ಮೊದಲ ದಿನವಾದ ಕಾರಣ ಲೈಟ್ ಹಚ್ಚಿಕೊಂಡೇ ಮಲಗಿದೆ. ಬೇಗ ನಿದ್ರೆ ಬರಲಿಲ್ಲ. ಆ ಮೇಲೆ ಮಧ್ಯರಾತ್ರಿ ಎಚ್ಚರವಾಯಿತು. ಕಣ್ಣು ತೆರೆದಾಗ ಗಾಢಾಂಧಕಾರ ಆವರಿಸಿದ್ದು ಗಾಬರಿ ಹುಟ್ಟಿಸಿತು. ಕರೆಂಟ್ ಹೋಗಿರಬಹುದು ಎಂದು ಭಾವಿಸಿ ಹಾಗೆ ಮಲಗಿದೆ. ಬೆಳಿಗ್ಗೆ ಬಹಳ ಹೊತ್ತಿನವರೆಗೆ ಎಚ್ಚರಾಗಲಿಲ್ಲ. ಕೊನೆಗೆ ಎಚ್ಚರವಾದಾಗ ಸೊಳ್ಳೆಪರದೆ ಮೇಲೆಲ್ಲ ಸೊಳ್ಳೆಗಳು ಸುತ್ತಿಕೊಂಡಿದ್ದರಿಂದ ಕತ್ತಲು ಆವರಿಸಿದ್ದು ಗೊತ್ತಾಯಿತು!
ರಂಜಾನ್‌ ದರ್ಗಾ ಬರೆಯುವ ಆತ್ಮಕತೆ ʻನೆನಪಾದಾಗಲೆಲ್ಲʼ ಸರಣಿಯ 79ನೇ ಕಂತು ನಿಮ್ಮ ಓದಿಗೆ

೧೯೭೬ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಎಂ.ಎ. (ಭಾಷಾವಿಜ್ಞಾನ) ಮುಗಿಸಿದ ಮೇಲೆ ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿಯ “ಕೃಷಿಪೇಟೆ” ಮಾಸಪತ್ರಿಕೆಯ ಉಪ ಸಂಪಾದಕನಾಗಿ ಬೆಂಗಳೂರು ಸೇರಿದೆ.

ಮಿತ್ರ ಮಹಾದೇವ ಹೊರಟ್ಟಿಯವರ ಪ್ರಯತ್ನ ಮತ್ತು ಸಚಿವ ಕೆ.ಹೆಚ್. ರಂಗನಾಥ ಅವರ ಕೃಪೆಯಿಂದ ಈ ಅವಕಾಶ ಸಿಕ್ಕಿತ್ತು.
ರಂಗನಾಥ ಸಾಹೇಬರು ತಮ್ಮ ಮನೆಯ ಔಟ್ ಹೌಸ್‌ನಲ್ಲೇ ಉಳಿಸಿಕೊಂಡರು. ಹೀಗಾಗಿ ನನಗೆ ಬೆಂಗಳೂರಲ್ಲಿ ಮನೆಯ ಸಮಸ್ಯೆ ಬಗ್ಗೆ ಅರಿವಾಗಲಿಲ್ಲ.

ಕೆಲ ತಿಂಗಳುಗಳ ನಂತರ ಒಂದು ದಿನ ಸಾಹೇಬರ ಪಿ.ಎ. ರಘು ಅವರು ಗೃಹ ಕಚೇರಿಯಲ್ಲಿ ಕುಳಿತು ಒಂದು ಲಿಸ್ಟ್ ತಯಾರಿಸುತ್ತಿದ್ದರು. ಅದೇನೆಂದರೆ ಬಿ.ಡಿ.ಎ. ಸೈಟಿನ ಲಿಸ್ಟ್. ಸಾಹೇಬರ ಸಿಬ್ಬಂದಿಗಾಗಿ ತಯಾರಿಸಲಾಗುತ್ತಿತ್ತು. ರಘು ಅವರು ನನಗೆ ಆಪ್ತರಾಗಿದ್ದರು. ‘ಲಿಸ್ಟಲ್ಲಿ ನಿಮ್ಮ ಹೆಸರು ಸೇರಿಸಲೆ’ ಎಂದು ಕೇಳಿದರು. ಆಗ ಬಿ.ಡಿ.ಎ. ಸೈಟ್ ಬೆಲೆ ೫೦೦೦ ರೂಪಾಯಿ ಇತ್ತು. ಬಿ.ಟಿ. ಸೋಮಣ್ಣ ಎಂಬವರು ಸಾಹೇಬರ ಆಪ್ತರಾಗಿದ್ದರು. ಅವರ ಪ್ರಯತ್ನದಿಂದಲೇ ದೇವರಾಜ ಅರಸು ಸರ್ಕಾರದಲ್ಲಿ ಸೋಮಣ್ಣ ಬಿ.ಡಿ.ಎ. ಅಧ್ಯಕ್ಷರಾಗಿದ್ದರು. ರಂಗನಾಥ ಸಾಹೇಬರು ಪ್ರಾಮಾಣಿಕತೆಯ ಸಾಕಾರ ಮೂರ್ತಿಯಾಗಿದ್ದರು. ಸೋಮಣ್ಣನವರು ಸಾಹೇಬರ ಋಣ ತೀರಿಸುವುದಕ್ಕಾಗಿ ಅವರ ಸಿಬ್ಬಂದಿಗೆ ಸೈಟು ಕೊಡಿಸುವ ನಿರ್ಧಾರ ಮಾಡಿದ್ದು ನನಗೂ ಗೊತ್ತಾಗಿತ್ತು. ಆ ಕುರಿತು ಸಾಹೇಬರ ಸರ್ಕಾರಿ ಕಾರ್ ಡ್ರೈವರ್ ಅನ್ವರ್ ನನಗೆ ತಿಳಿಸಿದ್ದರು. ನಾನು ರಘು ಅವರಿಗೆ ನಕಾರಾತ್ಮಕ ಉತ್ತರ ನೀಡಿದೆ. ಲಕ್ಷಾಂತರ ಜನರು ಸೈಟ್‌ಗಾಗಿ ಕಾಯುತ್ತಿದ್ದಾರೆ. ಅವರಿಗೆಲ್ಲ ಸಿಕ್ಕ ಮೇಲೆ ನಾನು ತೆಗೆದುಕೊಳ್ಳುವೆ ಎಂದು ತಿಳಿಸಿದೆ. ನಾನು ‘ಗಾನ್ ಕೇಸ್’ ಎಂದು ರಘು ಅವರು ಭಾವಿಸಿರಬಹುದು. ಆದರೆ ಅದು ನನ್ನ ಅಂತರಾಳದ ಮಾತಾಗಿತ್ತು. ಒಬ್ಬ ತರುಣ ಕಮ್ಯುನಿಸ್ಟನ ಮಾತು ಅದಾಗಿತ್ತು.

