ಒಮ್ಮೆ ವಾಕಿಂಗಿಗೆ ಹೋಗುವಾಗ ಸರ್ಕಲ್ಲಿನಲ್ಲಿ ಅವಳು ಸೊಪ್ಪು ಮಾರುವುದನ್ನು ಗಮನಿಸಿದೆ. ಒಂದು ದಿನ ಅವಳು ನನ್ನನ್ನು ಕರೆದು ʻಸೊಪ್ಪು ತಕಳಿ. ಈ ಸೊಪ್ಪು ಬಾರಿ ಚೆನಾಗದೆʼ ಅಂತ ಕೊಟ್ಟಳು. ಇನ್ನೂ ಮೊಬೈಲ್‌ ಕೈಯಲ್ಲಿ ಇಲ್ಲದ ಕಾಲ. ʻದುಡ್‌ ತಂದಿಲ್ಲʼ ಅಂದೆ. ʻನಾಳೆ ಕೊಡಿʼ ಅಂದಳು. ʻನಾಳೆ ಬರದಿದ್ದರೆ?ʼ ಅಂದಿದ್ದಕ್ಕೆ ʻಯಾವತ್ತೋ ಕೊಡಿ ಹೋಗಿʼ ಅಂದಳು. ʻನನ್‌ ಹೆಸ್ರು ಗೊತ್ತಿದೆಯಾ? ಅಂದೆ. ʻಹೂಂ ಚಂದ್ರಮತಿʼ ಅಂದಳು. ʻಹೇಗೆ ನನ್‌ ಹೆಸ್ರು ಗೊತ್ತಿದೆ? ಅಂತ ಕೇಳಿದ್ದಕ್ಕೆ ʻಸ್ವಾಮಿಯೋರು ಕರೆಯದನ್ನ ಕೇಳಿಲ್ವಾ?” ಎಂದು ನಕ್ಕಿದ್ದಳು.
ಡಾ. ಚಂದ್ರಮತಿ ಸೋಂದಾ ಬರೆಯುವ “ಮಾತು ಮಂದಲಿಗೆ” ಸರಣಿಯ ಇಪ್ಪತ್ತೆರಡನೆಯ ಕಂತು

ʻಅವ್ವ ಹತ್ತು ಗಂಟೆ ಆಯ್ತಾ?ʼ ಅಂತ ಕೇಳಿದಳು ನಮ್ಮನೆ ಕೆಲಸದವಳು. ʻಯಾಕೆ?ʼ ಅಂದೆ. ʻಸುಮ್ನೆ ಕೇಳ್ದೆʼ ಅಂದಳು.  ಅವಳು ಕೇಳಿದಾಗ ಹತ್ತು ಗಂಟೆ ಐದು ನಿಮಿಷ ಆಗಿತ್ತು. ನಾಳೆ ಎಂಟು ಗಂಟೆಗೆ ಕೆಲಸಕ್ಕೆ ಬರುವೆನೆಂದು ಅವಳು ಹೇಳಿದರೆ ಮಾರನೇ ದಿವಸ ಸುಮಾರಾಗಿ ಅಷ್ಟು ಹೊತ್ತಿಗೆ ಬರುತ್ತಾಳೆ. ಅವಳಿಗೆ ಗಡಿಯಾರ ನೋಡಲು ಬರುವುದಿಲ್ಲ. ಅಕ್ಷರದ ಗಂಧಗಾಳಿಯೂ ಇಲ್ಲದವಳು ಅವಳು. ಆದರೆ ಅವಳ ವ್ಯವಹಾರ ಜ್ಞಾನ ಸಾಕ್ಷರರಿಗೆ ಕಡಿಮೆ ಇಲ್ಲದಷ್ಟು ಇದೆ. ತಾನೇ ಹೋಗಿ ತನ್ನ ಬ್ಯಾಂಕ್‌ ಅಕೌಂಟಿಗೆ ಆಧಾರ್ ಲಿಂಕ್‌ (ಅವಳ ಭಾಷೆಯಲ್ಲಿ ಇಂಕ್‌) ಮಾಡಿಸಿಕೊಂಡು ಬಂದಿದ್ದಾಳೆ. ಅವಳು ಬ್ಯಾಂಕಿನ ಮೂಲಕ ಹಣಕಾಸು ವ್ಯವಹಾರ ಮಾಡುತ್ತಾಳೆ.  ಈಗವಳಿಗೆ ಅರವತೈದು ವರ್ಷ. ಯಾರ ಹಂಗಿಗೂ ಬೀಳದೆ ದುಡಿದು ತಿನ್ನುತ್ತಾಳೆ. ಮೊನ್ನೆ ಹೇಳುತ್ತಿದ್ದಳು, ಕಾಲು ನೋವು ಅಂತ ಡಾಕ್ಟರ್‌ ಹತ್ತಿರ ಹೋಗಿ ಔಷಧಿ ತಂದಳಂತೆ. ಮೂರು ದಿವಸ ಆದರೂ ಗುಣವಾಗಲಿಲ್ಲ ಅಂತ ಮತ್ತೆ ಹೋದಳಂತೆ. ʻನಿಮ್‌ ತಾವ ಔಸ್ದಿ ತಗಂಡೆ, ಸಾವ್ರ ರುಪಾಯಿ ಖರ್ಚಾಯ್ತು. ಗುಣನೇ ಆಗ್ನಿಲ್ಲʼ ಅಂದಳಂತೆ. ಅದಕ್ಕೆ ಅವರು ʻನಿಮ್ಗೆ ಮಂಡಿ ನೋವು ಅಜ್ಜಿ. ಆಪ್ರೇಶನ್‌ ಮಾಡಿಸ್ಕಳಿʼ ಅಂದರಂತೆ. ʻನಾ ಹೇಳ್ದೆ ಕಣವ್ವ  ʻವಾ ನಾನು ಗೆಯ್ಕಂಡು ತಿನ್ನೋಳು, ಮೂರ್‌ಲಕ್ಸ ಎಲ್ಲಿಂದ ತರ್ಲಿ?ʼ  ಅಂತʼ ಎಂದು ನಕ್ಕಳು. ಬಿಪಿಎಲ್‌ ಕಾರ್ಡಿನವರಿಗೆ ಸರಕಾರದ ಸವಲತ್ತು ಇದೆ ಅಂತ ಅವಳಿಗೆ ಗೊತ್ತಿದೆ.
ʻಬಾಯಿದ್ದೋರು ಬರಗಾಲದಲ್ಲೂ ಬದುಕಿದ್ರುʼ ಎನ್ನುವುದಕ್ಕೆ ನಮ್ಮನೆ ಕೆಲಸದವಳು ಒಳ್ಳೆಯ ಉದಾಹರಣೆ. ಅವಳ ಗಂಡ ಹೋಗಿ ನಾಲ್ಕೈದು ವರ್ಷಗಳಾಗಿವೆ. ಮಕ್ಕಳು, ಮೊಮ್ಮಕ್ಕಳು ಇದ್ದಾರೆ. ಅವಳು ಯಾರ ಮುಂದೂ ಕೈಚಾಚದೆ ಬದುಕುತ್ತಿದ್ದಾಳೆ. ಹಿಂದೆ ನಮಗೆ ಹಾಲು ಕೊಡುತ್ತಿದ್ದಳು. ಇನ್ನೂ ಮೂರೋ ನಾಲಕ್ಕೋ ಮನೆಗೆ ಹಾಲು ಹಾಕುತ್ತಿದ್ದಳು. ತಿಂಗಳ ಕೊನೆಯಲ್ಲಿ ಯಾರ ಮನೆಗೆ ಎಷ್ಟು ಹಾಲು ಎನ್ನುವ ಲೆಕ್ಕ ಅವಳ ಬಾಯತುದಿಯಲ್ಲಿಯೇ ಇರುತ್ತಿತ್ತು. ನಮ್ಮ ಲೆಕ್ಕಾಚಾರಕ್ಕೂ ಅವಳ ಲೆಕ್ಕಕ್ಕೂ ತಾಳೆಯಾಗಿಲ್ಲ ಎನ್ನುವ ದೂರು ಇರುತ್ತಿರಲಿಲ್ಲ. ಅಷ್ಟೊಂದು ಖಡಕ್‌ ವ್ಯಕ್ತಿತ್ವದವಳಂತೆ ಮೇಲುನೋಟಕ್ಕೆ ಕಂಡರೂ ಅವಳು ಮೂಲತಃ ಸಹೃದಯಿ. ಒಮ್ಮೆ ʻಕಾಲು ಲೀಟರ್‌ ಹಾಲಿದೆ, ಕೊನ್ನಿ. ಐನೋರಿಗೆ ಕಾಪಿಕಾಸಿಕೊಡಿ. ನಿಮ್ಮಂಗೆ ಬೆಳ್ಳಗಾಯ್ತಾರೆʼ ಅಂತ ಹಾಲು ಕೊಟ್ಟಳು. ʻಯಾಕೆ?ʼ ಅಂತ ಕೇಳಿದರೆ ʻಯಾರೋ ಊರಿಗೆ ಹೋಗವ್ರೆ, ಹೆಚ್ಚಿತ್ತು ಕೊಟ್ಟೆʼ ಅಂದಳು. ಆಮೇಲೆ ನೆನಪಾಯಿತು, ವಾರದ ಮೊದಲು ಬ್ಯಾಂಕಿನಲ್ಲಿ ಅಕೌಂಟ್‌ ತೆಗೆಯಲು ಅವಳಿಗೆ ಸಹಾಯ ಮಾಡಿದ್ದೆ ಎನ್ನುವುದು. ಯಾರ ಸಹಾಯವನ್ನೂ ಸುಮ್ಮನೆ ಎಂದು ಭಾವಿಸುವ ಗುಣ ಅವಳದಲ್ಲ. ʻಅವರ ತಾವ ಬೇಕಷ್ಟು ದುಡ್ಡದೆ, ನಮಗೆ ವಸಿ ಕೊಡ್ಲಿʼ ಎಂದು ಕನಸು ಮನಸಲ್ಲೂ ಯೋಚಿಸುವವಳಲ್ಲ. ʻನಾವ್‌ ಪಡಕಂಡಿದ್ದಷ್ಟೆ ನಮಗೆʼ ಎನ್ನುವ ಜಾಯಮಾನ ಅವಳದು.
