ಕವಿತೆ ಮತ್ತು ಕಾದಂಬರಿಗಳಲ್ಲಿ ನಡೆಸಿದ ವಾಸ್ತವ ನೆಲೆಯ ಹುಡುಕಾಟವನ್ನು ಅವರು ಇಲ್ಲೂ ನಡೆಸಿದ್ದಾರೆ. ‘ಜಾಗುವಾ ಮತ್ತು ಇತರರು’ ಕತೆಗಳಲ್ಲಿರುವಷ್ಟು ನವ್ಯದ ಪ್ರಖರತೆ ‘ಕೆಲವು ಕಥಾನಕಗಳ’ಲ್ಲಿ ಇಲ್ಲದಿದ್ದರೂ ಮುಖ್ಯ ಕಾಳಜಿಗಳು ಮಾತ್ರ ಮೊದಲಿನವೇ. ಜೀವನದ ಇರುವಿಕೆಯ ರೀತಿ, ರಹಸ್ಯಗಳ ಶೋಧನೆಗಳು ಮತ್ತು ಪರಕೀಯ ಪ್ರಜ್ಞೆಯ ಆಧಾರದಲ್ಲಿ ಮೂಡುವ ದಾರ್ಶನಿಕ ಒಳನೋಟಗಳು ಮುಖ್ಯವಾಗುತ್ತವೆ. ಇಂಥ ಸಂಗತಿಗಳೂ ಕತೆಗಳಾಗಬಲ್ಲವೇ ಎಂದು ಬೆರಗನ್ನು ಹುಟ್ಟಿಸಬಲ್ಲ ಕತೆಗಳನ್ನು ಇಲ್ಲಿ ಕಾಣಬಹುದು. “ಸಾಂಪ್ರದಾಯಿಕ ಕತೆಗಳ ಮಾದರಿಯನ್ನು ಮುರಿಯಬಲ್ಲ ಕತೆಗಳಿವು” ಎಂದು ಶ್ರೀಧರ ಹೆಗಡೆ ಭದ್ರನ್ ಅವರು ಹಿನ್ನುಡಿಯಲ್ಲಿ ಸರಿಯಾಗಿಯೇ ಗುರುತಿಸಿದ್ದಾರೆ. ತಿರುಮಲೇಶರ ಕತೆಗಳ ಮನೋಧರ್ಮವನ್ನು ತಿಳಿಯಬೇಕಿದ್ದರೆ ‘ಜೀತಜಾಲ’ ಕತೆಯನ್ನು ಓದಬೇಕು.
ಕೆ.ವಿ. ತಿರುಮಲೇಶರ ಕತೆಗಳ ಕುರಿತು ಬರೆದಿದ್ದಾರೆ ಡಾ. ಸುಭಾಷ್ ಪಟ್ಟಾಜೆ
ನವ್ಯ ಮತ್ತು ಅದರ ಮುಂದಿನ ಪೀಳಿಗೆಯ ತರುಣ ಕತೆಗಾರರನ್ನು ಆಳವಾಗಿ ಪ್ರಭಾವಿಸಿದ ಕೆ. ವಿ. ತಿರುಮಲೇಶರು ಅನೇಕ ದೃಷ್ಟಿಯಿಂದ ಕನ್ನಡದ ಸಣ್ಣಕತೆಯ ಕಲಾತ್ಮಕ – ವೈಚಾರಿಕ ಆಯಾಮಗಳನ್ನು ಬದಲಿಸಿದರು. ಸಿದ್ಧ ಮಾನದಂಡಗಳಿಲ್ಲದೆ ನೇರವಾಗಿ ಆರಂಭಗೊಳ್ಳುವ ಇವರ ಕತೆಗಳು ಆಪ್ತವೆನಿಸುವ ನಿರೂಪಣ ವಿಧಾನವನ್ನು ಹೊಂದಿವೆ. ನಿರೂಪಣೆಗೆ ಸೂಕ್ತವಾದ ವಿಕಸನಶೀಲ ಭಾಷೆಯಿದೆ. ಸವಕಲು ಹಾದಿಯಿಂದ ಹೊಸ ಹಾದಿಯೊಳಗೆ ತವಕದಿಂದ ಮುನ್ನುಗ್ಗುವ ವೇಗವಿದೆ. ಹಲವಾರು ವರ್ಷಗಳಿಂದ ಬರೆಯುತ್ತಲೇ ಇರುವ ತಿರುಮಲೇಶರು ಸದಾ ಹೊಸತನ್ನೇ ಕಾಣಿಕೆಯಾಗಿ ನೀಡುತ್ತಿದ್ದಾರೆ.