ಹೀಗೇ ಎರಡು ವರ್ಷ ಕಳೆಯುವುದರೊಳಗಾಗಿ ಸಾರ್ವತ್ರಿಕ ಚುನಾವಣೆ ಬಂದು ಜನತಾ ಪಕ್ಷ ಭಾರಿ ವಿಜಯ ಸಾಧಿಸಿತು. ಆ ಸೋಲನ್ನು ಒಪ್ಪಿಕೊಂಡ ದೇವರಾಜ್ ಅರಸು ಅವರು ಮುಖ್ಯಮಂತ್ರಿ ಪದವಿಗೆ ರಾಜೀನಾಮೆ ನೀಡಿದರು. ಆಗ ರಂಗನಾಥ ಸಾಹೇಬರು ಸರ್ಕಾರಿ ಮನೆ ‘ಕ್ರೆಸೆಂಟ್ ಹೌಸ್’ ತೊರೆದು ಬಾಡಿಗೆ ಮನೆಗೆ ಹೋಗಬೇಕಾಯಿತು. ಅವರಿಗಾಗಿ ಮತ್ತು ನನಗಾಗಿ ಮನೆ ಹುಡುಕಾಟ ಶುರುವಾಯಿತು. ಅವರಿಗೆ ಹೇಗೋ ಮನೆ ಸಿಕ್ಕಿತು. ಸರ್ಕಾರಿ ಮನೆ ಖಾಲಿ ಮಾಡಲು ಇನ್ನೂ ೧೫ ದಿನ ಬಾಕಿ ಇತ್ತು. ಅಷ್ಟರೊಳಗಾಗಿ ಸಂಬಂಧಪಟ್ಟ ಅಧಿಕಾರಿಗಳು ಬಂದು ಪಾತ್ರೆ ಪರಡಿ ಮುಂತಾದವುಗಳ ಪಟ್ಟಿ ತಂದು ಕ್ರೆಸೆಂಟ್ ಹೌಸಲ್ಲಿದ್ದ ಎಲ್ಲ ಸಾಮಾನುಗಳನ್ನು ಲಾರಿಯಲ್ಲಿ ತುಂಬಿಕೊಂಡು ಹೋದರು. ಸಾಹೇಬರು ಹೆಚ್ಚಿಗೆ ಒಂದು ದಿನವೂ ಇರಬಾರದೆಂದು ನಿರ್ಧರಿಸಿದ್ದರು. ಅವರು ಮನೆ ಖಾಲಿ ಮಾಡುವುದರೊಳಗಾಗಿ ನಾನು ರೂಂ ಹಿಡಿಯಲೇ ಬೇಕಾಗಿತ್ತು.

ಡ್ರೈವರ್ ಅನ್ವರ್ ನನಗೋಸ್ಕರ ಪ್ರಯತ್ನ ಮಾಡುತ್ತಲೇ ಇದ್ದರು. ಒಂದು ಚಿಕ್ಕ ಮನೆ ತೋರಿಸಿದರು. ಅನಿವಾರ್ಯವಾಗಿ ಒಂದು ತಿಂಗಳ ಬಾಡಿಗೆ ಹಣವನ್ನು ಅಡ್ವಾನ್ಸ್ ಆಗಿ ಕೊಟ್ಟು ಬಂದೆ. ಮರುದಿನ ಅಶೋಕ್ ಸರ್ಕಲ್ ಬಳಿ ಕೋಣೆಯೊಂದು ಬಾಡಿಗೆಗೆ ಇದೆ ಎಂದು ಗೆಳೆಯರೊಬ್ಬರು ತೋರಿಸಿದರು. ರೂಂ ಚೆನ್ನಾಗಿದೆ ಎನಿಸಿತು. ಬಿಟ್ಟರೆ ಸಿಗಲಿಕ್ಕಿಲ್ಲ ಎಂದು ಅಲ್ಲೂ ಅಡ್ವಾನ್ಸ್ ಕೊಟ್ಟೆ. ಆ ರೂಂ ಬಸ್ ಸ್ಟಾಪ್ ಬಳಿ ಇದ್ದುದರಿಂದ ಮತ್ತು ನನ್ನ ಆಫೀಸಿಗೆ ಸಮೀಪ ಇರುವುದರಿಂದ ಸಮಾಧಾನವಾಯಿತು.

ಇದಾದನಂತರ ಮೊದಲಿಗೆ ಅಡ್ವಾನ್ಸ್ ಪಡೆದ ವ್ಯಕ್ತಿಯ ಬಳಿ ಹೋಗಿ ವಿಷಯ ತಿಳಿಸಿದೆ. ನಾನು ಅಡ್ವಾನ್ಸ್ ಕೊಟ್ಟ ಹಣ ಖರ್ಚು ಮಾಡಿರುವುದಾಗಿ ತಿಳಿಸಿದ. ಬೇರೆ ಬಾಡಿಗೆದಾರರು ಬಂದ ನಂತರ ಅಡ್ವಾನ್ಸ್ ವಾಪಸ್ ಕೊಡುವುದಾಗಿ ಹೇಳಿದ. ಇಂಗು ತಿಂದ ಮಂಗನ ಹಾಗೆ ನಾನು ವಾಪಸ್ ಬಂದೆ. ಆತನ ಮನೆಯಲ್ಲಿ ಟೆಲಿಫೋನ್ ಇರಲಿಲ್ಲ. ಅವನನ್ನು ಸಂಪರ್ಕಿಸಬೇಕೆಂದರೆ ಆ ದೂರದ ಪ್ರದೇಶಕ್ಕೆ ಹೋಗಲೇಬೇಕಾಗಿತ್ತು. ಐದಾರು ಸಲ ಹೋಗಿ ಕೇಳಿದರೂ ಆತನದು ಅದೊಂದೇ ಉತ್ತರ. ಆ ಗೂಡಿನಂಥ ಮನೆಗೆ ಯಾರೂ ಬರುವುದಿಲ್ಲ. ಆತ ಅಡ್ವಾನ್ಸ್ ವಾಪಸ್ ಕೊಡುವ ಮನುಷ್ಯನೂ ಅಲ್ಲ ಎಂಬ ಸತ್ಯವನ್ನು ಅರ್ಥಮಾಡಿಕೊಂಡು ಹೊಗುವುದನ್ನೇ ಬಿಟ್ಟೆ.

ಸಾಹೇಬರು ಅವಧಿ ಮುಗಿಯುವ ಮೊದಲೇ ಮನೆ ಬಿಟ್ಟು ಬಾಡಿಗೆ ಮನೆಗೆ ಹೋದರು. ನಾನು ನನ್ನ ಇದ್ದಬಿದ್ದ ವಸ್ತುಗಳನ್ನು ಹೊಸ ಕೋಣೆಗೆ ಸಾಗಿಸಿದೆ.

ಈ ಕೋಣೆಯಲ್ಲಿ ಇನ್ನೊಂದು ಸಮಸ್ಯೆ ಕಾದಿತ್ತು. ಒಡತಿ ಬಂದು ಹೇಳಿದಳು: ರೂಮಿನ ಹಿಂದೆ ಸ್ಟೋರ್ ರೂಂ ಇದೆ. ನಿಮ್ಮ ರೂಮಿನ ಒಂದು ಕೀ ಕೊಡಬೇಕು. ನಾವು ಬೇಕಾದಾಗ ಬಂದು ಅಲ್ಲಿನ ದವಸ ಧಾನ್ಯ ಒಯ್ಯಬೇಕಾಗುತ್ತದೆ ಎಂದಳು. ಎತ್ತರ ನಿಲುವಿನ ಧಾಡಿಸಿ ಮೈಕಟ್ಟಿನ ಬೆಳ್ಳನೆಯ ಆ ಮಹಿಳೆ, ಮಧ್ಯವಯಸ್ಸು ದಾಟಿದ ಒರಟು ಅತ್ತೆಯ ಹಾಗೆ ಕಾಣುತ್ತಿದ್ದಳು. ನಾನು ಕಣ್ತೆರೆದು ನೋಡಿದಾಗ ಮೂಲೆ ಬದಿ ಚಿಕ್ಕ ಬಾಗಿಲೊಂದು ಕಂಡಿತು! ಮೊದಲ ದಿನವೇ ಕಿರಿಕಿರಿಯ ಸನ್ನಿವೇಶ ಸೃಷ್ಟಿಯಾಯಿತು. ಅ‌ಸಹಾಯಕ ಸ್ಥಿತಿಯಲ್ಲಿದ್ದ ನಾನು ಮರು ಮಾತನಾಡದೆ ಎಕ್ಸ್ಟ್ರಾ ಕೀ ಕೊಟ್ಟೆ. ಆ ರೂಮಿನಲ್ಲಿ ಮೊದಲ ರಾತ್ರಿ ಕೂಡ ವಿಚಿತ್ರವಾಗಿತ್ತು. ರಾತ್ರಿ ಸ್ಟೋರ್ ರೂಮಿನಲ್ಲಿ ಇಲಿಗಳ ಸದ್ದು!