ಕೆಲವರನ್ನು ನೋಡಿದಾಗ ನಮಗೆ ಬೆರಗಾಗುವುದಿದೆ. ನಾನಾಗ ಸಂಶೋಧನೆ ಮಾಡುತ್ತಿದ್ದೆ. ಅದಕ್ಕೆ ಬೇಕಾದ ಪುಸ್ತಕಗಳಿಗಾಗಿ ಗ್ರಂಥಾಲಯದಲ್ಲಿ ಹುಡುಕಬೇಕಿತ್ತು. ಮಾನಸಗಂಗೋತ್ರಿಯ ಕನ್ನಡ ವಿಭಾಗದ ಗ್ರಂಥಾಲಯದಲ್ಲಿ ಒಬ್ಬರು ಇದ್ದರು. ಅವರು ಪ್ರಾಯಶಃ ಎಸ್‌ಎಸ್‌ಎಲ್‌ಸಿ ಪಾಸು ಮಾಡಿರಬೇಕು ಅಷ್ಟೆ. ಆದರೆ ಪುಸ್ತಕದ ವಿಷಯಕ್ಕೆ ಬಂದರೆ ಅದರಲ್ಲಿ ಬಹಳ ಪರಿಣಿತರು ಎನಿಸುತ್ತಿತ್ತು. ಪುಸ್ತಕದ ಹೆಸರು ಕೇಳಿದರೆ ಸಾಕು ಅದರ ಲೇಖಕರು ಯಾರು ಎನ್ನುವುದು ಅವರಿಗೆ  ತಿಳಿದಿರುತ್ತಿತ್ತು. ಅದು ಕತೆಯೋ, ಕಾವ್ಯವೋ, ವಿಮರ್ಶೆಯೋ ಎನ್ನುವುದನ್ನು ಹೇಳುತ್ತಿದ್ದರು. ಯಾವ ಪುಸ್ತಕ ಯಾವ ಬೀರುವಿನಲ್ಲಿದೆ ಎನ್ನುವುದನ್ನು ಅವರು ಕೂಡಲೇ ತಿಳಿಸುತ್ತಿದ್ದರು. ಅದು ಸಾಧಾರಣ ಪುಸ್ತಕವೋ ಅದರ ಹೊರಕವಚ ರಟ್ಟಿನದೋ ಅದರ ಗಾತ್ರವೆಷ್ಟು ಎಲ್ಲವೂ ಅವರಿಗೆ ತಿಳಿದಿರುತ್ತಿತ್ತು. ಒಮ್ಮೆ ಪುಸ್ತಕ ಹರಿಯುವ ಹಂತದಲ್ಲಿದ್ದರೆ ಸದ್ಯಕ್ಕೆ ಅದನ್ನು ಕೊಡುವಂತಿಲ್ಲವೆಂದು ಹೇಳುತ್ತಿದ್ದರು. ಕೆಲವು ಬಾರಿ ಪುಸ್ತಕ ಹುಡುಕಿ ಸಾಕಾಗಿ ಅವರ ಮೊರೆ ಹೋಗುವುದಿತ್ತು. ʻಯಾಕೆ ಇನ್ನೂ ಸಿಗಲಿಲ್ವಾ?ʼ ಎಂದು ನಗುತ್ತ ಬಂದು ಒಂದು ಕ್ಷಣದಲ್ಲಿ ಪುಸ್ತಕವನ್ನು ತೆಗೆದುಕೊಡುತ್ತಿದ್ದರು. ನಾವು ಹುಡುಕುತ್ತಿದ್ದ ಪುಸ್ತಕವನ್ನು ಈಗಾಗಲೇ ಯಾರಾದರೂ ಎರವಲು ಪಡೆದಿದ್ದರೆ ʻನಿಮಗೆ ಸಿಗಲ್ಲ ಮೇಡಂʼ ಎನ್ನುತ್ತಿದ್ದರು. ʻಯಾಕೆ?ʼ ಎಂದರೆ ಅಧ್ಯಾಪಕರೋ ಮೇಡಂದಿರೋ ತೆಗೆದುಕೊಂಡು ಹೋಗಿರುವ ವಿವರ ಅವರಿಗೆ ತಿಳಿದಿರುತ್ತಿತ್ತು.
