ಇನ್ನೊಮ್ಮೆ ಗುರುಗಳನ್ನು ಗರುಡನಿಗೆ ಹೋಲಿಸಿದ್ದರು. “ಆಕಾಶದಲ್ಲಿ ಗರುಡ ಒಂದೇ ಮೇಲೆ ಹಾರ್ತಾ ಇರುತ್ತದೆ. ಅದಕ್ಕೆ ತಾನು ಎಲ್ಲರಿಗಿಂತ ಮೇಲೆ ಹಾರ‍್ತೀನಿ ಅಂತಿಲ್ಲ ಅಥವಾ ಹಾಗೆ ಹಾರಬೇಕೆಂಬ ಸ್ಪರ್ಧೆಯೂ ಇಲ್ಲ. ಎಲ್ಲ ಹಕ್ಕಿಗಳಿಗಿಂತ ಮೇಲೆ ಹಾರೋದು ಅದರ ಸಹಜ ಗುಣ. ಹಾಗೆ ನಮ್ಮ ಗುರುಗಳು ಆಕಾಶದಲ್ಲಿ ಮೇಲೆ ಹಾರಾಡೋ ಗರುಡ. ಇಲ್ಲಿ ಕೆಳಗೆ ಗರುಡನ ನೆರಳಿದೆ” ಎನ್ನುತ್ತ ಮೇಲೆ ಮುಖ ಮಾಡಿ ಹೇಳುತ್ತ, ವಾಕ್ಯದ ಕಡೆಯಲ್ಲಿ ಕುಳಿತಿದ್ದ ತಮ್ಮತ್ತ ಬೆರಳು ಮಾಡಿದ್ದರು.
ಪಂಡಿತ್ ರಾಜೀವ ತಾರಾನಾಥರ ಸಂಗೀತ-ಜೀವನದ ಕುರಿತು ಕತೆಗಾರ್ತಿ ಸುಮಂಗಲಾ ಬರಹ
ಅದು 1960ನೇ ಇಸ್ವಿ. ಬನುಮಯ್ಯ ಕಾಲೇಜಿನಲ್ಲಿ ಅರೆಕಾಲಿಕ ಉಪನ್ಯಾಸಕರಾಗಿ ಕೆಲಸ ಮಾಡುತ್ತ, ಮೈಸೂರು ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ಎಂ.ಎ. ಮಾಡುತ್ತಿದ್ದ 28ರ ಆ ಎತ್ತರದ ಸ್ಫುರದ್ರೂಪಿ ಯುವಕ ಬಹಳಷ್ಟು ಜನರ ಗಮನ ಸೆಳೆದಿದ್ದ. ಯುವಕನ ಹಿಂದಿನ ಪ್ರಭಾವಳಿ ಮತ್ತು ಆತನ ಖುದ್ದು ಸಾಧನೆ ಅಂಥದಿತ್ತು. ಆಗಿನ ಕಾಲಕ್ಕೆ ಕ್ರಾಂತಿಕಾರಿಯೆಂದು ಹೆಸರಾಗಿದ್ದ ಘನವಿದ್ವಾಂಸರಾದ ಪಂ. ತಾರಾನಾಥ ಮತ್ತು ಸುಮತೀಬಾಯಿಯವರ ಮಗನೆಂಬ ಅಂಶದಷ್ಟೇ ಮಹತ್ವವಾಗಿದ್ದು ಖ್ಯಾತ ಸರೋದ್ ವಾದಕ ಅಲಿ ಅಕ್ಬರ್ ಖಾನರ ಶಿಷ್ಯನಾಗಿ ಆರು ವರ್ಷಗಳ ಕಾಲ ಕಲ್ಕತ್ತೆಯಲ್ಲಿ ಸರೋದ್ ಕಲಿತು ಬಂದಿದ್ದಾರೆ ಎಂಬುದು. ಹಾಗೆ ಸರೋದ್ ಮಾಯೆಯ ಬೆಂಬತ್ತಿ ಹೋಗುವ ಮೊದಲು ಬಾಲಕಲಾವಿದನಾಗಿ ಹಿಂದೂಸ್ತಾನಿ ಗಾಯನದಲ್ಲಿ ಹೆಸರು ಮಾಡಿದ್ದು, ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಬಿ.ಎ. ಆನರ್ಸ್ ಪದವಿಯಲ್ಲಿ ಮೊದಲ ರ್ಯಾಂಕ್ ಗಳಿಸಿ, ಅದೇ ಕಾಲೇಜಿನಲ್ಲಿ ಮಾಡುತ್ತಿದ್ದ ಉಪನ್ಯಾಸಕ ವೃತ್ತಿಯನ್ನು ತೊರೆದು ಹೋಗಿದ್ದರು ಎನ್ನುವುದು ಆ ಯುವಕನ ಸರೋದ್ ಮೇಲಿನ ಏಕನಿಷ್ಠೆಯನ್ನು, ತೀವ್ರ ಆಸಕ್ತಿಯನ್ನು ತೋರಿಸುತ್ತಿತ್ತು. ಹೀಗೆ ಅಂದು ವಿಶ್ವವಿದ್ಯಾಲಯದ ಪ್ರಾಧ್ಯಾಪಕರು, ವಿದ್ಯಾರ್ಥಿಗಳು, ಬರಹಗಾರರು, ಕಲಾಕಾರರು ಅಚ್ಚರಿಯಿಂದ ದಿಟ್ಟಿಸುತ್ತಿದ್ದ ಆ ಯುವಕ ಪಂಡಿತ್ ರಾಜೀವ ತಾರಾನಾಥರು.
ಎಂ.ಎ. ಮಾಡುತ್ತ ಪ್ರಖರ ಬುದ್ಧಿಮತ್ತೆಯ ವಿದ್ಯಾರ್ಥಿಯಾಗಿ ಮತ್ತು ಬನುಮಯ್ಯ ಕಾಲೇಜಿನಲ್ಲಿ ಬೋಧಿಸುವಾಗ ಇಂಗ್ಲಿಶ್ ಸಾಹಿತ್ಯದ ಹಲವಾರು ಒಳನೋಟಗಳನ್ನು ವಿದ್ಯಾರ್ಥಿಗಳಿಗೆ ಕಾಣಿಸುವ ಉಪನ್ಯಾಸಕರಾಗಿ ರಾಜೀವರು ಹೆಸರು ಮಾಡಿದ್ದರು. ಆದರೆ ಸೀನಿಯರ್ ಕೇಂಬ್ರಿಜ್ ಪರೀಕ್ಷೆ ತೆಗೆದುಕೊಳ್ಳುವವರೆಗೆ ಅವರು ಶಾಲೆಗೇ ಹೋಗಿರಲಿಲ್ಲ ಎಂದರೆ ಮಕ್ಕಳನ್ನು ಎರಡು ಮೂರು ವರ್ಷಕ್ಕೆ ನರ್ಸರಿ, ಪ್ಲೇಹೋಂಗಳಿಗೆ ಕಳಿಸುವ ಇಂದಿನ ಕಾಲಘಟ್ಟದವರಿಗೆ ಅಚ್ಚರಿಯೆನ್ನಿಸಬಹುದು. ತಂದೆ ಪಂಡಿತ್ ತಾರಾನಾಥರು ಗಾಯನ, ತಬಲಾ, ಆಯುರ್ವೇದ, ಸಂಸ್ಕೃತ ಹೇಳಿಕೊಟ್ಟರೆ ತಾಯಿ ಸುಮತೀಬಾಯಿಯವರು ಇಂಗ್ಲಿಷ್, ಗಣಿತ, ವಿಜ್ಞಾನ, ಇನ್ನಿತರ ವಿಷಯಗಳನ್ನು ಹೇಳಿಕೊಡುತ್ತಿದ್ದರು. ರಾಯಚೂರಿನ ಬಳಿಯ ಮಂತ್ರಾಲಯದಲ್ಲಿ ತಂದೆ ತಾರಾನಾಥರು ಕಟ್ಟಿದ್ದ ಪ್ರೇಮಾಯತನ ಆಶ್ರಮಕ್ಕೆ ಆ ಕಾಲಘಟ್ಟದ ವಿದ್ವಾಂಸರು, ಸ್ವಾತಂತ್ರ ಹೋರಾಟಗಾರರು, ಸಂಗೀತಗಾರರು, ಬರಹಗಾರರು ಬಂದುಹೋಗುತ್ತಿದ್ದರು. ತಂದೆ, ತಾಯಿ ಅವರೊಂದಿಗೆ ಚರ್ಚಿಸುವಾಗ ಪುಟ್ಟ ರಾಜೀವರು ಅಲ್ಲಿಯೇ ಇರುತ್ತಿದ್ದರು. ಹೀಗಾಗಿ ಬಲುಚಿಕ್ಕವಯಸ್ಸಿನಲ್ಲಿಯೇ ಅವರಿಗೆ ‘ದೊಡ್ಡತನ’, ‘ಔದಾರ್ಯ’ದ ಮಾದರಿಗಳು ದಕ್ಕಿದವು. ಎಳೆಯ ಕಣ್ಣುಗಳಲ್ಲಿ ತೆರೆದುಕೊಂಡ ಆ ಎಲ್ಲ ಉದಾತ್ತ ಮಾದರಿಗಳನ್ನು ಮುಂದೆ ಬೆಳೆಯುತ್ತ ಹೋದಂತೆ ತಮ್ಮೊಳಗೇ ಆಳವಾಗಿ ಮೈಗೂಡಿಸಿಕೊಂಡರು.
*****
‘ಮೈಹರ್- ಅಲ್ಲಾವುದ್ದೀನ್ ಘರಾನಾದ ಬೋಧನಾ ತಂತ್ರಗಳು’ ಕುರಿತು ಅಧ್ಯಯನ ಮಾಡಿರುವ ಪಂ. ರಾಜೀವರಿಗೆ ತಮ್ಮ ತ್ರಿಮೂರ್ತಿ ಗುರುಗಳಾದ ಖಾನ್ ಸಾಹೇಬ್, ಪಂ. ಅನ್ನಪೂರ್ಣಾದೇವಿ ಮತ್ತು ಪಂ. ರವಿಶಂಕರ್ ಕುರಿತು ಅಪಾರ ಗೌರವ. ಒಂದೇ ಘರಾನೆಯ ಶ್ರೇಷ್ಠ ಸಂಗೀತಗಾರರಾದ ಈ ಮೂರೂ ಜನರ ನುಡಿಸಾಣಿಕೆ ಮತ್ತು ಶಿಷ್ಯರಿಗೆ ಕಲಿಸುವಿಕೆ ಹೇಗೆ ಸಾಮ್ಯತೆಯನ್ನು ಉಳಿಸಿಕೊಂಡೂ ಭಿನ್ನವಾಗಿತ್ತು ಎಂದು ವಿವರಿಸುತ್ತಾರೆ. ಇದರೊಂದಿಗೆ ದಕ್ಷಿಣಾದಿ ಸಂಗೀತವನ್ನು ರಾಜೀವರಷ್ಟು ತಿಳಿದ ಉತ್ತರಾದಿ ಸಂಗೀತಗಾರರು ನಮ್ಮ ನಡುವೆ ಬಹಳ ವಿರಳ. 1995ರಿಂದ ಹತ್ತು ವರ್ಷ ಅಮೆರಿಕದ ಲಾಸ್‌ಏಂಜಲೀಸ್‌ನಲ್ಲಿರುವ ಪ್ರತಿಷ್ಠಿತ ‘ಕ್ಯಾಲಿಫೋರ್ನಿಯಾ ಇನ್‌ಸ್ಟಿಟ್ಯೂಟ್ ಆಫ್ ದಿ ಪರ್‌ಫಾರ್ಮಿಂಗ್ ಆರ್ಟ್ಸ್’ (ಕ್ಯಾಲ್‌ಆರ್ಟ್ಸ್)ನಲ್ಲಿ ಸಂಗೀತ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಣೆ ಮಾಡಿದ್ದಾರೆ. ಪಂ. ರವಿಶಂಕರ್ ನಂತರ ಈ ಹುದ್ದೆಯಲ್ಲಿ ಕೆಲಸ ಮಾಡಿದ ಎರಡನೇ ಭಾರತೀಯ ಇವರು ಎಂದರೆ ವಿಶ್ವಸಂಗೀತದ ಕುರಿತು ಪಂ. ರಾಜೀವರು ಎಷ್ಟು ಆಳವಾದ ತಿಳಿವಳಿಕೆ ಗಳಿಸಿದ್ದರು ಎನ್ನುವುದು ಅರ್ಥವಾಗುತ್ತದೆ.
“ವಿನಮ್ರತೆ ಇಲ್ಲದಿದ್ದರೆ ಮುಂದೆ ಹೋಗೋದಕ್ಕೆ ಆಗೋದಿಲ್ಲ. ಖಾನ್ ಸಾಹೇಬರ ಬಗ್ಗೆ ಮಾತಾಡುವಾಗ ನಾನು ಎಲ್ಲೋ ಇರ್ತೀನಿ. ನನ್ನ ಜಗತ್ತು ಅದು” ಎನ್ನುವ ರಾಜೀವರು ಕಛೇರಿಯ ನುಡಿಸಾಣಿಕೆ ಇರಲಿ ಅಥವಾ ನಿತ್ಯದ ರಿಯಾಜ್ ಇರಲಿ, ಇದು ನನ್ನ ಖಾನ್ ಸಾಹೇಬರು ಕೊಟ್ಟಿದ್ದು ಎಂದು ನೆನೆಯುತ್ತಾರೆ. “ಗುರುಗಳು ಕಲಿಸಿದ ಸರೋದ್ ಅದ್ಭುತವಾದ ಒಂದು ಲೋಕವೊಂದನ್ನು ನನ್ನೆದುರು ತೆರೆದಿಟ್ಟಿತು. ನನ್ನ ಗುರುಗಳು ಮುತ್ತು ಮಾಣಿಕ್ಯದಂಥ ವಸ್ತುಗಳನ್ನು ನನಗೆ ಕೊಡಲಿಲ್ಲ. ಅವರು ಕೆಲವು ಬೀಜಗಳನ್ನು ನನಗೆ ಕೊಟ್ಟರು. ಅವು ನನ್ನ ಕೈಗಳಲ್ಲಿ ಮೊಳಕೆಯೊಡೆಯಿತು. ಅವರ ‘ಅಚ್ಛಾ’ದಲ್ಲಿಯೇ ನಾನೀಗಲೂ ಬದುಕುತ್ತಿದೇನೆ” ಎಂದು ಗುರುಗಳ ನೆನಪಿಗೆ ಜಾರುತ್ತಾರೆ. ‘ಅಲ್ಲಿ ಖಾನ್ ಸಾಹೇಬರಿದ್ದರು ಎಂದೇ ನಾನು ಇಲ್ಲಿ ಇದ್ದೇನೆ, ಪದ್ಮಶ್ರೀ ಇತ್ಯಾದಿ ಇತ್ಯಾದಿಗಳು ಸಂದವು. ಅವರ ಶಿಷ್ಯ ಆಗಿರಲಿಲ್ಲ ಎಂದರೆ ಈ ಯಾವುದೂ ಸಾಧ್ಯವಿರುತ್ತಿರಲಿಲ್ಲ’ ಎನ್ನುತ್ತಾರೆ.
ಸಂಗೀತ ಒಂದೇ ಅಲ್ಲ, ಸಾಹಿತ್ಯ, ಕೋಳಿಸಾಕಾಣಿಕೆ, ಕ್ರಿಕೆಟ್, ದಾ ವಿಂಚಿ, ವೆಂಕಟಪ್ಪನವರು, ಸಿನಿಮಾಗೆ ಹಿನ್ನೆಲೆ ಸಂಗೀತ, ಮೋಟರ್‍ಸೈಕಲ್ ರಿಪೇರಿ… ಹೀಗೆ ಅವರ ಆಸಕ್ತಿಗೆ ಹಲವಾರು ಮುಖಗಳು. ಬೆಳಗ್ಗೆ ಏನು ನುಡಿಸುವುದು, ಸಂಜೆ ರಿಯಾಜಿನಲ್ಲಿ ಏನು ನುಡಿಸುವುದು ಎಂಬ ಚಿಂತನೆ ಅವರ ಮನದೊಳಗೆ ಸದಾ ನಡದೇ ಇರುತ್ತದೆ. ಮಾತ್ರವಲ್ಲ, ಅಮೆರಿಕದಲ್ಲಿ ಕಛೇರಿಗಳನ್ನು ಏರ್ಪಾಡು ಮಾಡಿಕೊಳ್ಳಬೇಕು, ‘ದುಡೀಬೇಕಲ್ಲರೀ’ ಎನ್ನುತ್ತಲೇ ಅಲ್ಲಿಗೆ ಹೋಗುವ ತಯಾರಿಗಳೂ ಶುರುವಾಗುತ್ತವೆ. ಹೀಗೆ ಯಾವತ್ತೂ ವಯೋಸಹಜ ‘ಉಸ್ಸಪ್ಪ’ಗಳನ್ನು ಸನಿಹಕ್ಕೆ ಬಿಟ್ಟುಕೊಳ್ಳದೇ, ನಾಳೆಗಳನ್ನು ಎದುರು ನೋಡುವ ಪಂ. ರಾಜೀವರ ಹುರುಪು, ಆಳದ ಚೈತನ್ಯ ಅಚ್ಚರಿ ಹುಟ್ಟಿಸುತ್ತದೆ.
ತಾರಾನಾಥರಿಗ್ಯಾಕೆ ಸಿಟ್ಟು ಬರ್ತದೆ….
ಪಂಡಿತ್ ರಾಜೀವ ತಾರಾನಾಥ್‌ರ ಜೀವನರಾಗ ಕೃತಿ ಅಚ್ಚಿನ ಮನೆಗೆ ಹೋಗುವ ಸಮಯ. ಕಲೆಹಾಕಿದ ಫೋಟೋಗಳಲ್ಲಿ ಅವರ ಬದುಕಿನ ಹಲವು ಘಟ್ಟಗಳನ್ನು ಪ್ರತಿನಿಧಿಸುವ ಕೆಲವನ್ನು ಆಯ್ಕೆ ಮಾಡಿ, ಅಂಕಿತ ಪ್ರಕಾಶನದವರಿಗೆ ಕೊಟ್ಟೆ. ಪ್ರಕಾಶ್ ಕಂಬತ್ತಳ್ಳಿಯವರು ಒಂದು ಫೋಟೋ ರೆಸಲ್ಯೂಶನ್ ಕಡಿಮೆ ಇದೆ, ಬೇಡ ಎಂದರು. ‘ಈ ಫೋಟೋ ಬೇಕೇಬೇಕು’ ಎಂದು ನಾನು ಪಟ್ಟುಹಿಡಿದೆ. ನನ್ನ ಹಠ ನೋಡಿ ಅವರು ಯಾಕೆ ಎಂದು ಕೇಳಿದರು. “ಇದೊಂದರಲ್ಲಿ ಅವರು ಚೂರು ನಗ್ತಾ ಇದ್ದಾರೆ” ಎಂದು ಆ ಫೋಟೋ ಉಳಿಸಿಕೊಂಡಿದ್ದೆ. ಸರೋದ್ ಕಛೇರಿ ನಡೆದಾಗ, ಗೆಳೆಯರೊಂದಿಗೆ, ಮಾತ್ರವಲ್ಲ, ಬಾಲ್ಯದ ಫೋಟೋಗಳಲ್ಲಿಯೂ ಅವರು ಛಾಯಾಗ್ರಾಹಕರಿಗೆ ಒಂದು ನಸುನಗು ದಯಪಾಲಿಸಿದ್ದಿಲ್ಲ! ಆದರೆ ಗೌರಿ ಸುಂದರ್ ತೆಗೆದ ಆ ಫೋಟೊದಲ್ಲಿ ಒಂದು ಚಂದದ ನಸುನಗು ಬೀರಿದ್ದರು. ಹಾಂ… ಆ ನಗು ಕೂಡ ಗೌರಿ ಸುಂದರರ ಕೆಮರಾದತ್ತ ನೋಡಿ ಅಲ್ಲ; ಸರೋದ್ ಶ್ರುತಿಗೊಳಿಸುತ್ತ, ತಂತಿಗಳೊಳಗೆ ಅಡಗಿದ ಯಾವುದೋ ರಾಗವೊಂದು ಬೆರಳು ತಟ್ಟಿದ್ದಕ್ಕೆ ಮುದಗೊಂಡು ನಸುನಕ್ಕಂತಿದೆ.
