ಅವತ್ತು ಅರುಣ್ ಯಾಕೋ ಯೋಚನೆಯಲ್ಲಿ ಇದ್ದಂತೆ ಕಂಡರು. ಯಾಕೆ ಏನಾಯ್ತು ಅಂತ ಕೇಳಬೇಕು ಅನಿಸಿದರೂ ಸುಮ್ಮನಿದ್ದೆ. ಅಲ್ಲಿಗೆ ಹೋಗಿ ಹಲವು ವರ್ಷಗಳು ಅಲ್ಲಿಯೇ ನೆಲೆಸಿದ ಮೇಲೆ ನಮ್ಮ ಎಷ್ಟೋ ದೇಸಿಗಳೂ ಕೂಡ ಅಮೆರಿಕದವರಂತೆಯೇ ಆಗಿಬಿಟ್ಟಿರುತ್ತಾರೆ. ಹಾಗೆಲ್ಲಾ ಯಾರಿಗೂ ವೈಯುಕ್ತಿಕ ವಿಷಯಗಳನ್ನು ಏನೂ ಕೇಳೋ ಹಾಗಿಲ್ಲ. ಆದರೆ ಅವರು ಹಾಗಿರಲಿಲ್ಲ. ತಾವೇ ತಮ್ಮ ಬೇಜಾರಿನ ಕಾರಣವನ್ನು ಅರುಹಿದರು. ಅವರಿಗೂ ತಮ್ಮ ದುಗುಡಗಳನ್ನು ಹಂಚಿಕೊಳ್ಳಲು ಯಾರಾದರೂ ಬೇಕಿತ್ತು ಅನಿಸಿತು. ಬೆಂಗಳೂರಿನಲ್ಲಿ ತಮ್ಮ ಸಂಬಂಧಿಕರೊಬ್ಬರಿಗೆ ಹತ್ತು ಲಕ್ಷ ಸಾಲ ಕೊಟ್ಟಿದ್ದರಂತೆ ಅವನು ವಾಪಸ್ಸು ಕೊಡದೇ ಸತಾಯಿಸುತ್ತಾ ಇದ್ದನಂತೆ.
ಗುರುಪ್ರಸಾದ ಕುರ್ತಕೋಟಿ ಬರೆಯುವ “ಅಮೆರಿಕದಲ್ಲಿ ಕುರ್ತಕೋಟಿ” ಸರಣಿಯ ಇಪ್ಪತ್ತೇಳನೆಯ ಬರಹ
ಅವತ್ತು ಎಂಟು ಗಂಟೆ ಅಷ್ಟೊತ್ತಿಗೆ ಆಫೀಸ್‌ಗೆ ಹೋಗಿದ್ದೆ. ಅಲ್ಲಿ ಕೆಲಸ ಮಾಡುತ್ತಿದ್ದ ಹಲವಾರು ಸಹೋದ್ಯೋಗಿಗಳು ಕೂಡ ಬೆಳಿಗ್ಗೆ ಬೇಗನೆ ಬರುತ್ತಿದ್ದರು. ಕೆಲವರಂತೂ ಬೆಳಿಗ್ಗೆ ಆರು ಗಂಟೆಗೆಲ್ಲ ಬಂದುಬಿಡುತ್ತಿದ್ದರು. ಸಂಜೆ ನಾಲ್ಕು ಗಂಟೆಯ ಒಳಗೆ ಬಹುತೇಕ ಎಲ್ಲರೂ ಮನೆಗೆ ಹೋಗಿಬಿಡುತ್ತಿದ್ದರು. ನನಗೂ ಕೂಡ ಅದೇ ರೂಢಿಯಾಗಿತ್ತು. ಆಗ ತಾನೇ ಓಹಾಯೋ ಪ್ರವಾಸ ಮುಗಿಸಿ ಬಂದಿದ್ದರಿಂದ ಅದೇ ಗುಂಗಿನಲ್ಲಿದ್ದೆ. ಅದೊಂದು ತರಹದ ಹ್ಯಾಂಗ್ ಓವರ್! ಆದರೂ ಮಾನಿಟರ್ ನೋಡುತ್ತಾ ಯಾವುದೋ ಒಂದು ಇಮೇಲ್ ಅನ್ನು ಗಂಭೀರವಾಗಿ ಓದುತ್ತಿರುವಂತೆ ಕೂತಿದ್ದೆನಾದರೂ, ಅತೀವ ನಿರಾಸಕ್ತಿಯಿಂದ ಅದನ್ನು ವೀಕ್ಷಿಸುತ್ತಿದ್ದೆ. ನನ್ನೆದುರು ನಿಂತಿದ್ದ ವ್ಯಕ್ತಿಯನ್ನೂ ಕೂಡ ಗಮನಿಸಲಾರದ ಭ್ರಮಾ ಲೋಕದಲ್ಲಿ ಇದ್ದೆ!