ವಿದ್ಯಾರ್ಥಿಗಳಾಗಿದ್ದರೆ  ನಾಲ್ಕಾರು ದಿನಗಳಲ್ಲಿ ದೊರೆಯುತ್ತಿತ್ತು. ಅಧ್ಯಾಪಕ ವರ್ಗವಾದರೆ ಸಿಗುತ್ತಿರಲಿಲ್ಲ. ನಮಗೆ ಯಾರೆಂದು ತಿಳಿಯುವ ಕುತೂಹಲ. ಅವರು ಹೇಳುತ್ತಿರಲಿಲ್ಲ. ʻಹೇಳಿ ಪರವಾಯಿಲ್ಲ. ನಾನು ಹೋಗಿ ಅವರನ್ನು ಕೇಳುವುದಿಲ್ಲʼ ಎಂದು ಹೇಳಿದ ಮೇಲೆಯೇ ಅವರು ಯಾರೆಂದು ಹೇಳುತ್ತಿದ್ದರು. ಹಾಗಾಗಿ ಅವರು ಅಧ್ಯಾಪಕರಿಗೂ ಪ್ರಿಯವಾಗಿದ್ದರು. ಅಲ್ಲಿ ಕೆಲಸಮಾಡುತ್ತಿದ್ದವರು ನಿವೃತ್ತರಾದ ಮೇಲೆ ಅಲ್ಲಿಗೆ ಹೋದರೂ ಮೊದಲಿನಂತೆಯೇ ಪ್ರೀತಿಯಿಂದ ಕಾಣುತ್ತಿದ್ದರು. ʻಇಲ್ಲಿ ಕೂತ್ಗೊಂಡು ಓದಬಹುದುʼ ಎಂದು ಹೇಳುತ್ತಿದ್ದರು. ಅವರು ನಿವೃತ್ತರಾದ ಮೇಲೆ ಒಮ್ಮೆ ಯಾವುದೋ ಪುಸ್ತಕಕ್ಕಾಗಿ ಅಲ್ಲಿಗೆ ಹೋದಾಗ ಯಾರೋ ಹೇಳುತ್ತಿದ್ದರು, ʻಈಗ ಬೇಲೂರಯ್ಯ ಇಲ್ಲ, ಪುಸ್ತಕ ಹುಡುಕೋದು ಕಷ್ಟʼ ಅಂತ.

ನಮ್ಮನೆಗೆ ಒಬ್ಬಳು ಬಹಳ ಕಾಲ ಸೊಪ್ಪು ಕೊಡುತ್ತಿದ್ದಳು. ನಾನು ಒಳಗಡೆ ಕೆಲಸ ಮಾಡುತ್ತಿದ್ದರೆ ಕರೆಯುತ್ತಿದ್ದಳು. ಕೆಲವೊಮ್ಮೆ ನಮ್ಮವರು ʻಸೊಪ್ಪಿನವಳು ಕರೆಯುತ್ತಿದ್ದಾಳೆʼ ಎಂದು ಹೇಳುವುದಿತ್ತು. ಅವಳ ಬಳಿ ಇರುವ ಯಾವ ಸೊಪ್ಪು ಯಾವುದಕ್ಕೆ ಲಾಯಕ್ಕು ಎನ್ನುವುದನ್ನು ಹೇಳಿ ಸೊಪ್ಪಿನ ಕಟ್ಟನ್ನು ಕೊಡುತ್ತಿದ್ದಳು. ಒಮ್ಮೆ ತಿಂಗಳ ಕಾಲ ಅವಳು ಬಂದಿರಲಿಲ್ಲ. ʻಯಾಕೆ ತಿಂಗಳಿನಿಂದ ನೀವು ಬರಲಿಲ್ಲʼ ಎಂದು ಕೇಳಿದ್ದೆ. ʻಹೌದು ಕಣವ್ವ ನಮ್ಮತ್ತೆಗೆ ಉಸಾರಿರಲಿಲ್ಲʼ ಅಂದಿದ್ದಳು. ಆಮೇಲೆ ಬಡಾವಣೆ ಬೆಳೆಯಿತು. ಅವಳು ಬರುವುದು ಅಪರೂಪವಾಗಿ ನಿಂತೇಹೋಯಿತು. ಒಮ್ಮೆ ವಾಕಿಂಗಿಗೆ ಹೋಗುವಾಗ ಸರ್ಕಲ್ಲಿನಲ್ಲಿ ಅವಳು ಸೊಪ್ಪು ಮಾರುವುದನ್ನು ಗಮನಿಸಿದೆ. ಒಂದು ದಿನ ಅವಳು ನನ್ನನ್ನು ಕರೆದು ʻಸೊಪ್ಪು ತಕಳಿ. ಈ ಸೊಪ್ಪು ಬಾರಿ ಚೆನಾಗದೆʼ ಅಂತ ಕೊಟ್ಟಳು. ಇನ್ನೂ ಮೊಬೈಲ್‌ ಕೈಯಲ್ಲಿ ಇಲ್ಲದ ಕಾಲ. ʻದುಡ್‌ ತಂದಿಲ್ಲʼ ಅಂದೆ. ʻನಾಳೆ ಕೊಡಿʼ ಅಂದಳು. ʻನಾಳೆ ಬರದಿದ್ದರೆ?