ಫೋಟೋ ಚೌಕಟ್ಟಿನಾಚೆಗೂ ರಾಜೀವರು ತುಸು ಹುಬ್ಬುಗಂಟಿಕ್ಕಿಕೊಂಡು ನಸುಗೋಪದಲ್ಲಿರುತ್ತಾರೆಯೇ? ಅವರೇ ಒಮ್ಮೆ ನನಗೆ ಹೇಳಿದ್ದರು “ನನ್ನ ಹಣೆ ಮೇಲೆ ಯಾವಾಗ್ಲೂ ಹಿಂಗೆ ಗಂಟು ಇರುತ್ತಲ್ಲ, (ಹುಬ್ಬುಗಳ ಮಧ್ಯದ ಎರಡೂ ಗೆರೆಯನ್ನು ಬೆರಳಲ್ಲಿ ತೋರಿಸುತ್ತ) ಅದಕ್ಕೆ ರವಿಶಂಕರ್ ಹೇಳ್ತಿದ್ರು, ‘ಸ್ಟೇಜ್ ಮೇಲೆ ನಗುಮುಖದಲ್ಲಿರು’ ಅಂತ. ‘ನಾವು ನಗ್ತಿದ್ದರಷ್ಟೆ ಗಿರಾಕಿಗಳು ನಮ್ಮ ಹತ್ರ ಬರ್ತಾರೆ. ಇಲ್ದಿದ್ದರೆ ಬ್ಯಾರೆ ಮತ್ತೊಬ್ಬರ ಹತ್ರ ಹೋಗ್ತಾರೆ. ನಾವು ಒಂಥರಾ ಪ್ರಾಸ್ಟಿಟ್ಯೂಟ್ ಥರಾನೆ’ ಅಂತ ರವಿಶಂಕರ್ ಹೇಳ್ತಿದ್ದರು. ಆದ್ರೆ ಏನು ಮಾಡಲಿ ನಾನು ಮೊದ್ಲಿಂದ ಹಿಂಗೇ ಇದ್ದಿದ್ದು. ‘ನೀನು ಬದಲಾಗಲ್ಲ ಬಿಡು’ ಅಂತ ರೇಗ್ತಿದ್ರು”.
ಹೌದಲ್ಲ… ಸದಾ ಒಳಗೊಂದು ಸಣ್ಣ ಬೆಂಕಿಚೆಂಡು ಹೊರಪುಟಿಯಲು ಸನ್ನದ್ಧವಾಗಿರುವಂತೆ ಯಾಕಿಂಥ ಕೋಪ? ಆದರೆ ಅವರ ಕೋಪಕ್ಕೆ ಹಲವು ಮುಖಗಳಿವೆ ಮತ್ತು ಎಲ್ಲದಕ್ಕೆ ಕಾರಣಗಳೂ ಇವೆ.
ಆಗಿನ ಕಾಲಕ್ಕೆ ಅತ್ಯಂತ ಕ್ರಾಂತಿಕಾರಕ ದಂಪತಿಯಾಗಿದ್ದ ಪಂಡಿತ್ ತಾರಾನಾಥ್ ಮತ್ತು ಸುಮತೀಬಾಯಿವರ ಮಗನಾದ ರಾಜೀವರು ಬೆಳೆದುಬಂದಿದ್ದು ಹರಿತ ವೈಚಾರಿಕತೆಯ ಪರಿಸರದಲ್ಲಿ. ಕಲೆ, ಶಿಕ್ಷಣ, ಸಮಾಜಸುಧಾರಣೆ ಹೀಗೆ ಹತ್ತುಹಲವು ರೀತಿಯಲ್ಲಿ ತೊಡಗಿಸಿಕೊಂಡು, ಎಲ್ಲ ಸ್ತರದ ಜನರೊಂದಿಗೆ ಬಾಂಧವ್ಯ ಹೊಂದಿದ್ದ ಕುಟುಂಬದಲ್ಲಿ. ಮೊದಲಿನಿಂದಲೂ ಜಾತಿಪದ್ಧತಿ, ಮುಸ್ಲಿಮರ ಹಾಗೂ ದಲಿತರ ಮೇಲೆ ನಡೆಸುವ ದೌರ್ಜನ್ಯಗಳು, ಕೋಮುಗಲಭೆಗಳು ಇತ್ಯಾದಿಗಳ ವಿರುದ್ಧ ಅವರದು ಸದಾ ಉರಿದುಬೀಳುವ ಮನೋಭಾವ. ಜೊತೆಗೆ ತಮಗೆ ಅನ್ನಿಸಿದ್ದನ್ನು ನೇರವಾಗಿ, ನಿಷ್ಠುರತೆಯಿಂದ ಯಾವುದೇ ರೀತಿಯ ಹಿಂಜರಿಕೆ ಇಲ್ಲದೆ ಹೇಳುವ ಸ್ವಭಾವದವರು. ತಪ್ಪು ಎನ್ನಿಸಿದನ್ನು ಮುಲಾಜಿಲ್ಲದೇ ಮುಖಕ್ಕೆ ಹಿಡಿಯುವ ದಿಟ್ಟತನ ಅವರಲ್ಲಿದೆ. ಸತ್ಯ ಎಷ್ಟೆಂದರೂ ಕಹಿ, ಕಟು. ದೇಶದೆಲ್ಲೆಡೆ ಫ್ಯಾಸಿಸ್ಟ್ ಶಕ್ತಿಗಳ ಅಬ್ಬರದಾಟ ಅವರಿಗೆ ತುಂಬ ಘಾಸಿಯುಂಟು ಮಾಡುತ್ತದೆ. ಮುಕ್ತ ಚಿಂತನೆ ಮತ್ತು ಸಮಾನತೆಯ ಸಮಸಮಾಜವನ್ನು ಪ್ರತಿಪಾದಿಸುವ ಅವರಿಗೆ ದೇಶದ ಸದ್ಯದ ಸ್ಥಿತಿಗತಿಗಳು ಉಸಿರುಗಟ್ಟಿಸುತ್ತಿದೆ.
“ಸಂಗೀತ ನನ್ನ ವೃತ್ತಿ. ಸಂಗೀತದ ಬಗ್ಗೆ ಹೆಚ್ಚು ಮಾತಾಡಕ್ಕೆ ಇಷ್ಟಪಡ್ತೀನಿ. ಆದರೆ ಏನಾಗಿದೆ ಅಂದ್ರೆ ನಾನೇನೋ ಹೇಳಿದ್ರೆ ಇನ್ನೇನೋ ಬರೀತಾರೆ. ನಾನು ನಿಷ್ಟುರವಾಗಿ ಮಾತಾಡ್ತೀನಿ ಅಂತ; ಬ್ರಾಹ್ಮಣರನ್ನು ದ್ವೇಷಿಸುವವ ಅಂತ ಬ್ರಾಂಡ್ ಮಾಡಿದಾರೆ. ನಾನು ಬ್ರಾಹ್ಮಣ್ಯವನ್ನು, ಸನಾತನ ಧರ್ಮವನ್ನು ಟೀಕಿಸ್ತೀನಿ. ಆದ್ರೆ ಬ್ರಾಹ್ಮಣರಿಗೆ ಏನು ಹಾನಿ ಮಾಡಿದ್ದೀನಿ ಹೇಳಿ. ಇದೇ ಉಪಖಂಡದಲ್ಲಿ ಬಹಳ ಸುಂದರವಾದ, ಬಹಳ ಬೆಳೆದಿರುವ ಕಲೆಗಳು, ದರ್ಶನಗಳು, ಸಿದ್ಧಾಂತಗಳು ಎಲ್ಲದರ ಸಮೃದ್ಧಿಯಿದೆ. ಇದು ಬಹುತ್ವದ ಸಂಸ್ಕೃತಿ. ಆದರೆ ಇಂದು ಏನಾಗ್ತಿದೆ ನೀವೇ ನೋಡಿ. ಬಲಪಂಥೀಯ ಮನೋಧರ್ಮ ಎಲ್ಲವನ್ನು ಬಹಳ ಸರಳೀಕೃತಗೊಳಿಸಿ, ಬಹುತ್ವದ ಉಪಖಂಡಕ್ಕೆ ಒಂದು ವರ್ಗ, ಒಂದು ದೃಷ್ಟಿಕೋನವನ್ನು ಹುಟ್ಟುಹಾಕ್ತಿದೆ. ಹೀಗಾಗಬಾರದು. ನಮ್ಮ ಉಪಖಂಡದ ಬಹುಭಾಷೆ, ಬಹುಧರ್ಮ, ಈ ಬಾಹುಳ್ಯವನ್ನು ಮೆಚ್ಚಬೇಕು. ನಮ್ಮ ಶಕ್ತಿ ಇರೋದೆ ಬಹುತ್ವದಲ್ಲಿ. ಒಂದು ದೇಶ, ಒಂದು ಧರ್ಮ ಅನ್ನೋದು ನಮ್ಮ ಉಪಖಂಡದ್ದಲ್ಲ.”
ಈ ಬಾಹುಳ್ಯಕ್ಕೆ ಧಕ್ಕೆ ಬರುವಂತಹ ಘಟನೆಗಳು ಪ್ರತಿನಿತ್ಯ ನಡೆಯುವುದನ್ನು ನೋಡುವಾಗ, ಬಹುತ್ವವನ್ನು ಹತ್ತಿಕ್ಕಿ ಏಕತ್ವ ವಿಜೃಂಭಿಸುವುದನ್ನು ನೋಡುವಾಗ ಅವರಿಗೆ ಕೋಪ ಬರುತ್ತದೆ. “ಈಗ ದೇಶವನ್ನೇ ಆಳ್ತಾ ಇರೋದು ತರಹೇವಾರಿ ದ್ವೇಷ. ಪ್ರತಿಯೊಂದು ಮಟ್ಟದಲ್ಲಿಯೂ ದ್ವೇಷ, ಕ್ರೌರ್ಯ. ಸಾಂಘಿಕ ಕ್ರೌರ್ಯ. ಬಹಳ ಭೀಕರವಾದ ಒಂದು ಸರಳೀಕರಣವು, ವೈಚಾರಿಕತೆಯ ಎಲ್ಲ ಕೇಂದ್ರಗಳನ್ನು; ಕಲೆ, ಪ್ರೀತಿ, ನಾಜೂಕು, ಇಂಪು, ಇವೆಲ್ಲವನ್ನು ತೊಡೆದುಹಾಕ್ತಿದೆ” ಎಂದು ಬೇಸರದಿಂದ ಹೇಳುತ್ತಾರೆ.
