕಥೆಯಲ್ಲ, ಅಂತ್ಯವೇ ಇಲ್ಲದ ಕಾದಂಬರಿ, ಮುಗಿಯದ ಕನಸು ಎಂದು ಸಾದೃಶ್ಯಗೊಳಿಸುವ ಚಿತ್ರವೇ 96.

ನದಿಗಳು ಕಾಲಗಳುರುಳುತ್ತಲೇ ತನ್ನ ದಾರಿಯನ್ನು ಬದಲಾಯಿಸುವಂತೆ, ರಸ್ತೆಯಲ್ಲಿ ಅಡಚಣೆ ಆದರೆ ವಾಹನಗಳು ಇನ್ನೊಂದು ಪಥದ ಬೆನ್ನೇರುವಂತೆ, ಪ್ರೀತಿ ಸಿಗದೇ ಹೋದಾಗ ಇನ್ನೊಂದು ಜೀವದ ಹಿಂದೆ ಮತ್ತದೇ ಪ್ರೀತಿಯ ಹುಡುಕಾಟದಲ್ಲಿ ಸಾಗುವುದು ಮಾನವನ ಗುಣ. ಆದರೆ, ಪ್ರೀತಿಯೆoಬ ಭಾವ ಅಳಿಸಲಾಗದ ಶಾಯಿಯಲ್ಲಿ ಆಗಿರುವ ಅಚ್ಚು ಎಂಬಂತೆ ಅವಳೊಬ್ಬಳೇ ತನ್ನ ಹೃದಯಕ್ಕೆ ಮೀಸಲು ಇನ್ಯಾರಿಗೂ ಕೂರಲು ಬಿಡೆನಿಲ್ಲಿ ಎನ್ನುತ್ತಾ ನೀನೆ ಮೊದಲು ನೀನೆ ಕೊನೆ ಈ ಬಾಳಿಗೆ ಎಂದು ಬದುಕುವ ರಾಮ್ ಪ್ರೇಮಿಗಳಿಗೊಂದು ಅಧ್ಯಾಯ. ಒಲವು ಅಸ್ತಮಾನವಾದ ಮೇಲೆ ಇನ್ನೊಬ್ಬರ ತೋಳಿಗೆ ಬಿದ್ದ ನಂತರ ಮತ್ತೆ ಹಿಂದಿನ ಪ್ರೀತಿ ಮರಳಿದಾಗ ಹೇಗೆ ಬಾಳಬೇಕು ಎಂಬುವುದಕ್ಕೆ ಜಾನು ಆದರ್ಶ.