ʼ ಅಂದಿದ್ದಕ್ಕೆ ʻಯಾವತ್ತೋ ಕೊಡಿ ಹೋಗಿʼ ಅಂದಳು. ʻನನ್‌ ಹೆಸ್ರು ಗೊತ್ತಿದೆಯಾ? ಅಂದೆ. ʻಹೂಂ ಚಂದ್ರಮತಿʼ ಅಂದಳು. ʻಹೇಗೆ ನನ್‌ ಹೆಸ್ರು ಗೊತ್ತಿದೆ? ಅಂತ ಕೇಳಿದ್ದಕ್ಕೆ ʻಸ್ವಾಮಿಯೋರು ಕರೆಯದನ್ನ ಕೇಳಿಲ್ವಾ?” ಎಂದು ನಕ್ಕಿದ್ದಳು.

ಒಮ್ಮೆ ʻಕಾಲು ಲೀಟರ್‌ ಹಾಲಿದೆ, ಕೊನ್ನಿ. ಐನೋರಿಗೆ ಕಾಪಿಕಾಸಿಕೊಡಿ. ನಿಮ್ಮಂಗೆ ಬೆಳ್ಳಗಾಯ್ತಾರೆʼ ಅಂತ ಹಾಲು ಕೊಟ್ಟಳು. ʻಯಾಕೆ?ʼ ಅಂತ ಕೇಳಿದರೆ ʻಯಾರೋ ಊರಿಗೆ ಹೋಗವ್ರೆ, ಹೆಚ್ಚಿತ್ತು ಕೊಟ್ಟೆʼ ಅಂದಳು. ಆಮೇಲೆ ನೆನಪಾಯಿತು, ವಾರದ ಮೊದಲು ಬ್ಯಾಂಕಿನಲ್ಲಿ ಅಕೌಂಟ್‌ ತೆಗೆಯಲು ಅವಳಿಗೆ ಸಹಾಯ ಮಾಡಿದ್ದೆ ಎನ್ನುವುದು.

ಎಲ್ಲರನ್ನು ವಿಶ್ವಾಸದಿಂದ ಕಾಣುವ ಇಂತಹ ಜನ ಎಲ್ಲ ಕಡೆಯೂ ಇರುತ್ತಾರೆ. ನಮ್ಮೂರಿನಲ್ಲಿ ಮಾದು ಎನ್ನುವ ಒಬ್ಬ ವ್ಯಕ್ತಿ ಇದ್ದ. ಅವನು ಪ್ರತಿದಿನವೂ ಬೆಳಗ್ಗೆ ʻಅಮ್ಮಾ ಮಾದು ಬಂದ ದನ ಬಿಡ್ರೋʼ ಎನ್ನುತ್ತ ಬರುತ್ತಿದ್ದ. ಆರೆಂಟು ಮನೆಗಳ ದನಗಳನ್ನು ಮೇಯಿಸಲು ಹೊಡೆದುಕೊಂಡು ಹೋಗುತ್ತಿದ್ದ ಅವನಿಗೆ ಯಾರ ಮನೆಯ ಯಾವ ಆಕಳು ಯಾವಾಗ ಕರುಹಾಕುತ್ತದೆ, ಯಾರ ಎಮ್ಮೆ ಕರು ಎಷ್ಟು ದೊಡ್ಡದು ಎನ್ನುವ ವಿವರಗಳೆಲ್ಲವೂ ಬಾಯಿಯಲ್ಲಿ ಇರುತ್ತಿದ್ದವು. ʻಇವತ್ತು ಕೆಂಪಾಕಳು ಬಿಡುದು ಬ್ಯಾಡ್ರೋ ಮಲಿಗೆ ಹಾಲು ಇಳಸ್ದಾಂಗೆ ಕಾಣ್ತದೆ. ಕರು ಹಾಕಿದ್ರೂ ಹಾಕ್ತುʼ ಅಂತ ಅದನ್ನು ಕೊಟ್ಟಿಗೆಯಿಂದ ಹೊರಗೆ ಹೊಡೆದುಕೊಂಡು ಹೋಗಲು ಒಪ್ಪುತ್ತಿರಲಿಲ್ಲ. ಅವತ್ತೋ ಮಾರನೆಯ ಬೆಳಗ್ಗೆಯೋ ಆ ಆಕಳು ಕರು ಹಾಕುತ್ತಿತ್ತು. ಕೆಲವೊಮ್ಮೆ ಆಕಳು ಅಥವಾ ಎಮ್ಮೆ ಮೇಯಲು ಬಿಟ್ಟಾಗ ಕರು