ಯಾರಾದರೂ ಸಿಕ್ಕಿಂ ನೋಡಿದ್ದೀರಾ? ವೆಂಕಟಸ್ವಾಮಿ ಪ್ರವಾಸ ಕಥನ
ಗ್ಯಾಂಗ್ ಠೋಕ್: (ಗ್ಯಾಂಗ್- ಗಂಗಾಳ, ಠೋಕ್- ದೇವರಿಗೆ ಅರ್ಪಣೆ) ವರ್ಷದ ಮೊದಲ ಕೊಯಿಲನ್ನು ಗಂಗಾಳದಲ್ಲಿಟ್ಟು ದೇವರಿಗೆ ಅರ್ಪಿಸುವುದನ್ನು ಗ್ಯಾಂಗ್ ಠೋಕ್ ಎನ್ನುತ್ತಾರೆ. ಕಲ್ಕತ್ತಾದಿಂದ ಬಾಗ್ ಡೊಗ್ರಾ ವಿಮಾನ ನಿಲ್ದಾಣದಲ್ಲಿ ಇಳಿದು ಅಲ್ಲಿಂದ 125 ಕಿ.ಮೀ. ರಸ್ತೆ ಸಾಗಿದರೆ ಅಥವಾ ಬೆಂಗಳೂರಿನಿಂದ ಗೌಹಾಟಿ ಎಕ್ಸ್ ಪ್ರೆಸ್ ರೈಲಿನಲ್ಲಿ 47 ಗಂಟೆ ಪ್ರಯಾಣ ಮಾಡಿ ಎನ್ಜೆಪಿ ನಿಲ್ದಾಣದಲ್ಲಿ ಇಳಿದುಕೊಂಡು ಅಲ್ಲಿಂದ 125 ಕಿ.ಮೀ. ದೂರ ರಸ್ತೆ ಸಾಗಿದರೆ ಗ್ಯಾಂಗ್ ಟಕ್ ನಗರ ತಲುಪುತ್ತೇವೆ. ಎರಡೂ ದಾರಿ 4 ಗಂಟೆಗಳು ಕಾಲ ಸಾಗುವ ಹಿಮಾಲಯ ಪರ್ವತಗಳ ನುಡವಿನ ಸುಂದರ ಅನುಭವ. ಡಾರ್ಜಿಲಿಂಗ್ ಮತ್ತು ಕಲಿಂಪಾಗ್ ಚಹ ತೋಟಗಳ ಮೂಲಕ ದಾರಿ ಸವಿದರೆ ಅದು ಇನ್ನೊಂದು ಅದ್ಭುತ. ಯಾವುದೇ ದಾರಿಯಲ್ಲಿ ಸಾಗಿದರೂ ಟೀಸ್ತಾ ಮತ್ತು ರಂಗೀತ್ ನದಿಗಳು ನಿಮ್ಮ ಜೊತೆಜೊತಗೆ ಸಾಗಿಬರುತ್ತವೆ.
ಭಾರತ ನಕ್ಷೆಯ ಈಶಾನ್ಯ ಭಾಗದಲ್ಲಿ ಒಂದು ಕಡೆ ಸಣ್ಣ ಕೊಂಬಿನಂತೆ ಚೀನಾ ನಕ್ಷೆಯ ಒಳಕ್ಕೆ ತೂರಿಕೊಂಡಿರುವ ಪುಟ್ಟ ರಾಜ್ಯ ಸಿಕ್ಕಿಂ. ಜೊತೆಗೆ ನೇಪಾಳ, ಭೂಥಾನ್ ಮತ್ತು ಟಿಬೆಟ್ ದೇಶಗಳು ಸುತ್ತುವರಿದಿದ್ದು ದಕ್ಷಿಣದಲ್ಲಿ ಪ.ಬಂಗಾಳ ರಾಜ್ಯ ಇದೆ. ದೇಶದಲ್ಲಿಯೇ ಅತಿ ದುರ್ಗಮ ಮತ್ತು ಸುಂದರ ರಾಜ್ಯ ಸಿಕ್ಕಿಂ ವಿಸ್ತೀರ್ಣತೆ ಕೇವಲ 7 ಸಾವಿರ ಚ.ಕಿ.ಮೀ. ನಾಲ್ಕು ಜಿಲ್ಲೆಗಳ ಈ ರಾಜ್ಯದ ಜನಸಂಖ್ಯೆ ಕೇವಲ 5.5 ಲಕ್ಷ. ರಾಜ್ಯದ 4ನೇ 3ಭಾಗ ಅರಣ್ಯ ಮತ್ತು ಹಿಮ ಮುಚ್ಚಿಕೊಂಡಿರುವ ಪರ್ವತ ಶ್ರೇಣಿಗಳು. ಎಲ್ಲಕ್ಕಿಂತ ಮಿಗಿಲಾಗಿ ಪ್ರಪಂಚದ ಎರಡನೇ ಅತಿ ಎತ್ತರದ ಶಿಖರ ಕಾಂಚನ್ ಜೊಂಗಾ ಪಶ್ಚಿಮ ಜಿಲ್ಲೆಯಲ್ಲಿದೆ. ರಾಜ್ಯದ ಯಾವುದೇ ಮೂಲೆಯಲ್ಲಿ ನಿಂತರೂ ಈ ಅದ್ಭುತ ಬಿಳಿ ತಲೆಗಳ ಕಾಂಚನ್ ಜೊಂಗಾ ಶಿಖರಗಳು ನಿಮ್ಮನ್ನು ಬೆಂಬಿಡುತ್ತವೆ. ಯಾವ ಕಡೆ ನೋಡಿದರು ಹಸಿರು ಕಾಡು ಕಣಿವೆಗಳು, ಜಲಪಾತಗಳು, ಮೋಡಗಳ ಜೊತಗೆ ಆಕಾಶವನ್ನು ಚುಚ್ಚಿ ನಿಂತಿರುವ ಬಿಳಿ ಶಿಖರಗಳು; ಕಣಿವೆಗಳ ತುಂಬಾ ಬಣ್ಣಬಣ್ಣದ ಹೂವುಗಳು. ಮಧ್ಯೆ ಮಧ್ಯೆ ಹೆಪ್ಪುಕಟ್ಟಿಕೊಂಡಿರುವ ಹಿಮ ಸರೋವರಗಳು. 11,500 ಅಡಿಗಳಿಗಿಂತ ಎತ್ತರದಲ್ಲಿರುವ ಪರ್ವತ ಶ್ರೇಣಿಗಳ ಮೇಲೆಲ್ಲ ಹಿಮದ ಹೊದಿಕೆ. ಚಳಿಗಾಲದಲ್ಲಿ ಹಿಮ ಕವಚಗಳು ಇನ್ನಷ್ಟು ಕೆಳಕ್ಕೆ ಇಳಿದುಬರುತ್ತವೆ. ಬೇಸಿಗೆ ಕಾಲದಲ್ಲಿ 13 ರಿಂದ 21 ಮತ್ತು ಚಳಿಕಾಲದಲ್ಲಿ 5 ರಿಂದ 13 ಡಿಗ್ರಿ ಶೆಲ್ಸಿಯಸ್ ತಾಪಮಾನ ಇರುತ್ತದೆ.
ಸಿಕ್ಕಿಂನಲ್ಲಿ ಮೂಲವಾಗಿ ನಾಹೊಂಗ್, ಚಾಂಗ್ ಮತ್ತು ಮೊನ್ ಬುಡಕಟ್ಟು ಜನಾಂಗಗಳು ಬಂದು ನೆಲೆನಿಂತವು. ಅನಂತರ ಬಂದ ಲೆಪ್ಛಾ ಬುಡಕಟ್ಟು ಜನಾಂಗ ಮೇಲಿನ ಮೂರು ಜನಾಂಗಗಳನ್ನು ಹೆಚ್ಚು ಕಡಿಮೆ ಪೂರ್ಣವಾಗಿ ಜೀರ್ಣಿಸಿಕೊಂಡಿತ್ತು. ಲೆಪ್ಛಾಗಳು ಮೂಲವಾಗಿ ಬ್ರಹ್ಮಪುತ್ರಾ ದಕ್ಷಿಣಕ್ಕಿರುವ ಮಿಕಿರ್, ಘಾರೋ ಮತ್ತು ಕಾಶಿ ಪರ್ವತಗಳಿಂದ ಬಂದವರೆಂದು ತಿಳಿಯಲಾಗಿದೆ. ಅದಕ್ಕೂ ಮುಂಚೆ ಇವರು ಬರ್ಮಾ, ಟೆಬೆಟ್ ಕಡೆಯಿಂದ ಬಂದವರೆಂದು ಹೇಳಲಾಗುತ್ತದೆ. ಮುಂದೆ ಇಲ್ಲಿಂದ ಕೆಲವರು ನೇಪಾಳ ಕಡೆಗೆ ಹೊರಟರು. ಮೂಲವಾಗಿ ಇವರು ನಿಸರ್ಗವನ್ನು ಆರಾಧಿಸುವವರಾಗಿದ್ದರು. ಕ್ರಿ.ಶ.1400ರಲ್ಲಿ ಲೆಪ್ಛಾಗಳು ಟುರ್ಪೆ ಪನೋ ಎಂಬವನನ್ನು ತಮ್ಮ ರಾಜನಾಗಿ ಆಯ್ಕೆ ಮಾಡಿಕೊಂಡರು. ಆತ ಯುದ್ಧದಲ್ಲಿ ಮಡಿದ ಮೇಲೆ ಮೂವರು ರಾಜರು ಈ ಪ್ರದೇಶವನ್ನು ಆಳಿದ್ದರು. 17ನೇ ಶತಮಾನದಲ್ಲಿ ಟಿಬೆಟ್ ನಿಂದ ಬಂದ ರೊಂಗ್ ಜನಾಂಗ ಸಿಕ್ಕಿಂ ಜನರನ್ನು ತಮ್ಮ ಸೇವಕರನ್ನಾಗಿ ಮಾಡಿಕೊಂಡರು. ಇವರೆಲ್ಲ ಕೆಂಪು ಟೋಪಿಗಳನ್ನು ಧರಿಸುವವರಾಗಿದ್ದು, ಇವರಿಗೆ ವಿರುದ್ಧವಾಗಿ ಸ್ಥಳೀಯರು ಹಳದಿ ಟೋಫಿಗಳನ್ನು ಧರಿಸುತ್ತಿದ್ದರು. ನಿಸರ್ಗ ಆರಾಧಕರಾದ ಲೆಪ್ಛಾಗಳನ್ನು ನಿಧಾನವಾಗಿ ಬೌದ್ಧ ಧರ್ಮದ ಕಡೆಗೆ ತಿರುಗಿಸಿದರು.
1700ರಲ್ಲಿ ನೇಪಾಳದ ಗೂರ್ಘಾಗಳು ಸಿಕ್ಕಿಂ ಮೇಲೆ ದಾಳಿ ಮಾಡಿ ಕೆಲವು ಪ್ರದೇಶಗಳನ್ನು ವಶಪಡಿಸಿಕೊಂಡರು. ಈ ಪ್ರದೇಶ ಬ್ರಿಟಿಷರ ವಶವಾದ ಮೇಲೆ ಸಿಕ್ಕಿಂ ಭಾರತದೊಂದಿಕೆ ಒಡಂಬಡಿಕೆ ಮಾಡಿಕೊಂಡ ಕಾರಣ ನೇಪಾಳದ ಗೂರ್ಖಾಗಳು ಸಿಕ್ಕಿಂ ಮೇಲೆ ಮತ್ತೆ ಧಾಳಿ ಮಾಡಿದರು. ಅನಂತರ ಬ್ರೀಟಿಷರು ಗೂರ್ಖಾಗಳನ್ನು ಹಿಮ್ಮೆಟ್ಟಿ ಆ ಪ್ರದೇಶವನ್ನು ವಶಪಡಿಸಿಕೊಂಡಿದ್ದರು. ಇಂದಿನ ಡಾರ್ಜಿಲಿಂಗ್ ಕೂಡ ಸಿಕ್ಕಂನಲ್ಲಿತ್ತು. 1962ರಲ್ಲಿ ಇಂಡಿಯಾ-ಚೀನಾ ಯುದ್ಧ ನಡೆದಾಗ ಸಿಕ್ಕಿಂ ಪ್ರತ್ಯೇಕವಾಗಿತ್ತು. ಆ ಪ್ರದೇಶದ ನಾಥುಲಾ ಪಾಸ್ ಗಡಿಯಲ್ಲಿ ಎರಡೂ ದೇಶಗಳ ಮಧ್ಯೆ ಯುದ್ಧ ನಡೆದು ನಾಥುಲಾ ಪಾಸ್ ರಸ್ತೆಯನ್ನು 6/7/2006ರವರೆಗೂ ಮುಚ್ಚಲಾಗಿತ್ತು. ಏಪ್ರಿಲ್ 14, 1975ರಲ್ಲಿ ಸಿಕ್ಕಿಂ ಜನರು ಭಾರತದ ಜೊತೆಗೆ ಸೇರಿಕೊಳ್ಳಬೇಕೆ ಇಲ್ಲವೆ ಎಂದು ಮತ ಚಲಾವಣೆ ಮಾಡಿದಾಗ ಸಿಕ್ಕಿಂ ಜನರು ಭಾರತದೊಂದಿಗಿರಲು ಅನುಮೋದನೆ ನೀಡಿದ್ದರು. ಇದನ್ನು ಯುಎನ್ಓ ಮತ್ತು ಇತರ ದೇಶಗಳು ಅನುಮೋದಿಸಿದರೂ ಚೀನಾ ಮಾತ್ರ ಒಪ್ಪಿರಲಿಲ್ಲ. ಸಿಕ್ಕಂ ತಮಗೆ ಸೇರಿದ ಪ್ರದೇಶವೆಂದು ಚೀನಾ ಇಂದಿಗೂ ಹೇಳಿಕೊಳ್ಳುತ್ತಿದೆ. 2000ರಲ್ಲಿ 16ನೇ ಕರ್ಮಪಾ ಎಂದು ಬಿಂಬಿಸಲಾಗಿದ್ದ ಆಗಿಯನ್ ಟ್ಲನ್ಲೆ ಡೋರ್ಜೆ ಟಿಬೆಟ್ ನಿಂದ ತಲೆಮರೆಸಿಕೊಂಡು ಧರ್ಮಾಶಾಲಾ ಸೇರಿಕೊಂಡ. ಚೀನಾ ಪ್ರಕಾರ ಇವನೇ ನಿಜವಾದ ಕರ್ಮಪಾ. ಆದರೆ ಭಾರತ ದೇಶದ ನ್ಯಾಮ್ ಗಿಲ್ ತೀರ್ಪಿನಂತೆ ಬೇರೆ ಇನ್ನೊಂದು ಗುಂಪಿನ ಯುವಕನಿಗೆ ಪಟ್ಟ ನೀಡಿತು. ಇದರಿಂದ ಚೀನಾ ಇನ್ನಷ್ಟು ಮುನಿಸಿಕೊಂಡಿತು. ಕರ್ಮಪಾಗೆ ಗ್ಯಾಂಗ್ ಟಕ್ ನಲ್ಲಿರುವ ರುಮ್ಟೆಕ್ ಆಶ್ರಮದಲ್ಲಿ ನಡೆಸುವ ಉಸ್ತುವಾರಿ ಸೇರುತ್ತದೆ. ಕೊನೆಗೂ ಚೀನಾ ಸಿಕ್ಕಿಂ ಭಾರತಕ್ಕೆ ಸೇರಿದ ಪ್ರದೇಶವೆಂದು 2003ರಲ್ಲಿ ಅನುಮೋದಿಸಿತು.
ಪ್ರಸ್ತುತ ಬುಟಿಯಾ ಜನಾಂಗದ ನಾಮ್ಗಿಲ್ ಡೈನಾಸ್ಟಿ ಸಿಕ್ಕಿಂ ರಾಜ್ಯದ ಧರ್ಮಕರ್ತರಾಗಿದ್ದಾರೆ. 19ನೇ ಶತಮಾನದಲ್ಲಿ ಸಿಕ್ಕಿಂ ಆಳುತ್ತಿದ್ದ ಬುಟಿಯಾಗಳು ಯಾವುದೇ ತೊಂದರೆ ಬಂದರೂ ಟಿಬೆಟ್ ಕಡೆಗೆ ನೋಡುತ್ತಿದ್ದರು. ಆದರೆ ಈಗ ಅದು ಚೀನಾ ಪಾಲಾಗಿ ಸಿಕ್ಕಿಂ ಭಾರತದ ಒಂದು ರಾಜ್ಯವಾಗಿದೆ. ಪ್ರಸ್ತುತ ಸಿಕ್ಕಿಂನಲ್ಲಿ ಲೆಪ್ಛಾ, ಬುಟಿಯಾ, ಲಿಂಬಸ್, ಸೆರ್ಪಾ ಮತ್ತು ನೇಪಾಳಿ ಜನಾಂಗಗಳಿದ್ದು ಹೆಚ್ಚು ಕಡಿಮೆ ಎಲ್ಲರೂ ಮಹಾಯಾನ ಬೌದ್ಧ ಧರ್ಮವನ್ನು ಅನುಸರಿಸುತ್ತಿದ್ದಾರೆ. ಇವರ ಜೊತೆಗೆ ದೇಶದ ಇತರ ಭಾಷೆಗಳನ್ನು ಮಾತನಾಡುವ ವ್ಯಾಪಾರಿ ಜನಾಂಗಗಳು, ಬಂಗಾಲಿಗಳು ಮತ್ತು ವಲಸೆ ಬಂದಿರುವ ಬಂಗ್ಲಾ ದೇಶಿಗರು ಇದ್ದಾರೆ. ನೇಪಾಳಿ ಇಲ್ಲಿನ ರಾಜ್ಯ ಭಾಷೆ.
ಮನೆಮನೆಗೂ ಲೆಪಂಗಾಗಳು
ಇಲ್ಲಿನ ಬೌದ್ಧ ಜನಾಂಗಗಳು ತಮ್ಮ ಕುಟುಂಬದ 16-17 ವರ್ಷಗಳ ಅಸುಪಾಸಿನ ಒಬ್ಬ ಯುವಕನನ್ನು ಲೆಪಂಗಾ ಅಥವಾ ಬೌದ್ಧ ಸನ್ಯಾಸಿಯಾಗಲು ಕಳುಹಿಸಿಕೊಡುತ್ತಾರೆ. ಇವರು ಮೂರೂವರೆ ವರ್ಷ ಕಾಲ ನೇಪಾಳದ ಕಡೆಗೆ ತೆರಳಿ ಹಿಮಾಲಯದ ದುರ್ಗಮ ಪ್ರದೇಶಗಳಲ್ಲಿ ನುರಿತ ಸನ್ಯಾಸಿಗಳ ಕೈಗಳಲ್ಲಿ ತರಬೇತಿ ಮುಗಿಸಿ ಬರುತ್ತಾರೆ. ಈ ಕಾಲದಲ್ಲಿ ಇವರು ಪೂರ್ಣ ಸಸ್ಯಾಹಾರಿಗಳಾಗಿ ಸೊಪ್ಪು ಸದೆ, ಭಕ್ತರು ನೀಡುವ ಅಲ್ಪಸ್ವಲ್ಪ ದವಸ ಧಾನ್ಯಗಳನ್ನು ತಿಂದು ಗುಹೆಗಳಲ್ಲಿ, ದುರ್ಗಮ ಪ್ರದೇಶಗಳಲ್ಲಿ ತಮ್ಮ ದೇಹಗಳನ್ನು ದಂಡನೆಗೆ ಒಳಪಡಿಸಿ ಬೌದ್ಧ ಪದ್ಧತಿಗಳನ್ನು ಅನುಸರಿಸಿ ಮೂರೂವರೆ ವರ್ಷ ಕಾಲ ಕಳೆದ ಮೇಲೆ ತಾವು ಬೌದ್ಧ ಸನ್ಯಾಸಿಗಳಾಗಲು ಯೋಗ್ಯರೆಂದು ತೀರ್ಮಾನಿಸಿದ ಮೇಲೆ ಬೌದ್ಧಾಶ್ರಮಗಳಿಗೆ ಬಂದು ದೀಕ್ಷೆ ಪಡೆದು ಬೌದ್ಧ ಧರ್ಮದ ಪ್ರಚಾರದಲ್ಲಿ ತೊಡಗಿಕೊಳ್ಳುತ್ತಾರೆ. ಕೆಲವರು ಮಧ್ಯದಲ್ಲಿಯೇ ಬಿಟ್ಟುಬರುವವರೂ ಇರುತ್ತಾರೆ. ಇವರು ಮತ್ತೆ ಮೂರೂವರೆ ವರ್ಷ ಹೋಗಿಬರುತ್ತಾರೆ. ಇವರಿಗೆ ಯಾವುದೇ ಸ್ವಂತ ಮನೆ ಸ್ವತ್ತು ಇರುವುದಿಲ್ಲ. ಬೌದ್ಧರಿಗೆ ಮಾಂಸಾಹಾರ ನಿಷೇಧವಲ್ಲದಿದ್ದರೂ ಬಹಳಷ್ಟು ಜನರು ಸಸ್ಯಹಾರಿಗಳು, ಹೆಚ್ಚಾಗಿ ಮಹಿಳೆಯರು. ಬೌದ್ಧರಲ್ಲಿ ಪ್ರಾಣಿಗಳನ್ನು ಸಾಹಿಸಿ ತಿನ್ನುವುದು ನಿಷೇಧ.
ಕಾಂಚನ್ ಜೊಂಗಾ ಮತ್ತು ಸಿಕ್ಕಿಂ ನೃತ್ಯ
Khang-chen-dzod-nga: Mother of pearls ಅಥವಾ ಮುತ್ತುಗಳ ತಾಯಿ. ಕಣಿವೆಯ ತುಂಬಾ ಬೌದ್ಧಾಶ್ರಮಗಳು, ಅಧ್ಯಾತ್ಮಿಕ ಆಶ್ರಮಗಳು, ಸ್ಟೂಪಾಗಳು. ಎಲ್ಲೆಲ್ಲೂ ಬೌದ್ಧ ಧರ್ಮದ ಪ್ರಾರ್ಥನೆಗಳೊತ್ತ ಬಣ್ಣಬಣ್ಣದ ಭಾವುಟಗಳು ಹಾರಾಡುತ್ತಿರುತ್ತವೆ. ಗ್ಯಾಂಗ್ ಟಕ್ ನ ತಾಷಿ ಗುಡ್ಡದ ಮೇಲೆ ಬೆಳಿಗಿನ ಜಾವ ನಿಂತು ಕಾಂಚನ್ ಜೊಂಗ್ ಶಿಖರಗಳ ಕಡೆಗೆ ಕಣ್ಣು ನೆಟ್ಟಾಗ ಅರುಣನ ಪ್ರ್ರಥಮ ಕಿರಣಗಳು ಚುಂಬಿಸುತ್ತವೆ. ಬಿಳಿ ಶಿಖರಗಳು ನಿಧಾನವಾಗಿ ಬಣ್ಣಗಳ ಓಕುಳಿಯಾಟದಲ್ಲಿ ತೊಡಗಿ ಕೊನೆಗೆ ಇಡೀ ಶಿಖರ ಚಿನ್ನದಿಂದ ಉರಿಯುವಂತೆ ಕಾಣಿಸುತ್ತದೆ. ಇದೊಂದು ಚಿತೋಹಾರಿ ಅನುಭವ. ಎವೆರೆಷ್ಟು 8885 ಮೀಟರುಗಳು ಎತ್ತರವಾದರೆ ಕಾಂಚನ್ ಜೊಂಗಾ 8585 ಮೀಟರುಗಳು.
ಸಿಕ್ಕಿಂ ಜನರ ಸಂಪ್ರದಾಯಗಳ ಜೊತೆ ಜೊತೆಗೆ ಅನೇಕ ನೃತ್ಯಗಳು ಇವೆ. ಹಾಗೆಯೇ ಕಾಂಚನ್ ಜೊಂಗಾ ಸಿಕ್ಕಿಂ ಜನ ಜೀವನದ ಒಂದು ಭಾಗವಲ್ಲದೆ ಸಿಕ್ಕಿಂ ಜನರನ್ನು ಕಾಪಾಡುವ ಸರ್ವದೇವರುಗಳು ತಂಗಿರುವ ಪವಿತ್ರ ಸ್ಥಳ. ಡಿಸೆಂಬರ್ ತಿಂಗಳಲ್ಲಿ ನಡೆಯುವ ಕಗೀಯಟ್ ಹಬ್ಬದ ದಿನಗಳಲ್ಲಿ ಕಾಂಚನ್ ಜೊಂಗಾ ದೇವತೆ ಐದು ತಲೆಗಳಿಗೆ (ಐದು ಶಿಖರಗಳು) ಕಿರೀಟಗಳು ಮತ್ತು ಜರತಾರಿ ಧರಿಸಿ ಉಗ್ರ ರೂಪದೊಂದಿಗೆ ಕಾಣಿಸಿಕೊಳ್ಳುತ್ತಾಳೆ. ಅವಳ ಮುಂದೆ ಮೂಖವಾಡ ಧರಿಸಿದ ಬಿಕ್ಕುಗಳು ನಗಾರಿ ಬಾರಿಸುತ್ತ ನೃತ್ಯಮಾಡುತ್ತ ಮೆರವಣಿಗೆ ಬರುತ್ತಾರೆ. ಈ ನೃತ್ಯ ಸಿಕ್ಕಿಂ ಉದ್ದಗಲಕ್ಕೂ ಕಾಂಚನ್ ಜೊಂಗಾ ಹಿನ್ನೋಟದಲ್ಲಿ ಎಲ್ಲೆಲ್ಲೂ ಇಡೀ ತಿಂಗಳು ಕಾಲ ಹಬ್ಬವಾಗಿ ನಡೆಯುತ್ತದೆ.
ಗ್ಯಾಂಗ್ ಟಕ್ ನಗರ ದೇಶದಲ್ಲಿಯೇ ಒಂದು ಸುಂದರ ಪ್ರವಾಸ ತಾಣವಾಗಿದ್ದು ನಗರದ ಸುತ್ತಮುತ್ತಲೂ ಅನೇಕ ರಮಣೀಯ ಸ್ಥಳಗಳಿವೆ. ಚೀನಾ ಗಡಿ ನಾಥುಲಾ ಪಾಸ್ ಮತ್ತು ಕೆಲವು ಸರೋವರಗಳ ಕಡೆಗೆ ಪ್ರವಾಸ ಮಾಡಿಬರಬಹುದು. ಫೆಬ್ರವರಿಯಿಂದ ಮೇ ಮತ್ತು ಸೆಪ್ಟೆಂಬರ್ನಿಂದ ಅಕ್ಟೋಬರ್ ತಿಂಗಳು ಒಳ್ಳೆ ಕಾಲ.
ಬಾಬಾ ಹರಿಭಜನ್ ಸಿಂಗ್
ಚೀನಾದಿಂದ ಭಾರತದ ಈಶಾನ್ಯ ಭಾಗಕ್ಕೆ ಮೊದಲಿಗೆ ವಲಸೆ ಬಂದ ಜನಾಂಗಗಳು ಮತ್ತು ಸ್ಥಳೀಯ ಜನಾಂಗಗಳ ಮಧ್ಯೆ ಘರ್ಷಣೆಗಳು ನಡೆದವು. ಅನಂತರ ತಾಯ್ ಲ್ಯಾಂಡ್-ಬರ್ಮಾ ಕಡೆಯಿಂದ DNAಜನರು, ಮುಸ್ಲಿಮರು, ಕೊನೆಗೆ ಬ್ರಿಟಿಷರು ಬಂದರು. ಎರಡನೇ ವಿಶ್ವ ಮಹಾಯುದ್ಧ ಈ ಭಾಗದವರೆಗೂ ಮುಟ್ಟಿತ್ತು. 1962 ಚೀನಾ-ಇಂಡಿಯಾ ಯುದ್ಧ ನಡೆಯಿತು. ಹೀಗೇ ಈ ಭಾಗ ಒಂದಲ್ಲಾ ಒಂದು ರೀತಿಯಲ್ಲಿ ಅನೇಕ ಘರ್ಷಣೆಗಳ ತವರಾಗಿದೆ. ಈಗ ಬಂಡುಕೋರರ ದಂಗೆಗಳು ನಡೆಯುತ್ತಿವೆ.
ಸಿಕ್ಕಿಂ ರಾಜಧಾನಿ ಗ್ಯಾಂಗ್ ಟಕ್ ನಿಂದ 65 ಕಿ.ಮೀ ದೂರದಲ್ಲಿರುವ ನಾಥುಲಾ ಪಾಸ್ ನೋಡಲು ಸಿ.ವೆಂಕಟೇಶ್ ಮತ್ತು ಸುಭಾಷ್ ಜೊತೆಗೆ ಹೋಗಿದ್ದೆ. ನಾಥುಲಾ ಪಾಸ್ ಹಿಮಾಲಯದಲ್ಲಿ 14,000 ಅಡಿ ಎತ್ತರದಲ್ಲಿ ಸಾಗುವ ರಸ್ತೆಯಾಗಿದ್ದು ಅದು ಚೀನಾ-ಇಂಡಿಯಾ ಗಡಿ ಭಾಗ. ಆ ದಾರಿಯಲ್ಲಿ ಒಂದು ಬಾಬಾ ಮಂದಿರ ಇದೆ ಎಂದು ತಿಳಿದು, ಇಲ್ಲಿ ಯಾವ ಬಾಬಾ ಬಂದು ಸೇರಿಕೊಂಡ ಎಂದು ಹತ್ತಿರ ಹೋಗಿ ನೋಡಿದಾಗ ಅದು ಭಾರತದ ವೀರ ಯೋಧ ಬಾಬಾ ಹರಿಭಜನ್ ಸಿಂಗ್ ರ ಸಮಾಧಿಯಾಗಿತ್ತು. ಇವರು ಕ್ರಿ.ಶ.1941ರಲ್ಲಿ ಪಂಜಾಬ್ ನ ಬತ್ತೆ ಬೈಯಿನಿ ಹಳ್ಳಿಯಲ್ಲಿ ಹುಟ್ಟಿ 1963ರಲ್ಲಿ ಸೇನ್ಯಕ್ಕೆ ಸೇರಿಕೊಂಡಿದ್ದರು. ನಾಥುಲಾ ಪಾಸ್ ಭಾಗದಲ್ಲಿ ಗಡಿ ಕಾಯುತ್ತಿದ್ದ ಈ ಸೈನ್ಯ ಅಧಿಕಾರಿ 4.10.1968ರಲ್ಲಿ ಸಾವನ್ನಪ್ಪಿದರು. ಆ ವರ್ಷ ಈ ಭಾಗದಲ್ಲಿ ಅತಿ ಹೆಚ್ಚು ಮಳೆಯಾಗಿ ನೆರೆ ಬಂದುದರ ಕಾರಣ ಎಲ್ಲೆಲ್ಲೂ ನೆಲ ಕುಸಿತ/ಹಿಮಪಾತವಾಗಿತ್ತು. ಹರಿಭಜನ್ ಸಿಂಗ್ ಟೆಕುಲ್ ದಿಂದ ಡೆಂಗಚುಕಾಗೆ ಮಳೆಯಲ್ಲಿ ಮ್ಯೂಲ್ (ಕತ್ತೆ-ಕುದರೆ ಮಧ್ಯೆದ ತಳಿ) ಕಾರವಾನ್ ಜೊತೆಗೆ ಹೋಗುತ್ತಿದ್ದಾಗ ದಿಢೀರ್ ಹಿಮಪಾತವಾಗಿ ಅದರ ಕೆಳೆಗೆ ಸಿಕ್ಕಿಕೊಂಡುಬಿಟ್ಟರು.
ಐದು ದಿನಗಳ ನಂತರ ಹರಿಭಜನ್ ಸಿಂಗ್ ತನ್ನ ಗೆಳೆಯ ಪ್ರಿಥಮ್ ಸಿಂಗ್ ರ ಕನಸಿನಲ್ಲಿ ಬಂದು ತಾನು ಸಾವನ್ನಪ್ಪಿದ ವಿಷಯ ತಿಳಿಸಿ ಐಸ್ ಗುಡ್ಡದ ಕೆಳಗೆ ತನ್ನ ದೇಹ ಸಿಕ್ಕಿಕೊಂಡಿದ್ದು ಆ ಸ್ಥಳದಲ್ಲಿ ಸಮಾಧಿ ಕಟ್ಟಬೇಕೆಂದು ಹೇಳಿಕೊಂಡರು. ಪ್ರೀಥಮ್ ಸಿಂಗ್ ಅದೊಂದು ಮಾಮೂಲಿ ಕನಸೆಂದು ಸುಮ್ಮನಾದ. ಆದರೆ ಹರಿಭಜನ್ ಸಿಂಗ್ ತಿಳಿಸಿದ ಸ್ಥಳದಲ್ಲಿ ಆತನ ದೇಹ ಸಿಕ್ಕಿದ ಮೇಲೆ ಕಪುಕ್ ಕಣಿವೆಯ ಛೂಕ್ಯ ಛೂ ಎಂಬ ಸ್ಥಳದಲ್ಲಿ 13,123 ಅಡಿಗಳ ಎತ್ತರದಲ್ಲಿ ಹರಿಭಜನ್ ಸಿಂಗ್ ರ ಸ್ಮಾರಕವನ್ನು ಕಟ್ಟಲಾಯಿತು.