ಅವರ ‘ನಾಯಕ ಮತ್ತು ಇತರರು’ ಎಂಬ ಸಂಕಲನದಲ್ಲಿ ನವ್ಯ ಪ್ರಜ್ಞೆಯು ದಟ್ಟವಾಗಿದ್ದು ಪರಕೀಯತೆಯು ರೋಗಿಷ್ಠ ನೆಲೆಯಲ್ಲಿಯೇ ಕಾಣಿಸಿಕೊಳ್ಳುತ್ತದೆ. ಅದರ ನಂತರ ಬಿಡುಗಡೆಗೊಂಡ ‘ಜಾಗುವಾ ಮತ್ತು ಇತರರು’ ಸಂಕಲನದ ‘ಇನ್ನೊಬ್ಬ’ ಎಂಬ ಕತೆಯು ಪರಕೀಯತೆಯನ್ನು ಮೀರುವ ಸಾಧ್ಯತೆಗಳನ್ನು ಒಳಗೊಂಡಿರುವುದರಿಂದ ಮಹತ್ವದ್ದಾಗುತ್ತದೆ. ಕತೆಯ ನಾಯಕ ರಾಮನ್ ನಾಯರ್ ಹಲವು ವರ್ಷಗಳ ಕಾಲ ಕಮ್ಯೂನಿಸ್ಟನೂ ಭೌತಿಕವಾದಿಯೂ ಆಗಿರುತ್ತಾನೆ. ಹೊಲಮನೆ, ವ್ಯವಸಾಯಗಳೇ ಅವನ ಪ್ರಪಂಚವಾಗಿತ್ತು. ಮಣ್ಣಿನಿಂದ ಮನುಷ್ಯ ಎಷ್ಟು ಬೆಳೆ ತೆಗೆಯಬಹುದೋ ಅಷ್ಟು ತೆಗೆಯುತ್ತಾನೆ. ದೈಹಿಕ ಶಕ್ತಿಯನ್ನು ಸಂಪೂರ್ಣ ಉಪಯೋಗ ಮಾಡಿ ದುಡಿಯುತ್ತಾನೆ. ಅದರಲ್ಲಿ ಸುಖವೇನೋ ಇತ್ತು. ಆದರೆ ಅದಕ್ಕೂ ಮಿತಿಯಿತ್ತು. ಅದುವೇ ಕಮ್ಯೂನಿಸಂ ಮತ್ತು ಭೌತಿಕವಾದದ ಮಿತಿ. ಯಾಂತ್ರಿಕ ದುಡಿತದಿಂದ ಬೇಸತ್ತು ಆತನು ಆಧ್ಯಾತ್ಮಿಕ ಶಾಂತಿಯನ್ನು ಅರಸುತ್ತಾ ಪಾರಲೌಕಿಕ ಶಕ್ತಿಯೂ ಇದೆ ಎಂದು ಅರಿತುಕೊಳ್ಳುತ್ತಾನೆ. “ಇಲ್ಲಿ ಇಷ್ಟು ಹೊತ್ತು ಇನ್ನೊಬ್ಬರು ಕುಳಿತಿದ್ದರಲ್ಲ ಅವರೇನಾದರು?” (ಜಾಗುವಾ ಮತ್ತು ಇತರರು – ಕೆ.ವಿ. ತಿರುಮಲೇಶ್ ಪುಟ 11) ಎಂಬ ಪ್ರಶ್ನೆಯೇ ಇದಕ್ಕೆ ಸಾಕ್ಷಿ. ಹೀಗೆ ಅವನು ತನ್ನ ಮಿತಿಗಳನ್ನು ದಾಟಲು ಕಾರಣವಾಗುವುದು ಅವನೊಳಗಿನ ಪರಕೀಯ ಪ್ರಜ್ಞೆಯ ಕಾರಣದಿಂದಲೇ. ‘ಕೆಲವು ಕಥಾನಕಗಳು’ ಎಂಬ ಸಂಕಲನವನ್ನು ಗಮನಿಸಿದಾಗ ಅವರ ಮೊದಲ ಕಥೆಗಳಿಗಿಂತಲೂ ಭಿನ್ನ ರಚನೆಗಳನ್ನು ಕಾಣಲು ಸಾಧ್ಯವಿದೆ. ತಮ್ಮದೇ ಆದ ವಿಶಿಷ್ಟ ಛಾಪಿನಿಂದ ಇಲ್ಲಿಯೂ ತಿರುಮಲೇಶತನ ಮಿಂಚುತ್ತದೆ.