“ಹೇ, ಯು ಮಸ್ಟ್ ಬಿ ಗುರುss” ಅಂತ ಅವರು ರಾಗವಾಗಿ ಕರೆದಾಗಲೆ ನನಗೆ ಎಚ್ಚರವಾಗಿದ್ದು! ನಾನು ಕೂತಲ್ಲಿಂದಲೇ ಅವರ ಕಡೆಗೆ ನೋಡಿದಾಗ ಅವರು ನನ್ನ ಕಡೆ ಕೈ ಚಾಚಿ ತನ್ನ ಹೆಸರು ರಾನ್ ಡೆಕರ್ಡ್ ಅಂತ ತಮ್ಮನ್ನು ಪರಿಚಯಿಸಿಕೊಂಡರು. ತಾನು ಹೊಸದಾಗಿ ಸೇರಿರುವೆ ಅಂತಲೂ ಹಾಗೂ ಇವತ್ತಿನಿಂದ ನಾನು ಅವರಿಗೆ ರಿಪೋರ್ಟ್ ಮಾಡಬೇಕು ಅಂತ ಹೇಳಿದರು. ಕೂಲಂಕುಶವಾಗಿ ನೋಡಿದಾಗ ಅವರ ವಯಸ್ಸು ಅರವತ್ತರ ಆಸುಪಾಸಿನಲ್ಲಿ ಇತ್ತು ಅನಿಸಿತು. ನೋಡಲು ತುಂಬಾ ಸರಳ, ಮೃದು ಭಾಷಿ ಹಾಗೂ ಒಳ್ಳೆಯ ಮನಸ್ಸಿನ ವ್ಯಕ್ತಿಯ ಹಾಗೆ ಕಂಡರು. ನಮ್ಮ ಡೈರೆಕ್ಟರ್ ವೆಂಕಟನಂತಹ ಕಠಿಣ ಹೃದಯಿಯ ಮುಂದೆ ಎಲ್ಲರೂ ಮೃದುವಾಗಿಯೇ ನನಗೆ ಕಾಣುತ್ತಿದ್ದರೋ ಏನೋ! ಯಾರಿಗೆ ರಿಪೋರ್ಟ್ ಮಾಡಿದರೆ ಏನು? ನನ್ನ ಕೆಲಸವಂತೂ ಅದೇ ಇತ್ತು. ನನ್ನ ಇತ್ತೀಚಿನ ಪ್ರಾಜೆಕ್ಟ್‌ನ ಪ್ರಗತಿಯ ಬಗ್ಗೆ ವಿಚಾರಿಸಿ, ಆಮೇಲೆ ಸಿಗೋಣ ಅಂತ ಹೇಳಿ ಹೋದರು. ಹೊಸದಾಗಿ ಬಂದಿದ್ದರಿಂದ ಅವರಿಗೆ ಇನ್ನಿತರ ಸಹೋದ್ಯೋಗಿಗಳನ್ನು ಕೂಡ ಭೇಟಿಯಾಗುವುದು ಇತ್ತು ಅನಿಸುತ್ತೆ.