ಇಲ್ಲಿನ ಸೈನಿಕರ ಜನಪದದಂತೆ ಬಾಬಾ ತುಂಬಾ ಸ್ಟ್ರಿಕ್ಟ್ ಮತ್ತು ಶಿಸ್ತಿನ ಸಿಪಾಯಿ. ತಪ್ಪು ಮಾಡುವವರನ್ನು ಸುಮ್ಮನೆ ಬಿಡುತ್ತಿರಲಿಲ್ಲ. ಬಾಬಾ ಬದುಕಿದ್ದಾಗ ಇರುತ್ತಿದ್ದ ಬಂಕರ್ ನಲ್ಲಿ ಇಂದಿಗೂ ಪ್ರತಿ ರಾತ್ರಿ ಕ್ಯಾಂಪ್ ಹಾಸಿಗೆ ಇಡಲಾಗುವುದು. ಆತನ ಯೂನಿಫಾರ್ಮ್ ಇಸ್ತ್ರಿ ಮಾಡಿ, ಬೂಟುಗಳನ್ನು ಸಹ ಪಾಲೀಸ್ ಮಾಡಿ ಇಡಲಾಗುವುದು. ಮರು ದಿನ ಬೆಳಿಗ್ಗೆ ಹಾಸಿಗೆ ಮೇಲೆ ಹೊರಳಾಡಿದ ಕರುಹುಗಳು ಮತ್ತು ಬೂಟುಗಳು ಮಣ್ಣಿನಿಂದ ಹೊದ್ದೆಯಗಿರುತ್ತವೆ. ಮೇಜರ್ ಹರಿಭಜನ್ ಸಿಂಗ್ ವರ್ಷಕ್ಕೆ ಒಮ್ಮೆ ರಜಾ ಮೇಲೆ ತನ್ನ ಊರಿಗೆ ಹೋಗಿ ಬರುತ್ತಾರೆ. 1962ರಲ್ಲಿ ಇಂಡಿಯಾ-ಚೀನಾ ಯುದ್ಧ ನಡೆದಾಗ 3 ದಿನಗಳ ಮುಂಚೆಯೇ ಬಾಬಾ ಭಾರತೀಯ ಯೋಧರಿಗೆ ಎಚ್ಚರಿಕೆ ನೀಡಿದ್ದರು ಎನ್ನುತ್ತಾರೆ. ನಾಥುಲಾದಲ್ಲಿ ನಡೆಯುವ ಇಂಡಿಯಾ-ಚೀನಾ ಭಾವುಟ ಹಾರಿಸುವ ದಿನ ಬಾಬಾಗಾಗಿ ಒಂದು ಕುರ್ಚಿಯನ್ನು ಹಾಕಲಾಗುತ್ತದೆ. ಪ್ರತಿ ವರ್ಷ 14 ಸೆಪ್ಟೆಂಬರ್, ಜೀಪು ಬಾಬಾರ ಸಾಮಾನುಗಳನ್ನು ಹೊತ್ತುಕೊಂಡು ಹತ್ತಿರದ ನ್ಯೂವ್ ಜಲ್ ಪಾಯ್ ಗುರಿ ನಿಲ್ದಾಣಕ್ಕೆ ಹೋಗಿ ಬರುತ್ತದೆ. ಅಲ್ಲಿಂದ ಆತನ ಸಾಮಾನುಗಳನ್ನು ಬಾಬಾ ಊರಾದ ಪಂಜಾಬ್ ನ ಕಪೂರ್ ತಲಾ ಜೆಲ್ಲೆಯಲ್ಲಿರುವ ಕುಕು ಹಳ್ಳಿಗೆ ಕಳುಹಿಸಲಾಗುವುದು. ಸಣ್ಣ ಮೊತ್ತದ ಹಣವನ್ನು ಬಾಬಾ ತಾಯಿಯ ಹೆಸರಿಗೆ ಇಂದಿಗೂ ಕಳುಹಿಸಿಲಾಗುತ್ತದೆ.
ನಾಥುಲಾ ಪಾಸ್ ನಲ್ಲಿ ಗಡಿ ಕಾಯುವ ಯೋಧರು ಹೇಳುವುದೆಂದರೆ 40 ವರ್ಷಗಳ ಹಿಂದೆ ಪ್ರಾಣ ಕಳೆದುಕೊಂಡ ಬಾಬಾ ಇಂದಿಗೂ ಇಲ್ಲಿ ತನ್ನ ಕಾರ್ಯ ನಿರ್ವಹಿಸುತ್ತಿದ್ದಾರೆ ಎನ್ನುವುದು. ಚೀನಾ ಯೋಧರು ಕೂಡ ರಾತ್ರಿ ಹೊತ್ತು ಗಡಿಯ ಉದ್ದಕ್ಕೂ ಎತ್ತರದ ಪರ್ವತಗಳ ಮೇಲೆ ಬಾಬಾ ಕುದುರೆಯ ಮೇಲೆ ಕುಳಿತು ಗಡಿ ಕಾಯುವುದನ್ನು ನೋಡಿದ್ದಾರೆ ಎನ್ನಲಾಗಿದೆ. ಇಲ್ಲಿನ ಕಪುಪ್ ಕಣಿವೆಯಲ್ಲಿ ಬಾಬಾ ಸಮಾಧಿ ಅಥವಾ ಮಂದಿರ ಭಾರತದ ಮೂಲೆಮೂಲೆಯಿಂದಲೂ ಪ್ರವಾಸಿಗರನ್ನು ಸೆಳೆಯುತ್ತಿದೆ. ನಾಥುಲಾ ಪಾಸ್ ದಾರಿಯಲ್ಲಿ ಬರುವ ಮೆನ್ ಮೊಯಿಚು ಸರೋವರ, ಟ್ಸೂಂಮ್ಗೊ ಸರೋವರ ಮತ್ತು ನಾಥುಲಾ ಪಾಸ್ ನೋಡಲು ಬರುತ್ತಿದ್ದ ಪ್ರವಾಸಿಗರು ಬಾಬಾ ಮಂದಿರವನ್ನು ನೋಡಿಯೇ ಬರುತ್ತಾರೆ. ಇತ್ತೀಚೆಗೆ ಬಾಬಾ ಮಂದಿರ ಪ್ರವಾಸ ಕೇಂದ್ರವಾಗಿ ಪರಿವರ್ತನೆಗೊಂಡಿದೆ.
ನಾಥುಲಾ ಸುತ್ತಮುತ್ತಲೂ ಸಂಭವಿಸುವ ಅನಾಹುತಗಳನ್ನು ಬಾಬಾ ಯಾವುದೊ ಒಂದು ರೀತಿಯಲ್ಲಿ ಸೈನಿಕರಿಗೆ ತಿಳಿಸುತ್ತಾರೆ ಎನ್ನುವ ನಂಬಿಕೆ. ಹಾಗೆಯೇ ಬಾಬಾ ಮಂದಿರದವರೆಗೂ ಬಂದು ಆತನಿಗೆ ನಮಿಸದೆ ಹೋದಲ್ಲಿ ತೊಂದರೆ ಅನುಭವಿಸಲೂಬಹುದು ಎನ್ನುವ ಪ್ರತೀತಿಯೂ ಹುಟ್ಟಿಕೊಂಡಿದೆ. ಇದೇ ಭಯದಿಂದ ನಾವು ಮೂವರು ಬಾಬಾ ಮಂದಿರದಲ್ಲಿ ನಮಿಸಿ ಮಂದಕ್ಕೆ ಹೋಗಿದ್ದೆವು.
(ಫೋಟೋಗಳು:ಲೇಖಕರದು)
ಸೆಲ್ಲಾ ಪಾಸಿನ ವಂಡ್ರಕಣ್ಣ!
ಎರಡು ಸಾವಿರದ ಒಂಬತ್ತರ ಡಿಸೆಂಬರ್ ಮಾಹೆಯ ಒಂದು ಬೆಳಗು. ದಿರಾಂಗ್ ಎಂಬ ಹಳ್ಳಿಯ ಅತಿಥಿ ಗೃಹದಲ್ಲಿ ಮಲಗಿಕೊಂಡಿದ್ದೆವು. ಅದು ಅಸ್ಸಾಂ ಗಡಿ ಮತ್ತು ತವಾಂಗ್ ನಡುವಿನ ಹಿಮಾಲಯ ಪರ್ವತಗಳ ಮಧ್ಯದ ಒಂದು ಸಣ್ಣ ಪಟ್ಟಣ. ಚಹಾ ಕುಡಿದು ತವಾಂಗ್ ಕಡೆಗೆ ಹೊರಟಿದ್ದೆವು.
ಹಿಮಾಲಯದ ಅದೇ ನಾಗರಹಾವಿನ ತಿರುವುಗಳು, ಒಂದು ಕಡೆ ಕೆಲವು ಸಾವಿರ ಅಡಿ ಎತ್ತರದ ಪರ್ವತಗಳು, ಇನ್ನೊಂದು ಕಡೆ ಅಷ್ಟೇ ಆಳದ ನದಿ ಪ್ರಪಾತಗಳು. ತಪ್ಪಲುಗಳನ್ನು ಕತ್ತರಿಸಿದ ಕಿರಿದಾದ ರಸ್ತೆಯ ಮೇಲೆ ನಮ್ಮ ಹಳೆ ಪಿಜ್ಜೊ ಇಂಜಿನ್ ಮಹೇಂದ್ರ ಜೀಪನ್ನು ಬೂತುಕನ್ನಡಕ ಧರಿಸಿರುವ ಚಾಲಕ ಶ್ರವಣ್ ಕುಮಾರ್ ನಿಧಾನವಾಗಿ ಚಲಿಸುತ್ತಿದ್ದ. ಎಲ್ಲಿಯೂ ನಮಗೆ ತಿಂಡಿ ದೊರಕಲಿಲ್ಲ. ಹೋಗುತ್ತ ಹೋಗುತ್ತ ನದಿಗಳ ಆಳ, ಪರ್ವತಗಳ ಎತ್ತರ ಮತ್ತು ರಸ್ತೆಗಳ ಅಕ್ಕಪಕ್ಕ ಕುಸಿದು ಬಿದ್ದಿರುವ ಕಲ್ಲು ಮಣ್ಣನ್ನು ನೋಡಿದ ಮನಸು ತಳಮಳಗೊಳ್ಳುತ್ತಿತ್ತು. ಅಲ್ಲಲ್ಲಿ ಮಿಲಿಟರಿ ಯೋಧರು ಬುಲ್ಡೋಜರುಗಳಲ್ಲಿ ಜಾರಿಬಿದ್ದಿರುವ ಕಲ್ಲು ಮಣ್ಣನ್ನು ಪಕ್ಕಕ್ಕೆ ಗುಡಿಸುತ್ತಿದ್ದರೆ ಸ್ಥಳೀಯ ಹೆಣ್ಣುಮಕ್ಕಳು ರಸ್ತೆ ರಿಪೇರಿ ಕೆಲಸದಲ್ಲಿ ತೊಡಗಿಕೊಂಡಿದ್ದರು. ಈ ರಸ್ತೆಯನ್ನು ಪೂರ್ಣವಾಗಿ ಮಿಲಿಟರಿಯೇ ನೋಡಿಕೊಳ್ಳುತ್ತದೆ.
ನೂರಾರು ತಪ್ಪಲುಗಳನ್ನು ಮತ್ತು ನದಿಗಳನ್ನು ಸುತ್ತಿಬಳಸಿ ಸಾಗಿದರೂ ರಸ್ತೆ ಮಾತ್ರ ದೂರವಾಗುತ್ತಲೆ ಹೋಗುತ್ತಿತ್ತು. ನಿಜವಾಗಿಯೂ ಈ ದಾರಿಯಲ್ಲಿ ಪ್ರಯಾಣ ಮಾಡುವವರಿಗೆ ಕನಿಷ್ಠ ಎರಡು ಹೃದಯಗಳಾದರೂ ಇರಬೇಕು, ಇನ್ನು ಗಾಡಿ ಚಲಿಸುವ ಚಾಲಕರು ಧೈರ್ಯಶಾಲಿಗಳಾಗಿರಬೇಕು ಎನ್ನುವ ಆಲೋಚನೆ ಬಂದಿತು. ನಮ್ಮ ವಾಹನ ಮಾತ್ರ ಏನೂ ಗೊತ್ತಿಲ್ಲದಂತೆ ತಣ್ಣಗೆ ಚಲಿಸುತ್ತಿತ್ತು. ಆ ಹಳ್ಳಿಯಲ್ಲಿ, ಈ ಹಳ್ಳಿಯಲ್ಲಿ ತಿಂಡಿ ದೊರಕುತ್ತದೆ ಎನ್ನುವ ನಮ್ಮ ಆಸೆ ಮುಂದಕ್ಕೆ ಹೋಗುತ್ತಲೆ ಇತ್ತು. ದೂರದೂರಕ್ಕೆ ಅಲ್ಲೊಂದು ಇಲ್ಲೊಂದು ವಾಹನ ಕಾಣಿಸಿಕೊಳ್ಳುತ್ತಿತ್ತು. ಈಗ ಸೆಲ್ಲಾಪಾಸ್ ಹತ್ತಿರಕ್ಕೆ ಬಂದಿದ್ದೆವು. ಅದಕ್ಕೂ ಮುಂಚೆ ದೂರದಿಂದಲೆ ಹಿಮಪಾತ ಆವೃತ ಶಿಖರಗಳನ್ನು ನೋಡಿ ಅಲ್ಲಲ್ಲಿ ಫೋಟೋಗಳನ್ನು ಹಿಡಿದುಕೊಂಡಿದ್ದೆವು. ಈಗ ನಿಜವಾದ ಸೆಲ್ಲಾ ಪಾಸ್ ಪರ್ವತವನ್ನು ಸುತ್ತಿ ಬಳಸಿ ನಮ್ಮ ವಾಹನ ಏರುತ್ತಿತ್ತು.
೧… ೨… ೩… ಹೀಗೆ ಕಡಿದಾದ ರಸ್ತೆಯಲ್ಲಿ ಸುಮಾರ ೧೫ ಸುತ್ತುಗಳನ್ನಾಕಿದ ಮೇಲೆ ನಮ್ಮ ಜೀಪು ಒಂದು ಹೆಬ್ಬಾಗಿಲು ದಾಟಿ ಸ್ಮಾರಕದ ಮುಂದೆ ನಿಂತುಕೊಂಡಿತು. ಸುತ್ತಲೂ ಎದ್ದು ಕುಳಿತು, ಬಾಗಿ ಬಳಕಿ ನಿಂತಿರುವ ಕೊರಕಲು ಶಿಲೆಗಳ ಪರ್ವತ ಮಾಲೆಗಳು. ಮೇಲೆಲ್ಲ ಹಿಮ ಆವೃತಗೊಂಡಿದ್ದರೆ ನಮ್ಮ ಮೇಲೆ ಹಿಮದ ಧೂಳು ಒಂದೇ ಸಮನೆ ಸುರಿಯುತ್ತಿತ್ತು. ಅಲ್ಲಿ ನಮ್ಮ ನೀಲಿ ಬಣ್ಣದ ಜೀಪಿನ ಜೊತೆಗೆ ನಾವು ಮೂವರನ್ನು ಬಿಟ್ಟರೆ ಆ ಹಿಮಗಾಡಿನಲ್ಲಿ ಒಂದು ನರಪಿಳ್ಳೆಯೂ ಇರಲಿಲ್ಲ. ನೀಲಾಕಾಶದ ಕೆಳಗೆ ಪಕ್ಷಿಗಳ ರೆಕ್ಕೆಗಳಂತೆ ಬಿಳಿ ಬಣ್ಣದ ಮುಗಿಲುಗಳು ಶಿಖರಗಳ ಮೇಲೆಲ್ಲ ಹಾರಾಡುತ್ತಿದ್ದವು. ಸುತ್ತಲಿನ ಚಿತ್ರಣ ಹಿಮದ ಅರಣ್ಯದಂತೆ ಕಾಣಿಸುತ್ತಿದ್ದು ಎಂತಹವರಿಗೂ ಭೀತಿ ಹುಟ್ಟಿಸುವಂತಿತ್ತು. ಸುತ್ತಲೂ ನಿಂತು ಎಲ್ಲವನ್ನೂ ಕಣ್ಣುಗಳ ತುಂಬಾ ತುಂಬಿಕೊಳ್ಳುತ್ತಿದ್ದಂತೆ ನನ್ನ ಕೈಕಾಲುಗಳು ತಣ್ಣಗಾಗತೊಡಗಿದವು. ಪ್ರಪಂಚದಲ್ಲಿಯೇ ಅತಿ ಎತ್ತರದಲ್ಲಿ ಸಾಗುವ ರಸ್ತೆ ಎಂದರೆ ಮನಾಲಿಯಿಂದ ಲೇಹ್ ಪಟ್ಟಣದ ನಡುವಿನ ರಸ್ತೆ. ಎರಡನೇ ಅತಿ ಎತ್ತರದ ರಸ್ತೆ ಎಂದರೆ ಬೊಮ್ಡಿಲಾ-ಸೆಲ್ಲಾಪಾಸ್ ರಸ್ತೆ. ಈ ರಸ್ತೆ ೧೫,೦೦೦ ಅಡಿಗಳ ಮೇಲಿದ್ದು ಸುತ್ತಲೂ ೨೩,೫೦೦ ಅಡಿ ಎತ್ತರದವರೆಗಿನ ಶಿಖರಗಳು ಸುತ್ತುವರಿದಿವೆ. ಪರ್ವತಗಳಲ್ಲಿ ಒಂದು ಕಡೆಯಿಂದ ಏರಿ ಮತ್ತೊಂದು ಕಡೆಗೆ ಇಳಿಯುವಾಗ ಮಧ್ಯದಲ್ಲಿ ಬರುವ ಅತಿ ಎತ್ತರದ ಸ್ಥಳವನ್ನು ಪಾಸ್ ಎನ್ನುತ್ತಾರೆ.
ರಸ್ತೆಯ ಪಕ್ಕದಲ್ಲಿ ಒಂದು ದೊಡ್ಡ ಮನೆ (ಹೋಟೆಲ್) ಇದ್ದು ಬಾಗಿಲು ಮುಚ್ಚಿತ್ತು. ನಮ್ಮ ಚಾಲಕ ಹತ್ತಿರಕ್ಕೆ ಹೋಗಿ ಬಾಗಿಲು ಬಡಿದು ಕಿಟಿಕಿಯಲ್ಲಿ ಇಣುಕಿ ನೋಡಿದ, ಬಾಗಿಲು ತೆಗೆಯಲಿಲ್ಲ. ಅಷ್ಟರಲ್ಲಿ ಒಂದು ಮಿನಿ ಟ್ರಕ್ಕು ಬಂದು ನಿಂತುಕೊಂಡಿತು. ಕ್ಯಾಬಿನ್ ನಿಂದ ಮೂವರು ಯುವಕರು ಇಳಿಯತೊಡಗಿದರು. ನಮ್ಮ ಚಾಲಕ ಅವರಲ್ಲಿ ಏನೋ ವಿಚಾರಿಸಿ ನಮ್ಮ ಕಡೆಗೆ ಬರುತ್ತ ಎಡವಿ ಕೆಳಕ್ಕೆ ಬಿದ್ದುಬಿಟ್ಟ. ಫೋಟೋಗಳನ್ನು ತೆಗೆಯುತ್ತಿದ್ದ ನಾನು ಮತ್ತು ರೆಡ್ಡಿ ಕುಮಾರ್ ಕಡೆಗೆ ಬರತೊಡಗಿದೆವು. ಕುಮಾರ್ ಕೈಕೊಡವಿಕೊಂಡು ಎದ್ದುನಿಂತು ಅಲ್ಲೆ ಇದ್ದ ಇನ್ನೊಂದು ಸಣ್ಣ ಮನೆ ತೋರಿಸಿ ಅಲ್ಲಿ ತಿಂಡಿ ಚಹ ದೊರಕುತ್ತದೆ ಎಂದ. ಬಾಗಿಲು ಮೇಲೆ ರೆಸ್ಟಾರೆಂಟ್ ಎಂದು ಬರೆದಿದ್ದು, ನಾನು ಮತ್ತು ರೆಡ್ಡಿ ಒಳಗೆ ಪ್ರವೇಶಿಸಿದೆವು. ಸಣ್ಣ ಮನೆ ಮೊದಲಿಗೆ ಅಗ್ಗಿಷ್ಠಿಕೆ ಸುತ್ತಲೂ ನಾಲ್ಕು ಕುರ್ಚಿಗಳು ಇನ್ನರ್ಧ ಭಾಗದಲ್ಲಿ ಅಂಗಡಿ. ಇಬ್ಬರು ಯುವಕರು ಕುಳಿತುಕೊಂಡು ಯಾವುದೋ ಬ್ರಾಂಡ್ ಕುಡಿಯುತ್ತಿದ್ದರು. ಇಬ್ಬರು ಯುವತಿಯರಲ್ಲಿ ಒಬ್ಬಳು ಅಗ್ಗಿಷ್ಠಿಕೆ ಮುಂದೆ ಕೈಕಾಲುಗಳನ್ನು ಕಾಯಿಸಿಕೊಳ್ಳುತ್ತಿದ್ದರೆ ಇನ್ನೊಬ್ಬಳು ಅಂಗಡಿಯಲ್ಲಿ ನಿಂತಿದ್ದಳು. ಇಬ್ಬರೂ ದಷ್ಟಪುಷ್ಠಿಯಾಗಿರುವ ಮೊನ್ಫಾ ಯುವತಿಯರು.
ಒಬ್ಬಳು ಏನು ಬೇಕೆಂದು ಕೇಳಿದಳು. ನಾನು ತಿನ್ನುವುದಕ್ಕೆ ಏನಿದೆ? ಎಂದು ಕೇಳಿದೆ. ಚಹ, ಬಿಸ್ಕಟ್, ನೂಡಲ್ಸ್ ಇದೆ. ರೆಡಿಮೇಡ್ ಮತ್ತು ಆರ್ಡಿನರಿ ನೂಡಲ್ಸ್ ಇದೆ ಯಾವುದು ಬೇಕು ಎಂದಳು. ರೆಡಿಮೇಡ್ ನೂಡಲ್ಸ್ ಎರಡು ಕೊಡಿ ಎಂದೆ. ರೆಡ್ಡಿ ತನಗೆ ಬೇಡ ಎಂದಿದ್ದಕ್ಕೆ ನನಗೂ ಮತ್ತು ಕುಮಾರ್ ಗೆ ಮಾತ್ರ ಹೇಳಿದೆ. ಅಷ್ಟರಲ್ಲಿ ಬೆಂಕಿ ಚಳಿಗೆ ನಂದಿಹೋಗಿ ಯುವತಿಯೊಬ್ಬಳು ಅದಕ್ಕೆ ಡೀಸಲ್ ಸುರಿದು ಎರಡು ಮೂರು ಬೆಂಕಿ ಕಡ್ಡಿ ಗೀರಿ ಹಾಕಿದರೂ ಅದು ಹೊತ್ತಿಕೊಳ್ಳಲಿಲ್ಲ. ಅಷ್ಟರಲ್ಲಿ ಒಳಕ್ಕೆ ಬಂದಿದ್ದ ಕುಮಾರ್ ಅವಳಿಂದ ಬೆಂಕಿ ಪೊಟ್ಟಣ ತೆಗೆದುಕೊಂಡು ಬೆಂಕಿ ಕಡ್ಡಿಯನ್ನು ಗೀರಿ ಒಳಕ್ಕೆ ಹಾಕಿದ್ದೆ ಅದು ದಿಗ್ಗನೆ ಉರಿಯತೊಡಗಿತು.
ಕುಡಿಯುತ್ತಿದ್ದವರಲ್ಲಿ ಒಬ್ಬ ಯುವಕ ಜಾಕಿ ಚಾನ್ ಸಿನಿಮಾಗಳಲ್ಲಿ ಬರುವ ವಿಲನ್ ಗಳ ಅಕ್ಕಪಕ್ಕ ನಿಂತಿರುವವನಂತೆ ಮುಖದ ಮೇಲೆ ಕೂದಲನ್ನು ಬಿಟ್ಟುಕೊಂಡು ಕೂದಲ ಒಳಗಿಂದ ವಂಡ್ರಗಣ್ಣಿನಲ್ಲಿ ನನ್ನ ಕಡೆಗೆ ನೋಡುತ್ತ ತೊದಲುತ್ತ ‘ಬಯ್ಯಾ… ಆಪ್ ಲೋಗ್ ಕಹಾಕಾ…? ಸರ‍್ವೀಸ್ ಮೇ ಹೈ ಕ್ಯಾ? ಪೆಹಲಾ ಬಾರ್ ಆಯಾ ಕ್ಯಾ? ತವಾಂಗ್ ಜಾರಾಯ್ ಕ್ಯಾ?’ ಹೀಗೆ ಏನೇನೋ ಪ್ರಶ್ನಿಸುತ್ತಿದ್ದ. ನಾವು ಮೂವರು ಅವನ ಕಡೆಗೆ ನೋಡಿ ನೋಡದಂತೆ ಅವನ ಪ್ರಶ್ನೆಗಳಿಗೆ ಹ, ಹು ಎನ್ನುತ್ತಿದ್ದೆವು.
‘ನನಗೊಂದು ಗೌರ‍್ನಮಿಂಟ್ ಕೆಲಸ ಕೊಡಿಸಿರಿ’ ಎಂದ. ಪಕ್ಕದಲ್ಲಿದ್ದವನು ಎದ್ದುನಿಂತು ಪಕ್ಕಕ್ಕೆ ನಡೆದ. ಡ್ರಿಂಕ್ಸ್ ತೆಗೆದುಕೊಳ್ಳುತ್ತ ನೂಡಲ್ಸ್ ತಿನ್ನುತ್ತಿದ್ದ ವಂಡ್ರಕಣ್ಣಿನವನು ತನ್ನ ಪ್ಯಾಂಟ್ ಮೇಲೆ ನೂಡಲ್ಸ್ ತಟ್ಟೆ ಬೀಳಿಸಿಕೊಂಡುಬಿಟ್ಟ. ನಾನು ಅವನ ಕಡೆಗೆ ನೋಡಿಯೂ ನೋಡದಂತೆ ಪಕ್ಕಕ್ಕೆ ತಿರುಗಿಕೊಂಡೆ. ಈಗ ಅವನು ಏನೇನೋ ಬಡಬಡಿಸುತ್ತ ಎದ್ದುನಿಂತು ನನ್ನ ಕಡೆಗೆ ನೋಡತೊಡಗಿದ.
‘ಆಪ್ ಕಾ ಕುಚ್ ಹೋರಾಯ್?’ ಎಂದು ನನ್ನನ್ನು ನೋಡುತ್ತ ದುರುಗುಟ್ಟಿದ. ಇದೇ ಮಾತುಗಳನ್ನು ಕುಳಿತುಕೊಂಡಿದ್ದಾಗಲೂ ಎರಡು ಮೂರು ಸಲ ಕೇಳಿದ್ದ. ನನಗೆ ಏನೂ ಆಗಲಿಲ್ಲ ಎಂದಿದ್ದೆ. ‘ಆಪ್ ಅಸ್ಸಾಂಕಾ?’ ಎಂಬ ಪ್ರಶ್ನೆಗೆ ಉತ್ತರಿಸಲು ನನಗೆ ಇಷ್ಟವಿಲ್ಲದೆ ಹು ಎಂದಿದ್ದೆ, ಅವನಿಗೆ ಏನಾಯಿತೊ ಏನೋ ನಿಂತಿದ್ದವನು ತೂರಾಡುತ್ತ ಎರಡೆಜ್ಜೆ ಮುಂದಕ್ಕೆ ಬರತೊಡಗಿದ. ನಾನು ಎದ್ದು ನಿಂತುಕೊಂಡೆ. ಅವನ ಎದೆಯ ಮೇಲೆ ಉದ್ದವಾದ ಒಂದು ಮಚ್ಚನ್ನು ಬಿದಿರು ದಬ್ಬೆಗಳ ಕವಚದಲ್ಲಿ ನೇತಾಕಿಕೊಂಡಿದ್ದು, ನಿಲ್ಲಲಾಗದೆ ಓಲಾಡುತ್ತ ನನ್ನನ್ನು ಕೈಯಲ್ಲಿ ಹಿಂದಕ್ಕೆ ತಳ್ಳಿ ಮತ್ತೆ ‘ಆಪ್ ಕಾ ಕುಚ್ ಹೋರಾಯ್’ ಎಂದ. ಪಕ್ಕದಲ್ಲಿದ್ದ ಯುವಕ ನಮ್ಮ ನಡುವೆ ಬಂದು ನಿಂತುಕೊಂಡ. ಯುವತಿಯರಿಬ್ಬರು ಕೈಗಳನ್ನು ಅಡ್ಡವಿಟ್ಟು ನನ್ನನ್ನು ಹಿಂದಕ್ಕೆ ಹೋಗುವಂತೆ ಹೇಳಿದರು.
ವಂಡ್ರಕಣ್ಣಿನವನ ಜೊತೆಯಲ್ಲಿದ್ದ ಯುವಕ ಬಾಗಿಲು ತೆಗೆದುಕೊಂಡು ಹೊರಕ್ಕೆ ಹೋಗಿದ್ದೆ, ವಂಡ್ರಕಣ್ಣನನ್ನು ಯುವತಿಯರು ನಿಧಾನವಾಗಿ ಹೊರಕ್ಕೆ ತಳ್ಳಿ ಬಾಗಿಲು ಮುಚ್ಚಿ ಕಿಟಿಕಿಯಲ್ಲಿ ಇಣುಕಿ ನೋಡತೊಡಗಿದರು. ರೆಡ್ಡಿ ಮತ್ತು ಕುಮಾರ್ ಏನೂ ಮಾತನಾಡದೆ ಪಿಕಪಿಕನೆ ನೋಡತೊಡಗಿದರು. ನನ್ನ ಮೂಡ್ ಪೂರ್ಣವಾಗಿ ಆಫ್ ಆಗಿ ಕೈಯಲ್ಲಿದ್ದ ನೂಡಲ್ಸ್ ಕೆಳಕ್ಕಿಟ್ಟು ಹಣಕೊಟ್ಟ ಕಿಟಿಕಿಯಲ್ಲಿ ನೋಡಿದಾಗ ವಂಡ್ರಕಣ್ಣು ದಾರಿಕಾಣದೆ ಕೈಯಲ್ಲಿ ಕತ್ತಿ ಹಿಡಿದುಕೊಂಡು ಕೆಸ್ತೂ ಮುಖರ್ಜಿಯಂತೆ ಆ ಕಡೆಗೆ ಈ ಕಡೆಗೆ ನೋಡುತ್ತಿದ್ದ. ಯುವತಿಯರು ಅವನು ಹೋಗಲಿ ಇರಿ ಎಂದರು. ಐದು ನಿಮಿಷ ಆದ ಮೇಲೆ ಮೂವರು ಹೊರಗೆ ಬಂದೆವು. ಆ ಯುವಕರು ಟ್ರಕ್ಕಿನಲ್ಲಿ ಕುಳಿತಿದ್ದು ಅದು ದಿರಾಂಗ್ ಕಡೆಗೆ ಹೊರಟಿತ್ತು. ನಮ್ಮ ಜೀಪು ತವಾಂಗ್ ಕಡೆಗೆ ಮುಖ ಮಾಡಿ ಬಿಳಿ ಮಸಣದ ಮೂಲಕ ಚಲಿಸತೊಡಗಿತು. ಆಗಲೆ ಹಸಿವಿನ ಜೊತಗೆ ವಂಡ್ರಕಣ್ಣನ ಮೇಲೆ ವಿಪರೀತ ಕೋಪಬಂದು ಏನೂ ಮಾಡಲಾಗದೆ ಸುಮ್ಮನಾಗಿದ್ದೆ.
***
ಮೂರು ದಿನಗಳ ನಂತರ ನಾವು ಮೂವರು ತವಾಂಗ್ ನೋಡಿಕೊಂಡು ಅದೇ ರಸ್ತೆಯಲ್ಲಿ ಹಿಂದಿರುಗಿ ಬರುತ್ತಿದ್ದೆವು. ಮೂರು ದಿನಗಳ ಹಿಂದೆ ಸೆಲ್ಲಾಪಾಸ್ ನಲ್ಲಿ ಫೋಟೋಗಳನ್ನು ಹಿಡಿಯುವಾಗ ರೆಡ್ಡಿ ಸುತ್ತಲಿದ್ದ ಸ್ಮಾರಕದ ಕಟ್ಟೆಯ ಮೇಲೆ ತನ್ನ ಡೈರಿ ಇಟ್ಟು ಮರೆತು ಬಂದಿದ್ದ ಕಾರಣ ಜೀಪು ನಿಲ್ಲಿಸಿ ಅಲ್ಲೆಲ್ಲ ತನ್ನ ಡೈರಿಯನ್ನು ಹುಡುಕಿ ಎಲ್ಲೂ ದೊರಕಲಿಲ್ಲ. ದಟ್ಟ ಮೋಡಗಳು ಕವಿದಿದ್ದವು. ಸುತ್ತುವರಿದಿದ್ದು ವಂಡ್ರಕಣ್ಣು ಹುಡುಗನ ಜೊತೆಗೆ ಜಗಳವಾಗಿದ್ದ ರೆಸ್ಟಾರೆಂಟ್ ಹತ್ತಿರ ಜೀಪು ಬಂದಿದ್ದೆ ರೆಡ್ಡಿಗೆ ಒಂದು ಯೋಚನೆ ಹೊಳೆದು, ಗಾಡಿ ನಿಲ್ಲಿಸಿ, ‘ಡೈರಿ ಸಿಕ್ಕಿದ್ದರೆ ಯಾರಾದರೂ ಈ ರೆಸ್ಟಾರೆಂಟ್ ಒಳಗೆ ಕೊಟ್ಟೋಗಿರಬಹುದು, ಒಳಗೋಗಿ ಕೇಳಿ ಬಾ’ ಎಂದು ಕುಮಾರ್ ಗೆ ರೆಡ್ಡಿ ಹೇಳಿದರು.
