ಕೊನೆಗೂ ಇಬ್ಬರು ಯುವಕರು ನಂದಿನಿ ಲೇ ಔಟ್ ಫ್ಲ್ಯಾಟ್‌ಗೆ ಬಾಡಿಗೆಗೆ ಬಂದರು. ಅವರು ಗುಜರಾತ್ ಕಡೆಯವರು. ಬೆಂಗಳೂರಲ್ಲೇ ಬೆಳೆದವರು. ಅವರು ಕೇಬಲ್ ಟಿವಿ ವ್ಯವಹಾರಕ್ಕೆ ಮನೆ ಹಿಡಿಯಬೇಕಾಗಿತ್ತು. ಸ್ವಲ್ಪ ದಿನಗಳನಂತರ ಅಡ್ವಾನ್ಸ್ ಕೊಡುವುದಾಗಿಯೂ ತಿಳಿಸಿದರು. ಅವರಿಗೆ ಬಾಡಿಗೆಗೆ ಕೊಟ್ಟಾಯಿತು. ಆದರೆ ಅವರು ಸುಳ್ಳು ಹೇಳುತ್ತ ಮುಂದೂಡತ್ತ ಬಂದರು. ಕೊನೆಗೆ ಓಡಿ ಹೋದರು. ಬಹುಶಃ ಕೇಬಲ್ ಮಾಫಿಯಾಗೆ ಭಯ ಪಟ್ಟಿರಬಹುದು. ಅಲ್ಲದೆ ಮೋಸ ಮಾಡಿದ ಕಾರಣವೂ ಇರಬಹುದು. ಯಶಸ್ಸು ಸಾಧಿಸದೆ ಇದ್ದಾಗ ಹೀಗಾಗಿರಬಹುದು. ನನ್ನ ಗೋಳು ಮಾತ್ರ ತಪ್ಪಲಿಲ್ಲ.
ರಂಜಾನ್‌ ದರ್ಗಾ ಬರೆಯುವ ಆತ್ಮಕತೆ ʻನೆನಪಾದಾಗಲೆಲ್ಲʼ ಸರಣಿಯ 80ನೇ ಕಂತು ನಿಮ್ಮ ಓದಿಗೆ

ಬೆಂಗಳೂರಿನಲ್ಲಿ ಸೊಳ್ಳೆಗಳ ನಗರ ಎಂದು ಕರೆಯಿಸಿಕೊಂಡ ದೊಮ್ಮಲೂರು 40 ವರ್ಷಗಳ ಹಿಂದೆ ಈಗಿನ ಹಾಗೆ ಬೆಳೆದಿರಲಿಲ್ಲ. ಎಂ.ಜಿ. ರಸ್ತೆಯಿಂದ ದೊಮ್ಮಲೂರಿಗೆ ಬರಲು ಆಟೋದವರು ಮೀನಮೇಷ ಎಣಿಸುತ್ತಿದ್ದರು. ಮಧ್ಯಾಹ್ನದಲ್ಲೇ ಒಂದೂವರೆ ಪಟ್ಟು ಬಾಡಿಗೆ ಕೇಳುತ್ತಿದ್ದರು.

ನಾನು ಹೊಸದಾಗಿ ಹಿಡಿದ ಬಾಡಿಗೆ ಮನೆಯ ಸುತ್ತಮುತ್ತ ವಿಪರೀತ ಪಾರ್ಥೇನಿಯಂ ಬೆಳೆದಿತ್ತು. ನನ್ನ ಶ್ರೀಮತಿಗೆ ಪಾರ್ಥೇನಿಯಂ ಅಲರ್ಜಿ, ಅಂಥ ವಾತಾವರಣದಲ್ಲಿ ಅಸ್ತಮಾ ಬರುವುದೆಂದು ವೈದ್ಯರು ಮೊದಲೇ ಎಚ್ಚರಿಕೆ ನೀಡಿದ್ದರು. ಅದರ ಜೊತೆಗೆ ಸೊಳ್ಳೆಗಳ ಕಾಟ ಬೇರೆ. ಬೇರೆ ದಾರಿ ಇರಲಿಲ್ಲ. ಕೊನೆಗೂ ಧಾರವಾಡದಿಂದ ಹೆಂಡತಿ ಮಕ್ಕಳನ್ನು ಕರೆದುಕೊಂಡು ಬಂದೆ.

