ಈಗ ಕೆಂಡಸಂಪಿಗೆಯಲ್ಲಿ ದಿನಕ್ಕೊಂದು ಕವಿತೆ ಕಂಗೊಳಿಸುತ್ತಿದೆ. ಕನ್ನಡದ ತರತರದ ಕವಿತೆಗಳನ್ನು ಪ್ರತಿನಿತ್ಯ ನಿಮ್ಮ ಕಣ್ಣೆದುರಿಗೆ ತರುವುದು ನಮ್ಮ ಆಶಯ. ಪಂಥ, ಪ್ರಾಕಾರಗಳ ಹಂಗಿಲ್ಲದೆ ಚೆಂದವಿರುವ ಕವಿತೆಯೊಂದು ಪ್ರತಿನಿತ್ಯ ನಿಮ್ಮ ಬಳಿ ಬರುತ್ತಿದೆ. ಕನ್ನಡದ ಕವಿತೆಗಳ ಜೊತೆಗೆ ಇತರ ಭಾಷೆಗಳಿಂದ ಅನುವಾದಗೊಳ್ಳುವ ಕವಿತೆಗಳೂ ಇಲ್ಲಿರುತ್ತವೆ. ಕೆಂಡಸಂಪಿಗೆ ಪರದೆಯ ಎಡ ತುದಿಯಲ್ಲಿ ದಿನದ ಕವಿತೆ ವಿಭಾಗದಲ್ಲಿ ನೀವು ಈ ಕವಿತೆಗಳನ್ನು ಓದಬಹುದು. ಕವಿಗಳು, ಕವಿತೆಗಳನ್ನು ಇಷ್ಟಪಟ್ಟು ಅನುವಾದಿಸಿದವರು ತಮ್ಮ ಬರಹಗಳನ್ನು ಇ-ಮೇಲ್ ಮೂಲಕ ನಮಗೆ ಕಳುಹಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಹಾಗೂ ಸಣ್ಣ ಪರಿಚಯವೂ ಇರಲಿ. ಇಂದು ಬಿಲ್ಕಿಸ್ ಝುಫೀರುಲ್ ಹಸನ್ ರ “suicide” ಕವಿತೆಯನ್ನು ಬಾಗೇಶ್ರೀ ಅನುವಾದಿಸಿದ್ದಾರೆ .
ಶ್ರೇಷ್ಠ ಮಾರ್ಗ
ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೆ ಹಲವು ಹಾದಿಗಳುಂಟು.
ಆಯ್ಕೆ ಸಂಪೂರ್ಣ ಅವಳದ್ದೇ.
ವಿಷ ಕುಡಿಯಬಹುದು.
ಸೀಮೆಎಣ್ಣೆ ಸುರಿದುಕೊಂಡು ಸುಟ್ಟುಕೊಳ್ಳಬಹುದು.
ಏಳನೆ ಮಹಡಿಯಿಂದ ಕೆಳಗೆ ಜಿಗಿಯಬಹುದು.
ಓಡುವ ರೈಲಿನ ಮುಂದೆ ತಣ್ಣನೆ ಮಲಗಬಹುದು.
ಫ್ಯಾನಿಗೆ ಹಗ್ಗ ಬಿಗಿದು ನೇಣು ಹಾಕಿಕೊಳ್ಳಬಹುದು.
ಸುಮ್ಮನೆ ಸಮುದ್ರಕ್ಕೆ ಹಾರಿಬಿಡಬಹುದು.
ಸತ್ಯವಾಗಿಯೂ ಹೇಳ್ತೀನಿ, ಸಾಯುವ ಹಾದಿಗಳಿಗೇನೂ ಬರವಿಲ್ಲ.
ಒಂದಕ್ಕಿಂದ ಒಂದು ಭಯಾನಕ, ತುಂಬ ಸುಲಭ.
ಆದರೆ ಎಲ್ಲಕ್ಕಿಂತ ಭಯಾನಕವಾದದ್ದು ಬದುಕಿದ್ದೂ ಸಾಯೋದು.
ಸತ್ತಿರೋದು ಯಾರಿಗೂ ಗೊತ್ತು ಕೂಡಾ ಆಗೋದಿಲ್ಲ.
ಇದೇನೂ ಅವಳೇ ಹೊಸತಾಗಿ ಕಂಡುಹಿಡಿದ ಹಾದಿ ಅಲ್ಲ ಬಿಡಿ.
ಹಿಂದೆ ಸಾವಿರಾರು ಜನ ಪ್ರಯತ್ನಪಟ್ಟು ಸಫಲರೂ ಆಗಿದ್ದಾರೆ.
ಇದು ಎಲ್ಲಕ್ಕಿಂತ ಶ್ರೇಷ್ಠ ಮಾರ್ಗ ಅನ್ನೋದು ಯಾಕೆ ಗೊತ್ತಾ?
ಏನೋ ಎಡವಟ್ಟಾಗಿ ಬಚಾವಾಗಿಬಿಟ್ಟರೆ ಏನು ಗತಿಯಪ್ಪ ಎಂಬ
ಭಯ ಈ ಹಾದಿಯಲ್ಲಿ ಸುಳಿಯೋದೇ ಇಲ್ಲ!