ರಾಜೀವರನ್ನು ಬಹುಕಾಲದಿಂದ ಬಲ್ಲ ಡಾ. ವಿಜಯಮ್ಮ ಅವರ ಕೋಪದ ಇನ್ನೊಂದು ಆಯಾಮವನ್ನು ತೆರೆದಿಡುತ್ತಾರೆ.
“ಅವರಿಗೆ ಯಾವುದೇ ಬಗೆಯ ಅವ್ಯವಸ್ಥೆ, ಅರೆಬರೆ ಕಂಡ್ರೆ ಸಹಿಸಕ್ಕೆ ಆಗಲ್ಲ. ಅವರು ಎಷ್ಟು ತನ್ಮಯತೆಯಿಂದ ಸರೋದ್ ನುಡಿಸುತ್ತಾರೋ ಕೇಳುಗರೂ ಕೂಡ ಅಷ್ಟೇ ಏಕಾಗ್ರತೆಯಿಂದ ಕೇಳಿಸಿಕೊಳ್ಳಬೇಕು ಎಂದು ಅವರು ನಿರೀಕ್ಷಿಸ್ತಾರೆ. ಕೇಳುಗರ ಸಣ್ಣಪುಟ್ಟ ಚಲನೆ, ಪಕ್ಕದವರು ಏನೋ ಹೇಳಿದ್ರು ಅಂತ ನೀವು ಸದ್ದಿಲ್ಲದೇ ಅತ್ತ ತಿರುಗಿದ್ರೂ ಅವರಿಗೆ ಅಸಹನೆ ಅನ್ನಿಸುತ್ತೆ. ಸಿಟ್ಟು ಬರುತ್ತೆ. ಅವರಿಗೆ ಅದು ಸಹಜ. ಇನ್ನೊಂದು ಅಂದ್ರೆ ಅನಗತ್ಯವಾಗಿ ವಟವಟ ಅನ್ನೋದು ಅವರಿಗೆ ಇಷ್ಟವಾಗಲ್ಲ. ಅವರು ಎಂಬತ್ತರ ದಶಕದಲ್ಲಿ ಜಯನಗರದ ಅಶೋಕಪಿಲ್ಲರ್ ಬಳಿಯ ಮನೆಯಲ್ಲಿದ್ದರು. ನಾನು ಯಾವಾಗಾದ್ರೂ ಅವರನ್ನು ನೋಡಕ್ಕೆ ಹೋದ್ರೆ ಸುಮ್ನೆ ಕೂತ್ಕೊಂಡು ಕೇಳು ಅನ್ನೋರು. ಏನು ಕೇಳಿಸ್ತಾ ಇದೆ ಅಂತ ಕೇಳೋರು. ನಾನು ಯಾವುದೋ ಹಕ್ಕಿ ಕೂಗೋದು ಕೇಳಿಸ್ತಿದೆ ಅಂದ್ರೆ ಇನ್ನೂ ಏನು ಕೇಳಿಸುತ್ತೆ ನೋಡು ಅನ್ನೋರು. ನಿಶ್ಯಬ್ದವಾಗಿ ಕೂತು, ಏಕಾಗ್ರತೆಯಿಂದ ಆಲಿಸಿದ್ರೆ ಇನ್ನೂ ಏನೇನೋ ಸದ್ದುಗಳು ಕೇಳೋದು. ಅಂತಹ ಮೌನದಲ್ಲಿ ಏಕಾಗ್ರತೆಯಿಂದ ಆಲಿಸಿದಾಗ ಏನೇನೋ ಪರಿಸರದ ಚಲನೆಗಳು ಲಕ್ಷ್ಯಕ್ಕೆ ಬರುತ್ತದೆಯಲ್ಲ, ಆ ಸ್ಥಿತಿಗೆ ನಮ್ಮನ್ನು ಕರ‍್ಕೊಂಡು ಹೋಗಕ್ಕೆ ಅವ್ರು ಇಷ್ಟ ಪಡ್ತಿದ್ರು.” ಹೇಳುತ್ತ ಇದೀಗ ಅಶೋಕಪಿಲ್ಲರ್ ಮನೆಯಲ್ಲಿ ಕುಳಿತು ಹಕ್ಕಿಯ ದನಿಯನ್ನು ಆಲಿಸುತ್ತಿದ್ದಾರೇನೋ ಎಂಬಂತೆ ವಿಜಯಮ್ಮ ಅರೆಕ್ಷಣ ಸುಮ್ಮನಾಗುತ್ತಾರೆ.
“ಹೀಗಿರುವ ಅವರಿಗೆ ಯಾರಾದ್ರೂ ಅನಗತ್ಯವಾಗಿ ವಟವಟ ಅಂದ್ರೆ ಸಿಕ್ಕಾಪಟ್ಟೆ ಕೋಪ ಬರೋದು. ನೋಡಿ ಈ ಕೋಪ ಸಕಾರಣ ಅಲ್ಲವೇ…” ವಿಜಯಮ್ಮ ಹೇಳುತ್ತಾರೆ. “ಸುಖಾಸುಮ್ಮನೆ ವಿವಾದಗಳನ್ನು ಬೆಳೆಸುತ್ತ ಹೋಗುವುದು ಅವರಿಗೆ ಇಷ್ಟವಾಗಲ್ಲ. ಒಮ್ಮೆ ನಾಟಕವೊಂದರ ಕಾರಣಕ್ಕೆ ನನಗೆ, ಗಿರೀಶ ಕಾರ್ನಾಡರಿಗೆ ಭಿನ್ನಾಭಿಪ್ರಾಯ ಉಂಟಾಯ್ತು. ವಾಚಕರ ವಾಣಿಗೆ ಅವರೊಂದು ಪತ್ರ ಬರೆದರು, ನಾನು ಅದಕ್ಕೆ ಉತ್ತರಿಸಿದೆ, ನನ್ನ ಉತ್ತರಕ್ಕೆ ಅವರ ಮಾರುತ್ತರ, ಮತ್ತದಕ್ಕೆ ನನ್ನ ಪ್ರತ್ಯುತ್ತರ, ಹಿಂಗೇ ಬೆಳೀತಾ ಹೋಯ್ತು ಅದು. ರಾಜೀವರಿಗೆ ಸಿಕ್ಕಾಪಟ್ಟೆ ಕೋಪ ಬಂತು. ಆಮೇಲೊಂದು ದಿನ ಅಭಿನಯ ತರಂಗಕ್ಕೆ ಬಂದಿದ್ರು. ನಾನೂ ಅಲ್ಲೇ ಇದ್ದೆ. ‘ಏನ್ರೀ ಮಾಡ್ತಿದ್ದೀರ ನೀವಿಬ್ರೂ… ಮೂರ್ತಿ, ಪೇಪರ್ ಕೊಡ್ರಿ ಒಂದು’ ಅಂತ ಎ.ಎಸ್. ಮೂರ್ತಿಯವರ ಹತ್ರ ಒಂದು ಹಾಳೆ ಪೆನ್ನು ಇಸ್ಕೊಂಡವರೆ, ‘ಇಬ್ರು ಸೃಜನಶೀಲ ವ್ಯಕ್ತಿಗಳು ಅನಗತ್ಯವಾಗಿ ವಾದ ಮಾಡ್ತಿದಾರೆ. ಇದನ್ನ ಇಲ್ಲಿಗೇ ನಿಲ್ಲಿಸ್ರಿ’ ಅಂತ ವಾಚಕರ ವಾಣಿಗೆ ಒಂದು ಪತ್ರ ಬರೆದ್ರು. ನಾನೂ ಸುಮ್ಮನಾದೆ, ಕಾರ್ನಾಡರೂ ಸುಮ್ಮನಾದ್ರು. ಅನಗತ್ಯ ವಾಗ್ವಾದಕ್ಕಿಂತ ಸೃಜನಶೀಲ ಕೆಲಸ ಏನಾದ್ರೂ ಮಾಡಬಹುದಲ್ಲ ಅನ್ನೋದು ಅವರ ಅಭಿಪ್ರಾಯ” ಎಂದು ವಿಜಯಮ್ಮ ನೆನಪಿಸಿಕೊಳ್ಳುತ್ತಾರೆ.
*****
ರಾಜೀವರಿಗೆ ಕಳೆದೆರಡು ದಶಕಗಳಿಂದ ತಬಲಾ ಸಾಥಿಯಾಗಿರುವ ಡಾ. ಉದಯರಾಜ್ ಕರ್ಪುರ್ ಗುರುಗಳ ಅಂತಃಕರುಣೆಯೊಂದಿಗೆ ಸಿಟ್ಟಿನ ಮುಖವನ್ನೂ ಕಂಡಿದ್ದಾರೆ. ಕೋಪದ ಹಿಂದಿರುವ ಹೂಮನಸ್ಸನ್ನು ಹತ್ತಿರದಿಂದ ಕಂಡಿದ್ದಾರೆ. ಕಛೇರಿ ನಡೆಯುವಾಗ ಮೈಕ್ ಸರಿಯಾಗಿಲ್ಲವೆಂದೋ ಇನ್ನೇನೋ ಅವ್ಯವಸ್ಥೆಯೆಂದು ಅವರು ಕಛೇರಿ ಬಿಟ್ಟು ನಡೆದಿದ್ದೂ ಇದೆ. “ಅವರು ಕಛೇರಿಯಲ್ಲಿ ತುಂಬ ಏಕಾಗ್ರತೆಯಿಂದ ನುಡಿಸ್ತಾರೆ. ಮೈಕು ಸರಿಯಾಗಿಲ್ಲದೇ, ಸ್ವಲ್ಪ ಕೊರ್ ಅಂದ್ರೂ ಅವರ ಏಕಾಗ್ರತೆಗೆ ಭಂಗ ಬರುತ್ತೆ. ಎಲ್ಲದರಲ್ಲಿ ಪರಿಪೂರ್ಣತೆ ಬಯಸೋ ಅವರಿಗೆ ಕಛೇರಿ ಸಂಘಟಕರು ಇಂತಹ ವ್ಯವಸ್ಥೆಗಳನ್ನು ಸರಿಯಾಗಿ ವೃತ್ತಿಪರವಾಗಿ ನಿಭಾಯಿಸಲಿಲ್ಲ ಎಂದರೆ ಅಸಹನೆ ಅನ್ನಿಸುತ್ತೆ’’ ಎನ್ನುತ್ತಾರೆ ಉದಯರಾಜ್. ದಶಕಗಟ್ಟಲೆ ರಿಯಾಜ್ ನಡೆಸಿದ ಹಿರಿಯ ಸಂಗೀತಗಾರನೋರ್ವ ನುಡಿಸಲು ಕುಳಿತಾಗ ಮೈಕ್, ಸೌಂಡ್ ವ್ಯವಸ್ಥೆ ತೀರಾ ಕಳಪೆಯಾಗಿದೆಯೆಂದು ಸಿಟ್ಟಾದರೆ, ಅದರಲ್ಲಿ ತಪ್ಪೇನಿದೆ?