ಮನೆ ಚಿಕ್ಕದಾಗಿದ್ದು ಮುಂದುಗಡೆ ಚಿಕ್ಕ ಕೋಣೆ. ಒಳಗಡೆ ಸ್ವಲ್ಪ ದೊಡ್ಡ ಕೋಣೆ. ಇವೆರಡನ್ನು ದಾಟಿಕೊಂಡು ಅಡುಗೆ ಮನೆಗೆ ಹೋಗಬೇಕು. ಅದೇನೆ ಇದ್ದರೂ ನೆಮ್ಮದಿಯ ತಾಣ ಎಣಿಸಿತು. ಎಚ್.ಆರ್.ಸಿ. ಮನೆ ಸಿಕ್ಕಿದ್ದೇ ದೊಡ್ಡ ಸಮಾಧಾನವಾಗಿತ್ತು. ಹೀಗೆ ಸ್ವಲ್ಪ ವರ್ಷ ಕಳೆದ ಮೇಲೆ 1986ರ ಸುಮಾರಿಗೆ ಪತ್ರಕರ್ತರ ಕೋಟಾದಲ್ಲಿ ಬಿ.ಡಿ.ಎ. (ಬೆಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ) ನಂದಿನಿ ಲೇ ಔಟ್‌ನಲ್ಲಿ ನಿರ್ಮಿಸಿದ ಅಪಾರ್ಟ್ಮೆಂಟ್‌ಗಳಲ್ಲಿ ಎಂ.ಐ.ಜಿ. ಫ್ಲ್ಯಾಟ್ ಅಲೌಟ್ ಆಯಿತು.

ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯವರು ಪತ್ರಕರ್ತರಿಗಾಗಿ ನೂರಕ್ಕೂ ಹೆಚ್ಚು ಫ್ಲ್ಯಾಟ್‌ಗಳನ್ನು ಅಲೌಟ್ ಮಾಡಿದ್ದರು. ಹೀಗಾಗಿ ನನಗೂ ದೊರಕಿತು. ಅವರು ಕೆನರಾ ಬ್ಯಾಂಕ್ ಕ್ಯಾನ್ ಫಿನ್ ಹೋಂ ಮೂಲಕ ಫ್ಲ್ಯಾಟ್ ಕೊಳ್ಳಲು ಸಾಲದ ವ್ಯವಸ್ಥೆ ಮಾಡಿದ್ದರು. ಫ್ಲ್ಯಾಟ್ ಬೆಲೆ 2 ಲಕ್ಷ ರೂಪಾಯಿ. ಪ್ರತಿ ತಿಂಗಳು ತುಂಬುವ ಇ.ಎಂ.ಐ. 1820. ಆಗ ನನ್ನ ಸಂಬಳ 1800 ರೂಪಾಯಿ. ಅಲ್ಲದೆ ಮೊದಲಿಗೆ 25 ಸಾವಿರ ರೂಪಾಯಿ ತುಂಬಬೇಕು! ಇದೆಲ್ಲ ಸಾಧ್ಯವಾಗದ ಮಾತು. ಆದ್ದರಿಂದ ಒಂದು ಲಕ್ಷ ರೂಪಾಯಿಯ ಎಲ್.ಐ.ಜಿ ಮನೆ ತೆಗೆದುಕೊಳ್ಳುವ ಯೋಚನೆ ಬಂತು. ಸಿಂಗಲ್ ಬೆಡ್ ರೂಂ ಮನೆ ಪ್ರಯೋಜನವಾಗದು ಎಂದು ಶ್ರೀಮತಿಯ ತಕರಾರು.