ಅಷ್ಟೊತ್ತಿಗೆ ಕರ್ನಾಟಕದವರೆ ಆದ ನನ್ನ ಸಹೋದ್ಯೋಗಿ ಅರುಣ್ ಅನ್ನುವವರು ನನ್ನ ಡೆಸ್ಕ್ ಬಳಿ ಬಂದರು. ನಾವಿಬ್ಬರೂ ಬೆಳಿಗ್ಗೆ ಒಂದು ಸಣ್ಣ ಕಾಫಿ ಬ್ರೇಕ್ ತೆಗೆದುಕೊಳ್ಳುತ್ತಿದ್ದೆವು. ಅವರು ಅದಕ್ಕೆ ಬಂದಿದ್ದು ಅಂತ ಗೊತ್ತಾಗುತ್ತಲೇ ಯಾಕಾದರೂ ಕೆಲಸಕ್ಕೆ ಬಂದಿರುವೆನೋ ಎಂಬ ಮನಸ್ಥಿತಿಯಲ್ಲಿ ಇದ್ದ ನನಗೆ ತೀರಾ ಖುಷಿಯಾಯ್ತು. ಅವರು ನನಗಿಂತ ಮೊದಲೇ ಅಲ್ಲಿ ಬಂದು ನೆಲೆಸಿದವರು. ಮೊದಲು ಬೇರೆ ಯಾವುದೋ ರಾಜ್ಯದಲ್ಲಿ ಇದ್ದವರು ಆಗಷ್ಟೇ ನೆಬ್ರಾಸ್ಕಕ್ಕೆ ಬಂದಿದ್ದರು. ಅಮೆರಿಕೆಯಲ್ಲಿ ಪ್ರಾಜೆಕ್ಟ್ ಎಲ್ಲಿ ಸಿಗುತ್ತೊ ಅಲ್ಲಿಗೆ ಹೋಗಲೇಬೇಕು. ಅದಕ್ಕೆ ದೇಸಿಗಳು ಯಾವಾಗಲೂ ತಯಾರಿರುತ್ತಾರೆ. ಅದೇ ಭಾರತದಲ್ಲಿ ಬೇರೆ ರಾಜ್ಯಕ್ಕೆ ಕೆಲಸಕ್ಕೆ ಹೋಗು ಅಂದರೆ ಊಹೂಂ!
ಅವರ ಮನೆ ಕೂಡ ನನ್ನ ಮನೆಯ ಹತ್ತಿರದಲ್ಲೇ ಇತ್ತು. ಹೊಸದಾಗಿ ನನ್ನ ಕಾರ್ ಇಲ್ಲದಾಗ ಹಲವು ದಿನಗಳು ಅವರೇ ನನ್ನನ್ನು ಆಫೀಸ್‌ಗೆ ತಮ್ಮ ಕಾರ್‌ನಲ್ಲಿ ಕರೆದುಕೊಂಡು ಬರುತ್ತಿದ್ದರು. ಹೀಗಾಗಿ ನಮ್ಮಲ್ಲಿ ಒಂದು ಬಾಂಧವ್ಯ ಬೆಳೆದಿತ್ತು. ವಿದೇಶದಲ್ಲಿ ಕೆಲಸ ಮಾಡುವ ಕಾರ್ಯಾಲಯದಲ್ಲಿ ಒಬ್ಬ ಕನ್ನಡಿಗ ಜೊತೆಗಿದ್ದರೆ ಅದಕ್ಕಿಂತ ದೊಡ್ಡ ಸ್ವರ್ಗ ಬೇರೆ ಎಲ್ಲೂ ಇಲ್ಲ. ಆದರೆ ಆ ಕನ್ನಡಿಗ ಕನ್ನಡ ಮಾತಾಡುವವನು ಆಗಿರಬೇಕಷ್ಟೆ! ನನ್ನ ಅದೃಷ್ಟಕ್ಕೆ ಅರುಣ್ ಕನ್ನಡದಲ್ಲೇ ಮಾತಾಡುತ್ತಿದ್ದರು. ಎಲ್ಲಾ ತರಹದ ಗಾಸಿಪ್ಪುಗಳನ್ನು, ತಕರಾರುಗಳನ್ನು ನಾವು ಕಾಫೀ ಹೀರುತ್ತಾ ಎಷ್ಟೇ ಜೋರಾಗಿ ಮಾತಾಡಿದರೂ ಅಲ್ಲಿ ಯಾರಿಗೂ ಅರ್ಥವಾಗುತ್ತಿರಲಿಲ್ಲ.