ಕವಿತೆ ಮತ್ತು ಕಾದಂಬರಿಗಳಲ್ಲಿ ನಡೆಸಿದ ವಾಸ್ತವ ನೆಲೆಯ ಹುಡುಕಾಟವನ್ನು ಅವರು ಇಲ್ಲೂ ನಡೆಸಿದ್ದಾರೆ. ‘ಜಾಗುವಾ ಮತ್ತು ಇತರರು’ ಕತೆಗಳಲ್ಲಿರುವಷ್ಟು ನವ್ಯದ ಪ್ರಖರತೆ ‘ಕೆಲವು ಕಥಾನಕಗಳ’ಲ್ಲಿ ಇಲ್ಲದಿದ್ದರೂ ಮುಖ್ಯ ಕಾಳಜಿಗಳು ಮಾತ್ರ ಮೊದಲಿನವೇ. ಜೀವನದ ಇರುವಿಕೆಯ ರೀತಿ, ರಹಸ್ಯಗಳ ಶೋಧನೆಗಳು ಮತ್ತು ಪರಕೀಯ ಪ್ರಜ್ಞೆಯ ಆಧಾರದಲ್ಲಿ ಮೂಡುವ ದಾರ್ಶನಿಕ ಒಳನೋಟಗಳು ಮುಖ್ಯವಾಗುತ್ತವೆ. ಇಂಥ ಸಂಗತಿಗಳೂ ಕತೆಗಳಾಗಬಲ್ಲವೇ ಎಂದು ಬೆರಗನ್ನು ಹುಟ್ಟಿಸಬಲ್ಲ ಕತೆಗಳನ್ನು ಇಲ್ಲಿ ಕಾಣಬಹುದು. “ಸಾಂಪ್ರದಾಯಿಕ ಕತೆಗಳ ಮಾದರಿಯನ್ನು ಮುರಿಯಬಲ್ಲ ಕತೆಗಳಿವು” ಎಂದು ಶ್ರೀಧರ ಹೆಗಡೆ ಭದ್ರನ್ ಅವರು ಹಿನ್ನುಡಿಯಲ್ಲಿ ಸರಿಯಾಗಿಯೇ ಗುರುತಿಸಿದ್ದಾರೆ. ತಿರುಮಲೇಶರ ಕತೆಗಳ ಮನೋಧರ್ಮವನ್ನು ತಿಳಿಯಬೇಕಿದ್ದರೆ ‘ಜೀತಜಾಲ’ ಕತೆಯನ್ನು ಓದಬೇಕು.