ಕೊನೆಗೆ ಬೇಸತ್ತು ಇದ್ದದರಲ್ಲೇ ಖುಷಿಯಾಗಿರೋಣ ಎಂದು ಪತ್ರಕರ್ತರ ಸಂಘಕ್ಕೆ ಹೋಗಿ ‘ನನಗೆ ಫ್ಲ್ಯಾಟ್ ಬೇಡ, ಬೇರೆಯವರಿಗೆ ಕೊಡಿ’ ಎಂದು ಬರೆದುಕೊಂಡು ಬಂದ ಪತ್ರವನ್ನು ಆಗ ಅಧ್ಯಕ್ಷರಾಗಿದ್ದ ಕಲಾವಿದ ಜಿ.ಕೆ. ಸತ್ಯ ಅವರಿಗೆ ಕೊಟ್ಟೆ. ಅವರು ಅದನ್ನು ಓದಿ ಹರಿದು ಹಾಕಿದರು. ಬಹಳ ಕಾಳಜಿಯಿಂದ ತಿಳಿಹೇಳಿದರು. ಈ ಅವಕಾಶ ಮತ್ತೆ ಸಿಗುವುದಿಲ್ಲ. ಏನೇ ಕಷ್ಟ ಆದರೂ 25 ಸಾವಿರ ಕೂಡಿಸಿ ಹಣ ಕಟ್ಟಿ. ಮುಂದೆ ಹೇಗೋ ದಾರಿ ಸಿಗುತ್ತದೆ ಎಂದರು. ಸತ್ಯ ಅವರ ಬಗ್ಗೆ ನನಗೆ ಬಹಳ ಗೌರವ. ಅದೇ ಕಾರಣದಿಂದ ಮನಸ್ಸು ಬದಲಾಯಿಸಿದೆ. ಆದರೆ ಬೇಸರದಿಂದ ವಾಪಸಾದೆ.
ಅದೇ ದಿನ ಆತ್ಮೀಯರಾದ ಡಾ|| ಎನ್. ಪ್ರಭುದೇವ ಅವರಿಗೆ ಕಾಣಬೇಕಿತ್ತು. ಅವರಿಗೆ ನಡೆದ ವಿಚಾರ ತಿಳಿಸಿದೆ. ಅವರು ಕೂಡಲೆ ತಮ್ಮ ಪಾಸ್ ಬುಕ್ ತೆಗೆದು ಇದ್ದ ಏಳು ಸಾವಿರ ರೂಪಾಯಿಗಳ ಚೆಕ್ ಬರೆದು ಕೊಟ್ಟರು. ‘ಬೇಡ ಡಾಕ್ಟರ್. ಅವು ಬಿ.ಡಿ.ಎ. ಕಟ್ಟಿಸಿದ ಅಪಾರ್ಟ್ಮೆಂಟ್‌ಗಳು. ಅದು ಕೂಡ ಅವರ ಮೊದಲ ಪ್ರಯೋಗ. ಗಂಗಾರಾಮ್ ಪುಸ್ತಕ ಮಳಿಗೆಯ ಕಟ್ಟಡದ ಹಾಗೆ ಯಾವಾಗ ಬೀಳುತ್ತವೆಯೊ ಗೊತ್ತಿಲ್ಲ ಎಂದೆ. ಅದಕ್ಕೆ ಅವರು ‘ಬಿಲ್ಡಿಂಗ್ ಬೀಳಲಿ ಪರವಾಗಿಲ್ಲ. ಭೂಮಿ ಏನು ಬೀಳುವುದಿಲ್ಲವಲ್ಲಾ. ಮೊದಲು ತೆಗೆದುಕೊಳ್ಳಲು ಪ್ರಯತ್ನಿಸಿ’ ಎಂದರು. ಸಹೋದ್ಯೋಗಿ ಉಷಾ ಮೂರು ಸಾವಿರ ಕೊಟ್ಟರು. ಮುಂಬಯಿಯಲ್ಲಿನ ಆತ್ಮೀಯರಾದ ವಸಂತಕುಮಾರ ಅವರು 10 ಸಾವಿರ ರೂಪಾಯಿ ಡಿ.ಡಿ. ಕಳಿಸಿದರು. ಇವರೆಲ್ಲ ವಾಪಸ್ ಹಣ ಪಡೆಯುವ ಜನರಲ್ಲ. ಬಹಳ ಮುಜುಗರಕ್ಕೆ ಈಡಾದೆ. ಆದರೆ ಪರಿಸ್ಥಿತಿ ಗಂಭೀರವಾಗಿದ್ದರಿಂದ ಅನಿವಾರ್ಯವಾಗಿತ್ತು. ನಂತರ ಜಿ.ಕೆ. ಸತ್ಯ ಅವರ ಪ್ರಯತ್ನದಿಂದ ಪಿ.ಎಫ್. ಅಲ್ಲಿ ಇದ್ದ ಹಣವನ್ನು ತೆಗೆದುಕೊಳ್ಳುವ ಅವಕಾಶ ಕಲ್ಪಿಸಲಾಯಿತು. ಹಿರಿಯ ಸಹೋದ್ಯೋಗಿ ಐ.ಕೆ. ಜಾಗೀರದಾರ್ ಬ್ಯಾಂಕ್ ಸಾಲಕ್ಕೆ ಗ್ಯಾರಂಟಿ ಕೊಟ್ಟರು. ಹೀಗಾಗಿ 25 ಸಾವಿರ ಕಟ್ಟಲು ಸಾಧ್ಯವಾಯಿತು. ಪಿ.ಎಫ್. ಇಂದ ಪಡೆದ ಹಣದಲ್ಲಿ 10 ಸಾವಿರ ಉಳಿಯಿತು. ಆ ಹಣದಿಂದ ಇಂಟೀರಿಯರ್‌ಗೆ ಬಳಸಿ ಬಾಡಿಗೆ ಕೊಡುವ ಲೆಕ್ಕ ಹಾಕಿದೆ.