ಅವತ್ತು ಅರುಣ್ ಯಾಕೋ ಯೋಚನೆಯಲ್ಲಿ ಇದ್ದಂತೆ ಕಂಡರು. ಯಾಕೆ ಏನಾಯ್ತು ಅಂತ ಕೇಳಬೇಕು ಅನಿಸಿದರೂ ಸುಮ್ಮನಿದ್ದೆ. ಅಲ್ಲಿಗೆ ಹೋಗಿ ಹಲವು ವರ್ಷಗಳು ಅಲ್ಲಿಯೇ ನೆಲೆಸಿದ ಮೇಲೆ ನಮ್ಮ ಎಷ್ಟೋ ದೇಸಿಗಳೂ ಕೂಡ ಅಮೆರಿಕದವರಂತೆಯೇ ಆಗಿಬಿಟ್ಟಿರುತ್ತಾರೆ. ಹಾಗೆಲ್ಲಾ ಯಾರಿಗೂ ವೈಯುಕ್ತಿಕ ವಿಷಯಗಳನ್ನು ಏನೂ ಕೇಳೋ ಹಾಗಿಲ್ಲ. ಆದರೆ ಅವರು ಹಾಗಿರಲಿಲ್ಲ. ತಾವೇ ತಮ್ಮ ಬೇಜಾರಿನ ಕಾರಣವನ್ನು ಅರುಹಿದರು. ಅವರಿಗೂ ತಮ್ಮ ದುಗುಡಗಳನ್ನು ಹಂಚಿಕೊಳ್ಳಲು ಯಾರಾದರೂ ಬೇಕಿತ್ತು ಅನಿಸಿತು. ಬೆಂಗಳೂರಿನಲ್ಲಿ ತಮ್ಮ ಸಂಬಂಧಿಕರೊಬ್ಬರಿಗೆ ಹತ್ತು ಲಕ್ಷ ಸಾಲ ಕೊಟ್ಟಿದ್ದರಂತೆ ಅವನು ವಾಪಸ್ಸು ಕೊಡದೇ ಸತಾಯಿಸುತ್ತಾ ಇದ್ದನಂತೆ. ಯಾರಿಗೂ ದುಡ್ಡು ಕೊಡಲೆಬಾರದು. ನಾವು ಅಮೆರಿಕೆಯಲ್ಲಿ ಇರುತ್ತೇವೆ ಅಂದರೆ ನಮ್ಮ ಮನೆಯಲ್ಲಿ ದುಡ್ಡಿನ ಮರ ಇದೆ ಅಂತ ನಮ್ಮ ಸ್ನೇಹಿತರು, ಸಂಬಂಧಿಕರು ಅಂದುಕೊಳ್ಳುತ್ತಾರೆ, ನಮ್ಮ ಪರಿಸ್ಥಿತಿ ನಮಗೆ ಗೊತ್ತು ಅಂತ ಅವರು ತಮ್ಮ ಅಸಮಾಧಾನವನ್ನು ಹೊರಹಾಕುತ್ತಿದ್ದರು.
