ವೈಶಾಖ ಮಾಸದ ಬೇಸಿಗೆಯ ಬಿರುಬಿಸಿಲಿನ ತಾಪಕ್ಕೆ ನೆಲ ಕಾದು ಕೆಂಪಾಗಿ, ಉತ್ತು ಬಿಟ್ಟಿದ್ದ ಹೊಲ ಗದ್ದೆಗಳ ಮಣ್ಣು ದೂಳು ದೂಳಾಗಿರುವಾಗ ಆಕಾಶದಲ್ಲಿ ಮೋಡ ಮಂದಯಿಸಿ ಕಪ್ಪು ಕಪ್ಪಾಗಿದೆ…. ಆಗ ತಂಗಾಳಿಯ ತೆರೆಯೊಂದು ದೂರದಿಂದ ಬಂದು ಬಡಿದಾಗ ನೆಲದೊಡಲಿಂದ ಕಂಪೊಂದು ಹೊಮ್ಮಿ ಬರುವುದರ ಜೊತೆಗೆ ಕವಿಯ ಮನಸೂ ಅರಳುತ್ತದೆ. ಈ ಕಾರಣವನ್ನು ಕೆಲವರು `ಕಾವ್ಯ ಎನ್ನುವುದು ಕವಿಯ ಕರ್ಮ’ ಎಂದು ವಾಖ್ಯಾನಿಸಿರುವುದು ಅತಿಶಯೋಕ್ತಿಯೇನಲ್ಲ.
ವೈಶಾಖ ಮಾಸದ ಕುರಿತು ಕವಿಗಳ ಮನಸ್ಸು ಹೇಗೆಲ್ಲ ಕ್ರಿಯಾಶೀಲವಾಗಿ ಚಿಂತಿಸುತ್ತದೆಂಬುದರ ಬಗ್ಗೆ ಮಂಡಲಗಿರಿ ಪ್ರಸನ್ನ ಬರಹ
ವೈಶಾಖ ಮಾಸವೆ ಬೇಗುದಿಯ ಕಾಲ, ವಿಪರೀತ ಬಿಸಿಲಿನ ತಾಪ. ಮನಸಿನಲಿ ಏನೋ ಒಂದು ರೀತಿಯ ಅಸಹನೀಯ ತಳಮಳ…. ಆದರೆ ಮುಂಬರುವ ಮುಂಗಾರಿನ ಮಳೆ ನೆನಪಾದಾಗ ತಾಪಗಳೆಲ್ಲ ಒಂದು ತಹಬದಿಗೆ ಬರುವ ರೀತಿಯಲ್ಲಿ ಸಾಮಾನ್ಯ ಮನುಷ್ಯನ ಯೋಚನೆಯೂ ಕೂಡ. ಅದರಲ್ಲೂ ಚಿಂತನಶೀಲ ಕವಿಯ ಮನಸಂತೂ ಚೈತ್ರವೇ ಇರಲಿ, ವೈಶಾಖವೆ ಇರಲಿ, ಸುಮ್ಮನಿರದ ಚಂಚಲತೆಯಲ್ಲಿ, ಭಾವುಕತೆಗೆ ಒಳಗಾಗಿ…. ಹೃದಯದೊಳಗೆ ಭಾವತೀವ್ರತೆಯ ಅಲೆಗಳ ಧಾವಂತದ ಒತ್ತಡ ಮೂಡುವುದು ಸಹಜವೆ.
ಬಹುಷಃ ಸಾಮಾನ್ಯರು ಈ ವೈಶಾಖದ ಬಿರು ಬಿಸಿಲು, ತಳಮಳ, ಬೇಗುದಿ, ಅಸಮಾಧಾನ, ಮನಸಿನ ತಾಪಗಳನ್ನಷ್ಟೇ ಹೊರಹಾಕಿದರೆ, ಕವಿ ಮನಸಿಗೆ ಈ ಎಲ್ಲವೂ ವಿಭಿನ್ನವಾಗಿ ಆತನ ಕವಿ ಹೃದಯಕ್ಕೆ ಕಾಣುತ್ತದೆ, ಕಾಡುತ್ತದೆ. ಅದಕ್ಕೆ ಇರಬೇಕು `ರವಿ ಕಾಣದ್ದನ್ನು ಕವಿ ಕಂಡ…..’ ಎನ್ನುವುದು….. ಕವಿ ಮನಸಿಗೆ ಚೈತ್ರದ ಚಿಗುರು, ವೈಶಾಖದ ಬಿಸಿಲು, ಆಷಾಢದ ಗಾಳಿ, ಶ್ರಾವಣದ ಮಳೆ, ಮಾರ್ಗಶಿರದ ಮಂಜು ಎಲ್ಲವೂ ಹೊಸ ಹೊಳಹಿನಲ್ಲಿ, ವಿಭಿನ್ನವಾಗಿ, ವಿಶಿಷ್ಟವಾಗಿ, ವೈಚಾರಿಕವಾಗಿ, ಮೂಡುವ ಕಾವ್ಯಾಸಕ್ತಿಯ ವಿಷಯವೇ ಆಗಿದೆ.
ಚಾಂದ್ರಮಾನ ಮಾಸಗಳಲ್ಲಿ ಚೈತ್ರದ ನಂತರದ ಎರಡನೆಯ ಮಾಸವೇ ವೈಶಾಖ, ವರ್ಷದ ಒಂದು ಋತುವಿಲ್ಲಿ ಎರಡೆರಡು ತಿಂಗಳುಗಳ ಕಾಲಾವಧಿಯ ಸಖ್ಯವಾಗಿರುವುದು, ಅಂದರೆ, ವಸಂತ ಋತುವಿನಲ್ಲಿ (ಚೈತ್ರ, ವೈಶಾಖ ಮಾಸಗಳು) ಸೇರಿಕೊಂಡಿರುವುದು ಪ್ರಕೃತಿಯ ಸಮ್ಮಿಲನದ ಸಂಕೇತ ಮಾತ್ರವಲ್ಲ ಹೊಸದೊಂದು ಹಾತೊರೆಯುವಿಕೆಗೆ ಇದು ಪ್ರೇರಕ ಎಂದು ಕವಿಗಂತೂ ಅನ್ನಿಸದೆ ಇರದು.