ಹಾಕಿದರೆ ಆ ಕರುವನ್ನು ತನ್ನ ಕಂಬಳಿಯಲ್ಲಿ ಸುತ್ತಿ ತರುತ್ತಿದ್ದ ನಮ್ಮ ಮಾದು. ʻಅದ್ಯಾಂಗೋ ಈ ಬಾರಿ ನನ್‌ ಲೆಕ್ಕಾಚಾರ ತಪ್ಪೋಯ್ತಲ್ರಾʼ ಅಂತ ಹೇಳುತ್ತ ಬರುವ ಅವನಿಗೆ ಕರುವಿಗೆ ಚಳಿಯಾಗಬಾರದೆನ್ನುವ ಕಾಳಜಿ. ಕರು ಹಾಕಿದ ಕೂಡಲೇ ಸಾಧಾರಣವಾಗಿ ಕರುವಿನ ಕೊಳಚೆಯನ್ನು (ಕಾಲುಗುರಿನ ಭಾಗ) ಕೊಯ್ಯುವ ರೂಢಿಯಿದೆ. ಅದನ್ನು ಅವನು ಮರೆಯುತ್ತಿರಲಿಲ್ಲ. ಹಾಗೆ ಇರುವ ಮಾದು ಗಿಣ್ಣು ಹಾಲು ಪ್ರಿಯ. ಯಾವಾಗ ಬರಲಿ ಎಂದು ಕೇಳಿ ಗಿಣ್ಣು ತಿನ್ನಲು ಬರುವುದಕ್ಕೆ ಮರೆಯುತ್ತಿರಲಿಲ್ಲ. ಉಮೇದು ಬಂದರೆ ಮನೆಯ ಅಂಗಳದಲ್ಲಿ ಎರಡು ದಿಗಣ ಹಾಕಿಯೇ ಹೋಗುವವ. ಮಕ್ಕಳಿಗೆ ಈ ಗುಟ್ಟು ಗೊತ್ತಿತ್ತು. ʻಮಾದು ಒಂದು ದಿಗಣ ಹಾಕುʼ ಅಂದರೆ ಸಾಕು. ʻಈಗ ಮಾದು ಮುದುಕಾಗಿ ಆಯ್ತು ಎಂಥ ದಿಗಣ ಹಾಕುದ್ರೋʼ ಅಂತ ಹೇಳುತ್ತಲೆ ಎರಡು ಹೆಜ್ಜೆ ಹಿಂದೆ ಮುಂದೆ ಅಂತ ಕುಣಿದೇ ಹೋಗುವ ಆಸಾಮಿ.
ಒಮ್ಮೆ ಮೈಸೂರಿನ ಸುದ್ದಿ ಹೇಳುವಾಗ ಮಾದು ಅಲ್ಲಿದ್ದ. ʻನಾನು ನಮ್‌ ಶಾನುಭೋಗ್ರ ಜತಿ ಮೈಸೂರ್ಗೆ ಹೋಗಿದ್ದೆ. ಅದೆಂಥ ಅರಮನಿ, ದೇವೇಂದ್ರನ ಲೋಕʼ ಅಂತ ಅವನು ಕಣ್ಣರಳಿಸಿ ಅಭಿನಯಿಸಿ ಹೇಳುವುದನ್ನು ಕೇಳಿದರೆ ಅರಮನೆಯ ವೈಭೋಗ ಪ್ರತ್ಯಕ್ಷವಾದಂತಹ ಬೆರಗು ಅವನ ಮುಖದಲ್ಲಿ. ಒಂದು ಕಾಲಕ್ಕೆ ಅವನು ನಮ್ಮೂರಿನ ತಳವಾರ ಆಗಿದ್ದವನಂತೆ. ಅವನ ವಯಸ್ಸು ಎಷ್ಟೆಂದು ಯಾರಿಗೂ ಗೊತ್ತಿಲ್ಲ. ನಮ್ಮತ್ತೆ ಹೇಳುತ್ತಿದ್ದರು. ʻನಾನು ಮದುವೆಯಾಗಿ ಇಲ್ಲಿಗೆ ಬಂದಾಗಲೇ ಮಾದು ಮುದುಕ ಆಗಿದ್ದʼ ಅಂತ. ಮೊಮ್ಮಕ್ಕಳ ಮದುವೆಯೂ ಆಗಿತ್ತು. ʻಮಾದು ನಿಂಗೆ ಎಷ್ಟು ವರ್ಷ?ʼ ಅಂತ ಕೇಳಿದರೆ, ʻಆಗಿರ್ಬೋದು ಎಪ್ಪತ್ತೋ ಎಂಬತ್ತೋʼ ಅನ್ನುವುದು ಅವನ ಉತ್ತರವಾಗಿತ್ತು. ಅಂಥ ಮಾದು ಕೂಡ ಒಂದಿನ ಸಾಯಲೇಬೇಕಲ್ಲ. ʻಮಾದು ಇಲ್ಲʼ ಅಂತ ಹೊರ ಊರಿನಲ್ಲಿರುವರಿಗೆ ಹೇಳಿದರೆ ʻಏನಾಗಿತ್ತು?