ಕತೆ ಎಂದರೇನು ಎಂಬುದರ ಮೀಮಾಂಸೆ ‘ಜೀತಜಾಲ’ದಲ್ಲಿದೆ. ಇದು ಕತೆಗಳನ್ನು ಕುರಿತ ಕತೆಯಾದರೂ ಇದರಲ್ಲಿ ವ್ಯಾಪಾರಿ ಮಸಾಲೆ ಸಿನೇಮಾದ ಕತೆ ಅಥವಾ ಸಿನೇಮಾ ಶುರುವಾಗುತ್ತದೆ. ಓದುಗನು ಅಪೇಕ್ಷಿಸುವ ಸಾಹಿತ್ಯದ ಪರಿಕಲ್ಪನೆ ಕತೆ ಎಂದರೇನು ಎಂಬುದನ್ನು ಮುರಿಯಲೆತ್ನಿಸುವ ಈ ಕತೆಯು ಇಲ್ಲಿನ ಪ್ರಾತಿನಿಧಿಕ ಕತೆಯಾಗಿದೆ. ಡಾ. ಯು. ಮಹೇಶ್ವರಿ ಅವರು ‘ಕೆಲವು ಕಥಾನಕಗಳ’ಲ್ಲಿರುವ ಕತೆಗಳನ್ನು ವಿಶ್ಲೇಷಿಸುತ್ತಾ “ಸಂಗ್ರಹದ ಆರಂಭದ ಕತೆ ‘ಜೀತಜಾಲ’ವು ಕತೆಗಳ ಬಗೆಗೇ ಹೊಸೆದ ಕತೆ. ಅಪೂರ್ಣ ಕತೆಯೊಂದು ಚಿತ್ರಕತೆಯಾಗುವ ಸಂದರ್ಭದಲ್ಲಿ ಸಮಕಾಲೀನ ಅಗತ್ಯ ಅಭಿರುಚಿಗಳಿಗನುಗುಣವಾಗಿ ಕೂಡಿಕೊಳ್ಳಬಹುದಾದ ಅಂಶಗಳನ್ನು ಸೂಚಿಸುವ ಈ ಕತೆ ಒಟ್ಟು ಸಂಗ್ರಹಕ್ಕೆ ಬರೆದ ಕಥಾಮುಖದಂತೆಯೂ ಇದೆ” (ಗಡಿನಾಡ ಬಾನಾಡಿ ಪ್ರತಿಭೆ ಡಾ. ಕೆ.ವಿ. ತಿರುಮಲೇಶ್- ಪುಟ 19) ಎಂದು ಸರಿಯಾಗಿಯೇ ಗುರುತಿಸಿದ್ದಾರೆ. ಆದರೆ ಕತೆ ಅಷ್ಟಕ್ಕೇ ನಿಲ್ಲುವುದಿಲ್ಲ. ಕತೆಗಳಿಗೆ ಮಾನವ ಸಹಜ ಗುಣಗಳನ್ನು ಆರೋಪಿಸುವ ಮೂಲಕ ಕತೆಗಳ ನಡೆನುಡಿಗಳನ್ನು ವಿವರಿಸುವ ಈ ಕತೆಯು ಸಮಾಜದ ವಿವಿಧ ರಂಗಗಳಲ್ಲಿರುವ ಮನುಷ್ಯರ ಚರ್ಯೆ, ಮದ, ಮತ್ಸರ, ಈರ್ಷ್ಯೆ ಸಣ್ಣತನ, ಪರಕೀಯ ಪ್ರಜ್ಞೆ – ಹೀಗೆ ಮನುಷ್ಯರ ಒಟ್ಟು ಸ್ವಭಾವಕ್ಕೆ ಕನ್ನಡಿ ಹಿಡಿಯುತ್ತದೆ.
“ಸಂಜೆಯ ವೇಳೆ ಊರ ಕತೆಗಳೆಲ್ಲ ಒಂದೆಡೆ ಸೇರುತ್ತಿದ್ದವು. ಸಣ್ಣ ಕತೆಗಳು, ದೊಡ್ಡ ಕತೆಗಳು, ಗಂಡು ಕತೆಗಳು, ಹೆಣ್ಣು ಕತೆಗಳು, ಮೈಮುಚ್ಚಿದ ಕತೆಗಳು, ಮೈಬಿಚ್ಚಿದ ಕತೆಗಳು, ಪುಂಡ ಕತೆಗಳು, ಗರತಿ ಕತೆಗಳು, ಮರಿ ಕತೆಗಳು, ಅಪೂರ್ಣ ಕತೆಗಳು ಎಲ್ಲವೂ. ಕೆಲವು ಕತೆಗಳು ಇನ್ನೊಂದರ ನಕಲಿನಂತೆಯೇ ಇದ್ದವು. ಆದರೆ ಅಸಲಿ ಯಾವುದು ನಕಲಿ ಯಾವುದು ಎಂಬುದು ಈಗ ಎಲ್ಲರಿಗೂ ಮರೆತು ಹೋಗಿತ್ತು. ಅವು ಅಲ್ಲಲ್ಲಿ ಕೂತು ಲೋಕಾಭಿರಾಮ ಮಾತಾಡುತ್ತಿದ್ದವು” (ಕೆಲವು ಕಥಾನಕಗಳು-ಪುಟ 9)
ಕತೆ ಎಂದರೇನು ಎಂಬುದರ ಮೀಮಾಂಸೆ ‘ಜೀತಜಾಲ’ದಲ್ಲಿದೆ. ಇದು ಕತೆಗಳನ್ನು ಕುರಿತ ಕತೆಯಾದರೂ ಇದರಲ್ಲಿ ವ್ಯಾಪಾರಿ ಮಸಾಲೆ ಸಿನೇಮಾದ ಕತೆ ಅಥವಾ ಸಿನೇಮಾ ಶುರುವಾಗುತ್ತದೆ. ಓದುಗನು ಅಪೇಕ್ಷಿಸುವ ಸಾಹಿತ್ಯದ ಪರಿಕಲ್ಪನೆ ಕತೆ ಎಂದರೇನು ಎಂಬುದನ್ನು ಮುರಿಯಲೆತ್ನಿಸುವ ಈ ಕತೆಯು ಇಲ್ಲಿನ ಪ್ರಾತಿನಿಧಿಕ ಕತೆಯಾಗಿದೆ.