ಕುಮಾರ್ ಮೊದಲಿಗೆ ಒಪ್ಪದಿದ್ದರೂ ರೆಡ್ಡಿಯ ಒತ್ತಾಯದಿಂದ ಸುರಿಯುತ್ತಿರುವ ಹಿಮದ ಧೂಳಿನಲ್ಲಿ ರಸ್ತೆಯ ಬದಿಯಲ್ಲಿ ಗಾಡಿ ನಿಲ್ಲಿಸಿ ಮೋಡಗಳ ಒಳಗೆ ಮಾಯವಾದ. ಎದುರಿಗೆ ಅಥವಾ ಹಿಂದಿನಿಂದ ಯಾವುದಾದರೂ ಗಾಡಿ ಕಣ್ಣು ಕಾಣದೆ ನಮ್ಮ ಗಾಡಿಗೆ ಗುದ್ದಿಬಿಟ್ಟರೆ ನಾವು ಯಾರಿಗೂ ಕಾಣದೇ ಎಲ್ಲಿ ಹೋಗುತ್ತೇವೋ ಎನ್ನುವ ಆಲೋಚನೆ ನನ್ನ ತಲೆಯಲ್ಲಿ ಎಲ್ಲೋ ಹುಟ್ಟಿಕೊಂಡು ಅಣಕಿಸುತ್ತಿತ್ತು. ಮಧ್ಯ ದಾರಿಯಲ್ಲಿ ಬರುವಾಗ ಆ ಅಂಕುಡೊಂಕು ಭಯಾನಕ ರಸ್ತೆಗಳಲ್ಲಿ ಅಲ್ಲಲ್ಲಿ ಅಪಘಾತಗಳಲ್ಲಿ ಸತ್ತವರ ಹೇರಳ ಸ್ಮಾರಕಗಳು ಇರುವುದನ್ನು ನೋಡಿದ್ದೆವು. ನಾನೊಮ್ಮೆ ರೆಡ್ಡಿಯನ್ನು, ‘ರೆಡ್ಡಿ ನಮ್ಮ ಹಳೆ ಗಾಡಿ ಈ ಕಡೆಗೋ ಆ ಕಡೆಗೋ ಹೋಗಿಬಿಟ್ಟರೆ ಏನಾಗುತ್ತೆ?’ ಎಂದು ಕೆಣಕಿದ್ದಕ್ಕೆ ರೆಡ್ಡಿ, ‘ಏನಾಗುತ್ತೆ ನಮ್ಮೆಸರಲ್ಲಿ ಅಲ್ಲೊಂದು ಕಲ್ಲು ಬೀಳುತ್ತೆ’ ಎಂದು ಜೋರಾಗಿ ನಗಾಡಿದ್ದರು.
ದಡದಡನೆ ಓಡಿ ಬಂದ ಶ್ರವಣ್ ಕುಮಾರ್ ಜೀಪಿನ ಒಳಕ್ಕೆ ಸೇರಿಕೊಂಡು ಬಾಗಿಲನ್ನು ದಡಾರನೆ ಮುಚ್ಚಿಕೊಂಡು ಇಗ್ನಿಷನ್ ಕೊಟ್ಟು ವಾಹನ ಓಡಿಸತೊಡಗಿದ. ನಮಗೆ ಒಂದೂ ಅರ್ಥವಾಗದೆ ‘ಕುಮಾರ್ ನಿಧಾನ… ನಿಧಾನ…’ ಎಂದೆವು. ಸ್ವಲ್ಪ ದೂರ ಸಾಗಿದ ಮೇಲೆ ಯಾವುದೋ ಅನಾಹುತದಿಂದ ತಪ್ಪಿಸಿಕೊಂಡವನಂತೆ ಬಸುಗುಡುತ್ತಿದ್ದ ಕುಮಾರ್ ‘ಸಾಲಾ ಓ ಉದರಿ ಬೈಟಾ ಹೈ ಸರ್’ ಎಂದ. ‘ಕೌನ್?’ ಎಂದಿದ್ದಕ್ಕೆ ‘ವಹಿ ಸರ್. ಉಸ್ ದಿನ್ ಹಮ್ ಲೋಗೋಂಕಾ ಮಾರ‍್ನಾ ಆಯಾತಾನಾ ಸಾಬ್ ಓ’ ಎಂದ. ಹೌಹಾರಿದ ನಾನು ‘ಹರೆ ಸಾಲಾ’ ಎಂದೆ? ‘ಕ್ಯಾಕಿಯಾ?’ ರೆಡ್ಡಿ ಪ್ರಶ್ನಿಸಿದ. ‘ಹಮ್ಕೊ ದೇಖ್ ಕೆ ತುಮ್ ಲೋಗ್ ಪಿರ್ ಆಗಯಾ?’ ಎಂದು ಎದ್ದು ನಿಂತುಕೊಂಡ್ಬಿಟ್ಟ. ಹಮಾರಾ ಸಾಬ್ ಏಕ್ ಡೈರಿ ಚೋಡ್ದಿಯಾ ತಾ… ತೀನ್ ದಿನ್ ಕಾ ಪೆಹಿಲೆ. ಕೊಯಿ ಇದರ್ ಹಾಕೆ ಆಪ್ ಕೊ ದಿಯಾ ಕ್ಯಾ.. ಕರ‍್ಕೆ ಪೂಚಾ. ಓ ಲಡ್ಕಿ ನೈ ಹೈ ಬೋಲ್ತೆ ಹುವೆ, ಎ ಲಡ್ಕಾ ದಾವ್ ಲೇಕೆ ಕಡಾ ಹೋಗಯಾ ಸಾಬ್. ಪಿರ್ ಓ ದೋನೊ ಲಡ್ಕಿ ಉಸ್ಕೊ ದೋನೋ ಆತ್ ಪಕ್ಡಕೆ ಹಮ್‌ಕೊ ಬಾಗ್ನೆ ಬೋಲಾ. ಹಮ್ ಬಾಗ್ಕೆ ಆಗಯಾ ಸಾಬ್’ ಎಂದ.
ಯಾಕೋ ಈ ಸೆಲ್ಲಾಪಾಸ್ ಗೂ ನಮಗೂ ಹಳೆ ಶತ್ರುತ್ವ ಇದ್ದಂತೆ ಕಾಣಿಸಿತು. ‘ಕುಮಾರ್ ನೀನೇನೂ ಯೋಚಿಸಬೇಡ ಈ ಚಳಿಯಲ್ಲಿ ನಮ್ಮ ಹಿಂದೆ ಅವ್ನು ಬರೂದಿಲ್ಲ. ನೀನು ಜೀಪೂ ಆರಾಮಾಗಿ ಓಡಿಸು’ ಎಂದು ಸಮಾಧಾನ ಹೇಳಿದೆ. ಯಾರೋ ಅಸ್ಸಾಮಿಗಳು ಈ ವಂಡ್ರಕಣ್ ವಿಲನ್ ಗೆ ಸರಿಯಾಗಿ ತದಿಕಿರಬೇಕು ಮತ್ತು ನಮ್ಮನ್ನು ಅಸ್ಸಾಮಿಗಳೆಂದು ತಿಳಿದಿರಬೇಕು ಎಂದು ದಾರಿಯ ಉದ್ದಕ್ಕೂ ನಮ್ಮನ್ನು ನಾವೇ ಸಮಾಧಾನ ಮಾಡಿಕೊಂಡೆವು. ಆದರೂ ಈ ಸೆಲ್ಲಾಪಾಸ್ ದುರ್ಗಮ ರಸ್ತೆಗಿಂತಲೂ ವಂಡ್ರಕಣ್ಣನ ಭೀತಿಯೇ ನಮ್ಮನ್ನು ಕಾಡತೊಡಗಿತ್ತು. ಈ ಈಶಾನ್ಯ ರಾಜ್ಯಗಳೆಲ್ಲ ದೇಶದ ಆಡಳಿತದ ಹಿಡಿತಕ್ಕೆ ಸಿಗದೆ ನುಣಿಚಿಕೊಂಡಂತೆ ತೋರುತ್ತಿತ್ತು. ಎಲ್ಲವೂ ಸ್ವಯಂ ಆಡಳಿತ ರಾಜ್ಯಗಳು. ಅಲ್ಲೆಲ್ಲ ಅವರದೆ ದರಬಾರು. ಯಾರು ಏನು ಮಾಡಿದರು ಕೇಳುವವರಿಲ್ಲ.
ಇಂಡೋಚೀನಾ ಯುದ್ದ ಕುರುಹುಗಳು
೧೯೪೭ರಲ್ಲಿ ಭಾರತ-ಪಾಕಿಸ್ತಾನ ಪ್ರತ್ಯೇಕವಾಯಿತು, ಅನಂತರ ೧೯೪೯ರಲ್ಲಿ ಚೀನಾ ‘ಪೀಪಲ್ಸ್ ರಿಪಬ್ಲಿಕ್ ಚೀನಾ’ ಆಯಿತು. ಅದೇ ವರ್ಷ ಚೀನಾ ಟೆಬೆಟನ್ನು ವಶಪಡಿಸಿಕೊಳ್ಳುವುದಾಗಿ ಹೇಳಿಕೆ ನೀಡಿದಾಗ ಭಾರತ ಪ್ರತಿರೋಧ ತೋರಿಸಿತು. ೧೯೫೦ರಲ್ಲಿ ನೆಹರು ಮೆಕ್ ಮೋಹನ್ ಲೈನ್ ನಮ್ಮ ಸರಿಹದ್ದು, ಅದು ಎಂದೆಂದಿಗೂ ನಮ್ಮದು ಎಂದು ಘೋಷಿಸಿದ್ದರು. ಅದೇ ವೇಳೆಯಲ್ಲಿ ಭಾರತೀಯ ಯೋಧರು ಪಾಕಿಸ್ತಾನಿಗಳನ್ನು ಲಡಕ್ ಪ್ರದೇಶದಲ್ಲಿ ತಡೆದು ನಿಲ್ಲಿಸುವ ಕಾರ್ಯದಲ್ಲಿ ತೊಡಗಿದ್ದರೆ, ಚೀನಾ ಅಕ್ಷಯ್ ಚಿನ್ ಪ್ರದೇಶದಲ್ಲಿ ತನ್ನ ಯೋಧರನ್ನು ನೆಲೆಗೊಳಿಸಿತು. ಆದರೆ ಭಾರತ ಮಾತ್ರ ಯುಎನ್ ನಲ್ಲಿ ಚೀನಾ ಬಗ್ಗೆ ಒಲವು ತೋರುತ್ತಲೆ ಬಂದಿತ್ತು. ೧೯೫೦-೫೧ರಲ್ಲಿ ಚೀನಾ, ಟಿಬೆಟ್ ನ ಪ್ರತಿರೋಧವನ್ನು ನುಂಗಿಕೊಳ್ಳುತ್ತಾ ಲಾಸಾ ನಗರದವರೆಗೂ ಬಂದು ನಿಂತಿತ್ತು. ಚೀನಾ ಅದುವರೆಗೂ ಭಾರತದ ಬಗ್ಗೆ ಯಾವುದೇ ಪ್ರತಿರೋಧ ತೋರದೆ, ನೆಹರು ‘ಚೀನಾ ಇಂಡಿಯಾ ಬಾಯ್ ಬಾಯ್’ ಸ್ಲೋಗನ್ ಹೇಳುತ್ತಿದ್ದರು.
೧೯೫೮ರಲ್ಲಿ ಚೀನಾದ ಝಂಗ್ ಜಿಯಾಂಗ್ ನಿಂದ ಲಾಸಾವರೆಗೂ ಭಾರತಕ್ಕೆ ಸೇರಿದ ಅಕ್ಷಯ್ ಚಿನ್ ಮೂಲಕ ರಸ್ತೆ ಮಾಡುವುದನ್ನು ಭಾರತ ವಿರೋಧಿಸಿತು. ೧೯೫೬ರಲ್ಲಿ ನೆಹುರು ಭಾರತಕ್ಕೆ ಸೇರಿದ ೧,೨೦,೦೦೦ ಚ.ಕಿ.ಮೀ. ಪ್ರದೇಶ ಚೀನಾ ನಕ್ಷೆಯಲ್ಲಿ ತೋರಿಸಿದೆ ಎಂದು ಕಳವಳ ವ್ಯಕ್ತಪಡಿಸಿದಾಗ ಚೀನಿ ಪ್ರಧಾನಿ ಜೋಎನ್ ಲೈ ನಕ್ಷೆಗಳಲ್ಲಿ ತಪ್ಪಿರಬೇಕು ಸರಿಪಡಿಸೋಣ ಎಂದಿದ್ದರು, ಟಿಬೆಟನ್ನು ಚೀನಾ ಪೂರ್ಣವಾಗಿ ನುಂಗಲು ಹವಣಿಸಿದಾಗ ಭಾರತ ಪೂರ್ಣ ವಿರೋಧ ತೋರಿಸಿದಾಗ ಚೀನಾಗೆ ಪ್ರಪಂಚದ ಮುಂದೆ ನುಂಗಲಾರದ ತುತ್ತಾಗಿ ಪರಿಣಮಿಸಿತ್ತು. ಈ ಕಾರಣದಿಂದ ಚೀನಾ ಒಳಗೊಳಗೆ ಕುದಿಯುತ್ತಿದ್ದರೂ ಮೇಲೆ ತೋರಿಸಿಕೊಳ್ಳಲಿಲ್ಲ. ೧೯೫೯ರಲ್ಲಿ ಉರಿಯುವ ಬೆಂಕಿಗೆ ತುಪ್ಪ ಸುರಿಯುವಂತೆ ನೆಹರು ಸರಕಾರ ದಲೈಲಾಮಾರನ್ನು ಭಾರತದ ಒಳಕ್ಕೆ ಬಿಟ್ಟುಕೊಂಡು ಧರ್ಮಶಾಲಾದಲ್ಲಿ ಆಶ್ರಯ ನೀಡಿತು. ಬೌದ್ಧಧರ್ಮ ಮತ್ತು ಭಾರತದ ನಂಟಿನಿಂದ ಇದೆಲ್ಲ ಸಾಧ್ಯವಾದರೂ, ಮಾವೋ ಇದನ್ನು ತೀವ್ರವಾಗಿ ಖಂಡಿಸಿದರು. ೧೯೫೬ರಿಂದಲೆ ಸಿಐಎ ಭಾರತದ ಗಡಿಯಲ್ಲಿ (ಕಲಿಮ್ ಪಾಂಗ್ ಹತ್ತಿರ) ಟೆಬೆಟ್ ಗೆರಿಲ್ಲಾಗಳನ್ನು ನೇಮಿಸಿ ಚೀನಾದೊಂದಿಗೆ ಹೋರಾಟದಲ್ಲಿ ತೊಡಗಿಸಿತು. ನೆಹರು ಸರಕಾರ, ಟೆಬೆಟ್ ಗೆರಿಲ್ಲಾಗಳನ್ನು ಚೀನಾ ಪೂರ್ಣವಾಗಿ ಅಳಿಸಲು ಸಾಧ್ಯವಿಲ್ಲ ಎಂದು ನಂಬಿಕೊಂಡಿತ್ತು. ಆದರೆ ದೈತ್ಯ ಚೀನಾ ಎಲ್ಲರ ಊಹೆಗಳನ್ನು ನುಂಗಿ ನೀರು ಕುಡಿದು, ನೆಹರು ಅವರ ಊಹೆ ತಲೆಕೆಳಗಾಗಿತ್ತು.
ಚೀನಾ ಮುಖ್ಯವಾಗಿ ಎರಡು ಪ್ರದೇಶಗಳನ್ನು ಕಬಳಿಸಲು ಹವಣಿಸುತ್ತಿತ್ತು. ಪಶ್ಚಿಮದಲ್ಲಿ ಅಕ್ಷಯ್ ಚಿನ್ ಮತ್ತು ಈಶಾನ್ಯದಲ್ಲಿ ನೇಫಾ (ನಾರ್ಥ್ ಈಸ್ಟರ್ನ್ ಫ್ರಾಂಟಿಯರ್). ಈ ಪ್ರದೇಶವನ್ನು ಭಾರತ ಸ್ವಾತಂತ್ರ್ಯದ ನಂತರ ಅರುಣಾಚಲ ಪ್ರದೇಶವೆಂದು ಕರೆದು ಒಂದು ರಾಜ್ಯವನ್ನಾಗಿ ಘೋಷಿಸಿತ್ತು. ೧೯೪೭ರವರೆಗೂ ಬ್ರಿಟೀಷರು ತಮ್ಮ ಹಿಡಿತದಲ್ಲಿಟ್ಟುಕೊಂಡಿದ್ದ ಪ್ರದೇಶದ ಉತ್ತರದಲ್ಲಿ ಮುಂದಕ್ಕೆ ಸಾಗಿ ಚೀನಾದ ೯೦,೦೦೦ ಚದರ ಕಿ.ಮೀ ಪ್ರದೇಶವನ್ನು ಭಾರತ ಸುತ್ತುವರಿದಿದೆ ಎಂದು ಚೀನಾ ಹೇಳಿಕೊಂಡಿತು.
೧೯೫೯ರಲ್ಲಿ ಚೀನಾ, ಲಾಂಗ್ಜು ಪೋಸ್ಟ್ ನಲ್ಲಿದ್ದ ಭಾರತೀಯ ಸೈನಿಕರನ್ನು ಅಪಹರಿಸಿಬಿಟ್ಟಿತು. ಈ ಪ್ರದೇಶ ಸಿಮ್ಲಾ ಒಪ್ಪಂದದಂತೆ ಭಾರತಕ್ಕೆ ಸೇರಿದ ನೆಲ. ಅದೇ ಅಕ್ಟೋಬರ್ ನಲ್ಲಿ ಕೊಂಗ್ಸು ಪಾಸ್(ಅಕ್ಷಯ್ ಚಿನ್)ನಲ್ಲಿ ಕಾವಲು ಕಾಯುತ್ತಿದ್ದ ಭಾರತದ ೯ ಸೈನಿಕರನ್ನು ಚೀನಾ ಗುಂಡಿಕ್ಕಿ ಸಾಯಿಸಿದ ಮೇಲೆ ಅಲ್ಲಿ ಉಳಿದಿದ್ದವರನ್ನು ಭಾರತ ಹಿಂದಕ್ಕೆ ಕರೆಸಿಕೊಂಡುಬಿಟ್ಟಿತು. ಅದಕ್ಕೆ ಮುಂಚೆ ಒಂದು ಸಭೆಯಲ್ಲಿ ರಷ್ಯಾದ ನಿಕೆಟ ಖ್ರೂಷಿಚು ನೆಹರು ಪರವಾಗಿ ಮಾವೋ ಜೊತೆಗೆ ವಾದಮಾಡಿದ್ದರು. ಭಾರತದ ಜೊತೆಗೆ ಅಮೆರಿಕಾ ಸೇರಿಕೊಂಡಿದ್ದನ್ನು ತಿಳಿದ ಚೀನಾಗೆ ಸುತ್ತಲೂ ಶತ್ರುಗಳೆ ತುಂಬಿಕೊಂಡಿದ್ದಾರೆ ಎನ್ನುವ ಭ್ರಮೆ ಉಂಟಾಗಿತ್ತು. ಅಕ್ಟೋಬರ್ ೧೬ರಂದು ಚೀನಾದ ಜನರಲ್ ಲೀ ಯಂಗ್ ಪು ಭಾರತದ ಸೈನ್ಯ ತಗ್ಲ ಪರ್ವತ ಗಡಿ ದಾಟಿ ಮುಂದಕ್ಕೆ ಬಂದಿದೆ ಎಂದು ದೂರಿದರು. ಎರಡು ದಿನಗಳ ನಂತರ ಚೀನಾ ಸರಕಾರ ಭಾರತ, ಟಿಬೆಟ್ ಒಳಗೆ ನಡೆಸುತ್ತಿರುವ ಮಸಲತ್ತನ್ನು ಅಡಗಿಸಬೇಕಾದರೆ ಪ್ರತಿರೋಧ ತೋರಲೇಬೇಕೆಂದು ನಿರ್ಣಯಿಸಿತು. ಅದೇ ಸಮಯದಲ್ಲಿ ಚೀನಾದಿಂದ ಓಡಿಹೋಗಿ ತೈವಾನ್ ನಲ್ಲಿ ತಲೆಮರೆಸಿಕೊಂಡಿದ್ದ ಚೀನಾ ರಾಷ್ಟ್ರೀಯವಾದಿಗಳು ಚೀನಾ ಮೇಲೆ ದಾಳಿ ಮಾಡುವ ಭೀತಿಯೂ ಇತ್ತು.
೧೯೬೨ ಅಕ್ಟೋಬರ್ ನಲ್ಲಿ ಚೀನಾ ಭಾರತದ ಮೇಲೆ ದಾಳಿ ಮಾಡಿದಾಗ ಚೀನಾ-ಭಾರತದ ೩೨೨೫ ಕಿ.ಮೀ.ಗಳ ಗಡಿಯ ಉದ್ದಕ್ಕೂ ಭಾರತದ ಕೇವಲ ೯ ಡಿವಿಷನ್ ಗಳು ಮಾತ್ರ ಇದ್ದು ಅವರಲ್ಲಿ ಯಾವ ಆಧುನಿಕ ಮಿಲಿಟರಿ ಸಲಕರಣೆಗಳೂ ಇರಲಿಲ್ಲ. ಚಳಿಯನ್ನು ತಡೆದುಕೊಳ್ಳಲು ಸರಿಯಾದ ಬಟ್ಟೆ ಮತ್ತು ಬೂಟುಗಳೂ ಇರಲಿಲ್ಲ. ಅಕ್ಟೋಬರ್ ೨೧, ಅರುಣಾಚಲ ಪ್ರದೇಶದ ನಮ್ಚೂಟ್ಸಂಗ್ ಲಿ, ಖಿನ್ ಝಿಮನೆ ಮತ್ತು ದೋಲಾ ಪೋಸ್ಟ್ ಗಳಲ್ಲಿ ಭಾರತದ ಸೈನಿಕರನ್ನು ಮುಗಿಸಿದ ಚೀನಿಯರು ಎರಡನೇ ದಿನ ಟ್ಸಂಗ್ ದರ್, ಮೂರನೇ ದಿನ ಬುಮ್ಲಾ ಮತ್ತು ೭ನೇ ದಿನ ಇನ್ ಫ್ಯಾಂಟ್ರಿ ಹೆಡ್ ಕ್ವಾಟರ್ ತೈವಾಂಗನ್ನು ವಶಪಡಿಸಿಕೊಂಡ ಚೀನಿಯರು ಭಾರತದ ಜೊತೆಗೆ ಮಾತುಕತೆ ನಡೆಸಲು ಇಚ್ಛಿಸಿದರು. ಆದರೆ ಭಾರತ ನಿರಾಕರಿಸಿತು. ಭಾರತ ಸರಕಾರ ಕಲ್ಕತ್ತ, ನಾಗಾಲ್ಯಾಂಡ್, ಬಿಹಾರ್, ಪಂಜಾಬ್ ಕಡೆಯಿಂದ ಸೈನಿಕರು ಧಾವಿಸಿ ಬರಲು ಆಜ್ಞೆ ನೀಡಿತು. ಕೆಲವು ಯೋಧರು ಸಿಕ್ಕಿಂ ಮತ್ತು ಭೂತಾನ್ ಕಡೆಗೆ ಧಾವಿಸಿದರು.
೧೯೬೨ರ ಬೇಸಿಗೆ ಕಾಲದಲ್ಲಿ ಚೀನಾ-ಭಾರತ ಗಡಿಯಲ್ಲಿ ಅನೇಕ ವಲಯಗಳಲ್ಲಿ ಸಣ್ಣಪುಟ್ಟ ದಾಳಿಗಳು ನಡೆಯತೊಡಗಿದವು. ಒಂದು ಕಾಳಗದಲ್ಲಿ ಅನೇಕ ಚೀನಿ ಯೋಧರು ಪ್ರಾಣ ಕಳೆದುಕೊಂಡರು. ಜೂನ್ ತಿಂಗಳಲ್ಲೆ ಐಐಬಿ ಚೀನಾ ಯುದ್ಧ ತಯಾರಿಯಲ್ಲಿದೆ ಎಂದು ವರದಿ ಮಾಡಿತ್ತು. ಪಾಕಿಸ್ತಾನವು ಅದೇ ರೀತಿ ಪಶ್ಚಿಮದಲ್ಲಿ ತಯಾರಿ ನಡೆಸಿತ್ತು. ಭಾರತ ವಾಯುಸೇನೆಗೆ ತಯಾರಾಗಿರುವಂತೆ ಸೂಚನೆ ನೀಡಲಾಯಿತು. ಯುಮ್ ಟ್ಸೋ ಕಣಿವೆಯಲ್ಲಿ ೧೦೦೦ ಯೋಧರನ್ನು ಎದುರ‍್ಗೊಂಡ ಭಾರತದ ೫೦ ಯೋಧರು ಹೋರಾಡಿ ಹತರಾದರು. ಆಗಸ್ಟ್ ವೇಳೆಗೆ ಈಶಾನ್ಯ ಭಾರತದ ಗಡಿಯ ಉದ್ದಕ್ಕೂ ಚೀನಾ ಹೇರಳ ಮದ್ದುಗುಂಡನ್ನು ಪೇರಿಸುತ್ತಿದ್ದರೂ, ನೆಹರು ಸರಕಾರ ಕಣ್ಣುಮುಚ್ಚಿಯೇ ಕುಳಿತಿತ್ತು. ಅದೇ ತಿಂಗಳಲ್ಲಿ ಟೆಬೆಟ್ ನ ತಗ್ಲಾ ಪರ್ವತ ದೋಲಾದಲ್ಲಿ ಭಾರತ ಪೋಸ್ಟ್ ಸ್ಥಾಪಿಸಿದ ತಕ್ಷಣ ಚೀನಾ ಯೋಧರು ಎದುರಿಗೆ ಬಂದು ನಿಂತುಕೊಂಡರು. ಸೆಪ್ಟೆಂಬರ್ ನಲ್ಲಿ ಮತ್ತೆ ೬೦೦ ಚೀನಿ ಯೋಧರು ಅಲ್ಲಿಗೆ ತಲುಪಿದರು. ಚೀನಾ-ಭಾರತ ಸೈನಿಕರ ಮಧ್ಯ ೧೨ ದಿನಗಳು ಕಾಲ ಗುಂಡಿನ ಚಕಮಕಿ ನಡೆಯಿತು. ಸೆಪ್ಟೆಂಬರ್ ೯ರಂದು ಭಾರತ ಸರಕಾರ ತಗ್ಲಾದಲ್ಲಿದ್ದ ಚೀನಿಯರನ್ನು ಎದುರಿಸಲು ಪಂಜಾಬ್ ನಿಂದ ೪೦೦ ಯೋಧರನ್ನು ಕರೆಸಿತು. ಭಾರತದ ಯೋಧರು ಅಲ್ಲಿಗೆ ತಲುಪುವುದರೊಳಗೆ ನಮ್ಕಚು ನದಿಯ ಎರಡೂ ದಡಗಳಲ್ಲಿ ಚೀನಿ ಯೋಧರು ತುಂಬಿಹೋಗಿದ್ದರು. ೨೦ರಂದು ಸೇತುವೆಯ ಮೇಲೆ ನಡೆದ ಕಾಳಗದಲ್ಲಿ ಎರಡೂ ಕಡೆ ನೂರಾರು ಯೋಧರು ಪ್ರಾಣ ಕಳೆದುಕೊಂಡರು. ಅಕ್ಟೋಬರ್ ೩ರಂದು ಭಾರತಕ್ಕೆ ಜೋಎನ್ ಲೈ ನೆಹರುರನ್ನು ಸಂದಿಸಿ ಯುದ್ಧ ಬೇಡ ಶಾಂತಿಯಿಂದ ಇರೋಣ ಎಂದು ಪ್ರಮಾಣ ಮಾಡಿದ್ದರು. ಅದರೆ ಹಿಂದೆಯೇ ಚೀನಾ ದಾಳಿ ಮಾಡಿತ್ತು.
ಅದೇ ವೇಳೆಯಲ್ಲಿ ಹಲವು ಬೆಟಾಲಿಯನ್ ಗಳು ಲಡಾಕ್ ಕಡೆಗೆ ಧಾವಿಸಿದವು. ೨೫ ಪೌಂಡ್ ರ್ ಗನ್ಸ್, ಎಎಂಎಕ್ಸ್ ಮಿನಿ ಟ್ಯಾಂಕರ್ ಗಳನ್ನು ಯುದ್ಧ ವಿಮಾನಗಳಲ್ಲಿ ಸಾಗಿಸಿ ಚುಸಲ್ ಪ್ರದೇಶಕ್ಕೆ ತರಲಾಯಿತು. ೫೩೦೦ ಮೀ. ಎತ್ತರದ ದೌಲತ್ ಬಾಗ್ ನಿಂದ ಯೋಧರನ್ನು ಹಿಂದಕ್ಕೆ ಕರೆಸಲಾಯಿತು. ಅದಕ್ಕೂ ಆಚೆಯಿದ್ದ ಭಾರತದ ಗಡಿಯನ್ನು ಚೀನಿಯರು ಆಗಲೇ ವಶಪಡಿಸಿಕೊಂಡಿದ್ದರು. ಕೆಲವು ದಿನಗಳ ಹಿಂದೆ ಲೋಹಿತ್ ಕಣಿವೆಯ ಹತ್ತಿರ ವಾಲೊಂಗ್ ಹಳ್ಳಿಯ ಹಿಂದಿನ ಪರ್ವತವನ್ನು ಭಾರತೀಯ ಸೈನಿಕರು ಚೀನಿ ಯೋಧರ ಜೊತೆಗೆ ಹೋರಾಡಿ ವಶಪಡಿಸಿಕೊಂಡಿದ್ದರು. ಅದೇ ತಿಂಗಳು ೧೭ರಂದು ಚೀನಿಯರ ೬ ಬ್ರಿಗೇಡರ್ಸ್ ಜಂಗ್ ಹತ್ತಿರ (ತವಾಂಗ್ ಹತ್ತಿರ) ೧೬ ಕಿ.ಮೀ ಒಳಕ್ಕೆ ಬಂದುಬಿಟ್ಟಿದ್ದರು. ೧೫,೦೦೦ ಅಡಿ ಎತ್ತರದ ಸೆಲ್ಲಾ ಪಾಸ್ ನಲ್ಲಿ ಭಾರತೀಯ ಯೋಧರು ಒಟ್ಟುಗೂಡುವ ಮುಂಚೆಯೇ ಚೀನಿ ಯೋಧರು ಎಲ್ಲರನ್ನೂ ಮುಗಿಸಿ ಮುಂದೆ ಬಂದಿದ್ದರು. ೧೮ರಂದು ಅಸ್ಸಾಂ ಬಯಲು ಪಟ್ಟಣ ತೇಜ್ ಪುರದವರೆಗೂ ಧಾವಿಸಿ ಬಂದಿದ್ದರು. ತವಾಂಗ್ ಮತ್ತು ತೇಜ್ ಪುರದ ನಡುವಿನ ಬೆಟ್ಟಗುಡ್ಡಗಳ ಕಾಡು ದಾರಿ ಸುಮಾರು ೩೦೦ ಕಿ.ಮೀ. ೨೧ರಂದು ಚೀನಿಯ ಯೋಧರು ತಾವಾಗಿಯೇ ಹಿಂದಕ್ಕೆ ಹೋಗಿ ೧೯೫೯ರ ಭಾರತ-ಚೀನಾ ಒಪ್ಪಂದದ ಗಡಿ ರೇಖೆಯಲ್ಲಿ ನಿಂತುಬಿಟ್ಟರು. ಈ ಯುದ್ಧದಲ್ಲಿ ಭಾರತದ ಸಾವಿರಾರು ಅಧಿಕಾರಿಗಳು ಮತ್ತು ಯೋಧರು ಪ್ರಾಣ ಕಳೆದುಕೊಂಡಿದ್ದರು.
***
೧೯೬೨ರಲ್ಲಿ ಚೀನಾ-ಭಾರತ ಯುದ್ಧ ನಡೆದ ಮೇಲೆ ಅನೇಕ ಪ್ರಶ್ನೆಗಳು ಹುಟ್ಟಿಕೊಂಡವು. ಚೀನಾ ಯಾಕಾದರೂ ಕಾಲು ಕೆದರಿಕೊಂಡು ಭಾರತದ ಮೇಲೆ ಬಿದ್ದು ಯುದ್ಧ ಮಾಡಿತು? ಅಸ್ಸಾಂನ ತೇಜ್ ಪುರದವರೆಗೂ ಬಂದ ಚೀನಿ ಯೋಧರು ಮತ್ತೆ ತಾವಾಗಿಯೇ ಹಿಂದಕ್ಕೆ ಹೊರಟುಹೋದ ಕಾರಣವೇನು? ಪಶ್ಚಿಮದಲ್ಲಿ ಭಾರತದಿಂದ ವಶಪಡಿಸಿಕೊಂಡ ಪ್ರದೇಶವನ್ನು ಪಾಕಿಸ್ತಾನಕ್ಕೆ ಯಾಕಾದರೂ ಹಸ್ತಾಂತರಿಸಿತು? ಇದಕ್ಕೆಲ್ಲ ಕಾರಣ ನೆಹರು ಸರಕಾರ ದಲೈಲಾಮಾಗೆ ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿ ಆಶ್ರಯ ನೀಡಿದ್ದೇ? ಅಥವಾ ಟೆಬೆಟ್ ಮತ್ತು ಚೀನಾ ನಡುವಿನ ಘರ್ಷಣೆಯಲ್ಲಿ ಭಾರತ ಮೂಗು ತೂರಿಸಿದ್ದೆ? ಹೌದು ಎನ್ನುತ್ತಾರೆ ಕೆಲವು ವಿದ್ವಾಂಸರು.