ನಾನಿದ್ದ ಕ್ರೆಸೆಂಟ್ ಹೌಸ್‌ನ ವಿಶಾಲ ಹಾಗೂ ಸುಂದರ ಔಟ್ ಹೌಸ್ ಗುಂಗಲ್ಲೇ ಕಣ್ಣು ಮುಚ್ಚಿದೆ. ವಿಜಾಪುರ ಮತ್ತು ಧಾರವಾಡದ ನನ್ನ ಅದೆಷ್ಟೋ ಗೆಳೆಯರು ಸಂದರ್ಶನ ಮುಂತಾದ ಸಂದರ್ಭಗಳಲ್ಲಿ ಬೆಂಗಳೂರಿಗೆ ಬಂದಾಗ ಆ ಔಟ್ ಹೌಸಲ್ಲಿ ಆಶ್ರಯ ಪಡೆಯುತ್ತಿದ್ದರು.

ಬರಬರುತ್ತ ಇಲಿಗಳ ಮ್ಯೂಜಿಕ್ ರೂಢಿಯಾಯಿತು. ಆಳುಗಳು ನಾನಿದ್ದಾಗ ಕೂಡ ಬಂದು ದವಸ ಧಾನ್ಯ ಮತ್ತಿತರ ವಸ್ತುಗಳನ್ನು ಒಯ್ಯುವುದು ಸಾಮಾನ್ಯವಾಗಿತ್ತು. ಅದಾಗಲೆ ಮನೆ ಹುಡುಕುವಲ್ಲಿ ಸೋತು ಹೋಗಿದ್ದೆ. ಹೀಗಾಗಿ ಸಹಿಸಿಕೊಳ್ಳುವುದು ಅನಿವಾರ್ಯವಾಗಿತ್ತು.

ನಳ ಬಂದಾಗಲೆ ಕುಡಿಯುವ ನೀರು ತುಂಬಿಟ್ಟುಕೊಳ್ಳಬೇಕು. ಸ್ನಾನಕ್ಕೆ ಹೌದಿನ ನೀರು ಬಳಸಬೇಕು. ಸ್ನಾನಕ್ಕೆಂದು ಆವರಣದ ಮೂಲೆಯ ಶೆಡ್‌ಗೆ ಹೋಗಬೇಕು.

ಮಾಲಿಕರ ಮನೆಯ ಮುಂದೆ ಕುಡಿಯುವ ನೀರಿನ ನಳ ಇತ್ತು. ಒಂದು ಮಧ್ಯಾಹ್ನ ನೀರು ತುಂಬಿಕೊಳ್ಳಲು ಹೋದೆ. ಅಷ್ಟೊತ್ತಿಗಾಗಲೇ ಆ ಮನೆಯಲ್ಲಿ ಮುಸುರಿ ತಿಕ್ಕುವ ಅಜ್ಜಿ ಬಹಳಷ್ಟು ಪ್ಲೇಟು ಪಾತ್ರೆಗಳನ್ನು ತೊಳೆದು ಇಟ್ಟಿದ್ದಳು. “ಏನಜ್ಜಿ ಈ ಬಿಸಿಲಲ್ಲೇ ಎಷ್ಟೊಂದು ಪಾತ್ರೆ ತೊಳೆದಿರುವಿಯಲ್ಲಾ” ಎಂದೆ. ಅದಕ್ಕವಳು ‘ಇನ್ನೆರಡು ಪಾತ್ರೆ ತೊಳೆದರೆ ಮುಗೀತು’ ಎಂದಳು. ಅವಳು ಹಾಗೆ ಹೇಳಿ ಒಂದು ನಿಮಿಷವೂ ಆಗಿದ್ದಿಲ್ಲ. ಮನೆಯೊಡತಿ ಎರಡು ಪಾತ್ರೆಗಳನ್ನು ತಂದು, ಅಜ್ಜಿಗೆ ತೊಳೆಯಲು ಹೇಳಿ ಹೋದಳು. ಆ ಹೆಂಗಸಿನ ಬಗ್ಗೆ ಬಹಳ ಸಿಟ್ಟು ಬಂತು. “ಎಂಥ ಕ್ರೂರ ಹೆಂಗಸು ಇವಳು” ಎಂದು ಆ ಅಜ್ಜಿಗೆ ಅಂದೆ. ‘ಅವಳ ಕ್ರೌರ್ಯ ನನ್ನ ದೇಹಕ್ಕೆ ಮಾತ್ರ, ನನಗೆ ತಗಲುವುದಿಲ್ಲ’ ಎಂದಳು. ನಾನು ದಿಗ್ಭ್ರಾಂತನಾದೆ. ಇಂಥ ಮಾತನ್ನು ನನ್ನ ಜೀವನದಲ್ಲಿ ಎಂದೂ ಕೇಳಿರಲಿಲ್ಲ. ಮನುಷ್ಯರು ತಮ್ಮ ದೇಹದಿಂದ ಬೇರ್ಪಟ್ಟು ತಮ್ಮನ್ನು ಕಂಡುಕೊಳ್ಳುವುದು ಹೇಗೆ? ಇದು ಎಂಥ ಸಾಧನೆ? ಯಾವ ತತ್ತ್ವಜ್ಞಾನ? ಬಡವರ ಗೋಳಿನ ಬಗ್ಗೆ ಯಾರೂ ಕಾಳಜಿ ತೋರದೆ ಇದ್ದಾಗ, ಅವರು ತಮ್ಮನ್ನು ತಾವು ಸಾಂತ್ವನಗೊಳಿಸುವ ಕ್ರಮ ಇರಬಹುದೇ! ಇದೊಂದು ನನಗೆ ಬಿಡಿಸಲಾಗದ ಒಗಟಿನಂತಾಯಿತು.