ವರ್ಷ ಉರುಳುವುದರೊಳಗಾಗಿ ಫ್ಲ್ಯಾಟ್ ಕೈ ಸೇರಿತು. ಆದರೆ ಅಲ್ಲಿ ಹೋಗುವ ಸ್ಥಿತಿ ಇರಲಿಲ್ಲ. ದೊಮ್ಮಲೂರಲ್ಲಿ ಮನೆಯ ಹತ್ತಿರವೇ ಒಳ್ಳೆಯ ಶಾಲೆ ಸಿಕ್ಕಿದ್ದರಿಂದ ಮಕ್ಕಳ ಭವಿಷ್ಯ ಮುಖ್ಯವಾಗಿತ್ತು. ಅಲ್ಲದೆ ನಂದಿನಿ ಲೇಔಟ್‌ನಲ್ಲಿ ಹೇಳಿಕೊಳ್ಳುವಂಥ ಜನವಸತಿ ಇರಲಿಲ್ಲ. ಎಲ್ಲಕ್ಕೂ ಹೆಚ್ಚಾಗಿ ಅಲ್ಲಿ ಒಳ್ಳೆಯ ಬಾಡಿಗೆ ಬರುತ್ತದೆ. ಆ ಬಾಡಿಗೆಯಲ್ಲಿ ಬದುಕಬಹುದು. ನನ್ನ ಸಂಬಳಕ್ಕೆ 20 ರೂಪಾಯಿ ಸೇರಿಸಿ 1820 ರೂಪಾಯಿ ಇ.ಎಂ.ಐ. ಕಟ್ಟಬಹುದು ಎಂದು ಲೆಕ್ಕ ಹಾಕಿದೆ. ಆದರೆ ಎಲ್ಲ ವ್ಯವಸ್ಥೆ ಮಾಡಿದರೂ ಮನೆ ಬಾಡಿಗೆಗೆ ಯಾರೂ ಬರಲಿಲ್ಲ. ಬಹಳ ಆತಂಕಕ್ಕೆ ಒಳಗಾದೆ. ಇ.ಎಂ.ಐ. ಹಣ ಕಟ್ಟುವುದರಿಂದಾಗಿ ಸಂಬಳ ಇಲ್ಲದೆ ಬದುಕುವಂಥ ಪರಿಸ್ಥಿತಿಯುಂಟಾಯಿತು.

ಬಾಡಿಗೆದಾರರು ಬರದ ಕಾರಣ. ಫ್ಲ್ಯಾಟ್‌ನಲ್ಲಿ ಹಾಕಿದ್ದ ಫ್ಯಾನ್, ಟೇಬಲ್ ಮುಂತಾದವುಗಳನ್ನು ಒಂದೊಂದಾಗಿ ನೆರೆಹೊರೆಯವರಿಗೆ ಮಾರುವುದು ಅನಿವಾರ್ಯವಾಯಿತು.

ನನ್ನ ಶ್ರೀಮತಿ ದೊಮ್ಮಲೂರಿನ ಬಾಡಿಗೆ ಮನೆಯಲ್ಲೇ ಬೇಬಿ ಸಿಟ್ಟಿಂಗ್ ಪ್ರಾರಂಭಿಸಿದಳು. ಹತ್ತಾರು ಮಕ್ಕಳು ಬರತೊಡಗಿದರು. ಹೆಚ್ಚಿಗೆ ಮಕ್ಕಳನ್ನು ತೆಗೆದುಕೊಳ್ಳುವಷ್ಟು ಜಾಗವೂ ಇರಲಿಲ್ಲ. ಅಂತೂ ಹೊಟ್ಟೆಪಾಡಿಗೆ ವ್ಯವಸ್ಥೆಯಾಯಿತೆಂದು ನಿಟ್ಟುಸಿರು ಬಿಟ್ಟೆ. ಬೇಬಿ ಸಿಟ್ಟಿಂಗ್ ಬಹಳ ನಾಜೂಕಾದ ಮತ್ತು ಜಾಣ್ಮೆಯ ಕೆಲಸ. ಪ್ರತಿಯೊಂದು ಮಗುವಿನ ಆಹಾರ ಮುಂತಾದ ಅವಶ್ಯಕತೆಗಳು ಬೇರೆಯೆ ಇರುತ್ತವೆ. ಅವುಗಳನ್ನು ಸಂಭಾಳಿಸುವುದು ಬಹಳ ಕಷ್ಟ. ಆದರೆ ಆ ಮಕ್ಕಳು ನಮಗೆ ಆಹಾರ ಒದಗಿಸುವ ರೀತಿಯಲ್ಲಿ ಇದ್ದವು.

ಭಾನುವಾರ ರಜೆ. ಮಕ್ಕಳು ತಮ್ಮ ಪಾಲಕರ ಜೊತೆ ಇರಲಿ ಎಂಬ ಯೋಚನೆಯೂ ನಮಗಿತ್ತು. ಆದರೆ ಅನೇಕ ಪಾಲಕರು ಭಾನುವಾರ ಕೂಡ ಮಕ್ಕಳನ್ನು ಕರೆದುಕೊಂಡು ಹೋಗುತ್ತಿರಲಿಲ್ಲ. ಎಂದಿನಂತೆ ಬೆಳಿಗ್ಗೆಯಿಂದ ಸಾಯಂಕಾಲ ಅವುಗಳನ್ನು ನೋಡಿಕೊಳ್ಳುವ ಜವಾಬ್ದಾರಿ ಬೀಳುತ್ತಿತ್ತು. ಅಂದು ಡಬಲ್ ಚಾರ್ಜ್ ಇದ್ದರೂ ಪಾಲಕರಿಗೆ ಅದೇನು ಭಾರ ಅನಿಸಲಿಲ್ಲ. ಹೀಗೆ ಒಂದು ಫ್ಲ್ಯಾಟ್‌ಗಾಗಿ ನನ್ನ ಶ್ರೀಮತಿ ಪಡುವ ಕಷ್ಟ ನೋಡಿ ಬಹಳ ಬೇಸರವಾಗುತ್ತಿತ್ತು. ಸ್ವಲ್ಪ ದಿನಗಳ ನಂತರ ಈ ಕೆಲಸದ ಜೊತೆಗೇ ಬೆಂಗಾಲ್ ಸಾರಿ ಮಾರತೊಡಗಿದಳು. ಅವು ಆಕರ್ಷಕವಾಗಿದ್ದವು. ಇದರಿಂದ ಕೂಡ ನಮ್ಮ ಆರ್ಥಿಕ ಸ್ಥಿತಿ ಸ್ವಲ್ಪ ಮಟ್ಟಿಗೆ ಸುಧಾರಿಸಲು ಸಾಧ್ಯವಾಯಿತು.