ದೂರದಿಂದ ನೋಡಲು ಅಮೆರಿಕೆಯ ಜೀವನ ಚಂದ. ಕೆಲವು ವಿಷಯಗಳಲ್ಲಿ ಇರಬಹುದೇನೋ. ದುಡ್ಡಿನ ವಿಷಯದಲ್ಲಿ ಅಲ್ಲಿ ಗಳಿಸಿದ್ದು ಅಲ್ಲಿನ ಖರ್ಚಿಗೇ ಸರಿ ಹೋಗುತ್ತೆ. ಇಲ್ಲಿನ ಮಧ್ಯಮ ವರ್ಗದವರು ಯೋಚಿಸುವ ರೀತಿಯಲ್ಲಿಯೇ ಅಲ್ಲಿನವರೂ ಯೋಚಿಸುತ್ತಾರೆ. ಖರ್ಚುಗಳು ಜಾಸ್ತಿ ಆದರೆ ಅಲ್ಲಿನವರೂ ಧೃತಿಗೆಡುತ್ತಾರೆ. ಅಲ್ಲಿ ಹಣದುಬ್ಬರ ಅಷ್ಟೊಂದು ಇಲ್ಲ ಅನ್ನುವ ಕಾರಣಕ್ಕೆ ಬೆಲೆಗಳಲ್ಲಿ ಏರುಪೇರು ಆಗುವುದಿಲ್ಲ ಅಷ್ಟೇ. ಆದರೂ ಕೂಡ ಅಲ್ಲೂ ಎಷ್ಟೋ ಸಹೋದ್ಯೋಗಿಗಳು ದುಡ್ಡು ಉಳಿಸಲು ಕಾರಿನಲ್ಲಿ ಬರುವ ಬದಲು ಬಸ್‌ನಲ್ಲಿ ಬರುತ್ತಿದ್ದೇನೆ ಅಂತ ಹೇಳಿದ್ದನ್ನು ಕೇಳಿದ್ದೆ. ಅಲ್ಲಿನ ವೈದ್ಯಕೀಯ ಮಾಫಿಯಾ ಅಂತೂ ತುಂಬಾ ದೊಡ್ಡದು! ಪ್ರತಿಯೊಂದಕ್ಕೂ ವಿಮೆ ಮಾಡಿಸಬೇಕು. ಪ್ರಾಥಮಿಕ ಶಾಲೆ ಮಾತ್ರ ಉಚಿತವಾಗಿರುತ್ತದೆ. ಕಾಲೇಜ್ ಹಾಗೂ ನಂತರದ ವಿದ್ಯಾಭ್ಯಾಸ ತುಂಬಾ ಖರ್ಚು. ನಾನಂತೂ ನನ್ನ ಮಗಳು ಪ್ರೌಢ ಶಾಲೆಗೆ ಬರೋದರೊಳಗೆ ಅಲ್ಲಿಂದ ಕಾಲು ಕಿತ್ತಬೇಕು ಅಂತ ನಿರ್ಧಾರ ಮಾಡಿದ್ದೆ. ಖರ್ಚು ಆಗುತ್ತೆ ಅನ್ನೋ ಕಾರಣಕ್ಕಿಂತ ನನ್ನ ಮಗಳು ಅಲ್ಲಿನ ಸಂಸ್ಕೃತಿಯನ್ನು ಅಪ್ಪಿಕೊಳ್ಳೋದು ಬೇಡಾ ಅನ್ನೋದು ನನ್ನ ಭಾವನೆಯಾಗಿತ್ತು. ಹಾಗಂತ ಅಲ್ಲಿ ಇದ್ದವರ ಮಕ್ಕಳೆಲ್ಲರೂ ಹಾಗೆ ಇರೋದಿಲ್ಲ. ಕೆಲವರ ಮಕ್ಕಳು ಅಮೆರಿಕನ್ ಆಕ್ಸೆಂಟ್‌ನಲ್ಲಿ ಮಾತಾಡುತ್ತಾರೆ ಅನ್ನೋದು ಬಿಟ್ಟರೆ ಉಳಿದೆಲ್ಲ ವಿಚಾರಗಳಲ್ಲಿ ಭಾರತೀಯತೆಯನ್ನೇ ಮೈಗೂಡಿಸಿಕೊಂಡಿದ್ದರು. ಅದು ನಾವು ಮಕ್ಕಳನ್ನು ಹೇಗೆ ಬೆಳೆಸುತ್ತೇವೆ ಎಂಬುದರ ಮೇಲೆ ನಿರ್ಧಾರ ಆಗುತ್ತೆ. ಅದು ಅಮೆರಿಕೆಯೆ ಇರಬಹುದು, ಬೆಂಗಳೂರೆ ಇರಬಹುದು.. ಎಲ್ಲವೂ ಒಂದೇ.