ವೈಶಾಖ ಶುಕ್ಲ ಪೂರ್ಣಿಮೆ ಬುದ್ಧನು ಭೂಮಿಗೆ ಅವತರಿಸಿದ ದಿನವೂ ಎಂಬುದನ್ನು ಇತಿಹಾಸವೂ ಹೇಳುತ್ತದೆ. ಮಾತ್ರವಲ್ಲ, ಕನ್ನಡ ಸಾಹಿತ್ಯದಲ್ಲಿ ವೈಶಾಖ ಮಾಸದ ಜೊತೆಜೊತೆಗೆ ಪ್ರೇರಣೆ ಎನಿಸಿರುವ ಈ ಬುದ್ಧನ ಕುರಿತು ಬಹುತೇಕ ಕವಿಗಳು ತಮ್ಮ ಸಾಹಿತ್ಯ ಸುಧೆ ಹರಿಸಿದ್ದಾರೆ. ಕನ್ನಡದಲ್ಲಿ ನೇರವಾಗಿ ವೈಶಾಖ ಮಾಸ ಕುರಿತು ಪ್ರಸ್ತಾಪ ಇರಲಿಕ್ಕಿಲ್ಲ. ಆದರೆ ನಿಸರ್ಗದ ಶಕ್ತಿಯಾಗಿರುವ ಈ ಬಿಸಿಲು, ಬೇಗುದಿ, ತಳಮಳ, ಸಂಕಟ, ಕುರಿತು ಕನ್ನಡ ಕಾವ್ಯದಲ್ಲಿ ಕೊರತೆ ಇಲ್ಲವೇನೋ ಎನಿಸುತ್ತದೆ. ಆ ಕಾವ್ಯ ಕಟ್ಟುವ ಸೊಬಗಿನ ನಿಟ್ಟಿನಲ್ಲಿ ನೋಡುವ ಒಂದು ಪುಟ್ಟ ಪ್ರಯತ್ನವೆ ಈ ʻಕವಿ ಕಂಡ ವೈಶಾಖʼ
ಸದ್ಯದ ಕಾಲಘಟ್ಟದಲ್ಲಿ, ಕಳೆದ ವರುಷದಂತೆ ಈ ವರುಷವೂ ವೈಶಾಖದ ತಳಮಳದ ಜೊತೆಗೆ ದೇಶದೆಲ್ಲೆಡೆ ಕರೋನಾ ಮಹಾಮಾರಿಯ ಆರ್ಭಟದ ಎರಡನೆಯ ಅಲೆಯ ಸುಳಿಯಲ್ಲಿ ಸಿಲುಕಿರುವ ನಾವು ಮತ್ತೊಮ್ಮೆ ನಾವಿರುವ ಜಾಗದಿಂದಲೆ ಸಾಹಿತ್ಯ, ಸಂಸ್ಕೃತಿಯಂತಹ ಕ್ರಿಯಾಶೀಲ ಚಟುವಟಿಕೆಗಳ ಬಗ್ಗೆ ಯೋಚನೆ ಮಾಡುವ ಅನಿವಾರ್ಯತೆ ಒದಗಿ ಬಂದಿದೆ. ಇದು ಸಧ್ಯದ ಅಗತ್ಯವೂ ಮತ್ತು ಅನಿವಾರ್ಯವೂ ಕೂಡ. ಮನುಷ್ಯನ ಸಾವಿರ ತಳಮಳಗಳ ಬದುಕಿಗೆ ಸವಾಲಾಗಿ ನಿಂತಿರುವ ಕರೋನಾದ ಈ ಅಬ್ಬರದಲೂ ನಾವು ಎದೆಗುಂದದೆ ಈ ವೈಶಾಖದ ಬಿಸಿಲಿಗೆ ಹೊಸ ಚಿಗುರಿನಂತೆ ಚಿಗಿಯಬೇಕಿದೆ, ಮಾಮರದ ಕೋಗಿಲೆಯಂತೆ ಹಾಡಬೇಕಿದೆ.
ವೈಶಾಖ ಮಾಸದ ಬೇಸಿಗೆಯ ಬಿರುಬಿಸಿಲಿನ ತಾಪಕ್ಕೆ ನೆಲ ಕಾದು ಕೆಂಪಾಗಿ, ಉತ್ತು ಬಿಟ್ಟಿದ್ದ ಹೊಲ ಗದ್ದೆಗಳ ಮಣ್ಣು ಧೂಳು ಧೂಳಾಗಿರುವಾಗ ಆಕಾಶದಲ್ಲಿ ಮೋಡ ಮಂದಯಿಸಿ ಕಪ್ಪು ಕಪ್ಪಾಗಿದೆ…. ಆಗ ತಂಗಾಳಿಯ ತೆರೆಯೊಂದು ದೂರದಿಂದ ಬಂದು ಬಡಿದಾಗ ನೆಲದೊಡಲಿಂದ ಕಂಪೊಂದು ಹೊಮ್ಮಿ ಬರುವುದರ ಜೊತೆಗೆ ಕವಿಯ ಮನಸೂ ಅರಳುತ್ತದೆ. ಈ ಕಾರಣವನ್ನು ಕೆಲವರು `ಕಾವ್ಯ ಎನ್ನುವುದು ಕವಿಯ ಕರ್ಮ’ ಎಂದು ವಾಖ್ಯಾನಿಸಿರುವುದು ಅತಿಶಯೋಕ್ತಿಯೇನಲ್ಲ. ಕವಿತೆ ಎನ್ನುವುದು ಮೂಲತಃ ಶಬ್ದಾರ್ಥಗಳ ಒಂದು ವಿಶಿಷ್ಟ ರೀತಿಯ ಕಟ್ಟಡ…. ಅದು ಬೆಂದೊಡಲಿನಲ್ಲೂ, ಬೇಗುದಿಯ ತಳಮಳದಲ್ಲೂ ಎದ್ದು ನಿಲ್ಲಬಲ್ಲದು, ಅರಳಬಲ್ಲದು… ಇದನ್ನೆ ನಮ್ಮ ಹೆಮ್ಮಯ ಕವಿ ಜಿ.ಎಸ್. ಶಿವರುದ್ರಪ್ಪನವರು ಎಷ್ಟು ಸೊಗಸಾಗಿ ಚಿತ್ರಿಸಿದ್ದಾರೆ ಎಂಬುದನ್ನು ಈ ಕವಿತೆಯಲ್ಲಿ ಕಾಣಬಹುದು:
`ಪ್ರಕೃತಿಯಂತೆ ಕವಿಯ ಮನಸು, ವಿಪುಲ ರೂಪ ಧಾರಿಣಿ
ಬಾನಿನಂತೆ ಕವಿಯ ಮನಸು, ಭಾವ ಮೇಘ ಚಾರಿಣಿ
ಬೆಂದ ಬುವಿಯ ಹಸುರಿನೆದೆಗೆ, ರುಚಿತ ವರ್ಷ ರೂಪಿಣಿ’…. ಎಂದಿರುವುದು ಸಹಜವಾಗೆ ಇದೆ.