ಮುಂದೆ ಮನುಷ್ಯ ಮತ್ತು ಕತೆಗಳನ್ನು ಬೆಸೆಯುವ ಕೊಂಡಿಯಾಗಿ ಕತೆಗಳ ಪೈಕಿ ಅಮುಖ್ಯವೆಂದು ತಿರಸ್ಕಾರಕ್ಕೊಳಗಾದ ಅಪೂರ್ಣ ಕತೆಯೊಂದು ಮುಖ್ಯವಾಗುತ್ತದೆ. ನಾಟಕ-ಸಿನೇಮಾಗಳಿಗೆ ರೂಪಾಂತರ ಹೊಂದಿ ಪ್ರಸಿದ್ಧಿಯ ತುತ್ತ ತುದಿಗೇರಿದ ಕತೆಗಳ ನಡುವೆ ತನ್ನ ಬದುಕಿಗೆ ಅರ್ಥವೇ ಇಲ್ಲ ಎಂದು ಸದಾ ಕೊರಗುತ್ತಾ ಪರಕೀಯತೆಯನ್ನು ಅನುಭವಿಸುತ್ತಾ ಪೂರ್ಣತೆಯತ್ತ ತುಡಿಯುತ್ತಿರುವ ಅಪೂರ್ಣ ಕತೆಯು ಒಂದು ದಿನ ಸಿನೇಮಾದವರ ಗಮನ ಸೆಳೆಯುತ್ತದೆ. ಯಾರಿಗೂ ಬೇಡದೆ ಅನಾಥವಾಗಿ ಬಿದ್ದಿರುವ ಆ ಕತೆಯನ್ನು ಅವರು ಕೊಂಡೊಯ್ದು ಸಿನೇಮಾ ಮಾಡಬಯಸುತ್ತಾರೆ.
ಇಲ್ಲಿ ಅಪೂರ್ಣ ಕತೆಯು ಸಿದ್ಧ ಶೈಲಿಯ ಬಿಗ್ ಬಜೆಟ್ ಚಲನಚಿತ್ರವಾಗಿ ಬದಲಾಗುವ ಮೂಲಕ ಆಧುನಿಕ ಜಗತ್ತಿನ ವ್ಯಾಪಾರೀಕರಣದ ದಾಳವಾಗುವ ದುರಂತವನ್ನು ಕಾಣುತ್ತೇವೆ. ಅಪೂರ್ಣ ಕತೆಯೊಳಗೆ ಜೊತೆ ಜೊತೆಯಲಿ ಸುತ್ತಾಡುತ್ತಿದ್ದ ಇಬ್ಬರು ವ್ಯಕ್ತಿಗಳು ನಾಯಕ-ನಾಯಕಿಯರಾಗಿ ರೂಪಾಂತರಗೊಂಡದ್ದು, ತಾಂತ್ರಿಕತೆಯ ಮೂಲಕ ಸುಂಟರಗಾಳಿ ಬೀಸುವಂತೆ ಮಾಡಿದ್ದು, ಅದ್ಭುತ ಐತಿಹಾಸಿಕ ದೃಶ್ಯಗಳ ಮರುಜೋಡಣೆಯನ್ನು ಮಾಡಿದ್ದು, ಫೆರೋನ ಕಾಲದಲ್ಲಿದ್ದ ಜೀತಜಾಲ ಈಗಲೂ ಕೆಲಸ ಮಾಡುತ್ತಿದೆ ಎಂಬ ಮೂಲಕ ಚರಿತ್ರೆ ಮತ್ತು ಸಮಕಾಲೀನ ವಿಚಾರಗಳನ್ನು ಒಂದೇ ಕೊಂಡಿಯಲ್ಲಿ ಸಿಕ್ಕಿಸಿದ್ದು ಎಲ್ಲವೂ ನೂತನ ಸಿನೇಮಾ ರಂಗವು ಸಾಮಾಜಿಕ ಬದ್ಧತೆಯನ್ನು ನೆಪವಾಗಿಟ್ಟುಕೊಂಡು ಲೈಂಗಿಕತೆ, ಮನೋರಂಜನೆ, ಸಾಹಸ ಮತ್ತು ತಾಂತ್ರಿಕತೆಯ ವಿಜೃಂಭಣೆಗಳಿಗೆ ಮಾತ್ರ ಮೀಸಲಾಗಿರುವುದನ್ನು ಟೀಕಿಸುತ್ತದೆ. ಇಲ್ಲಿ ತಿರುಮಲೇಶರು ಅಪೂರ್ಣ ಕತೆಯನ್ನು ಮುಂದಿಟ್ಟುಕೊಂಡು ವ್ಯಾಪಾರಿ ಜಗತ್ತಿನ ಒಳಸುಳಿಗಳನ್ನು ಅನಾವರಣಗೊಳಿಸಿದ್ದಾರೆ. ಇಲ್ಲಿ ಕತೆ ಯಾರಿಗೂ ಬೇಡವಾಗಿ ಕೊನೆಗೂ ಅದು ಬೇರೆಯಾಗಿಯೇ ಉಳಿಯುತ್ತದೆ.
ಮಡದಿಯ ಸಾಮಾನ್ಯ ಆಸೆಗಳನ್ನು ಪೂರೈಸಲಾಗದೆ ಒದ್ದಾಡುವ ಮಧ್ಯಮವರ್ಗದ ನಾಯಕನು ಹಳೆಯ ಕುಶನನ್ನು ದುರಸ್ತಿಗೊಳಿಸಲು ಕೊಂಡುಹೋದಾಗ ಅಪಘಾತಕ್ಕೀಡಾಗಿ ಸತ್ತು ಅತೃಪ್ತ ಆತ್ಮವಾಗಿ ಅಲ್ಲಿ ಇಲ್ಲಿ ಅಲೆದಾಡುತ್ತಿದ್ದು ಹೆಂಡತಿಯೊಂದಿಗೆ ಹೊಂದಿಕೊಳ್ಳಲಾಗದೆ ಎಲ್ಲ ವಿದ್ಯಮಾನಗಳನ್ನು ಗಮನಿಸಿದರೂ ಪ್ರತಿಕ್ರಿಯಿಸಲಾರದೆ ಒದ್ದಾಡುತ್ತಾನೆ. ತಾನು ಕೊಂಡೊಯ್ದ ಕುಶನ್ ಕಾಣಿಸಿಕೊಳ್ಳದೆ ಹೊಸ ಸೋಫಾ ಸೆಟ್, ಮಡದಿ ಅದರ ಮೇಲೆ ಕುಳಿತು ದೂರದರ್ಶನವನ್ನು ವೀಕ್ಷಿಸುವ ದೃಶ್ಯ ಕಂಡು ಬೆರಗಾಗುವ ನಾಯಕನು ನಿಜವಾದ ಮರಣವೆಂದರೆ ಇದೇ ಎಂದುಕೊಳ್ಳುತ್ತಾನೆ. ಇದು ಪರಕೀಯ ಪ್ರಜ್ಞೆಯು ಅವನಲ್ಲಿ ಹುಟ್ಟಿಸಿದ ಹೊಸ ಅರಿವು.