ಅರುಣ್ ಅವರ ಸಂಬಂಧಿಕರಿಗೆ ನಾನೂ ಒಂದಿಷ್ಟು ಬೈದು ಸಮಾಧಾನ ಮಾಡಿದೆ. ಆದರೂ ಅಷ್ಟೆಲ್ಲಾ ದುಡ್ಡು ಕೊಟ್ಟಿದ್ದು ನಿಮ್ಮದೇ ತಪ್ಪು ಅಂತಲೂ ಸೂಚ್ಯವಾಗಿ ಅವರಿಗೆ ಹೇಳಿದೆ. ಅವರು ತಲೆಯಾಡಿಸಿದರು. ಅಷ್ಟೊತ್ತಿಗೆ ಅಲ್ಲಿ ಇನ್ನೊಂದಿಬ್ಬರು ಭಾರತೀಯ ಮೂಲದವರು ಬಂದು ನಮ್ಮನ್ನು ಮಾತಾಡಿಸಿದರು. ಅವರಲ್ಲಿ ಒಬ್ಬ ಅದೇ ಕಂಪೆನಿಯಲ್ಲಿ ಕೆಲಸ ಮಾಡಿಕೊಂಡಿದ್ದ ಡೆವಲಪರ್. ಅವನ ಹೆಸರು ಹರೀಂದರ್. ಅವನು ಮೂಲತಃ ದೆಹಲಿಯವನು. ಅವನು ಬಂದ ಕೂಡಲೇ ನಾವೆಲ್ಲರೂ ಕೂಡಲೇ ಹಿಂದಿಯಲ್ಲಿ ಮಾತಾಡಲು ತೊಡಗಿದೆವು. ಹೀಗೆ ಬೇರೆ ಭಾರತೀಯ ಸಹೋದ್ಯೋಗಿಗಳು ಬಂದಾಗ ಎಲ್ಲರೂ ಬಹುತೇಕ ಅದೇ ಭಾಷೆಯಲ್ಲಿ ಮಾತಾಡುತ್ತಿದ್ದೆವು. ಅಲ್ಲಿ ಭಾರತೀಯರನ್ನೆಲ್ಲ ಒಂದು ಮಾಡುತ್ತಿದ್ದುದು ಹಿಂದಿಯೇ! ಹಾಗಂತ ತಮಿಳು ಭಾಷಿಕರು ಮಾತ್ರ ಒಂದೋ ತಮಿಳಿನಲ್ಲಿ ಮಾತಾಡೋರು ಇಲ್ಲ ಅಂದರೆ ಹರುಕು ಮುರುಕು ಆಂಗ್ಲ ಭಾಷೆಯಲ್ಲಿ. ಅದ್ಯಾಕೆ ಆಂಗ್ಲ ಭಾಷೆಯನ್ನು ಅಪ್ಪಿಕೊಂಡವರು ಹಿಂದಿಯನ್ನು ಒಪ್ಪಿಕೊಳ್ಳೋದಿಲ್ಲವೋ ನಾ ಕಾಣೆ. ಅಲ್ಲಿ ಇನ್ನೊಬ್ಬ ಸಹೋದ್ಯೋಗಿ ತಮಿಳು ಭಾಷಿಕನಾಗಿದ್ದ. ಒಂದು ಸಲವಂತೂ ಅವನು ನನಗೆ ಫೋನ್ ಮಾಡಿ ತಮಿಳಿನಲ್ಲಿಯೇ ನನ್ನ ಜೊತೆಗೆ ಹರಟಲು ಶುರು ಮಾಡಿದ. ಹಲವು ಕ್ಷಣಗಳು ಕಳೆದ ಬಳಿಕ ಸಾರೀ ಸಾರಿs ನಿನಗೆ ತಮಿಳು ಬರೋದಿಲ್ಲ ಅಂತ ಮರೆತೇಬಿಟ್ಟಿದ್ದೆ.. ಅಂತ ಹೇಳಿ ಆಂಗ್ಲ ಭಾಷೆಯಲ್ಲಿ ಮಾತಾಡಲು ತೊಡಗಿದ್ದ. ತಮಿಳರ ಭಾಷೆ ಕಲಿಸುವ ಈ ವಿಧಾನದ ಬಗ್ಗೆ ಅವತ್ತು ನಿಜವಾಗಿಯೂ ತಲೆದೂಗಿದ್ದೆ!