ನಮ್ಮ ಜನಪದರು…. ಇಂತಹ ವೈಶಾಖದ ಬಿಸಿಲನ್ನೂ ತಂಪಾಗಿ ಕಂಡ ಪರಿ ನೋಡಿದರೆ ಅವರ ಜೀವನೋತ್ಸಾಹದ ಅರಿವಾಗುತ್ತದೆ.
`ಬ್ಯಾಸಿಗಿ ದಿವಸಕ್ಕ ಬೇವಿನ ಗಿಡ ತಂಪ / ಭೀಮ ರತಿಯೆಂಬ ಹೊಳೆತಂಪ
ಭೀಮ ರತಿಯೆಂಬ ಹೊಳೆತಂಪ / ಹಡೆದವ್ವ ನೀ ತಂಪ ನನ್ನ ತವರೀಗೆ’….. ಎಂದು ಹಾಡಿ ಬೇಸಿಗೆಯನ್ನೂ ಜೀವನದಲ್ಲಿ ಬೇವಿನ ಗಿಡ, ಹೊಳೆ, ತವರಿನ ರೂಪಕಗಳಲ್ಲಿ ಕಂಡರು.
ಕನ್ನಡ ಕಣ್ವ ಬಿ.ಎಂ.ಶ್ರೀಕಂಠಯ್ಯನವರು ಇಂಗ್ಲೀಷಿನಿಂದ ನ್ಯಾಶ್ ಕವಿಯ ʻಸ್ಪ್ರಿಂಗ್ʼ ಅನ್ನುವ ಒಂದು ಕವಿತೆಯನ್ನು ಕನ್ನಡಕ್ಕೆ ಭಾವಾನುವಾದಿಸಿ, ಇಂಗ್ಲೀಷ್ ಗೀತೆಗಳ ಸಂಕಲನದಲ್ಲಿ ಪ್ರಕಟಿಸಿದರು. ಅದರಲ್ಲಿನ `ವಸಂತ’ ಎನ್ನುವ ಕವಿತೆಯಲ್ಲಿ ಚೈತ್ರ, ವೈಶಾಖ ಹೊತ್ತ ವಸಂತ ಋತುವಿನ ಆಗಮನ ಕುರಿತು ಸೊಗಸಾಗಿ ವರ್ಣಿಸಿದ್ದಾರೆ.
`ವಸಂತ ಬಂದ ಋತುಗಳ ರಾಜ ತಾ ಬಂದ
ಚಿಗುರನು ತಂದ ಹೆಣ್ಗಳ ಕುಣಿಸುತ ನಿಂದ
ಚಳಿಯನು ಕೊಂದ ಹಕ್ಕಿಗಳುಲಿಗಳೆ ಚೆಂದ’ …. ಎಂದು ಚೈತ್ರ ವೈಶಾಖವನ್ನೊಳಗೊಂಡ ವಸಂತ ಮಾಸವನ್ನು ವಿಶಿಷ್ಟ ಸೊಬಗಿನಿಂದ ಈ ಕವಿತೆಯಲ್ಲಿ ಕಟ್ಟಿಕೊಟ್ಟಿದ್ದಾರೆ.
ಬಿಸಿಲೆ ಬೆಳದಿಂಗಳಾಗಿರುವ ವೈಶಾಖ ಮಾಸದಲ್ಲಿ ಮದುವೆ, ಮುಂಜಿ, ಜಾತ್ರೆ, ಮತ್ತಿತರ ಸಂಭ್ರಮಾಚರಣೆಯ ಸಡಗರವೋ ಸಡಗರ…. ನಮ್ಮ ಗ್ರಾಮೀಣ ಪ್ರದೇಶದ ಜನರಂತು ವೈಶಾಖವನ್ನ ಎಂದೂ ಬೇಸರದಿಂದ ನೋಡಿದ ಉದಾಹರಣೆಗಳಿಲ್ಲ. ರೈತಾಪಿ ಜನರ ಬದುಕಿನಲ್ಲಿ ಹಲವು ರೀತಿಯಲ್ಲಿ ಉಪಯುಕ್ತವಾಗಿ ಜೀವನದ ಸೊಬಗನ್ನ ಸೃಷ್ಟಿಸಿರುವ ಈ ವೈಶಾಖ ಮಾಸವನ್ನ ನಮ್ಮ ರೈತ ವರ್ಗ ಎಂದೂ ಮರೆಯಲು ಸಾಧ್ಯವಿಲ್ಲ.