ವೀರಯೋಧ ಜಸ್ವಂತ್ ಸಿಂಗ್ ರಾವತ್
ತವಾಂಗ್ ಸುತ್ತಮುತ್ತಲು ತೀವ್ರ ಯುದ್ಧ ನಡೆದು ಸಾವಿರಾರು ಚೀನಿಯರು ಪರ್ವತಗಳಿಂದ ಮಾರ್ಟರ್ಸ್, ಮಿಷಿನ್ ಗನ್ಸ್, ಸ್ಟೆನ್ ಗನ್ಸ್, ಗ್ರನೇಡ್ಸ್, ಹೆವಿ ಆರ್ಟಿಲರಿ, ಸೆಲ್ ಗಳಿಂದ ದಾಳಿ ಮಾಡಿ ನೂರಾರು ಭಾರತೀಯ ಯೋಧರನ್ನು ಮುಗಿಸುತ್ತ ಚೀನಿ ಸೈನ್ಯ ಮುಂದುವರಿದಿತ್ತು. ಭಾರತೀಯ ಯೋಧರನ್ನು ತವಾಂಗ್ ನಿಂದ ಹಿಂದಕ್ಕೆ ಕರೆಸಿ, ಸೆಲ್ಲಾ ಪಾಸ್ ಕೆಳಗಿನ ತಪ್ಪಲಲ್ಲಿ ೪ನೇ ಬೆಟಾಲಿಯನ್ ಗೆ ಸೇರಿದ ಘರ್ ವಾಲ್ ರೈಫಲ್ಸ್ ಜೊತೆಗೆ ಸೇರಿಕೊಂಡು ಚೀನಿ ಯೋಧರನ್ನು ಎದುರಿಸುವಂತೆ ಆಜ್ಞೆ ನೀಡಲಾಯಿತು.
ಚೀನಿಯರು ಸ್ಥಳೀಯ ಮೋನ್ಫಾಗಳ ವೇಷದಲ್ಲಿ ಭಾರತೀಯ ಸೈನಿಕರನ್ನು ಭೇದಿಸಿ ಒಳಗೆ ನುಗ್ಗಲು ಪ್ರಯತ್ನಿಸುತ್ತಿರುವುದನ್ನು ಅರಿತು ಅವರನ್ನು ಹಿಮ್ಮೆಟಿಸಲಾಯಿತು. ಅದೂ ಕೂಡ ಬೆಳಗಿನ ಜಾವ ಕತ್ತಲಲ್ಲಿ ಒಮ್ಮೆಲೆ ನೂರಾರು ಚೀನಿ ಯೋಧರು ಧಾವಿಸಿ ಬರುತ್ತಿದ್ದರು. ಕಡಿಮೆ ಸಂಖ್ಯೆಯಲ್ಲಿದ್ದ ಭಾರತೀಯ ಯೋಧರು ಚೀನಿ ಯೋಧರನ್ನು ತಡೆಯಲಾಗಲಿಲ್ಲ. ಹಿಂದಿನ ಪರ್ವತಗಳ ಜಾಡಿನಲ್ಲಿ ಕಣಿವೆಯ ಕೆಳಗೆ ೪೦ ಮೀ. ಹತ್ತಿರದವರೆಗೂ ಸಾವಿರಾರು ಚೀನಿ ಯೋಧರು ಬಂದುಬಿಟ್ಟಿದ್ದರು. ಜೊತೆಗೆ ಚೀನಿಯರಲ್ಲಿ ಹಲವು ಆಧುನಿಕ ಯುದ್ಧ ಶಶಸ್ತ್ರಗಳೂ ಇದ್ದವು. ಕಣಿವೆಯ ಮೇಲೆ ಬಂಕರ್ ಗಳಲ್ಲಿ ಉಳಿದುಕೊಂಡಿದ್ದ ತ್ರಿಲೋಕ್ ಸಿಂಗ್, ಜಸ್ವಂತ್ ಸಿಂಗ್ ಮತ್ತು ಗೋಪಾಲ್ ಸಿಂಗ್ ಮೂವರು ಉಸಿರುಬಿಡದೆ ಸುಮ್ಮನೆ ಕುಳಿತುಕೊಂಡರು. ಸಾವಿರಾರು ಚೀನಿ ಯೋಧರ ಮುಂದೆ ಉಳಿದುಕೊಂಡಿದ್ದ ಈ ಮೂವರ ಯೋಧರ ಹತ್ತಿರ ಕೇವಲ ೧ ಮಿಷಿನ್ ಗನ್ ಜೊತೆಗೆ ನೂರಾರು ಗ್ರನೇಡುಗಳು ಮಾತ್ರ ಇದ್ದವು. ಚೀನಿಯರು ಇವರ ಮೇಲೆ ಒಂದೇ ಸಮನೆ ಫೈರ್ ಮಾಡುತ್ತಿದ್ದರು. ಅದರ ನಡುವೆಯೇ ಜಸ್ವಂತ್ ಸಿಂಗ್ ಮತ್ತು ತ್ರಿಲೋಕ್ ಸಿಂಗ್ ಕಣಿವೆಯ ಮರಗಿಡಗಳ ಮಧ್ಯೆ ತೆವಳಿಕೊಂಡು ಹೋಗುತ್ತಿದ್ದರೆ, ಹಿಂದೆ ಬಂಕರ್ ಹತ್ತಿರ ನಿಂತಿದ್ದ ಗೋಪಾಲ್ ಸಿಂಗ್ ಮಿಷಿನ್ ಗನ್ ನಿಂದ ಚೀನೀ ಯೋಧರ ಮೇಲೆ ಒಂದೇ ಸಮನೇ ಫೈರ್ ಮಾಡತೊಡಗಿದರು.
ಎದುರಿಗೆ ಗಾಯಗೊಂಡು ಬಿದ್ದಿದ್ದ ಚೀನಿ ಯೋಧರ ಕೈಯಿಂದ ಗೋಪಾಲ್ ಸಿಂಗ್ ಒಂದು ಲೈಟ್ ಎಮ್ ಎಮ್ ಜಿ ಕಸಿದುಕೊಂಡು ಹಿಂದಕ್ಕೆ ಬಂಕರ್ ಕಡೆಗೆ ಓಡಿ ಬರುತ್ತಿದ್ದರು. ಅಷ್ಟರಲ್ಲಿ ಒಂದು ಬುಲೆಟ್ ಆತನ ತಲೆಗೆ ಬಡಿಯಿತು. ತ್ರಿಲೋಕ್ ಸಿಂಗ್ ಆ ಚೀನಿಯೋಧನ ಮೇಲೆ ಗ್ರನೇಡ್ ಎಸೆದು ಸಾಯಿಸಿದ್ದ. ಆ ವೇಳೆಗೆ ಗೋಪಾಲ್ ಸಿಂಗ್, ಜಸ್ವಂತ್ ಸಿಂಗ್ ರನ್ನು ಬಂಕರ್ ಒಳಕ್ಕೆ ಎಳೆದುಕೊಂಡಿದ್ದರು. ಇದೆಲ್ಲ ಕೇವಲ ಕೆಲವು ನಿಮಿಷಗಳಲ್ಲಿ ನಡೆದುಹೋಗಿತ್ತು. ಆದರೆ ಈ ಮೂವರು ಯೋಧರು ಇರುವೆ ಸಾಲಿನಂತೆ ಬರುತ್ತಿದ್ದ ಚೀನಿ ಯೋಧರನ್ನು ತಡೆದು ನಿಲ್ಲಿಸಿದ್ದರು. ಚೀನಿ ಯೋಧರು ಒಂದೇ ಸಮನೆ ಕಣಿವೆಯ ಇಳಿಜಾರಿನಲ್ಲಿ ಜಾರಿ ಬಿಳುತ್ತಿದ್ದರೂ, ಅಲೆಅಲೆಯಾಗಿ ಬರುತ್ತಲೇ ಇದ್ದರು. ೩೦೦ ಚೀನಿಯರು ಸತ್ತು ನೂರಾರು ಯೋಧರು ಗಾಯಗೊಂಡು ಹಿಂದಕ್ಕೆ ಸರಿದಿದ್ದರು.
ಈ ಮೂವರು ಯೋಧರು ಮೂರು ರಾತ್ರಿ ಮೂರು ಹಗಲುಗಳ ಕಾಲ ಈ ಇಕ್ಕಟ್ಟಾದ ಪ್ರದೇಶದಲ್ಲಿ ಸಾವಿರಾರು ಚೀನಿ ಯೋಧರನ್ನು ತಡೆದು ನಿಲ್ಲಿಸಿದ್ದರು. ಚೀನಿಯರು ಕಣಿವೆ ಮೇಲಿನ ಬಂಕರ್ ಗಳಲ್ಲಿ ನೂರಾರು ಭಾರತೀಯ ಯೋಧರು ಅಡಗಿ ಕುಳಿತು ನಮ್ಮ ಮೇಲೆ ದಾಳಿ ಮಾಡುತ್ತಿದ್ದಾರೆ ಎಂದು ನಂಬಿದ್ದರು. ವೀರಯೋಧ ಜಸ್ವಂತ್ ಸಿಂಗ್ ರಾವತ್ ಜೊತೆಗೆ ಇದೇ ಸ್ಥಳದಲ್ಲಿ ೩ ಅಧಿಕಾರಿಗಳು, ೪ ಜೆಸಿಎಮ್ ಗಳು, ೧೪೭ ಯೋಧರು ಮತ್ತು ೭ ಲ್ಯಾನ್ಸ್ ನಾಯಕ್ಸ್ ವೀರ ಮರಣವನ್ನು ಅಪ್ಪಿದ್ದರು. ಇವರೆಲ್ಲ ಘರ್ ವಾಲ್ ರೈಫಲ್ಸ್ ೪ನೇ ಬಟಾಲಿಯನ್ ಗೆ ಸೇರಿದವರು. ಈ ಸ್ಥಳ ಈಗ ಜಸ್ವಂತ್ ಜಂಗೀಗರ್ ಎಂದೇ ಪ್ರಖ್ಯಾತಿ. ವೀರ ಮರಣ ಹೊಂದಿದ ಜಸ್ವಂತ್ ಸಿಂಗ್ ರಾವತ್ ಗೆ ಮಹಾವೀರಚಕ್ರ, ತ್ರಿಲೋಕ್ ಸಿಂಗ್ ಗೆ ವೀರಚಕ್ರ ಮತ್ತು ಬದುಕಿ ಉಳಿದುಕೊಂಡಿದ್ದ ಗೋಪಾಲ್ ಸಿಂಗ್ ಗೆ ಭಾರತ ಸರಕಾರ ವೀರಚಕ್ರ ನೀಡಿ ಗೌರವಿಸಿತ್ತು.
ಆ ಸ್ಥಳದಲ್ಲಿದ್ದ ಬಂಕರ್ ಗಳನ್ನು, ಯೋಧರ ಸಮಾಧಿಗಳನ್ನು ಅಲ್ಲೆಲ್ಲ ಬಿದ್ದಿದ್ದ ಇನ್ನಿತರ ಯುದ್ಧ ಸಲಕರಣೆಗಳನ್ನು ನೋಡಿದಾಗ ನನ್ನ ಮನ ನಿಜವಾಗಿಯೂ ನೊಂದುಕೊಂಡಿತ್ತು. ನಾಲ್ಕಾರು ಸಲ ಅಲ್ಲೆಲ್ಲ ಸುತ್ತಾಡಿ ಸುತ್ತಲಿನ ಪರ್ವತ ಶ್ರೇಣಿಗಳು, ಕಾಡು ಕಣಿವೆಗಳನ್ನು ನೋಡುತ್ತಾ ಅಲ್ಲೇ ಸುಮಾರು ಹೊತ್ತು ನಿಂತುಬಿಟ್ಟೆ. ಜೊತೆಗಿದ್ದ ರೆಡ್ಡಿ ಮತ್ತು ನನ್ನ ವಾಹನ ಚಾಲಕ ಸುತ್ತಲೂ ನೋಡುತ್ತ ಮೂಕರಾಗಿದ್ದರು. ನಮ್ಮ ರಾಜಕಾರಣಿಗಳು, ಭ್ರಷ್ಟ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳ ಬಗ್ಗೆ ಅನೇಕ ಆಲೋಚನೆಗಳು ಬಂದುಹೋದವು. ಇವರನ್ನೆಲ್ಲ ಕನಿಷ್ಠ ಒಂದು ಸಲವಾದರು ಈ ಪ್ರದೇಶಗಳಲ್ಲಿ ಓಡಾಡಿಸಿದರೆ ಒಳಿತೇನೋ ಎನ್ನುವ ಆಲೋಚನೆ ಬಂದಿತ್ತು.
ಸೆಲ್ಲಾ ಪಾಸ್ ಕೆಳಗೆ ನ್ಯೂಕ್ಮಡೊಂಗ್ ಯುದ್ಧಸ್ಮಾರಕದಲ್ಲಿ ವೀರಮರಣ ಹೊಂದಿದ ಒಟ್ಟು ೨೮೦ ವೀರಯೋಧರ ಪಟ್ಟಿ ಸಿಕ್ಕಿತು. ಅಸ್ಸಾಂನ ತೇಜ್ ಪುರ-ಬೊಮ್ ಡಿಲಾ-ಜಂಗಿಘರ್-ಸೆಲ್ಲಾಪಾಸ್-ದೀರಂಘ್-ತವಾಂಗ್ ವರೆಗೂ ಮತ್ತು ತವಾಂಗ್-ಬುಮ್ಲಾ-ಶಾಂಗ್ಷಟಿಯರ್ ಸುತ್ತಮುತ್ತಲೂ ಎಲ್ಲಿ ನೋಡಿದರು ಯುದ್ಧ ನಡೆದ ರಣರಂಗ ಪ್ರದೇಶಗಳು ಮತ್ತು ಯುದ್ಧ ಸ್ಮಾರಕಗಳು. ಇನ್ನು ಯುದ್ಧದಲ್ಲಿ ಮಡಿದವರ ಹೆಸರಿನ ಪಟ್ಟಿಗಳನ್ನು ನೋಡಿದಾಗ ತಲೆ ಸುತ್ತಿ ಬರುತ್ತದೆ. ಹೀಗೆ ಈ ಪ್ರದೇಶದಲ್ಲಿ ಹತ್ತಾರು ಯುದ್ಧಸ್ಮಾರಕಗಳಿದ್ದು ನೂರಾರು ಯೋಧರ ಸಮಾಧಿಗಳಿವೆ.
ತವಾಂಗ್ ನಿಂದ-ಬುಮ್ಲಾ-ಶಾಂಗ್ಷಟಿಯರ್ ಸರೋವರದ ರಸ್ತೆಯಲ್ಲಿ ನಮ್ಮ ಜೀಪು ಹೊರಟಿದ್ದು ರಸ್ತೆಯ ಉದ್ದಕ್ಕೂ ಯುದ್ಧದ ಕುರುಹುಗಳು ಕಾಣಿಸತೊಡಗಿದವು. ಬೆಟ್ಟ ಗುಡ್ಡ ಕಣಿವೆ ಶಿಖರ ಎಲ್ಲೆಲ್ಲೂ ಬಂಕರ್ ಗಳು, ಬಂಕರುಗಳ ಸುತ್ತಮುತ್ತಲೂ ಮತ್ತು ಒಳಗೆ ರಾಶಿ ರಾಶಿ ಸಿಡಿಮದ್ದುಗಳ ಹಳೆ ಕವಚಗಳು ಬಿದ್ದಿದ್ದವು. ಅವುಗಳ ಮೇಲೆ ಕೆಂಪು ಬಣ್ಣದಲ್ಲಿ ಬರೆದಿರುವ ‘ಪಾಯಿಸನ್’ ಎಂಬ ಪದಗಳು ೪೮ ವರ್ಷಗಳಾದರೂ ಇನ್ನೂ ಹಾಗೆ ಉಳಿದುಕೊಂಡಿದ್ದವು. ಬಂಕರುಗಳ ಮಧ್ಯ ಆಳವಾದ ಟ್ರಂಚುಗಳು, ಗೋಡೆಗಳು ಮತ್ತು ಹಲವು ಆಕಾರಗಳ ಬಂಕರುಗಳ ಮೇಲೆ ಹುಲ್ಲು ಬೆಳೆದು, ಹಿಮದ ಧೂಳು ಬಿದ್ದು, ಹಸಿರು ಬಿಳುಪಿನ ಹೊದಿಕೆಯ ಗೂಡುಗಳಂತೆ ಕಾಣಿಸುತ್ತಿದ್ದವು.
***
ಶಿಲೆಗಳ ಮಧ್ಯ ಇರುವ ಬಿರುಕು ಸಂಧುಗಳು ಮತ್ತು ಗವಿಗಳನ್ನೇ ಬಂಕರುಗಳಾಗಿ ಉಪಯೋಗಿಸಲಾಗಿತ್ತು. ಅವುಗಳ ಮಧ್ಯೆಯೇ ಜಿಂಕ್ ಶೀಟುಗಳಲ್ಲಿ ನಿರ್ಮಿಸಿದ ಹೊಸ ಬಂಕರುಗಳಲ್ಲಿ ಅಲ್ಲೊಬ್ಬರು ಇಲ್ಲೊಬ್ಬರು ಯೋಧರು ಒಳಗೆ ಹೊರಗೆ ನಿಂತು ಎಲ್ಲಾ ದಿಕ್ಕುಗಳನ್ನೂ ಗಮನವಿಟ್ಟು ನೋಡುತ್ತಿದ್ದರು. ಅವರ ಮೇಲೆ ಹಿಮ ಧೂಳಿನ ಹೂಮಳೆ ಸುರಿಯುತ್ತಿದ್ದು ಯಾವ ಕಡೆ ನೋಡಿದರು ಹಿಮರಾಶಿಯೇ. ಎಲ್ಲಿ ಹುಟ್ಟಿ ಎಲ್ಲಿ ಬೆಳೆದ ಯೋಧರೋ, ಯಾವ ತಾಯಿ ಎತ್ತ ಮಕ್ಕಳೋ, ತಂದೆ ತಾಯಿ ಪತ್ನಿ ಮಕ್ಕಳನ್ನು ಬಿಟ್ಟು ಈ ನೀರವ ರೌದ್ರ ಹಿಮರಾಶಿಯ ನಡುವೆ ಮರಗಟ್ಟುವ ಚಳಿಯಲ್ಲಿ ದೇಶದ ಗಡಿಯಲ್ಲಿ ನಿಂತು ದೇಶವನ್ನು ಕಾಯುತ್ತಿರುವ ಪರಿಯನ್ನು ನೋಡಿದರೆ ನಿಜವಾಗಿಯೂ ದು:ಖ ಉಮ್ಮಳಿಸಿ ಬರುತ್ತದೆ. ಈ ವೀರಯೋಧರ ಬಗ್ಗೆ ನಾವು ನಾಗರಿಕರು ಯಾವಾಗಲಾದರೂ ಯೋಚಿಸುತ್ತೇವೆಯೇ? ಕೇವಲ ನಾಲ್ಕು ಒಳ್ಳೆ ಮಾತುಗಳನ್ನಾದರೂ ಮಾತನಾಡುತ್ತೇವೆಯೇ? ದೇವರು ದಿಂಡರು ಗುಡಿ ಗೋಪುರಗಳನ್ನು ನೋಡಿಬರುವ, ಜಾತ್ರೆಗಳಲ್ಲಿ ಮುಳುಗಿ ತೇಲಾಡುವ ಜನರು ಗಡಿಗಳಲ್ಲಿ ನಿಂತಿರುವ ಈ ಯೋಧರನ್ನು ಜೀವನದಲ್ಲಿ ಒಮ್ಮೆಯಾದರೂ ನೋಡಿಬರಬೇಕಾಗಿದೆ.
ಈಶಾನ್ಯ ಕುರುಕ್ಷೇತ್ರದ ಕುರಿತು
ದೇಶದ ಈಶಾನ್ಯ ಭಾಗ ಚೀನಾ, ಭೂಥಾನ್, ಮಿನ್ಮಾರ್ (ಬರ್ಮಾ) ಮತ್ತು ಬಂಗ್ಲಾ ದೇಶಗಳ ಗಡಿಗಳಿಂದ ಸುತ್ತುವರಿದಿದ್ದು ಬಂಗ್ಲಾ ದೇಶಿಗರ ವಲಸೆ ನಿರಂತರವಾಗಿ ಪ್ರವಾಹದಂತೆ ಈ ವಲಯಕ್ಕೆ ಹರಿದು ಬರುತ್ತಿದೆ. ಈ ಭಾಗ ಹಿಮಾಲಯದ ಒಂದು ತುಂಡಾಗಿದ್ದು ಮತ್ತು ದೇಶದ ಮೈನ್ ಲ್ಯಾಂಡ್ ನಿಂದ ಭೌಗೋಳಿಕವಾಗಿ ಪ್ರತ್ಯೇಕಗೊಂಡಿದ್ದು ಭಾವನಾತ್ಮಕವಾಗಿಯೂ ಪರಕೀಯವಾಗಿ ನರಳುತ್ತಿದೆ. ಈ ವಲಯ ಸ್ವಾತಂತ್ರ್ಯಪೂರ್ವದಿಂದಲೂ ಉಗ್ರವಾದಿಗಳ ಕೋಟೆಯಾಗಿದ್ದು ಮಿಲಿಟರಿ ಕೂಡ ನಿಯಂತ್ರಿಸಲಾಗದೆ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ.
ಪ್ರಸ್ತುತ ಮುಖ್ಯವಾಗಿ ನಾಲ್ಕು ರಾಜ್ಯಗಳು ಅಸ್ಸಾಂ, ಮಣಿಪುರ, ನಾಗಾಲ್ಯಾಂಡ್ ಮತ್ತು ತ್ರಿಪುರಾಗಳಲ್ಲಿ ಹೆಚ್ಚು ಕಡಿಮೆ ಸಣ್ಣ ಪ್ರಮಾಣದ ಯುದ್ಧವೆ ನಡೆಯುತ್ತಿದೆ. ಬಂಡುಕೋರರ ಉದ್ದೇಶಗಳು ಮತ್ತು ಸಮಸ್ಯೆಗಳು ರಾಜ್ಯದಿಂದ ರಾಜ್ಯಕ್ಕೆ ಬೇರೆ ಬೇರೆಯಾಗಿವೆ. ಕೆಲವರು ಪ್ರತ್ಯೇಕ ರಾಜ್ಯಗಳನ್ನು ಕೋರಿದರೆ, ಕೆಲವರು ಸರಕಾರದ ಎಲ್ಲ ವ್ಯವಹಾರಗಳನ್ನು ಹೊರಗೆ ಹಾಕಿ ತಾವೇ ಎಲ್ಲವನ್ನೂ ಕೈಗೆ ತೆಗೆದುಕೊಳ್ಳಲು ಹವಣಿಸುತ್ತಿದ್ದಾರೆ. ಇನ್ನೂ ಕೆಲವರು ತಮ್ಮದೆ ದೇಶಗಳನ್ನು ಸ್ಥಾಪಿಸಿಕೊಳ್ಳಲು ಹೋರಾಟ ನಡೆಸುತ್ತಿರುವುದಾಗಿ ಹೇಳಿಕೊಳ್ಳುತ್ತಾರೆ. ಕೆಲವು ಗುಂಪುಗಳು ರಾಜಕೀಯವಾಗಿ ಸಂಧಾನ ಮಾಡಿಕೊಳ್ಳಲು ಯೋಚಿಸುತ್ತಿದ್ದರೂ ಏನೂ ಪ್ರಯೋಜನವಿಲ್ಲ ಎಂಬ ತೀರ್ಮಾನಕ್ಕೆ ಬಂದಿವೆ. ಕೇಂದ್ರ ಸರಕಾರದ ಎಲ್ಲ ರೀತಿಯ ಪ್ರಯತ್ನಗಳು ಇದುವರೆಗೂ ಸೋಲನ್ನೆ ಕಂಡಿವೆ. ಸರಕಾರ ನಡೆಸಿದ ಮಿಲಿಟರಿ ಕಾಯ್ಯಾಚರಣೆಗಳಿಂದಲೂ ಗೆಲುವು ಕಾಣಲಿಲ್ಲ. ಕಾರಣ ಇದು ಕಾಡು ಮೇಡುಗಳ ಪ್ರದೇಶವಾಗಿದ್ದು ಸ್ಥಳೀಯರ ಅಸಹಕಾರ, ಬಂಡುಕೋರರಿಗೆ ಆಶ್ರಯ ನೀಡುವುದು, ದೇಶದ ಗಡಿ ಭಾಗಗಳಲ್ಲಿ ಉಗ್ರರು ಹೊಂದಿರುವ ಸಂಬಂಧಗಳು, ರಾಜಕೀಯ ಅಸ್ಥಿರತೆ. ಇದರ ಜೊತೆಗೆ ಈಗಾಗಲೆ ಈ ಭಾಗದಲ್ಲಿನ ಗಲಿಬಿಲಿ ಸ್ಥಿತಿ ಮತ್ತು ಸ್ಥಳೀಯರ ವಿರೋಧ, ೧೯೪೭ರಿಂದಲೂ ಕುಂಟುತ್ತ ನಡೆಯುತ್ತಿರುವ ಅಭಿವೃದ್ಧಿ ಯೋಜನೆಗಳು, ನಿರಂತರವಾಗಿ ಬಂಗ್ಲಾ ದೇಶ ಮತ್ತು ಇತರ ರಾಜ್ಯಗಳಿಂದ ಬರುತ್ತಿರುವ ವಲಸೆಗಾರರ ಸಮಸ್ಯೆಗಳು ಇತ್ಯಾದಿ. ಹೊಸ ಹೊಸ ರಾಜ್ಯಗಳು ಸೃಷ್ಟಿಯಾದಾಗಲೂ ಸರಿಯಾದ ನಿರ್ಣಯಗಳನ್ನು ತೆಗೆದುಕೊಳ್ಳದೆ ಹೋಗಿದ್ದು. ೧೯೫೦ರಲ್ಲಿ ಸಂಭವಿಸಿದ ಅಗಾಧ ಭೂಕಂಪನದಿಂದ ಈಶಾನ್ಯ ವಲಯದ ಹಲವಾರು ಅಣೆಕಟ್ಟುಗಳು ಕುಸಿದುಬಿದ್ದವು. ಬ್ರಹ್ಮಪುತ್ರಾ ನದಿಯೆ ಹತ್ತಾರು ಕಡೆ ತನ್ನ ದಿಕ್ಕನ್ನು ಬದಲಿಸಿಕೊಂಡು, ಅಪಾರ ಆಸ್ತಿ ಮತ್ತು ಪ್ರಾಣ ಹಾನಿಯಾಗಿತ್ತು.
ದಿಲ್ಲಿಯಲ್ಲಿ ರೂಪುಗೊಳ್ಳುವ ಅಭಿವೃದ್ಧಿ ಯೋಜನೆಗಳ ಬಗ್ಗೆ ಸ್ಥಳೀಯರಿಗೆ ಏನೇನೂ ವಿವರಗಳು ದೊರಕುವುದಿಲ್ಲ. ಕೇಂದ್ರ ಸರಕಾರ ಸ್ಥಳೀಯರ ಸಹಕಾರ ಮತ್ತು ಸಲಹೆಗಳನ್ನು ಪಡೆಯದ ಕಾರಣ ಯೋಜನೆಗಳೆಲ್ಲ ಸಾಮಾನ್ಯ ಜನರಿಂದ ದೂರವಾಗಿಯೇ ಉಳಿದುಕೊಳ್ಳುತ್ತವೆ. ಕಾರಣ ಕೇಂದ್ರ ಸರಕಾರದ ಯಾವುದೇ ಅಣೆಕಟ್ಟು, ಗಣಿಗಾರಿಕೆ, ಕಾರ್ಖಾನೆ ಮತ್ತು ಮೂಲಭೂತ ಸೌಕರ‍್ಯ ಯೋಜನೆಗಳಿಗೆ ಸ್ಥಳೀಯರ ಸಹಕಾರದ ಬದಲಿಗೆ ವಿರೋಧಗಳು ಹುಟ್ಟಿಕೊಳ್ಳುತ್ತಿವೆ. ಕಳೆದ ೫-೬ ದಶಕಗಳಿಂದಲೂ ವಿಧವಿಧ ಕೋನಗಳಿಂದ ಸಾಂಸ್ಕೃತಿಕ, ರಕ್ಷಣೆ, ರಾಜಕೀಯ ಮತ್ತು ಅಭಿವೃದ್ಧಿ ಯೋಜನೆಗಳನ್ನು ರೂಪಿಸಿದರೂ ಯಾವುದೇ ಒಂದು ಯೋಜನೆಯೂ ಪೂರ್ಣವಾಗಿ ಜನರನ್ನು ಮುಟ್ಟಲಿಲ್ಲ ಎಂದೇ ಹೇಳಬಹುದು. ಸರಕಾರದ ಸೋಲಿನ ಆಡಳಿತ ಮತ್ತು ಜನರ ಅತ್ಯಂತ ಹತಾಶೆಯ ಕಾರಣ ಬಂಡುಕೋರರ ವಿರೋಧ ಇಂದಿಗೂ ಮುಂದುವರಿದಿದ್ದು ಅಭಿವೃದ್ಧಿಗೆ ಹಿನ್ನಡೆಯಾಗಿದೆ. ಈಶಾನ್ಯ ಭಾಗದ ವಿಶಾಲತೆ ಮತ್ತು ಅದರ ಆಯಕಟ್ಟಿನ ಪ್ರಾಮುಖ್ಯತೆಯನ್ನು ಸರಿಯಾಗಿ ನಿರ್ಧರಿಸದ ಕಾರಣ ಕೇವಲ ೨೪ ಎಂಪಿಗಳನ್ನು ಮಾತ್ರ ಲೋಕಸಭೆಗೆ ಆಯ್ಕೆ ಮಾಡುತ್ತದೆ. ಇದೇ ರಾಜಕಾರಣದಿಂದ ಈ ಭಾಗವನ್ನು ನಿರ್ಲಕ್ಷಿಸಲಾಗಿದೆ. ಲೋಕಸಭಗೆ ಆಯ್ಕೆಯಾಗುವವರ ಸಂಖ್ಯೆಯನ್ನು ಆಯಾ ರಾಜ್ಯಗಳ ಜನಸಂಖ್ಯೆಯ ಆಧಾರದಿಂದ ನಿರ್ಣಯಿಸಲಾಗಿದ್ದು, ಬಿಹಾರ್ ಮತ್ತು ಯುಪಿ ರಾಜ್ಯಗಳಿಗೆ ಹೋಲಿಸಿದಾಗ ಇದು ತೀರ ಅಗಣನೀಯ. ಈಶಾನ್ಯ ಉರಿಯುತ್ತಿರುವುದು ಮುಖ್ಯವಾಗಿ ಬುಡಕಟ್ಟು ಜನರಿಗೆ ಕೊಟ್ಟಿರುವ ಪ್ರಜಾಪ್ರಭುತ್ವದ ವಿಶೇಷ ಸ್ವಾತಂತ್ರ್ಯ, ಸ್ವಾಯತ್ತತೆ, ಸ್ವಯಂ ಆಡಳಿತ ಮತ್ತು ವಿವಿಧ ಸಾಂಸ್ಕೃತಿಕ ಭಿನ್ನತೆಗಳಿಂದ. ಜಮ್ಮು-ಕಾಶ್ಮೀರ ನರಳುತ್ತಿರುವುದೂ ಇದೇ ಕಾರಣಗಳಿಂದ. ಇದು ದೇಶದ ಇತರೆ ಭಾಗಗಳಲ್ಲಿ ಕಂಡುಬರುವುದಿಲ್ಲ.
ಈ ದೇಶದ ಆಡಳಿತ ಚುಕ್ಕಾಣಿ ನಿರ್ಣಯಿಸುವುದು ಉತ್ತರ ಭಾರತದ ಗ್ರಾಮಾಂತರ ಪ್ರದೇಶಗಳ ಸಂಕುಚಿತ ಭಾವನೆಗಳು ಮತ್ತು ನವೀನ ಐಶ್ವರ‍್ಯವಂತರ ಸೊಕ್ಕು. ಈ ವ್ಯವಸ್ಥೆಯ ಮಧ್ಯೆ ಈ ಕ್ರಮಾಗತದ ಏರು ವ್ಯವಸ್ಥೆಯ ನಡುವೆ ಈಶಾನ್ಯ ವಲಯ ಸಾಮಾಜಿಕ ಗುಡ್ಡೆಯ ಕೆಳಗೆಲ್ಲೊ ಬರುತ್ತದೆ. ಪ್ರತಿ ವರ್ಷವೂ ಬಜೆಟ್ ಹಂಚಿಕೆ ಮಾಡುವ ಪ್ರಧಾನ ಮಂತ್ರಿಗಳು ಜನಸಾಮಾನ್ಯರಿಗೆ ಯಾವ ಹೊಸ ಕೊಡುಗೆಯನ್ನೂ ನೀಡಲಾಗದೆ ಹೋಗುತ್ತಾರೆ. ಈಶಾನ್ಯದಲ್ಲಿ ಕೆಲಸ ನಿರ್ವಹಿಸುವ ಹೊರ ರಾಜ್ಯಗಳ ಅಧಿಕಾರಿಗಳು ಈ ಭಾಗದಲ್ಲಿ ಕೆಲಸ ಮಾಡುವುದೆಂದರೆ ಶಿಕ್ಷೆ ಎಂದೇ ಭಾವಿಸುವಾಗ ಅವರಿಂದ ಏನು ನಿರೀಕ್ಷಿಸಲು ಸಾಧ್ಯ? ಎನ್ನುವ ಪ್ರಶ್ನೆಗಳು ಕೇಳಿಬರುತ್ತವೆ.
