ಆಕೆ ಈ ಹಿಂದೆ ನಮ್ಮ ತಂಡದಲ್ಲಿ ನಟಿಸಿದ್ದ ನಟಿ. ಆಕೆಗೆ ಮೊದಲು ತುಂಬ ನೀಳ ಮತ್ತು ದೃಢವಾದ ಕಾಯ ಇತ್ತು. ನಡುಮಧ್ಯೆ ಕೆಲವು ಷೋಗಳಿಗೆ ಆಕೆ ಗೈರು. ಯಾಕೆ ಎಂದು ವಿಚಾರಿಸಿದಾಗ ಆಕೆ ತಣ್ಣನೆಯ ದನಿಯಲ್ಲಿ ‘ ಸರ್ ನನಗೆ ಕ್ಯಾನ್ಸರ್ ಆಗಿದೆ..ಟ್ರೀಟ್ಮೆಂಟ್ ತಗೋತಿದ್ದೀನಿ.. ಸೊ ಬರಲಿಕ್ಕೆ ಆಗ್ತಿಲ್ಲ..’. ಅಂದರು. ಆ ಹೊತ್ತು ಅದು ನನ್ನಲ್ಲಿ ಗಾಬರಿ ಹುಟ್ಟಿಸಿದ ಉತ್ತರವಾಗಿತ್ತು. ನನ್ನ ದನಿಯಲ್ಲಿದ್ದ ಗಾಬರಿ ಗುರುತಿಸಿ ಆಕೆ ಮತ್ತೆ ‘ ಸರ್ ಅಷ್ಟು ಸೀರಿಯಸ್ ಏನಿಲ್ಲ’ ಎಂದರು.
ರಂಗ ವಠಾರ ಅಂಕಣದಲ್ಲಿ ಎನ್. ಸಿ. ಮಹೇಶ್ ಬರಹ ಇಂದಿನ ಓದಿಗಾಗಿ.
ಸುಮಾರು ವರ್ಷಗಳ ಹಿಂದಿನ ಸಂದರ್ಭ. ಆ ಹೊತ್ತು ನಾನು ಬಾಯಿಬಿಟ್ಟರೆ ‘ನಾಟಕ ನಾಟಕ’ ಎನ್ನುತ್ತಿದ್ದೆ. ನಾನು ಹೀಗೆ ಮಿಡುಕುತ್ತಿದ್ದದ್ದು ಯಾರ್ಯಾರ ಕಿವಿಗೆ ಮುಟ್ಟಿತೊ ಗೊತ್ತಿಲ್ಲ.. ಒಮ್ಮೆ ಒಬ್ಬರು ಕನ್ನಡ ಪ್ರೊಫೆಸರ್ ನನ್ನನ್ನು ಹೀಗೇ ಮಾತಿಗೆ ನಿಲುಕಿಸಿಕೊಂಡು ‘ಇಂಥದ್ದೊಂದು ಸಭಾಂಗಣ. ಇಂಥ ದಿನ ನಿಮಗೊಂದು ಸ್ಲಾಟ್ ನಿಗದಿ ಮಾಡಿದ್ದೀನಿ. ನಾಟಕದ ಬಗ್ಗೆ ನೀವು ಮಾತಾಡ್ತೀರಾ..?’ ಎಂದು ಕೇಳಿದರು. ನಾನು ಖುಷಿಯಲ್ಲಿ ಮತ್ತು ಹುಮ್ಮಸ್ಸಿನಲ್ಲಿ ಮರುಯೋಚಿಸದೆ ‘ಆಗಲಿ ಸರ್..’ ಎಂದು ಒಪ್ಪಿಗೆ ಕೊಟ್ಟುಬಿಟ್ಟೆ.
ಪುಸ್ತಕಗಳನ್ನು ಓದಿಕೊಂಡು ನಾಟಕ ಲೋಕದ ಬಗ್ಗೆ ಮಾತಾಡುವುದು ಬೇರೆ. ಪ್ರಾಯೋಗಿಕವಾಗಿ ಅದರಲ್ಲಿ ತೊಡಗಿಸಿಕೊಂಡು ಮಾತಾಡುವುದು ಬೇರೆ. ಅಂದು ನಾನು ಮಾತಾಡಿದ ಬಗೆಯನ್ನು ಇಂದು ಮೆಲುಕು ಹಾಕುತ್ತ ಯೋಚಿಸುತ್ತಿದ್ದೇನೆ. ನನಗೆ ವ್ಯತ್ಯಾಸ ಸ್ಪಷ್ಟವಾಗುತ್ತಿದೆ. ಅಂದು ನಾನು ನಾಟಕ ರಂಗದಲ್ಲಿ ಪ್ರಾಯೋಗಿಕ ಆಗಿರಲಿಲ್ಲ. ನನ್ನ ಮಾತು ಕೇವಲ ಪುಸ್ತಕದ ಸರಕಾಗಿತ್ತು. ನಾಟಕ ಲೋಕದ ಬಗ್ಗೆ ತುಂಬ ಭಾವುಕವಾಗಿ, ಅದರ ಬಗ್ಗೆ ಪ್ರಶಂಸೆಯಿಂದ ಮಾತಾಡಿದ್ದೆ. ನನ್ನ ಮಾತುಗಳನ್ನು ಕೂತು ಕೇಳುತ್ತಿದ್ದ ರಂಗಭೂಮಿಯ ಕೆಲ ಹಿರಿಯ ತಲೆಗಳು ಯಾಕೋ ಒಳಗೊಳಗೇ ನಗುತ್ತಿದ್ದಂತೆ ಇತ್ತು. ಅದು ಮೆಚ್ಚುಗೆಯ ನಗು ಎಂದೇ ನನಗೆ ಆ ಹೊತ್ತು ಅನಿಸುತ್ತಿತ್ತು. ಆ ನಗು ಇಂದು ನನಗೆ ಬೇರೆ ಚಿತ್ರ ಕಟ್ಟಿಕೊಡುತ್ತಿದೆ.
ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಎನ್ನುವ ಮಾತಿಗೂ ರಂಗಭೂಮಿಗೂ ಸಾಮ್ಯತೆ ಇದೆ ಎಂದು ನನಗೆ ಈಚೀಚೆಗೆ ಅನಿಸಲು ಶುರುವಾಗಿದೆ. ಬೆಟ್ಟಕ್ಕೆ ಭೇಟಿಕೊಡುವುದು ಮತ್ತು ಹತ್ತುವುದು ಅಕೇಷನಲ್. ಬೆಟ್ಟದಂತೆಯೇ ರಂಗಭೂಮಿಯ ಸೆಳವು ಮತ್ತು ಮಾಂತ್ರಿಕತೆಗೆ ಸಿಕ್ಕು ತೀರಾ ಹತ್ತಿರಕ್ಕೆ ಹೋದರೆ ಅದರ ರುದ್ರಸೌಂದರ್ಯದ ಅರಿವಾಗುತ್ತದೆ.