ಈ ಕಥಾನಕದ ಕಟ್ಟುವಿಕೆಯೇ ಅತಿ ಮಧುರ. ಎಲ್ಲರ ಬದುಕಿನಲ್ಲೂ ಮೊದಲ ಪ್ರೇಮವೆಂದರೆ ಅದು ದೈವಿಕವಾದದ್ದು. ಅಲ್ಲಿ ದೈಹಿಕ ಬಯಕೆಗಳು, ಭವಿಷ್ಯದ ಆಲೋಚನೆಗಳಂತಹ ದೊಡ್ಡ ಒತ್ತಡಗಳಿರುವುದಿಲ್ಲ. ಅವಳ ಅಥವಾ ಅವನ ಹಾಜರಿಯೇ ದೊಡ್ಡ ಉಡುಗೊರೆಯಾಗಿರುತ್ತದೆ. ಅವಳ ನಡಿಗೆ, ಅವನ ನಗು, ಅವಳ ಮಾತು, ಅವನ ಕಾಳಜಿ ಇವೇ ಮೊದಲ ಪ್ರೀತಿಯ ಮುಖ್ಯಾಂಶಗಳು. ಬಹುತೇಕ ಮೊದಲ ಪ್ರೇಮಗಳು ಬೇಸಿಗೆಯಲ್ಲಿ ಬರುವ ಕಿರು ಪರೀಕ್ಷೆಯ ತೆರನಾದ ಮಳೆಯಂತೆ ಮಾಯವಾಗುತ್ತದೆ. ಮುಂಗಾರಿನಂತೆ ಮುಂದೆ ಸಾಗುವುದಿಲ್ಲ. ಆದರೆ, ಹೀಗೆ ಪ್ರೀತಿಸಿ ದೂರವಾದ ವ್ಯಕ್ತಿತ್ವಗಳು ಅದೆಷ್ಟೋ ಕಾಲದ ನಂತರ ಭೇಟಿಯಾಗುವುದು ಒಂದು ಸುಂದರ ಸನ್ನಿವೇಶ. ಅದರ ಸುತ್ತಲೂ ಪೋಣಿಸಿದ ಕಥೆಯಾದ್ದರಿಂದ, ನೋಡುಗರೆಲ್ಲರೂ ಒಂದಲ್ಲ ಒಂದು ಬಾರಿ ಒಲವೆಂಬ ನಿಲ್ದಾಣದಲ್ಲಿ ಇಳಿದವರೇ ಆಗಿರುವುದರಿಂದ ಕಥೆಯ ಗುಂಗು ಗಾಢವಾಗಿ ಆವರಿಸುತ್ತದೆ. ರಾಮ್ ಆಗಿ ವಿಜಯ್ ಸೇತುಪತಿ, ಜಾನು ಆಗಿ ತ್ರಿಷಾ ಅನುಗಾಲದ ಪ್ರೇಮಿಗಳಂತೆ ನಮ್ಮದೇ ಕಥೆಯ ಚಿತ್ರಣವೆಂಬಂತೆ ಸಹಜತೆಯ ಹೊತ್ತು ಪಾತ್ರವಾಗಿದ್ದಾರೆ. ಪ್ರಮುಖವಾಗಿ ಈ ಕಥಾನಕ ಮನಸೊರೆಗೊಳ್ಳಲು ಕಾರಣ ಗೋವಿಂದ ವಸಂತರ ಸಂಗೀತ. ಅದು ವಸಂತ ಕಾಲ, ಪರಿಸರದಲ್ಲಿ ಮೂಡಿಸುವ ಚಿತ್ತಾರದ ರೀತಿಯಲ್ಲಿ, ಮನವನ್ನೆಲ್ಲ ಮಂತ್ರ ಮುಗ್ಧಗೊಳಿಸಿ ಧ್ಯಾನಸ್ಥ ಭಾವಕ್ಕೆ ನೂಕುವಂಥದ್ದು. ‘ಕಾದಲೇ’ ಹಾಡಿನ ವಯಲಿನ್ ಮಿಡಿತಗಳು, ಅನುದಿನವೂ ಕೆಂಪಗೆ ಉರಿವ ಭಾನುವು ತಣ್ಣಗೆ ಮಂಜಿನಂತೆ ಕರಗಿ ಹೋಗಬಹುದಾದಷ್ಟು ಗಾಢವಾಗಿ ಕಾಡುವಂಥದ್ದು, ಹೃದಯಕ್ಕೆ ಲಗ್ಗೆ ಇಟ್ಟು ಅಲ್ಲೇ ಉಳಿಯುವಂಥದ್ದು. ಹೀಗೆ, ತಾಜಾ ಮಸೂರದಂತೆ ಮೇಘಾಲಯದ ಉಮನ್ ಗೋಟ್ ನದಿಯಂತೆ ಪರಿಶುದ್ಧವಾದ ಸಲಿಲದ ರೀತಿಯ ಒಲವಿನ ಪಯಣಕ್ಕೆ ಹಿಡಿದ ದರ್ಪಣವೇ ‘96’.

ಮುಗಿಸುವ ಮುನ್ನ :
‘ಎಲ್ಲೆಲ್ಲಿ ಹೋದರೂ ನಿನ್ನನ್ನೇ ಕಾಣುವೇ’, ‘ನಾ ನಿನ್ನ ಮರೆಯಲಾರೆ’ ಎನ್ನುವಂತಹ ಭಾವಪೂರ್ಣ ಪ್ರೇಮ ಮರೆಯಾಗಿ ‘ನಿನ್ನೆ ನಿನ್ನೆಗೆ, ಇಂದು ಇಂದಿಗೆ, ನಾಳೆ ನಾಳೆಗೆʼ ಎನ್ನುವಂತೆ ಸಂಬಂಧಗಳು ವ್ಯವಹಾರದ ಮಡಿಲಿಗೆ ಬಿದ್ದ ಈ ಕಾಲಘಟ್ಟದಲ್ಲಿ, ಯೋಗರಾಜ್ ಭಟ್ಟರ ಸಾಲುಗಳಾದ ‘ಎಲ್ಲಿಯೂ ಹೋಗದ ಬಸ್ಸಲಿ, ಸೀಟೊಂದ ಹಿಡಿದಾಗಿದೆ, ಕಣ್ಣಿಲ್ಲದ ಊರಿಗೆ ಕನ್ನಡಿ ಮಾರಬೇಕಿದೆ’ ನೆನಪಾಗುತ್ತದೆ. ಪ್ರೇಮಕ್ಕೆ ಆಯಸ್ಸಿಲ್ಲ, ಅದು ನಿತ್ಯ ನೂತನ ಎಂದು ಉಸಿರಾಡಿದ ರಾಮ್ -ಜಾನಕಿಯನ್ನು ಬ್ರೇಕ್ ಅಪ್ ಸದ್ದು ಅತಿ ಹೆಚ್ಚು ಕೇಳುವ ಈ ನವಯುಗದಲ್ಲಿ ತುರ್ತಾಗಿ ಹುಡುಕಬೇಕಿದೆ……..