ಸ್ಥಳೀಯರಲ್ಲಿ ಅಧಿಕಾರಿಗಳ ಸಂಖ್ಯೆ ತೀರ ಕಡಿಮೆ ಇರುವ ಕಾರಣ ಕೇಂದ್ರ ಸರಕಾರ, ಮೆತ್ತಗಿರುವ ಅಧಿಕಾರಿಗಳನ್ನು (ರಾಜಕೀಯ ಸಂಬಂಧ ಇರುವವರು ಯಾರೂ ಬರುವುದಿಲ್ಲ) ೨-೩ ವರ್ಷಗಳ ಕಾಲ ಈಶಾನ್ಯಕ್ಕೆ ಕಡ್ಡಾಯವಾಗಿ ಕಳುಹಿಸುತ್ತದೆ. ಇದರ ಜೊತೆಗೆ ಸರಕಾರದ ಯಾವ ಕಾನೂನುಗಳೂ ಇಲ್ಲಿ ನಡೆಯುವುದಿಲ್ಲ, ಅಧಿಕಾರಿಗಳಿಗೆ ರಕ್ಷಣೆಯೂ ದೊರಕುವುದಿಲ್ಲ. ಎಲ್ಲವೂ ಸ್ವಯಂ ಆಡಳಿತದ ರಾಜ್ಯಗಳು. ವಿಚಿತ್ರ ಮತ್ತು ಆಶ್ಚರ್ಯ ಎಂದರೆ ಸರಕಾರಕ್ಕೆ ಸೇರಿದ ಆಸ್ತಿ ಏನೂ ಇಲ್ಲ. ಭೂಮಿ ಅರಣ್ಯ ಎಲ್ಲವೂ ಆಯಾ ಹಳ್ಳಿಗೆ ಸೇರಿದ ಆಸ್ತಿ. ಜನರೆ ಎಲ್ಲವನ್ನು ತೀರ್ಮಾನಿಸುತ್ತಾರೆ. ಸರಕಾರ ಯಾವುದಾದರು ಕಟ್ಟಡ ಕಟ್ಟಬೇಕಾದರೂ ಹಳ್ಳಿಯ ಜನರಿಂದ ಒಪ್ಪಿಗೆ ಪಡೆದು ಕೇಳಿದಷ್ಟು ಹಣ ನೀಡಿ ಕೊಂಡುಕೊಳ್ಳಬೇಕು. ಅದೂ ಕೂಡ ೯೯ ವರ್ಷಗಳ ಲೀಸ್ ನ ಕರಾರಿನಂತೆ. ಹಳ್ಳಿಗರು ತಮ್ಮ ಜಮೀನು ಎಂದು ಗೆರೆಗಳನ್ನು ಹಾಕಿಕೊಂಡಿರುವ ಕಾಡನ್ನು ಕಡಿದು ಯಾರಿಗೆ ಬೇಕಾದರೂ ಮಾರಬಹುದು. ಖನಿಜ ಸಂಪತ್ತಿದ್ದರೂ ಅವರೇ ವಾರಸುದಾರರು.
ಮೇಘಾಲಯ ರಾಜ್ಯದಲ್ಲಿ ಹೇರಳ ಕಲ್ಲಿದ್ದಲಿದ್ದ ಆ ಜಮೀನಿನ ಒಡೆಯರಿಂದ ವ್ಯಾಪಾರಿಗಳು ಕೊಂಡುಕೊಂಡು ಹೋಗುತ್ತಾರೆ. ಕೇಂದ್ರ ಸರಕಾರದ ಅಧೀನದಲ್ಲಿರುವ ಯುರೇನಿಯಂ ಖನಿಜ ನಿಕ್ಷೇಪಗಳನ್ನು ಸಹ ಮೇಘಾಲಯದಲ್ಲಿ ಸ್ಥಳೀಯ ರಾಜಕಾರಣಿಗಳು ಮತ್ತು ವ್ಯಾಪಾರಿಗಳು ಬಂಗ್ಲಾ ದೇಶದ ಮೂಲಕ ಬೇರೆ ದೇಶಗಳ ಏಜಂಟರಿಗೆ ರಾಜಾರೋಷವಾಗಿಯೇ ಮಾರುತ್ತಿದ್ದಾರೆ. ಕೇಂದ್ರ ಸರಕಾರ ಏನೂ ಗೊತ್ತಿಲ್ಲದಂತೆ ಕಣ್ಣು ಮುಚ್ಚಿ ಕುಳಿತುಕೊಂಡಿದೆ. ಸರಕಾರದ ನೀತಿಯಂತೆ ಹೊರ ರಾಜ್ಯಗಳ ಜನರು ಒಂದು ಚೂರು ನೆಲವನ್ನೂ ಇಲ್ಲಿ ಕೊಂಡುಕೊಳ್ಳುವಂತಿಲ್ಲ. ಸ್ಥಳೀಯ ಅಧಿಕಾರಿಗಳು, ವ್ಯಾಪಾರಿಗಳು, ಹಣವಂತರು ರಾಜಕಾರಣಿಗಳು ಯಾರೂ ಒಂದು ರೂ. ತೆರಿಗೆ ನೀಡುವಂತಿಲ್ಲ. ಆದರೆ ಇತರೆ ರಾಜ್ಯಗಳಿಂದ ವರ್ಗವಾಗಿ ಬರುವ ಅಧಿಕಾರಿಗಳು ಮಾತ್ರ ತೆರಿಗೆ ನೀಡಬೇಕಾಗುತ್ತದೆ. ಇನ್ನು ಈ ರಾಜ್ಯಗಳು ಅಭಿವೃದ್ಧಿ ಹೊಂದುವುದಾದರು ಹೇಗೆ? ಕೆಲವರಂತು ದೇಶದ ಇತರ ಭಾಗಗಳಲ್ಲಿ ಇರುವ ಕುಬೇರರಂತೆ ಇಲ್ಲಿಯೂ ರಾರಾಜಿಸುತ್ತಿದ್ದಾರೆ. ಅವರ ಮಕ್ಕಳು ದೇಶದ ದೊಡ್ಡ ದೊಡ್ಡ ಪಟ್ಟಣಗಳಲ್ಲಿ ಮಸ್ತಿ ಮಾಡುತ್ತಿದ್ದಾರೆ. ಶಿಲ್ಲಾಂಗ್ ನ ಪ್ರತಿ ಎರಡನೇ ಮನೆಯ ಒಬ್ಬ ವಿದ್ಯಾರ್ಥಿ ಬೆಂಗಳೂರಿನಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ.
ಕೇಂದ್ರ ಸರಕಾರ ನೂರಾರು ಮಿಲಿಟರಿ ತುಕಡಿಗಳನ್ನು ನೇಮಿಸಿ ಎಲ್ಲವನ್ನು ಹಿಡಿತದಲ್ಲಿ ಇಡುವಂತೆ ಆದೇಶ ನೀಡಿದ್ದರೂ ಅವುಗಳಿಗೆ ಸರಿಯಾದ ಅಧಿಕಾರ ಮಾತ್ರ ನೀಡಿಲ್ಲ. ಎಲ್ಲ ಕಾನೂನುಗಳು ಮಹಾತ್ಮ ಗಾಂಧೀಜಿ ಅವರ ನೆಚ್ಚಿನ ಮೂರು ಕೋತಿಗಳ ದೃಷ್ಟಿಕೋನವನ್ನೇ ಹೊಂದಿವೆ. ೧೯೪೭-೨೦೦೭ರವರೆಗೆ ಮಿಲಿಟರಿ, ಪೊಲೀಸರು ಮತ್ತು ಉಗ್ರರ ಘರ್ಷಣೆಗಳಿಂದ ಈಶಾನ್ಯದಲ್ಲಿ ೫೦,೦೦೦ ಜನರು ಪ್ರಾಣ ಕಳೆದುಕೊಂಡಿದ್ದಾರೆ. ೨,೮೫,೦೦ ಕ್ಕಿಂತ ಹೆಚ್ಚು ಜನರು ಇವರ ಸಹವಾಸವೆ ಬೇಡವೆಂದು ಸ್ಥಳ ಬಿಟ್ಟು ಬೇರೆ ಕಡೆಗೆ ವಲಸೆ ಹೋಗಿದ್ದಾರೆ. ಮಿಲಿಟರಿ ತುಕಡಿಗಳನ್ನು ಹೆಚ್ಚಿಸಿ ಬಂಡುಕೋರರನ್ನು ಮಟ್ಟ ಹಾಕುವ ಆಲೋಚನೆ ಫಲಿಸುವಂತೆ ತೋರುತ್ತಿಲ್ಲ. ಉಗ್ರರು ದಂಗೆ ಏಳುತ್ತಿರುವುದು ಕಾನೂನಿನ ಸಡಿಲತೆಯಿಂದ ಎನ್ನುವುದು ಆಡಳಿತದ ಆಲೋಚನೆ. ಆದರೆ ಸಮಸ್ಯೆಯ ಬೇರುಗಳಿರುವುದು ಚಾರಿತ್ರಿಕವಾಗಿ ನಡೆದಿರುವ ಸಾಮಾಜಿಕ ಅನ್ಯಾಯದಿಂದ. ಬುಡಕಟ್ಟು ಜನರ ಸೂಕ್ಷ್ಮ ಜನಾಂಗೀಯ ಸಮತೋಲನೆಯನ್ನು ದೇಶದ ಆಡಳಿತ ಇದುವರೆಗೂ ಗಮನಿಸಲಾಗಲಿಲ್ಲ. ಇಲ್ಲಿನ ಚರಿತ್ರಾತ್ಮಕ ಸಮಸ್ಯೆಗಳು ಬಂಡುಕೋರರನ್ನು ಹುರಿದುಂಬಿಸುತ್ತಲೇ ಬಂದಿವೆ. ಮೂಲ ಸಮಸ್ಯೆಗಳನ್ನು ಇಲ್ಲಿನ ಜನರೊಂದಿಗೆ ನೇರವಾಗಿ ಚರ್ಚಿಸಬೇಕಿದೆ. ಆದರೆ ಅದರ ಬದಲು ಕೇಂದ್ರ ಮತ್ತು ರಾಜ್ಯ ಸರಕಾರಗಳ ಅಧಿಕಾರಿಗಳು ಮುಚ್ಚುಮರೆಯಾಗಿ ಬಂಡುಕೋರರ ಜೊತೆಗೆ ತಾತ್ಕಾಲಿಕ ಒಪ್ಪಂದಗಳನ್ನು ಮಾಡಿಕೊಳ್ಳುತ್ತಿರುವುದರಿಂದ ಯಾವ ಫಲಿತಾಂಶವು ಸಿಕ್ಕಿಲ್ಲ.
ಉಗ್ರರ ಕೆಲವು ಗುಂಪುಗಳು ಸ್ವಯಂ ಆಡಳಿತವನ್ನು ಅಪೇಕ್ಷಿಸುವುದರೊಂದಿಗೆ ರಾಜ್ಯ, ಜಿಲ್ಲೆ ಅಥವಾ ಒಂದು ಬುಡಕಟ್ಟು ಜನರು ವಾಸಿಸುವ ಪ್ರದೇಶವನ್ನು ಆಯ್ಕೆ ಮಾಡಿಕೊಂಡು ಘರ್ಷಣೆಗೆ ಇಳಿದರೆ, ಇನ್ನು ಕೆಲವು ಜನಾಂಗೀಯ ಗುಂಪುಗಳು ನೆಲಕ್ಕಾಗಿ ರಕ್ತ ಹರಿಸುತ್ತಾ ಹೋರಾಡುತ್ತಿವೆ. ಕೆಲವು ಕಡೆ ವಲಸೆ ಬಂದಿರುವ ಬಂಗ್ಲಾ ದೇಶಿಯರ ವಿರುದ್ಧ ಸ್ಥಳೀಯರು ಹೋರಾಡುತ್ತಿದ್ದಾರೆ. ೨೦೦೭ರಲ್ಲಿ ಅಸ್ಸಾಂ ಜನರು ಹಿಂದಿ ಮಾತನಾಡುವ ಬಿಹಾರಿಗಳ ವಿರುದ್ಧ ಹಿಂಸೆ ನಡೆಸಿದ್ದರು. ಇವರೆಲ್ಲ ದಶಕಗಳ ಹಿಂದಿನಿಂದಲೂ ಇಲ್ಲಿ ನೆಲೆಯೂರಿದ್ದು ಅವರಿಗೆ ಬಿಹಾರದಲ್ಲಿ ಯಾವುದೇ ನೆಲವಿಲ್ಲ, ಬಿಹಾರಿನಲ್ಲೂ ಏನೂ ಉಳಿದಿಲ್ಲ. ೨೦೦೮ರಲ್ಲಿ ಬಂಗ್ಲಾ ದೇಶಿಯರ ವಿರುದ್ಧ ಹೋರಾಟಗಳು ನಡೆದವು. ಅವರೆಲ್ಲ ಸ್ಥಳೀಯರ ಕೆಲಸಗಳನ್ನು ಕಸಿದುಕೊಂಡು ವ್ಯಾಪಾರದಲ್ಲಿ ತೊಡಗಿದ್ದಾರೆ ಎನ್ನುವುದು ಇಲ್ಲಿಯವರ ದೂರು. ಒಟ್ಟಿನಲ್ಲಿ ಘರ್ಷಣೆಗೆ ಕಾರಣಗಳು ಅನೇಕ ಮತ್ತು ವಿಧವಿಧ. ಜೊತೆಗೆ ಈಶಾನ್ಯ ವಲಯ ಮೈನ್ ಲ್ಯಾಂಡ್ ನಿಂದ ದೂರ ಇರುವುದಲ್ಲದೆ ಹೊಸದಿಲ್ಲಿಯ ಪಾಲಿಸಿಗಳು ವಿಚಿತ್ರವಾಗಿರುತ್ತವೆ. ಬುಡಕಟ್ಟು ಜನರ ಸಾಂಸ್ಕೃತಿಕತೆ, ವಿಭಿನ್ನ ಸಾಮಾಜಿಕ ಕಟ್ಟಳೆಗಳು, ಜನಾಂಗೀಯ ಭಿನ್ನತೆಗಳು ವಿವಿಧತೆಯಿಂದ ಕೂಡಿವೆ. ಮತಾಂತರ ಚಟುವಟಿಕೆಗಳು ನಿರಂತರವಾಗಿ ನಡೆದಿವೆ. ನಾಗಾಲ್ಯಾಂಡ್, ಮೇಘಾಲಯ, ಮಣಿಪುರ(ಲೋಕ್ ಟಕ್ ಕಣಿವೆ ಬಿಟ್ಟು)ಗಳಲ್ಲಿ ಹೆಚ್ಚು ಕ್ರೈಸ್ತರೆ ಇದ್ದಾರೆ. ತ್ರಿಪುರಾ, ಮಿಜೋರಾಂ ರಾಜ್ಯಗಳಲ್ಲೂ ಬಹಳಷ್ಟು ಜನರು ಈಗಾಗಲೆ ಕ್ರೈಸ್ತರಾಗಿದ್ದಾರೆ. ಅಸ್ಸಾಂ ಮತ್ತು ಅರುಣಾಚಲ ಪ್ರದೇಶದಲ್ಲೂ ಕ್ರೈಸ್ತರಿದ್ದು ಈಗಲೂ ಮತಾಂತರ ನಡೆಯುತ್ತಿದೆ. ಒಟ್ಟಿನಲ್ಲಿ ಈಶಾನ್ಯ ವಲಯ ಭಾಷೆ, ಜನಾಂಗೀಯ ಕಲಹಗಳು ಮತ್ತು ಮತಾಂತರ ಚಟುವಟಿಕೆಗಳ ಸಂಕೀರ್ಣ ಮತ್ತು ಅತಿ ಕ್ಲಿಷ್ಟ ವಲಯವಾಗಿದೆ.
ಚಾರಿತ್ರಿಕ ಹಿನ್ನಲೆ
ಚರಿತ್ರೆಯನ್ನು ಕೆದಕುತ್ತಾ ಹೋದರೆ ಇಲ್ಲಿನ ಜಟಿಲ ಸಮಸ್ಯೆಗಳ ಕೊಂಬೆ ಅಷ್ಟೊಂದು ಸಲೀಸಾಗಿ ತುಟಿ ಬಿಚ್ಚುವುದಿಲ್ಲ. ೧೮೨೬ರಲ್ಲಿ ಬ್ರಿಟಿಷರು ಇಲ್ಲಿಗೆ (ಅಸ್ಸಾಂಗೆ) ಕಾಲಿಟ್ಟಾಗಿನಿಂದ ಎಲ್ಲವೂ ನಿಖರವಾಗಿ ದಾಖಲಾಗಿದೆ. ೧೯೪೭ರಲ್ಲಿ ವಿಭಾಗಗೊಂಡ ಪಶ್ಚಿಮ ಪಾಕಿಸ್ತಾನದಿಂದ ಇನ್ನಷ್ಟು ಸಮಸ್ಯೆಗಳು ಉಲ್ಬಣಗೊಂಡವು. ಪ್ರಾರಂಭದಿಂದಲೂ ಈ ವಲಯ ಹೊಸದಿಲ್ಲಿಯ ಹಿಡಿತಕ್ಕೆ ದೊರಕಲಿಲ್ಲ. ಬ್ರಿಟಿಷರ ಕಾಲದಿಂದಲೂ ಈ ವಲಯವನ್ನು ಒಂದು ಮೃಗಾಲಯವಾಗಿ ಮಾರ್ಪಡಿಸಲಾಗಿದೆ. ಆಯಾ ಬುಡಕಟ್ಟು ಜನರು ಆಯಾ ಪ್ರದೇಶದಲ್ಲಿ ಸಂಪೂರ್ಣ ವಾರಸುದಾರರು. ಬ್ರಿಟಿಷರ ಕಾಲದಿಂದಲೂ ಈ ಪ್ರದೇಶಗಳಿಗೆ ಸ್ವಾಯತ್ತತೆ ನೀಡಿ ಭಾರತದ ಇತರರು ಈ ಭಾಗಗಳಿಗೆ ಹೋಗದಂತೆ ನಿರ್ಬಂಧ ಹೇರಲಾಗಿತ್ತು. ಅದೇ ರೀತಿ ಬುಡಕಟ್ಟು ಜನಾಂಗಗಳು ಭಾರತದ ಇತರ ಭಾಗಗಳಿಗೆ ಹೋಗದಂತೆ ನೋಡಿಕೊಳ್ಳಲಾಯಿತು. ಅಂದರೆ ಇವರನ್ನು ಮುಖ್ಯಭಾರತದಿಂದ ದೂರ ಇಡಲಾಯಿತು. ಇದಕ್ಕೆ ಕಾರಣ ಇಂಗ್ಲೆಂಡಿನಲ್ಲಿ ನಿರ್ಧಾರವಾಗುತ್ತಿದ್ದ ಬ್ರಿಟಿಷರ ಆರ್ಥಿಕ ಹಿತಾಶಕ್ತಿಯ ಮೋಸಗಾರಿಕೆ. ಒಟ್ಟಿನಲ್ಲಿ ಬುಡಕಟ್ಟು ಜನರು ಮತ್ತು ಭಾರತದ ಇತರ ಭಾಗಗಳ ಮಧ್ಯೆ ಅಜಗಜಾಂತರ ವ್ಯತ್ಯಾಸವನ್ನು ನಿರ್ಮಾಣ ಮಾಡಲಾಯಿತು. ಹಾಗಾಗಿ ಈಶಾನ್ಯ ವಲಯವನ್ನು ಬಯಲು ಪ್ರದೇಶಗಳಿಗೆ ಹೋಲಿಸಿದಾಗ ಯಾವುದೇ ಆರ್ಥಿಕ ಅಭಿವೃದ್ಧಿ ಇಲ್ಲದೆ ತೀರ ಹಿಂದುಳಿದುಕೊಂಡಿತು. ಇಲ್ಲಿಂದಲೆ ಇಬ್ಬರ ನಡುವೆ ಈರ್ಷ್ಯೇ ಮತ್ತು ಅಸೂಯೆ ಬೆಳೆಯುತ್ತಾಹೋಯಿತು. ಈಶಾನ್ಯದಲ್ಲಿ ಸ್ವಲ್ಪ ಮಟ್ಟಿಗಿನ ಬೆಳವಣಿಗೆ ಕಂಡಿದ್ದರೆ ಅದು ಬ್ರಹ್ಮಪುತ್ರಾ ನದಿಯ ಇಕ್ಕೆಲಗಳಲ್ಲಿ ಮಾತ್ರ ಕ್ರೋಡೀಕರಣಗೊಂಡಿತು. ಸಾವಿರಾರು ಎಕರೆಗಳ ಚಹ ತೋಟಗಳನ್ನು ಕೆಳತಪ್ಪಲುಗಳ ಮೇಲೆ ಬೆಳೆಸಲಾಯಿತು ಬ್ರಿಟಿಷರಿಗೆ ಇದು ವರವಾಗಿ ಪರಿಣಮಿಸಿತ್ತು. ಪರ್ವತಗಳ ಕ್ರೂರ ಬುಡಕಟ್ಟು ಜನರ ಜೊತೆಗೆ ಹೋರಾಡುವ ಬದಲು ಈಶಾನ್ಯದ ಬ್ರಹ್ಮಪುತ್ರಾ ಬಯಲು ಪ್ರದೇಶದಲ್ಲಿ ನೆಲೆ ನಿಂತರು. ಕೂಲಿ ಕೆಲಸಕ್ಕೆ ಭಾರತದ ಇತರೆ ಭಾಗಗಳಿಂದ ಜನರನ್ನು ಕರೆಸಿಕೊಳ್ಳಲಾಯಿತು. ಬ್ರಿಟಿಷರ ಎದುರಾಳಿಗಳಾದ ಚೀನಾ ಮತ್ತು ಜಪಾನ್ ಗೆ ದಟ್ಟ ಅರಣ್ಯ/ಪರ್ವತಗಳನ್ನು ಮತ್ತು ಬುಡಕಟ್ಟು ಜನರನ್ನು ದಾಟಿ ಬರುವುದು ಕಷ್ಟದ ಕೆಲಸವಾಗಿತ್ತು.
ಬ್ರಿಟಿಷರ ನೀತಿಯನ್ನು ಭಾರತವು ಮುಂದುವರಿಸಿಕೊಂಡು ಬಂದಿದೆ. ಬಿಳಿಯರ ನಂತರ ಭಾರತ ತನ್ನ ಯೋಜನೆಗಳನ್ನು ಪರಿಶೀಲಿಸಿ ತೀವ್ರ ಸೂಕ್ಷ್ಮ ಭೌಗೋಳಿಕ ವಲಯ ಮತ್ತು ಇಲ್ಲಿನ ಜನಾಂಗಗಳ ಸಂಕೀರ್ಣ ಸಮಸ್ಯೆಗಳನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸಬೇಕಾಗಿತ್ತು. ಈಶಾನ್ಯದ ಶೇಕಡ ೭೫ ಭಾಗ ಅರಣ್ಯ/ಪರ್ವತಗಳಾದರೆ ಉಳಿದ ೨೫ ಭಾಗ ನಾಲ್ಕು ಬಯಲು ಪ್ರದೇಶಗಳಿಂದ ಕೂಡಿದೆ. ಅಸ್ಸಾಂನ ಬ್ರಹ್ಮಪುತ್ರಾ, ಬರಾಕ್ ಕಣಿವೆ, ತ್ರಿಪುರಾ ಮತ್ತು ಮಣಿಪುರದ ಲೋಕ್ ಟಕ್ ಬಯಲು ಪ್ರದೇಶ. ಬಯಲು ಪ್ರದೇಶಗಳಲ್ಲಿ ಶೇಕಡ ೮೦ ಜನಸಂಖ್ಯೆ ಇದ್ದರೆ, ಪರ್ವತಗಳಲ್ಲಿ ೨೦ ಜನಸಂಖ್ಯೆ ನೆಲೆಸಿದೆ. ಸರಕಾರ ಬುಡಕಟ್ಟು ಜನರಿಗಾಗಿ ಅನೇಕ ಯೋಜನೆಗಳನ್ನು ರೂಪಿಸುತ್ತಿದ್ದು ಅವೆಲ್ಲ ಬ್ಯಾಕ್ ಫೈರಾಗಿ ಸರಕಾರದ ವಿರುದ್ಧವೆ ಎದ್ದು ನಿಂತಿವೆ.
ಜನಾಂಗೀಯ ಹಿನ್ನೆಲೆಯಿಂದ ಬುಡಕಟ್ಟು ಜನರು ಎಂದು ಕರೆಯುವುದೇ ತಪ್ಪು, ಮಹಾ ಅಪರಾಧ. ಅವರನ್ನು ಬುಡಕಟ್ಟು ಜನರು, ಬುಡಕಟ್ಟು ಪ್ರದೇಶ ಎಂದು ಕರೆಯುವುದರಿಂದಲೆ ಅವರಲ್ಲಿ ಇತರರು ಪರಕೀಯರು ಅಥವಾ ಶತ್ರುಗಳು ಎಂಬ ಭಾವನೆ ಹುಟ್ಟುತ್ತದೆ ಎನ್ನುತ್ತಾರೆ ಕೆಲವು ವಿದ್ವಾಂಸರು. ಪ್ರತ್ಯೇಕತೆ, ಸ್ವಯಂ ಆಡಳಿತ, ಸ್ವಾತಂತ್ರ್ಯ ಇತ್ಯಾದಿಯ ಜೊತೆಗೆ ತಮ್ಮ ಸಾಂಸ್ಕೃತಿಕ ವಿಶೇಷತೆ, ಪದ್ಧತಿ ಮತ್ತು ಬಲಿದಾನಗಳನ್ನು ಕಾಯ್ದುಕೊಳ್ಳಲು ಹಲವು ಜನಾಂಗೀಯ ಗುಂಪುಗಳು ಒಂದಾಗಿ ಹೋರಾಡುತ್ತಿವೆ. ಆಧುನಿಕತೆಯ ಆಗಮನ ಮತ್ತು ನಿರುದ್ಯೋಗಿ ಯುವಕರು ತಮ್ಮದೇ ದಾರಿಗಳಲ್ಲಿ ಹೆಜ್ಜೆ ಹಾಕುತ್ತಿದ್ದಾರೆ. ಬುಡಕಟ್ಟು ಜನರು ತಮ್ಮತನವನ್ನು ಕಂಡುಕೊಳ್ಳಲು ಇತರೆ ಬುಡಕಟ್ಟುಗಳ ಜೊತೆಗೆ ಸೇರಿ ಹೊರಗಿನವರ ವಿರುದ್ಧ ದಂಗೆ ಎದ್ದಿದ್ದಾರೆ. ಚರಿತ್ರೆಯಲ್ಲೂ ಬುಡಕಟ್ಟು ಮತ್ತು ಉಪಬುಡಕಟ್ಟು ಜನರ ಮಧ್ಯೆ ಭಯಾನಕ ಯುದ್ಧಗಳೆ ನಡೆದಿವೆ. ಭಾಷೆಗಳ ಗೊಡವೆ ಇನ್ನೊಂದು ರೀತಿಯದು. ಇಲ್ಲಿ ಬಹಳಷ್ಟು ಕಡೆ ಪ್ರತಿಯೊಂದು ಹಳ್ಳಿಯದು ಪ್ರತ್ಯೇಕ ಬುಡಕಟ್ಟು ಭಾಷೆಯಾಗಿದೆ. ಈಶಾನ್ಯದಲ್ಲಿ ಇರುವಷ್ಟು ಭಾಷೆಗಳು ದೇಶದ ಯಾವುದೇ ಮೂಲೆಯಲ್ಲೂ ಇಲ್ಲ, ಇಲ್ಲಿ ಸುಮಾರು ೧೮೦ ಭಾಷೆಗಳು ಇರುವುದಾಗಿ ತಿಳಿದಿದೆ. ಕೆಲವು ಭಾಷೆಗಳಿಗೆ ಮಾತ್ರ ಸ್ಕ್ರಿಪ್ಟ್ ಇದ್ದು ಉಳಿದ ಭಾಷೆಗಳೆಲ್ಲ ಮೌಖಿಕ. ಅಂದರೆ ಅವೆಲ್ಲ ಇನ್ನು ಬಾಲ್ಯಾವಸ್ಥೆಯಲ್ಲೆ ಇವೆ. ಅರುಣಾಚಲ ಪ್ರದೇಶ ಒಂದರಲ್ಲೆ ೭೦ ಭಾಷೆಗಳಿವೆ. ನಾಗಾಗಳಲ್ಲಿ ಶೇಕಡ ೯೮ ಜನರು ಪ್ರೊಟೆಸ್ಟಂಟ್ ಕ್ರೈಸ್ತರಾಗಿದ್ದು ಅವರು ಒಗ್ಗಟ್ಟಾಗಿರಲು ಇದೊಂದು ಕಾರಣವಾಗಿದೆ. ಅವರು ಹಿಂದು-ಇಂಡಿಯಾ, ಕಮ್ಯುನಿಷ್ಟ್-ಚೀನಾ, ಬೌದ್ಧರ ಬರ್ಮಾ ಮತ್ತು ಮುಸ್ಲಿಂ-ಬಂಗ್ಲಾ ಯಾರ ಹಿಡಿತಕ್ಕೂ ದೊರಕುವುದಿಲ್ಲ. ಭಾರತದ ಜಾತ್ಯತೀತತೆ ಅವರಿಗೆ ಯಾವ ಲೆಕ್ಕಕ್ಕೂ ಇಲ್ಲ.
ಪೂರ್ವ ಪಾಕಿಸ್ತಾನ (ಬಂಗ್ಲಾ ದೇಶ) ಹುಟ್ಟಿಕೊಂಡ ಮೇಲೆ ಈ ವಲಯದಲ್ಲಿ ಇನ್ನಷ್ಟು ತೊಂದರೆಗಳು ಕಾಣಿಸಿಕೊಂಡವು. ಭಾರತದ ಇತರೆ ಭಾಗಗಳಿಂದ ಈಶಾನ್ಯ ವಲಯಕ್ಕೆ ಸುಗಮವಾಗಿ ಸಾಗುತ್ತಿದ್ದ ಸಾರಿಗೆ ಮತ್ತು ಆರ್ಥಿಕ ಜೋಡಣೆ ಕಡಿದುಕೊಂಡಿತು. ಕಲಕತ್ತಾದಿಂದ ಈಶಾನ್ಯ ಭಾಗಕ್ಕೆ ರಸ್ತೆ ಹೋಗಬೇಕಾದರೆ ಬಂಗ್ಲಾ ದೇಶ ಸುತ್ತಿಕೊಂಡು ಸುಮಾರು ೧೦೦೦-೧೫೦೦ ಕಿ.ಮೀ. ದೂರ ರಸ್ತೆ ಮತ್ತು ರೈಲು ರಸ್ತೆ ಸಾಗಬೇಕಿದೆ. ಬಂಗ್ಲಾ ದೇಶಕ್ಕೆ ಸ್ವಾತಂತ್ರ್ಯ ಗಳಿಸಿಕೊಟ್ಟ ಭಾರತ ಆ ದೇಶದ ಮೂಲಕ ಈಶಾನ್ಯ ಭಾಗಕ್ಕೆ ರಸ್ತೆ ಉಳಿಸಿಕೊಂಡಿದ್ದರೆ ಕೋಟ್ಯಂತರ ರೂ.ಗಳನ್ನು ಉಳಿಸಬಹುದಾಗಿತ್ತು. ನಮ್ಮ ದೇಶದ ರಾಜಕಾರಣಿಗಳು ಮತ್ತು ಅಧಿಕಾರಶಾಹಿಗೆ ಕಿಂಚತ್ತಾದರೂ ಮುಂದಾಲೋಚನೆ ಇಲ್ಲ. ಪ್ರಸ್ತುತ ಈಶಾನ್ಯ ವಲಯ ಮುಖ್ಯವಾಗಿ ಮೂರು ತೊಂದರೆಗಳಿಂದ ನರಳುತ್ತಿದೆ. ಬುಡಕಟ್ಟು ಜನರು/ರಾಜ್ಯಗಳು, ಬುಡಕಟ್ಟು ಜನರು/ಇತರೆ ಭಾಗಗಳ ಜನರು ಮತ್ತು ಬುಡಕಟ್ಟು/ಬುಡಕಟ್ಟುಗಳ ನಡುವಿನ ವಿಧ್ವಂಸಕರ ಕೃತ್ಯಗಳು.