ಸಮಯ ಪಾಲನೆ, ಹೇಳಿದ ಸಮಯಕ್ಕೆ ಹೋಗಲಿಲ್ಲ ಅಥವಾ ಫೋನು ಮಾಡಲಿಲ್ಲ ಎಂದರೆ ಅವರಿಗೆ ತುಂಬ ಕೋಪ ಬರುತ್ತೆ ಎನ್ನುವ ಉದಯರಾಜ್ ಒಂದು ಘಟನೆಯನ್ನು ನೆನಪಿಸಿಕೊಳ್ಳುತ್ತಾರೆ. “ಒಮ್ಮೆ ನಾನು ಅವರ ಮನೆಗೆ ಹೇಳಿದ ಸಮಯಕ್ಕಿಂತಲೂ ತಡವಾಗಿ ಹೋದೆ. ತಡವಾಗಿ ಬರ್ತೀನಿ ಅಂತ ಫೋನ್ ಕೂಡ ಮಾಡಿರಲಿಲ್ಲ. ಅವರು ನನ್ನನ್ನು ಗೇಟಿನ ಬಳಿಯೇ ತಡೆದು, ವಾಪಸು ಹೋಗಕ್ಕೆ ಹೇಳಿದ್ರು. ಇನ್ನೊಂದ್ಸಲ ಬರುವಾಗ ಸರಿಯಾದ ಸಮಯಕ್ಕೆ, ಫೋನ್ ಮಾಡಿಕೊಂಡು ಬರುವಂತೆ ತಾಕೀತು ಮಾಡಿದರು.”
ಗರುಡ ಹಾರುತಿಹುದು ಮೇಲೆ, ಕೆಳಗಿಹುದು ಅದರ ನೆರಳು
ಹೆಮ್ಮರವೊಂದನ್ನು ದೂರದಿಂದ ಕಂಡಾಗಿನ ನೋಟಕ್ಕೂ, ಹತ್ತಿರ ಹೋದಂತೆ ದಕ್ಕುವ ನೋಟಕ್ಕೂ ಎಷ್ಟು ವ್ಯತ್ಯಾಸ! ಹಾಗೆಯೇ ಹೆಮ್ಮರವನ್ನು ಬೇರೆಬೇರೆ ಕಡೆ ನಿಂತು ನೋಡಿದಾಗ ಕಾಣುವ ಚಿತ್ರಗಳು, ವರ್ಣಛಾಯೆಗಳು ಬೇರೆಯೇ. ಪುಸ್ತಕ ಬರೆಯುವುದಕ್ಕೆಂದು ಆಗೀಗ ಪಂ. ರಾಜೀವರ ಮನೆಗೆ ಹೋಗಲು ಶುರುಮಾಡಿದಾಗ ಇದು ಅಕ್ಷರಶಃ ಅನುಭವಕ್ಕೆ ಬಂದಿತು.
ಮೊದಲ ಸಲ ಅವರ ಮನೆಗೆ ಹೋದಾಗ, ಊಟಕ್ಕೆ ಕೂತಿದ್ದಾಗ ಅಡುಗೆಯವಳಿಗೆ ತಮಿಳಿನಲ್ಲಿ ಏನೋ ಹೇಳಿದ್ದರು. ನನಗೆ ಮತ್ತು ನನ್ನ ಮಗನಿಗೆ ಮೊದಲು ಬಡಿಸು ಎಂದವಳಿಗೆ ಹೇಳಿರಬೇಕು ಎಂದು ಅವರ ಹಾವಭಾವದಿಂದ ಊಹಿಸಿದ ನಾನು “ನೀವು ಮನೇಲಿ ತಮಿಳು ಮಾತಾಡ್ತೀರ ಸರ್” ಎಂದು ಕೇಳಿದ್ದೆ. ನನ್ನ ಪೆದ್ದುತನದ ಪ್ರಶ್ನೆಗೆ ಅವರು ಅಷ್ಟೇ ತಣ್ಣಗೆ “ನಂಗೆ ಒಂಬತ್ತು ಭಾಷೆ ಬರುತ್ತೆ” ಎಂದಿದ್ದರು. ಯಾವ್ಯಾವುದು ಎಂದು ಕೇಳುವ ಧೈರ್ಯ ಮಾಡಲಿಲ್ಲ ಎನ್ನಿ! ಆಮೇಲೊಮ್ಮೆ ಮಾತಾಡುತ್ತ ಕೂತಿದ್ದಾಗ ನಡುವೆ ಯಾರೊಂದಿಗೋ ಫೋನಿನಲ್ಲಿ ಮಾತಾಡಿದರು. ಬಂಗಾಳಿ ಅದು ಎಂದು ಊಹಿಸಿದೆ. ಇನ್ನೊಮ್ಮೆ ಯಾರೊಂದಿಗೋ ಉರ್ದುವಿನಲ್ಲಿ ಎಷ್ಟು ಚೆನ್ನಾಗಿ ಮಾತನಾಡಿದರು ಎಂದರೆ ನನಗೆ ಅರ್ಥವಾಗದಿದ್ದರೂ ಆ ಗತ್ತು, ಗೈರತ್ತು ಎಲ್ಲವೂ ಶಾಯಿರಿಯಂತಿತ್ತು. ಇಂಗ್ಲಿಶ್, ಸಂಸ್ಕೃತ, ಉರ್ದು, ಕನ್ನಡ, ಕೊಂಕಣಿ, ತಮಿಳು, ಬಂಗಾಳಿ, ತೆಲುಗು, ಹಿಂದಿ.. ನಾನು ಬೆರಳು ಎಣಿಸುತ್ತ ಒಂಬತ್ತಾಯಿತು, ಆದರೆ ಸ್ವಲ್ಪ ಮಟ್ಟಿಗೆ ಅರ್ಥವಾಗುತ್ತದೆ ಎಂದಿದ್ದರಲ್ಲ ಆ ಇನ್ನೊಂದು ಭಾಷೆ… ಅದು ಮಲೆಯಾಳಂ ಅಥವಾ ಮರಾಠಿಯಾ ಎಂದು ತಲೆ ಕೆರೆದುಕೊಂಡೆ!
*****
ಪಂ. ರಾಜೀವರು ಮಾತನಾಡುವಾಗ (ಒಳ್ಳೆಯ ಲಹರಿಯಲ್ಲಿದ್ದರೆ!) ಅವರ ರೂಪಕ ಭಾಷೆ ಆ ಕ್ಷಣದ ಅವರ ಹಾವಭಾವದೊಡನೆ, ಮುಖಮುದ್ರೆಯೊಡನೆ ನಿಮ್ಮ ಮನಸ್ಸಿನಲ್ಲಿ ಅಚ್ಚೊತ್ತುತ್ತದೆ. ಯಾವುದೇ ಸಿದ್ಧತೆಗಳಿಲ್ಲದೆ ಸುಮ್ಮನೇ ಮಾತಾಡುತ್ತಲೇ ತಟ್ಟನೆ ಏನೋ ಹೇಳುತ್ತಾರೆ. ಅದನ್ನು ಸೆರೆಹಿಡಿಯಲು ನಿಮ್ಮ ಮನಸ್ಸಿನ ಕೆಮರಾ ಒಳಗಣ್ಣು ಸಿದ್ಧವಿರಬೇಕಷ್ಟೆ.
ನಮ್ಮ ಶಾಸ್ತ್ರೀಯ ಸಂಗೀತದ ಹಿನ್ನೆಲೆಯಿದ್ದರೆ ಬೇರೆ ದೇಶಗಳ ಸಂಗೀತ ನಮಗೆ ಬಂದೇಬಿಡುತ್ತದೆ ಎನ್ನುವುದಕ್ಕೆ ಆಗುವುದಿಲ್ಲ ಅಂತ ನನಗೊಮ್ಮೆ ವಿವರಿಸಿದ್ದರು.
“ಸಂಗೀತ ತುಂಬಾ ಖಾಸಗಿಯಾಗಿದ್ದು. ನಮ್ಮ ಸಂಗೀತ ಗೊತ್ತಿದ್ದರೆ ಪಾಶ್ಚಿಮಾತ್ಯ ಸಂಗೀತವೂ ಬರುತ್ತೆ ಎನ್ನೋ ಹಾಗಿಲ್ಲ. ಎರಡನ್ನೂ ಆಳವಾಗಿ ಅಧ್ಯಯನ ಮಾಡಬೇಕು. ಇಲ್ಲಿಯ ಒಂದು ಕೀಲಿಯಿಂದ ಅಲ್ಲಿಯ ಬೀಗ ತೆಗೆಯಕ್ಕೆ ಆಗಲ್ಲ. ಇಲ್ಲಿಯ ತ್ಯಾಗರಾಜ ಗೊತ್ತಿದ್ದರೆ ಅಲ್ಲಿಯ ಬಿಥೋವನ್ ಗೊತ್ತಾಗಲ್ಲ. ತ್ಯಾಗರಾಜ ಕೀಲಿಯಿಂದ ಬೀಥೋವನ್ ಬೀಗ ತೆಗೆಯೋದಕ್ಕೆ ಆಗೋದಿಲ್ಲ. ಅಲ್ಲಿಯ ಬೀಗ ತೆಗೆಯಕ್ಕೆ ಅಲ್ಲಿಯ ಸಂಗೀತವನ್ನು ಒಂದು ಶಿಸ್ತಾಗಿ ಅಧ್ಯಯನ ಮಾಡಬೇಕು.”
‘ತ್ಯಾಗರಾಜ ಕೀಲಿ – ಬೀಥೋವನ್ ಬೀಗ’… ಆಹಾ!