ನಾಟಕದ ಬಗ್ಗೆ ಗೀಳು ಹತ್ತಿಸಿಕೊಳ್ಳುವುದರ ಜೊತೆಗೆ ಸಂಜೆ ಬಿಡುವು ಮಾಡಿಕೊಂಡು ತಮ್ಮ ಮನೋಧರ್ಮಕ್ಕೆ ಒಗ್ಗುವ ನಾಟಕ ಆಯ್ಕೆ ಮಾಡಿಕೊಂಡು ಹೋಗಿ ಟಿಕೆಟ್ ಖರೀದಿಸಿ ಒಂದೂವರೆ ಗಂಟೆ ಕೂತು ನಾಟಕ ನೋಡಿ ಬರುವುದು ಬೇರೆ ಬಗೆ. ನಾಟಕ ಹಿಡಿಸಿದರೆ ಚೆನ್ನ, ಇಲ್ಲದಿದ್ದರೆ ಒಂದೆರಡು ವ್ಯಂಗ್ಯದ ಮಾತಾಡಿ ಮನೆ ದಾರಿ ಹಿಡಿದರೆ ಅಲ್ಲಿಗೆ ಮುಗಿಯಿತು. ಮುಂದೆ ಆ ತಂಡದ ಪ್ರದರ್ಶನಗಳಿಗೆ ಹೋಗಬೇಕೇ ಬೇಡವೇ ಎಂಬ ಲೆಕ್ಕಾಚಾರ ನಂತರ ಸುಳಿಯುವ ವಿಚಾರ. ಅಷ್ಟರಮಟ್ಟಿಗೆ ಪ್ರೇಕ್ಷಕ ನಿರಾಳ.
ಕೆಲವರು ನನ್ನಂಥವರು ನಾಟಕ ಲೋಕಕ್ಕೆ ಮೊದಲು ಪ್ರೇಕ್ಷಕರಾಗಿ ಉಳಿದವರು ಯಾಕೋ ಕೊಂಚ ಮುಂದೆ ಸಾಗಲು ಯೋಚಿಸುತ್ತೇವೆ. ಚಿಕ್ಕಂದಿನಲ್ಲಿ ನನಗೆ ನಾಟಕ ಅಂದರೆ ನಮ್ಮೂರು; ಆ ಊರಿನಲ್ಲಿ ಪೌರಾಣಿಕ ನಾಟಕ ಕಲಿಸುತ್ತಿದ್ದ ನನ್ನ ಅಜ್ಜ; ಅವರು ಸಂಜೆ ಹೊತ್ತು ಹಳ್ಳಿಯಲ್ಲಿ ರೈತಾಪಿ ಜನರನ್ನ ಕೂಡಿಕೊಂಡು ದೇವಸ್ಥಾನದಲ್ಲಿ ಲೆಗ್ ಹಾರ್ಮೋನಿಯಂ ತುಳಿಯುತ್ತ ನಾಟಕ ಕಲಿಸುತ್ತಿದ್ದದ್ದನ್ನು ಕಾಣುವುದೇ ಒಂದು ಚೆಂದ ಇತ್ತು. ನಾಟಕದ ದಿನ ಹಳ್ಳಿಗೆ ಲಾರಿಯಲ್ಲಿ ಅದ್ಧೂರಿ ಸೆಟ್ಸ್ ಬರುವುದು…. ಸಂಜೆಯ ಹೊತ್ತಿಗೆ ಅದು ಲೈಟಿಂಗ್ ನಲ್ಲಿ ಕಂಗೊಳಿಸುವುದು.. ಮೈಕ್ ಸೆಟ್ ನವರು ಊರಿಗೆಲ್ಲ ಕೇಳಿಸುವಂತೆ ಕಪ್ಪು ತಟ್ಟೆಗಳನ್ನು ತಿರುಗಿಸುತ್ತ ‘ಮೂಷಕ ವಾಹನ ಮೋದಕ ಹಸ್ತ.. ಚಾಮರ ಕರ್ಣ ವಿಳಂಬಿತ ಸೂತ್ರ..’ ಪಿ.ಬಿ ಶ್ರೀನಿವಾಸ್ ಅವರ ಹಾಡು ಹಾಕುವುದು.. ನಂತರ ಬಬ್ರುವಾಹನ ಚಿತ್ರದ ‘ಯಾರು ತಿಳಿಯರು ನಿನ್ನ ಭುಜಬಲದ ಪರಾಕ್ರಮ..’ ಹಾಡು. ಹೀಗೆ ಒಂದರಿಂದ ಒಂದು. ಸ್ಟೇಜ್ ಎದುರು ಗುಂಡಿ ತೋಡಿ ಅದರ ಒಳಗೆ ಲೆಗ್ ಹಾರ್ಮೋನಿಯಂ ಇಳಿಸಿದ ನಂತರದಲ್ಲಿ ನನ್ನ ಅಜ್ಜ ಮಿನುಗುವ ಸಿಲ್ಕ್ ಜುಬ್ಬ ಧರಿಸಿ ಪಂಚೆ ಉಟ್ಟು ಬಂದು ತನ್ನ ಸಹ ವಾದ್ಯಗಾರರಿಗೆ ಹಾರ್ಮೋನಿಯಂ ಮನೆಗಳನ್ನು ಒತ್ತಿ ಶೃತಿ ಕೊಟ್ಟು ಅವರು ಶೃತಿ ಮಾಡಿಕೊಂಡ ಮೇಲೆ ನಾಟಕ ಶುರುವಾಗುತ್ತಿತ್ತು. ಸಂಗೀತಕ್ಕೇ ಪ್ರಾಧಾನ್ಯತೆ. ನಟರು ಕೆಟ್ಟದಾಗಿ ಅಥವಾ ಚೆನ್ನಾಗಿ ಹಾಡುವುದು ಬೇರೆ ಮಾತು. ತಮಗೆ ಪ್ರಾಂಪ್ಟ್ ಮಾಡಲು ಸೈಂಡ್ ವಿಂಗ್ಸ್ ನಲ್ಲಿ ಕೆಲವರನ್ನ ನೇಮಿಸಿಕೊಂಡು ಡೈಲಾಗ್ ಹೇಳುವ ಕ್ರಮ, ಪ್ರಾಂಪ್ಟ್ ಮಾಡುವವರೂ ಕೈಕೊಟ್ಟಾಗ ನೇರವಾಗಿ ಹಾರ್ಮೋನಿಯಂ ಮೇಷ್ಟ್ರಿಗೆ ಎಲ್ಲರಿಗೂ ಕೇಳಿಸುವಂತೆಯೇ ಕೇಳುವ ದಿಟ್ಟತೆ.. ಅದು ನಾಟಕ. ರಾತ್ರಿಯಿಂದ ಬೆಳಗ್ಗೆವರೆಗೆ ಒಂದು ಸಂಭ್ರಮ. ಅದು ಮುಗಿದ ಮೇಲೆ ನಾಟಕದಲ್ಲಿ ಚೆನ್ನಾಗಿ ಹಾಡಿದವರು ಊರಲ್ಲಿ ಕೆಲ ದಿನ ಹೆಜ್ಜೆ ಕದಲಿಸುವ ಬಗೆಯೇ ಬದಲಾಗಿರುತ್ತದೆ. ಅಂದರೆ ಅದರಲ್ಲಿ ಒಂದು ಬಗೆಯ ಗತ್ತು, ಪ್ರೌಢಿಮೆ ಬೆರೆತಿರುತ್ತಿತ್ತು. ಇದೂ ಕೆಲ ದಿನ ಅಷ್ಟೇ. ಬದುಕು ಮತ್ತೆ ಯಥಾಪ್ರಕಾರದ ಹಳಿಗೆ. ಮುಂದೆ ಮತ್ತದೇ ಹಳ್ಳಿ ಜಗಳಗಳು, ರಾಜಕಾರಣ, ಪಂಚಾಯಿತಿಗಳು ಇತ್ಯಾದಿ. ಮತ್ತೆ ಮಳೆಗಾಲ ಕಳೆದು ನಾಟಕ ಆಡಬೇಕು ಎಂದು ಮತ್ತೆ ನಿರ್ಧಾರವಾಗುವವರೆಗೂ ಅಲ್ಲಿನವರು ಆರಾಮಾಗಿರುತ್ತಿದ್ದರು. ಇದು ನಾನು ಕಂಡುಕೊಂಡಿದ್ದ ಚಿತ್ರ.
ಈ ಚಿತ್ರವನ್ನು ಸಂಪೂರ್ಣ ಕಲಕಿ ನನ್ನನ್ನು ಕೊಂಚ ಗಂಭೀರಗೊಳಿಸಿದ್ದು ಕಾಲೇಜು. ಅಲ್ಲಿಯ ಪ್ರೊಡಕ್ಷನ್ ಗಳು ಬೇರೆ ರೀತಿ ಇದ್ದವು. ಸ್ಪಾಟು, ಬ್ಲಾಕಿಂಗ್ ಇತ್ಯಾದಿ ಎಲ್ಲದರ ಜೊತೆಗೆ ವಸ್ತುಗಳನ್ನು ನಾಟಕಕಾರರು ನಿರ್ವಚಿಸುತ್ತಿದ್ದ ರೀತಿ ನನಗೆ ಮತ್ತೊಂದು ಬಗೆಯ ಪಾಠದಂತೆ ಇತ್ತು. ಆ ಹೊತ್ತಿಗೆ ಅದು ಬೆರಗು. ಅದೊಂದು ಬಗೆಯಲ್ಲಿ ಗುಂಗು ಹತ್ತಿಸಿದ ಕಾಲ. ಅಂತರ ತರಗತಿಯ ಸ್ಪರ್ಧೆಗಳು ಜೋರಾಗಿದ್ದ ಕಾಲ ಅದು. ಹುಡುಗರ ಉತ್ಸಾಹ ಕಣ್ಣಿಗೆ ರಾಚುವ ಹಾಗಿದ್ದ ಘಟ್ಟ. ನನ್ನನ್ನು ನಾನು ಇಲ್ಲಿಗೇ ಸೀಮಿತ ಮಾಡಿಕೊಂಡಿದ್ದರೆ ಬಹುಶಃ ಚಿತ್ರ ಬದಲಿಸುತ್ತಿರಲಿಲ್ಲವೇನೋ. ನಾಟಕದ ಸೆಳವು ಮತ್ತು ಅದರ ಮಾಂತ್ರಿಕತೆ ನನ್ನನ್ನು ಮತ್ತಷ್ಟು ಮುಂದಕ್ಕೆ ಹೆಜ್ಜೆ ಕದಲಿಸಲು ಪ್ರೇರೇಪಿಸಿತು.
ನಾಟಕ ರಂಗದಲ್ಲಿ ನನ್ನ ಸಾಧ್ಯತೆ ಏನು? ನಟನೆ ಕಷ್ಟ. ರಂಗದ ಮೇಲೆ ನಟಿಸುವುದು ಬೇರೆ ಬಗೆಯ ಶಿಸ್ತು ಬಯಸುತ್ತದೆ. ನಾನು ನನ್ನ ಒಳಗೆ ತುಂಬ ಸ್ಪಷ್ಟವಾಗಿ ಮಾತಾಡಿಕೊಂಡಷ್ಟು ನಿಚ್ಚಳವಾಗಿ ರಂಗದ ಮೇಲೆ ಮಾತಾಡಲಾರೆ ಅಂತ ತಿಳಿಯಿತು. ನಾನು ಒಂದು ರೀತಿ ಅಂತರ್ಮುಖಿ. ನನ್ನ ಮಾತುಗಳು ನನಗಷ್ಟೇ ಕೇಳಿಸುವಂತೆ ಮಾತಾಡುವ ಜೀವಿ ನಾನು. ಇದನ್ನು ನಾನು ಗುರುತಿಸಿಕೊಂಡಿರದ ಹೊತ್ತು ರಂಗದ ಮೇಲೆ ನಾನು ನಟನಾದದ್ದೂ ಇದೆ. ಅದಕ್ಕಾಗಿ ಸಿದ್ಧತೆ ನಡೆಸಿ ಚೆನ್ನಾಗಿ ನಟಿಸಿದ್ದೂ ಇದೆ. ಆದರೂ ಆಳದಲ್ಲಿ ‘ಈ ಪ್ರಾಕಾರ ನನ್ನದಲ್ಲ..’ ಎನಿಸುತ್ತಲೇ ಇತ್ತು. ಹಾಗಾದರೆ ಮತ್ತೇನು ಎಂದು ಕೇಳಿಕೊಂಡಾಗ ತಿಳಿದದ್ದು ನನಗೆ ಬರವಣಿಗೆ ಬಗೆಗೆ ಇದ್ದ ಪ್ರೀತಿ. ನಾಟಕಗಳನ್ನ ಬರೆಯಬೇಕು ಎಂದುಕೊಂಡು ಬರೆಯಲು ಆರಂಭಿಸಿಯೇ ಬಿಟ್ಟೆ. ಅಲ್ಲಿಂದ ಶುರುವಾಯಿತು ಚಕಾರ. ಬರೀ ದೃಶ್ಯಗಳನ್ನ ಜೋಡಿಸಿದರೆ ಅದು ನಾಟಕ ಆಗುವುದಿಲ್ಲ ಎಂಬುದು ಮೊದಲ ಚಕಾರ. ಯಾವುದು ಮತ್ತು ಹೇಗೆ ನಾಟಕವಾಗುತ್ತದೆ ಎಂಬುದರ ಬಗ್ಗೆ ಹಲವರು ಮಾತಿಗೆ ಆರಂಭಿಸಿದರು. ನಾನು ಬರೆದದ್ದಕ್ಕೆ ಪ್ರತಿಕ್ರಿಯೆಯಾಗಿ ಅವರ ಮಾತುಗಳು ಹೊಮ್ಮುತ್ತಿದ್ದವು. ಈ ಘಟ್ಟದಲ್ಲಿ ನನಗೆ ಒಳ್ಳೆಯ ಮೇಷ್ಟ್ರುಗಳು ಸಿಕ್ಕಿ ಎಲ್ಲ ಅರ್ಥವಾಗುವಂತೆ ತಿದ್ದಿ ಹೇಳುತ್ತಿದ್ದರು. ಥಿಯರಿಟಿಕಲ್ ಆಗಿ ಅವರೆಲ್ಲರಿಂದ ನಾನು ಅರ್ಥೈಸಿಕೊಂಡದ್ದು ಹೆಚ್ಚು. ನಾಟಕದ ಬಗೆಗೆ ಒಂದು ಗಟ್ಟಿ ಆವರಣವನ್ನು ಅವರೆಲ್ಲ ಕಟ್ಟಿಕೊಟ್ಟರು.
ಈ ಆವರಣದ ಅನುಸಾರವಾಗಿಯೇ ತುಂಬ ಗಂಭೀರವಾಗಿ ನಾನೂ ನಾಟಕ ಬರೆದಾಗ ಅದಕ್ಕೆ ಸರಿಯಾದ ಸ್ವಾಗತ ಸಿಗಲಿಲ್ಲ. ನಾನು ಅನಿಸಿದ್ದೆಲ್ಲ ಬರೆಯಬಹುದು; ಆದರೆ ಅದೆಲ್ಲವನ್ನು ರಂಗದ ಮೇಲೆ ತರುವ ಕಷ್ಟವೂ ಒಂದಿರುತ್ತದೆ ಎಂಬುದನ್ನು ನಾನು ಬರೆಯುವಾಗ ಯೋಚಿಸಿಯೂ ಇರಲಿಲ್ಲ. ನಾಟಕ ಮೊದಲಿಗೆ ಬರವಣಿಗೆ ಹೇಗೋ ಹಾಗೇ ಅದು ಇನ್ವೆಸ್ಟ್ಮೆಂಟ್ ಕೂಡ ಹೌದು. ದುಡ್ಡು ಹಾಕುವವರು ಅದನ್ನು ಹಿಂದಿರುಗಿ ಪಡೆಯುವ ಬಗೆ ಯೋಚಿಸುವುದು ಸಹಜ. ನಾಟಕಕಾರನ ನಾಟಕ ಇನ್ವೆಸ್ಟ್ ಮೆಂಟ್ ದೃಷ್ಟಿಯಿಂದ ನಿರ್ದೇಶಕನ ಕೈಗೆ ಸಿಕ್ಕು ವಿನ್ಯಾಸ ಬದಲಿಸಿಕೊಳ್ಳುವುದು, ಮತ್ತು ಆ ವಿನ್ಯಾಸವನ್ನು ನಿರ್ದೇಶಕ ‘ಕ್ರಿಯೇಟಿವ್’ ಎಂದು ಕರೆಯುವುದು – ಈ ಎಲ್ಲವೂ ನಡೆಯುತ್ತದೆ. ನಾಟಕ ಬರೆವವನು ಬರೆದುಕೊಟ್ಟು ಮೂಕಪ್ರೇಕ್ಷಕನಾಗಬೇಕು. ಅಥವಾ ಹಾಗಾಗಲು ಸಾಧ್ಯವಿರುವವನು ಮಾತ್ರ ನಾಟಕ ಬರೆಯಬೇಕು. ಹಠ ಹಿಡಿದರೆ ನಾಟಕಗಳು ರಂಗಕ್ಕೆ ಬರುವುದು ಕಷ್ಟ. ರಂಗಭೂಮಿಯಲ್ಲಿ ಮೊದಲು ನಾಟಕಕಾರ ರಾಜಿಗೆ ಬೀಳಬೇಕು. ಇಲ್ಲದಿದ್ದರೆ ತಾನು ಬರೆದದ್ದು ರಂಗದ ಮೇಲೆ ಘಟಿಸುವುದೇ ಇಲ್ಲ.
ಮತ್ತೊಂದು ವರ್ಗ ಇದೆ. ಅವರ ವಾದ ಬೇರೆ. ಗಂಭೀರ ನಾಟಕಗಳನ್ನ ನೋಡುವ ಮಂದಿ ಇಂದು ಯಾರಿದ್ದಾರೆ? ಇದು ತತ್ವ ಸಿದ್ಧಾಂತಗಳ ಕಾಲ ಅಲ್ಲ. ಜನ ನಗಲಿಕ್ಕೆ ಬಯಸ್ತಾರೆ. ಹಾಗಾಗಿ ಕಾಮಿಡಿಗಳನ್ನ ಮಾಡಬೇಕು.. ಎಂದು ತಮ್ಮ ಲೋಕ ದೃಷ್ಟಿಯ ಸರ್ವೆಯಲ್ಲಿ ಕಂಡದ್ದನ್ನು ಹೇಳಿ ಹುರಿದುಂಬಿಸುತ್ತಾರೆ. ಅಥವಾ ಕಡೇಪಕ್ಷ ಗಂಭೀರ ನಾಟಕಗಳ ಬಗೆಗೆ ಅನುಮಾನಗಳನ್ನು ಹುಟ್ಟುಹಾಕುತ್ತಾರೆ.