ನೂರಾರು ಬಂಡುಕೋರ ಗುಂಪುಗಳ ಹೋರಾಟ, ಸಾರ್ವಜನಿಕರು ಮತ್ತು ಸಾರ್ವಜನಿಕ ಆಸ್ತಿಯ ಮೇಲೆ ಆಕ್ರಮಣ, ಜನರ ಮಧ್ಯೆ ದೊಂಬಿ ಎಬ್ಬಿಸುವುದು, ಮಿಲಿಟರಿ ಮತ್ತು ಪೊಲೀಸರ ಮೇಲೆ ಆಕ್ರಮಣ, ಗೆರಿಲ್ಲಾ ಯುದ್ಧಗಳಿಗೆ ಏಳು ರಾಜ್ಯಗಳೂ ತುತ್ತಾಗಿವೆ. ಮುಖ್ಯವಾಗಿ ನಾಗಾಲ್ಯಾಂಡ್, ಅಸ್ಸಾಂ, ಮಣಿಪುರ ಮತ್ತು ತ್ರಿಪುರಾ ರಾಜ್ಯಗಳು ಭಯಾನಕ ಪರಿಸ್ಥಿತಿಗೆ ಸಿಲುಕಿಕೊಂಡಿದ್ದು ಬಂಡುಕೋರರ ಗುಂಪುಗಳು ಈಶಾನ್ಯದ ಅಭಿವೃದ್ಧಿಗೆ ಮಾರಕವಾಗಿ ಪರಿಣಮಿಸಿವೆ. ಪರಿಸ್ಥಿತಿಯನ್ನು ನಿಯಂತ್ರಣದಲ್ಲಿ ಇರಿಸಲು ಸರಕಾರ ಮಿಲಿಟರಿ, ಪ್ಯಾರಾಮಿಲಿಟರಿಯ ಹೆಚ್ಚು ತುಕಡಿಗಳನ್ನು ಇಲ್ಲಿ ನೆಲೆಗೊಳಿಸಿದೆ. ಈ ಬಂಡುಕೋರರ ಗುಂಪುಗಳು ಇರುವವರೆಗೂ ಈ ವಲಯದಲ್ಲಿ ಯಾವುದೇ ಕ್ಷೇತ್ರದಲ್ಲಿಯೂ ಪ್ರಗತಿಯನ್ನು ಸಾಧಿಸುವ ಸೂಚನೆಗಳು ಕಾಣಿಸುತ್ತಿಲ್ಲ.
ಶಿಲ್ಲಾಂಗಿನ ಕನ್ನಡದ ಜೀವ ಶಾಂತಾ
ಮೇಘಾಲಯದ ರಾಜಧಾನಿ ಶಿಲ್ಲಾಂಗ್ ಬೆಂಗಳೂರಿನಿಂದ ಸುಮಾರು ೩೦೦೦ ಕಿ.ಮೀ. ದೂರದಲ್ಲಿದೆ. ಈ ಸುಂದರ ಮೋಡಗಳ ನಗರದಲ್ಲಿ ಕನ್ನಡ ಸಂಘ ಒಂದು ೩೧ ವರ್ಷಗಳಿಂದ ಸಕ್ರಿಯವಾಗಿ ಕೆಲಸ ಮಾಡಿಕೊಂಡು ಬಂದಿದೆ ಎಂದರೆ ಯಾರೂ ನಂಬುವುದಿಲ್ಲ. ಆದರೆ ಇದು ಸತ್ಯ. ಈ ಕನ್ನಡ ಸಂಘ ಯಾವುದೇ ಹೊರ ರಾಜ್ಯ, ಹೊರ ದೇಶದಲ್ಲಿರುವ ಸಂಘಕ್ಕಿಂತ ಅಪರೂಪ ಮತ್ತು ವಿಶೇಷವಾದುದು. ಕಾರಣವಿಷ್ಟೆ, ಪ್ರತಿ ವರ್ಷವೂ ಈ ಸಂಘ ಗಣೇಶ ಹಬ್ಬ, ದೀಪಾವಳಿ ಹಬ್ಬ ಮತ್ತು ಕನ್ನಡ ರಾಜ್ಯೋತ್ಸವವನ್ನು ತಪ್ಪದೆ ಆಚರಣೆ ಮಾಡಿಕೊಂಡು ಬಂದಿದೆ. ಹಾಗೆ ಶಿಲ್ಲಾಂಗ್ ನಲ್ಲಿ ಕೆಲಸ ಮಾಡಿ ಹಿಂದಿರುಗುವ ಕನ್ನಡ ಸಂಘದ ಸದಸ್ಯರಿಗೆ ತಪ್ಪದೇ ಬೀಳ್ಕೊಡುಗೆ ಸಮಾರಂಭವನ್ನು ಏರ್ಪಡಿಸುತ್ತದೆ. ೨೦೦೫ರಲ್ಲಿ ಮೇಘಾಲಯದ ರಾಜ್ಯಪಾಲರನ್ನು ಮತ್ತು ಡಾ.ದೊಡ್ಡರಂಗೇಗೌಡರನ್ನು ಕರೆಸಿ ಬೆಳ್ಳಹಬ್ಬವನ್ನು ವಿಜೃಂಭಣೆಯಿಂದ ಆಚರಣೆ ಮಾಡಲಾಗಿದೆ. ಇಲ್ಲಿನ ಕನ್ನಡದ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವವರು ಬರೀ ಕನ್ನಡಿಗರಲ್ಲ, ತೆಲುಗು, ತಮಿಳು, ಬಂಗಾಲಿ, ಒರಿಯಾ, ಯುಪಿ, ನೇಪಾಳಿ, ಕಾಶಿ ಹೀಗೆ ಎಲ್ಲರೂ ಒಟ್ಟುಗೂಡುತ್ತಾರೆ. ೨೦೦೭, ಸೆಪ್ಟೆಂಬರ್ ನಲ್ಲಿ ನಡೆದ ಗಣೇಶ ಹಬ್ಬದಲ್ಲಿ ಇವರೆಲ್ಲರನ್ನು ನೋಡಿದ ನನಗೆ ವಿಸ್ಮಯವಾಗಿತ್ತು. ಯಾವುದೇ ಪಟ್ಟಣದಲ್ಲಿ ಕನ್ನಡ ಸಂಘದ ಬ್ಯಾನರ್ ಕೆಳಗೆ ಕನ್ನಡಿಗರಿಗಿಂತ ಉಳಿದವರೆ ಹೆಚ್ಚಾಗಿ ಸೇರಿರುವುದು ನನಗೆ ತಿಳಿದಿಲ್ಲ. ಇದೆಲ್ಲ ಸಾಧ್ಯವಾಗಿರುವುದು ೧೯೭೯ರಲ್ಲಿ ಕನ್ನಡ ಸಂಘ ಸ್ಥಾಪಿಸಿ ೨೮ ವರ್ಷ ಕಾಲ ಶಿಲ್ಲಾಂಗ್ ನಲ್ಲಿ ನೆಲೆ ನಿಂತಿದ್ದ ಪು.ತಿ.ನ ಅವರ ಐದನೇ ಮಗಳಾದ ಶ್ರೀಮತಿ ಶಾಂತಾ ಮತ್ತು ಅವರ ಪತಿ ದಿ.ರಂಗಾಚಾರ್ ಅವರಿಂದ. ಶ್ರೀಮತಿ ಶಾಂತಾ ರಂಗಾಚಾರ್ ಅವರಿಗೆ ಈಗ ೭೭ ವರ್ಷ. ದಿ.ರಂಗಾಚಾರ್ ಅವರು ಈಶಾನ್ಯ ವಲಯದ ಉದ್ದಕ್ಕೂ ಚೀಪ್ ಇಂಜಿನಿಯರ್ ಆಗಿ ಅನೇಕ ಯೋಜನೆಗಳನ್ನು ರೂಪಿಸಿ ಹೆಸರು ಮಾಡಿದವರು. ಇವರು ಜಾತಿ, ಮತ, ಭಾಷೆಗಳನ್ನು ಮೀರಿದ ನೂರಾರು ಗೆಳೆಯರನ್ನು ಹೊಂದಿದ್ದರು.
ಮನೆಗೆ ಯಾರು ಬಂದರೂ ಊಟ ಉಪಚಾರಗಳಿಲ್ಲದೆ ಮನೆ ಬಿಟ್ಟು ಹೋಗುವಂತಿರಲಿಲ್ಲ. ಕರ್ನಾಟಕ, ಈಶಾನ್ಯದ ಯಾವುದೇ ರಾಜ್ಯ, ದೇಶದ ಇನ್ನಾವುದೇ ಮೂಲೆಯಿಂದ ಯಾರೇ ಬಂದರೂ ಅವರ ಮನೆಯಲ್ಲಿ ಉಳಿದುಕೊಂಡು ಊಟ ಮಾಡಲೇಬೇಕು. ಇಲ್ಲವೆಂದರೆ ಪತಿ ಪತ್ನಿ ಇಬ್ಬರೂ ಟಿಫಿನ್ ಬಾಕ್ಸ್ ತುಂಬಿಕೊಂಡು ಅವರು ಎಲ್ಲಿರುತ್ತಾರೊ ಅಲ್ಲಿಗೆ ಹೋಗಿ ತಿನ್ನಿಸಿ ಬರುತ್ತಿದ್ದರು. ಹಸಿರು ತಪ್ಪಲುಗಳ ನಡುವೆ ಎಳೆಂಟು ಹಾಸಿಗೆಗಳಿರುವ ಇವರ ಮನೆಯಲ್ಲಿ ಎಷ್ಟೋ ಅಧಿಕಾರಿಗಳು, ಕುಟುಂಬಗಳ ಸಮೇತ ವರ್ಷಗಟ್ಟಲೆ ಪೇಯಿಂಗ್ ಗೆಸ್ಟ್ ಗಳಾಗಿ ಉಳಿದುಕೊಂಡು ಹೋಗಿದ್ದಾರೆ. ಅವರು ಮುಸ್ಲಿಮ್, ಕ್ರೈಸ್ತ, ಹಿಂದು, ಬುಡಕಟ್ಟು ಯಾವುದೇ ಜಾತಿ ಜನಾಂಗಗಳಿಗೆ ಸೇರಿದವರಾಗಿರಬಹುದು. ಯಾರನ್ನೂ ಯಾವ ಜಾತಿ, ಮತ ಎಂದು ಕೇಳಿದವರಲ್ಲ. ವರ್ಷಗಟ್ಟಲೆ ಉಳಿದುಕೊಂಡರೂ ಇಷ್ಟು ಹಣ ಕೊಡಿ ಎಂದು ಯಾರನ್ನೂ ಕೇಳಿದವರಲ್ಲ. ಯಾರಾದರೂ ಹೆಚ್ಚಾಗಿ ಹಣ ಕೊಟ್ಟರೆ, ಅವರಿಗೆ ಹಿಂದಕ್ಕೆ ಕೊಡುತ್ತಿದ್ದರು, ಇಲ್ಲವೆಂದರೆ ಏನಾದರು ಕೊಡಿಸಿಬಿಡುತ್ತಿದ್ದರು. ಅವರಿಗೆ ಹಣ ಕೊಟ್ಟವರು? ಕೊಡದೆ ಹಾಗೆ ಹೋದವರು ಎಷ್ಟೋ? ಇದೆಲ್ಲ ಕನ್ನಡ ಸೇವೆ ಎನ್ನುವುದು ಅವರ ನಂಬಿಕೆ.
೧೯೮೮ರಿಂದ (ನಾನು ನಾಗಾಲ್ಯಾಂಡ್ ನಲ್ಲಿ ಇದ್ದಾಗಿನಿಂದಲೂ) ಅವರ ಬಗ್ಗೆ ಕೇಳುತ್ತಿದ್ದೆ. ಇತ್ತೀಚೆಗೆ ನನಗೆ ಶಿಲ್ಲಾಂಗ್ ಗೆ ವರ್ಗವಾಗಿ ಅವರನ್ನು ನೋಡುವ ಭಾಗ್ಯ ದೊರಕಿತ್ತು. ಸಾಯಂಕಾಲ ನಾನು, ಚಂದ್ರಶೇಖರ್, ರಾಜು ಮತ್ತು ತಿರುವೆಂಗಡಮ್ ಅವರ ‘ಲೋಸಿಮೆಟ್’ ಹೆಸರಿನ ಆ ಕನ್ನಡ ಮನೆಗೆ ಹೋದೆವು. ನಮ್ಮ ಜೊತೆಗೆ ಮಾತನಾಡಿದ ಸಮಯಕ್ಕಿಂತ ಹೆಚ್ಚಾಗಿ ಅಡಿಗೆ ಮನೆಯಲ್ಲಿದ್ದ ಅವರು ಪುಳಿಯೊಗರೆ, ಮಸಾಲೆ ದೋಸೆ, ಅನ್ನ ಸಾಂಬಾರು, ಫಲ್ಯ, ವಡೆ, ಪಾಯಸ, ಸಾಲದ್ದಕ್ಕೆ ಒಂದು ಮಗ್ಗು ತುಂಬಾ ಕಾಫಿ ಕುಡಿಸಿ ಕಳುಹಿಸಿದ್ದರು. ಅವರ ಮನೆಯಲ್ಲಿ ಎರಡು ತಿಂಗಳಿಂದ ಉಳಿದುಕೊಂಡಿದ್ದ ಚಂದ್ರಶೇಖರ್ ಅವರು ‘ನೀನೆನಮ್ಮ… ಈ ಕಾಲದಲ್ಲಿ ೨೫೦೦-೩೦೦೦ ತೆಗೆದುಕೊಳ್ತೀಯ? ಶಿಲ್ಲಾಂಗ್ ನಲ್ಲಿ ತರಕಾರಿ ಬೆಲೆ ಎಷ್ಟಿದೆ ಗೊತ್ತಲ್ಲ ನಿಮಗೆ?’ ಎಂದು ೫೦೦೦ ರೂ. ಕೊಟ್ಟರಂತೆ. ಮರುದಿನ ಅವರಿಗೆ ಒಂದು ಜೊತೆ ಒಳ್ಳೆ ರೆಡಿಮೇಡ್ ಪ್ಯಾಂಟು ಶರ್ಟು ತಂದುಕೊಟ್ಟು ‘ಹಬ್ಬದ ದಿನ ಹಾಕ್ಕೊಂಡು ನನ್ನ ಮುಂದೆ ಬಾಪ್ಪ’ ಎಂದರಂತೆ. ಮನೆಯಲ್ಲಿ ಕೆಲಸ ಮಾಡುತ್ತಿದ್ದ ಕಾಶಿ ಮಹಿಳೆ ಹೆರಿಗೆಗೆಂದು ಆಸ್ಪತ್ರೆಗೆ ಹೋದರೆ ಇವರು ಊಟ ಮಾಡದೆ ರಾತ್ರಿಯೆಲ್ಲ ‘ಅಯ್ಯೊ ಮಗು ಎಷ್ಟು ನೋವು ತಿನ್ನುತಾ ಇದಿಯೊ ಏನೋ?’ ಎಂದು ಕುಳಿತಿದ್ದರಂತೆ. ಹೆರಿಗೆ ಆಗಿ ತಾಯಿ ಮಗು ಚನ್ನಾಗಿದ್ದಾರೆ ಎಂದು ಫೋನ್ ಬಂದ ಮೇಲೆ ‘ಅಯ್ಯೋ ಬಾಣಂತಿಗೆ ಹಸಿವಾಗಿರುತ್ತೆ. ಏನು ತಿಂದಳೋ ಏನೋ?’ ಎಂದು ಇಡೀ ರಾತ್ರಿ ಮನೆಯೆಲ್ಲ ಓಡಾಡುತ್ತಿದ್ದರಂತೆ. ಇದೆಲ್ಲ ಅವರ ಮಾನವೀಯತೆಯ ಕೆಲವು ಉದಾಹರಣೆಗಳು ಮಾತ್ರ.
೧೯೭೯ಕ್ಕಿಂತ ಮುಂಚೆಯೆ ನಾ.ಕಸ್ತೂರಿಯವರ ಮಗ ಶ್ರೀದರ್, ಜಿಎಸ್‌ಐನ ಎಂವಿಎನ್ ಮೂರ್ತಿ ಮತ್ತು ನಾರಾಯಣಮೂರ್ತಿ ಎಂಬವರು ಶಿಲ್ಲಾಂಗ್ ನಲ್ಲಿ ಕನ್ನಡ ಸಂಘ ಮಾಡಿಕೂಂಡಿದ್ದರಂತೆ. ಆಗ ರಂಗಾಚಾರ್ ದಂಪತಿಗಳು ಗೌಹಾಟಿಯಲ್ಲಿ ಇದ್ದರು. ಆ ಕಾಲಕ್ಕೆ ಬೆಂಗಳೂರಿನಿಂದ ಗೌಹಾಟಿಗೆ ಬರುವುದೆಂದರೆ ಹರಸಾಹಸ. ಬೆಂಗಳೂರಿನಿಂದ ಮದರಾಸ್ ಗೆ, ಅಲ್ಲಿಂದ ಕಲಕತ್ತಾಗೆ ಬೇರೆ ಬೇರೆ ರೈಲಿಡಿದು ಹೋಗಬೇಕಿತ್ತು. ಗಂಗಾನದಿಗೆ ಅಡ್ಡವಾಗಿ ಫರಕ್ಕಾ ಅಣೆಕಟ್ಟನ್ನು ಕಟ್ಟಿರಲಿಲ್ಲ. ಕಲಕತ್ತಾದಿಂದ ಪರಕ್ಕಾ ಸೇತುವೆಯವರೆಗೂ ಗಂಗಾನದಿಯಲ್ಲಿ ಡೀಸಲ್ ಫೆರ್ರಿಯಲ್ಲಿ ಬಂದು ಅಲ್ಲಿಂದ ಗೌಹಾಟಿಗೆ ರೈಲಿನಲ್ಲಿ ಬರಬೇಕಾಗಿತ್ತು. ಗೌಹಾಟಿಯಿಂದ ಶಿಲ್ಲಾಂಗ್ ಗೆ ಕಾಡುಮೇಡು ಅರಣ್ಯ ರಸ್ತೆಯಲ್ಲಿ ಸಾಗಬೇಕಿತ್ತು. ಸಾಯಂಕಾಲ ಆದ ಮೇಲೆ ಅಸ್ಸಾಂ ಗಡಿಯಲ್ಲಿ ಯಾವುದೇ ವಾಹನಗಳನ್ನು ಬಿಡುತ್ತಿರಲಿಲ್ಲ. ರಾತ್ರಿಯೆಲ್ಲ ಅಲ್ಲೇ ಕಾದಿದ್ದು ಬೆಳಿಗ್ಗೆ ಶಿಲ್ಲಾಂಗ್ ಕಡೆಗೆ ಹೋಗಬೇಕಾಗಿತ್ತು. ಎಲ್ಲವೂ ಸರಿಯಾಗಿ ನಡೆದರೂ ೫ ದಿನ ಆಗುತ್ತಿತ್ತು. ಅಂತಹ ಕಾಲದಲ್ಲಿ ೧೯೭೯ರಲ್ಲಿ ರಂಗಾಚಾರ್ ದಂಪತಿಗಳು ಶಿಲ್ಲಾಂಗ್ ನ ಕಣಿವೆ ತಪ್ಪಲುಗಳ ಮಧ್ಯೆ ಮರಗಳಿಂದ ನಿರ್ಮಿಸಿದ ‘ಲೋಸಿಮೆಟ್’ ಎನ್ನುವ ಮನೆಯನ್ನು ಬಾಡಿಗೆಗೆ ತೆಗೆದುಕೂಂಡರು. ಅಲ್ಲಿಂದ ಅವರ ಕನ್ನಡ ಸೇವೆ ಪ್ರಾರಂಭವಾಗಿತ್ತು. ಶ್ರೀಮತಿ ಶಾಂತಾ ಅವರಿಗೆ ೭೪ ವರ್ಷ ತುಂಬುವವರೆಗೂ ಇದೇ ಮನೆಯಲ್ಲಿ ಕನ್ನಡಕ್ಕಾಗಿ ದುಡಿದಿದ್ದಾರೆ. ೨೦-೩೦ ಜನರು ಬಂದರೂ ಬೆಳಿಗ್ಗೆಯಿಂದ ರಾತ್ರಿಯವರೆಗೂ ಅಪ್ಪಟ ದಕ್ಷಿಣ ಭಾರತದ ತಿಂಡಿ, ಊಟ ನೀಡಿ ಉಪಚಾರ ಮಾಡಿದ್ದಾರೆ. ಅವರು ಎಷ್ಟು ಹಣ ಖರ್ಚು ಮಾಡಿದರೊ? ಎಷ್ಟು ಅಥಿತಿಗಳಿಗೆ ಔತಣ ನೀಡಿದರೊ ಯಾರಿಗೂ ಗೊತ್ತಿಲ್ಲ. ರಂಗಾಚಾರ್ ಅವರ ಸಾವಿನ ನಂತರವೂ ಶಾಂತಾ ರಂಗಾಚಾರ್ ಅವರು ತಮ್ಮ ಮಕ್ಕಳು ಬಂಧು ಬಾಂಧವರು ಮತ್ತು ಗೆಳೆಯರು ಕೂಟ್ಟ ಹಣವನ್ನು ತಂದು ಕನ್ನಡ ಸೇವೆಗೆ ಅರ್ಪಿಸಿದ್ದಾರೆ.
೧೯೯೨ರಲ್ಲಿ ದಿಢೀರನೆ ರಂಗಾಚಾರ್ ಅವರು ಶಿಲ್ಲಾಂಗ್ ನಲ್ಲಿಯೇ ಸಾವನ್ನಪ್ಪಿದರು. ಅಂದಿನಿಂದ ೨೦೦೭ರವರೆಗೂ ಶ್ರೀಮತಿ ಶಾಂತಾ ಅವರು ಅದೇ ರೀತಿ ತಮ್ಮ ನಿಸ್ವಾರ್ಥ ಸೇವೆಯನ್ನು ಮುಂದುವರಿಸಿಕೊಂಡು ಬಂದಿದ್ದರು. ಅವರಿಗೆ ವಯಸ್ಸಾಗಿ ದುಡಿಯುತ್ತಿರುವುದನ್ನು ಮಕ್ಕಳು ಮತ್ತು ಅಳಿಯಂದಿರು ನೋಡಲಾಗದೆ ಅವರನ್ನು ಒತ್ತಾಯದಿಂದ ೨೦೦೭ ಅಕ್ಟೋಬರ್ ತಿಂಗಳಿನಲ್ಲಿ ಬೆಂಗಳೂರಿಗೆ ಕರೆದು ತಂದಿದ್ದಾರೆ. ಅವರಿಗೆ ಒಂದು ಆತ್ಮೀಯ ಬೀಳ್ಕೊಡುಗೆಯನ್ನು ಏರ್ಪಡಿಸಲಾಗಿತ್ತು. ಆದರೆ ಅವರ ಆತ್ಮ ಮಾತ್ರ ಅವರ ಪತಿ ಪ್ರಾಣಬಿಟ್ಟ ಶಿಲ್ಲಾಂಗ್ ನಲ್ಲಿಯೇ ಉಳಿದುಕೊಂಡಿದ್ದು ದೇಹ ಮಾತ್ರ ಬೆಂಗಳೂರಿನಲ್ಲಿದೆ ಎಂದು ಅವರು ಪೇಚಾಡುತ್ತಿದ್ದಾರೆ. ಶಿಲ್ಲಾಂಗ್ ಬಿಟ್ಟಾಗಲೂ ಅವರು ತಮ್ಮಲ್ಲಿದ್ದ ಹಣವನ್ನು ಗುಪ್ತವಾಗಿ ಪಾದಾಧಿಕಾರಿಗಳ ಕೈಗೆ ನೀಡಿ ‘ಇಲ್ಲಿ ಕನ್ನಡ ಸಂಘ ಇರುವವರೆಗೆ ನನ್ನ ಪತಿಯ ಆತ್ಮವೂ ಇಲ್ಲೆ ಇರುತ್ತದೆ’ ಎನ್ನುವ ಮಾತು ಹೇಳಿ ಹೋಗಿದ್ದಾರೆ. ಅವರು ಶಿಲ್ಲಾಂಗ್ ಬಿಟ್ಟ ಮೇಲೆಯೂ ಕಳೆದ ಮೂರು ವರ್ಷಗಳಿಂದಲೂ ಅದೇ ರೀತಿ ಶಿಲ್ಲಾಂಗ್ ನಲ್ಲಿರುವ ಕನ್ನಡ ಸದಸ್ಯರು ರಾಜ್ಯೋತ್ಸವ ಮತ್ತು ಗಣೇಶ ಹಬ್ಬವನ್ನು ಆಚರಿಸಿಕೊಂಡು ಬಂದಿದ್ದಾರೆ. ಇಲ್ಲಿ ಪರ‍್ಮನೆಂಟಾಗಿ ನೆಲೆ ನಿಂತಿರುವ ಡಾ.ರಾಮಾನುಜಮ್ (ನೇಹೂ ಪ್ರೊಫೆಸರ್) ಮತ್ತು ರಿಟಾ ರಭಾ ಅವರು ಇಲ್ಲಿಗೆ ವರ್ಗವಾಗಿ ಬಂದು ಹೋಗುವ ಕನ್ನಡಿಗರ ಮಧ್ಯೆ ಕೊಂಡಿಯಾಗಿ ನಿಂತಿದ್ದಾರೆ. ಪ್ರಸ್ತುತ ಡಾ.ಎಚ್.ಎಸ್.ಎಮ್.ಪ್ರಕಾಶ್ ಮತ್ತು ಕೆ.ವೆಂಕಟೇಶ್ ಅವರು ಇಲ್ಲಿದ್ದಾರೆ. ಈ ವರ್ಷ ರಾಜ್ಯೋತ್ಸವದ ಅಂಗವಾಗಿ ಬೆಂಗಳೂರಿನಿಂದ ೩೦ ಜನರ ತಂಡವೊಂದು ಕನ್ನಡ ಸಂಸ್ಕೃತಿ ಇಲಾಖೆಯ ವತಿಯಿಂದ ಶಿಲ್ಲಾಂಗ್ ನಲ್ಲಿ ಎರಡು ದಿನಗಳ ಸಾಂಸ್ಕೃತಿಕ ಕಾರ್ಯಕ್ರಮವನ್ನು ನೀಡಲಿದೆ.
ಶ್ರೀಮತಿ ಶಾಂತಾ ರಂಗಾಚಾರ್ ಅವರು ಶಿಲ್ಲಾಂಗ್ ನಲ್ಲಿ ಮಾಡಿದ ಮೂರು ದಶಕಗಳ ಕನ್ನಡ ಸೇವೆಯನ್ನು ಕರ್ನಾಟಕ ಸರಕಾರ ಯಾವ ರೀತಿ ಗುರುತಿಸುತ್ತದೊ ಕಾದು ನೋಡಬೇಕಿದೆ. ನನ್ನ ಹಿರಿಯ ಮಿತ್ರರೊಬ್ಬರು ಹೇಳುತ್ತಿದ್ದರು. ‘ಪ್ರಶಸ್ತಿ ಬೇಕಾದರೆ ಸರಕಾರಕ್ಕೆ ವ್ಯಕ್ತಿ ಪರಿಚಯ ಕಳುಹಿಸಬೇಕಂತೆ, ಇದು ನಾಚಿಕೆಗೇಡಿನ ವಿಷಯ. ಯಾರು ಏನು ಮಾಡುತ್ತಿದ್ದಾರೆ ಎನ್ನುವುದನ್ನು ಸರಕಾರ ತಿಳಿದುಕೊಳ್ಳಬೇಕು. ಶಾಂತಾ ಅವರಂತಹ ಸ್ವಾಭಿಮಾನಿಗಳು ಸರಕಾರಕ್ಕೆ ವ್ಯಕ್ತಿ ಪರಿಚಯ ನೀಡಿ ಕೈ ಚಾಚುತ್ತಾರೆಯೇ?’
ಈಶಾನ್ಯ ಕುರುಕ್ಷೇತ್ರ ಇನ್ನಷ್ಟು
ನಾಗಾಲ್ಯಾಂಡಿನ ಅಂಗಾಮಿ (ಒಂದು ಉಪ ಬುಡಕಟ್ಟು) ಜಾಪು ಫಿಜೊ ಎಂಬ ಉಗ್ರವಾದಿ ಸ್ಥಾಪಿಸಿದ ನಾಗಾ ನ್ಯಾಷನಲ್ ಕೌನ್ಸಿಲ್ (ಎನ್‌ಎನ್‌ಸಿ) ಆಂದೋಲನ ದಕ್ಷಿಣ ಏಷಿಯಾದಲ್ಲೆ ಹಳೆಯದು. ಆಗ ಭಾರತಕ್ಕೆ ಸ್ವಾತಂತ್ರ್ಯವೂ ಬಂದಿರಲಿಲ್ಲ. ಎನ್‌ಎನ್‌ಸಿ ಪ್ರತಿನಿಧಿಗಳು ಜುಲೈ ೧೯೪೭ರಲ್ಲಿ ಮಹಾತ್ಮ ಗಾಂಧಿಜೀಯವರನ್ನು ಭೇಟಿಯಾಗಿ ನಾಗಾಗಳನ್ನು ಸ್ವಾತಂತ್ರ್ಯ ಭಾರತದಲ್ಲಿ ಐಕ್ಯ ಮಾಡದಂತೆ ಆಶ್ವಾಸನೆ ತೆಗೆದುಕೊಂಡರು. ಬ್ರಿಟಿಷರ ಎದುರಿಗೆ ಹೋರಾಡಿ ಭಾರತದೊಂದಿಗೆ ಐಕ್ಯವಾಗುವುದನ್ನು ವಿರೋಧಿಸಿ ೧೪ ಆಗಸ್ಟ್ ೧೯೪೭ರಂದು ಅಂದರೆ ಭಾರತ ಸ್ವಾತಂತ್ರ್ಯ ಪಡೆಯುವುದಕ್ಕೆ ಒಂದು ದಿನ ಮುಂಚೆ ಎನ್‌ಎನ್‌ಸಿ ಸ್ವಾತಂತ್ರ್ಯ ನಾಗಾಲ್ಯಾಂಡನ್ನು ಘೋಷಿಸಿತ್ತು. ಆದರೆ ಭಾರತ ಎನ್‌ಎನ್‌ಸಿ ಮಾತುಗಳನ್ನು ಧಿಕ್ಕರಿಸಿ ಸಂವಿಧಾನ ಕರಡನ್ನು ರಚಿಸಲು ಆಜ್ಞೆ ನೀಡಿತು. ಆದರೆ ಎನ್‌ಎನ್‌ಸಿ ಸಂವಿಧಾನ ಉಪ ಕಮಿಟಿ ಪ್ರತಿನಿಧಿಸಲು ಯಾರನ್ನೂ ಕಳುಹಿಸಲಿಲ್ಲ. ೧೯೫೧ರಲ್ಲಿ ಜನಾಭಿಪ್ರಾಯ ಸಂಗ್ರಹ ಮಾಡಿದಾಗ ಶೇಕಡ ೯೯ ಜನರು ಸ್ವಾತಂತ್ರ್ಯ ನಾಗಾಲ್ಯಾಂಡಿನ ಪರವಾಗಿ ಮತ ಚಲಾಯಿಸಿ ಜನಾಭಿಪ್ರಾಯಕ್ಕೆ ಗೌರವ ನೀಡಬೇಕೆಂದು ಘೋಷಿಸಿದ್ದರು. ಫಿಜೊ ನಾಗಾ ಫೆಡರಲ್ ಆರ‍್ಮಿಯನ್ನು ಸ್ಥಾಪಿಸಿ ಪ್ಯಾರಲಲ್ ಸರಕಾರವನ್ನು ನಡೆಸಿತು. ಈ ಕಾಲದಲ್ಲಿ ಹಲವು ಉಗ್ರ ಚಟುವಟಿಕೆಗಳು ಹುಟ್ಟಿಕೊಂಡವು. ಕಾರಣ ಕೇಂದ್ರ ಸರಕಾರ ವಿಧಿ ಇಲ್ಲದೆ ಉಗ್ರವಾದಿಗಳು ಎಂದು ಅವರನ್ನು ಪಟ್ಟಿ ಮಾಡಿ ಮಿಲಿಟರಿ ಪಡೆಗಳು ಅವರ ಎದುರು ಹೋರಾಟಕ್ಕೆ ನಿಂತವು. ಇದರಿಂದ ಉಗ್ರರು ಇನ್ನಷ್ಟು ವ್ಯಗ್ರರಾಗಿ ಕೊನೆಗೆ ಫಿಜೊ ಗುಂಪು ಭೂಗತ ಸೇರಿ ಪ್ಯಾರಲಲ್ ಸರಕಾರ ನಡೆಸಿತ್ತು. ನಾವು ಹೋರಾಡುತ್ತಿರುವುದು ತಮ್ಮ ಹಕ್ಕು ಮತ್ತು ನ್ಯಾಯಕ್ಕಾಗಿ ಎಂದು ಘೋಷಿಸಿದ್ದ ಫಿಜೊ, ಸ್ವಾತಂತ್ರ್ಯ ಪೂರ್ವದಿಂದಲೂ ನಾಗಾಲ್ಯಾಂಡ್ ಬಿಡಿಸಲಾರದ ಕಗ್ಗಂಟಾಗಿ ಕೇಂದ್ರ ಸರಕಾರಕ್ಕೆ ಇಂದಿಗೂ ತಲೆನೋವಾಗಿ ಉಳಿದುಕೊಂದು ಬಂದಿದೆ.