ಅವರಿಗೆ ತಮ್ಮ ಗುರು ಉಸ್ತಾದ್ ಅಲಿ ಅಕ್ಬರ್ ಖಾನರೆಂದರೆ ‘ಗೌರಿಶಂಕರ ಪರ್ವತ’. “ನನ್ನ ಗುರುಗಳು ಮುತ್ತು ಮಾಣಿಕ್ಯದಂಥ ವಸ್ತುಗಳನ್ನು ನನಗೆ ಕೊಡಲಿಲ್ಲ. ಅವರು ಕೆಲವು ಬೀಜಗಳನ್ನು ನನಗೆ ಕೊಟ್ಟರು. ಅವು ನನ್ನ ಕೈಗಳಲ್ಲಿ ಮೊಳಕೆಯೊಡೆಯಿತು” ಎಂದು ರಾಜೀವರು ಹೇಳುತ್ತ ಅಂಗೈ ತೋರುತ್ತಿದ್ದರೆ ಆ ಬೀಜಗಳು ಹಾಗೆ ಅವರ ಕೈಯಲ್ಲಿ ಮೊಳಕೆಯೊಡೆದು, ರಾಗಾಲಾಪದ ಸಸಿಯಾಗಿ ಇನ್ನೂ ಬೆಳೆಯುತ್ತಲೇ ಇದೆಯೇನೋ ಅನ್ನಿಸುತ್ತದೆ.
ಇನ್ನೊಮ್ಮೆ ಗುರುಗಳನ್ನು ಗರುಡನಿಗೆ ಹೋಲಿಸಿದ್ದರು. “ಆಕಾಶದಲ್ಲಿ ಗರುಡ ಒಂದೇ ಮೇಲೆ ಹಾರ್ತಾ ಇರುತ್ತದೆ. ಅದಕ್ಕೆ ತಾನು ಎಲ್ಲರಿಗಿಂತ ಮೇಲೆ ಹಾರ‍್ತೀನಿ ಅಂತಿಲ್ಲ ಅಥವಾ ಹಾಗೆ ಹಾರಬೇಕೆಂಬ ಸ್ಪರ್ಧೆಯೂ ಇಲ್ಲ. ಎಲ್ಲ ಹಕ್ಕಿಗಳಿಗಿಂತ ಮೇಲೆ ಹಾರೋದು ಅದರ ಸಹಜ ಗುಣ. ಹಾಗೆ ನಮ್ಮ ಗುರುಗಳು ಆಕಾಶದಲ್ಲಿ ಮೇಲೆ ಹಾರಾಡೋ ಗರುಡ. ಇಲ್ಲಿ ಕೆಳಗೆ ಗರುಡನ ನೆರಳಿದೆ” ಎನ್ನುತ್ತ ಮೇಲೆ ಮುಖ ಮಾಡಿ ಹೇಳುತ್ತ, ವಾಕ್ಯದ ಕಡೆಯಲ್ಲಿ ಕುಳಿತಿದ್ದ ತಮ್ಮತ್ತ ಬೆರಳು ಮಾಡಿದ್ದರು.
*****
ಮತ್ತೆ ಏನಾದರೊಂದು ವಿಷಯವನ್ನು ವಿವರಿಸುತ್ತಿರುವಾಗ, ಅವರು ಕೊಡುವ ಹೋಲಿಕೆಗಳು ತುಂಬಾ ಸರಳವೇನೋ ಹೌದು, ಆದರೆ ನಾವೆಂದೂ ಆ ರೀತಿಯಾಗಿ ಆಲೋಚನೆ ಮಾಡಿರಲೇ ಇಲ್ಲವಲ್ಲ ಎನ್ನುವಷ್ಟು ಹೊಸದಾಗಿರುತ್ತದೆ. ಹಾಗೆಯೇ ಸಂಸ್ಕೃತದ ಶ್ಲೋಕಗಳನ್ನೋ, ಉಪಮೆಗಳನ್ನೋ ಇಂತಹ ವಿವರಣೆಗಳಿಗೆ ಅವರು ಅರ್ಥಪೂರ್ಣವಾಗಿ ಬಳಸಿಕೊಂಡು ಹೇಳುವ ರೀತಿಯೂ ತಾಜಾ ಎನ್ನಿಸುತ್ತದೆ. ಕಳೆದ ಭಾನುವಾರ ಅವರನ್ನು ಕಂಡುಬರಲು ಹೋದಾಗ ಸಾಹಿತ್ಯಗೀಹಿತ್ಯ ಎಲ್ಲ ಬಿಟ್ಟುಬಿಟ್ಟಿದ್ದೀನಿ ಈಗ ಎಂದವರು ತುಸು ತಡೆದು ಹೇಳಿದರು:
“ಮೊದಲು ಬಹಳ ಮಾತಾಡತಿದ್ದೆ. ಈಗ ಬಿಟ್ಟುಬಿಟ್ಟಿದ್ದೀನಿ. ಔತ್ತಮ್ಯ ಬೇಕು. ಯಾಕಪಾ ಅಂದ್ರೆ ಅದ್ರಲ್ಲಿ ನಂಗೆ ರುಚಿ ಇದೆ. ನಮ್ಮಪ್ಪ, ಅಮ್ಮ ಹಾಗೆ ಇದ್ದರು. ಆಮೇಲೆ ನಮ್ಮ ಗುರುಗಳು ಹಾಗೆ ಇದ್ದರು. ಒಮ್ಮೆ ವಿದ್ಯಾರ್ಥಿ ಭವನದಲ್ಲಿ ದೋಸೆ ತಿಂದ ಮೇಲೆ ನಿಮಗೆ ಬೇರೆ ಕಡೆಯ ದೋಸೆ ರುಚಿಸೋದಿಲ್ಲ. ಯಾಕೆಂದರೆ ಅದು ಹಾಗಿರುತ್ತೆ. ಸುಮ್ಮನೇ ವಿದ್ಯಾರ್ಥಿ ಭವನಕ್ಕೆ ಹೋಗಿ ದನದ ಹಂಗೆ ತಿಂದು ಬರೋದಲ್ಲ. ಅದರ ಬೆಲೆಯೇನು, ಅದರ ರುಚಿಯೇನು, ಅದನ್ನು ಅನುಭವಿಸುತ್ತ ತಿನ್ನಬೇಕು. ಅದಕ್ಕೇ ರಸಿಕ, ರಸಿಯಾ ಅಂತಾರೆ. ನಾವೇನು ಕಲ್ಚರ್ ಎನ್ನುತ್ತೀವಲ್ಲ, ಅದಿಲ್ಲದಿದ್ದರೆ ಏನು ಮಾಡೋದು? ವೇದದಾಗೆ ಏಕಂ ಸತ್ ವಿಪ್ರಾ, ಬಹುಧಾ ವದಂತಿ ಅಂತ ಇದೆ. ಏಕಂ ಸತ್… ಇರೋದೊಂದೇ ಸತ್ಯ. ಅದನ್ನು ಹಿಂಗೂ ವ್ಯಂಗ್ಯವಾಗಿ ಹೇಳಬಹುದು… ಇರೋದೊಂದೇ ವಿದ್ಯಾರ್ಥಿ ಭವನ” ಎನ್ನುತ್ತಲೇ ನಕ್ಕರು.
ಸಂಗೀತ ಕಲಿಕೆಗೆ, ರಿಯಾಜ್ ಮಾಡುವುದಕ್ಕೆ ಹೇಗೆ ಕೇಳ್ಮೆಯ ಸಂಸ್ಕಾರ ಬೇಕು, ಆ ರುಚಿ ಗೊತ್ತಿರಬೇಕು ಎನ್ನುವುದನ್ನು ವಿವರಿಸುತ್ತಿದ್ದವರು “ಈ ಕಹಿ ಏನಿದೆಯಲ್ಲ, ಅದಕ್ಕೊಂದು ಸಾಮಾಜಿಕ ಆಸ್ಪೆಕ್ಟ್ ಇದೆ” ಎಂದರು. ನನಗೆ ಅಚ್ಚರಿಯೆನ್ನಿಸಿತು.