ನಾಟಕಕಾರರನಿಗೆ ಇಷ್ಟಕ್ಕೂ ಬೇಕಿರುವುದು ಏನು? ಗಂಭೀರನಾಟಕಗಳನ್ನು ರಂಗಕ್ಕೆ ತರುವಾಗ ದೊಡ್ಡ ಬಜೆಟ್ ಸಲುವಾಗಿ ಕೆಲವು ಏನು ಮಾಡಿದರೂ ರಂಗವೇರುವುದೇ ಇಲ್ಲ. ಆಗ ನಾಟಕಕಾರನಿಗೆ ಕಾಮಿಡಿಗಳಾದರೂ ಚಿಂತೆ ಇಲ್ಲ ಅನಿಸುತ್ತದೆ. ಆದರೆ ನಮ್ಮಲ್ಲಿ ಇಂದಿಗೂ ಕಾಮಿಡಿಗಳ ಬಗೆಗೆ ಒಂದು ನಂಬಿಕೆ ಪ್ರಚಲಿತದಲ್ಲಿದೆ. ಅದು ಕಾಮಿಡಿಗಳೆಂದರೆ ಅದರಲ್ಲಿ ಅಶ್ಲೀಲ ಮಾತುಗಳಿರುತ್ತದೆ… ಅವುಗಳನ್ನು ಹೇಳಿ ನಗಿಸುತ್ತಾರೆ ಎಂಬುದು. ಆದರೆ ಇದರ ಆಚೆಗೂ ಕಾಮಿಡಿಗಳನ್ನ ಬರೆಯಬಹುದು, ಸಾಹಿತ್ಯಕವಾಗಿಯೂ ಬರೆಯಬಹುದು ಎಂದು ಸಾಬೀತು ಮಾಡಿದರೂ ಅದನ್ನು ಒಪ್ಪಿಕೊಳ್ಳಲು ಕೆಲವರು ಸಿದ್ಧರಿಲ್ಲ. ಏನು ಕಾಮಿಡಿ ನಾಟಕ ಅದು? ಹಾಸ್ಯೋತ್ಸವದಲ್ಲಿ ಜೋಕ್ ಗಳನ್ನ ಹೇಳಿ ನಗಿಸ್ತಾರಲ್ಲ.. ಹಾಗಿರುತ್ತೆ ಎಂದು ತಮ್ಮ ನಾಟಕ ಸಿದ್ಧಾಂತ ಆರಂಭಿಸುತ್ತಾರೆ. ಜನ ಬರ್ತಾರೆ ಅಂತ ಕಾಮಿಡಿ ಮಾಡಿ ಈಚೆಗೆ ಕೆಲವರು ದುಡ್ಡು ಮಾಡ್ತಿರೊ ವಿಚಾರ ಗೊತ್ತಿದೆ ಎಂದು ಕಟಕಿ ಆಡುತ್ತಾರೆ. ಇದನ್ನ ದಾಟಿ ಕಾಮಿಡಿ ನಾಟಕಗಳನ್ನ ಮಾಡಬೇಕಿದ್ದರೆ ದೃಢತೆ ಬೇಕು.
ನಾಟಕ ಹಿಡಿಸಿದರೆ ಚೆನ್ನ, ಇಲ್ಲದಿದ್ದರೆ ಒಂದೆರಡು ವ್ಯಂಗ್ಯದ ಮಾತಾಡಿ ಮನೆ ದಾರಿ ಹಿಡಿದರೆ ಅಲ್ಲಿಗೆ ಮುಗಿಯಿತು. ಮುಂದೆ ಆ ತಂಡದ ಪ್ರದರ್ಶನಗಳಿಗೆ ಹೋಗಬೇಕೇ ಬೇಡವೇ ಎಂಬ ಲೆಕ್ಕಾಚಾರ ನಂತರ ಸುಳಿಯುವ ವಿಚಾರ. ಅಷ್ಟರಮಟ್ಟಿಗೆ ಪ್ರೇಕ್ಷಕ ನಿರಾಳ.
ಗಂಭೀರ ನಾಟಕಗಳನ್ನ ಮಾಡುವವರಿಗೆ ಬೇರೆ ತರಹದ ರೀಚ್ ಗಳಿರುತ್ತವೆ. ಫೆಸ್ಟಿವಲ್ ಗಳ ಮೇಲೆ ಅವರ ಕಣ್ಣು ನೆಟ್ಟಿರುತ್ತದೆ. ಅವರ ದುಡಿಮೆ ಏನಿದ್ದರೂ ಅಲ್ಲಿ. ಜನರನ್ನು ತಲುಪುವುದು ಬಿಡುವುದು ಬೇರೆ. ಆದರೆ ಕಾಮಿಡಿ ನಾಟಕಗಳನ್ನ ಮಾಡುವವರಿಗೆ ಜನರೇ ಟಾರ್ಗೆಟ್ ಆಗಿರುತ್ತಾರೆ. ಅವರು ಬಂದರೆ ಉಂಟು, ಇಲ್ಲವೆಂದರೆ ಇಲ್ಲ. ಕಾಮಿಡಿ ನಾಟಕಗಳನ್ನ ಮಾಡುವವರಿಗೆ ಗಂಭೀರ ಪ್ರಭುತ್ರಿಗಳು ತಮ್ಮ ಫೆಸ್ಟಿವಲ್ ವಲಯದಲ್ಲಿ ಎಲ್ಲೂ ಸ್ಲಾಟ್ ಸಿಗದ ಹಾಗೆ ನೋಡಿಕೊಳ್ಳುತ್ತಾರೆ. ಅದು ಅವರ ಪ್ರಭುತ್ವ.
ಈ ಪ್ರಭುತ್ವ ರಾಜಕಾರಣದ ಮಟ್ಟದಲ್ಲೇ ಇದ್ದರೆ ಏನೂ ತೊಂದರೆ ಇಲ್ಲ. ಒಂದೊಂದು ನಾಟಕ ತಂಡಗಳವರ ಮಾತೂ ವಕ್ರತುಂಡೋಕ್ತಿಗಳೇ. ಅವರಿಗೆ ಮಿಕ್ಕ ತಂಡಗಳೇ ಟಾರ್ಗೆಟ್. ಟೀಕಿಸದಿದ್ದರೆ ಮತ್ತು ಕೊಂಕು ಆಡದಿದ್ದರೆ ಆಗುವುದೇ ಇಲ್ಲ. ನಾಟಕಕಾರ ಈ ಎಲ್ಲಕ್ಕೆ ಕಿವಿ ತೆತ್ತರೆ ಅವನ ಬರವಣಿಗೆಯ ವಿನ್ಯಾಸ ಬದಲಿಸುತ್ತದೆ. ಹಾಗಂತ ಅವನು ಕಿವುಡನಾಗಿರಲಿಕ್ಕೂ ಸಾಧ್ಯ ಇಲ್ಲ. ಜನರ ಸ್ಪಂದನಕ್ಕೆ ಕಿವುಡಾಗಿ ನಾಟಕಕಾರ ಬರೆಯುವುದಾದರೂ ಏನನ್ನು?