ʼ ಎಂದು ಕೇಳುವವರೇ ಎಲ್ಲ. ʻಮಾದು ಸತ್ತುಹೋದ್ನಂತೆʼ ಅಂದರೆ ಊರಿನಲ್ಲಿ ಎಲ್ಲರಿಗೂ ಬೇಸರವೇ. ಅವನು ಯಾರಿಗೂ ಏನೂ ಅಲ್ಲ, ಕೇವಲ ದನಕಾಯೋನು. ಆದರೆ ಅವನ ಬಾಂಧವ್ಯ ಎಲ್ಲರೊಂದಿಗೂ. ಹಾಗಿದ್ದ ನಮ್ಮ ಮಾದು.

 ಅದೊಂದು ದಿನ ನಾನು ಊರಿನಲ್ಲಿ ಅಂಗಳವನ್ನು ಗುಡಿಸುತ್ತಿದ್ದೆ. ಆಗ ಬಂದ ಲಕ್ಷ್ಮಿ ʻಬಿಡಿ, ಇಲ್ಲಿ ಕೊಡಿ ಹಿಡಿನ. ನಾನು ಗುಡಿಸ್ತೆʼ ಅಂತ ನನ್ನ ಕೈಯಿಂದ ಪೊರಕೆಯನ್ನು ಕಸಿದೇಬಿಟ್ಟಿದ್ದಳು. ಅವಳಾಗಿರಲಿ ನಮ್ಮನೆಗೆ ಬರುವ ತಿಮ್ಮಿಯೇ ಆಗಿರಲಿ ಅವರೆಲ್ಲ ಇರುತ್ತಿದ್ದುದೇ ಹಾಗೆ. ಬಚ್ಚಲಮನೆ ಚೊಕ್ಕ ಮಾಡುತ್ತಿದ್ದರೆ, ಜಗಲಿಯನ್ನು ಬಟ್ಟೆಯಲ್ಲಿ ಒರೆಸುತ್ತಿದ್ದರೆ, ಪಾತ್ರೆಗಳನ್ನು ತೊಳೆಯುತ್ತಿದ್ದರೆ    ನಮ್ಮನೆಗೆ ಬಂದ ಅವರೆಲ್ಲ ನಮಗೆ ಅದನ್ನು ಮುಂದುವರಿಸಲು ಕೊಡದೆ ಆ ಕೆಲಸವನ್ನು ಮಾಡಿ ಮುಗಿಸುತ್ತಿದ್ದರು. ʻಲಕ್ಷ್ಮಿ ಏನು ಅಪರೂಪಕ್ಕೆ ಈ ಕಡಿಗೆ ಬಂದಿದೇಯೆ?ʼ ಎಂದರೆ ʻಇವತ್ತು ಕೆಲ್ಸ ಇರಲಿಲ್ಲ. ಬಿಡಾರ್ದಲ್ಲಿ ಕೂತಕಳದು ಬೇಜಾರು ಅಂತ ಈ ಕಡಿಗೆ ಬಂದೆʼ ಎನ್ನುತ್ತಿದ್ದಳು. ಕೆಲಸ ಮುಗಿದ ಮೇಲೆ ʻನಂಗೆ ಒಂದು ಕುಡ್ತೆ ಚಾಮಾಡಿಕೊಡ್ರೋʼ ಎನ್ನುತ್ತಿದ್ದಳು. ಚಾ ಕುಡಿದು ಒಂದು ಗಳಿಗೆ ಸುದ್ದಿ ಹೇಳಿ ಹೊರಡುತ್ತಿದ್ದಳು. ಹೀಗೆ ಬಂದಾಗ ʻಅಕ್ಕಿ ಚೊಕ್ಕ ಮಾಡಿದ್ದು ಖರ್ಚಾಗದೆ. ಅಕ್ಕಿ ಚೊಕ್ಕ ಮಾಡಿಕೊಡುʼ ಅಂದರೆ ʻಇವತ್ತು ಆಗುದಿಲ್ಲ. ನಾಳೆ ಅಥ್ವಾ ನಾಡ್ದಿಗೆ ಬತ್ತೆʼ ಅನ್ನುತ್ತಿದ್ದಳು. ʻಅಕ್ಕಿ ಅಪೂಟು ಇಲ್ಲ ಮಾರಾಯ್ತಿʼ ಅಂದ್ರೆ ʻಆಯ್ತು ಇವತ್ತು ಎರಡು ದಿನಕ್ಕೆ ಆಗಷ್ಟು ಚೊಕ್ಕ ಮಾಡ್ತೆ, ಮೂರ್ದಿವ್ಸ ಬಿಟ್ಟು ಬತ್ತನ್ರೋʼ ಎನ್ನುತ್ತಿದ್ದಳು.