“ಸಂಸ್ಕಾರ ಅನ್ನೋದು ಹಿಂಗೆ ಉಪಯೋಗಕ್ಕೆ ಬರುತ್ತೆ. ಈಗ ಇಲ್ಲಿಯ ಅಡುಗೆಯನ್ನು ನಾನೂ ತಿಂತೀನಿ, ಅಮೆರಿಕದವನೂ ತಿಂತಾನೆ. ನನಗೆ ರುಚಿ ಗೊತ್ತಾಗುತ್ತೆ, ಅವನಿಗೆ ಅಷ್ಟು ಗೊತ್ತಾಗೋದಿಲ್ಲ. ಯಾಕಂದ್ರೆ ನನಗೆ ಬೇರೆ ಬೇರೆ ಕಡೆಗೆ ತಿಂದು, ರುಚಿ ನೋಡಿ ಗೊತ್ತಿರುತ್ತೆ. ಈ ಕಹಿ ಏನಿದೆಯಲ್ಲ, ಅದಕ್ಕೊಂದು ಸಾಮಾಜಿಕ ಆಸ್ಪೆಕ್ಟ್ ಇದೆ. ಮಗು ಒಂದೇ ಇದ್ದಾಗ ಏನೂ ಗೊತ್ತಿರಲ್ಲ. ಬೆಳೀತಾ ಬೆಳೀತಾ ಎಲ್ಲೊ ಒಂದು ಗೊಜ್ಜು, ವ್ಹಿಸ್ಕಿ, ಸಿಗರೇಟು ಇಂಥವು ಗೊತ್ತಾಗುತ್ತೆ. ಸಿಹಿ ಅನ್ನೋದು ಮೊದಲೇ ತಾಯಿ ಹಾಲಿನ ಜೊತೆಗೆ ಬಂದುಬಿಡುತ್ತೆ. ಹಾಗಲಕಾಯಿ ಬರೋದಿಲ್ಲ. ಅದಕ್ಕೊಂದು ಸಾಮಾಜಿಕ ಆಸ್ಪೆಕ್ಟ್ ಇದೆ. ನಾವೇನು ಒಪ್ಪುತ್ತೀವಿ, ಏನು ಒಪ್ಪೋದಿಲ್ಲ, ಇವೆರಡರ ಮೇಲೆ ಅವಲಂಬಿತವಾಗಿದೆ ಅದನ್ನು, ಆ ಕಲೆಯನ್ನು ಹ್ಯಾಗೆ ಬೆಳೆಸ್ತೀವಿ ಅನ್ನೋದು. ಒಪ್ಪದ್ದು, ಒಪ್ಪದೇ ಇರೋದು, ಇದರ ಕಾಂಬಿನೇಶನ್ನೇ ಕಲೆ. ಒಪ್ಪದೇ ಇರೋದನ್ನು ಅಲ್ಲಿ ಇಲ್ಲಿ ತಿದ್ದುತೀವಿ. ಅದಕ್ಕೇ ಹಾಗಲಕಾಯಿ ತಿನ್ನುತೀವಿ. ಬರೇ ಹಾಗಲಕಾಯಿ ತಿನ್ನೋದಕ್ಕೆ ಅಗೋದಿಲ್ಲ. ಅದ್ರ ಒಂದು ಉಪ್ಪಿನಕಾಯಿಯಾದ್ರೂ ಮಾಡಿ ತಿಂತೀವಿ. ಒಪ್ಪದ್ದನ್ನೂ ನಾನು ಮುಟ್ಟಬಲ್ಲೆ ಎನ್ನೋ ಒಂಥರದ ಧೈರ್ಯ. ಇನ್ನು ಕೆಲವರು ಬೇವಿನ ಸೊಪ್ಪನ್ನೇ ತಿಂದುಬಿಡುತಾರೆ, ಅದು ದಡ್ಡ ಧೈರ್ಯ”
******
ಪಂ. ರಾಜೀವರೆಂದರೆ ಶುದ್ಧಾಂತಃಕರಣದ, ಒಳಗೊಳಗೇ ಮಿಡಿಯುವ ಕಾಳಜಿ. ತಮ್ಮೊಡನೆ ತಬಲಾ ನುಡಿಸುವ ಸಾಥಿದಾರರು, ಸಹಕಲಾವಿದರ ಕುರಿತು ಇನ್ನಿಲ್ಲದ ಬೆಚ್ಚನೆಯ ಆಪ್ತ ಕಕ್ಕುಲಾತಿ. ಯಾರಿಗೋ ಆರೋಗ್ಯ ಸರಿಯಿಲ್ಲ ಅಥವಾ ಇನ್ನೇನೋ ತೊಂದರೆ ತಟ್ಟನೆ ಸಹಾಯಕ್ಕೆ ಚಾಚುವ ಕೈಗಳು ಅವು. ನನಗಿನ್ನೂ ನೆನಪಿದೆ, ಉಸ್ತಾದ್ ಫಯಾಜ್ ಖಾನರಿಗೆ ಅಪಘಾತವಾಗಿ, ಅವರ ಪತ್ನಿ ನಿಧನರಾದ ಸಮಯದಲ್ಲಿ ಅಮೆರಿಕದಲ್ಲಿ ಕಛೇರಿ ಪ್ರವಾಸದಲ್ಲಿದ್ದ ರಾಜೀವರಿಂದ ನನಗೆ ಫೋನ್. ನೀವೂ ಸಹಾಯ ಮಾಡಿ, ಜೊತೆಗೆ ಬೇರೆಯವರಿಗೂ ಹೇಳಿ ಎಂದರು. ಮತ್ತೆ ನಾಲ್ಕಾರು ದಿನಗಳ ನಂತರ ಕರೆ ಮಾಡಿ ಏನಾಯಿತು ಎಂದು ವಿಚಾರಿಸಿದರು. ನಾನು ನನ್ನ ಮತ್ತು ನನ್ನ ಸ್ನೇಹಿತರ ಕಡೆಯಿಂದ ಮಾಡಿದ ಸಹಾಯದ ಬಗ್ಗೆ ಹೇಳಿದಾಗ, “ಭೇಷಾಯಿತು. ಒಬ್ಬರಿಗೊಬ್ಬರು ಈಗ ಆಗದಿದ್ದರೆ ಇನ್ಯಾವಾಗ…” ಎಂದವರು ಫೋನಿಟ್ಟರು.
ಇನ್ನೊಮ್ಮೆ ಅವರು ಅಮೆರಿಕಾ ಪ್ರವಾಸದಲ್ಲಿದ್ದಾಗ ಆತಂಕದಿಂದ ಫೋನ್ ಮಾಡಿದರು. ಬಾಲ್ಯದ ಗೆಳೆಯ ಡಿ.ಬಿ. ಹರೀಂದ್ರರು ಹೇಗಿದ್ದಾರೆ ಅಂತ ಯೋಚನೆಯಾಗಿತ್ತು ಅವರಿಗೆ. ‘ನಾನು ಇಲ್ಲಿಂದ ಫೋನ್ ಮಾಡಿದರೆ ಅವರಿಂದ ಉತ್ತರ ಬರುತ್ತಿಲ್ಲ, ನೀವೊಮ್ಮೆ ಮಾಡಿ ತಿಳಿದುಕೊಂಡು ನನಗೆ ಹೇಳಿ, ನಾಳೆ ಇದೇ ವೇಳೆಗೆ ಫೋನ್ ಮಾಡುತ್ತೇನೆ’ ಎಂದರು. ನಾನು ನಾಲ್ಕಾರು ಸಲ ಹರೀಂದ್ರರ ಮನೆಗೆ ಫೋನಾಯಿಸಿದೆ. ಫೋನ್ ರಿಂಗ್ ಆಯಿತೇ ವಿನಃ ಅವರಿಂದ ಉತ್ತರವಿಲ್ಲ. ಅದು ಮೊಬೈಲ್ ಇನ್ನೂ ಅಷ್ಟು ಚಾಲ್ತಿ ಇಲ್ಲದಿದ್ದ ದಿನಗಳು. ಹರೀಂದ್ರರು ಇವರಿಗಿಂತ ಸುಮಾರು ಎಂಟು ವರ್ಷಕ್ಕೆ ದೊಡ್ಡವರು, ಆರೋಗ್ಯ ಸರಿಯಿಲ್ಲವೋ ಏನೋ ಎಂದು ನನಗೂ ಆತಂಕ. ಅಲ್ಲದೇ ರಾಜೀವಜಿಯವರು ಮರುದಿನ ಫೋನ್ ಮಾಡಿದರೆ ಏನು ಹೇಳುವುದಪ್ಪ ಎಂಬ ಚಿಂತೆ ಕೂಡ. ಹೀಗಾಗಿ ಖುದ್ದು ವಿಚಾರಿಸೋಣವೆಂದು ಮರುದಿನ ಆಫೀಸಿಗೆ ಹೋಗುವ ಮೊದಲು ಅವರ ಮನೆಗೆ ಹೋದೆ. ಹರೀಂದ್ರರು ಸ್ವಸ್ಥ ಮಲಗಿದ್ದರು. ಫೋನ್ ಡೆಡ್ ಆಗಿದೆ ಎಂದು ಅವರ ಪತ್ನಿ ನಸುನಕ್ಕರು. ಮರುದಿನ ಹೇಳಿದ ಸಮಯಕ್ಕೆ ಗಂಟೆ ಹೊಡೆದಂತೆ ರಾಜೀವಜಿಯವರ ಫೋನ್. ಹರೀಂದ್ರರು ಆರೋಗ್ಯವಾಗಿದ್ದಾರೆ ಎಂಬುದನ್ನು ಕೇಳುತ್ತಿದ್ದಂತೆ, ‘ಹೌದಾ’ ಎಂದು ಒಂದು ನಿರಾಳತೆಯ ನಗು ನಕ್ಕರು.
*****
“ದಿನಾ ಎರಡು ಮೂರು ಗಂಟೆ ಪ್ರಾಕ್ಟೀಸ್ ಮಾಡತೀನಿ. ಹಂಗೆ ಮಾಡಿದೆ ಅಂದ್ರೆ ನಾ ಆರಾಮಿದ್ದೀನಿ ಅಂತಲೇ ಲೆಕ್ಕ” ಎನ್ನುವ ರಾಜೀವಜಿಯರಿಗೆ ರಿಯಾಜ್ ಎಂದರೆ ಇಬಾದತ್… ರಿಯಾಜ್ ಎಂದರೆ ಪೂಜೆ. ರಿಯಾಜ್ ಎಂದರೆ ಖಾಸಗಿಯಾದ ಅಭ್ಯಾಸ. ಸರೋದ್ ಕಲಿಯಲು ಆರಂಭಿಸಿದ ದಿನಗಳಲ್ಲಿ ದಿನಕ್ಕೆ ಹತ್ತು-ಹನ್ನೆರಡು ಕೆಲವೊಮ್ಮೆ ಹದಿನಾರು ಗಂಟೆಗಳ ಅಭ್ಯಾಸವನ್ನು ಮಾಡುತಿದ್ದರು. ‘ಸರೋದ್ ನನ್ನದೇ ಕೈಗಳ ವಿಸ್ತೃತ ಭಾಗವೇನೋ ಅನ್ನಿಸುವಷ್ಟರ ಮಟ್ಟಿಗೆ ಅಭ್ಯಾಸ ಮಾಡುತ್ತಿದ್ದೆ. ಆದರೆ ಆಗ ಕೆಲವೊಮ್ಮೆ ಮನಸ್ಸನ್ನು ಅದರಲ್ಲೇ ನೆಡುವುದು ಕಷ್ಟ ಆಗುತ್ತಿತ್ತು. ನನ್ನ ಪರಿಸ್ಥಿತಿಯೂ ಸರಿಯಾಗಿರಲಿಲ್ಲ. ಕೈಯಲ್ಲಿ ದುಡ್ಡಿಲ್ಲ, ಬಡತನ, ಹಸಿವೆ. ಕೆಲವೊಮ್ಮೆ ನುಡಿಸ್ತಾ ಹಾಗೆ ನಿದ್ದೆ ಬಂದುಬಿಡೋದು. ಇವಾಗ ಆ ಬಡತನವಿಲ್ಲ… ಆದರೆ ವಯಸ್ಸಾಗಿಬಿಟ್ಟಿದೆ! ಈಗ ನಾನು ಸುಮ್ಮನೆ ಇಲ್ಲಿಂದ ಅಲ್ಲೀವರೆಗೆ ಅಂತ ಮಾಡಲ್ಲ, ಸಿಲೆಕ್ಟಿವ್ ಆಗಿ ರಿಯಾಜ್ ಮಾಡ್ತೀನಿ. ಯಾವುದರ ಮೇಲೆ ಹೆಚ್ಚು ಜೋರು ಕೊಡಬೇಕು, ಯಾವುದನ್ನು ನವಿರಾಗಿಸಬೇಕು, ಸಾಂಗೀತಿಕ ಕಲ್ಪನೆಯನ್ನು ಹ್ಯಾಗೆ ಬೆಳೆಸಬೇಕು, ಯಾವ ದಿಕ್ಕಿನಲ್ಲಿ ಹೋಗಬೇಕು, ಅದನ್ನು ನೋಡೋದು. ಹೆಚ್ಚೆಚ್ಚು ಜಾಗೃತಿಯಿಂದ ಗಮನಿಸೋದು’ ಎಂದೊಮ್ಮೆ ವಿವರಿಸಿದ್ದರು.