೧೯೭೮ರಲ್ಲಿ “ಕೃಷಿಪೇಟೆ” ಪತ್ರಿಕಾ ಕಚೇರಿ ಬೆಂಗಳೂರಿನಿಂದ ಹುಬ್ಬಳ್ಳಿಗೆ ಸ್ಥಳಾಂತರಗೊಂಡಿತು. ಈ ರೂಮಿನಿಂದ ಬಿಡುಗಡೆಗೊಂಡು ಹುಬ್ಬಳ್ಳಿಗೆ ಹೋದೆ.

ಹುಬ್ಬಳ್ಳಿಗೆ ಹೋದ ನಂತರ ಕಚೇರಿ ಬಳಿಯೆ ನೂರು ರೂಪಾಯಿ ಬಾಡಿಗೆಯ ಪುಟ್ಟ ಮನೆಯೊಂದನ್ನು ಹಿಡಿದೆ. ಕೈಗೆ ೪೦೦ ರೂಪಾಯಿ ಸಂಬಳ ಬರುತ್ತಿತ್ತು. ಮದುವೆ ಮಾಡಿಕೊಂಡೆ. ಮೊದಲ ಗಂಡು ಆಯಿತು. ಕಡಿಮೆ ಸಂಬಳದಲ್ಲಿ ಎಲ್ಲವನ್ನೂ ನಿಭಾಯಿಸುವದು ಕಠಿಣಸಾಧ್ಯವಾಗಿತ್ತು. ಎರಡು ವರ್ಷ ಕಳೆಯುವುದರೊಳಗಾಗಿ ಹುಬ್ಬಳ್ಳಿ ಬಿಡಬೇಕಾಯಿತು.

ಹುಬ್ಬಳ್ಳಿಯ ಕೃಷಿಪೇಟೆ ಕಚೇರಿಯಲ್ಲಿ ಇದ್ದಾಗಲೆ, ಡೆಪ್ಯೂಟೇಶನ್ ಮೇಲೆ ಮೈಸೂರು ವಿಶ್ವವಿದ್ಯಾನಿಲಯದ ಇನ್ಸ್ಟಿಟ್ಯೂಟ್ ಆಫ್ ಡೆವಲೆಪ್ಮೆಂಟ್ ಸ್ಟಡೀಸ಼್ ಸಂಸ್ಥೆಯಲ್ಲಿ ಮಾಸ್ಟರ್ ಆಫ್ ಅಗ್ರಿಕಲ್ಚರಲ್ ಮಾರ್ಕೆಟಿಂಗ್ ಮ್ಯಾನೇಜ್ಮೆಂಟ್ ಓದಲು ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿಯವರು ಕಳುಹಿಸಿದರು. ಪತ್ನಿ ಹಾಗೂ ಮಗನನ್ನು ಬಿಟ್ಟು ಮೈಸೂರಿಗೆ ಹೋದೆ. ನಂತರ ಅಲ್ಲಿ ಮನೆ ಮಾಡಿದೆ. ಎಂ.ಎ.ಎಂ.ಎಂ. ಮುಗಿದ ಕೂಡಲೆ ೧೯೮೩ರಲ್ಲಿ ನೌಕರಿಗೆ ರಾಜೀನಾಮೆ ಕೊಟ್ಟು ಪ್ರಜಾವಾಣಿ ಉಪ ಸಂಪಾದಕನಾಗಿ ಬೆಂಗಳೂರಿಗೆ ಬಂದೆ.

ಬಂದ ಹೊಸದರಲ್ಲಿ, ಶಾಸಕರಾಗಿದ್ದ ಕಾಮ್ರೇಡ್ ಪಂಪಾಪತಿ ಅವರ ಶಾಸಕರ ಭವನದ ಕೋಣೆಯಲ್ಲಿ ಉಳಿದುಕೊಂಡೆ. ಹೆಂಡತಿ ಮಕ್ಕಳು ಮತ್ತೆ ಧಾರವಾಡದಲ್ಲಿ ಉಳಿಯಬೇಕಾಯಿತು! ಅದಾಗಲೆ ಎರಡು ಮಕ್ಕಳಾಗಿದ್ದವು.