ಕೊನೆಗೂ ಇಬ್ಬರು ಯುವಕರು ನಂದಿನಿ ಲೇ ಔಟ್ ಫ್ಲ್ಯಾಟ್‌ಗೆ ಬಾಡಿಗೆಗೆ ಬಂದರು. ಅವರು ಗುಜರಾತ್ ಕಡೆಯವರು. ಬೆಂಗಳೂರಲ್ಲೇ ಬೆಳೆದವರು. ಅವರು ಕೇಬಲ್ ಟಿವಿ ವ್ಯವಹಾರಕ್ಕೆ ಮನೆ ಹಿಡಿಯಬೇಕಾಗಿತ್ತು. ಸ್ವಲ್ಪ ದಿನಗಳನಂತರ ಅಡ್ವಾನ್ಸ್ ಕೊಡುವುದಾಗಿಯೂ ತಿಳಿಸಿದರು. ಅವರಿಗೆ ಬಾಡಿಗೆಗೆ ಕೊಟ್ಟಾಯಿತು. ಆದರೆ ಅವರು ಸುಳ್ಳು ಹೇಳುತ್ತ ಮುಂದೂಡತ್ತ ಬಂದರು. ಕೊನೆಗೆ ಓಡಿ ಹೋದರು. ಬಹುಶಃ ಕೇಬಲ್ ಮಾಫಿಯಾಗೆ ಭಯ ಪಟ್ಟಿರಬಹುದು. ಅಲ್ಲದೆ ಮೋಸ ಮಾಡಿದ ಕಾರಣವೂ ಇರಬಹುದು. ಯಶಸ್ಸು ಸಾಧಿಸದೆ ಇದ್ದಾಗ ಹೀಗಾಗಿರಬಹುದು. ನನ್ನ ಗೋಳು ಮಾತ್ರ ತಪ್ಪಲಿಲ್ಲ. ಕೊನೆಗೂ ಯಾವುದೋ ಕಂಪನಿಯಲ್ಲಿ ಕೆಲಸ ಮಾಡುವಾತ ಬಾಡಿಗೆಗೆ ಬಂದ. ಬೇಬಿ ಸಿಟಿಂಗ್ ನಿಲ್ಲಿಸಲಾಯಿತು.

ಏತನ್ಮಧ್ಯೇ ನನ್ನ ಶ್ರೀಮತಿಯ ಚಿಕ್ಕಮ್ಮಳಿಗೆ ಬೆಂಗಳೂರು ಸಮೀಪದಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ನೌಕರಿ ಸಿಕ್ಕಿತು. ಅವರಿಗೆ ಮೂವರು ಮಕ್ಕಳಿದ್ದರು. ಆ ಮಕ್ಕಳ ವಿದ್ಯಾಭ್ಯಾಸದ ದೃಷ್ಟಿಯಿಂದ ಅವರನ್ನು ಕರೆಯಿಸಿಕೊಂಡೆವು. ಅವರಿಗೆ ನಮ್ಮ ಮನೆ ಬಿಟ್ಟು ಅದೇ ರಸ್ತೆಯಲ್ಲಿನ ಚಿಕ್ಕ ಮನೆಗೆ ಹೋದೆವು. ಅದೊಂದು ಮನೆಯೆಂಬೋ ಮನೆ. ಒಂದನೇ ಅಂತಸ್ತಿನ ಮೇಲೆ ಸಿಮೆಂಟ್ ಸೀಟಿನ ಚಿಕ್ಕ ಮನೆ. ಸಿಮೆಂಟ್ ಸೀಟ್ ಕಾರಣ ರಾತ್ರಿ ಚಳಿ, ಹಗಲುಹೊತ್ತು ಧಗೆ. ಸಿಮೆಂಟ್ ಸೀಟಿನಿಂದ ಕ್ಯಾನ್ಸರ್ ಬರುತ್ತದೆ ಎಂಬ ಸುದ್ದಿ ಗೊತ್ತಿದ್ದರೂ ಹೇಗೋ ಬದುಕಿದೆವು. ಕೊನೆಗೆ ಆ ಚಿಕ್ಕಮ್ಮನಿಗೆ ಬೇರೆ ಮನೆ ಸಿಕ್ಕಿದ್ದರಿಂದ ನಾವಿದ್ದ ಮನೆಗೆ ವಾಪಸ್ ಬಂದೆವು.