ಹಾಗೆ ನೋಡಿದರೆ ಅವರ ರಿಯಾಜ್ ಮತ್ತು ಗುರುಸ್ಮರಣೆ ಬೆಸೆದುಕೊಂಡಿರುತ್ತದೆ. ಗುರುಗಳು ಕಲಿಸಿದ್ದು ಎಂದು ನೆನಪಿಸಿಕೊಳ್ಳುತ್ತ, ಅದನ್ನೊಮ್ಮೆ ಮೆಲ್ಲಗೆ ಗುಣುಗುಣಿಸುತ್ತ, ಅವೇ ಸ್ವರಗಳನ್ನು ಕೊರಳಿನಿಂದ ಬೆರಳಿಗೆ ಇಳಿಸುತ್ತ, ಸರಿಯೆನ್ನಿಸಲಿಲ್ಲ ಎಂದರೆ ಮತ್ತಷ್ಟು ಎಚ್ಚರಿಕೆಯಿಂದ ಅದನ್ನು ಉಜ್ಜುತ್ತ, ಸರಿಯಾಗಿ ಬಂದಿದೆ ಎಂದು ಮನಸ್ಸಿಗೆ ಅನ್ನಿಸುವವರೆಗೂ ರಿಯಾಜ್ ನಡೆಯುತ್ತದೆ.
****
ರಾಜೀವಜಿಯವರು ಮೊದಲು ಸರೋದ್ ಕಲಿಯುವುದಕ್ಕಾಗಿ, ನಂತರ ಪುನಃ ಸರೋದ್ ಲೋಕಕ್ಕೆ ಮರಳಲಿಕ್ಕಾಗಿ; ವೃತ್ತಿ ಭದ್ರತೆಯಿದ್ದ, ಆರಾಮದಾಯಕ ಬದುಕು ನಡೆಸಬಹುದಾಗಿದ್ದ ಕೆಲಸಕ್ಕೆ ರಾಜೀನಾಮೆ ಕೊಟ್ಟಿದ್ದು ಎರಡು ಸಲ ಎನ್ನುವುದು ಕುತೂಹಲದ ಸಂಗತಿ. ರಾಜೀವರು ಮೊತ್ತಮೊದಲ ಕೆಲಸಕ್ಕೆ ಸೇರಿದ್ದು 1955ರ ಜುಲೈ ಒಂದರಂದು. ಅದೇ ವರ್ಷ ಅಕ್ಟೋಬರಿನಲ್ಲಿ ಉಸ್ತಾದ್ ಅಲಿ ಅಕ್ಬರ್ ಖಾನರನ್ನು ಸಂಪರ್ಕಿಸಿ, ಅವರಲ್ಲಿಗೆ ಹೋಗಿ, ಸರೋದ್ ಕಲಿಯುವ ಬಯಕೆಯನ್ನು ವ್ಯಕ್ತಪಡಿಸಿ ಎಂಟು ದಿನವಿದ್ದು ಮರಳಿದ್ದರು. ಸರೋದ್ ಕಲಿಯಲೇಬೇಕೆಂಬ ಉತ್ಕಟ ಆಸೆ, ಛಲದಿಂದ 1955ರ ಡಿಸೆಂಬರಿನಲ್ಲಿ ಉಪನ್ಯಾಸಕ ವೃತ್ತಿಗೆ ರಾಜೀನಾಮೆ ಕೊಟ್ಟು, ಎಲ್ಲವನ್ನೂ ಬಿಟ್ಟು ಕಲ್ಕತ್ತೆಗೆ ನಡೆದಾಗ ಅವರಿಗೆ 23 ವರ್ಷ.
ಐದು ವರ್ಷ ಸರೋದ್ ಕಲಿತು, ಎಂಎ ಮಾಡಲೆಂದು 1960ರಲ್ಲಿ ಮೈಸೂರಿಗೆ ಬಂದವರು ಪಿ.ಎಚ್. ಡಿ.ಯನ್ನೂ ಮಾಡಿದರು. ಧಾರವಾಡ, ಮೈಸೂರು, ತಿರುಚ್ಚಿ, ಹೀಗೆ ವಿವಿಧ ಊರುಗಳ ಬೇರೆಬೇರೆ ಕಾಲೇಜುಗಳಲ್ಲಿ ಪ್ರಾಧ್ಯಾಪಕ ವೃತ್ತಿಯನ್ನು ಮಾಡಿ, ಕೊನೆಗೆ ಹೈದರಾಬಾದಿನ ‘ಸೆಂಟ್ರಲ್ ಇನ್‌ಸ್ಟಿಟ್ಯೂಟ್ ಆಫ್ ಇಂಗ್ಲಿಶ್ ಆಂಡ್ ಫಾರಿನ್ ಲಾಂಗ್ವೇಜ್‌ಸ್’ (ಸಿಐಇಎಫ್‌ಎಲ್)ನಲ್ಲಿ ಇಂಗ್ಲಿಷ್ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ಕೆಲಸ ಮಾಡುತ್ತಿದ್ದರು. 1981-1982ರಲ್ಲಿ ಹೈದರಾಬಾದ್‌ನಿಂದ ಪುಣೆ ಫಿಲ್ಮ್ ಇನ್‌ಸ್ಟಿಟ್ಯೂಟ್‌ನಲ್ಲಿ ಸಿನಿಮಾ ಸಂಗೀತ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿದರು. ಸರೋದ್ ಜೊತೆಗಿತ್ತು ನಿಜ, ಆದರೆ ವೃತ್ತಿ ಒತ್ತಡಗಳ ನಡುವೆ ಅಷ್ಟು ಗಮನ ಕೊಡಲಂತೂ ಆಗುತ್ತಿರಲಿಲ್ಲ. 1982 ರಲ್ಲೊಮ್ಮೆ ಹೈದರಾಬಾದಿಗೆ ಬಂದಿದ್ದ ರವಿಶಂಕರರು ‘ಇಲ್ಲಿ ಇಂಗ್ಲಿಷಿನ ಸೌಭಾಗ್ಯ ಕಾಯುವುದು ನಿನ್ನ ಕೆಲಸವೇನು’ ಎಂದು ಚೆನ್ನಾಗಿ ಗದರಿದ್ದರು. ಮತ್ತೊಮ್ಮೆ ಕೂಗಿ ಕರೆಯಿತು ಸರೋದ್ ನಾದ. ಹೈದರಾಬಾದ್ ಕೆಲಸಕ್ಕೆ ಮತ್ತು ಪುಣೆಯ ಫಿಲ್ಮ್ ಇನ್‌ಸ್ಟಿಟ್ಯೂಟ್‌ಗೆ ರಾಜೀನಾಮೆ ಕೊಟ್ಟರು. ಎಲ್ಲವನ್ನೂ ತೊರೆದು ಸರೋದ್ ಹಿಡಿದು ಬೆಂಗಳೂರಿಗೆ ಮರಳಿದರು.
ಹಾಗೆ ಎರಡನೆಯ ಬಾರಿಗೆ ಒಳ್ಳೆಯ ಕೆಲಸವನ್ನು ತ್ಯಜಿಸಿ, ಸರೋದ್ ತಂತಿಗಳನ್ನೇ ನೆಚ್ಚಿಕೊಂಡು ಹೊರಟಾಗ ಅವರಿಗೆ ಸರಿಯಾಗಿ 50 ವರ್ಷವಾಗಿತ್ತು. ಮೊದಲನೆಯ ಸಲ ಇರುವುದೆಲ್ಲವ ಬಿಟ್ಟು ಹೊರಟಾಗ ಯೌವ್ವನದ ಹುಮ್ಮಸ್ಸಿತ್ತು, ಅನೂಹ್ಯವಾಗಿದ್ದನ್ನು ಕೈಗೂಡಿಸಿಕೊಳ್ಳುವ ಅದಮ್ಯ ಚೇತನವಿತ್ತು. ಎರಡನೆಯ ಸಲ ಯೌವ್ವನದ ಹುಮ್ಮಸ್ಸು ತುಸುಮಟ್ಟಿಗೆ ಕರಗಿತ್ತು, ಆದರೆ ಮನೋಬಲ ಮೊದಲಿಗಿಂತ ಅಧಿಕವಿತ್ತು. ಹೀಗೆಲ್ಲ ನೋಡಿದಾಗ ರಾಜೀವಜಿಯವರ ಒಂಬತ್ತು ದಶಕಗಳ ಬದುಕು ಎಂಥ ಹೋರಾಟದ, ಸಂಘರ್ಷದ ಬದುಕಾಗಿದೆ… ಆದರೆ ಎಂದೂ ಎದೆಗುಂದದೆ, ಸಂಗೀತವನ್ನೇ ನೆಚ್ಚಿಕೊಂಡು, ಇಷ್ಟು ಎತ್ತರ ಏರುವುದಕ್ಕೆ ಸಾಧ್ಯವಾದ ಅವರ ಮನೋಬಲ, ಏಕಾಗ್ರತೆ, ಒಳಗೊಳಗೇ ಕಾಪಿಟ್ಟುಕೊಂಡ ಅದಮ್ಯ ಚೈತನ್ಯದ ಬಗ್ಗೆ ಅಚ್ಚರಿಯೆನ್ನಿಸುತ್ತದೆ, ಅಭಿಮಾನವೆನ್ನಿಸುತ್ತದೆ.
ಸುಮಂಗಲಾ ಶಿವಮೊಗ್ಗದ ಸಾಗರದವರು. ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಸರೋದ್ ಮಾಂತ್ರಿಕ ಪಂಡಿತ್ ರಾಜೀವ ತಾರಾನಾಥ ಜೀವನ ರಾಗ, ಚರ್ನೋಬಿಲ್ ಪ್ರಾರ್ಥನೆ (ಅನುವಾದಿತ ಕೃತಿ), ಹನ್ನೊಂದನೇ ಅಡ್ಡರಸ್ತೆ, ಜುಮುರು ಮಳೆ, ಕಾಲಿಟ್ಟಲ್ಲಿ ಕಾಲುದಾರಿ (ಕಥಾ ಸಂಕಲನಗಳು) ಅವರ ಪ್ರಕಟಿತ ಕೃತಿಗಳು.