ಪ್ರಜಾವಾಣಿ ಸೇರಿ ಒಂದೆರಡು ತಿಂಗಳು ಕಳೆದ ನಂತರ ಮನೆಯ ಹುಡುಕಾಟ ಶುರುವಾಯಿತು. ಅಂತೂ ತ್ಯಾಗರಾಜ ನಗರದಲ್ಲಿ ಪುಟ್ಟ ಮನೆ ಸಿಕ್ಕಿತು. ಮನೆ ಮಾಲೀಕರು ನಾನ್ ವೆಜಿಟೇರಿಯನ್ ಆಗಿದ್ದರಿಂದ ಮನೆ ಕೊಡುವಾಗ ಆ ಪ್ರಶ್ನೆ ಉದ್ಭವಿಸಲಿಲ್ಲ. ಮನೆಯ ಯಜಮಾನ ತೀರಿಕೊಂಡಿದ್ದರು. ಮನೆಯಲ್ಲಿ ಗಂಡುಮಕ್ಕಳದೇ ಕಾರುಬಾರು. ಅವರ ಕೊನೆಯ ಮಗ ನನ್ನ ಪರಿಚಯದವರ ಗೆಳೆಯನಾಗಿದ್ದರಿಂದ ಹೆಚ್ಚಿನ ಮಾತುಕತೆಯಾಗದೆ ಮನೆ ಸಿಕ್ಕಿತು. ಸ್ವಲ್ಪ ದಿನಗಳ ನಂತರ ಧಾರವಾಡದಿಂದ ಹೆಂಡತಿ ಮಕ್ಕಳನ್ನು ಕರೆದುಕೊಂಡು ಬಂದೆ.

“ಏನಜ್ಜಿ ಈ ಬಿಸಿಲಲ್ಲೇ ಎಷ್ಟೊಂದು ಪಾತ್ರೆ ತೊಳೆದಿರುವಿಯಲ್ಲಾ” ಎಂದೆ. ಅದಕ್ಕವಳು ‘ಇನ್ನೆರಡು ಪಾತ್ರೆ ತೊಳೆದರೆ ಮುಗೀತು’ ಎಂದಳು. ಅವಳು ಹಾಗೆ ಹೇಳಿ ಒಂದು ನಿಮಿಷವೂ ಆಗಿದ್ದಿಲ್ಲ. ಮನೆಯೊಡತಿ ಎರಡು ಪಾತ್ರೆಗಳನ್ನು ತಂದು, ಅಜ್ಜಿಗೆ ತೊಳೆಯಲು ಹೇಳಿ ಹೋದಳು. ಆ ಹೆಂಗಸಿನ ಬಗ್ಗೆ ಬಹಳ ಸಿಟ್ಟು ಬಂತು. “ಎಂಥ ಕ್ರೂರ ಹೆಂಗಸು ಇವಳು” ಎಂದು ಆ ಅಜ್ಜಿಗೆ ಅಂದೆ. ‘ಅವಳ ಕ್ರೌರ್ಯ ನನ್ನ ದೇಹಕ್ಕೆ ಮಾತ್ರ, ನನಗೆ ತಗಲುವುದಿಲ್ಲ’ ಎಂದಳು. ನಾನು ದಿಗ್ಭ್ರಾಂತನಾದೆ.

ಆಮೇಲೆ ಶುರುವಾಯಿತು ಮನೆಯೊಡತಿಯ ಟುಸ್ಪುಸ್. ಸ್ವಲ್ಪ ದಿನಗಳ ನಂತರ ಪಿಸುಮಾತು ಮತ್ತು ಹಾವಭಾವದ ಮೂಲಕ ಒಂದಿಲ್ಲೊಂದು ರೀತಿಯಲ್ಲಿ ಟಾರ್ಚರ್ ಮಾಡತೊಡಗಿದಳು. ಈ ಬಾಡಿಗೆ ಮನೆಯಲ್ಲಿ ಇನ್ನೊಂದು ರೀತಿಯ ಗೋಳು ಶುರುವಾಯಿತು.

ಆ ಮನೆಯೊಡತಿ ಮೊದಲಿಗೆ ‘ಮನೆ ಮುಂದೆ ರಂಗೋಲಿ ಹಾಕಿ’ ಎಂದಳು. ನಾವು ಗಮನ ಹರಿಸಲಿಲ್ಲ. ನಂತರ ನಾವು ಏಳುವುದರೊಳಗಾಗಿ ತಾನೇ ರಂಗೋಲಿ ಹಾಕತೊಡಗಿದಳು. ಸ್ವಲ್ಪ ದಿನಗಳ ನಂತರ ನಿಲ್ಲಿಸಿದಳು. ಆಮೇಲೆ ಇನ್ನೊಂದು ವರಸೆ ಶುರುವಾಯಿತು. ‘ನೀವು ಬಿಂದಿ ಹಚ್ಚಿಕೊಳ್ಳಿ’ ಎಂದು ನನ್ನ ಶ್ರೀಮತಿಗೆ ಹೇಳಿದಳು. ಆದರೆ ಅದು ಕಾರ್ಯಗತವಾಗಲಿಲ್ಲ. ಆದರೆ ಅವಳ ಮದುವೆ ವಯಸ್ಸಿನ ಮಗಳು ನನ್ನ ಒಂದು ವರ್ಷದ ಮಗಳನ್ನು ಬಹಳ ಹಚ್ಚಿಕೊಂಡಿದ್ದಳು. ಅವಳನ್ನು ಎತ್ತಿಕೊಂಡು ತಿರುಗುತ್ತಿದ್ದಳು. ಅವಳಿಗೆ ಬಿಂದಿ ಹಚ್ಚಿ ಖುಷಿ ಪಡುತ್ತಿದ್ದಳು. ಆಕೆಯ ಖುಷಿಯಲ್ಲಿ ನಾವೂ ಪಾಲುದಾರರಾಗುತ್ತಿದ್ದೆವು.