ಎನ್.ಎಸ್.ಡಿ.ಯವರು ತಮ್ಮ ಕೆಳಗಿನ ಸ್ತರದವರು ಮಾಡುವ ನಾಟಕಗಳನ್ನು ಕಂಡು ಗುಟುರು ಹಾಕುತ್ತಾರೆ. ಹಾಗೇ ಪ್ರಸಿದ್ಧ ರಂಗಶಾಲೆಗಳಲ್ಲಿ ತಲೆತಿಕ್ಕಿಸಿಕೊಂಡು ಬಂದವರು ತಮ್ಮ ಕೆಳಗಿನ ಸ್ತರದವರ ನಾಟಕಗಳನ್ನ ಕಂಡು ಮೂಗು ಮುರಿಯುತ್ತಾರೆ. ಈ ಇಬ್ಬರದು ಯಾಜಮಾನಿಕೆ. ‘ಯಜಮಾನಿಕೆ ಇದ್ದರೆ ಅದು ಅವರಿಗೆ.. ನಮಗಲ್ಲ..’ ಅನ್ನುವವರೂ ತಮ್ಮ ನಟನೆಯ ತುಡಿತ ತೀರಿಸಿಕೊಳ್ಳಲು ಮುಂದಾಗುತ್ತಾರೆ. ಅವರಿಗೆ ಒಂದು ತಂಡ ಬೇಕು. ಆ ತಂಡದಲ್ಲಿ ಇವರುಗಳು ಯಜಮಾನಿಕೆ ಮಾಡುವವರನ್ನ ಗೇಲಿ ಮಾಡಿಕೊಂಡು ರಿಹರ್ಸಲ್ ಮಾಡುತ್ತಿರುತ್ತಾರೆ. ಯಜಮಾನರಿಗೆ ರಂಗವನ್ನು ತುಂಬ ಲೈಟ್ ಆಗಿ ತೆಗೆದುಕೊಂಡು ಮಿಡುಕುವವರನನ್ನು ಕಂಡರೆ ಸಿಟ್ಟು. ಕಾಮಿಡಿಗಳನ್ನು ಮಾಡಿದರೂ ಅದೂ ಸೀರಿಯಸ್ಸಾಗಿರಬೇಕು. ಆಗಷ್ಟೇ ಅದು ಸರಿ. ಜನ ಬಂದು ನಾಟಕದ ಒಂದು ತಂಡ ಕೊಂಚ ದುಡ್ಡು ಕಂಡಿತೆಂದರೆ ಅದನ್ನು ಯಜಮಾನರು ‘ದಂದೆ’ ಎಂದು ಕರೆದುಬಿಡುತ್ತಾರೆ.
ಈ ತಾತ್ವಿಕ ಜಟಾಪಟಿಗಳ ನಡುವೆ ಮತ್ತೊಂದು ಬಗೆಯ ಚಟುವಟಿಕೆಗಳು ಆರಂಭವಾಗುತ್ತವೆ. ಹಲವರಲ್ಲಿ ಯಜಮಾನರಿಗೇ ಡೋಂಟ್ ಕೇರ್ ಆ್ಯಟಿಟ್ಯೂಡ್ ಶುರುವಾಗುತ್ತಿದ್ದಂತೆ ಕೆಲವರಿಗೆ ತಾವು ರಂಗ ನಿರ್ದೇಶಕರಾಗುವ ಧೈರ್ಯ ಬರುತ್ತದೆ. ಜೊತೆಗೆ ನಾಟಕ ಬರೆಯುವ ಧೈರ್ಯವೂ. ಅಣಬೆಗಳೆಲ್ಲ ತಾವು ತೆಂಗಿನ ಮರಗಳು ಎಂದು ಭಾವಿಸಲು ಆರಂಭಿಸುತ್ತವೆ. ಈ ಚಿತ್ರ ನೋಡಿದಾಗ ಯಜಮಾನರ ಸಿಟ್ಟು ಸೆಡವು ಅರ್ಥಪೂರ್ಣ ಅನಿಸಲು ಆರಂಭಿಸುತ್ತದೆ. ಆಗ ಯಾರ ಪರವಾಗಿ ಅಥವಾ ವಿರೋಧವಾಗಿ ಮಾತಾಡಿದರೂ ಕಷ್ಟ. ಇವರು ಅಥವಾ ಅವರು ಬೈದೇ ಬೈಯುತ್ತಾರೆ. ನಿಗದಿ ಮಾಡಿದಷ್ಟು ದುಡ್ಡು ತೆತ್ತು ನಾಟಕ ನೋಡಿ ಬರುವುದು ಬಿಟ್ಟು ಇದು ಯಾತರ ಉಸಾಬರಿ ಅನಿಸಲು ಆರಂಭವಾಗುತ್ತದೆ.
ಇಷ್ಟೆಲ್ಲ ಅಪಸವ್ಯಗಳಿವೆ ಎಂದು ಗೊತ್ತಿದ್ದರೂ ಅದರ ನಡುವೇ ಹೆಜ್ಜೆ ಕದಲಿಸಬೇಕಾದ ಅನಿವಾರ್ಯ ಸೃಷ್ಟಿಯಾಗುತ್ತಲೇ ಇರುತ್ತದೆ. ಮೊನ್ನೆ ನಮ್ಮ ತಂಡದ ನಾಟಕ ಪ್ರದರ್ಶನ ಮುಗಿದ ಮೇಲೆ ಹೀಗೇ ನಟರ ಜೊತೆ ನಿಂತು ಹರಟುತ್ತಿದ್ದೆ. ಒಬ್ಬಾಕೆ ನನಗೆ ‘ನಮಸ್ಕಾರ ಸರ್’ ಅಂದರು. ಅವರು ಮಾಸ್ಕ್ ಹಾಕಿಕೊಂಡಿದ್ದರಾದ್ದರಿಂದ ನನಗೆ ಗುರುತು ಸಿಗಲಿಲ್ಲ. ನಾನು ಯಾರಿರಬಹುದು ಎಂದು ಯೋಚಿಸುತ್ತ ಆಕೆಯನ್ನ ಮತ್ತೆ ನೋಡಿದೆ. ಇದು ಆಕೆಗೂ ತಿಳಿದು ಹತ್ತಿರ ಬಂದು ಮಾಸ್ಕ್ ತೆಗೆದು ‘ಸರ್ ನಾನು..’ ಎಂದರು. ನನ್ನ ಕಣ್ಣುಗಳನ್ನ ನಾನೇ ನಂಬಲಿಕ್ಕೆ ಆಗಲಿಲ್ಲ.