‘ವೃದ್ಧ ಕವಿಯೂ ಪ್ರೊಫೆಸರನೂ ಛಿದ್ರ’ ಕತೆಯ ನಾಯಕನು ತನ್ನೊಳಗೆ ಇರುವ ಎರಡು ವ್ಯಕ್ತಿತ್ವಗಳಿಂದ ಕಂಗೆಟ್ಟಿದ್ದಾನೆ. ಅವನೊಳಗಿನ ಕವಿ ಮತ್ತು ಪ್ರೊಫೆಸರ್‌ಗಳ ನಡುವೆ ಸಂಘರ್ಷ ನಡೆಯುತ್ತದೆಯೇ ವಿನಃ ಸಮನ್ವಯವಲ್ಲ. “ನೀವು ಯಾವುದನ್ನೂ ಸಹಜವಾಗಿ ತೆಗೆದುಕೊಳ್ಳುವುದಿಲ್ಲ ಅದೇನೋ ನೋಡಬೇಕೆನಿಸಿತು ನೋಡಿದಿರಿ. ಮತ್ತದರ ಬಗ್ಗೆ ತಲೆ ಕೆಡಿಸಿಕೊಳ್ಳುವುದು ಯಾಕೀಗ?” ಎನ್ನುವ ಹೆಂಡತಿಯು ಬದುಕಿನ ಜಂಜಡ, ತುಮುಲಗಳಿಂದ ಬಿಡಿಸಿಕೊಳ್ಳಲಾರದೆ ಒದ್ದಾಡುತ್ತಿರುವ ತನ್ನ ಗಂಡನ ಪರಕೀಯತೆಯನ್ನು ಮೀರುವ ಮೀಟುಗೋಲಾಗುತ್ತಾಳೆ. ಮನುಷ್ಯರು ಮನುಷ್ಯರನ್ನು ಕ್ಷಮಿಸುವುದಿಲ್ಲ. ದೇವರನ್ನಾದರೆ ಕ್ಷಮಿಸಿ ಬಿಡುತ್ತಾರೆ ಎಂದು ‘ತೂಗುಸೇತುವೆ’ಯ ನಾಯಕ ತನ್ನ ಏಕಾಕಿತನದ ಅನುಭವದಿಂದಲೇ ಕಂಡುಕೊಳ್ಳುತ್ತಾನೆ. ಅದೇ ರೀತಿಯಲ್ಲಿ ಬದುಕಿನ ಅನೇಕ ಸಾಧ್ಯತೆಗಳನ್ನು ‘ಬೇಕಾಗಿದ್ದಾನೆ’, ‘ಆನ್ ದಿ ರಾಕ್ಸ್’, ‘ಒಂದು ದಿನದ ಪಾಠ’, ಮತ್ತು ‘ಹಾಸ್ಯಗಾರ’ ಎಂಬ ಕತೆಗಳು ಶೋಧಿಸಲು ಯತ್ನಿಸುತ್ತವೆ.
ಇವುಗಳಲ್ಲಿ ಪರಕೀಯ ಪ್ರಜ್ಞೆ ಹಿನ್ನೆಲೆಯಾಗಿದ್ದರೂ ಇದು ನೈತಿಕತೆಯನ್ನು ಮೀರಿದ ನೆಲೆಯಲ್ಲಿ ಮಾಡಿದ ಬದುಕಿನ ಸಾಧ್ಯತೆಗಳ ಶೋಧನೆಯಾಗಿರುವುದರಿಂದ ಮಹತ್ವದ್ದಾಗುತ್ತದೆ. ‘ಗುಹಾವಾಸಿ’, ‘ಸ್ಪರ್ಶ’, ‘ಪರಂಧಾಮಿ ಸ್ವಾಮಿ’ಯಂಥ ಕತೆಗಳು ಸರಳವಾಗಿ ನಿರೂಪಿಸಿದಂಥ ಕತೆಗಳಂತೆ ಕಾಣುತ್ತಲೇ ಕೊನೆಯಲ್ಲಿ ಪಡೆಯುವ ಸೂಕ್ಷ್ಮ ತಿರುವಿನಲ್ಲಿ ಅರ್ಥಪೂರ್ಣವೆನಿಸುತ್ತವೆ. ‘ಆಕಾಶಗಾಮಿ’, ‘ಜೂಪಿಟರಿನಲ್ಲಿ ಜಗನ್ನಾಥ’ ಮುಂತಾದ ಕತೆಗಳನ್ನು ಆಧಾರವಾಗಿಟ್ಟುಕೊಂಡು