ಮನೆಯೊಡತಿಯ ಗೊಂಯ್ ಗೊಂಯ್ ಮಾತುಗಳು ನನ್ನ ಶ್ರೀಮತಿಗೆ ಬಹಳೇ ಕಿರಿಕಿರಿಯುಂಟು ಮಾಡಿದವು. ಏತನ್ಮಧ್ಯೆ ಒಂದು ದಿನ ರಾತ್ರಿ ಎಂಟು ಗಂಟೆ ಸುಮಾರಿಗೆ ಪಕ್ಕದ ಮನೆ ಮಾಲೀಕ ಮತ್ತು ಬಾಡಿಗೆದಾರನ ಮಧ್ಯೆ ವಾಗ್ವಾದ ನಡೆದಿತ್ತು. ನಮಗೆ ಆ ಮಾತುಗಳು ಕುಳಿತಲ್ಲೇ ಕೇಳಿಸುತ್ತಿದ್ದವು. ವಾಗ್ವಾದ ತಾರಕಕ್ಕೇರಿದಾಗ, ಮನೆಯೊಡೆಯ ‘ಒಪ್ಪಂದದ ಪ್ರಕಾರ ಮೂರು ತಿಂಗಳಲ್ಲಿ ಮನೆ ಬಿಡಬೇಕು’ ಎಂದು ವಾರ್ನ್ ಮಾಡಿದ. ಆಗ ಬಾಡಿಗೆದಾರನಿಗೆ ಬಹಳ ಸಿಟ್ಟು ಬಂದಿತು. ‘ನೋಡಯ್ಯಾ ನಿನಗೆ ಬೆಂಗಳೂರಲ್ಲಿ ಒಂದೇ ಮನೆ. ನಾನು ಬಾಡಿಗೆದಾರ. ನನಗೆ ಬೆಂಗಳೂರಲ್ಲಿ ಸಾವಿರ ಮನೆಗಳಿವೆ. ಮೂರು ತಿಂಗಳವರೆಗೆ ನಿನ್ನ ಮನೆಯಲ್ಲಿ ಯಾರು ಇರ್ತಾರೆ. ತಿಂಗಳೊಳಗೆ ಖಾಲಿ ಮಾಡುವೆ’ ಎಂದ. ಅಲ್ಲಿಂದ ಮುಂದೆ ಯಾರ ಧ್ವನಿಯೂ ಕೇಳಿಸಲಿಲ್ಲ. ಆದರೆ ಬಾಡಿಗೆದಾರನ ಮಾತುಗಳು ನನಗೆ ಅದಾಗಲೇ ಸ್ಫೂರ್ತಿ ನೀಡಿದ್ದವು.

ಒಂದು ದಿನ ಡಾ. ಸರೋಜಿನಿ ಮಹಿಷಿಯವರು ಮನೆಗೆ ಬಂದರು. ನನ್ನ ಶ್ರೀಮತಿಯ ತವರು ಮನೆಯವರ ಫ್ಯಾಮಿಲಿ ಫ್ರೆಂಡ್ ಆಗಿದ್ದರಿಂದ ಮತ್ತು ನನ್ನ ಸಾಹಿತ್ಯ ಹಾಗೂ ಪತ್ರಿಕಾರಂಗದ ಹಿನ್ನೆಲೆಯಲ್ಲಿ ಅವರು ನಮಗೆಲ್ಲ ಬಹಳ ಆಪ್ತರಾಗಿದ್ದರು. ಅವರು ಬಂದಾಗ ಮನೆ ವಿಚಾರ ತಿಳಿಸಿದೆ. ಹೌಸ್ ರೆಂಟ್ ಕಂಟ್ರೋಲ್ (ಹೆಚ್.ಆರ್.ಸಿ)ಗೆ ಅಪ್ಲೈ ಮಾಡಿದ ಮೇಲೆ ತಿಳಿಸಲು ಹೇಳಿದರು. ಈ ಕುರಿತು ಕೆ.ಹೆಚ್. ರಂಗನಾಥ ಅವರ ಪಿ.ಎ. ಆಗಿದ್ದ ರಘು ಅವರಿಗೆ ತಿಳಿಸಿದೆ. ನನ್ನ ಬಗ್ಗೆ ಕಾಳಜಿ ಹೊಂದಿದ್ದ ಅವರು ತಮ್ಮ ಸಹೋದ್ಯೋಗಿಯಾಗಿದ್ದ ಚಿನ್ನಪ್ಪ ಎಂಬವರ ಮನೆಯೊಂದು ದೊಮ್ಮಲೂರಲ್ಲಿ ಇದ್ದು ಹೆಚ್.ಆರ್.ಸಿ.ಗೆ ಸೇರಿದ್ದಾಗಿ ತಿಳಿಸಿದರು. ಅದಕ್ಕೆ ಅಪ್ಲೈ ಮಾಡಲು ತಿಳಿಸಿದರು. ಚಿನ್ನಪ್ಪ ಅವರು ಸಹಕರಿಸುವಂತೆ ಮಾಡಿದರು. ಇದೆಲ್ಲವನ್ನು ಮಹಿಷಿಯವರ ಗಮನಕ್ಕೆ ತಂದೆ. ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದರು. ಅಂತೂ ಎಲ್ಲ ಅಡೆತಡೆಗಳ ಮಧ್ಯೆ ರೆಂಟ್ ಕಂಟ್ರೋಲ್ ಮನೆ ಸಿಕ್ಕಿತು. ಮೊದಲೇ ಮಾತುಕತೆ ಆದ ಪ್ರಕಾರ ರೆಂಟ್ ಕಂಟ್ರೋಲ್ ಬಾಡಿಗೆಯ ದುಪ್ಪಟ್ಟು ಬಾಡಿಗೆ ಕೊಡಬೇಕಾಯಿತು. ಆ ಪ್ರಕಾರ ೪೦೦ ರೂಪಾಯಿ ಬಾಡಿಗೆ ಕೊಡತೊಡಗಿದೆ.