ಇದೆಲ್ಲ ಆಗುವುದರೊಳಗಾಗಿ 1991ರಲ್ಲಿ ನನಗೆ ಕಾರವಾರಕ್ಕೆ ವರ್ಗವಾಯಿತು. ಪ್ರಜಾವಾಣಿ, ಡೆಕ್ಕನ್ ಹೆರಾಲ್ಡ್ ಬಾತ್ಮೀದಾರನಾಗಿ ಕಾರವಾರಕ್ಕೆ ಹೋದೆ. ‘ಮನೆಯ ಅವಶ್ಯಕತೆ ಇದೆ’ ಎಂದು ದೊಮ್ಮಲೂರು ಮನೆಯ ಮಾಲಿಕರ ಮಗ ಹೇಳತೊಡಗಿದ. ಅವನ ತಂದೆಯ ಒಳ್ಳೆಯತನದ ಕಾರಣ ಮನೆ ಬಿಡಲು ನಿರ್ಧರಿಸಿದೆ. ಕಾರವಾರದಲ್ಲಿ ಮನೆ ಮಾಡಿ ತಿಂಗಳುಗಳೇ ಕಳೆದ ನಂತರ ಹೆಂಡತಿ ಮಕ್ಕಳನ್ನು ಕರೆದುಕೊಂಡು ಬಂದೆ.

ಅಲ್ಲಿ ನಾಲ್ಕೂವರೆ ವರ್ಷ ಕಳೆದನಂತರ ವಾಪಸ್ ಬೆಂಗಳೂರು ಹೆಡ್ ಆಫೀಸ್‌ಗೆ ವರ್ಗವಾಯಿತು. ಆಗ ನಂದಿನಿ ಲೇಔಟ್ ಮನೆಗೆ ಹೋಗಲು ನಿರ್ಧರಿಸಿದೆವು. ಅಷ್ಟೊತ್ತಿಗಾಗಲೆ ಮನೆ ಖಾಲಿ ಆಗಿದ್ದರಿಂದ ಬೇರೆಯವರಿಗೆ ಬಾಡಿಗೆ ಕೊಡಲಿಲ್ಲ. ಒಂದೆರಡು ತಿಂಗಳಲ್ಲಿ ಕಾರವಾರದಿಂದ ನಂದಿನಿ ಲೇಔಟ್ ಮನೆಗೆ ಹೋದೆವು. ಅಷ್ಟೊತ್ತಿಗಾಗಲೇ ಮಗ 10ನೇ ಇಯತ್ತೆ ಮುಗಿಸಿದ್ದ. ಇಬ್ಬರೂ ಹುಡುಗಿಯರು ನಂದಿನಿ ಲೇಔಟಲ್ಲಿನ ಹೈಸ್ಕೂಲಿಗೆ ಸೇರಿದರು. ಅದಕ್ಕಾಗಿ ಶಿಕ್ಷಣ ಸಚಿವರ ಪಿ.ಎಸ್. ಆಗಿದ್ದ ಮಿತ್ರ ಮಂಜುನಾಥ ಅವರು ಸಹಾಯ ಮಾಡಿದರು.