ಆದರೆ ಕವಿ ಹಾಗೂ ಕಾವ್ಯದ ವಿಚಾರಕ್ಕೆ ಬಂದಾಗ, ಕವಿಗೆ ಚೈತ್ರ ಮಾಸವೇ ಇರಲಿ, ವೈಶಾಖ ಮಾಸವೆ ಇರಲಿ, ರಸಾನುಭವ ರೂಪಿಸಬೇಕೆಂಬ ಎಲ್ಲ ಅನುಭವವೂ ಆತನ ಕಾವ್ಯವಸ್ತುವೆ. ಎಲ್ಲ ಕಲೋಪಾಸಕರ ಕೃತಿಯಿಂದ ಸಿಗಬಹುದಾದದ್ದು ಒಂದೆ, ಕಲೋಪಾಸನೆಯ ಕಾವ್ಯ ರಸ, ಅದರ ರಸಾನುಭವ… ಅದು ಬೇಸಗೆ, ಚಳಿ, ಮಳೆ ಯಾವುದೆ ಕಾಲವಿರಲಿ ಕವಿ ಮನಸ್ಸು ಅದನ್ನು ನೋಡುವ ಪರಿಯೆ ವಿಭಿನ್ನ…..
ಮಂಕುತಿಮ್ಮನ ಕಗ್ಗದಂತಹ ಶ್ರೇಷ್ಟ ಕಾವ್ಯ ನೀಡಿದ ಕವಿ ಡಿ.ವಿ.ಗುಂಡಪ್ಪನವರು ತಮ್ಮ ಮತ್ತೊಂದು ಶ್ರೇಷ್ಠ ಕಾವ್ಯ `ಮರುಳ ಮುನಿಯನ ಕಗ್ಗ’ದಲ್ಲಿ ಅವರು ನಿಸರ್ಗವನ್ನು ನೋಡುವು ಪರಿಯೆ ಕುತೂಹಲವಾಗಿದೆ. ಡಿ.ವಿ.ಜಿ. ಯವರು ಪ್ರಕೃತಿಯನು ಮೊದಲು ಅರ್ಥಯಿಸಿಕೊ, ಅದರಿಂದ ಹೊಸ ಅರಿವನು ಗಳಿಸು ಎನ್ನುವ ಮಾತನ್ನ ಬಹಳ ಮಾರ್ಮಿಕವಾಗಿ ವರ್ಣಿಸಿದ್ದಾರೆ, ಡಿವಿಜಿ ಅವರ ಸಾಲುಗಳನ್ನೇ ಓದುವುದಾದರೆ:
`ಪ್ರಕೃತಿಯನು ತಿಳಿ; ತಿಳಿವಿನಿಂ ಪ್ರಕೃತಿಯನು ದಾಟು
ವಿಕೃತಿಗೆಯ್ಸುವ ಜಗದಿ ಸಂಸ್ಕೃತಿಯ ಗಳಿಸು…..’ ಎನ್ನುವ ತತ್ವಜ್ಞಾನದ ಇಂತಹ ಸಾಲುಗಳು ಸವಿದಷ್ಟೂ ಸೊಬಗು ನೀಡುತ್ತವೆ.
ಕನ್ನಡಕ್ಕೆ ಮುಷ್ಟಿಯಷ್ಟು ಉತ್ಕೃಷ್ಟ ಕಾವ್ಯ ಕೊಟ್ಟವರು ವಿ.ಸೀತಾರಾಮಯ್ಯನವರು. ಅವರು ಬೇಸಗೆ ದಿನ ಆಗಸವನ್ನು ನೋಡುವ ನೋಟವನ್ನ ತುಂಬಾ ಅದ್ಭುತವಾಗಿ ವರ್ಣಿಸಿದ್ದಾರೆ:
`ಅಚ್ಚರಿಯ ಮೋಹದಲಿ ಆಗಸವ ನೋಡುತ್ತ ………’ ಎನ್ನುವ ಮೂಲಕ ಆಗಸವನ್ನ ಬಹುಷಃ ಮಳೆಯ ನಿರೀಕ್ಷೆಯನ್ನ ವಿಭಿನ್ನವಾಗಿ, ಉದಾತ್ತವಾಗಿ, ತೆರೆದ ಮನದಿಂದ ನೋಡುತ್ತಾರೆ.
ರಸಋಷಿ ಕುವೆಂಪು ಅವರ ಕಾವ್ಯ ಮನೋಧರ್ಮ ನಮಗೆಲ್ಲ ಗೊತ್ತೆ ಇದೆ. ವೈಶಾಖದ ಬಿಸಿಲು ಹೇಗಿರುತ್ತದೆಂದು ಬಣ್ಣಿಸುತ್ತಾ ಬಿಸಿಲು ಮತ್ತು ಭೂಮಿಯನ್ನೂ ರೇಗಿಸುವ ಧಾಟಿಯಲ್ಲಿ ಈ ಸಾಲು ಬರೆಯುತ್ತಾರೆ:
`ಬೇಸಗೆಯ ಬಿಸಿಲು ಸುಡುತಿಹುದು ಸುಡಸುಡನೆ / ಮೂರ್ಚೆ ಹೋಗಿದೆ ಭೂಮಿ ನಡುಗಿ ಗಡಗಡನೆ’
ಕವಿ ಜಿ.ಎಸ್.ಎಸ್. ಅವರ ಮತ್ತೊಂದು ಕವಿತೆ `ಮಳೆಯ ಮೋಡಕೆ’ ಎನ್ನುವ ಒಂದು ಕವಿತೆ ಈ ವೈಶಾಖದ ಬೇಸಗೆಯ ಸಂದರ್ಭಕ್ಕೆ ರಚಿಸಿದಂತಿದೆ. ಈ ಕವಿತೆಯಲ್ಲಿ ವೈಶಾಖ ಮಾಸದ ಎಲ್ಲ ಸೊಬಗಿನ ಜೊತೆಗೆ, ತಳಮಳಗಳನ್ನ ಅನುಭವಿಸುವ ಸಾಮಾನ್ಯನೊಬ್ಬನ ಮಾನಸಿಕ ತುಮುಲಗಳನ್ನು ಬಿಸಿಲಿಗೆ ಮೋಡಕ್ಕೆ, ಗುಡುಗು, ಮಿಂಚಿಗೆ ಕೋಪಿಸಿಕೊಂಡು ಕೇಳುವ ಪ್ರಶ್ನೆಗಳು ಇಲ್ಲಿ ವ್ಯಕ್ತವಾಗಿವೆ.