ಆಕೆ ಈ ಹಿಂದೆ ನಮ್ಮ ತಂಡದಲ್ಲಿ ನಟಿಸಿದ್ದ ನಟಿ. ಆಕೆಗೆ ಮೊದಲು ತುಂಬ ನೀಳ ಮತ್ತು ದೃಢವಾದ ಕಾಯ ಇತ್ತು. ನಡುಮಧ್ಯೆ ಕೆಲವು ಷೋಗಳಿಗೆ ಆಕೆ ಗೈರು. ಯಾಕೆ ಎಂದು ವಿಚಾರಿಸಿದಾಗ ಆಕೆ ತಣ್ಣನೆಯ ದನಿಯಲ್ಲಿ ‘ಸರ್ ನನಗೆ ಕ್ಯಾನ್ಸರ್ ಆಗಿದೆ.. ಟ್ರೀಟ್ಮೆಂಟ್ ತಗೋತಿದ್ದೀನಿ.. ಸೊ ಬರಲಿಕ್ಕೆ ಆಗ್ತಿಲ್ಲ..’. ಅಂದರು.
ಆ ಹೊತ್ತು ಅದು ನನ್ನಲ್ಲಿ ಗಾಬರಿ ಹುಟ್ಟಿಸಿದ ಉತ್ತರವಾಗಿತ್ತು. ನನ್ನ ದನಿಯಲ್ಲಿದ್ದ ಗಾಬರಿ ಗುರುತಿಸಿ ಆಕೆ ಮತ್ತೆ ‘ಸರ್ ಅಷ್ಟು ಸೀರಿಯಸ್ ಏನಿಲ್ಲ. ಬೇಗ ರಿಕವರ್ ಆಗ್ತೀನಿ. ನೋ ವರೀಸ್’ ಅಂದಿದ್ದರು. ನಾನೂ ಆ ಕ್ಷಣಕ್ಕೆ ಅದನ್ನು ನಂಬಿ ‘ನಾಟಕದ ವಿಚಾರ ಬಿಟ್ಟಾಕಿ. ಮೊದಲು ಆರೋಗ್ಯದ ಕಡೆ ಗಮನ ಹರಿಸಿ’ ಅಂತಂದು ಫೋನಿಟ್ಟಿದ್ದೆ.
ಆಕೆ ಆಗಾಗ ನೆನಪಿಗೆ ನಿಲುಕುತ್ತಿದ್ದರು. ಒಂದೆರಡು ಬಾರಿ ವಿಚಾರಿಸಿದ್ದ ನೆನಪು. ದನಿಯಲ್ಲಿ ಏನು ಗೊತ್ತಾಗುತ್ತದೆ? ಆಕೆ ಕೊಟ್ಟ ಭರವಸೆ ಮೇಲೇ ಆಕೆ ಚೇತರಿಸಿಕೊಳ್ಳುತ್ತಿದ್ದಾರೆ ಅಂದುಕೊಳ್ಳುತ್ತಿದ್ದೆ. ಆದರೆ ಮೊನ್ನೆ ಆಕೆಯನ್ನ ಎದುರಿನಲ್ಲಿ ಸಾಕ್ಷಾತ್ ನೋಡಿದಾಗ ನನ್ನ ಕಣ್ಣುಗಳು ಅರಳಿದ್ದು ನಿಜ. ಆಕೆ ಅಷ್ಟು ಕುಗ್ಗಿ ಹೋಗಿದ್ದರು. ಹಿಂದಿನ ಅವರ ದೃಢ ದೇಹವನ್ನ ಅಂದಿನ ಅವರ ಸ್ಥೂಲ ದೇಹದ ಜೊತೆ ಯಾವ ರೀತಿಯಲ್ಲೂ ತಾಳೆ ಹಾಕಿಕೊಳ್ಳಲಿಕ್ಕೆ ಸಾಧ್ಯ ಇರಲೇ ಇಲ್ಲ. ನಾನು ಕಣ್ಣರಳಿಸುತ್ತ, ತಲೆ ಕೊಡವುತ್ತ ಆಕೆಯನ್ನ ಹೇಗೆ ಸಂತೈಸುವುದೋ ತಿಳಿಯದೆ ಮಿಡುಕುತ್ತಿದ್ದೆ. ಮೊದಲಿನ ಆಕಾರಕ್ಕೂ ಈಗಿನದಕ್ಕೂ ಚೂರೂ ಸಾಮ್ಯತೆ ಇರಲಿಲ್ಲ. ತೀರಾ ಸೂಕ್ಷ್ಮವಾಗಿ ನೋಡಿದರೆ ಮಾತ್ರ ಆಕೆಯ ಹಿಂದಿನ ಮುಖ ಚಹರೆಗಳನ್ನ ಪತ್ತೆ ಹಚ್ಚಬಹುದಿತ್ತು.
ಎದುರಾದದ್ದನ್ನು ಕಂಡು ‘ಇದೇನು ಇದ್ದಕ್ಕಿದ್ದಂತೆ?’ ಎಂದು ಕೇಳಿದೆ. ನಮ್ಮ ತಂಡದ್ದು ಕಾಮಿಡಿ ನಾಟಕಗಳಾದ್ದರಿಂದ ಆಕೆ ಟಿಕೆಟ್ ಖರೀದಿಸಿ ಬಂದಿದ್ದರು. ‘ಸರ್ ಇಂದು ನಗೋಣ ಅಂತ ಬಂದೆ..’ ಅಂದರು.
ನಾನು ಒಂದು ಕ್ಷಣ ಅವಕ್ಕಾಗಿ ನಿಂತೆ. ಬೀಚಿ ಅವರ ಗಂಭೀರ ಸಟಯರ್ ಗಳನ್ನ ರಂಗಕ್ಕೆ ತಂದು ನಗಿಸುತ್ತಿದ್ದರೂ ಯಜಮಾನರಾದಿಯಾಗಿ ನಮ್ಮ ನಾಟಕಗಳ ಬಗ್ಗೆ ಕೊಂಕಾಡುವುದನ್ನು ನಿಲ್ಲಿಸಿರಲಿಲ್ಲ. ಆ ಸಂದರ್ಭಗಳಲ್ಲಿ ನನಗೆ ಕೊಂಚ ಬೇಸರವಾಗುತ್ತಿದ್ದದ್ದು ನಿಜ. ತಿರುಗಿ ಬಂಡಾಯದ ದನಿಯಲ್ಲಿ ಉತ್ತರಿಸಬೇಕು ಎಂದು ತುಡಿದದ್ದೂ ಇದೆ. ಆದರೆ ಆಕೆ ‘ಸರ್ ಇಂದು ನಗೋಕೆ ಬಂದೆ’ ಅಂದದ್ದು ಕೇಳಿ ನನ್ನಲ್ಲಿ ವಿಚಿತ್ರ ಹುರುಪು ಮೈ ಹೊಕ್ಕಂತಾಯಿತು. ಇನ್ನು ಮುಂದೆ ಯಾರು ಏನೆಂದರೂ ಬಂಡಾಯವೇಳಬಾರದು ಎಂದು ನಿಶ್ಚಯಿಸಿಕೊಂಡೆ.