ನಂದಿನಿ ಲೇಔಟ್‌ಗೆ ಬಂದಾಗ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಹೆಚ್ಚಿಗೆ ಹಣ ಖರ್ಚಾಗುತ್ತಿತ್ತು. ಅದಾಗಲೆ ನನ್ನ ಶ್ರೀಮತಿ ಬ್ಯೂಟಿ ಪಾರ್ಲರ್ ತರಬೇತಿ ಪಡೆದು ಮನೆಯ ಒಂದು ಕೋಣೆಯಲ್ಲಿ ಪಾರ್ಲರ್ ಪ್ರಾರಂಭಿಸುವ ಯೋಚನೆ ಮಾಡಿದಳು. ಪಾರ್ಲರ್ ಆರಂಭಿಸಲು ಖ್ಯಾತ ವಕೀಲರೂ ಆತ್ಮೀಯರೂ ಆದ ಹಣಮಂತರಾಯ ಅವರು 18 ಸಾವಿರ ರೂಪಾಯಿ ಕೊಟ್ಟರು. ಆಗ ಬ್ಯೂಟಿ ಪಾರ್ಲರ್ ಉಪಕರಣಗಳು ಬಹಳ ಹೆಚ್ಚಿನ ಬೆಲೆ ಹೊಂದಿದ್ದವು. ಮುಂಬೈಯಲ್ಲಿ ಬ್ಯೂಟಿ ಪಾರ್ಲರ್ ಉತ್ಪಾದಿಸುವ ಕಾರ್ಖಾನೆ ಬಗ್ಗೆ ಮಾಹಿತಿ ಪಡೆದು ವಸಂತಕುಮಾರ ಅವರ ಬಳಿ ಹೋದೆ. ಅವರು ಕಾರ್ಖಾನೆಗೆ ಕರೆದುಕೊಂಡು ಹೋಗಿ ಎಲ್ಲ ಉಪಕರಣಗಳನ್ನು ಕೊಡಿಸಿದರು. ಖುಷಿಯಿಂದ ತಂದು ಬ್ಯೂಟಿ ಪಾರ್ಲರ್ ಪ್ರಾರಂಭಿಸಿದೆವು. ಸ್ವಲ್ಪ ದಿನಗಳಾದ ಮೇಲೆ ಐಸ್ ಹಿಡಿಯುವುದರಿಂದ ನನ್ನ ಶ್ರೀಮತಿಗೆ ಶೀತ ಸಮಸ್ಯೆ ಶುರುವಾಯಿತು. ಅದು ಬ್ರಾಂಕಾಯ್ಟ್ಸ್‌ವರೆಗೂ ಹೋಯಿತು. ಹೀಗಾಗಿ ಪಾರ್ಲರ್ ಮುಚ್ಚಬೇಕಾಯಿತು. ನಂತರ ಒಂದೊಂದೆ ಉಪಕರಣವನ್ನು ಬೇರೆ ಬ್ಯೂಟಿ ಪಾರ್ಲರ್‌ಗಳಿಗೆ ಮಾರಬೇಕಾಯಿತು! ಹೀಗೆ ಸೋಲುಗಳ ಮೇಲೆ ಸೋಲು. ಹೋರಾಟಗಳ ಮೇಲೆ ಹೋರಾಟ. ಆದರೆ ನಾನು ಯಾವುದಕ್ಕೂ ಎದೆಗುಂದಲಿಲ್ಲ. ಅದಕ್ಕೆ ಕಾರಣ ಮಾರ್ಕ್ಸ್‌ವಾದ. ಮಾರ್ಕ್ಸ್‌ವಾದ ನನಗೆ ಸಾಮಾಜಿಕವಾಗಿ ಉಸಿರಾಡುವುದನ್ನು ಕಲಿಸಿತು. ಈ ಸಾಮಾಜಿಕ ಉಸಿರಾಟ (ಸೋಷಿಯಲ್ ಬ್ರೀದಿಂಗ್) ಎಂಬ ಪದಪುಂಜ ನನ್ನ ಸೃಷ್ಟಿ. ಕಷ್ಟಜೀವಿಗಳ ಬಗೆಗಿನ ಚಿಂತನೆ ನಮ್ಮ ಉಸಿರಾಟದ ಜೊತೆ ಸೇರಿರಬೇಕು. ಸದಾ ಅವರ ಬದುಕಿನ ಏಳ್ಗೆಗಾಗಿ ಚಿಂತಿಸುತ್ತಲೇ ಇರಬೇಕು. ಅವರ ಕಷ್ಟಪರಿಹಾರಕ್ಕಾಗಿ ಎಂಥ ಸಮಾಜವಿರಬೇಕು? ಯಾವ ತತ್ತ್ವಜ್ಞಾನ ಇರಬೇಕು? ಇದ್ದುದರಲ್ಲೇ ಎಂಥ ರಾಜಕೀಯ ಪಕ್ಷ ಇರಬೇಕು? ಎಂಬುದು ನಮ್ಮ ಮನಸ್ಸಿನಲ್ಲಿ ಉಸಿರಾಟದ ಹಾಗೆ ಸಹಜವಾಗಿ ಮತ್ತು ನಿರಂತರವಾಗಿ ಇರಬೇಕು. ಅದುವೇ ಸೋಷಿಯಲ್ ಬ್ರೀದಿಂಗ್. ಈ ಪರಿಕಲ್ಪನೆ ನನ್ನನ್ನು ಬದುಕಿನ ಜಂಜಾಟದಲ್ಲಿ ಸೋಲದಂತೆ ಎತ್ತಿಹಿಡಿಯಿತು.