ಈ ಎಲ್ಲ ಪ್ರಕ್ರಿಯೆಗಳು ಪ್ರಾರಂಭವಾಗುವ ಮೊದಲೇ, ತ್ಯಾಗರಾಜ ನಗರದಲ್ಲಿನ ಬಾಡಿಗೆ ಮನೆಯ ಒಡತಿಯ ಮಾನಸಿಕ ಹಿಂಸೆ ತಾಳದೆ ನನ್ನ ಶ್ರೀಮತಿ; ಮಕ್ಕಳ ಜೊತೆ ಧಾರವಾಡಕ್ಕೆ ಮರಳಿದ್ದಳು. ಹೆಚ್.ಆರ್.ಸಿ. ಮನೆಯ ಪ್ರಯತ್ನ ಮತ್ತು ಪ್ರಕ್ರಿಯೆಗಳು ಮುಗಿಯುವವರೆಗೆ ಆರು ತಿಂಗಳುಗಳೇ ಗತಿಸಿದ್ದವು.

ತ್ಯಾಗರಾಜ ನಗರ ಮನೆ ಖಾಲಿ ಮಾಡಿ ದೊಮ್ಮಲೂರಿಗೆ ಶಿಫ್ಟ್ ಮಾಡಿದೆ. ಅದು ಸೊಳ್ಳೆಗಳ ಪ್ರದೇಶವೆಂದು ಅದರ ಹೆಸರಿನಿಂದಲೇ ಗೊತ್ತಾಗಿತ್ತು. ಸಾಯಂಕಾಲ ಬಾಗಿಲು ಹಾಕುವುದನ್ನು ಮರೆತ ಕಾರಣ ಮನೆಯೊಳಗೆ ಬಹಳಷ್ಟು ಸೊಳ್ಳೆಗಳು ಬಂದಿದ್ದವು. ಸೊಳ್ಳೆ ಪರದೆ ಕಟ್ಟಿಕೊಂಡೆ. ಮೊದಲ ದಿನವಾದ ಕಾರಣ ಲೈಟ್ ಹಚ್ಚಿಕೊಂಡೇ ಮಲಗಿದೆ. ಬೇಗ ನಿದ್ರೆ ಬರಲಿಲ್ಲ. ಆ ಮೇಲೆ ಮಧ್ಯರಾತ್ರಿ ಎಚ್ಚರವಾಯಿತು. ಕಣ್ಣು ತೆರೆದಾಗ ಗಾಢಾಂಧಕಾರ ಆವರಿಸಿದ್ದು ಗಾಬರಿ ಹುಟ್ಟಿಸಿತು. ಕರೆಂಟ್ ಹೋಗಿರಬಹುದು ಎಂದು ಭಾವಿಸಿ ಹಾಗೆ ಮಲಗಿದೆ. ಬೆಳಿಗ್ಗೆ ಬಹಳ ಹೊತ್ತಿನವರೆಗೆ ಎಚ್ಚರಾಗಲಿಲ್ಲ. ಕೊನೆಗೆ ಎಚ್ಚರವಾದಾಗ ಸೊಳ್ಳೆಪರದೆ ಮೇಲೆಲ್ಲ ಸೊಳ್ಳೆಗಳು ಸುತ್ತಿಕೊಂಡಿದ್ದರಿಂದ ಕತ್ತಲು ಆವರಿಸಿದ್ದು ಗೊತ್ತಾಯಿತು!

ಮರುದಿನ ಮೊಸ್ಕಿಟೊ ಕಾಯ್ಲ್ ತೆಗೆದುಕೊಂಡು ಬಂದು ಹಚ್ಚಿದೆ. ಸ್ವಲ್ಪೇ ಹೊತ್ತಿನಲ್ಲಿ ಸೀಲಿಂಗ್ ತುಂಬೆಲ್ಲ ಸಾಂದ್ರವಾಗಿ ಸೊಳ್ಳೆಗಳು ಮುತ್ತಿಕೊಂಡಿದ್ದವು! ಈ ಅವಸ್ಥೆ ನೋಡಿ ಬೇಸರವಾಯಿತು. ಸ್ವಲ್ಪ ದಿನಗಳಲ್ಲಿ ಧಾರವಾಡಕ್ಕೆ ಹೋಗಿ ಹೆಂಡತಿ ಮಕ್ಕಳನ್ನು ಹೇಗಪ್ಪಾ ಕರೆದುಕೊಂಡು ಬರಲಿ ಎಂಬ ಚಿಂತೆ ಶುರುವಾಯಿತು.