`ಬಿರುಬಿಸಿಲ ಬೇಗೆಯಲಿ ಸೊರಗಿ ಸೊಪ್ಪಾಗಿರುವ / ತಿರೆಯ ಹಸುರಿನ ಕರೆಯು ಕೇಳದೇನು
ಯಾವ ಕಿವುಡೋ ನಿನಗೆ ಮುಗಿಲನ್ನೆ ತುಂಬಿರುವೆ / ಬರಿಯ ನಟನೆಯು ನಿನಗೆ ಸಾಜವೇನು?
ಹಗಲೆಲ್ಲ ಧಗೆಯಲ್ಲಿ ಬೆಂದ ಮನ, ಸಂಜೆಯಲಿ / ಒಂದುಗೂಡುತ ನಭವ ತುಂಬಿ ನಿಂದು
ಮಿಂಚುಗಣ್ಣನು ಅತ್ತಇತ್ತ ಹೊರಳಿಸುತ / ಆನುರಾಗವತಿಯಾಗಿರುವ ನಿನ್ನ ಕಂಡು
ಇಂದು ಬಂದೇ ಬರುವುದಯ್ಯ ಮಳೆ / ಸುರಿಯುವುದು ಧಾರೆಯಾಗಿ
ಬಯಕೆಯ ಬಟ್ಟಲಂತಿರುವ ಕಣ್ ತೆರೆದು / ನಿಲ್ಲುವುದು ದೀನವಾಗಿ’
ಕವಿತೆ ಎನ್ನುವುದು ಮೂಲತಃ ಶಬ್ದಾರ್ಥಗಳ ಒಂದು ವಿಶಿಷ್ಟ ರೀತಿಯ ಕಟ್ಟಡ…. ಅದು ಬೆಂದೊಡಲಿನಲ್ಲೂ, ಬೇಗುದಿಯ ತಳಮಳದಲ್ಲೂ ಎದ್ದು ನಿಲ್ಲಬಲ್ಲದು, ಅರಳಬಲ್ಲದು…
ಬಳ್ಳಾರಿಯ ಹಾಸ್ಯ ಬರಹಗಾರ ಬೀಚಿಯವರು `ನಮ್ಮೂರಲ್ಲಿ ಬಿಸಿಲು ಮತ್ತು ಅತಿಬಿಸಿಲು ಎರಡೆ ಕಾಲ’ ಎಂದು ತಮಾಷೆ ಮಾಡುತ್ತಿದ್ದರಂತೆ. ಅದು ನಿಜವೆ. ಯಾಕೆಂದರೆ ಕಲ್ಯಾಣ ಕರ್ನಾಟಕದ ಭಾಗದ ಜನರಿಗೆ ಬಿಸಿಲೇ ಬದುಕು…. ಎನ್ನುವಷ್ಟರ ಮಟ್ಟಿಗೆ ವೈಶಾಖ ಮಾಸದ ಬಿಸಿಲು ಸಹಜವೇ ಆಗಿದ್ದು ಅಲ್ಲಿಯ ಜನಮಾನಸ ಅಂತಹ ಬಿಸಲಲ್ಲೇ ಬದುಕನ್ನು ಕಟ್ಟಿಕೊಂಡಿದೆ.
ಕವಿ, ನಾಟಕಕಾರ ಚಂದ್ರಶೇಖರ ಕಂಬಾರರರೂ `ಬೆಳ್ಳಿ ಮೀನು’ ಎನ್ನುವ ಒಂದು ಕವಿತೆಯಲ್ಲಿ ಬೇಸಗೆಯ, ವೈಶಾಖ ಕುರಿತು ಒಂದಷ್ಟು ಸುಂದರ ಸಾಲುಗಳನ್ನ ಬರೆಯುತ್ತಾರೆ.
`ಮಳೆಗಾಲ ಬಂದರೂ ಮಳೆಯಿಲ್ಲ ಶಿವಪುರಿಗೆ / ತೊಟ್ಟು ನೀರಿಲ್ಲ ಕುಡಿಯುವುದಕೆ
ಮಳೆ ಬರಲಿ ಶಿವಲಿಂಗ ಸಾವಳಗಿ ಮಠತನಕ / ಒದ್ದೆಯಲಿ ಕೈಮುಗಿದು ಬರುವೆ
ಸಿಹಿನೀರ ತರುವುದಕ ಮಾದೇವಿ ಹೊರಟಾಳು / ದೂರ ಬೆಂಗಾಡಿನ ಕೆರೆಗೆ….’
ಎನ್ನುವ ಜನಪದ ಧಾಟಿಯ ಈ ಕವಿತೆ ಗ್ರಾಮೀಣ ಜನರ ಮನದಾಳದ ಮಾತು ಆಗಿದೆ.