ಹರೀಂದರ್ ನಮ್ಮ ಬಾಸ್ ವೆಂಕಟ್ ಬಗ್ಗೆ ತಕರಾರು ಹೇಳಿದ. ಎಷ್ಟು ಕೆಲಸ ಮಾಡಿದರೂ ಅವನು ಬೈಯುತ್ತಾನೆ. ಅವನಿಗೆ ಕೂಡ ಎಲ್ಲರೂ ಸೇರಿ ಸಮಾಧಾನ ಮಾಡಿದೆವು. ಜೀವನವೆಂದರೆ ಬರಿ ಅವರಿವರಿಗೆ ಬೈಯೋದು, ಸಮಾಧಾನ ಮಾಡೋದು ಇದೆ ಆಯ್ತಲ್ಲ ಅನ್ನುತ್ತ ಸ್ವಲ್ಪ ಕೆಲಸವನ್ನಾದರೂ ಮಾಡೋಣ ಅಂತ ಡೆಸ್ಕ್ ಬಳಿಗೆ ಹೋಗಿ ಕೂತೆ. ಹಲವು ದಿನಗಳಿಂದ ಊರಿನಲ್ಲಿ ಇರಲಿಲ್ಲವಾದ್ದರಿಂದ ಸಾವಿರಗಟ್ಟಲೆ ಇಮೇಲ್‌ಗಳು ಜಮಾಯಿಸಿದ್ದವು; ಎಲ್ಲವನ್ನೂ ನೋಡುತ್ತಾ ಕೂಡುವುದೇ ಅವತ್ತಿನ ಕೆಲಸವೇನೋ ಅನ್ನಿಸುವಷ್ಟು! ಅಂತೂ ಇಂತೂ ಹೇಗೋ ಒಂದಿಷ್ಟು ಕೆಲಸಗಳನ್ನು ಪೂರೈಸಿ ಸಂಜೆ ನಾಲ್ಕು ಗಂಟೆಗೆ ಮರಳಿ ಗೂಡಿಗೆ ಹೊರಡಲು ಅನುವಾಗಿದ್ದೆ. ಅಷ್ಟೊತ್ತಿಗೆ ಜೋರಾಗಿ ಸೈರನ್ ಕೂಗಲು ತೊಡಗಿತ್ತು.