೧೯೬೨ರಲ್ಲಿ ಭಾರತಕ್ಕೆ ಅಲ್ಲ ನಾಗಾಲ್ಯಾಂಡಿಗೂ ಕರಾಳ ವರ್ಷ, ಚೀನಾ ಈಶಾನ್ಯ ಭಾರತದ ಮೇಲೆ ಧಾಳಿ ಮಾಡಿತ್ತು. ಆರು ಚೀನಾ ಬ್ರಿಗೆಡಿಯರ್ಸ್ ಕೆಮಂಗ್ ಫ್ರಾಂಟಿಯರ್ ವಿಭಾಗದಲ್ಲಿ ಭಾರತದ ಸೆಲ್ಲಾಪಾಸ್ ನ ನೂರಂಗ್ ವರೆಗೂ ೧೬ ಕಿ.ಮೀ. ಒಳಕ್ಕೆ ನುಗ್ಗಿ ಬಂದಿದ್ದರು. ಭಾರತದ ಗಡಿ ಪಡೆಗಳು ಸೆಲ್ಲಾಪಾಸ್ ಹತ್ತಿರ ಒಟ್ಟುಗೂಡಿ ಚೀನಾ ಪಡೆಗಳನ್ನು ತಡೆಗಟ್ಟಲು ಪ್ರಯತ್ನಿಸಿ ಏನೂ ನಡೆಯಲಿಲ್ಲ. ೧೮ ನವೆಂಬರ್ ಚೀನಾ ತುಕಡಿಗಳು ಅಸ್ಸಾಂನ ತೇಜ್ ಪುರದವರೆಗೂ (೩೦೦ ಕಿ.ಮೀ. ದೂರ ಭಾರತದ ಒಳಗೆ) ಬಂದು, ಮೂರು ದಿನಗಳ ನಂತರ ತಾವೇ ಹಿಂದಕ್ಕೆ ಹೋಗಿಬಿಟ್ಟವು. ನಾಗಾಲ್ಯಾಂಡಿನಲ್ಲಿ ಬೀಡುಬಿಟ್ಟಿದ್ದ ಭಾರತದ ಮಿಲಿಟರಿ ಪಡೆಗಳು ಅರುಣಾಚಲ ಪ್ರದೇಶ, ಅಸ್ಸಾಂ, ಸಿಕ್ಕಿಂನ ಗಡಿ ಭಾಗಗಳಿಗೆ ತಲುಪಿ ಕಾವಲು ನಿಂತವು. ಪಂಡಿತ್ ಜವಹರಲಾಲ್ ನೆಹರು ಜೊತೆಗೆ ಸಂಧಾನ ನಡೆಸಿದ ನಾಗಾ ನಾಯಕರು ನಾಗಾರಾಜ್ಯ ಸ್ಥಾಪನೆಗೆ ಒಪ್ಪಿಕೊಂಡರು. ಆದರೆ ಸಮಸ್ಯೆ ಅಲ್ಲಿಗೆ ನಿಲ್ಲಲಿಲ್ಲ. ಎನ್‌ಎನ್‌ಸಿ ಇದನ್ನು ಖಂಡಿಸುವುದರ ಜೊತೆಗೆ ಅದು ಇಬ್ಭಾಗವಾಗಿ ಒಡೆದುಹೋಗಿತ್ತು. ಕೆಲವು ಉಗ್ರ ಗುಂಪುಗಳ ಜೊತೆಗೆ ಕೇಂದ್ರ ಸರಕಾರ ೧೯೭೫ರಲ್ಲಿ ಶಿಲ್ಲಾಂಗ್ ನಲ್ಲಿ ಒಂದು ಒಪ್ಪಂದ ಮಾಡಿಕೊಂಡಿತು. ಇದನ್ನು ಮತ್ತೆ ಥಯುಂಗ್ ಲೆಂಗ್ ಮುಯ್‌ವ ಮತ್ತು ಎಸ್‌ಎಸ್ ಕಪ್ಲಾಂಗ್ ಬಂಡುಕೋರರ ಗುಂಪು ನಿರಾಕರಿಸಿ ತಮ್ಮದೆ ನ್ಯಾಷನಲ್ ಸೋಷಲಿಸ್ಟ್ ಕೌನ್ಸಿಲ್ ಆಫ್ ನಗಲಿಮ್ (ಎನ್‌ಎನ್‌ಸಿಎನ್) ಬಂಡುಕೋರ ಗುಂಪನ್ನು ಸ್ಥಾಪಿಸಿಕೊಂಡರು. ಮೂಲ ಎನ್‌ಎನ್‌ಸಿ ಮತ್ತು ಎನ್‌ಎನ್‌ಸಿಎನ್ ಗುಂಪುಗಳ ಹಗೆತನ ಈಗಲೂ ಮುಂದುವರಿಯುತ್ತಿದೆ. ಆದರೆ ಎರಡು ಗುಂಪುಗಳು ಸ್ವಾತಂತ್ರ್ಯ ನಾಗಾಲ್ಯಾಂಡಿಗಾಗಿ ಹೋರಾಡುತ್ತಲೆ ಇರುತ್ತೇವೆ ಎಂದು ಒಟ್ಟಾಗಿ ಹೇಳಿಕೊಳ್ಳುತ್ತಲೆ ಬಂದಿವೆ.
ಬರ್ಮಾ ಮತ್ತು ಬಂಗ್ಲಾ ದೇಶಗಳ ಗಡಿಗಳಲ್ಲಿ ಉಗ್ರರ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತಿದ್ದು, ಆಯುಧಗಳ ಕಳ್ಳಸಾಗಾಣಿಕೆ, ಹಣ ಸುಲಿಗೆ, ಜನರನ್ನು ಕೊಲ್ಲುವುದು, ಅಪಹರಿಸುವುದು ನಾಗಾಲ್ಯಾಂಡಿನಲ್ಲೆ ಅಲ್ಲದೆ ಕುಕ್ಕಿ ನಾಗಾಗಳಿರುವ ಮಣಿಪುರ ಮತ್ತು ಅಸ್ಸಾಂ ಗಡಿಗಳಲ್ಲಿ ಇಂದಿಗೂ ಮುಂದುವರಿಯುತ್ತಿದೆ. ನಾಗಾಲ್ಯಾಂಡಿನಲ್ಲಿ ಹುಟ್ಟಿಕೊಂಡ ಎನ್‌ಎನ್‌ಸಿಎನ್(ಮ) ಮತ್ತು ಎನ್‌ಎನ್‌ಸಿಎನ್(ಕೆ) ಉಗ್ರ ಗುಂಪುಗಳು ಈಶಾನ್ಯ ವಲಯದ ಎಲ್ಲ ಉಗ್ರ ಗುಂಪುಗಳಿಗೆ ಪ್ರೇರಕ ಮತ್ತು ತರಬೇತಿ ನೀಡುವ (ಹಣ ಪಡೆದು) ಸಂಸ್ಥೆಗಳಾಗಿವೆ. ಎನ್‌ಎನ್‌ಸಿಎನ್(ಎಮ್), ಅಸ್ಸಾಂನ ಯುಎಲ್‌ಎಪ್‌ಎ ಮತ್ತು ಬಿಡಿಎಸ್‌ಎಪ್ (ಬೋಡೋ) ಒಟ್ಟಾಗಿ ಹೋರಾಟ ನಡೆಸುವುದಾಗಿ ಒಪ್ಪಂದ ಮಾಡಿಕೊಂಡಿವೆ. ಎನ್‌ಎನ್‌ಸಿಎನ್ ಮೇಘಾಲಯದ ಎಚ್‌ಎಲ್‌ಎನ್‌ಸಿ ಗುಂಪಿಗೆ ಸಹಾಯ ಮಾಡುತ್ತಿರುವುದಾಗಿ ಹೇಳಿಕೊಳ್ಳುತ್ತದೆ. ಈ ಗುಂಪು ಮೇಘಾಲಯದ ಘಾರೋ ಪರ್ವತ ಜಿಲ್ಲೆಗಳನ್ನು ಬಂಗ್ಲಾ ಮತ್ತು ಅಸ್ಸಾಂ ರಾಜ್ಯಗಳಿಂದ ಸ್ವಾತಂತ್ರ್ಯ ಪಡೆಯಲು ಹೋರಾಡುವುದಾಗಿ ಹೇಳುತ್ತದೆ. ೬೦ ವರ್ಷಗಳಿಂದಲೂ ಕೇಂದ್ರ ಸರಕಾರ ಈ ಗುಂಪುಗಳ ಜೊತೆಗೆ ನಡೆಸುತ್ತಿರುವ ಮಾತುಕತೆಗಳು ಯಾವುದೇ ಫಲವನ್ನು ನೀಡಿಲ್ಲ. ನಾಗಾಲ್ಯಾಂಡ್ ನಲ್ಲಿ ೨೬ ಬುಡಕಟ್ಟು ಭಾಷೆಗಳಿದ್ದು ಒಬ್ಬರ ಭಾಷೆ ಇನ್ನೊಬ್ಬರಿಗೆ ಅರ್ಥವಾಗುವುದಿಲ್ಲ. ೨-೩ ಮುಖ್ಯ ಉಪಬುಡಕಟ್ಟು ಭಾಷೆಗಳಿಗೆ ಮಾತ್ರ ರೋಮನ್ ಸ್ಕ್ರಿಪ್ಟ್ ಅಳವಡಿಸಲಾಗಿದ್ದು ಎಲ್ಲರೂ ಇಂಗ್ಲಿಷ್ ಅಥವಾ ನಾಗಾಮೀಸ್ (ಅಸ್ಸಾಮಿಯಿಂದ ಸಿಡಿದು ಬಂದ) ಭಾಷೆಯನ್ನು ಮಾತನಾಡುತ್ತಾರೆ.
ಅಸ್ಸಾಂ
ನಾಗಾಲ್ಯಾಂಡ್ ನಿಂದ ಪ್ರಾರಂಭವಾದ ಬಂಡುಕೋರರ ಚಟುವಟಿಕೆಗಳು ಮಣಿಪುರ, ಮಿಜೊರಾಂ, ತ್ರಿಪುರಾ, ಅಸ್ಸಾಂ ರಾಜ್ಯಗಳಿಗೆ ಆವರಿಸಿಕೊಂಡಿತು. ಮಿಜೊರಾಂನಲ್ಲಿ ಮಿಲಿಟರಿ ಪಡೆಗಳು ಜನರ ಒಪ್ಪಿಗೆ ಪಡೆದು ಉಗ್ರರ ವಿರುದ್ಧ ನಡೆಸಿದ ಹೋರಾಟ ಫಲಿಸಿದರೂ ಪಕ್ಕದಲ್ಲಿರುವ ತ್ರಿಪುರಾ ಮತ್ತು ಮಣಿಪುರದಲ್ಲಿ ಅದು ನಡೆಯಲಿಲ್ಲ. ಪ್ರಸ್ತುತ ಅಸ್ಸಾಂ ರಾಜ್ಯ ದೇಶದಲ್ಲಿಯೇ ಅತಿ ಅಪಾಯದ ಸ್ಥಳವಾಗಿದೆ (ಜಮ್ಮು-ಕಾಶ್ಮೀರ ಬಿಟ್ಟರೆ). ಯುನೈಟೆಡ್ ಲಿಬರೇಷನ್ ಫ್ರಾಂಟ್ ಆಫ್ ಅಸ್ಸಾಂ (ಯುಎಲ್‌ಎಫ್‌ಎ) ಉಗ್ರರು ಪ್ರತ್ಯೇಕ ದೇಶವನ್ನು ಕೇಳುತ್ತಿದ್ದು, ಅಸ್ಸಾಂನಲ್ಲಿ ಹಿಂದಿ ಮಾತನಾಡುವ ಎಲ್ಲರನ್ನು ಹೊರಹಾಕಲು ಹೋರಾಡುತ್ತಿದ್ದಾರೆ. ೧೯೭೦ರ ದಶಕದಲ್ಲಿ ಪರೇಶ ಬರೂವ ಮತ್ತು ಅರವಿಂದೊ ರಾಜಕೊವ್ವ ಇತರರ (ಯುಎಲ್‌ಎಫ್‌ಎ) ಗುಂಪು ಸ್ಥಾಪನೆಯಾಯಿತು. ದೇಶದಲ್ಲಿಯೇ ಹೆಚ್ಚು ನೈಸರ್ಗಿಕ ಅನಿಲ ಮತ್ತು ಇಂಧನ ಬಾವಿಗಳನ್ನು ಹೊಂದಿರುವ ಅಸ್ಸಾಂ ಚಹಾ ತೋಟಗಳಿಂದಲೂ ಪ್ರಖ್ಯಾತ. ಈ ರಾಜ್ಯ ಒಂದರಲ್ಲಿಯೇ ಇದುವರೆಗೂ ಇವರ ಹೋರಾಟದಲ್ಲಿ ೧೦,೦೦೦ ಜನರು ಪ್ರಾಣ ಕಳೆದುಕೊಂಡಿದ್ದಾರೆ. ಯುಎಲ್‌ಎಫ್‌ಎ ಜೊತೆಗೆ ಇತರ ೩೪ ಉಗ್ರ ಗುಂಪುಗಳು ಅಸ್ಸಾಂನಲ್ಲಿ ಕಾರ್ಯ ನಿರ್ವಹಿಸುತ್ತಿದ್ದು ಇವುಗಳಲ್ಲಿ ಎಮ್‌ಯುಎಲ್‌ಟಿಯು, ಎನ್‌ಡಿಎಫ್‌ಬಿ, ಡಿಎಚ್‌ಡಿ ಮುಖ್ಯವಾದವು.
ಒಟ್ಟು ೨.೫ ಕೋಟಿ ಜನಸಂಖ್ಯೆಯ ಅಸ್ಸಾಂ ಜನರನ್ನು ಮುಖ್ಯವಾಗಿ ನಾಲ್ಕು ವಿಭಾಗಗಳಾಗಿ ವಿಂಗಡಿಸಬಹುದು. ೧. ಅಸ್ಸಾಂ ಸಮಾಜ, ಈ ವಲಯದಲ್ಲಿ ಚಾರಿತ್ರಿಕವಾಗಿ ಮಿಶ್ರಣಗೊಂಡ ಹಲವು ಜನಾಂಗಗಳು ೨. ಮಿಶ್ರಣಗೊಂಡ ಹಲವು ಜನಾಂಗಗಳಿಂದ ಹೊರಗೆ ನಿಂತ ಮೂಲ ಬುಡಕಟ್ಟು ಜನಾಂಗಗಳು ೩. ಮೂಲವಾಗಿ ಮಿಶ್ರಣಗೊಂಡ ಅಸ್ಸಾಂ ಜನಾಂಗಗಳು ೪. ವಿದೇಶಿಯರು, ದೇಶದ ಇತರ ರಾಜ್ಯಗಳಿಂದ ವಲಸೆ ಬಂದು ನೆಲೆಸಿರುವವರು. ಅಸ್ಸಾಂನಲ್ಲಿ ಮೂಲವಾಗಿ ನೆಲೆ ನಿಂತವರೆಂದರೆ ಆಸ್ಟ್ರಿಕ್ (ಕರ್ಬಿಸ್), ಮಂಗೋಲರು (ಕಿರಾತರು), ಕಾಕಾಸಿಯನ್ಸ್ (ಆರ‍್ಯನ್ಸ್), ನೇಪಾಳಿಯರು ಮತ್ತು ದ್ರಬ್ರಿಸ್ (ಕೈಬರ‍್ತಾಸ್) ಮತ್ತು ಬನಿಯಾಸ್. ಇದೆಲ್ಲದರ ಕಾರಣ ಅಸ್ಸಾಂ ಹಲವು ಸಾಮಾಜಿಕ ಮತ್ತು ಸಾಂಸ್ಕೃತಿಕ ಸಮಾಜಗಳಿಂದ ಮಿಶ್ರಣಗೊಂಡಿದೆ. ಒಟ್ಟಿನಲ್ಲಿ ಅಸ್ಸಾಂ ಈಶಾನ್ಯ ವಲಯದ ಒಂದು ಮಿನಿ ಸಂಕೀರ್ಣ ಭಾರತವಾಗಿದೆ. ಅಸ್ಸಾಂ ದೊಡ್ಡ ರಾಜ್ಯ ಮತ್ತು ಈಶಾನ್ಯದ ಹೆಬ್ಬಾಗಿಲಾಗಿದೆ. ಇದರ ಸಮಸ್ಯೆಗಳಿಗೆ ಪರಿಹಾರ ದೊರಕದೆ ಈಶಾನ್ಯದ ಯಾವುದೇ ರಾಜ್ಯಗಳ ತೊಂದರೆಗಳನ್ನು ನಿವಾರಿಸುವುದು ಸುಲಭದ ಮಾತಲ್ಲ. ಈಶಾನ್ಯದ ಎಲ್ಲ ಉಗ್ರಗಾಮಿಗಳು ಅಸ್ಸಾಂ ಉಗ್ರರ ಜೊತೆಗೆ ಸಂಬಂಧ ಇಟ್ಟುಕೊಂಡಿದ್ದಾರೆ.
ಸರಕಾರ ಮತ್ತು ಮಿಲಿಟರಿ ಪಡೆಗಳ ಹಿಡಿತಕ್ಕೆ ದೊರಕದೆ ಸಮಸ್ಯೆಗಳ ಸರಮಾಲೆಯನ್ನೆ ಧರಿಸಿರುವ ಅಸ್ಸಾಂನ ತೊಂದರೆಗಳನ್ನು ಮುಖ್ಯವಾಗಿ ಈ ರೀತಿ ಪಟ್ಟಿ ಮಾಡಬಹುದು. ದೇಶದಲ್ಲಿಯೆ ಹೆಚ್ಚು ನೈಸರ್ಗಿಕ ಮತ್ತು ಅನಿಲ ಬಾವಿಗಳು ಮತ್ತು ಚಹ ತೋಟಗಳನ್ನು ಹೊಂದಿರುವ ಅಸ್ಸಾಂ, ದೇಶದ ಬಡ ರಾಜ್ಯಗಳಲ್ಲಿ ಒಂದು. ಇದೆಲ್ಲವನ್ನು ಕೇಂದ್ರ ಸರಕಾರ ದೋಚುತ್ತಿದ್ದು ಬದಲಿಗೆ ಏನೇನೂ ಮಾಡುತ್ತಿಲ್ಲ ಎನ್ನುವುದು ಅಸ್ಸಾಂ ಜನರ ದೂರು. ರಾಜ್ಯದಲ್ಲಿ ೧೧೫ ಸಮಾಜಗಳಿದ್ದು ಎಲ್ಲವೂ ಜನಾಂಗೀಯ ಕಲಹಗಳಿಂದ ನರಳುತ್ತಿವೆ. ಜಮ್ಮು-ಕಾಶ್ಮೀರ ಬಿಟ್ಟರೆ ಹೆಚ್ಚು ಮುಸ್ಲಿಂ ಜನಸಂಖ್ಯೆ ಇರುವುದು ಅಸ್ಸಾಂ ರಾಜ್ಯದಲ್ಲೆ. ಗೌಹಾಟಿ ನಗರ ಬಿಟ್ಟು ಇತರ ಭಾಗಗಳಲ್ಲಿರುವ ಬುಡಕಟ್ಟು ಜನರು, ನಗರಗಳಲ್ಲಿರುವವರನ್ನು ಹೊರಗಿನವರು ಎಂದುಕೊಂಡರೆ, ಬಂಗ್ಲಾದೇಶ ಮತ್ತು ದೇಶದ ಇತರ ಭಾಗಗಳಿಂದ ಬಂದವರನ್ನು ವಲಸಿಗರು ಮತ್ತು ಶತ್ರುಗಳು ಎಂದು ಭಾವಿಸುತ್ತಾರೆ. ಅಸ್ಸಾಂ ಇರುವುದು ಅಸ್ಸಾಮಿಗಳಿಗೆ ಮಾತ್ರ ಎನ್ನುವುದು ಅವರ ವಾದ. ಮೂಲ ಜನಾಂಗಗಳಿಗೆ ದೇಶದ ಒಳಗೆಯೆ ಕೇಂದ್ರ ಸರಕಾರ ಒಂದೊಂದು ರಾಜ್ಯಕ್ಕೆ ಒಂದೊಂದು ಕಾನೂನು ನೀಡುತ್ತಿರುವುದು ಇದಕ್ಕೆಲ್ಲ ಕಾರಣವಾಗಿದೆ. ಒಟ್ಟಿನಲ್ಲಿ ಅಸ್ಸಾಂನಲ್ಲಿ ಸಾಂಸ್ಕೃತಿಕ ಒಗ್ಗಟ್ಟು ಕಾಣದೆ ಇರುವುದು, ಸಾಮಾಜಿಕ ಅಸಮಾನತೆ, ಅಭಿವೃದ್ಧಿ ಯೋಜನೆಗಳು ಈಡೇರದೆ ಹೋಗಿರವುದು, ಆರ್ಥಿಕ ಅಸಮಾನತೆ, ಹೆಚ್ಚುತ್ತಿರುವ ಜನಸಂಖ್ಯೆ ಮತ್ತು ನಿರಂತರ ವಲಸೆಯಿಂದ ಅಸ್ಸಾಂ ತತ್ತರಿಸಿಹೋಗಿದೆ.
ವಿಶೇಷ ತಜ್ಞರ ಅಭಿಪ್ರಾಯದಂತೆ ಈಶಾನ್ಯ ಭಾರತ, ಬರ್ಮಾ, ಭೂಥಾನ್, ಬಂಗ್ಲಾದೇಶ ಘನಘೋರ ಕೃತ್ಯಗಳನ್ನು ಎಸಗುವ ತಿರುಗಣಿಯಾಗಿದೆ. ಭೂಥಾನ್ ಒಳಗೆ ಉಲ್ಫಾ ಹಲವಾರು ಉಗ್ರರ ಗುಂಪುಗಳನ್ನು ಸ್ಥಾಪಿಸಿ ನಿರುದ್ಯೋಗಿಗಳನ್ನು ನೇಮಿಸಿಕೊಂಡು ತರಬೇತಿ ನೀಡುತ್ತಿದೆ. ೨೦೦೩ರಲ್ಲಿ ಭಾರತ ಪಡೆಗಳ ಸಹಾಯದಿಂದ ಭೂಥಾನ್ ನಿಂದ ಈ ಉಗ್ರರನ್ನೆಲ್ಲ ಓಡಿಸಿದ ಮೇಲೆ ಅಸ್ಸಾಂನಲ್ಲಿ ಹಿಂಸೆ ಹೆಚ್ಚಾಯಿತು. ಅಸ್ಸಾಂನಲ್ಲಿರುವ ಬಂಗ್ಲಾ ದೇಶಿಗರ ಮೇಲೆ ಹಿಂಸೆ ಮಾಡದೆ ಇರಲು ಉಲ್ಫಾ ಉಗ್ರ ತಾಣಗಳಿಗೆ ಬಂಗ್ಲಾ ದೇಶದ ಗಡಿಗಳಲ್ಲಿ ಸಹಾಯ ದೊರಕುತ್ತಿದೆ ಎನ್ನುವ ಸೂಚನೆಗಳು ಇವೆ. ಭಾರತ ಸರಕಾರ ಯಾವುದೇ ಉಗ್ರ ಗುಂಪುಗಳ ಜೊತೆಗೆ ಸಂಧಾನ ನಡೆಸಲು ಸಿದ್ಧವಾಗಿದೆ. ಆದರೆ ಅವು ಹಿಂಸೆಯನ್ನು ತೊರೆಯಬೇಕು ಮತ್ತು ಶರತ್ತುಗಳು ಸಂವಿಧಾನದ ಚೌಕಟ್ಟಿನ ಒಳಗಿರಬೇಕು ಎನ್ನುತ್ತದೆ. ಫೆಬ್ರವರಿ ೨೦೦೭ರಲ್ಲಿ ಉಲ್ಫಾ ಕಮ್ಯಾಂಡರ್ ಇನ್ ಚೀಫ್ ಭಾರತ ಸರಕಾರದ ಜೊತೆಗೆ ಸಂಧಾನ ನಡೆಸಲು ಸಿದ್ಧ ಆದರೆ ಅಸ್ಸಾಂ ಸಾರ್ವಭೌಮತ್ವದ ಬಗ್ಗೆ ಪ್ರಸ್ತುತ ಮಾತುಕತೆ ನಡೆಸಬಾರದು ಎನ್ನುವ ಶರತ್ತಿದೆ. ಚಹ ತೋಟಗಳು ಮತ್ತು ಇಂಧನ ಬಾವಿಗಳಿರುವ ಉತ್ತರ ಅಸ್ಸಾಂನ ಕಾಡು ಮೇಡುಗಳ ಪ್ರದೇಶದಲ್ಲಿ ಉಲ್ಫಾಗಳು ಯಾವಾಗಲೂ ಹಿಟ್ ಆಂಡ್ ರನ್ ಆಟವಾಡುತ್ತ ಸಿಕ್ಕಿದ ಕಡೆ ಬಾಂಬುಗಳನ್ನು ಸ್ಫೋಟಿಸಿ ಜನರನ್ನು ಸಾಯಿಸುತ್ತಿರುತ್ತಾರೆ. ತೀವ್ರ ತೊಂದರೆಯಾದಾಗ ಸೀಸ್ ಫೈರ್ ಘೋಷಿಸಿ ಸಾಕಷ್ಟು ಹಣ ದೋಚಿಕೊಂಡು ಒಳಗಿರುವವರು ಹೊರಕ್ಕೆ, ಹೊರಗಿರುವವರು ಒಳಕ್ಕೆ ಬಂದು ಸೆಟ್ಲ್ ಆಗುತ್ತಾರೆ. ಸರಕಾರ ಸ್ವಲ್ಪ ದಿನಗಳು ಕಣ್ಣುಮುಚ್ಚಿಕೊಳ್ಳುತ್ತದೆ. ರಾಜಕಾರಣಿಗಳು, ವ್ಯಾಪಾರಿಗಳು, ಅಧಿಕಾರಿಗಳು ಮತ್ತು ಚಹ ತೋಟಗಳ ಮಾಲೀಕರಿಂದ ಉಲ್ಫಾ ಗುಂಪಿನ ಏಜಂಟರು ಸಾಕಷ್ಟು ಹಣ ಸಂಗ್ರಹಿಸುತ್ತಾರೆ. ಮತ್ತೆ ಅದೇ ವರಸೆ.
ಉಲ್ಫಾ, ಎನ್‌ಡಿಎಫ್‌ಬಿ, ಕೆಎಲ್‌ಒ, ಎನ್‌ಎನ್‌ಸಿಎನ್ ಮತ್ತಿತರ ಗುಂಪುಗಳು ದೇಶದ ಎಲ್ಲಾ ಅಪಾಯಕಾರಿ ಉಗ್ರ ಗುಂಪುಗಳ ಜೊತೆಗೆ ಸಂಪರ್ಕ ಹೊಂದಿವೆ. ಮುಖ್ಯವಾಗಿ ಮಧ್ಯಪ್ರದೇಶದ ನಕ್ಸಲ್ ರೊಂದಿಗೆ. ಪರಿಸ್ಥಿತಿ ಈಗ ಯಾವ ಮಟ್ಟ ತಲುಪಿದೆ ಎಂದರೆ ಉಲ್ಫಾ ಸಮಸ್ಯೆಯನ್ನು ಹೇಗಾದರು ಮಾಡಿ ಆದಷ್ಟು ಬೇಗನೆ ಪರಿಹರಿಸದಿದ್ದರೆ ಮುಂದಿನ ದಿನಗಳಲ್ಲಿ ಅದು ತೀರಾ ಉಲ್ಬಣಿಸಿ ಇಡೀ ಈಶಾನ್ಯದಲ್ಲಿ ಶಾಂತಿ ಸ್ಥಾಪಿಸಲು ಸಾಧ್ಯವೆ ಇಲ್ಲದೆ ಹೋಗುವ ದಿನಗಳು ಬಹಳ ಬೇಗನೆ ಬರಲಿವೆ. ಆಗ ಯಾರು ಏನು ಮಾಡಲು ಸಾಧ್ಯವಿಲ್ಲದೆ ದೇಶದಿಂದ ಈಶಾನ್ಯವೆಂಬ ಈ ಅಶಾಂತಿಯ ಕೊಂಡಿ ಕಳಚಿಕೊಂಡರೂ ಆಶ್ಚರ್ಯ ಪಡಬೇಕಾಗಿಲ್ಲ. ಅಸ್ಸಾಂ ಭಾಷೆ, ಬೆಂಗಾಲಿ ಮತ್ತು ಹಿಂದಿ ಭಾಷೆಗಳ ಸಮ್ಮಿಶ್ರಣವಾಗಿದ್ದು ಲಿಪಿ ಕೂಡ ಅದೇ ಭಾಷೆಗಳ ಮಿಶ್ರಣವಾಗಿದೆ.
ಮಣಿಪುರ
ಚಾರಿತ್ರಿಕ ಹಿರಿಮೆಯ ಮಣಿಪುರ ರಾಜ್ಯ ೧೮೯೧ರಲ್ಲಿ ಬ್ರಿಟಿಷರ ವಿರುದ್ಧ ಯುದ್ಧದಲ್ಲಿ ಸೋತ ನಂತರ ಬ್ರಿಟಿಷರ ಅಧೀನ ರಾಜ್ಯವಾಗಿತ್ತು. ೨ನೇ ಪ್ರಪಂಚ ಮಹಾಯುದ್ಧದಲ್ಲಿ ಮಣಿಪುರ ಬ್ರಿಟಿಷ್ ಪಡೆಗಳೊಂದಿಗೆ ಜಪಾನ್ ಮತ್ತು ಇತರ ದೇಶಗಳ ವಿರುದ್ಧ ಹಲವು ಮಹತ್ವದ ಹೋರಾಟಗಳಲ್ಲಿ ಪಾಲ್ಗೊಂಡಿತ್ತು. ಜಪಾನ್ ಪಡೆಗಳು ಪೂರ್ವ ಏಷಿಯಾದ ದೇಶಗಳನ್ನೆಲ್ಲ ದಾಟಿ ಮಣಿಪುರ ತಲುಪಿದ್ದವು. ಆಗ ಇಂಡಿಯನ್ ನ್ಯಾಷನಲ್ ಆರ‍್ಮಿ ಜಪಾನ್ ಪಡೆಗಳ ಜೊತೆಗೆ ಬ್ರಿಟಿಷರ ವಿರುದ್ಧ ಕೈಜೋಡಿಸಿತ್ತು. ಅದರ ಉಸ್ತುವಾರಿಯನ್ನು ನೇತಾಜಿ ಸುಭಾಷ್ ಚಂದ್ರಬೋಷ್ ವಹಿಸಿದ್ದು ಐಎನ್‌ಎ ಭಾರತದ ನೆಲ ಮೆಟ್ಟುವವರೆಗೂ ಜಪಾನ್ ಪಡೆಗಳೊಂದಿಗೆ ಇರುತ್ತದೆ ಅನಂತರ ಅದರ ಯಾವ ಶರತ್ತುಗಳು ನಮ್ಮ ಮೇಲೆ ಇರುವುದಿಲ್ಲ ಎಂದಿದ್ದರು. ಮಣಿಪುರದ ಮೊಯಿರಾಂಗ್ ನಲ್ಲಿ ಸುಭಾಷ್ ಚಂದ್ರಬೋಸ್ ನೆಟ್ಟ ತ್ರಿರಂಗ ಬಾವುಟವೆ ಮುಂದೆ ರಾಷ್ಟ್ರೀಯ ಬಾವುಟ ಆಯಿತು.
೧೯೪೭ರಲ್ಲಿ ಬ್ರಿಟಿಷ್ ಸರಕಾರ ಭಾರತ ದೇಶಕ್ಕೆ ಸ್ವಾತಂತ್ರ್ಯ ನೀಡುವ ಕೆಲಸದಲ್ಲಿ ತೊಡಗಿದ್ದಾಗ ಮಣಿಪುರ ಸಂಸ್ಥಾನ ಸ್ವಾತಂತ್ರ್ಯ ಪಡೆಯಿತು. ಮಣಿಪುರ ಮಹಾರಾಜ ಬುದ್ಧಚಂದ್ರ ದೇವರ್ಷ ಮಣಿಪುರ ಶಾಸನವನ್ನು ಜಾರಿಗೆ ತಂದರು. ೧೯೪೯ರಲ್ಲಿ ಬುದ್ಧಚಂದ್ರನನ್ನು ಶಿಲ್ಲಾಂಗ್ ಗೆ ಆಹ್ವಾನಿಸಿ ಬಲವಂತದಿಂದ ಆತನ ಕೈಯಲ್ಲಿ ಮಣಿಪುರ ಭಾರತ ದೇಶದ ಒಂದು ಭಾಗ ಎಂದು ಬರೆಸಿಕೊಳ್ಳಲಾಯಿತು. ಇಲ್ಲಿಂದ ಮಣಿಪುರ ಅನೇಕ ತೊಂದರೆಗಳಿಗೆ ಸಿಲುಕಿಕೊಂಡಿತು. ಕೇಂದ್ರ ಸರಕಾರ ನೀಡುವ ಹಣ ನೆಲಮಟ್ಟಕ್ಕೆ ತಲುಪಲೇ ಇಲ್ಲ. ಗಾಂಜಾ-ಅಫೀಮು ವ್ಯಾಪಾರ, ಬಂಡುಕೋರರು ಮತ್ತು ರಾಜಕಾರಣಿಗಳ ಸಂಬಂಧ, ನಾಯಕರ ಕೊರತೆ, ಮೂಲ ಜನಾಂಗಗಳ ಬಿನ್ನಮತ, ಉಗ್ರಗುಂಪುಗಳ ವಿಧವಿಧ ಬೇಡಿಕೆಗಳು ಮತ್ತು ಹೋರಾಟ, ಕಪ್ಪು ಹಣದ ಹಸ್ತಾಂತರ, ಆಯುಧಗಳ ಸರಬರಾಜು, ಬಂಗ್ಲಾ ದೇಶಿಗರ ವಲಸೆ ಇತ್ಯಾದಿ.