ಬೇಸಗೆ ಇರಲಿ, ಬಿರುಬಿಸಿಲಿರಲಿ ಮನಸು ವಿವಿಧ ಕಾರಣಗಳಿಗೆ ನಲುಗಿದಾಗ ಮನಸು ವಿಕೃತವಾಗಿ ಯೋಚಿಸಲು ಶುರುಮಾಡುತ್ತದೆ. ತಳಮಳಗಳೆಲ್ಲ ಜ್ವಾಲಾಮುಖಿಯಾಗಿ ಯಾವುದಾವುದೋ ಯೋಚನೆಯಲಿ ಏನೇನೋ ನಿರ್ಧಾರಕ್ಕೆ ಬರುತ್ತದೆ. ನಿನ್ನೆಯದನು, ಇಂದಿನದನು, ನಾಳೆಯದನು ಹೀಗೆ ಎಲ್ಲ ಕಾಲಕೂ ಮನಸು ಹರಿದು ವಿಕೋಪಕ್ಕೆ ಹೋಗಿ ಋಣಾತ್ಮಕ ಯೋಚನೆಗೆ ಇಳಿಯುತ್ತದೆ. ಮೆದುಳಿನ ಇಂತಹ ತಗಾದೆಯ ಸಂದರ್ಭ ವರ್ತಮಾನವನ್ನು ಬಿಟ್ಟು ಮುಂದಿನದನ್ನು ಯೋಚನೆಗಿಟ್ಟುಕೊಳ್ಳುತ್ತದೆ. ಬೇಸಗೆಯ ತಾಪಕೆ ನೊಂದ ಮನಸಿಗೆ ಕೈಯಾರ ಕಿಞ್ಞಣ್ಣ ರೈ ಅವರು ʻಏಕೆʼ ಅನ್ನುವ ಒಂದು ಕವಿತೆಯಲ್ಲಿ ಸಾಂತ್ವನ ಹೇಳುತ್ತಾ ಇಂತಹ ಮುರಿದ ಮನಸುಗಳ ಕುರಿತು ಸಮಾಧಾನದ ಮತ್ತು ಸಮಯೋಚಿತ ಮಾತುಗಳನ್ನು ಹೇಳುತ್ತಾರೆ.
`ನಾಳೆಯೆಂಬುದು ವಿಕೃತಿ, ಇಂದು ಬಂದಿದೆ ಪ್ರಕೃತಿ / ಪ್ರಕೃತಿಯನು ವಿಕೃತಿಯೊಳು ಮುಚ್ಚಲೇಕೆ?
ನಾಳೆ ಸುಖವಿಲ್ಲೆಂದು, ಇಂದು ಚಿಂತಿಸಬೇಡ / ಇಂದಿನೊಳು ನಾಳೆಯನು ಬೆರೆಸಲೇಕೆ?’
ಮನಸಿಗೆ ತಂಪನೆರೆವ ಈ ಸಾಲುಗಳು ಅಪ್ಯಾಯಮಾನವಾದ ಸಾಲುಗಳಾಗಿ ಕಾಣುತ್ತವಲ್ಲವೆ?
ಕವಿ ಗೋಪಾಲಕೃಷ್ಣ ಅಡಿಗರ ಒಂದು ಮಾತು ಈ ಸಂದರ್ಭದಲ್ಲಿ ನೆನಪಿಗೆ ಬರುತ್ತದೆ:
`ಚಿರಯುವತಿ ಪ್ರಕೃತಿ ಅವಳಮರ ಸೌಂದರ್ಯ ರಸ. ಪ್ರತಿಯೊಂದು ಕಾವ್ಯವೂ ಅದು ಏನನ್ನು ಸೃಷ್ಟಿಸಲು ಬಯಸುತ್ತದೋ ಅದಕ್ಕೆ ಸಹಜವಾಗೆ ರೂಪುಗೊಳ್ಳಬೇಕು’ ಎನ್ನುವ ಮಾತು ಬೇಸಗೆಯ ವೈಶಾಖಕ್ಕೂ ಅನ್ವಯಸುತ್ತದೆ. ಮನಸ್ಸಿನ ತಳಮಳಕ್ಕೂ ಅನ್ವಯಿಸುತ್ತದೆ. ಇದನ್ನೆ ಕವಿ ಎಚ್.ಎಸ್.ವೆಂಕಟೇಶಮೂರ್ತಿಯವರು:
`ಬಣ್ಣ ಬಣ್ಣದ ಸಂಜೆ ರತಿಯ ಬಯಸದು ಜೀವ / ಬಂತು ಬೇಸಗೆ ಬೇಡ ಪ್ರಿಯೆಯ ತೆಕ್ಕೆ ……’ ಎಂದು ರಸಿಕತೆಯಲ್ಲಿ ಹೇಳಿದರೆ
`ಋತುಗಳ ಏರಿಳಿತ ಕಾಳರಿಂಗಣಗುಣಿತ / ಬಿಡಿಬಿಡಿಸಿ ಬರೆದಂತೆ ಚಿತ್ರದೊಳು …..’ ಎಂದು ತಮ್ಮದೆ ಧಾಟಿಯಲ್ಲಿ ದ.ರಾ.ಬೇಂದ್ರೆಯವರು ಚಿತ್ರಿಸಿದ್ದಾರೆ. ಕವಿ ಕೆ.ವಿ.ತಿರುಮಲೇಶರು `ಶಾಪ’ ಎನ್ನುವ ಕವಿತೆಯಲ್ಲಿ:
`ಋತುಗಳು ಬರುತ್ತವೆ ಹೋಗುತ್ತವೆ / ಬಾಗಿಲು ಕಿಟಕಿ ತೆರೆಯುತ್ತವೆ ಮುಚ್ಚುತ್ತವೆ’ ಎಂದು ವೈಚಾರಿಕ ಹಿನ್ನೆಲೆಯಲ್ಲಿ ನಿಖರವಾಗಿ ನುಡಿದಿರುವುದು. ಕನ್ನಡದ ಹೆಮ್ಮೆಯ ಸಿದ್ದಯ್ಯ ಪುರಾಣಿಕ (ಕಾವ್ಯಾನಂದ)ರು ತಮ್ಮ ʻಕಲ್ಲೋಲ ಮಾಲೆʼ ಕಾವ್ಯ ಸಂಕಲನದಲ್ಲಿ ಬಿಸಿಲನ್ನ ನೋಡುವ ರೀತಿ ಅಚ್ಚರಿ ಮೂಡಿಸುತ್ತದೆ.
`ಉರಿವುದು ಅಗ್ನಿಗುಣ / ಉರಿದು ಬೆಳಕಾಗುವುದು ಜ್ಯೋತಿ ಗುಣ….’ ಇದು ತಮಸೋಮಾ ಜೋತಿರ್ಗಮಯ ಎನ್ನುವ ಮಾತಿಗೂ ಸಂವಾದಿಯಾಗದೆ. ಕಾವ್ಯಾನಂದರ ಈ ಸಾಲುಗಳು ಬಿಸಿಲು ನಮ್ಮ ಬದುಕು ಮತ್ತು ಬೆಳಕಿನ ಸಂಕೇತ ಎನ್ನುವ ಅರ್ಥದಲ್ಲಿ ವಾಖ್ಯಾನಿಸಿದಂತಿದೆ.