ಹೀಗೆ ಊರಿನ ಕೆಲವು ಮನೆ ಅವರಿಗೆ ಹೊಕ್ಕು ಹೊರಡುವ ಜಾಗ. ಮನೆಯವರೊಂದಿಗೆ ಒಂದಿಷ್ಟು ಬಾಂಧವ್ಯ ಅವರದು. ಕಡುಬು ಕಜ್ಜಾಯ ಮಾಡಿದಾಗ ಆ ಮನೆಯ ಹೆಂಗಸರು ಅವಳಿಗಾಗಿ ಕಾದಿಡುವುದೂ ಇದೆ. ʻಇವತ್ತು ಬಂದ್ಯಾ? ನಿನ್ನಿವರಿಗೆ ನೀ ಬತ್ತೆ ಅಂತ ಹೋಳ್ಗೆ ಇಟ್ಗಂಡು ಕಾದೆ ಮಾರಾಯ್ತಿ, ನೀ ಬರಲಿಲ್ಲʼ ಅಂತ ಅವಳಿಗೆ ಹೇಳುವುದಿದೆ. ʻಹಾದನ್ರಾ? ನಿನ್ನಿ ಇಲ್ಲೆ ಮ್ಯಾಲೆ ಹೋದೆ. ಗೊತ್ತಾಗಿದ್ರೆ ಬಂದು ತಿಂದೇ ಹೋಗ್ತಿದ್ದೆ. ಈ ಸರಿ ತಪ್ಪೋಯ್ತು. ಮತ್ತೆ ಮಾಡ್ದಾಗ ತಿನ್ನುದು ಇದ್ದೇ ಇದೆ ಬಿಡಿʼ ಎಂದು ನಗುತ್ತಿದ್ದಳು. ಹೀಗೆ ಯಾವುದೋ ಊರಿನಿಂದ ಬಂದು ತಲೆಮಾರುಗಳಿಂದ ಆಯಾಯಾ ಊರಿನ ಭಾಗವಾಗಿರುವ ಈ ಜನ ಎಲ್ಲರೊಂದಿಗೆ ಹೊಂದಿಕೊಂಡು ಬಾಳ್ವೆ ಮಾಡುತ್ತ ನಮ್ಮ ನೆನಪಿನಲ್ಲಿ ಖಾಯಂ ಆಗಿ ಉಳಿಯುವವರು. ʻಅಮ್ಮ ನಾವೆಲ್ಲ ಹೊಲ ಮನಿ ಇದ್ದೋರಲ್ಲ. ಯಾವ್ದೋ ಊರಲ್ಲಿ ಬದುಕೋರು. ನಿಮ್ಮಂತೋರ ಮನಿ ಕೆಲ್ಸ ಮಾಡಿರೆ ನಮ್ಮ ಬದ್ಕು. ನಮ್ಮಪ್ನೇ ಈ ಊರಿಗೆ ಬಂದಂವ. ಈಗ ಇದೇ ನಮ್ಮೂರುʼ ಎನ್ನುತ್ತ ಬದುಕನ್ನು ಕಟ್ಟಿಕೊಂಡವರು. ತಮ್ಮ ಬೇರುಗಳನ್ನು ಮರೆಯದೆ, ವರ್ಷಕ್ಕೊಮ್ಮೆ ಊರಿಗೆ ಹೋಗಿ ತಮ್ಮ ಬಂಧುಬಾಂಧವರನ್ನು ಕಂಡು ತಮ್ಮೂರಿನ ದೇವರ ಪೂಜೆ ಮಾಡಿಸಿಕೊಂಡು ಬರುತ್ತಾರೆ. ತಮ್ಮ ಸ್ಥಿತಿಗೆ ಕೊಂಚವೂ ಕೊರಗದೆ ಬದುಕನ್ನು ಇದ್ದಂತೆ  ಸ್ವೀಕರಿಸುವ ಇವರನ್ನು ಕಂಡರೆ ಬೆರಗು ಹುಟ್ಟದೆ ಇರದು.