ಒಮಾಹಾದಲ್ಲಿ ಸುಂಟರಗಾಳಿ / tornado ತುಂಬಾ ಮಾಮೂಲಿ. ಆದರೆ ನನಗೆ ಹೊಸತು! ಅದು ಬಂದರೆ ಎಲ್ಲರೂ ಸುರಕ್ಷಿತ ಸ್ಥಳಕ್ಕೆ ಹೋಗಿ ಸೇರಬೇಕು. ನಮ್ಮ ಆಫೀಸ್ ಕಟ್ಟಡದಲ್ಲಿಯೇ ಒಂದು ಕಡೆ ಸುರಕ್ಷಿತ ಸ್ಥಳ ಅಂತ ನಿಗದಿ ಮಾಡಿದ್ದರು. ಎಲ್ಲರೂ ಅಲ್ಲಿಯೇ ಸೇರಿದೆವು. ಅಲ್ಲಿ ಸುಂಟರಗಾಳಿ ಭೂಮಿಯನ್ನು ಸ್ಪರ್ಶಿಸಿದರೆ ತುಂಬಾ ನಷ್ಟವನ್ನು ಉಂಟುಮಾಡುತ್ತಂತೆ. ಸಧ್ಯ ಅಲ್ಲಿ ಇದ್ದ ನಮ್ಮ ದೇಸಿಗಳು ತಾವು ಅಲ್ಲಿಗೆ ಬಂದ ಮೇಲೆ ಇನ್ನೂ ಅಂತಹ ಭಯಂಕರ tornado ನೋಡಿಲ್ಲ ಅಂತ ಹೇಳಿದಾಗ ಸ್ವಲ್ಪ ಸಮಾಧಾನ ಆಯಿತಾದರೂ ಅವತ್ತೇ ಅಂತಹ ಒಂದು ಸುಂಟರಗಾಳಿ ಬಂದುಬಿಟ್ಟರೆ ಎಂಬ ಭಯ ಕೂಡ ಅವರಿಸಿತು. ಕೂಡಲೇ ಆಶಾ ಹಾಗೂ ಪರಿಧಿ ಮನೆಯಲ್ಲಿ ಇದ್ದಾರೋ ಅಥವಾ ಶಾಲೆಗೆ ಅವಳನ್ನು ಕರೆತರಲು ಹೋಗಿದ್ದಾಳೋ ಎಂಬ ಯೋಚನೆ ಬಂದು ಆತಂಕ ಉಂಟಾಯಿತು. ಆಶಾಳಿಗೆ ಕರೆ ಮಾಡಿದೆ. ಅವಳು ಫೋನ್ ಎತ್ತಲಿಲ್ಲ.. ನನಗೆ ಇನ್ನೂ ಭಯವಾಯ್ತು.. ಸುಂಟರ ಗಾಳಿ ಅಲ್ಲಿಂದ ಪೂರ್ತಿ ಕಾಲ್ತೆಗೆಯುವವರೆಗೂ ಹೊರಗಡೆ ಹೂಗುವ ಹಾಗೂ ಇಲ್ಲ. ಮತ್ತೆ ಮತ್ತೆ ಅವಳಿಗೆ ಕರೆ ಮಾಡಿದೆ. ಆ ಕಡೆಯಿಂದ ಉತ್ತರವಿಲ್ಲ…
(ಮುಂದುವರಿಯುವುದು…)
(ಹಿಂದಿನ ಕಂತು:ಅಣ್ಣನಿಗೆ ಗೊತ್ತಿಲ್ಲದ ದೊಡ್ಡಣ್ಣ ಸಿಕ್ಕಿದರು!)
ಗುರುಪ್ರಸಾದ ಕುರ್ತಕೋಟಿ ಇಪ್ಪತ್ತು ವರ್ಷಗಳ ಕಾಲ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸಿ ಕೃಷಿಗಿಳಿದ ಉತ್ಸಾಹಿ ರೈತರು. “ಬೆಳೆಸಿರಿ” ಎಂಬ ಸಂಸ್ಥೆಯನ್ನು ಹುಟ್ಟುಹಾಕಿದ್ದಾರೆ. “ಕೇಶಕ್ಷಾಮ” (ಹಾಸ್ಯ ಬರಹಗಳ ಸಂಕಲನ), ಗ್ರಾಮ “ಡ್ರಾಮಾಯಣ” ಸೇರಿ ಇವರ ನಾಲ್ಕು ಕೃತಿಗಳು ಪ್ರಕಟಗೊಂಡಿವೆ.