ಬಿಸಿಲು ನಾಡಿನ ಕವಿ, ಬೆನ್ನ ಹಿಂದಿನ ಬೆಳಕನ್ನ ಸಾಹಿತ್ಯ ಲೋಕಕ್ಕೆ ತೆರೆದಿಟ್ಟ ಕವಿ ರಾಯಚೂರಿನ ಶಾಂತರಸರು. ಕನ್ನಡ ಗಜಲ್‌ಗಳ ಪ್ರವರ್ತಕರಾಗಿ ಅವರು ನೀಡಿದ ಕೊಡುಗೆ ಅನನ್ಯ. ಶಾಂತರಸರು ತಮ್ಮ ಕಥೆ, ಕಾದಂಬರಿ, ಕಾವ್ಯದಲ್ಲಿ ಬಿಸಿಲು ನಾಡಿನ ಜನರ ನೊಂದು ಬೆಂದ ಮನಸುಗಳ ಬೇಗುದಿಯನ್ನ, ತಳಮಳಗಳನ್ನ, ತಲ್ಲಣಗಳನ್ನೇ ಹಲವು ರೀತಿಯಲ್ಲಿ ತೆರೆದಿಟ್ಟಿದ್ದಾರೆ. ತಮ್ಮ ಗಜಲೊಂದರಲ್ಲಿ ಅವರು ಹೇಳುವ ಮಾತು:
`ಜಿಗಿದು ಹೋದವು ತಾರೆ ಎಂದೋ ನೀಲಾಂಬರದ ಅಂಗಳಕೆ
ಯಾರು ತರುವರು ಮರಳಿ ರಂಗೋಲಿ ಹಾಕಲಿಕೆ’….. ಎಂದು ಪ್ರಶ್ನಿಸುತ್ತಲೆ ಬಿಸಿಲು ನಾಡಿನ ಈ ಭಾಗದ ಸಮಸ್ಯೆಗಳಿಗೆ ಉತ್ತರ ಬಯಸುತ್ತಾ, ತಮ್ಮ ದ್ವಿಪದಿಯೊಂದರಲ್ಲಿ `ಬಿಸಿಲು ಮತ್ತು ವಿರಹಿ’ ಇಬ್ಬರನೂ ಒಂದಷ್ಟು ವಿಡಂಬನೆ ಮಾಡಿದ್ದಾರೆ.
`ಬೆಳದಿಂಗಳೂ ಸುಡುಸುಡುವ ಉರಿಯೆಂದು ದೂರಿದನು ಕಡು ವಿರಹಿ
ಗುರುತಲ್ಪ ದೂರಾಗಿ ಚಂದ್ರನೂ ವಿರಹಿಯೆಂದರಿಯನೀ ವಿರಹಿ’….. ಎಂದಿರುವ ಮಾತು ಸೂಕ್ಷ್ಮಗ್ರಾಹಿಗಳಿಗೆ ವಿವರಿಸುವ ಅಗತ್ಯವಿಲ್ಲ.
ಧಾರವಾಡದ ಹೆಮ್ಮೆ, ಚೆಂಬೆಳಕಿನ ಕವಿ ಚೆನ್ನವೀರ ಕಣವಿಯರ ಈ ಸಾಲುಗಳು ನನ್ನ ಹೃದಯಕೆ ನಾಟಿವೆ.
`ಪ್ರಕೃತಿ ತನ್ನೆದೆಯ ಮಧುವಾಟಿಗೆ ತೆರೆದಿರಲು / ಅದನು ತಣಿದೀರದೆಯೆ ಸಾಗಬಹುದೆ?
ಯಾರಿಗೂ ಸುಂದರತೆ ಯಾರಿಗೆ ಪರವಶತೆ / ಯಾರ ಸುಖಕೀ ಸೃಷ್ಟಿ ನಿನಗಲ್ಲವೆ?’
ಎಂದು ಅತ್ಯಂತ ಮೃದು ಮಾತಿನಲ್ಲಿ ಪ್ರಶ್ನಿಸುತ್ತಾ, ಪ್ರಕೃತಿ ಸೊಬಗಿರುವುದು ಯಾರಿಗೆ ಎನ್ನುತ್ತಾ, ಅಂತಹ ಸೌಂದರ್ಯವನ್ನ ಸವಿ ಎನ್ನುತ್ತಾರೆ.
ಮೈಸೂರು ಮಲ್ಲಿಗೆಯ ಕವಿ ಕೆ.ಎಸ್.ನರಸಿಂಹ ಸ್ವಾಮಿ ಅವರ ಒಲುಮೆ, ಪ್ರೀತಿ ಉತ್ಕಟತೆ ಎಷ್ಟರ ಮಟ್ಟಿಗೆ ಇದೆ ಎಂದರೆ ತಮ್ಮ ಪ್ರೇಯಸಿ ಸುಡು ಬಿಸಲಲಿ ಬರುತ್ತಿದ್ದಾಳೆ. ಅವಳನ್ನು ಆ ಬಿಸಿಲಲ್ಲಿ ಕರೆಯುವ ಬಗೆ ಅನನ್ಯ:
`ನೀ ಬರುವ ದಾರಿಯಲಿ, ಹಗಲು ತಂಪಾಗಿ / ಬೇಲಿಗಳ ಸಾಲಿನಲಿ
ಹಸಿರು ಕೆಂಪಾಗಿ… ಪಯಣ ಮುಗಿಯುವ ತನಕ / ಎಳೆ ಬಿಸಿಲ ಮಣಿ ಕನಕ
ಸಾಲು ಮರಗಳ ಸೊಬಗ ಸುರಿದಿರಲಿ’
ವೈಶಾಖವನ್ನ ನೋಡುವ ನೂರಾರು ಕಾವ್ಯದ ಸೊಬಗಿನ ಸಾಲುಗಳಲ್ಲಿ ನನಗಿಷ್ಟವಾದವು ಕೆಲವು.