ವಾಸ್ತವದ ನಡುವಿನಲ್ಲಿ ನಿಂತು ವಾಸ್ತವದಾಚೆಗೆ ಕೈಚಾಚುವ ಯತ್ನ ಕುತೂಹಲಕಾರಿಯಾಗಿದೆ. ಗದ್ಯ ಮತ್ತು ಕವಿತೆಗಳ ನಡುವಿನ ಅಂತರವನ್ನು ಇಲ್ಲದಂತೆ ಮಾಡುವ ಅಥವಾ ಅವುಗಳ ನಡುವಿನ ಅಂತರವನ್ನು ಅಳಿಸುವ ಕೆಲಸವನ್ನು ಮೊದಲಿನಿಂದಲೂ ಮಾಡುತ್ತಾ ಬಂದಿರುವ ತಿರುಮಲೇಶರು ತಮ್ಮ ಕವಿತೆಗಳಂತೆಯೇ ಕತೆಯ ಚೌಕಟ್ಟನ್ನೂ ಮೀರುವ ಕೆಲಸವನ್ನು ಮಾಡಿದ್ದಾರೆ. ‘ಅಲ್ ಪರ್ದಿ’ ಅಂಥ ಕತೆಗಳಲ್ಲೊಂದು. ನವ್ಯದಿಂದ ಭಿನ್ನರೆನಿಸಿಕೊಳ್ಳ ಬಯಸುವ, ಬಂಡಾಯ ಮಾರ್ಗವನ್ನು ಒಲ್ಲದ ತಿರುಮಲೇಶರು ತಾವು ಕಂಡುಕೊಂಡ ಹೊಸ ರೀತಿಯ ಬರವಣಿಗೆ ‘ಕೆಲವು ಕಥಾನಕಗಳ’ಲ್ಲಿವೆ.
ಡಾ. ಸುಭಾಷ್ ಪಟ್ಟಾಜೆ ‘ಕನ್ನಡ ಮತ್ತು ಮಲಯಾಳಂ ಸಣ್ಣಕತೆಗಳಲ್ಲಿ ಪರಕೀಯ ಪ್ರಜ್ಞೆಯ ನೆಲೆಗಳು: ಒಂದು ತೌಲನಿಕ ಅಧ್ಯಯನ’ ಎಂಬ ಸಂಶೋಧನ ಪ್ರಬಂಧಕ್ಕೆ ಕಣ್ಣೂರು ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿಯನ್ನು ಪಡೆದುಕೊಂಡಿದ್ದು, ಪ್ರಸ್ತುತ ಶೇಣಿಯ ಶ್ರೀ ಶಾರದಾಂಬಾ ಹೈಯರ್ ಸೆಕೆಂಡರಿ ಶಾಲೆಯ ಕನ್ನಡ ಅಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹವ್ಯಾಸಿ ಕತೆಗಾರರಾದ ಇವರ ಕತೆ, ಕವಿತೆ, ಲೇಖನ ಮತ್ತು 200ಕ್ಕೂ ಮಿಕ್ಕಪುಸ್ತಕ ವಿಮರ್ಶೆಗಳು ಕನ್ನಡ ನಾಡಿನ ಪ್ರಸಿದ್ಧ ದಿನ ಪತ್ರಿಕೆ, ಮಾಸ ಪತ್ರಿಕೆ, ಮಂಗಳೂರು ಆಕಾಶವಾಣಿ ಮತ್ತು ಖಾಸಗಿ ಬಾನುಲಿ ಕೇಂದ್ರಗಳ ಮೂಲಕ ಬಿತ್ತರಗೊಂಡಿವೆ. ‘ಗೋಡೆ ಮೇಲಿನ ಗೆರೆಗಳು’ (ಕಥಾ ಸಂಕಲನ) ‘ಅನುಪಮ ಅಕ್ಷರೋಪಾಸಕ ಎ. ನರಸಿಂಹ ಭಟ್’ ಹಾಗೂ ‘ಕಥನ ಕಾರಣ’ (ಸಂಶೋಧನ ಕೃತಿ) ಇವರ ಪ್ರಕಟಿತ ಕೃತಿಗಳು.