ಮಣಿಪುರಿ ಮೂಲ ಜನಾಂಗಗಳನ್ನು ಎರಡು ಭಾಗಗಳಾಗಿ ವಿಂಗಡಿಸಬಹುದು. ಮಣಿಪುರದ ಲೋಕ್ ಟಕ್ ಕಣಿವೆಯಲ್ಲಿರುವ ಮೆಹಿಟೀಸ್ ಜನಾಂಗ ಮತ್ತು ಪರ್ವತಗಳಲ್ಲಿ ಚದುರಿಹೋಗಿರುವ ೨೯ ಉಪ ಬುಡಕಟ್ಟು ಜನಾಂಗಗಳು. ಇವರನ್ನು ಮತ್ತೆ ಎರಡು ಮೂಲ ಜನಾಂಗಗಳಾಗಿ ವಿಭಾಗಿಸಬಹುದು. ನಾಗಾ ಮತ್ತು ಕುಕಿ-ಚಿನ್ಸ್ (ಕುಕ್ಕಿ ನಾಗಾಸ್). ಮೆಹಟೀಸ್ ಗಳಲ್ಲಿ ಎರಡು ಗುಂಪುಗಳಿವೆ. ಬಾಮಾನ್ಸ್ (ಬೆಂಗಾಲಿ ಬ್ರಾಹ್ಮಣರು) ಮತ್ತು ಮೆಹಿಟೀ ಪಂಗನ್ಸ್ (ಬಂಗ್ಲಾ ದೇಶದಿಂದ ವಲಸೆ ಬಂದಿರುವವರು) ಇಬ್ಬರೂ ಮೆಹಿಟೀ ಭಾಷೆ ಮಾತನಾಡುತ್ತಾರೆ. ಇವರ ಜೊತೆಗೆ ಕಣಿವೆಯಲ್ಲಿ ನೇಪಾಳಿ, ಬಂಗಾಲಿ ಮತ್ತಿತರ ಜನಾಂಗಗಳ ಜನರಿದ್ದಾರೆ. ಪರ್ವತಗಳಲ್ಲಿ ಜೀವಿಸುತ್ತಿದ್ದ ಅನೇಕ ಬುಡಕಟ್ಟು ಜನರು ಇಳಿದು ಬಂದು ಈಗ ಕಣಿವೆ ಸೇರಿಕೊಂಡಿದ್ದಾರೆ.
ನಾಗಾ ಗುಂಪುಗಳಲ್ಲಿ ಜೆಲಿಯಾಂಗ್ರಂಗ್ (ಮೂರು ಉಪ ಬುಡಕಟ್ಟುಗಳ ಸಂಗಮ: ರೊಂಗ್ ಮೆಯಿ ಅಥವಾ ಕಬುಯಿ, ಲಿಯಂಗ್ ಮೆಯಿ ಅಥವಾ ಜೆಮಿಯ ಮತ್ತು ಕಚನಾಗಾ) ತಂಗ್ಕುಲ್, ಮರಮ್, ಮರಿಂಗ್ ಮತ್ತು ಟರೊ. ಚಿನ್-ಕುಕಿ ಗುಂಪಿನಲ್ಲಿ ಟಡಿಮ್‌ಚಿನ್(ಸುಕ್ವೆ) ಗಂಗ್ಟೆ, ಹ್ಮರ್, ಪೈಯಿಟಿ, ಟೊಡವ್, ಮೈಫೈಯಿ ಝೋವ್, ಹೈಮೊಲ್, ಧಿಶು, ಕೊಯಿರೆಂಗ್, ಕೋಮ್, ಅನಲ್ ಚೂತೆ, ಲಮ್‌ಗಂಗ್, ಕೊಯಿರೊ, ತಂಗಲ್, ಮೊಯೊನ್ ಮತ್ತು ಮೊನ್‌ಸಂಗ್. ಇತ್ತೀಚೆಗೆ ಬಹಳಷ್ಟು ಚಿನ್-ಕುಕಿಗಳು ತಮ್ಮನ್ನು ನಾಗಾಗಳೆಂದು ಗುರುತಿಸಿಕೊಂಡಿದ್ದಾರೆ. ಹೊರ ಪ್ರದೇಶಗಳಿಂದ ಬಂದವರನ್ನು ಮಯಾಂಗ್ ಎನ್ನುತ್ತಾರೆ. ಮೆಹಿಟೀಗಳು ವೈಷ್ಣವ ಹಿಂದೂಗಳಾಗಿದ್ದು ಇವರಿಗೆ ಯಾವುದೇ ರಿಯಾಯತಿ ಇಲ್ಲ. ಜೊತೆಗೆ ಅವರು ಬುಡಕಟ್ಟು ಜನರಿರುವ ಪರ್ವತಗಳಲ್ಲಿ ನೆಲೆಸುವಂತಿಲ್ಲ. ಜಮೀನು ಕೊಂಡುಕೊಳ್ಳಲು ಬಿಡುವುದಿಲ್ಲ. ಅದೇ ಕ್ರೈಸ್ತ ಮತಕ್ಕೆ ಶರಣಾಗಿರುವ ನಾಗಾ ಮತ್ತು ಕುಕಿಗಳಿಗೆ ಯಾವುದೇ ನಿಯಂತ್ರಣಗಳಿಲ್ಲ. ಈ ಕಾರಣದಿಂದ ಮೆಹಿಟೀಸ್ ಮತ್ತು ಬುಡಕಟ್ಟು ಜನರ ನಡುವೆ ಹೊಂದಾಣಿಕೆ ಇಲ್ಲದಾಗಿದೆ.
ಮೇಲಿನ ಕಾರಣಗಳಿಂದ ಉಗ್ರರು ಕೂಡ ಮುಖ್ಯವಾಗಿ ಮೆಹಿಟೀ, ನಾಗಾ ಮತ್ತು ಕುಕಿ ಮೂರು ಗುಂಪುಗಳಾಗಿದ್ದಾರೆ. ಮೆಹಿಟೀ ಉಗ್ರರ ಆಂದೋಲನ ಪೂರ್ವ ಬ್ರಿಟಿಷ್ ಪ್ರದೇಶವನ್ನು ಭಾರತೀಯರಿಂದ ಹಿಂದಕ್ಕೆ ಪಡೆದುಕೊಳ್ಳುವುದು. ನಾಗಾಗಳ ಹೋರಾಟವೆಂದರೆ ಅಖಂಡ ನಾಗಾ ಸ್ವಾತಂತ್ರ್ಯ ದೇಶವನ್ನು ಸ್ಥಾಪಿಸುವುದು. ಅದು ಮಣಿಪುರ, ಅಸ್ಸಾಂ, ಅರುಣಾಚಲ ಪ್ರದೇಶ ಮತ್ತು ಬರ್ಮಾ ಭಾಗಗಳಲ್ಲಿರುವ ನಾಗಾಗಳನ್ನೆಲ್ಲ ಒಟ್ಟಾಗಿ ತರುವುದು. ಕುಕಿಗಳ ಕನಸೆಂದರೆ ಬರ್ಮಾದಲ್ಲಿರುವ ಕುಕಿಗಳನ್ನು ಸೇರಿಸಿಕೊಂಡು ಪ್ರತ್ಯೇಕ ಕುಕಿ ನಾಡನ್ನು ಕಟ್ಟುವುದು. ಮಣಿಪುರದಲ್ಲಿ ಒಟ್ಟು ೩೫ ಉಗ್ರರ ಗುಂಪುಗಳು ಕಾರ್ಯ ನಿರ್ವಹಿಸುತ್ತಿವೆ. ರಾಜಕಾರಣಿಗಳು, ಅಧಿಕಾರಿಗಳು, ವ್ಯಾಪಾರಿಗಳು ಎಲ್ಲರೂ ಉಗ್ರ ಗುಂಪುಗಳಿಗೆ ಹಣ ನೀಡಲೇಬೇಕು. ಅನೇಕ ಶಾಲೆಗಳು ಉಗ್ರರಿಗೆ ಹಣ ನೀಡಲಾಗದೆ ಒಂದೊಂದಾಗಿ ಮುಚ್ಚಿಕೊಂಡಿವೆ. ಶಾಲೆಗೆ ಹೋಗುವ ಮಕ್ಕಳನ್ನು ಹಾರಿಸಿಕೊಂಡು ಹೋಗಿ ಒತ್ತೆ ಇಟ್ಟುಕೊಂಡು ಹಣ ದೋಚಲಾಗುತ್ತಿದೆ. ಯಾವ ಅಧಿಕಾರಿಗಳೂ ಮನೆಯಲ್ಲಿ ಫೋನ್, ಜೇಬಿನಲ್ಲಿ ಮೊಬೈಲ್ ಇಟ್ಟುಕೊಳ್ಳುತ್ತಿಲ್ಲ. ಇಟ್ಟುಕೊಂಡರೆ ಬಂಡುಕೋರರು ಫೋನ್ ಮಾಡಿ ಬೆದರಿಸಿ ಹಣ ಕೇಳುತ್ತಾರೆ. ಬಹಳಷ್ಟು ಮಣಿಪುರಿಗಳು ನೆಲ, ಮನೆಗಳನ್ನು ಮಾರಾಟ ಮಾಡಿ ಅಕ್ಕಪಕ್ಕದ ರಾಜ್ಯಗಳಿಗೆ ವಲಸೆ ಹೋಗುತ್ತಿದ್ದಾರೆ. ಹಣವಂತರಂತು ಕಲಕತ್ತಾ, ಬೆಂಗಳೂರು, ಚೆನ್ನೈ ಸೇರಿಕೊಳ್ಳುತ್ತಿದ್ದಾರೆ. ಕೇಂದ್ರ ಸರಕಾರದ ಅಧಿಕಾರಿಗಳು ಮಣಿಪುರ ಎಂದರೆ ಬೆಚ್ಚಿಬಿದ್ದು ಆ ಕಡೆಗೆ ತಲೆಹಾಕಿಯೂ ಮಲಗುತ್ತಿಲ್ಲ. ಅಪ್ಪಿತಪ್ಪಿ ಭಂಡ ಧೈರ್ಯಮಾಡಿ ಹೋದರೆ ಉಗ್ರರು ಅವರನ್ನು ಎತ್ತಾಕಿಕೊಂಡು ಹೋಗಿ ಒಂದೆರಡು ಲಕ್ಷ ಹಣ ಮಾಡಿಕೊಳ್ಳುತ್ತಾರೆ.
ಈ ಬಂಡುಕೋರರ ಗುಂಪುಗಳು ಕೇಂದ್ರ ಮತ್ತು ರಾಜ್ಯ ಸರಕಾರಗಳ ವಿರುದ್ಧ ಕಳೆದ ಐದಾರು ದಶಕಗಳಿಂದ ಹೋರಾಡುತ್ತಲೇ ಬಂದಿವೆ. ಇವರಲ್ಲಿ ಜನರಿಂದ ದೋಚುವ ಹೇರಳ ಹಣವೂ ಇದೆ. ನಿರುದ್ಯೋಗಿಗಳನ್ನು ಹಣ ಕೊಟ್ಟು ಕೊಂಡುಕೊಂಡು ಸಮಾಜಘಾತಕ ಚಟುವಟಿಕೆಗಳಲ್ಲಿ ತೊಡಗಿಸುತ್ತಾರೆ. ಪಂಡಿತ್ ನೆಹರು ಮಣಿಪುರ ‘ಜೆವೆಲ್ ಆಫ್ ಇಂಡಿಯಾ’ ಎಂದು ಕರೆದಿದ್ದರು. ಆದರೆ ಉಗ್ರರ ಸಮಸ್ಯೆಗಳಿಂದ ತತ್ತರಿಸಿಹೋಗಿರುವ ಮಣಿಪುರದ ಪರಿಸ್ಥಿತಿ ಅಸ್ಸಾಂ ಮತ್ತು ಜಮ್ಮು-ಕಾಶ್ಮೀರಕ್ಕಿಂತ ಹದಗೆಟ್ಟಿದೆ. ರೈಲು ರಸ್ತೆ ಇಲ್ಲದ ಮಣಿಪುರಕ್ಕೆ ನಾಗಾಲ್ಯಾಂಡ್ ಮೂಲಕ ಹಾದು ಹೋಗುವ (ದಿಮಾಪುರ-ಕೊಹಿಮಾ-ಇಂಪಾಲ್: ಅರಣ್ಯ/ಪರ್ವತಗಳ) ರಸ್ತೆ ಬಂಡುಕೋರರು ನೇರವಾಗಿ ಸುಲಿಗೆ ಮಾಡುವ ಒಂದು ಕಾರಕೋನವಾಗಿದೆ. ಮಣಿಪುರ ಭಾಷೆಗೆ ಬೆಂಗಾಲಿ ಲಿಪಿ ಅಳವಡಿಸಲಾಗಿದೆ.
ತ್ರಿಪುರಾ
ಮಾಣಿಕ್ಯ ರಾಜ ವಂಶದವರು ತ್ರಿಪುರಾ ರಾಜ್ಯವನ್ನು ಆಳುತ್ತಿದ್ದರು. ಬ್ರಿಟಿಷರ ಕಾಲದಲ್ಲೂ ಇದು ಮಹಾರಾಜರ ಆಡಳಿತದಲ್ಲೇ ಇತ್ತು. ಭಾರತಕ್ಕೆ ಸ್ವಾತಂತ್ರ್ಯ ಬಂದ ತಕ್ಷಣವೆ ಸೆಪ್ಟಂಬರ್ ೯, ೧೯೪೭ರಂದು ಭಾರತದೊಂದಿಗೆ ಐಕ್ಯಗೊಳ್ಳಲು ತ್ರಿಪುರಾ ಮಹಾರಾಣಿ ಒಪ್ಪಿಗೆ ನೀಡಿದ್ದರು. ಅಕ್ಟೋಬರ್ ೧೫, ೧೯೪೯ರಂದು ಭಾರತ, ತ್ರಿಪುರಾ ರಾಜ್ಯವನ್ನು ತನ್ನ ವಶಕ್ಕೆ ತೆಗೆದುಕೊಂಡಿತು. ಮೂರು ಕಡೆ ಬಂಗ್ಲಾ ದೇಶದಿಂದ ಸುತ್ತುವರಿದಿರುವ ಈ ಪರ್ವತ ಕಣಿವೆಗಳ ನಾಡಿನಲ್ಲಿ ಬಂಗಾಲಿಗಳ ಸಂಖ್ಯೆಯೆ ಹೆಚ್ಚಾಗಿ ತುಂಬಿಕೊಂಡಿದೆ. ೨೦೦೧ರ ಜನಗಣತಿಯ ಪ್ರಕಾರ ಶೇಕಡ ೭೦ ಬಂಗಾಲಿಗಳು ಮತ್ತು ೩೦ ರಷ್ಟು ಸ್ಥಳೀಯ ಬುಡಕಟ್ಟು ಜನರಿದ್ದು ಇವರೆಲ್ಲ ಕ್ರೈಸ್ತರಾಗಿ ಮತಾಂತರ ಹೊಂದಿದ್ದಾರೆ. ತ್ರಿಪುರಾ ರಾಜ್ಯದಲ್ಲಿ ಕಮ್ಯುನಿಸ್ಟ್ ಸರಕಾರ ಇದ್ದು, ಬಂಗಾಲಿ ಭಾಷೆ ರಾಜ್ಯ ಭಾಷೆಯಾಗಿದೆ.
೧೯೪೭ರಲ್ಲಿ ಪೂರ್ವ ಪಾಕಿಸ್ತಾನದಲ್ಲಿದ್ದ ಹಿಂದೂ ಬಂಗಾಲಿಗಳು ತ್ರಿಪುರಾ ಕಡೆಗೆ ವಲಸೆ ಬಂದರೆ, ೧೯೭೧ರಲ್ಲಿ ಬಂಗ್ಲಾ ದೇಶ ಹುಟ್ಟಿಕೊಂಡಾಗ ಹಿಂದೂ ಮತ್ತು ಮುಸ್ಲಿಮರು ತ್ರಿಪುರಾ ಸೇರಿಕೊಂಡರು. ಈ ಕಾರಣದಿಂದ ಸ್ಥಳೀಯರ ಸಂಖ್ಯೆ ತೀರ ಕಡಿಮೆಯಾಗಿ ಕೆಲವು ಬಂಡುಕೋರರ ಗುಂಪುಗಳು ಹೊರಗಿನವರ ವಿರುದ್ಧ ಹೋರಾಡುತ್ತಿವೆ. ಇವು ಹಲವು ಮೂಲ ಜನಾಂಗಗಳ ಭಿನ್ನ ಭಾಷೆ ಮತ್ತು ಸಾಂಸ್ಕೃತಿಕ ವೈವಿಧ್ಯತೆಯನ್ನು ಹೊಂದಿವೆ. ಇಲ್ಲಿನ ಮುಖ್ಯ ಜನಾಂಗಗಳೆಂದರೆ ಕೊಕ್ ಬೊರಕ್ ಭಾಷೆ ಮಾತನಾಡುವ (೧೬%) ಜಮಾತಿಯಾ, ರಿಯಂಗ್ ಮತ್ತು ನೊಅಟಿಯ. ಇಲ್ಲಿನ ಬುಡಕಟ್ಟು ಜನರು ಮತ್ತು ಬಂಗಾಲಿಗಳ ನಡುವೆ ತೀವ್ರ ಘರ್ಷಣೆಯ ವಾತಾವರಣ ಇದೆ. ಹಾಗೆಯೆ ಇಲ್ಲಿನ ಉಗ್ರರು ಈಶಾನ್ಯದ ಹಲವು ಭಯಾನಕ ಉಗ್ರ ಗುಂಪುಗಳ ಜೊತೆಗೆ ಕೈಜೋಡಿಸಿದ್ದು ಪ್ರತ್ಯೇಕ ತ್ರಿಪುರಾ ದೇಶ ಕಟ್ಟಲು ಹೋರಾಡುತ್ತಿದ್ದಾರೆ. ಈಶಾನ್ಯದ ಅತಿ ಸಣ್ಣ ರಾಜ್ಯ ಇದಾಗಿದ್ದು, ಜನಸಂಖ್ಯೆಯಲ್ಲಿ ಅಸ್ಸಾಂ ಬಿಟ್ಟರೆ ಹೆಚ್ಚು ಜನದಟ್ಟಣೆ ಇರುವುದು ಇಲ್ಲೆ. ಶೇಕಡ ೭೪ ಅಕ್ಷರಸ್ಥರಿದ್ದು ದೇಶದ ೨೪ನೇ ಬಡ ರಾಜ್ಯವಾಗಿದೆ. ಕೇರಳದ ನಂತರ ಇದು ಎರಡನೇ ರಬ್ಬರ್ ರಾಜ್ಯ ಎನ್ನುವ ಹೆಗ್ಗಳಿಕೆ ಪಡೆದಿದೆ. ತ್ರಿಪುರಾ ಪ್ರಸ್ತುತ ಸ್ವಲ್ಪ ನಿರಾಳವಾಗಿ ಉಸಿರಾಡುತ್ತಿದೆ.
ಅರುಣಾಚಲ ಪ್ರದೇಶ
ಈ ರಾಜ್ಯ ಉದ್ದವಾದ ಚೀನಾ ಗಡಿಯನ್ನು ಹೊಂದಿದ್ದು ಯಾವಾಗಲೂ ಉದ್ರಿಕ್ತ ಪರಿಸ್ಥಿತಿಯಿಂದಲೇ ಕೂಡಿರುತ್ತದೆ. ಚೀನಾ, ತವಾಂಗ್ ಪ್ರದೇಶ ನಮ್ಮದು ಎನ್ನುತ್ತಲೆ ಇರುತ್ತದೆ. ಏಳು ರಾಜ್ಯಗಳ ಪೈಕಿ ಮಿಜೋರಾಂ ಮತ್ತು ಮೇಘಾಲಯದಲ್ಲಿ ಪರಿಸ್ಥಿತಿ ಸ್ವಲ್ಪ ಸುಧಾರಿಸಿದ್ದು ಅಕ್ಕಪಕ್ಕದ ರಾಜ್ಯಗಳಲ್ಲಿ ನಡೆಯುತ್ತಿರುವ ಹಿಂಸೆ ಯಾವ ಘಳಿಗೆಯಲ್ಲಾದರೂ ಹರಡಬಹುದು. ಕೇಂದ್ರ ಸರಕಾರ ಯಾವುದೇ ವಿಷಯ ಕಾನೂನಿನ ಚೌಕಟ್ಟಿನ ಒಳಗೆ ಎನ್ನುವ ಮಾತುಗಳಿಂದ ಅಥವಾ ಮಿಲಿಟರಿ ಪಡೆಗಳು ಬಂಡುಕೋರರನ್ನು ಹಿಡಿತದಲ್ಲಿ ಇಡುವುದು ಸಾಧ್ಯವಿಲ್ಲ. ಕೇಂದ್ರ ಸರಕಾರ ಕೋಟ್ಯಂತರ ರೂಪಾಯಿಗಳನ್ನು ಇಲ್ಲಿ ಚೆಲ್ಲುತ್ತಿದ್ದರೂ ನೂರಾರು ಜನ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.
ಈಶಾನ್ಯ ರಾಜ್ಯಗಳಲ್ಲಿ ಪರಿಸ್ಥಿತಿ ಹೇಗಿದೆಯೆಂದರೆ ವರ್ಷಕ್ಕೆ ಎರಡು ಸಲ ನಡೆಯುವ ಸರಕಾರಿ ಹಬ್ಬಗಳಾದ ಸ್ವಾತಂತ್ರ್ಯ ಮತ್ತು ಗಣರಾಜ್ಯ ದಿನಾಚರಣೆಗಳನ್ನು ಯಾವ ರೀತಿ ಆಚರಿಸುತ್ತವೆ ಎಂದರೆ ಯಾವುದೊ ಅಪರಿಚಿತ ದೇಶದಲ್ಲಿ ಅಪರಿಚಿತ ಜನರು ರಾಷ್ಟ್ರ ಧ್ವಜವನ್ನು ಹಾರಿಸುವುದು ಏನೊ ಅಪರಾಧ ಮಾಡುತ್ತಿರುವಂತೆ ತೋರುತ್ತದೆ. ಟಿವಿ ಚಾನಲ್ ಗಳು ಈ ರಾಜ್ಯಗಳ ರಂಗುರಂಗು ಸಾಂಸ್ಕೃತಿಕ ಕಲೆ ಮತ್ತು ನೃತ್ಯಗಳನ್ನು ಬಿತ್ತರಿಸುತ್ತವೆ. ಅದು ಕೇಂದ್ರ ಸರಕಾರದ ಕುರುಡು ಕಣ್ಣುಗಳಿಗೆ ಹೇಗೆ ಕಾಣಿಸುತ್ತದೆಯೊ ಗೊತ್ತಿಲ್ಲ. ಅದು, ದೆಹಲಿಯಿಂದ ಬರುವ ಹಣಕ್ಕೆ ರಾಜ್ಯ ಸರಕಾರಗಳು ತೋರಿಸುವ ನಾಟಕವೆಂದರೆ ತಪ್ಪಾಗುವುದಿಲ್ಲ. ೨೦೦೭ ರಿಂದ ೨೦೦೯ರವರೆಗೂ ನಾನು ಶಿಲ್ಲಾಂಗ್ ನಲ್ಲಿದ್ದೆ. ಅಸ್ಸಾಂ, ನಾಗಾಲ್ಯಾಂಡ್ ಮತ್ತು ಮೇಘಾಲಯದ ಬಂಡುಕೋರರ ಗುಂಪುಗಳು ಸ್ವಾತಂತ್ರ್ಯ ದಿನವನ್ನು ಪ್ರತಿಭಟಿಸಿ ಆಯಾ ರಾಜ್ಯಗಳ ಬಂದ್ ಘೋಷಿಸಿದ್ದವು. ಅಸ್ಸಾಂನಲ್ಲಿ ಬಂಡುಕೋರರ ಗುಂಪುಗಳು ಅನೇಕ ಕಡೆ ಕಪ್ಪು ಬಾವುಟಗಳನ್ನು ಹಾರಿಸಿದವು. ಹಾಗೆ ಬಂಡುಕೋರರು ತಾವು ಬೀಡುಬಿಟ್ಟಿರುವ ಹೆಡ್ ಕ್ವಾಟ್ರಸ್ ಎಂದು ಹೇಳಿಕೊಳ್ಳುವ ಸ್ಥಳಗಳಿಂದಲೇ ಕೆಲವು ನಿರ್ಣಯಗಳನ್ನು ಘೋಷಿಸುತ್ತಾರೆ. ಉದಾ: ನಾಳೆ ಬಂದ್ ಎಂದರೆ ಸಾಕು ತಕ್ಷಣ ಸಾರ್ವಜನಿಕರು ಭೀತಿಯಿಂದ ಮನೆಗಳಲ್ಲಿಯೆ ಇದ್ದುಬಿಡುತ್ತಾರೆ. ಇನ್ನು ರಾಜ್ಯ ಸರಕಾರದ ಕಾರ್ಮಿಕರಿಗೆ ಅದು ಪೂರ್ಣವಾಗಿ ರಜಾ ದಿನ. ಎಲ್ಲೆಲ್ಲೂ ಪೊಲೀಸರ ಬಂದೋಬಸ್ತು. ಭೀತಿಯಿಂದ ಅಲ್ಲಿ ಇಲ್ಲಿ ತ್ರಿರಂಗ ಬಾವುಟಗಳು ಹಾರಾಡುವುದಕ್ಕಿಂತ ಕಪ್ಪು ಬಾವುಟಗಳೆ ಹೆಚ್ಚಾಗಿ ಹಾರಾಡುತ್ತವೆ. ನಮ್ಮ ಕಛೇರಿಯ ಮುಂದೆ ಎರಡು ಸಲ ಬಾವುಟ ಹಾರಿಸಿದಾಗ ಹೊರ ರಾಜ್ಯಗಳಿಂದ ಬಂದಿದ್ದ ಅಧಿಕಾರಿಗಳು ಮಾತ್ರ ಇದ್ದೆವು. ಸ್ಥಳೀಯ ಅಧಿಕಾರಿಗಳು, ಕಾರ್ಮಿಕರು ಒಬ್ಬರೂ ಬಂದಿರಲಿಲ್ಲ. ನಾಳೇ ದಿನ ಬಂದ್ ಎಂದು ಒಂದೇ ಒಂದು ಈ-ಮೇಲ್ ಬಂದಿದೆ ಎಂದು ಯಾರಾದರು ಗುಲ್ಲೆಬ್ಬಿಸಿದರೆ ಸಾಕು, ಇಡೀ ರಾಜ್ಯದಲ್ಲಿ ಒಂದೇ ಒಂದು ಸರಕಾರಿ, ಖಾಸಗಿ ವಾಹನವೂ ಓಡುವುದಿಲ್ಲ. ಒಂದು ಅಂಗಡಿಯೂ ತೆರೆದಿರುವುದಿಲ್ಲ. ಬಂದ್ ಕರೆದವರು ಯಾವ ಗುಂಪಿನ ಬಂಡುಕೋರರು ಎನ್ನುವುದು ಯಾರಿಗೂ ಗೊತ್ತಿರುವುದಿಲ್ಲ. ಇವೆಲ್ಲ ಭಾರತ ದೇಶದ ಒಳಗಿರುವ ರಾಜ್ಯಗಳೆ ಎನ್ನುವ ಗುಮಾನಿ ಹುಟ್ಟುತ್ತದೆ.
ಈಶಾನ್ಯದ ೮ ರಾಜ್ಯಗಳ ಒಟ್ಟು ಜನಸಂಖ್ಯೆ ೨೦೦೭-೦೮ ರಲ್ಲಿ ೩.೨೦ ಕೋಟಿಯಾದರೆ ಅವುಗಳಿಗಾಗಿ ಕೇಂದ್ರ ಸರಕಾರ ಮಾಡುವ ವೆಚ್ಚ ೩೦,೦೦೦ ಕೋಟಿ. ಅಂದರೆ ಪ್ರತಿ ಮನುಷ್ಯನ ಮೇಲೆ ಸರಾಸರಿ ೧೦,೦೦೦ ರೂ. ಖರ್ಚು ಮಾಡುತ್ತದೆ. ಕೇಂದ್ರ ಸರಕಾರದಿಂದ ಬರುವ ಸುಮಾರು ೨೦,೦೦೦ ಕೋಟಿ ರೂ. ಕೆಳಗಿನ ರೀತಿ ಆಯಾ ರಾಜ್ಯಗಳಿಗೆ ಅನುದಾನವಾಗಿ ದೊರಕುತ್ತದೆ. ಅರುಣಾಚಲ ಪ್ರದೇಶ ೮೫%, ಅಸ್ಸಾಂ ೫೧%, ಮೇಘಾಲಯ ೭೦%, ಮಣಿಪುರ ೮೦%, ನಾಗಾಲ್ಯಾಂಡ್ ೮೦%, ಸಿಕ್ಕಿ ೪೦%, ತ್ರಿಪುರಾ ೭೦% ಮತ್ತು ಮಿಜೊರಾಂ ೭೨%. ಉಳಿದ ೧೦,೦೦೦ ಕೋಟಿ ಆಯಾ ರಾಜ್ಯಗಳ ರೆವಿನ್ಯೂ. ವಿಶೇಷವೆಂದರೆ ಇಲ್ಲಿನ ಎಲ್ಲಾ ರಾಜ್ಯಗಳ ಬುಡಕಟ್ಟು ಜನರು ಕೇಂದ್ರ ಮತ್ತು ರಾಜ್ಯ ಸರಕಾರಗಳಿಗೆ ಯಾವುದೇ ರೀತಿಯ ತೆರಿಗೆಯನ್ನು ಪಾವತಿಸುವಂತಿಲ್ಲ. ಸ್ಥಳೀಯ ಅಧಿಕಾರಿಗಳು, ವ್ಯಾಪಾರಿಗಳು, ರಾಜಕಾರಣಿಗಳಿಗೂ ತೆರಿಗೆ ಇಲ್ಲ. ಆದರೆ ಇಲ್ಲಿಗೆ ವರ್ಗವಾಗಿ ಬರುವ ಇತರೆ ರಾಜ್ಯಗಳ ಕೇಂದ್ರ ಸರಕಾರ, ಬ್ಯಾಂಕ್ ಅಧಿಕಾರಿಗಳು ತೆರಿಗೆ ಕೊಡಬೇಕು. ಆದರೂ ಇಲ್ಲಿನ ಗುಡ್ಡಗಾಡು ಹಳ್ಳಿಗಳಲ್ಲಿ ಬಡತನ ಮಾತ್ರ ನೀಗಿಲ್ಲ. ಕೆಲವರು ಹೇಳುವಂತೆ ಸರಕಾರ ಯಾವುದೇ ರೀತಿಯ ಅಭಿವೃದ್ಧಿ ಕಾರ್ಯಗಳನ್ನು ಮಾಡದೆ ಪ್ರತಿಯೊಬ್ಬರ ಹೆಸರಿನಲ್ಲಿ ವರ್ಷಕ್ಕೆ ೧೦,೦೦೦ ರೂ. ಬ್ಯಾಂಕ್ ಖಾತೆಗೆ ಹಾಕಿಬಿಟ್ಟರೆ ಭ್ರಷ್ಟ ಅಧಿಕಾರಿಗಳು ಮತ್ತು ರಾಜಕಾರಣಿಗಳಿಂದ ಅವರನ್ನು ತಪ್ಪಿಸಬಹುದು.
ಡಾ.ಎಂ.ವೆಂಕಟಸ್ವಾಮಿ ಮೂಲತಃ ಕೋಲಾರ ಜಿಲ್ಲೆ ಬಂಗಾರಪೇಟೆ ತಾಲ್ಲೂಕಿನ ಯರ್ರಗೊಂಡ ಬ್ಯಾಟರಾಯನಹಳ್ಳಿಯವರು. 1984ರಲ್ಲಿ ಲಕ್ನೋದಲ್ಲಿ ಭೂವಿಜ್ಞಾನಿಯಾಗಿ ಸೇರಿ, ಭಾರತೀಯ ಭೂವೈಜ್ಞಾನಿಕ ಸರ್ವೆಕ್ಷಣಾ ಇಲಾಖೆಯ (2015ರಲ್ಲಿ ನಾಗ್ಪುರದಲ್ಲಿ) ಮಹಾನಿರ್ದೇಶಕರಾಗಿ ನಿವೃತ್ತರಾಗಿದ್ದಾರೆ. ಕೆಲಕಾಲ ಕೆಜಿಎಫ್‍ನ ಎಲ್.ಐ.ಸಿ ಮತ್ತು ಮಧ್ಯಪ್ರದೇಶದ ಬಿಲಾಯ್‍ನಲ್ಲಿಯೂ ಕೆಲಸ ಮಾಡಿದ್ದಾರೆ.
3 ಕವನ ಸಂಕಲನಗಳು 3 ಪ್ರವಾಸ ಕಥೆಗಳು 2 ವೈಚಾರಿಕ ಕೃತಿಗಳು 8 ಕಾದಂಬರಿಗಳು, 8 ವಿಜ್ಞಾನ ಕೃತಿಗಳು ಮತ್ತು 2 ಇಂಗ್ಲಿಷ್ ಕೃತಿಗಳು ಸೇರಿದಂತೆ ಇವರ ಒಟ್ಟು 30 ಕೃತಿಗಳು ಪ್ರಕಟಗೊಂಡಿವೆ.