ಹೀಗೇ ಯೋಚಿಸುತ್ತಿದ್ದ ಹೊತ್ತು ಮತ್ತೊಂದು ಸುದ್ದಿ ನನ್ನ ಕಿವಿ ಹೊಕ್ಕಿತು. ಅದು ಉಕ್ರೇನ್ ನಲ್ಲಿನ ಒಂದು ರಂಗಮಂದಿರದಲ್ಲಿ ಅಲ್ಲಿನ ಜನ ಯುದ್ಧಭೀತಿಯಿಂದ ಆಶ್ರಯಪಡೆದ್ದರು. ಆದರೆ ರಷ್ಯಾ ಆ ರಂಗಮಂದಿರದ ಮೇಲೇ ಬಾಂಬ್ ಎಸೆದು ಅಲ್ಲಿ ಆಶ್ರಯಪಡೆದಿದ್ದ ಸಾಕಷ್ಟು ಮಂದಿ ಸಾವಿಗೀಡಾದ ಬಗ್ಗೆ ವರದಿಗಳಾಗುತ್ತಿದ್ದವು. ಒಂದು ಜೀವಂತ ಕಲೆ ಅನಾವರಣಗೊಳ್ಳುವ ರಂಗಮಂದಿರವನ್ನು ಸುಟ್ಟುಬಿಡಬೇಕೆನ್ನುವ ನಿರ್ದಯತೆಯನ್ನ ಯುದ್ಧ ಸೃಷ್ಟಿಸಬಲ್ಲುದು. ಈ ಪರಿ ವಿನಾಶದ ಮನಸ್ಸು ಇವರಲ್ಲಿ ಹೇಗೆ ಸೃಷ್ಟಿಯಾಗುತ್ತದೆ ಎಂದು ಯೋಚಿಸುತ್ತಲೇ ಇದ್ದೆ.
ನಾವು ರಂಗಭೂಮಿಯವರು ನಾಟಕಾರಂಭದ ಮೊದಲು ಶಿವನನ್ನು ಸ್ತುತಿಸಿಯೇ ರಂಗಕ್ಕೆ ನಡೆಯುವವರು. ಶಿವನನ್ನು ಕುರಿತ ಒಂದು ಶ್ಲೋಕ ತುಂಬ ಸುಂದರವಾಗಿದೆ. ‘ಆಂಗಿಕಂ ಭುವನಂ ಯಸ್ಯ, ವಾಚಿಕಂ ಸರ್ವ ವಾಜ್ಮಯಂ ಆಹಾರ್ಯಂ ಚಂದ್ರತಾರಾದಿ ತಂ ನಮಃ ಸಾತ್ವಿಕಂ ಶಿವಂ..’
ಶಿವನ ವಿಸ್ತಾರ ಮತ್ತು ಅವನ ಸಾರಸರ್ವದ ಬಗ್ಗೆ ಶ್ಲೋಕದಲ್ಲಿ ವಿವರಣೆ ಇದೆ. ಶಿವ ಸತ್ಯನೂ ಹೌದು ಹಾಗೇ ಸುಂದರನೂ ಹೌದು. ಆದರೆ ಅದೇ ಶಿವ ರುದ್ರನೂ ಆಗುತ್ತಾನೆ ಎಂದು ನೆನೆಯುವಾಗ ನನ್ನ ಕಣ್ಣಮುಂದೆ ಸುಳಿದದ್ದು ಕ್ಯಾನ್ಸರಿನಿಂದ ನಲುಗಿದ್ದ ಆಕೆ ಮತ್ತು ರಷ್ಯಾದ ದಾಳಿಗೆ ಸುಟ್ಟು ಭಸ್ಮವಾದ ರಂಗಮಂದಿರ. ನಾಟಕ ಲೋಕದ ಕಷ್ಟಗಳ ಜೊತೆಜೊತೆಗೆ ಸುಂದರ ಮತ್ತು ರೌದ್ರದ ಬಗ್ಗೆಯೂ ನನ್ನಲ್ಲಿ ಈ ಹೊತ್ತು ಚಿತ್ರಗಳು ಕದಲುತ್ತಲೇ ಇವೆ.
ಬೆಂಗಳೂರಿನ ಬಸವನಗುಡಿ ನ್ಯಾಷನಲ್ ಕಾಲೇಜಿನಲ್ಲಿ ಕೆಲ ಕಾಲ ಕನ್ನಡ ಉಪನ್ಯಾಸರಾಗಿ ಹಾಗೂ ‘ಕನ್ನಡ ಪ್ರಭ’ ದಿನಪತ್ರಿಕೆಯಲ್ಲಿ ಉಪ ಸಂಪಾದಕರಾಗಿ ಕಾರ್ಯನಿರ್ವಹಣೆ. ಸಾಹಿತ್ಯ, ಸಂಗೀತ ಮತ್ತು ರಂಗಭೂಮಿ ಆಸಕ್ತಿಯ ಕ್ಷೇತ್ರಗಳು. ‘ಬೆಳಕು ಸದ್ದುಗಳನ್ನು ಮೀರಿ’, ‘ ಸರಸ್ವತಿ ಅಕಾಡಮಿ’ (ಕಥಾಸಂಕಲನ) ‘ ತಮ್ಮ ತೊಟ್ಟಿಲುಗಳ ತಾವೇ ಜೀಕಿ’ (ಕಾದಂಬರಿ) ಪ್ರಕಟಿತ ಕೃತಿಗಳು. ಪ್ರಸ್ತುತ ‘ಡ್ರಾಮಾಟ್ರಿಕ್ಸ್’ ಎಂಬ ರಂಗತಂಡದಲ್ಲಿ ನಾಟಕ ರಚನೆ ಮತ್ತು ನಿರ್ದೇಶನದಲ್ಲಿ ಸಕ್ರಿಯ.