ನನಗೆ ನಂದಿನಿ ಲೇ ಔಟ್ ಬಹಳ ಹಿಡಿಸಿತ್ತು. ಅದಕ್ಕೆ ‘ಸಿಂಗಾಪುರ ಲೇ ಔಟ್ʼ ಎಂದು ಕರೆಯುತ್ತಿದ್ದರು. ಕೆ.ಕೆ. ಮೂರ್ತಿ ಎಂಬವವರು ಬಿ.ಡಿ.ಎ. ಅಧ್ಯಕ್ಷರಾಗಿದ್ದಾಗ ಸಿಂಗಾಪುರಕ್ಕೆ ಹೋದ ವೇಳೆ ಅವರಿಗೆ ಇಂಥ ಒಂದು ಲೇಔಟ್ ಮಾಡುವ ಯೋಚನೆ ಬಂತು. ಮಹಾಲಕ್ಷ್ಮಿ ಲೇಔಟ್ ಬಳಿಯ ಆ ಪ್ರದೇಶದ ಕೇಂದ್ರಸ್ಥಾನದಲ್ಲಿ ಕೆರೆ ಇತ್ತು. ಮಳೆಗಾಲದಲ್ಲಿ ಒಂದಿಷ್ಟು ತುಂಬಿಕೊಳ್ಳುತ್ತಿತ್ತು. ಸುತ್ತೆಲ್ಲ ಎತ್ತರದ ಪ್ರದೇಶ. ಅಲ್ಲಿ ಮೂರ್ತಿಯವರು ತಮ್ಮ ಕನಸನ್ನು ನನಸಾಗಿಸಿದರು. ಅದನ್ನು ನಯನ ಮನೋಹರವಾಗುವಂತೆ ನೋಡಿಕೊಂಡರು. ಎಲ್ಲ ಮೂಲಭೂತ ಸೌಕರ್ಯಗಳನ್ನು ಅಲ್ಲಿ ಕಲ್ಪಿಸಲಾಯಿತು. ಅಲ್ಲಿಯ ಉದ್ಯಾನವನಗಳಲ್ಲಿ ಅನೇಕ ಸಿನಿಮಾಗಳ ಚಿತ್ರೀಕರಣವಾಗುತ್ತಿತ್ತು. ಇಡೀ ಪ್ರದೇಶ ನಂದನವನದಂತೆ ಕಾಣುವ ಹಾಗೆ ಗಿಡಮರಗಳು ಬೆಳೆದು ನಿಂತವು. ಅದೊಂದು ಬೆಂಗಳೂರಲ್ಲೇ ವಿಶಿಷ್ಟವಾದ ಲೇಔಟ್ ಆಯಿತು. ಅಲ್ಲಿ ವಾಕಿಂಗ್ ಮಾಡುವುದು ಕೂಡ ಒಂದು ಸಂಭ್ರಮವಾಗಿತ್ತು. ಆದರೆ ಕಷ್ಟಪಟ್ಟು ಪಡೆದ ಆ ಮನೆಯಲ್ಲಿ ಹಾಯಾಗಿ ಉಳಿದುಕೊಳ್ಳುವ ಬಯಕೆ ಈಡೇರಲಿಲ್ಲ. ಒಂದೆರಡು ವರ್ಷ ಕಳೆಯುವುದರೊಳಗಾಗಿ ಮಕ್ಕಳು ಮುಂದಿನ ವಿದ್ಯಾಭ್ಯಾಸಕ್ಕಾಗಿ ದೊಮ್ಮಲೂರು ಕಡೆಯ ಶಿಕ್ಷಣ ಸಂಸ್ಥೆಗಳಿಗೆ ಸೇರಿದರು. ಅನಿವಾರ್ಯವಾಗಿ ನಂದಿನಿ ಲೇಔಟ್ ಬಿಟ್ಟು. ದೊಮ್ಮಲೂರು ಕಡೆಗೆ ಬಂದು ಬೇರೊಂದು ಬಾಡಿಗೆ ಮನೆ ಹಿಡಿಯಬೇಕಾಯಿತು.

ಆರೇಳು ವರ್ಷ ಕಳೆಯುವುದರೊಳಗಾಗಿ, ಅಂದರೆ 2003ರಲ್ಲಿ ಕಲಬುರಗಿಗೆ ವರ್ಗವಾಯಿತು. ಮಕ್ಕಳ ವಿದ್ಯಾಭ್ಯಾಸ ಮುಂದುವರಿದ ಕಾರಣ ಒಬ್ಬನೇ ಹೋಗಬೇಕಾಯಿತು. 2009ರಲ್ಲಿ ಕಲಬುರಗಿಯಲ್ಲೇ ನಿವೃತ್ತಿ ಹೊಂದಿದೆ.

ನಿವೃತ್ತಿಯ ನಂತರ ಬೆಂಗಳೂರಲ್ಲಿ ಬದುಕುವುದು ಕಷ್ಟವೆನಿಸಿತು. ಮನೆ ಬಾಡಿಗೆ ಕೊಟ್ಟು ಧಾರವಾಡಕ್ಕೆ ಬಂದೆ. ಪತ್ರಿಕಾ ರಂಗದಲ್ಲಿ ನಿವೃತ್ತಿಯ ನಂತರ ಪಿಂಚಣಿ ಇರುವುದಿಲ್ಲ. ಈಗ ಆ ಫ್ಲ್ಯಾಟ್ ಬಾಡಿಗೆ ಕೂಡ ನಮ್ಮನ್ನು ಸಾಕುತ್ತಿದೆ.