`ಒಮ್ಮೊಮ್ಮೆ ಮಧುರ ಮಾಸಗಳ ಮೃದು ಲಾಸ್ಯವು….’(ಕಡೆಂಗೋಡ್ಲು ಶಂಕರಭಟ್ಟ)
`ಪ್ರಕೃತಿ ಚಂಚಲೆ….. ಚಲುವೆ ಚಲಿಸುತಿಹಳು….’(ಡಿ.ಎಸ್. ಕರ್ಕಿ)
`ನಿನ್ನ ನಗೆಯೆಂದರೆ…. ನಿನ್ನ ಬಗೆಯಂಥದು…. ನಿನ್ನ ಬಗೆಯೆಂದರೆ…. ಮಲ್ಲಿಗೆ ಧಗೆಯಂಥದು…’ (ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟ)
`ಬಿಸಿಲು ಸಾರಂಗದ ಕೋಡಿನಂತೆ….. ಟಿಸಿಲೊಡೆದು ಪಲ್ಲವಿಸುವಾಗ’ (ಅಲ್ಲಮಪ್ರಭು ಬೆಟ್ಟದೂರು)
`ಹಳದಿ ಹೂಗಳು ಸುರಿದ ಸಾಲುಗಿಡ…….(ಸು.ರಂ. ಎಕ್ಕುಂಡಿ)
`ಪ್ರಕೃತಿ ಕವಿಯ ಕವನದಲ್ಲಿ ಕದವಿಕ್ಕಿ ನೋಡುವ ಕುಲೀನೆಯಲ್ಲ’ (ಕೆ.ಎಸ್.ನಿಸಾರ್ ಅಹಮದ್)
ಯಾವುದೆ ಋತು ಅಥವಾ ಮಾಸವಿರಲಿ ಸೃಜನಶೀಲ ಮನಸಿನ ಕ್ರೀಯೆ ಮೂಲಕ ಅದು ಕಾವ್ಯವಾಗಿದ್ದರೂ ಮನಸನ್ನು ಸಾರ್ಥಕ್ಯಗೊಳಿಸುತ್ತದೆ. ಬಹುತೇಕ ಸಾಮಾನ್ಯ ಜನರಿಗೆ ವೈಶಾಖ ಬಿಸಿಯಾದರೆ ಕವಿಗೆ ಮಾತ್ರ ಬೇಗುದಿಯನ್ನು ಶೃಂಗಾರವಾಗಿಸಿ, ಮನದ ವ್ಯಾಕುಲತೆಯನು ದೂರಮಾಡಿ, ಮುದ ನೀಡುವ, ಮನಸ್ಸನ್ನು ಅರಳಿಸುವ ಕ್ರೀಯೆಯಾಗುತ್ತದೆ ಎಂದು ಹೇಳುತ್ತಾ ಕವಿ ಕಂಡ ವೈಶಾಖಕ್ಕೆ ವಿರಾಮ ಕೊಡುವ ಮುನ್ನ ಚೈತ್ರ, ವೈಶಾಖ, ಜೇಷ್ಟ, ಆಷಾಢ ಎನ್ನುವವು ಪ್ರಕೃತಿ…. ಯಾವ ಹಮ್ಮು ಬಿಮ್ಮುಗಳಿಲ್ಲದ ಈ ಗ್ರಹ, ತಾರೆ, ಋತುಗಳ ಸಹಜ ಸಖ್ಯ ಕ್ಷಣಗಳು, ಅವು ಯಾರಿಂದಲೂ ಏನನೂ ಬಯಸವು, ವೈಶಾಖವೂ ಹಾಗೆ ನಮಗೆ ಧಗೆ, ಬಿಸಿಲು, ಕೆಂಡ, ಅಗ್ಗಿಷ್ಟಿಗೆ, ಹೀಗೆ ಏನೇ ಅನಿಸಿದರೂ ಅದರ ಉಪಕಾರದ ನೆರಳಿನಲ್ಲಿ ಮನುಜ ಕುಲ ಬದುಕಿದೆ, ಬದುಕುತಿದೆ.
ಮಂಡಲಗಿರಿ ಪ್ರಸನ್ನ ಮೂಲತಃ ರಾಯಚೂರಿನವರು. ಓದಿದ್ದು ಇಂಜಿನಿಯರಿಂಗ್. ಹಲವು ವರ್ಷಗಳ ಕಾಲ ಬಹುರಾಷ್ಟ್ರೀಯ ಕಂಪೆನಿಯೊಂದರಲ್ಲಿ `ಪ್ರಾಜೆಕ್ಟ್ ಮತ್ತು ಮಾರ್ಕೆಟಿಂಗ್’ ವಿಭಾಗದ ಅಧಿಕಾರಿಯಾಗಿ ಸೇವೆ ಸಲ್ಲಿಸಿ, ಈಗ ಸ್ವಯಂ ನಿವೃತ್ತಿ ಪಡೆದಿದ್ದಾರೆ. ಕನಸು ಅರಳುವ ಆಸೆ(ಕವಿತೆ), ಅಮ್ಮ ರೆಕ್ಕೆ ಹಚ್ಚು(ಮಕ್ಕಳ ಕವಿತೆ), ನಿನ್ನಂತಾಗಬೇಕು ಬುದ್ಧ(ಕವಿತೆ), ಏಳು ಮಕ್ಕಳ ನಾಟಕಗಳು(ಮಕ್ಕಳ ನಾಟಕ), ಪದರಗಲ್ಲು (ಸಂಪಾದನೆ), ನಾದಲಹರಿ(ಸಂಪಾದನೆ-2010) ಸೇರಿ ಒಟ್ಟು ಒಂಭತ್ತು ಕೃತಿಗಳು ಪ್ರಕಟವಾಗಿವೆ